– ರವಿ
ಕೆಪಿಎಸ್‌ಸಿ ವಿಚಾರಕ್ಕೆ ಕಡೆಗೂ ಸರ್ಕಾರ ಒಂದು ನಿರ್ಧಾರ ಕೈಗೊಂಡಿದೆ ಮತ್ತು ಅದು ಬಹಳ ದಿಟ್ಟ ನಿರ್ಧಾರವೂ ಆಗಿದೆ. ಈ ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರಕ್ಕೆ ಸುಲಭವಾಗಿರಲಿಲ್ಲ. ಹೊರಗೆ ಮತ್ತು ಒಳಗೆ ವಿಪರೀತ ಒತ್ತಡವಿತ್ತು. ಸಿದ್ಧರಾಮಯ್ಯನವರು ಮತ್ತವರ ಸಂಪುಟದ ಸಹೋದ್ಯೋಗಿಗಳು ಈ ವಿಚಾರದಲ್ಲಿ ಭ್ರಷ್ಟಾಚಾರವಿರೋಧಿ ನಿಲುವು ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದರೋ, ಅಥವ ಈ ನಿರ್ಧಾರ ತೆಗೆದುಕೊಳ್ಳದೆ ಬೇರೆ ವಿಧಿ ಇರಲಿಲ್ಲವೋ. ಅಂತೂ ಒಂದು ನಿರ್ಧಾರ ಬಂದಾಗಿದೆ ಮತ್ತು ಅದು ಕೆಪಿಎಸ್‌ಸಿಯಲ್ಲಿ ಕಳೆದ ಎರಡು-ಮೂರು ದಶಕಗಳಿಂದ ನಡೆದುಕೊಂಡು ಬಂದಿದ್ದ ಅವ್ಯಾಹತ ಅಕ್ರಮಗಳಿಗೆ ಸದ್ಯದ ಮಟ್ಟಿಗಾದರೂ ಕಡಿವಾಣ ಹಾಕಿದೆ.
ಇದೆಲ್ಲವೂ ಆರಂಭವಾಗಿದ್ದು ಮಂಗಳಾ ಶ್ರೀಧರ್ ಎನ್ನುವ ಆಗಿನ ಕೆಪಿಎಸ್‌ಸಿ ಸದಸ್ಯೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದ ಮತ್ತು ಆ ಗುಂಪಿನಲ್ಲಿ ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಡಾ. ಮೈತ್ರಿ ಎನ್ನುವವರ ಬಳಿ 75 ಲಕ್ಷ ರೂಪಾಯಿಯ ಲಂಚ ಕೇಳಿ, ಅವರು ಅದನ್ನು ಕೊಡದೆ ಇದ್ದದ್ದಕ್ಕೆ ಸಂದರ್ಶನದಲ್ಲಿ ಡಾ. ಮೈತ್ರಿಗೆ ಕೇವಲ 75 ಅಂಕಗಳನ್ನು ಕೊಟ್ಟು, ಎರಡನೆ ಸ್ಥಾನದಲ್ಲಿದ್ದ ಅಭ್ಯರ್ಥಿಗೆ 150 ಅಂಕಗಳನ್ನು ಕೊಟ್ಟ ಸಂದರ್ಭದಿಂದ. ಇದರಿಂದಾಗಿ ಡಾ. ಮೈತ್ರಿಯವರಿಗೆ ಮೊದಲ ದರ್ಜೆಯ ಹುದ್ದೆ ದೊರಕದೆ ಎರಡನೆಯ ದರ್ಜೆ ಹುದ್ದೆ ದೊರಕಿತು. ಅಂದ ಹಾಗೆ, ಲಿಖಿತ ಪರೀಕ್ಷೆಯಲ್ಲಿ ಮೈತ್ರಿ ಮತ್ತು ಅವರ ನಂತರದ ಅಭ್ಯರ್ಥಿಗೆ ಇದ್ದ ಅಂಕಗಳ ವ್ಯತ್ಯಾಸ 72 ಅಂಕಗಳು. ಅಂದರೆ ಡಾ. ಮೈತ್ರಿಯವರಿಗೆ ಸಂದರ್ಶನದಲ್ಲಿ 75 ರ ಬದಲಿಗೆ 79 ಅಂಕಗಳು ಬಂದಿದ್ದರೆ, ಅಥವ ಅವರಿಗೆ ಎಪ್ಪತ್ತೈದೇ ಬಂದು 150 ಅಂಕ ಪಡೆದ ಎರಡನೇ ಅಭ್ಯರ್ಥಿಗೆ 146 ಅಂಕಗಳು ಬಂದಿದ್ದರೂ ಡಾ.