3ನೇ ವಾರ್ಷಿಕದಂದು ವರ್ತಮಾನ.ಕಾಮ್‌ನ ಪ್ರಸ್ತುತತೆ ..

ಸ್ನೇಹಿತರೇ,

ವರ್ತಮಾನ.ಕಾಮ್ ಕಾರ್ಯಾರಂಭಿಸಿ ಮೂರು ವರ್ಷಗಳು ತುಂಬಿದವು. (ಮೊದಲನೆಯ ಮತ್ತು ಎರಡನೆಯ ವಾರ್ಷಿಕದಂದು ಬರೆದಿದ್ದ ಟಿಪ್ಪಣಿಗಳು ಇಲ್ಲಿ ಮತ್ತು ಇಲ್ಲಿ ಇವೆ. ಗಮನಿಸಿ.)

ಮೂರನೆಯ ವರ್ಷದಲ್ಲಿ ವರ್ತಮಾನ.ಕಾಮ್ ಎಲ್ಲಾ ತರಹದ ಏರಿಳಿತಗಳನ್ನು ಕಂಡಿತು. 2013  ರ ಅಕ್ಟೋಬರ್, ನವೆಂಬರ್ ಮತ್ತು vartamaana-32014ರ ಮಾರ್ಚ್‌ ತಿಂಗಳುಗಳು ಹಿಂದಿನ ಎಲ್ಲಾ ತಿಂಗಳುಗಳಿಗಿಂತ ಹೆಚ್ಚಿನ ಓದನ್ನು ಪಡೆದುಕೊಂಡ ತಿಂಗಳುಗಳಾದರೆ 2014 ರ ಜೂನ್ ತಿಂಗಳು ಕಳೆದ ಎರಡು ವರ್ಷಗಳಲ್ಲಿಯೇ ಕಡಿಮೆ ಓದು ಪಡೆದುಕೊಂಡ ತಿಂಗಳು. ಈ ನಿಟ್ಟಿನಲ್ಲಿ ಇದು ವರ್ತಮಾನ.ಕಾಮ್‌ನ ಯಶಸ್ವಿ ವರ್ಷವೂ ಹೌದು. ಹಾಗೆಯೇ, ಇದರ ಪ್ರಸ್ತುತತೆ ಮತ್ತು ಮುಂದುವರೆಸುವುದರ ಬಗ್ಗೆ ಯೋಚನೆ ಮಾಡಬೇಕಾದ ದಿನಗಳೂ ಹೌದು.

ಈ ಮೊದಲೆ ನಾನು ಅಲ್ಲಲ್ಲಿ ಪ್ರಸ್ತಾಪಿಸಿದಂತೆ, ವರ್ತಮಾನ.ಕಾಮ್‌ಗೆ ಬರೆಯುವವರೆಲ್ಲರೂ ಇಲ್ಲಿಗೆ ಬರೆಯಬೇಕು ಎಂಬ ಆಸಕ್ತಿಯಿಂದ ಬರೆಯುವವರು ಮತ್ತು ಯಾರಿಗೂ ಗೌರವಧನವಾಗಲಿ ಇನ್ನೊಂದಾಗಲಿ ಇಲ್ಲ. ಇದರ ಇಲ್ಲಿಯ ತನಕ ಯಶಸ್ಸು ಮತ್ತು ಪ್ರಸ್ತುತತೆಯಲ್ಲಿ ನಮಗೆ ಒಂದೇ ಒಂದು ಲೇಖನ ಬರೆದವರಿಂದ ಹಿಡಿದು ನಿಯಮಿತವಾಗಿ ಬರೆಯುತ್ತ ಬಂದವರೆಲ್ಲರದು. ಹಾಗೆಯೇ, ಆರಂಭದ ದಿನಗಳಲ್ಲಿ ಕೆಲವೊಬ್ಬರಿಗೆ ದಯವಿಟ್ಟು ಬರೆಯಿರಿ ಎಂದು ಕೇಳಿಕೊಂಡಿದ್ದನ್ನು ಬಿಟ್ಟರೆ ಬರೆಯಿರಿ ಎಂದು ಅತಿಯಾದ ಒತ್ತಾಯವನ್ನು ನಮ್ಮ ಬಳಗದ ಯಾರೊಬ್ಬರೂ ಯಾರಿಗೂ ಮಾಡಿಲ್ಲ. ಆದರೆ ಕೆಲವೊಮ್ಮೆ ಕೆಲವು ಗಂಭೀರ ಸಮಕಾಲೀನ ವಿಷಯದ ಬಗ್ಗೆ ಇಂತಹವರು ಬರೆಯಬಹುದು ಎನ್ನಿಸಿದಾಗ ಅಂತಹವರಿಗೆ ಕೋರಿದ್ದೇವೆ, ಅದೂ ಅಪರೂಪಕ್ಕೆ. ಈ ರೀತಿಯಾಗಿ ಇದು ತನಗೆ ತಾನೆ ಉಳಿಯುತ್ತ, ಕುಗ್ಗುತ್ತ, ಬೆಳೆಯುತ್ತ, ಒಂದು ರೀತಿಯಲ್ಲಿ ಸ್ವಾವಲಂಬಿಯಾಗಿ ಬರುತ್ತಿದೆ.

ಹಾಗೆಯೇ, ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುವ ಅನೇಕ ಲೇಖನಗಳು ರಾಜ್ಯದ ಅನೇಕ ಇತರೆ ವೇದಿಕೆಗಳಲ್ಲಿ ಪ್ರಕಟವಾಗುತ್ತಿರುವುದೂ ಸಹ ಮುಂದುವರೆದಿದೆ. ಅಂತಹ ಸಂದರ್ಭಗಳಲ್ಲಿ ಲೇಖಕರನ್ನು ಮತ್ತು ವರ್ತಮಾನ.ಕಾಮ್ ಅನ್ನು ಹೆಸರಿಸುವ ಎಲ್ಲರೂ ನಮ್ಮ ಪ್ರಶಂಸೆಗೆ ಅರ್ಹರು.

ನಿಮಗೆ ಗೊತ್ತಿರುವ ಹಾಗೆ, ನಮಗೆ ಬರುವ ಒಂದು ಲೇಖನವನ್ನು ಯೂನಿಕೋಡ್‌ಗೆ ಪರಿವರ್ತಿಸಿ, ಇರಬಹುದಾದ ಕಾಗುಣಿತ ಮತ್ತು ವ್ಯಾಕರಣ ದೋಷಗಳನ್ನು ತಿದ್ದಿ, ನಂತರ ಅದನ್ನು ವೆಬ್‌ಸೈಟಿನಲ್ಲಿ ಸರಿಯಾಗಿ ಪೇಜ್ ಕೂರಿಸಿ, ಸೂಕ್ತ ಚಿತ್ರಗಳನ್ನು ಹಾಕಿ, ಅಂತಿಮವಾಗಿ ಪ್ರಕಟಿಸಲು ಕನಿಷ್ಟ ಒಂದು ಗಂಟೆಯಾದರೂ ಬೇಕು. ಈ ಕೆಲಸವನ್ನು ನಮ್ಮ ಬಳಗದಲ್ಲಿ ನಾನೂ ಸೇರಿದಂತೆ ಮೂವರು ಮಾಡುತ್ತೇವೆ, ಮತ್ತು ಬಹುತೇಕ ಸಂದರ್ಭಗಳಲ್ಲಿ ಆ ಕೆಲಸ ನಾನೇ ಮಾಡುತ್ತಿದ್ದೆ. ನಾನು ಊರಿನಲ್ಲಿಲ್ಲದಾಗ, ಅಥವ ಬೇರೆ ಕೆಲಸದಲ್ಲಿ ವ್ಯಸ್ತನಾಗಿ ಒಂದೆರಡು ದಿನ ಇತ್ತ ಗಮನ ಕೊಡಲು ಆಗುವುದಿಲ್ಲ ಎಂತಾದಾಗ, ನಮ್ಮ ಬಳಗದ ಸ್ನೇಹಿತರು ಅದನ್ನು