Daily Archives: August 6, 2014

‘ದೇವರು ಸತ್ತಿದ್ದಾನೆ’ ಎಂದವನ ಧರ್ಮ ಮತ್ತು ರಾಜಕಾರಣ


– ಡಾ.ಎಸ್.ಬಿ. ಜೋಗುರ


ಜಗತ್ತಿನಲ್ಲಿ ಅತಿ ಹೆಚ್ಚು ಮತ್ತೆ ಮತ್ತೆ ಓದಿಸಿಕೊಂಡ ತತ್ವಜ್ಞಾನಿಗಳ ಸಾಲಲ್ಲಿ ಜರ್ಮನ್ ದೇಶದ ಫ಼್ರೆಡರಿಕ್ ನೀಷೇಯೂ ಒಬ್ಬ [1844-1900]. ‘ದೇವರು ಸತ್ತಿದ್ದಾನೆ’ ಎಂದು ಕೈಯಲ್ಲಿ ಮೇಣದಬತ್ತಿ ಹಿಡಿದು ಜರ್ಮನಿಯ ಗಲ್ಲಿ ಗಲ್ಲಿ ಸುತ್ತಿದ ನೀಷೇ ನನ್ನು ಅವನ ಆ ಹೇಳಿಕೆಯ ಮೂಲಕವೇ ಗ್ರಹಿಸಬೇಕಿಲ್ಲ. ಆ ಮೂಲಕವೇ ಅವನನ್ನು ಒಬ್ಬ ನಾಸ್ತಿಕನೆಂದು ಖಡಾಖಂಡಿತವಾಗಿ ಪರಿಗಣಿಸಬೇಕಿಲ್ಲ. ನೀಷೆ ಆಧ್ಯಾತ್ಮಿಕ ಜಗತ್ತಿನ ಬಗೆಗೂ ಅಪಾರವಾದ ಗೌರವವುಳ್ಳ ವ್ಯಕ್ತಿಯಾಗಿದ್ದ. ದೇವರು, ಧರ್ಮ ಸತ್ಯವೋ.. ಸುಳ್ಳೋ ಅದು ಬೇರೆ ಮಾತು, ಆದರೆ ಜೀವನ ಬೆಳಗಿಸಬಹುದಾದ ಸತ್ವ ಅಲ್ಲಿದೆ ಎಂದಿರುವ ನೀಷೇ ಅದು ಹೇಗೆ ನಾಸ್ತಿಕವಾದಿಯಾಗಿರಬಲ್ಲ nietzsche-godisdeadಎನ್ನುವದೇ ಬಹು ದೊಡ್ಡ ಜಿಜ್ಞಾಸೆ. ಧಾರ್ಮಿಕ ವಿಷಯದಂತೆಯೇ ರಾಜಕೀಯ ವಿಷಯವಾಗಿಯೂ ಆತ ಯಾವುದೇ ಒಂದು ಪಕ್ಷವನ್ನು ಒಮ್ಮತದಿಂದ ಒಪ್ಪಿಕೊಂಡು ಬೆಂಬಲಿಸಿದವನಲ್ಲ. ಹಳೆಯ ಯುಗದ ದೇವರ ಬಗೆಗಿನ ಕಠೋರ ಹೇಳಿಕೆಗಿಂತಲೂ ಆತ ಹಳೆಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ಮಾತನಾಡಿದ್ದು ತೀರಾ ಮೃದು ಧೋರಣೆಯದಾಗಿರಲಿಲ್ಲ. ಬದಲಾವಣೆ ಬಯಸದ ಹಳೆಯ ಕಾಲದ ಪ್ರಜಾಪ್ರಭುತ್ವದ ಬಗ್ಗೆ ತಾತ್ಸಾರವಿರುವಂತೆ ಪ್ರತಿಕ್ರಿಯಿಸಿದ ನೀಷೇ ವ್ಯಕ್ತಿಯೊಬ್ಬ ಬಲಾಡ್ಯನಾಗಿ ಕೊಬ್ಬುವಂತೆ ಮಾಡುವಲ್ಲಿ ಈ ಬಗೆಯ ಪ್ರಜಾಪ್ರಭುತ್ವ ಕಾರಣವಾಗುತ್ತದೆ ಎನ್ನುತ್ತಿದ್ದ. ಹೇಳಿ ಕೇಳಿ ನೀಷೇ ಒಬ್ಬ ಬಹುದೊಡ್ಡ ತತ್ವಜ್ಞಾನಿ ಹೀಗಾಗಿ ಅವನ ಮಾತಿನಲ್ಲಿ ಪ್ರತಿಮೆ, ಸಂಕೇತ ಮತ್ತು ತಾತ್ವಿಕತೆಗಳು ಅಪಾರವಾಗಿದ್ದ ಕಾರಣ ಆತ ದೇವರು ಸತ್ತಿದ್ದಾನೆ ಎನ್ನುವದನ್ನು ವಾಚ್ಯವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಯುರೋಪಿನಲ್ಲಿ ಹಳೆಯ ಜಿಡ್ಡುಗಟ್ಟಿದ ಯುಗವೊಂದು ಮುಕ್ತಾಯದ ಹಂತದಲ್ಲಿದೆ, ಹೊಸ ಯುಗದ ಆಶಾದಾಯಕ ಆರಂಭವಿದೆ. ಹಳೆಯ ಯುಗದ ದೇವರು ಸತ್ತು ಹೊಸ ಯುಗದಲ್ಲಿ ದೇವರ ಸ್ಥಾನದಲ್ಲಿ ಧರಮನಿರಪೇಕ್ಷ ತತ್ವ ಪ್ರತಿಷ್ಠಾಪನೆಯಾಗುವ ಜೊತೆಗೆ ಅದೇ ಹೊಸ ಯುಗವನ್ನು ಮುನ್ನಡೆಸುವ ಚಾಲಕ ಶಕ್ತಿಯಾಗಲಿದೆ ಎನ್ನುವುದು ನೀಷೇ ಅಭಿಪ್ರಾಯ. ದೇವರು ಸತ್ತಿದ್ದಾನೆ ಎನ್ನುವದು ಹಳೆಯ ಗೊಡ್ಡು ಧಾರ್ಮಿಕ ಯುಗದ ರೋಗಗ್ರಸ್ಥ ಸ್ಥಿತಿಯ ಸಂಕೇತವೂ ಹೌದು.

ನೀಷೇಯ ಧಾರ್ಮಿಕ ಮನಸು ದೇವರ ಪ್ರತಿಷ್ಠಾಪನೆಗಿಂತಲೂ ಮುಖ್ಯವಾಗಿ ಮಾನವೀತೆಯ ಅಸ್ಥಿತ್ವದ ಬಗೆಗಿನ ಹಂಬಲದ ಕುರಿತಾಗಿತ್ತು. nietzsche-god-is-a-clumsy-ideaನೀಷೇ ಖಂಡಿತ ಓರ್ವ ಧಾರ್ಮಿಕ ಜೀವಿಯಾಗಿದ್ದ ಎನ್ನುವದನ್ನು ಜರ್ಮನಿಯ ತತ್ವಜ್ಞಾನಿ ಮಾರ್ಟಿನ್ ಹೆಡೆಗ್ಗೆರ್ [1886-1975] ಹೀಗೆ ಹೇಳುತ್ತಾರೆ: ‘ದೇವರನ್ನು ವಿಶಿಷ್ಟವಾಗಿ ಗ್ರಹಿಸಿದ ಕೊನೆಯ ಜರ್ಮನ್ ತತ್ವಜ್ಞಾನಿ’. ಬ್ರಿಟಿಷ ಪ್ರಬಂಧಕಾರ ಎರಿಕ್ ಹೆಲ್ಲರ್ [1911-1990] ‘ನೀಷೆಯ ಆತ್ಮ, ಮನಸು