ಹುದುಗಲಾರದ ದುಃಖ : ಕೆ. ಶಾರದಾಮೋನಿ

“ಅಹರ್ನಿಶಿ” ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಇತ್ತೀಚೆಗೆ ಒಂದು ಪುಸ್ತಕ ಪ್ರಕಟಿಸಿದ್ದಾರೆ: “ಹುದುಗಲಾರದ ದು:ಖ”. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿತವಾಗಿರುವ ಪುಸ್ತಕ ಇದು. ಪುಸ್ತಕದ ಹಿಂಬದಿಯಲ್ಲಿ ಬರೆದಿರುವಂತೆ “ದಾಂಪತ್ಯ ಮತ್ತು ವೈರುಧ್ಯ ಎರಡೂ ಹೆಣ್ಣಿನ ಮಟ್ಟಿಗೆ ವರವೂ, ಶಾಪವೂ ಆಗಿರುವ ಅಗ್ನಿದಿವ್ಯಗಳು. grief-to-bury-kannada-coverpageವೈಧವ್ಯವಂತೂ ಅವಳ ಆಯ್ಕೆಯಲ್ಲ. ಅನೇಕ ಬಾರಿ ದಾಂಪತ್ಯವೂ ಆಗಿರುವುದಿಲ್ಲ. ನಮ್ಮ ಸಮುದಾಯದಲ್ಲಿ ದಾಂಪತ್ಯ ಮತ್ತು ವೈಧವ್ಯ ವೈಯಕ್ತಿಕವೆಷ್ಟೋ ಅಷ್ಟೇ ಸಾಮಾಜಿಕವಾದದ್ದೂ ಹೌದು; ಸಾರ್ವಜನಿಕವಾದದ್ದೂ ಹೌದು. ತಮ್ಮ ಆಯ್ಕೆಯ ವೃತ್ತಿಯನ್ನು ಕುರಿತ ಉತ್ಕಟತೆಯನ್ನು ದಾಂಪತ್ಯದ ಏಳು ಬೀಳುಗಳಲ್ಲಿಯೂ, ವೈಧವ್ಯದ ಅಪರಿಕಾರ್ಯತೆಯಲ್ಲಿಯೂ ಉಳಿಸಿಕೊಳ್ಳುವುದು ಹೆಣ್ಣಿನ ಮಟ್ಟಿಗೆ ಅಪೂರ್ವ ಸಾಧನೆಯೇ. ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣವಾದದ್ದನ್ನು ಸಾಧಿಸಿದ ಭಾರತದ ಈ ಹನ್ನೆರಡು ಪ್ರಖ್ಯಾತ ಮಹಿಳೆಯರು ದಾಂಪತ್ಯ ಮತ್ತು ವೈಧವ್ಯವನ್ನು ಮುಖಾಮುಖಿಯಾದ ಪರಿಯನ್ನು ಕುರಿತ ಮುಕ್ತ ಸಂದರ್ಶನಗಳ ಕೃತಿ ಇದು. ಇದು ಆತ್ಮವಂಚನೆಯಲ್ಲದ, ಆತ್ಮರತಿಯನ್ನು ನೀಗಿಕೊಂಡ, ಕೌಟುಂಬಿಕ ನೆಲೆಯನ್ನು ಉಳಿಸಿಕೊಳ್ಳುತ್ತಲೇ ವೃತ್ತಿಪರತೆಯನ್ನು ಸಾಧಿಸಿದ ಈ ಮಹಿಳೆಯರು ಹೆಣ್ಣಿನ ಆತ್ಮಗೌರವವನ್ನು ಹೆಚ್ಚಿಸಿದ ಗಟ್ಟಿಗಿತ್ತಿಯರು.” ಇವರುಗಳ ಕುರಿತಾದ ಪುಸ್ತಕ.

ಇದರಲ್ಲಿಯ ಶಾರದಾಮೋನಿಯವರ ಸಂದರ್ಶನ ಕೇವಲ ಆರೇಳು ಪುಟ ಇದೆ, ಅನುವಾದ ಮಾಡಿಕೊಡಿ ಎಂದು ಅಕ್ಷತಾ ಸರಿಯಾಗಿ ವರ್ಷದ ಹಿಂದೆ ಕೇಳಿದ್ದರು. ಒಪ್ಪಿಕೊಂಡೆ. ಆಮೇಲೆ ನೋಡಿದರೆ ಅದು ಮುವ್ವತ್ತಕ್ಕೂ ಹೆಚ್ಚಿನ ಪುಟಗಳು. ಕಿರಿಕಿರಿಯಾದರೂ ಮಾಡುತ್ತ ಹೋದೆ. ಆದರೆ ಅದು ಕೊಟ್ಟ ಅನುಭವ ಸಾರ್ಥಕವಾದುದು. ಅಕ್ಷತಾ ಅರೆಬರೆ ಸುಳ್ಳು ಹೇಳಿದರೂ ಅದರಿಂದ ನನಗೆ ಒಳ್ಳೆಯದೇ ಆಯಿತು. ಒಬ್ಬ ಧೀಮಂತ ಮಹಿಳೆಯನ್ನು ಅರಿತಂತಾಯಿತು ಮತ್ತು ಒಂದು ತಲೆಮಾರಿನ ಆದರ್ಶ, ದೊಡ್ಡತನ, ತ್ಯಾಗ ಇವೆಲ್ಲವೂ ಕಣ್ಮುಂದೆ ಸಾಕಾರಗೊಂಡು ನನ್ನನ್ನು ರೋಮಾಂಚಿತನನ್ನಾಗಿ ಮಾಡಿತು, ಭಾವತೀವ್ರತೆಗೆ ದೂಡಿತ್ತು. ನನ್ನ ಹೆಂಡತಿ ಸುಪ್ರಿಯಳಿಗೂ ಅದನ್ನು ಕೊಟ್ಟು ಓದಿಸಿದ್ದೆ. ಬಹಳ ಖುಷಿ ಕೊಟ್ಟ ಅನುವಾದ ಇದು.

ಇತ್ತೀಚೆಗೆ ತಾನೆ ಬಿಡುಗಡೆಗೊಂಡ ಈ ಪುಸ್ತಕ ಈಗ ಮಾರುಕಟ್ಟೆಯಲ್ಲಿದೆ. ಎಲ್ಲಾ ಸಂವೇದನಾಶೀಲರೂ ಪ್ರಜ್ಞಾವಂತರೂ ಓದಬೇಕಾದ ಪುಸ್ತಕ ಇದು. ಅದರಲ್ಲಿ ನಾನು ಅನುವಾದ ಮಾಡಿರುವ ಕೆ.ಶಾರದಾಮೋನಿಯವರ ಸಂದರ್ಶನ ವರ್ತಮಾನದ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ.

ನಮಸ್ಕಾರ,
ರವಿ


ಸಂದರ್ಶಕರು: ವಸಂತ ಕಣ್ಣಬೀರನ್
ಕನ್ನಡಕ್ಕೆ: ರವಿ ಕೃಷ್ಣಾರೆಡ್ಡಿ

ಕೆ. ಶಾರದಾಮೋನಿ ಹುಟ್ಟಿದ್ದು 1928 ರಲ್ಲಿ, ಕೇರಳದ ಕೊಲ್ಲಾಮ್‌ನಲ್ಲಿ. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಎಮ್.ಲಿಟ್ ಪದವಿ ಮುಗಿಸಿದ ಬಂತರ ಕೆಲಕಾಲ ತಿರುವನಂತಪುರದಲ್ಲಿ ಕೆಲಸ ಮಾಡಿದರು. ನಂತರ ದೆಹಲಿಗೆ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ (ISI) ಯೋಜನಾ ವಿಭಾಗದಲ್ಲಿ ಕೆಲಸ ಮಾಡಲು ತೆರಳಿದರು. ರಾಜಕೀಯ ಕಾರ್ಯಕರ್ತ ಮತ್ತು ಪತ್ರಕರ್ತರಾಗಿದ್ದವರನ್ನು ಮದುವೆಯಾಗಿದ್ದ ಶಾರದಾಮೋನಿಯವರು ಸ್ತ್ರೀಯರ ಮೇಲಿನ ಅಧ್ಯಯನಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ಅರ್ಥತಜ್ಞೆ ಮತ್ತು ವಿದ್ವಾಂಸೆ. Matriliny Transformed: Family, Law and Ideology in Twentieth Century Travancore; Finding the Household; Coneptual and Methodological Issues, ಇವರ ಕೆಲವು ಗ್ರಂಥಗಳು.

ಕೆ. ಶಾರದಾಮೋನಿ

ನೀವು ನನ್ನ ಜೀವನದ ಬಗ್ಗೆ ಮಾತನಾಡಬೇಕು ಅಂತಿದ್ದೀರ. ಏನು ಹೇಳಲಿ ಮತ್ತು ಎಲ್ಲಿಂದ ಆರಂಭಿಸಲಿ? ಅದನ್ನು ಪದಗಳಿಗೆ ಇಳಿಸುವುದು ಅಷ್ಟು ಸುಲಭ ಅಲ್ಲ.

ಅದು ಸುಲಭ ಅಲ್ಲ. ಅದು ನನಗೆ ಅರ್ಥವಾಗುತ್ತೆ, ನೀವು ನಿಮ್ಮ ಬಾಲ್ಯದಿಂದ ಆರಂಭಿಸಬಹುದು.

ನಾನು ಹುಟ್ಟಿದ್ದು ಕೊಲ್ಲಾಮ್‌ನಲ್ಲಿ. ಅದು ನನ್ನ ತಾಯಿಯ ತವರುಮನೆ. ನಾನು ಬೆಳೆದಿದ್ದೂ ಅಲ್ಲಿಯೇ. ನಾನು ನಾಯರ್ ಸಮುದಾಯದ ಕುಟುಂಬದಿಂದ ಬಂದವಳು. ಆಗಿನ ಕಾಲದಲ್ಲಿ ನಾಯರ್ ಹೆಣ್ಣುಮಕ್ಕಳು–ಹಾಗೆ ನೋಡಿದರೆ ಮಾತೃಪ್ರಧಾನ ವ್ಯವಸ್ಥೆಯಿದ್ದ ಯಾವುದೇ ಸಮುದಾಯದ ಹೆಂಗಸರು–ಮದುವೆಯಾದ ನಂತರ ಗಂಡನ ಮನೆಗೆ ಹೋಗಿ ಸಂಸಾರ ಮಾಡುತ್ತಿರಲಿಲ್ಲ. ನಂತರದ ದಿನಗಳಲ್ಲಿ ಕಾನೂನಿನ ಮೂಲಕ ಆದ ಆಸ್ತಿ ಹಕ್ಕುಗಳು, ಆಸ್ತಿ ವಿಂಗಡಣೆ, ಇತ್ಯಾದಿ ಬದಲಾವಣೆಗಳಿಂದಾಗಿ ಈ ಸಮುದಾಯಗಳ ಜೀವನಪದ್ಧತಿಗಳೂ ಬದಲಾದವು. ಜೊತೆಗೆ ಅನ್ಯಸ್ಥಳಗಳಲ್ಲಿ ಸಿಗಲಾರಂಭಿಸಿದ ಉದ್ಯೋಗಾವಕಾಶಗಳಿಂದಾಗಿ ಗಂಡಸರು ನಗರಗಳಿಗೆ ಮತ್ತು ಹೊರರಾಜ್ಯಗಳಿಗೆ ಹೋಗಲು ಆರಂಭಿಸಿದರು. ಅದರ ಪರಿಣಾಮವಾಗಿ ಹೆಂಗಸರೂ ತಮ್ಮ ಗಂಡ ಕೆಲಸ ಮಾಡುತ್ತಿದ್ದ ಸ್ಥಳಗಳಿಗೆ ಹೋಗಿ ವಾಸ ಮಾಡುವುದೂ ಹೆಚ್ಚಾಯಿತು.

ನನ್ನ ತಂದೆ ಕೊಲ್ಲಾಮ್‌ನ ಉತ್ತರಕ್ಕಿರುವ ಇನ್ನೊಂದು ಭಾಗದಿಂದ ಬಂದವರು. ನನ್ನ ತಾಯಿ ಅವರೊಂದಿಗೆ ಅವರು ಕೆಲಸ ಮಾಡುತ್ತಿದ್ದ ಅನೇಕ ಜಾಗಗಳಿಗೆ ಹೋಗಿ ಅವರೊಂದಿಗೆ ನೆಲೆಸಿದ್ದರು. ಆದರೆ ಎಂದೂ ಅವರ ಕುಟುಂಬದ ಮನೆಗೆ ಹೋಗಿ ನೆಲಸಲಿಲ್ಲ. ಅವರಿಗೆ ಅವರ ಅತ್ತೆಮಾವಂದಿರ ಕುಟುಂಬದ ಕಡೆಯಿಂದ ಒಳ್ಳೆಯ ಗೌರವ ಇತ್ತು ಮತ್ತು ನಮ್ಮಪ್ಪ ತೀರಿಕೊಂಡ ಐವತ್ತು ವರ್ಷಗಳ ತನಕವೂ ಬದುಕಿದ್ದ ಅವರ ಕಡೆಯ ದಿನದವರೆಗೂ ಆ ಗೌರವ ಮತ್ತು ಪ್ರೀತಿವಿಶ್ವಾಸಗಳಿತ್ತು.

ನನ್ನಜ್ಜಿಗೆ, ಅಂದರೆ ನನ್ನ ತಾಯಿಯ ತಾಯಿಗೆ ಹನ್ನೆರಡು ಜನ ಮಕ್ಕಳು. ನನ್ನ ತಾಯಿ ಐದನೆಯವರು. ಅವರಿಗೆ ನಾಲ್ಕು ಮಕ್ಕಳು. saradamoni-3ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ನಾನು ಮೂರನೆಯವಳು ಮತ್ತು ಕಡೆಯವನು ನನ್ನ ತಮ್ಮ. ನಾವು ಮೂವರೂ ಹೆಣ್ಣುಮಕ್ಕಳು ಕೊಲ್ಲಾಮ್‌ನಲ್ಲಿದ್ದ ಒಂದೇ ಕಾನ್ವೆಂಟ್ ಶಾಲೆಗೆ ಹೋಗುತ್ತಿದ್ದೆವು. ನನ್ನ ದೊಡ್ಡಕ್ಕ ಶಾಲಾ ವಿದ್ಯಾಭ್ಯಾಸದ ನಂತರ ಹೆಚ್ಚಿನ ಓದಿಗೆ ತಿರುವನಂತಪುರದ ಮಹಿಳಾ ಕಾಲೇಜು ಸೇರಿದರು. ತಮ್ಮ ಕುಟುಂಬದಲ್ಲಿ ಅಲ್ಲಿಯ ತನಕ ಯಾರೂ ಕಾಲೇಜು ಮೆಟ್ಟಲು ತುಳಿಯದೇ ಇದ್ದ ಕಾರಣಕ್ಕಾಗಿ ನನ್ನ ತಾಯಿಗೆ ಕಾಲೇಜು ಸೇರಲು ತೀರ್ಮಾನಿಸಿದ ನನ್ನಕ್ಕಳ ನಿರ್ಧಾರದ ಬಗ್ಗೆ ಸಂತೋಷ ಇರಲಿಲ್ಲ. ಆದರೆ ನನ್ನಕ್ಕನಿಗೆ ಬಹಳ ಆಸಕ್ತಿ ಇತ್ತು ಮತ್ತು ಅದಕ್ಕೆ ನಮ್ಮ ತಂದೆಯವರ ಪ್ರೋತ್ಸಾಹವೂ ಇತ್ತು. ನಮ್ಮ ಅಪ್ಪನವರೇ ನನ್ನಕ್ಕನನ್ನು ಕರೆದುಕೊಂಡು ಹೋಗಿ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಸಿ ಹಾಸ್ಟೆಲ್‌ಗೂ ಸೇರಿಸಿ ಬಂದರು. ಆಗ ಕಾಲೇಜಿನಲ್ಲೇ ಆಗಲಿ ಹಾಸ್ಟೆಲ್‌ನಲ್ಲೇ ಆಗಲಿ ಇದ್ದಂತಹ ಹೆಣ್ಣುಮಕ್ಕಳ ಸಂಖ್ಯೆ ಬಹಳ ಚಿಕ್ಕದಿತ್ತು.

ನಾನು ಪ್ರಿಪರೇಟರಿ ತರಗತಿಯಲ್ಲಿದ್ದಾಗ ನನ್ನ ಎರಡನೆಯ ಅಕ್ಕ ಶಾಲಾ ವಿದ್ಯಾಭ್ಯಾಸದ ಕೊನೆಯ ವರ್ಷದಲ್ಲಿದ್ದರು. ಆ ಸಮಯದಲ್ಲಿಯೇ ನಮ್ಮ ತಂದೆ ಹೃದಯಾಘಾತದಿಂದ ತೀರಿಕೊಂಡರು, ಅವರಿಗೆ ಹೃದಯಕ್ಕೆ ಸಂಬಂಧಿಸಿದಂತೆ ಕೆಲವು ಕಾಯಿಲೆಗಳಿದ್ದವು. ಒಂದು ದಿನ ನಾವೆಲ್ಲ ಶಾಲೆಗೆ ಹೋದನಂತರ ಅಪ್ಪ ಕಛೇರಿಗೆ ಹೋಗಲು ಸಿದ್ದರಾಗಿ ಗಂಜಿ ಕುಡಿಯುತ್ತಿದ್ದರು. ಅಡಿಗೆ ಮನೆಯಲ್ಲಿ ಇದ್ದ ಸಣ್ಣ ಕಿಟಕಿಯಿಂದ ನೋಡುತ್ತಿದ್ದ ನನ್ನ ತಾಯಿಗೆ ಗಂಜಿ ಕುಡಿಯುತ್ತಿದ್ದ ನನ್ನಪ್ಪನ ಮುಖ ಮುಂದಕ್ಕೆ ವಾಲಿದ್ದು ಕಾಣಿಸಿತು. ಮನೆಯೆಲ್ಲ ಅಲ್ಲೋಲಕಲ್ಲೋಲದಲ್ಲಿ ತುಂಬಿತು. ಯಾರೋ ಬಂದು ನಮ್ಮನ್ನು ಶಾಲೆಯಿಂದ ಕರೆದುಕೊಂಡು ಬಂದರು. ನನ್ನ ಮಾವ ತಿರುವನಂತಪುರಕ್ಕೆ ಹೋಗಿ ನಮ್ಮ ದೊಡ್ಡಕ್ಕನನ್ನು ಕರೆದುಕೊಂಡು ಬಂದರು. ನಮ್ಮ ಮನೆಯ ಆವರಣದಲ್ಲಿಯೇ ನಮ್ಮ ತಂದೆಯವರ ಅಂತ್ಯಸಂಸ್ಕಾರ ಆಯಿತು.

ಅದೃಷ್ಟವಶಾತ್, ನಮ್ಮ ತಂದೆಯವರ ಒಬ್ಬ ಸೋದರಮಾವ ಮತ್ತು ಅವರ ಮಗ ಅಂದು ನಮ್ಮ ಮನೆಯಲ್ಲಿಯೇ ಇದ್ದರು. ನಮ್ಮ ತಾಯಿಗೆ ದೊಡ್ಡ ಆಘಾತವಾಗಿತ್ತು. ಅಷ್ಟೊತ್ತಿಗೆಲ್ಲ ಮನೆಯ ವ್ಯವಹಾರ ಹೇಗೆ ನಡೆಸಬೇಕು ಎನ್ನುವ ವಿಚಾರದಲ್ಲಿ ನಮ್ಮ ತಾಯಿ ಬಹಳ ಶಕ್ತರಾಗಿದ್ದರು, ಆದರೆ ಹೊರಗಿನ ವ್ಯವಹಾರಗಳ ಬಗ್ಗೆ ಅವರಿಗೆ ಏನೊಂದೂ ತಿಳಿದಿರಲಿಲ್ಲ. ನಾನು ಬೆಳೆಯುತ್ತಿದ್ದ ಸಮಯದಲ್ಲಿ ನಮ್ಮ ತಾಯಿಯೇ ನನಗೆ ಸರ್ವಸ್ವ. ಆಕೆ ಬಹಳ ಚೆನ್ನಾಗಿ ಅಡಿಗೆ ಮಾಡುತ್ತಿದ್ದರು, ನಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು, ಮತು ನಾವು ಚೆನ್ನಾಗಿ ಓದುತ್ತಿದ್ದೇವೆ ಎನ್ನುವುದರಲ್ಲಿ ಅವರಿಗೆ ವಿಶ್ವಾಸ ಇತ್ತು. ನಮ್ಮ ತಂದೆ ತೀರಿಕೊಂಡ ನಂತರ ಸುಮಾರು ಐವತ್ತು ವರ್ಷದ ಮೇಲ್ಪಟ್ಟು ಬದುಕಿದ್ದ ಅವರು ಒಮ್ಮೆಯೂ ನಮ್ಮ ಬಳಿ ಆಕೆಯ ಏಕಾಂಗಿತನ, ಕಷ್ಟ, ದು:ಖದ ಬಗ್ಗೆ ಹೇಳಿಕೊಂಡಿರಲಿಲ್ಲ.

ನಿಮ್ಮ ದೊಡ್ಡಕ್ಕ ಮತ್ತೆ ಕಾಲೇಜಿಗೆ ಹೋದರೆ.

ಹೌದು, ಆಕೆ ಓದು ಮುಂದುವರೆಸಿದಳು.

 

ಅವರು ವಿದ್ಯಾಭ್ಯಾಸ ಮುಂದುವರೆಸಿದ್ದು ಒಳ್ಳೆಯ ಸಂಗತಿ.

ಆ ವರ್ಷ ನನ್ನ ಎರಡನೆಯ ಅಕ್ಕ ಶಾಲಾ ವಿದ್ಯಾಭ್ಯಾಸ ಮುಗಿಸಿದರು. ಆದರೆ ಆಕೆ ಕಾಲೇಜಿಗೆ ಹೋಗಲಿಲ್ಲ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಆ ಸಮಯದಲ್ಲಿ ಬಹಳ ಸಕ್ರಿಯವಾಗಿತ್ತು. ಆಕೆ ಹಿಂದಿ ಕಲಿಯುವಂತಾಗಲು ಒಬ್ಬ ಉಪಾಧ್ಯಾಯರ ವ್ಯವಸ್ಥೆ ಆಯಿತು. ಕೆಲವೇ ವರ್ಷಗಳಲ್ಲಿ ಆಕೆ ರಾಷ್ಟ್ರ ಭಾಷಾ ವಿಶಾರದ್ ಪರೀಕ್ಷೆಯನ್ನು ಪಾಸು ಮಾಡಿಕೊಂಡಳು. ಅದು ಬಿ.ಎ. ಪದವಿಗೆ ಸಮನಾದ ಪದವಿ.

ಆ ಸಮಯಕ್ಕೆ ಆಕೆಗೆ ಯಾವುದೋ ಕಾಯಿಲೆ ಬಾಧಿಸುತ್ತಿರುವ ಲಕ್ಷಣಗಳು ಕಾಣಿಸಿಕೊಂಡವು. ನನ್ನ ತಾಯಿ ಆಕೆಯನ್ನು ತಿರುವನಂತಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆ ಆಸ್ಪತ್ರೆ ಆಗಿನ ಕಾಲಕ್ಕೆ ಅತ್ಯುತ್ತಮ ಆಸ್ಪತ್ರೆ. ಅಲ್ಲಿ ನನ್ನ ಎರಡನೆಯ ಅಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಬಹುಶಃ ಆಕೆಯ ಕೋರಿಕೆ ಮೇರೆಗೆ ಕೊಲ್ಲಾಮ್‌ನಲ್ಲಿದ್ದ ಪ್ರಕೃತಿ ಚಿಕಿತ್ಸಾ ಶಿಬಿರಕ್ಕೆ ಕರೆದುಕೊಂಡು ಹೋದರು. ಆ ವೈದ್ಯಕೀಯ ಪದ್ದತಿಗೆ ಸಂಬಂಧಿಸಿದಂತೆ ನಮ್ಮ ತಂದೆಯವರು ಅನೇಕ ಪುಸ್ತಕಗಳನ್ನು ಇಟ್ಟುಕೊಂಡಿದ್ದ ಕಾರಣಕ್ಕೆ ನಮಗೆ ಆ ಪದ್ದತಿಯ ಬಗ್ಗೆ ತಿಳಿದಿತ್ತು. ಅಂತಿಮವಾಗಿ ಅಕ್ಕ ಅಲ್ಲಿಂದ ಮನೆಗೆ ವಾಪಸಾದಳು. ಮನೆಯಲ್ಲಿ ಆಯುರ್ವೇದದ ಚಿಕಿತ್ಸೆ ಮುಂದುವರೆಯಿತು. ಆದರೆ ಒಂದು ಮಧ್ಯಾಹ್ನ ಆಕೆ ಮನೆಯಲ್ಲಿ ತೀರಿಕೊಂಡಳು. ಆಗ ಆಕೆಗೆ ಕೇವಲ ಇಪ್ಪತೊಂದು ವರ್ಷ ವಯಸ್ಸಾಗಿತ್ತು. ಅವಳನ್ನೂ ಮನೆಯ ಆವರಣದಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಯಿತು. ಅಷ್ಟೊತ್ತಿಗೆ ನನ್ನ ದೊಡ್ಡಕ್ಕಳ ಬಿ.ಎ. ಮುಗಿದಿತ್ತು. ನಮ್ಮಪ್ಪ ಇನ್ನೂ ಒಂದಷ್ಟು ವರ್ಷ ಬದುಕಿದ್ದಿದ್ದರೆ ದೊಡ್ಡಕ್ಕ ಇನ್ನೂ ಹೆಚ್ಚಿಗೆ ಓದಬಹುದಿತ್ತು. ನನ್ನ ತಂದೆಯ ಸೋದರಮಾವಂದಿರ ಸಲಹೆಯ ಮೇರೆಗೆ ಆಕೆ ಸರ್ಕಾರಿ ಕೆಲಸವೊಂದಕ್ಕೆ ಸೇರಿಕೊಂಡಳು. ನಂತರ ಆಕೆಗೆ ಮದುವೆಯಾಗಿ ಒಬ್ಬ ಮಗನೂ ಹುಟ್ಟಿದ.

 

ಅಷ್ಟು ಚಿಕ್ಕ ವಯಸ್ಸಿಗೆ ತಂದೆಯನ್ನು ಕಳೆದುಕೊಳ್ಳುವುದು ಸಣ್ಣ ವಿಷಯ ಅಲ್ಲ…

ನಿಜ, ಅವರು ಬದುಕಿದ್ದಿದ್ದರೆ ನಮ್ಮ ಜೀವನ ಯಾವ ರೀತಿ ಇರುತ್ತಿತ್ತು ಎಂದು ಈಗಲೂ ನಾನು ಆಗಾಗ ಯೋಚಿಸುತ್ತೇನೆ. ಹಾಗೆ ಹೇಳಬೇಕೆಂದರೆ ನಾವು ನಾಲ್ಕೂ ಮಕ್ಕಳಲ್ಲಿ ಅವರನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದಾಕೆ ಅಂದರೆ ನನ್ನ ದೊಡ್ಡಕ್ಕಳೇ. ನನ್ನ ತಂದೆಯ ಬಗ್ಗೆ ನಾನು ತಿಳಿದುಕೊಂಡಿದ್ದೆಲ್ಲ ಅವರ ಪುಸ್ತಕಗಳ ಮೂಲಕವೆ. ಮನೆಯಲ್ಲಿ ಆಗಾಗ ಪುಸ್ತಕಗಳನ್ನು ಕೊಡವಿ ಸ್ವಚ್ಚ ಮಾಡುವ ಕೆಲಸ ಮಾಡುತ್ತಿದ್ದೆವು. ಅವರು ಸಾಯುವ ಮುಂಚೆ ನಮಗೆ ಖಾದಿಯ ಪರಿಚಯ ಮಾಡಿಕೊಟ್ಟಿದ್ದರು. ನನ್ನ ದೊಡ್ಡಕ್ಕನಿಗೆ ಅವರು ರೇಷ್ಮೆ ಖಾದಿಯ ಸಿದ್ದ‌ಉಡುಪಿನ ರವಿಕೆಯನ್ನು ತರುತ್ತಿದ್ದದ್ದು ನನಗೆ ನೆನಪಿದೆ.

ಗಾಂಧೀಜಿಯವರು ಪಾಲ್ಗೊಂಡಿದ್ದ ಸಭೆಯೊಂದಕ್ಕೂ ಅವರು ನಮ್ಮನ್ನು ಒಮ್ಮೆ ಕರೆದುಕೊಂಡು ಹೋಗಿದ್ದರು. ಆದರೆ ಅವರು ಸ್ವಾತಂತ್ರ್ಯ ಚಳವಳಿಯ ಬಗ್ಗೆಯಾಗಲಿ ಅಥವ ಗಾಂಧೀಜಿಯ ಬಗ್ಗೆಯಾಗಲಿ ಮನೆಯಲ್ಲಿ ಮಾತನಾಡಿದ ನೆನಪು ಇಲ್ಲ. ಆಗ ಕೊಲ್ಲಾಮ್‌ನಲ್ಲಿ ’ಮಲಯಾಳ ರಾಜ್ಯಮ್’ ಎನ್ನುವ ಒಂದೇ ಒಂದು ಪತ್ರಿಕೆ ಪ್ರಕಟವಾಗುತ್ತಿತ್ತು. ನಾವು ಚರಕ ನೂಲುವುದನ್ನು ಕಲಿತುಕೊಂಡೆವು ಮತ್ತು ಖಾದಿಯನ್ನು ಧರಿಸಲು ಆರಂಭಿಸಿದೆವು.

ನನ್ನ ಶಾಲಾ ವಿದ್ಯಾಭ್ಯಾಸ ನನ್ನ ಚಿಕ್ಕಕ್ಕ ತೀರಿಕೊಂಡ ವರ್ಷ ಮುಗಿಯಿತು. ನನ್ನನ್ನು ಕಾಲೇಜಿಗೆ ಕಳುಹಿಸುವುದರ ಬಗ್ಗೆ ಯೋಚಿಸುವ ಸ್ಥಿತಿಯಲ್ಲೂ ನಮ್ಮ ಕುಟುಂಬ ಇರಲಿಲ್ಲ.

ನನಗೆ ಸೇವಾಗ್ರಾಮಕ್ಕೆ ಹೋಗುವ ಕನಸಿತ್ತು. ಮಲಬಾರಿನ ಕೆಲವು ಯುವತಿಯರು ಅಲ್ಲಿಗೆ ಹೋಗಿದ್ದರು. ಆದರೆ ಅವರಲ್ಲಿ ನನ್ನ ಸ್ನೇಹಿತೆಯರು ಯಾರೂ ಇರಲಿಲ್ಲ. ನಾವು ಶಾಲೆಯಲ್ಲಿ ಟ್ರಾವಂಕೂರ್‌ನ ರಾಜ ಮತ್ತು ನಮ್ಮ ಸಾಮ್ರಾಟನಾಗಿದ್ದ ಇಂಗ್ಲೆಂಡ್‌ನ ರಾಜನ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದೆವು. ಆಗಿನ ಕಾಲದಲ್ಲಿ ಸಂಪರ್ಕವ್ಯವಸ್ಥೆ ಬಹಳ ಕಡಿಮೆ ಮಟ್ಟದಲ್ಲಿತ್ತು. ಅದರ ಹೊರತಾಗಿಯೂ ನಮ್ಮ ದೇಶದಲ್ಲಿ ಏನೋ ಒಂದು ಬಹಳ ಮುಖ್ಯವಾದದ್ದು ಘಟಿಸುತ್ತಿದೆ ಎನ್ನುವುದು, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿದೆ ಎನ್ನುವುದು ನಮ್ಮ ಅರಿವಿಗೆ ಬಂದಿತ್ತು. ನಾನು ಅದರತ್ತ ಆಕರ್ಷಿತಳಾಗಿದ್ದರೂ ನಮ್ಮನ್ನೆಲ್ಲ ಬೆSaradamoni-1ಳೆಸಲು ಪ್ರಯಾಸದ ಪ್ರಯಾಣದಲ್ಲಿ ತೊಡಗಿದ್ದ ನಮ್ಮ ತಾಯಿಯ ಮನಸ್ಸಿಗೆ ಕಷ್ಟ ಆಗುವಂತಹುದೇನನ್ನೂ ಮಾಡಲು ನನಗೆ ಮನಸ್ಸಿರಲಿಲ್ಲ. ಈಗ ಹಿಂದಿರುಗಿ ನೋಡಿದಾಗ ಸೇವಾಗ್ರಾಮಕ್ಕೆ ಹೋಗದೆ ನಾನು ಬಹಳ ಕಳೆದುಕೊಂಡೆ ಎಂದು ನನಗೆ ಅನ್ನಿಸುತ್ತಿಲ್ಲ.

ನಾನು ಚಿಕ್ಕವಳಾಗಿದ್ದಾಗ ಬಹಳ ಸಂಕೋಚದ ಹುಡುಗಿ ಆಗಿದ್ದೆ. ಪ್ರೀತಿ ಮತ್ತು ಮದುವೆ, ಎರಡಕ್ಕೂ ನನಗೆ ವಿರೋಧವಿತ್ತು. ನಾನು ಬೆಳಗ್ಗೆ ಶಾಲೆಗೆ ಕೆಲವು ಸ್ನೇಹಿತೆಯರ ಜೊತೆಗೆ ನಡೆದುಕೊಂಡು ಹೋಗುತ್ತಿದ್ದೆ. ಅವರು ಬೆಳಗ್ಗೆ ಶಾಲೆಗೆ ದಾರಿಯಲ್ಲಿ ನಮ್ಮ ಮನೆಗೆ ಬರುತ್ತಿದ್ದರು. ಕೆಲವು ಹುಡುಗರು ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದರು ಮತ್ತು ಮಾತನಾಡಿಸಲು ಯತ್ನಿಸುತ್ತಿದ್ದರು. ನನಗೆ ಆಗಾಗ ಕಾಗದಗಳು, ರಿಬ್ಬನ್ ಮತ್ತು ಚಿತ್ರಗಳಂತಹ ಕೆಲವು ಉಡುಗೊರೆಗಳು ಬರುತ್ತಿದ್ದವು. ಆಶ್ಚರ್ಯ ಎಂದರೆ, ನನಗೆ ಆ ಉಡುಗೊರೆಗಳ ಬಗ್ಗೆ ಆಸಕ್ತಿ ಆಗಲಿ ಕುತೂಹಲ ಆಗಲಿ ಇರುತ್ತಿರಲಿಲ್ಲ. ಅದನ್ನೆಲ್ಲ ನನ್ನ ಅಕ್ಕಂದಿರಿಗೆ ಕೊಟ್ಟುಬಿಡುತ್ತಿದ್ದೆ. ಆದರೂ ಆನಂತರದಲ್ಲಿ ನಾನೂ ಪ್ರೀತಿ ಮಾಡಿದೆ, ಪ್ರೀತಿಸಿದವರನ್ನೇ ಮದುವೆಯೂ ಆದೆ. ನನ್ನ ಗಂಡ ನನ್ನ ಸ್ನೇಹಿತೆ ಮತ್ತು ಸಹಪಾಠಿಯಾಗಿದ್ದವಳ ಸೋದರಸಂಬಂಧಿ. ಅವಳ ಮನೆ ನಮ್ಮ ಶಾಲೆಗೆ ಹತ್ತಿರ ಇದ್ದಿದ್ದರಿಂದ ನಾವು ನೀರು ಕುಡಿಯಲು ಅವಳ ಮನೆಗೆ ಆಗಾಗ ಹೋಗುತ್ತಿದ್ದೆವು. ಅವಳ ತಾಯಿ ನಮ್ಮನ್ನು ಅದರದಿಂದ ಬರಮಾಡಿಕೊಳ್ಳುತ್ತಿದ್ದಳು. ಆಕೆಗೆ ಹಲವು ತಮ್ಮಂದಿರಿದ್ದರು. ಅವರ ಮಕ್ಕಳಲ್ಲಿ ಎಲ್ಲರಿಗಿಂತ ದೊಡ್ಡವನಾಗಿದ್ದಾತ ಆಗಾಗ ಅಲ್ಲಿರುತ್ತಿದ್ದ. ಅಲ್ಲಿ ಆತ ನನ್ನನ್ನು ನೋಡಿದ್ದ. ನನ್ನ ಗೆಳತಿ ಆತನ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದಳು. ಆದರೆ ಆತ ನನ್ನನ್ನು ಯಾವತ್ತೂ ಮಾತನಾಡಿಸಿರಲಿಲ್ಲ ಮತ್ತು ನಾನೂ ಆತನನ್ನು ವಿಶೇಷವಾಗೇನೂ ಗಮನಿಸಿರಲಿಲ್ಲ. ಬಹಳ ದಿನಗಳ ನಂತರ ಬಹುಶಃ ನನ್ನ ಗೆಳತಿ ನನಗೆ ಪುಸ್ತಕಗಳನ್ನು ಓದುವುದರಲ್ಲಿ ಆಸಕ್ತಿ ಇದೆ ಎಂದು ಹೇಳಿದ್ದಕ್ಕೆ ಇರಬಹುದು, ಆತ ನನಗೆ ಪುಸ್ತಕಗಳನ್ನು ಕಳುಹಿಸಲು ಆರಂಭಿಸಿದ. ತಮ್ಮ ಸುತ್ತಮುತ್ತಲ ವಿಷಯಗಳ ಬಗ್ಗೆ ಅಸಂತೃಪ್ತಿ ಇದ್ದ ಮತ್ತು ಸ್ವತಂತ್ರ ಭಾರತದ ಕನಸುಗಳನ್ನು ಹೊಂದಿದ್ದ ಒಂದು ಯುವಕರ ಗುಂಪಿಗೆ ಅವರು ಸೇರಿದ್ದರು. ಪತ್ರಿಕೋದ್ಯಮ ಅವರ ಇಷ್ಟದ ಕ್ಷೇತ್ರವಾಗಿತ್ತು, ಅವರ ತಂದೆತಾಯಿ ಆಗ ಮಲೇಷಿಯಾದಲ್ಲಿ ಬಹಳ ಕಾಲ ಇದ್ದರು. ಮಧುರೈನಲ್ಲಿ ಓದುವಾಗ ಅವರು ರಾಷ್ಟ್ರೀಯತೆಯ ಚಳವಳಿಗೆ ಮಾರುಹೋಗಿದ್ದರು. ಆ ಹಂತದಿಂದ ಅವರು ನಂತರದ ದಿನಗಳಲ್ಲಿ ಕಾಂಗ್ರೆಸ್‌ನ ಸಮಾಜವಾದಕ್ಕೆ, ನಂತರ ಕಮ್ಯುನಿಸಮ್‌ಗೆ ಹೊರಳಿದರು.

