ನಾರಣಪ್ಪ ಬ್ರಾಹ್ಮಣತ್ವವನ್ನು ಬಿಟ್ಟರೂ ಬ್ರಾಹ್ಮಣತ್ವ ನಾರಣಪ್ಪನನ್ನು ಬಿಡಲಿಲ್ಲ

– ಶರ್ಮಿಷ್ಠ

ಅನಂತಮೂರ್ತಿಯವರ ಸಂಸ್ಕಾರದ ನಂತರ ಅದರ ಕುರಿತು ನನ್ನಂತಹ ಅಜ್ಞಾನಿಯ ತಲೆಯಲ್ಲಿ ಹುಟ್ಟಿದ ಪ್ರಶ್ನೆಗಳಿವು. ನಾನೇನು ಅವರನ್ನು ಹತ್ತಿರದಿಂದ ಕಂಡಿಲ್ಲ ಮಾತಾಡಿಲ್ಲ. ಆದರೆ ಒಬ್ಬ ಲೇಖಕನನ್ನೋ, ಸಿನಿಮಾ ನಟನನ್ನೋ, ಕವಿಯನ್ನೋ ಕೆಲವರು ಆರಾಧಿಸುವುದು, ಮೆಚ್ಚಿಕೊಳ್ಳುವುದು, ಆದರ್ಶ ಎಂದು ಕೊಳ್ಳುವುದು ಇತ್ಯಾದಿ ಇತ್ಯಾದಿಯಾಗಿರುತ್ತದಲ್ಲಾ ಹಾಗೆ….

ಇದು ಸಾಮಾನ್ಯಳೊಬ್ಬಳ ತಲೆಯಲ್ಲಿ ಹುಟ್ಟಿದ ಇನ್ನು ಉತ್ತರ ಸಿಗದ ಕಾಡುತ್ತಿರುವ ಗೋಜಲು ಗೋಜಲಾಗಿರುವ ಪ್ರಶ್ನೆಗಳು. ಯಾರನ್ನೂ ದೂರುತ್ತಿಲ್ಲ.

ಸಂಸ್ಕಾರದಂತಹ ‘ಕ್ಲಾಸಿಕ್’ ಕಾದಂಬರಿಯನ್ನು ಬರೆದಂತಹ ಅನಂತಮೂರ್ತಿಯವರ ಸಂಸ್ಕಾರದ ರೀತಿ ನನಗಂತೂ ಸ್ವಲ್ಪವೂ ಸರಿಬರಲಿಲ್ಲ. 24bidತನ್ನ ಬ್ರಾಹ್ಮಣತ್ವವನ್ನು ಯಾವತ್ತೂ ಓರೆಗಲ್ಲಿಗೆ ಹಚ್ಚಿದಂತೆ ಬದುಕುತ್ತಿದ್ದ ಅವರಿಗೆ ಈ ರೀತಿಯ ವೇದ ಮಂತ್ರ ಘೋಷದ ಸಂಸ್ಕಾರ ಬೇಕಿತ್ತೆ? ಖಾಸಗೀ ವಾಹಿನಿಗಳ ದೃಶ್ಯ ವೈಭವ ಶ್ರೀಕಂಠದತ್ತ ಒಡೆಯರ್ ಸಂಸ್ಕಾರವನ್ನು ನೆನಪಿಸುವ ರೀತಿಯಲ್ಲಿತ್ತು. ಈ ಸಂಸ್ಕಾರದ ಅಗತ್ಯವಿತ್ತೇ? ಬ್ರಾಹ್ಮಣರ ಇಂಗಿನ ಒಗ್ಗರಣೆಯನ್ನೂ ಸೇರಿದಂತೆ ಎಲ್ಲವನ್ನೂ ಟೀಕಿಸುವ, ಅನಂತಮೂರ್ತಿ ತನ್ನ ತಂದೆಯಂತೆ ಎನ್ನುವ ಗೌರಿ ಲಂಕೇಶ ಈ ಸಂದರ್ಭದಲ್ಲಿ ಎಲ್ಲಿದ್ದರು? ಬಾಯಿ ತೆರೆದರೆ ಉಡುಪಿ ಬ್ರಾಹ್ಮಣರನ್ನು, ಬ್ರಾಹ್ಮಣರ ಆಚಾರ ವಿಚಾರಗಳನ್ನು ಪುಂಖಾನುಪುಂಖವಾಗಿ ಹೀಗಳೆಯುವ ಜಿ ಕೆ ಗೋವಿಂದರಾವ್ ಯಾಕೆ ಈ ಬಗ್ಗೆ ಬಾಯಿ ಬಿಡಲಿಲ್ಲ. ಪ್ರಗತಿಪರರು ಎನಿಸಿಕೊಂಡವರು, ‘ನಮ್ಮ ಮೇಷ್ಟ್ರು’ ಎಂದು ಪ್ರೀತಿಯಿಂದ ಕರೆದವರು ಎಲ್ಲ ಎಲ್ಲಿ ಹೋಗಿದ್ದರು?

ಹಿಂದೊಮ್ಮೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅನಂತಮೂರ್ತಿಯವರು ಉಪನ್ಯಾಸಕರಾಗಿದ್ದಾಗ ವಿದ್ಯಾರ್ಥಿಯಾಗಿದ್ದವರೊಬ್ಬರು ಹೇಳಿದ ಮಾತುಗಳಿವು… ‘ಅನಂತಮೂರ್ತಿ ವಿಶ್ವವಿದ್ಯಾನಿಲಯದಲ್ಲಿದ್ದಾಗ ವಿದ್ಯಾರ್ಥಿಗಳನ್ನೆಲ್ಲ ಸೇರಿಸಿ ವಿಚಾರ ವೇದಿಕೆ ಆರಂಭಿಸಿದ್ದರು. ನಾವೆಲ್ಲ ಅದರ ಸದಸ್ಯರುಗಳು. ಉತ್ಸಾಹದಿಂದ ಎಲ್ಲಾ ಸಭೆಯಲ್ಲೂ ಪಾಲ್ಗೊಳ್ಳುತ್ತಿದ್ದೆವು. ಆದರೆ ಅದೇ ಅನಂತಮೂರ್ತಿ ತನ್ನ ಮನೆ ಗೃಹಪ್ರವೇಶದ ಸಮಯದಲ್ಲಿ ದನವನ್ನು ತಂದು ಶಾಸ್ತ್ರ ಕ್ರಮಪ್ರಕಾರ ಗೃಹಪ್ರವೇಶ ಮಾಡಿದರು. ಪ್ರಶ್ನಿಸಿದ್ದಕ್ಕೆ ಅಪ್ಪ ಅಮ್ಮನಿಗಾಗಿ ಎಂದರು’.

ಇದರಲ್ಲಿ ನನಗೆ ನಿಜವಾಗಿ ಅನಂತಮೂರ್ತಿಯವರದು ತಪ್ಪು ಎನಿಸಲಿಲ್ಲ. ಅಪ್ಪ ಅಮ್ಮ ಎನ್ನುವ ಸಂಬಂಧ ತುಂಬಾ ಸೂಕ್ಷ್ಮದ್ದು. ‘ನಾಡಿಗೆ ಅರಸನಾದರೂ ತಾಯಿಗೆ ಮಗ’ ಎಂಬಂತೆ ಅಪ್ಪ ಅಮ್ಮನ ಮಮತೆ ವಾತ್ಸಲ್ಯದ ಮುಂದೆ ಯಾವ ಆದರ್ಶಗಳೂ ಇಲ್ಲ. ಅಪ್ಪ ಅಮ್ಮನ ಕೋರಿಕೆ ಈಡೇರಿಸುವುದು ಮಕ್ಕಳ ಕರ್ತವ್ಯ ಅದನ್ನು ಅನಂತಮೂರ್ತಿ ಮಾಡಿದ್ದಾರೆ. ಆದರೆ ಅವರ ಸಂಸ್ಕಾರದ ವಿಷಯದಲ್ಲಿ ಈ ಮಾತುಗಳು ಅನ್ವಯಿಸುವುದಿಲ್ಲ.

ಲಂಕೇಶರ ಅವ್ವ ನಾಟಕದಲ್ಲಿ ಉಡುಪ ಮತ್ತು ಮಮ್ತಾಜ್ ಎಂಬ ಎರಡು ಪಾತ್ರಗಳು ಬರುತ್ತವೆ. ura-lankeshಅದನ್ನು ಲಂಕೇಶ್ ಅನಂತಮೂರ್ತಿಯವರನ್ನು ಟೀಕಿಸಲೆಂದೇ ಬರೆದಂತಿದೆ (ನನಗನಿಸಿದ್ದು). ಮೊನ್ನೆ ಪತ್ರಿಕೆಯೊಂದರಲ್ಲಿ ಲಂಕೇಶ ಅನಂತಮೂರ್ತಿಯವರಿಗೆ ಸ್ವಜಾತಿಯ ಕನ್ಯೆಯನ್ನೇ ಮದುವೆಯಾಗು ಎಂದು ಹೇಳಿದ್ದರು ಎಂದೂ ಓದಿದೆ (ಉದಯವಾಣಿ 23.8.2014). ಮೊನ್ನೆಯ ಸಂಸ್ಕಾರದ ನಂತರ ಉಡುಪ ಹಾಗು ಮಮ್ತಾಜ್ ಪಾತ್ರಗಳು ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ.

ಎಲ್ಲೊ ಒಂದು ಕಡೆ ಓದಿದೆ ಅನಂತಮೂರ್ತಿ ವಿದ್ಯುತ್‌ನಲ್ಲಿ ಶವಸಂಸ್ಕಾರ ಬೇಡ ಎಂದಿದ್ದರು ಎಂದು. ಪರಿಸರ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅನಂತಮೂರ್ತಿ ಕಟ್ಟಿಗೆ ಸುಡುವುದು ಬೇಡ ಎಂದು ಯಾಕೆ ಹೇಳಲಿಲ್ಲ. ಅಂತ್ಯಕ್ರಿಯೆ ಫ್ಯಾಮಿಲಿ ಮ್ಯಾಟರ್ ಅನ್ನೋದಕ್ಕೆ ಅನಂತಮೂರ್ತಿ ಈ ನಾಡಿನ ಆಸ್ತಿ. ಮೊನ್ನೆ ಮೊನ್ನೆಯವರೆಗೆ ಚಿಕಿತ್ಸೆಗೆ ಸರ್ಕಾರದ ಹಣ ಕೋರಿದ್ದು ಇದೇ ಆಧಾರದ ಮೇಲೇ ಅಲ್ಲವೇ?

