Daily Archives: August 26, 2014

ಕೊಟ್ಟೂರಿನಲ್ಲಿ ಶನಿವಾರ-ಭಾನುವಾರದಂದು “ನಾವು ನಮ್ಮಲ್ಲಿ” ಕಾರ್ಯಕ್ರಮ

ಸ್ನೇಹಿತರೇ,

ವರ್ತಮಾನ.ಕಾಮ್ ಆರಂಭವಾದ ಕಳೆದ ಮೂರು ವರ್ಷಗಳಿಂದಲೂ “ನಾವು ನಮ್ಮಲ್ಲಿ”ಯೊಡನೆ ವರ್ತಮಾನ ಬಳಗಕ್ಕೆ ಅವಿನಾಭಾವ ಸಂಬಂಧ. ನಿಮಗೆ ಗೊತ್ತಿರುವಂತೆ ವರ್ತಮಾನ.ಕಾಮ್ ಆರಂಭಿಸಬೇಕೆಂಬ ಯೋಚನೆ ಬಂದಿದ್ದೇ ನಾನು 2011 ರಲ್ಲಿ ಚಿತ್ರದುರ್ಗದಲ್ಲಿ ನಡೆದ “ನಾವು ನಮ್ಮಲ್ಲಿ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭ ಬಂದಾಗ. ಕೊಟ್ಟೂರಿನ ’ಬಯಲು ಸಾಹಿತ್ಯ ವೇದಿಕೆ’ ವತಿಯಿಂದ ಆರಂಭವಾದ ಈ ವಾರ್ಷಿಕ ಕಾರ್ಯಕ್ರಮಕ್ಕೆ ಈಗ ಹತ್ತನೇ ಕಾರ್ಯಕ್ರಮದ ಸಂಭ್ರಮ. ಪ್ರಾಮಾಣಿಕತೆ ಮತ್ತು ಆದರ್ಶಗಳೆಂಬ ಪದಗಳು ತುಟ್ಟಿಯೂ, ಮತ್ತು ಅವನ್ನು ವೈಯಕ್ತಿಕ ನೆಲೆಯಲ್ಲಿ ಪಾಲಿಸುವುದೇ ಸವಾಲಾಗಿರುವ ಇಂದಿನ ದೌರ್ಭಾಗ್ಯಕರ ಸಂದರ್ಭದಲ್ಲಿ, ತಮ್ಮ ನಡೆನುಡಿಯಲ್ಲಿ ಕನಿಷ್ಟ ಮಟ್ಟದ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನಾದರೂ ಹೊಂದಿರುವ ಯುವ ತಲೆಮಾರಿನ ಕನ್ನಡ ಮನಸ್ಸುಗಳು ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜನೆ ಮಾಡುತ್ತಿವೆ. ಮತ್ತು ಸಮಾನಮನಸ್ಕರು ಇದರಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ.

