Daily Archives: August 20, 2014

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2014 : ಕೇವಲ ಹತ್ತೇ ದಿನ ಬಾಕಿ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2014(ಕಳೆದ ವರ್ಷದ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಮಹಾತ್ಮ ಗಾಂಧಿಗೆ ಗೌರವಪೂರ್ವಕವಾಗಿ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:
ಆಗಸ್ಟ್ 31, 2014

ಸೆಪ್ಟೆಂಬರ್ katha spardhe inside logo 2014 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:
editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

ಬಹುಸಂಖ್ಯಾತ ತತ್ವ : Majoritarianism

– ಇಂಗ್ಲಿಷ್ : ಸಾಬಾ ನಕ್ವಿ
– ಅನುವಾದ : ಬಿ.ಶ್ರೀಪಾದ ಭಟ್

ಕೆಲವು ವಾರಗಳ ಹಿಂದೆ ಸುಡುವ, ತೇವವಾದ ಸಂಜೆಯಲ್ಲಿ, ದೆಹಲಿಯ ಸಂವಿಧಾನ ಕ್ಲಬ್‌ನಲ್ಲಿ ಪುಸ್ತಕ ಬಿಡುಗಡೆಯ ಸಮಾರಂಭವಿತ್ತು. ನರೇಂದ್ರ ಮೋದಿ ಸರ್ಕಾರ ತನ್ನ ಮೊದಲ ಸಂಸತ್ತಿನ ಅಧಿವೇಶನವನ್ನು ನಡೆಸುತ್ತಿರುವ ಪಾರ್ಲಿಮೆಂಟ್ ಭವನದಿಂದ ಈ ಸಂವಿಧಾನ ಕ್ಲಬ್ ಕೂಗಳತೆಯ ದೂರದಲ್ಲಿದೆ.ಅಲ್ಲಿ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳ ಕ್ಯಾಬಿನೆಟ್ ಮಂತ್ರಿ ಕಲರಾಜ್ ಮಿಶ್ರ ಅವರು ತಮ್ಮ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಬರೆದ “ಹಿಂದುತ್ವ : ಒಂದು ಜೀವನ ಶೈಲಿ” ಎನ್ನುವ ಪುಸ್ತಕ ಬಿಡುಗಡೆ ಸಮಾರಂಭವಾಗಿತ್ತು. ತಮ್ಮ 73ನೇ ವಯಸ್ಸಿನ ಮಿಶ್ರಾ ಉತ್ತರ ಪ್ರದೇಶ ರಾಜಕಾರಣದ ಹಳೆಯ ತಲೆಗಳಲ್ಲೊಬ್ಬರು. ಮೋದಿ ಕ್ಯಾಬಿನೆಟ್‌ನಲ್ಲಿ ಮಂತ್ರಿ ಪದವಿ ಗಿಟ್ಟಿಸಿದ ಇವರು ಅಲ್ಲಿಂದ ಚುನಾಯಿತರಾದModi 70 ಪ್ಲಸ್ ಸಂಸದರ ಪೈಕಿ ಒಬ್ಬ ಅದೃಷ್ಟಶಾಲಿಗಳು. ಇನ್ನು ಕೇವಲ ಎರಡು ವರ್ಷಗಳು ಮಾತ್ರ ಮಂತ್ರಿ ಪದವಿಯಲ್ಲಿರಲು ಅವಕಾಶವಿರುವ ಕಾರಣ ಮೃದು ಮಾತಿನ ಕಲರಾಜ್ ಮಿಶ್ರರಂತಹವರು ಈ ರೀತಿಯಾಗಿ ವೇದಾಂತದ ಮತ್ತು ಐಡಿಯಾಲಜಿಗಳ ಕಸುಬುಗಳಲ್ಲಿ ತೊಡಗಿಕೊಂಡಿರುವುದು ಸಹಜವೇ ಆಗಿದೆ

ಅಲ್ಲಿ ಮಿಶ್ರಾ ಅವರು ಪುರಾಣಗಳನ್ನೊಳಗೊಂಡ ಹಿಂದೂ ದೇಶದ ಅತಿ ದೊಡ್ಡ ಪುರೋಹಿತರ ಜೊತೆಗೆ ಆಸೀನರಾಗಿದ್ದರು. ಆ ಸಮಾರಂಭದ ಬಲು ದೊಡ್ಡ ಆಕರ್ಷಣೆ ಗೋರಖ್‌ಪುರದಿಂದ ಆಯ್ಕೆಗೊಂಡ ಬಿಜೆಪಿ ಸಂಸದ ಮತ್ತು ‘ಹಿಂದೂ ಯುವ ವಾಹಿನಿ’ ಸ್ಥಾಪಕ ಯೋಗಿ ಆದಿತ್ಯನಾಥ್ (ಪ್ರಭಾವಶಾಲಿ ಗೋರಖನಾಥ್ ಮಠದ ಮುಂದಿನ ಉತ್ತಾರಾಧಿಕಾರಿ ಎಂದೇ ಹೇಳಲಾಗುತ್ತಿದೆ) ಮತ್ತು ಬಾಬಾ ರಾಮದೇವ್. ಅಲ್ಲಿ ಮಾತನಾಡಿದ ಎಲ್ಲ ಭಾಷಣಕಾರರ ಒಕ್ಕೊರೊಲಿನ ಅಭಿಪ್ರಾಯವೆಂದರೆ ‘ಸೆಕ್ಯುಲರ್’ ಎನ್ನುವ ಇರುಸುಮುರಿನ ಪದದಿಂದಾಗಿ ಹಿಂದೂಗಳು ತಮ್ಮ ಧರ್ಮದ ಕುರಿತಾಗಿ ನಾಚಿಕೆ ಪಡಬೇಕಾಗಿಲ್ಲ. ಬಾಬಾ ರಾಮದೇವ್ ಅವರ ವಾಕ್ಚಾತುರ್ಯವಂತೂ ವೃದ್ಧಿಸುತ್ತಿತ್ತು. “ಗಣಿತ, ವಿಜ್ಞಾನ, ಸಾಮಾಜಿಕ ವ್ಯವಸ್ಥೆ, ಪರಿಸರ ವ್ಯವಸ್ಥೆ, ವ್ಯವಸಾಯ ಇವೆಲ್ಲವೂ ಹಿಂದುತ್ವದಲ್ಲಿದೆ. ಇಂಡಿಯಾದ ಮುಸ್ಲಿಂರು ಸೌದಿ ಅರೇಬಿಯಾದಿಂದ, ಇರಾನ್, ಇರಾಕ್‌ನಿಂದ ಬಂದಿಲ್ಲ, ಅವರೆಲ್ಲ ಇಲ್ಲಿಂದಲೇ, ಇಲ್ಲಿನ ಹಿಂದುತ್ವ ಮೂಲದಿಂದಲೇ ಬಂದಿದ್ದು. ಹಿಂದುತ್ವವು ನಮ್ಮ ಪುರಾತನ ಧರ್ಮಗಳಲ್ಲೊಂದು. ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿ ಧರ್ಮಗಳು ಅದಕ್ಕೆ ಸರಿಸಾಟಿಯೇ ಅಲ್ಲ. ನಾವೆಲ್ಲರೂ ಹಿಂದೂಗಳ ವಂಶದವರು.”