ನನ್ನ ಪ್ರಶ್ನೆ ಒಂದೇ. ಸಂಸ್ಕಾರದಂತಹ ಮೇರು ಕೃತಿ ಬರೆದ ಸಾಹಿತಿಯೊಬ್ಬನ ಸಂಸ್ಕಾರಕ್ಕೆ ಈ ರೀತಿಯ ಬ್ರಾಹ್ಮಣವೈಭವೋಪೇತ ಸಂಸ್ಕಾರ ಬೇಕಿತ್ತೇ? ಸರಳ ರೀತಿಯ ಸಂಸ್ಕಾರ ಸಾಕಿತ್ತಲ್ಲವೇ? ಇದನ್ನು ಪ್ರಶ್ನೆ ಮಾಡದಿದ್ದರೆ ಅದು ಸ್ವಜನ ಪಕ್ಷಪಾತವಾಗುವುದಿಲ್ಲವೇ? ಹೆಜ್ಜೆ ಹೆಜ್ಜೆಗೂ ಪೇಜಾವರರನ್ನು, ಭೈರಪ್ಪನವರನ್ನು ಟೀಕಿಸುವ ನಾವು ಯಾಕೆ ಅನಂತಮೂರ್ತಿಯವರ ವಿಚಾರದಲ್ಲಿ ಬಾಯಿ ಮುಚ್ಚಿಕೊಂಡಿದ್ದೇವೆ. ವೈಕುಂಠದ ಊಟಕ್ಕೆ ಹೋಗಿ ಮಂತ್ರಾಕ್ಷತೆ ಹಾಕಿಸಿಕೊಳ್ಳುವ ಮನಸ್ಥಿತಿಯಲ್ಲಿದ್ದೇವೆ?

29 thoughts on “ನಾರಣಪ್ಪ ಬ್ರಾಹ್ಮಣತ್ವವನ್ನು ಬಿಟ್ಟರೂ ಬ್ರಾಹ್ಮಣತ್ವ ನಾರಣಪ್ಪನನ್ನು ಬಿಡಲಿಲ್ಲ

  1. NagarajaM

    Every individual is a bundle of contradictions, the very body is composed of twin ideas, both positive and negative, giving expressions to one of these according to convenience. Those who are critical here are not free from this.

    Reply
  2. Ananda Prasad

    ಪುನರ್ಜನ್ಮ, ಕರ್ಮ ಸಿದ್ಧಾಂತ, ಆತ್ಮ ಇತ್ಯಾದಿಗಳಲ್ಲಿ ಅನಂತಮೂರ್ತಿಯವರಿಗೆ ನಂಬಿಕೆ ಇತ್ತೇ ಎಂದು ಗೊತ್ತಿಲ್ಲ. ಅನಂತಮೂರ್ತಿಯವರು ತಮ್ಮ ಅಂತಿಮ ಸಂಸ್ಕಾರವನ್ನು ಸಂಪ್ರದಾಯದಂತೆ ನಡೆಸಬೇಕು ಎಂದು ತಮ್ಮ ಮಗನಲ್ಲಿ ಹೇಳಿದ್ದರು ಎಂಬುದು ಪತ್ರಿಕಾವರದಿ (ವಾರ್ತಾಭಾರತಿ ೨೪/೦೮/೨೦೧೪). ಹೀಗಾಗಿ ಪುರೋಹಿತಶಾಹಿ ಕಂದಾಚಾರಗಳ ಪ್ರಕಾರ ಅಂತ್ಯ ಸಂಸ್ಕಾರ ನಡೆಸಬೇಕು ಎಂಬುದು ಅವರ ಇಷ್ಟವಾಗಿದ್ದಲ್ಲಿ ಇದು ಅವರ ನಂಬಿಕೆ ಎಂದು ತಿಳಿದುಕೊಳ್ಳಬೇಕಷ್ಟೇ. ಬ್ರಾಹ್ಮಣನಾಗಿ ಹುಟ್ಟಿದವರು ಪುರೋಹಿತಶಾಹಿ ಕಂದಾಚಾರಗಳನ್ನು ಸಮಾಜದಲ್ಲಿ ಬದುಕಬೇಕಾದರೆ ಆಚರಿಸಲೇಬೇಕಾದ ಅನಿವಾರ್ಯತೆ ಬ್ರಾಹ್ಮಣ ಜಾತಿಯಲ್ಲಿ ಇದೆ. ದೇವರು, ಆತ್ಮ, ಪುನರ್ಜನ್ಮ, ಕರ್ಮ ಸಿದ್ಧಾಂತ ಇವುಗಳಲ್ಲಿ ನಂಬಿಕೆ ಇಲ್ಲದ ಬ್ರಾಹ್ಮಣರೂ ಕಂದಾಚಾರಗಳನ್ನು ಆಚರಿಸದಿದ್ದರೆ ಸಮಾಜದಲ್ಲಿ ಬದುಕುವುದು ಕಷ್ಟ ಅಥವಾ ಅಸಾಧ್ಯ ಏಕೆಂದರೆ ಇವುಗಳನ್ನು ಆಚರಿಸದಿದ್ದರೆ ಸಮಾಜ, ಬಂಧು ಬಾಂಧವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಹಿಷ್ಕರಿಸುವುದು, ನಿಕೃಷ್ಟವಾಗಿ ನೋಡುವುದು ಮುಂತಾದ ವರ್ತನೆಗಳನ್ನು ತೋರಿಸುತ್ತಾರೆ. ಹೀಗಾಗಿ ಇವುಗಳನ್ನು ಆಚರಿಸದೆ ಇದ್ದವರು ದ್ವೀಪದಂತೆ, ಒಬ್ಬಂಟಿಯಾಗಿ ಬದುಕಬೇಕಾದೀತು. ಇದು ಬ್ರಾಹ್ಮಣ ಜಾತಿಯಲ್ಲಿ ಎಂದಲ್ಲ ಎಲ್ಲ ಜಾತಿಗಳಲ್ಲಿಯೂ ಇರುವುದೇ ಆಗಿದೆ. ಆಯಾ ಜಾತಿಯ ಕಂದಾಚಾರಗಳನ್ನು ನಂಬಿಕೆ ಇಲ್ಲದಿದ್ದರೂ ಆಚರಿಸದೆ ಇದ್ದರೆ ಈ ಸಮಾಜದಲ್ಲಿ ಬದುಕುವುದೇ ಕಷ್ಟ ಎಂಬ ಪರಿಸ್ಥಿತಿ ಭಾರತ ದೇಶದಲ್ಲಿ ಇದೆ. ಇಲ್ಲಿ ನಮಗೆ ಕಂದಾಚಾರಗಳನ್ನು ಆಚರಿಸದೆ ಗೌರವಯುತವಾಗಿ ಬದುಕುವ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ವಿಷಾದದಿಂದ ಹೇಳದೆ ವಿಧಿಯಿಲ್ಲ.

    Reply
    1. Shripad

      ಈ ಪುರೋಹಿತಶಾಹಿ, ಕಂದಾಚಾರ ಇತ್ಯಾದಿ ಪದಗಳನ್ನು ಎಲ್ಲರೂ ಎಲ್ಲೆಡೆಯೂ ಬಳಸುತ್ತಾರೆ ಅಂದುಕೊಂಡು ಬಳಸಿಬಿಟ್ಟಿದ್ದೀರೋ ಅಥವಾ ಹೀಗಂದರೇನು ಎಂಬುದನ್ನು ಅರ್ಥ ಮಾಡಿಕೊಂಡು ಬಳಸಿದ್ದೀರೋ? ಕಂದಾಚಾರ ಅಂದರೇನು, ಪುರೋಹಿತಶಾಹಿ ಅಂದರೇನು ಸ್ವಲ್ಪ ವಿವರಿಸ್ತೀರಾ?

      Reply
    2. valavi

      ಆನಂದ ಅವರೆ ನಿಮ್ಮ ನಂಬಿಕೆ ತಪ್ಪೆನಿಸುತ್ತದೆ. ಏಕೆಂದರೆ ನಮ್ಮೂರಿನಲ್ಲಿ ಬ್ರಾಹ್ಮಣರೊಬ್ಬರು ಜನಿವಾರ ತೆಗೆದು ಕಂದಾಚಾರಗಳನ್ನು ಸದಾ ಟೀಕಿಸುತ್ತಿದ್ದರು. ಆದರೆ ಅವರನ್ನು ಯಾರೂ ದ್ವೀಪದಂತೆ ಬಾಳಲು ಬಿಡಲಿಲ್ಲ. ನಿನ್ನ ನಂಬಿಕೆ ನಿನಗೆ ನಮ್ಮದು ನಮಗೆ ಎಂದು ಅವರನ್ನು ಯಾವ ಆಚರಣೆ ಮಾಡಲೂ ಅವರ ತಂದೆ ತಾಯಿ ಕೂಡ ಒತ್ತಾಯಿಸಲಿಲ್ಲ.

      Reply
    3. Naveen H

      ಆನಂದ್ ಪ್ರಸಾದರೆ ನಿಮ್ಮ ಈ ಅನಿಸಿಕೆ ತಪ್ಪು. . ಬ್ರಾಹ್ಮಣನಾಗಿ ಹುಟ್ಟಿದವರು ಪುರೋಹಿತಶಾಹಿ ಕಂದಾಚಾರಗಳನ್ನು ಸಮಾಜದಲ್ಲಿ ಬದುಕಬೇಕಾದರೆ ಆಚರಿಸಲೇಬೇಕಾದ ಅನಿವಾರ್ಯತೆ ಬ್ರಾಹ್ಮಣ ಜಾತಿಯಲ್ಲಿ ಇಲ್ಲಾ. ಇದಕ್ಕೆ ನಾನೇ ಉದಾಹರಣೆ. ನಾನು ಹುಟ್ಟಿದ್ದು ಬ್ರಾಹ್ಮಣದಲ್ಲಿ. ಆದರೆ ಬ್ರಾಹ್ಮಣರ ಯಾವ ಪುರೋಹಿತಶಾಹಿ, ಕಂದಾಚಾರಗಳನ್ನು ಆಚರಿಸುವದಿಲ್ಲಾ. ಹಾಗಂತ ನನಗೆ/ ನನ್ನ ಕುಟುಂಬಕ್ಕೆ ಯಾರು ಬಹಿಷ್ಕಾರ ಹಾಕಿಲ್ಲಾ. ಅಷ್ಟಕ್ಕೂ ಹಿಂದುಗಳನ್ನು, ಬ್ರಾಹ್ಮಣರನ್ನು ಬಹಿಷ್ಕಾರ ಹಾಕುವವರು ಯಾರು? ಇವರು ಯಾರ ಹಿಡಿತಕ್ಕೆ ಒಳಪಟ್ಟಿದ್ದಾರೆ? ಸುಮ್ನೆ ಯಾಕೆ ಹಾದಿ ತಪ್ಪಿಸೋ ಮಾತು ಆಡ್ತೀರಾ?

