Daily Archives: August 27, 2014

“ಧರ್ಮ ಭ್ರಷ್ಟರಾದವರು ….”


-ಇರ್ಷಾದ್


 

 

 

ಈ ನಾಡಿನ ಸಾಕ್ಷಿಪ್ರಜ್ಞೆ  ನಮ್ಮೆಲ್ಲರ  ಮೇಷ್ಟ್ರು ಯು.ಆರ್. ಅನಂತಮೂರ್ತಿ ವಿಧಿವಶರಾದ ವಾರ್ತೆ ಮಾಧ್ಯಮಗಳಲ್ಲಿ ಬಿತ್ತರವಾಗುತಿದ್ದಂತೆ  ಮಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ
anathamurthy-death-crackers ಸಂಘಪರಿವಾರದ  ಕಾರ್ಯಕರ್ತರು ಪಟಾಕಿ  ಸಿಡಿಸಿ ಸಂಭ್ರಮಿಸಿ ವಿಕೃತಿ  ಮೆರೆದರು. ನಮ್ಮೆಲ್ಲರ ಧ್ವನಿಯಾಗಿದ್ದ  ಸಾಹಿತಿ ಯು. ಆರ್. ಅನಂತಮೂರ್ತಿ ಅವರ ಮೇಲಿನ ಕೋಪಕ್ಕೆ ಕಾರಣ ಅವರು ಸನಾತನವಾದಿಗಳನ್ನು ವಿರೋಧಿಸುತ್ತಿದ್ದರು ಎಂಬುದು. ಅವರು ಪುರೋಹಿತಶಾಯಿಯನ್ನು ತಿರಸ್ಕರಿಸಿದ್ದರು. ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹೊಲಸು ಕಾರ್ಯಗಳನ್ನು ಖಂಡಿಸುತಿದ್ದರು. ಸಹಜವಾಗಿಯೇ ಅವರು ಸಂಘಪರಿವಾರ, ಪುರೋಹಿತಶಾಹಿ ವರ್ಗ ಹಾಗೂ ಸನಾತನವಾದಿಗಳ ಪಾಲಿಗೆ ಧರ್ಮಭ್ರಷ್ಟರಾದರು. ತಮ್ಮ ನೇರ ನಿಷ್ಠುರ ನಡೆಯಿಂದ ಅನ್ಯಾಯವನ್ನು, ತಪ್ಪನ್ನು ಎತ್ತಿತೋರಿಸಿದಕ್ಕಾಗಿ ಧರ್ಮದ ಗುತ್ತಿಗೆದಾರರು ಅವರನ್ನು ಹಿಂದೂ ಧರ್ಮವಿರೋಧಿಯನ್ನಾಗಿ  ಚಿತ್ರಿಸಿದರು. ಇದರ ಪರಿಣಾಮ ಯು.ಆರ್. ಅನಂತಮೂರ್ತಿ ಸಾವನ್ನು ಪಟಾಕಿ  ಸಿಡಿಸಿ  ಸಂಭ್ರಮಿಸಿ ತಮ್ಮ  ಕಲ್ಮಶಕಾರಿ ವಿಕೃತ  ಮನಸ್ಸನ್ನು ಖುಷಿಪಡಿಸಿದರು. ಇದು ಡಾ. ಯು.ಆರ್ ಅನಂತ ಮೂರ್ತಿ ಒಬ್ಬರಿಗೆ ಮಾತ್ರ  ಸೀಮಿತವಾಗಿಲ್ಲ. ಸತಾತನವಾದಿಗಳ, ಮೂಲಭೂತವಾದಿಗಳ, ಸಂಪ್ರದಾಯವಾದಿಗಳ ಹಾಗೂ ಧರ್ಮವನ್ನು  “ಗುತ್ತಿಗೆ”  ಪಡೆದುಕೊಂಡವರ ವಿರುದ್ಧ  ಯಾರು ಧ್ವನಿ ಎತ್ತುತ್ತಾರೋ ಅವರೆಲ್ಲರೂ ಒಂದೋ ದೇಶ ಬಿಡಬೇಕು ಅಥವಾ ನಿತ್ಯ ಹೀಗಳಿಕೆ, ಅವಮಾನ ಅಥವಾ ಜೀವ ಬೆದರಿಕೆಗಳ ನಡುವೆ ಬದುಕು ಸಾಗಿಸಬೇಕು. ಇಂತಹ ಹಲವು ಸಾಕ್ಷಿಪ್ರಜ್ಞೆಗಳ ಉದಾಹರಣೆಗಳು ನಮ್ಮೊಂದಿಗಿವೆ.

