ಒಮ್ಮೆ ಹೆಣ್ಣಾಗು ಪ್ರಭುವೇ…

– ಅಕ್ಷತಾ ಹುಂಚದಕಟ್ಟೆ

 

ಬಿ.ಎಮ್.ಬಶೀರ್ ಅವರೇ, ‘ದಿನೇಶ್ ಅಮೀನ್ ಮಟ್ಟು ಅವರ ಬುರ್ಖಾ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಲೇಖನ ಈಗಷ್ಟೇ ಬರೆದು ಮುಗಿಸಿದೆ. ನಾಳೆ ಗುಜರಿ ಅಂಗಡಿಯಲ್ಲಿ ಅಪ್ಡೇಟ್ ಮಾಡುವೆ’ ಎಂಬ ನಿಮ್ಮ ಫೇಸ್‌ಬುಕ್ ಸ್ಟೇಟಸ್ ಅನ್ನು ನೋಡಿ, ಇದೇನು ದಿನೇಶ್ ಅಮಿನ್ ಮಟ್ಟು ಬ್ರಾಂಡ್‌ನ ಬುರ್ಖಾ ಎಂಬ ಅಚ್ಚರಿಯೊಂದಿಗೆ ಕಾದು ಓದಿದೆ. ನಿಮ್ಮ ಬರಹ ಓದಿದಾಗ ನನಗೆ ಇಬ್ಬರು ಬೌದ್ಧ ಸನ್ಯಾಸಿಗಳು ನದಿ ದಾಟುವ ಕಥೆ ಇದೆಯಲ್ಲ –ಅದನ್ನು ನೀವು ಓದಿರುತೀರಿ– ಆ ಕಥೆ ನೆನಪಾಯಿತು. akshatha-hunchadakatteಆ ಕಥೆಯಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ನದಿ ದಾಟುವಾಗ ಅದು ತುಂಬಿ ಹರಿಯುತ್ತಿರುತ್ತದೆ. ಒಬ್ಬ ಹೆಣ್ಣುಮಗಳು ಹರಿಯುವ ನದಿಯನ್ನು ದಾಟಲಾಗದೆ ಅಸಹಾಯಕತೆಯಿಂದ ನಿಂತಿರುತ್ತಾಳೆ. ಒಬ್ಬ ಸನ್ಯಾಸಿ ಅವಳನ್ನು ಹೆಗಲ ಮೇಲೆ ಕೂರಿಸಿಕೊಂಡು ಇನ್ನೊಂದು ದಡಕ್ಕೆ ತಲುಪಿಸುತ್ತಾನೆ. ಮುಂದಿನ ಅವನ ಪ್ರಯಾಣದುದ್ದಕ್ಕೂ ಇನ್ನೊಬ್ಬ ಮಹಾನುಭಾವ `ನೀನೊಬ್ಬ ಸನ್ಯಾಸಿಯಾಗಿ ಹೆಣ್ಣು ಮಗಳನ್ನು ಹೊತ್ತು ನಡೆಯಬಹುದೇ ಹೇಳು’ ಎಂದು ಕುಟುಕುತ್ತಿರುತ್ತಾನೆ. ಹೊತ್ತು ದಡಕ್ಕೆ ತಲುಪಿಸಿದವ ಹೇಳುತ್ತಾನೆ, ’ನಾನವಳನ್ನು ಅಲ್ಲಿಯೇ ಬಿಟ್ಟು ಬಂದೆ. ನೀನ್ಯಾಕೆ ಎಲ್ಲೆಲ್ಲೂ ಅವಳನ್ನು ಹೊತ್ತು ಬರ್ತಾ ಇದೀಯ?’ ಅಂತ.

ದಿನೇಶ್ “ಸೂಕ್ತ ವೇದಿಕೆಯಲ್ಲಿ” (ನಿಮ್ಮದೇ ಮಾತು ) ಮಾತಾಡಿದರು. ಆದರೆ ಅದನ್ನು ಹೊತ್ತು ನಡೆಯುತ್ತಿರುವವರು ನೀವು. ಆದರಿಂದ ಅದು ದಿನೇಶ್ ಅವರದಲ್ಲ, ಬಶೀರ್ ಅವರ ಬುರ್ಖಾ ಎನಿಸಿತು ನಿಮ್ಮ ಲೇಖನ ಓದಿ.

ನೀವು ಲೇಖನದ ಪ್ರಾರಂಭದಲ್ಲೇ ಬುರ್ಖಾವನ್ನು ತೊಡುವುದನ್ನು ಉದ್ದೇಶಿಸಿ ’ಬಟ್ಟೆ ಎನ್ನುವುದು ಸಂವೇದನೆಗೆ ಸಂಬಂಧ ಪಟ್ಟಿದ್ದು’ ಎನ್ನುತೀರಿ. ಸರಿ, ಆದರೆ ಅದು ತೊಡುವವರ ಸಂವೇದನೆಗೆ ಸಂಬಂಧ ಪಟ್ಟಿದಲ್ಲವೇ? ಹಾಗಿದ್ದರೆ ಹೆಣ್ಣು ಮಕ್ಕಳು ಮಾತ್ರ ಬುರ್ಖಾದಡಿಯಲ್ಲಿ ಮುಖ ಮರೆಸುವ ಸಂದರ್ಭ ಯಾಕೆ ಸೃಷ್ಟಿಯಾಯಿತು? ಅಷ್ಟೊಂದು ಸಂವೇದನ ಶೀಲವಾದ ಉಡುಪು ಅದಾಗಿದ್ದರೆ ಅದನ್ನು ತೊಡುವ ಬಹುತೇಕ ಹೆಣ್ಣುಮಕ್ಕಳು ಧರ್ಮ, ನಂಬಿಕೆ, ಕಟ್ಟು ಪಾಡು ಎಂದು ಯಾಕೆ ಕಾರಣ ಕೊಡುತ್ತಾರೆ? (ಅಂದ ಹಾಗೆ, ಯಾವ ಹೆಣ್ಣುಮಗಳೂ ಬುರ್ಖಾದ ವಿಷಯದಲ್ಲಿ ನಂಬಿಕೆಯಲ್ಲ, ಸಂವೇದನೆ ಅಂದಿದ್ದಿಲ್ಲ.) ಮೈ ತುಂಬಾ ಬಟ್ಟೆ ಧರಿಸುವುದು ಎಂದರೆ ನಿಮ್ಮ ಪ್ರಕಾರ ತಲೆಯಿಂದ ಉಂಗುಷ್ಟದವರೆಗೂ ಕಪ್ಪು ಬಟ್ಟೆಯಡಿಯಲ್ಲಿ ಬೇಯುವುದೇ … ?