ಮೈತ್ರಿಗೆ ಪ್ರಥಮ ದರ್ಜೆ ಹುದ್ದೆ ಖಾತರಿ ಆಗುತ್ತಿತ್ತು. ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ಡಾ. ಮೈತ್ರಿ ಎಮ್‌ಬಿಬಿಎಸ್ ಮತ್ತು ಎಮ್‍ಡಿ ಮಾಡಿರುವಂತಹವರು, ಚೆನ್ನಾಗಿ ಮಾತನಾಡಬಲ್ಲಂತಹವರು, ನನಗೆ ನೆನ್ನೆ ಗೊತ್ತಾದ ಪ್ರಕಾರ ಸರ್ಕಾರಿ ಸೇವೆಯಲ್ಲಿ, ಅದರಲ್ಲೂ ತಹಶೀಲ್ದಾರ್/ಎಸಿಯಂತಹ ಒಳ್ಳೆಯ ಹುದ್ದೆಯಲ್ಲಿರುವಂತಹವರ ಮಗಳು. (ಅವರ ತಂದೆಯ ಮೇಲೆ ಮೂರು ಸಲ ಲೋಕಾಯುಕ್ತ ದಾಳಿ ಆಗಿದೆ, ಅವರೊಬ್ಬ ಭ್ರಷ್ಟ ಅಧಿಕಾರಿ ಎಂಬ ಮಾತುಗಳು ನೆನ್ನೆ ಮಾಧ್ಯಮದಲ್ಲಿ ಕೇಳಿಬಂದವು. ಅದನ್ನೂ ಇಲ್ಲಿ ದಾಖಲಿಸುತ್ತಿದ್ದೇನೆ.) ಹಾಗಾಗಿ ಡಾ. ಮೈತ್ರಿಗೆ 75 ಅಂಕಗಳನ್ನು ಕೊಟ್ಟು ಎರಡನೆಯ ಅಭ್ಯರ್ಥಿಗೆ 150 ಅಂಕಗಳನ್ನು, ಅದೂ ಎಲ್ಲಾ ಸಂದರ್ಶಕರೂ ಒಂದೇ ಅಂಕಗಳನ್ನು ಕೊಡುವುದರ ಹಿಂದೆ ಅಕ್ರಮ ಮತ್ತು ಭ್ರಷ್ಟಾಚಾರ ಇಲ್ಲದೇ ಇರಲು ಸಾಧ್ಯವೇ ಇಲ್ಲ.
(ಮತ್ತು ಅಕ್ರಮಗಳು ಸಂದರ್ಶನದ ಹಂತದಲ್ಲಿಯಷ್ಟೇ ಆಗಿಲ್ಲ. ಲಿಖಿತ ಪರೀಕ್ಷೆಗಳಲ್ಲೂ ಆಗಿದೆ. ಬಹುಶಃ ಲಿಖಿತ ಪರಿಕ್ಷೆಯ ಮೌಲ್ಯಮಾಪನ ಸಂದರ್ಬದಲ್ಲಿಯೇ ಯಾರನ್ನು ಆಯ್ಕೆ ಮಾಡಬೇಕು ಮತ್ತು ಅದಾಗಬೇಕಾದರೆ ಯಾರಿಗೆ ಎಷ್ಟು ಅಂಕಗಳನ್ನು ಕೊಡಬೇಕು ಎಂದು ತೀರ್ಮಾನವಾಗಿದೆ. ಇದಕ್ಕೆ ವರ್ತಮಾನ.ಕಾಮ್‌ನಲ್ಲಿ ಲಭ್ಯವಿರುವ ಈ ವರದಿಯನ್ನು ಗಮನಿಸಬಹುದು.)
ಆಗ ಡಾ.ಮೈತ್ರಿ ಇದನ್ನು ಮಾಧ್ಯಮಗಳ ಗಮನಕ್ಕೆ ತಂದರು, ನಂತರ ಸರ್ಕಾರದ ಗಮನಕ್ಕೂ ತಂದರು. ಆಗ ತಾನೆ ಪರಮಭ್ರಷ್ಟ ಬಿಜೆಪಿಯನ್ನು ಆಡಳಿತದಿಂದ ಹೊರಗಟ್ಟಿ ರಾಜ್ಯದ ಜನತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿತ್ತು. ಒತ್ತಡ ಹೆಚ್ಚಾಗಿ ಮುಖ್ಯಮಂತ್ರಿಗಳು 2013ರ ಜೂನ್‌ನಲ್ಲಿ ಸಿಐಡಿ ತನಿಖೆಗೆ ಆದೇಶ ಕೊಟ್ಟರು.
