Monthly Archives: July 2014

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2014 : ಕತೆಗಳಿಗೆ ಆಹ್ವಾನ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2014(ಕಳೆದ ವರ್ಷದ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಮಹಾತ್ಮ ಗಾಂಧಿಗೆ ಗೌರವಪೂರ್ವಕವಾಗಿ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:
ಆಗಸ್ಟ್ 31, 2014

ಸೆಪ್ಟೆಂಬರ್ katha spardhe inside logo 2014 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:
editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

ಆದಿಪುರಾಣದಲ್ಲಿ ಪಂಪ ಬೆಳಗಿದ ಜಿನಾಗಮ

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಸಾದತ್ ಹಸನ್ ಮಟ್ಟೂ ಅವರ ‘ಮಿಸ್ಟೇಕ್” ಎನ್ನುವ ಕಥೆಯೊಂದಿದೆ. ಕಾರಣವಿಲ್ಲದ ಕೊಲೆಯ ತಪ್ಪನ್ನು ಸಶಕ್ತವಾಗಿ ಮುಂದಿಡುವ ಪುಟ್ಟ ಕಥೆಯದು. ಮೊನ್ನೆಮೊನ್ನೆಯಷ್ಟೇ ಪುಣೆಯ ಗಲ್ಲಿಯೊಂದರಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ನಿಷ್ಪಾಪಿ ಟೆಕ್ಕಿಯೊಬ್ಬ ಹಾಗೇ ಕಾರಣವಿಲ್ಲದೆ ಹತ್ಯೆಯಾದ. ಆತನ ಇರುವಿಕೆ ಸೂಚಿಸುತ್ತಿದ್ದ ‘ಧರ್ಮ’ದ ಹೊರತು ಅಲ್ಲಿ ಬೇರೆ ಕಾರಣಗಳಿದ್ದಿರಲಿಲ್ಲ. Saadat_Hasan_Mantoಇಂತಹ ಮತೀಯ ಅಸಹನೆ ಇಂದು ಮಾನವ ಬದುಕಿನ ಆತಂಕ ಹೆಚ್ಚಿಸುತ್ತಿದೆ. ಅದು ಮಾನವಕುಲ ಮಾರಣಹೋಮದ ಮಹಾರೂಪಕ ಹಿಟ್ಲರ್ ನನ್ನೂ ಒಳಗೊಂಡು, ಧರ್ಮದ ನೆವದಲ್ಲಿ ಸಾಮೂಹಿಕ ಇಲ್ಲವೇ ವ್ಯಕ್ತಿಗತ ನೆಲೆಯ ಹತ್ಯೆಯ ಸರದಾರರುಗಳನ್ನು ಹುಟ್ಟಿಸುತ್ತಲೇ ಇದೆ. ಆದರೆ ಇದು ಧರ್ಮದ ದೋಷವಲ್ಲ. ಕವಿರಾಜಮಾರ್ಗಕಾರ ಹೇಳುವ ಬದುಕಿನ ‘ಕಸವರ’ವಾದ ‘ಪರಧರ್ಮ ಮತ್ತು ಪರವಿಚಾರದ ಸಹನೆಯ ಆಗುವಿಕೆಯಲ್ಲಿ ಅದು ಬಾಳಿನ ಬೆಳಕೂ ಆಗಬಲ್ಲುದು. ಹಾಗಾಗಿಯೇ ಅಸಹನೆಯನು ಉದ್ದೀಪಿಸುವ ಅಮಲೆಂಬ ಅರ್ಥದಲ್ಲಿ ಧರ್ಮವನ್ನು ‘ಅಫೀಮು’ ಎಂದ ಕಾರ್ಲಮಾಕ್ಸನೂ ಅದನ್ನು ‘ಹೃದಯಹೀನ ಜಗತ್ತಿನ ಹೃದಯವೆಂದೂ, ಆತ್ಮಹೀನ ಜಗತ್ತಿನ ಆತ್ಮವೆಂದೂ’ ಕರೆದಿದ್ದಾನೆ. ಧರ್ಮ ಅಥವಾ ಧಾರ್ಮಿಕತೆ ಅವಾಸ್ತವವಲ್ಲ. ಅದೊಂದು ವಾಸ್ತವ. ಅದಕ್ಕೊಂದು ತಾಯ್ತನದ ಮುಖವೂ ಇದೆ. ಪುರೋಹಿತಶಾಹಿ ಕಾರಣಗಳಿಂದ ಅದಕ್ಕೊದಗುವ ನಿಂದನಾತ್ಮಕವಾದ ಜೀವವಿರೋಧಿ ಗುಣವಷ್ಟನ್ನೇ ಗಣಿಸಿ ಅದರ ತಾಯ್ತನದ ಗುಣವನ್ನು ಮರೆಯಲಾಗದು. ಪ್ರಾಯಶಃ ಮಾನವ ಬದುಕನ್ನು ಸಹನೀಯಗೊಳಿಸುವ ಕನಸುಳ್ಳ ಜಗತ್ತಿನ ಎಲ್ಲ ಕವಿ, ದಾರ್ಶನಿಕ, ಬರಹಗಾರರುಗಳು ವಿವರಿಸಿಕೊಂಡ ಧರ್ಮಕ್ಕೆ ಈ ಮುಖವಿದೆ. ಆ ನಿರೂಪಣೆಗಳು ಅದನ್ನೊಂದು ಆಚರಣಾತ್ಮಕ ಅನುಸಂಧಾನವಾಗಿ, ಅರಿವಿನ ಯಾನವಾಗಿ ವಿವರಿಸಿಕೊಳ್ಳುವ ಮೂಲಕವೇ ಅದರ ಶಾಶ್ವತ ಸ್ವರೂಪವನ್ನು ನಿರಾಕರಿಸಿವೆ. ಅದನ್ನೊಂದು ಒಳಗೊಳ್ಳುವಿಕೆಯ ಹಾಗೂ ಬಿಡುಗಡೆಯ ದಾರಿಯಾಗಿಯೇ ಪ್ರತಿಪಾದಿಸಿವೆ.

ಕನ್ನಡ ಸಂದರ್ಭದ ಯಾವುದೇ ಮಾತು ಪಂಪನ ಉಲ್ಲೇಖವಿಲ್ಲದೆ ಅಪೂರ್ಣವೇ. ಆತ ಅಕ್ಷರ ಪರಂಪರೆಯ ಕನ್ನಡದ ಅನೇಕ ಮೊದಲುಗಳ ಒಡೆಯ. ಕನ್ನಡದ ಮೊದಲ ಧಾರ್ಮಿಕ ಪುರಾಣಕಾರ. ಧರ್ಮ ಎಂದರೇನು, ಬದುಕಿನಲ್ಲಿ ಅದರ ಮಹತ್ವವೇನು ಎಂಬುದರ ಕುರಿತು ಗಾಢವಾಗಿ ಚಿಂತಿಸಿದಾತ. ‘ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮುಮಂ’ ಎಂದು ‘ಧರ್ಮ’ ಮತ್ತು ‘ಲೌಕಿಕ’ಗೆಳೆರಡನ್ನೂ ‘ಬೆಳಗುವ’ ಮಾತಾಡಿದಾತ. ‘ಅರಿವಂ ಪೊಸಯಿಸುವುದೇ ಧರ್ಮ’ವೆಂದೂ, ಆ ‘ಧರ್ಮಂ ಪ್ರಧಾನಂ ಅರ್ಥಂ ಧರ್ಮಾಂಘ್ರಿಪ ಫಳಂ ಅದರ್ಕೆ ರಸಮದು ಕಾಮಂ’ ಎಂದೂ ಬದುಕನ್ನು ವಿವರಿಸಿದಾತ. pampaಆತ ಹೀಗೆ ಬೆಳಗುವುದಾಗಿ ಹೇಳಿದ ಧರ್ಮ, ಅದನ್ನು ಬೆಳಗುವ ಬಗೆಯ ಕುರಿತಂತೆ ಕನ್ನಡದ ಓದು ಸಾಕಷ್ಟು ಚರ್ಚೆಸಿದೆ. ಆ ಚರ್ಚೆಯೊಳಗೆ ಮನುಕುಲಕ್ಕೆ ಆತಂಕವೊಡ್ಡುತ್ತಿರುವ ವರ್ತಮಾನದ ಮತೀಯ ಧಾರ್ಮಿಕತೆಯನ್ನು ದಾಟಲು ಬೇಕಾದ ಪಂಪ ನಿರೂಪಿತ ಧರ್ಮದೊಳಗಿನ ತಾಯ್ತನದ ಹುಡುಕಾಟವೂ ಇದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನದಲ್ಲಿ ಪಂಪನ ಆದಿಪುರಾಣವು ಬೆಳಗಿದ ಧರ್ಮ, ಅರಿವನ್ನು ಪೊಸಯಿಸುವ ಆ ಧರ್ಮದ ಸ್ವರೂಪವನ್ನು ವಿವರಿಸಿಕೊಳ್ಳುವ ಯತ್ನವಿದೆ.

ನಮ್ಮ ಬದುಕಿನ ನಡೆಯೆಡೆಯಲ್ಲಿ ಅನುರಣಿಸುವ ‘ಧರ್ಮ’ವೆಂಬ ಪದಕ್ಕೆ ನಿರ್ದಿಷ್ಟವಾದ ಅರ್ಥಸೀಮೆಯಿಲ್ಲ. ಹಾಗಿದ್ದೂ ವ್ಯಕ್ತಿಯನ್ನು ಒಳಗೊಂಡಂತೆ ಗುಂಪೊಂದರ ಶ್ರದ್ಧೆಯ ನೆಲೆಯಲ್ಲಿ ಅದಕ್ಕೊಂದು ಸಾಮೂಹಿಕತೆಯ ಚಹರೆಯಿದೆ. ಹಾಗಾಗಿ ‘ಧರ್ಮ’ ಎನ್ನುವಾಗಲೆಲ್ಲಾ ಸಮುದಾಯವೊಂದರ ಮತಶ್ರದ್ಧೆಯ ಗ್ರಹಿಕೆಗಳೇ ಸುಳಿಯುತ್ತವೆ. ಆದರೆ ಪಂಪನ ಕಾವ್ಯಗಳ ಹಿನ್ನೆಲೆಯಲ್ಲಿ ‘ಧರ್ಮ’ವೆನ್ನುವ ಪರಿಭಾಷೆಯ ಚರ್ಚೆಯು ಮತ, ಪಂಥವೆಂಬ ಏಕಾರ್ಥವನ್ನು ದಾಟಿಕೊಳ್ಳುತ್ತದೆ. ಆತನ ಕಾವ್ಯಗಳ ಧರ್ಮಜಿಜ್ಞಾಸೆಗೆ ವಿಶಾಲಾರ್ಥವಿದೆ. ಹಾಗಿದ್ದೂ ಪುರಾಣವಾಗಿ ಕರೆದುಕೊಂಡ ‘ಆದಿಪುರಾಣ’ದಲ್ಲಿ ‘ಅರಿವುದು ಧರ್ಮಮುಂ ಕಾವ್ಯಧರ್ಮಮುಂ’ ಎಂದುದನ್ನೇ ಅನುಸರಿಸಿ ಧರ್ಮ-ಕಾವ್ಯಧರ್ಮಗಳನ್ನು ಪ್ರತ್ಯೇಕವಾಗಿ ಗುರುತಿಸುವ ಯತ್ನ ನಡೆದುದಿದೆ. ಭವಾವಳಿಯೇ ಮೊದಲಾದ ಜೈನಮತಶ್ರದ್ಧೆಯ ಸಂಗತಿಗಳನ್ನೇ ಮತಾಚಾರದ ವಿವರಗಳಾಗಿ, ಜೈನೇತರರಿಗೆ ರುಚಿಸದ ಧಾರ್ಮಿಕತೆಯಾಗಿ ವಿವರಿಸಿಕೊಂಡುದಿದೆ. ಆದರೆ ಪಂಪನನ್ನು ಕುರಿತ ಓದು ಇಷ್ಟಕ್ಕೆ ಮಿತವಲ್ಲ. ಆದಿಪುರಾಣದಲ್ಲಿ ಬೆಳಗಿದ ಧರ್ಮವನ್ನು ಕುರಿತ ಚರ್ಚೆಗೆ, 1)ಜೈನೀಯವಾದ ಗ್ರಹಿಕೆ 2)ವಿಶ್ವಾತ್ಮಕಗೊಂಡ ಅಜೈನೀಯತೆ 3)ಒಳಗೊಳ್ಳುವ ವಿಕಾಸಾವಕಾಶದ ಮಾದರಿ ಎಂಬ ಮೂರು ಆಯಾಮಗಳೂ ಇವೆ.

