ನಾಡೋಜ ಅನಂತಮೂರ್ತಿಯವರಿಗೆ ವಿದಾಯದ ನಮನಗಳು…


– ರವಿ


ಅನಂತಮೂರ್ತಿಯವರೊಡನೆ ನನಗೆ ಹೆಚ್ಚು ಒಡನಾಟವಿರಲಿಲ್ಲ. ಎರಡು ಸಲವೊ ಮೂರು ಸಲವೊ ನೋಡಿದ ನೆನಪು. ಆದರೆ ಅವರೆಂದೂ ದೂರವಿದ್ದವರಾಗಲಿ ಅಪರಿಚಿತರಾಗಲಿ ಆಗಿರಲಿಲ್ಲ.  (ಅವರನ್ನು ಭೇಟಿಯಾಗುವ ನಾಲ್ಕೈದು ವರ್ಷಗಳ ಮೊದಲೆ ಒಮ್ಮೆ ಅವರ ನಡವಳಿಕೆಯೊಂದನ್ನು ತೀವ್ರವಾಗಿ ವಿಮರ್ಶಿಸಿ ದಟ್ಸ್‌ಕನ್ನಡ.ಕಾಮ್‌ನಲ್ಲಿ ಲೇಖನ ಬರೆದಿದ್ದೆ. ಅದನ್ನವರು ಆಗ ಓದಿರುವ ಸಾಧ್ಯತೆ ಬಹುಶಃ ಇಲ್ಲವೇನೊ.)

ನಾನವರನ್ನು ಮೊದಲ ಸಲ ಭೇಟಿಯಾಗಿದ್ದು 2009 ರ ಏಪ್ರಿಲ್‌ನಲ್ಲಿ, ಯವನಿಕ ಸಭಾಂಗಣದಲ್ಲಿ. ಆಗ ’ದೇಸಿಮಾತು’ ಬ್ಲಾಗ್ ಬರೆಯುತ್ತಿದ್ದ ದಿನೇಶ್‌ಕುಮಾರ್, ಡೆಕ್ಕನ್ ಹೆರಾಲ್ದ್‌ನಲ್ಲಿ ಪತ್ರಕರ್ತರಾಗಿದ್ದ ಸತೀಶ್ ಶಿಲೆ, ಕನ್ನಡಪ್ರಭದಲ್ಲಿದ್ದ ಮಂಜುನಾಥ ಸ್ವಾಮಿ ಮತ್ತು ಎಸ್.ಕುಮಾರ್ ಮತ್ತವರ ಸಮಾನಮನಸ್ಕ ಗೆಳೆಯರು ಸಂವಹನ ವೇದಿಕೆಯಡಿ “ಸಮಾನ ಶಿಕ್ಷಣ”ದ ವಿಷಯವಾಗಿ ದಿನಪೂರ್ತಿ ಸೆಮಿನಾರ್ ಏರ್ಪಡಿಸಿದ್ದರು. ಅಮೆರಿಕದಿಂದ ತಿಂಗಳು ಕಾಲ ರಜೆಯಲ್ಲಿ ಬಂದಿದ್ದ ನಾನೂ ಸಹ ಆ ಸಭೆಗೆ ಹೋಗಿದ್ದೆ, ಪ್ರೇಕ್ಷಕನಾಗಿ, ಭಾಷಣಕಾರನಾಗಿ.

ಅದಕ್ಕೆ ಸರಿಯಾಗಿ ಹಿಂದಿನ ವರ್ಷ (2008) ನಾನು ರಾಜ್ಯದ ಸಮಕಾಲೀನ ರಾಜಕೀಯ ಪರಿಸ್ಥಿತಿಯನ್ನು ವಿರೋಧಿಸಿ ಸಾಂಕೇತಿಕವಾಗಿ ಚುನಾವಣೆಗೆ ನಿಂತಿದ್ದೆ. ಆಗ ನಾನು ವಿಕ್ರಾಂತ ಕರ್ನಾಟಕದಲ್ಲಿ ಬರೆಯುತ್ತಿದ್ದಿದ್ದರಿಂದ ಕನ್ನಡದ ಕೆಲವು ಪ್ರಗತಿಪರ ಮನಸ್ಸುಗಳಿಗೆ ನನ್ನ ಬರವಣಿಗೆಯ ಮೂಲಕ ಪರಿಚಯ ಆಗಿದ್ದೆ, ಹಾಗಾಗಿ ನಾನು ಚುನಾವಣೆಗೆ ನಿಲ್ಲುತ್ತಿರುವ ವಿಚಾರಗಳನ್ನು ಪ್ರಸ್ತಾಪಿಸಿ ಕನ್ನಡದ ಅನೇಕ ಪ್ರಗತಿಪರ ಸಾಹಿತಿ-ಲೇಖಕರಿಗೆ ಪತ್ರ, ಇಮೇಲ್ ಬರೆದಿದ್ದೆ. ಆಶ್ಚರ್ಯವೆಂಬಂತೆ ಅನಂತಮೂರ್ತಿಯವರಿಂದ ಉತ್ತರವೂ ಬಂತು. ಅವರೂ ನನ್ನ ಲೇಖನಗಳನ್ನು ಓದಿದ್ದಿರಬೇಕು.