ಮಾಡುತ್ತಾರೆ. ನಾನು ಈ ಬಾರಿಯ ಲೋಕಸಭಾ ಚುನಾವಣೆಗೆ ನಿಂತ ಕಾರಣದಿಂದಾಗಿ ಈ ವರ್ಷದ ಮಾರ್ಚ್ ತಿಂಗಳಿನಿಂದ ಈಚೆಗೆ ಬಳಗದ ಮಿತ್ರರೇ ಹೆಚ್ಚಿಗೆ ಮಾಡಿದ್ದಾರೆ. ಅವರೂ ಸಹ ಉದ್ಯೋಗಗಳಲ್ಲಿರುವುದರಿಂದ, ಮತ್ತು ಅವರು ನೌಕರಿ ಮುಗಿಸಿಕೊಂಡು ಮನೆಗೆ ಬಂದನಂತರವೇ ಅದನ್ನು ಮಾಡಬೇಕಾಗಿರುವುದರಿಂದ ಒಮ್ಮೊಮ್ಮೆ ನಮಗೆ ಬಂದ ಲೇಖನಗಳು ಎರಡು-ಮೂರು ದಿನವಾದರೂ ಪ್ರಕಟವಾಗಿರುವುದಿಲ್ಲ. ಇತ್ತೀಚೆಗೆ ಮತ್ತೆ ನನ್ನ ಜೀವನ ಸ್ವಲ್ಪ ನಿಯಮಿತತೆಗೆ ಹೊರಳಿರುವುದರಿಂದ ವರ್ತಮಾನ.ಕಾಮ್ ಸಹ ನಿಯಮಿತವಾಗುತ್ತಿದೆ. ಮುಂದಕ್ಕೆ ನೋಡೋಣ, ಏನಾಗುತ್ತದೊ!

ಅಂದ ಹಾಗೆ, ತನ್ನ ಮೂರನೆ ವರ್ಷದಲ್ಲಿ ವರ್ತಮಾನ.ಕಾಮ್ ರಾಜ್ಯದ ಹಲವು ಕಡೆಗಳಲ್ಲಿ ಸ್ಥಳಿಯ ಸಂಘಸಂಸ್ಥೆ ಮತ್ತು ಸಮಾನಸಾಕ್ತರ ಸಹಕಾರದೊಂದಿಗೆ “ದಲಿತರು ಮತ್ತು ಉದ್ಯಮಶೀಲತೆ” ಗೆ ಸಂಬಂಧಿಸಿದಂತೆ ವಿಚಾರ ಸಂಕಿರಣ ಮತ್ತು ಶಿಬಿರಗಳನ್ನು ನಡೆಸಿಕೊಟ್ಟಿತು. ನಮ್ಮ ಬಳಗದ ಬಿ. ಶ್ರೀಪಾದ ಭಟ್ಟರು ಇದರ ಅನೇಕ ಜವಾಬ್ದಾರಿಗಳನ್ನು ವಹಿಸಿಕೊಂಡು ಅದನ್ನು ಬಹಳ ಮುತುವರ್ಜಿಯಿಂದ ನಿರ್ವಹಿಸಿದರು.

