Daily Archives: September 10, 2014

ಬುರ್ಖಾ ಚರ್ಚೆ: ಸುಧಾರಣೆ ಅನ್ನೋದು ನಿರಂತರ ಆಗುವ ಪ್ರಕ್ರಿಯೆ…

– ಶರಣ್

ದಿನೇಶ್ ಅಮಿನ್ ಮಟ್ಟು ಅವರು ಮಂಗಳೂರಿನ ಭಾಷಣದಲ್ಲಿ ಮುಖ್ಯವಾಗಿ ಮಾತನಾಡಿದ್ದು ‘ರಿಲೆ’ ಮುಂದುವರಿಯಬೇಕು ಎಂದು. ಸದ್ಯದ ಬರಹಗಾರರು ರಿಲೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳುತ್ತಲೇ, ಅವರು ಸೂಕ್ಷ್ಮವಾಗಿ ವ್ಯಕ್ತಪಡಿಸಿದ್ದು, “ಇದಕ್ಕೆ ಬಹಳ ಮುಖ್ಯ ಕಾರಣನೂ ಇದೆ. ಬಾಬರೀ ಮಸೀದಿ ಧ್ವಂಸದ ನಂತರ ಎದ್ದ ಹಿಂದುತ್ವದ ಅಲೆ ಅಬ್ಬರದಲ್ಲಿ ಇವರ ಧ್ವನಿಗಳು ಉಡುಗಿ ಹೋಯಿತು”. dinesh-aminmattuದಿನೇಶ್ ನೂರಾರು ಯುವಕರ ಗೌರವ ಮತ್ತು ಮೆಚ್ಚುಗೆ ಪಡೆಯುವುದೇ ಇಂತಹ ಒಳನೋಟಗಳಿಂದ. ಈ ಭಾಷಣದ ನಂತರ ನಡೆದ ಚರ್ಚೆಗಳಲ್ಲಿ ಈ ದನಿ ಉಡುಗಿ ಹೋಗಲು ಕಾರಣವಾದ ಸಂಗತಿಗಳ ಬಗ್ಗೆ ಉಲ್ಲೇಖ ನೆಪಮಾತ್ರಕ್ಕೂ ಇರಲಿಲ್ಲ. (ನನ್ನ ಗಮನಕ್ಕೆ ಬಾರದೆ ಚರ್ಚೆಯಾಗಿದ್ದರೆ, ಈ ವಾಕ್ಯವನ್ನು ಮಾರ್ಪಾಟು ಮಾಡಿಕೊಂಡು ಓದಬಹುದು).

ಸದ್ಯದ ಬರಹಗಾರರನ್ನು ಮಸೀದಿ ಧ್ವಂಸ ಪ್ರಕರಣ, ಗಲಭೆ, ಗುಜರಾತ್ ಹಿಂಸಾಚಾರ, ಮೋದಿಯ ಪಟ್ಟ – ಎಂಬೆಲ್ಲಾ ಬೆಳವಣಿಗೆಗಳು ಘಾಸಿಗೊಳಿಸಿವೆ. ಈ ಘಟನೆಗಳು ಈ ದೇಶದ ಉದಾರವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬೆಲೆ ಕೊಡುವ ಬಹುಸಂಖ್ಯಾತ ಕೋಮಿಗೆ ಸೇರಿದವನ ಮೇಲೆ ಮಾಡುವ ಪರಿಣಾಮಕ್ಕಿಂತ ಘೋರ ಪರಿಣಾಮವನ್ನು ಅಲ್ಪಸಂಖ್ಯಾತ ಕೋಮಿನ ಅದೇ ತೆರೆನ ವ್ಯಕ್ತಿತ್ವದ ಮೇಲೆ ಮಾಡಬಲ್ಲವು. ಆತನನ್ನು (ಅಲ್ಪಸಂಖ್ಯಾತ ಸಮುದಾಯದ) ಅತೀವ ಅಸಹಾಯಕತೆಗೆ, ಅಭದ್ರತೆಗೆ ತಳ್ಳುತ್ತವೆ. ಬಹುಸಂಖ್ಯಾತ ಕೋಮಿನ ಯುವಕನಿಗೆ ಇಂತಹ ಘಟನೆಗಳಿಂದ ಅದೆಷ್ಟೇ ಆಕ್ರೋಷ ಉಕ್ಕಿ ಬಂದರೂ, ಅಭದ್ರೆತೆ ಕಾಡುವ ಸಾಧ್ಯತೆಗಳು ಕಡಿಮೆ.

ಬಹುಸಂಖ್ಯಾತ ಸಮುದಾಯದ ಹುಡುಗನೊಬ್ಬ ಎಂಥಹದೇ ಕೇಸಿನ ಮೇಲೆ ಜೈಲುಪಾಲಾದರೂ, ಈ ದೇಶದ ಮಾಧ್ಯಮ ಅವನನ್ನು ‘ಉಗ್ರ’ ಎಂದು ಕರೆಯುವುದಿಲ್ಲ ಎಂಬ ಗ್ಯಾರಂಟಿ ಅವನ ಕುಟುಂಬಕ್ಕಿದೆ. ಆದರೆ ಅಲ್ಪಸಂಖ್ಯಾತ ಹುಡುಗನ ಪರಿಸ್ಥಿತಿ ಹಾಗಿರುವುದಿಲ್ಲ. ಪತ್ರಿಕಾಲಯದಲ್ಲಿ ರಾತ್ರಿ ಪಾಳಿ ಮುಗಿಸಿ ಮನೆಗೆ ಬಂದು ಮಲಗಿದ್ದರೆ, ಬೆಳಗಿನ ಜಾವ ಯಾರೋ ನಾಲ್ವರು ಬಾಗಿಲು ನೂಕಿ ಜೀಪಿನಲ್ಲಿ ಹಾಕಿಕೊಂಡು ಹೋಗುತ್ತಾರೆ. ಮಾರನೆಯ ದಿನ ಕುಖ್ಯಾತ ಉಗ್ರನ ಬಂಧನವಾಗಿದೆ ಎಂದು ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತವೆ. ಅವನೊಂದಿಗೆ ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರೇ “ಅವನು ಮೊದಲಿನಿಂದಲೂ ಹಾಗೇ. ಈಗ ಬಹಿರಂಗ ಆಗಿದೆ ಅಷ್ಟೆ…” ಎಂದು ಮಾತನಾಡುತ್ತಾರೆ. ಮತ್ತೊಬ್ಬ ಪ್ರತಿಷ್ಠಿತ ಸಂಸ್ಥೆಯಲ್ಲಿ ವಿಜ್ಞಾನಿ ಹುದ್ದೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇವರ ಮೇಲಿನ ಆರೋಪಗಳು ಸುಳ್ಳು ಎಂದು ಸಾಬೀತಾಗುವ ತನಕ ಅವರ ಕುಟುಂಬ, ಸ್ನೇಹಿತರು, ಆತ್ಮೀಯರು ಅನುಭಿಸಿದ ಯಾತನೆಗೆ ಪರಿಹಾರ ಇದೆಯೆ?