ನೀವು, `ನನ್ನ ಅಮ್ಮನಿಗೆ ಏಕೆ ನೀನು ಮೈ ತುಂಬಾ ಬಟ್ಟೆ ಧರಿಸುತೀಯ ಎಂಬ ಪ್ರಶ್ನೆ ಕೇಳಲಾಗುತ್ತದೆಯೇ?’ ಎಂದು ಕೇಳಿದ್ದನ್ನು ನೋಡಿ ಬಹಳ ಅಚ್ಚರಿ ಆಯಿತು. basheer-book-release-dinesh-3ನಿಮ್ಮನ್ನು ತುಂಬಾ ಉದಾರಿ ಮನುಷ್ಯ ಎಂದು ತಿಳಿದಿದ್ದೆ. ಆದರೆ ನಿಮಗಿಂತ ಯಾವ ವಿಚಾರವಾದದ ಹಿನ್ನೆಲೆ ಇಲ್ಲದ ನನ್ನ ಎಷ್ಟೋ ಗೆಳತಿಯರೆ ಪರವಾಗಿಲ್ಲ, ಅವರು ಇಂಥ ಪ್ರಶ್ನೆಗಳಿಗೆ ಅವಕಾಶ ನೀಡದೆ ಇಪ್ಪತ್ನಾಲ್ಕು ಗಂಟೆಯೂ ಸೀರೆ ಬಿಗಿದೆ ಇರುತಿದ್ದ ಅವರಮ್ಮಂದಿರಿಗೆ ತಮ್ಮ ಚೂಡಿದಾರ್ ತೊಡುವಂತೆ ಮಾಡಿದರು… ವ್ಯಾಯಾಮ, ಆಟೋಟ, ಪ್ರವಾಸ, ವಾಹನ ಚಾಲನೆ, ಹೀಗೆ ಅವರಮ್ಮಂದಿರನ್ನು ಕ್ರಿಯಾಶೀಲ ಮತ್ತು ಚೈತನ್ಯಶೀಲರಾಗಲು ಅಣಿಗೊಳಿಸಿದರು. ಇದೆಲ್ಲ ಯಾವುದೇ ಬ್ಯಾನರ್, ಪೋಸ್ಟರ್ ಇಲ್ಲದೆ ಸುಲಲಿತವಾಗಿ ನಡೆದು ಹೋಯ್ತು. ಇಂಥದಕ್ಕೆ ಅವಕಾಶ ಇರಬೇಕು ಎಂದು ಒಂದು ಪ್ರಬುದ್ದ ಸಮಾಜದಲ್ಲಿರುವವರು ಕನಸು ಕಂಡರೆ ನಿಮ್ಮಂತವರಿಗೆ ಅದು ವೈಚಾರಿಕ ಮೂಲಭೂತವಾದವಾಗಿ ಕಾಣುತ್ತದೆ. ಈ ವೈರುಧ್ಯಕ್ಕೆ ಏನು ಹೇಳೋಣ….? ಹೆಣ್ಣು ಮಕ್ಕಳ ಮಸೀದಿ ಪ್ರವೇಶ ವಿಷಯ ಬಂದಾಗಲೂ, ಬುರ್ಖಾ ಬಗ್ಗೆ ಮಾತಾಡಿದಾಗಲೂ, ನೀವು, ’ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಿತರಾಗೋದೆ ಮುಖ್ಯ. ಇವೆಲ್ಲ ಮುಖ್ಯ ಅಲ್ಲವೇ ಅಲ್ಲ’ ಎನ್ನುತೀರಿ… ಆದರೆ ನಾನೊಂದು ಪ್ರಶ್ನೆ ಕೇಳುತ್ತೀನಿ… ಕೇವಲ 15 ವರ್ಷದ ಹಿಂದೆ ಬಹಳ ಹೆಣ್ಣುಮಕ್ಕಳು ಬುರ್ಖಾ ಧರಿಸುತಿರಲಿಲ್ಲ, ಸಿನಿಮಾಗೃಹಕ್ಕೆ ಹೋಗಿ ಸಿನಿಮಾ ನೋಡಿ ಬರುತಿದ್ದರು…ದರ್ಗಾ-ಮಸೀದಿಗೂ ಆರಾಮಾಗಿ ಬಂದು ಹೋಗುವುದನ್ನು ನೋಡಿದ್ದೆ, ಆದರೆ ಅವರಲ್ಲಿ ಹೆಚ್ಚಿನವರು ಶಾಲೆ ಕೂಡ ಓದಿದವರಲ್ಲ. ಈ ಹದಿನೈದು ವರ್ಷದಲ್ಲಿ ಓದಿ ನೌಕರಿಯಲ್ಲಿರುವ ಮುಸ್ಲಿಂ ಹೆಣ್ಣುಮಕ್ಕಳ ಸಂಖ್ಯೆ ಬಹಳ ಹೆಚ್ಚಾಗಿದೆ. ಅದೇ ಸಮಯಕ್ಕೆ ಅವರಿಗೆ ಹಿಂದಿದ್ದ ಈ ಎಲ್ಲ ಸ್ವಾತಂತ್ರ್ಯಗಳು ಇಲ್ಲವಾಗಿವೆ. ಈಗ ಹೇಳಿ… ಶಿಕ್ಷಣ ಅವರಿಗೆ ಕೊಟ್ಟಿದ್ದೇನು? ನಡಿಗೆ ಮುಮ್ಮುಖವಾಗಿದೆಯೋ? ಹಿಮ್ಮುಖವಾಗಿದೆಯೋ? ನೀವು ಶಿಕ್ಷಣ ಮುಖ್ಯ ಎಂದು ಹೇಳುವುದರಲ್ಲಿ basheer-book-release-dinesh-1ಈ ಆಶಯವೇ ಅಡಗಿದೆಯೇ?

