Daily Archives: August 14, 2014

ಕವಿಗೆ ಅಹಂಕಾರ ಇರಬೇಕು…


– ರವಿ


ಇತ್ತೀಚಿನ ವರ್ಷಗಳ ಕನ್ನಡ ಸಾಹಿತ್ಯವನ್ನು ಓದುವಾಗ ನನಗೆ ಎದ್ದು ಕಾಣಿಸುವ ದೊಡ್ಡ ಕೊರತೆ ಕವಿ-ಸಾಹಿತಿಗಳಲ್ಲಿ ಎದ್ದು ಕಾಣಿಸದ ಮಹತ್ವಾಕಾಂಕ್ಷೆ ಮತ್ತು ಇಲ್ಲದಿರುವ ಅಹಂಕಾರ. ಸಾಹಿತಿಗೆ ತನ್ನ ಪ್ರತಿಭೆಯ ಬಗ್ಗೆ, ತಾನು ಅದನ್ನು ಸಾಧಿಸಲು ಹಾಕಿದ ಶ್ರಮ, ಅಧ್ಯಯನ, ಜೀವನಾನುಭವ, ಅಪರಿಮಿತ ಆತ್ಮವಿಶ್ವಾಸ, ನಿರಂಕುಶಮತಿತ್ವ, ಇವೆಲ್ಲವುಗಳಿಂದ ಕೂಡಿ ತಾನು ಸಾಧಿಸಿರುವ ಪ್ರತಿಭೆಯ ಬಗ್ಗೆ ಅಹಂಕಾರ ಇರಬೇಕು. ಈ ಅಹಂಕಾರ ಕೀಳರಿಮೆಯಿಂದ ಬರುವ ಅಹಂಕಾರಕ್ಕಿಂತ ಬಹಳ ಭಿನ್ನವಾದದ್ದು. ಇದು ಕಾಣಿಸುವುದು ವ್ಯಕ್ತಿತ್ವದಲ್ಲ, ಸಾಹಿತಿಯ ಬರವಣಿಗೆಯಲ್ಲಿ. ನಮ್ಮಲ್ಲಿರುವ ಬಹುತೇಕ ಸಾಹಿತಿಗಳಲ್ಲಿ ಕಾಣದ ಈ ಅಹಂಕಾರ ಮತ್ತು ಮಹತ್ವಾಕಾಂಕ್ಷೆಯ ಬಗ್ಗೆ ನಾನು ಕೆಲವು ವರ್ಷಗಳಿಂದ ಯುವಮಿತ್ರರಲ್ಲೂ ಮಾತನಾಡುತ್ತ ಬಂದಿದ್ದೇನೆ. ಆಗೆಲ್ಲ ನನಗೆ ನೆನಪಾಗುವ ಒಂದೇ ಉದಾಹರಣೆ, ಕುವೆಂಪು.