dalit-entrepreneurship-4ಹಾಸನ, ತುಮಕೂರು ಮತ್ತು ಮೈಸೂರಿನಲ್ಲಿ ಈ ಕಾರ್ಯಕ್ರಮಗಳಾದವು. ಚಿತ್ರದುರ್ಗ ಅಥವ ಬಳ್ಳಾರಿಯಲ್ಲಿ ನಡೆಸಬೇಕು ಎಂದುಕೊಂಡ ಕಾರ್ಯಕ್ರಮ ನಾನಾ ಕಾರಣಗಳಿಗಾಗಿ ಇನ್ನೂ ಆಗಿಲ್ಲ. ಇನ್ನು ಮುಂದಕ್ಕೆ ನಡೆಸುತ್ತೇವೋ ಇಲ್ಲವೋ ಗೊತ್ತಿಲ್ಲ, ಆದರೆ ನಮಗೆಲ್ಲ ತುಂಬ ತೃಪ್ತಿ ಕೊಟ್ಟ ಕೆಲಸ ಅದು. ಇದರ ಬಹುತೇಕ ಖರ್ಚುಗಳನ್ನೆಲ್ಲ ಶ್ರೀಪಾದ ಭಟ್ಟರು ವಹಿಸಿಕೊಂಡಿದ್ದರು. ಮೈಸೂರಿನ ಕಾರ್ಯಕ್ರಮಕ್ಕೆ ನಾವಂದುಕೊಂಡದ್ದಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಾಯಿತು ಮತ್ತು ನಾವೂ ಸಹ ಒಂದಷ್ಟು ಪಾಠ ಕಲಿತೆವು. ಹಿರಿಯ ಮಿತ್ರರಾದ ಜಿ.ವಿ.ಸುಂದರ್‌ರವರು ಆ ಕಾರ್ಯಕ್ರಮದ ಬಹುತೇಕ ಖರ್ಚನ್ನು ವಹಿಸಿಕೊಂಡು ಬಹಳ ಬೆಂಬಲ ಕೊಟ್ಟರು. ಸ್ಥಳೀಯರ ಸಹಕಾರ ಮತ್ತು ಪ್ರಾಮಾಣಿಕತೆ ಇಲ್ಲದಿದ್ದರೆ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುವುದಿಲ್ಲ ಮತ್ತು ನಾವಂದುಕೊಂಡಂತೆ ಎಲ್ಲರೂ ಅಕಡೆಮಿಕ್ ಆಗಿಯೋ ಅಥವ ನಿಸ್ವಾರ್ಥವಾಗಿಯೋ ಚಿಂತಿಸಿ ನಡೆದುಕೊಳ್ಳುತ್ತಾರೆ ಎಂದು ಖಾತರಿ ಇಲ್ಲ. ಅಂದ ಹಾಗೆ, ಕವಿ ಮತ್ತು ವಿಧಾನಪರಿಷತ್‌ನ ಮಾಜಿ ಸದಸ್ಯರಾಗಿರುವ ಎಲ್. ಹನುಮಂತಯ್ಯನವರು ಎರಡು ಕಡೆಯ ಕಾರ್ಯಕ್ರಮಗಳಿಗೆ ಬಂದು ನಮಗೆ ಒಳ್ಳೆಯ ಬೆಂಬಲ, ಸಹಕಾರ, ಮತ್ತು ಪ್ರೋತ್ಸಾಹ ಕೊಟ್ಟರು. ಅವರಿಗೆ ಮತ್ತು ಸಿ.ಜಿ.ಶ್ರೀನಿವಾಸನ್‌ರವರಿಗೂ ನಾವು ಕೃತಜ್ಞರು.