ಕೊಲ್ಲಾಮ್ ರೈಲು ನಿಲ್ದಾಣದ ಎದುರಿರುವ ಮೈದಾನದಲ್ಲಿ ಕಾರ್ಮಿಕರ ಸಂಘದ ಸಭೆಯೊಂದರಲ್ಲಿ ಅವರು ಮಾಡಿದ ಭಾಷಣ ನನ್ನನ್ನು ತೀವ್ರವಾಗಿ ತಟ್ಟಿತು. ಸ್ಪಷ್ಟತೆಯಿದ್ದ ಮತ್ತು ಪ್ರಾಮಾಣಿಕವಾಗಿ ಮಾತನಾಡಿದ ಬದ್ದತೆಯುಳ್ಳ ಮನುಷ್ಯ ಅಲ್ಲಿ ನನಗೆ ಕಾಣಿಸಿದ. ನಂತರ ಬಹುಬೇಗನೆ ನಾವು ಪತ್ರಗಳನ್ನು ವಿನಿಮಯ ಮಾಡಿಕೊಳ್ಳಲಾರಂಭಿಸಿದೆವು. ಅವರು ದೀರ್ಘವಾದ, ಪ್ರೇಮಮಯ ಪತ್ರಗಳನ್ನು ಬರೆಯುತ್ತಿದ್ದರು. ಆ ಪತ್ರಗಳಿಗೆ ಸಮನಾಗಿ ನಾನು ಪ್ರತ್ಯುತ್ತರ ಬರೆಯುತ್ತಿದ್ದೆ ಎಂದು ನನಗನ್ನಿಸುವುದಿಲ್ಲ. ನಮ್ಮ ಪ್ರೇಮಕ್ಕೆ ನನ್ನ ತಮ್ಮನ ಮತ್ತು ಅವರ ಕಡೆಯಲ್ಲಿ ಅವರ ತಮ್ಮನ ಮತ್ತು ಸೋದರಿಯರ ಬೆಂಬಲ ಇದ್ದರೂ ನಾವು ಹೆಚ್ಚು ಭೇಟಿ ಆಗುತ್ತಿರಲಿಲ್ಲ. ಅವರು ತಮ್ಮ ಸ್ನೇಹಿತರೊಂದಿಗೆ ಸೇರಿ ಆರಂಭಿಸಿದ ವಾರಪತ್ರಿಕೆಗೆ ನಾನೂ ಆಗಾಗ ಬರೆಯುತ್ತಿದ್ದೆ. ಚರಕ ನೂಲುವುದು ಮತ್ತು ಓದುವುದು ಮುಂದುವರಿದೇ ಇತ್ತು. ಅಷ್ಟೊತ್ತಿಗೆ ನಾನು ಓದಿದ ಪುಸ್ತಕಗಳಿಂದ ಹೇರಳವಾಗಿ ನಕಲು ಮಾಡಿಕೊಳ್ಳುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೆ. ಆಶ್ಚರ್ಯ ಎಂದರೆ, ಅದರಲ್ಲಿ ಕೆಲವು ಈಗಲೂ ನನ್ನ ಬಳಿ ಇವೆ. ನಾನು ಓದಿದ ಶಾಲೆಗೆ ಆಗಾಗ ಹೋಗಿ ಪಾಠ ಸಹ ಮಾಡುತ್ತಿದ್ದೆ. ಅಲ್ಲಿಯ ಸಿಸ್ಟರ್‌ಗಳು ನನ್ನನ್ನು ಅಲ್ಪಾವಧಿ ರಜೆಯ ಮೇಲೆ ತೆರಳಿರುವ ಶಿಕ್ಷಕಿ ಎಂದು ತಮಾಷೆ ಮಾಡುತ್ತಿದ್ದರು.

 

ಅವರು ನಿಮಗೆ ಪುಸ್ತಕಗಳನ್ನು, ಪತ್ರಗಳನ್ನು ಕಳುಹಿಸುತ್ತಿದ್ದರು. ಮುಂದಕ್ಕೆ ಓದು ಎಂದು ಅವರೇ ಹೇಳಿರಬೇಕಲ್ಲ?

ಆ ಸಲಹೆ ಅವರಿಂದ ಬಂತೊ ಅಥವ ಆ ನಿರ್ಧಾರವನ್ನು ನಾನೇ ತೆಗೆದುಕೊಂಡೆನೊ ನನಗೆ ನೆನಪಿಲ್ಲ. ಆದರೆ ನನ್ನ ತಾಯಿ ಆ ನಿರ್ಧಾರವನ್ನು ಬೆಂಬಲಿಸಿದರು. ತಿರುವನಂತಪುರದ ಮಹಿಳಾ ಕಾಲೇಜಿಗೆ ಹೋಗಿ ಸೇರಿಕೊಂಡೆ. ಇತಿಹಾಸವನ್ನು ಮುಖ್ಯ ವಿಷಯವಾಗಿ ಆರಿಸಿಕೊಂಡೆ. ವಿಜ್ಞಾನದಲ್ಲಿ ನನಗೆ ಒಳ್ಳೆಯ ಅಂಕಗಳು ಇದ್ದಿದ್ದರಿಂದ ಇತಿಹಾಸ ತೆಗೆದುಕೊಳ್ಳುವ ನನ್ನ ನಿರ್ಧಾರ ಅಂತಿಮವಾದದ್ದೇ ಎಂದು ಖಾತ್ರಿ ಪಡಿಸಿಕೊಳ್ಳಲು ನಮ್ಮ ಪ್ರಿನ್ಸಿಪಾಲರು ಕರೆದು ವಿಚಾರಿಸಿದ್ದರು. ಶಾಲೆ ಬಿಟ್ಟ ಅಷ್ಟೊಂದು ದೀರ್ಘ ಅವಧಿಯ ನಂತರ ಮತ್ತೆ ಓದಿನಲ್ಲಿ ತೊಡಗುವುದಕ್ಕೆ ನನಗೆ ಕಷ್ಟವಾಯಿತು ಎಂದು ನನಗನ್ನಿಸುತ್ತಿಲ್ಲ. ಇಂಟರ್‌ಮೀಡಿಯಟ್ ಆದ ನಂತರ ಇಂಗ್ಲಿಷ್ ಸಾಹಿತ್ಯ ತೆಗೆದುಕೊಳ್ಳುವುದು ನನ್ನ ಉದ್ದೇಶ ಆಗಿತ್ತು, ಆದರೆ ನಾನು ಪರೀಕ್ಷೆ ಮುಗಿಸುವಷ್ಟೊತ್ತಿಗೆ ವಿಶ್ವವಿದ್ಯಾಲಯದ ಕಾಲೇಜಿನವರು ಅರ್ಥಶಾಸ್ತ್ರದಲ್ಲಿ ಸ್ನತಕೋತ್ತರ ಪದವಿಯನ್ನು ಆರಂಭಿಸಿದ್ದರು. ಎಮ್.ಎ. ಪದವಿಗೆ ಸಮನಾದ ಆ ಮೂರು ವರ್ಷದ ಆನರ್ಸ್‌ ಕೋರ್ಸಿಗೆ ಸೇರಿಕೊಂಡೆ. ದೇಶಕ್ಕೆ ಏನಾದರೂ ಸೇವೆ ಮಾಡಬೇಕು ಎನ್ನುವ ನನ್ನ ಜೀವನದ ಗುರಿಯನ್ನು ಸಾಧಿಸಲು ಅರ್ಥಶಾಸ್ತ್ರ ತೆಗೆದುಕೊಳ್ಳುವ ಮೂಲಕ ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿದೆ. ಅದು 1951 ನೆ ಇಸವಿ. ಅದೇ ಸಮಯದಲ್ಲಿ ಅವರ ತಂದೆ ಮಲೇಷಿಯಾದಿಂದ ವಾಪಸಾದರು. ಅದಕ್ಕಿಂತ ಮೊದಲು ಅವರ ತಾಯಿ ಮತ್ತು ಅವರ ಸೋದರಿ ಬಂದು ನಮ್ಮಮ್ಮನನ್ನು ಭೇಟಿ ಆಗಿದ್ದರು. 1952 ರಲ್ಲಿ ನಮ್ಮ ಮದುವೆ ಆಯಿತು.

 

ಅಂದರೆ ಅಷ್ಟೊತ್ತಿಗೆ ನಿಮ್ಮಿಬ್ಬರಿಗೂ ಪರಿಚಯ ಆಗಿ ಹತ್ತು ವರ್ಷಗಳೇ ಆಗಿದ್ದವು…

ಹತ್ತು ಅಲ್ಲ, ಐದು ವರ್ಷ.

 

ಐದು ವರ್ಷಗಳು, ಮತ್ತು ಇವೆಲ್ಲ ನೀವು ಅವರ ಪತ್ರಿಕೆಗೆ ಬರೆಯುತ್ತಿದ್ದಾಗ ಮತ್ತು ಅವರೊಡನೆ ಮಾತನಾಡುತ್ತಿದ್ದಾಗ ನಡೆಯುತ್ತಿತ್ತು.

ಆಗ ಈ ಡೇಟಿಂಗ್ ಅನ್ನುವಂತದ್ದೇನೂ ನಮ್ಮಲ್ಲಿ ಇರಲಿಲ್ಲ! (ನಗು)

 

ಅಲ್ಲ ಅಲ್ಲ, ಡೇಟಿಂಗ್ ಅಲ್ಲ. ಆ ಕಾಲದಲ್ಲಿ ಚರಕ ನೂಲುವುದಿತ್ತು! (ನಗು)

ನನ್ನ ಗಂಡ ಚರಕ ನೂಲುವುದಕ್ಕೆ ಬರುತ್ತಿದ್ದರು ಎಂದು ನನಗನ್ನಿಸುತ್ತಿಲ್ಲ. ಸ್ಥಳೀಯ ಖಾದಿ ಅಂಗಡಿಗಳು ಆಗ ಯುವ ರಾಜಕೀಯ ಕಾರ್ಯಕರ್ತರು ಸಕ್ರಿಯವಾಗಿದ್ದಂತಹ ಸ್ಥಳಗಳು ಎನ್ನುವುದೇನೊ ನಿಜ, ಆಗಿನ ಕಾಲದಲ್ಲಿ ಖಾದಿ ಪ್ರತಿಭಟನೆಯ ಸಂಕೇತವಾಗಿತ್ತು ಮತ್ತು ರಾಜಕೀಯದಲ್ಲಿ ತೀವ್ರಗಾಮಿತನದ ಗುರುತೂ ಆಗಿತ್ತು. ಸುಚೇತಾ ಮತ್ತು ಆಚಾರ್ಯ ಕೃಪಲಾನಿಯವರಿಗೆ ಕಾಯುತ್ತ ನಾವು ನಿಂತಿದ್ದದ್ದು ಈಗಲೂ ನೆನಪಿದೆ. ಅವರು ತಿರುವನಂತಪುರದಿಂದ ಬರುತ್ತಿದ್ದರು ಮತ್ತು ಸ್ವಾಭಾವಿಕವಾಗಿ ಅವರಿಗೆ ದಾರಿಯುದ್ದಕ್ಕೂ ಸ್ವಾಗತಸಭೆಗಳಿದ್ದವು. ಹೆಚ್ಚು ಕತ್ತಲಾಗುತ್ತ ಬಂದ ಕಾರಣಕ್ಕೆ ನಾನು ಮನೆಗೆ ಹೊರಟು ಬಂದೆ. ಖಾದಿ ನೂಲುವ ಸ್ಪರ್ಧೆಯೊಂದರಲ್ಲೂ ನಾನು ಪಾಲ್ಗೊಂಡಿದ್ದೆ ಮತ್ತು ಅದರಲ್ಲಿ ಗಾಂಧೀಜಿಯವರ ಆತ್ಮಚರಿತ್ರೆಯನ್ನು ಬಹುಮಾನವಾಗಿ ಪಡೆದಿದ್ದೆ.

ಅರ್ಥಶಾಸ್ತ್ರ ಓದಲು ವಿಶ್ವವಿದ್ಯಾಲಯ ಸೇರಿದಾಗ ಇನ್ನೂ ಮುಂದಕ್ಕೆ ಓದುವ ಯಾವ ಆಲೋಚನೆಗಳೂ ನನ್ನಲ್ಲಿ ಇರಲಿಲ್ಲ. ಆದರೆ ಆ ಓದು ಮುಗಿಯುತ್ತ ಇದ್ದ ಹಾಗೆ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ M.Litt. ಸಂಶೋಧನಾ ಕೋರ್ಸ್‌ನ ಬಗ್ಗೆ ಗೊತ್ತಾಯಿತು. ಅದರಲ್ಲಿ ಭಾರತದ ಸಹಕಾರ ಚಳವಳಿಯನ್ನು, ಅದಲ್ಲೂ ಮದ್ರಾಸ್ ಪ್ರಾಂತ್ಯದ ಚಳವಳಿಯನ್ನು ಕೇಂದ್ರವಾಗಿಟ್ಟುಕೊಂಡು ಸಂಶೋಧನಾ ವಿಷಯವಾಗಿ ಆರಿಸಿಕೊಂಡೆ. ಲಕ್ನೋ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಲಿಖಿತ ಮತ್ತು ವೈವಾ ವೋಸ್ ಪರೀಕ್ಷೆ ಇತ್ತು. ಬ್ರಿಟಿಷರು ಭಾರತದಲ್ಲಿ ಆರಂಭಿಸಿದ ಮೂರು ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದ ಮದ್ರಾಸ್ ವಿಶ್ವವಿದ್ಯಾಲಯ 1957 ರಲ್ಲಿ ಶತಮಾನೋತ್ಸವ ಆಚರಿಸಿಕೊಂಡಿತು. ಅದಕ್ಕೆ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಬಂದಿದ್ದರು. ಆಗ ಅವರನ್ನು ನಾನು ಬಹಳ ಹತ್ತಿರದಿಂದ ಕಂಡೆ. ಇವೆಲ್ಲ ನನಗೆ ಹೊಸ ಅನುಭವಗಳು.

 

ನಿಮಗೆ ಅಷ್ಟೊತ್ತಿಗೆ ಮದುವೆ ಆಗಿತ್ತು…

1952 ರಲ್ಲಿ ನಾನು ಆನರ್ಸ್‌ನ ಎರಡನೇ ವರ್ಷದಲ್ಲಿದ್ದಾಗಲೇ ಮದುವೆ ಆಗಿತ್ತು. ಮದ್ರಾಸ್‌ನಲ್ಲಿ ನಾನು ಹಾಸ್ಟೆಲ್‌ನಲ್ಲಿ ಇದ್ದೆ. ಕೇರಳದವರೇ ಆಗಿದ್ದ ಇಬ್ಬರು ಒಳ್ಳೆಯ ರೂಮ್‌ಮೇಟ್ಸ್ ಇದ್ದರು.

ಮದುವೆ ಆದ ನಂತರ ನಾನು ಓದಲು ಬಂದಿದ್ದು ನೋಡಿ ಅವರಿಗೆ ಆಶ್ಚರ್ಯ ಆಗಿತ್ತು. ನನಗೆ ಅದೇನೂ ವಿಚಿತ್ರ ಅಂತ ಅನ್ನಿಸಿರಲಿಲ್ಲ. ಆಗಿನ ಸಮಯಕ್ಕೆ ಅದು ಖಂಡಿತವಾಗಿ ಸಹಜವಾದದ್ದಲ್ಲ ಅನ್ನುವುದೇನೊ ನಿಜ, ಬಹಳ ಗಂಡಸರು ಮದುವೆಯ ನಂತರ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಹೋಗುತ್ತಿದ್ದರು ಮತ್ತು ಅದಕ್ಕೆ ಸಮಾಜದ ಸಮ್ಮತಿಯೂ ಇತ್ತು. ಮತ್ತೊಂದು ವಿಷಯ ಏನೆಂದರೆ ನನ್ನ ಗಂಡ ಕೇವಲ ಪದವೀಧರ. ಸಾಮಾನ್ಯವಾಗಿ ಸಂಪ್ರದಾಯದ ಪ್ರಕಾರ ಗಂಡನಾದವನು ಹೆಂಡತಿಗಿಂತ ಹೆಚ್ಚು ಓದಿರಬೇಕು. ಆದರೆ, ಇವ್ಯಾವುವೂ ನಮ್ಮ ಮನೆಯಲ್ಲಾಗಲಿ, ನಮ್ಮಿಬ್ಬರ ನಡುವೆ ಆಗಲಿ ಸಮಸ್ಯೆಗಳೇ ಆಗಲಿಲ್ಲ.

 

ಆಗ ನೀವು ಯಾರೊಡನೆ ವಾಸ ಮಾಡುತ್ತಿದ್ದಿರಿ?

ಸಾಮಾನ್ಯವಾಗಿ ನಾನು ನನ್ನ ತಾಯಿಯ ಮನೆಯಲ್ಲಿ ಇರುತ್ತಿದ್ದೆ. ನನ್ನ ಗಂಡನೂ ಅದೇ ಊರಿನವರು. ಹಾಗಾಗಿ, ಆಗಾಗ ಅವರ ಮನೆಗೂ ಹೋಗಿ ಇರುತ್ತಿದ್ದೆ. ಆದರೆ ನಾನು ನನ್ನ ತಾಯಿಯ ಮನೆ ಬಿಟ್ಟು ಅವರ ಮನೆಗೆ ಹೋಗಿ ಅದರ ಒಂದು ಭಾಗವಾದ ಎಂದು ಹೇಳಲಾರೆ. ಹೇಳಬೇಕೆಂದರೆ, ನಾನು ಊರಿನಲ್ಲಿ ಇಲ್ಲದಾಗಲೂ ಅವರು ಆಗಾಗ ನಮ್ಮ ಮನೆಗೆ ಬಂದು ನಮ್ಮ ತಾಯಿಯೊಡನೆ ಇರುತ್ತಿದ್ದರು. ಆಗಿನ ಕಾಲದಲ್ಲಿ ಅದೇನೂ ದೊಡ್ಡ ವಿಷಯ ಆಗಿರಲಿಲ್ಲ.

 

ಹೌದು, ಸಂಪ್ರದಾಯಗಳು ಬೇರೆಯೇ ಆಗಿದ್ದವು.

ಹಾಗೆ ನಾನು M.Litt. ಮುಗಿಸಿದೆ.

ನನ್ನ ಗಂಡ ಸಂಪಾದಿಸಿ ನನ್ನನ್ನು ಅಥವ ನಮ್ಮ ಕುಟುಂಬವನ್ನು ನಿಭಾಯಿಸುತ್ತಾರೆ ಎಂದೇನೂ ನಾನು ನಿರೀಕ್ಷಿಸಿರಲಿಲ್ಲ. ಆಗಿನ ಕಾಲದಲ್ಲಿ ರಾಜಕಾರಣಿಗಳು ಮತ್ತು ರಾಜಕೀಯ ಪತ್ರಕರ್ತರು ತಮ್ಮ ಕೆಲಸವನ್ನು ಸ್ವಇಚ್ಛೆಯಿಂದ ಮಾಡುತ್ತಿದ್ದರೆ ಹೊರತು ಸಂಬಳ ಕೊಡುವ ನೌಕರಿಯಾಗಿ ಅಲ್ಲ. ಆಗ ಸಮಾಜದ ಇತರೆ ವರ್ಗಗಳ ಜೀವನವೂ ಸರಳವಾಗಿತ್ತು ಮತ್ತು ಸಂಬಳಗಳೂ ಬಹಳ ಕಮ್ಮಿ ಇದ್ದವು. ಎಲ್ಲವನ್ನೂ ನನ್ನ ತಾಯಿಯೇ ನಿಭಾಯಿಸುತ್ತಿದ್ದ ಮನೆಯಲ್ಲಿ ನಾನು ಬೆಳೆದಿದ್ದು. ನಮ್ಮ ತಂದೆ ಬದುಕಿದ್ದಾಗ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನನ್ನ ತಾಯಿಯೇ ನೋಡಿಕೊಳ್ಳುತ್ತಿದ್ದರು. ಆದರೆ ನಾವು ಆರ್ಥಿಕವಾಗಿ ಸ್ವತಂತ್ರರಾಗಬೇಕು ಎನ್ನುವ ಬಗ್ಗೆ ನಾನು ಕಾತುರಳಾಗಿದ್ದೆ. ಜೊತೆಗೆ ನೌಕರಿಗೆ ಹೋಗುವುದರ ಬಗ್ಗೆಯೂ ನಿರ್ಣಯಿಸಿದ್ದೆ. ನನ್ನ ತಾಯಿ ಆಗಲಿ, ನನ್ನ ಗಂಡನ ಮನೆಯವರಾಗಲಿ ನಮ್ಮನ್ನೇನೂ ಮನೆಯಿಂದ ಹೊರಗೆ ಹಾಕುತ್ತಿರಲಿಲ್ಲ. ಅವರು ಹಾಗೇನಾದರೂ ಮಾಡಿಬಿಟ್ಟಿದ್ದರೆ ನಮ್ಮ ಸ್ವಾಭಿಮಾನಕ್ಕೆ ಖಂಡಿತ ಧಕ್ಕೆ ಆಗುತ್ತಿತ್ತು. ಆದರೆ ಹಾಗೆ ಎಂದೂ ಆಗಲಿಲ್ಲ.

ಮತ್ತೆ ಯಾವುದೇ ಕಾರಣಕ್ಕೂ ನಾನು ರಾಜಕೀಯ ಪಕ್ಷವೊಂದರ ಕಾರ್ಯಕರ್ತಳಾಗಬಾರದೆಂದೂ ಅದೇಕೋ ತೀರ್ಮಾನಿಸಿಬಿಟ್ಟಿದ್ದೆ. ಆದರೆ ವರ್ಷಗಳು ಉರುಳಿದಂತೆ ನನ್ನ ಕೆಲಸವೇ ರಾಜಕೀಯ ಅಥವ ರಾಜಕೀಯಕ್ಕೆ ಸಂಬಂಧಿಸಿದ್ದು ಎಂದು ನನಗೆ ಅನ್ನಿಸತೊಡಗಿತು.

M.Litt. ಆದನಂತರ ಕೇರಳ ರಾಜ್ಯ ಸರ್ಕಾರದ ಯೋಜನಾ ಇಲಾಖೆಯ ಅಧೀನದ ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾಧಿಕಾರಿಯಾಗಿ ನನಗೆ ಕೆಲಸ ಸಿಕ್ಕಿತು. ಅದು ದೇಶದಲ್ಲಿಯೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವೊಂದು ಕಮ್ಯುನಿಸ್ಟರ ನೇತೃತ್ವದಲ್ಲಿ ಕೇರಳದಲ್ಲಿ ಅಧಿಕಾರಕ್ಕೆ ಬಂದಿದ್ದ ಸಂದರ್ಭ. ಈ ಅಧ್ಯಯನ ಸಂಸ್ಥೆ ಹೊಸದಾಗಿ ಆರಂಭವಾಗಿತ್ತು. ಚುರುಕು ವ್ಯಕ್ತಿತ್ವದ ಯುವ ಬೆಂಗಾಲಿ ಡಾ. ರುದ್ರ ಇದರ ನಿರ್ದೇಶಕರಾಗಲಿಕ್ಕಾಗಿಯೇ ಪ್ಯಾರಿಸ್‌ನಿಂದ ಇಲ್ಲಿಗೆ ಬಂದರು. ಆರಂಭದಲ್ಲಿ ಉತ್ತೇಜನಕಾರಿ ವಾತಾವರಣ ಇತ್ತು; ರಾಜಕೀಯವಾಗಿ ಮತ್ತು ನನ್ನ ಕೆಲಸದ ಬಗ್ಗೆಯೂ. ಆದರೆ ಅ ಉತ್ಸಾಹ ಬಹಳ ದಿನ ಮುಂದುವರೆಯಲಿಲ್ಲ. ನನಗೆ ಕೆಲಸದಲ್ಲಿ ಬೇಸರ ಆಗಲು ಆರಂಭವಾಯಿತು. ಸರ್ಕಾರಿ ಕಛೇರಿಯಲ್ಲಿ ಕೆಲಸ ಮಾಡುವುದು ನನಗೆ ಇಷ್ಟವಾಗದೇ ಹೋಯಿತು. ಡಾ. ರುದ್ರ ಸಹ ಸಂಸ್ಥೆಯನ್ನು ಬಿಡುತ್ತಿದ್ದರು. ದೆಹಲಿಯಲ್ಲಿ ಸೂಕ್ತವಾದ ಕೆಲಸ ಹುಡುಕಿಕೊಳ್ಳುವಂತೆ ಅವರೇ ನನಗೆ ಸಲಹೆ ಕೊಟ್ಟರು. ಪಾಠ ಮಾಡುವುದಕ್ಕಿಂತ ಅಧ್ಯಯನ ಮಾಡುವುದರತ್ತಲೇ ನನ್ನ ಹೆಚ್ಚಿನ ಒಲವಿದ್ದರೂ ಅದರ ಬಗ್ಗೆಯೂ ನಾನು ಅಷ್ಟೇನೂ ಉತ್ಸುಕಳಾಗಿರಲಿಲ್ಲ.

ಅದಕ್ಕೂ ಮೊದಲೆ ನಾನೊಮ್ಮೆ ದೆಹಲಿಯನ್ನು ಸಂದರ್ಶಿಸಿದ್ದೆ. ಆದರೆ ಆ ಊರು ನನಗೆ ಒಂದುಚೂರೂ ಇಷ್ಟವಾಗಿರಲಿಲ್ಲ. ಮತ್ತೊಮ್ಮೆ ಆ ನಗರಕ್ಕೆ ಹೋಗಬಾರದು ಎಂದು ತೀರ್ಮಾನಿಸಿದ್ದೆ. ನನ್ನ ಗಂಡ ಪಕ್ಷದ ಸಭೆಯೊಂದಕ್ಕೆ ಹಾಜರಾಗಲು ಪಂಜಾಬಿಗೆ ಹೋಗುವವರಿದ್ದರು. ಆ ಕಾರಣಕ್ಕೆ ನಾವು ಒಂದೆರಡು ದಿನ ಮೊದಲೆ ಹೋಗಲು ತೀರ್ಮಾನಿಸಿದ್ದೆವು. ಅಲ್ಲಿ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡು ಆಗ್ರಾಕ್ಕೆ ಹೋಗಿದ್ದೆವು. ತಾಜ್‌ಮಹಲ್ ಮತ್ತಿತರ ಐತಿಹಾಸಿಕ ಸ್ಮಾರಕಗಳನ್ನು ನೋಡಿದೆವು. ದೆಹಲಿಯಲ್ಲಿ ಮನೆಗಳು ಒಂದಕ್ಕೊಂದು ಒತ್ತೊತ್ತಾಗಿವೆ ಎಂದು ನನಗೆ ಅನ್ನಿಸಿತು. ರೈಲು ನವದೆಹಲಿಯ ಸ್ಟೇಷನ್‌ಗೆ ಹತ್ತಿರವಾಗುತ್ತಿದ್ದಂತೆ ನಿಮಗೆ ಬೆಂಗಾಲಿ ಮಾರುಕಟ್ಟೆ ಕಾಣಿಸುತ್ತದೆ. ಅಲ್ಲಿಯ ಮನೆಗಳು ಒಂದಕ್ಕೊಂದು ಅಂಟಿಕೊಂಡಿರುವುದು ಕಾಣಿಸಿತು. ಮತ್ತೊಮ್ಮೆ ಆ ಸ್ಥಳಕ್ಕೆ ಬರುವುದಿಲ್ಲ ಎಂದು ನನಗೆ ನಾನೇ ಹೇಳಿಕೊಂಡೆ. ಆದರೆ ನಾನು ಅಲ್ಲಿಗೆ ಹೋದೆ ಮತ್ತು ಮುವ್ವತ್ತು ವರ್ಷಗಳ ಕಾಲ ಉಳಿದೆ. ಸರಿಯಾಗಿ ಹೇಳಬೇಕೆಂದರೆ ಇಪ್ಪತ್ತೆಂಟು ವರ್ಷಗಳು.

 

ನೀವು ದೆಹಲಿಯಲ್ಲಿ ಇಪ್ಪತ್ತೆಂಟು ವರ್ಷಗಳ ಕಾಲ ಇದ್ದಿರಾ?

ಅಷ್ಟೊತ್ತಿಗೆ, ಮದುವೆಯಾದ ಏಳು ವರ್ಷಗಳ ನಂತರ ನಮ್ಮ ಮೊದಲ ಮಗು, ಅಂದರೆ ಮಗಳು ಹುಟ್ಟಿದ್ದಳು. ನಾನು ದೆಹಲಿಗೆ ಹೋಗಬೇಕು ಎಂದುಕೊಂಡಾಗ ಅವಳಿಗೆ ಎರಡೂವರೆ ವರ್ಷ ವಯಸ್ಸು. ನಾನು ನೌಕರಿ ಮಾಡಲೇಬೇಕು ಎಂದು ಹಿಂದೆ ತೀರ್ಮಾನಿಸಿದಾಗ ಅದರಿಂದ ಮುಂದಿನ ದಿನಗಳಲ್ಲಿ ಏನಾದರೂ ಸಮಸ್ಯೆಗಳು ಬರಬಹುದೇ ಎಂದು ಊಹಿಸಿರಲಿಲ್ಲ. ಈಗ ಏನು ಮಾಡಬೇಕೆಂದು ತೋಚಲಿಲ್ಲ.

 

ನಿಮಗೆ ಕೆಲವೊಂದು ವಿಷಯಗಳು ಇಷ್ಟ ಆಗದೇ ಇರಬಹುದು, ಆದರೆ ಅದನ್ನು ಮಾಡಬೇಕು ಎಂದು ಇನ್ನೊಬ್ಬರು ಬಯಸಿದಾಗ ನೀವು ಏನನ್ನೂ ಹೇಳದೆ ಹೋಗಬಹುದು. ದೆಹಲಿಗೆ ಹೋಗುವುದು ಒಳ್ಳೆಯ ಯೋಚನೆ ಎಂದು ನಿಮ್ಮ ಗಂಡನಿಗೆ ಅನ್ನಿಸಿತೆ ಅಥವ ನಿಮಗೆ ಹೋಗಬೇಕು ಅನ್ನಿಸಿದೆ ಎಂದುಕೊಂಡು ಅವರು ಅದಕ್ಕೆ ಸಮ್ಮತಿಸಿದರೆ?

ನನಗೆ ಇಲ್ಲಿ ಕೆಲಸದಲ್ಲಿ ತೃಪ್ತಿ ಇಲ್ಲ ಮತ್ತು ಅದನ್ನು ಬಿಡಬೇಕು ಎಂದುಕೊಳ್ಳುತ್ತಿದ್ದೇನೆ ಎನ್ನುವುದು ಅವರಿಗೆ ಗೊತ್ತಿತ್ತು. ಯಾವುದರ ಬಗ್ಗೆಯೂ ನಾವು ಕೂಲಂಕಷವಾಗಿ ಚರ್ಚಿಸಿರಲಿಲ್ಲ. ಆದರೆ ನನ್ನ ಜೊತೆ ಅವರೂ ದೆಹಲಿಗೆ ಬರುತ್ತಾರೆ ಎನ್ನುವುದು ನನಗೆ ಮನದಟ್ಟಾಗುವಂತೆ ಅವರು ನಡೆದುಕೊಂಡರು. ಆ ಭರವಸೆ ಇಲ್ಲದೇ ಹೋಗಿದ್ದರೆ ನಾನು ದೆಹಲಿಗೆ ಹೋಗುತ್ತಿದ್ದೆ ಎಂದು ನನಗನ್ನಿಸುವುದಿಲ್ಲ.

 

ಅಂದರೆ ನೀವು ಹೋಗಲು ಅವರು ನಿಮಗೆ ಸಹಾಯ ಮಾಡಿದರು…

ಹೌದು, ಖಂಡಿತವಾಗಿ. ಮೊದಲು ನಾನು ಹೋದೆ. ನನ್ನ ಮಗಳು ಅವರ ಜೊತೆಯಲ್ಲಿಯೇ ಉಳಿದಳು. ನಂತರ ಅವರ ಜೊತೆಯಲ್ಲಿ ದೆಹಲಿಗೆ ಬಂದಳು.

 

ಅದು ಸಂಬಂಧದಲ್ಲಿ ಬಹಳ ಅದ್ಭುತವಾದ ಸಂಗತಿ. ಅವರು ಅವರ ಕೆಲಸ ಮುಂದುವರೆಸಿಕೊಂಡು ಹೋಗುವುದು ಬಹಳ ಸ್ಪಷ್ಟವಾಗಿತ್ತು. ನಿಮ್ಮಿಬ್ಬರ ನಡುವಿನ ಆ ಬಲವಾದ ಆಕರ್ಷಣೆ ಕೆಲವು ರೀತಿಯಲ್ಲಿ ನಿಮಗೆ ಸಂತೋಷ ಕೊಟ್ಟಿರಬೇಕು. ಆದರೆ ಮದುವೆ ಆದ ಹೊಸದರಲ್ಲಿ ನಿಮಗೆ ಹೇಗನ್ನಿಸುತ್ತಿತ್ತು? ಹೊರಗಿನ ಪ್ರಪಂಚ ಮತ್ತು ರಾಜಕೀಯ ಅದಕ್ಕಿಂತ ಮುಖ್ಯವಾದದ್ದು ಎಂದು ಅನ್ನಿಸುತ್ತಿತ್ತೆ?

ಹೌದು, ಮುಖ್ಯವಾಗಿತ್ತು. ಅದು ನಮ್ಮಿಬ್ಬರಿಗೂ ಮುಖ್ಯವಾಗಿತ್ತು.

 

ಅವರಿಬ್ಬರೂ ಅವರ ಕೆಲಸದಲ್ಲಿ ಹೇಗೆ ತೀವ್ರವಾಗಿ ತೊಡಗಿಸಿಕೊಂಡಿದ್ದರು ಎನ್ನುವುದರ ಬಗ್ಗೆ ಇಳಾಬೆನ್ ಹೇಳುತ್ತಾರೆ.

