Monthly Archives: July 2014

“ಸತ್ಯದ, ಪ್ರಾಮಾಣಿಕತೆಯ ಸೆಳೆತಗಳನ್ನು ನಿರಾಕರಿಸಿದವರು…”


-ಬಿ. ಶ್ರೀಪಾದ್ ಭಟ್


ಬೆಳೆವ, ಬದಲಾಗುವ, ನಾಶವಾಗುವ ಮತ್ತು ಮರುಹುಟ್ಟು ಪಡೆವ ಈ ಪ್ರಪಂಚದಲ್ಲಿ ಮನುಷ್ಯನ ನೆನಪು ಮತ್ತು ಮರೆವು ದುರಂತಮಯ-ಪಿ.ಲಂಕೇಶ್

ಆರ್ಸನ್ ವೆಲ್ಸ್ ನಟಿಸಿ, ನಿರ್ದೇಶಿಸಿದ, 1941 ರಲ್ಲಿ ತೆರೆಕಂಡ ಸಿಟಿಜನ್ ಕೇನ್ ಚಿತ್ರದ ಆರಂಭದ ದೃಶ್ಯದಲ್ಲಿ ಸಾವಿನ ಹೊಸ್ತಿನಲ್ಲಿರುವ ‘ಚಾಲ್ರ್ಸ ಫಾಸ್ಟರ್ ಕೇನ್’ ‘ರೋಸ್ಬಡ್’ Citizenkaneಎಂದು ಉದ್ಗರಿಸಿ ಸಾವನ್ನಪ್ಪುತ್ತಾನೆ. ಕೂಡಲೇ ಆತನ ಕೈಯಿಂದ ಹಿಮದ ಗ್ಲೋಬ್ ಕೆಳಗುರುಳಿ ಬೀಳುತ್ತದೆ. ಈ ಪದದ ನಿಗೂಢ ಹಿನ್ನೆಲೆಯನ್ನು ಬೇಧಿಸಲು ಚಿತ್ರದುದ್ದಕ್ಕೂ ಪ್ರಯತ್ನಿಸಿದ ವರದಿಗಾರ ಥಾಮ್ಸನ್ ಕ್ಲೈಮಾಕ್ಸ್ನಲ್ಲಿ ಹತಾಶನಾಗಿ “ಬಹುಶಃ ‘ರೋಸ್ಬಡ್’ ಎನ್ನುವುದು ಕೇನ್ ಪಡೆಯದೆ ಇರವಂತಹದ್ದು ಅಥವಾ ಕಳೆದುಕೊಂಡಿರುವಂತಹದ್ದು” ಎಂದು ಹೇಳುತ್ತಾನೆ. ಮುಂದುವರೆದು “ಒಂದು ವೇಳೆ ದೊರಕಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನವೇನೂ ಆಗುತ್ತಿರಲಿಲ್” ಎಂದು ಉದ್ಗರಿಸಿ ಕೇನ್ ನ ಬಂಗಲೆ ‘ಜನಾಡು’ವಿನಿಂದ ನಿರ್ಗಮಿಸುತ್ತಾನೆ. ಈತನ ಈ ಮಾತುಗಳು ಕೇನ್ ನ ಇಡೀ ಬದುಕನ್ನು ಸೂಚ್ಯವಾಗಿ ಧ್ವನಿಸುತ್ತವೆ. ನಂತರದ ದೃಶ್ಯದಲ್ಲಿ ‘ಜನಾಡು’ ಬಂಗಲೆಯಲ್ಲಿ ಕೇನ್ ನ ಹಳೆಯ ವಸ್ತುಗಳನ್ನು ಬೆಂಕಿಗೆಸೆಯುತ್ತಿರುವಂತಹ ಸಂದರ್ಭದಲ್ಲಿ ಹಿಮಗಡ್ಡೆಗಳಲ್ಲಿ ಆಡಲು ಬಳಸುವ ಮರದ ಆಟಿಕೆಯೊಂದನ್ನು ನಿರುಪಯುಕ್ತ ಆಟಿಕೆ ಎಂದು ಬೆಂಕಿಗೆಸೆಯುತ್ತಾರೆ. ಬೆಂಕಿಯಲ್ಲಿ ಉರಿಯುತ್ತಾ ನಿಧಾನವಾಗಿ ಆಟಿಕೆಯ ಮೇಲಿನ ಹೆಸರು ‘ರೋಸ್ಬಡ್’ ಪರದೆಯ ಮೇಲೆ ಗೋಚರಿಸುತ್ತದೆ. ಚಿತ್ರದ ಆರಂಭದಲ್ಲಿ ಕೇನ್ ಬಾಲಕನಾಗಿದ್ದಾಗ ಆತನನ್ನು ಅವನ ತಾಯಿಯಿಂದ ಬೇರ್ಪಡಿಸಿ ಬೋರ್ಡಿಂಗ್ ಶಾಲೆಗೆ ಸೇರ್ಪಡಿಸುವ ಸಂದರ್ಭದಲ್ಲಿ ಬಾಲಕ ಕೇನ್ ಪ್ರತಿಭಟಿಸುತ್ತಿದ್ದಾಗ, ಆಗ ಹಿಮದಲ್ಲಿ ಈ ಮರದ ಆಟಿಕೆಯು ಅನಾಥವಾಗಿ ಬಿದ್ದಿರುತ್ತದೆ. ಕ್ಲೈಮಾಕ್ಸಿಲ್ಲಿ ಇದು ನಿರುಪಯುಕ್ತ ವಸ್ತುವಾಗಿ ಬೆಂಕಿಯಲ್ಲಿ ಉರಿಯುತ್ತಿದ್ದಾಗ ನಮಗೆ ಆ ದೃಶ್ಯ ನೆನಪಾಗುತ್ತದೆ. ಹೌದು, “ರೋಸ್ಬಡ್’ ಎನ್ನುವುದು ನಮ್ಮ ಬಾಲ್ಯಕಾಲದ ಸಂತಸ, ಮುಗ್ಧತೆ, ಭಧ್ರತೆ, ಭರವಸೆ, ಆಶಯಗಳ ಸಂಕೇತವಾಗಿ ಕಾಡಲಾರಂಬಿಸುತ್ತದೆ.” ಕಳೆದುಕೊಂಡ ಈ ರೋಸ್ಬಡ್ ಅನ್ನು ಮರಳಿ ಪಡೆಯಲು ಮನುಷ್ಯ ಜೀವನವಿಡೀ ವ್ಯರ್ಥ ಪ್ರಯತ್ನ ನಡೆಸುತ್ತಿರುತ್ತಾನೆ. ಆದರೆ ಅದನ್ನು ಮರಳಿ ಪಡೆಯಲು ಬೇಕಾದಂತಹ ನಿರ್ಮಲ, ಪ್ರಾಮಾಣಿಕ ವ್ಯಕ್ತಿತ್ವವನ್ನೇ ಕಳೆದು ಕೊಂಡಿರುತ್ತಾನೆ. ಈ ಕಳೆದುಕೊಳ್ಳುವ ಪ್ರಕ್ರಿಯೆಯೂ ಸಹ ಮನುಷ್ಯನ ಕೈ ಮೀರಿದ್ದು ಎಂದು ‘ಸಿಟಿಜನ್ ಕೇನ್’ ಸಿನಿಮಾ ನಿರಂತರವಾಗಿ ಧ್ಯಾನಿಸುತ್ತದೆ. ತನ್ನ ನೈತಿಕತೆ, ಮೌಲ್ಯಗಳನ್ನು ಕಳೆದುಕೊಳ್ಳುತ್ತಾ, ಇಡೀ ಜಗತ್ತನ್ನು ಗೆಲ್ಲಲು ತವಕಿಸುವ ಮನುಷ್ಯ ಕಡೆಗೆ ಇದರಿಂದ ಪಡೆದುಕೊಳ್ಳುವುದೇನನ್ನು? ಮನುಷ್ಯನ ಬದುಕಿನ ವೈರುಧ್ಯಗಳು, ವಿರೋಧಾಭಾಸಗಳು, ಅಹಂ, ಆತ ಮೇಲಕ್ಕೇರುತ್ತಿದ್ದಾನೆ ಎಂದು ಬಾಹ್ಯವಾಗಿ ಗೋಚರಿಸುತ್ತಿದ್ದರೂ ನೈತಿಕವಾಗಿ ಪತನಗೊಳ್ಳುತ್ತಿರುವುದರ ಮೆಟಫರ್ ಅನ್ನು ಸಿಟಿಜನ್ ಕೇನ್ ಸಿನಿಮಾ ಅದ್ಭುತವಾಗಿ ರೂಪಿಸುತ್ತದೆ.

ಜಗತ್ತಿನ ಸಿನಿಮಾದ ಒಂದು ಮಾಂತ್ರಿಕ ಪವಾಡ ಈ ಸಿಟಿಜನ್ ಕೇನ್ ಚಿತ್ರ. ಈ ಚಿತ್ರ ತೆರೆಕಂಡು 73 ವರ್ಷಗಳಾದರೂ ಇಂದಿಗೂ ಇದು ಸರ್ವಕಾಲಿಕ ಶ್ರೇಷ್ಠ ಸಿನಿಮಾಗಳಲ್ಲೊಂದು. ಇಡೀ ಸಿನಿಮಾದ ಕತೆ, ಚಿತ್ರಕತೆ ವರ್ತುಲಾಕಾರದ ಚೌಕಟ್ಟಿನಲ್ಲಿ ಉರುಳುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಮೈತುಂಬಿಕೊಳ್ಳುತ್ತಾ, ಕಡೆಗೆ ಅದು ಶುರುವಾದಲ್ಲಿ ಬಂದು ತಲಪುತ್ತದೆ. ಮೇಲ್ನೋಟಕ್ಕೆ ಈ ಚಿತ್ರಕತೆಯು “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ” ಎನ್ನುವ ವಿವರಗಳನ್ನು ಪರದೆಯ ಮೇಲೆ ಸಶಕ್ತವಾಗಿ ಮೂಡಿಸುತ್ತಿದೆ ಎಂದು ಕಂಡರೂ ಅದರಾಚೆಗೂ ಮೀರಿದ ತಲ್ಲಣಗಳ, ಬಿಕ್ಕಟ್ಟುಗಳ, ನಮ್ಮೆಲ್ಲರ ಕೈಮೀರಿದ ಬದುಕೊಂದು ಅಲ್ಲಿ ಅಡಕಗೊಂಡಿರುವುದು ನಮಗೆ ಪ್ರತಿ ಫ್ರೇಮಿನಲ್ಲಿ ಅನುಭವವಾಗತೊಡಗುತ್ತದೆ.

ಆರಂಭದ ದೃಶ್ಯದಲ್ಲಿ ಕೇನ್ ನ ಐಶಾರಾಮು ಬಂಗಲೆ ‘ಜುನಾಡು’ವಿನ ಕಬ್ಬಿಣದ ಗೇಟುಗಳ ಮೇಲೆ “No Trespassing” ಎನ್ನುವ ಫಲಕ ಸದಾ ನೇತಾಡುತ್ತಿರುತ್ತದೆ.citizen canee- no tresspassing ಇದರಲ್ಲಿ ತನ್ನ ಕಡೆಯ ವರ್ಷಗಳನ್ನು ಏಕಾಂಗಿಯಾಗಿ ಬದುಕಿದ ಕೇನ್ ಸಾಯುವಾಗ ಉದ್ಗರಿಸಿದ ಪದ ‘ರೋಸ್ಬಡ್’ ಕುರಿತಾಗಿ ತನಿಖೆ ನಡೆಸಲು ತನ್ನ ಸಂಪಾದಕರಿಂದ ನಿಯೋಜಿತಗೊಂಡ ವರದಿಗಾರ ‘ಥಾಮ್ಸನ್’ ಕೇನ್ ನ್ ಗಾರ್ಡಿಯನ್ ಥ್ಯಾಚರ್ ನ ಡೈರಿಯನ್ನು ಓದುತ್ತಾ ಹೋದ ಹಾಗೆ ಆತನ ಆರಂಭದ ಬದುಕು ಫ್ಲಾಶ್ ಬ್ಲಾಕಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ನಂತರ ವರದಿಗಾರ ಆತನ ಖಾಸಗೀ ಮ್ಯಾನೇಜರ್ ಬರ್ನಸ್ಟನ್, ಈಗ ದೂರವಾಗಿರುವ ಕೇನ್ ನ ಒಂದು ಕಾಲದ ಜೀವದ ಗೆಳೆಯ ಲೇಲಾಂಡ್, ಕೇನ್ ನ ಎರಡನೇ ಪತ್ನಿ ಸೂಸನ್ ಅಲೆಕ್ಸಾಂಡರ್, ಬಟ್ಲರ್ ರೇಮಂಡ್ ಮೊದಲಾದವರನ್ನು ಸಂದರ್ಶಿಸುತ್ತಾ ಹೋಗುತ್ತಾನೆ. ಅವರ ನೆನಪುಗಳ ಮೂಲಕ ಚಿತ್ರ ತೆರೆದುಕೊಳ್ಳುತ್ತಾ, ಮೈದಾಳುತ್ತಾ ಹೋಗುತ್ತದೆ. ಆದರೆ ಪ್ರತಿ ಫ್ಲಾಶ್ಬ್ಯಾಕ್ ಅನ್ನು ಒಡೆದು ವರ್ತಮಾನದ ಬೆಳಕಿಗೆ ಒಡ್ಡುವ ವರದಿಗಾರ ಥಾಮ್ಸನ್ ನ ಮುಖದ ಒಂದು ಭಾಗ ಮಾತ್ರ ಸದಾ ಒಂದು ಕೋನದಲ್ಲಿ ಕಾಣಿಸುತ್ತಿದ್ದರೆ ಮುಖದ ಮತ್ತೊಂದು ಭಾಗ ಕತ್ತಲಿನಲ್ಲಿಯೇ ಹುದುಗಿರುತ್ತದೆ. ವರದಿಗಾರನ ಶೋಧನೆಯ ಆಶಯಗಳು ಕತ್ತಲಲ್ಲೇ ಉಳಿಯುತ್ತಾ ಹೋಗುವುದನ್ನು ಈ ತಂತ್ರದ ಮೂಲಕ ಸಾಂಕೇತಿಸುವಲ್ಲಿ ನಿರ್ದೇಶಕ ವೆಲ್ಸ್ ಯಶಸ್ವಿಯಾಗಿದ್ದಾನೆ. ಇಲ್ಲಿ ಕೊನೆಗೆ ಕೇನ್ ನ ಜೀವನವನ್ನು ಶೋಧಿಸ ಹೊರಡುವ ವರದಿಗಾರ ಥಾಮ್ಸನ್ ಗೆ ಕಡೆಗೆ ಆತನ ಸ್ವಂತ ಐಡೆಂಟಿಟಿಯೇ ಕಳೆದು ಹೋಗುತ್ತದೆ.