“Dear Ravi Reddy,
I ADMIRE YOUR COURAGE AND COMMITMENT. I feel sad I am not there. I had to come to Oxford as planned a year earlier. Otherwise I would have campaigned for you. Let your work be meaningful for some at least who matter in the end.

Warm regards and admiration
ananthamurthy”

ಅದೇ ಸಂದರ್ಭದಲ್ಲಿ ’ನಾನು ಶಾಸಕನಾಗಿ ಆಯ್ಕೆಯಾಗಿದ್ದೇ ಅದಲ್ಲಿ ನನ್ನ ಅವಧಿಯ ಸಮಯದಲ್ಲಿ ನಾನು ಯಾವುದೇ ಆಸ್ತಿ ಮಾಡುವುದಿಲ್ಲ’ ಎಂದು ಘೋಷಣೆ ಮಾಡಿದ್ದೆ. ಅದನ್ನು ಹಲವರಿಗೆ ಇಮೇಲ್ ಮಾಡಿದ್ದೆ. ಸಹಜವಾಗಿ ಅನಂತಮೂರ್ತಿಯವರಿಗೂ ಹೋಗಿತ್ತು. ಅದಕ್ಕವರು,

“Dear Ravi Reddy
How sad I am in Oxford and not Bangalore! I feel moved by your press statement. I am sorry I cant canvass for you personally.

In admiration
ananthamurthy”

ಚುನಾವಣೆ ಆಯಿತು. ಚುನಾವಣಾ ಆಯೋಗ ಹೇಳುವ ಚುನಾವಣಾ ವೆಚ್ಚದ ಮಿತಿ ಮತ್ತು ಚುನಾವಣೆಗಳು ನಿಜಕ್ಕೂ ಆಗುವ ಬಗ್ಗೆ ಮತ್ತು ಆ ಚುನಾವಣೆಯಲ್ಲಿ ಆಯೋಗ ನನ್ನ ವಿಚಾರಕ್ಕೆ ಎಸಗಿದ ಪ್ರಮಾದದ ಬಗ್ಗೆ ಆಯೋಗಕ್ಕೆ ಪತ್ರವೊಂದನ್ನು ಬರೆದು ಅದನ್ನು ಒಂದಷ್ಟು ಜನರೊಡನೆ ಹಂಚಿಕೊಂಡಿದ್ದೆ. ಅದಕ್ಕೂ ಅನಂತಮೂರ್ತಿಯವರು ಉತ್ತರ ಬರೆದಿದ್ದರು:

“Dear Sri Ravi Reddy
You are fighting this battle or all of us; this is a meaningful letter and deserves to be nationally known. All of us should stand by you. I am returning after May 27. Tell me what can I do from here– I am in London now.

with warm regards
ur ananthamurthy”

ಇವೆಲ್ಲವೂ ಆದ ಮರುವರ್ಷ ನಾನವರನ್ನು ಭೇಟಿಯಾಗಿದ್ದು, “ಯವನಿಕ”ದ ಸಭಾಂಗಣದಲ್ಲಿ, ಮೊದಲ ಬಾರಿ. ಆಗಲೆ ದೈಹಿಕವಾಗಿ ಕುಂದಿದ್ದರು. samvahanaಆರೋಗ್ಯ ಚೆನ್ನಾಗಿಲ್ಲದಿದ್ದರೂ ಕಾರ್ಯಕ್ರಮಕ್ಕೆ ಬಂದಿದ್ದರು. ಹೋಗಿ ಪರಿಚಯ ಮಾಡಿಕೊಂಡೆ. ಪ್ರೀತಿಯಿಂದ ಕೈ ಹಿಡಿದುಕೊಂಡು ಭಾಷಣಗಳ ಗದ್ದಲದಲ್ಲಿ ಆಪ್ತವಾಗಿ ಮಾತನಾಡಿಸಿದರು. ಏನು ಮಾತನಾಡಿದೆವೊ ನನಗೆ ನೆನಪಿಲ್ಲ.

