– ಡಾ.ಎಸ್.ಬಿ. ಜೋಗುರ
ನಮ್ಮ ಜನರೇ ಹಾಗೆ. ಅಹಿತಕರವಾದದ್ದು ನಮ್ಮ ಮನೆಯಲ್ಲಿ ಘಟಿಸಿದಾಗ ಮಾತ್ರ ನಾವು ಬಿಕ್ಕಲು ಶುರು ಮಾಡುತ್ತೇವೆ. ’ಹಾಗೆ ಆಗುತ್ತದೆ ಎಂದು ತಮಗೆ ಅನಿಸಿರಲೇ ಇಲ್ಲ.ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು’ ಎಂದು ಹೇಳುವವರಿಗೆ ಅದು ಹಾಗೆಯೇ ಯಾವುದೇ ಒಂದು ವಿಘಟನೆ ಜರುಗುವ ಮೊದಲು ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಅದು ಘಟಿಸಿದ ಮೇಲೆಯೇ ಅದರ ಪರಿಣಾಮದ ಭೀಕರತೆಯ ಅರಿವಾಗುವದು. ಕೊಳವೆ ಬಾವಿಗಳ ದುರಂತಗಳನ್ನೇ ತೆಗೆದುಕೊಳ್ಳಿ. ತೀರಾ ಇತ್ತೀಚೆಗೆ ಇಂಡಿ ತಾಲೂಕಿನ ನಾಗಠಾಣ ಗ್ರಾಮದ ಅಕ್ಷತಾ ಕೊಳವೆ ಬಾವಿಗೆ ಬಿದ್ದು ಮಣ್ಣುಪಾಲಾದ ಘಟನೆ ಇಷ್ಟು ಬೇಗ ನಮ್ಮ ಜನತೆ ಮರೆಯಬಾರದಿತ್ತು. ನೆನಪಿಡಲು ಅದೇನು ಅತ್ಯಂತ ಖುಷಿ ಕೊಡುವ ಸಂಗತಿಯೇ..? ಎಂದು ನೀವು ಕೇಳಬಹುದು. ಇರಲಿಕ್ಕಿಲ್ಲ, ಆದರೆ ಹೀಗೆ ಮತ್ತೊಂದು ಅಂಥದೇ ಘಟನೆ ನಡೆಯುವದನ್ನು ತಪ್ಪಿಸುವಲ್ಲಿ ಅದನ್ನು ನೆನಪಿಡುವ ಅಗತ್ಯವಿದೆ. ಬಹುಷ: ಮೊನ್ನೆ ಬಾಗಲಕೋಟ ಜಿಲ್ಲೆಯ ಸೂಳಿಕೆರಿಯಲ್ಲಿ ತಿಮ್ಮಣ್ಣ ಎಂಬ ಪುಟ್ಟ ಬಾಲಕ ಕೊಳವೆ ಬಾವಿಗೆ ಸಿಲುಕಿ ನೀವೆಲ್ಲಾ ಬಲ್ಲಿರಿ. ಆತನ ತಂದೆ-ತಾಯಿಗಳು ಖಂಡಿತ ನಾಗಠಾಣದಲ್ಲಿ ಅಕ್ಷತಾ ಕೊಳವೆ ಬಾವಿಗೆ ಬಿದ್ದದ್ದನ್ನು ಟಿ.ವಿ.ಯಲ್ಲಿ ನೋಡಿರಲಿಕ್ಕೆ ಸಾಕು ಅಥವಾ ಯಾರಾದರೂ ಆ ಸಂದರ್ಭದಲ್ಲಿ ಆ ಕುರಿತು ಮಾತನಾಡುವದನ್ನು ಕೇಳಿರಲಿಕ್ಕೂ ಸಾಕು. ಆಗಲಾದರೂ ಇವರಿಗೆ ತಮ್ಮ ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳಿವೆ, ಹಾಗೆಯೇ ತೆರೆದ ಕೊಳವೆ ಬಾವಿಯೂ ಇದೆ ಎನ್ನುವದು ನೆನೆಪಾಗಿರಬೇಕು.ಆ ಸಂದರ್ಭದಲ್ಲಿ ಅವರು ಆ ತೆರೆದ ಕೊಳವೆ ಬಾವಿಯ ಗುಂಡಿಯನ್ನು ಮುಚ್ಚಿದರೆ ಆ ಸಮಸ್ಯೆಯೇ ಇರುತ್ತಿರಲಿಲ್ಲ. ಎಲ್ಲವೂ ಹೀಗೆಯೇ.. ಕೆಟ್ಟ ಮೇಲೆ ಬುದ್ಧಿ ಬಂದಂತೆ.
