Daily Archives: July 29, 2014

ಸೈಬರ್ ರೇಪ್ ಮಟ್ಟಹಾಕಿ – ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ

ಮೊನ್ನೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ದಶಕಗಳಿಂದ ಜನಪರ, ಮಹಿಳಾಪರ ಹೋರಾಟಗಳಲ್ಲಿ ಕ್ರಿಯಾಶೀಲರಾಗಿರುವ prabha-belavangala-postಎನ್.ಪ್ರಭಾ ಒಂದು ಸ್ಟೇಟಸ್ ಹಾಕಿದ್ದರು. ಹಲವು ಜನರ ಸಂಶೋಧನೆ-ಪ್ರಯತ್ನದ ಫಲವಾಗಿ ಉಪಗ್ರಹ, ರಾಕೆಟ್, ಮಂಗಲಯಾನ, ಚಂದ್ರಯಾನಗಳಂತಹ ವೈಜ್ಞಾನಿಕ ಆವಿಷ್ಕಾರಗಳಾಗಿರುವ ಕಾಲದಲ್ಲಿ ಮಂತ್ರತಂತ್ರಹೋಮಹವನ ಎಂದು ಪುರೋಹಿತಶಾಹಿಗಳು ಹಳ್ಳಿಯಿಂದ ದಿಲ್ಲಿ ದರಬಾರಿನವರೆಗೂ ಹರಡಿಕೊಂಡಿರುವುದು ಆಧುನಿಕ ಸಮಾಜದ ದುರಂತ ಎಂದು ಬಣ್ಣಿಸಿದ್ದರು. ಈ ಟೀಕೆಯಿಂದ ಕೆರಳಿದ ವಿ.ಆರ್. ಭಟ್ ಎಂಬ ವ್ಯಕ್ತಿ ಕೂಡಲೇ ‘ಎದೆಗೆ ಬಿದ್ದ ಅಕ್ಷರಗಳನ್ನು ಹೇಳಿದ ಓರಾಟಗಾರ್ತಿ’ಗೆ ಯಾರಾದರೂ ಒಬ್ಬ ರೇಪಿಸ್ಟ್ ಜುಟ್ಟು ಹಿಡಿದು ರೇಪ್ ಮಾಡಬೇಕೆಂದು ಅಪ್ಪಣೆ ಕೊಡಿಸಿದ!

ಗಮನಿಸಿ, ಯಾರೋ ಅನಾಮಧೇಯ ಹೀಗೆ ಬರೆಯಲಿಲ್ಲ. ಓದಿ ನೌಕರಸ್ಥನಾಗಿ ಮಧ್ಯವಯಸ್ಸು ದಾಟುತ್ತಿರುವ ಒಬ್ಬ ಸುಶಿಕ್ಷಿತ ವ್ಯಕ್ತಿ ಎಲ್ಲರೂ ಓದಲೆಂದು ಬಹಿರಂಗವಾಗಿ ಹೀಗೆ ಕಮೆಂಟಿಸಿದ್ದ. ಆತನನ್ನು ಬೆಂಬಲಿಸಿ ಹಲವರು ಮತ್ತಷ್ಟು ಬರೆದರು.

ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡ ಮಹಿಳೆ ನೇರವಾಗಿ ಪ್ರಶ್ನಿಸಿದ್ದಕ್ಕೆ ಬಂದ ದುಷ್ಟ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಸೈಬರ್ ಲೋಕಕ್ಕೆ ಅಮರಿಕೊಂಡ ಸನಾತನ ಸಂಸ್ಕೃತಿಯೆಂಬ ವೈರಸ್‌ನ ಪರಿಚಯವಾಗುತ್ತದೆ. ಪುರಾತನ ನಾಗರಿಕತೆಯ ಈ ಮಹಾನ್ ದೇಶ ಮಹಿಳೆ ‘ಭಾರತೀಯ ನಾರಿ’ಯಂತಿದ್ದರೆ ಕಿರೀಟಗಳ ತಲೆಗೆ ಕಟ್ಟುತ್ತದೆ. ಅದೇ ವಾಸ್ತವದ ಹುಳುಕುಗಳ ತೋರಿಸತೊಡಗಿದರೆ ಕೆರಳಿ ಮಾನಭಂಗಕ್ಕೆ ಯತ್ನಿಸುತ್ತದೆ.