ದೀಪ ಮತ್ತು ಗಿರೀಶ್ ಹಂದಲಗೆರೆ ನನ್ನ ಫೇಸ್‌ಬುಕ್ ಸ್ನೇಹಿತರ ಪಟ್ಟಿಯಲ್ಲಿದ್ದಾರೆ. ಆದರೂ ಇತ್ತೀಚಿನವರೆಗೆ ಅವರು ಯಾರು ಎಂದು ತಿಳಿದಿರಲಿಲ್ಲ. ದೀಪರನ್ನು ಮೊದಲು ನೋಡಿದ್ದು ಅವರು ಎರಡು ವಾರಗಳ ಹಿಂದೆ ಟೌನ್‌ಹಾಲ್ ಬಳಿಯ ಪ್ರತಿಭಟನೆಗೆ ಬಂದಾಗ. ವಿ.ಆರ್.ಭಟ್ ಎನ್ನುವವರು ಪ್ರಭಾ ಬೆಳವಂಗಲರಿಗೆ ಫೇಸ್‌ಬುಕ್‌ನಲ್ಲಿ ’ನಿಮ್ಮಂತಹವರಿಗೆ ಅತ್ಯಾಚಾರಿಗಳು ಜುಟ್ಟು ಹಿಡಿದು ಅತ್ಯಾಚಾರ ಮಾಡಬೇಕು’ ಎಂದು ಕಮೆಂಟ್ ಹಾಕಿದ್ದನ್ನು ವಿರೋಧಿಸಿ ಲೇಖಕಿಯರ ಸಂಘ ಮತ್ತಿತರರು ಆಯೋಜಿಸಿದ್ದ ಆ ಪ್ರತಿಭಟನೆಗೆ ತುಂಬುಬಸುರಿ ದೀಪಾರವರೂ ಬಂದು ಬೆಂಬಲಿಸಿದ್ದರು. ಅದೇ ಸಮಯದಲ್ಲಿ ದೀಪಾರವರ ಪತಿ ಗಿರೀಶ್ ಹಂದಲಗೆರೆಯವರ ಕವನ-ಸಂಕಲನ ಬಿಡುಗಡೆಯ ಕಾರ್ಯಕ್ರಮದ ಆಹ್ವಾನ ಫೇಸ್‌ಬುಕ್‌ನಲ್ಲಿ ಬಂದಿತ್ತು. ಅಧ್ಯಕ್ಷತೆ ನಮ್ಮೆಲ್ಲರ ಪ್ರೀತಿಯ ಕಡಿದಾಳು ಶಾಮಣ್ಣನವರದು. ಇದೊಂದೆ ಕಾರಣಕ್ಕೆ ಕುತೂಹಲಿತನಾಗಿ ಹೋಗೋಣ ಎಂದುಕೊಂಡಿದ್ದೆ. ಅದೇ ಸಮಯದಲ್ಲಿ ಹಂದಲಗೆರೆ ದಂಪತಿಯರ ಬಗ್ಗೆ ಕವಿಮಿತ್ರರೊಬ್ಬರಲ್ಲಿ ವಿಚಾರಿಸಿದೆ. ಅವರು ಅದಕ್ಕೆ ’ದೀಪ ಮತ್ತು ಗಿರೀಶ್ ಚಳವಳಿ ಮತ್ತು ಬೀದಿನಾಟಕಗಳಲ್ಲಿ ಸಕ್ರಿಯರಾಗಿದ್ದವರು. ಗಿರೀಶ್ ಪದ್ಯಗಳನ್ನೂ ಬರೆಯುತ್ತಾರೆ’ ಎಂದಿದ್ದರು. ಕಳೆದ ಭಾನುವಾರ (10-08-2014) ಆ ಕಾರ್ಯಕ್ರಮ. ಬೆಳಗ್ಗೆ ಕೋಲಾರದ ಆದಿಮಕ್ಕೆ ಹೋಗುವ ಕಾರ್ಯಕ್ರಮವನ್ನು ಮಧ್ಯಾಹ್ನಕ್ಕೆ ಹಾಕಿಕೊಂಡು, ಶಾಮಣ್ಣನವರನ್ನೂ ಮಾತನಾಡಿಸಿದ ಹಾಗೆ ಆಗುತ್ತದೆ ಎಂದುಕೊಂಡು ಹಂದಲಗೆರೆಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ.