2012 ರ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಬಂದಿದ್ದ ಒಂದಷ್ಟು ಕತೆಗಳನ್ನು ಪುಸ್ತಕವಾಗಿ ತರೋಣ ಎಂದು ಶ್ರೀಪಾದ ಭಟ್ಟರು ಹೇಳುತ್ತಲೇ ಇದ್ದರು. katha sprade 2014ಆದರೆ ನನಗೆ ಹುಮ್ಮಸ್ಸಿರದ ಕಾರಣ ಅದು ಆಗಲಿಲ್ಲ. ಆದರೆ ನಮಗೆಲ್ಲ ಸಂತೋಷವಾಗುವಂತೆ 2013 ರ ಕಥಾಸ್ಪರ್ಧೆಯ ಸುಮಾರು ಇಪ್ಪತ್ತು ಕತೆಗಳು “ವರ್ತಮಾನದ ಕಥೆಗಳು” ಕಥಾಸಂಕಲನ ಪುಸ್ತಕವಾಗಿ ಹೊರಬಂದಿದೆ. ಇದಕ್ಕೆ ಕಾರಣರಾಗಿದು ರಾಮಲಿಂಗಪ್ಪ ಟಿ. ಬೇಗೂರರು. ಅವರಿಗೆ ಮತ್ತು ಪ್ರಕಾಶಕರಾದ “ಕಣ್ವ ಪ್ರಕಾಶನ”ದವರಿಗೆ ವರ್ತಮಾನ.ಕಾಮ್ ಬಳಗದ ಪರವಾಗಿ ಧನ್ಯವಾದಗಳು. ಈ ವರ್ಷ ಬರುವ ಕಥೆಗಳೂ ಪುಸ್ತಕವಾಗಿ ಬರುತ್ತದೆ ಎನ್ನುವ ನಂಬಿಕೆ ಈಗ ನಮ್ಮೆಲ್ಲರದು. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದಗಳು.

ಇನ್ನು, ಖರ್ಚಿನ ವಿಷಯ. ಸುಮಾರು ಆರೇಳು ಸಾವಿರ ರೂಪಾಯಿ ವರ್ತಮಾನ.ಕಾಮ್‌ನ ಡೊಮೈನ್ ಮತ್ತು ಹೋಸ್ಟಿಂಗ್‌ಗೆ ಖರ್ಚಾಗಿರಬಹುದು. ನನ್ನ ಇತರ ಹಲವು ವೆಬ್‍‌ಸೈಟುಗಳನ್ನು ಒಂದೇ ಹೋಸ್ಟಿಂಗ್‍ ಖಾತೆಗೆ ಸೇರಿಸಿದರೆ ನನಗೆ ತಿಂಗಳಿಗೆ ಕನಿಷ್ಟ ಎಂದರೂ ಸಾವಿರ ರೂಪಾಯಿ ಉಳಿಯುತ್ತದೆ. ಆದರೆ ಹಾಗೆ ಪೋರ್ಟ್ ಮಾಡಬೇಕಾದ ಸಂದರ್ಭದಲ್ಲಿ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳ ಭಯ ಮತ್ತು ನನ್ನ ಸೋಮಾರಿತನದಿಂದಾಗಿ ಅದಿನ್ನೂ ಆಗಿಲ್ಲ. ಇದು ಬಿಟ್ಟರೆ, “ದಲಿತರು ಮತ್ತು ಉದ್ಯಮಶೀಲತೆ” ಕಾರ್ಯಕ್ರಮಗಳಿಗೆ ಆಗಿರಬಹುದಾದ ವೆಚ್ಚಗಳು. ಆಗಲೆ ಹೇಳಿದಂತೆ ಅದರಲ್ಲಿ ಬಹುಪಾಲನ್ನು ಶ್ರೀಪಾದ ಭಟ್ಟರು ಮತ್ತು ಸುಂದರ್‌ರವರು ಭರಿಸಿದ್ದಾರೆ. ಮಿಕ್ಕಂತೆ ಏನು ಖರ್ಚಾಗಿದೆ ಎಂದು ನೆನಪಿಗೆ ಬರುತ್ತಿಲ್ಲ.