ಮೊನ್ನೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ವಿವಿಧ ಮಾಧ್ಯಮಗಳು ಸಮೀಕ್ಷೆModi-selfie ನಡೆಸಿ ವರದಿ ಮಾಡುತ್ತಿದ್ದರೆ, ಅಲ್ಟಸಂಖ್ಯಾತ ಸಮುದಾಯದ ಮಿತ್ರನೊಬ್ಬ ಒಂದೊಂದು ಚಾನೆಲ್ ನ ವರದಿ ಬಂದಾಗಲೂ ಮಾನಸಿಕವಾಗಿ ಕುಗ್ಗುತ್ತಿದ್ದ. ಮಾತಿನ ಮೂಲಕ ತನ್ನೊಳಗಿನ ಆತಂಕ, ಸಂಕಟ ವ್ಯಕ್ತಪಡಿಸುತ್ತಿದ್ದ. ಇವೆಲ್ಲಾ ಸಮೀಕ್ಷೆಗಳು ಸುಳ್ಳಾಗಬಹುದು ಎಂಬ ನಿರೀಕ್ಷೆ ಅವನಲ್ಲಿತ್ತು. ಚುನಾವಣಾ ಆಯೋಗ ಮತಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಿದಾಗ ಮಾತು ನಿಲ್ಲಿಸಿಬಿಟ್ಟ. ಯಾವುದರ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುತ್ತಾನೆ. ಅವನನ್ನು ಇತರರು ಪುಕ್ಕಲ ಎಂದು ಮೂದಲಿಸಿ ಸುಮ್ಮನಾಗುವುದು ಸುಲಭ. ಆದರೆ ಅವನ ವರ್ತನೆ ಪ್ರಾಮಾಣಿಕವಾಗಿದೆ. ನಾಟಕೀಯ ಅಲ್ಲ. ಆ ಕಾರಣಕ್ಕಾಗಿಯೇ ಅವನ ಆತಂಕಗಳಿಗೆ ಇತರರು ಮಿಡಿಯಬೇಕಿದೆ.

ಈ ದೇಶದ 110 ಕೋಟಿ ಜನರ ಪ್ರತಿನಿಧಿಯಾಗಲು ಬಯಸಿ ಪ್ರಧಾನಿ ಪಟ್ಟಕ್ಕೆ ಸ್ಪರ್ಧಿಸಿ ಹೋದ ಕಡೆಯಲ್ಲೆಲ್ಲ, ಅಲ್ಲಿನ ಸ್ಥಳೀಯ ಸಮುದಾಯದವರು ಕೊಡುವ ಪೇಟ, ಪಗೋಡ, ಮುಂಡಾಸು, ಟೋಪಿ..ಇತರೆ ಎಲ್ಲವನ್ನೂ ಸ್ವೀಕರಿಸಿ ಸಂತೋಷದಿಂದ ಧರಿಸುವ ವ್ಯಕ್ತಿ ಒಂದು ಸಮುದಾಯದ ಉಡುಗೆಯನ್ನು ನಿರಾಕರಿಸಿದಾಗ ಆ ಸಮುದಾಯ ಹೇಗೆ ಪ್ರತಿಕ್ರಿಯಿಸಬೇಕು? ಪಟ್ಟಕ್ಕೆ ಬಂದ ನಂತರ ತರುವಾಯ ದೇಶದ ಎಲ್ಲ ಸಣ್ಣ ಪುಟ್ಟ ಆಗು-ಹೋಗುಗಳಿಗೂ ಟ್ವೀಟ್ ಮಾಡುವ ಪ್ರಧಾನಿಗೆ ಪುನಾದಲ್ಲಿ ಸ್ಕಲ್ ಕ್ಯಾಪ್ ಹಾಕಿಕೊಂಡು ಸಂಜೆಯ ಪ್ರಾರ್ಥನೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಯುವಕನನ್ನು ಕೆಲ ಹುಡುಗರು ನಡುಬೀದಿಯಲ್ಲಿಯೇ ಹೊಡೆದು ಸಾಯಿಸಿದ ಘಟನೆಗೆ ಪ್ರತಿಕ್ರಿಯಿಸಬೇಕು ಎನಿಸುವುದೇ ಇಲ್ಲ. ಮುಜಾಫರ್ ನಗರದ ಗಲಭೆಗಳು ನೆನಪಾಗುವುದೇ ಇಲ್ಲ. ಅಕ್ಷರಶಃ ಒಂದು ಬಹುದೊಡ್ಡ ಅಲ್ಪಸಂಖ್ಯಾತ ಸಮುದಾಯ ಈ ದೇಶದಲ್ಲಿ ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಪ್ರಧಾನಿಯ ಆಳ್ವಿಕೆಯಲ್ಲಿ, ಅಭದ್ರತೆಗೆ ಒಳಗಾಗುವುದು ಸಹಜ ತಾನೆ?

ಈ ಮಧ್ಯೆ ಪ್ರಗತಿಪರರು ಎನಿಸಿಕೊಂಡು ಅಲ್ಟಸಂಖ್ಯಾತರ ಸಖ್ಯಗಳಿಸಿದ್ದ ಅನೇಕರು, “ನೋಡಿ ಮೋದಿ, ಚುನಾವಣೆ ಘೋಷಣೆ ಆದಾಗಿನಿಂದಲೂ ಒಮ್ಮೆಯೂ ಧರ್ಮ, ಕೋಮು, ಹಿಂದೂ ರಾಷ್ಟ್ರ..ಎಂದೆಲ್ಲಾ ಮಾತನಾಡಲೇ ಇಲ್ಲ…” ಎಂದು ನಮೋ ನಾಮವನ್ನು ಜಪಿಸಲು ಆರಂಭಿಸದರು. ಆದರೆ ಬಹುಸಂಖ್ಯಾತ ಹಿಂದೂಗಳ ಶ್ರದ್ಧಾ ಕೇಂದ್ರವಾದ ವಾರಣಾಸಿಯನ್ನು ತನ್ನ ಕ್ಷೇತ್ರವನ್ನಾಗಿ ಆರಿಸಿಕೊಳ್ಳುವ ಮೂಲಕ ದೇಶಾದ್ಯಂತ ತಾನು ಬಯಸುತ್ತಿರುವುದು ಧರ್ಮದ ಆಧಾರದ ಮೇಲಿನ ಮತ ವಿಭಜನೆಯನ್ನು ಎಂದು ತುಂಬಾ ನಯವಾಗಿ ಸಾರಿದ್ದ. guj-violence(ಇದು ಕೂಡ, ದಿನೇಶ್ ಅಮಿನ್ ಮಟ್ಟು ಅವರು ತಮ್ಮ ಒಂದು ಭಾಷಣದಲ್ಲಿ ಹೇಳಿದ್ದು). ಜೊತೆಗೆ ನಿಲ್ಲಬಹುದಾಗಿದ್ದ ಸೋಕಾಲ್ಡ್ ಪ್ರಗತಿಪರರು ದೂರವಾಗುತ್ತಿದ್ದಾರೆ ಎಂದೆನಿಸಿದಾಗ ಅಭದ್ರತೆ ಜೊತೆಗೆ ಒಂಟಿತನ ಕೂಡಾ ಕಾಡುತ್ತದೆ.