ರಾಜಕೀಯ ಮತ್ತು ಹಣದ ಪ್ರಭಾವ ಇರುವ ಬಹುತೇಕ ಹಗರಣಗಳಲ್ಲಿ ಸಿಐಡಿ ತನಿಖೆ ಎನ್ನುವುದು ನಾಮಕಾವಸ್ತೆ ತನಿಖೆ. ಅನೇಕ ವರದಿಗಳು ಕಸದ ಬುಟ್ಟಿ ಸೇರಿವೆ. ಬಹುಶಃ ಸಿಬಿಐ ತನಿಖೆಗಳದೂ ಇದೇ ಗತಿ ಇರಬಹುದು. ನಮ್ಮ ರಾಜ್ಯದಲ್ಲಿಯಂತೂ ಬಹುತೇಕ ಸಿಐಡಿ ತನಿಖೆಗಳಲ್ಲಿ ತನಿಖೆ ಆರಂಭಿಸುವುದಕ್ಕೆ ಮೊದಲು ತಮಗೆ ಬೇಕಾದ ಹಾಗೆ ವರದಿಯನ್ನು ಸಿದ್ದಪಡಿಸಿಕೊಂಡು ನಂತರ ಆ ವರದಿಗೆ ಹೊಂದುವಂತೆ ತನಿಖೆಯ ನಾಟಕ ಆಡಲಾಗುತ್ತದೆ. ಆದರೆ ಅಪರೂಪಕ್ಕೆಂಬಂತೆ ಈ ವಿಷಯದಲ್ಲಿ ಸಿಐಡಿ ಇಲಾಖೆ ಅತ್ಯುತ್ತಮ ಎನ್ನಬಹುದಾದ ಮಧ್ಯಂತರ ವರದಿ ನೀಡುತ್ತದೆ. ಅದರಲ್ಲಿ ಬೆಚ್ಚಿಬೀಳಿಸುವ ಸಂಗತಿಗಳನ್ನು ಸಾಕ್ಷ್ಯಗಳ ಸಮೇತ ಹೊರಹಾಕಲಾಗುತ್ತದೆ. ಆದರೆ, ಆ ವರದಿ ಬಹಿರಂಗವಾಗುವುದಿಲ್ಲ.
ಬಹಿರಂಗವಾಗಬೇಕಿದ್ದ, ಸಾರ್ವಜನಿಕರ ಗಮನಕ್ಕೆ ಬರಬೇಕಾಗಿದ್ದ ವರದಿಯನ್ನು ಸರ್ಕಾರ ಮುಚ್ಚಿಡುತ್ತದೆ. ಅದು ಹೇಗೋ ಆ ವರದಿ ಪ್ರಜಾವಾಣಿ ಪತ್ರಿಕೆಯವರಿಗೆ ಸಿಗುತ್ತದೆ. ಸರ್ಕಾರದಲ್ಲಿದ್ದರೂ ಅಲ್ಲಿಯ ಅನ್ಯಾಯಗಳನ್ನು ಸಹಿಸದ ವಿಸಲ್ ಬ್ಲೋವರ್ಸ್ ಮೊದಲಿನಿಂದಲು ಇದ್ದಾರೆ. ಈ ವಿಷಯದಲ್ಲೂ ಹಾಗೆಯೇ ಆಗುತ್ತದೆ. ಪ್ರಜಾವಾಣಿಯ ಪತ್ರಕರ್ತ ರವೀಂದ್ರ ಭಟ್ಟರು ಇದರ ಬಗ್ಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ (?) ಸರಣಿ ಲೇಖನಗಳನ್ನೇ ಬರೆಯುತ್ತಾರೆ. ಆಗ ಇಡೀ ರಾಜ್ಯವೇ ಬೆಚ್ಚಿಬೀಳುತ್ತದೆ.