ಬುರ್ಖಾ ಬಗ್ಗೆ ಮಾತನಾಡುವವರು ನಿಮ್ಮ ಕಣ್ಣಿಗೆ ’ಮಹಿಳೆ ಧರಿಸಿದ ಉಡುಪಿಗೆ ಕೈ ಹಾಕಿದವರಾಗಿ’ ಕಾಣುತ್ತಾರೆ, `ಮಹಿಳೆ ಧರಿಸಿದ ದಿರಿಸಿಗೆ ಕೈ ಹಾಕುವುದು ಎಂದರೆ ಅದು ಪರೋಕ್ಷವಾಗಿ ಆಕೆಯ ಸೆರಗಿಗೆ ಕೈ ಹಾಕಿದಂತೆ’ ಎಂದು ನೀವು ಬರೆಯುವುದನ್ನು ನೋಡಿಯಂತೂ ಇನ್ನೇನು ಹೇಳುವುದಕ್ಕೂ ತಿಳಿಯದೆ ದಾಸಿಮಯ್ಯನ ಈ ವಚನವನ್ನು ನೆನಪಿಸಿಕೊಂಡೆ: “ಒಡಲು ಗೊಂಡವ ಹಸಿವ … ಒಡಲು ಗೊಂಡವ ಹುಸಿವ ……ನೀನೆನ್ನಂತೊಮ್ಮೆ ಒಡಲುಗೊಂಡು ನೋಡ ರಾಮನಾಥ”. ಹಾಗೆಯೇ, ಭಾನು ಮುಷ್ತಾಕ್‌ರು “ಒಮ್ಮೆ ಹೆಣ್ಣಾಗು ಪ್ರಭುವೇ” ಎಂದು ಬೇಡಿದ್ದು ನೆನಪಾಯಿತು.

11 comments

 1. ಶಿಕ್ಷಣದಿಂದ ನಾವು ಸ್ವತಂತ್ರರಾಗಬೇಕು . ಆಗ ಮಾತ್ರ ಅದರ ಸಾರ್ಥಕತೆ . ನಾನು ಅಕ್ಷತ ಅಕ್ಕನವರನ್ನು ಸಂಪೂರ್ಣವಾಗಿ ಒಪ್ಪುತ್ತೇನೆ . ವಿದ್ಯೆ ಪಡೆದೂ ಧರ್ಮ ಕಂದಾಚಾರಗಳ ಸುಳಿಯಲ್ಲಿ ಸಿಕ್ಕವನು ಮಾನವನೇ ?

 2. ಬಿ. ಎಂ. ಬಷೀರ್ ಅವರಂಥ ಪತ್ರಕರ್ತ, ಸಂಪಾದಕ, ಲೇಖಕ ಹಾಗೂ ಕವಿ ಸಾಂಪ್ರದಾಯಿಕ ಚಿಂತನೆಯನ್ನು ಮೀರಿ ಯೋಚಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂಬುದು ಬಹಳ ಬೇಸರದ ವಿಚಾರವಾಗಿದೆ. ಹೀಗಾದರೆ ಮುಸ್ಲಿಂ ಜನಾಂಗವನ್ನು ವೈಚಾರಿಕ ಚಿಂತನೆಗೆ ಹಚ್ಚುವವರು ಯಾರು ಎಂಬುದು ದೊಡ್ಡ ಪ್ರಶ್ನಾರ್ಥಕ ಚಿನ್ಹೆಯಾಗಿ ಉಳಿಯುತ್ತದೆ. ಲಂಕೇಶರಂಥ ಮುಕ್ತ ಚಿಂತಕರು, ಲೇಖಕರು ಮುಸ್ಲಿಂ ಜನಾಂಗದಲ್ಲಿ ಬರಬೇಕು. ಬುರ್ಖಾ ಎಂಬುದು ಬಟ್ಟೆಯ ಮೇಲೆ ಧರಿಸುವ ಬಟ್ಟೆ. ಇದನ್ನು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಏಕೆ ವಿಧಿಸಲಾಗಿದೆ? ಏಕೆ ಗಂಡಸರಿಗೂ ಮುಖ ಮುಚ್ಚುವಂತೆ ಬುರ್ಖಾ ವಿಧಿಸಬಾರದು ಎಂಬ ಪ್ರಶ್ನೆಯನ್ನು ಕೇಳಬೇಕಾಗುತ್ತದೆ. ಬುರ್ಖಾ ಎಂಬುದು ಹೆಣ್ಣನ್ನು ಒಂದು ಸೊತ್ತಿನಂತೆ ನೋಡುವ ಕಾರಣ ಇಂಥ ಕಟ್ಟುಪಾಡುಗಳು ಹುಟ್ಟಿಕೊಳ್ಳುತ್ತವೆ. ಗಂಡಿನ ಅಧಿಕಾರಶಾಹಿ ಮನೋಭಾವ ಇದನ್ನು ಹೆಣ್ಣಿನ ಮೇಲೆ ವಿಧಿಸಿದೆ. ಗಂಡು ಹೆಣ್ಣನ್ನು ತನ್ನ ವೈಯಕ್ತಿಕ ಸೊತ್ತಿನಂತೆ ನೋಡುವ ಪರಿಣಾಮವೇ ಬುರ್ಖಾದಂಥ ಕಟ್ಟುಪಾಡುಗಳು. ಇದು ತನ್ನ ಸೊತ್ತನ್ನು ಬೇರೆಯವರು ನೋಡಬಾರದು ಎಂಬ ಸಂಕುಚಿತ ಮನೋಭಾವನೆಯನ್ನು ಹೊಂದಿದೆ.