ಇನ್ನು ಮಾಧ್ಯಮಗಳಂತೂ (ಕೆಲವನ್ನು ಹೊರತುಪಡಿಸಿ) ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕಸದಬುಟ್ಟಿಗೆ ಹಾಕಿ ಗದ್ದುಗೆ ಹಿಡಿದವರ ಚಾಕರಿಗೆ ನಿಂತಿವೆ. ಹಾಗಾದರೆ, ಇವರ ದನಿ ಉಡುಗದೆ ಇನ್ನೇನು ಮಾಡೀತು? ಬುರ್ಖಾ ಬಗ್ಗೆ ನಿನ್ನ ಅಭಿಪ್ರಾಯವೇನು ಎಂದು ಅಲ್ಟಸಂಖ್ಯಾತ ಸಮುದಾಯದ ಸ್ನೇಹಿತನ ಪ್ರಶ್ನೆ ಮಾಡಿ, ಆತನಲ್ಲಿರಬಹುದಾದ ಮೂಲಭೂತವಾದಿ ಮೌಲ್ಯಗಳನ್ನು ಬಹಿರಂಗಗೊಳಿಸಿ ಸಾಧಿಸುವುದೇನೂ ಇಲ್ಲ. ಈ ದೇಶದ ಬಹುಸಂಖ್ಯಾತ ಸಮುದಾಯವಾಗಿದ್ದರೂ, ಅಕ್ಷರ ಜ್ಞಾನ, ಉದ್ಯೋಗ, ಸಂಪಾದನೆ ಎಲ್ಲದರಲ್ಲೂ ಮುಂದೆ ಇದ್ದರೂ, ಸಾಕಷ್ಟು ಸಂಖ್ಯೆಯಲ್ಲಿ ಸಮಾಜ ಸುಧಾರಕರು ಅನಾದಿ ಕಾಲದಿಂದ ಆಗಾಗ ಬಂದು ಬುದ್ಧಿವಾದ ಹೇಳಿದ್ದರೂ ಇಂದಿಗೂ ಹಿಂದೂಗಳು ಅಸ್ಪೃಶ್ಯತೆಯನ್ನು ಜಾರಿಯಲ್ಲಿಟ್ಟುಕೊಂಡೇ ಇದ್ದಾರಲ್ಲ. ಮೊನ್ನೆ ಮೊನ್ನೆ ತನಕ (ಕೆಲವು ದಶಕಗಳ ಹಿಂದಿನ ತನಕ), ಈ ಸಮುದಾಯದಲ್ಲಿ ಸತೀ ಪದ್ಧತಿ ಜಾರಿಯಲ್ಲಿತ್ತಲ್ಲ! (ಉರಿವ ಬೆಂಕಿಯಲ್ಲಿ ಜೀವಂತವಾಗಿ ಸುಡುವ ದೃಶ್ಯ ಕಲ್ಪಿಸಿಕೊಂಡರೆ ಎದೆ ಝಲ್ ಎನ್ತುತ್ತದೆ.) ಅವರೇ ಇನ್ನೂ ಸುಧಾರಣೆ ಆಗಿಲ್ಲ.

ಹಾಗಂತ ತನ್ನ ತಟ್ಟೆಯಲ್ಲಿ ಸತ್ತ ಕತ್ತೆಯನ್ನಿಟ್ಟುಕೊಂಡು, ಪಕ್ಕದವರ ಎಲೆಯಲ್ಲಿರುವ ನೊಣದ ಬಗ್ಗೆ ಮಾತನಾಡಬಾರದು ಎಂದಲ್ಲ. ಇಷ್ಟೆಲ್ಲಾ ದಾರ್ಶನಿಕರು ಬಂದು ಹೋದನಂತರವೂ ಕತ್ತೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿಲ್ಲದಿರುವಾಗ, ಅಂತಹ ಸುಧಾರಣೆಯ ಪ್ರಕ್ರಿಯೆಗಳು ಕಾಲಕಾಲಕ್ಕೆ ನಡೆಯದೆ ಹಿಂದುಳಿದಿರುವ ಸಮುದಾಯಗಳ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳಬೇಕಾಗುತ್ತದೆ. ನಿನಗಾದರೂ ಊಟಮಾಡಲು ತಟ್ಟೆ ಸಿಕ್ಕಿದೆ ಪಕ್ಕದವನಿಗೆ ಇನ್ನೂ ಎಲೆಯೇ ಗತಿ ಎಂದು ತಿಳಿಯಬೇಕಲ್ಲ.

ಬದಲಾವಣೆ ಸಾಧ್ಯವೇ ಇಲ್ಲ ಎಂದೇನಲ್ಲ. ಸತಿ ಪದ್ಧತಿ ನಿಂತಿರುವುದು ಬದಲಾವಣೆ ಸಾಧ್ಯ ಎನ್ನಲು ಒಂದು ಉದಾಹರಣೆ. Manual-scavengingಅದೇ ರೀತಿ, ಕೆಲವು ಆಚರಣೆ, ಸಂಪ್ರದಾಯಗಳ ಹಾಗೂ ಕೆಲವು ಸಮುದಾಯಗಳ ವಿಚಾರದಲ್ಲಿ ಹೆಚ್ಚು ಸಮಯ ಬೇಕಾಗಬಹುದು. ಅದಕ್ಕೆ ವಿಚಾರವಂತಿಕೆ, ಶಿಕ್ಷಣ, ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ, ವೈಜ್ಞಾನಿಕ ಆಲೋಚನ ಕ್ರಮ ಎಲ್ಲವೂ ಕಾರಣ. ಇವೆಲ್ಲವೂ ಹೇರಳವಾಗಿರುವ ಜಾತಿಯ ಮನೆಗಳಲ್ಲಿಯೇ ಇನ್ನೂ ಬದಲಾವಣೆ ಆಗಿಲ್ಲ. ಫೇಸ್‍ಬುಕ್‍ನಂತಹ ಸಾಮಾಜಿಕ ತಾಣಗಳಲ್ಲಿ ಕೆಲ ಮುಂದುವರಿದ (ಸಾಮಾಜಿಕ ಮತ್ತು ಆರ್ಥಿಕವಾಗಿ) ಜಾತಿಗಳ, ಉಪಜಾತಿಗಳ ಗುಂಪುಗಳು ಚಾಲ್ತಿಯಲ್ಲಿರುವುದು ಇದಕ್ಕೆ ಸಾಕ್ಷಿ.