ಪುಸ್ತಕ ಬಿಡುಗಡೆ ಮಾಡಿ ಆರಂಭದಲ್ಲಿ ಮಾತನಾಡಿದವರು ನಾವೆಲ್ಲ ಕವಿಯಾಗಿ ಈಗಲೂ ಇಷ್ಟಪಡುವ, ಆದರೆ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ girish-book-releaseಗೌರವಿಸದ ಸಿದ್ಧಲಿಂಗಯ್ಯ. ಪುಸ್ತಕದ ಬಗ್ಗೆ ಮತ್ತು ಗಿರೀಶರ ಬಗ್ಗೆ ಪ್ರೀತಿಯಿಂದ ಮಾತನಾಡಿದರು. ನಂತರ ಮಾತನಾಡಿದವರು ಅಧ್ಯಾಪಕ ಮತ್ತು ಸಾಹಿತಿ ಕೆ.ವೈ.ನಾರಾಯಣಸ್ವಾಮಿ. ಕೆವೈಎನ್‌ರು ’ಕವಿಗೆ ಅಹಂಕಾರ ಇರಬೇಕು, ಆದರೆ ಗಿರೀಶರಲ್ಲಿ ವಿನಯ ಇದೆ. ಮುಂದಿನ ದಿನಗಳಲ್ಲಿ ಉತ್ತಮ ಕವಿಯಾಗುತ್ತಾರೆ, ಹೆಚ್ಚು ಅಧ್ಯಯನ ಮತ್ತು ನಿರಂಕುಶಮತಿಯಾಗುವ ಮೂಲಕ ಅದು ಸಾಧ್ಯ’ ಎಂದು ಬಹಳ ಚೆನ್ನಾಗಿ ಸಾಹಿತ್ಯದ ಪಾಠ ಮಾಡಿದರು. ಅವರ ಭಾಷಣದ ಮಧ್ಯೆ ಕೆಲವು ತೆಗೆದುಕೊಳ್ಳಲೇಬೇಕಾಗಿದ್ದ ಫೋನ್‌ಗಳು ಬಂದಿದ್ದರಿಂದ ಇಡಿಯಾಗಿ ಕೇಳಲಾಗಲಿಲ್ಲ. ಆದರೆ ಕೇಳಿದ್ದನ್ನು ಬಹಳ ಮೆಚ್ಚಿಕೊಂಡೆ. ಒಂದು ಒಳ್ಳೆಯ ಸಾಹಿತ್ಯದ ಪಾಠ ಅದು. ಅಲ್ಲಿ ಅನೇಕ ಯುವಸಾಹಿತಿಗಳು ಮತ್ತು ಕವಿಗಳು ಇದ್ದರು. ಬಹಳ ಜನ ಹೊರಗೇ ಇದ್ದರು. ಅವರೆಲ್ಲರೂ ನಾಲ್ಕಾರು ಸಲ ಕೇಳಿಸಿಕೊಳ್ಳಬೇಕಾದ ಪಾಠ ಅದು. ಆದರೆ, ಬಹುತೇಕರು ಕೇಳಿಸಿಕೊಂಡಂತೆ ಕಾಣಲಿಲ್ಲ.

ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸಿದ ತಾಲಿಬಾನಿಗಳ ಬಗ್ಗೆ ಗಿರೀಶ್ “ಮನುಕುಲದ ಅಸ್ಮಿತೆ” ಕವನದಲ್ಲಿ ಹೀಗೆ ಹೇಳುತ್ತಾರೆ:

ತಾಲಿಬಾನಿಗಳು ಪ್ರತಿಮೆಗೆ
ಸಿಡಿಮದ್ಧು ಇಟ್ಟಾಗ
ಪುಡಿಪುಡಿಯಾದದ್ದು
ಬುದ್ಧನಲ್ಲ,
ಬೆಳಕು.

ಇದನ್ನು ಸಿದ್ಧಲಿಂಗಯ್ಯನವರು ’ಇದು ಉತ್ತಮ ಕವಿತೆ ಮತ್ತು ಕಾಣ್ಕೆ’ ಎಂದು ವಿವರಿಸಿದಾಗ, ಹೌದೆನ್ನಿಸಿತು. ತಾಲಿಬಾನಿಗಳ ಕೃತ್ಯದ ಬಗ್ಗೆ, ಕಾಂದಹಾರದಲ್ಲಿ ಆರಿದ ಬೆಳಕಿನ ಬಗ್ಗೆ ವಿಷಾದವಾಗುತ್ತಿತ್ತು. ಆದರೆ, ಇದೇ ಕವನವನ್ನು ಕೆವೈಎನ್ ವ್ಯಾಖ್ಯಾನಿಸುತ್ತ, ’ಕವಿ ಎಚ್ಚರಿಕೆಯಿಂದ ಬರೆಯಬೇಕು, ಆರುವ ಬೆಳಕು ಅದೆಂತಹ ಬೆಳಕು? ಪ್ರತಿಮೆ ಒಡೆದ ಮಾತ್ರಕ್ಕೆ ಬುದ್ಧ ಆರಿಹೋಗುವಂತಹ ಬೆಳಕಲ್ಲ. ಹಾಗಾಗಿ ಕವಿಗೆ ಅಹಂಕಾರ ಇರಬೇಕು’ ಎಂದಾಗ ಅದೂ ಸರಿಯೆನ್ನಿಸಿತು.