ಆ ಸಮಯದಲ್ಲಿ ನಾನು ಲೋಕಸತ್ತಾ ಪಕ್ಷದಲ್ಲಿದ್ದೆ. ಆ ಸರಣಿ ಲೇಖನಗಳನ್ನು ಓದಿ ನಾನು ಮತ್ತು ನನ್ನ ಆಗಿನ ಸಹೋದ್ಯೋಗಿಗಳು ಸಹ ಬೆಚ್ಚಿಬಿದ್ದಿದ್ದೆವು. ಈ ವಿಚಾರವಾಗಿ ಏನಾದರೂ ಮಾಡಬೇಕು ಎಂದು ಚರ್ಚಿಸಿ ಒಂದು ಪತ್ರಿಕಾಗೋಷ್ಟಿ ಕರೆದು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆವು. ಅದಾದ ನಂತರ ಆ ಮಧ್ಯಂತರ ವರದಿ ನಮ್ಮ ಕೈಗೂ ಸಿಕ್ಕಿತು. ಅದರ ಪ್ರಮುಖ ಭಾಗಗಳನ್ನು ಆಯ್ದು, ಅಷ್ಟನ್ನೇ ಬಿಡುಗಡೆ ಮಾಡಿ, ಸರ್ಕಾರ ಸಿಐಡಿ ವರದಿಯನ್ನು ಬಿಡುಗಡೆ ಮಾಡಬೇಕು, ಇಲ್ಲದಿದ್ದಲ್ಲಿ ನಾವೇ ಬಿಡುಗಡೆ ಮಾಡುತ್ತೇವೆ ಎಂದು ಮತ್ತೊಂದು ಪತ್ರಿಕಾಗೋಷ್ಟಿ ಮಾಡಿದೆವು. ಸರ್ಕಾರ ಏನೂ ಮಾಡಲಿಲ್ಲ. ನಾಲ್ಕು ದಿನಗಳ ನಂತರ ಮತ್ತೊಂದು ಪತ್ರಿಕಾಗೋಷ್ಟಿ ಮಾಡಿ ಇಡೀ ವರದಿಯನ್ನೇ ಬಿಡುಗಡೆ ಮಾಡಿ, ಮತ್ತು ಅದನ್ನು ವೆಬ್‌ಸೈಟ್‌ನಲ್ಲೂ ಹಾಕಿ, ಪತ್ರಿಕಾಗೊಷ್ಟಿಯ ನಂತರ ಲೋಕಸತ್ತಾ ಪಕ್ಷದ ಸುಮಾರು ಇಪ್ಪತ್ತು ಕಾರ್ಯಕರ್ತರ ಜೊತೆ ವಿಧಾನಸೌಧದ ಪಕ್ಕದಲ್ಲಿಯೇ ಇರುವ ಕೆಪಿಎಸ್‍ಸಿ ಕಟ್ಟಡಕ್ಕೆ ಹೋಗಿ, ಅದರ ಗೇಟ್ ಹಾಕಿ, ಅದಕ್ಕೆ ಮಪ್ಲರ್ ಸುತ್ತಿ, ಅದರ ಮುಂದೆಯೇ ಧರಣಿ ಕುಳಿತೆವು. ಇಂತಹ ಪ್ರತಿಭಟನೆ ಮತ್ತು ಧರಣಿಗಳಿಗೆ ವಿಧಾನಸೌಧದ ಸುತ್ತಮುತ್ತ ಆಸ್ಪದ ಇಲ್ಲ.
ಕೂಡಲೆ ಪೋಲಿಸರು ಮತ್ತು ಮಾಧ್ಯಮದವರು ಬಂದರು. ಸ್ವಲ್ಪ ಮಾತು-ಕತೆ-ಘೋಷಣೆ-ವಿನಂತಿಯ ನಂತರ ಧರಣಿ ಕೈಬಿಟ್ಟೆವು. ಅಂದು ಮೊದಲ ಬಾರಿಗೆ ಈ ಅಕ್ರಮಗಳಿಂದಾಗಿ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ನಮ್ಮ ಜೊತೆ ಬಂದಿದ್ದರು.
ಅದರ ಮುಂದಿನ ವಾರ ಲೋಕಸತ್ತಾ ಪಕ್ಷ ಪ್ರತಿಭಟನೆಯನ್ನು ತೀವ್ರವಾಗಿಸಿತು. ಈ ಹಗರಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರವನ್ನು ವಿರೋಧಿಸಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಕಾರ್ಯಕ್ರಮ ಆಯೋಜಿಸಿದೆವು. ಶಿವಾನಂದ ಸರ್ಕಲ್ ಬಳಿ ಹತ್ತೂವರೆಗೆ ಸಭೆ ಸೇರಿ ಮುಖ್ಯಮಂತ್ರಿಯ ಮನೆಗೆ ಜಾಥಾ ಹೊರಡುವುದು ಎಂದು ತೀರ್ಮಾನಿಸಲಾಯಿತು. ಮಾಧ್ಯಮದವರಿಗೆಲ್ಲ ಹನ್ನೊಂದು ಗಂಟೆಗೆ ಎಂದು ತಿಳಿಸಿದ್ದೆವು. ನಾವೊಂದಷ್ಟು