ಅಭದ್ರತೆ ಕಾಡಬಹುದಾದ ಯಾವ ಸನ್ನಿವೇಶ ಇಲ್ಲದಿದ್ದರೂ, ಮುಂದುವರಿಗೆ ಸಮುದಾಯದವರು ತಮ್ಮ ಐಡೆಂಟಿಟಿಗಾಗಿ ಒಂದು ಜಾತಿಯ ಹೆಸರಿನಲ್ಲಿ ಗುಂಪುಗೂಡುವುದು ಸಾಮಾನ್ಯವಾಗಿರುವಾಗ, ತೀವ್ರ ಅಭದ್ರತೆಯಿಂದ ಬಳಲುತ್ತಿರುವ ಸಮುದಾಯಗಳಿಗೆ ಹೆಚ್ಚೆಚ್ಚು ಸಂಘಟಿತರಾಗುವುದು ಅನಿವಾರ್ಯವಾಗಿ ಕಾಣಬಹುದು. ಹೀಗೆ ರೂಪ ಪಡೆದುಕೊಂಡ ಗುಂಪುಗಳಿಗೆ, ಸಮಾಜ, ಧರ್ಮ, ಸಂಪ್ರದಾಯದ ಸುಧಾರಣೆಗಿಂತ ತಮ್ಮ ಮುಂದಿನ ಜನಾಂಗದ ಭದ್ರತೆ ಹೆಚ್ಚು ಮುಖ್ಯವಾಗುತ್ತದೆ. ಆ ಕಾರಣಕ್ಕಾಗಿಯೇ ಅವರಿಗೆ ಬುರ್ಖಾದ ವಿವಾದಕ್ಕಿಂತ ಶಿಕ್ಷಣ ಬೇಕು, ಉದ್ಯೋಗ ಬೇಕು, ಆಶ್ರಯಕ್ಕೆ ಮನೆ ಬೇಕು ಎಂದು ವಾದ ಮುಂದಿಡುತ್ತಾರೆ. ಅವೆಲ್ಲವೂ ದಕ್ಕದ ತನಕ ಧಾರ್ಮಿಕ ಸುಧಾರಣೆ ಬಗ್ಗೆ ಚಿಂತಿಸಲು ಸಾಧ್ಯವಾಗದೇ ಹೋಗಬಹುದು. ಒಟ್ಟಿನಲ್ಲಿ ಇದು ಆಗುವ ಪ್ರಕ್ರಿಯೆ. ಮಾಗುವ ಪ್ರಕ್ರಿಯೆ. ಅಷ್ಟೆ. ಇಲ್ಲಿ ಗುರಿ ಎನ್ನುವುದು ಇರುವುದಿಲ್ಲ. ಕೆಲವರು ಸ್ವಲ್ಪ ಮುಂದೆ ಇರಬಹುದು. ಮುಂದೆ ಸಾಗಿರುವವರು ಹಿಂದಿನವರನ್ನು ನೋಡಿ ನೀನಿನ್ನೂ ಅಲ್ಲಿಯೇ ಇದೀಯಲ್ಲ ಎಂದು ಮೂದಲಿಸುವುದಕ್ಕಿಂತ, ಆದಷ್ಟು ಬೇಗೆ ನನ್ನೊಂದಿಗೆ ಬಾ ಎಂದು ಉತ್ತೇಜಿಸಬೇಕಷ್ಟೆ.

ನಾವೆಲ್ಲ ಸೆಕ್ಯುಲರಿಸಂನಲ್ಲಿ ಇನ್ನೂ ಅಪ್ರೆಂಟಿಸ್‌ಗಳು


– ಬಿ. ಶ್ರೀಪಾದ ಭಟ್


ಬಿ.ಎಂ. ಬಶೀರ್ ಅವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ದಿನೇಶ್ ಅಮೀನ್ ಮಟ್ಟು ಅವರು ಆಡಿದ ಭಾಷಣದಲ್ಲಿ “ಬುರ್ಖಾ ಕುರಿತಾದ” ಮಾತುಗಳು ವಿವಾದಕ್ಕೆ ಈಡಾಗಿರುವುದು ನಿಜಕ್ಕೂ ಅನಗತ್ಯವಾಗಿತ್ತು. ಮೊದಲನೇಯದಾಗಿ ಈ “ಮುಸ್ಲಿಂ ಲೇಖಕರು” ಎಂದು ಅಸಂಬದ್ಧ, ಅರ್ಥಹೀನ ಹಣೆಪಟ್ಟಿಯನ್ನು ಒಪ್ಪಿಕೊಂಡಾಕ್ಷಣ ಮಿಕ್ಕವರೆಲ್ಲ “ಹಿಂದೂ ಲೇಖಕರು” ಮತ್ತು “ಇತರೇ ಧರ್ಮದ ಲೇಖಕರು” ಎನ್ನುವ ಹಣೆಪಟ್ಟಿಗೆ ಒಳಗಾಗಬೇಕಾಗುತ್ತದೆ ಮತ್ತು ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮ ಪ್ರಗತಿಪರ ಗೆಳೆಯ/ಗೆಳತಿಯರು ಇದರ ಕುರಿತಾಗಿ ತುಂಬಾ ಎಚ್ಚರದಿಂದ, basheer-book-release-dinesh-2ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಏಕೆಂದರೆ ಬಶೀರ್‌ರ ತೊಂದರೆ ಪ್ರಾರಂಭವಾಗುವುದೇ ಆವರು “ಮುಸ್ಲಿಂ ಲೇಖಕ” ಎನ್ನುವ ಹಣೆಪಟ್ಟಿಗೆ ಬಲಿಯಾಗಿದ್ದರಿಂದ. ಒಮ್ಮೆ ಬಲಿಯಾದ ನಂತರ ಇಡೀ ಧರ್ಮದ ಮೌಡ್ಯಕ್ಕೆ ಅವನೇ ಏಕಮಾತ್ರ ವಾರಸುದಾರನಗಿಬಿಡುವ ದುರಂತ ಇದು. ಇದು ಪ್ರತಿಯೊಬ್ಬ ಲೇಖಕನ ವಿಷಯದಲ್ಲೂ ನಿಜ. ಇಲ್ಲಿಯ ದುರಂತ ನೋಡಿ. ಈ “ಹಿಂದೂ ಲೇಖಕ/ಲೇಖಕಿ”ಯರು ಹಿಂದೂ ಧರ್ಮದ ಮೌಢ್ಯ ಆಚರಣೆಗಳನ್ನು ಟೀಕಿಸುತ್ತಲೇ “ಮುಸ್ಲಿಂ ಲೇಖಕ/ಲೇಖಕಿ” ಕಡೆಗೆ ತಿರುಗಿ ’ಕಮಾನ್, ನೀನು ನಿನ್ನ ಧರ್ಮದ ವಿರುದ್ಧ ಶುರು ಮಾಡು’ ಎಂದು ಆಹ್ವಾನ ಕೊಡುವ ಶೈಲಿಯಲ್ಲಿ ಬರೆಯುತ್ತಿರುವುದು, ಟೀಕಿಸುತ್ತಿರುವುದು ನನ್ನನ್ನು ದಂಗಾಗಿಸಿದೆ. ಡಿ.ಆರ್.ನಾಗರಾಜ್ ಹೇಳಿದ ಪಿತೃಹತ್ಯೆಯ ಸಿದ್ಧಾಂತವನ್ನು ಈ ನಮ್ಮ ಪ್ರಗತಿಪರ ಗೆಳೆಯ/ಗೆಳತಿಯರು ನಿಜಕ್ಕೂ ಅರ್ಥ ಮಾಡಿಕೊಂಡಿದ್ದಾರೆಂದು ನನಗೇಕೋ ಅನಿಸುತ್ತ್ತಿಲ್ಲ.