1848 ರಲ್ಲಿ ಪುಣೆಯಲ್ಲಿಪುರೋಹಿತಶಾಹಿ ವ್ಯವಸ್ಥೆಯನ್ನು ಧಿಕ್ಕರಿಸಿ ದಲಿತ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಜ್ಯೋತಿಬಾsavithri bai pule ಫುಲೆ ಹಾಗೂ ಸಾವಿತ್ರಿ ಬಾಯಿ ಫುಲೆ ದಂಪತಿಗಳು ಮುಂದಾದಾಗ ಸನಾತನವಾದಿಗಳಿಗೆ ಫುಲೆ ದಂಪತಿಗಳು ಧರ್ಮಭ್ರಷ್ಟರಂತೆ ಕಂಡರು. ಈ ದಂಪತಿಗಳು ಸನಾತನವಾದಿಗಳಿಂದ  ಬಹಿಷ್ಕಾರಕ್ಕೂ ಒಳಗಾದರು. ಆದರೆ ಇದ್ಯಾವುದಕ್ಕೂ ಜಗ್ಗದೆ ಸಾವಿತ್ರಿ ಬಾಯಿ ಫುಲೆಯವರು ದಲಿತ ಹೆಣ್ಣು ಮಕ್ಕಳಿಗೆ ಪಾಠ  ಕಲಿಸಲು  ಶಾಲೆಗೆ ಹೋಗುವ ಸಂದರ್ಭದಲ್ಲಿ ನಿತ್ಯ ಅವಮಾನ, ಹೀಗಳಿಕೆಗೆ  ಗುರಿಯಾಗುತ್ತಿದ್ದರು. ಅವರ ಮೇಲೆ ಹೊಲಸು, ಕೆಸರು, ಕಲ್ಲುಗಳನ್ನು  ಎಸೆಯುತ್ತಿದ್ದರು ಸನಾತನ ಸಂಪ್ರದಾಯವಾದಿಗಳು ತಮ್ಮ ತಮ್ಮ  ವಿಕೃತಿ ಮೆರೆದಿದ್ದರು.