ಈಗ ಮುಖ್ಯ ವಿಷಯ: ವರ್ತಮಾನ.ಕಾಮ್ ಮುಂದುವರೆಯಬೇಕೇ, ಹೌದಾದಲ್ಲಿ ಹೇಗೆ? ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ನನ್ನ ರಾಜಕೀಯ ಚಟುವಟಿಕೆಗಳ ಕಾರಣವಾಗಿ ನಾನು ಇದಕ್ಕೆ ಕೊಡಬೇಕಾದಷ್ಟು ಸಮಯ ಕೊಡಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಬಳಗದ ಮಿತ್ರರು ಒಮ್ಮೆ ಸೇರಿ ಮಾತನಾಡೋಣ ಎಂದು ಕಳೆದ ಒಂದೆರಡು ತಿಂಗಳಿನಿಂದ ಸೂಕ್ತ ದಿನಕ್ಕೆ ಕಾಯುತ್ತಿದ್ದೇವೆ, ಅದು ಇನ್ನೂ ಆಗಿಲ್ಲ. ಅಂದ ಹಾಗೆ, ವರ್ತಮಾನ.ಕಾಮ್‌ನ ಯೋಚನೆ ಮತ್ತು ಯೋಜನೆ ನನಗೆ ಹೊಳೆದದ್ದೇ “ನಾವು ನಮ್ಮಲ್ಲಿ” ಬಳಗ 2011ರಲ್ಲಿ ಚಿತ್ರದುರ್ಗದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ನಾನು ಮಾತನಾಡಬೇಕಾಗಿ ಬಂದ ಸಂದರ್ಭದಲ್ಲಿ. ಈ ವರ್ಷದ “ನಾವು ನಮ್ಮಲ್ಲಿ” ಕಾರ್ಯಕ್ರಮ ಇದೇ ತಿಂಗಳ 30 ಮತ್ತು 31 ರಂದು ಕೊಟ್ಟೂರಿನಲ್ಲಿ ಇದೆ ಎಂಬ ಮಾಹಿತಿ ಇದೆ. ಬಹುಶಃ ನಾವು ಅಲ್ಲಿಯೇ ಸೇರಿ ತಿರ್ಮಾನಿಸಬೇಕಿದೆ ಎನ್ನಿಸುತ್ತದೆ.

ಅಂದ ಹಾಗೆ, ನಿಮಗೇನನ್ನಿಸುತ್ತದೆ? ನಮ್ಮ ಓದುಗರಲ್ಲಿ ಮತ್ತು ಬೆಂಬಲಿಗರಲ್ಲಿ ಬಹುಪಾಲು ಜನ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದ ಶಾಂತ ಮತ್ತು ನಿಧಾನ ಸ್ವಭಾವದವರು ಎಂದು ಗೊತ್ತು! ಅದರೂ ಆಗಾಗ ಒಮ್ಮೊಮ್ಮೆ ಕೆಲವು ಅಭಿಪ್ರಾಯಗಳನ್ನೊ, ಅನಿಸಿಕೆಗಳನ್ನೊ, ಯೋಜನೆಗಳನ್ನೊ, ಹಂಚಿಕೊಂಡರೆ ಮುಂದಕ್ಕೆ ಹೇಗಿರಬೇಕು ಎಂದು ತೀರ್ಮಾನಿಸಲು ನಮಗೂ ಒಂದಷ್ಟು ಸಹಾಯ ಮಾಡಬಹುದು.

ಹಾಗೆ ಮಾಡುತ್ತೀರಿ ಎನ್ನುವ ನಿರೀಕ್ಷೆಯಲ್ಲಿ,

ನಮಸ್ಕಾರ ಮತ್ತು ಧನ್ಯವಾದಗಳು,
ರವಿ


5 thoughts on “3ನೇ ವಾರ್ಷಿಕದಂದು ವರ್ತಮಾನ.ಕಾಮ್‌ನ ಪ್ರಸ್ತುತತೆ ..