ನಾನು ಪ್ರಜ್ಞಾಪೂರ್ವಕವಾಗಿ ಸೆಕ್ಯುಲರ್ ಆಗುತ್ತಲೇ ನನ್ನೊಳಗೆ ಸಂಪೂರ್ಣ ಇಡೀ ಜಾತ್ಯಾತೀತತೆಯನ್ನು, ಈ ನಿಜದ ಸೆಕ್ಯುಲರ್ ಅನ್ನು ಮೈಗೂಡಿಸಿಕೊಳ್ಳುತ್ತಾ ಒಂದು ಸಹಜವಾದ ಸೆಕ್ಯುಲರ್ ಆದ, ಮಾನವತಾವಾದದ ಸ್ಥಿತಿಗೆ ತೆರಳುವುದು ಮತ್ತು ಅಲ್ಲಿಂದ ಮುಂದೆ ನಮ್ಮ ಸೆಕ್ಯುಲರ್ ನಡುವಳಿಕೆಗಳು ಸಹಜವಾಗಿಯೇ ಅಪ್ರಜ್ಞಾಪೂರ್ವಕವಾಗಿರುತ್ತವೆ ಮತ್ತು ಆಗಲೇ ನಾವು ನಿಜದ ಮಾನವರಾಗುವುದು. ಅಲ್ಲಿಯವರೆಗೆ ನಾವೆಲ್ಲಾ ಈ ಪ್ರಕ್ರಿಯೆಯಲ್ಲಿ ಕೇವಲ ಅಪ್ರೆಂಟಿಸ್‌ಗಳು ಮಾತ್ರ. ಹೌದು ಕೇವಲ Photo Captionಸೆಕ್ಯುಲರ್ ಅನ್ನು ಪಾಲಿಸುತ್ತಿರುವ ಅಪ್ರೆಂಟಿಸ್‌ಗಳು. ನಾವು ಚಾರ್ವಾಕರಾದಾಗಲೇ ನಮ್ಮ ವ್ಯಕ್ತಿತ್ವ ಸ್ವಲ್ಪ, ಸ್ವಲ್ಪವಾಗಿ ಗೋಚರಿಸುತ್ತದೆ. ಇದನ್ನು ನನ್ನ ಪ್ರಗತಿಪರ ಸ್ನೇಹಿತರು ದಯವಿಟ್ಟು ನೆನಪಿನಲ್ಲಿಟ್ಟುಕೊಳ್ಳಬೇಕು. ಸೆಕ್ಯುಲರ್‌ಗಳಾದ ನಾವೆಲ್ಲ ನಾವೆಷ್ಟು ನಿಜದ ಸೆಕ್ಯುಲರ್, ನಾನೆಷ್ಟು ನಿಜದ ಜಾತ್ಯಾತೀತ ಎಂದು ನಮ್ಮೊಳಗೆ ನಮ್ಮನ್ನು ಬಿಚ್ಚುತ್ತಾ, ಬಿಚ್ಚುತ್ತಾ ನಡೆದಾಗ ನಾವು ಶೇಕಡಾ ಇಪ್ಪತ್ತರಷ್ಟು ಮಾತ್ರ ಮುಂದುವರೆದಿರಬಹುದಷ್ಟೆ. ಇನ್ನೂ ಶೇಕಡಾ ಎಂಬತ್ತರಷ್ಟು ನಡೆಯನ್ನು ನಾವು ಕ್ರಮಿಸಬೇಕಾಗಿರುವ ಎಚ್ಚರ ನಮ್ಮಲ್ಲಿ ಇಲ್ಲದೇ ಹೋದರೆ ’ನಾನು ಮಾತ್ರ ಸೆಕ್ಯುಲರ್ ಮಾರಾಯ, ಆ ಬಶೀರ್ ನೋಡು ಅವನಿಗೆ ತನ್ನ ಧರ್ಮದ ಮೂಲಭೂತವಾದಿಗಳನ್ನು ಟೀಕಿಸುವ ದಮ್ಮೆಲ್ಲಿದೆ’ ಎನ್ನುವ ಅಹಂಕಾರಕ್ಕೆ ಬಲು ಸುಲಭವಾಗಿ ಬಲಿಯಾಗುತ್ತೇವೆ. ಏಕೆ ಗೊತ್ತೆ ಸ್ನೇಹಿತರೆ, ಸೆಕ್ಯಲರಿಸಂನಲ್ಲಿ ನಾವೆಲ್ಲ ಇನ್ನೂ ಅಪ್ರೆಂಟಿಸ್‌ಗಳು. ದೇಶವೊಂದರಲ್ಲಿ ಬಹುಸಂಖ್ಯಾತರಾದ, ಸೆಕ್ಯುಲರಿಸಂನಲ್ಲಿ ಅಪ್ರೆಂಟಿಸ್‌ಗಳಾದ ನಾವು,  ’ನಾವು ಮಾತ್ರ ನಿಜದ ಪಾತಳಿಯ ಮೇಲೆ ನಿಂತಿದ್ದೇವೆ’ ಎನ್ನುವ ಭ್ರಮೆಯಲ್ಲಿ ಅಲ್ಪಸಂಖ್ಯಾತ ಲೇಖಕ/ಲೇಖಕಿಯರನ್ನು ’ಇನ್ಯಾವಾಗ ಮಾರಾಯ ನೀನು ನಿನ್ನ ಕಪ್ಪೆಚಿಪ್ಪಿನಿಂದ ಹೊರಬರುವುದು’ ಎಂದು ಕೇಳುವಾಗ (ಹೌದು ಕೇಳಬೇಕು, ಖಂಡಿತ ಕೇಳಬೇಕು) ಮಾನವೀಯತೆಯನ್ನು, ವಿನಯವನ್ನು ಮರೆಯಯಬಾರದು. ಆದರೆ ಬಶೀರ್ ವಿಷಯದಲ್ಲಿ ನನ್ನ ಸ್ನೇಹಿತರು ಆ ಗಡಿಯನ್ನು ದಾಟಿದ್ದು ನನ್ನಲ್ಲಿ ಖೇದವನ್ನು ಉಂಟು ಮಾಡಿದೆ.

