ನೋವು, ನರಳಾಟವಿಲ್ಲದ ಸಾವು ಕಾನೂನುಬದ್ಧಗೊಳ್ಳಬೇಕು

– ಆನಂದ ಪ್ರಸಾದ್

ಪ್ರತಿಯೊಬ್ಬ ಮಾನವನೂ ನೋವು, ನರಳಾಟವಿಲ್ಲದ ಸಾವು ಬರಲಿ ಎಂದು ಬಯಸುತ್ತಾನೆ. ಆದರೆ ವೃದ್ಧಾಪ್ಯದಲ್ಲಿ ಬಹುತೇಕ ಸಂದರ್ಭಗಳಲ್ಲಿ ನೋವು, ನರಳಾಟಗಳಿಂದ ಬಳಲಿ ಬಳಲಿ ಸಾಯುವಂಥ ವ್ಯವಸ್ಥೆ ನಮ್ಮ ಸಮಾಜದಲ್ಲಿರುವುದು ವಿಷಾದನೀಯ. ಪ್ರಜ್ಞಾಹೀನ ಸ್ಥಿತಿಗೆ ಹೋಗುವುದು (ಕೋಮಾ),ಹೃದಯ ಸ್ತಂಭನ, ಮೆದುಳಿನಲ್ಲಿ ತೀವ್ರ ರಕ್ತಸ್ರಾವಗಳಂಥ ಸಂದರ್ಭಗಳನ್ನು ಹೊರತುಪಡಿಸಿ ನರಳಾಟವಿಲ್ಲದ ಸಾವು ಬರುವುದಿಲ್ಲ. ಕೆಲವರಂತೂ ವೃದ್ಧಾಪ್ಯದಲ್ಲಿ ತಿಂಗಳುಗಟ್ಟಲೆ, ವರ್ಷಗಟ್ಟಲೆ ತಮ್ಮ ಮಲ, ಮೂತ್ರಗಳಲ್ಲಿ ಹೊರಳಾಡುತ್ತಾ, TIME-righttodieಹಾಸಿಗೆ ಹುಣ್ಣುಗಳಿಂದ ನರಳಾಡುತ್ತಾ ಬದುಕುವ ಜೀವಂತ ನರಕದ ಸ್ಥಿತಿಯಲ್ಲಿರುತ್ತಾರೆ. ಇಂಥವರು ವಿಷ ಕೊಟ್ಟೋ ಅಥವಾ ಇನ್ನಿತರ ವಿಧಾನಗಳ ಮೂಲಕ ತಮ್ಮನ್ನು ಕೊಲ್ಲಿ ಎಂದು ತಮ್ಮ ಮಕ್ಕಳಲ್ಲಿ ಹೇಳುತ್ತಿರುತ್ತಾರೆ. ಆದರೆ ಆ ರೀತಿ ಜೀವ ಕೊನೆಗೊಳಿಸುವುದು ಸಾಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸಮ್ಮತವಲ್ಲದ್ದರಿಂದ ಅವರು ಕೂಡ ತಮ್ಮ ಹೆತ್ತವರ ನರಳಾಟವನ್ನು ನೋಡುತ್ತಾ ಅಸಹಾಯಕರಾಗಬೇಕಾಗುತ್ತದೆ. ಇಂಥ ಪರಿಸ್ಥಿತಿಯನ್ನು ಕೊನೆಗಾಣಿಸಿ ನೋವಿಲ್ಲದ ಸಾವನ್ನು ಪಡೆಯುವುದನ್ನು ಕಾನೂನುಬದ್ಧಗೊಳಿಸಿ ಯಾರು ನೋವು, ನರಳಾಟಗಳ ಜೀವಂತ ನರಕದಿಂದ ಮುಕ್ತಿ ಪಡೆಯಲು ಬಯಸುತ್ತಾರೋ ಅಂಥವರ ನೋವಿಗೆ ಸ್ಪಂದಿಸುವ ಸಾಮಾಜಿಕ ಹಾಗೂ ಕಾನೂನುಬದ್ಧ ಪರಿಸ್ಥಿತಿ ರೂಪುಗೊಳಿಸುವ ಅಗತ್ಯವಿದೆ.

ದಯಾಮರಣದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಸರ್ಕಾರದ ಅಭಿಪ್ರಾಯ ಕೇಳಿರುವುದರಿಂದ ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯುತ್ತಿದ್ದರೂ ಒಂದು ವೈಜ್ಞಾನಿಕ ಹಾಗೂ ಮಾನವೀಯ ತೀರ್ಮಾನಕ್ಕೆ ನಮ್ಮ ಸಮಾಜವು ಇನ್ನೂ ಬರಲಾಗಿಲ್ಲ. ಇದು ನಮ್ಮ ಸಮಾಜದಲ್ಲಿರುವ ಜಡತ್ವವನ್ನು ತೋರಿಸುತ್ತದೆ. ಕೆಲವರು ದಯಮರಣದ ಅವಕಾಶ ಕೊಟ್ಟರೆ ಹೆತ್ತವರ ಅಥವಾ ಬಂಧುಗಳ ಆಸ್ತಿಪಾಸ್ತಿ ಲಪಟಾಯಿಸಲು ಅದರ ದುರುಪಯೋಗ ಆಗಬಹುದು ಅಥವಾ ತಮ್ಮ ಹೆತ್ತವರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ದಾರಿಯಾಗಬಹುದು ಎಂದೂ, ಮಕ್ಕಳ ಮಲ, ಮೂತ್ರ ತೆಗೆದು ಶುಚಿಗೊಳಿಸಿ ಯಾವ ರೀತಿ ನೋಡಿಕೊಳ್ಳುತ್ತೇವೆಯೋ ಅದೇ ರೀತಿ ಹೆತ್ತವರನ್ನೂ ನೋಡಿಕೊಳ್ಳಬೇಕೆಂದು, ಅವರು ನರಳಿ ನರಳಿ ಸಾಯುವುದೇ ಸರಿ ಎಂಬ ವಾದವನ್ನು ಪ್ರತಿಪಾದಿಸುತ್ತಾರೆ. mercy_killing-bangaloreಆದರೆ ಮಕ್ಕಳನ್ನು ಅವರ ಎಳೆಯ ವಯಸ್ಸಿನಲ್ಲಿ ನೋಡಿಕೊಳ್ಳುವುದಕ್ಕೂ, ಸಾವಿನಂಚಿಗೆ ಬಂದು ಗುಣವಾಗದ ರೋಗಗಳಿಂದ ಅಥವಾ ಸಹಜ ವೃದ್ಧಾಪ್ಯದ ಶಕ್ತಿಹೀನತೆಯಿಂದ ಮಲಗಿದಲ್ಲಿಯೇ ಮಲಗಿ ಅಲ್ಲಿಯೇ ಮಲಮೂತ್ರ ಮಾಡುವ ಹಿರಿಯರ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಎಳೆಯ ವಯಸ್ಸಿನ ಮಕ್ಕಳನ್ನು ಎತ್ತಿ ಅವರನ್ನು ಮಲಮೂತ್ರವನ್ನು ಶುಚಿಗೊಳಿಸುವುದು ಕಷ್ಟದ ಕೆಲಸವಲ್ಲ ಆದರೆ ವೃದ್ಧರನ್ನು ಆ ರೀತಿ ಎತ್ತಿ ಶುಚಿಗೊಳಿಸಲಾಗುವುದಿಲ್ಲ. ಅವರು ಮಲಗಿದ ಅಡಿಗೆ ಹಾಕಿದ ಬಟ್ಟೆಯನ್ನು ಆಗಾಗ ಬದಲಿಸುವುದಾಗಲೀ ಅಥವಾ ಅವರನ್ನು