ನಾನು ಕಚೇರಿಗೆ ನಿಯಮಿತವಾಗಿ ಹೋಗಲು ಆರಂಭಿಸುವುದಕ್ಕಿಂತ ಮುಂಚೆ ಅವರ ಜೊತೆ, ಅದರಲ್ಲೂ ಅವರು ಭಾಷಣ ಮಾಡಲು ಹೋಗುತ್ತಿದ್ದ ಕಡೆ ನಾನೂ ತಪ್ಪದೇ ಹೋಗುತ್ತಿದ್ದೆ. ಒಂದು ಸಲ ಅವರು ಯಾವುದೋ ಒಂದು ರೀತಿಯ ಎಲೆಯ ಗಿಡದ ಬಗ್ಗೆ ಜಾಗೃತಿ ಮೂಡಿಸುವ ವಿಚಾರಕ್ಕೆ ಮಾತನಾಡಲು ಹೋದರು. ಅದು ಕಮ್ಯುನಿಸ್ಟ್ ನೇತೃತ್ವದ ಆಡಳಿತದ ಆರಂಭದ ದಿನಗಳು. ಆ ಭಾಷಣದ ಸಂದೇಶ ಹಸಿರು ಮೇವಿನ ಪರವಾಗಿ ಇತ್ತು. ಆ ಗಿಡವನ್ನು ಬೇಲಿಯಾಗಿ ಬೆಳೆಸಬೇಕಾಗಿತ್ತು. ನನಗೆ ಅವರೊಡನೆಯ ಒಡನಾಟ ಖುಷಿ ಕೊಡುತ್ತಿತ್ತು. ಅವರೊಬ್ಬ ತಾಳ್ಮೆಯ ಕೇಳುಗ. ಬಹುಶ್ರುತ ಓದುಗ, ಮತ್ತು ಸಂಗೀತ, ಸಿನೆಮಾ, ಕ್ರೀಡೆ ಇತ್ಯಾದಿಗಳ ಬಗ್ಗೆಯೆಲ್ಲ ಆಸಕ್ತಿಯಿದ್ದ ಮನುಷ್ಯ. ಹುಡುಗನಾಗಿದ್ದಾಗ ಅವರು ಟೆನ್ನಿಸ್ ಆಡುತ್ತಿದ್ದರು. ರಾಜಕೀಯದಲ್ಲಿ ಆಸಕ್ತರಾಗಿದ್ದ ಬಹಳ ಯುವಕರು ಸಿನೆಮಾಗಳನ್ನು ನಿಯಮಿತವಾಗಿ ನೋಡುತ್ತಿದ್ದರು. ಅವರಿಗೆ ಅನೇಕ ವಿಷಯಗಳಲ್ಲಿ ಆಸಕ್ತಿ ಇತ್ತು.

 

ಹಾಗೆ ಹಂಚಿಕೊಂಡಿದ್ದು ನಿಮ್ಮ ಜೀವನವನ್ನು ಮತ್ತಷ್ಟು ಶ್ರೀಮಂತಗೊಳಿಸಿರಬೇಕು…

ಹೌದು, ಖಂಡಿತವಾಗಿ.

 

ನೀವೂ ಸಹ ಬಹಳ ಸಿನೆಮಾ ನೋಡುತ್ತಿದ್ದಿರಾ?

ಮದುವೆಗೆ ಮುಂಚೆ ಕೆಲವನ್ನಷ್ಟೇ ನೋಡಿದ್ದೆ. ಆದರೆ ಜೊತೆಯಾಗಿ ನಾವು ಅನೇಕ ಒಳ್ಳೆಯ ಸಿನೆಮಾಗಳನ್ನು ನೋಡಿದೆವು. ಅನೇಕ ಆಸಕ್ತದಾಯಕ ಕೆಲಸಗಳನ್ನು ಮಾಡಿದೆವು. ಮದುವೆ ಆದ ಶುರುವಿನಲ್ಲಿಯೇ ರಾಷ್ಟ್ರೀಯ ಶಾಂತಿ ಮತ್ತು ಐಕ್ಯತೆ ಸಂಸ್ಥೆಯವರು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಗೆ ನಾನು ಕಳುಹಿಸಿದ್ದ ಪ್ರಬಂಧಕ್ಕೆ ಬಹುಮಾನ ಬಂದಿತ್ತು. ಆ ಸಮಾವೇಶದಲ್ಲಿ ಭಾಗಿಯಾಗಲು ನಾವಿಬ್ಬರೂ ಮದ್ರಾಸ್‌ಗೆ ಹೋದೆವು. ಅಲ್ಲಿಂದ ವಾಪಸಾಗುವಾಗ ಶೆಂಕೊಟ್ಟೈ ಆದನಂತರ ಎಗ್ಮೋರ್‌ನಿಂದ ಪಶ್ಚಿಮ ಘಟ್ಟಗಳ ಮೂಲಕ ಇದ್ದ ಮೀಟರ್‌ಗೇಜ್ ರೈಲಿನಲ್ಲಿ ಕೊಲ್ಲಾಮ್‌ಗೆ ಬರುವುದು ಸುಲಭದ ಹಾದಿಯಾಗಿತ್ತು. ಬದಲಿಗೆ ನಾವು ಕುಂಭಕೋಣಮ್, ತಂಜಾವೂರು, ಇತ್ಯಾದಿಗಳ ಮೇಲೆ ಇದ್ದ ಬ್ರಾಡ್‌ಗೇಜ್ ರೈಲಿನಲ್ಲಿ ಬಂದೆವು. ಟಿಕೆಟ್ ಪರೀಕ್ಷಕ ಮತ್ತು ಇತರೆ ಸಹಪ್ರಯಾಣಿಕರು ನಾವು ತಪ್ಪು ಮಾಡಿ ಈ ಹಾದಿಯಲ್ಲಿ ಬಂದೆವು ಎಂದು ಭಾವಿಸಿದರು. ಆದರೆ ನಾವು ಆ ಪ್ರಯಾಣದ ಪ್ರತಿಕ್ಷಣವನ್ನೂ ಆನಂದಿಸಿದೆವು. ಹೊರಗಿನ ವಿಸ್ತಾರವಾದ ಪ್ರಪಂಚಕ್ಕೆ ನನ್ನ ಪ್ರವೇಶ ಅವರೊಂದಿಗೆ ಆಗಿತ್ತು. ಆದರೆ ಅಲೆಮಾರಿತನದ ಅಂಶವೊಂದು ನನ್ನಲ್ಲಿಯೂ ಇದೆ ಎಂದು ನನಗನ್ನಿಸುತ್ತದೆ.

 

ನಿಮ್ಮ ಮದುವೆ ಹೇಗೆ ನೆರವೇರಿತು? ನೀವು ನಾಯರ್ ಸಂಪ್ರದಾಯದಂತೆ ಮದುವೆಯಾದಿರಿ, ಅಲ್ಲವೇ?

ಹೌದು, ನಾವು ನಾಯರ್ ಸಂಪ್ರದಾಯದಂತೆ ಮದುವೆಯಾದೆವು. ನಮ್ಮಿಬ್ಬರ ಕುಟುಂಬಗಳಲ್ಲಿಯೂ ಬಹಳ ದಿನಗಳಾದನಂತರ ಆದ ಮೊದಲ ಮದುವೆ ಅದು. ನನ್ನ ದೊಡ್ಡಕ್ಕನ ಮದುವೆಗೆ ನನ್ನಮ್ಮ ಎಲ್ಲವನ್ನೂ ಸಿದ್ದವಾಗಿಟ್ಟುಕೊಂಡಿದ್ದಳು. ಆದರೆ ಆ ಸಮಯದಲ್ಲಿ ಅವಳ ಮೈದುನನೊಬ್ಬ ತೀರಿ ಹೋದ. ಬೀಗರು ಯಾವುದೇ ಕಾರಣಕ್ಕೂ ಮದುವೆಯ ದಿನಾಂಕ ಬದಲಾಯಿಸಲು ಒಪ್ಪಲಿಲ್ಲ. ಹಾಗಾಗಿ ನನ್ನಕ್ಕಳ ಮದುವೆ ಬಹಳ ಸರಳವಾಗಿ ಆಯಿತು. ಇವತ್ತಿನ ಲೆಕ್ಕದಲ್ಲಿ ಹೇಳಬೇಕೆಂದರೆ ನನ್ನ ಮದುವೆಯೂ ಸರಳವಾಗಿತ್ತು. ಆಗಿನ ಕಾಲದಲ್ಲಿ ಮದುವೆಗಳು ಮನೆಯ ಅಂಗಳದಲ್ಲಿಯೇ ಮದುವೆಗೆಂದೇ ಹಾಕಿ ಶೃಂಗರಿಸಿದ ಚಪ್ಪರದ ಕೆಳಗೆ ಆಗುತ್ತಿದ್ದವು. ಬಹಳ ಜನ, ವಿಶೇಷವಾಗಿ ನನ್ನ ಗಂಡನ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಬಂದಿದ್ದರು. ಆವತ್ತು ಅವರ ಸ್ನೇಹಿತನೊಬ್ಬ ಇಪ್ಪತ್ತೈದು ರೂಪಾಯಿಗಳ ಮುಯ್ಯಿ ಕೊಟ್ಟರು. ಅದು ಬಹಳ ಪ್ರಾಮಾಣಿಕವಾದ ಉಡುಗೊರೆ ಆಗಿತ್ತು ಮತ್ತು ನಮಗೆ ಅದರಿಂದ ಸಂತೋಷವೂ ಆಗಿತ್ತು. ಆದರೂ, ದುಡ್ಡು ಅಥವ ಅದಿಲ್ಲದೇ ಇರುವುದು ನಮ್ಮನ್ನು ಆಗ ಹೆಚ್ಚಿಗೆ ಕಾಡುತ್ತಿರಲಿಲ್ಲ. ಹೇಳಬೇಕೆಂದರೆ ದುಡ್ಡು ನಮಗಾಗ ಆದ್ಯತೆಯ ವಿಷಯ ಖಂಡಿತ ಆಗಿರಲಿಲ್ಲ. ನಾವು ಮಧ್ಯಮವರ್ಗದ ಹಿನ್ನೆಲೆಯಿಂದ ಬಂದಿದ್ದೆವು ಮತ್ತು ನಮ್ಮ ಅಗತ್ಯಗಳೂ ಬಹಳ ಕಡಿಮೆಯಿದ್ದವು.

 

ಮದುವೆ ಆದಾಗ ನಿಮಗೆ ಹೇಗೆ ಅನ್ನಿಸಿತು ಎಂದು ನಿಮಗೆ ನೆನಪಿದೆಯೆ?

ನನ್ನ ದೊಡ್ಡಕ್ಕಳಿಗೆ ಮದುವೆ ಆದಾಗ ನಾನು ಬಹಳ ಅತ್ತಿದ್ದೆ. ನಮ್ಮ ಕುಟುಂಬ ವಿಭಾಗವಾಗುತ್ತದೆ ಎಂದು ಬಹುಶಃ ಆಗ ನಾನು ಭಯಪಟ್ಟಿರಬೇಕು. ನನ್ನ ಮದುವೆಯ ಹಿಂದಿನ ರಾತ್ರಿ ನನಗೆ ನಿದ್ದೆ ಬರಲಿಲ್ಲ. “ಇದು ಸರಿಹೋಗಲಿಲ್ಲ ಎಂದರೆ ಹೇಗೆ” ಎನ್ನುವಂತಹ ವಿಷಯಗಳ ಬಗ್ಗೆ ನಾನು ಭಯಪಟ್ಟಿದ್ದೆ ಎಂದು ನನಗನ್ನಿಸುವುದಿಲ್ಲ. ಆ ತರಹದ ಯೋಚನೆಗಳು ಬರಲೇ ಇಲ್ಲ. ಆದರೂ ಬಹಳ ಅತ್ತೆ. ಬಹುಶಃ ನನ್ನ ತಂದೆಯ ಮತ್ತು ಚಿಕ್ಕಕ್ಕಳ ನೆನಪಾಗಿರಬೇಕು. ಆ ಸಮಯದಲ್ಲಿ ನನ್ನ ಸ್ನೇಹಿತೆಯೊಬ್ಬಳು ಜೊತೆಗೆ ಇದ್ದಳು. ಆಕೆ ಬಹಳ ಧೈರ್ಯ ಮತ್ತು ಒತ್ತಾಸೆ ಕೊಟ್ಟಳು.

 

ನೀವು ದೆಹಲಿಗೆ ಹೋದಾಗ…

ನಾನು ದೆಹಲಿಗೆ ಹೋಗುವಷ್ಟೊತ್ತಿಗೆಲ್ಲ ಆ ನಗರದ ಬಗೆಗಿನ ನನ್ನ ಭಯ ಹೊರಟುಹೋಗಿತ್ತು. ಆರಂಭದಲ್ಲಿ ನಮ್ಮ ಕುಟುಂಬದವರಂತೆಯೇ ಇದ್ದ ಸ್ನೇಹಿತರ ಜೊತೆಯಲ್ಲಿ ಉಳಿದುಕೊಂಡಿದ್ದೆ. ಕ್ರಿಸ್ಪಿ ಎಂದು ಕರೆಸಿಕೊಳ್ಳುತ್ತಿದ್ದ ನನ್ನ ಗಂಡನ ಹಳೆಯ ಸಹಪಾಠಿಯೂ ಅತ್ಯಾಪ್ತ ಸ್ನೇಹಿತನೂ ಆಗಿದ್ದವರೊಬ್ಬರಿದ್ದರು. ಕ್ರಿಸ್ಪಿ ಆಗ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದರು. ನನ್ನನ್ನು ಆದರದಿಂದ ಬರಮಾಡಿಕೊಂಡ ಸ್ನೇಹಿತರೊಬ್ಬರ ಜೊತೆಯಲ್ಲಿ ಉಳಿದುಕೊಳ್ಳಲು ಅವರೇ ನನಗೆ ಸಲಹೆ ಕೊಟ್ಟಿದ್ದು. ಆ ಮನೆಯ ಯಜಮಾನ ಸಹ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಉಳಿದುಕೊಂಡಿರುವಾಗಲೇ ನಾನು ದಕ್ಷಿಣ ಪಟೇಲ್ ನಗರದಲ್ಲಿ ಒಂದು ಮನೆ ಹುಡುಕಿಕೊಂಡೆ. ಅದು ಮುಖ್ಯರಸ್ತೆಗೆ ಮುಖ ಮಾಡಿದ್ದ ದೊಡ್ಡ ಕಟ್ಟಡಗಳೊಂದರಲ್ಲಿ ಇತ್ತು. ನಾನು ನೋಡಿದ ಮನೆ ಗ್ಯಾರೇಜಿನ ಮೇಲೆ ಇತ್ತು. ಮುಖ್ಯ ಕಟ್ಟಡದ ನೆಲಮಹಡಿಯಲ್ಲಿ ನನ್‌ಗಳು ನಡೆಸುತ್ತಿದ್ದ ಶಾಲೆ ಇತ್ತು. ಆ ಕಟ್ಟಡದ ಮಾಲೀಕ ಪ್ರೀತಿಯ ಮತ್ತು ಅಂತಃಕರಣದ ಸರ್ದಾರ್ಜಿ ಆಗಿದ್ದ. ನನ್ನ ಗಂಡ ಮತ್ತು ಮಗಳು ಅಲ್ಲಿಗೆ ನನ್ನ ಜೊತೆಗೂಡಲು ಬಂದಾಗ ನನ್ನ ತಾಯಿ ಅವರೊಂದಿಗೆ ಅಡಿಗೆ ಮನೆಗೆ ಬೇಕಾದ ಪ್ರತಿಯೊಂದನ್ನೂ, ಮೂರು ತಿಂಗಳಿಗೆ ಸಾಕಾಗುವಷ್ಟು ಅಡಿಗೆ ಪದಾರ್ಥಗಳ ಸಹಿತವಾಗಿ ಕಳುಹಿಸಿದ್ದರು!

 

ಸಣ್ಣ ಮಗುವನ್ನಿಟ್ಟುಕೊಂಡು ಕೆಲಸಕ್ಕೆ ಹೋಗುವುದು ಹೇಗಿತ್ತು?

ಬಹಳ ಸಮಯದ ಕಾಲ ನನಗೆ ಸಹಾಯ ಮಾಡಲು ಕೇರಳದ ಮಧ್ಯವಯಸ್ಸಿನ ಅಥವ ಯುವವಯಸ್ಸಿನ ಯಾವುದಾದರೂ ಹೆಂಗಸನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಿದ್ದೆ. ಮನೆಕೆಲಸ ಮಾಡಲು ನನಗೆ ಯಾವುದೇ ಹಿಂಜರಿಕೆಗಳಿರಲಿಲ್ಲ. ಹಾಗಾಗಿ ಮನೆಯಲ್ಲಿ ಕೆಲಸಕ್ಕಿರುತ್ತಿದ್ದವರಿಗೆ ಹೆಣಿಗೆ ಹಾಕುವ, ನನ್ನ ಕಾಗದ ಪತ್ರಗಳನ್ನು ವ್ಯವಸ್ಥಿತವಾಗಿ ಜೋಡಿಸುವಂತಹ ಕೆಲಸಗಳನ್ನು ಕಲಿಸುತ್ತ, ನನ್ನ ಮಗಳೊಂದಿಗೆ ಸಮಯ ಕಳೆಯುವಂತೆ ಮಾಡುತ್ತಿದ್ದೆ. ನನ್ನ ಮಗಳ ವಯಸ್ಸಿನದೇ ಮಗನಿದ್ದ ಸ್ನೇಹಿತೆಯೊಬ್ಬಳಿದ್ದಳು. ಆಕೆ ಎರಡೂ ಮಕ್ಕಳನ್ನೂ, ನಮ್ಮ ಮನೆಕೆಲಸದ ಆಯಾಳನ್ನೂ ಉದ್ಯಾನವನಕ್ಕೆ ಕರೆದುಕೊಂಡು ಹೋಗುತ್ತಿದ್ದಳು.

ನಿಮಗೆ ಒಂದು ವಿಷಯ ಹೇಳಲೇಬೇಕು. ನಾನು ದೆಹಲಿಗೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡು ಹೋಗಿದ್ದೆ. ಅಲ್ಲಿ ಯೋಜನಾ ಆಯೋಗದ saradamoni-4ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಯೋಜನಾ ವಿಭಾಗದಲ್ಲಿ ಕೆಲಸಕ್ಕೆ ಸೇರಿದೆ, ಆಗಿನ ಕಾಲದಲ್ಲಿ ಕಂಪ್ಯೂಟರ್‌ಗಳಾಗಲಿ ಕ್ಯಾಲ್ಕುಲೇಟರ್‌ಗಳಾಗಲಿ ಇರಲಿಲ್ಲ. ಆದರೆ ಕೈಯಿಂದ ಚಾಲನೆ ಮಾಡುವ ಯಂತ್ರವೊಂದರ ಉಪಯೋಗವನ್ನು ತೆಗೆದುಕೊಳ್ಳುತ್ತಿದ್ದರು. ಪ್ರತಿಯೊಬ್ಬರ ಟೇಬಲ್ ಮೇಲೂ ಅಷ್ಟಗಲಕ್ಕೂ ತುಂಬಿದ ದೊಡ್ಡ ಹಾಳೆಯೊಂದು ಇರುತ್ತಿತ್ತು ಮತ್ತು ಆ ಯಂತ್ರದ ಮೂಲಕ ಪಡೆದುಕೊಂಡ ಅಂಕಿಅಂಶಗಳನ್ನು ಆ ಹಾಳೆಯಲ್ಲಿ ತುಂಬಲಾಗುತ್ತಿತ್ತು. ಅವರು ಏನು ಮಾಡುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗಲಿಲ್ಲ. ಅಷ್ಟು ದೂರದ ಕೇರಳದಿಂದ ಆ ಕೆಲಸ ಮಾಡಲು ನಾನು ಬಂದಿರಲಿಲ್ಲ. ಅದೃಷ್ಟವಷಾತ್, ಯೋಜನಾ ಆಯೋಗದ ನೆಲಮಹಡಿಯಲ್ಲಿ ಒಂದು ದೊಡ್ಡ ಗ್ರಂಥಾಲಯ ಇತ್ತು. ಯೋಜನಾ ವಿಷಯಕ್ಕೆ ಸಂಬಂಧಿಸಿದವು ಎಂದು ನಾನು ಭಾವಿಸಿದ ಅನೇಕ ವಿಷಯಗಳಿಗೆ ಸಂಬಂಧಿಸಿದ ಅನೇಕ ಪುಸ್ತಕಗಳು ಅಲ್ಲಿದ್ದವು. ನನ್ನಂತೆಯೇ ಭ್ರಮನಿರಸನರಾಗಿದ್ದ ಹಲವರನ್ನು ಅಲ್ಲಿ ಭೇಟಿ ಆದೆ. ಜೊತೆಗೆ, ಯೋಜನಾ ಆಯೋಗದಲ್ಲಿ ಭಾರತೀಯ ಕಾಫಿ ಹೌಸ್‌ನ ಕಾಫಿ ಶಾಪ್ ಸಹ ಇತ್ತು.

ನನ್ನ ನಿರಾಶೆ, ಅತೃಪ್ತಿ ಮತ್ತು ಅಹಿತಕರ ಅನುಭವಗಳ ನಡುವೆಯೂ ಉದ್ದಿಮೆಗಳು ಸ್ಥಾಪನೆಯಾಗಿರುವ ಸ್ಥಳಗಳು, ಅಲ್ಲಿಯ ನೌಕರಿ, ಸಂಬಳ, ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಗಳನ್ನು ಬಳಸಿ ರಾಜ್ಯಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಕೆಲಸ ಮಾಡಲು ಆರಂಭಿಸಿದೆ. ಅದರ ಬಗ್ಗೆ ಕೆಲವು ವರದಿಗಳನ್ನೂ ಪ್ರಕಟಿಸಿದೆ. ಅದು ನಾನಾಗಿಯೇ ನನಗಾಗಿ ಸೃಷ್ಟಿಸಿಕೊಂಡ ಕೆಲಸ. ಆದರೆ ನಾನು ದೆಹಲಿಗೆ ಬಂದಿದ್ದು ಅದಕ್ಕಾಗಿ ಅಲ್ಲ, ನನ್ನ ನಿರಾಶೆಯ ಪರಿಣಾಮಗಳನ್ನು ಮತ್ತು ಅದರಿಂದ ಉಂಟಾಗುತ್ತಿದ್ದ ಒತ್ತಡಗಳನ್ನು ನನ್ನ ಕುಟುಂಬ ಭರಿಸಬೇಕಾಗಿ ಬರುತ್ತಿತ್ತು. ನನ್ನ ಮಕ್ಕಳು ಅದರ ಬಗ್ಗೆ ನನಗೆ ಬಹಳ ಸಲ, “ಅಮ್ಮ, ಆ ದಿನಗಳಲ್ಲಿ ನೀನು ನಮಗೆ ನರಕ ತೋರಿಸಿದ್ದೀಯ. ಈಗ, ನಮಗೇನಾದರೂ ಸಮಸ್ಯೆ ಆದಾಗ ನೀನ್ಯಾಕೆ ನಮ್ಮ ಮಾತು ಕೇಳುವುದಿಲ್ಲ?” ಎಂದು ಹೇಳಿದ್ದಾರೆ. (ನಗು)

 

ನಿಮ್ಮ ಗಂಡ?

ಅವರು ಯಾವಾಗಲೂ ತಾಳ್ಮೆಯಿಂದ ಇರುತ್ತಿದ್ದರು. ಅವರನ್ನು ಯಾವಾಗಲೂ ನಾವು ತಮ್ಮ ತಪ್ಪೊಪ್ಪಿಗೆ ಒಪ್ಪಿಸಲು ಜನ ಯಾರ ಬಳಿಗೆ ಬರುತ್ತಾರೋ ಆ ಪಾದ್ರಿ ಇವರು ಎಂದು ತಮಾಷೆ ಮಾಡುತ್ತಿದ್ದೆವು. ನನ್ನ ಪ್ರಕ್ಷುಬ್ಧ ಮನಸ್ಥಿತಿಯನ್ನು ಅವರು ಅನುಮೋದಿಸುತ್ತಿದ್ದರು ಎಂದು ನಾನು ಹೇಳಲಾರೆ. ನನಗೆ ಎದುರು ವಾದಿಸಬಾರದೆಂದು ಅಚ್ಚನ್ (ಅಪ್ಪ) ಅವರಿಗೆ ಹೇಳುತ್ತಿದ್ದರೆಂದು ಮಕ್ಕಳು ನನಗೆ ಹೇಳಿದ್ದರು. “ನಿಮ್ಮಮ್ಮನದೇ ತಪ್ಪಿದ್ದರೂ ನೀವು ಎದುರು ವಾದಿಸಬಾರದು.” ಅವರು ಹಾಗೇಕೆ ಮಾಡಿದರು? ನನ್ನ ಸಮಸ್ಯೆಗಳನ್ನು ನಾನು ನನ್ನದೇ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕು ಎನ್ನುವುದು ಅವರ ಉದ್ದೇಶವಾಗಿತ್ತು ಎನ್ನಿಸುತ್ತದೆ.

 

ಎಷ್ಟೊಂದು ಅಪ್ಯಾಯಮಾನದ ವಿಷಯ. ಅಂದರೆ ಅವರು ನಿಮಗೆ ಗೋಡೆಯ ರೀತಿ ರಕ್ಷಣೆ ನೀಡುತ್ತಿದ್ದರು?

ಯಾವಾಗಲೂ ಜಗಳ ಆಡುವ, ಚಿಕ್ಕಪುಟ್ಟದ್ದಕ್ಕೆಲ್ಲ ಸಿಡಿಮಿಡಿಗೊಳ್ಳುವ ಅನೇಕ ಗಂಡಸರಿದ್ದಾರೆ. ನನ್ನ ಗಂಡ ಮುಂಗೋಪದ ವ್ಯಕ್ತಿ ಎಂದು ಅವರ ಸೋದರಿಯರು ನನಗೆ ನಮ್ಮ ಮದುವೆಗೆ ಮುಂಚೆ ಹೇಳಿದ್ದರು. ಆದರೆ ನನಗೆ ಗೊತ್ತಿದ್ದಷ್ಟು ಕಾಲವೂ ಮನೆಯಲ್ಲಾಗಲಿ ಹೊರಗಡೆ ಆಗಲಿ ಅವರು ಹಾಗೆ ವರ್ತಿಸಿದ್ದನ್ನು ನಾನು ಕಾಣಲಿಲ್ಲ. ಅವರು ಬಹಳ ಶಿಸ್ತಿನ ಮನುಷ್ಯರಾಗಿದ್ದರು.

 

ಆ ತರಹದ ಜೊತೆಗಾರ ಇದ್ದದ್ದು ನಿಮಗೆ ಬಹಳ ಸಹಾಯ ಮಾಡಿರಬೇಕು, ಅದರಲ್ಲೂ ವಿಶೇಷವಾಗಿ ನೀವು ತೊಂದರೆಯಲ್ಲಿ ಇದ್ದಾಗ?

ನಾನು ಪಡೆದುಕೊಂಡದ್ದು ವಿಶೇಷವಾದದ್ದು ಎಂದು ನನಗೆ ಆಗ ಅರಿವಾಗಿರಲಿಲ್ಲ. ಅದು ಬಹಳ ಸ್ವಾಭಾವಿಕವಾದದ್ದು ಎಂದೇ ನಾನು ಭಾವಿಸಿದ್ದೆ. ಆದರೆ ಅವರು ತೀರಿಕೊಂಡ ನಂತರ, ಒಬ್ಬ ಹೆಣ್ಣು ಮಾಡಬಹುದಾದ ಬಹಳಷ್ಟನ್ನು ಅವರು ಮಾಡಿದ್ದಾರೆ ಎಂದು ಆಗಾಗ ಅಂದುಕೊಂಡಿದ್ದೇನೆ. ಬಹುತೇಕ ವೈವಾಹಿಕಸಂಬಂಧಗಳಲ್ಲಿ ಹೆಣ್ಣು ಬಹಳ ತ್ಯಾಗ ಮಾಡುತ್ತಾಳೆ. ಕೆಲಸಕ್ಕೆ ಸೇರುವ ಬಹಳ ದಂಪತಿಗಳನ್ನು, ಅದರಲ್ಲೂ ಒಂದೇ ಕಚೇರಿಯಲ್ಲಿ ಒಂದೇ ಹಂತದಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ಅನೇಕ ದಂಪತಿಗಳನ್ನು ನಾನು ಬಲ್ಲೆ. ಆದರೆ ಅವರು ನಿವೃತ್ತಿಯಾಗುವಷ್ಟೊತ್ತಿಗೆ ಗಂಡ ಹೆಂಡತಿಗಿಂತ ಹಲವು ಪಟ್ಟು ಮೇಲೆ ಏರಿರುತ್ತಾನೆ. ಕುಟುಂಬದ ಜವಾಬ್ದಾರಿಯನ್ನು ಹೊರುವಲ್ಲಿ ಹೆಣ್ಣು ಕೊಡುವ ಬೆಂಬಲ ಅನೇಕ ಸಂದರ್ಭಗಳಲ್ಲಿ ಗಣನೆಗೇ ಬರುವುದಿಲ್ಲ. ಬ್ಯಾಂಕುಗಳಲ್ಲಿ ಕೆಲಸ ಮಾಡುವ ಬಹಳ ಹೆಂಗಸರು ಕೌಟುಂಬಿಕ ಜವಾಬ್ದಾರಿಗಳ ಕಾರಣಕ್ಕಾಗಿ ಮತ್ತು ಮಕ್ಕಳ ಓದಿನ ಸಲುವಾಗಿ ಬಡ್ತಿಯನ್ನು ನಿರಾಕರಿಸುತ್ತಾರೆ. ಅವರಿಗೆ ವರ್ಗಾವಣೆಯ ಭಯವೂ ಇರುತ್ತದೆ.

 

ಅಂದರೆ ಈಗ ಹಿಂದಿರುಗಿ ನೋಡಿದಾಗ ಸಾಮಾನ್ಯವಾಗಿ ಹೆಂಗಸರು ಕುಟುಂಬಕ್ಕಾಗಿ ಮಾಡುವ ಬಹಳಷ್ಟನ್ನು ನಿಮ್ಮ ಗಂಡ ಮಾಡಿದ್ದಾರೆ ಎನ್ನುವುದು ನಿಮಗೆ ಅರಿವಾಗುತ್ತದೆ.

ಹೌದು, ಹಾಗನ್ನಿಸುತ್ತದೆ. ಅವರು ಎಂದೂ ಯಾವುದಕ್ಕೂ ಆಕ್ಷೇಪಣೆ ಮಾಡಲಿಲ್ಲ. ಅವರೊಬ್ಬ ಅದ್ವಿತೀಯ ವ್ಯಕ್ತಿ ಎಂದು ಹೇಳಲಾರೆ. ಹೆಂಗಸರಿಗೆ ನೈಜವಾದ ಸ್ವಾತಂತ್ರ್ಯ ಕೊಟ್ಟು ಅವರನ್ನು ತಮಗೆ ಸಮವಾಗಿ ಭಾವಿಸಿದ ಗಂಡಸರು ಇದ್ದರು ಮತ್ತು ಈಗಲೂ ಇದ್ದಾರೆ. ಆದರೆ ಅವರು ಬಹುಸಂಖ್ಯಾತರಲ್ಲ.

 

ಅದು ಒಂದಾನೊಂದು ಕಾಲದಲ್ಲಿ ಇತ್ತು. ಜನ ಈಗ ಬದಲಾಗಿದ್ದಾರೆ. ಹೆಂಗಸರಿಗೆ ಎಷ್ಟೊಂದು ಬೆಂಬಲ ಮತ್ತು ಪ್ರೀತಿ ಅವರ ಗಂಡಸರಿಂದ ಸಿಕ್ಕಿತು ಎನ್ನುವುದು ಬಹಳ ಆಸಕ್ತಿದಾಯಕವಾದದ್ದು. ಅದು ಸಹಜವಾಗಿ ಇದ್ದದ್ದೇ ಎಂದು ಹಲವು ಸಂದರ್ಭಗಳಲ್ಲಿ ಭಾವಿಸಿದ್ದಿದೆ. ನಾನು ಮಾತನಾಡಿಸಿದ ಅನೇಕರು ಇದನ್ನು ಪ್ರಸ್ತಾಪಿಸಿದ್ದಾರೆ. ನೀವು ಹೇಳುತ್ತಿದ್ದಿರಿ ಅವರೊಬ್ಬ ಬಹುಶ್ರುತ ಓದುಗ, ಸಿನೆಮಾಗಳನ್ನು ಇಷ್ಟಪಡುತ್ತಿದ್ದರು, ಅನೇಕ ವಿಷಯಗಳಲ್ಲಿ ಆಸಕ್ತಿ ಇತ್ತು ಎಂದು. ಅಂದರೆ ಅವರು ಅದೆಲ್ಲವನ್ನು ನಿಮ್ಮ ಜೀವನಕ್ಕೂ ತಂದರೇ? ನೀವು ಹಂಚಿಕೊಂಡಿದ್ದರಲ್ಲಿ ಅದೂ ಇತ್ತು.

ಅದು ನಿಜ, ಮತ್ತು ಆ ರೀತಿಯ ಮಾನವ ಸಂಬಂಧಗಳು ಇದ್ದವು ಎನ್ನುವುದರ ಬಗ್ಗೆ ನಾವು ಸಂತೋಷಪಡಬೇಕು. ಆದರೆ ಎಲ್ಲಾ ತರಹದ ಬಂಧಗಳಲ್ಲಿ ಇರುವ ಹಾಗೆ, ಗಂಡು-ಹೆಣ್ಣಿನ ಸಂಬಂಧದಲ್ಲೂ ಆ ರೀತಿಯ ಆತ್ಮೀಯತೆ, ಸಹಭಾಗಿತ್ವ ಮತ್ತು ಬೆಂಬಲ ಹಾಳಾಗಿ ಹೋಗಿದೆ. ವಿವಾಹವೆಂಬ ಸಂಸ್ಥೆಯಲ್ಲೂ ಸಹ. ಅ ಲೇಖನವೇನಾದರೂ ಸಿಕ್ಕಿದರೆ ನಿಮಗೆ ಕೊಡುತ್ತೇನೆ. ಅದು ನನ್ನ ಗಂಡನ ಮರಣಾನಂತರ ದೆಹಲಿಯ ನಮ್ಮ ನೆರೆಮನೆಯಾಕೆ ಬರೆದದ್ದು. ಅದು Mainstream ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

 

ಮನೆಯಲ್ಲಿ ನಿಯಮಿತವಾಗಿ ರಾಜಕೀಯ ಚರ್ಚೆಗಳು ನಡೆಯುತ್ತಿದ್ದವೆ?

ನನ್ನ ಹೆಣ್ಣುಮಕ್ಕಳು ಯಾವಾಗಲೂ ಮಾಡುತ್ತಿದ್ದ ಆಕ್ಷೇಪಣೆ ಏನೆಂದರೆ ನಾನು ಬೆಳಗ್ಗೆ ನಾಲ್ಕಕ್ಕೆ ಎದ್ದು ಚರ್ಚೆ ಆರಂಭಿಸುತ್ತಿದ್ದೆ ಮತ್ತು ಅವರಿಗೆ ನಿದ್ದೆ ಮಾಡಲು ಬಿಡುತ್ತಿರಲಿಲ್ಲ ಎನ್ನುವುದು. ಅವರಿಗೆ ಅವರ ಅಪ್ಪನ ಸ್ವರ ಕೇಳಿಸುತ್ತಿರಲಿಲ್ಲ! ನಿಜ, ನಾವಿಬ್ಬರೂ ಬೇಗನೆ ಎದ್ದು ಎಲ್ಲಾ ತರಹದ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೆವು. ವಿಷಯಗಳನ್ನು ಹಂಚಿಕೊಳ್ಳುವುದರಲ್ಲಿ ನಾನು ಖುಷಿ ಪಡುತ್ತಿದ್ದೆ. ಅದು ಯಾವುದೋ ಹಳೆಯ ಸ್ನೇಹಿತರನ್ನು ಆಕಸ್ಮಿಕವಾಗಿ ಭೇಟಿಯಾದದ್ದಿರಬಹುದು, ಓದಿದ ಒಳ್ಳೆಯ ಪುಸ್ತಕ ಇರಬಹುದು, ಸಾಂಸ್ಕೃತಿಕ ಕಾರ್ಯಕ್ರಮ ಇರಬಹುದು, ಮತ್ತು ದೇಶ ಹೇಗೆ ಹೋಗುತ್ತಿದೆ ಎನ್ನುವ ರಾಜಕೀಯದ ವಿಷಯ ಇರಬಹುದು. ದೂರದರ್ಶನ ನೋಡುತ್ತಿರುವಾಗಲೂ ನಾನು ಪ್ರತಿಕ್ರಿಯಿಸುತ್ತಿರುತ್ತೇನೆ. ನಾನು ರಾಜಕೀಯದ ಬಗೆಗಿನ ಅತೀವ ಆಸಕ್ತಿಯನ್ನು ಬಿಟ್ಟುಬಿಟ್ಟು ಹಗುರವಾದ ವಿಷಯಗಳ ಬಗ್ಗೆ ಮಾತನಾಡಲು ಮತ್ತು ಹೆಚ್ಚಿಗೆ ನಗಲು ಈಗ ನನ್ನ ಮಕ್ಕಳು ಹೇಳುತ್ತಿರುತ್ತಾರೆ.

