ನಿರ್ಬಂಧದ ಒಡಲೊಳಗಿಂದ ರೂಪಕವಾಗರಳುವ ಕವಿತೆ


– ರೂಪ ಹಾಸನ


ಸೃಜನಶೀಲತೆಗೆ ಮೂಲವಾದ ಮನಸಿನೊಳಗೆ ಕವಿತೆಯೆಂಬ ಬೀಜ ಎಲ್ಲಿಂದ ಹೇಗೆ ಉದ್ಭವಿಸಿಬಿಡುತ್ತದೋ! ಅದಕ್ಕೆ ಯಾರ ನಿರ್ಬಂಧ? ಆದರೆ ಈಗ ನಾವು ಚರ್ಚಿಸುತ್ತಿರುವ ನಿರ್ಬಂಧ, ಬೀಜವೊಂದು ಯಾವುದೇ ಹಂಗಿಲ್ಲದೇ ಮನಸಿನೊಳಗೆ ಹುಟ್ಟಿ ಬಿಟ್ಟ ಕ್ಷಣದ ಬಗೆಗಿನದಲ್ಲ. ಅದು ಮೊಳೆಯುವ, ಚಿಗುರುವ, ಮರವಾಗುವಿನ ಪ್ರಕ್ರಿಯೆಯಲ್ಲಿನ ನಿರ್ಬಂಧದ ಕುರಿತಾದದ್ದು. ನಾವು ಸೃಜನಾತ್ಮಕವಾದುದನ್ನು ಬರೆಯುತ್ತಿರುವಾಗಲೂ ಹೊರಗಿನದೇನೋ ನಮ್ಮನ್ನು ನಿರ್ದೇಶಿಸುತ್ತಿದ್ದರೆ, ಅದಕ್ಕೆ ತಕ್ಕಂತೆ ನಾವು ಬರಹವನ್ನು ಸಿದ್ಧಗೊಳಿಸುತ್ತಿದ್ದರೆ, ಅದು ಸರಕು ತಯಾರಿ ಅಷ್ಟೇ! ಅಲ್ಲವೇ?

ಹೊರಗಿನ ನಿರ್ಬಂಧದ ಪ್ರಶ್ನೆಗೇ ಬಂದರೆ, ಸೃಜನಶೀಲ ಅಭಿವ್ಯಕ್ತಿಗೆ, ಹೆಣ್ಣಾಗಿರುವ ಕಾರಣಕ್ಕೇ ನಿರ್ಬಂಧವಿದೆಯೆ? woman-abstractಎಂಬ ಪ್ರಶ್ನೆಯೊಂದಿಗೇ ಅನೇಕ ಮರು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಪುರುಷಾಭಿವ್ಯಕ್ತಿಗೆ ಯಾವುದೇ ನಿರ್ಬಂಧವಿಲ್ಲವೇ? ಯಾವುದೇ ರೀತಿಯ ನಿರ್ಬಂಧವಿಲ್ಲದಿದ್ದಾಗ ಮಾತ್ರ ನಿಜವಾದ ಸೃಜನಶೀಲವಾದ ಬರವಣಿಗೆ ಸಾಧ್ಯವಾಗುತ್ತದೆಯೇ? ಮಹಿಳೆಗೆ ನಿರ್ಬಂಧವಿರುವುದು ಅಭಿವ್ಯಕ್ತಿಗೋ, ಅಭಿವ್ಯಕ್ತಿ ಕ್ರಮಕ್ಕೋ ಅಥವಾ ಭಾಷೆಗೋ? ಹೆಣ್ಣು-ಗಂಡು, ರಾಜಕೀಯ, ಜಾತಿ ಮತ ಧರ್ಮಗಳ ಮೂಗುದಾರವೋ? ಸ್ವಯಂ ನಿರ್ಬಂಧವೋ, ಸಾಮಾಜಿಕ ನಿರ್ಬಂಧವೋ? ಎಂಬ ಪ್ರಶ್ನೆಗಳು.