      Reply
      1. Ananda Prasad

        ಇಂದು ನಾವು ೨೧ನೇ ಶತಮಾನದಲ್ಲಿದ್ದೇವೆ. ಹಾಗಾಗಿ ಹಿಂದೆ ಹಾಕುತ್ತಿದ್ದಂತೆ ಬಹಿಷ್ಕಾರ ಹಾಕುವ ಪ್ರವೃತ್ತಿ ಈಗ ನಡೆಯಲಾರದು. ಬಹಿಷ್ಕಾರ ಎಂದರೆ ಅನಾದರದಿಂದ ನೋಡುವುದು ಎಂದು ಅರ್ಥೈಸಿಕೊಳ್ಳಬೇಕು. ಬ್ರಾಹ್ಮಣ ಆಚರಣೆಗಳನ್ನು ಆಚರಿಸದೆ ಇರುವವರನ್ನು ಬಂಧುಗಳು ಅನಾದರದಿಂದ ನೋಡುತ್ತಾರೆ. ಇದುವೇ ಪರೋಕ್ಷ ಬಹಿಷ್ಕಾರ. ಈ ರೀತಿ ಅನಾದರದಿಂದ ನೋಡುವ ಪ್ರವೃತ್ತಿ ಸಮಾಜದಲ್ಲಿ ಇದೆ.

        Reply
  3. gurukriparaghu

    ವ್ಯಕ್ತಿ ಬದುಕುವವರೆಗೂ ಹೇಳಿದ್ದು ಮತ್ತು ಮಾಡಿದ್ದು ತನ್ನ ‘ಬದುಕುವ ದಾರಿ'(ಅಸತ್ಯ) ಅಂತ್ಯದಲ್ಲಿ ನಡೆದದ್ದು ಮಾತ್ರ ಅವನ ಬದುಕಿನ ‘ವಾಸ್ತವ ಸತ್ಯ’ ! ಆಡಿಯೂ ಮಾಡಲಾರದವನ ಇಂತಹ ಹೀನ ಬದುಕು ಬೇಕೇ ? ಇಂತವರು ಯಾವ ರೀತಿಯಲ್ಲಿ ಆದರ್ಶವಾಗಬಲ್ಲರು !

    Reply
  4. Ananda Prasad

    ಧಾರ್ಮಿಕ ಆಚರಣೆಗಳನ್ನು ಅದರಲ್ಲಿ ನಂಬಿಕೆ ಇಲ್ಲದವರ ಮೇಲೆಯೂ ಹೇರುವುದು ಪುರೋಹಿತಶಾಹಿ ಎನಿಸಿಕೊಳ್ಳುತ್ತದೆ. ಹೇರುವಿಕೆ ಎಂಬುದು ಕೂಡ ಸಾಮಾಜಿಕವಾಗಿ ಪ್ರತ್ಯಕ್ಷ ಹಾಗೂ ಪರೋಕ್ಷ ಬಹಿಷ್ಕಾರದ ರೂಪದಲ್ಲಿ ಅಥವಾ ನಿಕೃಷ್ಟವಾಗಿ ಕಾಣುವುದರ ರೂಪದಲ್ಲಿ ಇರುತ್ತದೆ. ಇದುವೇ ಪುರೋಹಿತಶಾಹಿ. ಎಳೆಯ ವಯಸ್ಸಿನಿಂದಲೇ ಧಾರ್ಮಿಕ ಶ್ರದ್ಧೆಯನ್ನು ಬೆಳೆಸುವುದು ಮತ್ತು ಅಂಥ ಶ್ರದ್ಧೆ ಇಲ್ಲದವರನ್ನು ನಿಕೃಷ್ಟವಾಗಿ ಕಾಣುವುದು ಕೂಡ ಪುರೋಹಿತಶಾಹಿಯ ಒಂದು ರೂಪವೇ ಆಗಿದೆ. ಧಾರ್ಮಿಕ ಹಾಗೂ ಇನ್ನಿತರ ಆಚರಣೆಗಳಲ್ಲಿ ಶ್ರದ್ಧೆ ಇಲ್ಲದವರನ್ನು ಕೂಡ ಧಾರ್ಮಿಕ ನಂಬಿಕೆಗಳಲ್ಲಿ ಶ್ರದ್ಧೆ ಇರುವವರನ್ನು ನೋಡುವ ರೀತಿಯಲ್ಲಿಯೇ ಗೌರವಯುತವಾಗಿ ನೋಡುವ ಪರಿಸ್ಥಿತಿ ನಮ್ಮಲ್ಲಿ ಇಲ್ಲ. ಇದು ಪುರೋಹಿತಶಾಹಿ ಸಮಾಜದಲ್ಲಿ ಹುಟ್ಟು ಹಾಕಿದ ನಂಬಿಕೆಗಳ ಫಲವಾಗಿ ರೂಪುಗೊಂಡಿದೆ. ಮನುಷ್ಯರಲ್ಲಿ ಸ್ವತಂತ್ರ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವುದನ್ನು ವಿರೋಧಿಸುವುದು ಕೂಡ ಪುರೋಹಿತಶಾಹಿಯೇ ಆಗಿದೆ.

    Reply
    1. Shripad

      ಓಹೋ! ಚಿಂತನೆಗಳು ಅದ್ಭುತವಾಗಿವೆ. ಆದರೆ ಇದರ ಬೆನ್ನಿಗೆ ಹುಟ್ಟುವ ನೂರಾರು ಪ್ರಶ್ನೆಗಳಿಗೆ-ಇದು ಬ್ರಾಹ್ಮಣರಿಗೆ ಮಾತ್ರ ಸೀಮಿತವೇ? ಪುರೋಹಿತಶಾಹಿ ಪದವನ್ನು ಯಾರು ಯಾವಾಗ ಯಾವ ಅರ್ಥದಲ್ಲಿ ಬಳಸಿದರು? ಈಗ ಹೇಗೆ ಬಳಕೆಯಾಗುತ್ತಿದೆ ಇತ್ಯಾದಿ, ಉತ್ತರಿಸಲು ಶಕ್ತವಾಗಿಲ್ಲ. ಇಂಥ ಮಾತುಗಳನ್ನು ಹೇಳುವವರು ಇರುವಂತೆ ಭಕ್ತಿಯಿಂದ ಪ್ರಶ್ನಿಸದೇ ಕೇಳುವವರಿದ್ದರೆ ಚೆನ್ನಾಗಿರುತ್ತದೆ ಅಷ್ಟೆ.

      Reply
    1. NagarajaM

      we are so glad when others hold to their own rituals but criticize when such things happen in Brahmin families-it is a paradox, born in one religion, die in another.

      Reply
  5. subrahmanyam

    Aachaara = vichaara = Prachaara = kaarantha, tejasvi,,

    Aachaara# vichaara # prachaara = ura, & host of vichaara vyaadhigalu. I appreciate your dispassionate view, sister.

    Reply
  6. Shripad

    Let them do last rites as their wish. They need not ask anybody. It is certainly a family right. Tom, Dick and Harries have different views, how to follow and satisfy all views at one time?

    Reply
  7. Yathish kumar

    ಇದಕ್ಕೆ ಹೇಳುವುದು ವಿಪರ್ಯಾಸ! ವೈದಿಕ ಜಾತಿಯಲ್ಲಿ ಹುಟ್ಟಿ ಅವರು ಮಾಡುವ ಆಚಾರ ವಿಚಾರಗಳನ್ನು ಗೊಡ್ಡು ಸಂಪ್ರದಾಯ ಅಂತ ವಿರೋಧಿಸಿ ಕ್ರಿಶ್ಚನ್ ಧರ್ಮದ ಹುಡುಗಿಯನ್ನು ಮದುವೆಯಾಗಿ ಕೊನೆಗೆ ಇಡೀ ಹಿಂದೂ ಧರ್ಮವೇ ಮೂಡನಂಬಿಕೆ ಅಡಿಯಲ್ಲಿ ಮಲಗಿದೆ, ದೇವರೇ ಇಲ್ಲ ಅಂತ ಹಿಂದೂ ದೇವರ ಮೂರ್ತಿಗೆ ಮೂತ್ರ ಮಾಡಿದೆ ಅದರೂ ನನಗೆ ಎನ್ನು ಸಂಭವಿಸಲಿಲ್ಲ! ಹಿಂದುಗಳನ್ನು ಬೈದು ಪುಸ್ತಕಗಳನ್ನು ಬರೆದು ಹಿಂದುಗಳನ್ನು ಅವಹೇಳನಮಾಡಿ ಹಿಂದೂ ವಿರೋಧಿಗಳ ದೊಡ್ಡ ಸ್ಯೆನ್ಯವನ್ನೇ ಕಟ್ಟಿಕೊಂಡ ಇವರಿಗೆ ಅಂತಿಮ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಅದೂ ವೈದಿಕ ಸಂಪ್ರದಾಯದಂತೆ ಅಚ್ಚುಕಟ್ಟಾಗಿ ನಡೆದಾಗ ಅಲ್ಲಿ ಹಿಂದೂ ವಿರೋಧಿಗಳ ಲದ್ದಿಜೀವಿಗಳ ದೊಡ್ಡ ಸ್ಯೆನ್ಯ ಅಲ್ಲದೇ ಹಿಂದೂ ವಿರೋಧಿ ಮುಖ್ಯಮಂತ್ರಿಯ ಸಮ್ಮುಖದಲ್ಲೇ ನಡೆದಾಗ ಯಾರಿಗೂ ಅದು ಗೊಡ್ಡು ಸಂಪ್ರದಾಯ, ಮೂಡನಂಬಿಕೆಯ ಪರಮಾವಧಿ ಅಂತ ಅನಿಸಲಿಲ್ಲ! ಯಾರು ವಿರೋಧಿಸಲಿಲ್ಲ! ಆದರೆ ಇದರಿಂದಾಗಿ ನಿಜವಾಗಿಯೂ ಹಿಂದೂ ಧರ್ಮದ ಬೇರು ಇನ್ನೂ ಆಳಕ್ಕೆ ಇಳಿಯಿತು!.. ಅಲ್ಲಿ ಬಳಸಿದ 40 Kg ತುಪ್ಪ, 75 kg ಬೆಲೆಬಾಳುವ ಗಂದದ ಕಟ್ಟಿಗೆ ನ್ಯಾಷನಲ್ ವೆಸ್ಟ್ ಅಂತ ಯಾರಿಗೂ ಅನಿಸಲಿಲ್ಲ! ಎಲ್ಲ ಪುಸ್ತಕದ ಬದನೇಕಾಯಿ!

    Reply
    1. gurukriparaghu

      ಅದಕ್ಕೆ ಹೇಳುವುದು ‘ಹೇಳುವುದು ಆಚಾರ ,ತಿನ್ನುವುದು ಬದನೇಕಾಯಿ’ ಅಂತ ಇಂತವರನ್ನು ನೋಡಿಯೇ ಹಿಂದಿನವರು ಗಾದೆ ಮಾತು ಹೇಳಿದ್ದಾರೆ !

      Reply
  8. Anonymous

    ಆನಂದಪ್ರಸಾದ್ ಅವರಿಗೆ— ಇಂದು ಬಹುಷಃ ತಮ್ಮ ಹಿಂದಿನ ಆಚರಣೆಗಳನ್ನು ಬಿಟ್ಟು ತಾವಾಯಿತು ,ತಮ್ಮ ಕೆಲಸವಾಯಿತು ಎಂದು ಜೀವಿಸುತ್ತಿರುವ ಒಂದು ಜಾತಿ ಎಂದರೆ ಬ್ರಾಹ್ಮಣರು. ತಮ್ಮ ಮತ್ತು ತಮ್ಮಂಥ ಪ್ರಗತಿ ಪರ ವಿಚಾರಧೋರಣೆಯವರ ಕಟು ಧೋರಣೆ, ವ್ಯಂಗ್ಯ,ವಿರೋಧಗಳ ಜತೆ ಜಂಗಿ ಕುಸ್ತಿ ಆಡಲು ಅವರಲ್ಲಿ ದೈಹಿಕ ಶಕ್ತಿಯಾಗಲಿ, ಹಣವಾಗಲಿ ಇಲ್ಲ. ತಮ್ಮಂತಹ ಪುರೋಗಾಮಿ ಚಿಂತನೆಯವರು ಆಶಿಸುತ್ತಿರುವ ಅಂತರ್ಜಾತಿ ವಿವಾಹಗಳು ಬೇರೆ ಜಾತಿಗಳವರ ಜತೆ ಹೋಲಿಸಿದರೆ ಹೆಚ್ಚಾಗಿ ನಡೆಯುತ್ತಿರುವುದು ಬ್ರಾಹ್ಮಣರಲ್ಲೇ. ತಾವು ಇಂದು ಅಧಿಕಾರ, ಹಣ, ಅಂತಸ್ತುಗಳಿಂದ ಪ್ರತಿಷ್ಠೆಗಾಗಿ ‘ನವ ಬ್ರಾಹ್ಮಣರಾಗುತ್ತಿರುವ’ ಇತರ ಜಾತಿಗಳವರ ಕಡೆ ಸ್ವಲ್ಪ ವಿಚಾರ ಮಾಡಿ. ಅವರ ಮದುವೆ, ಗೃಹ ಪ್ರವೇಶ,ಮಕ್ಕಳ ನಾಮಕರಣ, ಮದುವೆಯ ನಿಶ್ಚಿತಾರ್ಥ ಸಮಾರಂಭಗಳ ವೈಭವ ನೋಡಿ. ಅಲ್ಲಿ ಪುರೋಹಿತರಿರುತ್ತಾರಲ್ಲ ಎಂದು ತಾವು ಆಕ್ಷೇಪಿಸಿದರೆ ಅದಕ್ಕೆ ಕಾರಣ ಈ ‘ನವ ಬ್ರಾಹ್ಮಣರೇ’ . ಯಾವ ಪುರೋಹಿತನೂ ಆ ಕಾರ್ಯಕ್ರಮಗಳನ್ನು ನಾನು ಮಾಡಿಸುತ್ತೇನೆ ಎಂದು ಅವರಲ್ಲಿ ಹೋಗಿ ಕೇಳಿಕೊಂಡಿರುವುದಿಲ್ಲ. ಒಂದು ವಸ್ತುವಿಗೆ ಗಿರಾಕಿ ಇದ್ದರೆ ತಾನೇ ಆ ವಸ್ತುವಿಗೆ ಬೇಡಿಕೆ ಇರುವುದು? ಬೆಂಗಳೂರಿನಲ್ಲಿ ಈರುಳ್ಳಿ, ಟೊಮೋಟೋ ಗಳ ಬೆಲೆ ನೂರು ರೂಪಾಯಿಗಳ ಆಸುಪಾಸಿನಲ್ಲಿದ್ದಾಗ ಮಧ್ಯಮವರ್ಗದವನಾದ ನಾನು ಅದರ ಬಳಕೆ ಕಮ್ಮಿ ಮಾಡಿದೆ . ಒಂದೆರೆಡು ವಾರ ಅಂಗಡಿಯಿಂದ ತರುವುದನ್ನೇ ನಿಲ್ಲಿಸಿಬಿಟ್ಟೆ. ಅದೇ ರೀತಿ ಪುರೋಹಿತರನ್ನೂ ನಿವಾರಿಸಿಕೊಳ್ಳಬಹುದಲ್ಲವೇ? ಬ್ರಾಹ್ಮಣರನ್ನು ನೋಡಿ ಇತರೆ ಜಾತಿಯವರು ,ಕೆಳವರ್ಗದವರು ಆ ಆಚರಣೆಗಳನ್ನು ಕಲಿತರು ಎಂದರೆ ಅದಕ್ಕೆ ಪುನಃ ಈರುಳ್ಳಿ, ಟೊಮೋಟೋಗಳ ಉದಾಹರಣೆಗಳನ್ನೇ ಕೊಡಬೇಕಾಗುತ್ತದೆ. ದುಡ್ಡಿದ್ದವರು ಬೆಲೆ ಜಾಸ್ತಿಯಾದಾಗಲೂ ಅವುಗಳನ್ನು ಕೊಂಡುಕೊಳ್ಳುತ್ತಾರೆ. ಅದಕ್ಕೆ ಅಂಗಡಿಯವನನ್ನು ಬೈದು ಏನು ಪ್ರಯೋಜನ?
    ಡಾ. ಪ್ರಭಾಕರ ಎಂ ನಿಂಬರಗಿ ಅವರಿಗೆ—- ತಮ್ಮ ಪ್ರತಿಕ್ರಿಯೆ ಸದ್ಯದ ಸನ್ನಿವೇಶದಲ್ಲಿ ಸೌಜನ್ಯದ, ಔಚಿತ್ಯದ ಎಲ್ಲೆಯನ್ನು ಮೀರಿದೆ ಎಂದು ಅನಿವಾರ್ಯವಾಗಿ ಹೇಳಬಯಸುತ್ತೇನೆ. ಅನಂತಮೂರ್ತಿಯವರ ಕುಟುಂಬವರ್ಗದವರು , ಅವರ ಸಾಹಿತ್ಯ,ವ್ಯಕ್ತಿತ್ವದ ಅಭಿಮಾನಿಗಳು ದುಃಖದಲ್ಲಿರುವ ಈ ಸಂದರ್ಭದಲ್ಲಿ ತಾವು ಆ ರೀತಿ ಪ್ರತಿಕ್ರಿಯಿಸಬಾರದಿತ್ತು. ತಮ್ಮ ಪ್ರತಿಕ್ರಿಯೆಯನ್ನು ತಾವೇ ಇನ್ನೊಮ್ಮೆ ಓದಿ ನೋಡಿ. ಸಾಧ್ಯವಾದರೆ ಅದಕ್ಕೆ ವಿಷಾದ ಸೂಚಿಸಿದರೆ ಒಳಿತು.
    ಕೊನೆಯದಾಗಿ—ಅನಂತಮೂರ್ತಿಯವರು ಬದುಕಿದ್ದಾಗ ಪ್ರತಿಪಾದಿಸುತ್ತಿದ್ದ ವಿಚಾರಗಳಿಗೂ ಮತ್ತು ಅವರ ಅಂತ್ಯ ಸಂಸ್ಕಾರದ ಕ್ರಿಯಾ ವಿಧಿಗಳಿಗೂ ಅಂತವಿತ್ತು ಎಂದು ಈಗ ಪತ್ರಿಕೆಗಳಲ್ಲಿ,ಬ್ಲಾಗುಗಳಲ್ಲಿ ಬರೆಯುವುದು,ಸಭೆ ಸಮಾರಂಭಗಳಲ್ಲಿ ಮಾತಾಡುವುದು ಸರಿಯಲ್ಲ.,ಏನೇ ಆದರೂ ಅವೆಲ್ಲಾ ಅವರ ಕುಟುಂಬದವರಿಗೆ ಸಂಬಂಧಿಸಿದ್ದು. ಅವರುಗಳೆಲ್ಲಾ ದುಃಖದಲ್ಲಿರುವಾಗ ಇಂತಹ ಬರಹ, ಮಾತುಕತೆಗಳಿಂದ ಅವರ ಮನಸ್ಸನ್ನು ಇನ್ನಷ್ಟು ಘಾಸಿಗೊಳಿಸುವುದು ಮಾನವೀಯತೆ ಅಲ್ಲ.

