ಗಾಜಾಪಟ್ಟಿಯಲ್ಲಿ ಬೆಂಕಿ ಆರಲಿ, ಹೂವು ಅರಳಲಿ


– ಡಾ.ಎಸ್.ಬಿ. ಜೋಗುರ


ಇಸ್ರೇಲ್ ಮತ್ತು ಗಾಜಾಪಟ್ಟಿ ನಿರಂತರವಾಗಿ ಹೊತ್ತಿ ಉರಿಯುತ್ತಿದೆ. ಶಾಂತಿ ಸಂಧಾನಕ್ಕಾಗಿ ಪ್ರಸ್ತಾಪವಾಗುವ ಯಾವ ಮಾತುಗಳೂ ಫಲಪ್ರದವಾಗುತ್ತಿಲ್ಲ. ಹಮಸ್ ನ ಮಿಲಿಟರಿ ಅಧಿಕಾರಿಗಳು ತಾವು ಸಾಯಲು ಕಾತರರಾಗಿದ್ದೇವೆ ಎನ್ನುವ ಮೂಲಕ ಇನ್ನಷ್ಟು ಬಂಡುಕೋರ ಚಟುವಟಿಕೆಗಳು ಅಲ್ಲಿ ಭುಗಿಲೇಳಲು ಕಾರಣವಾದಂತಾಗಿದೆ. ಫೆಲಿಸ್ತೆನಿಯನ್ನರ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಫೆಲಿಸ್ತೇನಿಯನ್ನರ ಜೊತೆಗೆ ಹೋಲಿಸಿದಾಗ ಇಸ್ರೇಲಿಯನ್ನರ ಸಾವಿನ ಪ್ರಮಾಣ ತೀರಾ ಕಡಿಮೆ. ಇಸ್ರೇಲಿಗಳು ಫೆಲಿಸ್ತೇನಿಯನ್ನರ ಮೇಲೆ ನಿರಂತರವಾಗಿ ಬಾಂಬಿನ ಸುರಿಮಳೆಗರೆಯುತ್ತಿದ್ದಾರೆ. ಈ ಗಾಜಾ ಪಟ್ಟಿಯಲ್ಲಿ ನಿರಂತರವಾಗಿ ಕಳೆದ ಆರೇಳು ದಶಕಗಳಿಂದಲೂ ಆಗಾಗ ಹೀಗೆ ಹಿಂಸಾ ಪ್ರಕರಣಗಳು ಜರುಗುತ್ತಲೇ ಇವೆ. ಇದು ಒಂದು ಶತಮಾನದ ಬಗೆಹರಿಯದ ಸಂಘರ್ಷದಂತಿದೆ. 1948 ರಿಂದಲೂ ಈ ಇಸ್ರೇಲಿಗಳು ಮತ್ತು ಫೆಲಿಸ್ತೇನಿಯನ್ನರು ಇರೋ 143 ಕಿಲೋಮೀಟರ್ ವ್ಯಾಪ್ತಿಯ ಈ ಗಾಜಾಪಟ್ಟಿಯಲ್ಲಿಯೇ ಮುಸುಕಿನ ಗುದ್ದಾಟ ಮಾಡುತ್ತಾ ಬಂದವರು. ಹಾಗೆ ನೋಡಿದರೆ ಈ ಫೆಲಿಸ್ತೇನಿಯನ್ನರು ತೀರಾ ದೂರದ ಪ್ರದೇಶಗಳಿಂದ ವಲಸೆ ಬಂದವರಲ್ಲ. israel.gazaಗಾಜಾ ಪಟ್ಟಿಯ ಸಮೀಪದ ನೆಲೆಗಳಿಂದಲೇ ಇವರು ವಲಸೆ ಬಂದವರು 1967 ರ ಸಂದರ್ಭದಲ್ಲಿ ಅವರು ಅಲ್ಲಿ ಉಳಿಯುವಲ್ಲಿ ಯಾವ ತಕರಾರೂ ಇಲ್ಲ ಎನ್ನುವಂತಹ ಕರಾರುಗಳು ಇರುವಾಗಲೂ ಪದೇ ಪದೇ ಮತ್ತೆ ಅಂತರರಾಷ್ಟ್ರೀಯ ಒಪ್ಪಂದಗಳು ಜರುಗಿದ ಮೇಲೂ ಇಲ್ಲಿ ಸಂಘರ್ಷ ಕೊನೆಯಾಗಿಲ್ಲ. ನಿನ್ನೆ ಮೊನ್ನೆಯಷ್ಟೇ ತಾತ್ಕಲಿಕವಾದ ಶಾಂತಿ ಏರ್ಪಡುವ ಮಾತುಗಳು ಕೇಳಿ ಬರುತ್ತಿರುವಂತೆ ಹಮಸ್‌ನ ಮಿಲಿಟರಿ ಕಮಾಂಡರ್ ಅದು ಸಾಧ್ಯವಿಲ್ಲ, ನಾವು ಸಾಯಲು ತಯಾರಾಗಿದ್ದೇವೆ ಎನ್ನುವ ಮೂಲಕ ಸುಮಾರು 32 ಫೆಲಿಸ್ತೇನಿಯನ್ನರು ಅರ್ಧ ದಿನದಲ್ಲಿಯೇ ಸಾವಿಗೀಡಾಗಲು ಕಾರಣನಾದ. ಕಳೆದ ಜುಲೈ 8 ರಿಂದ ಇಲ್ಲಿಯವರೆಗೆ ಸುಮಾರು 1200 ರಷ್ಟು ಫೆಲಿಸ್ತೆನಿಯನ್ನರು ಈ ಬಾಂಬ್ ಧಾಳಿಗೆ ತುತ್ತಾದರೆ ಕೇವಲ 55 ಇಸ್ರೇಲಿಯನ್ನರು ಸಾವಿಗೀಡಾಗಿದ್ದಾರೆ.