ಆದರೆ ‘ಹೆಂಗಸ್ರದ್ದು ಹೆಚ್ಚಾಯ್ತು’ ಎಂದು ಹೆಚ್ಚಾದದ್ದನ್ನು ಕಡಿಮೆ ಮಾಡಲು ಚಡ್ಡಿ ಬಿಚ್ಚಿ ಹೊರಟಿರುವ ಈ ಎಲ್ಲ ಬಾಲಕರಿಗೆ ಹೆದರಬಾರದು. ಬದಲಾಗಿ ಅವರನ್ನು ಪೂರಾ ಬೆತ್ತಲಾಗಿಸಿ, ಅವರು ಸೇರಬೇಕಾದvr-bhat ಜಾಗ ತಲುಪಿಸುವುದೊಂದೇ ಈಗ ಉಳಿದಿರುವ ದಾರಿ. ‘ಹಿತ ವಚನ, ಮಿತ ವಚನ, ಮೃದು ವಚನ’ಗಳನ್ನು ಪ್ರತಿಪಾದಿಸುವ ಸನಾತನಿಗಳ ಮುಖವಾಡ ಕಳಚುವ; ಶೀಲ-ಅಶ್ಲೀಲಗಳ, ಮಾನ-ಅವಮಾನದ ವ್ಯಾಖ್ಯೆ ಬದಲಿಸುವ ಜವಾಬುದಾರಿಯೂ ನಮ್ಮ ಮೇಲೇ ಇದೆ. ಇಲ್ಲದಿದ್ದರೆ ಮತ್ತೆ ಮರ್ಯಾದೆಗಂಜಿ ಮೌನಕ್ಕೆ ಶರಣಾದ ತ್ರೇತಾಯುಗದ ರಾಮರಾಜ್ಯಕ್ಕೆ ಮರಳಬೇಕಾಗುತ್ತದೆ.

ಮಹಿಳಾ ಒಕ್ಕೂಟವು ಈ ಸಂದರ್ಭದಲ್ಲಿ ಸೈಬರ್ ಅತ್ಯಾಚಾರ ಬೆದರಿಕೆಗೆ ಒಳಗಾದ ಅಸಂಖ್ಯ ಹೆಣ್ಣುಮಕ್ಕಳು ಹಾಗೂ ಅವರ ಬೆದರಿಕೆಗೆ ಮಣಿಯದೆ ನಿಂತು ಕೇಸು ಹಾಕಿರುವ ದಿಟ್ಟ ಗೆಳತಿಯ ಪರವಾಗಿ ನಿಲ್ಲುತ್ತದೆ. ಜೊತೆಗೆ ರೇಪ್ ಎಂಬ ಹುಚ್ಚುನಾಯಿ ಕಡಿತಕ್ಕೊಳಗಾದ ಸಮಾಜಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸೈಬರ್ ಅತ್ಯಾಚಾರ ಎಸಗಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಬಯಸುತ್ತದೆ.

– ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ

ಅತ್ಯಾಚಾರ: ಅಕ್ಷರ ಕಾಣದ ಎದೆಗಳ ಅಸ್ತ್ರ

– ಶಿವರಾಮ್ ಕೆಳಗೋಟೆ

ಔಟ್ ಲುಕ್ ಪತ್ರಿಕೆಯ ಇತ್ತೀಚಿನ ಸಂಚಿಕೆ ವಿಶೇಷವಾಗಿದೆ. ಉತ್ತರಪ್ರದೇಶದ ಮುಝಫರ್‌ನಗರದಲ್ಲಿ ಕಳೆದ ವರ್ಷ ಕೋಮುಗಲಭೆಗಳ ಸಮಯದಲ್ಲಿ ಅತ್ಯಾಚಾರಕ್ಕೀಡಾದ ಮಹಿಳೆಯರನ್ನು ಕುರಿತ ವರದಿ ಇದೆ. ಕೋಮು ಗಲಭೆಗಳ ನಂತರ ಧೈರ್ಯವಾಗಿ ಅತ್ಯಾಚಾರ ಆದ ಬಗ್ಗೆ ಪೊಲೀಸರಿಗೆ ದೂರು ನೀಡಿ ಹೋರಾಟ ಮಾಡುತ್ತಿದ್ದಾರೆ. ಬಹುಸಂಖ್ಯಾತ ಕೋಮಿನ ಹುಡುಗರು ಅಲ್ಪಸಂಖ್ಯಾತರೆಡೆಗೆ ತಮಗಿರುವ ಆಕ್ರೋಷವನ್ನು outlook-coverpage-rapeವ್ಯಕ್ತಪಡಿಸಲು ಅನುಸರಿಸಿದ ಒಂದು ಸಾಧನ ಅತ್ಯಾಚಾರ.