ಈ ಬಾರಿಯ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ (ಆಗಸ್ಟ್ 30-31, 2014) ಅದರ ತವರಿನಲ್ಲಿ ನಡೆಯುತ್ತಿದೆ. kotturuವಿವರಗಳು ಕೆಳಗಿನ ಆಮಂತ್ರಣ ಪತ್ರದಲ್ಲಿದೆ. ಎಂದಿನಂತೆ ವರ್ತಮಾನ ಬಳಗದ ಹಲವಾರು ಮಿತ್ರರೂ ಅದರಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ನಡೆಯುವ ಎರಡೂ ದಿನ ಉಚಿತ ಊಟ-ತಿಂಡಿ-ಕಾಫಿ-ಟೀ ವ್ಯವಸ್ಥೆಯಿದೆ. ಹಾಗೆಯೇ ಶನಿವಾರ ರಾತ್ರಿಗೆ ಉಚಿತ ವಸತಿಯೂ ಲಭ್ಯವಿರುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಬರುವವರು ಯಾವುದಕ್ಕೂ ಒಂದು ಮಾತನ್ನು ಕೊನೆಯ ಚಿತ್ರದಲ್ಲಿರುವ ಫೋನ್ ನಂಬರ್‌ಗಳಲ್ಲಿ ಯಾವುದಕ್ಕಾದರೂ ಸಂಪರ್ಕಿಸಿ ಅವರಿಗೆ ತಿಳಿಸಿದರೆ ಅವರಿಗೂ ವ್ಯವಸ್ಥೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಎಷ್ಟೇ ಜನ ಹೇಳದೇ ಬಂದರೂ ಕೊಟ್ಟೂರಿನಲ್ಲಿ ವ್ಯವಸ್ಥೆ ಮಾಡಲು ಈ ಬಳಗ ಶಕ್ತವಿದೆ ಎನ್ನಿಸುತ್ತದೆ. (ನನಗೆ ಗೊತ್ತಿರುವ ಹಾಗೆ ಪ್ರತಿ ವರ್ಷ ಈ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಹತ್ತಾರು ಜನ ಸಮಾನಮನಸ್ಕರು ಹಂಚಿಕೊಳ್ಳುತ್ತಾರೆ. ನಿಮಗೆ ಶಕ್ಯವಿದ್ದಲಿ ನೀವೂ ಸ್ವಲ್ಪ ಧನಸಹಾಯ ಮಾಡಬಹುದು. ಕೆಲವು ಜನರ ಮೇಲೆ ಬೀಳುವ ಹೆಚ್ಚಿನ ಹೊರೆಯನ್ನು ಅದು ತಗ್ಗಿಸಲು ಸಹಾಯಕವಾಗಬಹುದು.)

ಆಗಲೇ ಹೇಳಿದಂತೆ, ವರ್ತಮಾನ ಬಳಗದ ಹಲವು ಮಿತ್ರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನನಗೆ ತಪ್ಪಿಸಲಾಗದ ಪಕ್ಷದ ಕಾರ್ಯಕ್ರಮವೊಂದು ಇರುವುದರಿಂದ ಮೊದಲ ದಿನ ಬರಲಾಗದು. ಆದರೆ ಎರಡನೆ ದಿನ ಬೆಳ್ಳಂಬೆಳಗ್ಗೆಯೇ ಅಲ್ಲಿಗೆ ಬರಬಹುದು. ಕರ್ನಾಟಕದ ಸಾಹಿತ್ಯ-ಸಂಸ್ಕೃತಿ-ಸಾಮಾಜಿಕ-ರಾಜಕೀಯವನ್ನು ಗುಣಾತ್ಮಕ ನೆಲೆಯಲ್ಲಿ ಕಟ್ಟಲು ಪ್ರಯತ್ನಿಸುತ್ತಿರುವವರೊಡನೆ ಒಡನಾಡುವುದು ಯಾವಾಗಲೊ ಒಮ್ಮೊಮ್ಮೆ ದೊರಕುವ ಅವಕಾಶ. ಕಳೆದುಕೊಳ್ಳುವ ಮನಸ್ಸಿಲ್ಲ.

ನಮಸ್ಕಾರ,
ರವಿ

naavunammalli-2014-1
naavunammalli-2014-2
naavunammalli-2014-3
naavunammalli-2014-4