ಒಂದು ವಾರದ ನಂತರ ದೆಹಲಿಯ ಇದೇ ವಲಯದಲ್ಲಿ ಅತ್ಯಂತ ಷೋಕಿಯಾದ, ಮೇಲ್ವರ್ಗಗಳ ತಾಣವಾದ ದಕ್ಷಿಣ ದೆಹಲಿಯ ಬಿಜೆಪಿ ಸಂಸದ ರಮೇಶ ಬಿಡೂರಿ ಅವರು ಸಂಸತ್ತಿನಲ್ಲಿ ತಮ್ಮ ತಾಳ್ಮೆ ಕಳೆದುಕೊಂಡರು. ಏಕೆಂದರೆ ಅ ದಿನದಂದು ವಿರೋಧ ಪಕ್ಷಗಳು ರಮಜಾನ್ ಉಪವಾಸವನ್ನು ಆಚರಿಸುತ್ತಿದ್ದ ಮುಸ್ಲಿಂ ನೌಕರನೊಬ್ಬನ ಬಾಯಿಯಲ್ಲಿ ಬಲವಂತವಾಗಿ ರೋಟಿಯನ್ನು ತುರುಕಿ ಅವ್ಯಾಚ ಶಬ್ದಗಳಿಂದ ನಿಂದಿಸಿದ ಶಿವಸೇನಾ ಸಂಸದರ ಕೃತ್ಯದ ಕುರಿತಾಗಿ ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದರು. ಆಗ ಈ ಗೌರವಾನ್ವಿತ ಸಂಸದ ಬಿಡೂರಿಯವರು ಎಂಐಎಂನ ಅಸಾದ್ದುದ್ದೀನ ಓವೇಸಿ ಮತ್ತು ಕಾಂಗ್ರೆಸ್‌ನ ಸಂಸದ ಶಾನವಾಜ್ ಅವರನ್ನು ಉದ್ದೇಶಿಸಿ “katua” ( ಮುಸ್ಲಿಂ ಗಂಡಸರ ಸುನ್ನತಿ ಪದ್ಧತಿಯನ್ನು ಕುರಿತ ಅವ್ಯಾಚ ಪದ) ಎಂದು ಜರೆದು ಅವರಿಬ್ಬರೂ ಪಾಕಿಸ್ತಾನಕ್ಕೆ ಹೋಗಬೇಕೆಂದು ಆದೇಶಿಸಿದರು. ಈ ಬಿಜೆಪಿ ಸಂಸದರನ್ನು ಸಂಸದೀಯ ವ್ಯವಹಾರಗಳ ಮಂತ್ರಿ ವೆಂಕಯ್ಯ ನಾಯ್ಡು ಮತ್ತು ಅಡ್ವಾನಿಯವರು ತಹಬಂದಿಗೆ ತರಲು ಪ್ರಯತ್ನಿಸಿದರೂ ತನ್ನ ಪಟ್ಟು ಬಿಡದ ಈ ಬಿಜೆಪಿ ಸಂಸದ ಮುಂದುವರೆದು ಸಂಸತ್ತಿನೊಳಗೆ ಮತೀಯವಾದಿ ಪ್ರೇರಿತ ಉದ್ದೇಶವನ್ನೊಳಗೊಂಡ ಕಳ್ಳರು, ಗಲಭೆಕೋರರು ತುಂಬಿಕೊಂಡಿದ್ದಾರೆ ಎಂದು ಜರೆದರು.

ಇತರ ರಾಜ್ಯಗಳಲ್ಲಿ ಕೋಮುವಾದದ ಗಲಭೆಗಳು ತನ್ನ ಗರಿಗೆದರಿಕೊಂಡು ಮತ್ತೆ ಹಬ್ಬತೊಡಗಿತ್ತಿರುವುದರ ಕುರಿತಾದ ವರದಿಗಳು ಮತ್ತು ರಾಜಧಾನಿ ದೆಹಲಿಯಲ್ಲಿ ಸಂಭಸುತ್ತಿರುವ ಮೇಲಿನ ಘಟನೆಗಳು ಸಂವಿಧಾನಾತ್ಮಕಾಗಿ ಮಾನ್ಯತೆಯನ್ನು ಪಡೆಯದಂತಹ “ಹಿಂದೂ ರಾಷ್ಟ್ರ” ನಮ್ಮ ಮೇಲೆ ಕುಳಿತಿದೆ, ನಮ್ಮ ಮುಂದೆ ನಿಂತಿದೆ ಎಂದೇ ಸೂಚಿಸುತ್ತಿದೆ. ಗೋವಾದ ಮಂತ್ರಿ ದೀಪಕ್ ಧಾವಲ್ಕರ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭವಿಷ್ಯದಲ್ಲಿ ಇಂಡಿಯಾವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿರ್ತಿಸಲು ಸಮರ್ಥರು modi_amit_shahಎಂದು ಹೇಳಿಕೆ ನೀಡಿದ್ದರು. ಅಂದರೆ ಹಿಂದೂ ಮೆಜಾರಿಟೇರಿಯನ್ ಸಿದ್ಧಾಂತವು ಮತಪೆಟ್ಟಿಗೆಗಳ ಮೂಲಕ ಒಳನುಸುಳಿದೆಯೇ? ಇತಿಹಾಸಕಾರ ದಿಲೀಪ್ ಸೈಮನ್ ಇದಕ್ಕೆ ಉತ್ತರಿಸುತ್ತಾ, “ಇಲ್ಲಿ ಹಿಂದೂ ರಾಷ್ಟ್ರದ ಪರವಾದ ಮತದಾರರು ಇಂದು ನಮ್ಮ ಮುಂದಿದ್ದಾರೆ, ನಮ್ಮ ಮೇಲಿದ್ದಾರೆ, ಇದು ತುಂಬಾ ಸೀರಿಯಸ್ ಆದ ಸಂಗತಿ. ಅರ್ಧಸತ್ಯಗಳು, ಪೂರ್ವಗ್ರಹಗಳನ್ನು ಕಂಠೋತ್ಕವಾಗಿ ಪ್ರಾಮಾಣೀಕರಿಸಿ, ಪುನರಾವರ್ತನೆ ಮಾಡುತ್ತಾ, ಅಂಟುಜಾಡ್ಯದಂತೆ ದೇಶದೆಲ್ಲೆಡೆ ಹಬ್ಬಿಸಲಾಗುತ್ತಿದೆ, ಬಿತ್ತಲಾಗುತ್ತಿದೆ. ಕೋಮುವಾದಿ ತತ್ವಗಳು ಮತ್ತು ಒಂದು ಧರ್ಮದ ಭೂತಕಾಲವನ್ನು ವೈಭವೀಕರಿಸುವಂತಹ ಸರಳೀಕೃತ ಗ್ರಹಿಕೆಗಳನ್ನು ಇಂದು ಜನಪ್ರಿಯ ವಿಚಾರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ದೇಶವನ್ನು ಪೂಜಿಸಬೇಕು, ಇತಿಹಾಸದ ಅನ್ಯಾಯದ ವಿರುದ್ಧ ಪ್ರತೀಕಾರ, ಮತ್ತು ನಾಯಕತ್ವದ ಆರಾಧನೆಗಳಂತಹ ಅಸಂಬದ್ಧ, ವಿಚಾರಹೀನ ಚಿಂತನೆಗಳನ್ನು ಸಮಾಜದಲ್ಲಿ ನಿರಂತರವಾಗಿ ಬಿತ್ತುವುದೇ ಇವುಗಳ ಮೂಲ ಉದ್ದೇಶ” ಎಂದು ಹೇಳುತ್ತಾರೆ. ಇವರು “ಈ ರಣನೀತಿಯಲ್ಲಿ ದ್ವೇಷವನ್ನು ಆಧರಿಸಿದ ಹಿಂಸೆಯು ಪ್ರಧಾನ ಪಾತ್ರ ವಹಿಸುತ್ತದೆ. ಈ ಅಂಶಗಳು ಕ್ರಿಮಿನಲ್ ನ್ಯಾಯದ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಇನ್ಸಿಟ್ಯೂಟ್ಸ್‌ಗಳ ಅಧಿಕಾರವನ್ನೇ ತಿರಸ್ಕರಿಸುತ್ತದೆ” ಎಂದು ಎಚ್ಚರಿಸಿದರು. ಅಮಿತ್ ಷಾ ಅವರನ್ನೆ ಉದಾಹರಣೆಯನ್ನಾಗಿ ತೆಗೆದುಕೊಂಡಾಗ ಈ ಅಮಿತ್ ಷಾ ಅವರ ಮೇಲೆ ಕೊಲೆಯ ಅಪಾದನೆಗಳವೆ ಮತ್ತು ಆ ಆಪಾದನೆಗಳ ಮೇಲೆ ನ್ಯಾಯಾಲಯದಲ್ಲಿ ಕೇಸುಗಳನ್ನು ದಾಖಲಿಸಲಾಗಿದೆ, ಅವುಗಳ ಕುರಿತಾಗಿ ವಿಚಾರಣೆ ನಡೆಯುತ್ತಿದೆ, ಅದರೆ ಇವೆಲ್ಲವನ್ನೂ ಗೌಣಗೊಳಿಸಿ ಅವರನ್ನು ಬಿಜೆಪಿ ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಯಿತು ಮತ್ತು ಮೋದಿ ಇವರನ್ನು “ಪಂದ್ಯ ಶ್ರೇಷ್ಠ” ವ್ಯಕ್ತಿಯೆಂದು ಹೊಗಳಿದರು. ಉತ್ತರಪ್ರದೇಶದಲ್ಲಿ ಜಾತಿ, ಮತಗಳನ್ನು ಧೃವೀಕರಿಸಿ, ಕೋಮು ಗಲಬೆಗೆ ಕಾರಣವಾಗಿ ಆ ಧೃವೀಕರಣದ ಲಾಭವನ್ನು ಪಡೆದುಕೊಂಡು 70 ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿದ ಪಂದ್ಯವನ್ನೇ ಮೋದಿ ಉದಾಹರಿಸುತ್ತಿರುವುದು. ಈ ಮಾದರಿಯ ಪಂದ್ಯಗಳ ರಣನೀತಿಗಳಲ್ಲಿ ಮೊದಲು “ಬಹುಸಂಖ್ಯಾತ”ರನ್ನು ಧರ್ಮದ ಆಧಾರದ ಮೇಲೆ ಧೃವೀಕರಣಗೊಳಿಸಿ ಅ ಮೂಲಕ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಲಾಗುತ್ತದೆ. ಮತದಾನದ ದಿನದಂದು ಬಹುಸಂಖ್ಯಾತ ಕೋಮಿನ ಮತದಾರರಿಗೆ ಒಂದು ನಿರ್ದಿಷ್ಟ ದಿಕ್ಕಿನಲ್ಲಿಯೇ ಮತದಾನ ಮಾಡುವಂತಹ ವಾತಾವರಣವೇ ನಿರ್ಮಿತಗೊಳ್ಳುತ್ತದೆ ಮತ್ತು ಅಲ್ಪಸಂಖ್ಯಾತರಲ್ಲಿ ಗೊಂದಲಗಳನ್ನು ಉಂಟು ಮಾಡಲಾಗುತ್ತದೆ ಮತ್ತು ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಅವರು ಮತದಾನ ಮಾಡಲು ಹಿಂಜರಿಯುವಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತದೆ.