ಇನ್ನೂ ಒಂದು ಪ್ರಸಂಗ ನೆನಪಾಗುತ್ತಿದೆ. ಅದೇ ವರ್ಷದ ಆರಂಭದಲ್ಲಿ (2009) ಇನ್ನೊಂದು ಘಟನೆ ಆಗಿತ್ತು. ಮಲೆನಾಡಿನಲ್ಲಿಯೋ ಅಥವ ಕರಾವಳಿಯಲ್ಲಿಯೋ ನಕ್ಸಲರು ಕೇಶವ ಯಡಿಯಾಳ ಎನ್ನುವವರನ್ನು ಸಾಯಿಸಿ ಆ ವಿಚಾರವಾಗಿ “ಪೊಲೀಸ್‌ ಮಾಹಿತಿದಾರ, ಕ್ರೂರ ಭೂಮಾಲಿಕ, ಕೋಮುವಾದಿ, ಅತ್ಯಾಚಾರಿ, ಜನದ್ರೋಹಿ ಕೇಶವ ಯಡಿಯಾಳನ ನಿರ್ಮೂಲನೆಯನ್ನು ಎತ್ತಿ ಹಿಡಿಯೋಣ ! ಪ್ರಜಾ ಹೋರಾಟವನ್ನು ತೀವ್ರಗೊಳಿಸೋಣ” ಎಂದು “ಆತ್ಮೀಯ ರೈತ-ಕೂಲಿಕಾರ್ಮಿಕರೇ, ಮಹಿಳೆಯರಿಗೆ” ಪತ್ರ ಬರೆದು ಅದನ್ನು ಒಂದಷ್ಟು ಲೇಖಕರಿಗೆ ಮತ್ತು ಮಾಧ್ಯಮದವರಿಗೆ ಇಮೇಲ್ ಮಾಡಿದ್ದರು. ಆ ಇಮೇಲ್ ಬಂದವರ ಪಟ್ಟಿಯಲ್ಲಿ ನಾನೂ ಇದ್ದೆ. ಆ ನಕ್ಸಲರ ಹಿಂಸಾವಿಧಾನವನ್ನು ವಿರೋಧಿಸಿ ಆ ಪಟ್ಟಿಯಲ್ಲಿದ್ದ ಎಲ್ಲರಿಗೂ ರಿಪ್ಲೈ ಮಾಡಿ ನಾನೊಂದು ಪತ್ರ ಬರೆದೆ. ಅದು ಇಮೇಲ್ ಪಟ್ಟಿಯಲ್ಲಿದ್ದ ಅನಂತಮೂರ್ತಿಯವರಿಗೂ ಹೋಗಿತ್ತು. ಅದನ್ನೂ ಓದಿದ್ದ ಅವರು ಉತ್ತರಿಸಿದ್ದರು:

“I am very moved by your email dear Ravi Reddy
ur ananthamurthy”

(ನಾನು ಬರೆದಿದ್ದ ಪತ್ರಕ್ಕೆ ನಕ್ಸಲ್ ಎಂದು ಹೇಳಿಕೊಳ್ಳುವವರಿಂದ ಪ್ರತ್ಯುತ್ತರ ಬಂದಿತ್ತು. ಅದು ಇಲ್ಲಿಯ ಲೇಖನದಲ್ಲಿದೆ.)