    Reply
    1. Ananda Prasad

      ಅಂತರ್ಜಾತಿ ವಿವಾಹವಾದ ಬ್ರಾಹ್ಮಣ ಹೆಣ್ಣು ಮಕ್ಕಳನ್ನು ಅವರ ಕುಟುಂಬ ಹಾಗೂ ಬಂಧುವರ್ಗ ಅಸ್ಪೃಶ್ಯರಂತೆ ನಡೆಸಿಕೊಳ್ಳುವುದನ್ನು ನಾನು ನೋಡಿದ್ದೇನೆ. ಇಂಥ ಹೆಣ್ಣು ಮಕ್ಕಳನ್ನು ತಮ್ಮ ತವರು ಮನೆಗೆ ಬರಲು ಬಿಡುವುದಿಲ್ಲ, ತವರು ಮನೆಯಲ್ಲಿ ಹಾಗೂ ಬಂಧುವರ್ಗದ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳಿಗೂ ಆಹ್ವಾನ ಇರುವುದಿಲ್ಲ. ಅಂತರ್ಜಾತಿ ವಿವಾಹ ಮಾಡಿಕೊಂಡದ್ದು ಕೊಲೆಗಿಂತಲೂ ಘೋರ ಅಪರಾಧ ಎಂಬ ರೀತಿಯಲ್ಲಿ ಇಂಥ ಹೆಣ್ಣು ಮಕ್ಕಳನ್ನು ಅವರ ಕುಟುಂಬ ಹಾಗೂ ಬಂಧುವರ್ಗ ನಡೆಸಿಕೊಳ್ಳುತ್ತದೆ. ಅವರು ದ್ವೀಪಗಳಂತೆ ತಮ್ಮ ಕುಟುಂಬ ಹಾಗೂ ಬಂಧುವರ್ಗದ ಸಂಪರ್ಕ ಇಲ್ಲದೆ ಬಾಳಬೇಕಾದ ದುಸ್ಥಿತಿಯನ್ನು ಬ್ರಾಹ್ಮಣ ಕುಟುಂಬಗಳು ಇಂದಿಗೂ ವಿಧಿಸುತ್ತಿವೆ. ಇದು ಬ್ರಾಹ್ಮಣ ಜಾತಿಯಲ್ಲಿ ಮಾತ್ರ ಇದೆ ಎಂದೇನೂ ಅಲ್ಲ ಬೇರೆ ಜಾತಿಗಳಲ್ಲಿಯೂ ಇಂಥದೇ ಸ್ಥಿತಿ ಇದೆ. ಅದರಲ್ಲೂ ಮೇಲು ಜಾತಿಯ ಹೆಣ್ಣು ಮಕ್ಕಳು ಕೆಳ ಜಾತಿಯ ಗಂಡುಗಳ ಜೊತೆ ಅಂತರ್ಜಾತಿ ಮದುವೆ ಆದ ಕಡೆ ಇದು ಹೆಚ್ಚಾಗಿ ಕಂಡುಬರುತ್ತದೆ.

      ಇಂದು ‘ನವಬ್ರಾಹ್ಮಣ’ ರಾಗುತ್ತಿರುವ ಇತರ ಜಾತಿಗಳ ಜನರಲ್ಲಿ ವೈಚಾರಿಕತೆಯ ತೀವ್ರ ಕೊರತೆ ಇದೆ. ಹೀಗಾಗಿ ಬ್ರಾಹ್ಮಣರ ಆಚರಣೆಗಳನ್ನು ಆಚರಿಸಿದರೆ ತಾವು ಶ್ರೇಷ್ಠರಾಗುತ್ತೇವೆ ಎಂಬ ಭ್ರಮೆ ಅವರಲ್ಲಿ ಹುಟ್ಟಿಕೊಂಡಿದೆ. ಅದೂ ಅಲ್ಲದೆ ಇಂದು ಇತರ ಜಾತಿಗಳ ಜನರಲ್ಲಿ ಬೇರೆ ಬೇರೆ ಉದ್ಯೋಗ, ಉದ್ಯಮಗಳಲ್ಲಿ ತೊಡಗಿಕೊಂಡು; ಪರದೇಶಗಳಿಗೆ, ಪರ ಊರಿಗೆ ಹೋಗಿ ಚೆನ್ನಾಗಿ ಸಂಪಾದನೆ ಮಾಡಿದವರೇ ಇಂಥ ‘ನವಬ್ರಾಹ್ಮಣ’ ಪ್ರವೃತ್ತಿಯನ್ನು ತೋರಿಸುತ್ತಿದ್ದಾರೆ. ಇದು ಅವರ ಕೈಯಲ್ಲಿ ತುಂಬಿ ತುಳುಕುತ್ತಿರುವ ಹಣಬಲದ ಮಹಾತ್ಮೆ . ಹಾಗಾಗಿ ಪುರೋಹಿತರು ಹೇಳಿದಷ್ಟು ಹಣ ಚೆಲ್ಲಲು ಈ ‘ನವಬ್ರಾಹ್ಮಣರು’ ಹಿಂದೆ ಮುಂದೆ ನೋಡುವುದಿಲ್ಲ. ಅವರಿಗೆ ಹೀಗೆ ಹಣ ಚೆಲ್ಲಿದರೆ ಒಳಿತಾಗುತ್ತದೆ ಎಂದು ಮಾರ್ಗದರ್ಶನ ಮಾಡುವವರು ಬ್ರಾಹ್ಮಣರೇ ಆಗಿರುತ್ತಾರೆ. ಜ್ಯೋತಿಷಿಗಳು ಇಂಥವರ ತಲೆಗೆ ಜೀರ್ಣೋದ್ಧಾರ, ಅಷ್ಟಮಂಗಳ ಪ್ರಶ್ನೆ, ಬ್ರಹ್ಮಕಲಶ ಮೊದಲಾದ ವಿಚಾರಗಳನ್ನು ತುಂಬಿ ಅವರ ಕೈಯಿಂದ ಚೆನ್ನಾಗಿ ಹಣ ಕಕ್ಕಿಸುವುದನ್ನು ನಾವು ಇಂದು ಎಲ್ಲೆಡೆ ನೋಡಬಹುದು.

      Reply
  9. NagarajaM

    Samskara created a controversy among Brahmins but got highest prize, even his death and thereafter another controversy! Heluvudu ondu, maaduvudu mattondu!

    Reply
  10. M A Sriranga

    ಆನಂದಪ್ರಸಾದ್ ಅವರಿಗೆ– (೧)ಅಂತರ್ಜಾತಿ ವಿವಾಹ ಮೇಲ್ಜಾತಿಯಲ್ಲಾಗಲೀ ಅಥವಾ ಕೆಳಜಾತಿಗಳಲ್ಲಾಗಲಿ ಆದಾಗ ಮನೆಯವರ,ನೆಂಟರ ವಿರೋಧ ಸಹಜ. ಕಾಲಾಂತರದಲ್ಲಿ ಅದು ಮಾಮೂಲಿಯಾದಾಗ ಆ ಬಗ್ಗೆ ಯಾರೂ ಕುಹಕ,ವಿರೋಧ ಮಾಡುವುದಿಲ್ಲ. ಹಿಂದಿನಿಂದ ಬಂದ ಯಾವುದೇ ಒಂದು ರೂಢಿಯನ್ನು ಮುರಿದಾಗ ಇವೆಲ್ಲಾ ಆಗುವಂತಹುದೇ. ಯಾರಾದರೂ ಒಬ್ಬರು ಆ ರೂಢಿ ಮುರಿಯಲೇ ಬೇಕಲ್ಲ!! ಪಕ್ಕದ ಮನೆಯವರೋ, ನಮ್ಮ ಸ್ನೇಹಿತರೋ ರೂಢಿ ಮುರಿಯಲಿ, ಆಮೇಲೆ ನೋಡುವ ಎಂದು ಎಲ್ಲರೂ ಕೈಕಟ್ಟಿ ಕುಳಿತರೆ ಬದಲಾವಣೆ ಆಗುವುದಾದರೂ ಹೇಗೆ? ಬದಲಾವಣೆ ಎನ್ನುವುದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಆಗುವಂತಹುದಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ.
    (೨) ೨೮-೮-೨೦೧೪ ರ ಪ್ರತಿಕ್ರಿಯೆಯಲ್ಲಿ ಪ್ರಸ್ತಾಪಿಸಿದ ಪುರೋಹಿತರ ಬಗೆಗಿನ ವಿಷಯವನ್ನು ತಾವು ಸರಿಯಾಗಿ ಗಮನಿಸಿಲ್ಲ ಎಂದು ಕಾಣುತ್ತದೆ. ‘ನವ ಬ್ರಾಹ್ಮಣರನ್ನು’ ತಿದ್ದುವ,ಎಚ್ಚರಿಸುವ,ಅವರಲ್ಲಿ ವೈಚಾರಿಕತೆಯನ್ನು ಮೂಡಿಸುವ ಬದಲು ಪುರೋಹಿತಶಾಹಿ,ಪುರೋಹಿತರು ಮತ್ತು ಬ್ರಾಹ್ಮಣರನ್ನು ಟೀಕಿಸುವುದೇ ಪ್ರಗತಿಪರರ ಉದ್ಯೋಗ ಎಂದು ತಾವು ಭಾವಿಸಿದರೆ ಅದು ಸರಿಯಾಗುತ್ತದೆಯೇ? ಒಮ್ಮೆ ಯೋಚಿಸಿ.

    —–ಮು ಅ ಶ್ರೀರಂಗ ಬೆಂಗಳೂರು

    Reply
  11. Ananda Prasad

    ಅಂತರ್ಜಾತಿ ವಿವಾಹ ಅದರಲ್ಲೂ ಮೇಲು ಜಾತಿಯ ಹೆಣ್ಣು ಮಕ್ಕಳು ಕೆಳ ಜಾತಿಯ ಗಂಡುಗಳನ್ನು ಮದುವೆ ಆದಂಥ ಪ್ರಕರಣಗಳಲ್ಲಿ ಅವರನ್ನು ಜೀವಮಾನ ಪರ್ಯಂತ ತವರುಮನೆಯಿಂದ ಹಾಗೂ ಬಂಧು ಬಳಗದಿಂದ ದೂರ ಇಟ್ಟಿರುವ ಮಹನೀಯರೂ ಇದ್ದಾರೆ ಮತ್ತು ಇಂಥವರೇ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವವರು. ಇಂಥ ಶಿಕ್ಷೆ (ಬಹಿಷ್ಕಾರ) ಸಮಾಜದಲ್ಲಿ ಇರುವಾಗ ಯಾರು ತಾನೇ ಅಂತರ್ಜಾತಿ ವಿವಾಹವಾಗಲು ಮನಸ್ಸು ಮಾಡುತ್ತಾರೆ? ಹೆಣ್ಣಿಗೆ ತವರು ಮನೆಯ ಸಂಪರ್ಕ ಇಲ್ಲದಿದ್ದರೆ ಅವರು ಜೀವಮಾನಪರ್ಯಂಥ ಕೊರಗುತ್ತಾರೆ.

