ಅತ್ಯಾಚಾರ: ಅಕ್ಷರ ಕಾಣದ ಎದೆಗಳ ಅಸ್ತ್ರ

– ಶಿವರಾಮ್ ಕೆಳಗೋಟೆ

ಔಟ್ ಲುಕ್ ಪತ್ರಿಕೆಯ ಇತ್ತೀಚಿನ ಸಂಚಿಕೆ ವಿಶೇಷವಾಗಿದೆ. ಉತ್ತರಪ್ರದೇಶದ ಮುಝಫರ್‌ನಗರದಲ್ಲಿ ಕಳೆದ ವರ್ಷ ಕೋಮುಗಲಭೆಗಳ ಸಮಯದಲ್ಲಿ ಅತ್ಯಾಚಾರಕ್ಕೀಡಾದ ಮಹಿಳೆಯರನ್ನು ಕುರಿತ ವರದಿ ಇದೆ. ಕೋಮು ಗಲಭೆಗಳ ನಂತರ ಧೈರ್ಯವಾಗಿ ಅತ್ಯಾಚಾರ ಆದ ಬಗ್ಗೆ ಪೊಲೀಸರಿಗೆ ದೂರು ನೀಡಿ ಹೋರಾಟ ಮಾಡುತ್ತಿದ್ದಾರೆ. ಬಹುಸಂಖ್ಯಾತ ಕೋಮಿನ ಹುಡುಗರು ಅಲ್ಪಸಂಖ್ಯಾತರೆಡೆಗೆ ತಮಗಿರುವ ಆಕ್ರೋಷವನ್ನು outlook-coverpage-rapeವ್ಯಕ್ತಪಡಿಸಲು ಅನುಸರಿಸಿದ ಒಂದು ಸಾಧನ ಅತ್ಯಾಚಾರ.

ಹಿಂದೂ ಹುಡುಗಿಯನ್ನು ಒಬ್ಬ ಮುಸ್ಲಿಂ ಹುಡುಗ ಚುಡಾಯಿಸಿದ ಎಂದು ಸುದ್ದಿ ಹಬ್ಬುತ್ತದೆ. ಹುಡುಗಿಯ ಸಹೋದರರು ಆ ಹುಡುಗನನ್ನು ಹುಡುಕಿ ಕೊಲ್ಲುತ್ತಾರೆ. ಕೊಂದ ಹುಡುಗರನ್ನು ಹತನಾದ ಹುಡುಗನ ಕಡೆಯವರು ಕೊಲ್ಲುತ್ತಾರೆ. ಹಾಗೆ ಹುಟ್ಟಿಕೊಂಡ ಗಲಭೆಗಳು 72 ಜನರ ಪ್ರಾಣ ತೆಗೆದುಕೊಳ್ಳುತ್ತವೆ. ಅಷ್ಟೇ ಅಲ್ಲ ಅನೇಕ ಮಹಿಳೆಯರು, ಮುಖ್ಯವಾಗಿ ಅಲ್ಪಸಂಖ್ಯಾತ ಮಹಿಳೆಯರು, ಸಾಮೂಹಿಕ ಅತ್ಯಾಚಾರಕ್ಕೆ ಈಡಾಗುತ್ತಾರೆ. ಅವರಲ್ಲಿ ಕೆಲವೇ ಕೆಲವರು ಪೊಲೀಸ್ ಕೇಸು ದಾಖಲಿಸುವ ಧೈರ್ಯ ಮಾಡಿದ್ದಾರೆ. ಘಟನೆಗಳು ನಡೆದು ಏಳೆಂಟು ತಿಂಗಳಾದರೂ, ಯಾವ ಪ್ರಕರಣದಲ್ಲೂ ಪೊಲೀಸರು ಚಾರ್ಜ್‌ಶೀಟ್ ಹಾಕಿಲ್ಲ ಇದುವರೆಗೂ.

ಹೀಗೆ ಬಯಲಿಗೆ ಬಂದ ಪ್ರಕರಣಗಳಲ್ಲಿ, ಮೂರು ಹೆಣ್ಣು ಮಕ್ಕಳ ಎದುರಿಗೇ ಸಾಮೂಹಿಕ ಅತ್ಯಾಚಾರಕ್ಕೀಡಾದ, ದಾಳಿ ಮಾಡಲು ಬಂದ ಗುಂಪಿನಿಂದ ಓಡಿಹೋಗಿ ತಪ್ಪಿಸಿಕೊಳ್ಳಲಾಗದೆ ಸಿಕ್ಕುಬಿದ್ದು ನೋವುಂಡ ಮಹಿಳೆಯರಿದ್ದಾರೆ. ಐದು ವರ್ಷದ ಮಗನನ್ನು ದಾಳಿಕೋರರಿಂದ ಬಚಾವು ಮಾಡಲು ಗಂಡ ಮಗನೊಂದಿಗೆ ತಾರಸಿಗೆ ಓಡಿಹೋದಾಗ ಹೆಂಡತಿ ದಾಳಿಗೆ ತುತ್ತಾಗುತ್ತಾಳೆ.

