ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭಕ್ಕೆ ಹಣವೆಂಬ ಗೆದ್ದಲು ಹತ್ತಿದೆಯೇ..

* ಸ್ವಯಂಪ್ರಭಾ

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮದ ಕೆಲಸ ಆಡಳಿತದ ನಡೆಯನ್ನು ಸದಾ ವಿಮರ್ಶಾತ್ಮಕವಾಗಿ ಗಮನಿಸುವುದು. ಆ ನಿಟ್ಟಿನಲ್ಲಿ ಆಡಳಿತ ನಡೆಸುವ ಜನಪ್ರತಿನಿಧಿಗಳು ತಮ್ಮ ಸ್ಥಾನದಲ್ಲಿದ್ದುಕೊಂಡು ನಿರ್ವಹಿಸುವ ಕೆಲಸಗಳನ್ನು– ಸ್ವಲ್ಪ ಸಂಶಯವನ್ನೂ ಇರಿಸಿಕೊಂಡೇ – ನೋಡುವುದು ಅನಿವಾರ್ಯವಾಗುತ್ತದೆ. ಸಚಿವರು, ಶಾಸಕರು, ಮಂತ್ರಿಗಳು ಜನರಿಗಾಗಿ ಜಾರಿ ಮಾಡುತ್ತಿರುವ ಯೋಜನೆಗಳ ಸಾಧಕ ಬಾಧಕಗಳೇನು, ಯಶಸ್ಸು ಅಪಯಶಸ್ಸುಗಳೇನು ಎಂಬುದನ್ನು ಗಮನಿಸುತ್ತಾ ಮೌಲ್ಯಮಾಪನದಂತೆ ಕೆಲಸ ಮಾಡುವ ಪತ್ರಿಕೋದ್ಯಮ ಅಂತಿಮವಾಗಿ ಜನರಪರವಾಗಿಯೇ ಇರಬೇಕು ಎನ್ನುವುದೆಲ್ಲ ನಾವು ಪತ್ರಿಕೋದ್ಯಮದ ಅನುಭವದಲ್ಲಿ ಕಲಿತ ಪಾಠ. ನಮಗೆ ಮಾರ್ಗದರ್ಶನ ಮಾಡಿದ ಹಿರಿಯ ಪತ್ರಕರ್ತರು ಕೂಡ ಇದನ್ನೇ ನಂಬಿದ್ದರು.

ಆದರೆ ಇತ್ತೀಚೆಗೆ ಪತ್ರಿಕೋದ್ಯಮದ ಸೂಕ್ಷ್ಮಗಳು ಅರಿವಾಗುತ್ತಿದ್ದಂತೆಯೇ ಹೊಸ ಬದಲಾವಣೆಯೊಂದು ನಿಚ್ಚಳವಾಗಿ ಗೋಚರಿಸುತ್ತದೆ.

ಮೊದಲನೆಯದಾಗಿ :
ಇತ್ತೀಚೆಗಷ್ಟೇ ರಾಷ್ಟ್ರಮಟ್ಟದ ಪ್ರಸಿದ್ಧ ಪತ್ರಿಕೆಯೊಂದು ತಮ್ಮ ಸಹೋದ್ಯೋಗಿಗಳಿಗೆ ಒಂದು ಆದೇಶ ನೀಡಿದೆ. KannadaPapersCollage‘ ಆಡಳಿತ ವಿರೋಧಿ ವಿಶೇಷ ವರದಿಗಳೇನೂ ಬೇಡ. ಆಡಳಿತದ ಅಲೆಯ ವಿರುದ್ಧವಾದ ಘಟನೆ ಸಂಭವಿಸಿದಾಗ ಕೇವಲ ಒಂದೇ ಸುದ್ದಿ ಪ್ರಕಟಿಸಿದರೆ ಸಾಕು. ಆ ಸುದ್ದಿಯ ವಿವಿಧ ಆಯಾಮಗಳನ್ನು ತೆಗೆದುಕೊಂಡು ಪತ್ರಕರ್ತರು ಮುತುವರ್ಜಿಯಿಂದ ವಿಶ್ಲೇಷಣೆ ನಡೆಸುವುದೇನೂ ಬೇಡ’ ಎಂದು ಸೂಚನೆ ನೀಡಿದೆ.