ಉದಾರವಾದ ಧಾರ್ಮಿಕ ಸ್ವರೂಪವನ್ನು ಹೊಂದಿತ್ತು’ ಎಂದಿರುವರು. ಇದು ಬೇರೆ ಚಿಂತಕರು ನೀಷೇ ಮತ್ತು ಆತನ ಧಾರ್ಮಿಕ ಮನೋಭಾವನೆ ಕುರಿತು ಆಡಿದ ಮಾತಾಯಿತು. ಖುದ್ದಾಗಿ ನೀಷೇ ತನ್ನ ಧಾರ್ಮಿಕ ಆಸಕ್ತಿಯ ಬಗ್ಗೆ ಮಾತನಾಡುತ್ತಾ ತಾನು ಗ್ರೀಕ್ ದೇವತೆ ಡಯೋನಿಸಸ್ ನ ಭಕ್ತನಾಗಿದ್ದೆ ಎಂದಿರುವನು. ಅವನು ದೇವರ ಅಸ್ಥಿತ್ವವನ್ನು ಕುರಿತು ಪ್ರತಿಮೆ ಮತ್ತು ಸಾಂಕೇತಿಕವಾಗಿ ಮಾತನಾಡಿದ್ದರೂ ಮುಕ್ತಿಗಾಗಿ ಹೊಸ ಬಗೆಯ ದೇವಶಾಸ್ತ್ರದ ಅಳವಡಿಕೆಯ ಅಗತ್ಯವನ್ನು ಕುರಿತು ಮಾತನಾಡಿರುವನು. ಧಾರ್ಮಿಕವಾಗಿ ಜಡತ್ವದ ಮನ:ಸ್ಥಿತಿಯನ್ನು ನೀಷೇ ಪುರಸ್ಕರಿಸಲಿಲ್ಲ ಬದಲಾಗಿ ಅತ್ಯಂತ ಮುಕ್ತವಾದ ಮಾರ್ಗವಾಗಿ ಅದು ತೆರೆದುಕೊಳ್ಳುವಂತಿರಬೇಕು ಆ ಮೂಲಕ ಮಾನವೀಯತೆಯ ಬಗೆಗಿನ ಕಾಳಜಿ ದಟ್ಟವಾಗಬೇಕು ಎನ್ನುವುದು ನೀಷೇಯ ತುಡಿತವಾಗಿತ್ತು. ದೇವರು ಸತ್ತಿದ್ದಾನೆ ಎನ್ನುವುದು ಒಂದು ಕಾಲಘಟ್ಟದ ಧಾರ್ಮಿಕ ಜಡತ್ವದ ಪ್ರತೀಕ. ಹಳೆಯ ದೇವರ ಸಾವು ಹೊಸ ಬಗೆಯ ಆಲೋಚನೆ ಮತ್ತು ಮುಕ್ತತೆಗೆ ಅವಕಾಶ ಮಾಡಿಕೊಡುವುದು. ಜರ್ಮನಿಯ ಬಾನ್ ವಿಶ್ವವಿದ್ಯಾನಿಲಯದಲ್ಲಿ ಆಳವಾಗಿ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಿದ ಆತ ದೇವರಿಂದ ವಿಚಲಿತವಾಗುವ ಇಲ್ಲವೇ ಬಿಡುಗಡೆ ಹೊಂದುವ ಮೂಲಕ ಮಾನವೀಯತೆಯನ್ನು ಬಲಗೊಳಿಸುವ ಬಗ್ಗೆ ಆಲೋಚಿಸಿದ. ಜೊತೆಗೆ ದೇವರು ಇಲ್ಲವೇ ಧರ್ಮ ಎನ್ನುವ ಪದವನ್ನು ಆತ ಪ್ರಗತಿಪರ ದಿಕ್ಕಿನೆಡೆಗಿನ ನಡಿಗೆ ಎನ್ನುವ ಅರ್ಥದಲ್ಲಿ ಆತ ಬಳಸಿರುವದಿದೆ.