ಇದೆಲ್ಲವೂ ಅನಂತಮೂರ್ತಿಯವರು ನನ್ನಂತಹ ಅಪರಿಚಿತನೊಂದಿಗೂ, ಕಿರಿಯ ತಲೆಮಾರಿನವರೊಂದಿಗೂ, ಮತ್ತು ವರ್ತಮಾನದ ಸಾಂಸ್ಕೃತಿಕ-ಸಾಮಾಜಿಕ-ರಾಜಕೀಯ ವಿದ್ಯಮಾನಗಳೊಂದಿಗೆ ಹೇಗೆ ಸ್ಪಂದಿಸುತ್ತಿದ್ದರು ಮತ್ತು ಪ್ರಸ್ತುತತೆ ಉಳಿಸಿಕೊಂಡಿದ್ದರು ಎನ್ನುವುದನ್ನು ಸ್ಥೂಲವಾಗಿ ಹೇಳುತ್ತದೆ ಎಂದು ಭಾವಿಸುತ್ತೇನೆ.

ಬಹುಶ: ನಾನು ಭಾರತಕ್ಕೆ ಪೂರ್ತಿಯಾಗಿ ಮರಳಿದ 2010 ರ ಸಂದರ್ಭದಲ್ಲಿ ಬೇರೆ ಯಾವುದೋ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಅವರನ್ನು ಭೇಟಿಯಾದ ಮತ್ತು ಅಲ್ಲಿಯೂ ಅವರು ಪ್ರೀತಿಯಿಂದ ಮಾತನಾಡಿಸಿದ ಅಸ್ಪಷ್ಟ ನೆನಪಿದೆ. ಇದಕ್ಕೆ ಹೊರತಾಗಿ ನಾನು ಅವರನ್ನೆಂದೂ ಭೇಟಿಯಾಗಲಿಲ್ಲ. ಪತ್ರ ವ್ಯವಹಾರವೂ ಆಗಲಿಲ್ಲ. ಅವರ ಆರೋಗ್ಯ ಸರಿಯಿಲ್ಲ ಎನ್ನುವ ವಿಷಯಗಳೇ ಕೇಳಿಬರುತ್ತಿದ್ದರಿಂದ ಅವರನ್ನು ಭೇಟಿಯಾಗಲು ಮನಸ್ಸು ಬರುತ್ತಿರಲಿಲ್ಲ. ಒಮ್ಮೆ ಅವರನ್ನು ಭೇಟಿಯಾಗಲು ಬಂದ ಗೆಳೆಯ ಪೃಥ್ವಿಯ ಜೊತೆ card navu nammalliಅವರ ಮನೆ ತನಕ ಹೋಗಿ, ಬಹುಶಃ ಅವರಿಗೆ ಡಯಾಲಿಸಿಸ್ ನಡೆಯುತ್ತಿದ್ದರಿಂದಲೊ ಏನೊ, ಒಳಗೆ ಹೋಗದೆ ವಾಪಸು ಬಂದಿದ್ದೆವು.

ಆದರೆ, ಅನಂತಮೂರ್ತಿಯವರ ಜೊತೆ ನಾವೆಲ್ಲ ವೈಯಕ್ತಿಕವಾಗಿ ಮಾತನಾಡದೇ ಇದ್ದರೂ ನಮ್ಮಂತಹವರೊಡನೆ ಅವರು ವಿಚಾರ-ಬರವಣಿಗೆ-ಭಾಷಣ-ಹೇಳಿಕೆಗಳ ಮೂಲಕ ಸಂವಾದ ಮಾಡುತ್ತಲೇ ಇದ್ದರು. ಸಾಹಿತಿಯಾಗಿ ಅನಂತಮೂರ್ತಿ ಚಿರಕಾಲ ಉಳಿಯುವುದು ಈಗಾಗಲೆ ನಿರ್ಧಾರವಾಗಿರುವ ವಿಷಯ. ಆದರೆ ಬೀದಿಗಿಳಿಯದೇ, ತಮ್ಮ ದೈಹಿಕ ಅನಾರೋಗ್ಯದ ನಡುವೆಯೂ ಅವರು ಪ್ರಭುತ್ವಕ್ಕೆ ಮತ್ತು ಅಸಮಾನತೆ ಮತ್ತು ಶೋಷಣೆಗಳಿಗೆ ಸವಾಲು ಹಾಕುತ್ತ ಚಳವಳಿಗಳಷ್ಟೇ ಸಶಕ್ತವಾಗಿ ಮತ್ತು ಪರ್ಯಾಯವಾಗಿ ಸಂವಾದಗಳನ್ನು ಹುಟ್ಟುಹಾಕುತ್ತಿದ್ದರು. ಕಳೆದ ಐದಾರು ವರ್ಷಗಳಲ್ಲಿ ನಾಡಿನ ಹಿತದೃಷ್ಟಿಯಿಂದ ಅವರು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದ ವಿಚಾರಗಳು ಕಠೋರ ಸತ್ಯವಾಗಿರುತ್ತಿದ್ದವು. ಬಹುಶಃ ಈ ಅವಧಿಯಲ್ಲಿ ಅವರಷ್ಟು ಸ್ಪಷ್ಟವಾಗಿ, ನೇರವಾಗಿ, ಖಂಡಿತವಾಗಿ ಮಾತನಾಡಿದ ಇನ್ನೊಬ್ಬ ಸಾರ್ವಜನಿಕ ವ್ಯಕ್ತಿ ರಾಜ್ಯದಲ್ಲಿರುವ ಉದಾಹರಣೆಗಳಿಲ್ಲ. ಮತ್ತು ಅನಂತಮೂರ್ತಿಯವರು ಯಾವ ವಿಚಾರಗಳನ್ನು ವಿರೋಧಿಸುತ್ತಿದ್ದರೊ, ಅದೇ ವಿಚಾರಗಳ ಪ್ರತಿಪಾದಕರಾಗಿದ್ದವರಿಗೆ ಇವರಿಗಿಂತ ಬೇರೊಬ್ಬ ಶತ್ರುವೂ ಇರಲಿಲ್ಲ.