ಮಕ್ಕಳನ್ನು ಎತ್ತಿ ತೊಳೆದು ಶುಚಿಗೊಳಿಸುವಂತೆ ಎತ್ತಿ ಶುಚಿಗೊಳಿಸುವುದಾಗಲೀ, ಸ್ನಾನ ಮಾಡಿಸುವುದಾಗಲೀ ಸಾಧ್ಯವಾಗುವುದಿಲ್ಲ. ಹೀಗಾಗಿ ಮಲಗಿದಲ್ಲಿಯೇ ಮಲ, ಮೂತ್ರಾದಿಗಳನ್ನು ಮಾಡುವ ವೃದ್ಧರನ್ನು ಸಮರ್ಪಕವಾಗಿ ಶುಚಿಗೊಳಿಸಲಾಗದೆ ಅವರು ಅದೇ ಮಲ, ಮೂತ್ರಗಳಲ್ಲಿ ಹೊರಳಾಡುತ್ತಾ ಜೀವಂತ ನರಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ವೃದ್ಧಾಪ್ಯದಲ್ಲಿ ಉಂಟಾಗುವ ಎಲುಬಿನ ಸಂಧಿ ನೋವು ಮೊದಲಾದ ಕಾಯಿಲೆ ಇದ್ದವರನ್ನಂತೂ ಆಚೀಚೆ ಎತ್ತಿ ಮಲಗಿಸುವುದಾಗಲೀ, ಅವರ ಬಟ್ಟೆ ಬದಲಿಸುದಾಗಲೀ ಸಾಧ್ಯವಾಗುವುದಿಲ್ಲ, ಏಕೆಂದರೆ ಅವರನ್ನು ಎತ್ತಿದರೆ ಎಲುಬಿನ ಕೀಲುಗಳ ಅಸಾಧ್ಯ ನೋವು ಉಂಟಾಗಿ ಬೊಬ್ಬೆ ಹಾಕುತ್ತಾರೆ. ಎಳೆಯ ಮಕ್ಕಳಾದರೆ ಇಂಥ ನರಳಾಟವೇನೂ Euthanasia-Mercy-Killings-oಇರುವುದಿಲ್ಲ ಮತ್ತು ಅವರು ಭವಿಷ್ಯದಲ್ಲಿ ಬೆಳೆದು ದೊಡ್ದವರಾಗುವವರು. ಹೀಗಾಗಿ ಅವರ ಚಾಕರಿ ಮಾಡುವುದು ಯಾರಿಗೂ ಬೇಸರವೆನಿಸುವುದಿಲ್ಲ. ವೃದ್ಧರಲ್ಲಿಯಾದರೆ ಇಂಥ ಪರಿಸ್ಥಿತಿ ಇರುವುದಿಲ್ಲ. ಅವರು ದೈಹಿಕವಾಗಿ ಇನ್ನಷ್ಟು ದುರ್ಬಲಾರಾಗುತ್ತಾ ಹೋಗುವವರು, ತಮ್ಮ ಅಸಹಾಯಕ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲದವರು. ಹೀಗಾಗಿ ಅವರನ್ನು ನೋಡಿಕೊಳ್ಳುವ ಮಕ್ಕಳಿಗೂ ಕೂಡ ಇಂಥ ಪರಿಸ್ಥಿತಿ ಉಂಟಾದರೆ ಹೊರೆಯಾಗುವುದು ಸಹಜ. ಹೀಗಾಗಿ ಮಾನವ ಸಹಜವಾಗಿಯೇ ಇಂಥ ಸಂದರ್ಭಗಳಲ್ಲಿ ಮಕ್ಕಳು ಕೂಡ ಗೊಣಗುತ್ತಾ ಅನಿವಾರ್ಯತೆಯಿಂದ ಅವರ ಸೇವೆ ಮಾಡುತ್ತಾರೆಯೇ ವಿನಃ ಮನಃಪೂರ್ವಕವಾಗಿ ಮಾಡುವವರು ವಿರಳಾತಿವಿರಳವೆಂದೇ ಹೇಳಬಹುದು.