ಹಮಸ್ ಮಿಲಿಟರಿ ಪಡೆಯನ್ನು ಕೆರಳುವಂತೆ ಮಾಡಿದ ಇನ್ನೊಂದು ಘಟನೆ ಸಂಯುಕ್ತ ರಾಷ್ಟ್ರ ಸಂಘದವರು ನಿರಾಶ್ರಿತರ ನೆಲೆಯಲ್ಲಿ ಸ್ಥಾಪಿಸಲಾದ ಶಾಲೆಯ ಮೇಲೆ ಬಾಂಬ್ ಹಾಕಿ ಅದನ್ನು ದ್ವಂಸ ಮಾಡಿದ್ದಲ್ಲದೇ ಕಿಂಡರ್ಗಾರ್ಟನ್ ಶಾಲೆಗಳ ಮೇಲೆ, ಆಸ್ಪತ್ರೆಗಳ ಮೇಲೆಯೂ ಧಾಳಿ ಮಾಡುವ ಮೂಲಕ ಚಿಕ್ಕ ಮಕ್ಕಳ ಸಾವು ನೋವಿಗೂ ಕಾರಣವಾಗಿರುವುದು. ಇಲ್ಲಿಯವರೆಗೆ ಹೀಗೆ ಧಾಳಿಗೆ ಸಿಲುಕಿ ಗಾಯಗೊಂಡವರ ಪ್ರಮಾಣ ಸುಮಾರು gaza6700 ರಷ್ಟಾಗಿದೆ ಎಂದು ಗಾಜಾದ ಆರೋಗ್ಯ ಇಲಾಖೆ ತಿಳಿಸಿರುವದಿದೆ. ಹಮಸ್ ಲೀಡರ್ ಮೊಹ್ಮದ್ ಡೆಫ಼ ಹೇಳುವಂತೆ ಮಂಗಳವಾರ ಒಂದೇ ದಿನ ಸುಮಾರು 100 ರಷ್ಟು ಫೆಲಿಸ್ತೇನಿಯನ್ನರನ್ನು ಸಾಯಿಸಲಾಯಿತು. ಗಾಜಾ ಪಟ್ಟಿಯಲ್ಲಿಯ ವಿದ್ಯುತ್ ಘಟಕದ ಮೇಲೆ ಬಾಂಬ್ ಧಾಳಿ ಮಾಡುವ ಮೂಲಕ ಅದನ್ನು ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಾಹಿಸದಂತೆ ಮಾಡಲಾಗಿದೆ ಈಗ ಅಲ್ಲಿ ಬರೀ ಹೊಗೆ ಮಾತ್ರ ಏಳುತ್ತಿದೆ ಎನ್ನುವ ಹಮಸ್ ನಾಯಕರು ಯಾವುದೇ ಕಾರಣಕ್ಕೂ ತಾವು ಶಾಂತಿಗಾಗಿ ಮುಂದಾಗುವದಿಲ್ಲ ಎನ್ನುತ್ತಿದ್ದಾರೆ.