ಹಿಂದೂ ಹುಡುಗಿಯನ್ನು ಒಬ್ಬ ಮುಸ್ಲಿಂ ಹುಡುಗ ಚುಡಾಯಿಸಿದ ಎಂದು ಸುದ್ದಿ ಹಬ್ಬುತ್ತದೆ. ಹುಡುಗಿಯ ಸಹೋದರರು ಆ ಹುಡುಗನನ್ನು ಹುಡುಕಿ ಕೊಲ್ಲುತ್ತಾರೆ. ಕೊಂದ ಹುಡುಗರನ್ನು ಹತನಾದ ಹುಡುಗನ ಕಡೆಯವರು ಕೊಲ್ಲುತ್ತಾರೆ. ಹಾಗೆ ಹುಟ್ಟಿಕೊಂಡ ಗಲಭೆಗಳು 72 ಜನರ ಪ್ರಾಣ ತೆಗೆದುಕೊಳ್ಳುತ್ತವೆ. ಅಷ್ಟೇ ಅಲ್ಲ ಅನೇಕ ಮಹಿಳೆಯರು, ಮುಖ್ಯವಾಗಿ ಅಲ್ಪಸಂಖ್ಯಾತ ಮಹಿಳೆಯರು, ಸಾಮೂಹಿಕ ಅತ್ಯಾಚಾರಕ್ಕೆ ಈಡಾಗುತ್ತಾರೆ. ಅವರಲ್ಲಿ ಕೆಲವೇ ಕೆಲವರು ಪೊಲೀಸ್ ಕೇಸು ದಾಖಲಿಸುವ ಧೈರ್ಯ ಮಾಡಿದ್ದಾರೆ. ಘಟನೆಗಳು ನಡೆದು ಏಳೆಂಟು ತಿಂಗಳಾದರೂ, ಯಾವ ಪ್ರಕರಣದಲ್ಲೂ ಪೊಲೀಸರು ಚಾರ್ಜ್‌ಶೀಟ್ ಹಾಕಿಲ್ಲ ಇದುವರೆಗೂ.

ಹೀಗೆ ಬಯಲಿಗೆ ಬಂದ ಪ್ರಕರಣಗಳಲ್ಲಿ, ಮೂರು ಹೆಣ್ಣು ಮಕ್ಕಳ ಎದುರಿಗೇ ಸಾಮೂಹಿಕ ಅತ್ಯಾಚಾರಕ್ಕೀಡಾದ, ದಾಳಿ ಮಾಡಲು ಬಂದ ಗುಂಪಿನಿಂದ ಓಡಿಹೋಗಿ ತಪ್ಪಿಸಿಕೊಳ್ಳಲಾಗದೆ ಸಿಕ್ಕುಬಿದ್ದು ನೋವುಂಡ ಮಹಿಳೆಯರಿದ್ದಾರೆ. ಐದು ವರ್ಷದ ಮಗನನ್ನು ದಾಳಿಕೋರರಿಂದ ಬಚಾವು ಮಾಡಲು ಗಂಡ ಮಗನೊಂದಿಗೆ ತಾರಸಿಗೆ ಓಡಿಹೋದಾಗ ಹೆಂಡತಿ ದಾಳಿಗೆ ತುತ್ತಾಗುತ್ತಾಳೆ.