ಅತ್ಯಂತ ಸೂಕ್ಷ್ಮ, ಪ್ರಾಮಾಣಿಕ, ಪ್ರತಿಭಾವಂತರಾದ ಈ ಹೊಸ ತಲೆಮಾರು ಕಾಮ್ರೇಡ್‌ಶಿಪ್‌ಗೆ ಸಂಪೂರ್ಣ ತಿಲಾಂಜಲಿಯನ್ನು ಕೊಟ್ಟು ತನ್ನ ಸಹಚರರೊಂದಿಗೆ (ಎಷ್ಟೇ ಭಿನ್ನಮತವಿರಲಿ) ಬಹಿರಂಗವಾಗಿ ಜಗಳಕ್ಕೆ ಇಳಿಯುವುದನ್ನು ನಾನು ಒಪ್ಪಿಕೊಳ್ಳಲಾರೆ. ಹಾಗೆಯೇ ಬಶೀರ್‌ನ ಪ್ರತಿಕ್ರಿಯೆನ್ನು ಸಹ ನಾನು ಒಪ್ಪಿಕೊಳ್ಳುವುದಿಲ್ಲ. basheer-book-release-dinesh-3ಅದು ಅನೇಕ ಕಡೆ ವಾದಕ್ಕಾಗಿ ವಾದ ಹೂಡಿದಂತಿದೆ. ಇದನ್ನು ಬಶೀರ್ ಬರೆದಿದ್ದಾನೆಂಬುದೇ ನನಗೆ ಆಶ್ಚರ್ಯ. “ಬಶೀರ್, ನೀನು ಬರೆದ ನಿನ್ನದೇ ಲೇಖನದ ಕೆಲವು ಭಾಗಗಳನ್ನು ಸ್ವತಃ ನೀನೇ ತಿರಸ್ಕರಿಸು.”

ನಮ್ಮ ಚಿಂತನೆಗಳಲ್ಲಿ ಸ್ಪಷ್ಟತೆ, ವಿನಯ, ಸೌಹಾರ್ದತೆ ಮತ್ತು ಕಾಮ್ರೇಡ್‌ಗಿರಿಯನ್ನು ಒಳಗೊಳ್ಳದಿದ್ದರೆ, ಈ ಕ್ಷಣದ ರೋಚಕತೆಗೆ ಬಲಿಯಾಗದೇ ಬದುಕುವುದೇ ಕಷ್ಟವಾಗಿರುವ ಇಂದಿನ ದಿನಗಳಲ್ಲಿ ಕಡೆಗೆ ಎಲ್ಲ ಧರ್ಮದ ಮೂಲಭೂತವಾದದ ವಿರುದ್ಧ ಹೋರಾಡುತ್ತಿದ್ದೇವೆ ಎನ್ನುವ ಪ್ರಾಮಾಣಿಕ ನಡೆಗಳಿಂದ ಶುರುವಾಗುವ ನಮ್ಮ ದಾರಿಗಳು ಸುಲುಭವಾಗಿ ಹಾದಿ ತಪ್ಪುವುದಂತೂ ಖಂಡಿತ. ನಾನು ನನ್ನ ಆರಂಭದ ಕಮ್ಯನಿಷ್ಟ್ ಚಳುವಳಿಗಳಲ್ಲಿ ಭಾಗವಹಿಸಿ ಕಲಿತದ್ದು ಈ ಕಾಮ್ರೇಡ್‌ಗಿರಿಯನ್ನು. ಇದು ನಮ್ಮನ್ನು ಮತ್ತಷ್ಟು ಪಕ್ವಗೊಳಿಸುತ್ತದೆ. ಚಾರ್ವಾಕದೆಡೆಗಿನ ನಡೆಗೆ ಆತ್ಮವಿಶ್ವಾಸ ಮೂಡಿಸುತ್ತದೆ. ಮತ್ತು ಮುಖ್ಯವಾಗಿ ನಮ್ಮ ಆತ್ಮದ ಸೊಲ್ಲು ಅಚ್ಚರಿ ಎನಿಸುವಷ್ಟು ನಮ್ಮಲ್ಲಿ ಖುಷಿಗೊಳಿಸುತ್ತಿರುತ್ತದೆ. ಹೌದು ಮೊದಲ ಬಾರಿಗೆ. ಈ ಮೊದಲ ಖುಷಿ ಎಂದಿಗೂ ಖುಷಿಯಲ್ಲವೇ?