ಈ ಘಟನೆಗಳಿಂದ ಆ ಕುಟುಂಬಗಳು ಎದುರಿಸಿದ ಪರಿಣಾಮಗಳು ವಿಷಾದಕರ. ಒಬ್ಬ ಮಹಿಳೆ ಹೇಳುತ್ತಾಳೆ, ಮೊದಲೆಲ್ಲಾ ಗಂಡನೊಂದಿಗೆ ಯಾವುದೇ ವಿಚಾರಕ್ಕೆ ಜಗಳ ಆಡುವಂತಹ ಸಂದರ್ಭ ಬಂದರೆ ನಾನೂ ಜೋರಾಗಿಯೇ ವಾದಕ್ಕಿಳಿಯುತ್ತಿದ್ದೆ. ಆದರೆ ಈಗ ಹಾಗಿಲ್ಲ. ಈ ಘಟನೆ ನನ್ನ ಬಾಯನ್ನು ಕಟ್ಟಿಹಾಕಿದೆ. ಈ ಕಾರಣಕ್ಕಾಗಿಯೇ ನನ್ನ ಗಂಡ ನನ್ನೊಂದಿಗೆ ಮುನಿಸಿಕೊಂಡಿರಬಹುದೇ ಎನ್ನಿಸಿ ಮೌನಿಯಾಗುತ್ತೇನೆ. ಇಷ್ಟೆಲ್ಲದರ ಮೇಲೆ, ಪದೇ ಪದೇ ಆರೋಪಿ ಕಡೆಯ ಜನ ಭೇಟಿ ನೀಡಿ ದೂರು ಹಿಂಪಡೆಯಲು ಒತ್ತಡ ಹಾಕುತ್ತಾರೆ, ಹಣದ ಆಮಿಷ ಒಡ್ಡುತ್ತಾರೆ. ಒಪ್ಪುವುದಿಲ್ಲ ಎಂದರೆ ಮನೆಯಲ್ಲಿನ ಇತರೆ ಹರೆಯ ಹೆಣ್ಣು ಮಕ್ಕಳ ಪಾಡೂ ಇದೇ ಆಗುತ್ತದೆ ಎಂದು ಧಮಕಿ ಹಾಕುತ್ತಾರೆ.

ಕರ್ನಾಟಕದ ಎಷ್ಟೋ ಊರುಗಳಲ್ಲಿ ದಲಿತ ಮಹಿಳೆಯರನ್ನು ಮೇಲ್ವರ್ಗದ ಜನ ಬೆತ್ತಲೆ ಪೆರೇಡ್ ನಡೆಸಿದ್ದಾರೆ. dalit-woman-paraded-nakedಅನೇಕ ಪ್ರಕರಣಗಳಲ್ಲಿ ಹಾಗೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಕೆಲವು ವರ್ಷಗಳ ಹಿಂದೆ ಇಂತಹದೇ ಒಂದು ಪ್ರಕರಣ ಬಯಲಿಗೆ ಬಂದಿತ್ತು. ಆಗ ಮಹಿಳೆ ಕೆಲ ಮಾಧ್ಯಮದವರ ಮುಂದೆ ಮಾತನಾಡುತ್ತಾ ಇಡೀ ಊರ ಜನರ ಮುಂದೆ ಬೆತ್ತಲಾದ ನೋವನ್ನು ಕಣ್ಣೀರಿನೊಂದಿಗೆ ಹಂಚಿಕೊಂಡಿದ್ದಳು. ಹಾಸನ ಜಿಲ್ಲೆಯ ಒಂದು ಹಳ್ಳಿಯಲ್ಲಿ ಇತ್ತೀಚೆಗೆ ವರದಿಯಾದಂತೆ ಒಬ್ಬ ಮಹಿಳೆಯ ಸೀರೆಯನ್ನು ನಡುಬೀದಿಯಲ್ಲಿ, ಅದೂ ಸಾರ್ವಜನಿಕವಾಗಿ ಶಾಂತಿ ಸಭೆ (ಗಲಭೆ ನಂತರ ಏರ್ಪಟ್ಟಿದ್ದ) ನಡೆಯುವ ಸಂದರ್ಭದಲ್ಲಿ ಎಳೆಯುವ ದುಷ್ಟತನಕ್ಕೆ ಆ ಊರಿನ ಕೆಲವರು ಮುಂದಾಗಿದ್ದರು.