ಜೈನೀಯವಾದ ಗ್ರಹಿಕೆ

ಜೈನೇತರರಿಗೆ ರುಚಿಸುವ ಆಯ್ದಭಾಗಗಳನ್ನು ಹೊರತುಪಡಿಸಿ, ಆದಿಪುರಾಣದಲ್ಲಿನ ಮತಸಂಬಂಧಿ ವಿವರಗಳನ್ನು ಕಾವ್ಯ ವಾಹಿನಿಯನ್ನೇ ಅದೃಶ್ಯಗೊಳಿಸಿದ ‘ಮರಳುನೆಲ’ವಾಗಿ ವಿವರಿಸಿಕೊಳ್ಳುವ ಬಗೆಯಿದು. ಈ ರಸನಿಷ್ಠ ಆಲೋಚನೆಯು ಆದಿಪುರಾಣದ ಧರ್ಮವನ್ನು ಒಂದು ಪ್ರತ್ಯೇಕ ಕಂಪಾರ್ಟ್ ಮೆಂಟ್ ಗಳಲ್ಲಿರಿಸಿಕೊಂಡೇ ವಿವರಿಸಿಕೊಳ್ಳುತ್ತದೆ. ಅದರ ಪಾಲಿಗೆ ಧರ್ಮವೆಂದರೆ ಆಯಾಯ ಧಾರ್ಮಿಕ ಶ್ರದ್ಧೆಯವರಿಗಷ್ಟೇ ಮುಖ್ಯವೆನಿಸುವ, ಸಾರ್ವತ್ರಿಕ ಆನ್ವಯಿಕತೆಯಿರದ ಶಾಸ್ತ್ರಸಂಗತಿ. ಇದು ಒಟ್ಟು ಕಾವ್ಯವನ್ನು ರಸದೃಷ್ಟಿಯಿಂದ ರಮ್ಯವಾಗಿ ನಿರೂಪಿತವಾಗಿದೆ ಎಂದು ಅಂಗೀಕರಿಸುವಾಗಲೂ, ಕಾವ್ಯವಸ್ತುವನ್ನು ‘ಜೈನಧರ್ಮ’ದ ವಸ್ತುವೆಂದೇ ಗುರುತಿಸಿಕೊಳ್ಳುತ್ತದೆ. ಆದಿಪುರಾಣವು ಧಾರ್ಮಿಕರಿಗೂ, ಲೌಕಿಕರಿಗೂ ಒಟ್ಟಿಗೇ ಆದರದ ವಸ್ತುವಾಗಿದೆ(ಪಂಪ ಒಂದು ಅಧ್ಯಯನ,ಪು.182) ಎನ್ನುವ ಎಂ.ವಿ.ಶ್ರೀನಿವಾಸಮೂರ್ತಿ, ತಿ.ನಂ.ಶ್ರೀ ಮತ್ತಿತರರಲ್ಲಿ ಪಂಪ ಬೆಳಗಿರುವುದು ಜಿನಧರ್ಮವನ್ನೇ ಎಂಬ ಭಾವವಿದೆ. ಇದು ಕಾವ್ಯಧರ್ಮ-ಧರ್ಮ ಎಂಬ ಸಮನ್ವಯ ಸಮುಚ್ಚಯವನ್ನು ಬೇಕಾದವರು ಧರ್ಮವನ್ನೂ, ಉಳಿದವರು ಕಾವ್ಯಾನುಭವವನ್ನು ಪಡೆಯಬಹುದೆಂಬ ಅರ್ಥದಲ್ಲಿಯೇ ವ್ಯಾಖ್ಯಾನಿಸಿಕೊಂಡ ಬಗೆ. ಆದಿಪುರಾಣವನ್ನು ಧಾರ್ಮಿಕವೂ, ವೈರಾಗ್ಯಪರವೂ ಆದ ಕಾವ್ಯವಾಗಿ ಸ್ಥಿರೀಕರಿಸುವ ಈ ಓದುಗಳು ‘ಜೈನ’ವನ್ನು ಅನ್ಯಧರ್ಮವೆಂದೇ ಕಂಡಿವೆ. ಆದರೂ ಇಲ್ಲಿ ಈ ಅನ್ಯತೆಯ ಗುರುತು ಮತದ್ವೇಷದ ಮಾದರಿಯ ನಿರೂಪಣೆಯಲ್ಲ.

ವಿಶ್ವಾತ್ಮಕಗೊಂಡ ಅಜೈನೀಯ ಗ್ರಹಿಕೆ

ಆದಿಪುರಾಣದ ಧರ್ಮವನ್ನು ವಿಶ್ವಮಾನವ ಧರ್ಮವಾಗಿ ಅಜೈನೀಯ ನೆಲೆಯಲ್ಲಿಯೂ ಓದಿಕೊಳ್ಳಲಾಗಿದೆ. ಮುಳಿಯ ತಿಮ್ಮಪ್ಪಯ್ಯ, ಆರ್.ಸಿ.ಹಿರೇಮಠರ ಬರಹಗಳಲ್ಲಿ, ಎಲ್.ಬಸವರಾಜು ಮುಂತಾದವರ ಮುನ್ನುಡಿಗಳಲ್ಲಿ ಈ ಉದಾರವಾದಿ ಮಾನವತಾಧರ್ಮದ ಗುಣವಿದೆ. ಆರ್.ಸಿ.ಹಿರೇಮಠರು ಹೇಳುವಂತೆ “ಈ ಭವ್ಯವಾದ ಕಾವ್ಯವನ್ನು ಓದುತ್ತಾ ಹೋದಂತೆ ಒಂದು ದಿವ್ಯಸಂದೇಶ ಕಾವ್ಯದುದ್ದಕ್ಕೂ ನಿನಾದಗೆಯ್ಯುತ್ತದೆ. ದಯೆ, ದಮ, ದಾನ, ತಪ, ಶೀಲ ಎಂಬಿವು……ಮೆಯ್ಯಾಂತುದೇ ಧರ್ಮ, ಆ ಧರ್ಮ ವಿಶ್ವಮಾನವ ಕಲ್ಯಾಣಕ್ಕಾಗಿ; ಅದಕ್ಕೆ ದೇಶ, ಕಾಲಗಳ ಎಲ್ಲೆಯಿಲ್ಲ……..ಕ್ರಿಮಿಕೀಟಾದಿಗಳಿಗೂ ಸಹ ಉಪದೇಶಮಾಡಿ ಅವನ್ನೂ ಉದ್ಧರಿಸಬೇಕೆನ್ನುವ ಪರಮಾತ್ಮನ ಅನುಕಂಪೆಗೆ ಕೊನೆಯಿಲ್ಲವೆಂದೇ ಹೇಳಬೇಕು. jain-mahaveerಅಂತಹ ಅನುಕಂಪೆಯಿಂದ ಕೂಡಿದ ಆಗಮವೇ ಜಿನಾಗಮ……ಅಂತಹ ಜಿನಾಗಮವನ್ನು ಎತ್ತಿಹಿಡಿದ ಮಹಾಕವಿಯು ಆದಿಪುರಾಣದಲ್ಲಿ ವಿಶ್ವಾಗಮವನ್ನೇ ಹೇಳುತ್ತಿರುತ್ತಾನೆ. ಹೆಸರು ಜಿನಧರ್ಮವಾದರೇನು?” (ಮಹಾಕವಿಪಂಪ ಮತ್ತು ಅವನ ಕೃತಿಗಳು,ಪು.29). ‘ಪಂಪನ ಧರ್ಮ’ವನ್ನು ಹೀಗೆಯೇ ಅರ್ಥ್ಯೆಸುವ ಮುಳಿಯ ಅವರೆನ್ನುವಂತೆ ಸಮತಾಸಂಸ್ಕೃತಿಯ ಬುನಾದಿಯಾಗಿ ಕಾರ್ಯನಿರ್ವಹಿಸುವ ಕಾವ್ಯದ ಪಾಲಿಗೆ ಧರ್ಮವೆಂದರೆ, ಅಭ್ಯಾಸಬಲದಿಂದ ಯತಿಗಳಲ್ಲಿ ಮಾತ್ರವೇ ನೆಲೆವಡೆದ ಕಠಿಣವಾದ ಇಂದ್ರೀಯ ನಿಗ್ರಹಗಳೆಂಬ ಮಹಾವ್ರತರೂಪಗಳಲ್ಲ; ವ್ಯಕ್ತಿಯ ‘ದಯೆ’, ‘ದಾನ’, ‘ಶೀಲ’ಗಳನ್ನು ಸ್ಥಿರಗೊಳಿಸಿ ಸಮಾಜವನ್ನು ಬೆಳಗಿಸಲಿರುವ ಅಣುವ್ರತರೂಪವಾದ ಸಂಸಾರಧರ್ಮಗಳೆಂಬುದನ್ನು ಮರೆಯಬಾರದು (ನಾಡೋಜ ಪಂಪ,ಪು.54). ಇದು ಜೈನರಿಗಷ್ಟೇ ಸಂಬಂಧಿಸಿದ್ದಲ್ಲ, ಮೇಲಾಗಿ ಧರ್ಮವೊಂದರ ಶ್ರೇಷ್ಠಮೌಲ್ಯವು ಕೇವಲ ಆ ಧರ್ಮದ ಆಸ್ತಿಯಲ್ಲ, ಅದು ಮನುಕುಲದ ಆಸ್ತಿ ಎನ್ನುವ ಈ ಚಿಂತನೆಗಳಿಗೆ ಆದಿಪುರಾಣದ ಧರ್ಮವು ವಿಶ್ವಾತ್ಮಕವಾದುದು.

ಇಲ್ಲಿ ನವೋದಯಕಾಲದ ಉದಾರವಾದಿ ಧೋರಣೆ ಹಾಗೂ ಸೌಹಾರ್ದತೆಯ ಗುಣವಿದೆ. ಆದರೆ ಜೈನೀಯತೆಯಿಂದ ಬಿಡುಗಡೆಪಡೆದ ಈ ಮಾದರಿ ಧರ್ಮದ ಸಾಂಸ್ಥಿಕಚಹರೆಯಿಂದ ಮುಕ್ತವಾದುದಲ್ಲ. ಇಲ್ಲಿ ಧರ್ಮವೆಂದರೆ ಕನಿಷ್ಠತೆಗಳಿಂದ ಬೇರಾದ ಶ್ರೇಷ್ಟತೆಯ ಗುಚ್ಛ. ವ್ಯಕ್ತಿಯ ಅನುಭವದಲ್ಲಿ ಸಿದ್ಧವಾಗುವುದಕ್ಕಿಂತ ಸಿದ್ಧರೂಪದ ತಾತ್ವಿಕತೆಯ ಬುತ್ತಿ. ಲೌಕಿಕಕ್ಕಿಂತ ಭಿನ್ನವಾದ, ಲೌಕಿಕದ ತೊಡಕು ಹರಿದುಕೊಂಡ ಅಮೂರ್ತರೂಪದ ಅತೀತ ಸಂಗತಿಯೆಂದೇ ಭಾವಿತವಾಗಿದೆ. ಹಾಗಾಗಿ ಇದು ಲೌಕಿಕದ ತಳಹದಿಯ ಮೇಲೆ, ಲೌಕಿಕದ ಭಾಷೆಯನ್ನೇ ಅವಲಂಬಿಸಿ ವೈರಾಗ್ಯ ಅಥವಾ ವಿರಕ್ತಿಯನ್ನು ಅಭಿವ್ಯಕ್ತಿಸಿದ ಕಾವ್ಯವಾಗಿ ಆದಿಪುರಾಣವನ್ನೂ, ಅರಿವಿನ ಹುಡುಕಾಟವಾಗಿ ಅದರಲ್ಲಿನ ಧರ್ಮವನ್ನೂ ವಿವರಿಸಿಕೊಂಡ ಬಗೆಯಲ್ಲ. ಆದರೂ ಈ ಆಲೋಚನಾಕ್ರಮವು ಪಂಪ ಬೆಳಗಿದ ಧರ್ಮದಲ್ಲಿ ಮನುಕುಲದ ಒಳಿತನ್ನು ಗುರುತಿಸುತ್ತದೆ.