 

ಮನೆಯಲ್ಲಿ ಚರ್ಚೆಯಾಗುತ್ತಿದ್ದ ಎಲ್ಲಾ ವಿಷಯಗಳೂ ರಾಜಕೀಯಕ್ಕೆ ಸಂಬಂಧಿಸಿದವೇ ಆಗಿದ್ದವೇ? ಆಕಸ್ಮಿಕವಾಗಿ ಮನೆಗೆ ಭೇಟಿಕೊಡುತ್ತಿದ್ದ ಸಂದರ್ಶಕರಿರಲಿಲ್ಲವೆ? ಸ್ನೇಹಿತರು?

ನಾವು ದೆಹಲಿಗೆ ಬಂದಾಗ ನನಗೆ ಉದ್ಯೋಗ ಇತ್ತು. ಆದರೆ ನನ್ನ ಗಂಡನ ವಿಚಾರಕ್ಕೆ ಹಾಗಿರಲಿಲ್ಲ. ಆರಂಭದಲ್ಲಿ ಅವರ ಸ್ನೇಹಿತರೊಬ್ಬರು ಇವರಿಗೆ ಬರಹಗಳನ್ನು ಸಂಪಾದಿಸುವ ಅಥವ ಅನುವಾದಿಸುವ ಕೆಲಸ ಕೊಟ್ಟು ಸಹಾಯ ಮಾಡುತ್ತಿದ್ದರು. ಅದರಿಂದ ಅವರಿಗೆ ಸ್ವಲ್ಪ ಹಣ ಸಿಗುತ್ತಿತ್ತು. ಪತ್ರಕರ್ತನಾಗಲು ಅವರೊಂದಿಗೆ ಕಲ್ಕತ್ತಾಗೆ ಹೋಗಿದ್ದ ಸ್ನೇಹಿತ ಆಗ ದೆಹಲಿಯಲ್ಲಿ ಇದ್ದ, ಆ ಸ್ನೇಹಿತ ಒಳ್ಳೆಯ ಪತ್ರಕರ್ತರಾಗಿದ್ದರು. ಆದರೆ ಜೀವನಪೂರ್ತಿ ಅವರು “ಕಾರ್ಯನಿರತ ಪತ್ರಕರ್ತ”ನ ಹಕ್ಕುಗಳಿಗಾಗಿ ಹೋರಾಡಿದರು. ಇವತ್ತಿನ ಮಾಧ್ಯಮವ್ಯಕ್ತಿಗಳಿಗೆ ಹೋಲಿಸಿದರೆ ಅವರು ಖಂಡಿತವಾಗಿ ವಿಭಿನ್ನ ವ್ಯಕ್ತಿ. ಕಾರ್ಯನಿರತ ಪತ್ರಕರ್ತರಿಗೆ ಇದ್ದ ಕನಿಷ್ಟ ವೇತನವನ್ನು ಪಡೆಯಲೂ ಆಗ ಬಹಳ ಕಷ್ಟಪಡಬೇಕಿತ್ತು. ಆ ಸಮಯದಲ್ಲಿ Link ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ C.N. ಚಿತ್ತರಂಜನ್‌ರವರು Link ಗುಂಪಿನವರು ಆರಂಭಿಸುತ್ತಿದ್ದ The Patriot ಪತ್ರಿಕೆ ಸೇರಿಕೊಳ್ಳಲು ನನ್ನ ಗಂಡನಿಗೆ ಹೇಳಿದರು. ಇವರು ಸೇರಿಕೊಂಡರು.

ನೀವು ಸ್ನೇಹಿತರ ಬಗ್ಗೆ ಕೇಳಿದಿರಿ. ನನ್ನ ಗಂಡನ ದೆಹಲಿಯ ಸ್ನೇಹಿತರು ಅವರು ಕೇರಳದಲ್ಲಿ ಹೊಂದಿದ್ದ ಸ್ನೇಹಿತರಿಗಿಂತ ಭಿನ್ನವಾಗಿದ್ದರು. ದೆಹಲಿ ಬಹಳ ದೊಡ್ಡ ನಗರ. ಒಬ್ಬೊಬ್ಬರೂ ದೂರದೂರದ ಜಾಗಗಳಲ್ಲಿ ವಾಸಿಸುತ್ತಾರೆ. ಪ್ರತಿದಿನವೂ ಭೇಟಿಯಾಗುವುದು ಸುಲಭದ ವಿಷಯ ಅಲ್ಲ. ಅಷ್ಟಾದರೂ ನಮಗೆ ಸ್ನೇಹಿತರಿದ್ದರು. ಆಕಾಶವಾಣಿಯಲ್ಲಿದ್ದ ನಮ್ಮ ಸ್ನೇಹಿತರು ಖಾಯಂ ಆಗಿ ಬರುತ್ತಿದ್ದರು. ಆರಂಭದಲ್ಲಿಯೇ ನಮಗೆ ವಿಶ್ವಪ್ರಿಯ ಎಂಬ ಯುವ ಬೆಂಗಾಲಿ ಪರಿಚಯವಾದರು ಮತ್ತು ಆಪ್ತಸ್ನೇಹಿತರೂ ಆದರು. ಅವರು ರವೀಂದ್ರನಾಥ್ ಠಾಗೂರರ ಅಧಿಕೃತ ಆತ್ಮಚರಿತ್ರಕಾರರ ಮಗ. ನಾವು ಅವರ ಪೋಷಕರನ್ನು ದೆಹಲಿಯಲ್ಲಿ ಭೇಟಿ ಆದೆವು ಮತ್ತು ಅವರ ಭೋಳೇಪುರದಲ್ಲಿಯ ಮನೆಗೂ ಭೇಟಿ ಕೊಟ್ಟೆವು. ಬಹುತೇಕ ಭಾನುವಾರಗಳಂದು ಅವರು ನಮ್ಮ ಮನೆಗೆ ತಡವಾದ ಬೆಳಗಿನ ತಿಂಡಿಗೆ ಹಾಜರಾಗುತ್ತಿದ್ದರು. ನನ್ನ ಮಗಳನ್ನು ಉದ್ಯಾನವನಕ್ಕೆ ಕರೆದುಕೊಂಡು ಹೋಗುತ್ತಿದ್ದ ಸ್ನೇಹಿತೆಯೂ ನಮ್ಮನ್ನು ಕೂಡಿಕೊಳ್ಳುತ್ತಿದ್ದಳು. ವಿಶ್ವಪ್ರಿಯ ಮಲಯಾಳಮ್‌ನ ವಲ್ಲತೋಳ್ ಮತ್ತು ಅಸನ್ ಕಾವ್ಯಗಳನ್ನು ಆನಂದಿಸುತ್ತಿದ್ದರು. ನನ್ನ ಗಂಡ ಅವನ್ನು ಅವರಿಗೆ ಓದುತ್ತಿದ್ದರು. ವಿಶ್ವಪ್ರಿಯರಿಗೆ ಅದು ಅರ್ಥವಾಗುತ್ತಿತ್ತು ಮತ್ತು ಅದರಲ್ಲಿ ಬಹಳಷ್ಟನ್ನು ಆಸ್ವಾದಿಸುತ್ತಿದ್ದರು. ದುರದೃಷ್ಟವಷಾತ್ ಅವರು ಬೇಗನೆ ತೀರಿಕೊಂಡರು.

 

ನಿಮ್ಮ ಜೀವನ ಹೇಗಿತ್ತು? ನೀವು ಗಡಿಬಿಡಿ ಎಂದು ಹೇಳಿದಾಗ ಅದು ನಿಮಗೆ ಕೆಲಸದ ಸ್ಥಳದಲ್ಲಿಯ ಒತ್ತಡವೊ ಅಥವ ಅದು ಮನೆಯಲ್ಲಿಯ ಒತ್ತಡವೊ?

ಮನೆಯಲ್ಲಿ ನನಗೆ ಸಹಾಯ ಮಾಡಲು ಒಬ್ಬರಿದ್ದರು ಎಂದು ನಿಮಗೆ ಹೇಳಿದ್ದೆ. ಆದರೆ ನಾನು ಸೋಮಾರಿ ಅಲ್ಲ ಎಂದು ಹೇಳಲೇಬೇಕು. ನಾನು ಚಿಕ್ಕವಳಾಗಿದ್ದಾಗಲೂ ಅಡಿಗೆ ಕೆಲಸ ಒಂದನ್ನು ಬಿಟ್ಟು ಬೇರೆಲ್ಲ ಕೆಲಸ ಮಾಡುತ್ತಿದ್ದೆ. ಕೆಲಸದಿಂದ ಮನೆಗೆ ಬಂದ ತಕ್ಷಣ ಚಹಾ ಬೇಕಾಗಿದ್ದ ಅನೇಕ ಸ್ನೇಹಿತರು ದೆಹಲಿಯಲ್ಲಿದ್ದರು. ನನಗೆ ಆ ರೀತಿಯ ಅಗತ್ಯಗಳಿರಲಿಲ್ಲ. ಬಹುಶಃ ನನಗೆ ಉಬ್ಬಿಕೊಂಡ ಆತ್ಮವಿಶ್ವಾಸ ಇತ್ತು ಎನ್ನಿಸುತ್ತದೆ.

ಜೊತೆಗೆ ನನ್ನ ನೌಕರಿ ಎನ್ನುವುದು ಮನೆಯ ಹೊರಗೆ ಸಂಬಂಧಿಸಿದ ಉದ್ಯೋಗ ಎಂಬ ಭಾವನೆ ನನಗಿರಲಿಲ್ಲ. ನನ್ನ ಮಕ್ಕಳು ನನ್ನನ್ನು ನೌಕರಿ ಮಾಡುವ ತಾಯಿಯಾಗಿ ಕಾಣುತ್ತಲೇ ಬೆಳೆದರು. ಕೆಲಸ ಮಾಡುವ ಹೆಂಗಸರು ಮಕ್ಕಳಿಗೆ ಮತ್ತು ಮನೆಗೆ ಅಗತ್ಯವಾಗಿ ಕೊಡಬೇಕಾದ ಗಮನ ಕೊಡುವುದಿಲ್ಲ ಎಂದು ಬಹಳ ಹೆಂಗಸರು ಹೇಳುವುದನ್ನು ಕೇಳಿದ್ದೇನೆ. ಆದರೆ ಅದನ್ನು ನಾನೆಂದೂ ಒಪ್ಪಲಿಲ್ಲ.

 

ನೀವು ಉದ್ಯೋಗವನ್ನು ಬೇರೆ ಎಂದುಕೊಳ್ಳಲಿಲ್ಲ ಮತ್ತು ಅದೇ ಸಮಯದಲ್ಲಿ ಕೆಲಸದಲ್ಲೂ ತೃಪ್ತಿ ಇರಲಿಲ್ಲ. ಆದರೆ ನೀವು ಮನೆಗ ಬಂದಾಗ ಮನೆಯಲ್ಲಿ ಆಗುತ್ತಿದ್ದ ಚರ್ಚೆ, ನಿಮ್ಮ ಗಂಡ ತೊಡಗಿಸಿಕೊಂಡಿದ್ದ ಕೆಲಸಗಳು, ಇತ್ಯಾದಿ, ಇವೆಲ್ಲ ನಿಮಗೆ ಪ್ರೇರಣೆ ನೀಡುತ್ತಿದ್ದವೆ? ಸಾಂತ್ವನ ಕೊಡುತ್ತಿದ್ದವೆ?

ಹೌದು. ಹಿಂದಿರುಗಿ ನೋಡಿದಾಗ ಆ ಸಮಯದಲ್ಲಿ ನಾನು ಜನರ ಮತ್ತು ಸಮಾಜದ ಸಂಕೀರ್ಣತೆಗಳ ಬಗ್ಗೆ ಸಂಪೂರ್ಣವಾಗಿ ಅಜ್ಞಾನಿಯಾಗಿದ್ದೆ ಎನ್ನಿಸುತ್ತದೆ. ಈಗ ಆ ವಿಷಯದಲ್ಲಿ ಎಲ್ಲಾ ತಿಳಿದುಕೊಂಡಿದ್ದೇನೆ ಅಂತಲ್ಲ. ಮಾತನಾಡೋದಿಕ್ಕೆ ಅಂತ ಒಂದು ಜಾಗ ಮತ್ತು ಜನ ಇರುವುದು ಒಳ್ಳೆಯದು. ಆದರೂ ನಾನು ಮಕ್ಕಳನ್ನು ಅಷ್ಟು ಕಾಡಿಸಬಾರದಿತ್ತು ಎಂದು ಆಶಿಸುತ್ತೇನೆ. ಆ ಸಮಯದಲ್ಲಿ ನನಗೆ ಅರ್ಥವಾಗದ ಇನ್ನೊಂದು ಬೆಳವಣಿಗೆ ಆಯಿತು. ಭಾರತ ಸರ್ಕಾರದ ಯೋಜನೆಗಳು ಮತ್ತು ನಾನು ಕೆಲಸ ಮಾಡುತ್ತಿದ್ದ ISI ನಲ್ಲಿ ಕೆಲವು ಕಾರ್ಯವೈಖರಿಗಳು ಮತ್ತು ನೀತಿಗಳು ಬದಲಾವಣೆಗೊಳಪಡುತ್ತಿದ್ದ ಸಮಯ ಅದು. ಏನೇ ಇರಲಿ, ನಾನು ನನ್ನ ಮೊದಲ ಸಂಶೋಧನಾ ಪದವಿ ಪಡೆದ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ. ಪದವಿಗೆ ನೊಂದಾಯಿಸಲು ತೀರ್ಮಾನಿಸಿದೆ. ಅದಕ್ಕೆ ನಾನು ಅಂದುಕೊಂಡ ವಿಷಯ ನನ್ನ ಕೆಲಸಕ್ಕೆ ಸಂಬಂಧಿಸಿದ್ದದ್ದೆ. ಅಂದರೆ, ಕೈಗಾರಿಕಾ ಪ್ರದೇಶಗಳು, ಉದ್ಯೋಗಗಳು, ಸಂಬಳಗಳು, ಇತ್ಯಾದಿ.

ಆ ಸಮಯದಲ್ಲಿ ನಾನು ಮತ್ತೊಂದು ನಿರ್ಧಾರ ತೆಗೆದುಕೊಂಡೆ. ಅದಕ್ಕೆ ನಾನು ಯಾವುದೇ ಕಾರಣಗಳನ್ನು ಕೊಡಲಾರೆ. ನಾನು ಏನಾಗಿದ್ದೀನೊ ಅದೆ ನಾನಾಗಿರುವ ಕಾರಣದಿಂದಾಗಿ ಬೇರೆ ಎಲ್ಲಿಗೆ ಹೋದರೂ ನನಗೆ ಇಂತಹುದೇ ಸಮಸ್ಯೆಗಳು ಎದುರಾಗುತ್ತವೆ ಎನ್ನಿಸಿದ್ದರಿಂದ ISI ನಲ್ಲಿಯೇ ಮುಂದುವರೆಯುವ ನಿರ್ಧಾರ ಮಾಡಿದೆ. ನನ್ನ ಅನೇಕ ಸಹೋದ್ಯೋಗಿಗಳು ಇತರೆಡೆ ಕೆಲಸ ಹುಡುಕುತ್ತಿದ್ದರು ಮತ್ತು ಕೆಲವರಿಗೆ ಸಿಕ್ಕಿಯೂ ಸಿಕ್ಕಿತು.

 

ಕೆಲಸದಿಂದ ಮನೆಗೆ ಬಂದು ನಿಮಗೆ ಏನು ಸಂತೋಷ ಕೊಟ್ಟಿತು ಎನ್ನುವುದರ ಬಗ್ಗೆ ಮಾತನಾಡಲು ಆಗುತ್ತಿದ್ದದ್ದು ಒಳ್ಳೆಯ ವಿಷಯವೆ.

ನಾನೂ ಹಾಗೆಯೇ ಅಂದುಕೊಂಡಿದ್ದೆ. ಈಗ ಮಕ್ಕಳು ಹೇಳುತ್ತಾರೆ, “ಅಮ್ಮ, ನಿನ್ನ ಅನೇಕ ಸಮಸ್ಯೆಗಳನ್ನು ನಾವು ಎದುರಿಸಿದೆವು…”

 

ಮಕ್ಕಳು ಹಾಗೆ ಹೇಳುತ್ತಾರೆ. ಆದರೆ ಆ ಸಮಯದಲ್ಲಿ ಹಾಗೆ ಮಾಡಲು ಸಾಧ್ಯವಾಗಿದ್ದು ಒಳ್ಳೆಯದೆ. ಅದರಿಂದ ಸಹಾಯವೂ ಆಗುತ್ತದೆ.

1963 ರಲ್ಲಿ ನನ್ನ ಎರಡನೆಯ ಮಗಳು ಹುಟ್ಟಿದಳು. ಆಕೆ ಕೊಲ್ಲಾಮ್‌ನಲ್ಲಿ ಹುಟ್ಟಿದ್ದು. ನಾನು ದೆಹಲಿಗೆ ಅವಳೊಡನೆ ವಾಪಸು ಬಂದಾಗ ನನ್ನ ತಾಯಿಯೂ ನಮ್ಮೊಡನೆ ಬಂದರು. ಆ ನಿರ್ಧಾರ ಅವರದೇ ಅಗಿತ್ತು. ಆರು ತಿಂಗಳ ನಂತರ ಅವರು ವಾಪಸಾದರು. ನಾವು ಆರಂಭದಲ್ಲಿ ದಕ್ಷಿಣ ಪಟೇಲ್ ನಗರದಲ್ಲಿ ವಾಸವಿದ್ದೆವು ಎಂದು ನಿಮಗೆ ಹೇಳಿದ್ದೆ. ಆದರೆ ನಮ್ಮ ಎರಡನೆಯ ಮಗಳು ಎರಡು ವರ್ಷವಿದ್ದಾಗ ನಾವು ದಕ್ಷಿಣ ದೆಹಲಿಗೆ ಸ್ಥಳಾಂತರಿಸಿದೆವು. ಕೊಳ, ನವಿಲು, ಕೋಸು, ಹೂಕೋಸು ಇತ್ಯಾದಿಗಳೆಲ್ಲ ಕಾಣಿಸುತ್ತಿದ್ದ ಮನೆಯ ಮೊದಲ ಅಂತಸ್ತಿನ ಮನೆ ಅದು. ಇವತ್ತು ಅದೆಲ್ಲವನ್ನೂ ನಿತ್ಯ ಬೆಳೆಯುತ್ತಿರುವ ದೆಹಲಿ ನಗರ ತಿಂದುಹಾಕಿದೆ. ಆ ಹೊಸ ಸ್ಥಳಕ್ಕೆ ವಾಸ ಬದಲಾಯಿಸಿದ ನಂತರ ಮಕ್ಕಳ ಶಿಕ್ಷಣದ ಸಮಸ್ಯೆ ಎದುರಾಯಿತು. ಬಹಳ ಯೋಚನೆ ಮಾಡಿದ ನಂತರ ಅವರನ್ನು ದೆಹಲಿಯ ಹೆಣ್ಣುಮಕ್ಕಳ ಬಹಳ ಹಳೆಯ ಶಾಲೆಗಳಲ್ಲಿ ಒಂದಾದ ಲೇಡಿ ಇರ್ವಿನ್ ಶಾಲೆಗೆ ಸೇರಿಸಲು ತೀರ್ಮಾನಿಸಿದೆವು.

 

ನಿಮ್ಮ ಮಕ್ಕಳು ಚಿಕ್ಕವರಿದ್ದಾಗ ನಿಮಗೆ ಮಾಡಲೂ ಬಹಳಷ್ಟಿತ್ತು. ನಿಮಗೆ ಬಿಡುವು ಇರಲಿಲ್ಲ. ಮಾಡಲು ಏನೂ ಇಲ್ಲದಿದ್ದಾಗ ಆಗಾಗ ಖಿನ್ನತೆ ಆವರಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಬಹಳ ಜನ ಖಿನ್ನತೆಯಿಂದ ನರಳುತ್ತಾರೆ.

 

ಮೂಲಭೂತವಾಗಿ ಅದು ಅವರಿಗೆ ತಮ್ಮ ಕೆಲಸದಲ್ಲಿ ಅರ್ಥ, ಉದ್ದೇಶ ಕಾಣದೆ ಇರುವುದರಿಂದ ಎನ್ನಿಸುತ್ತದೆ. ಬೇಸರದಿಂದ ಆಗುವುದು ಅದು.

ಹೌದು. ಅದೇ ಸರಿಯಾದ ಮಾತು. ನನಗೆ ಹಾಗೆ ಎಂದೂ ಆಗಲಿಲ್ಲ. ಬಹುಶಃ ನಾನು ಹಲವಾರು ಕೆಲಸ ಮಾಡುವುದನ್ನು ಆನಂದಿಸುತ್ತಿದ್ದೆಳಾದ್ದರಿಂದ ಇರಬಹುದು. ನನ್ನ ಮಕ್ಕಳ ಬಟ್ಟೆಗಳನ್ನು ನಾನೇ ಹೊಲಿಯುತ್ತಿದ್ದೆ. ಅವರ ಹುಟ್ಟುಹಬ್ಬಗಳನ್ನು ಆಚರಿಸುತ್ತಿದ್ದೆವು. ಬಹುಪಾಲು ಅಡಿಗೆಯ ಕೆಲಸವನ್ನೂ ನಾನೇ ಮಾಡುತ್ತಿದೆ. ದೆಹಲಿಯ ಮತ್ತು ಸುತ್ತಮುತ್ತಲ ಐತಿಹಾಸಿಕ ಸ್ಮಾರಕಗಳನ್ನು ನೋಡಲು ಹೋಗುತ್ತಿದ್ದೆವು.

 

ನನಗೂ ಹಾಗೆಯೆ. ನನಗೆ ಜೀವನದಲ್ಲಿ ಎಂದೂ ಬೇಸರವಾಗಿಲ್ಲ. ಯಾವಾಗಲೂ ಏನೋ ಒಂದು ಗುದ್ಡಾಟ ಇದ್ಡೇ ಇರುತ್ತದೆ, ಮಾಡಲೂ ಸಿಕ್ಕಾಪಟ್ಟೆ ಇರುತ್ತದೆ, ಆಯ್ಕೆ ಮಾಡಿಕೊಳ್ಳಲು ಬಹಳ ಇರುತ್ತದೆ ಮತ್ತು ಹಾಗೆಯೆ ಮುಂದಕ್ಕೆ ಚಲಿಸುತ್ತಿರಬೇಕು. ಜೀವನೋಪಾಯಕ್ಕೆ ದುಡಿಯುವುದಿರಬಹುದು, ಅಥವ ಕಾಲಾಂತರದಲ್ಲಿ ಬೇರೆ ಕೆಲಸಗಳನ್ನು ಮಾಡುವುದಿರಬಹುದು. ಮಾಡಲು ಬಹಳ ಇತ್ತು.

ನನ್ನ ಜೀವನದಲ್ಲಿ ಮತ್ತೊಂದು ಮುಖ್ಯ ಘಟನೆ ಎಂದರೆ ವಿದೇಶ ಪ್ರವಾಸ. ನಾನು ಕಾಲೇಜಿಗೆ ಸೇರಿಕೊಂಡ ವರ್ಷ ಫ್ರೆಂಚ್ ಯುವತಿಯೊಬ್ಬಳು ಶಾಸ್ತ್ರಿಯೊಬ್ಬರ ಬಳಿ ಸಂಸ್ಕೃತ ಕಲಿಯಲು ತಿರುವನಂತಪುರಕ್ಕೆ ಬಂದಿದ್ದಳು. ಆಕೆ ಸರ್ಕಾರಿ ಹಾಸ್ಟೆಲ್‌ನಲ್ಲಿಯೇ ಉಳಿದುಕೊಂದಿದ್ದಳು. ನಾವಿಬ್ಬರೂ ಸ್ನೇಹಿತೆಯರಾದೆವು ಮತ್ತು ಮುಂದಿನ ದಿನಗಳಲ್ಲೂ ಸಂಪರ್ಕ ಇಟ್ಟುಕೊಂಡಿದ್ದೆವು. ಅನೇಕ ಸಲ ಅವಳು ನನಗೆ ಪ್ಯಾರಿಸ್‌ಗೆ ಬರಲು ಹೇಳುತ್ತಿದ್ದಳು. ಆದರೆ ನನಗೆ ಆಸಕ್ತಿ ಇರಲಿಲ್ಲ. ಹೇಳಬೇಕೆಂದರೆ, ಆಕೆ ನನಗೆ ಫ್ರೆಂಚ್ ಕಲಿಸಲು ಆರಂಭಿಸಿದ್ದಳು. ನಾನು ಹಿಡಿದು ಬಿಟ್ಟು ಕಲಿಯುತ್ತಿದೆ.

1968 ರ ಕೊನೆಯಲ್ಲಿ ಅಥವ 1969ರ ಆರಂಭದಲ್ಲಿರಬೇಕು, ಎಲ್.ಡುಮಾಂಟ್ ಎನ್ನುವ ಖ್ಯಾತ ಸಾಮಾಜಿಕ ಮಾನವಶಾಸ್ತ್ರಜ್ಞ ದೆಹಲಿಗೆ ಬಂದಿದ್ದರು. ಅವರು ನನ್ನ ಸ್ನೇಹಿತರೊಬ್ಬರ ಸ್ನೇಹಿತ ಮತ್ತು ಸಹೋದ್ಯೋಗಿ. ನನ್ನನ್ನು ಕಾಣಲು ಅವರೊಮ್ಮೆ ಕರೆದಾಗ ನಾನು ಹೋದೆ. ಮಾರನೆ ದಿನ ಮಧ್ಯಾಹ್ನ ಅವರು ನಮ್ಮ ಮನೆಗೆ ಊಟಕ್ಕೆ ಬಂದರು. ನಾನು ಸರಳವಾದ ಅಡಿಗೆ ಮಾಡಿದ್ದೆ. ಊಟದ ನಂತರ ಅವರು ಮತ್ತು ನನ್ನ ಗಂಡ ಬಹಳ ಹೊತ್ತು ಮಾತನಾಡಿದರು. ಅವರು ದಕ್ಷಿಣ ಭಾರತದ ಬಗ್ಗೆ ಅಧ್ಯಯನ ಮಾಡಿದ್ದರು. ತೆರಳುವುದಕ್ಕಿಂತ ಮೊದಲು ಅವರು ನನ್ನನ್ನು ಪ್ಯಾರಿಸ್‌ಗೆ ಹೋಗಲು ಇಷ್ಟವಿದೆಯೆ ಎಂದು ಕೇಳಿದರು. ಅದು ಬಹಳ ಅನಿರೀಕ್ಷಿತವಾದ ಪ್ರಶ್ನೆ ಆಗಿತ್ತು. ನನಗೆ ಉತ್ತರಿಸಲು ಆಗಲಿಲ್ಲ.

ಅದಾದ ನಂತರ ಅವರು ದಕ್ಷಿಣ ಭಾರತಕ್ಕೆ ಹೋದರು. ಕೆಲದಿನಗಳ ನಂತರ ದೆಹಲಿಗೆ ಮರಳಿದ ಅವರು ನನ್ನ ಗಂಡನಿಗೆ ಕರೆ ಮಾಡಿ, ಮಾರನೆಯ ದಿನ ನಮ್ಮ ಮನೆಗೆ ಊಟಕ್ಕೆ ಬಂದರು. ಹೊರಡುವಾಗ ಅವರು ಪ್ಯಾರಿಸ್‌ಗೆ ಕಳಿಸುವ ಜವಾಬ್ದಾರಿಯನ್ನು ಅವರೆ ತೆಗೆದುಕೊಂಡರೆ ಹೋಗಲು ನನಗೆ ಆಸಕ್ತಿ ಇದೆಯೆ ಎಂದು ಮತ್ತೆ ನನ್ನನ್ನು ಕೇಳಿದರು. ಅವರು ಆ ಸಮಯದಲ್ಲಿ ಅಲ್ಲಿ ಭಾರತೀಯ ಅಧ್ಯಯನ ಕೇಂದ್ರವೊಂದನ್ನು ಕಟ್ಟುತ್ತಿದ್ದರು. ಅದು ನಂತರ ಭಾರತೀಯ ಮತ್ತು ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರವಾಯಿತು.

 

ಅವರು ನಿಮಗೆ ಪ್ಯಾರಿಸ್‌ಗೆ ಹೋಗು ಎಂದಾಗ ಏನನ್ನಿಸಿತು?

ನನಗೇನೂ ರೋಮಾಂಚನವಾಗಲಿಲ್ಲ. ನಿಜವಾಗಲೂ ನನಗೆ ಆಸಕ್ತಿ ಇರಲಿಲ್ಲ. ಅದಕ್ಕೆ ಮುಂಚೆ ಅಷ್ಟು ದೂರದವರೆಗೆ ಎಂದೂ ಪ್ರಯಾಣ ಮಾಡಿರಲಿಲ್ಲ. ಅವರನ್ನು ಭೇಟಿ ಮಾಡುವುದಕ್ಕೆ ಮೊದಲು ನಾನು ಅವರಿಗೆ ಒಂದಷ್ಟು ಕೆಲಸ ಮಾಡಿಕೊಡುತ್ತಿದ್ದೆ. ಅದು ಭಾರತದ ಬಗ್ಗೆ ಬೇರೆಬೇರೆ ಪ್ರಕಾಶಕರು ಪ್ರಕಟಿಸಿರುವ ಪುಸ್ತಕಗಳ ಪಟ್ಟಿ ತಯಾರಿಸುವ ಕೆಲಸ. ನಾನು ಅದೆಲ್ಲವನ್ನೂ ಮರೆತುಬಿಟ್ಟಿದ್ದೆ. “ಆಯಿತು” ಎಂದು ಅವರಿಗೆ ನಾನು ಹೇಳಲಿಲ್ಲ. ಆದರೆ ಅವರು ಹೋಗಿ, ಎಲ್ಲವನ್ನೂ ಸಿದ್ಧಪಡಿಸಿ, ಪ್ರಸ್ತಾಪ ಕಳುಹಿಸಿದರು. ಮುಂದಿನ ಮೂರು ತಿಂಗಳು ನಾನು ಏನೆಲ್ಲವನ್ನೂ ಅನುಭವಿಸಿದೆ ಎಂದು ನಿಮಗೆ ಹೇಳಲಾರೆ. ಅಪರಿಚಿತವಾದದ್ದರ ಬಗೆಗಿನ ಭಯ ನನ್ನನ್ನು ಹಿಂಜರೆಯುತ್ತಿತ್ತು ಎಂದು ಹೇಳಲಾರೆ. ಅದಕ್ಕೂ ಮೊದಲು ನಾನು ವಿಮಾನದಲ್ಲಿ ಒಮ್ಮೆಯೂ ಪ್ರಯಾಣಿಸಿರಲಿಲ್ಲ. ಮಕ್ಕಳು ಇನ್ನೂ ಚಿಕ್ಕವರಿದ್ದರು. ದೊಡ್ಡವಳಿಗೆ ಹತ್ತು ವರ್ಷ ಆಗಿತ್ತು, ಇನ್ನೊಬ್ಬಳು ಅವಳಿಗಿಂತ ನಾಲ್ಕು ವರ್ಷಕ್ಕೆ ಚಿಕ್ಕವಳು. “ಅಲ್ಲಿಗೆ ಹೋಗಬೇಕೆಂದು ಎಲ್ಲರೂ ಸಾಯುತ್ತಾರೆ. ನಿನಗೀಗ ಆ ಅವಕಾಶ ಬಂದಿದೆ. ಯಾಕೆ ನೀನು ಒಪ್ಪಿಕೊಳ್ಳಬಾರದು?” ಎಂದು ನನ್ನ ಆಕಾಶವಾಣಿಯ ಸ್ನೇಹಿತ ಕೇಳಿದ. ಬಹಳಷ್ಟು ಜನ ಅದನ್ನೇ ಹೇಳಿದರು. ಏನು ಮಾಡಬೇಕು ಎನ್ನುವುದರ ಬಗ್ಗೆ ನನಗೆ ಸ್ಪಷ್ಟತೆ ಇರಲಿಲ್ಲ.

 

ನಿಮ್ಮ ಗಂಡ ಏನು ಹೇಳಿದರು?

ಅವರು ಏನನ್ನೂ ಹೇಳಲಿಲ್ಲ. ಸುಮ್ಮನಿದ್ದರು. ಕೆಲವು ದಿನಗಳ ನಂತರ ನಾನು ಏನು ಮಾಡಬೇಕು ಎಂದು ಅವರನ್ನೇ ಕೇಳಿದೆ. ನನ್ನ ಮನಸ್ಸಿನಲ್ಲಿ ಏನು ಆಗುತ್ತಿದೆ ಎಂದು ಅವರಿಗೆ ಖಂಡಿತವಾಗಿ ಅರ್ಥವಾಗಿತ್ತು. ಅವರು ಹೇಳಿದ್ದು ಇಷ್ಟೇ, “ಕೆಲವೊಮ್ಮೆ ಜೀವನದಲ್ಲಿ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.” ಆ ಮಾತುಗಳನ್ನು ನಾನು ಎಂದಿಗೂ ಮರೆಯಲಾರೆ. ಅವು ನನಗೆ ಬಹಳ ಹಿಡಿಸಿದವು. ಪ್ಯಾರಿಸ್‌ಗೆ ಹೋಗಲು ಆ ಮಾತುಗಳು ನನಗೆ ಆತ್ಮವಿಶ್ವಾಸ ಮತ್ತು ಧೈರ್ಯ ಕೊಟ್ಟವು. ಹೀಗೆ ಪ್ಯಾರಿಸ್‌ಗೆ ಹೋದೆ.

 

ಅವರು ಮಕ್ಕಳೊಡನೆ ದೆಹಲಿಯಲ್ಲಿಯೇ ಉಳಿದರೆ?

ಮಕ್ಕಳನ್ನು ಮತ್ತು ಮನೆಯನ್ನು ನೋಡಿಕೊಳ್ಳಲು ಕೇರಳದಿಂದ ಮಹಿಳೆಯೊಬ್ಬರು ಬಂದರು. ನಾನು ಅಲ್ಲಿಲ್ಲದಿದ್ದಾಗ ಬಹಳ ಒಳ್ಳೆಯ ಸಮಯ ಕಳೆದವು ಎಂದು ಮಕ್ಕಳು ಈಗಲೂ ಹೇಳುತ್ತಾರೆ. ಅವರಪ್ಪ ಅವರನ್ನು ಸಿನೆಮಾಗೆ, ಗ್ರಂಥಾಲಯಕ್ಕೆ, ಕ್ವಾಲಿಟಿಯಲ್ಲಿ ಐಸ್‌ಕ್ರೀಮ್ ಕೊಡಿಸಲು ಎಂತೆಲ್ಲ ಕರೆದುಕೊಂಡು ಹೋಗುತ್ತಿದ್ದರು. ಮತ್ತೆ ಅವರನ್ನು ನೋಡಿಕೊಳ್ಳಲು ಸ್ನೇಹಿತರೂ ಇದ್ದರು.