ನಿರಂತರವಾದ ಬಾಂಬ್ ಧಾಳಿಯ ನಡುವೆ ಲಕ್ಷಗಟ್ಟಲೆ ಜನರು ನಿರಾಶ್ರಿತರಾಗಿದ್ದಾರೆ. ಸುಮಾರು 2 ಲಕ್ಷ ಜನರನ್ನು ಸಂಯುಕ್ತ ರಾಷ್ಟ್ರ ಸಂಘ ನಿರಾಶ್ರಿತರ ಕೇಂದ್ರಗಳಲ್ಲಿ ಮೇಲ್ವಿಚಾರಣೆ ನಡೆಸುತ್ತಿದೆ. ಇಲ್ಲಿ ನೂರಾರು ಜನ ಅಧಿಕಾರಿಗಳು ಅವರ ಆರೈಕೆಯಲ್ಲಿ ತೊಡಗಿದ್ದಾರೆ. ಈ ಅಧಿಕಾರಿಗಳಲ್ಲಿ ಕೂಡಾ ಕೆಲವರು ಸಾವೀಗೀಡಾಗಿರುವದಿದೆ. ಇತ್ತ ಇಸ್ರೇಲ್‌ದ ಮಿಲಿಟರಿ ಅಧಿಕಾರಿಗಳು ಈ ಫೆಲಿಸ್ತೇನಿಯನ್ನರಿಗೆ ಒಂದು ಪಾಠ ಕಲಿಸುವದಿದೆ, ಅವರನ್ನು ಈ ಬಾರಿ ಮಟ್ಟ ಹಾಕದೇ ಬಿಡುವದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗೆ ಇಸ್ರೇಲ್ ಮತ್ತು ಫೆಲಿಸ್ತೆನಿಯನ್ನರ ನಡುವಿನ ಹಗ್ಗ ಜಗ್ಗಾಟದ ನಡುವೆ ಇನ್ನೂ ಅದೆಷ್ಟು ಅಮಾಯಕರು ಹೆಣವಾಗಬೇಕೋ ಗೊತ್ತಿಲ್ಲ. ಈ ಯುದ್ಧ ಸಂಘರ್ಷಗಳೇ ಹಾಗೆ. ಬಂದೂಕಿನ ನಳಿಕೆಯಲ್ಲಿ ಗೂಡು ಕಟ್ಟಿರುವ ಅಮಾಯಕ ಗುಬ್ಬಿಗಳನ್ನು gaza-arab-silentಬದುಕಲು ಬಿಡುವದಿಲ್ಲ. ಇತ್ತ ಗೂಡು ಬಿಟ್ಟು ಹಾರುವಂತೆಯೂ ಇಲ್ಲ ಅತ್ತ ನಳಿಕೆಯಲ್ಲಿ ಉಳಿಯುವಂತೆಯೂ ಇಲ್ಲ. ಅವು ಅನುಭವಿಸುವ ಮನ:ಸ್ಥಿತಿ ಮಾತ್ರ ಮನ ಕಲುಕುವಂಥದು. ಯುದ್ಧ, ಸಂಘರ್ಷ ಭೂಮಿಯ ಮೇಲೆ ಯಾವುದೇ ಭಾಗದಲ್ಲಿ ಜರುಗಿದರೂ ಅದರ ಪರಿಣಾಮ ಮಾತ್ರ ತುಂಬಾ ಕಹಿಯಾಗಿರುತ್ತದೆ. ಕೊನೆಗೂ ಅಲ್ಲಿ ಹರಿಯುವುದು ಮನುಷ್ಯರ ರಕ್ತ. ಮಾನವನ ಹಿರಿಮೆಯ ಬಿಳಿ ಗೋಡೆಯ ಮೇಲಿನ ವಿಕಾರವಾದ ಕಪ್ಪು ಚುಕ್ಕೆಯಂತೆ ಈ ಯುದ್ಧ ಮತ್ತು ಸಂಘರ್ಷಗಳಿವೆ. ಧರ್ಮ, ಜನಾಂಗ, ಗಡಿ, ಭಾಷೆಯ ವಿಷಯಗಳು ಆಗಾಗ ಮನುಕುಲಕ್ಕೆ ತೊಡಕಾಗುವಂಥಾ ಪರಿಣಾಮಗಳನ್ನು ಬೀರುವದಿದೆ. ಚರಿತ್ರೆ ನಮ್ಮ ಎದುರು ಈ ಬಗೆಯ ಸಂಘರ್ಷಗಳ ಪರಿಣಾಮಗಳನ್ನು ನಿಚ್ಚಳವಾಗಿ ಅನಾವರಣಗೊಳಿಸಿದ್ದರೂ ನಾವು ಅದರಿಂದ ಪಾಠ ಕಲಿಯಲಿಲ್ಲ. ಒಂದು ಶತಮಾನದ ಹಿಂದೆ ಜಾಗತಿಕ ಮಹಾಯುದ್ಧಗಳ ಮೂಲಕ ಆರಂಭವಾದ ಸಂಘರ್ಷ ಇವತ್ತಿಗೂ ನಿಂತಿಲ್ಲ. ಅದೊಂದು ಪ್ರಕ್ರಿಯೆಯಾಗಿ ಸಾಗಿ ಬಂದಿದೆ. ಹಿರೋಶಿಮಾ ಮತ್ತು ನಾಗಾಸಾಕಿಯ ಮೇಲೆ ಉಂಟು ಮಾಡಿದ ಆ ಪುಟ್ಟ ಅಣುಬಾಂಬ್ ಗಳ ಪರಿಣಾಮವನ್ನು ಇಡೀ ವಿಶ್ವವೇ ಮರೆತಿಲ್ಲ. ಇಂದು ಇಡೀ ವಿಶ್ವದಲ್ಲಿ ಶಾಂತಿಗಾಗಿ ಬಾಯಾರಿದವರು ಅಪಾರ ಸಂಖ್ಯೆಯಲ್ಲಿದ್ದಾರೆ. ಕೊನೆಗೂ ಮನುಕುಲ ಉಳಿಯಬೇಕು ಮಾನವೀಯತೆ ಗೆಲ್ಲಬೇಕು ಯುದ್ಧ, ಹಿಂಸೆ, ಸಂಘರ್ಷ ಸೋಲಬೇಕು.