    ‘ನವ ಬ್ರಾಹ್ಮಣ’ ರನ್ನು ತಿದ್ದುವುದು, ಅವರಲ್ಲಿ ವೈಚಾರಿಕತೆಯನ್ನು ಮೂಡಿಸುವುದು ಸುಲಭವಲ್ಲ ಅಥವಾ ಬಹುತೇಕ ಅಸಾಧ್ಯವಾದ ಕೆಲಸ ಏಕೆಂದರೆ ಅವರೆಲ್ಲಾ ಎಳೆಯ ವಯಸ್ಸಿನಿಂದಲೇ ಧಾರ್ಮಿಕ ಹಾಗೂ ಅವೈಚಾರಿಕ ಆಚಾರ ವಿಚಾರಗಳಿಗೆ ಆಡಿಕ್ಟ್ (addict) ಆಗಿರುತ್ತಾರೆ ಅಥವಾ ಪ್ರೋಗ್ರಾಮ್ಡ್ (programmed) ಆಗಿರುತ್ತಾರೆ. ಹೀಗಾಗಿ ಮೆದುಳಿನಲ್ಲಿ ಎಳೆಯ ವಯಸ್ಸಿನಿಂದಲೇ ಪ್ರೋಗ್ರಾಮ್ಡ್ ಆದ ವಿಚಾರಗಳನ್ನು ಅಳಿಸಿ ಹೊಸ ವಿಚಾರಗಳನ್ನು ತುಂಬಿಸುವುದು ಸಾಧ್ಯವಾಗುವುದಿಲ್ಲ. ಇದು ಸ್ವತಂತ್ರವಾಗಿ ವಿಚಾರ ಮಾಡುವ ಸಾಮರ್ಥ್ಯ ಇರುವವರಿಂದ ಮಾತ್ರ ಸಾಧ್ಯವಾಗುತ್ತದೆ. ಅಂಥ ಸಾಮರ್ಥ್ಯ ಇರುವವರು ಸಮಾಜದಲ್ಲಿ ಬಹಳ ಬಹಳ ಕಡಿಮೆ. ಇದಕ್ಕೆ ಎಳೆಯ ವಯಸ್ಸಿನಿಂದಲೇ ವೈಚಾರಿಕ ಶಿಕ್ಷಣ ನೀಡಿದರೆ ವೈಚಾರಿಕ ಪೀಳಿಗೆಯೊಂದನ್ನು ಬೆಳೆಸಬಹುದು. ಆ ಕೆಲಸ ನಮ್ಮ ಸಮಾಜದಲ್ಲಿ ನಡೆಯುವುದೇ ಇಲ್ಲ ಮತ್ತು ಧಾರ್ಮಿಕ ಶಕ್ತಿಗಳು ಇಂಥ ಕೆಲಸ ನಡೆಯಲು ಬಿಡುವುದೂ ಇಲ್ಲ. ಜನರಲ್ಲಿ ಭೀತಿ ಹುಟ್ಟಿಸಿ ಭಕ್ತಿ ಮೂಡಿಸುವಷ್ಟು ಸುಲಭವಾಗಿ ವೈಚಾರಿಕತೆಯನ್ನು ಬೆಳೆಸುವುದು ಸಾಧ್ಯವೇ ಇಲ್ಲ. ಹೀಗಾಗಿ ಭೀತಿಯೇ ಯಾವಾಗಲೂ ಗೆಲ್ಲುವುದು. ಭೀತಿ ಹುಟ್ಟಿಸುವ ಕೆಲಸ ಮಾಡುವವರು ಯಾರು ಎಂಬುದು ಬೆಳಗಿನ ಹೊತ್ತು ಟಿವಿ ವಾಹಿನಿಗಳನ್ನು ನೋಡಿದರೆ ಗೊತ್ತಾದೀತು.

    Reply
  12. M A Sriranga

    ಆನಂದಪ್ರಸಾದ್ ಅವರಿಗೆ—-(೧) ಜೀವನದಲ್ಲಿ,ಸಮಾಜದಲ್ಲಿ ಕೆಲವೊಂದು ಬದಲಾವಣೆ ತರಲು ಹೊರಟಾಗ ಇವೆಲ್ಲಾ ಸಹಜ ವಿದ್ಯಮಾನಗಳು. ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎಂದು ಕೂತರೆ ಇವೆಲ್ಲಾ ಸಾಧ್ಯವಾಗುವುದಿಲ್ಲ. ಕುದುರೆಯ ಮುಂದೆ ಗಾಡಿ ನಿಲ್ಲಿಸಿ, ಗಾಡಿ ಮುಂದೆ ಹೊಗುತ್ತಾ ಇಲ್ಲ ಎಂದು ಕುದುರೆಯನ್ನು ಹೊಡೆದರೆ ಏನು ಪ್ರಯೋಜನ? ಬದಲಾವಣೆ ಬೇಕು ಅಂದರೆ ಕೆಲವೊಂದು ತ್ಯಾಗಕ್ಕೆ ಸಿದ್ಧರಾಗಲೇ ಬೇಕು. ಇಲ್ಲವಾದರೆ ನಾವಾಡುವ ಬದಲಾವಣೆ ,ಉದ್ಧಾರ ಮುಂತಾದ ಎಲ್ಲಾ ಮಾತುಗಳೂ ಕೇವಲ ನಮ್ಮ ಬಾಯಿ ಚಪಲವಾಗಿಬಿಡುತ್ತದೆ. ಬರಬರುತ್ತಾ ನಾವು ಟೊಳ್ಳಾಗುತ್ತಾ ಹೋಗುತ್ತೇವೆ.
    (೨) 24X7 ಟಿ ವಿ ವಾಹಿನಿಗಳಲ್ಲಿ ಇಡೀ ದಿನ ನೂರೆಂಟು ಕಾರ್ಯಕ್ರಮಗಳು ಬರುತ್ತಾ ಇರುತ್ತವೆ. ಇದು ಕೇವಲ ಕನ್ನಡ ವಾಹಿನಿಗಳಿಗಷ್ಟೇ ಸೀಮಿತವಾದುದಲ್ಲ. ಆ ಟಿ ವಿ ವಾಹಿನಿಗಳು ಜಾಹೀರಾತುಗಳಿಂದ ಬರುವ ಹಣಕ್ಕೋಸ್ಕರ ತಾವು ಸೂಚಿಸಿದಂತಹ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಾರೆ. ಜತೆಗೆ ಪ್ರತಿ ವಾರ, ತಿಂಗಳು ಆಯಾ ಕಾರ್ಯಕ್ರಮದ T R P ಯನ್ನೂ ನೋಡುತ್ತಿರುತ್ತಾರೆ. ಅಲ್ಲಿನ ಕಾರ್ಯಕ್ರಮಗಳ ನಿರ್ವಾಹಕರು , ಸಿ ಇ ಒ ಇವರೆಲ್ಲಾ ಪುರೋಹಿತರು, ಪುರೋಹಿತಶಾಹಿಗಳ ಅಂಗಗಳು ಎಂಬ ನಿರ್ಧಾರಕ್ಕೆ ತಾವು ಬಂದರೆ ಸಮಸ್ತ ಸಮಾಜದ ಎಲ್ಲಾ ವಿದ್ಯಮಾನಗಳೂ ಪುರೋಹಿತಶಾಹಿ ಎಂಬ ನಿರ್ಣಯಕ್ಕೆ ಸುಲಭವಾಗಿ ಬರಬಹುದು. ಮುಖ್ಯವಾದ ಮಾತೆಂದರೆ ಇವೆಲ್ಲಾ ನಮ್ಮಗಳ ತಪ್ಪು,ಜವಾಬ್ದಾರಿಗಳನ್ನು ಇನ್ನೊಬ್ಬರ ಹೆಗಲಿಗೆ ಏರಿಸಿ ನಾವುಗಳು ಆರಾಮ ಖುರ್ಚಿಯಲ್ಲಿ ಕುಳಿತು ಚಿಂತಕರು,ಪ್ರಗತಿಪರರು,ಕ್ರಾಂತಿಕಾರಿಗಳೆಂಬ ಬಿರುದುಗಳನ್ನು ಪಡೆಯುವ ಹುನ್ನಾರಗಳಷ್ಟೇ.
    (೩) ಈ ಚರ್ಚೆ ಪ್ರಾರಂಭವಾಗಿದ್ದು ಅನಂತಮೂರ್ತಿಯವರ ‘ಅಂತಿಮ ಸಂಸ್ಕಾರಕ್ಕೆ’ ಸಂಬಂಧಿಸಿದ ಪ್ರಸ್ತುತ ಲೇಖನಕ್ಕೆ ಪೂರಕವಾಗಿ. ಅದ್ದರಿಂದ ಅದರ ಬಗ್ಗೆ ಒಂದೆರೆಡು ಮಾತು. ಸಾಹಿತಿಯ ಜೀವನ ಸಹ ಆತನ ಕಲ್ಪನೆ, ಆತ ಕಂಡ ಒಂದು ಸಮಾಜದ ನಂಬಿಕೆ,ನಡವಳಿಕೆಗಳ ಮೊತ್ತದಿಂದ ರಚಿತವಾದ ಸಾಹಿತ್ಯದಂತೆಯೇ ಇರುತ್ತದೆ ಮತ್ತು ಇರಲೇಬೇಕೆಂಬ ಹಠ, ಒತ್ತಾಯ ಇವುಗಳ ಮೂಲಕ ಬಂದಿರುವಂತಹುದು. (ಸಾಹಿತಿ =ಆತನ ಸಾಹಿತ್ಯ ಎಂಬ ಸರಳ ಸಮೀಕರಣ). ತನ್ನ ಸಾಹಿತ್ಯದಲ್ಲಿ ಪ್ರಗತಿಪರ, ಸಮಾಜದ ವಿರುದ್ಧ ಸಿಡಿದೇಳುವ , ಅದರ ನಂಬಿಕೆಗಳನ್ನು ಪ್ರಶ್ನಿಸುವ ಪಾತ್ರಗಳನ್ನು ಸೃಷ್ಟಿಸಿದ ಸಾಹಿತಿಯೊಬ್ಬ ತನ್ನ ಜೀವನದಲ್ಲೂ ಹಾಗೇ ಇರುತ್ತಾನೆ,ಇರಬೇಕೆಂಬ ಓದುಗರ ಮುಗ್ಧತೆಯಿಂದ ಹುಟ್ಟಿರುವಂತಹುದು. ಅದೇ ರೀತಿ ತನ್ನ ಸಾಹಿತ್ಯದಲ್ಲಿ ಪ್ರತಿಗಾಮಿ ಎಂದು ಓದುಗರು ಭಾವಿಸುವ ಪಾತ್ರಗಳನ್ನು, ವಿಚಾರಗಳನ್ನು ತಂದ ಸಾಹಿತಿ ತನ್ನ ಜೀವನದಲ್ಲೂ ಅದೇ ರೀತಿ ಇರುತ್ತಾನೆ ಎಂಬ ತಪ್ಪು ತಿಳುವಳಿಕೆಯ ಪರಿಣಾಮದ ಪ್ರತಿಫಲ. . ಇದು ಬಹುಷಃ ಕನ್ನಡ ಸಾಹಿತ್ಯವನ್ನು ಬಹುಕಾಲದಿಂದ ಕಾಡಿಸುತ್ತಿರುವ ವ್ಯಾಧಿ. ಓದುಗರ, ವಿಮರ್ಶಕರ ಇಂತಹ ತಪ್ಪು ತಪ್ಪಾದ ಅಭಿರುಚಿ, ನಿರ್ಧಾರದಿಂದ ಕನ್ನಡದ ಸಾಹಿಗಳಿಗೆ, ಸಾಹಿತ್ಯಕ್ಕೆ ಸಾಕಷ್ಟು ಹಾನಿಯಾಗಿದೆ. ಸಾಹಿತಿಯೂ ನಮ್ಮೆಲ್ಲರಂತೆ ಒಬ್ಬ ವ್ಯಕ್ತಿ ಎಂದು ಭಾವಿಸಿದರೆ ಇಂತಹ ಸಮಸ್ಯೆ ಏಳುವುದೇ ಇಲ್ಲ. ಈ ಹಿಂದೆ ನಾನು ಎಲ್ಲೋ ಓದಿದ ಅಥವಾ ಕೇಳಿದ ಮಾತೊಂದಿದೆ. ಅದು–Trust the tale: not the teller.( ಕಥೆಯನ್ನು ನಂಬು; ಆದರೆ ಆ ಕಥೆಯನ್ನು ಹೇಳುವವನಲ್ಲ). ಅನಂತಮೂರ್ತಿಯವರು ಕೇರಳದ ಕೊಟ್ಟಾಯಂ ನಲ್ಲಿ ವಿ ವಿ ಯೊಂದರ ಕುಲಪತಿಗಳಾಗಿದ್ದಾಗ ತಮ್ಮ ಕಾರಿನ ಡ್ರೈವರ್ ಜತೆ ಅಯ್ಯಪ್ಪನ ವ್ರತ ಕೈಗೊಂಡು ಕಪ್ಪು ಬಟ್ಟೆ ಧರಿಸಿ ಶಬರಿಮಲೈ ಯಾತ್ರೆಗೂ ಹೋಗಿದ್ದರು. ವಿವರಗಳಿಗೆ ನೋಡಿ —‘ನಾನು,ಓ ವಿ ವಿಜಯನ್,ಅಯ್ಯಪ್ಪ ಮತ್ತು ರಾಮ’ ಲೇಖನ. ( ಪುಟ ೧೫೧, “ಋಜುವಾತು” ಸಂಸ್ಕೃತಿ ಚಿಂತನ ಬರಹಗಳು, ಪ್ರಕಾಶಕರು:ಅಂಕಿತ ಪುಸ್ತಕ ಬೆಂಗಳೂರು -೪ ಎರಡನೇ ಮುದ್ರಣ ೨೦೦೯) ಸಾಹಿತಿಯ ನಿಜ ಜೀವನದ ವಿವರಗಳು ಬೇಕಿದ್ದರೆ ಅವರುಗಳ ಆತ್ಮಕತೆ , ನೆನಪುಗಳ ಸಂಕಲನ, ಅವರನ್ನು ಬಲ್ಲವರು ಬರೆದ ಜೀವನ ಚರಿತ್ರೆ, ಇತ್ಯಾದಿಗಳನ್ನು ಓದಬೇಕು. ಕನ್ನಡ ಸಾಹಿತ್ಯದಲ್ಲಿ ಇಂತಹ ಕೃತಿಗಳು ಡಿ ವಿ ಜಿ ಅವರಿಂದ ಹಿಡಿದು ಕುಂ.ವೀ ಅವರುಗಳ ತನಕ ಸಾಕಷ್ಟಿದೆ. —–M A Sriranga