ಒಳಗೊಳ್ಳುವ ವಿಕಾಸಾವಕಾಶದ ಮಾದರಿ

ಆದಿಪುರಾಣದ ಧರ್ಮವನ್ನು ಕುರಿತ ಆಧುನಿಕ ಓದುಗಳು ಬಹುಮಟ್ಟಿಗೆ ಮತೀಯಸಾಂಸ್ಥಿಕತೆಯಿಂದ ಮುಕ್ತವಾಗುತ್ತವೆ. ಇವುಗಳಿಗೆ ಆದಿಪುರಾಣವು ಧಾರ್ಮಿಕ ಚಿಂತನೆಗಳ, ಜಿನಧರ್ಮದ ಪುರಾಣಪ್ರಪಂಚದ ಕೈಪಿಡಿಯಲ್ಲ. ಅಷ್ಟೇ ಅಲ್ಲ, ಜನ್ನನಲ್ಲಿರುವಂತೆ ನಿರ್ದಿಷ್ಟ ಧಾರ್ಮಿಕ ಪ್ರಕ್ರಿಯೆಯ ಭಾಗವಾಗಿ ಕಾವ್ಯವನ್ನು ಬಳಸುವ ಕುರಿತ ಯಾವ ನಿದರ್ಶನವಿರದ ಈ ಕೃತಿಯನ್ನು ‘ಪುರಾಣಬಿತ್ತಿಯಲ್ಲಿ ಸಮಕಾಲೀನವನ್ನು ಕಂಡುಕೊಳ್ಳುವ ಯತ್ನ’ವೆಂದೇ ಅವು ಗಣಿಸಿವೆ. ಇದರಿಂದಾಗಿಯೇ ಕೃತಿ ತಾನು ನಿರಾಕರಿಸುವುದನ್ನೇ ಪ್ರತೀಹಂತದಲ್ಲಿಯೂ ವಿಸ್ತಾರವಾಗಿ ವೈಭವೀಕರಿಸುವ ಕವಿಯ ತನ್ಮಯತೆಗೆ ಒಳಗಾಗುತ್ತದೆ  ಎಂಬುದಿಲ್ಲಿಯ ನಿಲುವು. ಜ್ಞಾನ ಮತ್ತು ಮನುಷ್ಯನ ಸಂಬಂಧದ ಪ್ರಶ್ನೆಯನ್ನೆತ್ತಿಕೊಂಡು ಆದಿಪುರಾಣದ ಕಾವ್ಯಧರ್ಮವನ್ನು ಚರ್ಚಿಸುವ  ಕೆ.ವಿ.ನಾರಾಯಣ ಅವರ ‘ಪಂಪನಕೃತಿ: ಕಾವ್ಯಧರ್ಮ-ಧರ್ಮ ಸಮನ್ವಯ’ ಎನ್ನುವ ಲೇಖನ ಈ ದಿಸೆಯಲ್ಲಿ ಮುಖ್ಯವಾದುದು. ‘ಜ್ಞಾನ ಇಡಿಗಂಟಾಗಿ ಪಡೆಯತಕ್ಕದಲ್ಲವೆಂತಲೂ, ಅದನ್ನು ಆಯಾಯ ವ್ಯಕ್ತಿ ತನ್ನ ಜೀವನಾನುಭವದ ಭಾಗವಾಗಿ, ಐಂದ್ರಿಕ ಅನುಭವದ ಮೂಲಕ ಸಂಪಾದಿಸಿಕೊಳ್ಳುತ್ತಾನೆ ಎಂಬುದನ್ನು ಪ್ರಕ್ರಿಯಾತ್ಮಕವಾಗಿ ಈ ಕೃತಿ ತೋರಿದೆ’ ಎಂದೇ ಲೇಖನವು ವಾದಿಸುತ್ತದೆ. ರಸನಿಷ್ಠ ಓದುಗಳು ಕಾವ್ಯರಸವಾಗಿ, ಧರ್ಮದ ಜೊತೆಗೆ ಬೆರೆತ ಕಾವ್ಯಧರ್ಮವಾಗಿ ವಿವರಿಸಿಕೊಂಡುದನ್ನೇ, ‘ತಿಳುವಳಿಕೆಗಳು ಪಿತ್ರಾರ್ಜಿತವಲ್ಲ, ಸ್ವಯಾರ್ಜಿತ’ ಎಂಬುದನ್ನು ತೋರಲು ಕೃತಿ ಅನುಸರಿಸಿದ ಲೋಕಾನುಭವದ ನಿರೂಪಣಾಕ್ರಮವಾಗಿ ಗುರುತಿಸುತ್ತದೆ. ಪುರಾಣವಸ್ತುವಿನ ದತ್ತಾಂಶದ ಉತ್ಪನ್ನರೂಪಕ್ಕಿಂತ ಪ್ರಕ್ರಿಯೆಯಲ್ಲಿ ದಾಖಲಿಸುವ ‘ಆಗುವಿಕೆ’ಯಾಗಿ ‘ಆದಿಪುರಾಣ’ವು ಮತೀಯ ಚೌಕಟ್ಟಿನೊಂದಿಗೆ ಮುಖಾಮುಖಿಯಾಯಿತೆನ್ನುತ್ತದೆ.

ಕೆ.ವಿ.ಎನ್ ಅವರಂತೆಯೇ ಓ.ಎಲ್. ನಾಗಭೂಷಣಸ್ವಾಮಿ ಅವರ ‘ಆದಿಪುರಾಣ: ಓದಿನ ಆಯಾಮಗಳು’ ಎನ್ನುವ ಲೇಖನವೂ ಆದಿಪುರಾಣದ ಧರ್ಮವನ್ನು ‘ಸಿದ್ಧರೂಪ’ದಲ್ಲಿ ನೋಡದೆ, ಎಲ್ಲವನ್ನೂ ಒಳಗೊಳ್ಳುವ, ಪ್ರತಿಯೊಂದರ ಸಾಮರ್ಥ್ಯದ ಅಂಚಿನತನಕ ಬೆಳವಣಿಗೆಯ ಮುಕ್ತ ಅವಕಾಶವನ್ನು ಹಾಗೆಯೇ ತೆರೆದಿಟ್ಟ ಬಗೆಯಾಗಿಯೇ ಗ್ರಹಿಸುತ್ತದೆ. ಅಷ್ಟೇ ಅಲ್ಲ, ಜೈನವೆಂಬ ಪಂಥೀಯ ಸಿದ್ಧಸ್ವರೂಪದೊಂದಿಗೆ, ಧರ್ಮವೆಂದರೆ ಆಯ್ದಮೌಲ್ಯಗಳ ಗುಚ್ಛವೆಂಬ ಆದರ್ಶದ ಹೊರಾವರಣವನ್ನೂ ಕಳಚಿಹಾಕುತ್ತದೆ. ಅದನ್ನು ಜ್ಞಾನಪರಂಪರೆಯನ್ನು ಬೆಳೆಸುವ ಕ್ರಿಯೆ(ಪಂಪಾಧ್ಯಯನ,ಪು.:194) ಎಂಬರ್ಥದಲ್ಲಿ ಅರಿವನ್ನು ಪೊಸಯಿಸುವ ಮಾರ್ಗವೆನ್ನುತ್ತದೆ. ಹಾಗಾಗಿ ಅನುಭವಗಳಿಗೆ ಬೆನ್ನುಹಾಕಿ ಏಕಾಂತದಿಂದ ಲೋಕಾಂತದ ಕಡೆಗೆ ಪ್ರಯಾಣಿಸುವುದು ಅಸಾಧು ಮತ್ತು ಅಸಾಧ್ಯವೆಂದೇ ಪರಿಭಾವಿಸುವ ಈ ಓದುಗಳಿಗೆ, ವೈರಾಗ್ಯ ಮತ್ತು ಸ್ವಾತಂತ್ರ್ಯ, gommataವೈರಾಗ್ಯ ಮತ್ತು ಹಿಂಸೆಗಳು ಒಂದೇ ನಾಣ್ಯದ ಎರಡು ಮುಖಗಳು. ಲೋಕದ ಅನುಭವಗಳಲ್ಲಿ ಯಾರು ತನ್ಮಯವಾಗಿ ತೊಡಗಿಸಿಕೊಳ್ಳಬಲ್ಲರೋ ಅವರಷ್ಟೇ ಅದರಿಂದ ಬಿಡಿಸಿಕೊಳ್ಳಬಲ್ಲರೆಂಬ ತರ್ಕವನ್ನು ಮುಂದಿಡುವ ಈ ಚಿಂತನೆಗಳಿಗೆ ಆದಿಪುರಾಣವೆಂದರೆ ಇಂತಹದ್ದೊಂದು ಅರಿವಿನ ಯಾನ, ಅನುಭವದ ಪ್ರಕ್ರಿಯೆ.

ಕೆ.ವಿ.ನಾರಾಯಣ ‘ತಿಳುವಳಿಕೆ (ಜ್ಞಾನ)’ ಎಂದುದನ್ನೇ ಓ.ಎಲ್.ಎನ್. ‘ಸ್ವಯಾರ್ಜಿತ’ವಾದ ‘ಅನುಭವ’ ಎನ್ನುತ್ತಾರೆ. “ಈ ಅನುಭವವನ್ನು ಇನ್ನೊಬ್ಬರಿಗೆ ಕೊಡೋದಕ್ಕೆ ಸಾಧ್ಯವಿಲ್ಲ……… ಕೊಡಬಹುದಾದುದು ಮಾಹಿತಿ” (ಆದಿಪುರಾಣ:ಸಾಂಸ್ಕೃತಿಕ ಮುಖಾಮುಖಿ, ಪು.42) ಅಷ್ಟೇ ಎನ್ನುವುದು ಅವರ ಖಚಿತ ನಿಲುವು. ಅನುಭವಕ್ಕೆ ಯಾವುದೂ ವರ್ಜ್ಯವಲ್ಲ. ಯಾವುದೂ ಜಡವಲ್ಲ. ಅರಿವನ್ನು ಹೊಸತಾಗಿಸುವ ಕಾವ್ಯಕ್ಕೂ ಇದೇ ಗುಣವಿದೆ. ಈ ಅರ್ಥದಲ್ಲಿ ಪಂಪ ‘ಆದಿಪುರಾಣ’ದಲ್ಲಿ ಅರಿವನ್ನು ಹೊಸತಾಗಿಸುವ ‘ಧರ್ಮ’ ಮತ್ತು ‘ಕಾವ್ಯಧರ್ಮ’ಗಳೆರಡನ್ನೂ ಒಟ್ಟಿಗೇ ಎದುರಾಗಿದ್ದಾನೆಂಬುದು ಈ ಲೇಖನದ ಸಾರಾಂಶ. ಇಲ್ಲಿ ಬೆಳಗುವಿಕೆಗೆ ಬೇರೆ ಅರ್ಥ ಸಿದ್ಧಿಸಿದೆ. ಬೆಳಗು ಅನ್ನೋದು ‘ಹೊಳೆಯು’ ಅನ್ನೋ ಬದಲು ‘ಉಜ್ಜಿ ನೋಡೋದು’, ‘ಪಾತ್ರೆ ಬೆಳಗೋದು’ ಅನ್ನೋ ಕ್ರಿಯಾರ್ಥಕ್ಕೆ ಪಲ್ಲಟಗೊಂಡಿದೆ. ‘ಅರಿವು’ ಮತ್ತು ‘ಆಗುವಿಕೆಯ’ ಪ್ರಕ್ರಿಯೆಗಳು ಮುಖ್ಯವಾಗಿ, ಸಾಂಸ್ಥಿಕಧರ್ಮದ ಸ್ಥಿರಾವಸ್ಥೆ ನೆಲೆಕಳೆದುಕೊಂಡಿದೆ. ಭೋಗ ಮತ್ತು ವಿರಕ್ತಿಗಳು ಒಟ್ಟಾಗಿಯೇ ಮುಳುಗಿ-ಏಳುವ ನಿರಂತರ ಕ್ರಿಯೆಯ ಭಾಗವಾಗಿ, ಲೋಕ ಮತ್ತು ಲೋಕೋತ್ತರವೆಂಬ ವಿಭಜನೆಯೂ ಇಲ್ಲವಾಗಿದೆ. ‘ಅಂಗನಾನುರಕ್ತಿಯ’ ರೂಪಕದಲ್ಲಿ ವಿರಕ್ತಿ ಅಥವಾ ಮುಕ್ತಿಯೂ ನಿಲುಗಡೆಯಿಲ್ಲದ, ಮತ್ತೆ ಮತ್ತೆ ಹಂಬಲಿಸಿ ಪಡೆಯುವ ಅಶಾಶ್ವತವಾದ ಮೋಹದ ಜಗತ್ತಾಗಿದೆ.

‘ಧರ್ಮ’ವನ್ನು ಹೀಗೆ ‘ಅರಿವು ಪೊಸಯಿಸು’ವಿಕೆಯಾಗಿ, ಆಹ್ವಾನದೊಂದಿಗೆ ವಿಸರ್ಜಿಸಿಕೊಳ್ಳುತ್ತಾ ನಡೆವ ಬಿಡುಗಡೆಯ ಯಾನವಾಗಿ ವಿವರಿಸಿಕೊಳ್ಳುವ ಅಗತ್ಯವಿದೆ. ಯಾಕೆಂದರೆ ಇಂದು ಧರ್ಮವು ಅನುಕರಣೆಯ ಸಿದ್ಧವಸ್ತುವಿನಂತಾಗಿದೆ. ವೈಯಕ್ತಿಯ ಪಾತಳಿಯಲ್ಲಿ ಅನುಭವಗಳನ್ನು ಉಜ್ಜಿನೋಡಿಕೊಳ್ಳಬೇಕಾದ ನೈಜ  ಧಾರ್ಮಿಕತೆಯ ಕಣ್ಮರೆಯಿಂದ ಕುರುಹುಗಳೇ ಮುಖ್ಯವಾಗಿ, ಮನುಷ್ಯ ಮನುಷ್ಯರುಗಳು ಹಿಂಸೆಯ ವೇದಿಕೆಯಲ್ಲಿ ತಾಲೀಮು ನಡೆಸುವಂತಾಗಿದೆ. ಹಾಗಾಗಿ ಧರ್ಮವನ್ನು ಹಿತಾಸಕ್ತ ಪರಿಭಾಷೆಗಳಿಂದ ತೆರವುಗೊಳಿಸಬೇಕಿದೆ. ಅದರೊಳಗಣ ತಾಯ್ತನದ ಜಲಕಣ್ಣನ್ನು ತೆರೆಯಿಸಬೇಕಿದೆ. ಇದಕ್ಕೆಂದೇ ಕಲಾಕೃತಿಗಳನ್ನು ಯುದ್ಧದ ಸಾಧನಗಳಾಗಿ ಅಂದರೆ ಯುದ್ಧ ಮಾಡುವವರ ಮೇಲಿನ ಯುದ್ಧದ ಸಾಧನಗಳಾಗಿ ಬಳಸಿಕೊಳ್ಳಬೇಕಿದೆ. ಆಗ ಪಂಪನೋ ಇನ್ನಾರೋ ಬೆಳಗಿದ ಜಿನಾಗಮವು ಕೇವಲ ಜೈನವಾಗದೆ, ಕೇವಲ ಧರ್ಮವೂ ಆಗದೆ, ಲೋಕಸಮಸ್ತದ ಮನುಷ್ಯಬದುಕು ನಿತ್ಯವೂ ಎದುರಾಗುತ್ತಿರುವ ಲೋಕಾನುಭವದ ಸರಣಿಯಾಗುತ್ತದೆ. ನಿತ್ಯ ‘ಬೆಳಗಿ’ ಹೊಸತಾಗುತ್ತಾ ಹೋಗುವ ನಿರಂತರ ಜಂಗಮವಾಗುತ್ತದೆ. ಈ ‘ಅರಿವಂ ಪೊಸಯಿಸುವ’ ಸ್ವಯಾರ್ಜಿತ ತಿಳುವಳಿಕೆಯ ಯಾನವನ್ನೇ ಲೋಕಸಂಕಟಕ್ಕೆ ಕರಗಿ, ಮನಸ್ಸುಗಳನ್ನು ಬೆಸೆಯುವ ಧರ್ಮವೆನ್ನುವುದಲ್ಲವೆ? ಅಂತಹ ಧರ್ಮವೇ ಬುನಾದಿಯಾದ ಬದುಕಿನಲ್ಲಿ ‘ಮಿಸ್ಟೇಕ್’ಗಳಿಗೆ ಜಾಗವಿರದಲ್ಲವೇ?