ತನ್ನ 25ನೇ ವರ್ಷದಲ್ಲಿ ಗಾರ್ಡಿಯನ್ ಥ್ಯಾಚರ್ ನ ಮಾತನ್ನು ಧಿಕ್ಕರಿಸಿ ಪತ್ರಿಕೆಯೊಂದನ್ನು Xanadu,as_shown_in_Citizen_Kaneಖರೀದಿಸುವ ಕೇನ್ ನಂತರ ಹಿಂದಿರುಗಿ ನೋಡುವುದೇ ಇಲ್ಲ. ಆತ ಏರುವ ಪ್ರತಿ ಮೆಟ್ಟಿಲೂ ಯಶಸ್ಸಿನ ಸೋಪಾನವಾಗುತ್ತದೆ. ಅಮೇರಿಕಾದ ಜನಪ್ರಿಯ ‘ನ್ಯೂಯಾರ್ಕ್ ಇನಕ್ವೈರ್’ ಪತ್ರಿಕೆಯ ಮಾಲೀಕ, ಪ್ರಕಾಶಕ ಕೇನ್, ಅತ್ಯಂತ ಪ್ರಭಾವಶಾಲಿ, ಆಗರ್ಭ ಶ್ರೀಮಂತ, ಐಶಾರಾಮಿ ಬಂಗಲೆ ‘ಜನಾಡು’ವಿನ ಒಡೆಯ ಸಿಟಿಜನ್ ಕೇನ್, ಬಂದರು, ಬಂಗಾರದ ಗಣಿಗಳು, ಉದ್ದಿಮೆಗಳ ಮಾಲೀಕನಾಗಿ ವಾಮನನಂತೆ ತ್ರಿವಿಕ್ರಮನಾಗಿ ಬೆಳೆಯುತ್ತಾ ಹೋಗುತ್ತಾನೆ. ಕಡೆಗೆ ಅಮೇರಿಕಾ ಅಧ್ಯಕ್ಷ ಪದವಿಗೂ ಸ್ಪರ್ಧೆ ನಡೆಸುತ್ತಾನೆ. ಆದರೆ ನಿರಂತರವಾಗಿ ಆಕ್ರಮಿಸುತ್ತಾ ಹೋಗುವ ಕೇನ್ ಅದನ್ನು ನಿಭಾಯಿಸುವ ಛಾತಿ ಇಲ್ಲದೆ ನೈತಿಕವಾಗಿಪತನಗೊಳ್ಳುತ್ತಾ ಹೋಗುತ್ತಾನೆ. ಪ್ರೇಯಸಿಗಾಗಿ ಅಧ್ಯಕ್ಷ ಪದವಿಯನ್ನು ಬಿಟ್ಟುಕೊಡುವ ಕೇನ್, ಅತ್ಯಂತ ಸಾಧಾರಣ ಗಾಯಕಿ ಮತ್ತು ನಟಿಯಾದ ಸೂಸನ್ ಅನ್ನು ಅಪ್ರತಿಮ ನಟಿ ಎಂದು ಭ್ರಮಿಸುತ್ತಾ ಸಾಗಿ ಆಕೆಗಾಗಿ ಥಿಯೇಟರ್ ಅನ್ನು ಕಟ್ಟಿಸುತ್ತಾನೆ. ತನ್ನ ಪತ್ರಿಕೆಯ ಪ್ರತಿಯೊಂದು ಪುಟವನ್ನು ಸೂಸನ್ ಳ ವೈಭವೀಕರಣಕ್ಕೆ ಮೀಸಲಿಡುತ್ತಾನೆ. ಆದರೆ ಕಡೆಗೆ ಆಕೆಯನ್ನು ಪಂಜರದ ಗಿಣಿಯಾಗಿಸುತ್ತಾನೆ. ಜಗತ್ತಿನ ಎಲ್ಲಾ ಶ್ರೇಷ್ಠ ವಸ್ತುಗಳನ್ನು,ಆಭರಣಗಳನ್ನು ಖರೀದಿಸಿ ಅದಕ್ಕಾಗಿಯೇ ಒಂದು ಬಂಗಲೆಯನ್ನು ಕಟ್ಟಿಸುತ್ತಾನೆ. ಇದೆಲ್ಲದರಿಂದ ದಿಗ್ಭ್ರಮೆ ಮತ್ತು ಶೋಷಣೆಗೊಂಡ ಸೂಸನ್ ಆತನನ್ನು ತೊರೆಯುತ್ತಾಳೆ. ತನ್ನ ಐಶಾರಾಮಿ ಬಂಗಲೆ ‘ಜನಾಡು’ವನಲ್ಲಿ ಕಳೆದು ಹೋಗುವ ಕೇನ್ ಗೆ ‘ತಾನು ಯಾರು? ತನ್ನ ಬದುಕಿನ ಹಿನ್ನೆಲೆ ಏನು? ಏತಕ್ಕಾಗಿ ಬದುಕುತ್ತಿದ್ದೇನೆ? ಎನ್ನುವ ಪ್ರಶ್ನೆಗಳು ಕಾಡಲಾರಂಬಿಸುತ್ತವೆ. ಅತ್ಯಂತcitizen_kane_2 ವೈಭವದಲ್ಲಿ, ಜಗದೇಕವೀರನ ಆಕ್ರಮಣದ ಶೈಲಿಯಲ್ಲಿ ಆಳಿದ ಸಿಟಿಜನ್ ಕೇನ್ ಕಡೆಗೆ ಏಕಾಂಗಿಯಾಗಿ ಅಸಹಾಯಕನಾಗಿ ಸಾಯುತ್ತಾನೆ. ತನ್ನೊಳಗಿನ ಸತ್ಯದ ಅರಿವಾಗಲೀ, ತನ್ನ ಹೊರಗಿನ ಬದುಕಿನ ವಾಸ್ತವದ ಅರಿವಾಗಲಿ ಕೇನ್ ಗೆ ದಕ್ಕುವುದೇ ಇಲ್ಲ. ಈ ಕೇನ್ ಗೆ ‘ರೋಸ್ಬಡ್’ ಎಲ್ಲಿದೆ ಎಂದು ಹುಡುಕುವ ತವಕವಿದೆಯಷ್ಟೇ ಹೊರತಾಗಿ ‘ರೋಸ್ಬಡ್’ನ ಮೆಟಫರ್ ಆತನಿಗೆ ಅರಿವಾಗುವಷ್ಟರಲ್ಲಿ ಕೇನ್ ನ ಬದುಕೇ ಮುಗಿದು ಹೋಗಿರುತ್ತದೆ. ಆತನ ಬದುಕು ಭವಿಷ್ಯದ ತಲೆಮಾರುಗಳಿಗೆ ಕೇವಲ ಮತ್ತೊಬ್ಬರ ನೆನಪುಗಳ ಅಸ್ಥಿಪಂಜರವಾಗಿ ಮಾತ್ರ ಉಳಿದುಬಿಡುತ್ತವೆ ಮತ್ತು ಅದು ಅಷ್ಟು ಮಾತ್ರ ಎಂದು ಮನಮುಟ್ಟುವಂತೆ ಕಟ್ಟುವುದು ಎಂತಹ ಮಾಂತ್ರಿಕತೆ ಅಲ್ಲವೇ??

36 ಮಹಲುಗಳ 40 ಕೋಟಿ ಬಂಗಲೆಯ ಮಾಲೀಕ, ಸಾವಿರಾರು ಕೋಟಿ ವ್ಯವಹಾರದ ಉದ್ಯಮಿ, ಟಿವಿ18 ಸಮೂಹದ ಮಾಧ್ಯಮವನ್ನು ಖರೀದಿಸಿದ ಈ antaliaಆಧುನಿಕ ಕೇನ್ ‘ಮುಖೇಶ್ ಅಂಬಾನಿ’ ಇಂದಿನ ವರ್ತಮಾನದ ಸಂದರ್ಭದಲ್ಲಿ ಇಲ್ಲಿ ನೆನಪಾಗುತ್ತಾನೆ. ಸಿಟಿಜನ್ ಕೇನ್ ನಂತೆಯೇ ಜಗದೇಕ ವೀರನಂತೆ ಆಕ್ರಮಿಸುತ್ತಾ ಹೊರಟಿರುವ ಮುಖೇಶ್ ಅಂಬಾನಿ, ಅಡಾನಿಗಳಿಗೆ ‘ರೋಸ್ಬಡ್’ನ ಅರಿವೇ ಇಲ್ಲ. ನೈತಿಕತೆ ಮತ್ತು ಮೌಲ್ಯಗಳು ಅವರ ಪ್ರಜ್ಞೆಯೊಳಗೆ ಇಳಿದೇ ಇಲ್ಲ. ಕೇನ್ ನಂತೆಯೇ ಈ ಅಂಬಾನಿಗಳಿಗೆ, ಅಡಾನಿಗಳಿಗೆ ಮತ್ತು ಇವರ ಅಪ್ತ ಗೆಣೆಕಾರ ಭಾರತದ ಸಿಇಓ ನರೇಂದ್ರ ಮೋದಿಯವರಿಗೆ ಸತ್ಯದ ಸೆಳೆತಗಳು ಇಷ್ಟವಿಲ್ಲ. ಅಧ್ಯಕ್ಷ ಪದವಿಗೆ ಸ್ಪರ್ಧಿಸಿದ ಸಿಟಿಜನ್ ಕೇನ್ ತನ್ನ ಚುನಾವಣಾ ಭಾಷಣಗಳಲ್ಲಿ ತನ್ನ ಎದುರಾಳಿಯನ್ನು ಗೇಲಿ ಮಾಡುತ್ತಾ, ಕೆಳ ಮಟ್ಟದಲ್ಲಿ ಮಾತನಾಡುತ್ತಾನೆ. ಈ ನರೇಂದ್ರ ಮೋದಿಯ ಚುನಾವಣಾ ಭಾಷಣಗಳು ಸಹ ಈ ಸಿಟಿಜನ್ ಕೇನ್ ನ ಮಾದರಿಯಲ್ಲೇ ಇದ್ದದ್ದು ಇಂದು ಇತಿಹಾಸ. ಈ ಅಂಬಾನಿ, ಅಡಾನಿಗಳ ಬದುಕು ಕೇನ್ ನ ಬದುಕಂತೆ ನಮ್ಮ ಕಣ್ಣೆದುರಿಗೆ ಇರುವುದು ಸಧ್ಯಕ್ಕೆ ವರ್ತಮಾನ. ನ್ಯೂಯಾರ್ಕ್ ಅನ್ನು ಆಕ್ರಮಿಸಿಕೊಳ್ಳುವ ಕೇನ್ ಹುಂಬನಂತೆ ಅಮೇರಿಕಾವನ್ನು ಆಕ್ರಮಿಸಿಕೊಳ್ಳಲು ಹೊರಡುತ್ತಾನೆ. ಇಂದಿನ ಮೋದಿ ಸರ್ಕಾರದಲ್ಲಿ ಕೇನ್ ನಂತೆಯೇ ಅಂಬಾನಿಗಳು ,ಅಡಾನಿಗಳು ಇಂಡಿಯಾದ ನೆಲ, ಜಲ, ಗಾಳಿಯನ್ನು ಆಕ್ರಮಿಸಲು ಜೈತ್ರಯಾತ್ರೆ ಆರಂಬಿಸಿದ್ದಾರೆ.

ತನ್ನ 25ನೇ ವಯಸ್ಸಿನಲ್ಲಿ ತನ್ನ ಗಾರ್ಡಿಯನ್ ಥ್ಯಾಚರ್ ನನ್ನು ವಿರೋಧಿಸಿ ‘ನ್ಯೂಯಾರ್ಕ ಇನಕ್ವೈರ್’ ambani-modiಪತ್ರಿಕೆಯನ್ನು ಕೊಂಡುಕೊಳ್ಳುವ ಕೇನ್ ಪತ್ರಿಕೆಯ ಕಛೇರಿಗೆ ಗೂಳಿಯಂತೆ ನುಗ್ಗಿ ಅದರ ಮೂಲ ಸಂಪಾದಕನನ್ನು ಹಿಗ್ಗಾಮುಗ್ಗ ಅವಮಾನಿಸಿ ಹೊರ ತಳ್ಳುತ್ತಾನೆ. ತನ್ನ ಮೂಗಿನ ನೇರಕ್ಕೆ ವರದಿಗಳನ್ನು ಸಿದ್ಧಪಡಿಸುತ್ತಾನೆ. ಇದರ ಪರಿಣಾಮ ಒಳ್ಳೆಯದಾಗುವುದೇ ಎಂದು ಆತನ ಸ್ನೇಹಿತ ಅನುಮಾನ ವ್ಯಕ್ತ ಪಡಿಸಿದಾಗ “People will think what I tell them to think” ಎಂದು ಅಹಂಕಾರದಿಂದ ನುಡಿಯುವ ಕೇನ್ ಅಪ್ರಾಣಿಕತೆಯೆಡೆಗೆ ಮುನ್ನುಗ್ಗುತ್ತಾನೆ. ವಿರೋಧಿಗಳನ್ನು ಹತ್ತಿಕ್ಕುತ್ತಾ ಸಾಗುತ್ತಾನೆ. ಆದರೆ ಇದನ್ನು ನಿಭಾಯಿಸುವಲ್ಲಿ ದಯನೀಯವಾಗಿ ಸೋಲುತ್ತಾನೆ. ಇಂದು ಮುಖೇಶ್ ಅಂಬಾನಿ ನೇತೃತ್ವದಲ್ಲಿ ಗಣಿಗಾರಿಕೆ, ಹಣಕಾಸು, ತೈಲ ಉದ್ಯಮ, ಕ್ರಿಕೆಟ್, ರೀಟೇಲ್ ವಲಯಗಳಲ್ಲಿ ಸಾವಿರಾರು ಕೋಟಿ ವ್ಯವಹಾರ ಮಾಡುತ್ತಿರುವ ‘ರಿಲೆಯನ್ಸ್ ಸಂಸ್ಥೆ’ ಕಳೆದ ವರ್ಷಗಳಲ್ಲಿ ಮಾಧ್ಯಮ ರಂಗಕ್ಕೆ ಗೂಳಿಯಂತೆ ಪ್ರವೇಶಿಸಿದೆ. ನೆಟ್ವರ್ಕ್ 18 ಗುಂಪಿನ ಎಲ್ಲಾ ಛಾನಲ್ ಗಳನ್ನು ( ಸುಮಾರು 17 ಛಾನಲ್ಸ್) ಖರೀದಿಸಿರುವ ರಿಲೆಯನ್ಸ್ ಸಮೂಹ ದಕ್ಷಿಣ ಭಾರತದ ರಾಮೋಜಿರಾವ್ ಒಡೆತನದ ಈ ಟಿವಿ ಛಾನಲ್ ಗಳಲ್ಲೂ ತನ್ನ ಬಹುಪಾಲು ಶೇರುಗಳನ್ನು ತೊಡಗಿಸಿದೆ. ಇತ್ತೀಚೆಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ‘ಈ ಟಿವಿ’ ನ್ಯೂಸ್ ಛಾನಲ್ ಗಳನ್ನು ಪ್ರಾರಂಬಿಸಿದೆ. ತನ್ನನ್ನು ವಿರೋಧಿಗಳನ್ನು ಕೇನ್ ನಂತೆಯೇ ಹತ್ತಿಕ್ಕುವಲ್ಲಿ ಪಳಗಿರುವ ಮುಖೇಶ್ ಅಂಬಾನಿಯcitizen-kane-rosebud ಇತ್ತೀಚಿನ ಬಲಿಗಳು ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್, ಸಿಎನ್ಎನ್ ಐಬಿಎನ್ ಗುಂಪಿನ ಹಿರಿಯ ,ಪ್ರಾಮಾಣಿಕ ಪತ್ರಕರ್ತರು. ಮುಕ್ತ ಅಭಿವ್ಯಕ್ತಿ ಸ್ವಾತಂತ್ರದ ವಿರೋಧಿಗಳಾದ ರಿಲೆಯನ್ಸ್ ಸಮೂಹದ ಮಾಲೀಕರ ಕೈಯಲ್ಲಿ ಮಾಧ್ಯಮದ ಒಡೆತನ ದಕ್ಕಿರುವುದು ಪ್ರಜಾಪ್ರಭುತ್ವದ ಅಡಿಪಾಯಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಿದೆ. “ಈ ರಿಲಯನ್ಸ್ ಸಮೂಹ ಈ ರೀತಿಯಾಗಿ ಮಾಧ್ಯಮರಂಗದಲ್ಲಿ ಪ್ರವೇಶಿಸಿ ನೆಟ್ವರ್ಕ್ 18 ಗುಂಪಿನ ಎಲ್ಲಾ ಛಾನಲ್ ಗಳನ್ನು ಖರೀದಿಸಿರುವ ಪ್ರಕ್ರಿಯೆಯ ಕುರಿತಾಗಿ ಬೇರಾವ ಮಾಧ್ಯಮಗಳು ವರದಿ ಮಾಡದಿರುವುದು ನನಗೇನೂ ಆಶ್ಚರ್ಯವೆನಿಸಿಲ್ಲ” ಎಂದು ಕುಲದೀಪ್ ನಯ್ಯರ್ ಬರೆಯುತ್ತಾರೆ. ಇದು ಬಲು ದೊಡ್ಡ ವಿಪರ್ಯಾಸ ಮತ್ತು ಆತಂಕಕಾರಿ. ನಮ್ಮಲ್ಲಿ ಆಳವಾಗಿ ಹುದುಗಿರುವ ಪರಂಪರಾನುಗತ ಗುಲಾಮಗಿರಿ ಮತ್ತು ಸೋಮಾರಿತನ ಇಂದಿನ ಈ ಆಧುನಿಕ ಸಿಟಿಜನ್ ಕೇನ್ ನ ಸಾಮ್ರಾಜ್ಯಕ್ಕೆ ನೀರೆರೆದು ಪೋಷಿಸುತ್ತಿವೆ. ಇಂತಹ ಒಂದು ದುರಂತಕ್ಕೆ ಕಾಯುತ್ತಿದೆಯೇನೋ ಎಂಬಂತೆ ನಮ್ಮ ವ್ಯವಸ್ಥೆ ವರ್ತಿಸುತ್ತಿದೆ.