 3. ವರ್ತಮಾನ’ದಲ್ಲ ಇರ್ಷಾದ್ ಬರೆದ ಲೇಖನ ಓದುವಾಗ ಒಂದು ಘಟನೆ ನೆನಪಿಗೆ ಬಂತು..ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ಕಲಿಯುವ ಮುಸ್ಲಿಮ್ ವಿದ್ಯಾರ್ಥಿನಿ ತಲೆವಸ್ತ್ರಹಾಕಿದ ಕಾರಣಕ್ಕೆ ಅವಳ ತಂದೆಯನ್ನು ಕರೆದು ಪ್ರಶ್ನಿಸಲಾಯಿತು..ತಂದೆ ಹೇಳಿದರು ಮನೆಯಲ್ಲಿ ನನ್ನ ಮುಂದೆಯೂ ತಲೆಯಿಂದ ವಸ್ತ್ರ ತೆಗೆಯುವುದಿಲ್ಲ..ನಾನು ಏನು ಮಾಡಲಿ..ನನ್ನ ಒತ್ತಾಯವೇನೂ ಇಲ್ಲ..ಈಗ ಹೇಳಿ..ಈ ಹುಡುಗಿಯ ನೋವನ್ನು ಹೇಗೆ ಲೇಖನವಾಗಿ ಹೊರತರುತ್ತೀರಿ..ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಗ್ನತೆಯಿಂದ ಮೈಮುಚ್ಚುವವರೆಗೆ ಆಯ್ಕೆ ಸ್ವಾತಂತ್ರ್ಯವಿರುವಾಗ ಪ್ರತಿಯೊಬ್ಬರ ಭಾವನೆ,ನೋವುಗಳನ್ನು ಅರ್ಥಮಾಡುವಾಗ ನ್ಯಾಯ ಪಾಲಿಸಿರಿ..ಬಶೀರ ರವರ ಬರಹ ನ್ಯಾಯಪೂರ್ಣವಾಗಿದೆ..ಇಂತಹ ಲೇಖಕರಿಂದ ಮಾತ್ರ ಪ್ರಜಾಪ್ರಭುತ್ವ ಉಳಿಯಬಹುದು…

 4. ಅಕ್ಷತಾ ಅವರೇ, ನನ್ನ ಲೇಖನದಿಂದ ನಿಮಗೆ ಅಗತ್ಯ ಇದ್ದ ನಾಲ್ಕು ಸಾಲುಗಳನ್ನು ಆಯ್ದು ಭಾವುಕವಾಗಿ ಬರೆದಿದ್ದೀರಿ. ನನ್ನ ಲೇಖನ ಬುರ್ಖದ ಪರ ಆಗಿಲ್ಲ ಎನ್ನೋದು ಮೇಲ್ನೋಟಕ್ಕೆ ಯಾರಿಗೂ ಅರ್ಥವಾಗತ್ತೆ. ಬುರ್ಖದ ಬಗ್ಗೆ ರೋಮಾಂಟಿಕ್, ಹಾಗು ರೋಚಕ ಹೇಳಿಕೆಗಳ ಬದಲಿಗೆ ಅದನ್ನು ಹೇಗೆ ಎದುರಿಸಬಹುದು ಎನ್ನೋ ದಾರಿಯೊಂದನ್ನು ನಾನು ನನ್ನ ಬರಹದಲ್ಲಿ ತೆರೆದಿಟ್ಟಿದ್ದೇನೆ ಅಷ್ಟೇ. ಉಳಿದಂತೆ ಇಲ್ಲಿರುವ ಕೆಲವು ಕ್ರಾಂತಿ ಕಾರಿ ಹುಡುಗರೊಂದಿಗೆ ನನ್ನ ಯಾವುದೇ ಚರ್ಚೆ ಇಲ್ಲ. ನಮಸ್ಕಾರ

 5. ಬುರ್ಖಾದ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ನೋಡಿದರೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಚಲಿತವಿರುವ Topless / Naturism ನಂತಹ ಚಳುವಳಿಗಳು ಬೇಗನೆ ನಮ್ಮ ಈ ಬಹುಸಂಸ್ಕೃತಿಯ ಭಾರತದಲ್ಲಿ ಆರಂಭವಾಗಲಿಕ್ಕಿದೆ ಎಂದೆನಿಸುತ್ತದೆ. ಆಗ ಪ್ರಶ್ನೆಯು ಬುರ್ಖಾದ ಮೇಲೆ ಅಲ್ಲ, ನಾವು ಹಾಕಿರುವ ಬಟ್ಟೆಯ ಮೇಲೆ ಬಂದು ನಿಲ್ಲುತ್ತದೆ. ಬಟ್ಟೆ ಧರಿಸುವುದೇ ಪ್ರಶ್ನಾರ್ಹ ವಾಗುತ್ತದೆ. ಅದರ ಪ್ರಕಾರ ಬಟ್ಟೆ ಹಾಕುವುದೇ ಒಂದು ಮೌಡ್ಯತೆ. ಅದರ ಹಿಂದೆ ಇರುವ ನಂಬಿಕೆ, ಆಚಾರ, ಸಂಸ್ಕೃತಿ, ಸಮಾಜ, ಕಟ್ಟುಪಾಡು,ಶಿಕ್ಷಣ, ಧರ್ಮ, ಇತ್ಯಾದಿ ಎಲ್ಲವೂ ಪ್ರಶ್ನಾರ್ಹ ವಾಗುತ್ತವೆ. ಆವಾಗ (ಈಗಲೂ) ಬಟ್ಟೆ ಹಾಕುವುದನ್ನೇ ಹೇಗೆ ಸಮರ್ಥಿಸುತ್ತೀರಿ ?. ವ್ಯಕ್ತಿ ಸ್ವಾತಂತ್ರ್ಯ ದ ಹೆಸರಿನಲ್ಲಿ ಅದಕ್ಕೂ ಕೂಡ ಅನುವು ಮಾಡಿ ಕೊಡುತ್ತಿರಾ? ಬಟ್ಟೆ ಹಾಕಿಯೂ ಅಸುರಕ್ಷಿತ ವಾಗಿರುವ ಕಾಲದಲ್ಲಿ ಅಂತಹ ಸಮಾಜವನ್ನು ನಾವು ಇಲ್ಲಿ ಊಹಿಸಬಹುದೇ?