ಎಲ್ಲವನ್ನೂ ಮುಚ್ಚಿಟ್ಟು ಬೇಕಾದರೂ ಬರೆಯಬಹುದು, ಎಲ್ಲವನ್ನೂ ಬಿಚ್ಚಿಟ್ಟೂ ಬರೆಯಬಹುದು. ನೇರಾನೇರ ಖುಲಂಖುಲ್ಲ ಬಿಚ್ಚಿಟ್ಟಿದ್ದು ಶುಷ್ಕವಾದ ಯಥಾವತ್ ವರದಿಯಾಗಿಬಿಡಬಹುದು. ಅದನ್ನು ಯಾರೇಕೆ ಸಾಹಿತ್ಯವೆಂದು ಓದಬೇಕು? ಆದರೆ ಅದನ್ನೇ ಓದುಗರ ಕಲ್ಪನಾಶಕ್ತಿಗೆ ವಿಪುಲ ಅವಕಾಶ ನೀಡುತ್ತಾ, ರೂಪಕಾತ್ಮಕವಾಗಿ ಅಭಿವ್ಯಕ್ತಿಸುವಾಗ ಕಲೆಯಾಗಿಬಿಡುತ್ತದಲ್ಲ? ನಿಜವಾದ ಸೃಜನಶೀಲತೆ ಇರುವುದು ಇಲ್ಲೇ ಅಲ್ಲವೇ? ಹೊರಗಿನ ಭಾಷೆಯ ನಿರ್ಬಂಧವೆಲ್ಲವನ್ನೂ ಕಿತ್ತೊಗೆದು ಅನಿಸಿದ್ದನ್ನೆಲ್ಲಾ ಬರೆಯುವುದೂ, ಅದನ್ನೇ ದಿಟ್ಟತನವೆಂದು, ದಿಟವೆಂದು ವಿಜೃಂಭಿಸುವುದೂ ಕೂಡ ನೀನು ಹೀಗೇ ಬರೆಯಬೇಕು ಎಂದು ನಮ್ಮನ್ನು ಒಂದು ಮಿತಿಗಷ್ಟೇ ಕಟ್ಟಿಹಾಕಿದಂತಲ್ಲವೇ? ಸೃಜನಾತ್ಮಕ ಮನಸಿಗೆ ಇದೂ ಕೂಡ ಒಂದು ನಿರ್ಬಂಧವೇ ಅಲ್ಲವೇ? ಇಲ್ಲಿ ನಿರ್ಬಂಧವಿದೆ. ಇದನ್ನು ಮೀರಿದರೆ ಮಾತ್ರ ನೀನು ಬೋಲ್ಡ್. ಹಾಗೆ ಬರೆದಾಗ ಮಾತ್ರ ಅದು ಅತ್ಯುತ್ತಮ ಅಥವಾ ಡಿಫರೆಂಟ್ ಎಂದು ಒಂದು ಸಮೂಹ, ಬರಹಗಾರಳನ್ನು ನಿರ್ದೇಶಿಸುತ್ತಿರುವುದರ ಹಿಂದೆ, ಒತ್ತಾಯಿಸಿ ಬ್ರಾಂಡ್ ಮಾಡುತ್ತಿರುವುದರ ಹಿಂದೆ ಕೂಡ ಹಸಿಹಸಿಯಾಗಿ ರೋಚಕವಾಗಿ ಬಿಚ್ಚಿಡುವುದನ್ನು ಚಪ್ಪರಿಸುವ ಚಪಲವಿದೆಯೇ? ದಿಕ್ಕು ತಪ್ಪಿಸಿ ಪುರುಷ ಮಾರುಕಟ್ಟೆಗೆ ಬೇಕಾದಂತೆ ಸರಕು ತಯಾರಿಸುತ್ತಲೇ ಇರಲೆಂಬ ಹುನ್ನಾರವಿದೆಯೇ? ಈ ನಿರ್ದೇಶನವನ್ನೂ ಎಚ್ಚರಿಕೆಯಿಂದ ಮೀರುವ ಸವಾಲೂ ನಮ್ಮ ಸೃಜನಾತ್ಮಕತೆಗಿದೆ ಅಲ್ಲವೇ? ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧಕ್ಕಿಂತಾ ನಿರ್ದೇಶನ ಅತ್ಯಂತ ಅಪಾಯಕಾರಿಯೆಂದು ನನಗೆನಿಸುತ್ತದೆ.

ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಖಾಸಗಿವಲಯವಿರುತ್ತದೆ. ಅದನ್ನು ಬರವಣಿಗೆಯಲ್ಲಿ ಒಳಗೊಳ್ಳಬೇಕೆಂದರೂ ಅದು ವ್ಯಕ್ತಿಯ ವೈಯಕ್ತಿಕ ಮನಃಸ್ಥಿತಿಗೆ ಸಂಬಂಧಿಸಿದ್ದು. ಮತ್ತು ಅಭಿವ್ಯಕ್ತಿಯ ಕ್ರಮಕ್ಕೆ ಸಂಬಂಧಿಸಿದ್ದು. ಅದನ್ನು ನಿಭಾಯಿಸುವ ಚಾಕಚಕ್ಯತೆಯದ್ದು ಮಾತ್ರ ಸವಾಲು. ಬಿಸಾಕಿದ ಕಡೆ ಮೊಳಕೆಯೊಡೆಯುವ ಶಕ್ತಿ ಬೀಜಕ್ಕಿದ್ದರೆ, ಅದರ ಮೇಲೆ ಎಷ್ಟೇ ದೊಡ್ಡ ಬಂಡೆಯನ್ನು ಹೇರಿದ್ದರೂ ಅದರ ಪಕ್ಕದಲ್ಲೇ ಎಲ್ಲೋ ದಾರಿ ಮಾಡಿಕೊಂಡು ಬೀಜ ಮೊಳೆತುಬಿಡುತ್ತದಲ್ಲ! ಬೀಜದ ಸತ್ವದ ತಾಕತ್ತನ್ನು ಬಂಡೆಯ ಬೃಹತ್ತಿಗೆ ಎದುರಾಗಿಸಿ ಏಕೆ ಬೆದರಿಸಲಾಗುತ್ತಿದೆ?

ತನ್ನ ಅಸ್ಮಿತೆ, ಅನನ್ಯತೆಗಳ ಅರಿವಿರುವ ಸೂಕ್ಷ್ಮ ಸಂವೇದನೆಯ ಹೆಣ್ಣುಮಕ್ಕಳು ಇಂದಿಗೂ ಕಾವ್ಯವನ್ನೇ ಏಕೆ ಹೆಚ್ಚಾಗಿ woman-insightತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ಆರಿಸಿಕೊಳ್ಳುತ್ತಿದ್ದಾರೆ? ಇಲ್ಲಿ ವಿಶಾಲವಾದ ಆಕಾಶವಿದೆ. ಜೊತೆಗೆ ಎದುರಿಗಿನವನಿಗೆ ಮೌನದ ಭಾಷೆ ಅರ್ಥವಾಗುವುದಾದರೆ, ಮೌನಕ್ಕೊಂದು ಅರ್ಥವಿರುತ್ತದೆ.

ಇನ್ನೊಂದು ಪಕ್ಕದಿಂದ ನೋಡಿದಾಗ ಅಭಿವ್ಯಕ್ತಿಯೆಂಬುದು ವೈಯಕ್ತಿಕ ತುರ್ತಿನ ದಾಖಲಷ್ಟೇ ಅಲ್ಲ. ಅದು ಒಟ್ಟು ಕಾಲದ ಚಲನೆಯ ಪ್ರತಿರೂಪವೂ ಹೌದು. ಅದರ ದಾಖಲೂ ಹೌದು. ಸಾಮಾಜಿಕ ನಿರ್ಬಂಧವಿರುವುದೇ ನಿಜವಾದರೆ, ಸ್ವಯಂ ನಿರ್ಬಂಧಗಳೂ ನಮ್ಮನ್ನು ಕಟ್ಟಿಹಾಕುತ್ತಿದ್ದರೆ, ಇಂದಿನ ಮುಕ್ತವಲ್ಲದ ಅಭಿವ್ಯಕ್ತಿ ಕ್ರಮವೂ ಅಧ್ಯಯನಕ್ಕೊಳಪಡಬೇಕಲ್ಲವೇ? ಆಗ ಅದರೊಳಗೂ ಇರುವ ಅಪಾರ ವೈವಿಧ್ಯಮಯ ಸೃಜನಶೀಲ ಅಭಿವ್ಯಕ್ತಿ ಒಳಗೊಳ್ಳುವಿಕೆ, ಹಾಗೂ ಹೆಣ್ಣು ಸೃಷ್ಟಿಸುವ ರೂಪಕ ಪ್ರತಿಮೆ ಸಂಕೇತಗಳು ವಿಶೇಷ ಅರ್ಥವನ್ನೇ ಕೊಡಲಾರಂಭಿಸುತ್ತವೆ.