ಮಾಧ್ಯಮ : ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?


ಡಾ. ಶ್ರೀಪಾದ ಭಟ್


 

ನಮ್ಮ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳನ್ನು ಗಂಭೀರವಾಗಿ ಓದುವ, ನೋಡುವ ಯಾರನ್ನೇ ಕೇಳಿ. ಅವರು ಹೇಳುವುದು ಒಂದೇ ಮಾತು: ಲೋಕದ ಡೊಂಕು ತಿದ್ದುವ ಮಾಧ್ಯಮ ತನ್ನ ಡೊಂಕನ್ನು ಮಾತ್ರ ತಿದ್ದಿಕೊಳ್ಳುವುದಿಲ್ಲ. ಕರೆ ಮಾಡಿದ್ದ ಐವತ್ತಕ್ಕೂ ಹೆಚ್ಚು ಜನರಲ್ಲಿ ಯಾರೊಬ್ಬರೂ ಮಾಧ್ಯಮಗಳನ್ನು ಶಂಕಿಸದೇ ಬಿಟ್ಟಿಲ್ಲ! ಮಾಧ್ಯಮಗಳ ವಿಶ್ವಾಸಾರ್ಹತೆಯ ಸಮೀಕ್ಷೆ ನಮ್ಮಲ್ಲಿ ನಡೆಯಬೇಕಾದ ಜರೂರಿದೆ ಎಂಬುದನ್ನು ಇದು ಸೂಚಿಸುತ್ತದೆ. ಹೀಗಾದಾಗ ಮಾಧ್ಯಮಗಳ ನಿಜ ಸ್ವರೂಪ ಬಯಲಾಗುತ್ತದೆ. ಹೀಗಲ್ಲದೇ ಪತ್ರಿಕೆಯ ಹೆಸರಿನೊಂದಿಗೆ ತಾವು ಅತ್ಯಂತ ವಿಶ್ವಾಸಾರ್ಹ ಎಂದು ಹೇಳಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗೆ ಯಾರು ಬೇಕಾದರೂ tv-mediaಹೇಳಿಕೊಳ್ಳಬಹುದು. ಅದಕ್ಕೆ ಮಾನದಂಡ? ನಮ್ಮಲ್ಲಿನ್ನೂ ಇಲ್ಲ.

ಮಾಧ್ಯಮಗಳ ಒಳ ಸತ್ಯವನ್ನು ಗಮನಿಸುವ ಯಾರು ಬೇಕಾದರೂ ಅವುಗಳನ್ನು ಕುರಿತು ನಿಷ್ಠುರ ಲೇಖನಗಳನ್ನು ಬರೆಯಬಹುದು. ಆದರೆ ಅಂಥ ಲೇಖನ ಕೂಡ ಯಾವುದಾದರೂ ಒಂದು ಮಾಧ್ಯಮದಲ್ಲೇ ಪ್ರಕಟವಾಗಬೇಕಲ್ಲ? ತನ್ನನ್ನು ತಾನು ನೋಡಿಕೊಳ್ಳಲು ಸಿದ್ಧವಿರುವ, ಅಂಥ ಲೇಖನಗಳಿಗೆ ಜಾಗ ನೀಡುವ ಮಾಧ್ಯಮ ನಿಜಕ್ಕೂ ಅಪರೂಪದ್ದು. ಸಾಮಾನ್ಯವಾಗಿ ನಿಷ್ಠುರ, ಜನಪ್ರಿಯ ಧಾಟಿ ಇಲ್ಲದ ವಸ್ತು, ವಿಷಯಗಳ ಲೇಖನಗಳನ್ನು ಅದೆಷ್ಟೇ ಪೂರಕ ದಾಖಲೆಗಳಿದ್ದರೂ ಮಾಧ್ಯಮಗಳು ಪ್ರಕಟಿಸಲು ಮುಂದಾಗುವುದಿಲ್ಲ. ಮಾಧ್ಯಮಗಳ ಇಂಥ ತೀರ್ಮಾನವನ್ನೇ ಸ್ವಯಂ ನಿರ್ಬಂಧನೆ (ಸೆಲ್ಫ್ ಸೆನ್ಸರ್‌ಶಿಪ್) ಎಂದು ಕರೆಯುವುದು. ಒಂದೊಂದು ಪತ್ರಿಕೆ, ಚಾನೆಲ್ಲುಗಳಿಗೂ ಇದು ಬದಲಾಗುತ್ತದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳೆರಡರಲ್ಲೂ ಇಂಥ ನಿರ್ಬಂಧಗಳಿರುತ್ತವೆ. ವೈಯಕ್ತಿಕ ಹಿತಾಸಕ್ತಿ ಇದ್ದಲ್ಲಿ, ಸಂವಿಧಾನದ ಆಶಯಗಳಿಗೆ ಧಕ್ಕೆ ಬರುವಂತಿದ್ದಲ್ಲಿ ಅಂಥ ಸುದ್ದಿ ಅಥವಾ ಲೇಖನಗಳು ಖಂಡಿತ ತಿರಸ್ಕಾರ ಯೋಗ್ಯ. ಮಾಧ್ಯಮಗಳು ಮೊದಲು ಗಮನಿಸುವುದು ಇದನ್ನು. ಇದಲ್ಲದೆಯೂ ಮಾಧ್ಯಮಗಳು ಸುದ್ದಿ, ಲೇಖನಗಳ ಜಾಣ ಆಯ್ಕೆ ಮಾಡುವುದುಂಟು. ಈ ಜಾಣತನ ಓದುಗ ಅಥವಾ ವೀಕ್ಷಕರಿಗೆ ಸುಲಭವಾಗಿ ಅರ್ಥವಾಗುವಂಥದ್ದಲ್ಲ. ಮಾಧ್ಯಮಗಳ ಈ ಪ್ರವೃತ್ತಿಯನ್ನೇ ಚಿಂತಕರಾದ ಎಡ್ವರ್ಡ್ ಹರ್ಮನ್ ಮತ್ತು ನೋಮ್ ಚಾಮ್‌ಸ್ಕಿ ಸಮ್ಮತಿಯ ಸೃಷ್ಟಿ noam-chomsky(ಮ್ಯಾನ್ಯುಫಾಕ್ಚರಿಂಗ್ ಕನ್ಸೆಂಟ್) ಎಂದು ಕರೆದಿರುವುದು.

ಇವರ ಚಿಂತನೆ ಹೀಗಿದೆ: ಉದ್ಯಮಿ ಮಾಲೀಕತ್ವದ ಮಾಧ್ಯಮಗಳು ಮಾರುಕಟ್ಟೆಯ ಸೆಳೆತಕ್ಕೆ ಒಳಗಾಗಿ ವ್ಯವಸ್ಥಿತ ಸ್ವಯಂ ನಿರ್ಬಂಧನೆಯನ್ನು ಉತ್ತೇಜಿಸುತ್ತವೆ. ತಾವು ತುಂಬ ಮುಕ್ತ, ವಿಶ್ವಾಸಾರ್ಹ ಎಂದು ಕರೆದುಕೊಳ್ಳುವ ಮಾಧ್ಯಮಗಳು ಕೂಡ ಸ್ವಯಂ ನಿರ್ಬಂಧನೆಯ ಹೆಸರಲ್ಲಿ ಸುದ್ದಿ, ಲೇಖನಗಳ ಆಯ್ಕೆ, ತಿರಸ್ಕಾರದಲ್ಲಿ ಪಕ್ಷಪಾತ ತೋರಿಸುತ್ತವೆ. ತಮ್ಮ ನಿಲುವಿಗೆ ಸರಿ ಹೊಂದುವ ಸುದ್ದಿ ಮತ್ತು ಲೇಖನಗಳನ್ನು ಮಾತ್ರ ಅವು ಪ್ರಕಟಿಸುತ್ತವೆ. ದೀರ್ಘ ಅಧ್ಯಯನದ ನಂತರ ಹೇಳಿದ ಈ ಚಿಂತಕರ ಮಾತು ಸುಳ್ಳೆಂದು ಮಾಧ್ಯಮದ ಯಾರೊಬ್ಬರೂ ಹೇಳಲಾರರು!

ಮಾಧ್ಯಮಗಳು ವರದಿ ನೀಡುತ್ತವೆಯೇ, ಮಾಹಿತಿ ಕೊಡುತ್ತವೆಯೇ ಅಥವಾ ಜ್ಞಾನ ಒದಗಿಸುತ್ತವೆಯೇ? ವಸ್ತು ನಿಷ್ಠ ವರದಿಯನ್ನು ಮಾತ್ರ ನೀಡಬೇಕಿದ್ದ ಮಾಧ್ಯಮಗಳು ಅದನ್ನೊಂದನ್ನು ಬಿಟ್ಟು ತಮ್ಮಿಷ್ಟದಂತೆ ಸುದ್ದಿಯ ವಿಶ್ಲೇಷಣೆಗೆ ತೊಡಗುತ್ತವೆ. ತಮ್ಮ ಓದುಗ ಅಥವಾ ವೀಕ್ಷಕ ವರ್ಗದಲ್ಲಿ ಮುಕ್ತ ಚಿಂತನೆ ಬೆಳೆಯುವಂತೆ ಮಾಡುವ ಬದಲು ತಮ್ಮ ಚಿಂತನೆಯನ್ನೇ ಅವರು ಪ್ರತಿಪಾದಿಸುವಂತೆ ಪರೋಕ್ಷ ಪ್ರಭಾವ ಬೀರುತ್ತವೆ. ಸಾಮಾನ್ಯವಾಗಿ ಪತ್ರಿಕೆಗಳ ಸಂಪಾದಕೀಯ ಲೇಖನಗಳು ಇಂಥ ವಶೀಲಿಯನ್ನು ನಿರಂತರ ಮಾಡುತ್ತವೆ. ಅದಕ್ಕೆ ಒಮ್ಮೆ ಒಗ್ಗಿದ ಓದುಗನ ಅಭಿಪ್ರಾಯ ಕ್ರಮೇಣ ಆತ ಓದುವ ಪತ್ರಿಕೆಯ ಅಭಿಪ್ರಾಯವೇ ಆಗಿಬಿಡುತ್ತದೆ! ಇದು ಆ ಓದುಗನಿಗೆ ಅರ್ಥವೇ ಆಗುವುದಿಲ್ಲ. ಪತ್ರಿಕೆಗಿಂತ ಹೆಚ್ಚು ಪ್ರಭಾವಶಾಲಿಯಾದ ಟಿವಿ ಮಾಧ್ಯಮ ಈ ಕೆಲಸವನ್ನು ಇನ್ನಷ್ಟು ವ್ಯವಸ್ಥಿತವಾಗಿ ಚರ್ಚೆ (ಪ್ಯಾನೆಲ್ ಡಿಸ್ಕಶನ್) ರೂಪದಲ್ಲಿ ಮಾಡುತ್ತದೆ.

ನಮ್ಮ ಮಾಧ್ಯಮಗಳನ್ನೇ ಗಮನಿಸೋಣ. kannada-news-channelsಸಂವಿಧಾನ ಎಲ್ಲರಿಗೂ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು (ವಿಧಿ 19 ರಿಂದ 22) ಮಾತ್ರ ಮಾಧ್ಯಮಗಳಿಗೂ ಇರುವುದು. ಮಾಧ್ಯಮಕ್ಕೇನೂ ವಿಶೇಷ ಹಕ್ಕಿಲ್ಲ. ಸಂವಿಧಾನದ ನಾಲ್ಕನೆಯ ಸ್ತಂಭ ತಾವೆಂದು ಅವು ಎಷ್ಟೇ ಹೇಳಿಕೊಂಡರೂ ಅದು ನೀವೇ ಯಾಕೆ? ಮುಂದಿನ ಪೀಳಿಗೆ ರೂಪಿಸುವ ಶಿಕ್ಷಕರು ಯಾಕಲ್ಲ? ದೇಶದ ಆರೋಗ್ಯ ಕಾಪಾಡುವ ವೈದ್ಯರು ಯಾಕಲ್ಲ? ದೇಶದ ಬೆನ್ನೆಲುಬು ಎನ್ನಲಾಗುವ ರೈತ ವರ್ಗ ಯಾಕಲ್ಲ? ಎಂಬ ಪ್ರಶ್ನೆಗೆ ಅವರಲ್ಲೂ ಉತ್ತರವಿಲ್ಲ! ಅದಿರಲಿ.