ಮಾನವನು ವೃದ್ಧಾಪ್ಯದಿಂದ ದೈಹಿಕವಾಗಿ ಅಥವಾ ಗುಣಪಡಿಸಲಾಗದ ಕಾಯಿಲೆಯಿಂದ ನರಳುತ್ತಿದ್ದು ತನ್ನ ಮಲ, ಮೂತ್ರಾದಿ ವಿಸರ್ಜನೆಗೆ ಹೋಗಲು ಅಶಕ್ತನಾದ ಸಂದರ್ಭದಲ್ಲಿ ಆತನು ಬಯಸಿದಲ್ಲಿ ನೋವಿಲ್ಲದ ಸಾವನ್ನು ಬರಿಸುವ ವೈಜ್ಞಾನಿಕ ವ್ಯವಸ್ಥೆಯೊಂದನ್ನು deathರೂಪಿಸುವುದು ಹೆಚ್ಚು ಮಾನವೀಯವಾದುದು. ಪ್ರಜ್ಞೆ ತಪ್ಪಿಸುವ ಔಷಧಿಯನ್ನು ಮೊದಲು ನೀಡಿ ಪ್ರಜ್ಞೆ ತಪ್ಪಿದ ನಂತರ ಶೀಘ್ರ ಸಾವು ಸಂಭವಿಸುವ ಸಯನೈಡ್ನಂಥ ವಿಷದ ಇಂಜೆಕ್ಷನ್ ನೀಡುವುದರಿಂದ ಇಂಥ ವ್ಯವಸ್ಥೆಯೊಂದನ್ನು ಕಾನೂನುಬದ್ಧವಾಗಿ ರೂಪಿಸುವುದು ಸಾಧ್ಯವಾಗಬೇಕು. ಇದರಿಂದ ಮನುಷ್ಯನು ವೃದ್ಧಾಪ್ಯದಲ್ಲಿ ನರಳಿ ನರಳಿ, ಮಲಮೂತ್ರಾದಿಗಳಲ್ಲಿ ಹೊರಳಾಡುತ್ತಾ, ಮಲಗಿದಲ್ಲಿಯೇ ಮಲಗಿ ಹಾಸಿಗೆ ಹುಣ್ಣು, ಹುಳುಗಳಾಗಿ ನರಕ ಯಾತನೆ ಪಡುವುದನ್ನು ತಪ್ಪಿಸುವುದು ಸಾಧ್ಯ. ಇದರಿಂದ ಸಾವಿನ ಯಾತನೆ, ಭೀತಿ ಇಲ್ಲದೆ ಅಸಹನೀಯ ಜೀವನವನ್ನು ಕೊನೆಗಾಣಿಸುವುದು ವೈಜ್ಞಾನಿಕವಾಗಿ ಸಾಧ್ಯವಾಗುತ್ತದೆ ಮತ್ತು ನರಳಿ ನರಳಿ ಸಾಯುವುದಕ್ಕಿಂತ ಹೆಚ್ಚು ಉತ್ತಮವಾದದ್ದು. ಮನುಷ್ಯನು ಹೇಗಿದ್ದರೂ ಒಂದು ದಿನ ಸಾಯಲೇಬೇಕಾಗಿರುವುದು ಪ್ರಕೃತಿ ನಿಯಮ. ಹೀಗಾಗಿ ವೃದ್ಧಾಪ್ಯದಲ್ಲಿ ನರಳಿ ನರಳಿ ಕೆಲವು ದಿನಗಳೋ, ತಿಂಗಳುಗಳೋ ಅಥವಾ ವರ್ಷಗಳೋ ಹೆಚ್ಚು ಬದುಕಿ ಸಾಧಿಸುವುದೇನೂ ಇಲ್ಲದಿರುವುದರಿಂದ ತನ್ನ ಜೀವನದ ಕೊನೆಯನ್ನು ನೋವುರಹಿತವಾಗಿ ಪಡೆಯುವುದು ಮೂಲಭೂತ ಹಕ್ಕಾಗಬೇಕು. ಅಂಥ ಮಾನವೀಯ ಕಾಳಜಿ ನಮ್ಮ ಸಮಾಜ ಹಾಗೂ ಕಾನೂನುಗಳಲ್ಲಿ ಬೆಳೆಸಬೇಕಾದ ಅಗತ್ಯ ಇದೆ.

