Daily Archives: August 5, 2014

ಮರುಸೃಷ್ಟಿಸಬಲ್ಲ ಚೈತನ್ಯಗಳು ಗಂಡಾಂತರದಲ್ಲಿ


– ರೂಪ ಹಾಸನ


“ಸಂಪನ್ಮೂಲದ ಅತಿಯಾದ ಬಳಕೆ, ಕಾಳ್ಗಿಚ್ಚು ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳಾದ ಭಾರತದ ಹಿಮಾಲಯ ಶ್ರೇಣಿ, ಪಶ್ಚಿಮಘಟ್ಟ ಶ್ರೇಣಿ, ಈಶಾನ್ಯ ಪ್ರದೇಶಗಳು ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಸ್ಯ ಮತ್ತು ಜೀವ ಪ್ರಭೇದಗಳು ತೀವ್ರ ಅಪಾಯಕ್ಕೆ ಸಿಲುಕಿವೆ”…

…ಎಂದು ಮೊನ್ನೆ ಬಿಡುಗಡೆಯಾದ ನಮ್ಮ ಪರಿಸರ ಸಚಿವಾಲಯದ ವರದಿ ಎಚ್ಚರಿಕೆ ನೀಡಿದೆ. 45000 ಸಸ್ಯ ಪ್ರಭೇದಗಳು ಮತ್ತು 91000 ಜೀವಪ್ರಬೇಧಗಳ ತವರಾದ ಭಾರತದಲ್ಲಿ ಮುಂದಿನ ಒಂದೆರಡು ದಶಕಗಳಲ್ಲಿ ಅಪರೂಪದ ಹಲವು ಜೀವವೈವಿಧ್ಯಗಳು ಶಾಶ್ವತವಾಗಿ ನಾಶವಾಗಬಹುದೆಂದು ವರದಿ ಆತಂಕಿಸಿದೆ. ಹೀಗೇ ಮುಂದುವರೆದರೆ……. ಹತ್ತಿರದಲ್ಲೇ……. sabah-malaysia-pygmy-elephantsನಾಶವಾಗುವ ಸರದಿ ಮನುಷ್ಯನಿಗೂ ಬರಬಹುದೇನೋ? ಇದಕ್ಕೆಲ್ಲಾ ಕಾರಣರಾರು? ಯಾರೋ ಕಾಣದ ಲೋಕದವರಲ್ಲ……ನಾವೇ! ‘ಬೇಕು’ ರಾಕ್ಷಸರು!

ಯಾಕೋ ಮೊನ್ನೆಯಿಂದ ಮೈದಾಸನ ಕಥೆ ಮತ್ತೆ ಮತ್ತೆ ನೆನಪಾಗುತ್ತಿದೆ. ಅದು ನಿಮಗೂ ಗೊತ್ತಿರುವಂಥದ್ದೇ…. ಮತ್ತೊಮ್ಮೆ ನೆನಪಿಸುತ್ತಿದ್ದೇನಷ್ಟೇ. ಒಂದೂರಿನಲ್ಲಿ ಮೈದಾಸ ಎಂಬೊಬ್ಬ ರಾಜ ಇದ್ದನಂತೆ. ಅವನಿಗೆ ಚಿನ್ನದ ಬಗ್ಗೆ ಅತೀ ಆಸೆ. ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ಆ ರಾಜ್ಯದ ಖಜಾನೆಗಳಿಂದ ಚಿನ್ನ, ವಜ್ರ, ವೈಢೂರ್ಯಗಳನ್ನು ಕೊಳ್ಳೆ ಹೊಡೆದು ತಂದು ತನ್ನ ಬೊಕ್ಕಸ ತುಂಬಿಸಿಕೊಳ್ಳುತ್ತಿದ್ದ. ಹೀಗೆ ಯುದ್ಧ ಮಾಡಿ, ಕಷ್ಟಪಟ್ಟು ಚಿನ್ನ ಲೂಟಿ ಮಾಡುವ ಕಾಯಕದಿಂದ ಬೇಸತ್ತ ಮೈದಾಸ, ಕಠಿಣ ತಪಸ್ಸು ಮಾಡಿ ದೇವರನ್ನು ಒಲಿಸಿಕೊಂಡ. ದೇವರು ಪ್ರತ್ಯಕ್ಷನಾಗಿ ‘ನಿನಗೇನು ಬೇಕು ಕೇಳು’ ಎಂದಾಗ, ‘ನಾನು ಮುಟ್ಟಿದ್ದೆಲ್ಲಾ ಚಿನ್ನವಾಗುವಂತೆ ವರನೀಡು’ ಎಂದು ಕೇಳಿಕೊಂಡ. ದೇವರು ‘ತಥಾಸ್ತು’ ಎಂದ. ಮೈದಾಸ ಖುಷಿಯಿಂದ ಅರಮನೆಯ ಕಂಬ ಕಂಬಗಳನ್ನು ಮುಟ್ಟಿದ, ಅವೆಲ್ಲ ಚಿನ್ನವಾಗೋಯ್ತು, ಸುತ್ತಲಿನ ಗಿಡ, ಮರಗಳನ್ನ ಮುಟ್ಟಿದ ಅವೂ ಚಿನ್ನವಾಯ್ತು. ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಊಟಕ್ಕೆ ಕುಳಿತು ಭಕ್ಷ್ಯಭೋಜ್ಯಗಳಿಗೆ ಕೈ ಹಾಕಿದ ಅದೂ ಚಿನ್ನವಾಯ್ತು. ಆಗವನಿಗೆ ಸ್ವಲ್ಪ ಗಾಬರಿ ಆಯ್ತು. ಅಲ್ಲಿಂದ ಎದ್ದು ಬರುತ್ತಿರುವಾಗ ಪ್ರೀತಿಯ ಮೊಮ್ಮಗ ಇವನ ಹತ್ತಿರ ಓಡಿ ಬಂದ. ಮೈದಾಸ ಅಕ್ಕರೆಯಿಂದ ಅವನನ್ನ ಎತ್ತಿಕೊಂಡ. ತಕ್ಷಣ ಅವನೂ ಚಿನ್ನವಾಗಿಬಿಟ್ಟ! ಮೈದಾಸನಿಗೆ ಈಗ ತಾನು ಮಾಡಿದ ಘೋರ ತಪ್ಪಿನ ಅರಿವಾಯ್ತು. ಅಷ್ಟರಲ್ಲಾಗಲೇ ಕಾಲ ಮೀರಿ ಹೋಗಿತ್ತು! destroying-natureಈ ಕಥೆ ಪ್ರಕೃತಿಯನ್ನು ಲೂಟಿ ಹೊಡೆದು ಅಭಿವೃದ್ಧಿಯ ಹೆಸರಿನಲ್ಲಿ ಮುಟ್ಟಿದ್ದೆಲ್ಲವನ್ನೂ ಕಾಂಕ್ರೀಟ್ ಮಾಡಲು ಬೆನ್ನು ಬಿದ್ದಿರುವ ನಮ್ಮ ದುರಾಸೆಗೆ ಹೆಚ್ಚು ಸಾಮ್ಯ ಹೊಂದುವಂತಿದೆ.