ಕರಾವಳಿಯ ಪತ್ರಿಕೆಯೊಂದು ಬಹಳ ಹಿಂದೆಯೇ ಇದೇ ಮಾದರಿಯ ವಿಚಾರವನ್ನು ತನ್ನ ಉದ್ಯೋಗಿಗಳಿಗೆ ಸೂಚಿಸಿದೆ. ಅದೆಂದರೆ ‘ಸಮಸ್ಯೆಗಳನ್ನೆಲ್ಲಾ ವರದಿ ಮಾಡುತ್ತಾ ಕೂರಬೇಡಿ. ಅಲ್ಲೆಲ್ಲೋ ಕಸದ ರಾಶಿ ಬಿದ್ದಿದೆ ಎಂದೋ, ರಸ್ತೆ ಕಾಮಗಾರಿ ಆಗಿಲ್ಲ, ಮೋರಿ ಸರಿಯಾಗಿಲ್ಲ, ಸಚಿವರ ನಿರ್ಧಾರ ಸರಿಯಿಲ್ಲ ಎಂದೆಲ್ಲಾ ಬರೆಯುವುದು ಬೇಡ… ಫೀಲ್‌ ಗುಡ್‌ ವರದಿ ಮಾಡಿದರೆ ನಿಮ್ಮ ವರದಿ ಬೇಗನೇ ಪ್ರಕಟವಾಗುತ್ತದೆ’ ಎಂದು ಹೇಳಲಾಗಿತ್ತು.

ಎರಡನೆಯದಾಗಿ :
ವಾಹಿನಿಗಳ ಮುಖ್ಯಸ್ಥರು ಸಹೋದ್ಯೋಗಿಗಳಿಗೆ ಏನೇನೂ ಸೂಚನೆಗಳನ್ನು ಕೊಡುತ್ತಾರೆ ಎಂಬುದು ಕೂಡ ಹೆಚ್ಚು ರಹಸ್ಯವಾಗಿ ಉಳಿದಿಲ್ಲ. ವಾಹಿನಿಗಳು, ತಾವು ಏನು ಪ್ರಸಾರ ಮಾಡಬೇಕು ಎನ್ನುವುದನ್ನು ಪರಸ್ಪರ ಸ್ಪರ್ಧೆ, ತಮ್ಮ ಮಾಲಿಕರ ರಾಜಕೀಯ ನಿಲುವುಗಳು ಮತ್ತು ಟಿಆರ್‌ಪಿಯನ್ನು ಆಧರಿಸಿ ನಿರ್ಧರಿಸುತ್ತವೆ. ಜನರ ಹಿತದೃಷ್ಟಿ ಎಲ್ಲಿಯೂ ಇಣುಕುವುದಿಲ್ಲ. ಆದರೆ ಪತ್ರಿಕೆಗಳಂತೆ ವಾಹಿನಿಗಳು ಫೀಲ್‌ಗುಡ್‌ನ ಬೆನ್ನುಬಿದ್ದಿಲ್ಲ. ಬದಲಾಗಿ ಈಗ ವಾಹಿನಿಗಳು ಶಾಸಕಾಂಗ, ಕಾರ್ಯಾಂಗಗಳ ಕಾರ್ಯವೈಖರಿಯನ್ನು ವಿಮರ್ಶೆ ಮಾಡುವ ಗೋಜಿಗೇ ಹೋಗುತ್ತಿಲ್ಲ. ಒಂದು ವೇಳೆ ಶಾಸಕಾಂಗದ ವಿಚಾರಗಳು ನುಸುಳಿದರೂ ಅವುಗಳಲ್ಲಿ ಜನಪರ ಕಾಳಜಿಯು ಮೆರುಗು ಪಡೆಯುವ ಬದಲು ಖಾಸಗಿ ವಿಚಾರಗಳನ್ನು ಚಪ್ಪರಿಸುವ, ಕ್ರೂರ ಪದಗಳನ್ನು ಬಳಸುವ, ಅವರ ಬಗ್ಗೆ ಇವರೇನಂತಾರೆ, ಇವರ ಬಗ್ಗೆ ಅವರೇನಂತಾರೆ ಎಂಬ kannada-news-channelsಬೈಟ್‌ಫೈಟ್‌ಗಳೇ ಹೆಚ್ಚಾಗಿರುತ್ತವೆ. ಬಹುತೇಕ ತಮ್ಮ ಅರೆಬರೆ ಅನುಭವಗಳ ಆಧಾರದಲ್ಲಿಯೇ ತೀರ್ಪುಗಳನ್ನು ಪ್ರಕಟಿಸುವುದರಲ್ಲೇ ತಲ್ಲೀನವಾಗಿರುತ್ತವೆ. ಇದಕ್ಕೆ ಪ್ರತಿನಿತ್ಯ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ.