ಪಾಕಿಸ್ಥಾನದ  ಸರ್ವಾಧಿಕಾರಿ  ರಾಷ್ಟ್ರಾಧ್ಯಕ್ಷ ಜಿಯಾ-ಉಲ್ –ಹಕ್  ಸರ್ಕಾರದಲ್ಲಿ ರಾಜತಾಂತ್ರಿಕ ಹುದ್ದೆ  ಪಡೆದ ಮೊದಲ ಮಹಿಳೆಯಾಗಿದ್ದ ಆಸ್ಮಾ ಬಾರ್ಲಸ್.  ಇವರನ್ನು ಜಿಯಾ-ಉಲ್ –ಹಕ್ ನೌಕರಿಯಿಂದ  ಕಿತ್ತೆಸೆದರು. ಅಲ್ಲದೆ ಕೆಲ ಸಮಯದಲ್ಲೇ ಪಾಕಿಸ್ಥಾನದಿಂದ ಇವರನ್ನು ಹೊರಗಟ್ಟಲಾಯಿತು. ‘ದಿ ಮುಸ್ಲಿಮ್’  ಎಂಬ ಪ್ರಮುಖ ಪತ್ರಿಕೆಯ ಉಪಸಂಪಾದಕರಾಗಿದ್ದ, ಸ್ತ್ರೀವಾದಿ ವಿದ್ವಾಂಸರೆಂದು ಪ್ರಸಿದ್ದಿಪಡೆದಿದ್ದ  ಆಸ್ಮಾ ಬಾರ್ಲಸ್  ಅವರನ್ನು ಪಾಕಿಸ್ಥಾನದಿಂದ  ಹೊರಗಟ್ಟಲು ಕಾರಣ ಅವರು ಇಸ್ಲಾಂ ಧರ್ಮದ  ನ್ಯಾಯ  ಶಾಸ್ತ್ರ ಶರಿಯಾ  ವಿರುದ್ಧ ಧ್ವನಿ ಎತ್ತಿದರು asma balrlasಎಂಬ  ಕಾರಣಕ್ಕಾಗಿ. ಸ್ತ್ರೀ  ದ್ವೇಷ  ಹಾಗೂ ಕಾಮುಕತೆಗಳಿಗೆ ಹೆಸರುವಾಸಿಯಾದ ಅಬ್ಬಾಸಿದ್ದರ ಕಾಲದಲ್ಲಿ ಇಸ್ಲಾಮೀ ಕಾನೂನು ಪಂಡಿತರಿಂದ ರಚಿತವಾದ  ಶರಿಯಾ ಪುರಷ ಪಕ್ಷಪಾತಿ ಮತ್ತು ಸ್ತ್ರೀ ವಿರೋಧಿಯಾಗಿದೆ ಎಂಬ ವಾದವನ್ನು ಅಸ್ಮಾ ಮಂಡಿಸಿದ್ದರು. ಶರಿಯಾ  ಕಾನೂನು  ವ್ಯವಸ್ಥೆಯ ಅತ್ಯುಗ್ರ  ಶಿಕ್ಷೆ ಅಪರಾಧಿಯನ್ನು ಕಲ್ಲು ಹೊಡೆದು ಸಾಯಿಸುವುದು. “ಇದು  ನ್ಯಾಯ  ವಿರೋಧಿ  ಕಾನೂನು ಹಾಗೂ  ಕುರುಆನ್ ಉಲ್ಲಂಘನೆ. ಕುರ್ ಆನ್ ಯಾವುದೇ ರೀತಿಯ  ಅಪರಾಧಕ್ಕೂ  ಈ ರೀತಿ  ಶಿಕ್ಷೆಯನ್ನು  ನೀಡುವುದನ್ನು ಒಪ್ಪುವುದಿಲ್ಲ”  ಎಂದು  ಆಸ್ಮಾ  ಬಾರ್ಲಸ್ ಒತ್ತಿ ಹೇಳಿದ್ದರು. ಆಸ್ಮಾ  ಅವರ ನಡೆ ಪಾಕಿಸ್ಥಾನದ ಮೂಲಭೂತವಾದಿಗಳಿಗೆ ಧರ್ಮ ವಿರೋಧಿಯಾಗಿ ಕಾಣಿಸಿತು. ಪರಿಪೂರ್ಣ ಇಸ್ಲಾಂ ವ್ಯವಸ್ಥೆಯನ್ನು  ಜಾರಿಗೆ  ತರಲು ಹೊರಟ ಪಾಕಿಸ್ಥಾನಿ ಮೂಲಭೂತವಾದಿಗಳು ಆಸ್ಮಾ  ವಾದವನ್ನು  ಇಸ್ಲಾಂ  ವಿರೋಧಿ ಎಂದು ಖಂಡಿಸಿ ಪಾಕಿಸ್ಥಾನದಿಂದ ಅವರನ್ನು  ಹೊರಗಟ್ಟಿದರು.  ಆಸ್ಮಾ  ಪಾಕಿಸ್ಥಾನಿಗಳ  ಪಾಲಿಗೆ ಧರ್ಮಭ್ರಷ್ಟರಾದರು.