    Reply
    1. valavi

      ಶ್ರೀರಂಗ ಅವರೆ ಕಾದಂಬರಿಯ ಪಾತ್ರವೊಂದರಿಂದ ಪಾತ್ರದ ವ್ಯಕ್ತಿತ್ವ ಲೇಖಕನದು ಎಂದು ತಿಳಿಯುವಷ್ಟು ಕನ್ನಡ ಓದುಗರು ಮೂರ್ಖರೇನಲ್ಲ. ಅವರು ಅನೇಕ ಕಡೆ ಭಾಷಣ ಮತ್ತು ಲೇಖನಗಳಲ್ಲಿ ಇಂಥ ಆಚಾರಗಳನ್ನು ತೆಗಳಿದ್ದಾರೆ. ಈಗ ಅವರ ಸಂಸ್ಕಾರವು ಅದೇ ತೆರನಾಗೆ ನಡೆದರೆ ಏನಂತ ಅರ್ಥ? ಅವರ ಕುಟುಂಬ ಬಾಂಧವರೇ ಅವರ ವಿಚಾರಗಳನ್ನು ಒಪ್ಪುವದಿಲ್ಲ ಎಂದರ್ತಥವಲ್ಲವೆ? ಇದನ್ನೇ ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ.

      Reply
      1. M A Sriranga

        ವಾಳವಿ ಅವರಿಗೆ —ತಮ್ಮ ಪ್ರಶ್ನೆಗೆ ಯು ಆರ್ ಅನಂತಮೂರ್ತಿ ಅವರ ಪತ್ನಿ ಶ್ರೀಮತಿ ಎಸ್ತರ್ ಅನಂತಮೂರ್ತಿ ಅವರೇ “ಭಾಗ್ಯ ಕೃಷ್ಣಮೂರ್ತಿ” ಅವರ ಜತೆ ಮಾತಾಡುತ್ತಾ ಉತ್ತರ ಕೊಟ್ಟಿದ್ದಾರೆ ಅನಿಸುತ್ತದೆ. ಅದರ ಆಯ್ದ ಭಾಗಗಳನ್ನು ಉಲ್ಲೇಖಿಸಿದ್ದೇನೆ.ನೋಡಿ. (ಪೂರ್ಣ ಲೇಖನಕ್ಕೆ ೩೧-೮-೨೦೧೪ರ ಕನ್ನಡಪ್ರಭದ ಭಾನುವಾರದ ಪುರವಣಿ “ಖುಷಿ” ಪುಟ ೧ ನೋಡಬಹುದು). ——-.
        ……….. ಎಸ್ತರ್ ಅವರು ನೊಂದು ಹೇಳಿಕೊಂಡರು. ‘ನಮ್ಮ ಅನೇಕ ಜನ, ಬರಹಗಾರರನ್ನು ಏನೆಂದು ಅರ್ಥ ಮಾಡಿಕೊಳ್ಳುತ್ತಾರೋ? ಬದುಕು ಬೇರೆ,ಬರಹ ಬೇರೆ ಅಂತ ಯಾಕೆ ತಿಳಿಯಲ್ಲ? ಒಬ್ಬ ಕೃತಿಕಾರ ಎಷ್ಟು ಕೃತಿ ರಚಿಸುತ್ತಾರೋ ಅಲ್ಲಲ್ಲಿಯ ಪಾತ್ರಗಳಂತೆ ಬದುಕುವುದು ಸಾಧ್ಯವೇ? ಅನಂತಮೂರ್ತಿಯವರ ಸಂಸ್ಕಾರ ಒಂದು ಉತ್ತಮ ಕೃತಿಯಷ್ಟೇ. ಅದನ್ನೇ ಅನೇಕರು ಅನಂತಮೂರ್ತಿಗಳ ಅಂತಿಮ ಸಂಸ್ಕಾರಕ್ಕೆ ಒರೆ ಹಚ್ಚಿ ನೋಡುವುದು ಅರ್ಥವಾಗುತ್ತಿಲ್ಲ. ಅನಂತಮೂರ್ತಿಗಳು ಎಂದೂ ತಾವು ಬ್ರಾಹ್ಮಣರಲ್ಲ ಅಂತ ಎಲ್ಲೂ ಘೋಷಿಸಿಲ್ಲ. ಅಥವಾ ತಮ್ಮ ಆ ವಿಚಾರವಾಗಿ ಎಲ್ಲೂ ವಾದವಿವಾದಗಳಿಗೆ ಎಡೆ ಮಾಡಿಕೊಟ್ಟಿಲ್ಲ. ಅವರ ಪಾಡಿಗೆ ಅವರು ಸೃಜನಶೀಲರಾಗಿದ್ದರು. ಜನಪರವಾಗಿ ಯೋಚಿಸುತ್ತಿದ್ದರು. ಹಲವು ಹತ್ತು ಆದರ್ಶಗಳನ್ನಿಟ್ಟು ಕೊಂಡಿದ್ದರು. ತಪ್ಪುಗಳು ಎಲ್ಲಿ ಕಾಣಿಸಿದರೂ ಸಿಡಿದೇಳುವ ಗುಣ ಅವರದ್ದು. ತಮಗೆ ಬೇಕಾದ ಹಾಗೆ ಬದುಕುವ ಹಕ್ಕು ಎಲ್ಲರಿಗೂ ಇದ್ದೇ ಇರುತ್ತೆ. ಹಾಗೆ ಯಾರಿಗೂ ತೊಂದರೆ ಕೊಡದೆ ಬದುಕಿ ಹೋದರು ಅಂದರು. ಇದು ಎಲ್ಲರಿಗೂ ತಿಳಿದ ವಿಚಾರ. ಅನೇಕ ಜನ ತಮಗೆ ಬೇಕಾದ ಹಾಗೆ ಚಿತ್ರಿಸಿಕೊಂಡು ಅನಂತಮೂರ್ತಿಯವರ ವಿಚಾರದಲ್ಲಿ ತೀರ್ಮಾನಗಳನ್ನು ತೆಗೆದುಕೊಂಡರೆ ಯಾರು ಹೊಣೆ?……………. . ಅವರವರ ಅಂತ್ಯಕ್ಕೆ ಸಂಬಂಧಿಸಿ ಅವರಿಗೊಂದು ಅಭಿಪ್ರಾಯವಿರಬಾರದೆ?’…………………