ಹಾಗಾಗಿಯೇ ಆ ವ್ಯಕ್ತಿಗಳೆಲ್ಲ ಅನಂತಮೂರ್ತಿಯವರು ಎತ್ತಿದ ವಿಚಾರಗಳ ಚರ್ಚೆಗಿಂತ ಪ್ರತಿಸಲವೂ ಅನಂತಮೂರ್ತಿಯವರ ಚಾರಿತ್ರ್ಯವನ್ನು ಪ್ರಶ್ನೆ ಮಾಡುವ ಮೂಲಕ ವಿಷಯ ಹಿನ್ನೆಲೆಗೆ ಹೋಗುವಂತೆ ನೋಡಿಕೊಳ್ಳುತ್ತಿದ್ದರು. ಅನಂತಮೂರ್ತಿ ಸಂತರಾಗಿರಲಿಲ್ಲ. ಹಾಗಾಗಿ ಅವರ ವ್ಯಕ್ತಿತ್ವ ಮತ್ತು ನಡವಳಿಕೆಯಲ್ಲಿ ಇದ್ದಿರಬಹುದಾದ ತಪ್ಪುಗಳನ್ನು ಅಪರಾಧಗಳನ್ನಾಗಿಸಿ ನಮ್ಮ ಕಾಲದ ಬಹುಮುಖ್ಯ ಪ್ರಶ್ನೆಗಳನ್ನು ಆ ಗುಂಪು ನೆಲಕ್ಕೆ ತುಳಿಯುತ್ತಿತ್ತು. ಅದಕ್ಕೆ ಪೂರಕವಾಗಿ ಅವರಿಗೆ ಮಾನಸಿಕ ಹಿಂಸೆಯನ್ನೂ ನೀಡುತ್ತಿತ್ತು.  ಅದೊಂದು ಪರಮನೀಚ ಮತ್ತು ದುಷ್ಟ ನಡವಳಿಕೆ ಆಗಿತ್ತು. ಇವತ್ತಿಗೂ ಹಾಗೆ ನಡೆದುಕೊಂಡವರಿಗೆ ಮತ್ತು ಅಂತಹ ಮನಸ್ಥಿತಿ ಇರುವವರಿಗೆ ಪಾಪಪ್ರಜ್ಞೆ ಮೂಡಿಲ್ಲ, ಮೂಡುವ ಸಾಧ್ಯತೆಗಳೂ ಇಲ್ಲ. ರಕ್ತಪಿಪಾಸು ಸರ್ವಾಧಿಕಾರಿಯೊಬ್ಬನು ಸತ್ತಾಗ ಬಿಡುಗಡೆ ಬಯಸಿದ್ದ ಮುಗ್ಢರು ಸಂಭ್ರಮಿಸುವ ಹಾಗೆ UR Ananthamurthyಅನಂತಮೂರ್ತಿಯವರ ಸಾವನ್ನು ಕೆಲವರು ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ ಎಂದರೆ, ನಮ್ಮ ಸಮಾಜದಲ್ಲಿ ಎಷ್ಟೊಂದು ಪಾಪ ಮತ್ತು ವಿಷ ತುಂಬಿದೆ ಮತ್ತು ಅದು ಎಷ್ಟು ದೀರ್ಘಕಾಲ ಸಮಾಜದಲ್ಲಿ ಹರಿಯಲಿದೆ ಎನ್ನುವುದು ತಿಳಿಯುತ್ತದೆ. ಆದರೆ, ಅನಂತಮೂರ್ತಿಯವರ ಸಾವಿನ ನಂತರ ಹರಿದುಬರುತ್ತಿರುವ ಸಂತಾಪ ಮತ್ತು ಪ್ರೀತಿ ಆ ನಂಜನ್ನು ನುಂಗುವ ನಂಜುಂಡಶಕ್ತಿ ಈ ನಾಡಿನ ಮಣ್ಣಿನಲ್ಲಿದೆ ಎನ್ನುವುದನ್ನೂ ಹೇಳುತ್ತಿದೆ.