ಲಜ್ಜಾ ಕಾದಂದಬರಿ  ಮೂಲಕ ಪ್ರಸಿದ್ದಿ ಪಡೆದ  ಲೇಖಕಿ  ತಸ್ಲೀಮಾ  ನಸ್ರೀನಾ. ಬಾಂಗ್ಲಾದೇಶದ  ಬಹುಸಂಖ್ಯಾತ ಮುಸ್ಲಿಮ್ ಮೂಲಭೂತವಾದಿಗಳ taslima-nasreenಧೋರಣೆ, ಅಲ್ಲಿಯ ಅಲ್ಪಸಂಖ್ಯಾತ  ಹಿಂದೂಗಳ ಮೇಲೆ  ನಡೆಯುತ್ತಿರುವ ದಬ್ಬಾಳಿಗೆ ವಿರುದ್ಧ  ಧ್ವನಿ ಎತ್ತಿದರು.  ಲೇಖನಿಯ ಮೂಲಕ ಧರ್ಮದ  ಹೆಸರಲ್ಲಾಗುವ ಶೋಷಣೆಯನ್ನು ಖಂಡಿಸಿದರು. ಕೆಲವೇ  ಸಮಯದಲ್ಲಿ  ಬಾಂಗ್ಲಾ ಮುಸ್ಲಿಮ್ ಮುಲ್ಲಾಗಳ  ಪಾಲಿಗೆ ತಸ್ಲೀಮಾ ನಸ್ರೀನಾ ಧರ್ಮವಿರೋಧಿ  ಹೆಣ್ಣಾಗಿ ಕಾಣಲಾರಂಭಿಸಿದಳು. ಆಕೆಯ  ವಿರುದ್ಧ ಕೆಲ ಇಸ್ಲಾಮ್ ತೀವೃವಾದಿ ಸಂಘಟನೆಗಳು ಕೊಲೆಯ ಪತ್ವಾ ಹೊರಡಿಸಿದವು. ತನ್ನ ಹುಟ್ಟೂರು ಬಾಂಗ್ಲಾದೇಶದಿಂದಲೇ ತಸ್ಲೀಮಾರನ್ನು ಧರ್ಮಭ್ರಷ್ಟೆಯೆಂಬ ಹಣೆಪಟ್ಟಿಯೊಂದಿಗೆ ಹೊರಗಟ್ಟಲಾಯಿತು.

ಮಂಗಳೂರಿನಲ್ಲಿ ಇಂತಹ ಹಲವು ನಿದರ್ಶನಗಳು ಸಿಗುತ್ತವೆ.  ಸಂಘಪರಿವಾರದ  ಕೋಮುವಾದ, ನೈತಿಕ ಪೊಲೀಸ್ ಗಿರಿ  ವಿರುದ್ಧ  ಧ್ವನಿ ಎತ್ತಿ, ಕೋಮುವಾದಿಗಳ  suresh bakrabailಅಟ್ಟಹಾಸವನ್ನು ಹೊರ ಜಗತ್ತಿಗೆ  ಅನಾವರಣಗೊಳಿಸುತ್ತಿರುವ ಲೇಖಕ  ಸುರೇಶ್  ಭಟ್ ಬಾಕ್ರಬೈಲ್ ಸಂಘಪರಿವಾರದ ಕೋಮುವಾದಿ ಕೃತ್ಯಗಳನ್ನು ವಿರೋಧಿಸಿದಕ್ಕಾಗಿ ಧರ್ಮಭ್ರಷ್ಟರಾಗಬೇಕಾಯಿತು. ಇತ್ತೀಚೆಗೆ  ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿರುವ ವೇಳೆಯಲ್ಲಿ  ಸಂಘಪರಿವಾರದ ಕಿಡಿಗೇಡಿಗಳು  ಅವರ ಮುಖಕ್ಕೆ ಸೆಗಣಿ ಎರಚಿ  ತಮ್ಮ  ವಿಕೃತಿ ಮೆರೆದಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್‌  ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ ಅವರ  ಮೇಲೂ ಕೂಡಾ ಸಂಘಪರಿವಾರದ ಕುಕೃತ್ಯಗಳ  ವಿರುದ್ಧ  ಧ್ವನಿ ಎತ್ತಿದಕ್ಕಾಗಿ ಸೆಗಣಿ ಎರಚಿ ಹಲ್ಲೆ ನಡೆಸಿ ಸಂಘಪರಿವಾರಿಗಳು ತಮ್ಮ ಅಸಹನೆಯನ್ನು ತೀರಿಸಿಕೊಂಡರು.