        “ಶರ್ಮಿಷ್ಠ” ಅವರ ಪ್ರಸ್ತುತ ಲೇಖನವೂ ಸೇರಿದಂತೆ ಇಂದು ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ, face book ನಲ್ಲಿ ನಡೆಯುತ್ತಿರುವ ಚರ್ಚೆಗೆ ಬಹುಷಃ ಎಸ್ತರ್ ಅವರ ಈ ಮಾತುಗಳು ಉತ್ತರ ನೀಡಿವೆ ಎಂದು ನಾನು ಭಾವಿಸಿದ್ದೇನೆ. …….. ಎಂ ಎ ಶ್ರೀರಂಗ

        Reply
  13. Ananda Prasad

    ಕಷ್ಟ ನಷ್ಟ, ಕುಟುಂಬ ಹಾಗೂ ಬಂಧುಗಳ ಅನಾದರ ಎದುರಿಸಿ, ತ್ಯಾಗ ಮಾಡಿ ಕೆಲವರು (ಬೆರಳೆಣಿಕೆಯ ಜನ) ಅಂತರ್ಜಾತೀಯ ಮದುವೆ ಮಾಡಿಕೊಂಡರೂ ಫಲವಿಲ್ಲ. ಉದಾಹರಣೆಗೆ ಶಿವರಾಮ ಕಾರಂತರು ಬಹಳ ಹಿಂದೆಯೇ ಅಂತರ್ಜಾತೀಯ ಮದುವೆ ಆದರು. ಅವರಿಂದ ಪ್ರೇರಿತರಾಗಿ ಎಷ್ಟು ಜನ ಅಂತರ್ಜಾತೀಯ ಮದುವೆ ಆದರು ಎಂದು ನೋಡಿದರೆ ಅದರಿಂದ ಸಮಾಜದ ಮೇಲೆ ಪ್ರೇರಣೆ ಸಿಕ್ಕಿದೆ ಎನಿಸುವುದಿಲ್ಲ. ಸಮಾಜವು ಸಂಘಟಿತವಾಗಿ ಪ್ರಗತಿಯೆಡೆಗೆ ಮುನ್ನಡೆಯದೆ ವೈಯಕ್ತಿಕ ಪ್ರಯತ್ನಗಳಿಂದ ಸಮಾಜದ ಮೇಲೆ ಪರಿಣಾಮ ಆಗುವುದಿಲ್ಲ, ಸುಮ್ಮನೆ ಕೆಲವರು (ಪ್ರಯತ್ನಪಡುವ ಬೆರಳೆಣಿಕೆಯ ಜನ) ಕಷ್ಟ ನಷ್ಟ, ಮಾನಸಿಕ ನೋವು ಅನುಭವಿಸಬೇಕಷ್ಟೇ.

    ಟಿವಿ ವಾಹಿನಿಗಳ ವಾಣಿಜ್ಯ ಹಿತಾಸಕ್ತಿಯ ಮುಂದೆ ಉಳಿದ ಮೌಲ್ಯಗಳು ಗೌಣವಾಗುವ ಕಾರಣ ಈ ಬಗ್ಗೆ ಹೇಳಿ ಪ್ರಯೋಜನವೇನೂ ಇಲ್ಲ ಏಕೆಂದರೆ ಅವರೂ ಬದುಕಬೇಕಲ್ಲ!

    Reply
  14. M A Sriranga

    ಆನಂದಪ್ರಸಾದ್ ಅವರಿಗೆ– ಶಿವರಾಮ ಕಾರಂತರ ಅಂತರ್ಜಾತಿ ವಿವಾಹದಿಂದ ಎಷ್ಟು ಜನಕ್ಕೆ ಪ್ರೇರಣೆ ಸಿಕ್ಕಿತೋ ಬಿಟ್ಟಿತೋ ಅದು ಮುಖ್ಯವಲ್ಲ. ಆದರೆ ಅವರು ತಾವು ನಂಬಿದ್ದನ್ನು, ತಮಗೆ ಸರಿ ಎಂದು ಕಂಡದ್ದನ್ನು ಯಾವ ಮುಲಾಜಿಲ್ಲದೆ ಮಾಡುತ್ತಿದ್ದರು. ಇತರರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಜಾಯಮಾನ ಅವರದ್ದಲ್ಲ. ತುರ್ತುಪರಿಸ್ಥಿತಿಯ ವೇಳೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ಬಂದಾಗ ಕೇಂದ್ರ ಸರ್ಕಾರ ಕೊಟ್ಟಿದ್ದ ಪ್ರಶಸ್ತಿಯನ್ನು ವಾಪಸ್ಸು ಮಾಡಿದ್ದರು. ಇಂತಹ ನಡೆ ನುಡಿಗಳಿಂದ ಅವರನ್ನು ಇಂದೂ ನಾವೆಲ್ಲಾ ಗೌರವಿಸುತ್ತೇವೆ. ಇದು ತಮಗೆ ಅಮುಖ್ಯವಾದುದು ಎಂದರೆ ನಾನೇನೋ ಹೇಳಲಿಕ್ಕಾಗುವುದಿಲ್ಲ. ಮೂರು ಹೊತ್ತೂ ಟಿ ವಿ ,ಪತ್ರಿಕೆ,ಸಭೆ,ಸಮಾರಂಭಗಳಲ್ಲಿ ಕಾಲ ಕಳೆಯುವ ” tv tigers ,paper cheetahs, loud speaker lionsಗಳು ಮಾತ್ರ “ಸಮಾಜವನ್ನು ಸಂಘಟನೆ ಮಾಡಿ ಪ್ರಗತಿಯೆಡೆಗೆ ಮುನ್ನಡೆಸುತ್ತಾರೆ “ಎಂಬ ಬಲವಾದ ನಂಬಿಕೆ ತಮಗೆ ಇದ್ದ ಹಾಗಿದೆ. ಸಾಮೂಹಿಕ ಅಂತರ್ಜಾತಿ ವಿವಾಹ ಮಾಡಿಸಲು– ,ಸಮಾಜ ಎನ್ನುವುದು ತನ್ನ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆಗೆ ಹೊರಟ ಯಾವುದೋ ಒಂದು ಕಾರ್ಖಾನೆ, ಕಚೇರಿಯ ನೌಕರರ ಗುಂಪಲ್ಲ. ಅಂತಹ ಗುಂಪಿನ ಜತೆ ಅಂತರ್ಜಾತಿ ವಿವಾಹ ಮಾಡಿಕೊಳ್ಳುವ ವ್ಯಕ್ತಿಯನ್ನು ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಇಂತಹ ವಿವಾಹಗಳಲ್ಲಿ ಪ್ರತಿ ವ್ಯಕ್ತಿಯೂ ಮುಖ್ಯನಾಗುತ್ತಾನೆ. ಒಟ್ಟು ಗುಂಪಲ್ಲ. — ಎಂ ಎ ಶ್ರೀರಂಗ

    Reply
  15. Ananda Prasad

    ಶಿವರಾಮ ಕಾರಂತರ ನಡೆ ನುಡಿಗಳನ್ನು ನಾನೂ ಗೌರವಿಸುವವನೇ. ಆದರೆ ಅವರ ಅಂತರ್ಜಾತೀಯ ವಿವಾಹ ಸಮಾಜಕ್ಕೆ ಪ್ರೇರಣೆಯಾಗಲಿಲ್ಲ, ವೈಯಕ್ತಿಕ ಪ್ರಯತ್ನಗಳು ಸಮಾಜದ ಮೇಲೆ ಪ್ರಭಾವ ಬೀರುವುದಿಲ್ಲ ಎಂಬುದು ನನ್ನ ಅಭಿಪ್ರಾಯ ಅಷ್ಟೇ. ಅಂತರ್ಜಾತೀಯ ಮದುವೆ ಆಗುವವರು ಆರ್ಥಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ, ಮಾನಸಿಕವಾಗಿ ಭಾರೀ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಇಂಥ ಸಮಯದಲ್ಲಿ ಅವರಿಗೆ ಒತ್ತಾಸೆಯಾಗಿ ನಿಲ್ಲಲು ಬಲವಾದ ಸಾಂಘಿಕ ವ್ಯವಸ್ಥೆ ಇರದೇ ಇದ್ದರೆ ಅಂತರ್ಜಾತೀಯ ಮದುವೆಯಾಗಲು ಬೆರಳೆಣಿಕೆಯ ಜನ ಬಿಟ್ಟರೆ ಬೇರಾರೂ ಮುಂದೆ ಬರುವುದಿಲ್ಲ. ಅಂಥ ವ್ಯವಸ್ಥೆ ನಮ್ಮಲ್ಲಿ ಇಲ್ಲವೇ ಇಲ್ಲ. ದೇಶದ ದೊಡ್ಡ ದೊಡ್ಡ ಸಂಘಟನೆಗಳೂ ಕೂಡ ಈ ಬಗ್ಗೆ ಗಮನ ಹರಿಸಿಲ್ಲ. ಹೀಗಾಗಿ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತಿಲ್ಲ.

    Reply
  16. ಜೆ.ವಿ.ಕಾರ್ಲೊ, ಹಾಸನ

    ನಾರಣಪ್ಪ ನನಗೆ ಯಾಕೆ ಮೆಚ್ಚಿಗೆಯಾದನೆಂದರೆ ಅವನು ಮಾಡಿದ್ದನ್ನು ನಾನು ಮಾಡಲಾಗಲಿಲ್ಲವೆಂದೇ!

    Reply
    1. Nagshetty Shetkar

      Naranappa faced wrath of purohitashahi just like URA sir. He shouldn’t have died in the novel but lived to lead a mass movement against purohitashahi.

      Reply

Leave a Reply

Your email address will not be published. Required fields are marked *