ನೀಷೇಯ ಹೊಸ ದೇವರು ಮತ್ತು ಧರ್ಮದ ಬಗೆಗಿನ ಆಲೋಚನೆಯ ಪರಿಣಾಮವಾಗಿಯೇ ಸಮತಾವಾದ, ರಾಷ್ಟ್ರೀಯವಾದದಂತಹ friedrich-nietzsche-the-individualವಾದಗಳು ಹುಟ್ಟಲು ಕಾರಣವಾಯಿತು. ಕರ್ಮಠ ದೈವತ್ವದ ಜಾಗೆಯಲ್ಲಿ ಮಾನವೀಯತೆಯನ್ನು ಕುಳ್ಳರಿಸುವ ಮೂಲಕ ಅಲ್ಲಿಯ ಜಡತ್ವವನ್ನು ಸಡಿಲಿಸಬಹುದು ಎನ್ನುವುದು ನೀಷೇ ವಾದ. ಅವನ ಪ್ರಕಾರ ಆರೋಗ್ಯ ಎನ್ನುವುದು ನೋವಿನಿಂದ ಮುಕ್ತವಾಗುವ ಸ್ಥಿತಿಯಾಗಿರದೇ ನೋವೇ ಆರೋಗ್ಯದ ಅತ್ಯವಶ್ಯಕ ಸಂಗತಿಯಾಗಿರುವ ಸ್ಥಿತಿಯಾಗಿದೆ ಎನ್ನುತ್ತಾನೆ. ದೇವರು ಮತ್ತು ಧರ್ಮಗಳು ನಿರ್ಬಂಧಗಳಲ್ಲ, ಮುಕ್ತವಾದ ಸಂಗತಿಗಳು ಎನ್ನುವುದು ಅವನ ಅಭಿಪ್ರಾಯ. ಆತ ಧಾರ್ಮಿಕ ಜಡತ್ವವನ್ನು ಕುರಿತು ಮಾತನಾಡುತ್ತಾ ಈ ಬಗೆಯ ಧರ್ಮಗಳು ರೋಗಗಳನ್ನು ನಿವಾರಿಸುವದಿಲ್ಲ ಹೆಚ್ಚೆಂದರೆ ಅನೆಸ್ಥೀಸಿಯಾ ನೀಡಬಲ್ಲವು ಎನ್ನುತ್ತಾನೆ. ನೀಷೇ ಮತ್ತೆ ಮತ್ತೆ ಧರ್ಮದ ಬಗ್ಗೆ, ದೇವರ ಬಗ್ಗೆ ಮಾತನಾಡುವಾಗಲೆಲ್ಲಾ ಮಾನವೀಯತೆಯನ್ನು ಕುರಿತು ಚರ್ಚಿಸುತ್ತಾನೆ. ಫ಼್ರಾನ್ಸ್ ದೇಶದ ಚಿಂತಕ ಅಗಷ್ಟ ಕೊಂಟ್ [1798-1857] ನೀಷೇ ಹಾಗೆಯೇ ದೇವರಿಲ್ಲದ ಧರ್ಮವನ್ನು ಸ್ಥಾಪಿಸಬಯಸಿದ್ದ. ಅವನು ಆ ಧರ್ಮವನ್ನು ‘ಮಾನವತಾವಾದಿ ಧರ್ಮ’ ಎಂದೇ ಕರೆದಿರುವನು. ದೇವರ ಜಾಗೆಯಲ್ಲಿ ಮಾನವೀಯತೆಯನ್ನು ಕುಳ್ಳರಿಸುವುದು ಅವನ ಹಂಬಲವಾಗಿತ್ತು. ಆ ಕಾಲಘಟ್ಟದ ಎಲ್ಲ ಧರ್ಮಗಳು ಮಾನವ ಕಲ್ಯಾಣ ಸಾಧನೆಯಲ್ಲಿ ಸೋತಿವೆ. ಈ ಹೊಸ ಧರ್ಮ ಮಾನವ ಜನಾಂಗದ ಏಳ್ಗೆಗಾಗಿ ದುಡಿಯುತ್ತದೆ ಎನ್ನುವ ಕೋಂಟನ ಮಾತುಗಳು ನೀಷೇಯ ದೇವರು ಸತ್ತಿದ್ದಾನೆ ಎನ್ನುವ ಮಾತಿಗಿಂತ ತೀರಾ ಭಿನ್ನವಾಗಿಲ್ಲ. ಆಗಿನ ಸಂದರ್ಭದಲ್ಲಿ ದೇವರು ಜನರನ್ನು ಭಯದಲ್ಲಿ ಇಡುವ ಬೆದರು ಬೊಂಬೆಗಳು ಎಂದು ಕೋಂಟ್ ಕರೆದಿರುವದಿದೆ. ಅಂತಿಮವಾಗಿ ನೀಷೇ ಕೂಡಾ ದೇವರು