’ಚಪ್ಪಲಿಗಳು’ ಕೃತಿಯ ಮೂಲಕ ಮಂಗಳೂರಿನ ಮುಸ್ಲಿಮ್  ಮೂಲಭೂತವಾದಿಗಳ ಕೆಂಗಣ್ಣಿಗೆ  sara abubakarಗುರಿಯಾದವರು  ಲೇಖಕಿ  ಸಾರಾ ಅಬೂಬಕ್ಕರ್. ಮುಸ್ಲಿಮ್ ಸಮಾಜದ ಹೆಣ್ಣಿನ ಸ್ಥಿತಿ ಗತಿ, ಇಸ್ಲಾಮ್ ಪುರುಷ ಪ್ರಧಾನ ಸಮಾಜದಲ್ಲಿ ಮುಸ್ಲಿಮ್ ಮಹಿಳೆಯಗಿರುವ ಸ್ವಾತಂತ್ರ, ತಲಾಕ್ ದುರುಪಯೋಗದ  ಕುರಿತಾಗಿ ಧ್ವನಿ ಎತ್ತಿದವರು ಸಾರಾ ಅಬೂಬಕ್ಕರ್. ಇಸ್ಲಾಮ್  ಧರ್ಮದ ಮೌಲ್ಯಗಳ ವಿರುದ್ಧ ಮಾತನಾಡುತಿದ್ದಾರೆ ಎಂಬ ಕಾರಣಕ್ಕಾಗಿ ಮುಸ್ಲಿಮ್ ಮೂಲಭೂತವಾದಿಗಳು ಸಾರಾ ಅಬೂಬಕ್ಕರ್ ಅವರನ್ನೂ ಬಿಟ್ಟಿಲ್ಲ. ಮುಸ್ಲಿಮ್ ಮೂಲಭೂತವಾದಿಗಳ ಪಾಲಿಗೆ  ಸಾರಾ ಅಬೂಬಕ್ಕರ್ ಒಬ್ಬ ಧರ್ಮಭ್ರಷ್ಟೆ ಮಹಿಳೆಯಾಗಿ  ಕಂಡರು. ಅವರ ಮೇಲೂ ದೈಹಿಕ ಹಲ್ಲೆ ನಡೆದವು. ಇವರ ಜೊತೆಗೆ ಕರಾವಳಿಯಲ್ಲಿ ಮುಸ್ಲಿಮ್ ಮೂಲಭೂತವಾದ, ಮೌಢ್ಯತೆಯ ವಿರುದ್ಧ ಮಾತನಾಡಿದ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞ  ಅವರನ್ನೂ ಬಿಟ್ಟಿಲ್ಲ ಮೂಲಭೂತವಾದಿyogish master ವಿಕೃತ ಸಂತೋಷಿಗಳು.  ಅವರ ಮೇಲೆಯೂ  ಕಲ್ಲೆಸೆದರು. ಜೀವ ಬೆದರಿಕೆಗಳನ್ನು ಒಡ್ಡಿದ್ದರು.