ಈ ಘಟನೆಗಳಿಂದ ಆ ಕುಟುಂಬಗಳು ಎದುರಿಸಿದ ಪರಿಣಾಮಗಳು ವಿಷಾದಕರ. ಒಬ್ಬ ಮಹಿಳೆ ಹೇಳುತ್ತಾಳೆ, ಮೊದಲೆಲ್ಲಾ ಗಂಡನೊಂದಿಗೆ ಯಾವುದೇ ವಿಚಾರಕ್ಕೆ ಜಗಳ ಆಡುವಂತಹ ಸಂದರ್ಭ ಬಂದರೆ ನಾನೂ ಜೋರಾಗಿಯೇ ವಾದಕ್ಕಿಳಿಯುತ್ತಿದ್ದೆ. ಆದರೆ ಈಗ ಹಾಗಿಲ್ಲ. ಈ ಘಟನೆ ನನ್ನ ಬಾಯನ್ನು ಕಟ್ಟಿಹಾಕಿದೆ. ಈ ಕಾರಣಕ್ಕಾಗಿಯೇ ನನ್ನ ಗಂಡ ನನ್ನೊಂದಿಗೆ ಮುನಿಸಿಕೊಂಡಿರಬಹುದೇ ಎನ್ನಿಸಿ ಮೌನಿಯಾಗುತ್ತೇನೆ. ಇಷ್ಟೆಲ್ಲದರ ಮೇಲೆ, ಪದೇ ಪದೇ ಆರೋಪಿ ಕಡೆಯ ಜನ ಭೇಟಿ ನೀಡಿ ದೂರು ಹಿಂಪಡೆಯಲು ಒತ್ತಡ ಹಾಕುತ್ತಾರೆ, ಹಣದ ಆಮಿಷ ಒಡ್ಡುತ್ತಾರೆ. ಒಪ್ಪುವುದಿಲ್ಲ ಎಂದರೆ ಮನೆಯಲ್ಲಿನ ಇತರೆ ಹರೆಯ ಹೆಣ್ಣು ಮಕ್ಕಳ ಪಾಡೂ ಇದೇ ಆಗುತ್ತದೆ ಎಂದು ಧಮಕಿ ಹಾಕುತ್ತಾರೆ.

ಕರ್ನಾಟಕದ ಎಷ್ಟೋ ಊರುಗಳಲ್ಲಿ ದಲಿತ ಮಹಿಳೆಯರನ್ನು ಮೇಲ್ವರ್ಗದ ಜನ ಬೆತ್ತಲೆ ಪೆರೇಡ್ ನಡೆಸಿದ್ದಾರೆ. dalit-woman-paraded-nakedಅನೇಕ ಪ್ರಕರಣಗಳಲ್ಲಿ ಹಾಗೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಕೆಲವು ವರ್ಷಗಳ ಹಿಂದೆ ಇಂತಹದೇ ಒಂದು ಪ್ರಕರಣ ಬಯಲಿಗೆ ಬಂದಿತ್ತು. ಆಗ ಮಹಿಳೆ ಕೆಲ ಮಾಧ್ಯಮದವರ ಮುಂದೆ ಮಾತನಾಡುತ್ತಾ ಇಡೀ ಊರ ಜನರ ಮುಂದೆ ಬೆತ್ತಲಾದ ನೋವನ್ನು ಕಣ್ಣೀರಿನೊಂದಿಗೆ ಹಂಚಿಕೊಂಡಿದ್ದಳು. ಹಾಸನ ಜಿಲ್ಲೆಯ ಒಂದು ಹಳ್ಳಿಯಲ್ಲಿ ಇತ್ತೀಚೆಗೆ ವರದಿಯಾದಂತೆ ಒಬ್ಬ ಮಹಿಳೆಯ ಸೀರೆಯನ್ನು ನಡುಬೀದಿಯಲ್ಲಿ, ಅದೂ ಸಾರ್ವಜನಿಕವಾಗಿ ಶಾಂತಿ ಸಭೆ (ಗಲಭೆ ನಂತರ ಏರ್ಪಟ್ಟಿದ್ದ) ನಡೆಯುವ ಸಂದರ್ಭದಲ್ಲಿ ಎಳೆಯುವ ದುಷ್ಟತನಕ್ಕೆ ಆ ಊರಿನ ಕೆಲವರು ಮುಂದಾಗಿದ್ದರು.