ಸಮಾಜದ ಇನ್ನಿತರ ಸ್ತರಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಸ್ವಾಯತ್ತೆಯ ಬಗ್ಗೆ ಮಾತನಾಡುವ ಮಾಧ್ಯಮಗಳು ತಮ್ಮ ವಲಯದಲ್ಲಿ ಇದನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತವೆ? ಉತ್ತರ ನಿರಾಶಾದಾಯಕ. ಪ್ರತಿ ವರ್ಷ ಪ್ರಪಂಚದ 180 ದೇಶಗಳ ಮಾಧ್ಯಮ ವಲಯದಲ್ಲಿ ಖಚಿತ ಸಮೀಕ್ಷೆ ನಡೆಸಿ ವರದಿ ಮಾಡುವ ಫ್ರಾನ್ಸಿನ ರಿಪೋರ್‍ಟರ್ಸ್ ವಿತೌಟ್ ಬಾರ್ಡರ್ಸ್ ಎಂಬ ಸರ್ಕಾರೇತರ ಸಂಸ್ಥೆ 2012-13 ರಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯದ ಸ್ಥಾನ 140 ಎಂದು ಹೇಳಿದೆ. ಕಳೆದ ವರ್ಷ ಇದು 131 ಕ್ಕಿತ್ತು. 2002 ರಲ್ಲಿ 80 ನೆಯ ಸ್ಥಾನದಲ್ಲಿದ್ದ ಭಾರತ ಬರಬರುತ್ತ 140 ಕ್ಕೆ ಜಾರಿದೆ. ಇದು ಮೇಲೇಳುವ ಲಕ್ಷಣವಿಲ್ಲ. ಮಾಧ್ಯಮ ಪಡೆಯುತ್ತಿರುವ ಈ ಸ್ಥಾನಗಳಿಗೆ ಸ್ವತಃ ಮಾಧ್ಯಮ ಮತ್ತು ಅವುಗಳ ಮಾಲೀಕರು ಕಾರಣವೇ ವಿನಾ ಸರ್ಕಾರವಾಗಲಿ, ಜನರಾಗಲೀ ಅಲ್ಲ. ವರ್ಷವಿಡೀ ನಡೆಯುವ ಈ ಸಮೀಕ್ಷೆಯಲ್ಲಿ ಆಯಾ ದೇಶದ ವಕೀಲರು, ಶಿಕ್ಷಣವೇತ್ತರು, ಪತ್ರಕರ್ತರು, ಮಾನವಹಕ್ಕು ಕಾರ್ಯಕರ್ತರು ಮೊದಲಾದ ಎಲ್ಲ ವರ್ಗದ ಜನ ನೀಡುವ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಬಹಳ ಮುಖ್ಯವಾಗಿ ಮಾಧ್ಯಮಗಳ ಒಳ ವ್ಯವಸ್ಥೆಯಲ್ಲಿನ ಪರಿಸರ, ಪಾರದರ್ಶಕತೆ, ಸ್ವಯಂ ನಿರ್ಬಂಧ, ಮೂಲಸೌಕರ್ಯ, KannadaPapersCollageವರದಿಗಾರ ನೀಡುವ ಸುದ್ದಿ ಯಥಾವತ್ ಪ್ರಕಟವಾಗುವ ಸಾಧ್ಯತೆ, ಪತ್ರಕರ್ತರ ಆಂತರಿಕ ಸ್ವಾತಂತ್ರ್ಯ ಮೊದಲಾದ ಸಂಗತಿಗಳನ್ನು ಗಮನಿಸಲಾಗುತ್ತದೆ. ಮತ್ತೆ ಮತ್ತೆ ಪರಿಶೀಲಿಸಿ ಸ್ಥಾನ ನಿರ್ಧರಿಸಲಾಗುತ್ತದೆ. ಬಹಳ ಜವಾಬ್ದಾರಿಯಿಂದ ಆ ಸಂಸ್ಥೆ ಈ ಕೆಲಸ ನಿರ್ವಹಿಸುವುದರಿಂದ ಪ್ರಪಂಚಾದ್ಯಂತ ಅದು ನೀಡುವ ವರದಿಗೆ ಮಹತ್ವವಿದೆ. ಮಾಧ್ಯಮಗಳು ಸ್ವಹಿತಾಸಕ್ತಿ ಕಾಪಾಡಿಕೊಳ್ಳುವ ಸ್ವಯಂ ನಿರ್ಬಂಧವೇ ನಮ್ಮ ಮಾಧ್ಯಮ ಸ್ವಾತಂತ್ರ್ಯಕ್ಕೆ ಇರುವ ಬಹುದೊಡ್ಡ ಅಡ್ಡಿ.

ನಮ್ಮ ಮಾಧ್ಯಮಗಳಲ್ಲಿ ವರದಿಗಾರರ ನೇಮಕಾತಿಯಲ್ಲೂ ಆಯಾ ಮಾಧ್ಯಮಗಳ ಹಿತಾಸಕ್ತಿ ಕೆಲಸಮಾಡುತ್ತದೆ. ನಿಷ್ಠುರ ವರದಿಗಾರನಿಗೆ ದೊಡ್ಡ ಮಾಧ್ಯಮಗಳಲ್ಲಿ ಕೆಲಸ ದೊರೆಯುವುದು ದುರ್ಲಭ. ನಮ್ಮ ಬಹುತೇಕ ದೊಡ್ಡ ಪತ್ರಿಕೆಗಳು, ಚಾನೆಲ್ಲುಗಳು ಒಂದಲ್ಲ ಒಂದು ರಾಜಕೀಯ ಪಕ್ಷದ ಕೃಪೆಯಲ್ಲಿರುವವೇ ಆಗಿವೆ. ಕೆಲವು ನೇರವಾಗಿ ಗೋಚರವಾದರೆ ಇನ್ನು ಬಹಳಷ್ಟು ಮಾಧ್ಯಮಗಳದ್ದು ಗೌಪ್ಯ ಸಂಬಂಧ. ಇದನ್ನೇ ಹಿಡನ್ ಅಜೆಂಡಾ ಎನ್ನುವುದು. ನಮ್ಮ ದೇಶದಲ್ಲಿ ಪಂಚಾಯ್ತಿ ಮಟ್ಟದಿಂದ ಲೋಕಸಭೆಯವರೆಗೆ ಒಂದಲ್ಲ ಒಂದು ಚುನಾವಣೆ ನಡೆಯುತ್ತಲೇ ಇರುತ್ತದೆ. ಚುನಾವಣಾ ಸಂದರ್ಭದಲ್ಲಿ ಅವುಗಳ ನಿಲುವು, ವರದಿಗಾರರ ಸಾಚಾತನ ಮೊದಲಾದವು ಗೋಚರವಾಗುವುದುಂಟು. ಒಂದೇ ಸುದ್ದಿಯನ್ನು ಬೇರೆ ಬೇರೆ ಮಾಧ್ಯಮಗಳು ಬೇರೆ ಬೇರೆ ರೀತಿ ಓದಿಕೊಳ್ಳುವಂತೆ ಪ್ರಸ್ತುತಪಡಿಸುತ್ತವೆ! ಪರಿಸ್ಥಿತಿ ಹೀಗಿರುವಾಗ ಅವುಗಳಿಗೆ ಮುಕ್ತ ವಾತಾವರಣ ಎಲ್ಲಿಂದ ಬರಬೇಕು? tv-mediaಕೆಲವೊಮ್ಮೆ ಮಾಧ್ಯಮಗಳ ಮಾಲೀಕರು ತಮಗಾಗದ ವ್ಯಕ್ತಿ, ಸಂಸ್ಥೆಗಳ ವಿರುದ್ಧವೋ ಬೇಕಾದ ವ್ಯಕ್ತಿ, ಸಂಸ್ಥೆಗಳ ಪರವೋ ವರದಿ ತಯಾರಿಸಿಕೊಡುವಂತೆ ವರದಿಗಾರರ ಮೇಲೆ ನೇರ ಒತ್ತಡ ಹೇರುವುದೂ ಇದೆ. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಬಲವಂತದ ಮಾಘಸ್ನಾನ ಮಾಡುವ ಪತ್ರಕರ್ತರಿಗೆ ಕೊರತೆಯೇನೂ ಇಲ್ಲ.

ಮಾಧ್ಯಮದ ಜನ ಕೂಡ ಮನುಷ್ಯರೇ ಆದ್ದರಿಂದ ಅವರಿಗೂ ಮಾನವ ಸಹಜ ದೌರ್ಬಲ್ಯ, ಶಕ್ತಿಗಳೆಲ್ಲವೂ ಇರುತ್ತವೆ. ಅಧಿಕಾರ, ಹಣ, ಪ್ರಶಸ್ತಿ-ಕೀರ್ತಿ ಮೊದಲಾದವುಗಳ ಆಮಿಷ ಅವರ ವೃತ್ತಿ ನಿಷ್ಠೆಯನ್ನು ಬಲಿಪಡೆದರೂ ಅಚ್ಚರಿ ಇಲ್ಲ. ಅಲ್ಲದೇ ನಮ್ಮ ವ್ಯವಸ್ಥೆಯಲ್ಲಿ ಮಾಧ್ಯಮ ಪ್ರತಿನಿಧಿಸುವವರಿಗೆ ಆಯಾ ಮಾಧ್ಯಮಗಳೇ ರಕ್ಷಾಕವಚವಾಗುವುದರಿಂದ ಹಾಗೂ ಜನರ ಜವಾಬಿಗೆ ಉತ್ತರ ಕೊಡಲೇಬೇಕು ಎಂಬ ಜರೂರು ಇಲ್ಲದ ಕಾರಣದಿಂದ ಮಾಧ್ಯಮಗಳು ತಮ್ಮ ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ಗೆರೆ ಎಳೆದುಕೊಳ್ಳುವುದನ್ನು ಮರೆಯಲೂಬಹುದು. ಆದರೆ ಅದರ ಪರಿಣಾಮ ಮಾಧ್ಯಮಗಳ ಸ್ಥಾನ ತೋರಿಸುವ ವರದಿಗಳಲ್ಲಿ ಹೀಗೆ ಬಯಲಾಗುತ್ತದೆ. ಸಾಮಾನ್ಯ ಜನತೆಗೆ ಮಾಧ್ಯಮದ ಮೇಲೆ ಏನೇ ಸಿಟ್ಟಿರಲಿ, ಸರ್ಕಾರಕ್ಕೆ ಎಷ್ಟೇ ಅಸಮಾಧಾನವಿರಲಿ, ಇವರೇನೂ ಮಾಡಲಾಗದು. ಯಾಕೆಂದರೆ ಇದು ಬೆಕ್ಕಿಗೆ ಗಂಟೆ ಕಟ್ಟುವ ಪ್ರಶ್ನೆ!

ಹಿಂದೂ ನೈತಿಕ ಪೋಲಿಸರ ಬೆನ್ನು ತಟ್ಟಿದ ಮುಸ್ಲಿಮ್ ಮೂಲಭೂತವಾದಿಗಳು


-ಇರ್ಷಾದ್


 

 

 

“ ಚೆಡ್ಡಿಗಳು  ಆ ಮುಸ್ಲಿಂ ಜೋಡಿಗೆ ಹೊಡೆದದ್ದು ಒಳ್ಳೆಯದಾಯಿತು, ಬಿಡಿ.  ಬುರ್ಖಾ  ತೊಡದೆ ಹುಡುಗನ ಜೊತೆ ತಿರುಗಾಡಿದ ಆಕೆಗೆ ಎರಡೇಟು  ನೀಡಿ ಒಳ್ಳೆ ಕೆಲಸ  ಮಾಡಿದರು ”. ಇದು ದಕ್ಷಿಣ  ಕನ್ನಡ  ಜಿಲ್ಲೆಯ ಉಜಿರೆಯಲ್ಲಿ ಸಂಘಪರಿವಾರದ ನೈತಿಕ ಪೊಲೀಸರು ಮುಸ್ಲಿಮ್ ಸಮುದಾಯದ ಜೋಡಿಗೆ ಭಿನ್ನ ಕೋಮಿನ ಪ್ರೇಮಿಗಳೆಂದು ಅಪಾರ್ಥ ಮಾಡಿಕೊಂಡು  ಹಲ್ಲೆ ನಡೆಸಿದ ಅಮಾನವೀಯ ಘಟನೆಯ  ನಂತರ ಕೆಲ ಮುಸ್ಲಿಮ್  ಮೂಲಭೂತವಾದಿ ಗುಂಪುಗಳಿಂದ ಸಂಘಪರಿವಾರದ ಅನೈತಿಕ  ಪೊಲೀಸರಿಗೆ  ಸಿಕ್ಕಿದ  ಶಹಬ್ಬಾಸ್  ಗಿರಿ. ಕರಾವಳಿಯಲ್ಲಿ ಮುಸ್ಲಿಂ ಹುಡುಗ- ಹಿಂದೂ  ಯುವತಿಯ  ಜೊತೆ ಕಾಣ ಸಿಕ್ಕರೆ  ಸಂಘಪರಿವಾರದ ನೈತಿಕ ಪೊಲೀಸರು  ಹಲ್ಲೆ ನಡೆಸುತ್ತಾರೆ. ಮುಸ್ಲಿಂ ಯುವತಿ ಹಿಂದೂ ಯುವಕನ ಜೊತೆ ತಿರುಗಾಡಿದರೆ ಮುಸ್ಲಿಂ ಮೂಲಭೂತವಾದಿ ನೈತಿಕ ಪೊಲೀಸರು ಅವರ ಮೇಲೆ ಮುಗಿಬೀಳುತ್ತಾರೆ. ಇದು ಕರಾವಳಿಯಲ್ಲಿ  ಸಾಮಾನ್ಯ. ಆದರೆ  ಕೆಲವೊಮ್ಮೆ ನೈತಿಕ ಪೊಲೀಸರ ಯಡವಟ್ಟಿನಿಂದಾಗಿ ಸ್ವಧರ್ಮದ ಜೋಡಿಗಳೂ ಏಟು ತಿನ್ನಬೇಕಾಗುತ್ತದೆ.