 ಪುರೋಹಿತಶಾಹಿತ್ವವನ್ನು ವಿರೋಧಿಸಿ  ಸಾಮಾಜಿಕ ತಾಣದಲ್ಲಿ ತಮ್ಮ ಅಭಿಪ್ರಾಯವನ್ನು  ವ್ಯಕ್ತಪಡಿಸಿದಕ್ಕಾಗಿ ಜನಪರ ಹೋರಾಟಗಾರ್ತಿ ಪ್ರಭಾ ಅವರನ್ನು ಪುರೋಹಿತಶಾಹಿಯ ವಕ್ತಾರನೊಬ್ಬ ಜುಟ್ಟು ಹಿಡಿದು ಅತ್ಯಾಚಾರ ಎಸಗಲು ಕರೆ ನೀಡಿದ್ದನು. ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಸ್ವಾಮಿ ವಿವೇಕಾನಂದರ ಕುರಿತಾಗಿ  ಅಂಕಣ  ಬರೆದಾಗಲೂ, ಕಾದಂಬರಿಕಾರ ಯೋಗೀಶ್  ಮಾಸ್ಟರ್ ಡುಂಡಿ  ಕೃತಿ  ಬರೆದಾಗಲೂ ಇದೇ ಮನಸ್ಥಿತಿಗಳಿಂದ ವಿರೋಧ, ಬೆದರಿಕೆಗಳನ್ನು  ಎದುರಿಸಬೇಕಾಯಿತು. ಸಂಸ್ಕೃತಿಯ ಹೆಸರಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಅಟ್ಟಹಾಸ ಮೆರೆದ ಅನೈತಿಕ  ಪೊಲೀಸರ  ವಿಕೃತಿಯನ್ನು  ಮಾಧ್ಯಮದಲ್ಲಿ  ವರದಿ  ಮಾಡಿದಕ್ಕಾಗಿ ಪತ್ರಕರ್ತ ನವೀನ್ ಸೂರಿಂಜೆ ಕೂಡಾ ಧರ್ಮಭ್ರಷ್ಟರಾದರು.