ಹೆಣ್ಣುಮಕ್ಕಳ ನಾಪತ್ತೆ ಎಂಬ ಮಾಯಾಜಾಲ


– ರೂಪ ಹಾಸನ


14 ವರ್ಷದ ಆ ಬಾಲೆ ತನ್ನ ಟ್ಯೂಷನ್ ಮುಗಿಸಿ ಸಂಜೆಯ ಮಬ್ಬುಗತ್ತಲಿನಲ್ಲಿ ಮನೆಗೆ ಮರಳುತ್ತಿರುವಾಗ, ಹೆಂಗಸೊಬ್ಬಳು ಹತ್ತಿರ ಬಂದು ಯಾವುದೋ ಚೀಟಿ ತೋರಿಸಿ, ವಿಳಾಸ ಕೇಳುವಂತೆ ನಟಿಸಿದ್ದೊಂದೇ ಗೊತ್ತು. ಮತ್ತೆ ಮೈಮೇಲೆ ಎಚ್ಚರವೇ ಇಲ್ಲ. ಅರೆ ಮಂಪರಿನ ಎಚ್ಚರಾದಾಗ ರೈಲಿನಲ್ಲಿ ಎಲ್ಲಿಗೋ ಪ್ರಯಾಣಿಸುತ್ತಿರುವುದು, ಮಧ್ಯರಾತ್ರಿ ಮೀರಿ ಹೋಗಿರುವುದು ತಾನು ಸೀಟಿನ ಕೆಳಗಡೆ ಮಲಗಿಸಲ್ಪಟ್ಟಿರುವುದು ಅವಳ ಗಮನಕ್ಕೆ ಬಂದಿದೆ. ನಿಧಾನಕ್ಕೆ ಎಚ್ಚೆತ್ತು ಸಹಪ್ರಯಾಣಿಕರ ಗಮನ ಸೆಳೆದು ಅವರು ಈ ಹುಡುಗಿಯನ್ನು ವಿಚಾರಿಸುತ್ತಿರುವಾಗಲೇ ಇವಳನ್ನು ಕದ್ದು ತಂದಿದ್ದ ಹೆಂಗಸು ರೈಲು ನಿಂತ ಮುಂದಿನ ಸ್ಟೇಷನ್‌ನಲ್ಲಿ ಇಳಿದು ಹೋಗಿದ್ದಾಳೆ. ಅಂತೂ ಹೇಗೋ ಈ ಹುಡುಗಿ ಮನೆ ಸೇರಿದಳಾದರೂ ಪೊಲೀಸ್‌ಗೆ ದೂರು ನೀಡಿದ್ದರೆ ಆ ಹೆಂಗಸು ಸಿಕ್ಕಿ ಹಾಕಿಕೊಳ್ಳಬಹುದಾದ, ಅವಳ ಹಿಂದೆ ಇರಬಹುದಾದ ಜಾಲವನ್ನು ಪತ್ತೆ ಹಚ್ಚುವ ಎಲ್ಲ ಸಾಧ್ಯತೆಗಳಿದ್ದೂ ಬಾಲ ನ್ಯಾಯಮಂಡಳಿಗೆ ದೂರು ನೀಡಿ, ProtectingChildrenfromSexTraffickingಅವರು ಅದನ್ನು ಗಂಭೀರವಾಗಿ ಪರಿಗಣಿಸದೇ ಕೆಲದಿನಗಳಲ್ಲೇ ಕೇಸನ್ನು ಮುಚ್ಚಿಹಾಕಿದರು. ಹಾಗಿದ್ದರೆ ನ್ಯಾಯ ಎಲ್ಲಿದೆ?

ಹಳ್ಳಿಯೊಂದರ 15 ವರ್ಷ ವಯಸ್ಸಿನ ಹುಡುಗಿಯನ್ನು ಬಲವಂತದಿಂದ ನಗರದ ಪ್ರತಿಷ್ಠಿತರೊಬ್ಬರ ಮನೆಯಲ್ಲಿ ಅಪ್ಪ ಮನೆಗೆಲಸಕ್ಕೆ ಸೇರಿಸಿದ್ದಾನೆ. ಆ ಮನೆಗೆ ಬಂದ ಬಂಧುವೊಬ್ಬ ಈ ಹುಡುಗಿಗೆ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸದ ನೆಪ ಹೇಳಿ ತನ್ನೊಂದಿಗೆ ಕರೆದುಕೊಂಡು ಹೋಗಿ, ಕೇಳಿದವರಿಗೆ ಅವಳಿಗೆ ಬುದ್ಧಿ ಸರಿಯಿಲ್ಲವೆಂದು ನಾಟಕವಾಡಿ ಅವಳ ತೀವ್ರ ವಿರೋಧದ ನಡುವೆಯೂ ಗೆಳೆಯರೊಂದಿಗೆ ಸೇರಿ ದೆಹಲಿಯ ವೇಶ್ಯಾವಾಟಿಕೆಯೊಂದಕ್ಕೆ 50,000 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಬೇರೊಂದು ಪ್ರಕರಣದಲ್ಲಿ ಕಣ್ಮರೆಯಾದ ಹುಡುಗಿಯನ್ನು ಹುಡುಕುತ್ತಾ ದೆಹಲಿಗೆ ಬಂದ ಕರ್ನಾಟಕ ಪೊಲೀಸರಿಗೆ ಇವಳೊಂದಿಗೇ ಇನ್ನೂ ನಾಲ್ವರು ಕಣ್ಮರೆಯಾದ ಹುಡುಗಿಯರೂ ವೇಶ್ಯಾವಾಟಿಕೆಯ ಅಡ್ಡದಲ್ಲಿ ಸಿಕ್ಕಿ ಅವರನ್ನೂ ವಾಪಸ್ ಕರೆತಂದಿದ್ದಾರೆ. ತಾಯಿ ಮಾನಸಿಕ ಅಸ್ವಸ್ಥೆ, ತಂದೆ ಕಾಮುಕ ತನ್ನನ್ನು ಬಹಳಷ್ಟು ಬಾರಿ ಲೈಂಗಿಕವಾಗಿ ಹಿಂಸಿಸಿದ್ದಾನೆ ತಾನು ಮನೆಗೆ ವಾಪಸಾಗುವುದಿಲ್ಲವೆಂದ ಹುಡುಗಿಗೆ, ಸರ್ಕಾರಿ ಬಾಲಮಂದಿರದಲ್ಲಿ ಆಶ್ರಯ ದೊರೆತಿದೆ. ದೆಹಲಿಯಿಂದ ಬರುವಾಗಲೇ ಬಸಿರಾಗಿದ್ದ ಈ ಹುಡುಗಿಯ ಇಷ್ಟದಂತೆ ಗರ್ಭ ತೆಗೆಸಿ ಮುಂದಿನ ಓದಿಗೆ ಅನುಕೂಲ ಮಾಡಿಕೊಡಲಾಗಿದೆ. ಕದ್ದವರು, ಮಾರಾಟ ಮಾಡಿದವರು, ಇವಳನ್ನು ಉಪಯೋಗಿಸಿಕೊಂಡು ದಂಧೆ ನಡೆಸಿದವರು ನೆಮ್ಮದಿಯಾಗಿ ತಮ್ಮ ಕೆಲಸಗಳನ್ನು ಮುಂದುವರೆಸಿದ್ದಾರೆ! ಎಲ್ಲವೂ ಕನ್ನಡಿಯಲ್ಲಿ ಕಾಣುವಷ್ಟು ನಿಚ್ಚಳವಾಗಿ ಗೋಚರಿಸುತ್ತಿದ್ದರೂ ತಪ್ಪಿತಸ್ಥರು ಸಿಕ್ಕಿಬಿದ್ದಿಲ್ಲ. ಶಿಕ್ಷೆಯೂ ಇಲ್ಲ. ಎಲ್ಲವೂ ಯಥಾಸ್ಥಿತಿ ಮುಂದುವರೆದಿದೆ. ಆದರೆ ಜೀವನಪರ್ಯಂತ ಓಡಿಹೋಗಿದ್ದವಳು, ವೇಶ್ಯಾವಾಟಿಕೆ ಮಾಡಿದವಳು, ಅವಿವಾಹಿತೆಯಾಗಿಯೂ ಬಸಿರಾದವಳೆಂಬ ಶಾಶ್ವತ ಹಣೆಪಟ್ಟಿ ಈ ಹುಡುಗಿಯ ಪಾಲಿಗೆ. ಅಪರಾಧಿಗಳೇಕೆ ಮತ್ತು ಹೇಗೆ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತಾರೆ?

ಹೋಮ್ ನರ್ಸ್ ಸೇವಾ ಸಂಸ್ಥೆಯೊಂದಕ್ಕೆ ತರಬೇತಿಗಾಗಿ ಸೇರಿದ ಓರ್ವ 20 ರ ಹರೆಯದ ಯುವತಿ ತನ್ನ ಗೆಳತಿಯರ ಸಮೇತವಾಗಿ ಹೆಣ್ಣುಮಕ್ಕಳ ಅಕ್ರಮ ಮಾರಾಟ ಜಾಲಕ್ಕೆ ಸಿಕ್ಕಿ, ತಾನೊಬ್ಬಳು ಮಾತ್ರ ಹೇಗೋ ಅದರಿಂದ ತಪ್ಪಿಸಿಕೊಂಡು ವಾಪಸ್ ಊರಿಗೆ ಬಂದು ಅಲ್ಲಿಯೇ ಚಿಕ್ಕದೊಂದು ಕೆಲಸಕ್ಕೆ ಸೇರಿದ್ದಾಳೆ. ಸಮಾಜದ ಕುಹಕ ದೃಷ್ಟಿಯಿಂದ ನಿತ್ಯ ನರಕ ಅನುಭವಿಸುತ್ತಿದ್ದಾಳೆ. ಎಲ್ಲಿಹೋಗಿದ್ದಳೋ, ಏನೇನಾಗಿತ್ತೋ ಎಂಬ ಸಂಶಯದಿಂದ ಇವಳನ್ನು ಮದುವೆಯಾಗಲು ಯಾರೊಬ್ಬರೂ ಮುಂದೆ ಬಂದಿಲ್ಲ. ಈ ಪ್ರಕರಣ ಕುರಿತು ಪೊಲೀಸ್ ಕೇಸು ದಾಖಲಾಗಿದ್ದರೂ, child-rapeಮಾರಾಟ ಜಾಲದ ಯಾವ ಸುಳುಹುಗಳೂ ಸಿಗದೇ ಮುಚ್ಚಿಹೋಗಿದೆ. ತಪ್ಪು ಯಾರದ್ದು? ಯಾರಿಗೆ ಶಿಕ್ಷೆ?

ಜಾನಪದ ಹೆಣ್ಣೊಬ್ಬಳು ಹೊಟ್ಟೆಯ ಈ ಕಿಚ್ಚು/ ಮುಟ್ಟಲಾಗದ ಬೆಂಕಿ/ ನನ್ನ ಸಿಟ್ಟೋಗಿ ತಟ್ಟಲಿ/ ಆ ಪರಶಿವನ ಮಡದಿಗೆ ಎನ್ನುತ್ತಾಳೆ. ತನ್ನ ಅರ್ಧಂಗಿಗೇ ನೋವಾದಾಗಲಾದರೂ ಹೆಣ್ಣುಜೀವದ ಸಂಕಟವನ್ನು ಶಿವ ಅರ್ಥ ಮಾಡಿಕೊಂಡಾನೇ? ಎಂಬ ಹಲುಬುವಿಕೆ ಅವಳದ್ದು. ಹೆಂಗಳೆಯರು ನಾವಂತೂ, ನಮ್ಮದೇ ಹೆಣ್ಣು ಸಂಕುಲದ ದಾರುಣ ನೋವನ್ನು ನೋಡುವಾಗಲೆಲ್ಲಾ, ಸಂಕಟದಿಂದ ಅವರ ಮನೆ ಹೆಣ್ಣುಮಕ್ಕಳಿಗೇ ಹೀಗೆಲ್ಲ ಆಗಿದ್ದರೆ, ಹೀಗೇ ಸುಮ್ಮನೆ ಇರ್‍ತಿದ್ದರಾ? ಎಂದು ಪುರುಷ ಪ್ರಭುತ್ವಕ್ಕೆ ಮನಸಿನಾಳದಲ್ಲೇ ಶಾಪ ಹಾಕುತ್ತಿರುತ್ತೇವೆ! ಆದರೆ ತನ್ನದೇ ಅರ್ಧಭಾಗವಾಗಿರುವ ಹೆಣ್ಣುಜೀವದ ನೋವನ್ನು ಅರ್ಥಮಾಡಿಕೊಳ್ಳುವ, ಅದಕ್ಕಾಗಿ ತುಡಿಯುವ ಸಂವೇದನೆಯನ್ನು ನಮ್ಮ ಸುತ್ತಲಿನ ಪುರುಷ ಪ್ರಪಂಚ ರೂಢಿಸಿಕೊಳ್ಳಬಾರದೇ? ಇದು ಸದಾ ನಮ್ಮನ್ನು ಕಾಡುತ್ತಲೇ ಇದೆ.