ಅಂದರೆ ವಾಹಿನಿಗಳು ಜನರ ಖಾಸಗಿ ವಿಚಾರಗಳನ್ನು ಪದರ ಪದರವಾಗಿ ಚಪ್ಪರಿಸುತ್ತಾ ಪ್ರಸಾರ ಮಾಡುವ ಮೂಲಕ ತಮಗೆ ದೊರೆಯುವ ಕೇವಲ 24 ಗಂಟೆಗಳ ಸೀಮಿತ ಅವಧಿಯನ್ನು ಕೊಂದು ಬಿಡುತ್ತವೆ. ಪತ್ರಿಕೆಗಳಂತೆ ಹೆಚ್ಚು ಸುದ್ದಿನೀಡುವ ಅವಕಾಶ ವಾಹಿನಿಗಳಿಗೆ ಇಲ್ಲ. ಅವುಗಳಿಗೆ ಏನಿದ್ದರೂ 12 ಗಂಟೆಯೊಳಗೇ ಹೇಳಿಮುಗಿಸುವ ಮಿತಿ ಇದೆ. ಆದರೆ ಅದೇ 12 ಗಂಟೆಯಲ್ಲಿ ವಾಹಿನಿಗಳು, ವಿಶ್ವವಿದ್ಯಾನಿಲಯವೊಂದರಲ್ಲಿ ಏನೇನು ಒಳಿತು ಕೆಡುಕು ಇದೆ, ಆಗಬೇಕಾದ ಕೆಲಸ ಏನು ಎಂಬುದನ್ನಾಗಲೀ, ಸರ್ಕಾರ ಜಾರಿ ಮಾಡಿದ ಹೊಸ ಯೋಜನೆ ತಳಮಟ್ಟದಲ್ಲಿ ಗ್ರಾಮೀಣ ಭಾಗದ ಜನರಲ್ಲಿ ಏನು ಪರಿಣಾಮ ಬೀರಿದೆ ಎಂಬುದನ್ನಾಗಲೀ, ಸರ್ಕಾರದ ನಡೆಯನ್ನು ಅಲ್ಲಲ್ಲೇ ಬ್ಲಾಕ್‌ ಮಾಡಿ ಜನಪರ ಯೋಜನೆಯನ್ನೇ ವಿಫಲಗೊಳಿಸುವ ಅಧಿಕಾರಿ ವರ್ಗಗಳ ಬಗ್ಗೆಯಾಗಲೀ ತುಟಿಪಿಟಕ್‌ ಎನ್ನುವುದಿಲ್ಲ. ಅಪವಾದಕ್ಕೆಂಬಂತೆ ಅಲ್ಲೊಂದು ಇಲ್ಲೊಂದು ಸ್ಲಾಟ್‌ಗಳನ್ನು ಪ್ರಸಾರ ಮಾಡಿ ಕೈ ತೊಳೆದುಕೊಂಡು ಬಿಡುತ್ತವೆ.

ಒಳ್ಳೆಯ ಕಾರ್ಯಕ್ರಮಗಳಿಗೆ ಟಿಆರ್‌ಪಿ ಇರುವುದಿಲ್ಲ ಎನ್ನುವುದು ವಾಹಿನಿ ಮತ್ತು ಪತ್ರಿಕೆಯನ್ನು ನಡೆಸಿದ ಹಿರಿಯ ಪತ್ರಕರ್ತರೊಬ್ಬರ ಅಭಿಪ್ರಾಯ. ಆtv-mediaದರೆ ಒಳ್ಳೆಯ ಕಾರ್ಯಕ್ರಮಗಳನ್ನು ಜನರು ನೋಡುವಂತೆ ಮಾಡುವುದು ಕೂಡ ವಾಹಿನಿಗಳ ಜವಾಬ್ದಾರಿ. ಮಾನವನ ಸಹಜ ದೌರ್ಬಲ್ಯಗಳನ್ನು ರಂಗುರಂಗಾಗಿ ಬಿಚ್ಚಿಡುವ ಖಯಾಲಿ ಬೆಳೆಸಿಕೊಂಡ ವಾಹಿನಿಗಳು ಪ್ರೇಕ್ಷಕರನ್ನೂ ಅದೇ ರೀತಿಯಲ್ಲೇ ಬೆಳೆಸಿವೆ. ಆದ್ದರಿಂದ ಮತ್ತೆ ಪ್ರೇಕ್ಷಕರನ್ನು ಪತ್ರಿಕೋದ್ಯಮದ ವ್ಯಾಪ್ತಿಯೊಳಗೆ ತಂದು, ಜನಪರ ಕಾಳಜಿಯ ಧೋರಣೆಯನ್ನು ಬೆಳೆಸುವುದಕ್ಕಾಗಿ ವಾಹಿನಿಗಳು ಕೊಂಚ ಬೆಲೆ ತೆರಲೇಬೇಕು.