ಹೀಗೆ  ಪಟ್ಟಿ ಮಾಡಿದರೆ  ಇಂಥಹಾ  ನೂರಾರು  ಧರ್ಮಭ್ರಷ್ಟರು ನಮ್ಮ ಕಣ್ಣ ಮುಂದೆ ಬರುತ್ತಾರೆ. ಇವರೆಲ್ಲಾ ಮಾಡಿದ ತಪ್ಪುಗಳು ತಮ್ಮ ತಮ್ಮprabha belavangala ಧರ್ಮದ, ಪುರೋಹಿತಶಾಹಿಯ ಹಾಗೂ ಮೂಲಭೂತವಾದದ ವಿರುದ್ಧ ಜನ ಸಾಮಾನ್ಯರ, ಶೋಷಿತರ, ಮಹಿಳೆಯರ ಧ್ವನಿಯಾಗಿ ಕೆಚ್ಚೆದೆಯಿಂದ ನಿಂತಿದ್ದು ಮಾತ್ರವಲ್ಲದೆ ತಮ್ಮ ಅಭಿಪ್ರಾಯಗಳನ್ನು ಯಾವುದೇ ಮುಲಾಜಿಗೆ ಒಳಗಾಗದೆ ಅಭಿವ್ಯಕ್ತಿಪಡಿಸಿದ್ದು. ಪರಿಣಾಮ ಸನಾತನಿವಾದಿಗಳ, ಮೂಲಭೂತವಾದಿಗಳ ಪಾಲಿಗೆ  ಶತ್ರುಗಳಾಗಿ ಬಿಂಬಿತರಾದರು. ಸಮಾಜದಲ್ಲಿರುವ ಯಾವುದೇ ಧರ್ಮದ ಅಥವಾ ಸಂಪ್ರಾಯದವಾದದ ಕೊಳಕುಗಳ ವಿರುದ್ಧ ಧ್ವನಿ ಎತ್ತತ್ತಿರುವವರು ಹೀಗೆ ಬೆದರಿಕೆ, ಹೀಗಳಿಕೆಗಳಿಗೆ  ಒಳಗಾಗುತ್ತಾ ಬಂದಿದ್ದಾರೆ. ಪುಲೆ ದಂಪತಿಗೆ ಕೊಳಕು ಎಸೆದ ಮನಸ್ಥಿತಿಗಳೇ ಇಂದು ಡಾ. ಯು.ಆರ್. ಅನಂತಮೂರ್ತಿ ಸಾವನ್ನು  ಪಟಾಕಿ  ಸಿಡಿಸಿ  ಸಂಭ್ರಮಿಸಿದೆ. ಮಹಾತ್ಮಗಾಂಧಿಯವರಿಗೂ  ಗುಂಡಿಕ್ಕಿ ಅವರ  ಸಾವನ್ನು ಸಂಭ್ರಮಿಸಿದೆ. ಅಂಬೇಡ್ಕರ್ ಸಾವನ್ನೂ ಸಂಭ್ರಮಿಸಿದ್ದಾರೆ. ಈ ಕೊಳಕು ಮನಸ್ಥಿತಿಗಳ ವಿರುದ್ಧ ಧ್ವನಿ ಎತ್ತುವ ಇನ್ನಷ್ಟು ಸಾವುಗಳು  ಸಂಭವಿಸುವಾಗಲೂ  ಅವರು  ಸಂಭ್ರಮಿಸುತ್ತಲೇ  ಇರುತ್ತಾರೆ. ಯಾಕೆಂದರೆ ಈ ಹುತಾತ್ಮ ಸಾಕ್ಷಿಪ್ರಜ್ಞೆಗಳ ವಾದವನ್ನು ವೈಚಾರಿಕವಾಗಿ ಎದುರಿಸಲು ಸಾಧ್ಯವಾಗದೆ ಸೋತಾಗ ಅವರ ಅಸಹನೆಯನ್ನು ಈ ಮೂಲಕವಾದರೂ ತೋರ್ಪಡಿಸಿ ವಿಕೃತ ತೃಪ್ತಿಯನ್ನು  ಪಡೆದುಕೊಳ್ಳುತ್ತಾರೆ.  ಇದು  ಒಂದು  ಸಮುದಾಯ, ಮತ,  ಧರ್ಮಕ್ಕೆ  ಮಾತ್ರ  ಸೀಮಿತವಾಗಿಲ್ಲ. ಎಲ್ಲಾ ಮತ ಧರ್ಮಗಳ  ಸನಾತನಿಗಳ, ಮೂಲಭೂತವಾದಿಗಳ  ಮನಸ್ಥಿತಿಯಲ್ಲಿananthamurthy ಯಾವುದೇ  ವ್ಯತ್ಯಾಸ ಕಾಣೋದಿಲ್ಲ. ಈ ಕೊಳಕು ಮನಸ್ಥಿತಿಗಳ ವಿರುದ್ಧ  ಧ್ವನಿ ಎತ್ತುವವರು ಶಾಶ್ವತ ಧರ್ಮಭ್ರಷ್ಟರಾಗುತ್ತಾರೆ. ಇಂಥಹಾ ಧರ್ಮಭ್ರಷ್ಟರ ಪಾಲಿಗೆ ಇನ್ನಷ್ಟು  ಧ್ವನಿಗಳು  ಜೊತೆ ಗೂಡಬೇಕಾದ ಅನಿವಾರ್ಯತೆ  ಇದೆ. ಅದಕ್ಕೆ ಫೈಜ್  ಹೀಗಂದಿರಬೇಕು……

ಕಸಿದುಕೊಂಡರೇನು ಲೇಖನಿ ಕಾಗದವ
ಅದ್ದುಕೊಂಡಿದ್ದೇನೆ ಬೆರಳುಗಳನ್ನು ಎದೆಯ ರಕ್ತದಲಿ
ಬೀಗ ಹಾಕಿದರೇನು ನಾಲಗೆಗೆ
ಇಟ್ಟಿದ್ದೇನೆ ನಾಲಗೆಯನ್ನು ಸರಪಳಿಯ ಕೊಂಡಿ ಕೊಂಡಿಯಲಿ.