ಈ ಬಹುಸಂಖ್ಯಾತ ತತ್ವದ ಯೋಜನೆಯನ್ನು ಅಲ್ಪಸಂಖ್ಯಾತರ ಮೇಲೆ ಪ್ರಯೋಗಿಸಿದಾಗ ಸುಲುಭವಾಗಿಯೇ ಗುರುತಿಸಬಹುದು ಆದರೆ ಈ ಬಹುಸಂಖ್ಯಾತ ತತ್ವದಲ್ಲಿ ದಲಿತರು ಮತ್ತು ಆದಿವಾಸಿಗಳನ್ನು ಬಳಸಿಕೊಂಡಿರುವಂತಹ ಮೆಥಡಾಲಜಿ ಮಾತ್ರ ಕುತೂಹಲಕಾರವಾಗಿದೆ. ಲೇಖಕಿ ಅರುಂಧತಿ ರಾಯ್ ಅವರು “ಅಪಾರ ವೈವಿಧ್ಯತೆಯನ್ನುಳ್ಳ ಇಂಡಿಯಾದ ಸಮಾಜದಲ್ಲಿ ಬಹುಸಂಖ್ಯಾತ ಸಮುದಾಯದ ಐಡಿಯಾಗಳನ್ನು ಕಟ್ಟಲಾಗುತ್ತದೆ ಮತ್ತು ಈ ಕಟ್ಟುವ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದಲ್ಲಿ ಹಿಂಸೆಯನ್ನು ಬಳಸಿಕೊಳ್ಳಲಾಗುತ್ತದೆ” ಎಂದು ವ್ಯಾಖ್ಯಾನಿಸುತ್ತಾರೆ. ಉತ್ತರಪ್ರದೇಶದಂತಹ ರಾಜ್ಯಗಳನ್ನು ಹೊರತುಪಡಿಸಿ ಅನೇಕ ಬಾರಿ ಇಲ್ಲಿ ಹಿಂಸೆಯು ನೇರವಾಗಿ ರಕ್ತಚರಿತೆಯ ರೂಪದಲ್ಲಿರುವುದಿಲ್ಲ. ಈ ಮಾದರಿಯನ್ನು ಪ್ರತಿಭಟಿಸುತ್ತಿರುವ ಹಿಂದೂ ಅಲ್ಲದ ಧರ್ಮಿಯರಿಗೆ ಅವರ ಸೂಕ್ತ ಸ್ಥಳ ಯಾವುದೆಂದು ಪದೇ ಪದೇ ಮನವರಿಕೆ ಮಾಡಿಕೊಡಲಾಗುತ್ತದೆ. ಅವರನ್ನು ಬಹಿಷ್ಕಾರಗೊಳಿಸಲಾಗುತ್ತದೆ. ಉದಾಹರಣೆಗೆ ವಿಶ್ವ ಹಿಂದೂ ಪರಿಷತ್‌ನ ಆಶಯದ ಮೇರೆಗೆ ಚತ್ತೀಸ್‌ಗಡನ ಬಸ್ತರ್‌ನಲ್ಲಿ ಕಿಶ್ಚಿಯನ್ನರನ್ನು ಗಡೀಪಾರು ಮಾಡಲಾಗಿದೆ, ಕಳೆದ ವಾರದ ಪತ್ರಿಕಾ ವರದಿಯ ಪ್ರಕಾರ ಹರ್‍ಯಾಣದ ಗುರಗಾವ್‌ನಲ್ಲಿ ಸುಮಾರು ಇಪ್ಪತ್ತೈದು ಮುಸ್ಲಿಂ ಕುಟುಂಬಗಳ ಮೇಲೆ ಹಲ್ಲೆ ಮಾಡಿ ಗ್ರಾಮದಿಂದ ಹೊರಹೋಗುವಂತೆ ಬಲತ್ಕಾರ ಮಾಡಲಾಗಿದೆ

ಬಹುಸಂಖ್ಯಾತ ತತ್ವವು ಮೊಟ್ಟಮೊದಲನೆಯದಾಗಿ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರಂತೆಯೇ ಪರಿಗಣಿಸುತ್ತದೆ. ಇದನ್ನು ಶ್ರೀಲಂಕಾ ದೇಶವನ್ನು ಸಹ ಉದಾಹರಣೆಯನ್ನಾಗಿ ನೋಡಬಹುದು. ಅಲ್ಲಿ ಸಿಂಹಳೀಯರ ಬಹುಸಂಖ್ಯಾತತ್ವದ ನೀತಿಯಡಿಯಲ್ಲಿ ಮುಸ್ಲಿಂ, ತಮಿಳು ನಾಗರಿಕರನ್ನು ಎರಡನೇ ದರ್ಜೆಯ ನಾಗರಿಕರಾಗಿಯೇ ಪರಿಗಣಿಸಲಾಗುತ್ತದೆ. ಇಸ್ರೇಲ್ ದೇಶವು ನಿರ್ದಾಕ್ಷೀಣ್ಯವಾಗಿ ತನ್ನ ರಾಷ್ಟ್ರವನ್ನು ಒಂದು ನಿರ್ದಿಷ್ಠ ಕೋಮಿನ ಗುಂಪಿಗಾಗಿಯೇ ಮೀಸಲಿಡುತ್ತದೆ ಮತ್ತು others ಎಂದು ಕರೆಯುವ ಸಮುದಾಯಗಳನ್ನು ದೇಶಭ್ರಷ್ಟಗೊಳಿಸಿ ಅವರ ಮೇಲೆ ಬಾಂಬ್ ದಾಳಿ ನಡೆಸುತ್ತದೆ,ಮಕ್ಕಳನ್ನು ಸಾಯಿಸುತ್ತದೆ.