ಹಣವಂತ, ಬಲಿಷ್ಟ ಸಮುದಾಯದವರು ಕೆಳ ಸ್ತರದವರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬಳಸುವ ಹಲವು ಅಸ್ತ್ರಗಳಲ್ಲಿ ಅತ್ಯಾಚಾರವೂ ಒಂದು. ಗುಜರಾತಿನಲ್ಲಿ ನಡೆದ ಗಲಭೆಗಳಲ್ಲಿ ನೂರಾರು ಹೆಣ್ಣು ಮಕ್ಕಳು ಅತ್ಯಾಚಾರಕ್ಕೀಡಾದರು ಎಂಬ ವರದಿಗಳಿವೆ. ಅಲ್ಲಿ ಅಂತಹ ಕೃತ್ಯ ಮಾಡಿರುವವರ ಮನಸ್ಸು ಹೇಗೆ ಯೋಚಿಸುತ್ತದೆ ಎನ್ನುವುದಕ್ಕೆ ಈಗಷ್ಟೆ ಫೇಸ್ಬುಕ್‌ನಲ್ಲಿ ಕಾಮೆಂಟ್ ಹಾಕಿದ ಕಾರಣಕ್ಕೆ ಕೇಸು ಎದುರಿಸುತ್ತಿರುವ ಪುರುಷ ಮಹಾಶಯನ ಉದಾಹರಣೆ ಸಾಕು. ವೈಜ್ಞಾನಿಕ ತಳಹದಿಯ ಮೇಲೆ ಮಂಡಿಸಿದ ವಿಚಾರವನ್ನು ಒಪ್ಪಿಕೊಳ್ಳಲಾಗದ ಪುರೋಹಿತಶಾಹಿ ಮನಸ್ಸು ‘ಇಂತಹವರ ಜುಟ್ಟು ಹಿಡಿದು ರೇಪ್ ಮಾಡಿದರೆ ಸರಿಯಾಗುತ್ತದೆ..’ ಎನ್ನುತ್ತದೆ. ಅವನ ಪ್ರಕಾರ ಎದೆಗೆ ಬಿದ್ದ ಅಕ್ಷರ ಓದಿಕೊಂಡವರಿಗೆಲ್ಲಾ ಇದೇ ಗತಿಯಾಗಬೇಕು! ಅವನ ಮನಸ್ಸಿನಲ್ಲಿ ಕೊಳಕು ಎಷ್ಟಿರಬಹುದು! vr-bhatಬಹುಶಃ ಇಂತಹವರಿಗೆ ಅಕ್ಷರ ಹೇಳಿಕೊಟ್ಟವರು ‘ಅ’ ಎಂದಾಗ ಅರಸ ಅಥವಾ ಅಮ್ಮ ಅಥವಾ ಅಕ್ಕ ಎಂದು ಹೇಳುವ ಬದಲು ‘ಅತ್ಯಾಚಾರ’ ಎಂದು ಹೇಳಿಕೊಟ್ಟಿರಬೇಕು. ನೋ ಡೌಟ್, ಇಂತಹದೇ ಆಲೋಚನೆಯ ವ್ಯಕ್ತಿಗಳು ಗಲಭೆಗಳ ಸಂದರ್ಭದಲ್ಲಿ ಬೀದಿಗಿಳಿದು ಅತ್ಯಾಚಾರದ ಮೂಲಕ ತಮಗಾಗದವರಿಗೆ ‘ಪಾಠ’ ಕಲಿಸುವ ಹುಮ್ಮಸ್ಸು ಪ್ರದರ್ಶಿಸುತ್ತಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಅತ್ಯಾಚಾರ, ಮಹಿಳೆ ಮೇಲಿನ ದೌರ್ಜನ್ಯಗಳ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ದಿನಗಟ್ಟಲೆ ಮಾಧ್ಯಮದ ಅಂಗಳದಲ್ಲಿ ಚರ್ಚೆ ನಡೆದವು. ಪೊಲೀಸ್ ಇಲಾಖೆಯವರು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇಷ್ಟರ ಮಟ್ಟಿಗೆ ಸಾರ್ವಜನಿಕ ವಲಯಗಳಲ್ಲಿ ಚರ್ಚೆ, ಸಂವಾದಕ್ಕೆ ಕಾರಣವಾಗಿದ್ದು ಅತ್ಯಾಚಾರ ಪ್ರಕರಣಗಳಿಗೆ ಮಾಧ್ಯಮ ನೀಡಿದ ಮಹತ್ವ. ಆದರೆ ಮಾಧ್ಯಮ ಅಂಗಳದಲ್ಲಿ ಚರ್ಚೆಗೆ ವಸ್ತುವಾಗಿದ್ದು ಬೆಂಗಳೂರಿನಲ್ಲಿ ನಡೆದ ಘಟನೆಗಳಷ್ಟೆ. ಇತರ ಊರುಗಳಲ್ಲಿ ಬೆಳಕಿಗೆ ಬಂದ ಪ್ರಕರಣಗಳ ಬಗೆಗಿನ ಚರ್ಚೆಗೆ ‘ಮಾರ್ಕೆಟ್’ ಇಲ್ಲ. ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದ ನಂತರ ಬೆಂಗಳೂರಿನಲ್ಲಿರುವ ಮಾಧ್ಯಮ ಕಚೇರಿಗಳ ವರದಿಗಾರರ ಡೆಸ್ಕ್ ನಲ್ಲಿ ಚರ್ಚೆಗೆ ಬರುವ ವಿಚಾರ ‘ಹೈ ಪ್ರೊಫೈಲಾ..?’ ಕ್ರೈಮ್‌ಗೆ ತುತ್ತಾದವರು ಖಾಸಗಿ ಶಾಲೆಯ ವಿದ್ಯಾರ್ಥಿ ಅಥವಾ ಟೆಕ್ಕಿ ಆದರೆ ಅಂತಹ ಪ್ರಕರಣಗಳನ್ನು ‘ಹೈ ಪ್ರೊಫೈಲ್’ ಎಂದು ಪರಿಗಣಿಸುವುದು ರೂಢಿ. ಇಲ್ಲವಾದರೆ, ‘ಸಿಂಗಲ್ ಕಾಲಂ ಸಾಕು!’.