ನಾನು ಭಾರತದ ಎರಡು ದೊಡ್ಡ ನಗರಗಳಾದ ಮದ್ರಾಸ್ ಮತ್ತು ದೆಹಲಿಯಲ್ಲಿ ವಾಸವಿದ್ದೆ. ಹಾಗಾಗಿ ಪ್ಯಾರಿಸ್‌ನಲ್ಲಿ ನನಗೆ ಯಾವುದೇ ಸಾಂಸ್ಕೃತಿಕ ಆಘಾತ ಆಗಲಿಲ್ಲ. ಪ್ಯಾರಿಸ್‌ನಲ್ಲಿಯ ನನ್ನ ಸ್ನೇಹಿತೆ ಆಗ ಕ್ಯಾನ್ಸರ್‌ಗೆ ಚಿಕೆತ್ಸೆ ಪಡೆದುಕೊಳ್ಳುತ್ತಿದ್ದಳು. ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗಲು ಮತ್ಯಾರೊ ಬಂದಿದ್ದರು. ಇನ್ನೊಬ್ಬ ಯುವತಿ ಬಂದು ಶಿಷ್ಟಾಚಾರಗಳನ್ನು ಮುಗಿಸಲು ಹಲವಾರು ಕಡೆ ಕರೆದುಕೊಂಡು ಹೋದಳು. ಇವೆಲ್ಲ ದೊಡ್ಡ ಅನುಕೂಲಗಳು ಎಂದು ನಾನು ಭಾವಿಸುತ್ತೇನೆ.

 

ನೀವು ಪ್ಯಾರಿಸ್‌ನಲ್ಲಿ ಎರಡು ವರ್ಷ ಇದ್ದಿರಲ್ಲವೆ?

ಹೌದು, ಎರಡು ವರ್ಷಗಳು. ಕೇರಳದ ಯಾವುದಾದರೂ ಪ್ರಮುಖ ಸಮಾಜೋ-ಆರ್ಥಿಕ ಸಮಸ್ಯೆಯ ಬಗ್ಗೆ ಕೆಲಸ ಮಾಡಲು ಪ್ರೊಫೆಸರ್ ಡುಮಾಂಟ್‌‍ರವರು ಸಲಹೆ ಕೊಟ್ಟಿದ್ದರು. ಲಂಡನ್‌ನ India Office Library (IOL), ಬ್ರಿಟಿಷ್ ಮ್ಯೂಸಿಯಮ್, ಇತ್ಯಾದಿ ಸ್ಥಳಗಳಲ್ಲಿ ಅದಕ್ಕೆ ಬೇಕಾದ ಮಾಹಿತಿಯನ್ನು ಕಲೆಹಾಕಲು ಅವರು ನನ್ನನ್ನು ಲಂಡನ್‌ಗೆ ಕಳುಹಿಸಿದ್ದರು. ದಕ್ಷಿಣ ಲಂಡನ್‌ನ ಕ್ರೋಯ್ಡನ್‌ನಲ್ಲಿ ನಮಗೆ ಕೆಲವು ಸ್ನೇಹಿತರಿದ್ದರು. ನಾನು ಅವರ ಮನೆಯಲ್ಲಿ ಉಳಿದುಕೊಂಡು IOL ಗೆ ಬಸ್ಸಿನಲ್ಲಿ ಹೋಗುತ್ತಿದ್ದೆ. ಅದು ನಿಜಕ್ಕೂ ಫಲದಾಯಕವಾದ ಮತ್ತು ಆನಂದದಿಂದ ಕೂಡಿದ್ದ ಸಮಯ.

 

ನೀವು ಮನೆಯರೊಡನೆ ಹೇಗೆ ಸಂಪರ್ಕ ಇಟ್ಟುಕೊಂಡಿದ್ದಿರಿ? ಅವರಿಗೆ ಪತ್ರ ಬರೆಯುತ್ತಿದ್ದಿರಾ?

ಹೌದು. ನಿಯಮಿತವಾಗಿ ಪತ್ರಗಳನ್ನು ಬರೆಯುತ್ತಿದ್ದೆ.

 

ನೀವು ಕುಟುಂಬದವರನ್ನು ಬಹಳ ನೆನಪಿಸಿಕೊಳ್ಳುತ್ತಿದ್ದಿರಾ? ಬಹಳ ಕಷ್ಟವಾಗುತ್ತಿತ್ತಾ? ಏಕಾಂಗಿತನ ಕಾಡುತ್ತಿತ್ತಾ? ನಿಮಗೆ ಹೊಂದಿಕೊಳ್ಳಲು ಆಯಿತೆ?

ಅಲ್ಲಿಗೆ ಹೋದನಂತರ ನನಗೆ ಏಕಾಂಗಿತನ ಕಾಡಲಿಲ್ಲ. ಮಾಡಲು ಏನೋ ಒಂದು ಕೆಲಸ ಇತ್ತು. ಪ್ಯಾರಿಸ್‌ನಲ್ಲಿ ಬಹಳ ಸುಂದರವಾದ ಅನೇಕ ದೊಡ್ಡ ಉದ್ಯಾನವನಗಳಿವೆ. ನಾನುಳಿದುಕೊಂಡಿದ್ದ ಯೂನಿವರ್ಸಿಟಿ ಸಿಟಿ ಎಂಬ ಹಾಸ್ಟೆಲ್ ಕ್ಯಾಂಪಸ್ ಇಂತಹ ಒಂದು ಉದ್ಯಾನವನಕ್ಕೆ ಹತ್ತಿರ ಇತ್ತು. ಬೇರೆಬೇರೆ ದೇಶಗಳ ಅನೇಕ ಮನೆಗಳು ಆ ಕ್ಯಾಂಪಸ್‌ನಲ್ಲಿದ್ದವು. ನಾನು ಇಂಡಿಯಾ ಹೌಸ್‌ನಲ್ಲಿ ಉಳಿದುಕೊಂಡಿದ್ದೆ. ಆ ಕಟ್ಟದಲ್ಲಿದ್ದ ಬಹುತೇಕರು ಭಾರತೀಯರು. ವಿದ್ಯಾರ್ಥಿಗಳು, ಅಧ್ಯಯನಕ್ಕೆ ಬಂದಿದ್ದ ಅಧ್ಯಾಪಕರು, ಹೀಗೆ ವಿವಿಧ ಹಂತಗಳ ಜನ ಅಲ್ಲಿದ್ದರು. ಅವರ ದೇಶದ ಬಗೆಗಿನ ನಮ್ಮ ಗ್ರಹಿಕೆ ಕೇವಲ ಶೈಕ್ಷಣಿಕವಾದದ್ದು ಮಾತ್ರವೇ ಆಗದಿರಲಿ ಎಂದು ಫ್ರೆಂಚ್ ಸರ್ಕಾರ ಅನೇಕ ಸಾಂಸ್ಕೃತಿಕ ಮತ್ತು ಪ್ರವಾಸಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿತ್ತು. ನಾನು ಅಂತಹ ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದೆ. ಅದರ ಮೂಲಕ ಗ್ರೀಸ್, ಟರ್ಕಿ, ಯುಗೋಸ್ಲಾವಿಯ, ಮತ್ತಿತರ ದೇಶಗಳ ಹಲವು ಸಂಶೋಧಕರ, ವಿದ್ವಾಂಸರ ಪರಿಚಯ ಆಯಿತು. ನಾನು ಭಾರತಕ್ಕೆ ವಾಪಸಾದ ಅನೇಕ ವರ್ಷಗಳ ನಂತರವೂ ನಾವು ಸಂಪರ್ಕದಲ್ಲಿದ್ದೆವು.

 

ಎರಡು ವರ್ಷಗಳ ನಂತರ ನೀವು ಭಾರತಕ್ಕೆ ವಾಪಸಾದಿರಿ.

ಇಲ್ಲ, ಮಧ್ಯೆ ಒಮ್ಮೆ ಬಂದಿದ್ದೆ. ಲಂಡನ್‌ನ IOL ನಲ್ಲಿ ಸಾಮಗ್ರಿ ಕಲೆಹಾಕುತ್ತಿದ್ದಾಗ ಬಹಳ ದುಸ್ಥಿತಿಯಲ್ಲಿದ್ದ “ಕೇರಳದಲ್ಲಿ ಗುಲಾಮಗಿರಿಯ ನಿರ್ಮೂಲನೆ” ಎನ್ನುವ ಪುಸ್ತಕ ಸಿಕ್ಕಿತ್ತು. ನಾನು ಅರ್ಥಶಾಸ್ತ್ರ ಓದುವಾಗ ಭೂಮಿ ಮತ್ತು ಕೃಷಿಕಾರ್ಮಿಕರ ವಿಷಯ ನನ್ನನ್ನು ಆಕರ್ಷಿಸಿದ್ದರೂ ಈ ಗುಲಾಮಗಿರಿಯ ಬಗ್ಗೆ ನನಗೇನೂ ತಿಳಿದಿದರಲಿಲ್ಲ. ಇಂಗ್ಲೆಂಡ್‌ನಲ್ಲಿ ಓದಲು ಎಷ್ಟು ಸಿಗುತ್ತದೋ ಅಷ್ಟೆಲ್ಲ ಓದಿದ ಮೇಲೆ ಮತ್ತಷ್ಟು ಮಾಹಿತಿ ಕಲೆಹಾಕಲು ನಾನು ಒಂದೆರಡು ತಿಂಗಳುಗಳ ಕಾಲ ಭಾರತಕ್ಕೆ ಬಂದಿದ್ದೆ. ಫ್ರಾನ್ಸ್‌ನಲ್ಲಿದ್ದಾಗ ಒಮ್ಮನಸ್ಸಿನ ಏಕಾಗ್ರತೆಯಿಂದ ಕೆಲಸ ಮಾಡಲು ನನಗೆ ಸಾಧ್ಯವಾಗಿತ್ತು. ಇಲ್ಲಿ ಹಾಗಲ್ಲ. ಬಹಳಷ್ಟು ಅನ್ಯವಿಷಯಗಳು. ನಮ್ಮ ಸಮಯಕ್ಕಾಗಿ ಬೇರೆಬೇರೆ ಕಡೆಯಿಂದ ಬೇಡಿಕೆಗಳು…

 

ನೀವು ವಾಪಸು ಬಂದಾಗ ಹೇಗನ್ನಿಸಿತು?

ಗಂಡನನ್ನು ಮತ್ತು ಮಕ್ಕಳನ್ನು ಬಿಟ್ಟು ಹೊರಟ ನನ್ನ ಬಗ್ಗೆ ಸಂಶಯ ಇಟ್ಟುಕೊಂಡಿದ್ದ ನನ್ನಮ್ಮನನ್ನೂ ಸೇರಿದಂತೆ ಮನೆಯವರೆಲ್ಲ ಸಂತೋಷಪಟ್ಟರು ಮತ್ತು ಹೆಮ್ಮೆಪಟ್ಟರು.

 

ವಾಪಸಾದಾಗ ನಿಮಗೆ ಹೇಗನ್ನಿಸಿತು? ಅದನ್ನು ಮಾತುಗಳಲ್ಲಿ ಹೇಳಲಾಗುವುದಿಲ್ಲ ಎಂದಿರಿ. ಆದರೂ ಪ್ರಯತ್ನಿಸಿ…

ವಾಪಸು ಮನೆಯವರ ಜೊತೆ ಒಂದಾಗಿರಲು ಬಂದಿದ್ದರಿಂದ ನಿಜಕ್ಕೂ ಸಂತೋಷ ಆಗಿತ್ತು. ಪ್ಯಾರಿಸ್‌ನಲ್ಲಿ ಸಮಯ ನನ್ನ ಹತೋಟಿಯಲ್ಲಿತ್ತು. ಅದನ್ನು ಇಲ್ಲಿ ನಿರೀಕ್ಷೆ ಮಾಡುವ ಹಾಗೆ ಇರಲಿಲ್ಲ. ಅಡಿಗೆ ಮಾಡಲು ಆರಂಭಿಸಿದೆ. ಭಾನುವಾರದ ರಾತ್ರಿಗಳಂದು ನಾವು ಮೊಂಬತ್ತಿದೀಪದ ಫ್ರೆಂಚ್ ಮಾದರಿಯ ಬ್ರೆಡ್ ಸಹಿತವಾದ ಔತಣ ಮಾಡುತಿದ್ದೆವು. ನಾನು ಪ್ಯಾರಿಸ್‌ನಲ್ಲಿದ್ದಾಗಲೂ ಸಸ್ಯಾಹಾರಿ ಊಟವನ್ನಷ್ಟೆ ಮಾಡುತ್ತಿದ್ದೆ. ಆದರೆ ನಮ್ಮ ಆಕಾಶವಾಣಿಯ ಸ್ನೇಹಿತ ಕೆಲವು ಮಾಂಸಾಹಾರಿ ಅಡಿಗೆ ಮಾಡುವುದನ್ನು ಕಲಿಸಿದ್ದರು. ಫ್ರೆಂಚ್ ಅಡಿಗೆಗಳ ಪುಸ್ತಕವೊಂದನ್ನು ಅಲ್ಲಿಂದ ತಂದಿದ್ದೆ. ಅದರಲ್ಲಿ ರ್‍ಯಾಟಟೂಯಿ ಎನ್ನುವ ಅಡಿಗೆಯನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಸೂಪು ಮತ್ತು ಸಲಾಡ್ ಅನ್ನು ಮಾಡುತ್ತಿದ್ದೆ. ನಮ್ಮ ಮನೆಯಲ್ಲಿ ಓವನ್ ಇಲ್ಲದಿದ್ದ ಕಾರಣಕ್ಕೆ ಕೆಲವನ್ನು ಬೇಕ್ ಮಾಡಲು ಆಗುತ್ತಿರಲಿಲ್ಲ. ಪ್ಯಾರಿಸ್‌ನಿಂದ ಮಕ್ಕಳಿಗೆ ಆಗಾಗ ಚಾಕೊಲೇಟ್ ಕಳುಹಿಸುತ್ತಿದ್ದೆ.

 

ನಿಮ್ಮ ಗಂಡನಿಗೆ ಏನನ್ನು ಕಳುಹಿಸುತ್ತಿದ್ದಿರಿ?

ನಾನು ಅಲ್ಲಿಗೆ ಹೋದ ಒಂದು ತಿಂಗಳ ಒಳಗೆ ಅವರಿಗೆ ಸುಂದರವಾದ ಸ್ವೆಟರ್ ಕಳುಹಿಸಿದ್ದೆ.

ಪ್ರತಿ ಬೇಸಿಗೆಯಲ್ಲೂ ನಾವೆಲ್ಲ ದೆಹಲಿಯಿಂದ ಕೇರಳದ ಮನೆಗೆ ಬರುತ್ತಿದ್ದೆವು. ನಾನು ಪ್ಯಾರಿಸ್‌ಗೆ ಹೋಗಿದ್ದಾಗಿನ ಎರಡೂ ವರ್ಷಗಳು ನನ್ನ ಗಂಡ ಮತ್ತು ಮಕ್ಕಳು ಇಲ್ಲಿಗೆ ಬಂದಿದ್ದರು. ಕೆಲಸದಲ್ಲಿ ಬಹಳ ದೊಡ್ಡ ಬದಲಾವಣೆಗಳಾದವು. ಆಮೇಲೆ ನಾನು ಮಾಡಿದ ಪ್ರತಿಯೊಂದು ಕಾರ್ಯವೂ ಕ್ಷೇತ್ರಕಾರ್ಯದಲ್ಲಿ ನಾನು ಸ್ವತಃ ಕಲೆಹಾಕಿದ ಮಾಹಿತಿಯನ್ನು ಆಧರಿಸಿಯೇ ಇತ್ತು. ಅದರರ್ಥ ನಾನು ಮನೆಯ ಹೊರಗಡೆ ಕ್ಷೇತ್ರಕಾರ್ಯಕ್ಕೆ ಹೋಗುವುದು ನಡೆದೇ ಇತ್ತು.

 

ಅದೊಂದು ಸುಯೋಗ. ಮೊದಲಿನಿಂದಲೂ ನಿಮಗೆ ಪ್ರವಾಸ ಮಾಡುವ ಅವಕಾಶವಿತ್ತು. ಓದು ಮುಂದುವರೆಸುವ, ಮದ್ರಾಸ್‍‌ಗೆ ಹೋಗುವ, ಪ್ಯಾರಿಸ್‌ಗೆ, ಮತ್ತೆ ನಂತರ ಕ್ಷೇತ್ರಕಾರ್ಯಕ್ಕೆ ಹೋಗುವಂತಹ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ನಿಮ್ಮ ಮೇಲೆ ಏನೂ ಒತ್ತಡಗಳಿರಲಿಲ್ಲವೆ?

ಆ ರೀತಿಯಲ್ಲಿ ನನಗೆ ಒತ್ತಡಗಳಿರಲಿಲ್ಲ.

 

ಮತ್ತು ನೀವು ಮನೆಯಿಂದ ಮತ್ತೆಮತ್ತೆ ಹೊರಗೆ ಹೋಗಬೇಕಾಗಿಬರುವ ನಿಮ್ಮ ಕೆಲಸ ಮತ್ತು ಪ್ರವಾಸಗಳನ್ನು ನಿಮ್ಮ ಗಂಡ ಒಪ್ಪಿಕೊಂಡಿದ್ದ ವಿಷಯವೂ ಇದೆ.

ನೆನ್ನೆ ನೀವು ಹೋದನಂತರ ನಾನು ಈ ವಿಷಯದ ಬಗ್ಗೆ ಬಹಳ ಯೋಚಿಸಿದೆ. ನನ್ನ ಕುಟುಂಬ ಕೇರಳದ ಕುಟುಂಬಗಳನ್ನು ಸಾಮಾನ್ಯವಾಗಿ ಪ್ರತಿನಿಧಿಸುವುದಿಲ್ಲ ಎಂದು ನೀವೆಂದರೆ ನಾನದನ್ನು ಒಪ್ಪುತ್ತೇನೆ. ಆದರೆ ನೀವು ಎಲ್ಲಾ ಗಂಡಂದಿರೂ ನನ್ನ ಗಂಡನ ತರಹವೇ ಬೆಂಬಲಿಸುವುದಿಲ್ಲ ಮತ್ತು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರೆ ಅದಕ್ಕೆ ನಾನು ಹೌದು ಎಲ್ಲಾ ಗಂಡಸರೂ ಹಾಗೆ ಇರುವುದಿಲ್ಲ ಆದರೆ ಕೆಲವರು ಇರುತ್ತಾರೆ ಎಂದು ಹೇಳಬೇಕಾಗುತ್ತದೆ. ಆದರೆ ಅವರು ಅಸ್ವಾಭಾವಿಕವಾಗಿ ಶಿಸ್ತಿನ ಮನುಷ್ಯ. ಅವರು ಸತ್ತಾಗ ನನ್ನ ನೆರೆಮನೆಯಾಕೆ ಬರೆದ ಲೇಖನದ ಬಗ್ಗೆ ನೆನ್ನೆ ಹೇಳಿದ್ದೆ. ಅದರಲ್ಲಿನ ಒಂದು ಭಾಗದಲ್ಲಿ ಹೀಗಿದೆ: “ನನ್ನ ಸ್ನೇಹಿತೆ ಶ್ರೀಮತಿ ನಾಯರ್ ತಮ್ಮ ಸೆಮಿನಾರ್‌ಗಳಿಗೊ ಅಥವ ತಮ್ಮ ತೊಂಬತ್ತು ವರ್ಷದ ತಾಯಿಯನ್ನು ನೋಡಲು ಕೇರಳಕ್ಕೋ ಹೋದಾಗ ನಾನು ಶ್ರೀ ನಾಯರ್‌ರಿಗೆ ಆಗಾಗ ಮಧ್ಯಾಹ್ನದ ಚಹಾ ಕೊಡುತ್ತಿದ್ದೆ. ಅಂತಹ ಸಂದರ್ಭಗಳಲ್ಲಿ ಅವರು ಸೌಮ್ಯ ಹಸನ್ಮುಖತೆಯಿಂದ ಚಹಾ ಕಪ್ಪು ತೆಗೆದುಕೊಳ್ಳುತ್ತಿದ್ದರು. ಗಂಡು/ಹೆಣ್ಣು, ಗಂಡ/ಹೆಂಡತಿ, ಅಥವ ತಾಯಿ/ಮಕ್ಕಳು ಇವುಗಳಲ್ಲಿ ಜವಾಬ್ದಾರಿ ಮತ್ತು ಸಂಬಂಧಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ನನ್ನ ಗೆಳತಿ ಶ್ರೀಮತಿ ನಾಯರ್ ಹೇಳಿದ್ದನ್ನು ನಾನೆಂದೂ ಕೇಳಿಲ್ಲ. ನನಗಿಂತಲೂ ಹೆಚ್ಚಿನ ತಿಳಿವಳಿಕೆಯ ನನ್ನ ನೆರೆಯವರು ಅದನ್ನು ’ಅದು ಸರಿ, ಕೇರಳದವರದು ಗೊತ್ತಲ್ಲ, ಅವರದು ಮಾತೃಪ್ರಧಾನ ಸಮಾಜ’ ಎಂದು ಹೇಳುತ್ತಾರೆ. ಅದು ಅಷ್ಟು ಸರಳ ಎಂದು ನನಗನ್ನಿಸಿಲ್ಲ. ಅಥವ ಅದು ಶ್ರೀಯುತ ನಾಯರ್‌ರವರ ಘನತೆಯ ನಡವಳಿಕೆಯನ್ನಾಗಲಿ, ಅವರು ತಮ್ಮ ಮನೆಯವರೊಡನೆ ಮತ್ತು ಇತರರೊಡನೆ ನಡೆದುಕೊಳ್ಳುತ್ತಿದ್ದ ರೀತಿಯನ್ನಾಗಲಿ ಹೇಳುತ್ತದೆ ಎಂದು ಅನ್ನಿಸುವುದಿಲ್ಲ. ಅವರೊಬ್ಬ ಉದಾರ ವ್ಯಕ್ತಿತ್ವದ ಸಂಭಾವಿತ ವ್ಯಕ್ತಿ ಎನ್ನುವುದು ನನ್ನ ಅಭಿಪ್ರಾಯ. ಅವರು ಹಾಗೆಯೇ ಉಳಿದರು ಕೂಡ.” ಇಂದು ಬೆಳಿಗ್ಗೆ ಅದನ್ನು ಓದಿದಾಗ ನನಗೆ ಅಳು ಬಂತು.

ನನಗೆ ಅನ್ನಿಸಿದ್ದನ್ನು ಯಾವಾಗೆಂದರೆ ಆಗ ಹೇಳುವ ನೇರ ಸ್ವಭಾವದ ವ್ಯಕ್ತಿ ನಾನು ಎಂಬ ಅಭಿಪ್ರಾಯ ಕೆಲವರಲ್ಲಿದೆ. ಆದರೆ ನನಗೆ ಯಾವುದರ ಬಗ್ಗೆಯಾದರೂ ನಿರ್ದಿಷ್ಟ ಅಭಿಪ್ರಾಯ ಇದ್ದರೆ ಮತ್ತು ಆಗ ಹೇಳುವುದರಲ್ಲಿ ಅರ್ಥ ಇದೆ ಎಂದಾಗ ಮಾತ್ರ ನಾನು ಹೇಳುತ್ತೇನೆ. ಅವರು ನನ್ನ ಹಾಗೆ ಮಾಡುತ್ತಿರಲಿಲ್ಲ. ಆದರೆ ಅದರರ್ಥ ಅವರಿಗೆ ಅಭಿಪ್ರಾಯಗಳಿರಲಿಲ್ಲ ಅಂತಲ್ಲ, ಅಥವ ’ವ್ಯವಹಾರಿಕ’ ಆಗಿದ್ದರು ಅಂತಲ್ಲ. ಅಷ್ಟಕ್ಕೂ ನಾವಿಬ್ಬರೂ ಒಂದೇ ತರಹದ ಹಿನ್ನೆಲೆಯಿಂದ ಬಂದವರು, ಒಂದೇ ಕಾಲಮಾನದಲ್ಲಿ ಬೆಳೆದವರು, ಮತ್ತು ನಮ್ಮ ದೇಶದ ಬಗ್ಗೆ ನಮ್ಮದೇ ಆದಂತಹ ಹೆಮ್ಮೆ ಮತ್ತು ದೂರದೃಷ್ಟಿ ಇದ್ದವರು. ಅವರು ನನ್ನನ್ನು ರೂಪಿಸಿದರು ಎಂದು ನಾನೇನಾದರೂ ಹೇಳಿದರೆ ಅವರು ಅದನ್ನು ಇಷ್ಟಪಡುತ್ತಿದ್ದರು ಎಂದು ನಾನು ಭಾವಿಸುವುದಿಲ್ಲ. ನಮ್ಮಿಬ್ಬರಿಗೂ ಕೆಲವು ಸಮಾನ ಆಲೋಚನೆಗಳಿದ್ದವು ಮತ್ತು ಅವು ನಮ್ಮನ್ನು ಹತ್ತಿರಕ್ಕೆ ತಂದಿತ್ತು.

 

ನಿಮ್ಮ ಗಂಡನೊಡನೆ ನೀವು ಯಾವ ವಿಷಯಕ್ಕೆ ವಾಗ್ವಾದ ಮಾಡುತ್ತಿದ್ದಿರಿ? ನಿಮ್ಮಿಬ್ಬರಿಗೂ ಇದ್ದ ಭಿನ್ನಾಭಿಪ್ರಾಯದ ವಿಷಯಗಳೇನು? ಅವರು ನಿಮ್ಮನ್ನು ಗೌರವಿಸುತ್ತಿದ್ದರು ಎನ್ನುವುದೇನೊ ನಿಜ ಮತ್ತು ಹಾಗಾಗಿ ಯಾರೂ ಏನೂ ಹೇಳುವ ಹಾಗೆ ಇರಲಿಲ್ಲ. ಆದರೆ ನಿಮ್ಮಲ್ಲೂ ವಾದಪ್ರತಿವಾದಗಳು ಇದ್ದಿರಬೇಕಲ್ಲ….

(ನಗು) ನಾವೆಂದೂ ದುಡ್ಡಿನ ವಿಷಯಕ್ಕಾಗಲಿ, ಅಥವ ಮಕ್ಕಳ ವಿಷಯಕ್ಕಾಗಲಿ ಜಗಳವಾಗಲಿ ವಾದವಾಗಲಿ ಮಾಡುತ್ತಿರಲಿಲ್ಲ. ರಾಜಕೀಯದ ವಿಷಯಕ್ಕೆ ಬಂದರೆ ಬಹುತೇಕ ವಿಷಯಗಳಲ್ಲಿ ನಮ್ಮದು ಒಮ್ಮನಸ್ಸಿತ್ತು. ಖಂಡಿತವಾಗಿ ಅಲ್ಲಲ್ಲಿ ಭಿನ್ನಾಭಿಪ್ರಾಯಗಳಾಗಲಿ ಕಿರಿಕಿರಿಗಳಾಗಲಿ ಇದ್ದಿರಬಹುದು, ಮತ್ತು ನಾವೂ ಮನುಷ್ಯರೇ. ಆದರೆ ಯಾವುದೇ ಗಂಭೀರ ಜಗಳದ ನೆನಪಿಲ್ಲ. ಸಣ್ಣ ಭಿನ್ನಾಭಿಪ್ರಾಯದ ವಿಷಯವನ್ನೂ ಅವರು ನಿಭಾಯಿಸುತ್ತಿದ್ದ ರೀತಿ ಏನಾಗಿತ್ತೆಂದರೆ ಅದು ತನ್ನಷ್ಟಕ್ಕೆ ತಣ್ಣಗಾಗುವ ರೀತಿಯಲ್ಲಿ ಪ್ರತಿಕ್ರಿಯಿಸದೆ ಸುಮ್ಮನಿರುವುದಾಗಿತ್ತು. ನಾನು ಮಿತಿಮೀರಿ ಕೆಲಸ ಮಾಡುತ್ತೇನೆ ಎನ್ನುವುದು ಅವರ ಶಾಶ್ವತ ಆಕ್ಷೇಪಣೆಯಾಗಿತ್ತು. “ಮೊಂಬತ್ತಿಯನ್ನು ಎರಡೂ ಕಡೆಯಿಂದ ಉರಿಸಬೇಡ” ಎಂದು ಅವರು ನನಗೆ ಅನೇಕ ಸಲ ಹೇಳುತ್ತಿದ್ದರು. ವಿಶ್ರಾಂತಿ ತೆಗೆದುಕೊಳ್ಳುವುದು ಹೇಗೆಂದು ನನಗೆ ಗೊತ್ತಿಲ್ಲ ಎಂದೇ ನನ್ನ ಮನೆಯವರು ನಂಬಿದ್ದರು. ಆ ದಿನಗಳಲ್ಲಿ ನಾನು ಯಾವುದಾದರೂ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಮತ್ತೆ ಇನ್ನೇನನ್ನಾದರೂ ಕೈಗೆತ್ತಿಕೊಳ್ಳುತ್ತಿದ್ದೆ. ಆ ದಿನಗಳಲ್ಲಿ ನಾನು ಹಗಲು ಹೊತ್ತು ನಿದ್ದೆ ಮಾಡುತ್ತಿರಲಿಲ್ಲ. ಅದನ್ನು ನಾನು ನನ್ನ ಬಾಲ್ಯದಲ್ಲಿ ಕಲಿತದ್ದು. ನಾನು ಉತ್ಕಟ ಸ್ವಭಾವದ ವ್ಯಕ್ತಿ ಎನ್ನುವುದೇನೋ ನಿಜ. ನಾನು ಎಲ್ಲವನ್ನೂ ಕಪ್ಪು ಬಿಳಿ ಎಂದಷ್ಟೇ ನೋಡುತ್ತೇನೆ, ಬೇರೆ ಬೂದು ಬಣ್ಣಗಳಿಗೆ ನನ್ನ ಪ್ರಕಾರ ಆಸ್ತಿತ್ವವಿಲ್ಲ ಎಂದು ಜನ ಹೇಳುತ್ತಿದ್ದರು. ನಿಮ್ಮ ಪ್ರಶ್ನೆಗೆ ಉತ್ತರ ಕೊಡಬಹುದಾದ ಒಂದು ಉದಾಹರಣೆಯನ್ನು ಕೊಡುತ್ತೇನೆ. ನಾನು ದೆಹಲಿಗೆ ಕೆಲಸಕ್ಕೆಂದು ಬರುವುದಕ್ಕಿಂತ ಮುಂಚೆ ಒಮ್ಮೆ ದೆಹಲಿಗೆ ಬಂದಿದ್ದೆವು ಮತ್ತು ಆಗ್ರಾಕ್ಕೂ ಹೋಗಿದ್ದೆವು. ಅಲ್ಲಿ ಆದ ಒಂದು ಘಟನೆಯ ಬಗ್ಗೆ ನನಗೆ ಈಗ ತಾನೆ ನೆನಪಾಯಿತು. ನಮ್ಮೊಡನೆ ನಮ್ಮ ಆಕಾಶವಾಣಿಯ ಮಿತ್ರ ಸಹ ಬಂದಿದ್ದರು. ಅವರಿಗೆ ಸೈನಿಕರ ಕ್ವಾರ್ಟರ್ಸ್‌ನಲ್ಲಿ ವಾಸ ಮಾಡುತ್ತಿದ್ದ ಒಬ್ಬ ಸೈನಿಕ ಸ್ನೇಹಿತ ಇದ್ದರು. ನಮ್ಮನ್ನು ಔತಣಕ್ಕೆ ಆಮಂತ್ರಿಸಲಾಗಿತ್ತು. ಅವರೂ ಸಹ ಕೇರಳದವರೆ. ಅವರ ಬಗ್ಗೆ ನನಗೆ ಹೆಚ್ಚೇನೂ ಜ್ಞಾಪಕಕ್ಕೆ ಬರುತ್ತಿಲ್ಲ. ಮದುವೆ ಆಗಿ ಎಲ್ಲಾ ಆಗಿದ್ದರೂ ಕೆಲವೊಂದು ಸಾಮಾಜಿಕ ನಡವಳಿಕೆಗಳ ಬಗ್ಗೆ ನಾನು ಇನ್ನೂ ಮುಗ್ಧಳಾಗಿಯೇ ಇದ್ದೆ. ನಾವು ಕ್ವಾರ್ಟರ್ಸ್‌ನ ಒಳಗೆ ಹೋಗಲು ಗೇಟೊಂದನ್ನು ದಾಟಬೇಕಿತ್ತು. ಅಲ್ಲಿದ್ದ ಶಸ್ತ್ರಧಾರಿ ಕಾವಲುಗಾರ ನಮ್ಮನ್ನು “ಸ್ನೇಹಿತರೊ ಶತ್ರುಗಳೋ (Friend or foe)” ಎಂದು ಕೇಳಿದ. ಅದು ನನ್ನನ್ನು ಗಲಿಬಿಲಿ ಮಾಡಿತು. ಭಯ ಉಂಟುಮಾಡಿತು. ಅದಕ್ಕೆ ಸರಿಯಾಗಿ ನಮ್ಮ ಅತಿಥೇಯ ಸ್ನೇಹಿತ “ಕುಡಿದರು”. ನಾನಾದರೊ ಧೂಮಪಾನ ಮಾಡದ, ಮದ್ಯಪಾನ ಮಾಡದ ಕುಟುಂಬದಿಂದ ಬಂದವಳು. ನನ್ನ ಗಂಡ ಸಹ ಧೂಮಪಾನ ಮಾಡುತ್ತಿರಲಿಲ್ಲ, ಕುಡಿಯುತ್ತಲೂ ಇರಲಿಲ್ಲ. ಅವರು ಅದನ್ನು ಸಹಿಸಿಕೊಂಡರು ಮತ್ತು ಅದು ಅವರನ್ನು ಬಾಧಿಸಲಿಲ್ಲ. ಆದರೆ ನನಗೆ ಬಹಳ ಅಸಮಾಧಾನವಾಗಿತ್ತು. ಆದರೆ ನನ್ನ ಒಳಗಡೆ ಏನಾಗುತ್ತಿದೆ ಎಂದು ನನ್ನ ಗಂಡನಿಗೆ ಗೊತ್ತಿತ್ತು. ಮನೆಗೆ ಬಂದನಂತರ ಅವರಿಗೆ ಏನಾದರೂ ಹೇಳಿದೆನೆ ಎನ್ನುವುದು ನನಗೆ ನೆನಪಿಲ್ಲ. ಅಂತಹ ಸಂದರ್ಭಗಳಲ್ಲಿ ನನ್ನ ಪಾಡಿಗೆ ನನ್ನನ್ನು ಬಿಟ್ಟು ನನ್ನ ಸಮಸ್ಯೆಗಳನ್ನು ನಾನೆ ಪರಿಹರಿಸಿಕೊಳ್ಳುವುದಕ್ಕೆ ಸಮಯ ನೀಡುವುದು ಅವರ ನಿಲುವಾಗಿತ್ತು.