ಆಗಲೇ ಸರಕಾರ ಅನೇಕ ಬಾರಿ ಮತ್ತೆ ಮತ್ತೆ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಅಂಥವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಲಾಗಿತ್ತು. ಹಾಗಿರುವಾಗಲೂ ಅಲ್ಲಲ್ಲಿ ಈ ಬಗೆಯ ಕೊಳವೆ ಬಾವಿ ಎಂಬ ಸಾವಿನ ಗುಂಡಿಗಳು ತೆರೆದೇ ಇವೆ. ಮಾಧ್ಯಮಗಳಂತೂ ಅಪಾರ ಪ್ರಮಾಣದಲ್ಲಿ ಆ ಬಗ್ಗೆ ಮತ್ತೆ ಮತ್ತೆ ವರದಿ ಮಾಡಿದ ಮೇಲೆಯೂ ಮತ್ತೆ ಇಂಥಾ ಗುಂಡಿಗಳು ಉಳಿದಿರುವದೇ ಬಹುದೊಡ್ಡ ವಿಪರ್ಯಾಸ. ನಾಗಠಾಣದಲ್ಲಿ ನಡೆದ ಘಟನೆಯ ಸಂದರ್ಭದಲ್ಲಿಯೇ ಪಕ್ಕದ ಗದ್ದೆಯಲ್ಲಿ ಬಾಯಿ ತೆರೆದುಕೊಂಡು ನಿಂತ ಕೊಳವೆ ಬಾವಿಯನ್ನು ಟಿ.ವಿ.ಯಲ್ಲಿ ತೋರಿಸಲಾಗುತ್ತಿತ್ತು. ಕೊಳವೆ ಬಾವಿಗಳು ಬತ್ತಿ ಹೋದ ಮೇಲೆ ಅನೇಕರಿಗೆ ಈ ತೆರೆದ ಕೊಳವೆಬಾವಿಗಳು ತಮ್ಮ ಗದ್ದೆಯಲ್ಲಿಯೂ ಇವೆ ಎನ್ನುವುದೂ ಮರೆತಂತಿರುತ್ತದೆ. ಜನರ ಸ್ಮರಣೆಗೆ ಆಯುಷ್ಯ ತೀರಾ ಕಡಿಮೆ. ಹೀಗಾಗಿ ಈ ಬಗೆಯ ಘಟನೆಗಳು ಮತ್ತೆ ಮತ್ತೆ ಮರುಕಳಿಸಿ ಅಪಾರವಾಗಿ ಹಳಹಳಿಸುವಂತೆ ಮಾಡುತ್ತವೆ. ನಮ್ಮ ಉದಾಸೀನತೆಯಿಂದ ಕೊನೆಗೂ ನಮ್ಮಲ್ಲಿ ಉಳಿದದ್ದು ಹಳಹಳಿಕೆ.. ಬೇಸರ.. ಅಸಹಾಯಕತೆ.
ಸಾಮಾನ್ಯವಾಗಿ ಕೊಳವೆ ಬಾವಿಗಳನ್ನು ಎಲ್ಲೆಲ್ಲಿ ಕೊರೆಯಿಸಲಾಗಿದೆ ಎನ್ನುವ ಬಗ್ಗೆ ಸಂಬಂಧಿಸಿದ ಇಲಾಖೆಯವರಿಗೂ ಮಾಹಿತಿ ಇದ್ದೇ ಇರುತ್ತದೆ. ಆ ಬಗ್ಗೆ ದಾಖಲಾತಿಯೂ ಇರುತ್ತದೆ. ಅವುಗಳಲ್ಲಿ ಬತ್ತಿಹೋದ ಇಲ್ಲವೇ ವಿಫಲವಾದ ಕೊಳವೆ ಬಾವಿಗಳೆಷ್ಟು ಎನ್ನುವ ಬಗ್ಗೆಯೂ ಮಾಹಿತಿ ಇರುತ್ತದೆ. ಅತ್ಯಂತ ವಸ್ತುನಿಷ್ಟವಾಗಿ ಅವುಗಳನ್ನು ಸಮೀಕ್ಷಿಸಿ ಮುಚ್ಚಿಸುವ ಕ್ರಿಯೆ ತುರ್ತಾಗಿ ನಡೆಯಬೇಕು. ಎಲ್ಲವನ್ನೂ ಸರ್ಕಾರವೆ ಮಾಡಲಿ.. ಮಾಡಬೇಕು ಎನ್ನುವ ಮನ:ಸ್ಥಿತಿಯೇ ಸರಿಯಲ್ಲ. ಯಾವುದೇ ಸಾರ್ವಜನಿಕರ ಗಮನಕ್ಕೆ ಬರುವ ಇಂಥಾ ತೆರೆದ ಕೊಳವೆ ಬಾವಿಗಳನ್ನು ಮುಚ್ಚುವ ಕೆಲಸ ಆಗಬೇಕು. ಇದೂ ಕೂಡಾ ಒಂದು ಮಹತ್ತರವಾದ ಸಾಮಾಜಿಕ ಹೊಣೆಗಾರಿಕೆ ಎನ್ನುವ ಹಾಗೆ ಜರುಗಬೇಕು. ಇನ್ನು ಈ ಬಗೆಯ ಕೊಳವೆ ಬಾವಿಗಳಲ್ಲಿ ಬಹುತೇಕವಾಗಿ ಸಣ್ಣ ಮಕ್ಕಳು. ತೀರಾ ಯತಾರ್ಥವಾಗಿ ಆಡುತ್ತ ಆಡುತ್ತಲೇ ಬೀಳುವದಿದೆ. ಇದು ತೀರಾ ಆಕಸ್ಮಿಕವಾದ ಘಟನೆ ಎನಿಸಿದರೂ ಇದರ ಹಿಂದೆ ನಮ್ಮ ನಿರ್ಲಕ್ಷವೂ ಇದೆ ಎನ್ನುವದನ್ನು ಮರೆಯಲಾಗದು. ತಮ್ಮ ತಮ್ಮ ಗದ್ದೆಗಳಲ್ಲಿಯೂ ಇಂಥಾ ಒಂದು ಪಾಪಕೂಪ ಇದೆ ಎನ್ನುವ ಪ್ರಜ್ಞೆಯೂ ಇರುವದಿಲ್ಲವೇ..? ಇದ್ದರೂ ಅದು ಈ ಮಟ್ಟಿಗೆ ಬಾಧಕ ಎನ್ನುವುದು ಮಾತ್ರ ತಮ್ಮದೇ ಸಂತಾನ ಅಲ್ಲಿ ಬೀಳುವವರೆಗೂ ಇವನಿಗೆ ಅನಿಸಿರಲಿಲ್ಲ
ಎನ್ನುವುದೇ ದೊಡ್ಡ ವಿಪರ್ಯಾಸ.
ನಮ್ಮ ನಮ್ಮ ನಿಯಂತ್ರಣದಲ್ಲಿರುವ ಈ ಬಗೆಯ ಅವಘಡಗಳ ಕಾರಣಗಳನ್ನು ನಾವೇ ಸರಿದೂಗಿಸಬಹುದು. ನಮಗ್ಯಾಕೆ.. ಅದರ ಉಸಾಬರಿ ಎನ್ನುವ ಗುಣ ನಮ್ಮ ಬುಡಕ್ಕೂ ಕೊಳ್ಳಿ ಇಡಬಹುದು. ಹಾಗಾಗುವ ಮುನ್ನವೆ ನಾವು ಎಚ್ಚರಗೊಳ್ಳುವುದು ಅನೇಕ ರೀತಿಯಲ್ಲಿ ಉತ್ತಮ. ಅತ್ಯಂತ ಸುಶಿಕ್ಷಿತರು ವಾಸಿಸುವ ಪ್ರದೇಶವದು. ಮಳೆಗಾಲದ ಸಂದರ್ಭ. ಅಲ್ಲೊಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬ. ಅಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಧಗಧಗನೇ ಹೊತ್ತಿ ಉರಿಯತೊಡಗಿತು. ನಮ್ಮ ಸೋಕಾಲ್ಡ್ ಎಜ್ಯುಕೆಟೆಡ್ ಯಾರೂ ಪೋನ್ ಮಾಡಿ ಅಲ್ಲಿ ಬೆಂಕಿ ತಗುಲಿದ ಬಗ್ಗೆ ಹೇಳಲು ತಯಾರಿಲ್ಲ. ಪರಿಣಾಮವಾಗಿ ಆ ಟ್ರಾನ್ಸ್‌ಫಾರ್ಮರ್ ಸುಟ್ಟೇ ಹೋಯಿತು. ಅದು ತಮ್ಮದು ಎನ್ನುವ ನಾಗರಿಕ ಪ್ರಜ್ಞೆಯೇ ಅಲ್ಲಿರಲಿಲ್ಲ. ನಮ್ಮ ಮನೆಯಲ್ಲಿ ಹಾಗೆ ಯಾವುದೇ ಒಂದಕ್ಕೆ ಬೆಂಕಿ ತಗುಲಿದ್ದರೆ..? ಹಾಗೆ ಉದಾಸೀನತೆ ಮಾಡುತ್ತೇವೆಯೇ..? ಸಾಧ್ಯವಿಲ್ಲ. ಯಾವುದೇ ಒಂದು ಅಹಿತಕರ ಘಟನೆ ಖಾಸಗಿಯಾಗಿರಲಿ, ಸಾರ್ವಜನಿಕವಾಗಿರಲಿ, ಅದನ್ನು ತಡೆಯುವಲ್ಲಿ ನಮ್ಮಿಂದಾಗುವ ಯತ್ನವನ್ನು ಮಾಡುವದರಲ್ಲಿ ಯಾವ ತಪ್ಪೂ ಕಾಣುವದಿಲ್ಲ.