ಒಮ್ಮೆ ಹೆಣ್ಣಾಗು ಪ್ರಭುವೇ…

– ಅಕ್ಷತಾ ಹುಂಚದಕಟ್ಟೆ

 

ಬಿ.ಎಮ್.ಬಶೀರ್ ಅವರೇ, ‘ದಿನೇಶ್ ಅಮೀನ್ ಮಟ್ಟು ಅವರ ಬುರ್ಖಾ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಲೇಖನ ಈಗಷ್ಟೇ ಬರೆದು ಮುಗಿಸಿದೆ. ನಾಳೆ ಗುಜರಿ ಅಂಗಡಿಯಲ್ಲಿ ಅಪ್ಡೇಟ್ ಮಾಡುವೆ’ ಎಂಬ ನಿಮ್ಮ ಫೇಸ್‌ಬುಕ್ ಸ್ಟೇಟಸ್ ಅನ್ನು ನೋಡಿ, ಇದೇನು ದಿನೇಶ್ ಅಮಿನ್ ಮಟ್ಟು ಬ್ರಾಂಡ್‌ನ ಬುರ್ಖಾ ಎಂಬ ಅಚ್ಚರಿಯೊಂದಿಗೆ ಕಾದು ಓದಿದೆ. ನಿಮ್ಮ ಬರಹ ಓದಿದಾಗ ನನಗೆ ಇಬ್ಬರು ಬೌದ್ಧ ಸನ್ಯಾಸಿಗಳು ನದಿ ದಾಟುವ ಕಥೆ ಇದೆಯಲ್ಲ –ಅದನ್ನು ನೀವು ಓದಿರುತೀರಿ– ಆ ಕಥೆ ನೆನಪಾಯಿತು. akshatha-hunchadakatteಆ ಕಥೆಯಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ನದಿ ದಾಟುವಾಗ ಅದು ತುಂಬಿ ಹರಿಯುತ್ತಿರುತ್ತದೆ. ಒಬ್ಬ ಹೆಣ್ಣುಮಗಳು ಹರಿಯುವ ನದಿಯನ್ನು ದಾಟಲಾಗದೆ ಅಸಹಾಯಕತೆಯಿಂದ ನಿಂತಿರುತ್ತಾಳೆ. ಒಬ್ಬ ಸನ್ಯಾಸಿ ಅವಳನ್ನು ಹೆಗಲ ಮೇಲೆ ಕೂರಿಸಿಕೊಂಡು ಇನ್ನೊಂದು ದಡಕ್ಕೆ ತಲುಪಿಸುತ್ತಾನೆ. ಮುಂದಿನ ಅವನ ಪ್ರಯಾಣದುದ್ದಕ್ಕೂ ಇನ್ನೊಬ್ಬ ಮಹಾನುಭಾವ `ನೀನೊಬ್ಬ ಸನ್ಯಾಸಿಯಾಗಿ ಹೆಣ್ಣು ಮಗಳನ್ನು ಹೊತ್ತು ನಡೆಯಬಹುದೇ ಹೇಳು’ ಎಂದು ಕುಟುಕುತ್ತಿರುತ್ತಾನೆ. ಹೊತ್ತು ದಡಕ್ಕೆ ತಲುಪಿಸಿದವ ಹೇಳುತ್ತಾನೆ, ’ನಾನವಳನ್ನು ಅಲ್ಲಿಯೇ ಬಿಟ್ಟು ಬಂದೆ. ನೀನ್ಯಾಕೆ ಎಲ್ಲೆಲ್ಲೂ ಅವಳನ್ನು ಹೊತ್ತು ಬರ್ತಾ ಇದೀಯ?’ ಅಂತ.

ದಿನೇಶ್ “ಸೂಕ್ತ ವೇದಿಕೆಯಲ್ಲಿ” (ನಿಮ್ಮದೇ ಮಾತು ) ಮಾತಾಡಿದರು. ಆದರೆ ಅದನ್ನು ಹೊತ್ತು ನಡೆಯುತ್ತಿರುವವರು ನೀವು. ಆದರಿಂದ ಅದು ದಿನೇಶ್ ಅವರದಲ್ಲ, ಬಶೀರ್ ಅವರ ಬುರ್ಖಾ ಎನಿಸಿತು ನಿಮ್ಮ ಲೇಖನ ಓದಿ.

ನೀವು ಲೇಖನದ ಪ್ರಾರಂಭದಲ್ಲೇ ಬುರ್ಖಾವನ್ನು ತೊಡುವುದನ್ನು ಉದ್ದೇಶಿಸಿ ’ಬಟ್ಟೆ ಎನ್ನುವುದು ಸಂವೇದನೆಗೆ ಸಂಬಂಧ ಪಟ್ಟಿದ್ದು’ ಎನ್ನುತೀರಿ. ಸರಿ, ಆದರೆ ಅದು ತೊಡುವವರ ಸಂವೇದನೆಗೆ ಸಂಬಂಧ ಪಟ್ಟಿದಲ್ಲವೇ? ಹಾಗಿದ್ದರೆ ಹೆಣ್ಣು ಮಕ್ಕಳು ಮಾತ್ರ ಬುರ್ಖಾದಡಿಯಲ್ಲಿ ಮುಖ ಮರೆಸುವ ಸಂದರ್ಭ ಯಾಕೆ ಸೃಷ್ಟಿಯಾಯಿತು? ಅಷ್ಟೊಂದು ಸಂವೇದನ ಶೀಲವಾದ ಉಡುಪು ಅದಾಗಿದ್ದರೆ ಅದನ್ನು ತೊಡುವ ಬಹುತೇಕ ಹೆಣ್ಣುಮಕ್ಕಳು ಧರ್ಮ, ನಂಬಿಕೆ, ಕಟ್ಟು ಪಾಡು ಎಂದು ಯಾಕೆ ಕಾರಣ ಕೊಡುತ್ತಾರೆ? (ಅಂದ ಹಾಗೆ, ಯಾವ ಹೆಣ್ಣುಮಗಳೂ ಬುರ್ಖಾದ ವಿಷಯದಲ್ಲಿ ನಂಬಿಕೆಯಲ್ಲ, ಸಂವೇದನೆ ಅಂದಿದ್ದಿಲ್ಲ.) ಮೈ ತುಂಬಾ ಬಟ್ಟೆ ಧರಿಸುವುದು ಎಂದರೆ ನಿಮ್ಮ ಪ್ರಕಾರ ತಲೆಯಿಂದ ಉಂಗುಷ್ಟದವರೆಗೂ ಕಪ್ಪು ಬಟ್ಟೆಯಡಿಯಲ್ಲಿ ಬೇಯುವುದೇ … ?