ಹೆಣ್ಣುಜೀವದ ಮೇಲೆ ದಿನನಿತ್ಯ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳ ಜೊತೆಗೇ ರಾಜ್ಯದಲ್ಲಿ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಆತಂಕ ಹುಟ್ಟಿಸುವಷ್ಟು ಮಿತಿಮೀರಿದೆ. ಪ್ರತಿದಿನ ಪತ್ರಿಕೆಯ ಸ್ಥಳೀಯ ಪುಟಗಳಲ್ಲಿ ಒಂದಲ್ಲಾ ಒಂದು ಹೆಣ್ಣುಮಕ್ಕಳ ನಾಪತ್ತೆಗೆ ಸಂಬಂಧಿಸಿದ ಸುದ್ದಿ ಈಗ ಮಾಮೂಲಿಯಾಗಿಬಿಟ್ಟಿದೆ. ರಾಜ್ಯದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ 2009 ರಿಂದ 2011 ರವರೆಗೆ ದಾಖಲಾದ ನಾಪತ್ತೆಯಾದ ಹೆಣ್ಣುಮಕ್ಕಳು 14,989. rape-illustrationನಾವಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಮರ್ಯಾದೆಗೆ ಅಂಜಿ ದಾಖಲಾಗದವು ಇದರ ದುಪ್ಪಟ್ಟೋ ಮೂರುಪಟ್ಟೋ ಇದ್ದರೂ ಅಚ್ಚರಿಪಡಬೇಕಿಲ್ಲ. ಆದರೆ ದಾಖಲಾದವುಗಳಲ್ಲೇ ಪತ್ತೆಯಾಗದೇ ಉಳಿದ ಹೆಣ್ಣುಮಕ್ಕಳು 8039! ಜೊತೆಗೆ 2012 ರಲ್ಲಿ ನಾಪತ್ತೆಯಾದವರು 8084! ಇವರೆಲ್ಲಾ ಏನಾದರು? ಎಲ್ಲಿ ಹೋಗುತ್ತಾರೆ? ನಾಪತ್ತೆಯಾಗುವುದು ಎಂದರೆ ಏನು? ತಾವಾಗೆಯೇ ನಾಪತ್ತೆಯಾಗಿಬಿಡುತ್ತಾರೆಯೇ? ಅಥವಾ ಕಾಣದ ಕೈಗಳು ಅವರನ್ನು ನಾಪತ್ತೆ ಮಾಡಿಬಿಡುತ್ತವೆಯೇ? ಅವರನ್ನು ಕಾಳಜಿಯಿಂದ ಹುಡುಕುವ ಕೆಲಸವಾಗುತ್ತಿಲ್ಲ ಯಾಕೆ? ಈ ಪ್ರಮಾಣದಲ್ಲಿ ಹೆಣ್ಣುಮಕ್ಕಳು ನಾಪತ್ತೆಯಾಗುತ್ತಿದ್ದರೂ ಅದು ನಮ್ಮ ವ್ಯವಸ್ಥೆಯ ಕರುಳನ್ನು ಅಳ್ಳಾಡಿಸುತ್ತಿಲ್ಲವೇಕೆ?

ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕಾರ್ಮಿಕ ಇಲಾಖೆ, ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಬಾಲ ನ್ಯಾಯ ಮಂಡಳಿ, ಮಹಿಳೆ ಮತ್ತು ಮಕ್ಕಳ ಪರ ಹಲವು ಸರ್ಕಾರಿ ಆಯೋಗಗಳು, ಸಮಿತಿಗಳು…… ಇಂತಹ ಹತ್ತು ಹಲವು ವ್ಯವಸ್ಥೆಗಳು ಪ್ರಕರಣಗಳನ್ನು ನೇರವಾಗಿ ನಿರ್ವಹಿಸುತ್ತಿದ್ದರೂ ಹೆಣ್ಣುಮಕ್ಕಳ ನಾಪತ್ತೆ ನಿಯಂತ್ರಣಕ್ಕೆ ಬರದೇ ಅದಕ್ಕಾಗಿ ಪ್ರತ್ಯೇಕವಾದ ಯಾವ ಗಂಭೀರ ಕ್ರಮವನ್ನೂ, ಕಾರ್ಯಯೋಜನೆಯನ್ನೂ ತೆಗೆದುಕೊಳ್ಳುತ್ತಿಲ್ಲವೆಂದರೆ ಹೆಣ್ಣುಮಕ್ಕಳನ್ನು ರಕ್ಷಿಸುವವರಾರು?

ಮಹಿಳೆಯರ ಕಳ್ಳಸಾಗಾಣಿಕೆಯ ಹಿಂದಿರುವ ಸತ್ಯಸಂಗತಿಗಳನ್ನು ಅರಿಯಲು ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಡೆಸಿದ ಅಧ್ಯಯನದಿಂದ ಹಲವಾರು ಬೆಚ್ಚಿಬೀಳುವಂತಹ ಅಂಶಗಳು ಹೊರಬಿದ್ದಿವೆ. ಕಳ್ಳಸಾಗಾಣಿಕೆ ಜಾಲಕ್ಕೆ ಸಿಕ್ಕಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟವರಲ್ಲಿ ಶೇಕಡಾ 60.6 ರಷ್ಟು ಮಂದಿ ಬಾಲ್ಯವಿವಾಹವಾದವರೇ! ಕಳ್ಳಸಾಗಾಣಿಕೆಯ ವ್ಯವಹಾರದಲ್ಲಿ ನಿರತರಾದ ದಲ್ಲಾಳಿಗಳು ಮಹಿಳೆಯರನ್ನು ಹೆಚ್ಚಾಗಿ ಒಳ್ಳೆಯ ಕೆಲಸದ ಭರವಸೆ ನೀಡಿಯೇ ಬಲಿಪಶು ಮಾಡುತ್ತಿದ್ದಾರೆ. ಪ್ರೀತಿ ಅಥವಾ ಮದುವೆಯ ಭರವಸೆ ನೀಡಿ ಈ ಜಾಲಕ್ಕೆ ಕೆಡಹುವುದು ಶೇಕಡಾ 20 ಮಾತ್ರ! ವಂಚನೆಗೊಳಗಾದವರಲ್ಲಿ ತಳವರ್ಗದವರೇ ಹೆಚ್ಚಿದ್ದು, ಶೇಕಡಾ 70 ರಷ್ಟು ಮಹಿಳೆಯರು ತಳಸಮುದಾಯದವರು!

ಜಾಗತಿಕವಾಗಿ ಮಹಿಳೆಯರ ಮತ್ತು ಮಕ್ಕಳ ಮಾರಾಟದಲ್ಲಿ ಭಾರತವು ಪ್ರಮುಖ ತಾಣವಾಗಿದೆಯೆಂದು ವಿಶ್ವಸಂಸ್ಥೆಯ ವರದಿ ಹೇಳುತ್ತದೆ. human_trafficking90 ರ ದಶಕದಿಂದ ಎಲ್ಲಾ ಸರ್ಕಾರಗಳು ಜಾರಿಗೊಳಿಸಿದ ಜಾಗತೀಕರಣದ ನೀತಿಗಳು ಮಹಿಳೆಯರ ಮತ್ತು ಮಕ್ಕಳ ಮಾರಾಟ ಅತಿ ಹೆಚ್ಚು ಬೆಳೆಯಲು ಕಾರಣವಾಗಿದೆ. 2010 ರ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದ ವರದಿಯಂತೆಯೇ ಸದ್ಯ 25 ಲಕ್ಷ ಮಹಿಳೆಯರು ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದಾರೆ. ಆದರೆ ಮಾನವ ಹಕ್ಕುಗಳ ವಾಚ್‌ನ ವರದಿಯಂತೆ ಇದುವರೆಗೆ ಅಂದಾಜು 150 ಲಕ್ಷ (ಒಂದೂವರೆ ಕೋಟಿ) ಭಾರತದ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಲಾಗಿದೆ! ಹೆಣ್ಣುಮಕ್ಕಳ ಅಕ್ರಮ ಮಾರಾಟವೆಂಬುದು ಈಗ ಸೀಮಿತ ಚೌಕಟ್ಟುಗಳನ್ನು ದಾಟಿ, ರಾಜ್ಯ-ಅಂತರ್‌ರಾಜ್ಯ ಮಿತಿಗಳನ್ನು ಮೀರಿ ರಾಷ್ಟ್ರ ಹಾಗೂ ಜಾಗತಿಕ ವಿದ್ಯಮಾನವಾಗಿ ಸದ್ದಿಲ್ಲದೇ ಬೆಳೆದು ನಿಂತಿದೆ.

ನಾಪತ್ತೆಯಾದ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯ ಅಡ್ಡಗಳಲ್ಲಿ ಸಿಕ್ಕಿದರೂ ಇದರ ಹಿಂದಿರುವ ವ್ಯವಸ್ಥಿತವಾದ ಅಕ್ರಮ ಹೆಣ್ಣುಮಕ್ಕಳ ಸಾಗಾಣಿಕಾ ಜಾಲವನ್ನು ಭೇದಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಎಲ್ಲವೂ ಗೊತ್ತಿದ್ದೂ ಹೆಣ್ಣುಮಕ್ಕಳನ್ನು ಹುಡುಕುವ, ರಕ್ಷಿಸುವ, ಮತ್ತೆ ಅವರನ್ನು ಯಥಾಸ್ಥಿತಿಯಲ್ಲಿ ಉಳಿಸುವ ಕಣ್ಣಾಮುಚ್ಚೆ ನಾಟಕವನ್ನು ವ್ಯವಸ್ಥೆ ಉದ್ದೇಶಪೂರ್ವಕವಾಗಿಯೇ ಆಡುತ್ತಿದೆಯೇ? ಹೆಣ್ಣಿನ ದೇಹವನ್ನು ವಸ್ತುವನ್ನಾಗಿಸಿಕೊಂಡು ವ್ಯಾಪಾರದ ಆಟವಾಡುತ್ತಿರುವವರಿಗೆ ನಾಪತ್ತೆಯಾದ ಹೆಣ್ಣುಮಕ್ಕಳೇ ಬಂಡವಾಳ ಹೂಡಿಕೆಯಾಗಿ ಬಳಕೆಯಾಗುತ್ತಿದ್ದಾರೆ. ಅದರಿಂದ ಕೋಟಿಗಟ್ಟಲೆ ಆದಾಯ ದೊರಕುತ್ತಿದೆ! ಇದು ಕೇವಲ ಮಹಿಳಾ ಹಕ್ಕಿನ ವಿಷಯವಲ್ಲ, ಮನುಷ್ಯತ್ವದ ಕಟ್ಟಕಡೆಯ ಮಜಲು ಎಂದು ಸರ್ಕಾರಕ್ಕೆ ಹೃದಯ ದ್ರವಿಸುವಂತೆ ಹೇಗೆ ಅರ್ಥಮಾಡಿಸುವುದು?

ಕಳೆದ 2012 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ತಂಡ ಮಾಡಿರುವ ಸಮೀಕ್ಷೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಒಂದು ವರ್ಷಕ್ಕೆ ಸರಾಸರಿ 200-300 ಹೆಣ್ಣುಮಕ್ಕಳು ಕಾಣೆಯಾಗುತ್ತಿದ್ದಾರೆ. ಇದರಲ್ಲಿ ಶೇಕಡಾ 70 ರಷ್ಟು ಇನ್ನೂ ಬಾಲ್ಯದಾಟದವರು ಎನ್ನುವುದು ಆತಂಕಕಾರಿಯಾಗಿದೆ. ರಾಜ್ಯ ಮಹಿಳಾ ಆಯೋಗವೂ ಕಳೆದ ವರ್ಷ ಈ ವರದಿಯನ್ನಾಧರಿಸಿ- ಶೇಕಡಾ 36 ರಷ್ಟು ಹೆಣ್ಣುಮಕ್ಕಳು ಪ್ರೀತಿ, ಪ್ರೇಮ ಪ್ರಕರಣಗಳಿಗಾಗಿ ಓಡಿ ಹೋಗುತ್ತಾರೆ ಎಂದು ಒತ್ತಿ ಹೇಳಿದೆ. ಹಾಗಿದ್ದರೆ ಅವರೊಂದಿಗೆ ಇಷ್ಟೇ ಪ್ರಮಾಣದ ವಯಸ್ಕ ಪುರುಷರೂ ನಾಪತ್ತೆಯಾಗಬೇಕಿತ್ತಲ್ಲ? ಈ ಬಗ್ಗೆ ಬೇರೆ ಬೇರೆ ಜಿಲ್ಲೆಗಳ ಪೊಲೀಸ್ ಇಲಾಖೆಯಲ್ಲಿ ದಾಖಲಾದ ಪ್ರಕರಣಗಳನ್ನು ಅಭ್ಯಸಿಸಿದಾಗ ಹಾಗೆ ನಾಪತ್ತೆಯಾದ ಪುರುಷರ ಪ್ರಮಾಣ ಶೇಕಡಾ 5 ರೊಳಗೇ ಇದೆ! ಇದರಲ್ಲೂ ಪ್ರೀತಿ ಪ್ರೇಮಕ್ಕಿಂತಾ ಬೇರೆ ವೈಯಕ್ತಿಕ ಕಾರಣಗಳೇ ಮುಖ್ಯವಾಗಿವೆ. ಹಾಗಿದ್ದರೆ ನಮ್ಮ ಹೆಣ್ಣುಮಕ್ಕಳು ಯಾರನ್ನು ಪ್ರೀತಿಸಿ ಓಡಿ ಹೋಗುತ್ತಿದ್ದಾರೆ? ನಮ್ಮ ಹೆಣ್ಣುಮಕ್ಕಳೇನು ಮೀರಾ, ಅಕ್ಕಮಹಾದೇವಿ, ಆಂಡಾಳ್‌ರಂತೆ ಸಂತಭಕ್ತೆಯರೇ? ಇದು ಏನನ್ನು ಸೂಚಿಸುತ್ತದೇ? ಹೆಣ್ಣುಮಕ್ಕಳ ವ್ಯವಸ್ಥಿತವಾದ ಮಾರಾಟ ಜಾಲವನ್ನು ನಿಗೂಢ ಕೈಗಳು ವ್ಯವಸ್ಥಿತವಾಗಿ ನಿರಾತಂಕವಾಗಿ ನಡೆಸುತ್ತಿವೆ ಎಂದಲ್ಲವೇ? ಪ್ರೀತಿಸಿ ಮನೆ ಬಿಟ್ಟು ಹೋಗುತ್ತಿರುವ ಹೆಣ್ಣುಮಕ್ಕಳು ಇಲ್ಲವೇ ಇಲ್ಲವೆಂದಲ್ಲ. ಆದರೆ ಪ್ರೀತಿಯ ಹಿಂದೆ ಬಿದ್ದು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದರೆ ಅವರನ್ನು ಪತ್ತೆ ಹಚ್ಚುವುದು ಕಷ್ಟವಾದರೂ ಸಾಧ್ಯ. ಆದ್ದರಿಂದ ಹೆಣ್ಣುಮಕ್ಕಳು ಶಾಶ್ವತವಾಗಿ ಕಾಣೆಯಾಗುವುದರ ಹಿಂದೆ ಮೋಸದ ಮಾಯಾ ಜಾಲ ಹರಡಿ ನಿಂತಿರುತ್ತದೆ ಎಂಬುದನ್ನು ಯಾರಾದರೂ ಅರ್ಥಮಾಡಿಕೊಳ್ಳಬಲ್ಲರಲ್ಲವೇ?