ಹಣವಂತ, ಬಲಿಷ್ಟ ಸಮುದಾಯದವರು ಕೆಳ ಸ್ತರದವರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬಳಸುವ ಹಲವು ಅಸ್ತ್ರಗಳಲ್ಲಿ ಅತ್ಯಾಚಾರವೂ ಒಂದು. ಗುಜರಾತಿನಲ್ಲಿ ನಡೆದ ಗಲಭೆಗಳಲ್ಲಿ ನೂರಾರು ಹೆಣ್ಣು ಮಕ್ಕಳು ಅತ್ಯಾಚಾರಕ್ಕೀಡಾದರು ಎಂಬ ವರದಿಗಳಿವೆ. ಅಲ್ಲಿ ಅಂತಹ ಕೃತ್ಯ ಮಾಡಿರುವವರ ಮನಸ್ಸು ಹೇಗೆ ಯೋಚಿಸುತ್ತದೆ ಎನ್ನುವುದಕ್ಕೆ ಈಗಷ್ಟೆ ಫೇಸ್ಬುಕ್‌ನಲ್ಲಿ ಕಾಮೆಂಟ್ ಹಾಕಿದ ಕಾರಣಕ್ಕೆ ಕೇಸು ಎದುರಿಸುತ್ತಿರುವ ಪುರುಷ ಮಹಾಶಯನ ಉದಾಹರಣೆ ಸಾಕು. ವೈಜ್ಞಾನಿಕ ತಳಹದಿಯ ಮೇಲೆ ಮಂಡಿಸಿದ ವಿಚಾರವನ್ನು ಒಪ್ಪಿಕೊಳ್ಳಲಾಗದ ಪುರೋಹಿತಶಾಹಿ ಮನಸ್ಸು ‘ಇಂತಹವರ ಜುಟ್ಟು ಹಿಡಿದು ರೇಪ್ ಮಾಡಿದರೆ ಸರಿಯಾಗುತ್ತದೆ..’ ಎನ್ನುತ್ತದೆ. ಅವನ ಪ್ರಕಾರ ಎದೆಗೆ ಬಿದ್ದ ಅಕ್ಷರ ಓದಿಕೊಂಡವರಿಗೆಲ್ಲಾ ಇದೇ ಗತಿಯಾಗಬೇಕು! ಅವನ ಮನಸ್ಸಿನಲ್ಲಿ ಕೊಳಕು ಎಷ್ಟಿರಬಹುದು! vr-bhatಬಹುಶಃ ಇಂತಹವರಿಗೆ ಅಕ್ಷರ ಹೇಳಿಕೊಟ್ಟವರು ‘ಅ’ ಎಂದಾಗ ಅರಸ ಅಥವಾ ಅಮ್ಮ ಅಥವಾ ಅಕ್ಕ ಎಂದು ಹೇಳುವ ಬದಲು ‘ಅತ್ಯಾಚಾರ’ ಎಂದು ಹೇಳಿಕೊಟ್ಟಿರಬೇಕು. ನೋ ಡೌಟ್, ಇಂತಹದೇ ಆಲೋಚನೆಯ ವ್ಯಕ್ತಿಗಳು ಗಲಭೆಗಳ ಸಂದರ್ಭದಲ್ಲಿ ಬೀದಿಗಿಳಿದು ಅತ್ಯಾಚಾರದ ಮೂಲಕ ತಮಗಾಗದವರಿಗೆ ‘ಪಾಠ’ ಕಲಿಸುವ ಹುಮ್ಮಸ್ಸು ಪ್ರದರ್ಶಿಸುತ್ತಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಅತ್ಯಾಚಾರ, ಮಹಿಳೆ ಮೇಲಿನ ದೌರ್ಜನ್ಯಗಳ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ದಿನಗಟ್ಟಲೆ ಮಾಧ್ಯಮದ ಅಂಗಳದಲ್ಲಿ ಚರ್ಚೆ ನಡೆದವು. ಪೊಲೀಸ್ ಇಲಾಖೆಯವರು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇಷ್ಟರ ಮಟ್ಟಿಗೆ ಸಾರ್ವಜನಿಕ ವಲಯಗಳಲ್ಲಿ ಚರ್ಚೆ, ಸಂವಾದಕ್ಕೆ ಕಾರಣವಾಗಿದ್ದು ಅತ್ಯಾಚಾರ ಪ್ರಕರಣಗಳಿಗೆ ಮಾಧ್ಯಮ ನೀಡಿದ ಮಹತ್ವ. ಆದರೆ ಮಾಧ್ಯಮ ಅಂಗಳದಲ್ಲಿ ಚರ್ಚೆಗೆ ವಸ್ತುವಾಗಿದ್ದು ಬೆಂಗಳೂರಿನಲ್ಲಿ ನಡೆದ ಘಟನೆಗಳಷ್ಟೆ. ಇತರ ಊರುಗಳಲ್ಲಿ ಬೆಳಕಿಗೆ ಬಂದ ಪ್ರಕರಣಗಳ ಬಗೆಗಿನ ಚರ್ಚೆಗೆ ‘ಮಾರ್ಕೆಟ್’ ಇಲ್ಲ. ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದ ನಂತರ ಬೆಂಗಳೂರಿನಲ್ಲಿರುವ ಮಾಧ್ಯಮ ಕಚೇರಿಗಳ ವರದಿಗಾರರ ಡೆಸ್ಕ್ ನಲ್ಲಿ ಚರ್ಚೆಗೆ ಬರುವ ವಿಚಾರ ‘ಹೈ ಪ್ರೊಫೈಲಾ..?’ ಕ್ರೈಮ್‌ಗೆ ತುತ್ತಾದವರು ಖಾಸಗಿ ಶಾಲೆಯ ವಿದ್ಯಾರ್ಥಿ ಅಥವಾ ಟೆಕ್ಕಿ ಆದರೆ ಅಂತಹ ಪ್ರಕರಣಗಳನ್ನು ‘ಹೈ ಪ್ರೊಫೈಲ್’ ಎಂದು ಪರಿಗಣಿಸುವುದು ರೂಢಿ. ಇಲ್ಲವಾದರೆ, ‘ಸಿಂಗಲ್ ಕಾಲಂ ಸಾಕು!’.