ಮಾನವನ ನೋವುರಹಿತ ಸಾವು ಸಾಧ್ಯವಾಗಿಸುವುದನ್ನು ತಡೆಯುವ ಕೆಲವು ಸಾಮಾಜಿಕ ನಂಬಿಕೆಗಳು mercy-killing-hospitalನಮ್ಮಲ್ಲಿ ಕೆಲಸಮಾಡುತ್ತಿವೆ. ಅವುಗಳಲ್ಲಿ ಪ್ರಧಾನವಾದುದು ಪುನರ್ಜನ್ಮ ಹಾಗೂ ಮುಕ್ತಿ ಎಂಬ ನಂಬಿಕೆಗಳಾಗಿವೆ. ಮಾನವನು ವೃದ್ಧಾಪ್ಯದಲ್ಲಿ ನರಳಿ ನರಳಿ ಸಾಯುವುದು ಅನಿವಾರ್ಯ, ಮಾನವನು ವೃದ್ಧಾಪ್ಯದಲ್ಲಿ ನರಳಿ ನರಳಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅದಕ್ಕೆ ಆ ವ್ಯಕ್ತಿ ಹಿಂದಿನ ಜನ್ಮದಲ್ಲಿ ಮಾಡಿದ ಪಾಪವೇ ಕಾರಣ ಎಂಬ ನಂಬಿಕೆ ಸಮಾಜದಲ್ಲಿ ಇದೆ. ಹೀಗಾಗಿ ನೋವುರಹಿತ ಸಾವನ್ನು ಪಡೆದರೆ ಅದರಿಂದ ಆ ವ್ಯಕ್ತಿಗೆ ಮುಕ್ತಿ ಸಿಗುವುದಿಲ್ಲ ಏಕೆಂದರೆ ಆ ವ್ಯಕ್ತಿಯ ಸಂಚಿತ ಪಾಪಕರ್ಮಗಳ ಹೊರೆ ಹಾಗೇ ಇರುತ್ತದೆ ಎಂಬ ನಂಬಿಕೆಗಳು ದಯಾಮರಣದ ವಿರುದ್ಧವಾಗಿ ಕೆಲಸ ಮಾಡುತ್ತವೆ. ಬಹುಶಃ ಇಂಥ ತಲೆಬುಡವಿಲ್ಲದ ನಂಬಿಕೆಗಳು ನೋವುರಹಿತ ಸಾವಿನ ಮಾನವೀಯ ವಿಧಾನ ನಮ್ಮ ಸಮಾಜದಲ್ಲಿ ಬೆಳೆಯದಂತೆ ತಡೆಯುತ್ತಿವೆ. ಹೀಗಾಗಿ ಈ ಬಗ್ಗೆ ವೈಜ್ಞಾನಿಕ ತಿಳುವಳಿಕೆ ರೂಪಿಸಬೇಕಾದ ಅಗತ್ಯವಿದೆ.

ಯಾವುದೇ ಕಾನೂನು ರೂಪಿಸಿದರೂ ಅದು ದುರುಪಯೋಗ ಆಗುವ ಪರಿಸ್ಥಿತಿ ಇರುತ್ತದೆ. ಹಾಗೆಂದು ಕಾನೂನನ್ನೇ ರೂಪಿಸದೆ ಇರುವುದು ಸಮಂಜಸವಲ್ಲ. ಹೀಗಾಗಿ ದಯಮರಣದ ಬಗ್ಗೆ ಮಾನವೀಯವಾದ, ಸಾಧ್ಯವಾದಷ್ಟು ದುರುಪಯೋಗ ತಡೆಗಟ್ಟುವ ವಿಧಾನಗಳನ್ನು ರೂಪಿಸಿ ಕಾನೂನುಬದ್ಧ ದಯಾಮರಣ ಇಚ್ಛಿಸಿದವರಿಗೆ ಅವರ ಪರಿಸ್ಥಿತಿಯನ್ನು ನೋಡಿಕೊಂಡು ಅದನ್ನು ನೀಡುವ ಒಂದು ಮಾನವೀಯ ವ್ಯವಸ್ಥೆಯ ಅಗತ್ಯ ಇದೆ. ವೃದ್ಧಾಪ್ಯದಲ್ಲಿ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿ ತಲುಪಿದಲ್ಲಿ ತನ್ನನ್ನು ದಯಾಮರಣಕ್ಕೆ ಒಳಪಡಿಸುವ ಕುರಿತು ಮೊದಲೇ ವಿಲ್ ಬರೆದಿಡುವ ಅವಕಾಶ mercy-killing_legalಕಾನೂನಿನಲ್ಲಿ ನೀಡಬೇಕು. ನರಳಾಟ, ಯಾತನೆಯ ಅನುಭವ ಇಲ್ಲದೆ ವೃದ್ಧಾಪ್ಯದಲ್ಲಿ ಘನತೆಯಿಂದ ಸಾಯುವುದು ಮಾನವನ ಮೂಲಭೂತ ಹಕ್ಕಾಗಬೇಕಾಗಿದೆ ಹಾಗೂ ಯಾರು ನೋವು, ನರಳಾಟ ಇಲ್ಲದ ಸಾವನ್ನು ಬಯಸುತ್ತಾರೋ ಅವರಿಗೆ ಅದನ್ನು ವೈಜ್ಞಾನಿಕ ರೀತಿಯಲ್ಲಿ ನೀಡುವ ವ್ಯವಸ್ಥೆ ಸಮಾಜದಲ್ಲಿ ಬೆಳೆಯಬೇಕಾಗಿದೆ.

Leave a Reply

Your email address will not be published. Required fields are marked *