ಅನಂತಮೂರ್ತಿ ಅಕ್ಷರಶಃ ನಾಡೋಜ -ನಾಡಿಗೆ ಗುರು- ಆಗಿದ್ದರು. ತುಂಬುಜೀವನ ನಡೆಸಿದ ಆ ನಾಡೋಜನ ಮೃತದೇಹವನ್ನು ಇಂದು (ಶನಿವಾರ, 23-08-2014) ಬಹುಶಃ ಅಗ್ನಿ ದಹಿಸುತ್ತದೆ. ಆದರೆ ಅವರು ಹೊತ್ತಿಸಿದ ಕಿಡಿಗಳು ಕೈಗಂಬದ ದೀಪಗಳಾಗಿ ನಾಡಿನ ಜನತೆಗೆ ದಾರಿ ತೋರಿಸುತ್ತಿರುತ್ತವೆ. ಆತ್ಮದ ಬಗ್ಗೆ ಗೀತೆಯಲ್ಲಿ ಕೃಷ್ಣ ಹೇಳುವಂತೆ, ಅವರ ವಿಚಾರಗಳನ್ನು ಅಗ್ನಿ ದಹಿಸಲಾರದು, ನೀರು ತೋಯಿಸಲಾರದು, ಗಾಳಿ ಒಣಗಿಸಲಾರದು, ಕತ್ತಿ ತುಂಡರಿಸಲಾರದು.

ಮತ್ತು, ನನ್ನಂತೆಯೇ ಗುರುವನ್ನೇ ಪ್ರಶ್ನೆ ಮಾಡುವ, ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೇ ಗೌರವಿಸುವ ಸಹಸ್ರಾರು ಶಿಷ್ಯರು ಈ ರಾಜ್ಯದಲ್ಲಿರುವ ತನಕ ಅನಂತಮೂರ್ತಿಯವರು ತಮ್ಮ ಕೊನೆಗಾಲದಲ್ಲಿ ಯಾವ ಕೇಡು ಮತ್ತು ರಾಕ್ಷಸಗುಣಗಳ ಬಗ್ಗೆ ಮಾತನಾಡಿದರೊ ಅದರ ಬಗ್ಗೆ ರಾಜ್ಯದ ಜನತೆಯಲ್ಲಿ ಎಚ್ಚರ ಇರುವಂತೆ ನೋಡಿಕೊಳ್ಳಲಾಗುತ್ತದೆ. ಇದೇ ನಾವು ಅವರಿಗೆ ನೀಡಬಹುದಾದ ವಿದಾಯದ ವಾಗ್ದಾನ.

2 thoughts on “ನಾಡೋಜ ಅನಂತಮೂರ್ತಿಯವರಿಗೆ ವಿದಾಯದ ನಮನಗಳು…

  1. Dash

    Very well written Ravi. Pataki hodedu sambhriamisida Jana nammavare ennuvudu manassinalli mareyalaagada novannulisibittide. Vinaa kaarana dweshave usiraagiruva Jana aa dweshadalle naashavaagi hoguttaaralla ennuvudoo novuntumaadittade.

    Reply

Leave a Reply

Your email address will not be published. Required fields are marked *