“ನೀರ ಮೇಗಲ ಸಹಿ” ಎಂಬ ಕಿರುಪದ್ಯಗಳ ಸಂಕಲನದಲ್ಲಿ ಒಂದು ಕಿರುಪದ್ಯ ಹೀಗಿದೆ:

ಪ್ರೀತಿಸಲು ಬಾರದ ನಪುಂಸಕರು
ಹೆಣ್ಣನ್ನು
ಮಾಯೆ ಎಂದು
ಜರಿದುಬಿಟ್ಟರು.

ಇದನ್ನು ಸಹ ಸಿದ್ಧಲಿಂಗಯ್ಯನವರು ಒಳ್ಳೆಯ ಪದ್ಯ ಎಂದು ಉಲ್ಲೇಖಿಸಿದಾಗ ಸರಿ ಎನ್ನಿಸಿತ್ತು. ಆದರೆ, ’”ನಪುಂಸಕ” ಎನ್ನುವ ಪದವನ್ನು girish-negilagereತರುವ ಮೂಲಕ “ಹೆಣ್ಣು” ಇಲ್ಲಿ ಉಪಭೋಗದ ವಸ್ತುವಾಗಿದ್ದಾಳೆ. ಗಿರೀಶ್‌ಗೆ ಅ ರೀತಿಯ ಮನಸ್ಥಿತಿ ಇಲ್ಲದಿರಬಹುದು. ಇಲ್ಲ. ಆದರೆ ಈ ಕವನದಲ್ಲಿ ಆ ನಿಟ್ಟಿನಿಂದ ನೋಡಿದಾಗ ಆಘಾತವಾಗುತ್ತದೆ’ ಎಂದು ಕೆವೈಎನ್ ಹೇಳಿದಾಗ, ಇಬ್ಬರು ಕನ್ನಡದ ಅಧ್ಯಾಪಕರು ಒಂದೇ ಪದ್ಯವನ್ನು ವಿವರಿಸಿ, ಮೆಚ್ಚಿ, ತುಂಡರಿಸಿ, ಮನಸ್ಸುಗಳನ್ನು ಎಚ್ಚರಿಸಿ-ವಿಸ್ತರಿಸುವ ಕೆಲಸ ಮಾಡಿದಾಗ ಆಶ್ಚರ್ಯ ಮತ್ತು ಆಘಾತವಾಗಿದ್ದು ನನ್ನಂತಹ ಸಾಹಿತ್ಯದ ವಿದ್ಯಾರ್ಥಿ ಅಲ್ಲದವರಿಗೆ. ಗಿರೀಶರಿಗೆ ಲಭಿಸಿರುವ ಸಾಧ್ಯತೆಗಳ ಪಟ್ಟಿ ಮಾಡುತ್ತಲೇ ಕೆವೈಎನ್ ಸಾಹಿತ್ಯದ ಸೂಕ್ಷ್ಮತೆಗಳನ್ನು ಪಾಠ ಮಾಡಿದರು. ಅವರಿಗೆ ಈ ಕವಿಯ ಮೇಲೆ ಪ್ರೀತಿ ಇಲ್ಲದಿದ್ದರೆ ಈ ರೀತಿಯ ಮಾತು ಸಾಧ್ಯವೇ ಇಲ್ಲ ಎನ್ನುವಂತಿತ್ತು ಅಂದಿನ ಭಾಷಣ. ಕವಿಗೆ ನೋವಾದರೂ ಕೇಳಿಸಿಕೊಳ್ಳಬೇಕಾದ ಮತ್ತು ಅಧ್ಯಯನ ಮಾಡಬೇಕಾದ ಭಾಷಣ ಅದು. ಆತನ ಗೆಲುವಿಗೆ, ಉತ್ತಮ ಸಾಹಿತ್ಯ ರಚನೆಗೆ.