  ನಮ್ಮ ಸಮಸ್ಯೆ ಬುರ್ಖಾ ಅಲ್ಲ, ಬದಲಾಗಿ ನಗ್ನತೆ ಯಾಗಿದೆ. ನಾವು ಚರ್ಚಿಸ ಬೇಕಾಗಿರುವುದು ಬುರ್ಖಾದ ಉದ್ದಗಲವಲ್ಲ, ಬದಲಾಗಿ ನಮ್ಮ ನಮ್ಮ ಇಬ್ಬಗೆಯ ಕಪಟ ನೀತಿಯ ಬಗ್ಗೆ. ಬದಲಾಗಬೇಕಿರುವುದು ಬುರ್ಖಾದ ಬಣ್ಣವಲ್ಲ, ಮಾನವ ಘನತೆಯನ್ನು ಕಳೆದುಕೊಂಡಿರುವ ನಮ್ಮ ನೋಟ, ಯೋಚನೆ.

 6. ಗೌರಿ ಲಂಕೇಶರು ಬುರ್ಖಾ ವಿಷಯದಲ್ಲಿ ಮುಸ್ಲಿಂ ಗಂಡಸರೇ ಯಾಕೆ ಪ್ರತಿಕಯಿಸುವುದು ,ಹೆಂಗಸರು ಯಾಕೆ ಪ್ರತಿಕಯಿಸುತ್ತಿಲ್ಲ ಎಂದು face book ನಲ್ಲಿ ಪ್ರಶ್ನ್ಸಿದರು ,ಈಗ ಅಮೀನ್ ರವರ ಭಾಷಣ ದಿಂದ ಹಿಡಿದು ತದನಂತರ ನಡೆಯುವ ಎಲ್ಲಾ ಚರ್ಚೆಗಳಿಗೆ ಅವರ ಪ್ರಶ್ನೆಯಲ್ಲಿಯೇ ಉತ್ತರವಿದೆ -“ಮುಸ್ಲಿಂ ಹೆಂಗಸರಿಗೆ -ಇದು ಅವರ ಸಮುದಾಯಕ್ಕಾಗಲಿ,ಸಮಾಜಕ್ಕಾಗಲೀ ಅಥವಾ ವ್ಯಕ್ತಿಗತ ವಾಗಲಿ ಒಂದು ಇಶ್ಯು ಅಲ್ಲ ,ಅವರಿಗೆ ದ್ಯನಂದಿನ burning ಇಶ್ಯೂ ಗಳಾದ ವಿದ್ಯಾಭ್ಯಾಸ ,ನೌಕರಿ ,ಆರೋಗ್ಯ ,ಮದುವೆ ,ಸಂಘ ಪರಿವಾರದವರ ಕಿರಿಕಿರಿಯಿಂದ ರಕ್ಷಣೆ ಮುಂತಾದವುಗಳ ಬಗ್ಗೆಯೇ ಗಮನ ” ಬುರ್ಖಾ ಹಾಕುವವರು ಹಾಕುತ್ತಾರೆ,ಇಲ್ಲಾ ಅಂತಾದರೆ ಹಾಕುವುದಿಲ್ಲ ,ಅದನ್ನು ಯಾರು ಪ್ರಶ್ನ್ತಿ ಸಲು ಹೋಗೋದಿಲ್ಲ ! ಇದನ್ನು ಅರಿಯಲು ಗುಪ್ತ ಮತದಾನವಾಗಲಿ ,ಅಥವಾ ಯಾವುದೇ ರಾಕೆಟ್ ಸೈನ್ಸ್ ನ ಅಗತ್ಯವಾಗಲಿ ಇಲ್ಲ . ಇನ್ನೂ ವ್ಯೆಚಾರಿಕವಾಗಿ ಅವರಿಗೆ ತ್ರಪ್ತಿ ಇಲ್ಲವಾದರೆ ಅವರ ನೆರೆಕರೆಯ ಮುಸ್ಲಿಂ ಹೆಂಗಸರನ್ನು ಅಥವಾ ಮುಸ್ಲಿಂ ವಿದ್ಯಾರ್ಥಿನಿಗಳನ್ನು ಕೇಳಲಿ .
  ಮುಸ್ಲಿಂ ಸಮುದಾಯದ ಬಗ್ಗೆ ಯಾವುದೇ ಟೀಕೆ ,ಟಿಪ್ಪಣಿಗಳನ್ನು ನಾನು ಖಂಡಿತವಾಗಿ ಸ್ವಾಗಸುತ್ತೀನೆ !ಆದರೆ ಅದು constructive ಆದರೆ ಮಾತ್ರ ಅದರಿಂದ ಸಮುದಾಯಕ್ಕೆ ಒಳಿತಾಗ ಬಹುದು . ನಾನು ಸಹಾ ಒಪ್ಪುತ್ತೇನೆ -ನಮ್ಮಲ್ಲಿ ವ್ಯೆಚಾರಿಕತೆಯ ,ಪ್ರಗತಿಶೀಲ ಮನೋಭಾವದ ಕೊರತೆ ಇದೆ ಎಂದು ,ಆದರೆ ಸಾಮುದಾಯಿಕ ಚೌಕಟ್ಟಿನೊಳಗಿದ್ದೇ ಅದನ್ನು ಸಾದಿಸಬಹುದೇ ಹೊರತು ,ಕೇವಲ “ಬುರ್ಖಾ” ಎಂದು ,ನಾನು ಹೇಳಿದ್ದೆ ಸತ್ಯ ಎಂದು ವಾದಿಸುದರಿಂದ ಏನೂ ಸಾದಿಸಲಿಕ್ಕೆ ಸಾದ್ಯವಿಲ್ಲ .ಕೇವಲ ನಾಲಿಗೆ ಚಪಲ ಅಥವಾ ಲೇಖನ ಖುಷಿ ಸ್ವಂತಕ್ಕೆ ಸಿಗಬಹುದು . ಇದನ್ನೇ ಬಷೀರ್ ಹೇಳಿದ್ದು ,ಕುಕ್ಕಿಲ ಬರೆದದ್ದು -ಅದನ್ನು ಪ್ರಭುದ್ದವಾಗಿ ಚಿಂತಿಸದೆ ,ವ್ಯೆಚಾರಿಕತೆ ಎಂದರೆ “ಭುರ್ಖಾ” ತೆಗೆಯಿರಿ ಎಂದರೆ ಖಂಡಿತವಾಗಿ ಅದಕ್ಕೆ ವಿರೋದ ಅಭಿಪ್ರಾಯ ಬರಬಹುದು ,ಅದನ್ನೂ ಸಹಾ ತಾಳ್ಮೆಯಿಂದ ಕೇಳುವ ಚಿಂತನೆ ಬೇಕು .
  ಇನ್ನು ಬೊಳುವಾರರು ಮೊದಲಿನ ಮೊನಚು ಇಟ್ಟು ಕೊಂಡಿಲ್ಲ ಎಂದು ಟೀಕಿಸುವವರು ಅದು ಪ್ರಾಯ ಸಹಜ ಎಂದು ಯಾಕೆ ತಿಳಿಯುತ್ತಿಲ್ಲ ? ಸಿದ್ದಲಿಂಗಯ್ಯ ನವರು ಮೊದಲಿನ
  ಇಕ್ರಲಾ ಈಗ ಎಲ್ಲಿ ಇಟ್ಟು ಕೊಂಡಿದ್ದಾರೆ ? ನಾನು ಅತ್ಯಂಥ ಗೌರವಿಸುವ ಲಂಕೇಶರು ಸಹಾ ಬದುಕ್ಕಿದ್ದರೆ ಕಾಲದೊಂದಿಗೆ ಸ್ವಲ್ಪವಾಗಿಯಾದರೂ ಸಹಾ ರಾಜಿಯಾಗುತ್ತಿದ್ದರು
  ಎಂದು ನನ್ನ ಅನಿಸಿಕೆ . ಅದನ್ನೇ ಕುಕ್ಕಿಲ ಹೇಳಿದ್ದು .
  ಏನೇ ಆಗಲಿ “ವರ್ತಮಾನ ” ಒಂದು ಆರೋಗ್ಯಕರ ಚರ್ಚೆಗೆ ಅತ್ಯಂತ ಸೂಕ್ತ ವೇದಿಕೆ ,ಇದೂ ಇನ್ನು ಬೆಳಗಲಿ ಎಂದು ಆಶಿಸುವೆ