 

ನಾನು ಸಣ್ಣಪುಟ್ಟ ಕಿರಿಕಿರಿಗಳ ವಿಷಯ ಎತ್ತಿದ್ದೇಕೆಂದರೆ ಅವು ಬಹಳ ಆಸಕ್ತಿಯವು. ನಾನು ಸಂದರ್ಶಿಸಿದ ಒಬ್ಬರು ಹೇಳಿದ್ದೇನೆಂದರೆ ಅವರ ಗಂಡನಿಗೆ ಇವರು ರೇಷ್ಮೆ ಸೀರೆ ಮತ್ತು ಆಭರಣಗಳನ್ನು ಧರಿಸುವುದು ಬೇಕಾಗಿತ್ತು. ಅವರ ಗಂಡ ಒಳ್ಳೆಯ ರೇಷ್ಮೆ ಸೀರೆ ಕೊಂಡುಕೊಡುತ್ತಿದ್ದರು, ಆದರೆ ಇವರು ರೇಷ್ಮೆಸೀರೆ ಮತ್ತು ಆಭರಣಗಳನ್ನು ಇಷ್ಟಪಡುತ್ತಿರಲಿಲ್ಲ. ಹಾಗಾಗಿ…

ಮದುವೆಗೆ ಮೊದಲು ನಾನು ಖಾದಿಯನ್ನು ಮಾತ್ರ ಧರಿಸುತ್ತಿದ್ದೆ. ಮಕ್ಕಳಾಗಿದ್ದಾಗ ನಮಗೆ ಏನು ಕೊಡುತ್ತಿದ್ದರೊ ಅದನ್ನು ಉಡುತ್ತಿದ್ದೆವು. ನನ್ನ ಗಂಡನಿಗೆ ಒಳ್ಳೆಯ ಅಭಿರುಚಿ ಇತ್ತು. ಆರಂಭದಲ್ಲಿ ನನಗದು ಇರಲಿಲ್ಲ. ಅದರರ್ಥ ಮದುವೆಗೆ ಮುಂಚೆ ನಾನು ಕಳಪೆಯಾಗಿ ವಸ್ತ್ರ ಉಡುತ್ತಿದ್ದೆ ಎಂದಲ್ಲ. ನಮಗೆ ಉಡುಗೆತೊಡುಗೆಗಳಲ್ಲಿ ಮತ್ತು ಹಾಗೆಯೆ ಜೀವನದಲ್ಲಿಯೂ ಸರಳವಾಗಿರಲು ಹೇಳಿಕೊಡಲಾಗಿತ್ತು. ನನ್ನ ಗಂಡನಿಗೆ ದುಬಾರಿಯಾದ ಅಥವ ಎದ್ದುಕಾಣಿಸುವ ವಸ್ತುಗಳ ಬಗ್ಗೆ ಮೋಹವಿರಲಿಲ್ಲ. ಆದರೆ ಸರಳವಾದರೂ ಸೊಗಸಾಗಿ ಕಾಣುವ ವಸ್ತುಗಳನ್ನು ಹೇಗೆ ಪಡೆಯಬೇಕು ಎಂದು ಅವರಿಗೆ ಗೊತ್ತಿತ್ತು. ನಮ್ಮಿಬ್ಬರಿಗೂ ಬಂಗಾರದ ಬಗ್ಗೆ ಮೋಹವಿರಲಿಲ್ಲ. ಅವರ ಹತ್ತಿರ ದುಡ್ಡಿಲ್ಲದಿದ್ದಾಗಲೂ ಮಕ್ಕಳಿಗೆ ಉತ್ತಮವಾದ ಸೊಗಸಾದ ವಸ್ತುಗಳನ್ನು ತರುತ್ತಿದ್ದರು. ಅವರು ಖರ್ಚು ಮಾಡುತ್ತಿದ್ದ ಒಂದೇ ಒಂದು ಬಾಬತ್ತೆಂದರೆ ಅದು ಪುಸ್ತಕಗಳು.

 

ಅವರಿಗೆ ಅಭಿರುಚಿ ಇತ್ತು ಮತ್ತು ನಿಮಗೆ ಸೀರೆ ತಂದುಕೊಂಡುವುದನ್ನು ಇಷ್ಟಪಡುತ್ತಿದ್ದರು. ಅದು ಖುಷಿ ಕೊಡುವ ವಿಚಾರ…

ಅವರಿಗೆ ಅಭಿರುಚಿ ಇತ್ತು. ಆ ಕೆಲವೊಂದು ಗುಣಗಳನ್ನು ನಾನು ಅವರಿಂದ ಪಡೆದೆ.

 

ಅಂದರೆ ಅವರು ನಿಮ್ಮನ್ನು ಆರಾಧಿಸುತ್ತಿದ್ದರು ಮತ್ತು ನಿಮಗೆ ಒಳ್ಳೆಯ ವಸ್ತುಗಳನ್ನು ತಂದುಕೊಡುತ್ತಿದ್ದರು.

ಹೌದು. ಅವರು ಬೇರೆ ಊರಿಗೆ ಹೋದಾಗ, ಅಥವ ನಮ್ಮ ಹುಟ್ಟುಹಬ್ಬಗಳಿದ್ದಾಗ, ಮದುವೆ ವಾರ್ಷಿಕಕ್ಕೆ, ಅಥವ ನನ್ನ ಪುಸ್ತಕಗಳು ಪ್ರಕಟಗೊಂಡಾಗೆಲ್ಲ ನೆನಪಿಟ್ಟುಕೊಂಡು ನನಗೆ ಮತ್ತು ಮಕ್ಕಳಿಗೆ ಉಡುಗೊರೆಗಳನ್ನು ತರುತ್ತಿದ್ದರು.

 

ಇನ್ನು ಊಟದ ಬಗ್ಗೆ. ದೆಹಲಿಯಲ್ಲಿ ಮನೆಯವರಿಗೆ ನೀವು ಮಾಂಸಾಹಾರಿ ಅಡಿಗೆ ಮಾಡಲು ಆರಂಭಿಸಿದಿರಿ. ನಾನು ರಾಮೇಶ್ವರಿ ವರ್ಮರವರನ್ನು ಸಂದರ್ಶಿಸಿದಾಗ ಅವರು ತಾವೊಬ್ಬ ಕಟ್ಟಾ ಸಸ್ಯಾಹಾರಿ ಎಂದಿದ್ದರು. ಅವರು ಮತ್ತವರ ಪತಿ ಊಟಕ್ಕೆಂದು ಹೊರಗೆ ಹೋದಾಗ ಇಬ್ಬರೂ ಒಂದು ಹೋಟೆಲ್‌ಗೆ ಹೋಗಿ ಇವರು ಇಡ್ಲಿ ಮತ್ತಿತರೆ ಸಸ್ಯಾಹಾರಿ ಊಟ ಮಾಡಿದ ಮೇಲೆ ಮತ್ತಿನ್ನೊಂದು ಹೋಟೆಲ್‌ಗೆ ಹೋಗಿ ಅಲ್ಲಿ ಅವರ ಗಂಡ ಮಾಂಸ ಅಥವ ಮೀನನ್ನು ತಿನ್ನುತ್ತಿದ್ದರಂತೆ.

ಇಲ್ಲ, ನಮಗೆ ಹಾಗೆ ಅಗಲಿಲ್ಲ. ಬಹುಶಃ ಕೇವಲ ಮಾಂಸಾಹಾರ ಮಾತ್ರ ಸಿಗುವ ಹೋಟೆಲ್‌ಗೆ ನಾವೆಂದೂ ಹೋಗಲಿಲ್ಲ.

 

ಅವರು ಹಾಗೇಕೆ ಮಾಡಿದರೆಂದರೆ ರಾಮೇಶ್ವರಿಯವರಿಗೆ ಮಾಂಸಾಹಾರದ ಅಡಿಗೆಯನ್ನು ತಡೆದುಕೊಳ್ಳಲಾಗುತ್ತಿರಲಿಲ್ಲ.

ನನಗೆ ನಿಜಕ್ಕೂ ಆಶ್ಚರ್ಯ ಆಗುತ್ತಿದೆ. ಅವರ ಗಂಡ ಕೇರಳದವರು ಮತ್ತು ಇಲ್ಲಿಯ ವರ್ಮರು ಸಾಂಪ್ರದಾಯಿಕವಾಗಿ ಸಸ್ಯಾಹಾರಿಗಳು. ಅವರು ತೀರಿಕೊಂಡಾಗ ಅವರ ಬಗ್ಗೆ ಅವರ ಸಹೋದ್ಯೋಗಿಗಳು ಮತ್ತು ಶಿಷ್ಯರು ಬರೆದಿದ್ದ ಕೆಲವು ಲೇಖನಗಳನ್ನು ಓದಿದ್ದೆ. ಅವರೆಲ್ಲ ಅವರನ್ನು ಒಬ್ಬ ಸಹೋದ್ಯೋಗಿಯಾಗಿ ಮತ್ತು ಗುರುಗಳಾಗಿ ಬಹಳ ಇಷ್ಟಪಡುತ್ತಿದ್ದರು.

 

ನಿಮ್ಮ ಕುಟುಂಬದ ಬಗ್ಗೆ ಹೇಳುವುದಾದರೆ ನಿಮಗೆ ಏನು ವಿಶೇಷ ಎನಿಸುತ್ತದೆ? ನೀವು ಮತ್ತು ನಿಮ್ಮ ಗಂಡ ಇಬ್ಬರನ್ನೂ ಕೂಡಿಸಿ ಗಮನಿಸಿದಾಗ ಏನು ವಿಶೇಷ ಎನ್ನಿಸುತ್ತೆ? ಮಾತುಗಳಲ್ಲಿ ಹೇಳಲು ಪ್ರಯತ್ನಿಸಿ.

ಈಗ ನೀವು ಇದನ್ನು ಕೇಳುತ್ತಿದ್ದೀರಾದ್ದರಿಂದ ನನ್ನ ತಲೆ ಚಚ್ಚಿಕೊಳ್ಳುತ್ತಿದ್ದೇನೆ. (ನಗು) ಇಲ್ಲದಿದ್ದರೆ ಬದುಕಿರುವಾಗ ಇಂತಹ ಪ್ರಶ್ನೆಗಳನ್ನು ನಮಗೆ ನಾವು ಕೇಳಿಕೊಳ್ಳುವುದಿಲ್ಲ.

 

ಹೌದು. ಆದರೆ ಈಗ ಅದು ಮುಖ್ಯವಾಗಿರುವುದರಿಂದ ನೀವು ಯೋಚನೆ ಮಾಡಬೇಕು. ನೀವು ಓದಲು, ನೌಕರಿ ಮಾಡಲು ಹೋದಿರಿ ಮತ್ತು ನಿಮ್ಮ ಗಂಡ ಮನೆಯ ಜವಾಬ್ದಾರಿ ಹೊತ್ತುಕೊಂಡರು. ಅವರು ಮಕ್ಕಳನ್ನು ಸಿನೆಮಾಗೆ, ಐಸ್‍ಕ್ರೀಮ್ ಕೊಡಿಸುವುದಕ್ಕೆ ಕರೆದುಕೊಂಡು ಹೋಗುತ್ತಿದ್ದರು, ಮತ್ತು ಹೇಳಬೇಕೆಂದರೆ ಜೊತೆಯಾಗಿ ಒಳ್ಳೆಯ ಸಮಯ ಕಳೆದರು. ಮತ್ತೆ ಅವರು ಮಕ್ಕಳಿಗೆ ನಿಮ್ಮ ಜೊತೆ ವಾದ ಮಾಡದಂತೆ, ತೊಂದರೆ ಕೊಡದಂತೆ ಹೇಳಿ ನೀವು ಶಾಂತಿಯಿಂದ ಕೆಲಸ ಮಾಡಲು ಅನುಕೂಲವಾಗುವಂತೆ ನಿಮ್ಮನ್ನು ರಕ್ಷಿಸುತ್ತಿದ್ದರು.

ನೀವು ನನ್ನ ಸ್ಥಿತಿಯನ್ನು ಕಷ್ಟಕ್ಕೀಡು ಮಾಡಿದಿರಿ. ನಮ್ಮಿಬ್ಬರ ನಡುವೆ ವಿಶ್ವಾಸ ಇದ್ದಿದ್ದರ ಬಗ್ಗೆ ಮತ್ತು ಬಹಳ ಕಮ್ಮಿ ಭಿನ್ನಾಭಿಪ್ರಾಯಗಳಿದ್ದಿದ್ದರ ಬಗ್ಗೆ ನನಗೆ ಸಂತೋಷವಿದೆ. ನಮ್ಮದು ಬಹಳ ಅಪರೂಪದ ಕುಟುಂಬ ಎಂದು ನಾನು ಹೇಳಲಾರೆ. ನಮಗಿಂತ ಇನ್ನೂ ಹೆಚ್ಚು ಘಟಿಸುತ್ತಿದ್ದ ಕುಟುಂಬಗಳೂ ಇರುವ ಬಗ್ಗೆ ನನಗೆ ವಿಶ್ವಾಸ ಇದೆ. ನನಗನ್ನಿಸುತ್ತೆ ನಾವು ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಉನ್ನತವಾದ ಆದರ್ಶಗಳು ಪ್ರಚಲಿತದಲ್ಲಿದ್ದ ಕಾಲದ ಉತ್ಪನ್ನಗಳು ಎಂದು. ಅದರರ್ಥ ಎಲ್ಲರೂ ಹಾಗೆ ನಂಬಿದ್ದರು ಮತ್ತು ವರ್ತಿಸಿದರು ಅಂತಲ್ಲ. ನಾನು ಹದಿನೈದು ಹದಿನಾರು ವರ್ಷದವಳಾಗಿದ್ದಾಗಿನಿಂದಲೂ ನನಗೆ ಸ್ತ್ರೀಯರ ಸಮಸ್ಯೆಗಳ ಬಗ್ಗೆ ಗೊತ್ತಿತ್ತು ಮತ್ತು ಜಾತಿಯಿಂದಾಗಿ ಒದಗುವ ಮೇಲುಕೀಳುಗಳ ಬಗ್ಗೆಯೂ ಗೊತ್ತಿತ್ತು. ಸೋವಿಯತ್‌ನ ಅನೇಕ ಪುಸ್ತಕಗಳು ನಮಗೆ ಟ್ರ್ಯಾಕ್ಟರ್ ಓಡಿಸುವ ಮಹಿಳೆಯರ ಬಗ್ಗೆ, ದೊಡ್ಡಡೊಡ್ಡ ಕಾರ್ಖಾನೆಗಳಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ, ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಗಾರ್ಕಿಯ ’ತಾಯಿ’ ನನ್ನಂತಹ ಅನೇಕ ಸ್ತ್ರೀಯರಿಗೆ ಆಲೋಚನೆಗಳನ್ನು ಮತ್ತು ದೂರದೃಷ್ಟಿಯನ್ನು ಕೊಟ್ಟವು. ನಾನು ಮದುವೆ ಆದ ಗಂಡಸು ಅಂತಹ ಅಭಿಪ್ರಾಯಗಳನ್ನು ಇಟ್ಟುಕೊಳ್ಳದೆ ಇದ್ದಿದ್ದರೆ ನನ್ನ ಜೀವನ ಹೇಗಿರುತ್ತಿತ್ತು ಎಂದು ಊಹಿಸಲು ಆಗುವುದಿಲ್ಲ ಎನ್ನುವುದು ನಿಜ. ಬಹುತೇಕವಾಗಿ ಸ್ತ್ರೀಯರೇ ಹೆಚ್ಚು ತ್ಯಾಗ ಮಾಡುವುದನ್ನು ನಾವು ಸುತ್ತಮುತ್ತ ನೋಡುತ್ತೇವೆ.

 

ನಿಮ್ಮ ಜೀವನದಲ್ಲಿ ಬಂದ ಮಹಿಳೆಯರ ಬಗ್ಗೆ ಹೇಳಿ.

ಅವರ ತಾಯಿ ಬಹಳ ಸಂಭಾವಿತೆ ಮತ್ತು ತನ್ನ ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸುವವರಾಗಿದ್ದರು. ನಮ್ಮ ತಾಯಿ ಅವರಿಗಿಂತ ಭಿನ್ನ. ಕಾಳಜಿಯ ಮನಸ್ಥಿತಿ. ಅವರಿಗೆ ತಮ್ಮ ಮಕ್ಕಳನ್ನು ಬಿಟ್ಟರೆ ಬದುಕಿನಲ್ಲಿ ಬೇರೇನೂ ಇರಲಿಲ್ಲ. ನನಗೆ ತಿನ್ನಲು ಏನಾದರೂ ಪದಾರ್ಥಗಳನ್ನು ಮತ್ತು ತೆಂಗಿನಕಾಯಿಯಂತಹುದನ್ನು ಅವರು ನಿಯಮಿತವಾಗಿ ಕಳುಹಿಸುತ್ತಿದ್ದರು. ಆಕೆ ಒಬ್ಬ ಅಪ್ರತಿಮ ಮಹಿಳೆ. ಅಡಿಗೆ ಮಾಡುವುದು ಹಾಗೂ ಮನೆ ಮತ್ತು ಅಂಗಳದ ಉಸ್ತುವಾರಿ ವಹಿಸುವುದರ ಜೊತೆಗೆ ಆಯುರ್ವೇದದ ಔಷಧಗಳನ್ನೂ ತಯಾರಿಸುತ್ತಿದ್ದರು.

 

ಖಂಡಿತವಾಗಿ ನೀವು ಅವರ ಎಲ್ಲಾ ಗುಣಗಳನ್ನು, ಅದರಲ್ಲೂ ಅನೇಕ ರಂಗಗಳಲ್ಲಿ ಕೆಲಸ ಮಾಡುವುದನ್ನು ಪಡೆದುಕೊಂಡಿರಿ. ಅವರು ನಿಮ್ಮ ಅತ್ತೆಯಷ್ಟು ಮುಕ್ತವಾಗಿ ಪ್ರೀತಿ ವ್ಯಕ್ತಪಡಿಸುವ ವ್ಯಕ್ತಿ ಆಗಿರಲಿಲ್ಲ ಎಂದು ಹೇಳುತ್ತಿದ್ದಿರಿ.

ಅವರು ನಮಗಾಗಿ ಅನೇಕವನ್ನು ಮಾಡುತ್ತಿದ್ದರು. ಅದೂ ಸಹ ಪ್ರೀತಿಯೆ. ಆದರೆ ಆಕೆ ಅಪ್ಪಿಕೊಳ್ಳುವುದಾಗಲಿ, ಸಿಹಿಮಾತಾಡುವುದಾಗಲಿ ಮಾಡುತ್ತಿರಲಿಲ್ಲ.

 

ನಿಮ್ಮ ಅತ್ತೆ ಹಾಗೆ ಇದ್ದರೆ?

ಅವರೂ ಸಹ ಕೃಷಿ ಮಾಡಿಸುವುದು, ತೆಂಗಿನನಾರು ತೆಗೆಯುವುದು, ಪಶುಪಾಲನೆ, ಮುಂತಾದ ಅನೇಕವನ್ನು ನಿಭಾಯಿಸುತ್ತಿದ್ದರು. ತಮ್ಮ ಗಂಡನ ಬಗ್ಗೆ ಮಾಹಿತಿ ಇಲ್ಲದೆ ಕಳೆದ ಹಲವಾರು ವರ್ಷಗಳು ಅವರನ್ನು ಎಷ್ಟು ಘಾಸಿಗೊಳಿಸಿದ್ದವು ಎಂದರೆ ತಮ್ಮ ಗಂಡ ವಾಪಸಾದ ತಕ್ಷಣ ಆಕೆ ಮಲಗಿಬಿಟ್ಟರು. ನಮ್ಮ ಮಾವ ಆಕೆಗೆ ಔಷಧ ಕೊಟ್ಟು ತದನಂತರ ಏನಾದರೂ ಸಿಹಿಪದಾರ್ಥ ಕೊಡುತ್ತಿದ್ದರು. ಅವರಿಬ್ಬರ ಮಧ್ಯೆ ಅಸಾಧಾರಣವಾದ ಸಂಬಂಧ ಇತ್ತು. ನನ್ನ ಗಂಡ ಅವರ ತಂದೆತಾಯಿಯರಿಂದ ಕೆಲವೊಂದು ಗುಣಗಳನ್ನು ಅನುವಂಶಿಕವಾಗಿ ಪಡೆದುಕೊಂಡರು ಎನ್ನಿಸುತ್ತದೆ.

 

ನಿಮ್ಮ ಗಂಡ ಹೇಗೆ? ಅವರು ಕಾಣಿಸುವಂತೆ ಪ್ರೀತಿ ತೋರಿಸುತ್ತಿದ್ದರೆ?

ಹೌದು, ನನಗಿಂತ ಹೆಚ್ಚಾಗಿ ಅನ್ನಿಸುತ್ತೆ.

 

ಬಹುಶಃ ನಿಮಗೆ ಅದರ ಅಗತ್ಯವಿತ್ತು. ಎದ್ದು ಕಾಣಿಸುವಂತೆ ಪ್ರೀತಿ ತೋರಿಸದೆ ಇರುವುದು ಕೆಲವೊಮ್ಮೆ ಸಹಾಯ ಮಾಡುತ್ತದೆ. ಪ್ರೀತಿಯ ತೋರ್ಪಡಿಕೆ ಮನಸ್ಸಿಗೆ ಸಾಂತ್ವನದ ಅನುಭವ ನೀಡುತ್ತದೆ.

ಅವರು ಉಪದೇಶ ಕೊಡುವುದರ ಮತ್ತು ತಮ್ಮ ಆಭಿಪ್ರಾಯಗಳನ್ನು ಇನ್ನೊಬ್ಬರ ಮೇಲೆ ಹೇರುವುದರ ವಿರುದ್ಧ ಇದ್ದರು. ನಾನು ಕೆಲವೊಮ್ಮೆ ಬಹಳ ನಿಷ್ಠುರ ಮತ್ತು ಕಠಿಣ ಮನೋಭಾವದವಳಾಗಬಲ್ಲೆ ಎಂದು ಅವರಿಗೆ ಗೊತ್ತಿತ್ತು. ಅವರು ಎಂದೂ ಉಪದೇಶ ಕೊಡಲು ಬರುತ್ತಿರಲಿಲ್ಲ, ಬದಲಿಗೆ ನಾನು ಹುಟ್ಟಿದ ನಕ್ಷತ್ರವಾದ ಅರುದ್ರ ನಕ್ಷತ್ರ ಒಂದು ಉರಿವ ಕೆಂಡ ಎನ್ನುತ್ತಿದ್ದರು. ಅದರ ಮೂಲಕ ಅವರು ನನಗೆ ಬಹುಶಃ ನಾನು ಬೇಗ ಉರಿದುಹೋಗದಂತೆ, ಮೊಂಬತ್ತಿಯನ್ನು ಎರಡೂ ಕಡೆಯಿಂದ ಉರಿಸಬಾರದು ಎಂದು ಹೇಳಲು ಪ್ರಯತ್ನಿಸುತ್ತಿದ್ದರು ಎನ್ನಿಸುತ್ತದೆ.

 

ಅವರೊಬ್ಬ ಬಹಳ ಪ್ರಣಯಭಾವದ ವ್ಯಕ್ತಿ ಆಗಿದ್ದರು ಎನ್ನಿಸುತ್ತದೆ. ನೀವು ಶುಷ್ಕ ಅರ್ಥಶಾಸ್ತ್ರಜ್ಞೆ, ಆದರೆ ಅವರು ರಾಜಕೀಯ, ಸಂಗೀತ, ಸಾಹಿತ್ಯ, ಇತ್ಯಾದಿಗಳಲ್ಲಿ ತೀವ್ರ ಆಸಕ್ತಿ ಇದ್ದಂತಹವರು.

ಹಾಗೆ ನೋಡಿದರೆ ನಾನು ಕೇವಲ ಒಣ ಅರ್ಥಶಾಸ್ತ್ರಜ್ಞೆ ಆಗಿರಲಿಲ್ಲ…

 

ನನಗನ್ನಿಸುತ್ತೆ ನೀವು ಸಾಧಿಸಿದ ಅನೇಕವು ನಿಮ್ಮಿಂದ ಸಾಧ್ಯವಾಗುವಂತೆ ನಿಮಗೆ ಅವರಿಂದ ಪೋಷಣೆ ಸಿಕ್ಕಿತು ಎಂದು. ಅವರನ್ನು ನೀವು ಏನೆಂದು ಕರೆಯುತ್ತಿದ್ದಿರಿ?

(ಸಿಕ್ಕಾಪಟ್ಟೆ ನಗು) ದಯವಿಟ್ಟು ಅದನ್ನು ಕೇಳಬೇಡಿ. ಸಂಪೂರ್ಣವಾಗಿ ಖಾಸಗಿಯಾದದ್ದು ಕೆಲವು ಹಾಗೆಯೇ ಇರಲಿ! ನಾವಿಬ್ಬರೂ ಒಬ್ಬರನ್ನೊಬ್ಬರು ಹೆಸರು ಹಿಡಿದು ಕರೆಯುತ್ತಿರಲಿಲ್ಲ. ಅವರು ನನ್ನ ಸಹಪಾಠಿ ಆಗಿರಲಿಲ್ಲ. ಹಾಗೇನಾದರೂ ಆಗಿದ್ದಿದ್ದರೆ ಅವರನ್ನು ಹೆಸರಿಡಿದು ಕರೆಯುವ ಅಭ್ಯಾಸವಾಗಿರುತ್ತಿತ್ತೇನೊ. ಅವರೂ ಸಹ ’ಏನೇ’, ’ಲೇ’ ಎನ್ನುವಂತಹ ಪದಗಳನ್ನು ಎಂದೂ ಬಳಸಲಿಲ್ಲ. ಹೇಳಬೇಕೆಂದರೆ ನಾವು ಅಂತಹುಗಳನ್ನು ಮಕ್ಕಳಿಗೂ ಬಳಸಲಿಲ್ಲ.

 

ಅವರ ಹೆಸರು ಏನಾಗಿತ್ತು?

ನನ್ನ ಗಂಡನ ಹೆಸರು ಗೋಪಿನಾಥನ್ ನಾಯರ್. ಕೇರಳದಲ್ಲಿ ಹಿರಿಯರು ಅವರನ್ನು ಗೋಪಿ ಎನ್ನುತ್ತಿದ್ದರು, saradamoni-5ಮತ್ತು ಅವರ ಕೆಲವು ಸಮವಯಸ್ಕರು ಗೋಪಿ ಪಿಳ್ಳೈ, ಗೋಪಿಚೆಟ್ಟನ್, ಮತ್ತಿತರ ಹೆಸರುಗಳಿಂದ ಕರೆಯುತ್ತಿದ್ದರು. ದೆಹಲಿಯಲ್ಲಿ ಬಹಳಷ್ಟು ಜನ ಅವರನ್ನು ಮಿಸ್ಟರ್ ನಾಯರ್ ಎನ್ನುತ್ತಿದ್ದರು. ನಮಗೆ ಅದು ಅಷ್ಟೊಂದು ಹಿಡಿಸುತ್ತಿರಲಿಲ್ಲ. ಮದುವೆ ಆದ ನಂತರ ನಾನು ಹೆಸರು ಬದಲಾಯಿಸಲಿಲ್ಲ. ನಮ್ಮಲ್ಲಿ ಅದು ಪದ್ದತಿಯೂ ಆಗಿರಲಿಲ್ಲ. ಅಧಿಕೃತವಾಗಿ ಅದರ ಅಗತ್ಯವೂ ಇರಲಿಲ್ಲ. ನಮ್ಮ ಸಾಮಾಜಿಕ ಜೀವನದಲ್ಲಿ ಹೀಗೆ ಎರಡು ಪ್ರತ್ಯೇಕ ಆಸ್ಮಿತೆಗಳಿದ್ದ ಬೇರೆಯೇ ವ್ಯಕ್ತಿಗಳಾಗಿ ನಾವು ಉಳಿದುಕೊಂಡೆವು. ನಮ್ಮ ಪಕ್ಕದ ಮನೆಯವರೊಬ್ಬರು ಮಾತ್ರ ನಮ್ಮನ್ನು ಶ್ರೀ ಮತ್ತು ಶ್ರೀಮತಿ ನಾಯರ್ ಎನ್ನುತ್ತಿದ್ದರು. ಆದರೆ ನಾನು ಕೇರಳದಿಂದ ಹೊರಗಿದ್ದ ವರ್ಷಗಳಲ್ಲಿ ಅಭಿವೃದ್ಧಿ ಮತ್ತು ಆಧುನಿಕತೆಯ ಪಥದಲ್ಲಿ ಸಾಗಿದ ಕೇರಳದಲ್ಲಿ ಹೆಣ್ಣುಮಕ್ಕಳು ಅಪ್ಪನ ಅಥವ ಗಂಡನ ಹೆಸರನ್ನು ಜೋಡಿಸಿಕೊಳ್ಳುವ ಅಭ್ಯಾಸ ಬೆಳೆಯಿತು. ಹಾಗೆ ಹೆಂಗಸರೇ ಮಾಡಿಕೊಳ್ಳುತ್ತಾರೊ ಅಥವ ಅದಕ್ಕೆ ಅಧಿಕೃತ ಒಪ್ಪಿಗೆ ಇದೆಯೊ ನನಗೆ ಗೊತ್ತಿಲ್ಲ. ಆದರೆ ನನ್ನ ಹೆಸರನ್ನು “ಶಾರದಾ ಮೋನಿ” ಎಂದು ಎರಡು ಪ್ರತ್ಯೇಕ ಪದಗಳಾಗಿ ಬರೆದಾಗ, ಅಂದರೆ ನಾನು ಯಾವುದೋ ’ಮೋನಿ’ಯ ಹೆಂಡತಿಯೊ ಮಗಳೊ ಅನ್ನುವಂತೆ ಬರೆದಾಗ ನನಗೆ ಕಸಿವಿಸಿ ಆಗುತ್ತದೆ.

(ಮಾತು ನಿಲ್ಲುತ್ತದೆ)

ಸಮಯ ಎಷ್ಟೀಗ?

 

ಹನ್ನೆರಡೂಮುಕ್ಕಾಲು ಆಗುತ್ತ ಬಂತು.

ಹನ್ನೆರಡೂಮುಕ್ಕಾಲು! ಬೆಳಗ್ಗೆ ಏನು ತಿಂಡಿ ತಿಂದಿರಿ? ಈಗ ಊಟಕ್ಕೆ ನಿಲ್ಲಿಸೋಣ.

***

ನಾವು ದೆಹಲಿಗೆ ನೌಕರಿಗೆಂದು ಹೋದಾಗ ನಮಗಿದ್ದ ಆಲೋಚನೆ ಆದಷ್ಟು ಬೇಗ ವಾಪಸಾಗುವುದಾಗಿತ್ತು. ನನ್ನ ಗಂಡ ಕೇವಲ ಪತ್ರಕರ್ತರಾಗಿರಲಿಲ್ಲ. ಅವರು ವಾರಪತ್ರಿಕೆಗಳನ್ನು, ಪತ್ರಿಕೆಗಳನ್ನು ಆರಂಭಿಸಿದವರೂ ಆಗಿದ್ದರು. ದೆಹಲಿಗೆ ಬರುವುದಕ್ಕಿಂತ ಮೊದಲು ಅವರೊಂದು ದಿನಪತ್ರಿಕೆ ಆರಂಭಿಸಿದ್ದರು ಮತ್ತು ಅದು ಆಗಾಗಲೆ ಕೇರಳದ ಮೂರನೆ ಅತಿ ಹೆಚ್ಚು ಪ್ರಸಾರದ ಪತ್ರಿಕೆ ಆಗಿತ್ತು. ಆದರೆ ನಾವು ಪ್ರತಿ ಸಲ ಕೇರಳಕ್ಕೆ ಬರುತ್ತಿದ್ದಾಗ ನಮ್ಮ ಗಮನಕ್ಕೆ ಬಂದಿದ್ದೇನೆಂದರೆ ದಿನಪತ್ರಿಕೆಯ ಉದ್ಯಮದಲ್ಲಿ ಹೆಚ್ಚಾಗುತ್ತಿದ್ದ ದೊಡ್ಡದೊಡ್ಡ ಹಣವಂತ ಕುಳಗಳ ಹಿಡಿತ ಮತ್ತು ನಂತರ ಅದು ಎಲ್ಲಾ ಮಾಧ್ಯಮಕ್ಕೂ ವ್ಯಾಪಿಸಿದ್ದು. ಪತ್ರಿಕೋದ್ಯಮದ ಗುಣವೇ ಬದಲಾಗುತ್ತಿತ್ತು. ನಿಖಿಲ್ ಚಕ್ರವರ್ತಿ, ಮೋಹಿತ್ ಸೇನ್, ಮತ್ತಿತರರೆಲ್ಲ ಇವರಿಗೆ ಗೊತ್ತಿದ್ದರೂ, ದೆಹಲಿಯಲ್ಲಿ ಒಂದು ಪತ್ರಿಕೆ ಆರಂಭಿಸುವ ಯೋಚನೆ ಅವರಿಗಿತ್ತು ಎಂದು ನನಗನ್ನಿಸುವುದಿಲ್ಲ. ಅಷ್ಟೊತ್ತಿಗೆ Mainstream ಆರಂಭವಾಗಿತ್ತು ಅನ್ನಿಸುತ್ತದೆ. ಅವರ ಹಳೆಯ ಸ್ನೇಹಿತ CNC ಕೆಲಸ ಮಾಡುತ್ತಿದ್ದ The Patriot ಪತ್ರಿಕೆಯಲ್ಲಿ ಇವರು ಸೇರಿಕೊಂಡರು. ಅದು ಹೊಸ ಪತ್ರಿಕೆ ಆಗಿದ್ದರಿಂದ ಅಲ್ಲಿ ಹೊಸಬರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದರು ಮತ್ತು ಅವರಿಗೆ ತರಬೇತಿ ಕೊಡುವುದು ನನ್ನ ಗಂಡನಿಗೆ ಆಸಕ್ತಿಕರವಾಗಿ ಕಾಣಿಸಿತು. ಆ ಹೊಸಬರಲ್ಲಿ ಅನೇಕ ಜನ ನಂತರದಲ್ಲಿ The Patriot ಬಿಟ್ಟು ಇನ್ನೂ ಒಳ್ಳೆಯ ಕೆಲಸಗಳಿಗೆ ಸೇರಿಕೊಂಡರು, ಆದರೆ ನಮ್ಮೊಡನೆ ಸಂಪರ್ಕ ಇಟ್ಟುಕೊಂಡಿದ್ದರು. ಪತ್ರಕರ್ತರಾಗಿ ಅವರಿಗೆ ದೆಹಲಿ ಅನುಭವ ಭಿನ್ನವಾಗಿತ್ತು.

 

ಯಾವ ರೀತಿಯಲ್ಲಿ?

ಕೆಲವೊಂದು ವಿಷಯಗಳನ್ನು ನೀವು ಚರ್ಚೆ ಮಾಡಲಿಲ್ಲ ಎಂದರೆ ಅರ್ಥವಾಗುವುದಿಲ್ಲ. ಅವರೂ ದೆಹಲಿಗೆ ಬರುವುದಾಗಿ ನನಗೆ ಭರವಸೆ ಕೊಟ್ಟಿದ್ದರು. ಇಲ್ಲದಿದ್ದರೆ ನಾನು ಹೋಗುತ್ತಿದ್ದೆ ಎಂದು ನನಗನ್ನಿಸುವುದಿಲ್ಲ. ಅವರಿಗೆ ಅತೀವವಾದ ಆತ್ಮಸ್ಥೈರ್ಯ ಇದೆ ಎಂದು ನನಗೆ ಗೊತ್ತಿತ್ತು, ಆದರೆ ತಮ್ಮನ್ನು ತಾವು ಮೇಲಕ್ಕೆ ತಳ್ಳಿಕೊಂಡು ಹೋಗುವ ವ್ಯಕ್ತಿ ಅವರಾಗಿರಲಿಲ್ಲ. ಕಾಲೇಜಿನಲ್ಲಿದ್ದಾಗ ತಾನು ಕಡೆಯ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆ ಎಂತಲೂ, ಯಾರ ಗಮನಕ್ಕೂ ಬಾರದಂತೆ ಇರಲು ಪ್ರಯತ್ನಿಸುತ್ತಿದ್ದೆ ಎಂದೂ ಅವರೊಮ್ಮೆ ನನಗೆ ಹೇಳಿದ್ದರು. ಅಷ್ಟಾಗಿಯೂ ಅವರು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಪತ್ರಿಕೋದ್ಯಮದಲ್ಲೂ ಅವರು ಗುರುತಿಸಲ್ಪಟ್ಟಿದ್ದರು. ಪತ್ರಿಕಾಗೋಷ್ಟಿಗಳಲ್ಲಿ ಹೆಚ್ಚಿಗೆ ಮಾತಿಲ್ಲದೆ ಮತ್ತು ಯಾವುದೇ ಟಿಪ್ಪಣಿ ಮಾಡಿಕೊಳ್ಳದೆ ಕುಳಿತಿದ್ದರೂ ಸಹ ಶಾರ್ಟ್‌ಹ್ಯಾಂಡ್ ಗೊತ್ತಿದ್ದ ಅನೇಕರಿಗಿಂತ ಉತ್ತಮ ವರದಿ ಬರೆಯುತ್ತಿದ್ದ ಅವರ ತಾಕತ್ತಿನ ಬಗ್ಗೆ ಅವರ ಅನೇಕ ಸ್ನೇಹಿತರು ಬೆರಗಾಗಿದ್ದರು. ಇದು ಅವರು ತೀರಿಕೊಂಡ ನಂತರ ಅವರ ಕೆಲವು ಸ್ನೇಹಿತರು ನನಗೆ ಹೇಳಿದ ವಿಷಯ.
ನಾನು ಪ್ಯಾರಿಸ್‌ಗೆ ಹೋಗುವ ಸಮಯದಲ್ಲಿ ಅವರು The Patriot ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ನಾನು ಅಲ್ಲಿಗೆ ಹೋದಾಗ ಇಲ್ಲಿ ಕೆಲಸ ಬಿಟ್ಟರು. ಆದರೆ ನನಗೆ ಎಂದೂ ಆ ಬಗ್ಗೆ ತಿಳಿಸಲಿಲ್ಲ. ಬೇರೆಯವರೊಬ್ಬರ ಮೂಲಕ ನನಗದು ಗೊತ್ತಾಯಿತು. ಏನಾಯಿತು ಎಂದು ನನಗವರು ನಾನು ವಾಪಸು ಬರುವ ತನಕ ತಿಳಿಸಲಿಲ್ಲ. ಅದು ಅಲ್ಲಿಯ ಕೆಲಸಗಾರರ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿತ್ತು. ಅಲ್ಲಿ ಹಿರಿಯ ಪತ್ರಕರ್ತರಾಗಿದ್ದ ಅನೇಕರು ತಮ್ಮದೇ ನೆಲೆಯಲ್ಲಿ ಹಿರಿಯ ಎಡಪಂಥೀಯ ರಾಜಕೀಯ ನಾಯಕರಾಗಿದ್ದವರು. ಆಡಳಿತ ಮಂಡಳಿಯ ನಿಲುವನ್ನು ವಿರೋಧಿಸಿ ಕೆಲಸ ಬಿಡಲು ಅವರೆಲ್ಲ ನಿರ್ಧರಿಸಿದ್ದರು. ಮುಖ್ಯ ಸಂಪಾದಕರು CNCಯವರನ್ನು ಮತ್ತು ನನ್ನ ಗಂಡನನ್ನು ಕೆಲಸ ಬಿಡದಿರಲು ವಿನಂತಿಸಿಕೊಂಡರಂತೆ. ಆದರೆ ಇವರು ತಮ್ಮ ಸಹೋದ್ಯೋಗಿಗಳೊಡನೆ ನಿಲ್ಲಲು ತಿರ್ಮಾನಿಸಿದರು. ನಾನು ವಾಪಸು ಬರುವಷ್ಟೊತ್ತಿಗೆ ಇವರು ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (UNI) ಸೇರಿಕೊಂಡಿದ್ದರು ಎನ್ನಿಸುತ್ತದೆ. ಅದರ ವಿಶೇಷ ಸುದ್ದಿಗಾರರಾಗಿ ಇವರು ಸಂಸತ್ ಕಲಾಪಗಳು, ಕಮ್ಯುನಿಸ್ಟ್ ಪಕ್ಷಗಳು, ಮತ್ತು ಕೇರಳದ ಕುರಿತು ವರದಿ ಮಾಡುತ್ತಿದ್ದರು.