ಈ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಣೆಕೆಯೆಂಬ ಕ್ರೂರ ವ್ಯವಹಾರ ನಿಯಂತ್ರಣಕ್ಕೆ ಇನ್ನಾದರೂ ಸರ್ಕಾರದ ಉನ್ನತ ಹಂತದಲ್ಲಿ ಸಮಗ್ರವಾದ ಕಾರ್ಯಯೋಜನೆ ಅತ್ಯಂತ ತುರ್ತಾಗಿ ಆಗಬೇಕಿದೆ. ಇದಕ್ಕೆ ಸಂಬಂಧಿತವಾದ ಎಲ್ಲಾ ಇಲಾಖೆಗಳು, ಸರ್ಕಾರಿ ಸಮಿತಿಗಳೂ ಹಾಗೂ ಸ್ವಯಂಸೇವಾ ಸಂಸ್ಥೆಗಳು ಸಂಘಟಿತವಾಗಿ, ಪರಸ್ಪರ ಪೂರಕವಾಗಿ ಈ ಕೆಲಸದಲ್ಲಿ ತೊಡಗಿಕೊಳ್ಳಬೇಕಿದೆ. ಈ ವಿಷಯದ ಗಂಭೀರತೆಗೆ ತಕ್ಕ ಸಶಕ್ತವಾದ ಕಾನೂನುಗಳು ಇಲ್ಲದಿರುವುದು, ಇದ್ದರೂ ಅದರೊಳಗಿನ ನುಸುಳುಗಳು, ಜತೆಗೆ ನ್ಯಾಯದಾನದ ವಿಳಂಬ ಹಾಗೂ ಕಾನೂನು ಜಾರಿಯಲ್ಲೂ ವಿಳಂಬ, ಹೀಗಾಗಿ ಈ ಅಕ್ರಮ ವ್ಯವಹಾರ ಎಗ್ಗಿಲ್ಲದೇ ನಡೆಯುತ್ತಿವೆ. ಅದಕ್ಕಾಗಿ ತ್ವರಿತಗತಿಯ ನ್ಯಾಯಾಲಯಗಳಲ್ಲಿ ತಕ್ಷಣವೇ ನ್ಯಾಯ ನೀಡುವ ವ್ಯವಸ್ಥೆಯಾಗಬೇಕು. ಜೊತೆಗೇ ಇಂದಿನ ಅವಶ್ಯಕತೆಗನುಗುಣವಾಗಿ ಕಾನೂನು ತಿದ್ದುಪಡಿಯೂ ಆಗಬೇಕಿದೆ.

30 ಮೇ 2005 ರಲ್ಲಿ ಕರ್ನಾಟಕ ಸರ್ಕಾರದಿಂದ, ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಹೆಣ್ಣುಮಕ್ಕಳ ಮಾರಾಟ ತಡೆ ಸಮಿತಿಗಳನ್ನು ರಚಿಸಲು ಆದೇಶ ಜಾರಿಯಾಯ್ತು. ಅದು ಯಶಸ್ವಿಯಾಗಿ ಜಾರಿಯಾಗಲಿಲ್ಲವೆಂದು ಮತ್ತೆ 28 ಮೇ 2007 ರಲ್ಲಿ, ಚುನಾಯಿತ ಪ್ರತಿನಿಧಿಗಳ ಮುಖಂಡತ್ವದಲ್ಲಿ ಈ ಸಮಿತಿಗಳನ್ನು ಪುನರ್ ರಚಿಸಬೇಕೆಂಬ ಆದೇಶ ಜಾರಿಯಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ child-traffickingಈ ಸಮಿತಿಯ ಸಭೆ ಸೇರಿ ಕಾರ್ಯಯೋಜನೆಯ ಸಿದ್ಧತೆ ಹಾಗೂ ಆದ ಕೆಲಸಗಳ ಪರಾಮರ್ಶೆ ಮಾಡಬೇಕೆಂದು ಆದೇಶದಲ್ಲಿ ಒತ್ತಿಹೇಳಲಾಗಿತ್ತು. ಆದರೆ ಬಹಳಷ್ಟು ಕಡೆಗಳಲ್ಲಿ ಇಂತಹ ಸಮಿತಿ ರೂಪುಗೊಂಡಿಲ್ಲ. ರೂಪುಗೊಂಡ ಸಮಿತಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂಬುದು ದುಃಖಕರ. ಈ ಸಮಿತಿ 10 ಜನ ವಿವಿಧ ಇಲಾಖೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಡ್ಡಾಯವಾಗಿ ಒಬ್ಬ ಪೊಲೀಸ್ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಜೊತೆಗೆ 10 ಜನ ಜವಾಬ್ದಾರಿಯುತ ಸಾರ್ವಜನಿಕರನ್ನೊಳಗೊಂಡು [5 ಮಂದಿ ಪುರುಷರು, 5 ಮಂದಿ ಮಹಿಳೆಯರು] ಮೂಲಮಟ್ಟದಲ್ಲಿ ಪುನರ್ ರಚಿತವಾಗಬೇಕು. ಈ ಕಣ್ಗಾವಲು ಸಮಿತಿ ಕನಿಷ್ಠ ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಸಾರ್ವಜನಿಕರನ್ನೊಳಗೊಂಡಾಗ ಮಾತ್ರ ಸಮಿತಿ ನಿಗದಿತವಾಗಿ ಸೇರಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪೊಲೀಸ್ ಇಲಾಖೆಯಲ್ಲೇ ಇಂತಹ ನಾಪತ್ತೆ ಪ್ರಕರಣಗಳನ್ನು ಶೀಘ್ರವಾಗಿ ವ್ಯವಹರಿಸಲು ಪ್ರತ್ಯೇಕ ಸೆಲ್ ಒಂದನ್ನು ರಚಿಸುವ ತುರ್ತು ಕೂಡ ಹೆಚ್ಚಾಗಿದೆ. ಈ ಕುರಿತು ಸರ್ಕಾರದ ಉನ್ನತಮಟ್ಟದಲ್ಲಿ ಕಾರ್ಯಯೋಜನೆಯೊಂದು ರೂಪುಗೊಂಡು, ಅದರ ಅನುಷ್ಠಾನಕ್ಕಾಗಿ ಬಿಗಿ ಕ್ರಮಗಳನ್ನು ಜಾರಿಗೊಳಿಸಬೇಕು.

ಇದರ ಜೊತೆಗೇ ಹದಿಹರೆಯದ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಲೈಂಗಿಕ ಶಿಕ್ಷಣ ಮತ್ತು ಲೈಂಗಿಕ ಬದುಕಿನ ನೈತಿಕ ಜವಾಬ್ದಾರಿ, ಜೀವನ ಕೌಶಲ್ಯಗಳ ಕುರಿತು ತರಬೇತಿ, ಮಾನವ ಕಳ್ಳಸಾಗಾಣಿಕೆಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದೂ ಅಷ್ಟೇ ಮುಖ್ಯವಾಗಿದೆ.

ನಾಪತ್ತೆಯಾಗಿ ಮತ್ತೆ ಪತ್ತೆಯಾದ ಹೆಣ್ಣುಮಕ್ಕಳಿಗೆ ಗೌರವಯುತ ಪುನರ್ವಸತಿ ನಿರ್ಮಿಸುವ ಕುರಿತು, ಅವರ ಸಹಜ ಹಕ್ಕುಗಳನ್ನು ದೊರಕಿಸಿಕೊಡುವ ಕುರಿತು ಸರ್ಕಾರ ವಿಶೇಷವಾಗಿಯೇ ಯೋಚಿಸಬೇಕಿದೆ. ಅವರು ಮತ್ತೆ ಇಂತಹ ಅಕ್ರಮ ಮಾರಾಟ ಜಾಲಕ್ಕೆ ಬೀಳದಂತೆ ತಡೆಯುವ ಪ್ರಯತ್ನಗಳೂ ಆಗಬೇಕಿದೆ. ವಾಪಸಾದ ಹೆಣ್ಣುಮಕ್ಕಳು ಹೇಗೆ ನಾಪತ್ತೆಯಾದರು? ಇಷ್ಟು ಕಾಲ ಎಲ್ಲಿದ್ದರು? ಯಾವ ಕೆಲಸದಲ್ಲಿದ್ದರು? ಅಲ್ಲಿನ ವ್ಯವಸ್ಥೆ ಮತ್ತು ವ್ಯವಹಾರಗಳು ಯಾವ ರೀತಿಯದಾಗಿತ್ತು ಎಂಬುದರ ಕೂಲಂಕಷ ಸಮೀಕ್ಷೆಗಳಾಗಿ ಅದರ ಆಧಾರದ ಮೇಲೆ ಕಾರ್ಯಯೋಜನೆಯನ್ನು ಸಿಧ್ಧಗೊಳಿಸಬೇಕು. ಇಂತಹ ಸಮೀಕ್ಷೆಯಿಂದ ಮಾತ್ರ ನಾಪತ್ತೆ ಹಿಂದಿರುವ ವೈಯಕ್ತಿಕ ಕಾರಣಗಳು, ಕೌಟುಂಬಿಕ, ಆರ್ಥಿಕ, ಸಾಮಾಜಿಕ ಕಾರಣಗಳು ಪತ್ತೆಯಾಗಿ ಅವುಗಳನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಲು ಹಾಗೂ ಕ್ರಮ ಕೈಗೊಳ್ಳಲು ಸಹಾಯಕವಾಗುತ್ತವೆ. ಇಲ್ಲಿ ನಮಗೆ ಬೇಕಾಗಿರುವುದು, ಬೇಡುತ್ತಿರುವುದು-ನಮ್ಮ ಮನೆಯ ಹೆಣ್ಣುಮಗಳೇ ನಾಪತ್ತೆಯಾಗಿದ್ದರೆ….. ಎಷ್ಟು ತೀವ್ರವಾಗಿ ಸ್ಪಂದಿಸುತ್ತಿದ್ದೆವೋ, ಅಂತಹುದೇ ತೀವ್ರತೆಯನ್ನು ಪ್ರಭುತ್ವದಿಂದಲೂ, ಆಡಳಿತಶಾಹಿಯಿಂದಲೂ ನಾವು ನಿರೀಕ್ಷಿಸಬಹುದೇ?

ಗ್ಯಾಂಗ್ ರೇಪ್: ಒಂದು ವಿಕೃತ ಮನಸ್ಥಿತಿ


– ಡಾ.ಎಸ್.ಬಿ. ಜೋಗುರ


 

 

ಭಾರತದಲ್ಲಿ ಇದೀಗ ಗ್ಯಾಂಗ್ ರೇಪ್ ಗಳ ಪರ್ವಕಾಲ ಎನ್ನುವ ಹಾಗೆ ಅತ್ಯಾಚಾರಗಳು ಸರಣಿ ರೂಪದಲ್ಲಿ ಜರುಗುತ್ತಿವೆ. ದೆಹಲಿಯಲ್ಲಿ ಜರಗಿದ ನಿರ್ಭಯಾಳ ಅತ್ಯಾಚಾರದ rape-illustrationಪ್ರಕರಣದ ನಂತರ ನಿರಂತರವಾಗಿ ಅತ್ಯಾಚಾರಗಳು ಒಂದರ ಬೆನ್ನಲ್ಲಿ ಒಂದು ಜರಗುತ್ತಲೇ ಇವೆ. ಸಮಾಜದ ಅಪರಾಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಇನ್ಸ್ ಪೆಕ್ಟರ್ ರಾಹುಲ್ ಪಾಂಡೆ ಮತ್ತವನ ಜೊತೆಗಿದ್ದ ಇಬ್ಬರು ಕಾನಸ್ಟೆಬಲ್ ಗಳು ಕೂಡಿ ಓರ್ವ ಮಹಿಳೆಯ ಮೇಲೆ ಸತತವಾಗಿ ಎರಡು ಘಂಟೆಗಳ ಕಾಲ ಅತ್ಯಾಚಾರವೆಸಗಿ ತಮ್ಮ ರಾಕ್ಷಸತ್ವವನ್ನು ಮೆರೆದು ಮಧ್ಯರಾತ್ರಿ ಅವಳನ್ನು ಪೋಲಿಸ್ ಸ್ಟೇಷನ್ ನಿಂದ ಹೊರಬಿಟ್ಟಿರುವಂತಹ ಘಟನೆಗಳೂ ನಡೆಯುತ್ತಿವೆ. ಹಾಗಿದ್ದರೆ ಆ ಮಹಿಳೆ ಮಾಡಿದ ತಪ್ಪಾದರೂ ಏನು? ಪೋಲಿಸರು ಆಕೆಯ ಗಂಡನನ್ನು ಅನಧಿಕೃತ ಪಿಸ್ತೂಲು ಹೊಂದಿರುವ ಕಾರಣಕ್ಕೆ ಬಂಧಿಸಿದ್ದರು. ತನ್ನ ಗಂಡನನ್ನು ಬಂಧಿಸಲು ಏನು ಕಾರಣ ಎಂದು ಕೇಳಲು ಸ್ಟೆಷನ್ ಗೆ ತೆರಳಿದ ಆಕೆಯನ್ನು ಒಂದು ಘಂಟೆ ಕುಳಿತುಕೊಳ್ಳಲು ಹೇಳಿ, ಅವಳನ್ನು ಇನ್ಸ್ಪೆಕ್ಟರ್ ಪಾಂಡೆ ಮತ್ತವನ ಇಬ್ಬರು ಕಾನಸ್ಟೆಬಲ್ ಗಳು ಅತ್ಯಾಚಾರ ಎಸಗಿದ್ದಾರೆ. ಆಕೆಯ ಗಂಡನನ್ನು ಬಿಡುಗಡೆ ಮಾಡಿದ ಮೂರು ಘಂಟೆಯ ನಂತರ ಅವಳನ್ನು ಬಿಡುಗಡೆ ಮಾಡಲಾಗಿದೆ. ಹಾಗೆ ಅವಳನ್ನು ಹೊರಗೆ ಬಿಡುವಾಗ “ನೀನು ತಪ್ಪಿ ಏನಾದರೂ ಈ ವಿಷಯವನ್ನು ಬಹಿರಂಗ ಮಾಡಿದರೆ ಮತ್ತೆ ನಿನ್ನ ಗಂಡನನ್ನು ಬಂಧಿಸುತ್ತೇವ” ಎಂದು ಬೆದರಿಕೆಯೊಡ್ಡಿ ಅವಳನ್ನು ಬಿಡುಗಡೆ ಮಾಡಿದ್ದರು. ಆಕೆ ಅವರ ಗೊಡ್ದು ಬೆದರಿಕೆಗೆ ಹೆದರದೇ ಕಂಪ್ಲೇಂಟ್ ಮಾಡಿದ್ದರಿಂದಾಗಿಯೇ ಈ ಸುದ್ಧಿ ಬಯಲಾಗಿದ್ದು. ಇಲ್ಲದಿದ್ದರೆ ಇದೂ ಕೂಡಾ ಈ ಬಗೆಯ ಮುಚ್ಚಿ ಹೋದ ಸುದ್ದಿಗಳ ಸಾಲಿಗೆ ಸೇರುತ್ತಿತ್ತು.