ವಿಜ್ಞಾನ-ತಂತ್ರಜ್ಞಾನದ ಹೆಸರಿನಲ್ಲಿ ಇವತ್ತು ಮಾನವ ಅನೇಕ ಪ್ರಗತಿ ಸಾಧಿಸಿದ್ದಾನೆ. ತನ್ನ ಪ್ರಚಂಡ ಬುದ್ಧಿಶಕ್ತಿಯಿಂದ ವಿನಾಶಕಾರಿ ಅಣ್ವಸ್ತ್ರಗಳನ್ನು, ರಾಕೆಟ್‌ಗಳನ್ನು, ಸಬ್‌ಮೆರಿನ್, ರೊಬಾಟ್, ಕಂಪ್ಯೂಟರ್ ಏನೆಲ್ಲಾ ಸೌಲಭ್ಯಗಳನ್ನು ಕಂಡು ಹಿಡಿದಿದ್ದಾನೆ. ನೆಲವನ್ನು ಬಗೆದು, ಬೇಕಾದ ಬೇಡದ ಎಷ್ಟೆಲ್ಲಾ, ಏನೆಲ್ಲಾ ಖನಿಜ ತನ್ನದಾಗಿಸಿಕೊಂಡಿದ್ದಾನೆ. ರಸಗೊಬ್ಬರ, ಕೀಟನಾಶಕವನ್ನು ಅಪಾರ ಪ್ರಮಾಣದಲ್ಲಿ ಬಳಸಿ ಮಿತಿಮೀರಿದ ಕೃಷಿ ಉತ್ಪನ್ನಗಳನ್ನು ಬೆಳೆಯುವ ಭರದಲ್ಲಿ ಭೂಮಿಯನ್ನು ಬರಡಾಗಿಸುತ್ತಿದ್ದಾನೆ. ಅವನ ಅಪಾರ ಸುಖಕ್ಕಾಗಿ ಬೃಹದಾಕಾರದ ಕಟ್ಟಡಗಳು, ಜಲಾಶಯಗಳು, ರಸ್ತೆ-ರೈಲು ಮಾರ್ಗಗಳು ನಿರ್ಮಾಣವಾಗುತ್ತಿವೆ. ನದಿ ಮೂಲ, ಬೆಟ್ಟ, ಗುಡ್ಡ, ಪರ್ವತ, ಕಾಡುಗಳನ್ನು ನಾಶ ಮಾಡಿ ನಗರಗಳು ಬೆಳೆಯುತ್ತಿವೆ. ಅರಣ್ಯದೊಳಗೆ ನಡೆಯುತ್ತಿರುವ ಅನೇಕ ಅವೈಜ್ಞಾನಿಕ ಅಭಿವೃದ್ಧಿ ಕಾರ್ಯಗಳಿಂದಾಗಿ ವನ್ಯಜೀವಿಗಳ ಸಹಜ ಬದುಕಿಗೆ ಧಕ್ಕೆಯಾಗಿ ಅವು ನಾಡಿನೊಳಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಮಾನವ ನಿರ್ಮಿತ ಹೊಲ ಗದ್ದೆ ತೋಟ ಬೆಳೆದು ನಿಂತ ಫಸಲನ್ನು ನಿಮಿಷಾರ್ಧದಲ್ಲಿ ಧ್ವಂಸ ಮಾಡುತ್ತಿವೆ. ತಮ್ಮ ವಾಸಸ್ಥಾನವನ್ನು ಮನುಷ್ಯ ಆಕ್ರಮಿಸಿಕೊಂಡರೆ ಅವುಗಳಾದರೂ ಏನು ಮಾಡಬೇಕು? ಎಲ್ಲಿ ಹೋಗಬೇಕು? ಅದರ ದಾಳಿಗೆ ಸಿಕ್ಕು ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಮಾನವನೂ ಕಾಡು ಪ್ರಾಣಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಂದು, ಅಥವಾ ಪುನರ್ವಸತಿಯ ಹೆಸರಿನಲ್ಲಿ ಅವುಗಳನ್ನು ಅನೈಸರ್ಗಿಕವಾಗಿ ಬಂಧಿಸಿಡುವ ದುಷ್ಟ ಕೆಲಸಗಳಲ್ಲಿ ತೊಡಗಿಕೊಂಡಿದ್ದಾನೆ.