 7. ಈ ಬಗ್ಗೆ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಚರ್ಚೆ ಮಾಡಬೇಕು. ಅದು ಬಿಟ್ಟು ಗಂಡುಮಕ್ಕಳು ಸಮರ್ಥನೆ ಮಾಡುವುದೋ ಹೀಯಾಳಿಸುವುದೋ ಯಾವುದೇ ಉತ್ತರವನ್ನು ಕೊಡಲಾರದು.

 8. ಅಕ್ಕ ನಿಮ್ಮ ಬರಹ ನಿಜಕ್ಕೂ ಸ್ವಾಗತರ್ಹ….. ಇನ್ನೂ ಬಿ ಎಮ್ ಬಷೀರ್ ಅವರು ಪತ್ರಕರ್ತ ಮತ್ತು ಸಂಪಾದಕನಾಗಿರುವುದಕ್ಕಿಂತ ಮದರಸದಲ್ಲಿ ಮೇಸ್ಟ್ರು ಕೆಲಸಕ್ಕೆಲಾಯಕ್ಕು…. ಯಾಕೆಂದರೆ ಅಲ್ಲಿ ಅವರಿಗೆ ಯಾವ ವಿರೋದಗಳು ಇರುವುದಿಲ್ಲ….

 9. ಮುಸ್ಲಿಮರನ್ನು, ಹಾಗೂ ಅವರ ಧರ್ಮ ಮತ್ತು ಸಂಸ್ಕೃತಿಯನ್ನು ನಾನು ಬಹಳ ಹತ್ತಿರದಿಂದ ನೋಡಿದಾಗ ಹಿಜಾಬ್ ಮತ್ತು ಬುರ್ಖಾ ಬೇರೆ ಬೇರೆಯೆಂದು ತಿಳಿಯುತ್ತದೆ. ಬಷೀರ್ ಸರ್ ರವರ ಲೇಖನವನ್ನು ಓದಿದಾಗ ಅವರು ಸಮರ್ಥಿಸಿದ್ದು ಪರ್ದಾವನ್ನಾಗಲಿ ಅಥವಾ ಬುರ್ಖಾವನ್ನಾಗಲಿ ಅಲ್ಲ, ಬದಲಾಗಿ ವಸ್ತ್ರಧಾರಣೆಯ ಹಕ್ಕನ್ನು. (ರೈಟ್ ಟು ಡ್ರೆಸ್) ಎಂದು ಹೇಳಬಹುದು. ಅದಕ್ಕಾಗಿ ಬಷೀರ್ ಸರ್ ಅವರನ್ನು ಅಭಿನಂದಿಸಲೇಬೇಕು. ಇನ್ನೊಂದೆಡೆ, ಪರ್ದಾ ಮತ್ತು ಬುರ್ಖಾದ ವ್ಯತ್ಯಾಸವನ್ನು ಬಲ್ಲ ಧಾರ್ಮಿಕ ’ಮೂಲಭೂತವಾದಿ’ ಮಹಿಳೆಯರು ಆ ಬಗ್ಗೆ ಮುಸ್ಲಿಮ್ ಸಮುದಾಯದ ಸ್ತ್ರೀಯರಲ್ಲಿ ’ಬೆರೆತು’ ಅದರ ತಿಳುವಳಿಕೆಯನ್ನು ಹೆಚ್ಚಿಸುತ್ತಿರುವುದನ್ನು ಗಮನಿಸಬಹುದು. ಆದರೆ ಒಂದು ವಸ್ತ್ರಸಂಸ್ಕೃತಿ ರಾತ್ರೋರಾತ್ರಿಯೇ ಬದಲಾಗಬೇಕೆಂದು ಬಯಸುವುದು ಎಷ್ಟು ಮೂರ್ಖತನವೋ, ಬಲವಂತದಿಂದ, ಅಥವಾ ತುಚ್ಚಿಕರಿಸಿ, ಅಥವಾ ತಮಾಷೆಯ ವಸ್ತುವನ್ನಾಗಿಸಿ ಬದಲಾವಣೆಯನ್ನು ಬಯಸುವುದು ಅಷ್ಟೇ ಮೂರ್ಖತನ.