ಈ ಮೇಲಿನ ಸಾಮೂಹಿಕ ಅತ್ಯಾಚಾರಕ್ಕಿಂತಲೂ ಇನ್ನಷ್ಟು ವಿಕೃತವಾದದ್ದು ಮಧ್ಯಪ್ರದೇಶದ ಓರ್ವ ಆದಿವಾಸಿ ಮಹಿಳೆಯ ಮೇಲೆ ಜರುಗಿದ ಅತ್ಯಾಚಾರ. ಆ ಮಹಿಳೆ ಭೈಲಿಖೇಡಾ ಗ್ರಾಮದವಳು. ಒಂದು ಜಮೀನಿನ ವಿಷಯವಾಗಿ ಆಕೆ ತಕರಾರು ತೆಗೆದಿದ್ದಳು. ಈ ತಕರಾರು ಆಕೆಯ ಗಂಡನ ವಿರುದ್ಧವೂ ಆಗಿತ್ತು. ಹೀಗಾಗಿ ಆಕೆಯ ಗಂಡನನ್ನು ಒಳಗೊಂಡು ಸುಮಾರು ಹತ್ತು ಜನರು ಸೇರಿ ಈ ಆದಿವಾಸಿ ಮಹಿಳೆಯ ಮೇಲೆ ಅತ್ಯಂತ ತುಚ್ಚವಾಗಿ ಅತ್ಯಾಚಾರ ಎಸಗಿದ್ದಾರೆ. ಮಾತ್ರವಲ್ಲದೇ ಆಕೆಯನ್ನು ವಿವಸ್ತ್ರಗೊಳಿಸಿ ಪರೇಡ್ ಮಾಡಿಸಿದ್ದಲ್ಲದೇ ಆಕೆಯ ಮಗನ ಎದುರೇ ಮೂತ್ರಿ ಕುಡಿಯುವಂತೆ ಒತ್ತಡ ಹೇರಿದ್ದಾರೆ. ವಿಚಿತ್ರವೆಂದರೆ ಈ ಎಲ್ಲ ಬಗೆಯ ನೀಚತನದಲ್ಲಿ ಆಕೆಯ ಗಂಡನೂ ಭಾಗಿಯಾದದ್ದು. ಮೇಲಿನ ಘಟನೆಯಲ್ಲಿ ಕಾಯುವವರೇ ರೇಪಿಷ್ಟ ಗಳಾದರೆ, ಇಲ್ಲಿ ಗಂಡನೆಂಬ ದಂಡ ಪಿಂಡ ಈ ಬಗೆಯ ಹೀನ ಕೆಲಸಕ್ಕೆ ಸಾಥ್ ನೀಡಿರುವದು ಮತ್ತೊಂದು ವಿಪರ್ಯಾಸ!

ಇದು ಇನ್ನೊಂದು ಘಟನೆ. ದೆಹಲಿಯ ಬಸ್ ನಿಲ್ದಾಣ ಒಂದರಲ್ಲಿ ಆ ಮಹಿಳೆ ಮಾರುಕಟ್ಟೆಗೆ ತೆರಳಲೆಂದು ನಿಂತಿದ್ದಳು. ಸಮಯ ಬೆಳಿಗ್ಗೆ ಹತ್ತು ಘಂಟೆ ಅಷ್ಟರಲ್ಲಿ ಒಂದು ಮ್ಯಾಕ್ಸಿ ಕ್ಯಾಬ್stop-rapes-bombay ಬರ್ರನೇ ಬಂದದ್ದೇ ಆಕೆಯ ಮೂಗಿಗೆ ಕ್ಲೋರೋಫರ್ಮ್ ಮೂಸಿಸಿ ಸಿನಮೀಯ ರೀತಿಯಲ್ಲಿ ಅವಳನ್ನು ಎತ್ತಿಹಾಕಿಕೊಂಡು ಹೋಗಿ ಅದರಲ್ಲಿದ್ದ ಮೂವರು ಆಕೆಯನ್ನು ಅತ್ಯಾಚಾರ ಮಾಡಿದರು. ಈಗಾಗಲೇ ಆರೋಪಿಗಳು ಪೋಲಿಸರ ವಶದಲ್ಲಿದ್ದಾರೆ. ಹೇಳುತ್ತಾ ಹೋದಲ್ಲಿ ಇಂಥಾ ಹತ್ತಾರು ಘಟನೆಗಳು ನೆನಪಾಗುತ್ತವೆ. ಇದೆಲ್ಲಾ ಏನು? ಭಾರತ ಈಗೀಗ ಇಡೀ ವಿಶ್ವದಲ್ಲಿ ಅತ್ಯಾಚಾರದ ವಿಷಯದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಸೂಚನೆಯನ್ನು ಈ ಮೂಲಕ ನಿಡುತ್ತಿದೆಯೇ? ರೇಪ್ ಎನ್ನುವುದು ಇಡೀ ವಿಶ್ವದಲ್ಲಿ ಜರುಗುವ ಒಂದು ಬಗೆಯ ಲೈಂಗಿಕ ಅಪರಾಧವಾಗಿದೆಯಾದರೂ ಭಾರತ ಮಾತ್ರ ಯಾಕೆ ಹೀಗೆ ಗ್ಯಾಂಗ್ ರೇಪ್ ಗಳ ವಿಷಯದಲ್ಲಿ ಮತ್ತೆ ಮತ್ತೆ ಸುದ್ದಿಯಾಗುತ್ತಿದೆ? ಅಮೇರಿಕೆಯ ‘ಟೈಮ್’ ಪತ್ರಿಕೆ ಕೂಡಾ ಆ ಬಗ್ಗೆ ಮಾತನಾಡಿದೆ. ಕಳೆದ ವರ್ಷ ದೆಹಲಿಯಲ್ಲಿ ಗ್ಯಾಂಗ್ ರೇಪ್ ನಡೆದ ಮೂರೇ ತಿಂಗಳಲ್ಲಿ ಅತ್ಯಾಚಾರದ ಪ್ರಮಾಣ ಸುಮಾರು 359 ರಷ್ಟಾಗಿತ್ತು. ಅದರ ಹಿಂದಿನ ವರ್ಷ ಆ ಅವಧಿಯಲ್ಲಿ ಅದು ಕೇವಲ 143 ರಷ್ಟಿತ್ತು. ಇಂಗ್ಲಂಡ್ ನ ಗಾರ್ಡಿಯನ್ ಪತ್ರಿಕೆ ಹೇಳುವಂತೆ ಇಂಗ್ಲಂಡಿನಲ್ಲಿ 7 ಪ್ರತಿಶತ ರೇಪ್ ಪ್ರಕರಣಗಳು ವರದಿಯಾದರೆ, ಸ್ವೀಡನ್ ದಲ್ಲಿ 10 ಪ್ರತಿಶತ, ಭಾರತದಲ್ಲಿ ಅದು 24.4 ಪ್ರತಿಶತದಷ್ಟು ಅತ್ಯಾಚಾರದ ಪ್ರಕರಣಗಳು ಬಗ್ಗೆ ವರದಿಯಾಗುತ್ತವೆ. ಭಾರತದ ಮಾಧ್ಯಮಗಳು ಕೂಡಾ ಅತ್ಯಾಚಾರದ ವಿಷಯವಾಗಿ ಅತ್ಯಂತ ವಸ್ತುನಿಷ್ಟವಾಗಿ ವರದಿ ಮಾಡಿರುವದಿದೆ. ಅದರ ಪರಿಣಾಮವೇ ಲಕ್ಷಾನುಗಟ್ಟಲೆ ಜನ ರೇಪ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದು. ಯಾವುದೇ ದೇಶದ ಪ್ರಜೆಗಳು ಅದರಲ್ಲೂ ಭಾರತದಂತಹ ಸಾಂಪ್ರದಾಯಿಕ ರಾಷ್ಟ್ರಗಳ ಜನತೆ ಅದನ್ನು ಒಟ್ಟಾರೆ ಸಹಿಸುವದಿಲ್ಲ. ತನ್ನ ದೇಶವೊಂದು ಆ ಮೂಲಕ ಜಗತ್ತಿನಲ್ಲಿ ಗುರುತಿಸಿಕೊಳ್ಳುವದನ್ನು ಯಾರೂ ಇಷ್ಟ ಪಡುವದಿಲ್ಲ.

ಈ ಗ್ಯಾಂಗ್ ರೇಪ್ ಗಳಿಗೆ ಸಂಬಂಧಿಸಿ ಅನೇಕ ಅಧ್ಯಯನಗಳು ಜರುಗಿವೆ. ಜೋಹಾನ್ಸಬರ್ಗ್ ನಗರವನ್ನು ಆಧರಿಸಿ ಅಧ್ಯಯನ ಮಾಡಿರುವ ಲಿಸಾ ಮತ್ತು ಎಸ್.ಹಾಫ್ಜಿ ಹೇಳುವಂತೆ ‘ಈ ಬಗೆಯ ಅತ್ಯಾಚಾರಗಳಲ್ಲಿ ಕೆಲವು ಯುವಕರು ಒಬ್ಬಾಕೆಯನ್ನು ಹೊಂಚು ಹಾಕುತ್ತಿರುತ್ತಾರೆ. ಇಲ್ಲಿ ಹಿಂಸೆಯ ರೀತಿ ವಿಕೃತವಾಗಿರುತ್ತದೆ’ ಎನ್ನುತ್ತಾರೆ. ಅವರು ಅಧ್ಯಯನ ಮಾಡಿದ 591 ಪ್ರಕರಣಗಳ ಪೈಕಿ ಅದರಲ್ಲಿ ಮೂವರು ಮಾತ್ರ ಈ ರೇಪ್ ಕೃತ್ಯದಲ್ಲಿ ಅಪರಿಚಿತರು. ಮಿಕ್ಕಂತೆ ಇವರಲ್ಲಿ ಬಹುತೇಕರು ಮೊದಲ ಬಾರಿಗೆ ಈ ಬಗೆಯ ಕೃತ್ಯದಲ್ಲಿ ತೊಡಗಿದವರಲ್ಲ ಎನ್ನುವದನ್ನೂ ಅವರು ಬಹಿರಂಗ ಪಡಿಸಿದ್ದಾರೆ. ಗ್ಯಾಂಗ್ ರೇಪಗಳ ಜೊತೆಯಲ್ಲಿ ಭೌಗೋಳಿಕ ಸಂಗತಿಗಳು ಕೂಡಾ ನೇರವಾದ ಸಂಬಂಧ ಹೊಂದಿವೆ ಎನ್ನುವುದನ್ನು ಈ ಲೇಖಕರು ತಮ್ಮ ಅಧ್ಯಯನದ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ ಪ್ರಕಾರ ಬೇಸಿಗೆಯ ಸಂದರ್ಭದಲ್ಲಿಯೇ ಈ ಬಗೆಯ ಪ್ರಕರಣಗಳು ಹೆಚ್ಚು. ಮೇ ತಿಂಗಳಲ್ಲಿ 12 ಪ್ರತಿಶತ ಸಾಮೂಹಿಕ ಅತ್ಯಾಚಾರಗಳು ಜರುಗಿದ ಬಗ್ಗೆ ಅವರು ದಾಖಲಿಸಿದ್ದಾರೆ. ಜೊತೆಗೆ ಶನಿವಾರ ಹಾಗೂ ರವಿವಾರ ಅಂದರೆ ವೀಕೆಂಡ್ ಗಳಲ್ಲಿಯೇ ಸುಮಾರು 41 ಪ್ರತಿಶತ ಅತ್ಯಾಚಾರಗಳು ಜರುಗುತ್ತವೆ ಎಂದಿದ್ದಾರೆ. ಬಹುತೇಕವಾಗಿ ಗ್ಯಾಂಗ್ ರೇಪ್ ಗಳು ರಾತ್ರಿ ವೇಳೆಯಲ್ಲಿಯೇ ಜರುಗುವುದು ಹೆಚ್ಚು ಎಂದು ಲಿಸಾ ಹೇಳುತ್ತಾಳೆ. ಅವಳ ಪ್ರಕಾರ ಸುಮಾರು 33 ಪ್ರತಿಶತ ಗ್ಯಾಂಗ್ ರೇಪ್ ಗಳು ಸಾಯಂಕಾಲ 7 ರಿಂದ ರಾತ್ರಿ 9 ರ ನಡುವೆ ಘಟಿಸಿದ್ದೇ ಹೆಚ್ಚು ಎನ್ನುತ್ತಾಳೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಂತೂ ಬಹುತೇಕ ಈ ಬಗೆಯ ಗ್ಯಾಂಗ್ ರೇಪ್ ಗಳಲ್ಲಿ ಗನ್ ಬಳಕೆ ಇಲ್ಲವೇ ಇತರೇ ಆಯುಧಗಳ ಬಳಕೆ ಸಾಮಾನ್ಯ. ಅತಿ ಹೆಚ್ಚು ಮಹಿಳೆ ಏಕಾಂಗಿಯಾಗಿ ವಾಕಿಂಗ್ ಮಾಡುವಾಗಲೇ ಅಪಹರಿಸಿದ ಪ್ರಕರಣಗಳಿವೆ. ಕೆಲ ಪ್ರಕರಣಗಳಲ್ಲಿ ಆ ಹುಡುಗಿಯ ಬಾಯ್ ಫ್ರೆಂಡ್ ಕೂಡಾ ಸಾಥ್ ನೀಡಿದ ಬಗ್ಗೆ ಲಿಸಾ ಮಾಡಲಾದ ಅಧ್ಯಯನದಿಂದ ತಿಳಿದುಬಂದಿದೆ.

ಬ್ರೌನ್ ಮಿಲ್ಲರ್ ಎನ್ನುವ ಮಹಿಳೆ ಹೇಳುವಂತೆ ಈ “ಅತ್ಯಾಚಾರ ಎನ್ನುವುದು ಪುರುಷರು ಮಹಿಳೆಯ ಮೇಲೆ [Rape should not be viewed as a deviant sexual act, but as an aggressive and antisocial tool for men’s control over women.] ನಿಯಂತ್ರಣ ಹೇರಲು ಅನುಸರಿಸುವ ಸಮಾಜಬಾಹಿರ ವರ್ತನೆ” ಎಂದಿದ್ದಾಳೆ. ಇನ್ನೂ ಕೆಲವು ಚಿಂತಕರು ಅತ್ಯಾಚಾರ ಎನ್ನುವುದು ಕೇವಲ ಅದಕ್ಕೆ ಸಿಲುಕಿರುವ ಓರ್ವ ಮಾಹಿಳೆಗೆ ಮಾತ್ರ ಸೀಮಿತವಾದ ಸಂಗತಿ ಇದಲ್ಲ, ಅದು ಒಟ್ಟು ಹೆಣ್ಣು ಕುಲವನ್ನೇ ಘಾಸಿಗೊಳಿಸುವಂಥದು ಎನ್ನುತ್ತಾರೆ. ಆ ಮೂಲಕ ಅವರು ಇದೊಂದು ಲಿಂಗ ಸಂಬಂಧಿ ಮನ:ಪ್ರವೃತ್ತಿಯೂ ಹೌದು ಎನ್ನುವ ಅಭಿಪ್ರಾಯವನ್ನು ನೀಡಿದ್ದಾರೆ. ಚಾಪೆಲ್ ಎನ್ನುವ ಚಿಂತಕ ಮಾಡಲಾದ ಅಧ್ಯಯನದಂತೆ ಈ ಗ್ಯಾಂಗ್ ರೇಪಲ್ಲಿ ಕೇವಲ ಲೈಂಗಿಕ ತೀಟೆ ಮಾತ್ರ ಅಡಕವಾಗಿರದೇ ಇತರೇ ಬಗೆಯ ದೈಹಿಕ ಹಿಂಸೆಯಲ್ಲಿಯೂ ರೇಪಿಸ್ಟ್ ಗಳು ತೊಡಗುತ್ತಾರೆ ಎಂದಿರುವರು.