ವಿಪರ್ಯಾಸವೆಂದರೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಇಂಡಿಯಾವನ್ನು ಹೊಗಳಲಾಗುತ್ತದೆ. ಇಲ್ಲಿನ ಬಹುರೂಪದ ವೈಶಿಷ್ಟವನ್ನು ಉದಾಹರಿಸಲಾಗುತ್ತದೆ. bhagvat-gadkari-modiಆದರೆ ಇದೇ ಸಂದರ್ಭದಲ್ಲಿ ಇಂಡಿಯಾದ ವಿದೇಶಾಂಗ ಸಚಿವಾಲಯದ ಮುತ್ಸದ್ದಿಯೊಬ್ಬರು “ಇಂಡಿಯಾ 1947 ರಲ್ಲಿ ತಾನು ಮತ್ತೊಂದು ಪಾಕಿಸ್ತಾನವಾಗುವುದನ್ನು ತಪ್ಪಿಸಿಕೊಂಡಿತು. ಆದರೆ 2014 ರಲ್ಲಿ ಮತ್ತೊಂದು ಶ್ರೀಲಂಕ ಮಾದರಿಯ ರಾಷ್ಟ್ರವಾಗುತ್ತಿದೆ” ಎಂದು ಹೇಳಿದ್ದಾರೆ. ಆಳವಾಗಿ ಬೇರೂರಿರುವ ಪ್ರಜಾಪ್ರಭುತ್ವದ ಗುಣಲಕ್ಷಣಗಳು ಫೆನಟಿಸಂನ ಅತಿರೇಕಗಳನ್ನು ಕಿತ್ತು ಹಾಕುತ್ತವೆ ಎಂದು ಪದೇ ಪದೇ ಹೇಳುವ ನಾವೆಲ್ಲ ಇದನ್ನು ಎಚ್ಚರಿಕೆಯ ದೃಷ್ಟಿಕೋನವೆಂದೇ ಅರಿಯಬೇಕಾಗಿದೆ. ಆದರೆ ಸೋಶಿಯಾಲಜಿಸ್ಟ್ ಆಶೀಶ್ ನಂದಿ ಅವರು ಇಂಡಿಯಾ ಶೀಘ್ರಗತಿಯಲ್ಲಿ ಬಹುಸಂಖ್ಯಾತತ್ವದ ಕಡೆಗೆ ಚಲಿಸುತ್ತಿದೆ ಎಂದು ವ್ಯಾಕುಲದಿಂದ ನುಡಿದಿದ್ದಾರೆ. ಮುಂದುವರೆದು ಜಗತ್ತಿನ ಇಂದಿನ ಪ್ರಜಾಪ್ರಭುತ್ವ ದೇಶಗಳು ಇಂದಿನ ಸಂದರ್ಭದಲ್ಲಿ ಟೊಳ್ಳಾದ, ಮೇಲ್ಪದರ ನಾಯಕರನ್ನು ರೂಪಿಸುತ್ತಿವೆ. ಅಮೇರಿಕಾದ ಒಬಾಮ ಅವರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ, ಇವರು ಬುದ್ಧಿಜೀವಿ ನಿಜ, ಆದರೆ ತಾನೊಬ್ಬ ಟೊಳ್ಳಾದ, ಮೇಲ್ಪದರದ ನಾಯಕನಂತೆಯೇ ವರ್ತಿಸುತ್ತಿದ್ದಾರೆ ಎಂದು ನಂದಿ ಹೇಳುತ್ತಾರೆ. ಇಂದಿನ ಜಗತ್ತಿನಲ್ಲಿ ನಾಯಕನಾದವನು ತನ್ನನ್ನು ಅತ್ಯಂತ ಎಚ್ಚರಿಕೆಯಿಂದ, ಇಮೇಜ್ ವೃದ್ಧಿಗಾಗಿಯೇ ಆಯ್ಕೆ ಮಾಡಿದಂತಹ ವಲಯಗಳಲ್ಲಿ ಮಾತ್ರ ಬಿಂಬಿಸಿಕೊಳ್ಳುತ್ತ, ತನ್ನ ಇಮೇಜಿಗೆ ಪೂರಕವಾಗುವಷ್ಟು ಮಾತ್ರ ಹೇಳಿಕೆಗಳನ್ನು ಕೊಡುತ್ತ ಜನಪ್ರಿಯತೆಯನ್ನು ಗಳಿಸಲು ಪ್ರಯತ್ನಿಸುತ್ತಾನೆ ಆದರೆ ಸರ್ಕಾರದ ಚಿಂತನೆಗಳಲ್ಲಿ, ಯೋಜನೆಗಳಲ್ಲಿ ಲೆಕ್ಕಕೇ ಬಾರದ ಸಣ್ಣದಾದ ಸಮುದಾಯಗಳ, ಅಂಚಿನಲ್ಲಿರುವ ಸಮುದಾಯಗಳಿಗಾಗಿ ಏನನ್ನೂ ಚಿಂತಿಸುವುದಿಲ್ಲ.

ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಂಪೂರ್ಣ ಬಹುಮತ ದೊರಕಿದ ನಂತರದ ಉದ್ಬವಿಸಿದ ಈ ಬಹುಸಂಖ್ಯಾತ ತತ್ವದ ಹುಚ್ಚಿಗೆ ಕಾಂಗ್ರೆಸ್‌ನ ಟೊಳ್ಳಾದ ಸೆಕ್ಯುಲರ್ ಸಿದ್ಧಾಂತವೂ ಕಾರಣ. ಪತ್ರಕರ್ತ ಇಂದ್ರ ಮಲ್ಹೋತ್ರ ಅವರು “ನಾವು ಇದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ದೂಷಿಸಬೇಕಾಗುತ್ತದೆ, ಏಕೆಂದರೆ ಈ ಕಾಂಗ್ರೆಸ್ಸಿನವರು ಸೆಕ್ಯುಲರಿಸಂ ಅನ್ನು ಶೋಕೇಷ್ ವಸ್ತುವನ್ನಾಗಿ ಮಾಡಿದರು” ಎಂದು ದೂಷಿಸುತ್ತಾರೆ. ಆದರೆ ಚಿಂತೆಯ ವಿಷಯವೇನೆಂದರೆ ಈ ಬಾತ್ರನಂತಹವರು ಈ ದೇಶದ ಪ್ರಮುಖ ಶಿಕ್ಷಣ ತಜ್ಞ ಎಂದು ನೇಮಕಗೊಂಡರೆ ದೇವರೇ ಈ ದೇಶವನ್ನು ಕಾಪಾಡಬೇಕಾಗುತ್ತದೆ. ಈ ಮತೀಯವಾದಿಗಳು ನಿರಂತರವಾಗಿ ಹಿಂಸೆಯನ್ನು ಹುಟ್ಟುಹಾಕುತ್ತ ನರೇಂದ್ರ ಮೋದಿಗೆ ಇಂಡಿಯಾವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸು ಎಂದು ಒತ್ತಾಯಿಸುತ್ತಿದ್ದಾರೆ ಮತ್ತು ಈ ಫೆನಟಿಸಂ ಗುಂಪು ಇಂಡಿಯಾವನ್ನು ಹಿಂದೂ ರಾಷ್ಟ್ರವನ್ನಲ್ಲ ಮತ್ತೊಂದು ಸೋಮಾಲಿಯಾ ದೇಶವನ್ನು ಮಾತ್ರ ಕಟ್ಟುತ್ತಾರೆ ಎಂದು ಎಚ್ಚರಿಸುವ ಮಲ್ಹೋತ್ರ ಮುಂದುವರೆದು ಹಿಂದೂ ಸಮಾಜದ ದೊಡ್ಡತನವೇನೆಂದರೆ ಈ ಸಮಾಜವನ್ನು ಒಗ್ಗೂಡಿಸಲಾಗುವುದಿಲ್ಲ. ನಮ್ಮ ವ್ಯವಸ್ಥೆಗೆ ಸಾಕಷ್ಟು ರಕ್ಷಣೋಪಾಯಗಳಿವೆ, ಆದರೆ ನಾವು ಧೈರ್ಯದಿಂದ ಮಾತನಾಡುವುದನ್ನು ಕಲಿಯಬೇಕಷ್ಟೆ ಎಂದು ಹೇಳುತ್ತಾರೆ.

ಅಧಿಕೃತವಾಗಿ ಭೌತಿಕವಾಗಿ ಇಂಡಿಯಾ ದೇಶವು ಸೆಕ್ಯುಲರ್ ರಾಷ್ಟ್ರವಾಗಿಯೇ ಉಳಿಯಬಹುದು, ಆದರೆ ಪೂರ್ವಗ್ರಹಪೀಡಿತ ಏಜೆಂಟರುಗಳಿಂದ ಆಗಲೇ ಟೊಳ್ಳಾಗಿರುವ ಇಲ್ಲಿನ ಸಮಾಜ ಚೈತನ್ಯದಲ್ಲಿ, ಭಾವದಲ್ಲಿ, ವರ್ತನೆಗಳಲ್ಲಿ ಫೆನಟಿಸಂ ಅಜೆಂಡಾಗಳನ್ನು ವ್ಯಕ್ತಪಡಿಸುತ್ತಿರುತ್ತದೆ. ಕೇವಲ ಶೇಕಡಾ 31 ರಷ್ಟು ಮತಗಳನ್ನು ಮಾತ್ರ ಗಳಿಸಿ ಪಟ್ಟಕ್ಕೇರಿರುವ ಇಂದಿನ ಪ್ರಧಾನಮಂತ್ರಿ ಈ ಫೆನಟಿಸಂ ಭಾಷೆಯಲ್ಲಿ ಮಾತನಾಡುವವರನ್ನು ಇಂದಿಗೂ ಬಹಿರಂಗವಾಗಿ ಖಂಡಿಸಿಲ್ಲ.