 1. M A Sriranga

  ಪ್ರಿಯರಾದ ರವಿ ಅವರಿಗೆ ವಂದನೆಗಳು—- ‘ವರ್ತಮಾನ’ ಬ್ಲಾಗಿಗೆ ಮೂರು ವರ್ಷವಾಗಿರುವ ಈ ಸಂದರ್ಭದಲ್ಲಿ ನನ್ನ ಅಭಿನಂದನೆಗಳನ್ನು ದಯವಿಟ್ಟು ಸ್ವೀಕರಿಸಿ. ಈ ಬ್ಲಾಗನ್ನು ದಯವಿಟ್ಟು ಮುಂದುವರಿಸಿ. ನಿಲ್ಲಿಸಬೇಡಿ . ಇದು ವರ್ತಮಾನದ ಒಬ್ಬ ಓದುಗನಾಗಿ ನನ್ನ ಕಳಕಳಿಯ ಮನವಿ. ಇಂದು ರಾಜ್ಯವ್ಯಾಪಿ ಪ್ರಸಾರದ ಕನ್ನಡ ಪತ್ರಿಕೆಗಳಲ್ಲಿ ನಾನಾ ಕಾರಣಗಳಿಂದ ಸಾಮಾನ್ಯ ಓದುಗರ ಅಭಿಪ್ರಾಯಗಳಿಗೆ ಕವಡೆಯ ಕಿಮ್ಮತ್ತೂ ಇಲ್ಲದಿರುವ ಪರಿಸ್ಥಿತಿ ತಮಗೆ ತಿಳಿದಿದೆ. ಆ ಕೊರತೆಯನ್ನು ವರ್ತಮಾನವೂ ಸೇರಿದಂತೆ ಇನ್ನೊಂದೆರೆಡು ಕನ್ನಡ ಬ್ಲಾಗುಗಳು ಸ್ವಲ್ಪ ಮಟ್ಟಿಗೆ ನಿವಾರಿಸಿವೆ. ತಮ್ಮ ಕಾರ್ಯ ಬಾಹುಳ್ಯದಿಂದ ಲೇಖನಗಳು ಒಂದೆರೆಡು ದಿನಗಳು ತಡವಾಗಿ ಪ್ರಕಟವಾದರೂ ಪರವಾಗಿಲ್ಲ. ಓದುಗರ ಮಾಹಿತಿಗಾಗಿ, ಚರ್ಚೆಗಾಗಿ ತಮ್ಮ ಬ್ಲಾಗು ಮುಂದುವರಿಯಬೇಕಾಗಿದೆ. ಇನ್ನು ಖರ್ಚಿನ ವಿಷಯ. ತಾವು ಒಂದು ಸೂಚನೆಕೊಟ್ಟು ಒಬ್ಬರಿಗೆ ವರ್ಷಕ್ಕೆ ಇಷ್ಟು ಚಂದಾ ಎಂದು ತಿಳಿಸಿದರೆ ಸಾಕು. ಅದನ್ನು ತಾವು ಸೂಚಿಸುವ ಬ್ಯಾಂಕ್ ಅಕೌಂಟ್ ಗೆ online ಮೂಲಕ ಕಳುಹಿಸುವ ಜವಾಬ್ದಾರಿಯನ್ನು ನನ್ನನ್ನೂ ಸೇರಿದಂತೆ ‘ವರ್ತಮಾನ’ದ ಇತರ ಓದುಗರೂ ಸಂತೋಷದಿಂದ ಒಪ್ಪಿಕೊಳ್ಳುತ್ತಾರೆ. ಅದರಲ್ಲಿ ಸಂಶಯವಿಲ್ಲ. ಇಂದು ನಾವು ದಿನ ಪತ್ರಿಕೆಗಳು, ನಿಯತಕಾಲಿಕಗಳು,ಸಾಹಿತ್ಯಿಕ ಪತ್ರಿಕೆಗಳು ,internet , ಮೊಬೈಲ್ , ಕೇಬಲ್/ಡಿಶ್ ಟಿವಿಯ ಸವಲತ್ತುಗಳಿಗೆ ಹಣ ಕೊಡುತ್ತಿಲ್ಲವೇ? ಅದೇ ರೀತಿ ನಾವು ಓದುವ, ಲೇಖನ/ಪ್ರತಿಕ್ರಿಯೆ ಬರುವ ಕನ್ನಡ ಬ್ಲಾಗಿಗೆ ಹಣ ಕೊಡುವುದರಲ್ಲಿ ಯಾವ ತಪ್ಪೂ ಇಲ್ಲ. ನಾವು ಕೇವಲ ಬಾಯಿ ಮಾತಿನಲ್ಲಿ, ಪ್ರತಿ ವರ್ಷದ ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡಾಭಿಮಾನ ತೋರಿಸಿದರೆ ಸಾಲದು. ಅದು ನಮ್ಮ ನಡೆ- ನುಡಿಯಲ್ಲಿ ದಿನವೂ ಇರಬೇಕು.