ಗ್ಯಾಂಗ್ ರೇಪಿಸ್ಟ್ ಗಳ ಲಕ್ಷಣಗಳೇನು? ಅವರ ವ್ಯಕ್ತಿತ್ವ ಎಂಥದು?

ಈ ಬಗೆಯ ಪ್ರಶ್ನೆಯನ್ನಿಟ್ಟುಕೊಂಡು ಬಹಳಷ್ಟು ಅಧ್ಯಯನಗಳು ಮುಂಚಿನಿಂದಲೂ ನಡೆದಿವೆ. ಈ ಬಗೆಯ ರೇಪಿಸ್ಟ್ ಗಳನ್ನು ಎಡ್ವರ್ಡ್ ಎನ್ನುವ ಚಿಂತಕರು [1983] national-post-danish-gang-rape-delhi‘ಅನಿಯಂತ್ರಿತ ಉತ್ತೇಜಿತರು’ ಎಂದಿರುವರು. ಸ್ಕಲ್ಲಿ ಮತ್ತು ಮರೊಲಾ ಎನ್ನುವವರು [1984] ಇವರನ್ನು ‘ಅಸಮತೋಲನದ ವ್ಯಕ್ತಿತ್ವದವರು’ ಎಂದಿದ್ದಾರೆ. ಬಹುತೇಕವಾಗಿ ಈ ರೇಪಿಸ್ಟ್ ಗಳು 30 ವರ್ಷ ವಯೋಮಿತಿಯ ಒಳಗಿನವರೇ ಹೆಚ್ಚು ಎನ್ನುವುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಚಾಪೆಲ್ ಎನ್ನುವ ಅಪರಾಧಶಾಸ್ತ್ರಜ್ಞ ಹೇಳುವ ಹಾಗೆ “ಈ ಬಗೆಯ ರೇಪಿಸ್ಟ್ ಗಳು ದಿಢೀರನೇ ಆದವರಲ್ಲ. ಸಾಮಾಜಿಕ ವ್ಯವಸ್ಥೆಯ ಬಗ್ಗೆ ರೋಸಿ ಹೋದವರು, ಈ ಮುಂಚೆ ಅಪರಾಧಿ ಕೃತ್ಯಗಳಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ತೊಡಗಿದವರಾಗಿರುತ್ತಾರೆ” ಎನ್ನುತ್ತಾರೆ. ಸ್ಕಲ್ಲಿ ಮತ್ತು ಮರೋಲಾ ಅವರು ಅಧ್ಯಯನ ಮಾಡಲಾದ 114 ರೇಪಿಸ್ಟ್ ಗಳಲ್ಲಿ 82 ಪ್ರತಿಶತದಷ್ಟು ಈ ಮುಂಚೆಯೇ ಬೇರೆ ಬೇರೆ ಅಪರಾಧಿ ಪ್ರಕರಣಗಳಲ್ಲಿ ಸಿಲುಕಿರುವವರಾಗಿದ್ದರು. ಇನ್ನು ಬಹುತೇಕವಾಗಿ ಗ್ಯಾಂಗ್ ರೇಪ್ ಗಳಲ್ಲಿ ಭಾಗಿಯಾದವರು ಒಂದು ಬಗೆಯ ತಯಾರಿಯೊಂದಿಗೆ ಈ ಕೃತ್ಯದಲ್ಲಿ ತೋಡಗಿದ್ದೇ ಹೆಚ್ಚು. ಯಾವಾಗ, ಎಲ್ಲಿ ಮತ್ತು ಹೇಗೆ ಎನ್ನುವ ಬಗ್ಗೆ ವ್ಯವಸ್ಥಿತವಾದ ಸಂಚು ರೂಪಿಸಲಾಗಿರುತ್ತದೆ. [ಕ್ರಿಮಿನಲ್ ಬಿಹೇವಿಯರ್ – ಕರ್ಟ್ ಬಾರ್ಟಲ್ ಮತ್ತು ಅನ್ನೇ ಬರ್ಟಲ್ ಪುಟ- 203]

ತಡೆಗಟ್ಟಲು ಸಾಧ್ಯವಿಲ್ಲವೆ?

ಈ ಗ್ಯಾಂಗ್ ರೇಪ್ ಗಳನ್ನು ಒಟ್ಟಾರೆ ತಡೆಯಲು ಸಾಧ್ಯವಿಲ್ಲದಿದ್ದರೂ ನಿಯಂತ್ರಣವಂತೂ ಮಾಡಬಹುದು.

  • ಮಹಿಳೆಯ ಬಗೆಗಿನ ಗೌರವಾದಾರಗಳನ್ನು ಮತ್ತೆ ಮತ್ತೆ ತಿಳಿಹೇಳಬೇಕು
  • ಕಾನೂನನ್ನು ಇನ್ನಷ್ಟು ಸಶಕ್ತಗೊಳಿಸಬೇಕು
  • ಹೆಚ್ಚೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಬೇಕು.
  • ಪೋಲಿಸು-ಕಾನೂನು-ನ್ಯಾಯಾದೀಶರು ಮತ್ತು ಮಹಿಳಾ ಸಂಘಟನೆಗಳ ನಡುವೆ ಆಗಾಗ ಸಂವಾದ ಏರ್ಪಡಬೇಕು
  • ಈ ಬಗೆಯ ಅಪರಾಧಗಳ ಕಾರ್ಯಾಚರಣೆ ತೀಕ್ಷ್ಣವಾಗಬೇಕು, ಹೆಚ್ಚು ಚುರುಕಾಗಬೇಕು
  • ಈ ವಿಷಯದಲ್ಲಿ ನುರಿತ ಮಹಿಳೆಯರನ್ನು ಹೆಚ್ಚೆಚ್ಚು ಪೋಲಿಸ್ ಇಲಾಖೆಯಲ್ಲಿ ನೇಮಿಸಬೇಕು
  • ಮಹಿಳಾ ಸಂಘಟನೆಗಳು ಅತ್ಯಾಚಾರಕ್ಕೊಳಗಾದ ಮಹಿಳೆಗೆ ನ್ಯಾಯ ಒದಗಿಸಲು ಪಟ್ಟು ಬಿಡದೇ ಹೋರಾಡಬೇಕು
  • ಈ ವಿಷಯವಾಗಿ ಭ್ರಷ್ಟರಾಗುವವರನ್ನು ತಕ್ಷಣ ಅಮಾನತುಗೊಳಿಸಬೇಕು
  • ಮಾಧ್ಯಮಗಳು ಈ ಬಗೆಯ ಸುದ್ಧಿಯನ್ನು ತೋರಿಸುವಂತೆಯೇ ಅಪರಾಧಿಗೆ ಶಿಕ್ಷೆಯಾದಾಗಲೂ ಅದನ್ನು ಮತ್ತೆ ಮತ್ತೆ ಎತ್ತಿ ತೋರಿಸಬೇಕು.
  • ಅತಿ ಮುಖ್ಯವಾಗಿ ಇಂಟರ್ನೆಟ್ ನಲ್ಲಿಯ ಪೋರ್ನ್ ವಿಡಿಯೋ ಗಳ ಮೇಲೆ ನಿಷೇಧ ಹೇರಬೇಕು.
  • ಸಿನೇಮಾದಲ್ಲಿ ಅಶ್ಲೀಲ ಮತ್ತು ಅತ್ಯಾಚಾರದ ದೃಶ್ಯಗಳಿರದಂತೆ ನಿರ್ಬಂಧ ಹೇರಬೇಕು.

ಹೀಗೆಲ್ಲಾ ಮಾಡುವ ಮೂಲಕ ಈ ಅತ್ಯಾಚಾರದ ವೇಗವನ್ನು ಕಡಿಮೆ ಮಾಡಬಹುದು. ಆದರೆ ಸಂಪೂರ್ಣವಾಗಿ ಇಲ್ಲವಾಗಿಸುವದು ಕಷ್ಟ. ಅತ್ಯಾಚಾರದಂತ ನಿಸರ್ಗಕ್ಕೆ ವ್ಯತಿರಿಕ್ತವಾದ ಈ ಗುಣ ಮನುಷ್ಯನಲ್ಲಿ ಮಾತ್ರ ಇದೆ. ಇತರೇ ಕೀಳು ಪ್ರಾಣಿಗಳಲ್ಲಿ ಈ ಬಗೆಯ ಕೃತ್ಯವನ್ನು ನಾವು ಕಾಣುವದಿಲ್ಲ. ನಿತ್ಯದ ಸುದ್ದಿಪತ್ರಿಕೆಗಳನ್ನು ಓದಲು ರೇಜಿಗೆ ಎನಿಸುವಂತೆ ಅತ್ಯಾಚಾರದ ಪ್ರಕರಣಗಳು ನಮ್ಮಲ್ಲಿ ಜರಗುತ್ತಿವೆ. ಮಾಧ್ಯಮಗಳು ಇನ್ನು ಮುಂದೆ ಅತ್ಯಾಚಾರ ಎಸಗಿದವರು ಅನುಭವಿಸಿದ ಶಿಕ್ಷೆಯನ್ನು ಹೆಚ್ಚೆಚ್ಚು ಭಿತ್ತರಿಸುವಂತಾಗಲಿ. ಅತ್ಯಾಚಾರದ ವಿಷಯದಲ್ಲಿ ಆ ಬಗೆಯ ಕ್ರಿಯೆಗೆ ಇಳಿಯುವವರಲ್ಲಿ ಭಯ ಬಿತ್ತುವ ಅಗತ್ಯವಿದೆ. ಅದು ಸಮಾಜದ ಯಾರಿಂದಲಾದರೂ ಆಗಲಿ, ಯಾವುದರಿಂದಾದರೂ ಆಗಲಿ. ಒಟ್ಟಾರೆ ಹಾವು ಸಾಯಬೇಕಷ್ಟೆ.

ಜೀವನವೆಂದರೆ ಏನು, ನಡೆದಾಡುವ ನೆರಳು

– ಬಿ.ಶ್ರೀಪಾದ ಭಟ್

Hell is empty and all devils are here – Shakespeare.

ಹಾಲಿವುಡ್ ನಟ ಎಲಿ ವಲಾಚ್ ಮೊನ್ನೆ ತನ್ನ 98ನೇ ವಯಸ್ಸಿನಲ್ಲಿ ತೀರಿಕೊಂಡ. ಈ ಸುದ್ದಿಯನ್ನು ಓದಿಗಾಗ ಕೂಡಲೆ ನೆನಪಾದದ್ದು ಅರವತ್ತರ ದಶಕದಲ್ಲಿ ತೆರೆಕಂಡ ಮೂರು ಕೌಬಾಯ್ ಚಿತ್ರಗಳು. A Fistful of Dollars,  For a Few Dollars More, The Good, The Bad and The Ugly ಎನ್ನುವ ಈ ಮೂರು ಚಿತ್ರಗಳು Dollars Trilogy ಎಂದೇ ಖ್ಯಾತಿ ಹೊಂದಿದ್ದವು. ಈ ಮೂರರಲ್ಲಿಯೂ ಕ್ಲಿಂಟ್ ಈಸ್ಟ್‌ವುಡ್ dollars-trilogyಅಭಿನಯಿಸಿದ್ದರೆ, ಕಡೆಯ ಎರಡು ಚಿತ್ರಗಳಲ್ಲಿ ಲೀ ವಾನ್ ಕ್ಲೀಫ್, ಮತ್ತು The Good The Bad and The Ugly ಸಿನಿಮಾದಲ್ಲಿ ವಲಾಚ್ Ugly ‘ಟುಕೋ’ ಪಾತ್ರದಲ್ಲಿ ಅಭಿನಯಿಸಿದ್ದ. ಈ ಮೂರು ಸಿನಿಮಾಗಳನ್ನು ಸೆರಿಗೋ ಲಿಯಾನ್ ನಿರ್ದೇಶಿಸಿದ್ದ. ಎನ್ನಿಯೋ ಹಿನ್ನೆಲೆ ಸಂಗೀತ ನೀಡಿದ್ದ. ಹೌದು ಮೊದಲೇ ಹೇಳಿಬಿಡಬೇಕು. ಈ ಮೂರು ಸಿನಿಮಾಗಳ ಕ್ರೇಜ್ ಇದ್ದದ್ದು ಅವುಗಳ ಥೀಮ್ ಮ್ಯೂಸಿಕ್‌ನಲ್ಲಿ. ಈ ಥೀಮ್ ಮ್ಯೂಸಿಕ್ ಈ ಸಿನಿಮಾಗಳ ಟ್ರಂಪ್ ಕಾರ್ಡ್. ಇಂದಿಗೂ ಆ ಸಿನಿಮಾಗಳನ್ನು ನೋಡಿದವರು ಗುನುಗುವುದು ಆ ಥೀಮ್ ಮ್ಯೂಸಿಕ್ ಅನ್ನು. ಸಣ್ಣ ತೋಳವೊಂದರ ಊಳಿಡುವ ಸದ್ದನ್ನು ಹೋಲುತ್ತಿದ್ದ ಈ ಥೀಮ್ ಮ್ಯೂಸಿಕ್ The Good, The Bad and The Ugly ಸಿನಿಮಾದಲ್ಲಿ The Good ಬ್ಲಾಂಡೀ ಪಾತ್ರಧಾರಿ ಈಸ್ಟ್‌ವುಡ್‌ಗೆ ಹಿನ್ನೆಲೆಯಲ್ಲಿ ಕೊಳಲನ್ನು ಬಳಸಿದ್ದರೆ,, The Bad ಪಾತ್ರಧಾರಿ ಕ್ಲೀಫ್‌ಗೆ ವಿಚಿತ್ರ ಬಗೆಯ ವಾದ್ಯವನ್ನು (ಹೆಸರು ಗೊತ್ತಿಲ್ಲ) ಬಳಸಿದ್ದರೆ, The Ugly ಟುಕೋ ಪಾತ್ರಧಾರಿ ವಲಾಚ್‌ಗೆ ಊಳಿಡುವ ಮನುಷ್ಯರ ಧ್ವನಿಗಳನ್ನು ಬಳಸಿದ್ದು ವಿಶಿಷ್ಟವಾಗಿತ್ತು. ಈ “ಥೀಮ್ ಮ್ಯೂಸಿಕ್” ಚಿತ್ರದುದ್ದಕ್ಕೂ ಆವರಿಸಿಕೊಳ್ಳುತ್ತದೆ. ಥೀಮ್ ಮ್ಯೂಸಿಕ್ ಅನ್ನು ಚಿತ್ರದೊಂದಿಗೆ ಬೇರ್ಪಡಿಸಿ ನೋಡಿದರೆ ಇಡೀ ಸಿನಿಮವೇ ನಿರ್ಜೀವವಾಗುತ್ತದೆ. ಇದು ಇಡೀ ಸಿನಿಮಾಗೆ ಒಂದು ವಿಶಿಷ್ಟ ಐಡೆಂಟಿಟಿಯನ್ನು ತಂದುಕೊಟ್ಟಿದ್ದದನ್ನು ಮರೆಯುವ ಹಾಗೆಯೇ ಇಲ್ಲ. Eastwood_Good_Bad_and_the_UglyFor a Few Dollar More ಸಿನಿಮಾಗಾಗಿ ಬಳಸಿದ ಸೌಂಡ್ ಟ್ರಾಕ್ ಸಹ ಅಷ್ಟೇ ಜನಪ್ರಿಯವಾಗಿತ್ತು. ಕನ್ನಡದ ಬಂಧನ ಸಿನಿಮಾದ ಹಾಡು “ಬಣ್ಣ, ಬಣ್ಣ, ನನ್ನ ಒಲವಿನ ಬಣ್ಣ, ನೀನಕ್ಕರೆ ಹಸಿರು, ಉಲ್ಲಾಸದ ಉಸಿರು” ಸಾಲುಗಳಲ್ಲಿ ಬರುವ ರಾಗ,ಧಾಟಿ,ಏರಿಳಿತ ಮತ್ತು ಬಂದಿಶ್ ಅನ್ನು ಸಂಪೂರ್ಣವಾಗಿ For a Few Dollars More ಸಿನಿಮಾದಿಂದ ನಕಲು ಮಾಡಿದ್ದು.