ಅಂದು ಟಿಎನ್ ಸೀತಾರಾಮ್ ಸಹ ಮಾತನಾಡುತ್ತ, ’ಒಳ್ಳೆಯ ಕಾವ್ಯ ರಚಿಸಲು ಬೇಕಾದ ಸಂದರ್ಭ ಈಗಿಲ್ಲ, ಅದಕ್ಕೆ ಬೇಕಾದ ಪರಿಸರ ಅಲ್ಲ ಇದು’ ಎಂದರು. ತಮ್ಮ ಸೃಜನಶೀಲತೆಯ ಅಭಿವ್ಯಕ್ತಿಯ ಮೇಲೆ ಬಂದ ಒತ್ತಡಗಳು, ಅದರಲ್ಲೂ ಮಾರ್ಕೆಟ್ ಒತ್ತಡಗಳ ಬಗ್ಗೆ ಮಾತನಾಡಿದರು. ಅದೂ ಸಹ ಗಮನಿಸಬೇಕಾದ ಅಂಶವೇ. ಆದರೆ, ಸಾಹಿತಿ ಮಹತ್ವಾಕಾಂಕ್ಷಿಯಾದಾಗ ಇದೆಲ್ಲವೂ ನಗಣ್ಯವಾಗುತ್ತದೆ, ಇಡೀ ಪ್ರಪಂಚವೇ ಇಂದು ಕುದಿಯುತ್ತಿದೆ, ಕರಗುತ್ತಿದೆ. ಸಾಹಿತ್ಯಕ್ಕೆ ಯಾವ ಒಳ್ಳೆಯ ಸಂದರ್ಭದಷ್ಟೇ ಇದೂ ಒಳ್ಳೆಯ ಸಂದರ್ಭವೇ ಎನ್ನುತ್ತೇನೆ ನಾನು.

ಆದರೆ ಒಂದು ಸಮಸ್ಯೆ ಇದೆ. ಇಂದು ಸಾಹಿತ್ಯಕ್ಕೆ ಬರುತ್ತಿರುವ ಬಹುತೇಕರು ಹಿಂದಿನವರಂತೆ ಅಧ್ಯಯನಶೀಲರೂ, ತರಗತಿಗೆ ಮೊದಲಿರುವ ಶ್ರಮಜೀವಿಗಳೂ ಅಲ್ಲ. ಯಾವುದೋ ಒಂದು ಹಂತದಿಂದ ಸಾಹಿತ್ಯಕ್ಕೆ ಹೊರಳಿಕೊಂಡವರು. ಹಾಗಾಗಿಯೆ ಪ್ರತಿಭೆ ಬೇಡುವ ಅಧ್ಯಯನ ಮತ್ತು ಶ್ರಮದ ಕೊರತೆ ಇರುವವರು. ಆದರೆ, ಸಾಹಿತ್ಯಕೃಷಿಯನ್ನು ಜೀವನೋಪಾಯಕ್ಕೆ ಮಾಡುವ ಸಂದರ್ಭದಲ್ಲಿ ಇಲ್ಲ ಇವರು. ಹಾಗಾಗಿಯೆ ಇವರಿಗೆ ಅಹಂಕಾರಿಗಳಾಗುವ, ಸ್ಥಾಪಿತ ಶಕ್ತಿಗಳನ್ನು ಮತ್ತು ನಂಬಿಕೆಗಳನ್ನು ಪ್ರಶ್ನಿಸುವ, ಗತಕಾಲದ ಸತ್ಯವನ್ನು ಅರಗಿಸಿಕೊಂಡು ಸುಳ್ಳನ್ನು ಎತ್ತಿಒಗೆಯುವ, ಇಂದಿನ ಸತ್ಯವನ್ನು ನೇರವಾಗಿ ಹೇಳುವ ಸ್ವಾತಂತ್ರ್ಯ ಹಿಂದಿನವರಿಗಿಂತ ಹೆಚ್ಚಿದೆ. ಬಸವಣ್ಣ ಮತ್ತು ಕುವೆಂಪುರವರಿಗಿಂತ ಬೇರೆ ಆದರ್ಶ ಇವರಿಗೆ ಬೇಕಿಲ್ಲ. ’ಎನಗಿಂತ ಕಿರಿಯರಿಲ್ಲ’ ಎನ್ನುತ್ತಲೆ,

“ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!”