ಜನ ಹತ್ತಕ್ಕೆಲ್ಲ ಶಿವಾನಂದ ಸರ್ಕಲ್‌ನ ಪಕ್ಕದ ರಸ್ತೆಯಲ್ಲಿ ಬ್ಯಾನರ್, ಘೋಷಣಾ ಪತ್ರ ಇತ್ಯಾದಿಗಳನ್ನು ಸಿದ್ದಪಡಿಸಿಕೊಳ್ಳುತ್ತಿದ್ದೆವು. ಹತ್ತೂವರೆ ಸುಮಾರಿಗೆ ಹತ್ತಿಪ್ಪತ್ತು ಜನ ಶಿವಾನಂದ ಸರ್ಕಲ್‌ಗೆ ಬಂದರು. ಆಗ ಎಲ್ಲಿದ್ದರೋ ನೂರಾರು ಪೋಲಿಸರು ಬಂದು ಅಲ್ಲಿ ಶಾಂತಿಯುತವಾಗಿ ನಿಂತಿದ್ದ ಎಲ್ಲರನ್ನೂ ಬಲವಂತವಾಗಿ ಪೋಲಿಸ್ ವ್ಯಾನಿಗೆ ತಳ್ಳಿದರು. ನಾನು ನನ್ನ ಮಕ್ಕಳಿಬ್ಬರ ಜೊತೆ ಅಲ್ಲಿದ್ದೆ. ಮಕ್ಕಳೂ ನನ್ನ ಜೊತೆ ಪೋಲಿಸ್ ವ್ಯಾನ್ ಹತ್ತಿದರು. ಸುಮಾರು ಮೂರು ವಾಹನಗಳಲ್ಲಿ 60-70 ಜನರನ್ನು ಬಂಧಿಸಿ ಆಡುಗೋಡಿಯ ಪೋಲಿಸ್ ಶೆಡ್ ಒಂದಕ್ಕೆ ಕರೆದುಕೊಂಡು ಬಂದರು. ಪೋಲಿಸರೇ ಮಧ್ಯಾಹ್ನದ ಚಿತ್ರಾನ್ನ ಕೊಟ್ಟರು. ಅಂದು ಬಂಧನಕ್ಕೊಳಗಾದವರಲ್ಲಿ ಲೋಕಸತ್ತಾ ಪಕ್ಷ ಕಾರ್ಯಕರ್ತರು ಮತ್ತು ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಸಮಸಂಖ್ಯೆಯಲ್ಲಿದ್ದರು. ನಮಗೆ ಪಾಠ ಕಲಿಸುವ ತೀರ್ಮಾನ ಮಾಡಿದ್ದ ಪೋಲಿಸರು ಸಂಜೆ ಆರು ಗಂಟೆ ಆದರೂ ಬಿಡಲಿಲ್ಲ. ಆದಷ್ಟು ಬೇಗ ನಮ್ಮನ್ನು ಬಿಡುಗಡೆ ಮಾಡಲಿಲ್ಲವಾದರೆ ನಾವು ಇಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಮತ್ತು ಇಲ್ಲಿಂದ ಕದಲುವುದಿಲ್ಲ ಎಂದು ಕಠಿಣನಿರ್ಧಾರದ ಮಾತುಗಳನ್ನು ಹೇಳಿದಾಗ ಕೂಡಲೆ ಪೋಲಿಸರು ಶಿವಾನಂದ ಸರ್ಕಲ್‌ಗೆ ವಾಪಸು ಕರೆತಂದು ಬಿಟ್ಟರು.
ಆಗಲೂ ಸರ್ಕಾರದ ಯಾವೊಂದು ಅಂಗವೂ ಕದಲಿದ ಲಕ್ಷಣ ಕಾಣಲಿಲ್ಲ.
ನಂತರದ ಹೋರಾಟದ ಮಾರ್ಗವಾಗಿ ಲೋಕಸತ್ತಾ ಪಕ್ಷ ಮೂರು ದಿನಗಳ ಕಾಲದ ಉಪವಾಸ ಸತ್ಯಾಗ್ರಹ ಕಾರ್ಯಕ್ರಮ ಆಯೋಜಿಸಿತು. ಆನಂದರಾವ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆಯ ಬಳಿ ಡಿಸೆಂಬರ್ 28, 2013 ರ ಶನಿವಾರದಂದು ಉಪವಾಸ ಸತ್ಯಾಗ್ರಹ ಆರಂಭವಾಯಿತು. ನನ್ನನ್ನೂ ಒಳಗೊಂಡಂತೆ ಆರೇಳು ಜನ ಉಪವಾಸ ಕುಳಿತೆವು. ರಾಜ್ಯದ ಅನೇಕ ಕಡೆಗಳಿಂದ ಜನ ಬಂದರು. ಎರಡು ರಾತ್ರಿ, ಮೂರು ದಿನಗಳ, ಅಹೋರಾತ್ರಿ ಉಪವಾಸ ಸತ್ಯಾಗ್ರಹ ಅದು. ರಾತ್ರಿ ಹೊತ್ತು ಮರಗಟ್ಟಿಸುವ ಚಳಿಗಾಲ ಅದು. ಸತ್ಯಾಗ್ರಹಿಗಳಲ್ಲಿ ಬಹುತೇಕರಿಗೆ ಅದು ಮೊದಲ ಸತ್ಯಾಗ್ರಹ. ಎರಡನೆ ದಿನದ ಅಂತ್ಯಕ್ಕೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಪೋಲಿಸರು ಹೇಳಿದರು. ಆದರೆ ಅದೊಂದು ದೊಡ್ಡ ಅಧಿಕಪ್ರಸಂಗ ಮತ್ತು ನಿರರ್ಥಕ ಕಲಾಪವಾಯಿತು. ಮೂರನೆಯ ದಿನದ ಅಂತ್ಯಕ್ಕೆ ಎಸ್.