ಜಾತಿಯ ಕಾರಣಕ್ಕೆ, ವಿಭಿನ ಆಲೋಚನೆ ಅಥವಾ ಬದುಕುವ ರೀತಿಯ ಕಾರಣಕ್ಕೆ ಮಹಿಳೆಯರು ಅMuzaffarnagar-riotsತ್ಯಾಚಾರಕ್ಕೀಡಾಗುವ ಅನೇಕ ಪ್ರಕರಣಗಳು ಸಿಂಗಲ್ ಕಾಲಂನಲ್ಲಿ ಸತ್ತು ಹೋಗುತ್ತವೆ. ಪ್ರತಿ ಜಿಲ್ಲೆಯಲ್ಲಿಯೂ ಇಂತಹ ಅನೇಕ ಪ್ರಕರಣಗಳು ವರದಿಯಾಗಿವೆ. ಕೆಲವೆಡೆ ಆರೋಪಿ ಕಡೆಯವರು ದೂರುದಾರರನ್ನು ಹೆದರಿಸಿ ಮುಚ್ಚಿಹಾಕಿರುವ ಪ್ರಕರಣಗಳೂ ಇವೆ. ಇದೇ ಊರಿನಲ್ಲಿ ಬಾಳಿ ಬದುಕಬೇಕು. ಮದುವೆ ಆಗೋ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ವಿರುದ್ಧ ಜಗಳ ಕಾಯೋಕೆ ಆಗುತ್ತಾ. ಇವತ್ತು ಕೇಸು ಕೊಟ್ಟರೆ, ನಾಳೆ ಅವರ ಹೊಲಕ್ಕೆ ಕೂಲಿಗೆ ಕರೀತಾರ, ಅಂಗಡೀಲಿ ಸಾಮಾನು ಕೊಡ್ತಾರ..? ಇದು ಯಾರೊ ಒಬ್ಬರ ಮಾತಲ್ಲ. ಅನ್ಯಾಯಕ್ಕೊಳಗಾದ ಅನೇಕ ಕುಟುಂಬಗಳ ಸಂಕಟದ ಅಭಿವ್ಯಕ್ತಿ.