ಎನ್ನುತ್ತಾ ಇಡೀ ಪರಂಪರೆಯನ್ನು ಎತ್ತಿ ಒಗೆದವನು ಬಸವಣ್ಣ. ’ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಕರೆಕೊಟ್ಟು ಅಂತೆಯೇ ಬರೆದದ್ದು ಕುವೆಂಪು. ಕಾವ್ಯವನ್ನು ಸಾಧಿಸಿಕೊಳ್ಳಲು ಕುವೆಂಪು ಯಾವರೀತಿ ತಪಸ್ಸು ಮಾಡಿದರು, ತಮ್ಮ ಇಪ್ಪತ್ತರ ವಯಸ್ಸಿನ ಅಸುಪಾಸಿನಲ್ಲಿ ಎಷ್ಟೆಲ್ಲ ಕವಿತೆಗಳನ್ನು ಬರೆದು-ಹರಿದು-ಬರೆದರು ಎನ್ನುವುದನ್ನು ಅವರ “ನೆನಪಿನ ದೋಣಿ” ಓದಿದರೆ ತಿಳಿಯುತ್ತದೆ.

ಇಂದು ಸಾಹಿತಿ ಅಂತರ್ಜಾಲದ ಮೂಲಕ ನೇರಪ್ರವೇಶ ಪಡೆಯುತ್ತಿದ್ದಾನೆ ಮತ್ತು ಪುಸ್ತಕಗಳನ್ನೂ ಪ್ರಕಟಿಸುತ್ತಿದ್ದಾನೆ. ಕೊರತೆ ಇರುವುದು ಸ್ವವಿಮರ್ಶೆಯಲ್ಲಿ, ತನಗೇ ಸವಾಲು ಹಾಕಿಕೊಳ್ಳುವುದರಲ್ಲಿ.

ನನಗೆ ಕವನ-ಕಾವ್ಯ ಅಷ್ಟು ಅರ್ಥವಾಗುವುದಿಲ್ಲ. ಹಾಡಿದರೆ ಮನದಟ್ಟಾಗುತ್ತದೆ. ಹಾಗಾಗಿ ಗಿರೀಶರ ಕವನಗಳು “ಕಾವ್ಯ ಗುಣ”ದ ಕಾರಣಕ್ಕಾಗಿ ಎಷ್ಟು girish-neeramegalasahiಶ್ರೇಷ್ಟ ಎಂದು ಹೇಳಲಾರೆ. ಆದರೆ ಗಿರೀಶ್ ನಮ್ಮೆಲ್ಲರಂತೆ ಬುದ್ಧ, ಗಾಂಧಿ, ಕುವೆಂಪುರನ್ನು ಮೆಚ್ಚಿಕೊಳ್ಳುವ ಮಾನವತಾವಾದಿ. ಅವರೇ ಹೇಳಿಕೊಂಡಿರುವಂತೆ ಕುವೆಂಪುರವರ “ವಿಶ್ವಮಾನವ ಸಂದೇಶ”ವನ್ನು ಸಾರಲು 1999 ರಲ್ಲಿ ಸೈಕಲ್ ಏರಿ ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು ಕೇಂದ್ರಗಳನ್ನು ಸುತ್ತಿದವರು. 2004 ರಲ್ಲಿ ದೀಪಾ ಮತ್ತು ಗಿರೀಶ ಇದೇ ಕೆಲಸದ ಮೇಲೆ ಶಿವಮೊಗ್ಗದ ಕಡೆ ಹೋದಾಗ ಕಡಿದಾಳು ಶಾಮಣ್ಣನವರು ಇವರಿಗೆ ಜೊತೆಯಾಗಿ ಹಲವು ಬೀದಿನಾಟಕಗಳಲ್ಲಿ ತಮ್ಮ ತಬಲ ಸಾಥ್ ನೀಡಿದ್ದಾರೆ. ಒಳ್ಳೆಯ ಮನಸ್ಸಿದೆ. ತಪಸ್ಸು ಇವರನ್ನು ಮತ್ತವರ ಸಂಗಾತಿಗಳನ್ನು ಎತ್ತರಕ್ಕೆ ಒಯ್ಯಲಿ.