  ಕೇವಲ ಮೂಲಭೂತವಾದಿಗಳಿಂದ ಬುರ್ಖಾ ಎಂಬ ವಸ್ತ್ರ ಸಂಸ್ಕೃತಿಯು ಬೆಳೆದಿದೆಯೆನ್ನುವುದು ಕೂಡಾ ಸಮಂಜಸವಲ್ಲ. ಅದರಲ್ಲಿ ಬುರ್ಖಾ ವ್ಯಾಪರಸ್ಥರ ಪಾಲೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ನಾನು ನನ್ನ ಆಪ್ತರಿಂದ ಕೇಳಿ ತಿಳಿದ ಪ್ರಕಾರ, ದೊಡ್ಡ ಪಾಲು ಕಾಮುಕ ಪುರುಷವರ್ಗಕ್ಕೆ ಸಲ್ಲುತ್ತದೆ. ಇಸ್ಲಾಮಿನ ಗಂಧಗಾಳಿಯೂ ಇಲ್ಲದ ಅಥವಾ ಯಾವುದೇ ಮೂಲಭೂತವಾದಿಗಳ ಪ್ರಭಾವದಲ್ಲಿಯೂ ಇಲ್ಲದ ಗಣನೀಯ ಸಂಖ್ಯೆಯ ಮಹಿಳೆಯರೂ ಬುರ್ಖಾದಾರಿಗಳಾಗಿರುತ್ತಾರೆ. ಯಾವುದೇ ಸುಶಿಕ್ಷಿತ ಬುರ್ಖಾದಾರಿ ಮಹಿಳೆಯಲ್ಲಿ ಕೇಳಿ ನೋಡಿ, ಯಾಕೆ ಬುರ್ಖಾ ಧರಿಸುತ್ತೀರಾ ಎಂದು, ಬಹುತೇಕ ಎಲ್ಲಾ ಉತ್ತರಗಳು – ಪುರುಷರ ಕೆಟ್ಟ ದೃಷ್ಟಿ ಬೀಳದಿರಲು- ಎಂದೇ ಆಗಿರುತ್ತದೆ. ಅದುದರಿಂದ ಕೇವಲ ಮುಸ್ಲಿಮ್ ಮೂಲಭೂತವಾದಿಗಳನ್ನು ದೂರುವ ರಾಜಕೀಯದಲ್ಲಿ ಕಮ್ಯುನಿಸ್ಟ್ ಮೂಲಭೂತವಾದಿಗಳು ಪುರುಷಹಂಕಾರವನ್ನು ರಕ್ಷಿಸುವ ಲಕ್ಷಣಗಳು ಕಾಣಿಸುತ್ತವೆ.
  ಅದಿರಲಿ, ಆಧುನಿಕತೆಯ ಹೆಸರಿನಲ್ಲಿ ಮಹಿಳೆಯನ್ನು ನಗ್ನಗೊಳಿಸುತ್ತಿರುವ ಬಂಡವಾಳಿಶಾಹಿಗಳ ಬಗ್ಗೆ ತಲೆಕೆಡಿಸಿಕೊಳ್ಳದ, ತಮ್ಮನ್ನು ತಾವು ಬುದ್ದಿಜೀವಿಗಳೆಂದು ಕರೆದುಕೊಳ್ಳುವವರಿಗೆ ಪುರುಷಜಾತಿಯ ಬಹಳಾರು ನೀಚ ಮನಸ್ಥಿತಿ ಹಾಗೂ ಚಟುವಟಿಕೆಗಳು ಕಾಣವು, ಏಕೆಂದರೆ ಮಹಾನ್ ಪುರುಷರಿಗೆ ತಮ್ಮನ್ನು ’ಸ್ತ್ರೀವಿಮೋಚಕ’ರೆಂದು ಗುರುತಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳ ಸುಲಭ. ಒಟ್ಟಾರೆಯಾಗಿ ತಮ್ಮ ತಮ್ಮ ಸಿದ್ದಾಂತದ ಬೇಳೆಯನ್ನು ಬೇಯಿಸುವ ಪ್ರಹಸನದಲ್ಲಿ ಪುರುಷ ಮುಸ್ಲಿಮ್ ಮೂಲಭೂತವಾದಿಗಳು ಹಾಗೂ ಕಮ್ಯುನಿಸ್ಟ್ ಮೂಲಭೂತವಾದಿಗಳು ಮುಸ್ಲಿಮ್ ಮಹಿಳೆಯ ಮಾನ ಹರಾಜು ಮಾಡುತ್ತಿರುವುದು ವಿಪರ್ಯಾಸ.