ನಾರಣಪ್ಪ ಬ್ರಾಹ್ಮಣತ್ವವನ್ನು ಬಿಟ್ಟರೂ ಬ್ರಾಹ್ಮಣತ್ವ ನಾರಣಪ್ಪನನ್ನು ಬಿಡಲಿಲ್ಲ

– ಶರ್ಮಿಷ್ಠ

ಅನಂತಮೂರ್ತಿಯವರ ಸಂಸ್ಕಾರದ ನಂತರ ಅದರ ಕುರಿತು ನನ್ನಂತಹ ಅಜ್ಞಾನಿಯ ತಲೆಯಲ್ಲಿ ಹುಟ್ಟಿದ ಪ್ರಶ್ನೆಗಳಿವು. ನಾನೇನು ಅವರನ್ನು ಹತ್ತಿರದಿಂದ ಕಂಡಿಲ್ಲ ಮಾತಾಡಿಲ್ಲ. ಆದರೆ ಒಬ್ಬ ಲೇಖಕನನ್ನೋ, ಸಿನಿಮಾ ನಟನನ್ನೋ, ಕವಿಯನ್ನೋ ಕೆಲವರು ಆರಾಧಿಸುವುದು, ಮೆಚ್ಚಿಕೊಳ್ಳುವುದು, ಆದರ್ಶ ಎಂದು ಕೊಳ್ಳುವುದು ಇತ್ಯಾದಿ ಇತ್ಯಾದಿಯಾಗಿರುತ್ತದಲ್ಲಾ ಹಾಗೆ….

ಇದು ಸಾಮಾನ್ಯಳೊಬ್ಬಳ ತಲೆಯಲ್ಲಿ ಹುಟ್ಟಿದ ಇನ್ನು ಉತ್ತರ ಸಿಗದ ಕಾಡುತ್ತಿರುವ ಗೋಜಲು ಗೋಜಲಾಗಿರುವ ಪ್ರಶ್ನೆಗಳು. ಯಾರನ್ನೂ ದೂರುತ್ತಿಲ್ಲ.

ಸಂಸ್ಕಾರದಂತಹ ‘ಕ್ಲಾಸಿಕ್’ ಕಾದಂಬರಿಯನ್ನು ಬರೆದಂತಹ ಅನಂತಮೂರ್ತಿಯವರ ಸಂಸ್ಕಾರದ ರೀತಿ ನನಗಂತೂ ಸ್ವಲ್ಪವೂ ಸರಿಬರಲಿಲ್ಲ. 24bidತನ್ನ ಬ್ರಾಹ್ಮಣತ್ವವನ್ನು ಯಾವತ್ತೂ ಓರೆಗಲ್ಲಿಗೆ ಹಚ್ಚಿದಂತೆ ಬದುಕುತ್ತಿದ್ದ ಅವರಿಗೆ ಈ ರೀತಿಯ ವೇದ ಮಂತ್ರ ಘೋಷದ ಸಂಸ್ಕಾರ ಬೇಕಿತ್ತೆ? ಖಾಸಗೀ ವಾಹಿನಿಗಳ ದೃಶ್ಯ ವೈಭವ ಶ್ರೀಕಂಠದತ್ತ ಒಡೆಯರ್ ಸಂಸ್ಕಾರವನ್ನು ನೆನಪಿಸುವ ರೀತಿಯಲ್ಲಿತ್ತು. ಈ ಸಂಸ್ಕಾರದ ಅಗತ್ಯವಿತ್ತೇ? ಬ್ರಾಹ್ಮಣರ ಇಂಗಿನ ಒಗ್ಗರಣೆಯನ್ನೂ ಸೇರಿದಂತೆ ಎಲ್ಲವನ್ನೂ ಟೀಕಿಸುವ, ಅನಂತಮೂರ್ತಿ ತನ್ನ ತಂದೆಯಂತೆ ಎನ್ನುವ ಗೌರಿ ಲಂಕೇಶ ಈ ಸಂದರ್ಭದಲ್ಲಿ ಎಲ್ಲಿದ್ದರು? ಬಾಯಿ ತೆರೆದರೆ ಉಡುಪಿ ಬ್ರಾಹ್ಮಣರನ್ನು, ಬ್ರಾಹ್ಮಣರ ಆಚಾರ ವಿಚಾರಗಳನ್ನು ಪುಂಖಾನುಪುಂಖವಾಗಿ ಹೀಗಳೆಯುವ ಜಿ ಕೆ ಗೋವಿಂದರಾವ್ ಯಾಕೆ ಈ ಬಗ್ಗೆ ಬಾಯಿ ಬಿಡಲಿಲ್ಲ. ಪ್ರಗತಿಪರರು ಎನಿಸಿಕೊಂಡವರು, ‘ನಮ್ಮ ಮೇಷ್ಟ್ರು’ ಎಂದು ಪ್ರೀತಿಯಿಂದ ಕರೆದವರು ಎಲ್ಲ ಎಲ್ಲಿ ಹೋಗಿದ್ದರು?