ನಮ್ಮ ಸಮಾಜ ಮತ್ತು ಸಂಸ್ಕೃತಿ ಬಹುಪಾಲು ಪುರುಷ ಕೇಂದ್ರಿತ ಮತ್ತು ಪುರುಷ ನಿರ್ಮಿತವಾಗಿರುವುದರಿಂದ ಪುರುಷ ದೃಷ್ಟಿಕೋನದಿಂದ ರೂಪಿತವಾಗುವ ರೂಪಕಗಳ ಸುತ್ತಲೇ ಇದುವರೆಗಿನ ನಮ್ಮೆಲ್ಲ ಅಭಿವ್ಯಕ್ತಿಗಳು ಸುತ್ತುತ್ತಿದ್ದವು. ಆದರೆ ಇಂದಿನ ಹೆಣ್ಣು ಪ್ರಜ್ಞಾಪೂರ್ವಕವಾಗಿ ಪುರುಷ ದೃಷ್ಟಿಯ ಪೊರೆ ಇಲ್ಲದಂತಾ, ತನ್ನ ನೈಜವಾದ ಕಣ್ಣಿನಿಂದ ಪ್ರಪಂಚದ ಆಗುಹೋಗುಗಳನ್ನು ಅವಲೋಕಿಸಲು ಪ್ರಾರಂಭಿಸಿದ್ದಾಳೆ. ಇವತ್ತು ಹೆಣ್ಣು ಅಭಿವ್ಯಕ್ತಿಸುವ ಸಂವೇದನೆಗಳು ತೀವ್ರವೂ ವಿಸ್ತಾರವೂ ಆಳವೂ ಆಗುತ್ತಿದೆ. ಆದರೆ ನಮ್ಮ ಸುತ್ತಲ ಪ್ರಪಂಚ ಅಷ್ಟೇ ಮುಕ್ತವಾಗಿ, ತೀವ್ರವಾಗಿ ಹೆಣ್ಣಿನ ಬದಲಾದ ಈ ನೆಲೆಯಿಂದ ಅವಳನ್ನು ಅರ್ಥೈಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆಯೇ? ಬಹುಶಃ ಅಂತಹ ಪಕ್ವತೆ ಕಾಲಕ್ಕೇ ಇನ್ನೂ ಬಂದಿಲ್ಲವೇನೋ!

ಇವತ್ತಿಗೂ ಕೂಡ ರೂಪಕದ ಭಾಷೆಯಲ್ಲಿಯೇ ಅವಳ ಹೆಚ್ಚಿನ ಕವಿತೆಗಳು ಮಾತನಾಡುತ್ತವೆ. ಅದಕ್ಕಾಗಿ ವ್ಯಥೆಪಡಬೇಕಾಗಿಯೂ ಇಲ್ಲ. ಅವಳದ್ದೇ ಪ್ರಪಂಚದ ಎಷ್ಟೊಂದು ಹೊಚ್ಚ ಹೊಸ ರೂಪಕಗಳು ಅವಳಿಂದ ಸೃಷ್ಟಿಯಾಗುತ್ತಿವೆ! ಅವನ್ನು ಸರಿಯಾಗಿ ಒಡೆದು, ವಿಭಿನ್ನ ಅರ್ಥ ಸಾಧ್ಯತೆಯ ಕಡೆಗೆ, ವಿಸ್ತಾರಗಳೆಡೆಗೆ ಸೃಜನಶೀಲ ಬರಹವನ್ನು ದಾಟಿಸಿದರೆ ಮಾತ್ರ ಅವಳ ರಚನೆಗೇ ಒಂದು ವಿಶಿಷ್ಟ ಆಯಾಮ ದಕ್ಕಬಹುದೇನೋ?

ಅಸ್ಮಿತೆಯ ಅರಿವು ಮೂಡಿದಾಗ ಮಾತ್ರ ಪ್ರಶ್ನೆಗಳು ಏಳುವುದಕ್ಕೆ ಸಾಧ್ಯವಾಗುತ್ತದೆ ಮತ್ತು ಅಸಮಾನತೆಯ ಅರಿವಾಗುತ್ತದೆ. woman-unchainedಆ ತೀವ್ರ ಉಸಿರುಗಟ್ಟುವಿಕೆ ಮತ್ತು ಚಡಪಡಿಕೆಯಲ್ಲಿ ಮಾತ್ರ ವಿಭಿನ್ನ ನೆಲೆಗಳೆಡೆಗಿನ ಶೋಧ, ಅದನ್ನು ವಿಸ್ತರಿಸಿ ವಿವರಿಸುವ ಸಾಧ್ಯತೆಗಳೆಡೆಗೆ ದೃಷ್ಟಿ ಹಾಯುತ್ತದೆ. ನಿರ್ಬಂಧದೊಳಗೇ ಪತರುಗುಟ್ಟುತ್ತಲೇ ಅದರಾಚೆಗೂ ಇರುವ ಅಭಿವ್ಯಕ್ತಿ ಸಾಧ್ಯತೆಗಳೆಡೆಗೆ ಪ್ರಯೋಗಶೀಲವಾಗಿರಲು ಸಾಧ್ಯವಲ್ಲವೇ? ಹೇಳಿಬಿಡುವ-ಹೇಳದಿರುವ ಉಭಯಸಂಕಟದ ಬೇಗೆಯಲ್ಲಿ ಬೇಯುತ್ತಾ ಕುದ್ದು ಕುದ್ದು ಹದವಾಗಿ ಹೊರಹೊಮ್ಮಿದಾಗ, ಅದರ ಫಲಿತ, ಓದುಗನ ಸಾಮಾನ್ಯ ನಿರೀಕ್ಷೆಗಿಂತಾ ಭಿನ್ನವಾಗಿರಬಹುದು. ಮತ್ತು ಅವು ಕಾವ್ಯದ ಸಿದ್ಧ ಮಾದರಿಯಲ್ಲಿ ಇಲ್ಲದೇ ಇರಬಹುದು. ಸಮಾಜ ಒಪ್ಪಿತವೂ ಅಲ್ಲದೇ ಇರಬಹುದು!