ಆರಸಸ್‌ನ ಮುಖವಾಣಿ ಪತ್ರಿಕೆ “ಆರ್ಗನೈಸರ್”ನ ಮಾಜಿ ಸಂಪಾದಕ ಮತ್ತು ಬಿಜೆಪಿ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಸದಸ್ಯ ಶೇಷಾದ್ರಿ ಚಾರಿ, “ಹಿಂದೂಗಳು ಇಂಡಿಯಾದಲ್ಲಿ ಬಹುಸಂಖ್ಯಾತರು ಮತ್ತು ಇವರ ಪ್ರಣಾಳಿಕೆಗಳು ಇಲ್ಲಿನ ಸಾಂಸ್ಕ್ರತಿಕ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ವ್ಯಕ್ತಗೊಂಡಿವೆ. ಆರೆಸಸ್ ಮತ್ತು ಬಿಜೆಪಿಯಲ್ಲಿರುವ ಸಾವಿರಾರು ಕಾರ್ಯಕರ್ತರು ಇಂದು ದೇಶದಲ್ಲಿ ರಾಜಕೀಯ ಹಿಂದು ಉದಯಿಸಿದ್ದಾನೆ ಎಂದು ಅಬಿಪ್ರಾಯ ಪಡುತ್ತಾರೆ” ಎಂದು ಅತ್ಯಂತ ಅಭಿಮಾನದಿಂದ ಹೇಳುತ್ತಾರೆ. ಮುಂದುವರೆದ ಚಾರಿಯವರು “ಸಾವರ್ಕರ್ ಅವರ ಹಿಂದುತ್ವದ ಅಜೆಂಡವನ್ನು ಸಾಕ್ಷೀಕರಿಸಬಲ್ಲ ಸಾಮರ್ಥ್ಯವಿರುವುದು ನರೇಂದ್ರ ಮೋದಿಗೆ ಮಾತ್ರ. ಐಡಿಯಾಜಿಯ ಹಿನ್ನೆಲೆಯಲ್ಲಿ ನೋಡಿದಾಗ ಇಂದಿನ ಸಂದರ್ಭದ ಬಿಜೆಪಿಯಲ್ಲಿ ಹಿಂದೂ ಮಹಾಸಭಾದ ಗುಣಗಳನ್ನು ನಾವು ಕಾಣಬಹುದು ಎಂದು ಸಹ ಹೇಳುತ್ತಾರೆ. ಕಳೆದ ವಾರ ಆರೆಸಸ್ ಮುಖ್ಯಸ್ಥ ಮೋಹನ್ ಭಾಗವತ್ ಒಂದು ಹೇಳಿಕೆ ನೀಡಿ ಇಂಡಿಯಾ ದೇಶವು ಹಿಂದೂ ರಾಷ್ಟ್ರ ಮತ್ತು ಈ ಹಿಂದೂಸ್ತಾನದ ಎಲ್ಲ ನಾಗರಿಕರನ್ನು ಹಿಂದೂಗಳೆಂದೇ ಕರೆಯಬೇಕು” ಎಂದು ಪ್ರತಿಪಾದಿಸಿದರು.

ರಾಜಕೀಯ ವಿಶ್ಲೇಷಕ ಜ್ಯೋತಿರ್ಮಯ ಶರ್ಮ ಅವರು 1925 ರ ನಂತರದ ಹಿಂದೂ ರಾಷ್ಟ್ರೀಯತೆಯ ಎರಡು ದಡಗಳನ್ನು ಕುರಿತು ವಿವರಿಸುತ್ತಾರೆ. ಸಾವರ್ಕರ್‌ವಾದಿಗಳು ರಾಜಕೀಯಯ ಅವಶ್ಯಕತೆಯನ್ನು ಪ್ರತಿಪಾದಿಸಿದರೆ, ಗೋಳ್ವಲ್ಕರ್ ಅವರು ರಾಜಕೀಯ ಒಂದು ದುಷ್ಟ ಒಕ್ಕೂಟ ಆದರೆ ಹಿಂದೂ ರಾಷ್ಟ್ರವು ಒಂದು ಸಾಮಾಜಿಕ ಅಜೆಂಡ ಎಂದು ಪ್ರತಿಪಾದಿಸಿದರು. ತಾವು ಆಯ್ಕೆ ಮಾಡಿಕೊಳ್ಳಬೇಕಾದ ಮಾರ್ಗಗಳ ಕುರಿತಾಗಿ ಹಿಂದೂ ಮಹಾ ಸಭಾ ಮತ್ತು ಆರೆಸಸ್ ನಡುವೆ ಭಿನ್ನಾಬಿಪ್ರಾಯ ತಲೆದೋರಿತು. ಆದರೆ ಈಗ ಸನ್ನಿವೇಶವೇ ಬದಲಾಗಿದೆ. ಇಂಡಿಯಾದ ರಾಜಕೀಯದಲ್ಲಿ ಭೂಕಂಪನದ ಪರಿಣಾಮ ಉಂಟಾಗಿದೆ. ಅಭಿರುಚಿಗಳ ಬಾಹ್ಯಚಹರೆಗಳನ್ನು ಭೂತಕಾಲದ ಮುಂದುವರಿಕೆ ಎಂದು ನಾವು ತಪ್ಪಾಗಿ ಅರ್ಥೈಸಬಾರದು. ಈ ಬಹುಸಂಖ್ಯಾತ ತತ್ವದ ಸಿದ್ಧಾಂತವನ್ನು ಮಧ್ಯಮವರ್ಗಗಳು ಸಿಹಿಲೇಪಿನ ಹಿಂದುತ್ವದ ಅಭಿವೃದ್ಧಿಯ ಸ್ವರೂಪವೆಂದೇ ಪ್ರತಿಪಾದಿಸುತ್ತಿದ್ದಾರೆಂದು ಬಿಂಬಿಸಲಾಗಿದೆ. ಲಿಬರಲ್ ವಿರೋಧಿ ಸಮಾಜಕ್ಕೆ ಬುನಾದಿಯನ್ನು ಕಟ್ಟಲಾಗಿದೆ ಮತ್ತು ಇದನ್ನು ಇಸ್ರೇಲಿನಿಂದ ಆಮದು ಪಡೆಯಲಾಗಿದೆ.