ಆರ್.ಹಿರೇಮಠರು ಆಗಮಿಸಿ ಹಲವು ತಾಸುಗಳನ್ನು ನಿರಶನದಾರರೊಂದಿಗೆ ಕಳೆದು, ಉಪವಾಸ ಮಾಡುತ್ತಿದ್ದವರಿಗೆ ಹಣ್ಣಿನ ರಸ ಕುಡಿಸಿ, ಸತ್ಯಾಗ್ರಹ ಅಂತ್ಯಗೊಳಿಸಲು ಹೇಳಿದರು. ಅಂದು ರಾತ್ರಿ ಕೆಲವು ಚಾನಲ್‌ಗಳಲ್ಲಿ ಒಳ್ಳೆಯ ಚರ್ಚೆಗಳಾದವು. ಎಸ್.ಆರ್.ಹಿರೇಮಠರು ಮತ್ತು ಎಚ್.ಎಸ್.ದೊರೆಸ್ವಾಮಿಯವರು ಈ ಹೋರಾಟವನ್ನು ಬೆಂಬಲಿಸಿದರು.
ಲೋಕಸತ್ತಾ ಪಕ್ಷದ ಕಾರಣದಿಂದಾಗಿ ಈ ವಿಚಾರ ರಾಜ್ಯದ ಬಹುತೇಕ ಕಡೆ ಮತ್ತೊಮ್ಮೆ, ಮಗದೊಮ್ಮೆ ಚರ್ಚೆಯಾಯಿತು. ಒಮ್ಮೆ ಧಾರವಾಡಕ್ಕೂ ಹೋಗಿ ಅಲ್ಲಿ ಜಿಲ್ಲಾಧಿಕಾರಿಯ ಕಛೇರಿ ಮುಂದೆ ಧರಣಿ ಕುಳಿತು, ಹೋರಾಟವನ್ನು ಅಲ್ಲಿಗೂ ವಿಸ್ತರಿಸುವ ಪ್ರಯತ್ನ ಆಯಿತು. ನಿಯೋಗವೊಂದು ರಾಜ್ಯಪಾಲರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿತು. ಗೋನಾಳ್ ಭೀಮಪ್ಪರ ಮನೆಯ ತನಕ ಬೈಕ್ ರ್ಯಾಲಿ ಮಾಡಿ, ಧರಣಿ ಮಾಡಿ, ಘೋಷಣೆ ಕೂಗಿ ಬಂದೆವು. ಮಾಧ್ಯಮಗಳು ಇವೆಲ್ಲವನ್ನೂ ವರದಿ ಮಾಡುತ್ತ ಬಂದವು.
ಈ ಮಧ್ಯೆ ಸರ್ಕಾರ ಅಡ್ವೊಕೇಟ್ ಜನರಲ್ ಅಭಿಪ್ರಾಯ ಕೇಳಿತು. ಅವರ ಅಭಿಪ್ರಾಯದ ಆಧಾರದ ಮೇಲೆ ಮರುಮೌಲ್ಯಮಾಪನ ಮತ್ತು ಮರುಸಂದರ್ಶನ ಮಾಡುವಂತೆ ಸರ್ಕಾರ ಕೆಪಿಎಸ್‍ಸಿಗೆ ಪತ್ರ ಬರೆಯಿತು. ಕೆಪಿಎಸ್‍ಸಿಯ ಸದಸ್ಯರು ಆ ಮನವಿಯನ್ನು ಕಸದ ಬುಟ್ಟಿಗೆ ಎಸೆದರು.
ಅದಾದ ಕೆಲವು ವಾರಗಳ ನಂತರ ನಾನು ಆಮ್ ಆದ್ಮಿ ಪಕ್ಷ ಸೇರಿದೆ. ಈ ಮಧ್ಯೆ ಸಂತ್ರಸ್ತ ಅಭ್ಯರ್ಥಿಗಳು ಹೋರಾಟ ಮಾಡುತ್ತಲೇ ಇದ್ದರು. ಮಂತ್ರಿಗಳನ್ನು ಕಾಣುವುದು, ಅಧಿಕಾರಿಗಳನ್ನು ಭೇಟಿ ಮಾಡುವುದು, ಸಭೆಗಳನ್ನು ಏರ್ಪಡಿಸುವುದು, ಇತ್ಯಾದಿ. ವಿಜಯನಗರದಲ್ಲಿ ನಡೆದ ಒಂದು ಸಬೆಯಲ್ಲಿ ಇಡೀ ಆಡಿಟೋರಿಯಮ್ ತುಂಬಿತ್ತು. ದೊರೆಸ್ವಾಮಿ, ಹಿರೇಮಠ್, ರವೀಂದ್ರ ಭಟ್ಟ, ಲೋಕಸತ್ತಾದ ದೀಪಕ್, ನಾನು, ಮತ್ತಿತರರು ಅಲ್ಲಿ ಮಾತನಾಡಿ ಅಕ್ರಮದ ವಿರುದ್ಧ ಗಟ್ಟಿ ಧನಿ ಎತ್ತಿದರು.