ಹಿಂದೊಮ್ಮೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅನಂತಮೂರ್ತಿಯವರು ಉಪನ್ಯಾಸಕರಾಗಿದ್ದಾಗ ವಿದ್ಯಾರ್ಥಿಯಾಗಿದ್ದವರೊಬ್ಬರು ಹೇಳಿದ ಮಾತುಗಳಿವು… ‘ಅನಂತಮೂರ್ತಿ ವಿಶ್ವವಿದ್ಯಾನಿಲಯದಲ್ಲಿದ್ದಾಗ ವಿದ್ಯಾರ್ಥಿಗಳನ್ನೆಲ್ಲ ಸೇರಿಸಿ ವಿಚಾರ ವೇದಿಕೆ ಆರಂಭಿಸಿದ್ದರು. ನಾವೆಲ್ಲ ಅದರ ಸದಸ್ಯರುಗಳು. ಉತ್ಸಾಹದಿಂದ ಎಲ್ಲಾ ಸಭೆಯಲ್ಲೂ ಪಾಲ್ಗೊಳ್ಳುತ್ತಿದ್ದೆವು. ಆದರೆ ಅದೇ ಅನಂತಮೂರ್ತಿ ತನ್ನ ಮನೆ ಗೃಹಪ್ರವೇಶದ ಸಮಯದಲ್ಲಿ ದನವನ್ನು ತಂದು ಶಾಸ್ತ್ರ ಕ್ರಮಪ್ರಕಾರ ಗೃಹಪ್ರವೇಶ ಮಾಡಿದರು. ಪ್ರಶ್ನಿಸಿದ್ದಕ್ಕೆ ಅಪ್ಪ ಅಮ್ಮನಿಗಾಗಿ ಎಂದರು’.

ಇದರಲ್ಲಿ ನನಗೆ ನಿಜವಾಗಿ ಅನಂತಮೂರ್ತಿಯವರದು ತಪ್ಪು ಎನಿಸಲಿಲ್ಲ. ಅಪ್ಪ ಅಮ್ಮ ಎನ್ನುವ ಸಂಬಂಧ ತುಂಬಾ ಸೂಕ್ಷ್ಮದ್ದು. ‘ನಾಡಿಗೆ ಅರಸನಾದರೂ ತಾಯಿಗೆ ಮಗ’ ಎಂಬಂತೆ ಅಪ್ಪ ಅಮ್ಮನ ಮಮತೆ ವಾತ್ಸಲ್ಯದ ಮುಂದೆ ಯಾವ ಆದರ್ಶಗಳೂ ಇಲ್ಲ. ಅಪ್ಪ ಅಮ್ಮನ ಕೋರಿಕೆ ಈಡೇರಿಸುವುದು ಮಕ್ಕಳ ಕರ್ತವ್ಯ ಅದನ್ನು ಅನಂತಮೂರ್ತಿ ಮಾಡಿದ್ದಾರೆ. ಆದರೆ ಅವರ ಸಂಸ್ಕಾರದ ವಿಷಯದಲ್ಲಿ ಈ ಮಾತುಗಳು ಅನ್ವಯಿಸುವುದಿಲ್ಲ.