ಕೆ.ಎಸ್.ಸುದರ್ಶನ್ ಅವರು ಆರೆಸಸ್ ಮುಖ್ಯಸ್ಥರಾಗಿರುವವರೆಗೂ ರಾಜಕೀಯದಿಂದ ಸಮಾನ ದೂರದಲ್ಲಿರಬೇಕೆಂಬ ಗೋಳ್ವಲ್ಕರ್ ನೀತಿಯನ್ನು ಅಳವಡಿಸಿಕೊಳ್ಳಲಾಗಿತ್ತು. narender_modi_rssಆದರೆ ಈಗಿನ ಸರಸಂಚಾಲಕ ಮೋಹನ್ ಭಾಗವತ್ ಅವರ ಅಧಿಪತ್ಯದಲ್ಲಿ ರಾಜಕೀಯ ಪಾರುಪತ್ಯದ ಅಗತ್ಯತೆ ತನ್ನ ಪ್ರಭಾವವನ್ನು ಬೀರತೊಡಗಿದೆ. ಮೋದಿಯು ಸಾವಿರಾರು ಮತದಾರರ ಹೀರೋ ಆಗಿರಬಹುದು ಆದರೆ ಭಾಗವತ್ ಇಂದಿಗೂ ಸಾವಿರಾರು ಕಾರ್ಯಕರ್ತರ ನಾಯಕ. ಈ ಸಾವಿರಾರು ಕಾರ್ಯಕರ್ತರು ಜಗತ್ತಿನಲ್ಲೇ ಅತಿ ದೊಡ್ಡ ಕೇಡರ್ ಆಧರಿತ ಸಂಘಟನೆ ಎಂದು ಆರೆಸಸ್‌ಗೆ ಖ್ಯಾತಿ ತಂದುಕೊಟ್ಟವರು. ಇಂತಹ ಕಾರ್ಯಕರ್ತರ ಮತ್ತು ಸಂಘಟನೆಯ ನಾಯಕ ರಾಜಕೀಯ ನಾಯಕತ್ವದ ಬದಲಾವಣೆಗೆ ಸಂಕೇತಗಳನ್ನು ಕಳುಹಿಸಲು ಹಿಂಜರಿಯಲಾರ. ಇದನ್ನು ಮೋಹನ್ ಭಾಗವತ್ ಕಳೆದ ವಾರ ಎರಡು ಬಾರಿ ನಿರೂಪಿಸಿದ್ದಾರೆ. ಒಮ್ಮೆ ಹಿಂದೂ ರಾಷ್ಟ್ರದ ಪ್ರತಿಪಾದನೆಯನ್ನು ಮಾಡಿದರೆ ಮತ್ತೊಮ್ಮೆ ಕೇವಲ ವ್ಯಕ್ತಿಯೊಬ್ಬನಿಗೆ ಬಿಜೆಪಿ ಜಯದ ಕ್ರೆಡಿಟ್ ಕೊಡಲು ಸಾಧ್ಯವಿಲ್ಲ (ಪಂದ್ಯ ಶ್ರೇಷ್ಟ ಅಮಿತ್ ಷಾ ಕುರಿತು) ಎಂದು ಟೀಕಿಸಿದರು. ಆರೆಸಸ್ ಪ್ರಚಾರಕರೊಬ್ಬರು “ನಮಗೆ ಅಲ್ಪಸಂಖ್ಯಾತರೊಂದಿಗೆ ರಕ್ತಪಾತ ಬೇಕಾಗಿಲ್ಲ. ಆದರೆ ಅವರು ಇಂಡಿಯಾ ದೇಶವು ಇರುವುದಕ್ಕೆ ಇಲ್ಲಿನ ಹಿಂದೂಗಳಿಂದಾಗಿ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನಾವು ಭಿನ್ನ ಹಾದಿಯನ್ನು ಆರಿಸಿಕೊಳ್ಳಬೇಕೆಂದು ಮೋದಿಜೀಗೆ ಗೊತ್ತಿದೆ. ಇದನ್ನು ಅವರು ಆರೆಸಸ್ ಕಾರ್ಯಕರ್ತರ ಸಹಾಯದಿಂದ ಸಾಧ್ಯವಾಗಿಸುತ್ತಾರೆ. ಮೋದಿ ಇಫ್ತಾರ್ ಪಾಟಿಗಳಲ್ಲಿ ಭಾಗವಹಿಸಲಿಲ್ಲ, ಈದ್ ಶುಭಾಶಯಗಳನ್ನು ಹೇಳಲಿಲ್ಲ. ಆದರೆ ಅವರು ಹೇಳುತ್ತಿರುವುದು ನಾನು ಪ್ರಾಕ್ಟಿಕಲ್ ರಾಜಕಾರಣಿ. ನನಗೆ ಮುಸ್ಲಿಂರ ವೋಟುಗಳು ಬೇಕಾಗಿಯೇ ಇಲ್ಲ. ಮೋದಿಯವರು ಅಲ್ಪಸಂಖ್ಯಾತರ ಅವಶ್ಯಕತೆಯೇ ಇಲ್ಲದಂತಹ ಹೊಸ ರಾಜಕೀಯ ಮಾದರಿಗಳನ್ನು ಸೃಷ್ಟಿಸುತ್ತಿದ್ದಾರೆ. ನಮಗೆಲ್ಲಾ ಗೊತ್ತಿರುವಂತೆ ದೇಶ ವಿಭಜನೆಯ ದಿನದಿಂದಲೂ ಇಂಡಿಯಾದ ರಾಜಕೀಯ ಸನ್ನಿವೇಶದಲ್ಲಿ ಮುಸ್ಲಿಂರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಳೆದುಕೊಂಡಿದ್ದಾರೆ” ಎಂದು ವಿವರಿಸಿದರು.

ಒಂದು ವೇಳೆ ಈ ಮಾದರಿಯು ಭವಿಷ್ಯದಲ್ಲಿ ಗೆಲುವನ್ನು ಸಾಧಿಸಿದರೆ ರಾಜಕೀಯ ಪಕ್ಷಗಳ ಸೆಕ್ಯುಲರಿಸಂ ಕುರಿತಾದ ನೀತಿಗಳನ್ನು ಮರಳಿ ನೈತಿಕ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಮಸಲ ಸೆಕ್ಯುಲರಿಸಂ ಅನ್ನು ಕೇವಲ ಒಂದು ಬೋಗಸ್ ಸಂಕೇತದ ಮಟ್ಟಕ್ಕೆ ಇಳಿಸಿದರೆ ಅಲ್ಲಿಗೆ ಅದು ಮುಕ್ತಾಯಗೊಂಡಂತೆಯೇ ಎಂದರ್ಥ. ಮುಲಾಯಂಸಿಂಗ್ ಮತ್ತವರ ಹಿಂಬಾಲಕರು ಹಿಂದಿನ ದಿನಗಳ ಹಾಗೆ ಇಂದು ಇಫ್ತಾರ್ ಪಾರ್ಟಿಗಳನ್ನು ಏರ್ಪಡಿಸುತ್ತಿಲ್ಲ. ಈಗಿನ ಸರ್ಕಾರದ ಮೈನಾರಿಟಿ ಇಲಾಖೆಯ ಮಂತ್ರಿ ನಜ್ಮಾ ಹೆಫ್ತುಲ್ಲಾ ಅವರು ಮೋದಿಯವರಿಗೆ ರಾಖಿ ಕಟ್ಟುವುದರ ಮೂಲಕ ಈ ಬದಲಾವಣೆಗೆ ಪೂರಕವಾಗಿಯೇ ವರ್ತಿಸಿದ್ದಾರೆ. ಟಿವಿ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತ ಬಿಜೆಪಿಯ ಸುಬ್ರಮಣ್ಯಸ್ವಾಮಿ, ‘ನಜ್ಮಾ ಹೆಫ್ತುಲ್ಲಾ ಅವರ ಡಿಎನ್‌ಎ ಪರೀಕ್ಷೆ ಮಾಡಿಸಿದರೆ ಗೊತ್ತಾಗುತ್ತದೆ ಅವರು ಹಿಂದೂ’ ಎಂದು ಹೇಳುತ್ತಾರೆ. ಹಿಂದೂ ಅಥವಾ ಮುಸ್ಲಿಂ ಏನೇ ಇರಲಿ ನಜ್ಮಾ ಅವರು ಮಾತ್ರ ಬಿಜೆಪಿ ಸರ್ಕಾರದಲ್ಲಿ, ಮೋದಿಯ ಕಣ್ಣಲ್ಲಿ ಸಂಪೂರ್ಣ ನಗಣ್ಯವೆಂದೇ ಪರಿಗಣಿಸಲ್ಪಟ್ಟ ಮೈನಾರಿಟಿ ಇಲಾಖೆಯ ಖುರ್ಚಿಯನ್ನು ಆಕ್ರಮಿಸಿಕೊಂಡಿದ್ದರಾಷ್ಟೆ.

ಬಿಜೆಪಿಯ ಕಾರ್ಯಕರ್ತರೊಬ್ಬರು ಇಡೀ ಸನ್ನಿವೇಶವನ್ನು ಹೀಗೆ ವಿವರಿಸುತ್ತಾರೆ: “ಇನ್ನು ಮುಂದಿನ ದಿನಗಳಲ್ಲಿ ರಾಜ್ಯಗಳಿಗೆ ಇಸ್ಲಾಂ ಐಡೆಂಟಿಟಿಯನ್ನು ದೇಶದ ಐಡೆಂಟಿಟಿ ಎಂದು ಬಿಂಬಿಸಲು ಅವಕಾಗಳಿರುವುದಿಲ್ಲ. ಅಂದರೆ ದೀಪಾವಳಿ ರಾಷ್ಟ್ರೀಯ ಹಬ್ಬ, ಆದರೆ ಈದ್ ಅಲ್ಲ. ಕ್ರಿಸ್‌ಮಸ್ ದಿನವನ್ನು ಶಾಂಪಿಂಗ್ ದಿನವನ್ನಾಗಿ ಘೋಷಿಸಬಹುದು.”