ಅದಿರು ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ದಂಧೆಯ ಹೆಸರಿನಲ್ಲಿ, ಜಲ ಯೋಜನೆ, ವಿದ್ಯುತ್ ಯೋಜನೆ, ಅಣೆಕಟ್ಟೆಗಳು, palm-oil-plantationಬೃಹತ್ ಕೈಗಾರಿಕೆಗಳ ಸ್ಥಾಪನೆಗಾಗಿ ಪ್ರಾಕೃತಿಕ ಸಂಪತ್ತೆಲ್ಲಾ ಎಡೆಬಿಡದೇ ಲೂಟಿಗೊಳ್ಳುತ್ತಿದೆ. ನೈಸರ್ಗಿಕ ಸಂಪನ್ಮೂಲಗಳ ಈ ಪರಿಯ ಅತಿಯಾದ ಬಳಕೆ ಜೀವ ವೈವಿಧ್ಯ ಸರಪಳಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಕೃಷಿಭೂಮಿಯನ್ನು ವೇಗದಿಂದ ನಾಶ ಮಾಡಿ ಬೃಹತ್ ಕಾಂಕ್ರೀಟ್ ಕಾಡುಗಳನ್ನು ಕಟ್ಟಲಾಗುತ್ತಿದೆ. ತನ್ನ ಐಷರಾಮಿ ಬದುಕಿನ ಕನಸಿನಲ್ಲಿ ಎಲ್ಲವನ್ನೂ ಪಣಕ್ಕಿಟ್ಟು ತನ್ನ ಬೇಕುಗಳನ್ನು ಪೂರೈಸಲು ಮಾನವ ಹವಣಿಸುತ್ತಿದ್ದಾನೆ. ಈ ದುರಾಸೆಯಲ್ಲಿ ಮುಂದಿನ ಜನಾಂಗಕ್ಕೆ ಬದುಕಲು ಪ್ರಾಕೃತಿಕ ಸೌಲಭ್ಯಗಳನ್ನು ಉಳಿಸಿಡಬೇಕೆಂಬ ವಿವೇಚನೆಯನ್ನೇ ಅವನು ಕಳೆದುಕೊಂಡಿದ್ದಾನೆ. ತನ್ನೊಂದಿಗಿರುವ ಇತರ ಪ್ರಾಣಿ, ಪಕ್ಷಿ, ಕೀಟಗಳಿಗೂ ತನ್ನಂತೆಯೇ ಬದುಕಿ ಬಾಳುವ ಹಕ್ಕಿದೆ ಎಂಬುದನ್ನು ಮರೆತು ಅವುಗಳಿಗೆ ಬದುಕಲು ಅವಕಾಶ ಕೊಡದಂತೆ ನಾಶ ಮಾಡಿ ತಾನೇ ಸರ್ವಾಧಿಕಾರಿಯೆಂದು ಬೀಗುತ್ತಿದ್ದಾನೆ. ಪ್ರಕೃತಿ ಕೇಂದ್ರಿತವಾಗಿದ್ದ, ಎಂದರೆ ಮನುಷ್ಯನನ್ನೂ ಒಳಗೊಂಡು ಸಕಲ ಚರಾಚರಗಳ ಬದುಕನ್ನೂ ಗಣಿಸಿ ನಡೆಸುತ್ತಿದ್ದ ಸಹಜ ಸುಸ್ಥಿರ ಅಭಿವೃದ್ಧಿಯನ್ನು ಮರೆತು, ಮನುಷ್ಯ…… ಕೇವಲ ತನ್ನ ಸುಖವನ್ನಷ್ಟೇ ಕೇಂದ್ರವಾಗಿರಿಸಿಕೊಂಡು ತನ್ನ ಸ್ವಾರ್ಥ, ಸ್ವಹಿತಕ್ಕಾಗಿ ಪ್ರಕೃತಿಯನ್ನು ಕೊಳ್ಳೆಹೊಡೆದು ಮೆರೆಯುತ್ತಿದ್ದಾನೆ. ಪರಿಸರದ ಮೇಲಿನ ಇಂತಹ ನಿರಂತರ ಅತ್ಯಾಚಾರದಿಂದ ಪ್ರಕೃತಿಯ ಸಮತೋಲನ ತಪ್ಪಿ ಬರ, ಪ್ರವಾಹ, ಭೂಕಂಪ, ಹವಾಮಾನ ವೈಪರೀತ್ಯ, ಭೂಮಿಬಿಸಿಯಂತಾ ವಿಕೋಪಗಳು ಎಚ್ಚರಿಕೆಯ ಗಂಟೆಯಾಗಿ ಮನುಷ್ಯ ಸಂಕುಲವನ್ನು ಬಡಿಯುತ್ತಲೇ ಇವೆ. ಏನೆಲ್ಲಾ ಶುಷ್ಕವಸ್ತುಗಳನ್ನು ಸೃಷ್ಟಿಸಲು ಸಾಧ್ಯವಿದ್ದರೂ, Industrial_Mangaloreಜೀವ ಚೈತನ್ಯಗಳಾದ ಒಂದು ಹಿಡಿ ಮಣ್ಣು ಮತ್ತು ಒಂದು ಬೊಗಸೆ ನೀರನ್ನು ಸೃಷ್ಟಿಸಲಾಗದ ಮನುಷ್ಯನಿಗೆ ಮರುಸೃಷ್ಟಿಸುವ ಚೈತನ್ಯವಿರುವ ಪ್ರಕೃತಿಯನ್ನು ನಾಶಮಾಡಲು ಯಾವ ಹಕ್ಕಿದೆ?