ಜಾತಿಯ ಕಾರಣಕ್ಕೆ, ವಿಭಿನ ಆಲೋಚನೆ ಅಥವಾ ಬದುಕುವ ರೀತಿಯ ಕಾರಣಕ್ಕೆ ಮಹಿಳೆಯರು ಅMuzaffarnagar-riotsತ್ಯಾಚಾರಕ್ಕೀಡಾಗುವ ಅನೇಕ ಪ್ರಕರಣಗಳು ಸಿಂಗಲ್ ಕಾಲಂನಲ್ಲಿ ಸತ್ತು ಹೋಗುತ್ತವೆ. ಪ್ರತಿ ಜಿಲ್ಲೆಯಲ್ಲಿಯೂ ಇಂತಹ ಅನೇಕ ಪ್ರಕರಣಗಳು ವರದಿಯಾಗಿವೆ. ಕೆಲವೆಡೆ ಆರೋಪಿ ಕಡೆಯವರು ದೂರುದಾರರನ್ನು ಹೆದರಿಸಿ ಮುಚ್ಚಿಹಾಕಿರುವ ಪ್ರಕರಣಗಳೂ ಇವೆ. ಇದೇ ಊರಿನಲ್ಲಿ ಬಾಳಿ ಬದುಕಬೇಕು. ಮದುವೆ ಆಗೋ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ವಿರುದ್ಧ ಜಗಳ ಕಾಯೋಕೆ ಆಗುತ್ತಾ. ಇವತ್ತು ಕೇಸು ಕೊಟ್ಟರೆ, ನಾಳೆ ಅವರ ಹೊಲಕ್ಕೆ ಕೂಲಿಗೆ ಕರೀತಾರ, ಅಂಗಡೀಲಿ ಸಾಮಾನು ಕೊಡ್ತಾರ..? ಇದು ಯಾರೊ ಒಬ್ಬರ ಮಾತಲ್ಲ. ಅನ್ಯಾಯಕ್ಕೊಳಗಾದ ಅನೇಕ ಕುಟುಂಬಗಳ ಸಂಕಟದ ಅಭಿವ್ಯಕ್ತಿ.