ಆರೆಸಸ್ ಸ್ವಯಂಸೇವಕರೊಬ್ಬರು ಹೇಳುತ್ತಿದ್ದರು: “2025 ರಲ್ಲಿ ನಮ್ಮ ಆರೆಸಸ್ ಸಂಘಟನೆಯ 100 ವಾರ್ಷಿಕ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಇಂಡಿಯಾ ದೇಶವು ಹೆಚ್ಚೂಕಡಿಮೆ ಹಿಂದೂ ರಾಷ್ಟ್ರವಾಗಿ ಬದಲಾಗಿರುತ್ತದೆ. ಅಥವಾ ಕೆಲವರು ಈಗಾಗಲೇ ಇದು ಜರುಗಿಹೋಗಿದೆ ಎಂದೂ ಸಹ ಹೇಳುತ್ತಿದ್ದಾರೆ.”

ಹೈದರಾಬಾದ್ ಸಂಸದ ಎಂಐಎಂನ ಅಸಾದ್ದುದ್ದೀನ ಓವೇಸಿ ಅವರು ‘ಮೋದಿಯವರ ಫಲಿತಾಂಶದಿಂದಾಗಿ ಆದ ಒಂದು ಲಾಭವೆಂದರೆ ಮುಸ್ಲಿಂ ವೋಟ್‌ಬ್ಯಾಂಕ್ ಎನ್ನುವ ಮಿಥ್ ಒಡೆದುಹೋದದ್ದು’ ಎಂದು ಹೇಳಿದರು. ಆದರೆ ಇಂದು ನೀವು ಕಾಶ್ಮೀರದಿಂದ ಸಂಸದರನ್ನು ಎಣಿಸುತ್ತ ಅಲ್ಲಿಂದ ಮುಂದೆ ಸಾಗಿ ಬಂದರೆ ದಕ್ಷಿಣದ ಕಡೆಗೆ ಸಾಗಿ ಹೈದರಾಬಾದ್‌ನ ಕಡೆಗೆ ಬಂದರೆ ಸಂಸದ ಓವೈಸಿ ಮೊದಲ ಅಲ್ಪಸಂಖ್ಯಾತ ಸಂಸದರಾಗಿ ಎದುರಾಗುತ್ತಾರೆ. ಅಂದರೆ ಉತ್ತರದ ಕಾಶ್ಮೀರದ ನಂತರದಿಂದ ದಕ್ಷಿಣದ ಹೈದರಾಬಾದ್‌ವರೆಗೆ ಒಬ್ಬ ಅಲ್ಪಸಂಖ್ಯಾತ ಸಂಸದನಿಲ್ಲ. ಪಶ್ಚಿಮದಿಂದ ಪೂರ್ವಕ್ಕೆ ಸಾಗಿ ಬಂದರೆ ನಿಮಗೆ ಒಬ್ಬ ಅಲ್ಪಸಂಖ್ಯಾತ ಸಂಸದ ಸಿಗುವುದಿಲ್ಲ. ನಂತರದ ಪಶ್ಚಿಮ ಬಂಗಾಲ. ಅಸ್ಸಾಂನ ರಾಜ್ಯಗಳಲ್ಲಿ ಮುಸ್ಲಿಂ ಸಂಸದರು ಸಿಗುತ್ತಾರೆ. ಇಡೀ ಟ್ರೆಂಡ್ ಅನ್ನು ಅವಲೋಕಿಸಿದಾಗ ಮುಸ್ಲಿಮೇತರ ಮತದಾರರು ಕಣದಲ್ಲಿರುವ ಮುಸ್ಲಿಂ ಅಭ್ಯರ್ಥಿಗಳಿಗೆ ವೋಟನ್ನು ಹಾಕಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಆದರೂ ಸಹ ದಲಿತರು ಮತ್ತು ಹಿಂದುಳಿದವರನ್ನು ಸದಾ ಹಿಂದುತ್ವದ ಬ್ಲಾಕ್‌ನಲ್ಲಿರಿಸಲು ಮುಸ್ಲಿಂ ವೋಟುಗಳ ಧೃವೀಕರಣ ಎನ್ನುವ ಮಿಥ್ ಅನ್ನು ಮಾತ್ರ ನಿರಂತರವಾಗಿ ಜೀಂತವಾಗಿಡಲಾಗುತ್ತದೆ.

ಇದೆಲ್ಲದರ ಅರ್ಥವೇನೆಂದರೆ ಇಂದಿನ ಪ್ರಸ್ತುತ ರಾಜಕಾರಣದ ಗತಿ ಹೀಗೆಯೇ ಮುಂದುವರೆದರೆ ಕ್ರಮಬದ್ಧಗೊಂಡ ಚುನಾವಣಾ ಪ್ರಜಾಪ್ರಭುತ್ವದ ಮೂಲಕ ಅಲ್ಪಸಂಖ್ಯಾತರು ಮತ್ತಷ್ಟು ವ್ಯವಸ್ಥೆಯ ಹೊರಗೆ ತಳ್ಳಲ್ಪಡುತ್ತಾರೆ (ಆಫ್‌ಕೋರ್ಸ್, ಈಗಲೂ ಅವರೇನು ವ್ಯವಸ್ಥೆಯ ಒಳಗಿಲ್ಲ, ಅದು ಬೇರೆ ಮಾತು). ಅಲ್ಲದೆ ಮುಸ್ಲಿಂರ ಓಲೈಸುವಿಕೆಯ ಸಿದ್ಧಾಂತವು ಬೋಗಸ್ modi_skull_capಸೆಕ್ಯುಲರಿಸಂ ಮತ್ತು ಬೇರೆಯ ಪಕ್ಷಗಳ ಕಮ್ಯುನಲಿಸಂನಿಂದ ಇಂದಿಗೂ ದೊಡ್ಡ ಮಟ್ಟದಲ್ಲಿ ಚಲಾವಣೆಯಲ್ಲಿರುವುದರಿಂದ ನಿಜದ ಹಕ್ಕುಗಳು ಮತ್ತು ಜವಬ್ದಾರಿಯ ಆಶಯಗಳು ಇಂದಿಗೂ ಮತ್ತು ಮುಂದೆಯೂ ಮುಸ್ಲಿಂಮರ ಪಾಲಿಗೆ ಮರೀಚಿಕೆಯಾಗಿಯೇ ಉಳಿಯುತ್ತದೆ. ದಿಲೀಪ್ ಸೈಮನ್ ಹೇಳುತ್ತಾರೆ, “ಬಹುಸಂಖ್ಯಾತರ ಆಳ್ವಿಕೆಯನ್ನೇ ಪ್ರಜಾಪ್ರಭುತ್ವವೆಂದು ಅರ್ಥೈಸುವುದಾದರೆ ಅದು ಮೃಗಸದೃಶ್ಯ ಬಲದ ಮತ್ತೊಂದು ಹೆಸರು ಅಷ್ಟೆ. ಸಮಾನತೆ ಇಲ್ಲದೆ ನ್ಯಾಯ ಮತ್ತು ಸ್ವಾತಂತ್ರದ ಆಶಯದ ಮುಂದೆ ಪ್ರಜಾಪ್ರಭುತ್ವ ಚಲನಶೀಲವಾಗುವುದೇ ಇಲ್ಲ. ಆದರೆ ಜನಪ್ರಿಯತೆಯ ಪರವಾಗಿ ಪಕ್ಷಪಾತದ ಸಹಾಯವಿಲ್ಲದೆ ಈ ಲಕ್ಷಣಗಳು ಸರ್ವಾಧಿಕಾರಿ ವರ್ತನೆಗಳಾಗಿ ಬೆಳೆಯುವುದೇ ಇಲ್ಲ. ಹೀಗಾಗಿಯೇ ಬಹುಸಂಖ್ಯಾತ ತತ್ವ ಸಿದ್ಧಾಂತಕ್ಕೆ ನಿರಂತರ ಹಿಂಸೆಯ ಗುಟುಕುಗಳ ಅವಶ್ಯಕತೆ ಇದೆ ಮತ್ತು ಈ ಗುಟುಕುಗಳಿಂದ ಜನಪ್ರಿಯತೆಯ ಕಲ್ಪನೆಗಳೊಂದಿಗೆ ಮಧುರ ಬಾಂಧವ್ಯವನ್ನು ಸಾಧಿಸಬಹುದು. ಇಂಡಿಯಾದಲ್ಲಿ ಇಂದಿಗೂ ಕಾರ್ಯನಿರತ ನ್ಯಾಯಾಂಗ ವ್ಯವಸ್ಥೆ ಇದೆ, ಆದರೆ ಅದು ರಾಜಿ ಮಾಡಿಕೊಂಡಿದೆ. ಈ ಪ್ರಜಾಪ್ರಭುತ್ವ ಮತ್ತು ಬಹುಸಂಖ್ಯಾತ ತತ್ವದ ಸಿದ್ಧಾಂತದ ನಡುವಿನ ಕದನ ಬಹಳ ಸಮಯದವರೆಗೆ ಮುಂದುವರೆಯುತ್ತದೆ.”