ಲಂಕೇಶರ ಅವ್ವ ನಾಟಕದಲ್ಲಿ ಉಡುಪ ಮತ್ತು ಮಮ್ತಾಜ್ ಎಂಬ ಎರಡು ಪಾತ್ರಗಳು ಬರುತ್ತವೆ. ura-lankeshಅದನ್ನು ಲಂಕೇಶ್ ಅನಂತಮೂರ್ತಿಯವರನ್ನು ಟೀಕಿಸಲೆಂದೇ ಬರೆದಂತಿದೆ (ನನಗನಿಸಿದ್ದು). ಮೊನ್ನೆ ಪತ್ರಿಕೆಯೊಂದರಲ್ಲಿ ಲಂಕೇಶ ಅನಂತಮೂರ್ತಿಯವರಿಗೆ ಸ್ವಜಾತಿಯ ಕನ್ಯೆಯನ್ನೇ ಮದುವೆಯಾಗು ಎಂದು ಹೇಳಿದ್ದರು ಎಂದೂ ಓದಿದೆ (ಉದಯವಾಣಿ 23.8.2014). ಮೊನ್ನೆಯ ಸಂಸ್ಕಾರದ ನಂತರ ಉಡುಪ ಹಾಗು ಮಮ್ತಾಜ್ ಪಾತ್ರಗಳು ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ.

ಎಲ್ಲೊ ಒಂದು ಕಡೆ ಓದಿದೆ ಅನಂತಮೂರ್ತಿ ವಿದ್ಯುತ್‌ನಲ್ಲಿ ಶವಸಂಸ್ಕಾರ ಬೇಡ ಎಂದಿದ್ದರು ಎಂದು. ಪರಿಸರ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅನಂತಮೂರ್ತಿ ಕಟ್ಟಿಗೆ ಸುಡುವುದು ಬೇಡ ಎಂದು ಯಾಕೆ ಹೇಳಲಿಲ್ಲ. ಅಂತ್ಯಕ್ರಿಯೆ ಫ್ಯಾಮಿಲಿ ಮ್ಯಾಟರ್ ಅನ್ನೋದಕ್ಕೆ ಅನಂತಮೂರ್ತಿ ಈ ನಾಡಿನ ಆಸ್ತಿ. ಮೊನ್ನೆ ಮೊನ್ನೆಯವರೆಗೆ ಚಿಕಿತ್ಸೆಗೆ ಸರ್ಕಾರದ ಹಣ ಕೋರಿದ್ದು ಇದೇ ಆಧಾರದ ಮೇಲೇ ಅಲ್ಲವೇ?

ನನ್ನ ಪ್ರಶ್ನೆ ಒಂದೇ. ಸಂಸ್ಕಾರದಂತಹ ಮೇರು ಕೃತಿ ಬರೆದ ಸಾಹಿತಿಯೊಬ್ಬನ ಸಂಸ್ಕಾರಕ್ಕೆ ಈ ರೀತಿಯ ಬ್ರಾಹ್ಮಣವೈಭವೋಪೇತ ಸಂಸ್ಕಾರ ಬೇಕಿತ್ತೇ? ಸರಳ ರೀತಿಯ ಸಂಸ್ಕಾರ ಸಾಕಿತ್ತಲ್ಲವೇ? ಇದನ್ನು ಪ್ರಶ್ನೆ ಮಾಡದಿದ್ದರೆ ಅದು ಸ್ವಜನ ಪಕ್ಷಪಾತವಾಗುವುದಿಲ್ಲವೇ? ಹೆಜ್ಜೆ ಹೆಜ್ಜೆಗೂ ಪೇಜಾವರರನ್ನು, ಭೈರಪ್ಪನವರನ್ನು ಟೀಕಿಸುವ ನಾವು ಯಾಕೆ ಅನಂತಮೂರ್ತಿಯವರ ವಿಚಾರದಲ್ಲಿ ಬಾಯಿ ಮುಚ್ಚಿಕೊಂಡಿದ್ದೇವೆ. ವೈಕುಂಠದ ಊಟಕ್ಕೆ ಹೋಗಿ ಮಂತ್ರಾಕ್ಷತೆ ಹಾಕಿಸಿಕೊಳ್ಳುವ ಮನಸ್ಥಿತಿಯಲ್ಲಿದ್ದೇವೆ?