ಜಾಗತೀಕರಣದ ಸಂದರ್ಭದಲ್ಲಿ ವಿಶ್ವ ಮಾರುಕಟ್ಟೆಯ ಪ್ರಾಧಾನ್ಯತೆಯಷ್ಟೇ ಜಾಗತಿಕ ಶಾಂತಿ ಮುಖ್ಯವಾಗಬೇಕು. ಎಲ್ಲೋ ಗಾಜಾಪಟ್ಟಿಯಲ್ಲಿ ಜರುಗುವ ಹಿಂಸೆ, ಸಾವು ನೋವು ನಮಗೆ ಸಂಬಂಧಿಸಿಲ್ಲ ಎನ್ನುವ ಮನ:ಸ್ಥಿತಿಯೇ ಸರಿಯಲ್ಲ. ಇಡೀ ಜಗತ್ತು ಈ ಬಗೆಯ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ಈ ಕುರಿತು ಸೂಕ್ತ ತೀರ್ಮಾನಗಳನ್ನು ತಗೆದುಕೊಳ್ಳಬೇಕು. ಜಾಗತಿಕ ಸಮ್ಮತಿಯನ್ನು ನಿರಾಕರಿಸುವ ರಾಷ್ಟ್ರಗಳ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರಬೇಕು. ಹಿಂಸೆ ಮತ್ತು ಸಂಘರ್ಷದ ಕಾರಣಗಳನ್ನು ವಸ್ತು ನಿಷ್ಟವಾಗಿ ಅಧ್ಯಯನ ಮಾಡಿ ಕ್ರಮ ಕೈಗೊಳ್ಳಬೇಕು. ಜಾಗತೀಕರಣದ ಸಂದರ್ಭದಲ್ಲಿ ಒಳಿತಿಗಾಗಿ ಕೈ ಜೋಡಿಸುವ ಕ್ರಮಗಳೂ ಮುಖ್ಯವಾಗಬೇಕು.

Leave a Reply

Your email address will not be published. Required fields are marked *