ಕಡೆಗೆ ಬಹುಸಂಖ್ಯಾತ ತತ್ವದ ಕಾರ್ಯಸೂಚಿಗಳು ಸೀಮಿತ ಲಾಭವನ್ನು ತಂದುಕೊಡುತ್ತವೆ ಎಂದು ಬಹುತೇಕ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಆದರೆ ಮೋದಿ ತಾವೇ ಪ್ರಾರಂಬಿಸಿದ,ಬಿಡುಗಡೆಗೊಳಿದ ಈ ಪ್ರಕ್ರಿಯೆಗೆ ಸಂಕೇತವಾಗಿದ್ದಾರೆ. ಸಾವಿರಾರು ಸಂಘಪರಿವಾರದ ಕೇಡರ್‌ಗಳು ಮೋದಿಯು ಶೇಕಡಾ 31 ರಷ್ಟು ವೋಟನ್ನು ಪಡೆಯಲು ತಮ್ಮ ಪಾತ್ರವೂ ಸಾಕಷ್ಟು ದೊಡ್ಡದಿದೆ ಎಂದೇ ನಂಬಿದ್ದಾರೆ. ಅದರೆ ಶೇಕಡಾ 31 ರಷ್ಟು ವೋಟು ಮಾಡಿದ ಬಹುಪಾಲು ಜನ ಬದಲಾವಣೆಗಾಗಿ ಬಿಜೆಪಿಗೆ ಅಧಿಕಾರ ನೀಡಿದರೆ ಹೊರತು ಬಹುಸಂಖ್ಯಾತ ತತ್ವದ ಸಿದ್ಧಾಂತವನ್ನು ಹೇರುವುದಕ್ಕಾಗಿ ಆಗಲಿ, ಅದರ ಮೇಲಿನ ನಂಬಿಕೆಗಳಿಗಾಗಲಿ ಅಲ್ಲ. ಅದೂ ಅಲ್ಲದೆ ಈಗ ಬಹುಸಂಖ್ಯಾತರಾಗಿರುವ ಅಲ್ಪಸಂಖ್ಯಾತರಿಗೆ ಮಾತ್ರ ಇಂಡಿಯಾದಲ್ಲಿರುವುದಕ್ಕೆ ಅರ್ಹತೆ ಇದೆ ಎನ್ನುವದನ್ನು ಒಪ್ಪಲಿಕ್ಕಾಗದು. ನಾವೆಲ್ಲರೂ ಇದರಲ್ಲಿ ಇದ್ದೇವೆ ಮತ್ತು ಈ ಸ್ವಾತಂತ್ಯದ ದಿನದಂದು ಸಂಕುಚಿತವಾದ, ಪ್ರಾದೇಶಿಕತೆಯ ಗೋಡೆಗಳು ಈ ಜಗತ್ತನ್ನು ಚೂರು ಚೂರು ಮಾಡಲಿಕ್ಕೆ ಬಿಡಲಾಗದು ಎಂಬ ಕನಸು ನಮ್ಮೆಲ್ಲರದು. ಎಂದು ನಿಜದ ಮಹಾನ್ ಇಂಡಿಯನ್ ಒಮ್ಮೆ ಹೇಳಿದ್ದು…..

ಬಹು ಸಂಖ್ಯಾತ ಪ್ರಚೋದನೆಗಳು:

ಮೇ 2014 : ಬಿಜೆಪಿಯ ಗೆಲುವಿನ ನಂತರ, ವಿಶ್ವ ಹಿಂದೂ ಪರಿಷತ್‌ನ ಅಶೋಕ್ ಸಿಂಘಾಲ್: “ಈ ದೇಶದಲ್ಲಿ ಬಹುಸಂಖ್ಯಾತ ಜನರು ತಾವು ಕಳೆದುಕೊಂಡ ಅಧಿಕಾರವನ್ನು ಮರಳಿ ಪಡೆಯಲು ಬಯಸುತ್ತಿದ್ದಾರೆ. 12ನೇ ಶತಮಾನದ ಪೃಥ್ವಿರಾಜ್ ಚೌಹಾಣ್ ಅವರ ನಂತರ ಮತ್ತೆ ಈಗಷ್ಟೆ ಬಿಜೆಪಿಗೆ ಭಾರತವನ್ನು ಆಳುವ ಅವಕಾಶ ಸಿಕ್ಕಿರುವುದು.”

ಜೂನ್ 2014 : ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುತ್ತ ಸಂಸತ್ತಿನಲ್ಲಿ ನರೇಂದ್ರ ಮೋದಿಯು “1200 ವರ್ಷಗಳ ಮಾನಸಿಕ ಗುಲಾಮಗಿರಿತನವು” ಎಂದೇ ಶುರು ಮಾಡುತ್ತಾರೆ. ಅಂದರೆ ಒಂದೇ ಏಟಿಗೆ 200 ವರ್ಷಗಳ ಬ್ರಿಟೀಷರ ಆಡಳಿತವನ್ನು 1000 ವರ್ಷಗಳ ಘೋರಿ, ಗಜನಿ, ಸುಲ್ತಾನ, ಮೊಘಲರ ಆಡಳಿತದೊಂದಿಗೆ ಬೆಸುಗೆ ಹಾಕಿಬಿಡುತ್ತಾರೆ.

ಜುಲೈ 2014: ಗೋವಾ ಮಂತ್ರಿ ದೀಪಕ್ ಧಾವಲ್ಕರ್ ಅಲ್ಲಿನ ಅಸೆಂಬ್ಲಿಯಲ್ಲಿ “ನಾವೆಲ್ಲಾ ಒಂದಾಗಿ ಮೋದಿಯವರನ್ನು ಬೆಂಬಲಿಸಿದರೆ, ನಾವೆಲ್ಲಾ ಒಂದಾಗಿ ಮೋದಿಯ ಬೆನ್ನ ಹಿಂದೆ ನಿಂತರೆ, ಅವರಿಗೆ ಸಂಪೂರ್ಣ ಸಹಕಾರ ಕೊಟ್ಟರೆ ಹಿಂದೂ ರಾಷ್ಟ್ರದ ಸ್ಥಾಪನೆ ಸುಲುಭವಾಗುತ್ತದೆ. ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಹತ್ತಿರದಲ್ಲೇ ಇದೆ. ಹಿಂದೆ ಭಾರತವು ಹೀಗೆಯೇ ಕರೆಯಲ್ಪಡುತ್ತಿತ್ತು.” ಎಂದು ಹೇಳಿಕೆ ಕೊಡುತ್ತಾರೆ.

ಗೋವಾ ಡೆಪ್ಯುಟಿ ಮುಖ್ಯಮಂತ್ರಿ ಫ್ರಾನ್ಸಿಸ್ ಡಿ ಸೌಜ : “ಇಂಡಿಯಾವು ಆಗಲೇ ಹಿಂದೂ ರಾಷ್ಟ್ರವಾಗಿದೆ ಮತ್ತು ಇಲ್ಲಿರುವ ಎಲ್ಲಾ ಭಾರತೀಯರು ಹಿಂದೂಗಳು.”

ಆಗಸ್ಟ್, 2014: ಆರೆಸಸ್ ಮುಖ್ಯಸ್ಥ ಮೋಹನ್ ಭಾಗವತ್: “ಎಲ್ಲಾ ಭಾರತೀಯರ ಸಾಂಸ್ಕೃತಿಕ ಐಡೆಂಟಿಟಿಯು ಹಿಂದುತ್ವ ಮಾತ್ರ. ಇಂಗ್ಲೆಂಡ್‌ನ ನಿವಾಸಿಗಳು ಇಂಗ್ಲೀಷರೆಂದು ಕರೆಯಲ್ಪಟ್ಟರೆ, ಜರ್ಮನಿಯ ನಿವಾಸಿಗಳು ಜರ್ಮನ್ನರಾದರೆ, ಯುಎಸ್‌ಎದಲ್ಲಿ ಅಮೇರಿಕನ್ನರಾದರೆ ಹಿಂದುಸ್ತಾನದ ನಿವಾಸಿಗಳು ಹಿಂದೂಗಳು ಅಲ್ಲದೆ ಮತ್ತೇನು?

(ಕೃಪೆ : 25 ಆಗಸ್ಟ್, 2014, ಔಟ್‌ಲುಕ್)