The Good, The Bad and The Ugly ಸಿನಿಮಾದಲ್ಲಿ ನಿದೇಶಕ ಲಿಯಾನ್ ಶಬ್ದಕ್ಕಿಂತಲೂ ದೃಶ್ಯಗಳನ್ನು ಹೆಚ್ಚಿಗೆ ಬಳಸಿದ್ದ. ಅದನ್ನೇ ನಂಬಿದ್ದ ಮತ್ತು ಯಶಸ್ವಿಯಾಗಿದ್ದ. ಆರಂಭದ ದೃಶ್ಯವಾದ ವಿಶಾಲವಾದ ಪಶ್ಚಿಮದ ಕುರುಚಲು ಬಯಲನ್ನು ತೋರಿಸುತ್ತಾ ಕ್ಯಾಮೆರ ಎಲ್ಲಿಯೂ ಕಟ್ ಆಗದೆ ನಿಧಾನವಾಗಿ ದೈನ್ಯತೆಯ ಮುಖದ ಅಸಹಾಯಕ ವ್ಯಕ್ತಿಯ ಮೇಲೆ ಕೇಂದ್ರೀಕೃತಗೊಳ್ಳುತ್ತದೆ. ಅಷ್ಟೇ ನಿರ್ದೇಶಕ ಮಾಡಿದ್ದು.ಮಿಕ್ಕಿದ್ದೆಲ್ಲಾ ಚಿತ್ರಕತೆ ನಿಭಾಯಿಬಿಟ್ಟಿತು. ಯಾವುದೇ ದೊಡ್ಡ ದೊಡ್ಡ ಆಶಯಗಳನ್ನು ಇಟ್ಟುಕೊಳ್ಳದೆ ಕೇವಲ ಕಾಗಕ್ಕ ಗುಬ್ಬಕ್ಕ ಕತೆಯನ್ನು ಹೇಳುತ್ತಾ ಲಿಯಾನ್ ಇಡೀ ಸಿನಿಮಾದುದ್ದಕ್ಕೂ ಅನೇಕ ಸಂಕೇತಗಳನ್ನು ಪರಿಣಾಮಕಾರಿಯಾಗಿ ಕಟ್ಟುತ್ತಾನೆ. The Ugly ಟುಕೋ ಪಾತ್ರ ಒಂದು ಬಗೆಯ ಬಫೂನ್‌ಗಿರಿ ಕ್ರೌರ್ಯದ ಅಭಿನಯವನ್ನು ಬೇಡುತ್ತಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದು ವಲಾಚ್. ಆತ ಬಫೂನ್‌ಗಿರಿಕ್ರೌರ್ಯದ ಪಾತ್ರವೇ ತಾನಾಗಿದ್ದ. ಇಡೀ ಸಿನಿಮಾದ ಅರ್ಧಕ್ಕಿಂತಲೂ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡಿದ್ದ ವೆಲಾಚ್ ಪ್ರತಿ ಫ್ರೇಮಿನಲ್ಲೂ ಮುಂದೆ ಈತ ಏನೋ ಮಾಡುತ್ತಾನೆ ಎಂದು ಕಾಯುವಂತೆ ಅಭಿನಯಿಸಿದ್ದ. ಒಂದು ದೃಶ್ಯದಲ್ಲಿ ಈತನ ಮೇಲೆ ಸೇಡು ತೀರಿಸಿಕೊಳ್ಳಲು ಎಂಟು ತಿಂಗಳು ಕಾಯುತ್ತಿದ್ದ ಬಾಡಿಗೆ ಕೊಲೆಗಾರನ ಕೈಯಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ವಲಾಚ್ ಸಿಕ್ಕಿಕೊಳ್ಳುತ್ತಾನೆ. ಆ ಬಾಡಿಗೆ ಕೊಲೆಗಾರ ತಾನು ಹೇಗೆ ವಲಾಚ್‌ನನ್ನು ಕೊಲೆ ಮಾಡಲು ಎಂಟು ತಿಂಗಳುಗಳ ಕಾಲ ಹುಡುಕುತ್ತಿದ್ದೆ ಎಂದು ವಿವರಿಸುತ್ತಿರುವಾಗಲೇ ವಲಾಚ್ ತನ್ನ ಪಿಸ್ತೂಲಿನಿಂದ Eli_Wallach_The_Uglyಬಾಡಿಗೆ ಕೊಲೆಗಾರನನ್ನೇ ಮುಗಿಸಿಬಿಡುತ್ತಾನೆ. ನಂತರ ಬಾತ್ ಟಬ್‌ನಿಂದ ಮೇಲಕ್ಕೇಳುತ್ತಾ ವಲಾಚ್ “If you want to shoot, shoot. Don’t talk” ಎಂದು ಬಫೂನ್‌ಗಿರಿಕ್ರೌರ್ಯದ ಶೈಲಿಯಲ್ಲಿ ಹೇಳುವ ಡೈಲಾಗ್ ಇಡೀ ಚಿತ್ರದ ಭಾಷ್ಯೆಯನ್ನು ಸಂಕೇತಿಸುತ್ತದೆ. ಇದೇ ಭಾಷ್ಯೆಯನ್ನೇ The Good ಬ್ಲಾಂಡೀ ಪಾತ್ರಧಾರಿ ಈಸ್ಟ್‌ವುಡ್ ಇಡೀ ಚಿತ್ರದುದ್ದಕ್ಕೂ ತನ್ನ ನಡುವಳಿಕೆಗಳಿಂದಲೇ ನಿರ್ವಹಿಸುತ್ತಾ ಹೋಗುತ್ತಾನೆ. ಈಸ್ಟ್‌ವುಡ್ ಎಲ್ಲಿಯೂ ಹೆಚ್ಚು ಮಾತನಾಡುವುದಿಲ್ಲ. ತೊಡೆಗೆ, ಕೈತೋಳಿಗೆ ಬೆಂಕಿ ಕಡ್ಡಿಯನ್ನು ಗೀರಿ ಚುಟ್ಟಾವನ್ನು ಹತ್ತಿಸುವ ಈಸ್ಟ್‌ವುಡ್‌ನ ಆ ಸ್ಟಂಟ್ ಆ ಕಾಲಕ್ಕೆ ತುಂಬಾ ಜನಪ್ರಿಯವಾಗಿತ್ತು. ಈಸ್ಟ್‌ವುಡ್ “Cut Throat” ಗುಣವುಳ್ಳ ತಣ್ಣಗಿನ ಕ್ರೌರ್ಯ ಸಹ ಇಡೀ ಚಿತ್ರದ ಗುಣವೂ ಹೌದು. ಅಲ್ಲಿ ಎಲ್ಲರೂ ‘Cut Throat’ ಗುಣವುಳ್ಳವರೇ. ಈ ಸಿನಿಮಾದಲ್ಲಿ ಮಮತೆಗೆ ಸ್ಥಾನವೇ ಇಲ್ಲ. ಮಮತೆಯ ಸಂಕೇತವಾಗಿ ಬರುವ ವಲೇಚ್‌ನ ಅಣ್ಣನ ಪಾತ್ರವೂ ಸಹ ಕೇವಲ ಕೆಲವು ಸೆಕೆಂಡುಗಳಷ್ಟು. ಅದು ಸಿನಿಮಾದ ಕತೆಯಲ್ಲಿ ಬೆರೆಯುವುದೇ ಇಲ್ಲ. ಆದರೂ ತಣ್ಣಗಿನ ಕ್ರೌರ್ಯದ ಬ್ಲಾಂಡೀ ಈಸ್ಟ್‌ವುಡ್ ಸಿನಿಮಾದ ಕೊನೆಯ ಭಾಗದಲ್ಲಿ ಯುದ್ಧದಲ್ಲಿ ಹೋರಾಡುತ್ತ ಮಡಿದ ಸೈನಿಕರನ್ನು ಕಂಡು ಬೇಸರದಿಂದ “ಛೇ ಎಷ್ಟೊಂದು ದೇಹಗಳು ಅನಗತ್ಯವಾಗಿ ಹಾಳಾಗುತ್ತಿವೆ” ಎಂದು ಉದ್ಗರಿಸುತ್ತಾನೆ. ಸಾಯುತ್ತಿರುವ ಸೈನಿಕನೊಬ್ಬನಿಗೆ ಉಪಚರಿಸುವ ದೃಶ್ಯ ಸಹ ಹೃದಯಂಗಮವಾದದ್ದು. ತಣ್ಣಗಿನ ಕ್ರೌರ್ಯದ ಬ್ಲಾಂಡೀ ಹೀಗೆ ಇರಬಾರದೆ ಎಂದೂ ಅನಿಸುತ್ತದೆ. ಆದರೆ ಮತ್ತೆ ತನ್ನ ಕೊಲೆಗಾರನ ವ್ಯಕ್ತಿತ್ವಕ್ಕೆ ಮರಳುವ ಬ್ಲಾಂಡೀ ಸಿನಿಮಾದ ಧೀರ್ಘವಾದ ಕ್ಲೈಮಾಕ್ಸ್ ದೃಶ್ಯಕ್ಕೆ ಮರಳುತ್ತಾನೆ. ಆ ಕ್ಲೈಮಾಕ್ಸ್‌ನಲ್ಲಿ ಸ್ಮಶಾನದಲ್ಲಿ ಅಡಗಿಸಿಟ್ಟ ಬಂಗಾರಕ್ಕಾಗಿ ಅಚಾನಕ್ಕಾಗಿ ಕೂಡಿಕೊಳ್ಳುವ ಮೂವರು ಕೊಲೆಗಾರರ ಕೈ ಪಿಸ್ತೂಲಿನ ಮೇಲಿರುತ್ತದೆ. ಒಬ್ಬನು ಗುಂಡು ಹಾರಿಸಿದರೆ ಮಿಕ್ಕವರೆಲ್ಲರೂ ಗುಂಡು ಹಾರಿಸಿ ಎಲ್ಲರೂ ಸಾಯುತ್ತಾರೆ. ಈ ಕುತೂಹಲವನ್ನು ಎಷ್ಟು ಸೆಕೆಂಡುಗಳ ಕಾಲ ಅಥವಾ ಎಷ್ಟು ನಿಮಿಷಗಳ ಕಾಲ ಹಿಡಿದಿಡಬಹುದು? ಆದರೆ ಇದನ್ನು ನಿರ್ದೇಶಕ ಲಿಯೋನ್ ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಾನೆ. The Good, The Bad And The Uglyಇದೇ ಹಾದಿಯಲ್ಲಿ ಬಂದ ನೂರಾರು ಸಿನಿಮಾಗಳ ನಂತರ ಇಂದು ಈ ದೃಶ್ಯ ಸಾಮಾನ್ಯವಾಗಿರಬಹುದು. ಆದರೆ ಅದು Trend Setter ಆಗಿದ್ದನ್ನು ಮರೆಯಲು ಸಾಧ್ಯವೇ? ಈ ಸಿನಿಮಾದ ಕ್ಲೈಮಾಕ್ಸ್‌ನಲ್ಲಿ ಬಂಗಾರಕ್ಕಾಗಿ ಹತಾಶೆಯಿಂದ ಸ್ಮಶಾನದಲ್ಲಿ ಅಗೆಯುತ್ತಿರುವ ವಲೇಚ್‌ಗೆ ಈಸ್ಟ್‌ವುಡ್ “ಗೆಳೆಯ, ಈ ಜಗತ್ತಿನಲ್ಲಿ ಎರಡು ಬಗೆಯ ವ್ಯಕ್ತಿತ್ವದ ಜನರಿರುತ್ತಾರೆ. ತುಂಬಿದ ಪಿಸ್ತೂಲನ್ನು ಹೊಂದಿದ ಜನ, ಮತ್ತೊಂದು ಸದಾ ಅಗೆಯುತ್ತಿರುವವರು. ನೀನು ಅಗೆಯುತ್ತಿರು” ಎಂದು ಹೇಳುತ್ತಾನೆ. ನಂತರ ವಲೇಚ್‌ನ ತಲೆಯ ಮೇಲೆ ನೇಣು ಕುಣಿಕೆ ನೇತಾಡುತ್ತಿರುತ್ತದೆ. ಇಡೀ ಚಿತ್ರದುದ್ದಕ್ಕೂ ಬರುವ ಈ ನೇಣು ಕುಣಿಕೆಯ ದೃಶ್ಯಗಳು ವ್ಯಕ್ತಿಯೊಬ್ಬನ ಅತ್ಮಹತ್ಯಾತ್ಮಕ ನಡುವಳಿಕೆಗಳನ್ನು ಸಾಂಕೇತಿಕವಾಗಿ ಹೇಳುತ್ತಾ ಹೋಗುತ್ತವೆ.

ಈ ಸಿನಿಮಾದ ನಂತರ ಈಸ್ಟ್‌ವುಡ್ ಖ್ಯಾತ ನಟ ಮತ್ತು ನಿರ್ದೇಶಕನಾಗಿದ್ದು, ವಲೇಚ್ ಖ್ಯಾತ ನಟನಾಗಿದ್ದು ಇಂದು ಇತಿಹಾಸ. ಆರಂಭದ ನಲವತ್ತು ಮತ್ತು ಐವತ್ತರ ದಶಕಗಳಲ್ಲಿ ಖ್ಯಾತ ರಂಗ ನಟರಾಗಿದ್ದ, ಖ್ಯಾತ ನಟಿ ಮರ್‍ಲಿನ್ ಮನ್ರೋಳ ಮೊದಲ ಗೆಳೆಯರಾಗಿದ್ದ (ಗೆಳೆಯ ಮಾತ್ರ ಎಂದು ವಲೇಚ್ ಒತ್ತಿ ಹೇಳುತ್ತಿದ್ದ!) ವಲೇಚ್‌ರನ್ನು ಇಂದು method acting ದಿಗ್ಗಜರಾದ ಮರ್‍ಲಿನ್ ಬಾಂಡ್ರೋ, ಅಲ್ ಪೆಸಿನೋ, ರಾಬರ್ಟ ಡಿ ನೈರೋ ರಂತಹವರ ಸಾಲಿನಲ್ಲಿ ನೆನಯಲಾಗುತ್ತದೆ.

ಅಂದ ಹಾಗೆ, The Good, The Bad and The Ugly (1966) ಚಿತ್ರಕ್ಕಿಂತ ಮೊದಲೇ ಅಕಿರೋ ಕುರುಸಾವಾನ “ಸೆವೆನ್ ಸಮುರಾಯ್ಸ್” ಚಿತ್ರದ ಹಾಲಿವುಡ್ ರಿಮೇಕ್ “The Magnificent Seven” (1960) ಚಿತ್ರದಲ್ಲಿ ಖಳನಾಯಕನಾಗಿ ವಿಜೃಂಭಿಸಿದ್ದು ಸಹ ಇದೇ ಎಲಿ ವಲೇಚ್.