ಎರಡು  ತಿಂಗಳ ಹಿಂದೆ  ಉತ್ತರ ಭಾರತ ಮೂಲದ ವಿವಾಹ ನಿಶ್ಚಿತ  ಮುಸ್ಲಿಂ ಜೋಡಿಯ ಮೇಲೆ ಮಂಗಳೂರಿನ ಸುರತ್ಕಲ್ ಎಂಬಲ್ಲಿ ಹಿಂದೂಪರ  ಸಂಘಟನೆಗಳ images1ಕಾರ್ಯಕರ್ತರೆನ್ನಲಾದ  ಗುಂಪು ಹಲ್ಲೆ ನಡೆಸಿತ್ತು. ಅಲ್ಲೂ ಮುಸ್ಲಿಮ್ ಯುವಕನ ಜೊತೆಗಿದ್ದ ಮಸ್ಲಿಮ್ ಯುವತಿ ಬುರ್ಖಾ  ಧರಿಸಿರಲಿಲ್ಲ. ಈ ಕಾರಣದಿಂದ ತಪ್ಪಾಗಿ ಅರ್ಥೈಸಿಕೊಂಡ ನೈತಿಕ ಪೊಲೀಸರು ಅವರ ಮೇಲೆ ಹಲ್ಲೆ  ನಡೆಸಿದ್ದರು.  ದಿನಾಂಕ  16 -7-14  ಬುಧವಾರದಂದು  ಚಿಕ್ಕಮಗಳೂರಿನ ಮುಸ್ಲಿಂ ಯುವಕ ಹಾಗೂ ಉಡುಪಿಯ ಮುಸ್ಲಿಂ ಯುವತಿ ದಕ್ಷಿಣ  ಕನ್ನಡ  ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಗೆ ಬಂದಿದ್ದರು. ಈ ಜೋಡಿಗೆ ವಿವಾಹ ನಿಶ್ಚಿತಾರ್ಥವೂ  ಆಗಿತ್ತು. ಯುವತಿಯ  ಸಹೋದರಿಯ  ಕಾಲೇಜು ಸೇರ್ಪಡೆ ವಿಚಾರವಾಗಿ ಈ ಮುಸ್ಲಿಂ  ಜೋಡಿ ಬೆಳ್ತಂಗಡಿಗೆ ಬಂದಿತ್ತು. ಬೆಳ್ತಗಂಗಡಿ ತಾಲೂಕಿನ ಉಜಿರೆಯಲ್ಲಿ  ಜೊತೆಗೆ  ತಿರುಗಾಡುತ್ತಿದ್ದ  ಯುವಕ –ಯುವತಿ  ಸಂಘಪರಿವಾರದ  ನೈತಿಕ ಪೊಲೀಸರ ಕಣ್ಣಿಗೆ  ಬಿದ್ದರು. ತಕ್ಷಣ  ಧರ್ಮಪ್ರೆಜ್ಞೆಯಿಂದ  ಜಾಗೃತಗೊಂಡ  ಯುವಕರ  ತಂಡ  ಅವರನ್ನು  ಗಮನಿಸತೊಡಗಿತು. ಯುವಕ ಮೊದಲ ನೋಟಕ್ಕೆ  ಮುಸ್ಲಿಂ ಸಮುದಾಯಕ್ಕೆ  ಸೇರಿದವನೆಂದು ಖಾತ್ರಿ ಮಾಡಿಕೊಂಡ ಅವರು ಆತನ ಜೊತೆಗಿದ್ದ ಯುವತಿ ಹಿಂದೂ  ಎಂದು ನಿರ್ಧರಿಸಿಬಿಟ್ಟರು. ಯಾಕೆಂದರೆ  ಆಕೆ ಇಸ್ಲಾಂ ಧಾರ್ಮಿಕ ಶೈಲಿಯ ಬುರ್ಖಾ ಧರಿಸಿರಲಿಲ್ಲ. ತಕ್ಷಣವೇ  “ಹಿಂದೂ ಯುವತಿಯ ಜೊತೆಗೆ  ಸುತ್ತಾಡುತ್ತೀಯಾ  ಬ್ಯಾರಿ” ಎಂದು ಜೋಡಿ ಕಡೆ ಮುನ್ನುಗ್ಗಿದ ನೈತಿಕ ಪೊಲೀಸರ  ತಂಡ ಅವರಿಗೆ ಹಿಗ್ಗಾ ಮುಗ್ಗಾ ಥಳಿಸಿತು. ಏನು  ನಡೆಯುತ್ತಿದೆ  ಎಂದು  ಅರಿಯದ ಆ ಮುಗ್ದ  ಜೋಡಿ  ಸಾವರಿಸಿಕೊಂಡು  ನಾವಿಬ್ಬರೂ ಮುಸ್ಲಿಂ ಸಮುದಾಯಕ್ಕೆ  ಸೇರಿದವರು ನಮಗೆ ಹೊಡೀಬೇಡಿ  ಎಂದು ಪರಿ ಪರಿಯಾಗಿ ಬೇಡಿಕೊಂಡರು. ಅಷ್ಟಕ್ಕೂ  ಸುಮ್ಮನಾಗದ ನೈತಿಕ ಪೊಲೀಸರಿಗೆ ತಮ್ಮ ಗುರುತು ಚೀಟಿಯನ್ನೂ  ತೋರಿಸಿದರು. ಇಷ್ಟಕ್ಕೂ ಸಂಘಪರಿವಾರದ  ನೈತಿಕ  ಪೊಲೀಸರಿಗೆ ನಂಬಿಕೆ ಬರಲಿಲ್ಲ  ಕಾರಣ  ಆಕೆ  ಬುರ್ಖಾ  ಧರಿಸಿರಲಿಲ್ಲ.

ಈ  ವಿಚಾರ  ಎಲ್ಲಾ ಮಾಧ್ಯಮಗಳಲ್ಲೂ  ಪ್ರಸಾರ  ಆದ  ನಂತರ ಸಂಘಪರಿವಾರದ  ನೈತಿಕ  ಪೊಲೀಸರಿಗೆ  ತಮ್ಮ  ಯಡವಟ್ಟಿನ ಅರಿವಾಯಿತು. ಇದು  ಇನ್ನೇನು ತಿರುವು  ಪಡೆದುಕೊಳ್ಳುತ್ತಾ  ಎಂಬ ಕುತೂಹಲದಲ್ಲಿದ್ದ ಸಂಘಪರಿವಾರದ ನೈತಿಕ ಪೊಲೀಸರಿಗೆ ಮತ್ತೊಂದು  ಅಚ್ಚರಿ  ಕಾದಿತ್ತು. ಅದೇನೆಂದರೆ ಅನೇಕ  ಮುಸ್ಲಿಂ  ಮೂಲಭೂತವಾಧಿಗಳು  ಸಂಘಪರಿವಾರದ  ನೈತಿಕ ಪೊಲೀಸರ  ಅಮಾನವೀಯ  ಕೃತ್ಯವನ್ನು ಬೆಂಬಲಿಸಿದರು ಸಮರ್ಥಿಸಿದರು. ಬೆನ್ನುತಟ್ಟಿದರು ! ಕರಾವಳಿ ಭಾಗದಲ್ಲಿ ಹಿಂದೂಪರ  ಸಂಘಟನೆಗಳು  ನಡೆಸುತ್ತಿರುವ ವಿವಿಧ  ರೀತಿಯ  ನೈತಿಕ  ಪೊಲೀಸ್  ಗಿರಿಯಿಂದ ನಾನಾ  ರೀತಿಯ  ತೊಂದರೆಗಳನ್ನು  ಅನುಭವಿಸುತ್ತಿರುವ ಮುಸ್ಲಿಂ  ಸಮುದಾಯದ ಯುವಕರು ಉಜಿರೆಯಲ್ಲಿ ನೈತಿಕ ಪೊಲೀಸರು  ಮುಸ್ಲಿಂ  ಜೋಡಿಯ ಮೇಲೆ ಹಲ್ಲೆ ನಡೆಸಿ ಅಮಾನವೀಯ  ಪ್ರದರ್ಶನ  ಮಾಡಿದಾಗ ಅದನ್ನು ಸಮರ್ಥಿಸುತ್ತಿರುವ ಮನಸ್ಥಿತಿ ನೋಡಿ ನನಗೆ  ಆಶ್ವರ್ಯವೇನೂ ಆಗಿಲ್ಲ. ಬದಲಾಗಿ ಆ  ಮುಸ್ಲಿಂ ಯುವತಿಯ ಅಸಾಹಯಕ ಸ್ಥಿತಿ  ನೋಡಿ ಮರುಕ ಹುಟ್ಟಿತು.

ಇಸ್ಲಾಂ  ಧರ್ಮದಲ್ಲಿ ಪರ್ದಾ  ಒಂದು ಸಂಪ್ರದಾಯ. ಅಂದ  ಮಾತ್ರಕ್ಕೆ ಅದಕ್ಕೆಇಸ್ಲಾಂ  ಧರ್ಮದಲ್ಲಿ  ಯಾವುದೇ ಬಲವಂತವಿಲ್ಲ.  ಹೆಚ್ಚಿನ  ಮುಸ್ಲಿಂ  ಸಮುದಾಯದ  imagesಮಹಿಳೆಯರು  ಬುರ್ಖಾ  ಧರಿಸುತ್ತಾರೆ.  ಇನ್ನು ಅನೇಕರು ಧರಿಸುವುದಿಲ್ಲ. ಆದರೆ ಬುರ್ಖಾ ವಿಚಾರ ಉಭಯ  ಧರ್ಮದ ಮೂಲಭೂತವಾದಿಗಳು ತಮ್ಮ  ಬೇಳೆ ಬೇಯಿಸಲಿಕ್ಕೋಸ್ಕರ  ಬಳಸುತ್ತಿರುವುದರಿಂದ ಪ್ರಸ್ತುತ ದಿನಗಳಲ್ಲಿ  ಮುಸ್ಲಿಂ ಮಹಿಳೆ  ಬುರ್ಖಾ ವಿಚಾರದಲ್ಲಿ ಮಾನಸಿಕ ಕಿರುಕುಳ  ಅನುಭವಿಸುವಂತಾಗಿದೆ.  ಒಂದೆಡೆ ಶಾಲಾ ಕಾಲೇಜುಗಳಲ್ಲಿ  ಮುಸ್ಲಿಂ  ಯುವತಿಯರು ಬುರ್ಖಾ ಅಥವಾ ಸ್ಕಾರ್ಫ್ ಧರಿಸುವುದನ್ನು ಏಕರೂಪದ  ಸಮವಸ್ತ್ರದ ವಿಚಾರದಲ್ಲಿ ವಿರೋಧಿಸಲಾಗುತ್ತದೆ. ಇಂಥಹಾ ವಿರೋಧದ  ನಡುವೆಯೂ  ಬುರ್ಖಾವನ್ನು  ಧರಿಸುವ ಮುಸ್ಲಿಂ ಹೆಣ್ಣನ್ನು  ಸಮಾಜ  ನೋಡುವ ದೃಷ್ಟಿಕೋನವೇ  ಬೇರೆ. ದೇಶದ ಯಾವುದೇ ಮೂಲೆಯಲ್ಲಿ  ಬಾಂಬ್ ಸ್ಟೋಟವಾದಲ್ಲಿ  ಮುಸ್ಲಿಂ  ಗಡ್ಡಧಾರಿಗಳು ಸಮಾಜದ  ಸಂಶಯಕ್ಕೆ  ಕಾರಣರಾಗುತ್ತಾರೋ  ಅದೇ  ರೀತಿ ಬುರ್ಖಾ ಧರಿಸಿದ  ಹೆಣ್ಣನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತದೆ. ಇದು  ಒಂದೆಡೆಯಾದರೆ ಬುರ್ಕಾವನ್ನು ತಿರಸ್ಕರಿಸಿ ಸಾಮಾನ್ಯ  ಮಹಿಳೆಯರಂತೆ  ಸಮಾಜದಲ್ಲಿ ಕಂಡುಬರುವ ಮುಸ್ಲಿಂ  ಹೆಣ್ಣಿನ  ಪರಿಸ್ಥಿತಿಯಂತೂ  ಗಂಭೀರ. ಆಕೆಯನ್ನು  ಮುಸ್ಲಿಂ  ಸಮಾಜ ನೋಡುವ ದೃಷ್ಟಿಕೋನವೇ ಬೇರೆ. ಮುಸ್ಲಿಂ  ಸಮುದಾಯದ  ಜನರ ಕಣ್ಣಲ್ಲಿ ಆಕೆ ಧರ್ಮ ಭ್ರಷ್ಟೆಯಾಗಿ ಕಂಡುಬರುತ್ತಾಳೆ. ನಿತ್ಯ ಆಕೆಗೆ ಮೂದಳಿಕೆ ತಪ್ಪಿದ್ದಲ್ಲ. ನಿತ್ಯ  ಅವಮಾನ ನೋವುಗಳನ್ನು ಸಹಿಸಿಕೊಂಡ  ಮುಸ್ಲಿಂ ಮಹಿಳೆಯರು ನಮ್ಮಸಮಾಜದಲ್ಲಿದ್ದಾರೆ. ಇನ್ನು ಕೆಲವರು ಕೆಲವರು  ತನ್ನದೇ  ಸಮಾಜದ ಮೂಲಭೂತವಾದಿಗಳ ಕೆಂಗಣ್ಣಿನಿಂದ ಪಾರಾಗಲು ಮತ್ತೆ ಪರ್ದಾ ಕಡೆ ಮುಖಮಾಡಿದ್ದಾರೆ.

