ಈ ಸಂದರ್ಭದ ರೂಪಕದಂತೆ…

ಯು.ಆರ್.ಅನಂತಮೂರ್ತಿಯವರು ಇನ್ನಿಲ್ಲ. ಜಾತ್ಯತೀತ ಮನೋಭಾವ, ಸಾಮಾಜಿಕ ನ್ಯಾಯಕ್ಕೆ ಬದ್ಧತೆ ಎಂಬ ಮೌಲ್ಯಗಳೆಲ್ಲ ಅಪಹಾಸ್ಯಕ್ಕೆ ಗುರಿಯಾಗಿ ಬಳಲುananth-2ತ್ತಿರುವಾಗ ಇವರ ಸಾವು ಈ ಸಂದರ್ಭದ ರೂಪಕದಂತೆ ಕಾಣುತ್ತಿದೆ. ಅವರು ಇದುವರೆಗೆ ನಮ್ಮ ನಡುವೆ ಇದ್ದ ಬಹುಮುಖ್ಯ ಪಬ್ಲಿಕ್ ಇಂಟಲೆಕ್ಚುಯಲ್. ಕೊನೆದಿನಗಳವರೆಗೂ ತಮ್ಮ ಇಂದ್ರಿಯಗಳನ್ನು ಜಾಗೃತವಾಗಿಟ್ಟುಕೊಂಡು ಹೊರ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುತ್ತಿದ್ದರು.

ಸಂಕುಚಿತ ಮನೋಭಾವದ ಕೆಲ ಅಂಕಣಕಾರರಿಗೆ, ಕೋಮುವಾದಿ ಸಂಪಾದಕರುಗಳಿಗೆ ಅವರು ಸದಾ ವಿವಾದಿತ ವ್ಯಕ್ತಿ. ತನಗನ್ನಿಸಿದ್ದನ್ನು ಭಿಡೆ ಇಲ್ಲದೆ ಹೇಳುವ ಛಾತಿ ತೋರಿದವರೆಲ್ಲ ಇತಿಹಾಸದುದ್ದಕ್ಕೂ ಗಳಿಸಿದ ಹಣೆಪಟ್ಟಿ ಇದೇ ತಾನೆ. ತಾನು ಹಿರಿಯ ಎಂಬ ಬಿಗುಮಾನ ತೋರದೆ ಬಹುಜನರ ಒಳಿತಿಗಾಗಿ ಶ್ರಮಿಸುವ ಎಲ್ಲರೊಂದಿಗೂ ಇದ್ದವರು ಅನಂತಮೂರ್ತಿ. ಸಂವಹನ ತಂಡದ ಯುವಕರು ಅವರ ಮನೆಗೆ ಹೋಗಿ ಸಮಾನ ಶಿಕ್ಷಣ ಎಲ್ಲರಿಗೂ ಅಗತ್ಯ, ಅದರ ಬಗ್ಗೆ ಒಂದು ವಿಚಾರಸಂಕಿರಣ ಮಾಡುತ್ತಿದ್ದೇವೆ ಬನ್ನಿ ಎಂದರೆ ಉತ್ಸಾಹದಿಂದ ಬರುತ್ತಿದ್ದರು. ನಾವು ನಮ್ಮಲ್ಲಿಯ ಹುಡುಗರು ಕರ್ನಾಟಕದ ವರ್ತಮಾನದ ಬಗ್ಗೆ ಎರಡು ದಿನಗಳ ಒಂದು ಕಾರ್ಯಕ್ರಮ ಮಾಡ್ತಿದೀವಿ, ನೀವು ಬಂದು ಸಮಾರೋಪದ ಮಾತುಗಳನ್ನಾಡಬೇಕು ಎಂದು ಕರೆದರೆ ಅನಾರೋಗ್ಯದ ಮಧ್ಯೆಯೂ ಎದ್ದು ಬರುತ್ತಿದ್ದರು. ಸಮುದಾಯದ ಮಧ್ಯೆ ಸದಾ ಬದುಕುವ ಬುದ್ಧಿಜೀವಿಯ ಲಕ್ಷಣಗಳಿವು.

ಹಾಗೇ ಅವರು ಜೀವನದುದ್ದಕ್ಕೂ ಟೀಕೆಗಳನ್ನು ಎದುರಿಸಿದವರೇ. ಆದರೆ ಟೀಕೆಗಳಿಗೆ ಹೆದರಿ ತಾವು ಹೇಳಬೇಕಾದ್ದನ್ನು ಹೇಳದೇ ಸುಮ್ಮನಿರಲಿಲ್ಲ. ಮೋದಿ ಆಳುವ ಭಾರತದಲ್ಲಿ ಇರಬಾರದು ಎಂದು ಅನೇಕರಿಗೆ ಅನ್ನಿಸಿದ್ದಿದೆ. ಆದರೆ ಅಂತಹದೊಂದು ಹೇಳಿಕೆಯನ್ನು ಕೊಡಲು ಸಾಧ್ಯವಾಗಿದ್ದು ಅವರಿಗೆ ಮಾತ್ರ. ಮೋದಿ ಗೆದ್ದು ಗದ್ದುಗೆ ಏರಿದಾಗ, ಮೂಲಭೂತವಾದಿಗಳು ಇವರನ್ನು ಪಾಕಿಸ್ತಾನಕ್ಕೆ ಹೋಗಿ ಎಂದರು. (ಇಂದು ದುಷ್ಟ ಮನಸುಗಳು ಮೂಡಿಗೆರೆಯಲ್ಲಿ ಮತ್ತು ಮಂಗಳೂರಿನಲ್ಲಿ ಅನಂತಮೂರ್ತಿಯ ಸಾವನ್ನು ಪಟಾಕಿ ಹಚ್ಚಿ ಸಂಭ್ರಮಿಸುತ್ತಿವೆ.) ಆದರೆ ಇದಾವುದರಿಂದಲೂ ಅವರು ಎದೆಗುಂದಲಿಲ್ಲ. ಮಾತನಾಡುತ್ತಲೇ ಇದ್ದರು.

ಸರ್, ನೀವು ಮೋದಿ ಆಳುವ ಭಾರತದಲ್ಲಿ ಇರಲು ಇಷ್ಟ ಇಲ್ಲ ಎಂದಿದ್ದಿರಿ. ಹೊರಟೇ ಬಿಟ್ಟಿರಲ್ಲ! ಕೋಮುವಾದಿ ಮನಸ್ಸುಗಳನ್ನು ಎದುರಿಸುವ ದೊಡ್ಡದನಿಯೊಂದು ಸುಮ್ಮನಾಯಿತಲ್ಲ!

Leave a Reply

Your email address will not be published. Required fields are marked *