ನೀವು, `ನನ್ನ ಅಮ್ಮನಿಗೆ ಏಕೆ ನೀನು ಮೈ ತುಂಬಾ ಬಟ್ಟೆ ಧರಿಸುತೀಯ ಎಂಬ ಪ್ರಶ್ನೆ ಕೇಳಲಾಗುತ್ತದೆಯೇ?’ ಎಂದು ಕೇಳಿದ್ದನ್ನು ನೋಡಿ ಬಹಳ ಅಚ್ಚರಿ ಆಯಿತು. basheer-book-release-dinesh-3ನಿಮ್ಮನ್ನು ತುಂಬಾ ಉದಾರಿ ಮನುಷ್ಯ ಎಂದು ತಿಳಿದಿದ್ದೆ. ಆದರೆ ನಿಮಗಿಂತ ಯಾವ ವಿಚಾರವಾದದ ಹಿನ್ನೆಲೆ ಇಲ್ಲದ ನನ್ನ ಎಷ್ಟೋ ಗೆಳತಿಯರೆ ಪರವಾಗಿಲ್ಲ, ಅವರು ಇಂಥ ಪ್ರಶ್ನೆಗಳಿಗೆ ಅವಕಾಶ ನೀಡದೆ ಇಪ್ಪತ್ನಾಲ್ಕು ಗಂಟೆಯೂ ಸೀರೆ ಬಿಗಿದೆ ಇರುತಿದ್ದ ಅವರಮ್ಮಂದಿರಿಗೆ ತಮ್ಮ ಚೂಡಿದಾರ್ ತೊಡುವಂತೆ ಮಾಡಿದರು… ವ್ಯಾಯಾಮ, ಆಟೋಟ, ಪ್ರವಾಸ, ವಾಹನ ಚಾಲನೆ, ಹೀಗೆ ಅವರಮ್ಮಂದಿರನ್ನು ಕ್ರಿಯಾಶೀಲ ಮತ್ತು ಚೈತನ್ಯಶೀಲರಾಗಲು ಅಣಿಗೊಳಿಸಿದರು. ಇದೆಲ್ಲ ಯಾವುದೇ ಬ್ಯಾನರ್, ಪೋಸ್ಟರ್ ಇಲ್ಲದೆ ಸುಲಲಿತವಾಗಿ ನಡೆದು ಹೋಯ್ತು. ಇಂಥದಕ್ಕೆ ಅವಕಾಶ ಇರಬೇಕು ಎಂದು ಒಂದು ಪ್ರಬುದ್ದ ಸಮಾಜದಲ್ಲಿರುವವರು ಕನಸು ಕಂಡರೆ ನಿಮ್ಮಂತವರಿಗೆ ಅದು ವೈಚಾರಿಕ ಮೂಲಭೂತವಾದವಾಗಿ ಕಾಣುತ್ತದೆ. ಈ ವೈರುಧ್ಯಕ್ಕೆ ಏನು ಹೇಳೋಣ….? ಹೆಣ್ಣು ಮಕ್ಕಳ ಮಸೀದಿ ಪ್ರವೇಶ ವಿಷಯ ಬಂದಾಗಲೂ, ಬುರ್ಖಾ ಬಗ್ಗೆ ಮಾತಾಡಿದಾಗಲೂ, ನೀವು, ’ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಿತರಾಗೋದೆ ಮುಖ್ಯ. ಇವೆಲ್ಲ ಮುಖ್ಯ ಅಲ್ಲವೇ ಅಲ್ಲ’ ಎನ್ನುತೀರಿ… ಆದರೆ ನಾನೊಂದು ಪ್ರಶ್ನೆ ಕೇಳುತ್ತೀನಿ… ಕೇವಲ 15 ವರ್ಷದ ಹಿಂದೆ ಬಹಳ ಹೆಣ್ಣುಮಕ್ಕಳು ಬುರ್ಖಾ ಧರಿಸುತಿರಲಿಲ್ಲ, ಸಿನಿಮಾಗೃಹಕ್ಕೆ ಹೋಗಿ ಸಿನಿಮಾ ನೋಡಿ ಬರುತಿದ್ದರು…ದರ್ಗಾ-ಮಸೀದಿಗೂ ಆರಾಮಾಗಿ ಬಂದು ಹೋಗುವುದನ್ನು ನೋಡಿದ್ದೆ, ಆದರೆ ಅವರಲ್ಲಿ ಹೆಚ್ಚಿನವರು ಶಾಲೆ ಕೂಡ ಓದಿದವರಲ್ಲ. ಈ ಹದಿನೈದು ವರ್ಷದಲ್ಲಿ ಓದಿ ನೌಕರಿಯಲ್ಲಿರುವ ಮುಸ್ಲಿಂ ಹೆಣ್ಣುಮಕ್ಕಳ ಸಂಖ್ಯೆ ಬಹಳ ಹೆಚ್ಚಾಗಿದೆ. ಅದೇ ಸಮಯಕ್ಕೆ ಅವರಿಗೆ ಹಿಂದಿದ್ದ ಈ ಎಲ್ಲ ಸ್ವಾತಂತ್ರ್ಯಗಳು ಇಲ್ಲವಾಗಿವೆ. ಈಗ ಹೇಳಿ… ಶಿಕ್ಷಣ ಅವರಿಗೆ ಕೊಟ್ಟಿದ್ದೇನು? ನಡಿಗೆ ಮುಮ್ಮುಖವಾಗಿದೆಯೋ? ಹಿಮ್ಮುಖವಾಗಿದೆಯೋ? ನೀವು ಶಿಕ್ಷಣ ಮುಖ್ಯ ಎಂದು ಹೇಳುವುದರಲ್ಲಿ basheer-book-release-dinesh-1ಈ ಆಶಯವೇ ಅಡಗಿದೆಯೇ?

ಬುರ್ಖಾ ಬಗ್ಗೆ ಮಾತನಾಡುವವರು ನಿಮ್ಮ ಕಣ್ಣಿಗೆ ’ಮಹಿಳೆ ಧರಿಸಿದ ಉಡುಪಿಗೆ ಕೈ ಹಾಕಿದವರಾಗಿ’ ಕಾಣುತ್ತಾರೆ, `ಮಹಿಳೆ ಧರಿಸಿದ ದಿರಿಸಿಗೆ ಕೈ ಹಾಕುವುದು ಎಂದರೆ ಅದು ಪರೋಕ್ಷವಾಗಿ ಆಕೆಯ ಸೆರಗಿಗೆ ಕೈ ಹಾಕಿದಂತೆ’ ಎಂದು ನೀವು ಬರೆಯುವುದನ್ನು ನೋಡಿಯಂತೂ ಇನ್ನೇನು ಹೇಳುವುದಕ್ಕೂ ತಿಳಿಯದೆ ದಾಸಿಮಯ್ಯನ ಈ ವಚನವನ್ನು ನೆನಪಿಸಿಕೊಂಡೆ: “ಒಡಲು ಗೊಂಡವ ಹಸಿವ … ಒಡಲು ಗೊಂಡವ ಹುಸಿವ ……ನೀನೆನ್ನಂತೊಮ್ಮೆ ಒಡಲುಗೊಂಡು ನೋಡ ರಾಮನಾಥ”. ಹಾಗೆಯೇ, ಭಾನು ಮುಷ್ತಾಕ್‌ರು “ಒಮ್ಮೆ ಹೆಣ್ಣಾಗು ಪ್ರಭುವೇ” ಎಂದು ಬೇಡಿದ್ದು ನೆನಪಾಯಿತು.