ವಿಪರ್ಯಾಸವೆಂದರೆ  ಇಲ್ಲಿ  ಮುಸ್ಲಿಮ್ ಮಹಿಳೆ  ಪರ್ದಾ  ಧರಿಸಬೇಕೋ  ಬೇಡವೋ  ಎಂಬುವುದನ್ನು ಇಲ್ಲಿನ ಮುಸ್ಲಿಂ  ಮೂಲಭೂತವಾದಿಗಳು ಹಾಗೂ ಹಿಂದೂ ಮೂಲಭೂತವಾದಿಗಳು ನಿರ್ಧರಿವಂತಾಗಿದೆ. ಬುರ್ಖಾ ತೊಟ್ಟರೂ ಆಕೆಗೆ ಅವಮಾನ ಬುರ್ಕಾ ತೆಗೆದರೂ ಅವಮಾನ ಎಂಬುವಂತಹಾimages3 ಪರಿಸ್ಥಿತಿ ಕರಾವಳಿ ಭಾಗದಲ್ಲಿ ನಿರ್ಮಾಣವಾಗುತ್ತಿದೆ. ಇನ್ನೂ  ವಿಪರ್ಯಾಸದ  ಸಂಗತಿಯೆಂದರೆ ಪರ್ದಾತೊಟ್ಟ ಮುಸ್ಲಿಂ  ಮಹಿಳೆಯರನ್ನು  ಅವಮಾನ  ಮಾಡುತ್ತಿದ್ದ  ಶಾಲಾ  ಕಾಲೇಜುಗಳಲ್ಲಿ ಬುರ್ಖಾ ವಿವಾದ ಬಂದಾಗ ಬುರ್ಖಾ ಧರಿಸಬಾರದು  ಎಂದು ತಾಕೀತು ಮಾಡುತ್ತಿದ್ದ ಸಂಘಪರಿವಾರದ ಯುವಕರು ಸಾಮಾಜಿಕ ತಾಣಗಳಲ್ಲಿ ಮುಸ್ಲಿಂ  ಯುವತಿಯರು ಬುರ್ಖಾ ಧರಿಸಿಯೇ ಪ್ರಿಯಕರನ ಜೊತೆ  ಸುತ್ತಾಡಿ ಎನ್ನುತ್ತಿದ್ದಾರೆ. ಇಷ್ಟೇ ಅಲ್ಲ ಹಿಂದೂ ಪರ  ಸಂಘಟನೆಯ ಮುಖಂಡನೊಬ್ಬ  ಪತ್ರಿಕಾಗೋಷ್ಠಿಯಲ್ಲಿ ಉಜಿರೆಯಲ್ಲಿ  ನಡೆದ ನೈತಿಕ ಪೊಲೀಸ್  ಗಿರಿ ಘಟನೆಯ ನೀಡಿದ  ಹೇಳಿಕೆ ಅಶ್ಚರ್ಯಕರವಾಗಿದೆ.  ರಂಜಾನ್  ತಿಂಗಳಲ್ಲಿ ಒಬ್ಬ ಮುಸ್ಲಿಂ ಯುವತಿಯಾಗಿ ಬುರ್ಖಾ  ಧರಿಸದೆ ಸಾರ್ವಜನಿಕವಾಗಿ ತಿರುಗುವುದು  ಸರಿಯಲ್ಲ  ಎಂಬುದು ಆತನ ಅಭಿಪ್ರಾಯ. ಮುಸ್ಲಿಂ  ಮಹಿಳೆಯರ ಪರ್ದಾ ಧರಿಸುವಿಕೆ ಹಾಗೂ ಧಾರ್ಮಿಕ  ಸಂಸ್ಕೃತಿ  ಕಟ್ಟುಪಾಡುಗಳನ್ನು ಮೀರಿ ಹೋಗದಂತೆ ನೋಡಿಕೊಳ್ಳುವ ಗುತ್ತಿಗೆ ಇದುವರೆಗೂ ಮುಸ್ಲಿಮ್ ಮೂಲಭೂತವಾದಿಗಳ ಕೈಯಲ್ಲಿತ್ತು. ಇದೀಗ ಹಿಂದೂ ಮೂಲಭೂತವಾದಿಗಳೂ ಹಿಂದೂ ಯುವತಿಯರ ಸಂಸ್ಕೃತಿ ರಕ್ಷಣೆಯ ಹೊಣೆಯ ಜೊತೆಗೆ ಮುಸ್ಲಿಮ್  ಹೆಣ್ಣುಮಕ್ಕಳ ರಕ್ಷಣೆಯ ಹೆಚ್ಚುವರಿ  ಹೊಣೆಯನ್ನು  ಹೊತ್ತುಕೊಂಡಂತಿದೆ.

ತನ್ನ ಹುಳುಕು ನೋಡಿಕೊಳ್ಳದ ಮಾಧ್ಯಮ


ಡಾ. ಶ್ರೀಪಾದ ಭಟ್


 

ಮಾಧ್ಯಮಗಳನ್ನು ಸಂವಿಧಾನದ ನಾಲ್ಕನೆಯ ಸ್ತಂಭ ಎಂದವನು ಎಡ್ಮಂಡ್ ಬರ್ಕ್ ಅದ್ಯಾವ ಗಳಿಗೆಯಲ್ಲಿ ಹಾಗೆಂದಿದ್ದನೋ, ಇವು ಇನ್ನೂ ಮುಂದೆ ಹೋಗಿ ತಾವೇ ಪ್ರಧಾನ ಸ್ತಂಭ ಎಂಬಂತೆ ವರ್ತಿಸುತ್ತಿವೆ.

ಸಮಾಜದ ಎಲ್ಲ ವಿಷಯ, ಸ್ತರಗಳ ಬಗ್ಗೆ ಮಾತನಾಡುವ, ಬುದ್ಧಿ ಹೇಳುವ ಮತ್ತು ಕಲಿಸುವ ಮಾಧ್ಯಮಗಳು ತನ್ನೊಳಗಿನ ಹುಳುಕಿಗೆ ಔಷಧ ಹುಡುಕುವುದಿರಲಿ, ನೋಡಿಕೊಳ್ಳಲೂ ತಯಾರಿಲ್ಲ. ಸದ್ಯದ ವಿದ್ಯಮಾನಗಳು ಮಾಧ್ಯಮಗಳ ಹುಳುಕನ್ನು ಎತ್ತಿ ತೋರಿಸುತ್ತವೆ. tv-mediaಸುತ್ತಲಿನ ಸುದ್ದಿಯನ್ನು ದೊಡ್ಡದಾಗಿ ಬಿಂಬಿಸುವ ಮಾಧ್ಯಮಗಳು ಎಂದೂ ಸುದ್ದಿಮನೆಯ ಸುದ್ದಿ ಹೊರಗೆ ಹೋಗದಂತೆ ನೋಡಿಕೊಳ್ಳುತ್ತವೆ. ಬೆರಳೆಣಿಕೆಯ ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿದ್ದಾಗ ಅವುಗಳ ಸಾರ್ವಭೌಮತ್ವ ನಡೆಯುತ್ತಿತ್ತು. ಆದರೇನು ಮಾಡುವುದು? ಈಗ ಬಗೆ ಬಗೆಯ ಮಾಧ್ಯಮಗಳು ಕಾಲಿಟ್ಟಿವೆ. ಮೊಬೈಲು, ಬ್ಲಾಗು, ಫೇಸ್‌ಬುಕ್, ಟ್ವೀಟ್ ಹೀಗೆ ಅನೇಕಾನೇಕ ಸಾಮಾಜಿಕ ತಾಣಗಳು ಮಾಧ್ಯಮ ಸತ್ಯವನ್ನು ಹೊರಗೆಳೆಯುತ್ತವೆ. ಜನ ಈಗ ಒಂದಕ್ಕಿಂತ ಹೆಚ್ಚು ಮಾಧ್ಯಮ ನೋಡುತ್ತಾರೆ ಅಥವಾ ಓದುತ್ತಾರೆ. ಹೀಗಾಗಿ ತಾವು ಕೊಟ್ಟಿದ್ದೇ ಸರಿ ಎಂದು ಯಾವ ಮಾಧ್ಯಮವೂ ಭಾವಿಸುವಂತಿಲ್ಲ.

ಭಾರತದಲ್ಲಿ ಇಂದು ಸುಮಾರು 70,000 ಸುದ್ದಿಪತ್ರಿಕೆಗಳೂ 690 ಸ್ಯಾಟಿಲೈಟ್ ಚಾನೆಲ್ಲುಗಳೂ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ರಾಷ್ಟ್ರ, ರಾಜ್ಯ, ಪ್ರಾಂತ ಮಟ್ಟದ ಪತ್ರಿಕೆಗಳು ಸೇರಿವೆ. ಚಾನೆಲ್ಲುಗಳಲ್ಲಿ ಸ್ಥಳೀಯ ಕೇಬಲ್ ನೆಟ್‌ವರ್ಕ್ ಜಾಗ ಪಡೆದಿಲ್ಲ. ಇವುಗಳಲ್ಲಿ ಸುಮಾರು 80 ಚಾನೆಲ್ಲುಗಳು ಇಪ್ಪತ್ತನಾಲ್ಕು ಗಂಟೆ ಸುದ್ದಿ ಬಿತ್ತರಿಸಲೆಂದೇ ಇವೆ. ಭಾರತದಲ್ಲಿ ನಿತ್ಯ ಈ ಎಲ್ಲ ಪತ್ರಿಕೆಗಳು ಸುಮಾರು 100 ದಶಲಕ್ಷ ಪ್ರತಿಗಳನ್ನು ಓದುಗರಿಗೆ ತಲುಪಿಸುತ್ತವೆ. ಇಷ್ಟಾದರೂ ನಮ್ಮ ಜನಕ್ಕೆ ಸುದ್ದಿ ದಾಹ ತೀರುವುದಿಲ್ಲ!

2011 ರಲ್ಲಿ ಹೊರಬಂದ 15 ನೆಯ ಜನಗಣತಿಯಂತೆ ನಮ್ಮ ಸಾಕ್ಷರತೆ ಶೇ.74.04. ಇವರಲ್ಲಿ ಹೆಚ್ಚು ಜನರನ್ನು ಸೆಳೆಯುವುದಷ್ಟೇ ಮಾಧ್ಯಮಗಳ ಕೆಲಸ. ಈ ಪೈಪೋಟಿಯಲ್ಲಿ ಜನ ಮತ್ತು ಒಟ್ಟಾರೆ ಸಮಾಜದ ಮೇಲೆ ತಾವು ಬಿತ್ತರಿಸುವ ಸುದ್ದಿ ಯಾವ ಪ್ರಭಾವ ಬೀರಬಹುದು ಎಂಬುದನ್ನು tv-mediaಅವು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಯಾರಾದರೂ ಅಪಘಾತದಲ್ಲಿ ಸಿಕ್ಕು ನೆರವಿಗೆ ಅಂಗಲಾಚುತ್ತಿದ್ದರೆ ಅದನ್ನು ಹಾಗೆಯೇ ಬಿತ್ತರಿಸಿ ನೋಡಿ ನಮ್ಮ ಸಮಾಜ ಎಷ್ಟು ಕ್ರೂರವಾಗಿದೆ ಎಂದು ಹೇಳುವುದಷ್ಟೇ ಒಬ್ಬ ನಿಜವಾದ ಪತ್ರಕರ್ತನ ಕೆಲಸ, ಬದಲಿಗೆ ತಾನೇ ನೆರವಿಗೆ ಧಾವಿಸುವುದಲ್ಲ. ಇದು ಮಾಧ್ಯಮಗಳ ವೃತ್ತಿಪರತೆ!

ಸಮಾನತೆ, ನೈತಿಕತೆ, ಬಂಡವಾಳಶಾಹಿ ವಿರೋಧ, ಸಮಾಜವಾದ ಇತ್ಯಾದಿ ಮುಖವಾಡ ಹಾಕಿಕೊಳ್ಳುವ ಮಾಧ್ಯಮಗಳ ಒಳಸತ್ಯಗಳೇ ಬೇರೆ. ದಲಿತರ, ಹಿಂದುಳಿದವರ ಕುರಿತು ಸರ್ಕಾರದ ನಿಲುವುಗಳನ್ನು ಮತ್ತೆ ಮತ್ತೆ ಪ್ರಶ್ನಿಸುವ ನಮ್ಮ ಮಾಧ್ಯಮಗಳಲ್ಲಿ 1991 ರವರೆಗೆ ಒಬ್ಬನೇ ಒಬ್ಬ ದಲಿತ ಪತ್ರಿಕೋದ್ಯಮಿ ಇರಲಿಲ್ಲ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಅದಿರಲಿ, ಇಂದಿಗೂ ದೇಶದ, ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ತೀರ್ಮಾನ ಕೈಗೊಳ್ಳುವ ಹಂತದಲ್ಲಿ ಒಬ್ಬ ದಲಿತನೂ ಇಲ್ಲ ಎನ್ನುತ್ತದೆ ಈಚಿನ ಒಂದು ಸಮೀಕ್ಷೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಧೀರ ಮಾಧ್ಯಮಗಳಿಗೆ ಇದು ಎಂದೂ ಮುಖ್ಯ ಎನಿಸಿಲ್ಲ. ದೇಶವಿರಲಿ, ರಾಜ್ಯದ ಅತ್ಯಂತ ವಿಶ್ವಾಸಾರ್ಹ ಎಂದುಕೊಳ್ಳುವ ಪತ್ರಿಕೆಗಳ, ಉತ್ತಮ ಸಮಾಜಕ್ಕಾಗಿರುವ, ನಿರ್ಭೀತ, ನೇರ-ದಿಟ್ಟ ಚಾನೆಲ್ಲುಗಳ ಕತೆಯೂ ಇದೇ.