ಸೋತಿದ್ದಾನೆ ಎನ್ನುವದನ್ನೇ ಹಾಗೆ ಕಠೋರವಾಗಿ ಹೇಳುವ ಮೂಲಕ ಆಗಿನ ಸಂದರ್ಭದ ವ್ಯವಸ್ಥೆಯನ್ನು ತಿವಿಯುವಂಥಾ ಕೆಲಸ ಮಾಡಿರುವದಿದೆ. ನೀಷೇ ಧರ್ಮ ಚಲನಶೀಲತೆಯ ಗುಣ ಹೊಂದಿರಬೇಕು, ನಿಂತಲ್ಲೇ ನಿಲ್ಲುವ ಜಡತ್ವದ ಮನ:ಸ್ಥಿಯ ಧರ್ಮ ಆರೋಗ್ಯಕರವಲ್ಲ. ರಾಜಕೀಯ ವಿಷಯವಾಗಿಯೂ ನೀಷೇ ವಿಭಿನ್ನವಾದ ನಿಲುವನ್ನು ಹೊಂದಿರುವದಿತ್ತು ಎಲ್ಲ ಕಾಲಕ್ಕೂ ಆದರ್ಶವೆನ್ನುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ಆತ ಟೀಕಿಸಿರುವದಿದೆ.

ನೀಷೇಗೆ ಅಥೆನ್ಸ್ ನಗರದ ಸಾಂಸ್ಕೃತಿಕ ಸಂಗತಿಗಳ ಬಗ್ಗೆ ಅಪಾರವಾದ ಗೌರವವಿತ್ತು. ಆದರೆ ಅಥೆನ್ಸ್ ನಗರದಲ್ಲಿದ್ದ FriedrichNietzsche-abyssಪ್ರಜಾಪ್ರಭುತ್ವದ ರಾಜಕೀಯ ಸ್ಥಿತಿಗತಿಯ ಬಗ್ಗೆ ಅದೇ ರೀತಿಯ ಆದರದ ಮನೋಭಾವಗಳಿರಲಿಲ್ಲ. ಆಗಿನ ಸಂದರ್ಭದಲ್ಲಿ ಅಲ್ಲಿಯ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿ ನಿಲ್ಲಬೇಕಿದ್ದ ಪ್ರಜಾಪ್ರಭುತ್ವ, ತೊಡಕಾಗಿ ಪರಿಣಮಿಸಿದ ಬಗ್ಗೆ ಆತ ಚರ್ಚಿಸಿದ್ದಾನೆ. ನೀಷೆ ಬರೆಯುತ್ತಿದ್ದ ಕಾಲದಲ್ಲಿ ಡೆಮಾಕ್ರಸಿ ಎನ್ನುವುದು ಒಂದು ಹೊಸ ಬಗೆಯ ಅರ್ಥದೊಂದಿಗೆ ಪ್ರಚಲಿತದಲ್ಲಿತ್ತು. ಆ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಬಲವಾಗಿ ವಿರೋಧಿಸುವ ಸಾಂಸ್ಕೃತಿಕ ಪರಿಸರವಿತ್ತು. ಪರಿಣಾಮವಾಗಿ ಯುರೋಪಿನ ರಾಜಪ್ರಭುತ್ವವನ್ನು ವಿರೋಧಿಸಿ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಹೋರಾಟಗಳೂ ನಡೆದವು. ಡೆಮಾಕ್ರಸಿ ವ್ಯವಸ್ಥೆಯನ್ನು ಬೆಂಬಲಿಸುವವರನ್ನು ಶಿಕ್ಷಿಸುವ ಕ್ರಮಗಳೂ ಇದ್ದವು. ನೀಷೇ ಸ್ನೇಹಿತ ವ್ಯಾಗನರ್ ಮತ್ತು ಮೆಸೆನ್ ಬರ್ಗ್ ಎನ್ನುವವರು ಪ್ರಜಾಪ್ರಭುತ್ವವನ್ನು ಬೆಂಬಲಿಸಿದ ಕಾರಣಕ್ಕೆ ಬಂಧನ ಮತ್ತು ಶಿಕ್ಷೆಯನ್ನು ಅನುಭವಿಸಬೇಕಾಯಿತು.