  Reply
 2. Girish, Bajpe

  ಅಭಿನಂದನೆಗಳು… ಸದುದ್ದೇಶ ಹೊಂದಿರುವ ನಮ್ಮ ವರ್ತಮಾನ ಮುಂದುರೆಯಲಿ. ಶುಭಾಶಯಗಳು.

  ಗಿರೀಶ್, ಬಜಪೆ

  Reply
 3. Anonymous

  ಇದೊಂದು ಸಮತೋಲಿತ ಪ್ರಗತಿಪರವಾದ ವೇದಿಕೆಯಾಗಿದೆ. ಮುಖ್ಯವಾಗಿ ಸೋಷಿಯಲ್ ಮೀಡಿಯಾಗಳ ಮೂಲಕ ಜನಸಾಮಾನ್ಯರಿಗೂ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಮುಖ್ಯವಾಗಿ ವರ್ತಮಾನದ ನಿಲುವು ಜನಸಾಮಾನ್ಯರ ನಿಲುವಿನಂತೆ ಕಾಣುತ್ತಿರುವುದರಿಂದ ಅದು ಜನರನ್ನು ತಲುಪಲು ಸಾಧ್ಯವಾಗಿದೆ. ಸಹಾಯಕ್ಕೆ ಒಂದಷ್ಟು ಗೆಳೆಯರನ್ನು ಸಹಾಯಕ್ಕೆ ತೆಗೆದುಕೊಳ್ಳಿ ಮತ್ತು/ಅಥವಾ ಸ್ವ-ಇಚ್ಚೆಯಿಂದ ನೀಡುವ ಜನರಿಂದ ದಾನವನ್ನು ಪಡೆದು ಖರ್ಚನ್ನು ನಿರ್ವಹಿಸಬಹುದಾಗಿದೆ. ನನಗೂ ಸಭೆಗೆ ಬರಬೇಕೆಂಬ ಇಚ್ಛೆ ಇದೆಯಾದರೂ, ಸಮಯ ಮತ್ತು ಸ್ಥಳದ ಅನಾನುಕೂಲತೆಯಿಂದ ಬರಲಾಗುತ್ತಿಲ್ಲ. ವರ್ತಮಾನವನ್ನು ಭವಿಷ್ಯತ್ತಿನ ವರ್ತಮಾನವಾಗಿಸಲು ಬಲಗೊಳಿಸಿ, ಮುಂದುವರಿಸಿ. ಅಭಿನಂದನೆಗಳೊಂದಿಗೆ, ಸುರೇಶ್ ಕಾಂತ ಬಿ.

  Reply
 4. ಜೆ.ವಿ.ಕಾರ್ಲೊ, ಹಾಸನ

  ವರ್ತಮಾನ ನಿಲ್ಲಿಸಬೇಡಿ. ನಿಮ್ಮ ಅನುಪಸ್ಥಿತಿಯಲ್ಲೂ ನಡೆಯುವಂತೆ ಏನಾದರೂ ವ್ಯವಸ್ಥೆ ಮಾಡಿ.

  Reply

Leave a Reply

Your email address will not be published.