ಸಂಪಾದಕೀಯದಲ್ಲಿ, ವರದಿಗಳಲ್ಲಿ ಕಟ್ಟಾ ಸಮಾಜವಾದವನ್ನು ಪ್ರತಿಪಾದಿಸುವ, ಕುಟುಂಬ ರಾಜಕಾರಣವನ್ನು dalitsinmediaವಿರೋಧಿಸುವ ದೇಶದ ಪ್ರಮುಖ ಇಂಗ್ಲಿಷ್ ದೈನಿಕವೊಂದನ್ನು ನೂರಾರು ವರ್ಷಗಳಿಂದ ಒಂದೇ ಕುಟುಂಬ ನಿರ್ವಹಿಸುತ್ತಿದೆ. ಅದರ ಟ್ರಸ್ಟಿಗಳು, ಸಂಪಾದಕರೆಲ್ಲ ಆ ಕುಟುಂಬ ವರ್ಗದವರೇ. ಕೆಲ ತಿಂಗಳ ಹಿಂದೆ ಅದೇ ಪತ್ರಿಕೆಯಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ಅದರ ಸಂಪಾದಕರಾದರು. ಮೂರ್ನಾಲ್ಕು ತಿಂಗಳಲ್ಲಿ ಅವರನ್ನು ಇಳಿಸಿ ಮತ್ತೆ ಆ ಕುಟುಂಬದವರೇ ಸಂಪಾದಕರಾದರು! ಆ ಪತ್ರಕರ್ತರು ರಾಜೀನಾಮೆ ನೀಡಿ ಹೊರಬಂದರು. ಕನ್ನಡದಲ್ಲೂ ಕುಟುಂಬದ, ಉದ್ಯಮಿಗಳ ಕೃಪೆಯಲ್ಲೇ ಬಹುತೇಕ ಮಾಧ್ಯಮಗಳಿರುವುದು. ಜನರಿಗೆ ಸತ್ಯ ತಲುಪಿಸುವ ಇವುಗಳ ಒಳಗಿನ ರಾಜಕಾರಣ ಬಲ್ಲವರೇ ಬಲ್ಲರು!

ಈಚೆಗೆ ನಡೆದ ಇನ್ನೊಂದು ಘಟನೆ. ಇದು ಇಂಗ್ಲಿಷ್ ವಾರಪತ್ರಿಕೆಯೊಂದರ ಸಂಪಾದಕನ ಕಥೆ. ಆ ಪತ್ರಿಕೆಯ ಉದ್ಯಮಿ ಮಾಲೀಕನಿಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ರಾಜಕೀಯ ಪಕ್ಷದ ಹತ್ತಿರದ ನಂಟು. ಸಂಪಾದಕ ಎಲ್ಲ ಸುದ್ದಿಗಳನ್ನು ಪ್ರಕಟಿಸುವಂತೆಯೇ ಆ ದೊಡ್ಡ ಪಕ್ಷದ ಅಡ್ಡ ಸುದ್ದಿಗಳನ್ನೂ ಒಂದೆರಡು ಬಾರಿ ಪ್ರಕಟಿಸಿದ್ದ. ಮಾಲೀಕನ ಮೇಲೆ ಒತ್ತಡ ಬಂತು, ಮರುವಾರದಿಂದ ಆ ಸಂಪಾದಕ ಕೆಲಸ ಕಳೆದುಕೊಂಡ. ಅನಂತರ ತಾನೇಕೆ ಕೆಲಸ ಕಳೆದುಕೊಂಡೆ ಎಂಬುದನ್ನು ಆತ ತಿಳಿದುಕೊಂಡ. ಬೇರೆ ಬೇರೆ ಬ್ಲಾಗ್, ವೆಬ್‌ಸೈಟ್‌ಗಳಲ್ಲಿ ಇವುಗಳ ಕಥೆ ಹರಿದಾಡುತ್ತಿದೆ.

ಕುಟುಕು ಕಾರ್ಯಾಚರಣೆ ಮೂಲಕ ಭ್ರಷ್ಟಾಚಾರ ಬಯಲಿಗೆಳೆದು ಸಮಾಜ ಉದ್ಧರಿಸುವ ಪಣ ತೊಟ್ಟ ಮಾಧ್ಯಮಗಳು ತಾವೇ ಹೆಣೆದ ಬಲೆಯಲ್ಲಿ ಸಿಕ್ಕಿಬೀಳುವುದುಂಟು. ಅರ್ಧಕ್ಕರ್ಧ ಬ್ಲಾಕ್‌ಮೇಲ್ ಮಾಡಿ ಹಣ ಸುಲಿಯಲೆಂದೇ ನಡೆಯುವ ಕುಟುಕು ಕಾರ್ಯಾಚರಣೆ ನಿಗದಿತ ಹಣ ಬಾರದಿದ್ದಾಗ ಪ್ರಸಾರ ಕಾಣುವುದೂ ಇದೆ. ಇಂಥ ಯತ್ನ ಮಾಡಿದ್ದ ಝೀ ಸುದ್ದಿ ವಾಹಿನಿಯ ಇಬ್ಬರು ಹಿರಿಯ ಪತ್ರಕರ್ತರು ಈ ಸಂಬಂಧ ಜೈಲಿಗೂ ಹೋದರು. ಮಾಧ್ಯಮಗಳನ್ನೇ ಹೀಗೆ ಹಿಡಿದು ಪ್ರಶ್ನಿಸುವ ಪ್ರಕರಣಗಳು ಸಾಕಷ್ಟು ದಾಖಲಾಗಿವೆ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ದಾಖಲಾಗುತ್ತಿರುವ ಕೇಸುಗಳು, Corruption-in-News-Mediaಅದು ಮಾಧ್ಯಮಗಳಿಗೆ ನೀಡಿದ ಶಿಕ್ಷೆಗಳು ಸಣ್ಣವೇನೂ ಅಲ್ಲ.

ಇವು ದೇಶದ ದೊಡ್ಡ ಪತ್ರಿಕೆ, ಚಾನೆಲ್ಲುಗಳ ಕತೆಯಾದರೆ ನಮ್ಮ ರಾಜ್ಯದೊಳಗಿನವೇನೂ ಕಡಿಮೆ ಇಲ್ಲ. ಈ ವಾರ ಕನ್ನಡದ ಉತ್ತಮ ಸಮಾಜಕ್ಕಾಗಿರುವ ಚಾನೆಲ್ಲೊಂದು ರಾಜ್ಯ ಸರ್ಕಾರದ ಅನ್ನ ಭಾಗ್ಯಕ್ಕೆ ಕನ್ನ ಹಾಕುವ ಕುಟುಕು ಕಾರ್ಯಾಚರಣೆ ವರದಿ ಪ್ರಸಾರ ಮಾಡುವುದಾಗಿ ಪ್ರಚಾರ ಮಾಡಿಕೊಂಡಿತು. ಪ್ರಸಾರಕ್ಕೆ ಸಾಕಷ್ಟು ಸಮಯಾವಕಾಶವೂ ಇದ್ದುದರಿಂದ ಇನ್ನೇನೇನು ಒಳ ವ್ಯವಹಾರಗಳು ನಡೆದವೋ ಗೊತ್ತಿಲ್ಲ. ಕಾರ್ಯಕ್ರಮ ಪ್ರಸಾರವಾದಾಗ ಅದರಲ್ಲಿ ಮಾಮೂಲಿ ಭ್ರಷ್ಟ ಅಧಿಕಾರಿಯೊಬ್ಬನ ಪ್ರಸಂಗ ಬಿಟ್ಟರೆ ಹೇಳಿಕೊಳ್ಳುವ ಯಾವ ಅವ್ಯವಹಾರವೂ ಇರಲಿಲ್ಲ. ಆದರೆ ಹಾಲಿ ಸಚಿವರೊಬ್ಬರ ಮಗನ ಹೆಸರು ಎಳೆದು ಅವರು ಮಹಾ ಅಕ್ರಮ ಎಸಗಿದ್ದಾರೆ kannada-news-channelsಎಂಬಂತೆ ಅಸಂಬದ್ಧ ಚಿತ್ರ ತೋರಿಸಿ, ಇದಕ್ಕೂ ಅವರ ಅವ್ಯವಹಾರಕ್ಕೂ ಏನು ಸಂಬಂಧ ಎಂದು ಬ್ರೇಕ್‌ನ ನಂತರ ಹೇಳುತ್ತೇವೆ ಎಂದವರು ಕಾರ್ಯಕ್ರಮ ಮುಗಿದ ಮೇಲೂ ಅಂಥ ಸಂಬಂಧ ಏನು ಎಂಬುದನ್ನು ಹೇಳಲಿಲ್ಲ, ತೋರಿಸಲೂ ಇಲ್ಲ! ಆದರೆ ಸಚಿವರು, ಅವರ ಉದ್ಯಮಿ ಮಗನ ಹೆಸರನ್ನು ಜಾಹೀರುಮಾಡಿದ್ದರು! ಇಂಥ ಮಹಾ ಕಾರ್ಯಾಚರಣೆಗಳ ಉದ್ದೇಶ ಏನಿರಬಹುದು ಎಂಬುದು ಜನತೆಗೆ ಅರ್ಥವಾಗದೆ?

ಚಾನೆಲ್ಲುಗಳಿರಲಿ, ಪತ್ರಿಕೆಗಳಿರಲಿ, ಅದಕ್ಕೆ ಬಂಡವಾಳ ಅಗತ್ಯ. ಭಾರೀ ಉದ್ಯಮಿಗಳೋ ಹಣವಿದ್ದು ರಾಜಕಾರಣಕ್ಕೆ ಹೋದವರೋ ರಾಜಕೀಯಕ್ಕೆ ಹೋಗಿ ಅಪಾರ ಹಣ ಮಾಡಿದವರೋ ದೊಡ್ಡ ಪ್ರಮಾಣದಲ್ಲಿ ಚಾನೆಲ್ ಅಥವಾ ಪತ್ರಿಕೆ ಆರಂಭಿಸಲು ಸಾಧ್ಯ. ಪರಿಸ್ಥಿತಿ ಹೀಗಿರುವಾಗ ಪತ್ರಿಕಾ ಉದ್ಯಮದಿಂದ ಮತ್ತಷ್ಟು ಹಣ, ಹೆಸರು ಮಾಡಲು ಅವರು ಬಯಸುತ್ತಾರೆ. ಇದು ತಮ್ಮದೇ ವಲಯ ಕಟ್ಟಿಕೊಳ್ಳಲು ದಾರಿ ಮಾಡುತ್ತದೆ. ಆಯಾ ಮಾಧ್ಯಮಗಳು ತಮ್ಮ ತಮ್ಮ ವಲಯದ ಹಿತಾಸಕ್ತಿಯನ್ನು ಕಾಪಾಡುತ್ತವೆಯೇ ವಿನಾ ಒಟ್ಟು ಸಮಾಜ ಅದಕ್ಕೆ ಮುಖ್ಯವಾಗುವುದಿಲ್ಲ. ಹೀಗಾಗಿಯೇ ಸಾರ್ವಜನಿಕ ಜೀವನದಲ್ಲಿ KannadaPapersCollageವೃತ್ತಿ ಕಟ್ಟಿಕೊಳ್ಳುವ ಮಾಧ್ಯಮಕ್ಕೆ ಸಾರ್ವಜನಿಕ ಹೊಣೆಗಾರಿಕೆ ತರಬಲ್ಲ ಆರ್‌ಟಿಐ ನಂಥ ಕಾನೂನು ಬೇಕಿಲ್ಲ. ಸಾರ್ವಜನಿಕ ಹಣಕಾಸಿಗೆ ಮತ್ತು ವ್ಯವಹಾರಕ್ಕೆ ಕೇವಲ ಸರ್ಕಾರಿ ಸಂಸ್ಥೆಗಳು ಮಾತ್ರ ಜವಾಬ್ದಾರಿಯೇ? ಹಾಗೆ ನೋಡಿದರೆ ಸಾರ್ವಜನಿಕ ಕೆಲಸ ಮಾಡುವ ಎಲ್ಲ ವೃತ್ತಿಗಳೂ ಆರ್‌ಟಿಐ ಅಡಿ ಬರಬೇಕು. ಆರ್‌ಟಿಐ ಕಾನೂನಿನಿಂದ ಹೊರಗುಳಿದ ಮಾಧ್ಯಮಗಳು, ರಾಜಕೀಯ ಪಕ್ಷಗಳು, ಎನ್‌ಜಿಒ ಇತ್ಯಾದಿಗಳಿಗೆ ಸಾರ್ವಜನಿಕ ಬಾಧ್ಯತೆಯೇ ಇಲ್ಲವೇ? ಇದೆ, ಆದರೆ ಇಂಥ ಹೊಣೆಗಾರಿಕೆಗೆ ಕಾನೂನಿನಲ್ಲಿ ಸದ್ಯ ಅವಕಾಶವಿಲ್ಲ! ಅಂಥ ಕಾನೂನು ಜಾರಿಯಾಗಲು ಇವು ಬಿಡುವುದೂ ಇಲ್ಲ.