ನೀಷೇ ಕೇವಲ ಪ್ರಜಾಪ್ರಭುತ್ವ ಮಾತ್ರವಲ್ಲ ಮಹಿಳಾವಾದ, ಸಮಾಜವಾದಗಳ ಬಗ್ಗೆಯೂ ನಿಷೇಧಾತ್ಮಕ ನಿಲುವನ್ನೇ ಹೊಂದಿರುವದಿತ್ತು. friedrich-nietzscheಈ ಬಗೆಯ ವಾದಗಳು ಹಳೆಯ ಕ್ರಿಶ್ಚಿಯನ್ ಧರ್ಮದ ಮುಂದುವರೆದ ಭಾಗಗಳು ಎನ್ನುತ್ತಾನೆ. ಸಮಾನತೆ ಎಂಬ ನೈತಿಕತೆ ಬಲಿಷ್ಟರನ್ನು ದುರ್ಬಲಗೊಳಿಸಿ, ವೈಫ಼ಲ್ಯಗಳನ್ನು ಸಂರಕ್ಷಿಸುತ್ತದೆ ಎನ್ನುತ್ತಾನೆ. ಈ ಬಗೆಯ ರಾಜಕೀಯ ಪರಿಸರ ಇರುವಲ್ಲಿ ಸಾಂಸ್ಕೃತಿಕ ಉತ್ಥಾನ ಕಷ್ಟ ಸಾಧ್ಯ. ನೀಷೇಗೆ ವ್ಯಕ್ತಿಯ ಸಾಮರ್ಥ್ಯದ ಬಗ್ಗೆ ಅಪಾರವಾದ ನಂಬುಗೆಯಿತ್ತಾದರೂ ಪ್ರಜಾಪ್ರಭುತ್ವ ಎಂಬ ಸಾಗರದಲ್ಲಿ ಅದು ಸರಿಯಾಗಿ ವಿಕಸಿತವಾಗಲಾರದು ಆಧುನಿಕತೆಯ ಮೂಲಕ ಸ್ಥಾಪಿತವಾಗುವ ಪ್ರಜಾಪ್ರಭುತ್ವ ಮಾತ್ರ ಸಂಸ್ಕೃತಿ ಮತ್ತು ರಾಜಕಾರಣವನ್ನು ಮುಖಾಮುಖಿಯಾಗಿಸಬಲ್ಲದು ಆ ಮೂಲಕ ಸಾಂಸ್ಕೃತಿಕ ಶ್ರೇಷ್ಟತೆಯನ್ನು ಎತ್ತಿ ಹಿಡಿಯಬಲ್ಲದು. ಹೇಗೆ ನೀಷೇಗೆ ಹಳೆಯ ದೇವರ ಬಗೆಗೆ ನಂಬುಗೆಯಿಲ್ಲವೋ ಹಾಗೆಯೇ ಹಳೆಯ ಪ್ರಜಾಪ್ರಭುತ್ವದ ಬಗೆಗೂ ನಂಬುಗೆಯಿಲ್ಲ. ಅದರ ಬದಲಾಗಿ ಹೊಸ ಬಗೆಯ ಆಧುನಿಕ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡ ಪ್ರಜಾಪ್ರಭುತ್ವ ಮಾತ್ರ ಸಂಸ್ಕೃತಿ, ಧರ್ಮ, ಕಲೆ, ಸೃಜನಶೀಲತೆಯನ್ನು ರಕ್ಷಿಸಬಲ್ಲದು ಎನ್ನುವದು ಅವನ ಅಭಿಮತ. ಭವಿಷ್ಯದ ಪ್ರಜಾಪ್ರಭುತ್ವ ವ್ಯವಸ್ಥೆ “keeps open all the paths to the accumulation of moderate wealth through work” ಎನ್ನುತ್ತ ಅದರ ಬಗ್ಗೆ ಆಶಾವಾದಿಯಾಗಿದ್ದ.