ಕಂಡುಕೊಂಡಿದ್ದನ್ನೆಲ್ಲಾ ಸಮರ್ಥವಾಗಿ ಅಭಿವ್ಯಕ್ತಿಸಲು ಸಾಧ್ಯವಾಗಿಲ್ಲ ಎಂಬ ಅತೃಪ್ತಿಯೂ ಇದ್ದೇ ಇರುತ್ತದೆ. ಅದು ನಮ್ಮ ಸಾಮರ್ಥ್ಯದ ಮಿತಿ ಇರಬಹುದು. ಹಾಗೇ ಅನುಭವವನ್ನು, ಅವು ದಕ್ಕಿದಂತೆ ಹಿಡಿದಿಡಲು ಸಾಧ್ಯವಾಗದ, ಭಾಷೆಯ ಮಿತಿಯೂ ಇರಬಹುದು. ಬದುಕಿನ ನಿಗೂಢತೆಯನ್ನು, ಜೀವ ರೂಪಗಳ ಅಸಮಾನತೆಯನ್ನು ಭಿನ್ನ ನೆಲೆಯಲ್ಲಿ ವಿವರಿಸಿಕೊಳ್ಳಲು ಸೃಜನಶೀಲ ಅಭಿವ್ಯಕ್ತಿ ಅನುವು ಮಾಡಿಕೊಟ್ಟು, ಸಮಾಜವನ್ನು ಒಂದು ಸಹ್ಯ ನೆಲೆಯಲ್ಲಿ ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಾಗಿಸಿದರೆ, ಮಾನವೀಯ ಮೃದುತ್ವದೆಡೆಗೆ ಪಕ್ಕಾಗಲು ಸಾಧ್ಯವಾಗುವುದಾದರೆ ಅದಕ್ಕಿಂಥಾ ದೊಡ್ಡದು ಬೇರಿನ್ನೇನುಬೇಕು?

ನಿರ್ಬಂಧವಿಲ್ಲದೇ ಮನಸಿನೊಳಗೆ ಕವಿತೆ ಒಡಮೂಡುವ ರೀತಿಗೆ ಒಂದು ರೂಪಕ ಕಣ್ಣು ಕಟ್ಟಿ ನಿಂತಿದೆ. ಮೀನಿನ ಚಿತ್ರವೊಂದನ್ನು ಪುಟ್ಟ ಮಗು ತನ್ಮಯತೆಯಿಂದ ರಚಿಸುತ್ತಿದೆ. ಮನೆಗೆ ಬಂದವರಿಗೆ ತಾಯಿ ಹೇಳುತ್ತಾಳೆ, ‘ನಮ್ಮ ಪುಟ್ಟಿ ನೋಡಿ, ಮೀನಿನ ಥರಹ ಚಿತ್ರ ಬರೀತಿದ್ದಾಳೆ’ ಎಂದು. ಮಗು ಥಟ್ಟನೆ ಹೇಳುತ್ತದೆ. ‘ಮೀನಿನ ಥರಹ ಅಲ್ಲ. ಅದು ಮೀನೇ!’ ಬಹುಶಃ ಮುಗ್ಧತೆಗೆ ಮತ್ತು ಮೈಮರೆಯುವ ತನ್ಮಯತೆಗೆ ಮಾತ್ರ ತಾನು ಅಂದುಕೊಂಡಿದ್ದು ಮತ್ತು ಚಿತ್ರಿಸಿದ್ದರ ನಡುವಿನ ವ್ಯತ್ಯಾಸವಿಲ್ಲದೇ ಹೀಗೆ ಕಾಣಬಹುದೇನೋ!

Leave a Reply

Your email address will not be published. Required fields are marked *