ನಮ್ಮಿಂದ ನಮ್ಮೊಳಗೇ ಹುಟ್ಟಿ ಬೆಳೆದ ಈ ‘ಬೇಕು’ ರಾಕ್ಷಸನನ್ನು ಹದ್ದುಬಸ್ತಿನಲ್ಲಿಡಲು ನಮ್ಮಿಂದಲೇ ಸಾಧ್ಯವಾಗುತ್ತಿಲ್ಲವಲ್ಲ! ಈ ಬಗ್ಗೆ ಪೂರ್ತಿ ಕಾಲ ಮೀರಿ ಹೋಗುವ ಮೊದಲು ಈಗಲಾದರೂ ನಾವು ಯೋಚಿಸಬೇಕಲ್ಲವೇ? ಪ್ರಕೃತಿ ನಾಶದ ನಮ್ಮ ಅಭಿವೃದ್ಧಿ ಪರಿಕಲ್ಪನೆಯನ್ನು ಬದಲಾಯಿಸಿ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸಬಲ್ಲ ಅಭಿವೃದ್ಧಿಯೆಡೆಗೆ ಈಗಲಾದರೂ ನಾವು ಹೆಜ್ಜೆ ಹಾಕಬೇಕಲ್ಲವೇ? ಪ್ರಕೃತಿಯಲ್ಲಿರುವ ಯಾವುದೇ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಕಾಡು, ಎಲ್ಲವೂ ತನ್ನನ್ನು ಮರು ಸೃಸ್ಟಿಸಿಕೊಳ್ಳಬಲ್ಲ ಜೀವಂತಿಕೆ ಹಾಗೂ ಚೈತನ್ಯ ಉಳ್ಳಂತಹವು. ಅವುಗಳನ್ನೇ ನಾಶ ಮಾಡಿದರೆ ಮುಂದೆ ಪ್ರಕೃತಿಯಲ್ಲೇನುಳಿದೀತು? ಹಸಿರು ನಾಶದ ಇಂತಹುದೇ ಅಭಿವೃದ್ಧಿಯ ಬೆನ್ನು ಹತ್ತಿ ನಾವು ಓಡುತ್ತಿದ್ದರೆ ನಾಳೆ ನಮಗೆ ಅನ್ನ ಬೆಳೆದು ತಿನ್ನಲು ಭೂಮಿಯೇ ಇಲ್ಲದಂತಾಗಿ ಬರೀ ಮನುಷ್ಯ ನಿರ್ಮಿತ ಈ ಕಾಂಕ್ರೀಟ್ ಅನ್ನವನ್ನೇ ತಿನ್ನಬೇಕಾದೀತೇನೋ? ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮೈದಾಸನ ದುರಾಸೆಯೇ ಅವನಿಗೆ ಶಾಪವಾದಂತೆ ನಮಗೂ ನಮ್ಮ ಅತಿ ಆಸೆಯೇ ಶಾಪವಾಗಬಹುದು. ಮೈದಾಸನಂತೆಯೇ ನಮಗೂ ತಪ್ಪನ್ನು ತಿದ್ದಿಕೊಳ್ಳಲು ಅವಕಾಶವೇ ಉಳಿಯದಂತಾದೀತು! ಮನುಷ್ಯ ಸಂತತಿ ಇತರ ಜೀವವೈವಿಧ್ಯಗಳೊಂದಿಗೇ ಈ ಭೂಮಿಯ ಮೇಲೆ ಕೆಲಕಾಲವಾದರೂ ನೆಮ್ಮದಿಯಿಂದ ಬದುಕುಳಿಯಲು, ‘ಪ್ರಕೃತಿ ನಮ್ಮ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವಷ್ಟಿದೆಯೇ ಹೊರತು ದುರಾಸೆಯನ್ನು ಪೂರೈಸುವಷ್ಟಲ್ಲ’ ಎಂದ ಮಹಾತ್ಮಾಗಾಂಧೀಜಿಯವರ ಮಾತು ಎಂದೆಂದಿಗೂ ನಮ್ಮನ್ನು ಎಚ್ಚರಿಸುತ್ತಲೇ ಇರಬೇಕಾಗಿದೆ.