3 thoughts on “ಅತ್ಯಾಚಾರ: ಅಕ್ಷರ ಕಾಣದ ಎದೆಗಳ ಅಸ್ತ್ರ

  1. sanju

    ವಿ.ಆರ್. ಭಟ್ ಅವರ ಫೇಸ್ಬುಕ್ ಕಮೆಂಟ್ ಗೆ ನನ್ನದೂ ವಿರೋಧವಿದೆ. ಇಂಥ ಹೇಳಿಕೆಗಳು ಯಾವ ಸಂದರ್ಭದಲ್ಲೂ ಬರಬಾರದು. ಒಬ್ಬ ಮಹಿಳೆಯ ಮೇಲೆ ಅತ್ಯಾಚಾರವಾಗಲಿ ಎಂದು ಆಶಿಸುವುದು ನಾಗರಿಕ ಜಗತ್ತಿಗೆ ಮಾಡುವ ಬಹುದೊಡ್ಡ ಅಪಮಾನ. ಸಿಟ್ಟು ಎಷ್ಟೇ ಇರಲಿ, ಆದರೆ ಅದನ್ನು ತೋರ್ಪಡಿಸುವಾಗ ಎಚ್ಚರ ಇರಬೇಕಾದದ್ದು ಕೂಡ ಅತ್ಯಗತ್ಯ.
    ಆದರೆ ನೀವು ಕಡೆಯ ಎರಡು ಪ್ಯಾರಾಗಳಲ್ಲಿ ಮಂಡಿಸಿರುವ ವಿಷಯ ಅದ್ಯಾಕೋ ಸರಿ ಇಲ್ಲ ಅನ್ನಿಸುತ್ತೆ. ರೇಪ್ ಸುದ್ದಿಗಳೂ ದೊಡ್ಡದಾಗಿ ಬರಬೇಕಾದರೆ ಅವು ಹೈಪ್ರೊಪೈಲ್ ಆಗಿರಲೇಬೇಕು ಎಂಬ ನಿಯಮ ಎಲ್ಲೂ ಇಲ್ಲ. ಇವುಗಳನ್ನು ಮಾಧ್ಯಮಗಳೂ ಪಾಲಿಸಲ್ಲ. ಅತ್ಯಾಚಾರಗಳು ಎಲ್ಲಿ, ಹೇಗೇ ಆದರೂ ಒಂದೇ. ವಿಚಾರವೆಂದರೆ ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿನ ಇಂಥ ಘಟನೆ ಹೆಚ್ಚು ಸುದ್ದಿಯಲ್ಲಿರುತ್ತವೆ. ಶಾಲೆಯಲ್ಲಿನ ಘಟನೆಯನ್ನೇ ತೆಗೆದುಕೊಳ್ಳಿ. ಅಲ್ಲಿನ ಒಬ್ಬ ಮಾಸ್ತರು ಹಾಗಿದ್ದ ಎಂಬ ಕಾರಣದಿಂದಾಗಿ ಆ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದ ಎಲ್ಲಾ ಪೋಷಕರೂ ಹೆದರಿಕೊಂಡರು. ಏಕೆಂದರೆ ಅಂಥ ಮಾಸ್ತರನಿಂದ ಮುಂದೆ ನಮ್ಮ ಮಕ್ಕಳ ಮೇಲೂ ಇದೇ ರೀತಿ ಆದರೆ ಎಂಬ ಭಯ. ಹೀಗಾಗಿಯೇ ಪ್ರತಿಭಟನೆಗಳಾದವು, ಅದಕ್ಕೆ ಮಾಧ್ಯಮಗಳೂ ಜಾಗ ಕೊಟ್ಟವು.
    ನೀವು ಓದಿದ್ದೀರಿ, ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ, ಸಹೋದರನಿಂದಲೇ ಅತ್ಯಾಚಾರ, ಸ್ನೇಹಿತನಿಂದಲೇ ಅತ್ಯಾಚಾರ… ಹೀಗೆ, ಇಂಥ ಸುದ್ದಿಗಳನ್ನು ಹೇಗೆ ದೊಡ್ಡದಾಗಿ ಮಾಡಬೇಕು. ಇಲ್ಲಿ ನಂಬಿಕೆಯ ಮೇಲಿನ ದೊಡ್ಡ ಹೊಡೆತವಾಗಿರುತ್ತದೆ. ಇವುಗಳನ್ನು ದೊಡ್ಡದಾಗಿ ಮಾಡಿದರೆ, ಸಮಾಜ ವ್ಯವಸ್ಥೆಯಲ್ಲಿನ ಪರಸ್ಪರ ನಂಬಿಕೆಗಳಿಗೆ ದೊಡ್ಡ ಕೊಡಲಿ ಪೆಟ್ಟು ಬೀಳುತ್ತದೆ. ಹೀಗಾಗಿಯೇ ಎಲ್ಲಾ ಅತ್ಯಾಚಾರ ಪ್ರಕರಣಗಳೂ ದೊಡ್ಡ ಸುದ್ದಿಯಾಗಲ್ಲ. ಆದರೆ ಇಡೀ ಪತ್ರಿಕೆಯನ್ನು ಕೂಲಂಕಶವಾಗಿ ಓದಿದರೆ ಇಂಥ ಅತ್ಯಾಚಾರ ಸುದ್ದಿಗಳು ಕಣ್ಣಿಗೆ ಬಿದ್ದಾವು.