ಈ ಮಧ್ಯೆ, ಸಿಐಡಿಯ ಮೇಲೆ ಅಂತಿಮ ವರದಿ ಸಲ್ಲಿಸದಂತೆ ಮತ್ತು ನಿಧಾನಗೊಳಿಸುವಂತೆ ಒತ್ತಡಗಳಿವೆ ಎಂದು ನಮಗೆ ಗೊತ್ತಾಯಿತು. ಆಮ್ ಆದ್ಮಿ ಪಕ್ಷದಿಂದ ಪತ್ರಿಕಾಗೋಷ್ಟಿ ಕರೆದು ನಾವು ಅದನ್ನು ಖಂಡಿಸಿದೆವು. ಕೆಪಿಎಸ್‍ಸಿಯಲ್ಲಿ ಹಿಂದಿನ ವರ್ಷಗಳಲ್ಲಿ ನಡೆದಿದ್ದ ಅಕ್ರಮಗಳ ಬಗ್ಗೆಯೂ ನಾವೊಂದಷ್ಟು ಜನ ಧ್ವನಿಯೆತ್ತುತ್ತಲೇ ಬಂದಿದ್ದೆವು. ಹಲವು ಪತ್ರಿಕಾಗೋಷ್ಟಿಗಳಾದವು. ಆಗಾಗ ಹಳಬರು ಹೊಸಬರು ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದರು. ಆಮ್ ಆದ್ಮಿ ಪಕ್ಷದಿಂದ ಸಾಧ್ಯವಾದಾಗಲೆಲ್ಲ ನಾವೂ ಜೊತೆಯಾಗಿ ಧ್ವನಿಗೂಡಿಸುತ್ತಿದ್ದೆವು. ಲೋಕಸತ್ತಾ ಪಕ್ಷದ ಕಾರ್ಯದರ್ಶಿ ದೀಪಕ್ ನಾಗರಾಜರೂ ದಿಟ್ಟವಾಗಿ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳನ್ನು ಬೆಂಬಲಿಸುತ್ತ, ಅವರ ಹೋರಾಟದಲ್ಲಿ ಎಂದಿಗೂ ಜೊತೆಯಾಗಿಯೇ ಇದ್ದರು. ಅಂತಿಮವಾಗಿ ಸಿಐಡಿ ಸಹ 10500 ಪುಟಗಳ ಚಾರ್ಚ್‌ಶೀಟ್ ಸಹ ಹಾಕಿತು. ಮಂಗಳಾ ಶ್ರೀಧರ್ ವಜಾ ಆದರು. ಕೆಪಿಎಸ್‍ಸಿ ತನ್ನೆಲ್ಲ ಅಹಂಕಾರವನ್ನು ಒಟ್ಟುಗೂಡಿಸಿಕೊಂಡು ಅಂತಿಮ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆಗ ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳು ಇನ್ನಷ್ಟು ಚುರುಕಾದರು. ಆ ಅಭ್ಯರ್ಥಿಗಳೂ ಉಪವಾಸ, ಧರಣಿ ಕೈಗೊಂಡು ಅವರೂ ಸರ್ಕಾರದ ಮೇಲೆ ಒತ್ತಡ ತರಲಾರಂಭಿಸಿದರು. ಸರ್ಕಾರದ ಕೆಲವು ಪ್ರಭಾವಿ ಮಂತ್ರಿಗಳೂ ಅವರ ಪರ ಇದ್ದರು. ಧರಣಿ ಸ್ಥಳಕ್ಕೂ ಬಂದು ಬೆಂಬಲ ಕೊಟ್ಟು ಹೋದರು. ಪಕ್ಷಾತೀತವಾಗಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್‌ನ ಹತ್ತುಹಲವು ಭ್ರಷ್ಟ ರಾಜಕಾರಣಿಗಳು ಅವರ ಬಳಿ ಹೋಗಿ ಕಳೆದ ಇಪ್ಪತ್ತು ದಿನಗಳಿಂದ ಅವರಿಗೆ ಬೆಂಬಲ ಕೊಡುತ್ತಾ ಬಂದರು.