 

ಅಂದರೆ ಮನೆಯಲ್ಲಿ ಯಾವಾಗಲೂ ರಾಜಕೀಯಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿದ್ದವು…

ಹಾಗೇನೂ ಇಲ್ಲ. ಅವರಿಗೆ ಬಿಡುವಿರುತ್ತಿರಲಿಲ್ಲ. ಬೆಳ್ಳಂಬೆಳಗ್ಗೆಯಿಂದಲೇ ದೂರವಾಣಿ ಕರೆಗಳು ಇರುತ್ತಿದ್ದವು. ಶಾಂತಿ ಮತ್ತು ಐಕ್ಯತೆ ಚಳವಳಿಯ ಪೆರಿನ್ ರೊಮೇಶ್ ಚಂದ್ರ ಹಾಗೆ ಬೆಳಗ್ಗೆಯೆ ಕರೆ ಮಾಡುವವರಲ್ಲಿ ಒಬ್ಬರಾಗಿದ್ದರು. ನನ್ನ ಗಂಡ ಆ ಸಮಯವನ್ನು ಬಹಳ ಆನಂದಿಸಿದರು ಎನ್ನಿಸುತ್ತದೆ. ಅವರಿಗೆ ಕೆಲಸ ಇಷ್ಟವಾಗಿತ್ತು. ಯಾವುದಾದರೂ ಮುಖ್ಯವಾದ ವಾರ್ತೆಯನ್ನು ಪ್ರಕಟಿಸಬೇಕು ಎನ್ನಿಸಿದಾಗ ಇವರನ್ನು ನಂಬುತ್ತಿದ್ದ ಮತ್ತು ಅದರ ಬಗ್ಗೆ ತಿಳಿಸುತ್ತಿದ್ದ ಸ್ನೇಹಿತರು ಇವರಿಗಿದ್ದರು. ಆ ಸಮಯದಲ್ಲಿಯೆ ಅವರ ಕಾಯಿಲೆಗಳು ಆರಂಭವಾಗಿದ್ದು.

ಮೊದಲಿಗೆ ಚರ್ಮರೋಗ ಕಾಣಿಸಿಕೊಂಡಿತು. ಚರ್ಮರೋಗ, ಅಸ್ತಮ ಮತ್ತು ಪೈಲ್ಸ್, ಇವು ಮೂರೂ ಒಂದಕ್ಕೊಂದು ಸಂಬಂಧಪಟ್ಟವು ಮತ್ತು ಒಂದು ಹತೋಟಿಗೆ ಬಂದರೆ ಮತ್ತೊಂದು ಕಾಣಿಸಿಕೊಳ್ಳುತ್ತದೆ ಎಂದು ಗೊತ್ತಾಯಿತು. ಚರ್ಮರೋಗದ ಚಿಕಿತ್ಸೆಯ ಸಂದರ್ಭದಲ್ಲಿ ಅವರು ಬಹುಪಾಲು ಕೇರಳದಲ್ಲಿದ್ದರು. ಆಯುರ್ವೇದದ ಬಗ್ಗೆ ಅಷ್ಟಿಷ್ಟು ತಿಳಿದುಕೊಂಡಿದ್ದ ನನ್ನ ತಾಯಿ ಮದ್ದು ಮತ್ತು ಪಥ್ಯದ ವಿಷಯದಲ್ಲಿ ಬಹಳ ಜಾಗರೂಕರಾಗಿದ್ದರು.

ದೆಹಲಿಗೆ ವಾಪಸಾದ ಮೇಲೆ ಒಂದು ದಿನ ಟೈಪ್ ಮಾಡುವಾಗ ಎರಡೆರಡು ಸಾಲು ಕಾಣಿಸುತ್ತದೆ ಎಂದು ನನಗೆ ಹೇಳಿದರು. ನಮಗೆ ಗೊತ್ತಿದ್ದ ವೈದ್ಯೆಯೊಬ್ಬರ ಬಳಿಗೆ ಅವರನ್ನು ಕರೆದುಕೊಂಡು ಹೋದೆ. ಅವರನ್ನು ಪರೀಕ್ಷಿಸಿದ ಆಕೆ ಪರೀಕ್ಷಾವರದಿಗಳನ್ನು ಮತ್ತೊಬ್ಬ ವೈದ್ಯರ ಬಳಿ ಪರಿಶೀಲನೆ ಮಾಡಿಸಲು ತಿಳಿಸಿದರು. ತಾನು ಪರಿಶೀಲಿಸಿದ ಬಳಿಕ ಆಕೆ ಹೇಳಿದ್ದು:. “ಅಬ್ಬಬ್ಬ, ಇದು ಸಮುದ್ರದಲ್ಲಿ ತೇಲುತ್ತಿರುವ ಹಿಮಬಂಡೆಯ ಮೇಲ್ತುದಿ ಮಾತ್ರ.” ಅವರು ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ಅರ್ಥವಾಗಲಿಲ್ಲ.

ಇವರಿಗೆ ಆರೋಗ್ಯ ಸರಿ ಇಲ್ಲ ಎನ್ನುವ ಸಂಗತಿ ಬಹಳ… ಮತ್ತದು ಬಹಳ ಅನಿರೀಕ್ಷಿತವಾಗಿ ವೇಗವಾಗಿ ಘಟಿಸಿತು. ಕೊನೆಯ ನಿಮಿಷದವರೆಗೂ ಅವರು ಯಾವುದೇ ರೀತಿಯ ಸ್ವಮರುಕವಾಗಲಿ, ಖಿನ್ನತೆಯನ್ನಾಗಲಿ ತೋರಿಸಲಿಲ್ಲ. ನಾನೂ ಸಹ ಹಾಗೆ ಅಂದುಕೊಂಡದ್ದಾಗಲಿ ಮತ್ತು ಅವರು ಆ ರೀತಿ ಅಂದುಕೊಳ್ಳಲಾಗಲಿ ಬಿಡಲಿಲ್ಲ. ಅವರು ಅನಾರೋಗ್ಯಪೀಡಿತರಾಗಿದ್ದರು. ಅದೊಂದು ವಾಸ್ತವ ಮತ್ತು ನಾವದನ್ನು ಎದುರಿಸಿದೆವು.

ಇದೆಲ್ಲವೂ ಅವರು The Patriot ಬಿಟ್ಟ ನಂತರ ಆದದ್ದು. ನಾನು ಹೊರದೇಶದಲ್ಲಿದ್ದಾಗ ಆದದ್ದು. ತಮ್ಮ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ಅವರು ಫಿಯಟ್ ಕಾರು ಖರೀದಿಸಿದರು. ಅದು ಬಾಂಬೆಯಿಂದ ರೈಲಿನಲ್ಲಿ ಬಂತು. ಬಹಳ ಹಿಂದೆ ಅವರ ಬಳಿ ಸೈಕಲ್ ಇತ್ತು. ಎಂದೂ ಮೋಟಾರ್‌ಸೈಕಲ್ ಕೊಳ್ಳಲಿಲ್ಲ. ಕಾರು ಓಡಿಸುವುದನ್ನು ಕಲಿತುಕೊಂಡರು. ಅದನ್ನು ಬಹಳ ಆನಂದಿಸುತ್ತಿದ್ದರು. ನಾನೂ ಸಹ ಕಾರು ಓಡಿಸುವುದನ್ನು ಕಲಿತೆ. ಅವಕಾಶ ಸಿಕ್ಕಾಗ ಲಾಂಗ್ ಡ್ರೈವ್ಸ್ ಹೋಗುತ್ತಿದ್ದೆವು. ಒಮ್ಮೆ ಹಿಮಾಲಯದ ತಪ್ಪಲಲ್ಲಿರುವ ಲ್ಯಾಂಡ್ಸ್‌ಡೌನ್ ಎಂಬ ಸ್ನೇಹಿತನ ಮನೆಗೆ ಹೋಗಿದ್ದೆವು. ಅದೆಲ್ಲ ಮಜವಾಗಿತ್ತು.

 

ಪಾರ್ಕಿನ್ಸನ್ಸ್ ಕಾಯಿಲೆ (ಅದುರುವಾಯು) ಇದೆ ಎಂದು ಗೊತ್ತಾಗಿದ್ದು ಯಾವಾಗ?

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ಯ ನರವಿಜ್ಞಾನ ವಿಭಾಗಕ್ಕೆ ಅವರನ್ನು ಕರೆದೊಯ್ದೆ. ಆವತ್ತು ಅದು ನಾವೀಗ ಕಾಣುತ್ತಿರುವ ವಿಐಪಿ ಆಸ್ಪತ್ರೆ ಆಗಿರಲಿಲ್ಲ. ನರವಿಜ್ಞಾನದ ವೈದ್ಯರು ರೋಗಿಗಳು ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವಂತೆ ಮಾಡುತ್ತಾರೆ ಮತ್ತು ಕೆಲವು ಪ್ರಮುಖ ನರಗಳ ಮೇಲೆ ಒಂದು ಸಣ್ಣ ಸಾಧನದಿಂದ ಮೆತ್ತಗೆ ಬಡಿದು ಪರೀಕ್ಷೆ ಮಾಡುತ್ತಾರೆ. ನನ್ನ ಗಂಡನಿಗೂ ಅವೆಲ್ಲ ಮಾಡಿದ ವೈದ್ಯರು, “ಮಿಸ್ಟರ್ ನಾಯರ್, ನಿಮ್ಮ ವಯಸ್ಸಿಗೆ ನೀವು ಆರೋಗ್ಯವಾಗಿದ್ದೀರಿ” ಎಂದರು. ವೈದ್ಯರು ಅದನ್ನು ಹೇಳಿದ ರೀತಿ ನನಗೆ ಹಿಡಿಸಲಿಲ್ಲ. ಅದಾದ ನಂತರ ನಾವು ಕೇರಳಕ್ಕೆ ಬಂದೆವು.

ಇಲ್ಲಿ ಕೊಚ್ಚಿಯಲ್ಲಿರುವ ಯುವ ವೈದ್ಯರೊಬ್ಬರನ್ನು ಭೇಟಿ ಮಾಡುವಂತೆ ನನ್ನ ತಮ್ಮ ಒತ್ತಾಯ ಮಾಡಿದ. ಈ ವೈದ್ಯರು ದೆಹಲಿಯ AIIMS ನಲ್ಲಿಯ ವೈದ್ಯರಿಗೆ ಕೊಡುವಂತೆ ಹೇಳಿ ಒಂದು ಕಾಗದ ಕೊಟ್ಟರು. ಅದಾದ ಮೇಲೆ ಇವರಿಗೆ CAT ಸ್ಕ್ಯಾನ್ ಮಾಡಲಾಯಿತು. ಅದು ಬಿಟ್ಟರೆ ಬೇರೆ ಏನೂ ಆಗಲಿಲ್ಲ. ಅವರು ಔಷಧಿ ತೆಗೆದುಕೊಳ್ಳುವುದನ್ನು ಮುಂದುವರೆಸಿದರು. ಆದರೆ ಆರೋಗ್ಯದಲ್ಲಿ ಎದ್ದುಕಾಣುವಂತಹ ಯಾವ ಅಭಿವೃದ್ಧಿಯೂ ಆಗಲಿಲ್ಲ. ನಾವು 1989 ರಲ್ಲಿ ವಾಪಸು ಬರುವ ತನಕವೂ ಇಲ್ಲಿಯ ಶ್ರೀ ಚಿತ್ರ ಸೆಂಟರ್ ಆಸ್ಪತ್ರೆಯಲ್ಲಿ ನರವಿಜ್ಞಾನ ವಿಭಾಗ ಇದೆ ಎಂದು ನಮಗೆ ಗೊತ್ತಿರಲಿಲ್ಲ. ಈ ಆಸ್ಪತ್ರೆ ಹೃದಯಸಂಬಂಧಿ ಕಾಯಿಲೆಗಳಿಗೆ ಮೀಸಲಾದದ್ದು ಎಂದುಕೊಂಡಿದ್ದೆ.

1989 ರಲ್ಲಿ, ಅಂದರೆ ನಾವು ಕೇರಳಕ್ಕೆ ವಾಪಸಾದ ಆರಂಭದಲ್ಲಿಯೇ ನನಗೆ ಆಮ್‌ಸ್ಟರ್ಡ್ಯಾಮ್‌ನಿಂದ ನಾನು ತೊಡಗಿಸಿಕೊಂಡಿದ್ದ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಒಂದು ಆಹ್ವಾನ ಬಂತು. ಆ ಸಮಯದಲ್ಲಿ ನನ್ನ ಚಿಕ್ಕ ಮಗಳು ಕೇಂಬ್ರಿಡ್ಜ್‌ನಲ್ಲಿ ಓದುತ್ತಿದ್ದಳು. ನಾವಿಬ್ಬರೂ ಕೇಂಬ್ರಿಡ್ಜ್‌ಗೆ ಹೋದರೆ ಅಲ್ಲಿಯ ವೈದ್ಯರಿಗೂ ನನ್ನ ಗಂಡನನ್ನು ತೋರಿಸಿ ಒಂದು ಹೊಸ ಅಭಿಪ್ರಾಯ ಪಡೆಯಲು ಅನುಕೂಲವಾಗುತ್ತದೆ ಎಂದು ಮಗಳು ಹೇಳಿದಳು. ಹಾಗಾಗಿ ನಾವು ಹೊರಡಲು ತಯಾರಿ ನಡೆಸಿದೆವು. ಆದರೆ ಅದು ಕೈಗೂಡಲಿಲ್ಲ.

ನಾವು ಹೊರಡಬೇಕಿದ್ದ ಹಿಂದಿನ ರಾತ್ರಿ ನನ್ನ ತಮ್ಮ ಹೃದಯಾಘಾತದಿಂದ ತೀರಿಕೊಂಡ. ನಾನು ಪ್ರಯಾಣವನ್ನು ರದ್ದು ಮಾಡಿದೆ. ನಾನು ಹಾಗೆ ಮಾಡಬಾರದಿತ್ತು ಎಂದು ಕೆಲವರು ಅಂದುಕೊಂಡರು. ನನ್ನ ತಮ್ಮ ಕೊಚ್ಚಿಯಲ್ಲಿ ತೀರಿಕೊಂಡಿದ್ದು. ಅಲ್ಲಿಯೇ ಆತ ವಾಸಿಸುತ್ತಿದ್ದದ್ದು. ಆ ರಾತ್ರಿಯೇ ನಾನು ನನ್ನಮ್ಮ, ಗಂಡ, ಕೆಲವು ಸಂಬಂಧಿಕರು ಮತ್ತು ಮನೆಕೆಲಸದಲ್ಲಿ ನಮಗೆ ಸಹಾಯ ಮಾಡಿಕೊಂಡು ನಮ್ಮೊಡನೆಯೆ ವಾಸವಿದ್ದ ಹೆಂಗಸಿನೊಂದಿಗೆ ಟ್ಯಾಕ್ಸಿಯಲ್ಲಿ ಕೊಚ್ಚಿಗೆ ತೆರಳಿದೆ.

ನಾನು ಅನೇಕ ಸಾವುಗಳನ್ನು ಕಂಡಿದ್ದೆ, ಆದರೆ ಇನ್ನೆಂದೂ ನನ್ನ ತಮ್ಮನನ್ನು ನೋಡಲಾರೆ ಎಂಬ ವಾಸ್ತವಪ್ರಜ್ಞೆಯನ್ನು ಮಾತ್ರ ನನ್ನಿಂದ ಸುಲಭವಾಗಿ ಅರಗಿಸಿಕೊಳ್ಳಲಾಗಲಿಲ್ಲ.

ಎಲ್ಲಾ ಕ್ರಿಯಾದಿಗಳು ಆದ ಮೇಲೆ ನಾವು ವಾಪಸಾದೆವು. ಮಾಮೂಲಿ ತಪಾಸಣೆಗೆಂದು ಹತ್ತಿರದ ವೈದ್ಯರ ಬಳಿಗೆ ನನ್ನ ಗಂಡನನ್ನು ಕರೆದುಕೊಂಡು ಹೋದೆ. ಅವರು ಶ್ರೀ ಚಿತ್ರ ಸೆಂಟರ್‌ಗೆ ಕರೆದುಕೊಂಡು ಹೋಗಿ ತೋರಿಸಲು ಶಿಫಾರಸು ಮಾಡಿದರು. ಕೆಲವು ದಿನಗಳ ಕಾಲ ಅಲ್ಲಿ ಅಡ್ಮಿಟ್ ಆದರು. ಆಗಲೇ ಅವರು ಸಾಮಾನ್ಯವಾದ ಪಾರ್ಕಿನ್ಸನ್ಸ್ ಕಾಯಿಲೆಯಿಂದ ಬಳಲುತ್ತಿಲ್ಲ ಎಂದು ಗೊತ್ತಾಗಿದ್ದು. ಆ ಕಾಯಿಲೆಯ ಲಕ್ಷಣಗಳು ವಿಧವಿಧವಾಗಿರುತ್ತವೆ. ನನ್ನ ಮಕ್ಕಳು, ನಮ್ಮ ಸ್ನೇಹಿತರ ಮಕ್ಕಳನ್ನೂ ಒಳಗೊಂಡು ಅನೇಕರು ಆ ಕಾಯಿಲೆಗೆ ಸಂಬಂಧಿಸಿದ ಲೇಖನಗಳನ್ನು, ಪುಸ್ತಕಗಳನ್ನು ನನಗೆ ಕಳುಹಿಸುತ್ತಿದ್ದರು. ಔಷಧೋಪಚಾರ ಮುಂದುವರೆಯಿತು. ನಮಗೆ ಗೊತ್ತಿದ್ದ ಆಯುರ್ವೇದ ಪಂಡಿತರು ಹೇಳಿದ್ದ ಕೆಲವು ಆಯುರ್ವೇದದ ಔಷಧಗಳನ್ನೂ ಕೊಡುತ್ತಿದ್ದೆ. ಆದರೆ ಯಾವುದೇ ಪ್ರಗತಿ ಕಾಣಲಿಲ್ಲ.

ದೆಹಲಿಯಲ್ಲಿ ನಾನವರನ್ನು ದೀರ್ಘ ನಡಿಗೆಗಳಿಗೆ ಕರೆದುಕೊಂಡು ಹೋಗುತ್ತಿದ್ದೆ. ಬೆಳಗ್ಗೆ ಹೊತ್ತು ಬಯಲಿನಲ್ಲಿ ನಡೆಯುವ ಯೋಗಾಭ್ಯಾಸದ ತರಗತಿಗಳಿಗೆ ಹೋಗುತ್ತಿದ್ದೆವು. ದೆಹಲಿಯಲ್ಲಿ ಖುಷಿ ಕೊಡುತ್ತಿದ್ದ ರೀತಿಯಲ್ಲಿ ಇಲ್ಲಿ ಇಲ್ಲದಿದ್ದರೂ ಇಲ್ಲಿಯೂ ಸಹ ನಾನವರನ್ನು ನಡಿಗೆಗೆ ಕರೆದುಕೊಂಡು ಹೋಗುತ್ತಿದ್ದೆ. ಅಷ್ಟೇ ಅಲ್ಲ, ಆ ತರಹದ ಕಾಯಿಲೆ ಇರುವವರ ಜೊತೆ, ಅದೂ ತಮ್ಮ ಜೀವನಪೂರ್ತಿ ಅವರನ್ನು ಆರೋಗ್ಯವಾಗಿ ಮತ್ತು ಚಟುವಟಿಕೆಯಿಂದ ಇದ್ದದ್ದನು ನೋಡಿದ್ದವರಿಗೆ, ಅವರೊಡನೆ ಹೇಗೆ ನಡೆದುಕೊಳ್ಳುವುದು ಎನ್ನುವುದರ ಬಗ್ಗೆ ಕಸಿವಿಸಿಯಿತ್ತು. ಒಂದಕ್ಕಿಂತ ಹೆಚ್ಚು ಸಲ ಅದು ನನ್ನ ಅನುಭವಕ್ಕೆ ಬಂದಿದೆ. ಅವರ ಸೋದರನ ಮಗಳ ಮದುವೆಗೆಂದು ಒಮ್ಮೆ ದೆಹಲಿಯಿಂದ ಬಂದಿದ್ದೆವು. ಹೇಳಬೇಕೆಂದರೆ ದೆಹಲಿಗೆ ಹೋದನಂತರ ನಾನು ಮೊದಲ ಬಾರಿಗೆ ಕೇರಳದಲ್ಲಿಯ ಮದುವೆಗೆ ಬಂದಿದ್ದೆ. ಮದುವೆ ಸಮಾರಂಭಗಳಲ್ಲಿ ಆಗಿದ್ದ ಬದಲಾವಣೆಗಳನ್ನು ನೋಡಿ ನಾನು ಚಕಿತಳಾಗಿದ್ದೆ. ಮನೆಯಲ್ಲಿ ಮಾಡುವುದರ ಬದಲು ಮದುವೆಗಳು ಕಲ್ಯಾಣಮಂಟಪಕ್ಕೆ ಸ್ಥಳಾಂತರಗೊಂಡಿದ್ದವು. ವಧುವಿನ ಮನೆಯಲ್ಲಿ ಲಗ್ನಕ್ಕಿಂತ ಮೊದಲು ಆಗುವ ಸಮಾರಂಭವನ್ನು ಬಿಟ್ಟರೆ ಮದುವೆಯ ದಿನದಂದು ಚಟುವಟಿಕೆ, ಗೌಜು ಗದ್ದಲಗಳಿಂದ ತುಂಬಿರುತ್ತಿದ್ದ ಮನೆಗಳು ಈಗ ನಿಶ್ಯಬ್ಧವಾಗುತ್ತಿದ್ದವು. ನೆಂಟರು ಮತ್ತು ಸ್ನೇಹಿತರು ಈಗ “ಉಡುಗೊರೆ”ಗಳ ಸಹಿತ ಬರುತ್ತಿದ್ದರು. ಇವತ್ತಿಗೆ ಹೋಲಿಸಿದರೆ ಸರಳ ಎನ್ನಬಹುದಾದರೂ ಬಂಗಾರ ಎಲ್ಲೆಲ್ಲೂ ಎದ್ದು ಕಾಣುತ್ತಿತ್ತು.

ನನ್ನ ಗಂಡನನ್ನು ನೋಡಿ ನೆಂಟರು, ಅದರಲ್ಲೂ ಹೆಂಗಸರು ಬಹಿರಂಗವಾಗಿ ತಮ್ಮ ಯಾತನೆ ವ್ಯಕ್ತಪಡಿಸುತ್ತಿದ್ದರು. ಒಮ್ಮೆ ಬಹಳ ಹತ್ತಿರದ ನೆಂಟರೊಬ್ಬರು ನಮ್ಮನ್ನು ನೋಡಲು ಮನೆಗೆ ಬಂದರು. ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ನನ್ನ ಗಂಡನ ಬಳಿಗೆ ಹೋಗಿ ಭೇಟಿ ಮಾಡಿದ ಅವರೊಂದಿಗೆ ನನ್ನ ಗಂಡ ಯಾವ ಮಾತನ್ನೂ ಆಡಲಿಲ್ಲ. ಸ್ವಲ್ಪ ಹೊತ್ತು ಕುಳಿತಿದ್ದ ಆ ನೆಂಟರು, “ಇದನ್ನು ನೋಡಲು ನಾನು ಬರಲೇಬಾರದಿತ್ತು” ಎಂದರು. ತಾವು ಏಕೆ ಟಿವಿ ನೋಡುತ್ತೇನೆಂದರೆ ಅದು ನಾನು ಮಾತನಾಡಲಿ ಎಂದು ಅಪೇಕ್ಷಿಸುವುದಿಲ್ಲ ಎಂದೊಮ್ಮೆ ನನ್ನ ಗಂಡ ಹೇಳಿದ್ದರು. ಅವರು ಏನಾದರೂ ಬರೆಯುವಂತೆ, ಚಿತ್ರ ಬಿಡಿಸುವಂತೆ, ಪದಗಳನ್ನು ಮತ್ತು ಪದ್ಯಗಳನ್ನು ಮರು ಉಚ್ಚರಿಸುವಂತೆ ನಾನು ಪ್ರಯತ್ನಿಸುತ್ತಿದ್ದೆ. ಆಕಾಶ, ಗಿಡ-ಮರ, ಹೂ, ಪಕ್ಷಿ, ಅಳಿಲು ಮುಂತಾದುವುಗಳನ್ನು ನೋಡುವಂತಾಗುತ್ತದೆ ಎಂದು ಅವರು ಪ್ರತಿದಿನ ಅಂಗಳದಲ್ಲಿ ಕೆಲಕಾಲ ಕುಳಿತಿರುತ್ತಿದ್ದರು. ಕಾಯಿಲೆ ಬಿದ್ದವರನ್ನು ಶುಶ್ರೂಷೆ ಮಾಡುತ್ತಿರುವಾಗ ನಾವು ಅನೇಕವನ್ನು ಕಲಿಯುತ್ತೇವೆ. ನನಗೆ ಗೊತ್ತಿದ್ದನ್ನು ಮತ್ತು ಏನು ಮಾಡಿದರೆ ಉಪಯೋಗವಾಗುತ್ತದೆ ಅನ್ನಿಸುತ್ತದೆಯೆ ಅಂತಹುದನ್ನು ನಾನು ಮಾಡುತ್ತಿದೆ. ಅದೆಲ್ಲವೂ ಸರಿಯಾದದ್ದು ಎಂದು ಮಾತ್ರ ಹೇಳಲಾರೆ.

 

ನಾವು ಸರಿಯೋ ತಪ್ಪೋ ಎಂದು ಯೋಚನೆ ಮಾಡುತ್ತೇವೆ. ಆದರೆ ಇಂತಹ ವಿಷಯಗಳು ನಮ್ಮ ಹತೋಟಿಯಲ್ಲಿ ಇರುವುದಿಲ್ಲ. ಇಲ್ಲಿ ಆಸ್ಪತ್ರೆಗೆ ಹೋಗಿದ್ದೆವು ಎಂದು ಹೇಳಿದಿರಿ. ಅವರಿಂದ ಮಾಡಲು ಸಾಧ್ಯವಾಗುತ್ತಿದ್ದ ಕೆಲಸಗಳು ಎಂತಹವು?

ಅವರಿಂದ ಬಹಳ ಕೆಲಸಗಳನ್ನು ಮಾಡುವುದಕ್ಕಾಗುತ್ತಿರಲಿಲ್ಲ. ಮುಖದ ಮಾಂಸಖಂಡಗಳು ಬಿಗಿದುಕೊಂಡಿದ್ದವು. ಓದಲು, ಬರೆಯಲು, ಮಾತನಾಡಲು, ಮತ್ತು ಓಡಾಡಲು ಸಹ ಅವರಿಗೆ ಕಷ್ಟವಿತ್ತು. ಹಾಗಾಗಿಯೆ ಫಲಿತಾಂಶ ಎಷ್ಟೇ ನಗಣ್ಯವಾಗಿದ್ದರೂ ಅವೆಲ್ಲವನ್ನೂ ಮಾಡಲು ನಾನು ಉತ್ತೇಜನ ಕೊಡುತ್ತಿದ್ದೆ. ಅವರಿಗೆ ಪತ್ರಿಕೆ ಓದಲು ಒಬ್ಬ ಮನುಷ್ಯನನ್ನು ಗೊತ್ತುಪಡಿಸಿದ್ದೆ. ಅವರು ನನ್ನ ಗಂಡ ಕೇಳಲು ಇಚ್ಚಿಸುತ್ತಿದ್ದ ಮುಖಪುಟದ ತಲೆಬರಹಗಳನ್ನು ಮತ್ತು ಲೇಖನಗಳನ್ನು ಗಟ್ಟಿಯಾಗಿ ಓದುತ್ತಿದ್ದರು. ಜೊತೆಗೆ ಇವರೂ ಸಹ ಸಣ್ಣಪುಟ್ಟವನ್ನು ಓದುತ್ತಿದ್ದರು. ಒಳಗಿನ ಪುಟಗಳ ವಿಶೇಷ ಲೇಖನಗಳು, ಸಂಪಾದಕೀಯ, ಇತ್ಯಾದಿಗಳನ್ನು ನಾನು ಓದುತ್ತಿದ್ದೆ. ಈ ವಿಚಾರದಲ್ಲಿ ನಾನು ಅದೃಷ್ಟವಂತೆ ಎಂತಲೇ ಹೇಳಬೇಕು, ಏಕೆಂದರೆ ವರ್ಷಗಳ ನಂತರ ಇಂತಹುದೇ ಸ್ಥಿತಿಯಲ್ಲಿದ್ದ ಸ್ನೇಹಿತರೊಬ್ಬರ ಸೋದರಿಗೆ ಹೀಗೆ ಓದುವ ಕೆಲಸಕ್ಕಾಗಿ ಜನರನ್ನು ಹುಡುಕುತ್ತಿದ್ದಾಗ ಒಬ್ಬರೂ ಸಿಗಲಿಲ್ಲ. ನಾನು ಮನೆಯಲ್ಲಿಲ್ಲದೆ ಹೊರಗಡೆ ಯಾವುದಾದರೂ ಕೆಲಸ ಮೇಲೆ ಹೋಗಿದ್ದಾಗ ಅವರನ್ನು ನೋಡಿಕೊಳ್ಳಲು ಅನುಕೂಲವಾಗುವಂತೆ ಒಬ್ಬ ಹೆಂಗಸನ್ನು ಇಟ್ಟುಕೊಂಡಿದ್ದೆ. ಇದರ ಜೊತೆಗೆ ಮನೆಯಲ್ಲಿ ಪೂರ್ಣಾವಧಿ ಸಹಾಯಕಿ ಸಹ ಇದ್ದಳು.