    Reply
    1. Anonymous

      ಸಂಜು ಅವರೇ, ಈ 4-5 ದಿನಗಳ ಹಿಂದೆ ಒಂದು ಪ್ರತಿಕ್ರಿಯೆ ನೀಡಿದ್ದೆ. ಅದನ್ನು ಮತ್ತೆ ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಇದೇ ವಿಬ್ ಗಯಾರ್ ಶಾಲೆಯಲ್ಲಿ ಅತ್ಯಾಚಾರ ಯತ್ನ ನಡೆದಿದೆ, ಅದಕ್ಕಿಂತ ಹೀನವೆನ್ನುವ ರೀತಿಯಲ್ಲಿ ಈ ಶಾಲೆಗೆ ಸಮೀಪವೇ ಇರುವ ನೆಲ್ಲೂರಳ್ಳಿಯಲ್ಲಿ ಇದೇ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಯಿತು. ಈ ಬಾಲಕಿ ಶೆಡ್ ನಲ್ಲಿ ವಾಸವಿದ್ದ ಕುಟುಂಬದವಳು. ಹಾಗಾಗಿ ಪೊಲೀಸ್ ಗಮನಕ್ಕೆ ಬಂದು ಆರೋಪಿಯೊಬ್ಬನನ್ನು ಹಿಡಿದರೂ ಸಹ. ಈ ಘಟನೆ ಆಗಿದೆ ಯಾರಿಗೂ ಗೊತ್ತಾಗಲಿಲ್ಲ. ಆದರೆ ವಿಬ್ ಗಯಾರ್ ಶಾಲೆಯಲ್ಲಿ ನಡೆದ ಘಟನೆಗೆ ಕೊಟ್ಟಷ್ಟು ಮಹತ್ವ, ಆದ್ಯತೆ ಅಲ್ಲಿ ಇರಲಿಲ್ಲ. ಇಂತಹ ಸಾವಿರಾರು ಪ್ರಕರಣಗಳು ಇವೆ. ಹೈಪ್ರೊಫೈಲ್ ಅನ್ನೋದೇ ಒಂದು ದೊಡ್ಡ ವಿಚಾರ. ಅದರ ಮೂಲ ಹುಡುಕಿದರೆ, ಇದಕ್ಕೆಲ್ಲಾ ಉತ್ತರಗಳು ಸಿಗುತ್ತವೆ. ಸುರೇಶ್

      Reply
  2. lokesh

    ಸಂಜು ಅವರೇ,
    ಹೈ ಪ್ರೊಫೈಲ್ – ನಿಯಮ ಇಲ್ಲ ಅಂತೀರಲ್ಲ. ಒಂದು ವರ್ಷದ ಹಿಂದೆ ಇದೇ ಬೆಂಗಳೂರಿನಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸದಲ್ಲಿರುವ ಹೆಣ್ಣುಮಗಳ ಮಗುವೊಂದು ಅತ್ಯಾಚಾರಕ್ಕೀಡಾಗಿತ್ತು ಎನ್ನುವ ಮಾಹಿತಿ ನಿಮಗೆ ಗೊತ್ತಾ? ಆ ಪ್ರಕರಣದಲ್ಲಿ ಆ ಮಗು, ಅತ್ಯಾಚಾರದ ನಂತರ ರಕ್ತ ಕಲೆಗಳ ಬಟ್ಟೆ ಹಿಡಿದು ಕಿಲೋಮೀಟರ್ ಗಟ್ಟಲೆ ನಡೆದು ಮನೆ ಸೇರಿದ ಕತೆ ಗೊತ್ತಾ..?

    Reply

Leave a Reply to sanju Cancel reply

Your email address will not be published. Required fields are marked *