ಕಾರ್ಯಕ್ರಮ ನಡೆದ ದಿನವೇ ಇದನ್ನೆಲ್ಲ ಬರೆಯಬೇಕು ಎಂದುಕೊಂಡೆ. ಆದರೆ, ಕೆಪಿಎಸ್‌ಸಿ ವಿಚಾರವಾಗಿ ಮೂರ್ನಾಲ್ಕು ದಿನಗಳಿಂದ ನನ್ನ ಸಮಯ ನನ್ನ ಹತೋಟಿಯಲ್ಲಿ ಇಲ್ಲದ ಕಾರಣ ಆಗಿರಲಿಲ್ಲ. ನನ್ನ ಯುವಮಿತ್ರರೊಂದಿಗೆ ಇದನ್ನು ಹಂಚಿಕೊಳ್ಳುವ ತುರ್ತಿದೆ ಎಂಬ ಭಾವನೆಯಲ್ಲಿ ಇದನ್ನು ಆತುರದಲ್ಲಿ ಬರೆದಿದ್ದೇನೆ. ಎಂದಿನ ಆಶಾವಾದದಲ್ಲಿ.


ಗಿರೀಶರ ಕವನಗಳಲ್ಲಿಯ ಕೆಲವು ಗಮನಾರ್ಹ ಸಾಲುಗಳು:

ಬೀದಿಬಿದಿ ತಿರುಗಿ
ಮಂಕರಿ ಸಗಣಿ
ಹೊತ್ತುತಂದು
ಬೆವರ ಬೆರಸಿ
ಅವ್ವ ಬರೆಯುತ್ತಾಳೆ ಕವಿತೆ
ಗೋಡೆ ತುಂಬಾ ಚಿತ್ತಾರದಂತೆ

ತನ್ನ ಕವಿತೆಗಳ ತಾನೇ
ಮುರಿದು ಕಟ್ಟುತ್ತಾ
ಕವಿತೆಯಾಗೇ ಬಾಳುತ್ತಾಳೆ!

– “ಅವ್ವ”

***

ಮುರಿದು ಕಟ್ಟಬೇಕು
ಸ್ಥಾವರಗಳೇ ಚಲಿಸುವಂತೆ
ಜಿಗಿಯಬೇಕು ಭೂಮಿ
ಕಾಲದೇಶ
ಹುಟ್ಟುಸಾವು
ಶೂನ್ಯದಾಚೆಯ
ನಂಬಿಕೆಯಾಚೆಗೆ…

– “ಶೂನ್ಯದಾಚೆಗೆ”

***

ಭೂಮಿಯ ಮೇಲಿನ ಕಟ್ಟಕಡೆಯ
ಭಯದ ಮನುಷ್ಯನಿರುವವರೆಗೆ
ದೇವರಿಗೆ ಸಾವಿನ ಭಯವಿಲ್ಲ
ವಿಜ್ಞಾನದ ಸೂಕತದ ಮನೆಯಲ್ಲಿ
ದೇವರು ದಿನವೂ
ಸತ್ತುಹುಟ್ಟುತ್ತಲೇ ಇದ್ಡಾನೆ

– “ದೇವರೆಂಬ ಬೆದರುಬೊಂಬೆ”

***

ಮದ್ದುಗುಂಡುಗಳ ಕಾರ್ಖಾನೆ
ದುಖಾನು ತೆರೆದು ಅಸ್ತ್ರಗಳ ಮಾರಿ
ಅನ್ನು ಉಣ್ಣುವ ದೊಡ್ಡಣ್ಣರಿರುವಾಗ
ಯುದ್ಧಕ್ಕೆ ಕಾರಣಗಳೇ ಬೇಕಿಲ್ಲ
ಅನ್ನ ನೀರು ಇಂಧನ
ಧರ್ಮ ಶಾಂತಿಗಾಗಿಯೂ
ಸಿಡಿಯುತ್ತವೆ ಮದ್ದುಗುಂಡು
ಗಡಿಗಳಲ್ಲಿ ಈಗ
ದಿನವೂ ದೀಪಾವಳಿ

– “ಬ್ರಹ್ಮಾಸ್ತ್ರಗಳ ಸಂತೆ”

***


ಪುಸ್ತಕಗಳು:
– “ನೇಗಿಲ ಗೆರೆ” – ಪದ್ಯಗಳು
– “ನೀರ ಮೇಗಲ ಸಹಿ” – ಕಿರು ಪದ್ಯಗಳು
ಲೇಖಕ: ಗಿರೀಶ್ ಹಂದಲಗೆರೆ
ಬೆಲೆ. ತಲಾ ರೂ.80
ಪ್ರಕಾಶಕರು: ಉಪಾಸನ