ಸಾವಿನ ಬಗ್ಗೆ ನಾನು ಯೋಚಿಸುತ್ತಿರಲಿಲ್ಲ ಮತ್ತು ನಾವದನ್ನು ಚರ್ಚಿಸುತ್ತಲೂ ಇರಲಿಲ್ಲ. ನಿವೃತ್ತ ಜೀವನದ ಬಗ್ಗೆ ನಮಗೆ ಅನೇಕ ಕನಸುಗಳಿದ್ದವು. ಅವರೆಂದೂ ಅಸಹನೆಯಾಗಲಿ ಹತಾಶೆಯನ್ನಾಗಲಿ ತೋರಿಸಲಿಲ್ಲ. ನಾನವರಿಗೆ ಮಾಡಬೇಕೆಂದು ಹೇಳಿದ ಪ್ರತಿಯೊಂದನ್ನೂ ಮಾಡಿದರು. ನಾನೊಂದು ಆಟವನ್ನು ಅನ್ವೇಷಿಸಿದ್ದೆ. ನಾನು ಪೇಪರ್ ಚೆಂಡುಗಳನ್ನು ಅವರತ್ತ ಎಸೆಯುತ್ತಿದ್ದೆ, ಅವರದನ್ನು ಹಿಡಿದುಕೊಂಡು ಮತ್ತೆ ನನಗೆ ಎಸೆಯುತ್ತಿದ್ದರು. ಅವರ ಪರಿಸ್ಥಿತಿ ಒಂದಿಷ್ಟಾದರೂ ಉತ್ತಮಗೊಳ್ಳುತ್ತದೆ ಎಂದು ಬಹುಶಃ ನಾವಿಬ್ಬರೂ ಅಂದುಕೊಂಡಿದ್ದೆವು ಅನ್ನಿಸುತ್ತದೆ. ಪೂರ್ತಿ ಗುಣಮುಖರಾಗುತ್ತಾರೆ ಎಂದು ನಾನೇನೂ ಎಣಿಸಿರಲಿಲ್ಲ. ಅದು 1991 ರ ಜೂನ್. ನನ್ನ ದೊಡ್ಡಮಗಳು ಇಲ್ಲಿಯೇ ಇದ್ದಳು. ಅವರು ತಮ್ಮ ಮಾಮೂಲಿಯ ಚಿಕ್ಕಪ್ರಮಾಣದ ರಾತ್ರಿಯೂಟ ಮುಗಿಸಿದರು. ಚುನಾವಣೆಯ ಫಲಿತಾಂಶಗಳು ಬರುತ್ತಿದ್ದವು. ಆಡಳಿತದಲ್ಲಿದ್ದ ಎಡರಂಗ ಕ್ಷೇತ್ರದ ಮೇಲೆ ಕ್ಷೇತ್ರವನ್ನು ಕಳೆದುಕೊಳ್ಳುತ್ತಿತ್ತು. ಅವರು ಇನ್ನೇನು ಹಾಸಿಗೆಗೆ ತೆರಳಬೇಕು ಎನ್ನುವಾಗ ನಾನವರನ್ನು ಕೇಳಿದೆ, “ಈ ಎಡರಂಗದ ಸೋಲನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?” ಸ್ವಲ್ಪವೂ ತಡಮಾಡದೆ ಅವರೆಂದರು, “ಉಳಿಸಿಕೊಳ್ಳಲಾಗದೆ ಹೋದ ಅನೇಕ ಆಶ್ವಾಸನೆಗಳು.” ಆಗ ನಾನವರನ್ನು ಅದರ ಬಗ್ಗೆ ಏನಾದರೂ ಬರೆಯಬಯಸುತ್ತೀರಾ ಎಂದು ಕೇಳಿದೆ. ಅವರು ಹೌದೆಂದರು. ಅವರ ಕೈಯ್ಯಲ್ಲಿ ಬರೆಯಲಾಗುತ್ತಿರಲಿಲ್ಲ; ಆದರೆ ನನಗೆ ಹೇಳುತ್ತಿದ್ದರು ಮತ್ತು ನಾನದನ್ನು ಬರೆದು ಮತ್ತೆ ಅವರಿಗೆ ಓದಿ ಹೇಳುತ್ತಿದ್ದೆ. ಅವರು ಅಂತಿಮವಾಗಿ ಒಪ್ಪಿಕೊಂಡರೆ ಮಾತ್ರ ನಾನದನ್ನು ಪ್ರಕಟಣೆಗೆ ಕಳುಹಿಸಿಕೊಡುತ್ತಿದ್ದೆ. ನಾವಿಬ್ಬರೂ ಒಬ್ಬರಿಗೊಬ್ಬರು ಹೇಳಿಕೊಂಡ ಮಾತುಗಳು ಇವೇ ಕಡೆಯವು ಅನ್ನಿಸುತ್ತದೆ. ಅಲ್ಲಲ್ಲ, ಅವರು ಹಾಸಿಗೆಗೆ ಹೋಗುವುದಕ್ಕೆ ಮೊದಲು ನಮಗೆ ಗೊತ್ತಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ಹಿನ್ನಡೆ ಅನುಭವಿಸುತ್ತಿದ್ದರು. ಸ್ವಲ್ಪ ಸಮಯದಲ್ಲಿ ಪರಿಸ್ಥಿತಿ ಬದಲಾಯಿತು. ನಾನದನ್ನು ಕೋಣೆಗೆ ಹೋಗಿ ಅವರಿಗೆ ತಿಳಿಸಿದೆ. ಅವರು ಕೇಳಿಸಿಕೊಂಡರು, ಆದರೆ ಏನನ್ನೂ ಹೇಳಲಿಲ್ಲ. ಮಧ್ಯರಾತ್ರಿಯಾದ ನಂತರ ನಮ್ಮ ಮಗಳು “ಅಮ್ಮ, ಅಮ್ಮ” ಎಂದು ಕೂಗಿಕೊಂಡಳು ಮತ್ತು ಅಪ್ಪನಿಗೆ ಏನೋ ಸಮಸ್ಯೆ ಆಗುತ್ತಿದೆ ಎಂದಳು. ನಾನು ಪಕ್ಕದ ಮನೆಯವರಿಗೆ ಕರೆ ಮಾಡಿ ಅವರಿಂದ ವೈದ್ಯರನ್ನು ಕರೆಯಲು ಸಾಧ್ಯವಾಗುತ್ತದೆಯೇ ಎಂದು ಕೇಳಿದೆ. ಅವರು ಅಷ್ಟೇನೂ ಸರಿಯಾಗಿ ಸ್ಪಂದಿಸಲಿಲ್ಲ. ನಾನಿವರಿಗೆ ಸ್ವಲ್ಪ ನೀರನ್ನು ಕುಡಿಸಿದೆ. ಮನೆಯ ಬಳಿಯೇ ಇದ್ದ ವೈದ್ಯೆಯೊಬ್ಬರಿಗೆ ಕರೆ ಮಾಡಿದೆ. ಒಳ್ಳೆಯ ಸ್ನೇಹಿತೆಯಾಗಿದ್ದ ಆಕೆ ಕೂಡಲೆ ಬಂದಳು. ಮನೆಯ ಸದಸ್ಯರಂತೆಯೇ ಇದ್ದ ಇನ್ನೊಬ್ಬ ವೈದ್ಯರೂ ಸಹ ಬಂದರು. ಇವರು ಮೃತಪಟ್ಟಿದ್ದಾರೆ ಎಂದು ಅವರಿಬ್ಬರೂ ದೃಢೀಕರಿಸಿದರು. ನಾವೆಲ್ಲ ಅಲ್ಲಿ ಪಕ್ಕದಲ್ಲಿ ನಿಂತಿರುವಾಗಲೇ ಎಲ್ಲವೂ ಮುಗಿದುಹೋಗಿತ್ತು. ಅವರು ಬಾಧೆ ಪಡಲಿಲ್ಲ ಎಂದು ನಾನು ಹೇಳಲಾರೆ, ಆದರೆ ಅವರದನ್ನು ಧೈರ್ಯದಿಂದ ಎದುರಿಸಿದರು ಮತ್ತು ಶಾಂತಿಯಿಂದ ತೆರಳಿದರು.

ನಮ್ಮ ಟೆಲಿಫೋನ್‌ಗೆ STD ಆಗಲಿ ISD ಸಂಪರ್ಕವಾಗಲಿ ಇರಲಿಲ್ಲ. ಅಲ್ಲಿದ್ದ ವೈದ್ಯರಲ್ಲಿ ಒಬ್ಬರ ಜೊತೆ ಹೋದ ನನ್ನ ಮಗಳು ತನ್ನ ತಂಗಿಗೆ ಕರೆ ಮಾಡಿ ತಿಳಿಸಿದಳು. ಆಕೆ ಒಂದು ದಿನದ ನಂತರ ಬಂದಳು. ಮಾರನೆಯ ದಿನ ಬೆಳಗ್ಗೆಯಿಂದಲೇ ಜನ ಕಿಕ್ಕಿರಿದು ಸೇರಲಾರಂಭಿಸಿದರು. ಅವರ ಹಳೆಯ ಕಾಮ್ರೇಡ್‌ಗಳು ಮತ್ತು ದಿನಪತ್ರಿಕೆಯಲ್ಲಿಯ ಸಹೋದ್ಯೋಗಿಗಳು ಶವವನ್ನು ಕೊಲ್ಲಾಮ್‌ಗೆ ತೆಗೆದುಕೊಂಡುಹೋಗಲು ಬಯಸಿದರು. ಶವವನ್ನು ಕೊಲ್ಲಾಮ್‌ಗೆ ತೆಗೆದುಕೊಂಡು ಹೋಗುವುದಾದರೆ ಕುಟುಂಬದ ಜಮೀನಿನಲ್ಲಿಯೇ ಅಂತ್ಯಸಂಸ್ಕಾರ ಮಾಡಬೇಕು, ಸಾರ್ವಜನಿಕ ಸ್ಮಶಾನದಲ್ಲಲ್ಲ ಎಂದು ನಾನು ಆಗಲೇ ಒತ್ತಿ ಹೇಳಿದ್ದೆ. ಮುವ್ವತ್ತು ವರ್ಷಗಳ ನಂತರವೂ ಜನ ಅವರ ಮೇಲೆ ತೋರಿಸಿದ ಪ್ರೀತಿ ಮತ್ತು ಗೌರವ ಪದಗಳಲ್ಲಿ ಹೇಳಲಾಗದ್ದು. ಅದು ನನ್ನನ್ನು ಬಹಳ ಬಹಳ ಆಳವಾಗಿ ತಟ್ಟಿತು. ಬಹಳ ಬಹಳ … (ಅಳು)

 

ಹಾಗಾಗಿ ನೀವು ಅವರನ್ನು ಕೊಲ್ಲಾಮ್‌ಗೆ ತೆಗೆದುಕೊಂಡು ಹೋದಿರಿ.

ಅವರ ಕುಟುಂಬಕ್ಕೆ ಸೇರಿದ ಜಾಗದಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಆ ಜಾಗ ಅಷ್ಟೊತ್ತಿಗೆ ಅವರ ತಂಗಿಯರಿಗೆ ಸೇರಿತ್ತು. ನಾನು ಮತ್ತು ನನ್ನ ಮಕ್ಕಳು ಶವದೊಂದಿಗೆ ಆಂಬುಲನ್ಸ್‌ನಲ್ಲಿ ಹೋದೆವು. ಬಹಳಷ್ಟು ಜನ ನೆಂಟರು ಮತ್ತು ಸ್ನೇಹಿತರು ಕಾರುಗಳಲ್ಲಿ ಬಂದರು.

ಪತ್ರಕರ್ತನ ಜೀವನ ಅಷ್ಟು ಸುಲಭದ್ದಲ್ಲ. ನನ್ನ ಸಂಶೋಧನೆ, ವಿಚಾರಸಂಕಿರಣಗಳು, ಸಮಾವೇಶ, ಪ್ರವಾಸ ಇತ್ಯಾದಿಗಳಿಂದಾಗಿ ನನಗೂ ಸಹ ಬಿಡುವಿರಲಿಲ್ಲ. ಹಾಗಾಗಿ ವಯಸ್ಸಾದ ಮೇಲೆ ನಾವಿಬ್ಬರೂ ಹೆಚ್ಚು ಪ್ರವಾಸ ಮಾಡುತ್ತೇವೆ ಮತ್ತು ಜೊತೆಯಾಗಿ ಓದುಬರಹ ಮಾಡುತ್ತೇವೆ ಎಂದುಕೊಂಡಿದ್ದೆ. ನನಗೆ ಬಹಳ ಕನಸುಗಳಿದ್ದವು, ಒಂದೇ ಒಂದು ಕನಸೂ ನಿಜವಾಗಲಿಲ್ಲ, ಒಂದೇ ಒಂದು ಕನಸೂ…

 

ಒಮ್ಮೆ ಇಳಾಬೆನ್ ಅವರನ್ನು ಭೇಟಿ ಆಗಿದ್ದಾಗ ನನಗವರು ಇದನ್ನು ಹೇಳಿದ್ದರು. ರಮೇಶ್‌ಭಾಯಿಯವರು ತೀರಿಕೊಂಡ ವಿಚಾರದ ಬಗ್ಗೆ ಅವರೊಡನೆ ಮಾತನಾಡುತ್ತಿದ್ದಾಗ ಅವರೆಂದರು, “ಮುಂದೊಮ್ಮೆ ಎಂದು ಎಂದೂ ಯೋಚಿಸಬೇಡ, ಏನಿದ್ದರೂ ಈಗಲೇ ಮಾಡಬೇಕು, ಮುಂದೆ ಎಂಬುದಿಲ್ಲ.” ನಮಗೆ ಮುಂದಿನ ದಿನಗಳ ಬಗ್ಗೆ ಕನಸುಗಳಿರುತ್ತವೆ ಮತ್ತು ಅದನ್ನು ಸಮಯವಿದ್ದಾಗ ಮಾಡೋಣ ಎಂದುಕೊಂಡಿರುತ್ತೇವೆ. ಆದರೆ ನಮ್ಮ ಬದುಕಿನ ಕಾರಣಗಳಿಗಾಗಿ ಆ ದಿನಗಳು ಎಷ್ಟೋ ಸಲ ಬರುವುದೇ ಇಲ್ಲ. ನಿಮ್ಮ ಗಂಡ ಹೋದನಂತರದ ಈ ದಿನಗಳು ಹೇಗಿವೆ? ಅವರು ಹೋಗಿ ಸುಮಾರು 15 ವರ್ಷಗಳೇ ಆಗಿಬಿಟ್ಟವಲ್ಲವೇ?

ನಾನು ಚಿಕ್ಕವಳಗಾಗಿದ್ದಾಗಿನಿಂದಲೂ ಸಾವನ್ನು ಸಮೀಪದಿಂದ ನೋಡಿದ್ದೇನೆ. ನಾವು ಬಹುವಾಗಿ ಪ್ರೀತಿಸುತ್ತಿದ್ದ ನಮ್ಮಜ್ಜಿ ನಾನು M.Litt. ಗೆಂದು ಮದ್ರಾಸಿಗೆ ಹೋದ ಹಿಂದಿನ ರಾತ್ರಿ ತೀರಿಕೊಂಡರು. ಅವರ ಮನೆ ರೈಲು ರಸ್ತೆಗೆ ಹತ್ತಿರವಿತ್ತು. ರೈಲಿನಿಂದ ಅವರ ಚಿತೆಯ ಹೊಗೆಯನ್ನು ಕಾಣಬಹುದಿತ್ತು. ನನ್ನ ತಮ್ಮ ಸತ್ತಾಗ ಮನಸ್ಸಿಗೆ ಬಹಳ ಕಷ್ಟವಾಗಿತ್ತು. ನಾವಿಬ್ಬರೂ ಬಹಳ ಹತ್ತಿರವಾಗಿದ್ದೆವು, ಬಹಳ ಬಹಳ ಹಚ್ಚಿಕೊಂಡಿದ್ದೆವು. ಆದರೆ ನನ್ನ ಗಂಡ ಸತ್ತಾಗ ನನ್ನ ಜೀವನದ ಒಂದು ಭಾಗವೇ ಹೋದ ಹಾಗೆ ಅನ್ನಿಸಿತು. ಏನನ್ನೂ ವಿವರಿಸಲಾರೆ. ಅದು ನನ್ನ ಕೈಯ್ಯಲ್ಲಿ ಆಗುವುದಿಲ್ಲ…

 

ಆ ಉಳಿದ ಭಾಗ ಮತ್ತೆ ಬದುಕಲು ಕಲಿತದ್ದು ಹೇಗೆ?

ನನ್ನದು ಬಹಳಷ್ಟು ಹೆಣ್ಣುಮಕ್ಕಳು ಹೊಂದಲಾಗದ ಬಹಳ ಸುಂದರವಾದ ಮದುವೆಯಾಗಿತ್ತು ಎಂದು ನನ್ನ ಮಕ್ಕಳು ಪದೇಪದೇ ಹೇಳುತ್ತಿರುತ್ತಾರೆ. ಹಾಗಾಗಿ ಅವರು ನಾನು ನನ್ನ ಜೀವನದಲ್ಲಿ ಆದ ಒಳ್ಳೆಯ ವಿಷಯಗಳ ಬಗ್ಗೆ ಮಾತ್ರ ಯೋಚನೆ ಮಾಡಲು ಒಪ್ಪಿಗೆ ಕೊಟ್ಟಿದ್ದಾರೆ.

ನನ್ನ ತಾಯಿ 1993 ರಲ್ಲಿ ತೀರಿಕೊಂಡರು. ನನ್ನ ತಾಯಿಯನ್ನು ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ದಾಖಲು ಮಾಡಬಾರದೆಂದು ನಾನು ಪಟ್ಟುಹಿಡಿದಿದ್ದೆ. ನನ್ನ ವೈದ್ಯೆ ಮಿತ್ರೆ ಆ ತೀರ್ಮಾನವನ್ನು ಬೆಂಬಲಿಸಿದಳು. ನನ್ನಮ್ಮನಿಗೆ ತೊಂಬತ್ತನಾಲ್ಕು ವರ್ಷವಾಗಿತ್ತು ಮತ್ತವರು ಪೂರ್ಣ ಬದುಕನ್ನು ಬದುಕಿದರು. ಅವರೆಂದೂ ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಅವರ ಸ್ಥಿತಿ ಗಂಭೀರವಾಗುತ್ತಿದ್ದಂತೆ ನಾನವರ ಎಲ್ಲಾ ಸಂಬಂಧಿಕರಿಗೆ ತಿಳಿಸಿದೆ. ಬಹಳ ಜನ ಬಂದರು. ಒಂದು ಬೆಳಗ್ಗೆ ಒಂದಷ್ಟು ಭಕ್ತಿಗೀತೆಗಳನ್ನು ಕೇಳಿಸಿಕೊಂಡ ನಂತರ ಆಕೆ ಶಾಂತವಾಗಿ ಮರಣಿಸಿದರು. ಈ ಪ್ರಪಂಚವನ್ನು ಬದುಕಲು ಇನ್ನೂ ಉತ್ತಮವಾದ ಯೋಗ್ಯ ಸ್ಥಳವನ್ನಾಗಿ ಮಾಡುವುದು ನನ್ನ ಕರ್ತವ್ಯ ಎಂದು ಅವರು ಖಚಿತವಾಗಿ ನಂಬಿದ್ದರು. ಆಕೆಯ ಗಂಡ ಮತ್ತು ದೊಡ್ಡ ಮಗಳು ಇಬ್ಬರೂ ಸರ್ಕಾರಿ ನೌಕರರಾಗಿದ್ದರು. saradamoni-2ಅವರಿಬ್ಬರೂ ನಿರ್ದಿಷ್ಟ ಸಮಯದಲ್ಲಿ ಕಛೇರಿಗೆ ಹೋಗಿ ನಿರ್ದಿಷ್ಟ ಸಮಯಕ್ಕೆ ವಾಪಸಾಗುತ್ತಿದ್ದರು. ನನ್ನ ತರಹ ಅವರು ಸುತ್ತಾಡುತ್ತಿರಲಿಲ್ಲ. ಅದನ್ನು ಗಮನಿಸಿ ಅವರು ಮಲಯಾಳಮ್‌ನ ಗಾದೆಯೊಂದನ್ನು ಆಗಾಗ ಹೇಳುತ್ತಿದ್ದರು, “ಯುದ್ದವನ್ನು ಕಂಡ ಕುದುರೆ ಲಾಯದಲ್ಲಿಯೇ ಇರಲು ಇಷ್ಟಪಡುವುದಿಲ್ಲ.” ನಾನು ಕ್ಷೇತ್ರಕಾರ್ಯದಿಂದ ಹಿಂದಿರುಗಿದಾಗ ಆಗಾಗ ಅವರೊಡನೆ ಮಾತನಾಡುತ್ತಿದ್ದೆ. ಪ್ರತಿದಿನವೂ ಅವರೊಡನೆ ಸ್ವಲ್ಪ ಸಮಯ ಕಳೆಯುತ್ತಿದ್ದೆ. ಒಂದು ದಿನ ನಾನವರನ್ನು ಕೇಳಿದೆ, “ನೀನು ನನ್ನನ್ನು ಪ್ರೀತಿಸುತ್ತೀಯ, ಅಮ್ಮ.” ಆಕೆ ತಕ್ಷಣ ಹೇಳಿದಳು, “ಬಹಳ.” ಯಾಕೆ ಎಂದು ಕೇಳಿದೆ. ಅದಕ್ಕವರು ಹೇಳಿದರು, “ನೀನು ನನ್ನನ್ನು ಅಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀಯ.” ಆ ಮಾತು ನನ್ನನು ಬಹಳ ತಟ್ಟಿತು.

ನನ್ನ ತಾಯಿಯ ಮರಣ ನನ್ನನ್ನು ಗಾಢವಾಗಿ ತಟ್ಟಿತು. ನಮ್ಮ ಮನೆಯಲ್ಲಿ ಸರಣಿಯಾಗಿ ಸಂಭವಿಸಿದ ಸಾವುಗಳಲ್ಲಿ ಅದು ಕೊನೆಯದು. ಅದಾದ ತಕ್ಷಣ ವಿಚಿತ್ರವಾದ ಪ್ರಶಾಂತತೆ ನನ್ನನ್ನು ಆವರಿಸಿಕೊಂಡಿತು. ಮನೆಯಿಂದ ಹೊರಗೆ ಹೋಗಲು ಮನಸ್ಸಾಗುತ್ತಿರಲಿಲ್ಲ. ಯಾಕೆಂದರೆ ಖಾಲಿ ಮನೆಗೆ ಹಿಂದಿರುಗಿ ಬರಲು ಭಯವಾಗುತ್ತಿತ್ತು. ಹಾಗಾಗಿ ಪ್ರಸಿದ್ಧ ದೇಗುಲ ಪಟ್ಟಣವಾದ ಗುರುವಾಯೂರಿನಲ್ಲಿ ವಾಸಿಸುತ್ತಿದ್ದ ಸ್ನೇಹಿತೆಯ ಮನೆಗೆ ಹೋದೆ. ಅಲ್ಲಿಂದ ಸಾಹಿತ್ಯ ಅಕಾಡೆಮಿಯಲ್ಲಿ ಓದಲೆಂದು ಹೋಗುವುದಕ್ಕೆ ಸಾಧ್ಯವಿತ್ತು. ಅಲ್ಲಿಂದ ವಾಪಸು ಬಂದಾಗ ಶಕ್ತಿ ಬಂದ ಹಾಗೆ ಅನ್ನಿಸಿತು.

ಈ ವರ್ಷಗಳಲ್ಲಿ ಬಹಳಷ್ಟು ಜನ, ಸ್ವಂತ ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿಗಳು, ವೈಯಕ್ತಿಕವಾಗಿ ಪರಿಚಯವಿಲ್ಲದ ಆದರೆ ಅಕರ್ಷಿಸಿದ ಬರವಣಿಗೆಗಳನ್ನು ಬರೆದಿದ್ದ ಜನ, ನಮ್ಮನ್ನು ಬಿಟ್ಟುಬಿಟ್ಟು ಹೋದರು. ಕೆಲವು ಬಹಳ ಒಳ್ಳೆಯ ಸ್ನೇಹಿತರು ಸಹ ಹೋಗಿಬಿಟ್ಟರು. ಪ್ರಪಂಚ ಸಣ್ಣದಾಗುತ್ತಿದೆ ಎನ್ನುವ ಭಾವನೆ ನನಗೆ ಬರಲಾರಂಭಿಸಿತು.

ಹೇಗೆ ಉಳಿದುಕೊಂಡಿರಿ ಎಂದು ನನ್ನನ್ನು ಕೇಳಿದಿರಿ. ನಾನು ದೆಹಲಿಯಿಂದ ವಾಪಸಾದಾಗ ನನಗೆ ಕೆಲವು ಯೋಜನೆಗಳಿದ್ದವು. ICSSR ನ ಫೇಲೊಷಿಪ್ ಸಹ ಇತ್ತು. ಕಾರಣಾಂತರಗಳಿಂದಾಗಿ ಈ ಫೆಲೊಷಿಪ್ ಮುಗಿಯಲು ಬಹಳ ದಿನ ಹಿಡಿಯಿತು. ಕೈಗೆತ್ತಿಕೊಳ್ಳಬೇಕೆಂದುಕೊಂಡಿದ್ದ ಇತರೆ ವಿಷಯಗಳನ್ನು ಕೈಗೆತ್ತಿಕೊಳ್ಳಲಾಗಲೇ ಇಲ್ಲ. ಸರಳವಾಗಿ ಹೇಳಬೇಕೆಂದರೆ, ಶೈಕ್ಷಣಿಕ ಮತ್ತು ಸರ್ಕಾರೇತರ ಸಂಸ್ಥೆಗಳು ಆಯೋಜಿಸುತ್ತಿದ್ದ ವಿಚಾರ ಸಂಕಿರಣಗಳಲ್ಲಿ ಮತ್ತು ಕಾರ್ಯಾಗಾರಗಳಲ್ಲಿ ನಾನು ವ್ಯಸ್ತಳಾಗಿಬಿಟ್ಟೆ. ನಾನು ಮಲಯಾಳಮ್‌ನಲ್ಲಿ 1950 ರಿಂದ 1999 ರವರೆಗೆ ಮಹಿಳೆಯರ ಬಗ್ಗೆ ಬರೆದಿದ್ದ ಲೇಖನಗಳಲ್ಲಿ ಇಪ್ಪತ್ತನ್ನು ಆರಿಸಿಕೊಂಡು ಅದನ್ನು DC ಬುಕ್ಸ್‌ನವರಿಂದ ಪ್ರಕಟಿಸಿದೆ. ಅದಕ್ಕೆ ನನ್ನ ಚಿಕ್ಕ ಮಗಳು ಪ್ರಸ್ತಾವನೆ ಬರೆದಳು. ಆ ಪುಸ್ತಕಕ್ಕೆ ಒಳ್ಳೆಯ ವಿಮರ್ಶೆ ಬಂದಿದ್ದರೂ, ಒಂದು ಪತ್ರಿಕೆ ವಿಮರ್ಶಕನ ಹೆಸರೇ ಕೊಡದೆ ಪ್ರಕಟಿಸಿದ ವಿಮರ್ಶೆಯಲ್ಲಿ (ನಾನಿದನ್ನು ಬಹಳ ಕೆಟ್ಟ ಪತ್ರಿಕಾ ಸಂಪ್ರದಾಯ ಎಂದು ಭಾವಿಸುತ್ತೇನೆ) ಆತ ನಮ್ಮಿಬ್ಬರ ಬಗ್ಗೆ ಮಿತಿಯಿಲ್ಲದ ಹೇಸಿಗೆತನ ಮತ್ತು ದ್ವೇಷ ಸಾಧಿಸಿದ್ದ. ಅದರ ಹೊರತಾಗಿಯೂ ಆ ಪುಸ್ತಕದ ಎಲ್ಲಾ ಪ್ರತಿಗಳೂ ಮಾರಾಟವಾದವು. Mainstream ಗೆ ಆಗಾಗ ಬರೆಯುತ್ತೇನೆ. ಇತ್ತೀಚೆಗೆ ಮಲಯಾಳಮ್‍ ವಾರಪತ್ರಿಕೆಯೊಂದಕ್ಕೆ “ಅಭಿವೃದ್ಧಿ ಎಂದರೆ ಏನು? ಯಾರಿಗಾಗಿ? ಕೇರಳ ಎತ್ತ ಹೋಗುತ್ತಿದೆ?” ಎನ್ನುವ ಲೇಖನ ಬರೆದಿದ್ದೇನೆ.

 

ಬರವಣಿಗೆ ಮಾಡುತ್ತ ಮಾನಸಿಕವಾಗಿ ಜೀವಂತವಾಗಿರುವ ಪ್ರಯತ್ನ ಮಾಡುತ್ತಿದ್ದೀರಿ?

ನೋಡಿ, ದುಃಖವಿಲ್ಲದೆ ದಾರಿಯೇ ಇಲ್ಲ. ಜೀವನ ಯಾರಿಗೂ ಸಮವಾಗಿಲ್ಲ ಮತ್ತು ಸಲೀಸಾಗಿಲ್ಲ. ದುರಂತದ ಎದುರೂ ನಮಗಿಂತ ಹೆಚ್ಚಿನ ದುಃಖ ಮತ್ತು ದುರಂತವನ್ನು ಎದುರಿಸುತ್ತಿರುವವರು ನಮ್ಮ ಸುತ್ತಮುತ್ತ ಇದ್ದಾರೆ ಎನ್ನುವುದನ್ನು ನಾವು ನೆನಪಿಸಿಕೊಳ್ಳಬೇಕು.

 

ಅಂದರೆ ಕಾಯಕವೇ ನಿಮ್ಮನ್ನು ಇಲ್ಲಿಯವರೆಗೆ ಭರಿಸಿದೆ.

ಬಹುಪಾಲು. ಕೆಲಸ ಎನ್ನುವುದು ಮಾಡಬೇಕಾಗಿರುವ ಕಾರಣ ಮಾಡುವ ಕ್ರಿಯೆಯಂತೆ ಅಲ್ಲ…. ಊಟ ಮಾಡುವ ಅಥವ ಕಾಫಿ ಕುಡಿಯುವ ಕ್ರಿಯೆಯಂತೆ, ಕೆಲಸ ನನ್ನ ಜೀವನದ ಒಂದು ಭಾಗ. ಇವತ್ತು ಏನೂ ಮಾಡುವುದು ಬೇಡ ಎನ್ನುವ ಒಂದು ದಿನವೂ ನನ್ನ ಜೀವನದಲ್ಲಿ ಇಲ್ಲ. ನನ್ನ ಮನಸ್ಸು ಯಾವಾಗಲೂ ಕ್ರಿಯಾಶೀಲವಾರುತ್ತದೆ. ಪ್ರಪಂಚದಲ್ಲಿ, ಅದರಲ್ಲೂ ಕೇರಳದಲ್ಲಿ ಮತ್ತು ಭಾರತದಲ್ಲಿ ಆಗುತ್ತಿರುವ ವಿಷಯಗಳ ಬಗ್ಗೆ ನಾನು ಯಾವಾಗಲೂ ಚಿಂತಿಸುತ್ತಿರುತ್ತೇನೆ.

 

ಅದು ಸಾಮೂಹಿಕ ಮನೋಲಹರಿಗಾಗಿ. ನಾನೆಂದದ್ದು ನಿಮಗೆ ಸಂವಾದವೂ ಬೇಕೆಂದು.

ನಾನು ದೆಹಲಿಯಿಂದ ಬಂದಾಗ ವರ್ತಮಾನದ ಸಂಗತಿಗಳನ್ನು ಚರ್ಚಿಸಲು ಇಲ್ಲಿ ಗುಂಪೊಂದನ್ನು ಮಾಡಿಕೊಳ್ಳಲು ಆಸಕ್ತಳಾಗಿದ್ದೆ. ಆದರೆ ನನಗೆ ಸಾಂಸ್ಥಿಕ ಬೆಂಬಲ ಇಲ್ಲದಿದ್ದ ಕಾರಣ ಅಂತಹುದೊಂದು ಗುಂಪನ್ನು ಕಟ್ಟಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ಅಂತಹುದೊಂದು ಗುಂಪಿನ ಭಾಗವಾಗಿ ಹತ್ತು ವರ್ಷ ಇದ್ದೆ. ಹೇಳಬೇಕೆಂದರೆ ಆ ಗುಂಪಿನಲ್ಲಿ ಮಹಿಳೆಯಾಗಿದ್ದವಳು ನಾನೊಬ್ಬಳೆ. ಈಗ ಆ ಗುಂಪೂ ಇಲ್ಲ. ಕಾಫಿ ಹೌ‌ಸ್‌ನಲ್ಲಿ ಸೇರಿ ಆ ದಿನ ತಮಗೆ ಇಷ್ಟವಾದ ವಿಷಯದ ಬಗ್ಗೆ ಚರ್ಚೆ ಮಾಡುವ ಹೆಣ್ಣುಮಕ್ಕಳೇ ಇರುವ ಗುಂಪೊಂದಕ್ಕಾಗಿ ಸಲಹೆ ಮಾಡಿದ್ದೆ. ಸಾರ್ವಜನಿಕ ಸ್ಥಳವನ್ನು ಆಕ್ರಮಿಸಿಕೊಳ್ಳುವ ತಮ್ಮ ಹಕ್ಕನ್ನು ಸ್ತ್ರೀಯರು ಉಪಯೋಗಿಸಿಕೊಳ್ಳಬೇಕೆಂಬ ಕಾರಣಕ್ಕಾಗಿ ಹಾಗೆ ಮಾಡಬೇಕೆಂಬುದು ನನ್ನ ಉದ್ದೇಶ. ಅದೂ ಸಹ ಕೈಗೂಡಲಿಲ್ಲ. ನನಗೆ ಪ್ರಸ್ತುತ ಎನ್ನಿಸಿದ ಮತ್ತು ವಿಭಿನ್ನ ದೃಷ್ಟಿಕೋನಗಳನ್ನು ಕೇಳಬಹುದಾದ ಕಾರ್ಯಕ್ರಮಗಳಿಗೆ ಮಾತ್ರ ಈಗ ಹೋಗುತ್ತಿರುತ್ತೇನೆ.

 

ಇದೊಂದು ಒಳ್ಳೆಯ ಸಂದರ್ಶನ.

ಹಾಗೇನು?

 

ನೆನ್ನೆಯನ್ನು ಪೇಪರ್ ಓದುವ ಮೂಲಕ ಶುರು ಮಾಡಿ, ಸಾವಕಾಶವಾಗಿ ಆರಂಭಿಸಿದ್ದು ಒಳ್ಳೆಯ ಯೋಜನೆ ಆಗಿತ್ತು. ಬಹಳ ಚೆನ್ನಾಗಿ ಆಯಿತು. ಎಲ್ಲಾ ಸಂದರ್ಶನಗಳಲ್ಲಿ ನನ್ನನ್ನು ಚಿಂತೆಗೀಡು ಮಾಡುವುದು ಏನೆಂದರೆ ಒಮ್ಮೆ ಮಾತನಾಡಲು ಆರಂಭಿಸಿದರೆ ನಿಲ್ಲಿಸಲು ಆಗುವುದೇ ಇಲ್ಲ ಎನ್ನುವುದು.

ನನ್ನ ಲೇಖನಗಳನ್ನು ಪ್ರಕಟಣೆಗೆ ಕಳುಹಿಸುವ ಮೊದಲು ಅವನ್ನು ನನ್ನ ಗಂಡನಿಗೆ ತೋರಿಸುತ್ತಿದ್ದೆ. ಆ ತರಹದ ನಿಯಮಗಳೇನೂ ಇರಲಿಲ್ಲ. ನಾನು ಇನ್ನೂ ಪ್ರಬಲವಾಗಿ ಬರೆಯಬೇಕೆಂದು ಅವರು ಯಾವಾಗಲೂ ಹೇಳುತ್ತಿದ್ದರು. ಅವರು ಒತ್ತಾಯಿಸುತ್ತಿದ್ದ ಮತ್ತೊಂದು ವಿಷಯ ಎಂದರೆ, ನಾನು ಯಾವುದಾದರೂ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರೆ ಅದಕ್ಕೆ ಪೂರಕವಾಗಿ ಸಮರ್ಪಕವಾದ ಆಧಾರಗಳನ್ನು ಕೊಡಬೇಕು ಮತ್ತು ಕಾರ್ಯಸಾಧುವಾದ ಪರ್ಯಾಯವನ್ನು ಮಂಡಿಸಬೇಕು ಎಂದು. ಮಾತೃಪ್ರಧಾನ ವ್ಯವಸ್ಥೆಯ ಬಗೆಗಿನ ನನ್ನ ಪುಸ್ತಕ ಅವರು ತೀರಿಕೊಂಡ ನಂತರ ಬಂದದ್ದು. ನನ್ನ ಅನುಭವಕ್ಕೆ ಬಾರದಿದ್ದ ಕೂಡುಕುಟುಂಬದ ವಿಭಜನೆಯನ್ನು ಅವರು ಸ್ವತಃ ಕಂಡಿದ್ದರು. ಆದರೆ ನಾನು ಮಾತೃಪ್ರಧಾನ ವ್ಯವಸ್ಥೆಯನ್ನು ವೈಭವೀಕರಿಸಲಿಲ್ಲ. ಅವರಿಗೆ ಆ ಪುಸ್ತಕವನ್ನು ನೋಡಲಾಗಲಿಲ್ಲ ಎನ್ನುವುದರ ಬಗ್ಗೆ ನನಗೆ ಖೇದವಿದೆ.

 

ನಾನು ಸುಮ್ಮನೆ ತಮಾಷೆ ಮಾಡುತ್ತಿದ್ದೆ. ನೀವೊಬ್ಬ ಬಹಳ ನೇರಸ್ವಭಾವದವಳು, ಭಾವೋದ್ವೇಗಗಳಿಲ್ಲದವಳು ಎಂದು ನೀವು ಪದೇಪದೇ ಹೇಳುತ್ತಿರುತ್ತೀರಿ.

ನನ್ನ ಗಂಡ ಸತ್ತಾಗ ಅವರಿಗೆ ಕೇವಲ ಅರವತ್ತೆಂಟು ವರ್ಷ. ಕಾಯಿಲೆ ಬೀಳದೆ ಇದ್ದಿದ್ದರೆ ಅವರು ಏನು ಮಾಡಿರುತ್ತಿದ್ದರು ಎಂದು ಹೇಳಲಾರೆ. ಅವರು ಸಕ್ರಿಯ ರಾಜಕಾರಣಕ್ಕೆ ಮರಳಿ ಹೋಗುತ್ತಿದ್ದರು ಎಂದು ಅನ್ನಿಸುವುದಿಲ್ಲ. ಬಹುಶಃ ಅವರು ತಾವೊಬ್ಬ ರಾಜಕೀಯ ವ್ಯಾಖ್ಯಾನಕಾರರಾಗಿರುತ್ತಿದ್ದರು. ಇವತ್ತಿನ ಕೇರಳದ ರಾಜಕೀಯ ನಮಗೆ ಗೊತ್ತಿದ್ದ ರಾಜಕೀಯ ಅಲ್ಲ. ನನ್ನ ಕೆಲಸ ನಮ್ಮಿಬ್ಬರ ಜಂಟಿ ಉತ್ಪನ್ನ ಎಂದು ಹೇಳಲಾರೆ… ಆ ನನಸಾಗದ ಕನಸು ನಾನು ಇನ್ನೂ ಮುಂದಕ್ಕೆ ಬದುಕಲು ಪ್ರೇರೇಪಿಸುತ್ತದೆ ಎನ್ನಿಸುತ್ತದೆ. ನಾನೆಂದೂ ಮಧ್ಯಮಮಾರ್ಗವನ್ನು ಹುಡುಕಲಿಲ್ಲ. ಕಠಿಣವಾದ ಹಾದಿಯಲ್ಲಿಯೇ ನಡೆಯಲು ನಾನು ತೀರ್ಮಾನಿಸಿದ್ದೆ.


grief-to-bury-kannada-coverbackpage

Leave a Reply

Your email address will not be published. Required fields are marked *