ಪಟ್ಟಿಯನ್ನು ಒಪ್ಪಿಕೊಳ್ಳಬೇಕೊ, ತಿರಸ್ಕರಿಸಬೇಕೊ ಎನ್ನುವ ವಿಷಯಕ್ಕೆ ಸಚಿವಸಂಪುಟದ ಏಳೆಂಟು ಸಭೆಗಳಲ್ಲಿ ಚರ್ಚೆ ಆಗಿರಬಹುದು. ಒಂದು ತೀರ್ಮಾನಕ್ಕೆ ಬರಲು ಸರ್ಕಾರಕ್ಕೆ ಆಗಲಿಲ್ಲ. ಈ ಮಧ್ಯೆ ಕೇಸು ಕೋರ್ಟ್ ಮೆಟ್ಟಿಲನ್ನೂ ಹತ್ತಿತು. ಅಂತಿಮವಾಗಿ ನೆನ್ನೆ ಸರ್ಕಾರ ತೀರ್ಮಾನ ಮಾಡಿತು.
ಲಂಚ ಕೊಡದೆ ಅರ್ಹತೆಯ ಆಧಾರದ ಮೇಲೆ ಸರ್ಕಾರಿ ನೌಕರಿಗೆ ಸೇರಿಕೊಂಡ ಜನರೇ ಕೋಟಿಶತಕೋಟಿ ಭ್ರಷ್ಟಾಚಾರ ಮಾಡುವಾಗ, ಇನ್ನು ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಲಂಚ ಕೊಟ್ಟು ಕೆಲಸಕ್ಕೆ ಸೇರಿಕೊಳ್ಳುವವರು ಭ್ರಷ್ಟಾಚಾರ ಎಸಗದೆ ಪ್ರಾಮಾಣಿಕರಾಗಿರುತ್ತಾರೆ ಎಂದುಕೊಳ್ಳುವುದು ದಡ್ಡತನ. ಈ ಚಾರಿತ್ರಿಕ ನಿರ್ಧಾರದ ಮೂಲಕ ಸರ್ಕಾರ ಒಂದು precedent ಹಾಕಿಕೊಟ್ಟಿದೆ. ಇದೇ ರೀತಿಯಲ್ಲಿ ಎಲ್ಲಾ ಹಗರಣಗಳಲ್ಲೂ ಭ್ರಷ್ಟಾಚಾರ ವಿರೋಧಿ ನಿಲುವನ್ನು ಈ ಸರ್ಕಾರ ತೆಗೆದುಕೊಂಡು ಈ ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಲಿ ಎಂದು ಆಶಿಸುತ್ತೇನೆ, ಮತ್ತು ನೆನ್ನೆಯ ತೀರ್ಮಾನಕ್ಕೆ ಸರ್ಕಾರವನ್ನು ಅಭಿನಂದಿಸುತ್ತೇನೆ. ಹಾಗೆಯೇ, ಇಂತಹ ಬಹುದೊಡ್ದ ಹಗರಣವನ್ನು ಬಯಲಿಗೆಳೆಯಲು ಮತ್ತು ಕ್ರಮ ಕೈಗೊಳ್ಳಲು ಪ್ರಮುಖ ಕಾರಣರಾದ ಡಾ.ಮೈತ್ರಿ, ತನಿಖೆಗೆ ಆದೇಶಿಸಿದ ಮುಖ್ಯಮಂತ್ರಿ, ಅತ್ಯುತ್ತಮವಾದ ಪ್ರಾಮಾಣಿಕ ವರದಿ ಕೊಟ್ಟ ಸಿಐಡಿ ಇಲಾಖೆ, ಅದನ್ನು ಜನರ ಮುಂದೆ ಅನಾವರಣ ಮಾಡಿದ ಪ್ರಜಾವಾಣಿ ಮತ್ತು ರವೀಂದ್ರ ಭಟ್ಟ, ಹೋರಾಟ ಮಾಡಿದ ಅಭ್ಯರ್ಥಿಗಳು, ಬಿ.ಕೆ.ಚಂದ್ರಶೇಖರ್, ಲೋಕಸತ್ತಾ ಪಕ್ಷ, ಆಮ್ ಆದ್ಮಿ ಪಕ್ಷ, ಹಾಗೂ ಅಂತಿಮವಾಗಿ ಅನ್ಯಾಯದ ವಿರುದ್ಧ ನಿಲ್ಲಲು ಧೈರ್ಯ ಮಾಡಿದ ಸಿದ್ಧರಾಮಯ್ಯ ಮತ್ತವರ ಸಚಿವಸಂಪುಟಕ್ಕೆ ಅಭಿನಂದನೆಗಳು ಸಲ್ಲುತ್ತವೆ.