 10. ಕುಕ್ಕಿಲ ಅವರಿಗೆ — ಬುರ್ಖಾದ ಅನಿವಾರ್ಯತೆ ಮತ್ತು ಅಗತ್ಯತೆಯನ್ನು ಬಹಳ ತರ್ಕ ಬದ್ಧವಾಗಿ ಹೇಳಿದ್ದೀರಿ. ಆದರೆ ನಮ್ಮ ಜೀವನದಲ್ಲಿ ತರ್ಕವಷ್ಟೇ ಸತ್ಯವಲ್ಲ ಅಥವಾ ತರ್ಕವೇ ಸತ್ಯವಾಗಿರಲು ಸಾಧ್ಯವಿಲ್ಲ ಎಂಬುದನ್ನು ಮರೆಯಬಾರದು. ಬಡವರು ತಮ್ಮ ಉಡುಗೆ ತೊಡುಗೆಗಳ ಬಡತನವನ್ನು ಮುಚ್ಚಿಕ್ಕೊಳ್ಳಲು ಬುರ್ಖಾ ಧರಿಸಿರಬಹುದು. ಆದರೆ ಶ್ರೀಮಂತರೂ ಏಕೆ ಧರಿಸುತ್ತಾರೆ ಎಂಬ ಪ್ರಶ್ನೆಯನ್ನು ತಾವು ಕೇಳಿಕೊಂಡಿಲ್ಲ. ನಾನು ಸ್ವತಃ ಬೆಂಗಳೂರಿಗೆ ತೀರಾ ಸಮೀಪದಲ್ಲಿರುವ , ಮುಂದುವರೆದ ತಾಲೋಕ್ಕು ಕೇಂದ್ರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಶಾಖೆಯೊಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುವ ಮುಸ್ಲಿಂ ಹೆಣ್ಣು ಮಗಳೊಬ್ಬರು ಸಂಜೆ ನಾಲ್ಕು ಗಂಟೆಗೆ ಆಕೆಯ ಕೆಲಸ ಮುಗಿದ ನಂತರ ಬುರ್ಖಾ ಧರಿಸಿ ಹೊರಟಿದ್ದನ್ನು ನೋಡಿದ್ದೇನೆ. ತಾವು ಮುಸ್ಲಿಂ ಪ್ರಗತಿಪರರಿಗಿಂತ ಹೆಚ್ಚಿನ ಬದಲಾವಣೆಯನ್ನು ಮೂಲಭೂತವಾದಿಗಳು ತಂದಿದ್ದಾರೆ ಎಂದಿದ್ದೀರಿ. ಅದೇ ರೀತಿ ಮುಸ್ಲಿಮೇತರ ಧರ್ಮ,ಪಂಗಡಗಳಲ್ಲೂ ಬದಲಾವಣೆಯ ಗಾಳಿ ಬೀಸುತ್ತಿರುವುದು ಸಂಪ್ರದಾಯ ನಿಷ್ಠರಿಂದಲೇ. (ಪ್ರಗತಿಪರರು ಸದಾ ನಿಂದಿಸುವ, ಟೀಕಿಸುವ ಪುರೋಹಿತಶಾಹಿಗಳು,ಅದರಲ್ಲೂ ಬ್ರಾಹ್ಮಣರ ಸಮಾಜದಲ್ಲಿ). ಆದರೆ ಇದನ್ನು ನಮ್ಮ ಕನ್ನಡದ ಬುದ್ಧಿಜೀವಿಗಳು ( ಹಿಂದೂ ಮತ್ತು ಮುಸ್ಲಿಂ ಇಬ್ಬರೂ) ಗಮನಿಸಲಿಲ್ಲ. ಟೀಕೆ ಅವಹೇಳನವನ್ನೇ ತಮ್ಮ ಪೂರ್ಣಾವಧಿ ಉದ್ಯೋಗ ಮಾಡಿಕೊಂಡರು. ಈಗಲೂ ಮಾಡುತ್ತಿದ್ದಾರೆ. ಆದರೆ ಈಗ ಮುಸ್ಲಿಂ ಸಮಾಜದ ಬುರ್ಖಾ ವಿಷಯದ ಬಗ್ಗೆ ಬಂದ ಒಂದು ಮಾತಿಗೆ ಎಷ್ಟೊಂದು ಸಮರ್ಥನೆಗಳು!!. ಏಕೆ ಹೀಗೆ? ಮುಸ್ಲಿಂ ಸಮಾಜದಲ್ಲಿನ ಸಂಪ್ರದಾಯಗಳ ಬಗ್ಗೆ ಮಾತಾಡುವುದು ಅಪರಾಧವಾಗುತ್ತದೆಯೇ? ಈ ಪ್ರಶ್ನೆಯನ್ನು ತಾವು ತಮ್ಮ ಲೇಖನದಲ್ಲಿ ಕೇಳಿಕೊಂಡಿಲ್ಲ. ಮಾಮೂಲಿನಂತೆ ಹಿಂದೂ ಸಂಘಟನೆಗಳಿಂದ ಮುಸ್ಲಿಂ ಸಮಾಜಕ್ಕೆ ಭಯ ಬಂದಿದೆ. ಎಂದಿದ್ದೀರಿ. ಆದರೆ ಇಸ್ಲಾಂ ಧರ್ಮದ ದೇಶಗಳಿಗಿಂತ ಜಾತ್ಯಾತೀತ,ಧರ್ಮಾತೀತ ಭಾರತದಲ್ಲಿ ಮುಸ್ಲಿಂ ಜನಾಂಗಕ್ಕೆ ಹೆಚ್ಚಿನ ಸ್ಥಾನ, ಭದ್ರತೆ ಇದೆ ಎಂಬುದನ್ನು ತಾವು ಮರೆಯಬಾರದು. ಕಿಡಿಗೇಡಿಗಳು ಎಲ್ಲಾ ಧರ್ಮ, ಜಾತಿಗಳಲ್ಲೂ ಇರುತ್ತಾರೆ. ಆದರೆ ಅದೊಂದರಿಂದಲೇ ಹಿಂದುಗಳನ್ನು ಮುಸ್ಲಿಂಮರು, ಮುಸ್ಲಿಮರನ್ನು ಹಿಂದೂಗಳು ಅಪನಂಬಿಕೆಯ ಕಣ್ಣುಗಳಿಂದ ನೋಡುವುದು ಸರಿಯಲ್ಲ.
  –ಎಂ ಎ ಶ್ರೀರಂಗ ಬೆಂಗಳೂರು .

Leave a Reply to bm basheer Cancel reply

Your email address will not be published.