ಒಟ್ಟಿನಲ್ಲಿ ವಾಹಿನಿಗಳಾಗಲೀ, ಪತ್ರಿಕೆಗಳಾಗಲೀ, ಪತ್ರಿಕೋದ್ಯಮದ ಸ್ಥಾನವನ್ನು ‘ಪ್ರಜಾಪ್ರಭುತ್ವದ ನಾಲ್ಕನೇ ಅಂಗ’ ಎಂಬ ಸ್ಥಾನದಿಂದ ಮೆಲ್ಲಮೆಲ್ಲನೇ ಕೆಳಗೆ ಇಳಿಸುತ್ತಿವೆ. ಪತ್ರಿಕೆಗಳು ಫೀಲ್‌ಗುಡ್‌ನ ಭರಾಟೆಯಲ್ಲಿ ಜಾಹೀರಾತು ಪುರವಣಿಗಳಾಗುವ ಭಯದಲ್ಲಿದ್ದರೆ, ವಾಹಿನಿಗಳು ವ್ಯಕ್ತಿಯ ಖಾಸಗಿತನ, ದೌರ್ಬಲ್ಯಗಳನ್ನು ವೈಭವೀಕರಿಸುವುದರಲ್ಲಿ ಬ್ಯುಸಿ ಆಗಿವೆ. ಮನುಷ್ಯನೊಬ್ಬ ತನ್ನ ದೌರ್ಬಲ್ಯವನ್ನು ಮೀರುವ ಬದಲಾಗಿ ಪೋಷಿಸಿಕೊಳ್ಳುವುದೇ ಉತ್ತಮವೇನೋ ಎಂಬ ಭಾವನೆಯನ್ನು ಜನರಲ್ಲಿ ಬಿತ್ತುವ ಕೆಲಸದಲ್ಲಿ ನಿರತವಾಗಿವೆ.

ಮೂಲಭೂತವಾಗಿ ವಾಹಿನಿಗಳು ಜನರಪರ ಧೋರಣೆಯನ್ನು ಅನುಸರಿಸಿದಾಗ, ಶ್ರೀಮಂತರ ಖಾಸಗಿ ಸುದ್ದಿಗಳ ಪ್ರಸಾರಕ್ಕೆ ಮಾತ್ರ ಕೋರ್ಟ್‌ ಆದೇಶದ ಮೂಲಕ ಬರುವ ತಡೆಯನ್ನು ಮನ್ನಿಸುವುದು ಹಾಗೂ ಬಡವರ ಸಂಕಷ್ಟವನ್ನು ಕಾಸು ಗಳಿಸುವ ದಾರಿ ಎಂಬುದಾಗಿ ಪರಿಗಣಿಸುವುದು ಸಹಜವಾಗಿಯೇ ನಿಲ್ಲುತ್ತದೆ.

One thought on “ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭಕ್ಕೆ ಹಣವೆಂಬ ಗೆದ್ದಲು ಹತ್ತಿದೆಯೇ..

  1. Ramesh ರಮೇಶ

    ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮ ಎಂಬುದೇ ಒಂದು ದೊಡ್ಡ ಸುಳ್ಳು…ಪತ್ರಕರ್ತರನ್ನು ಯಮಾರಿಸಲು ರಾಜಕಾರಣಿಗಳು, ಪ್ರಚಾರಪ್ರಿಯರು ಹೊಸೆದ ಒಂದು ಸವಕಲು ಶಬ್ದ.
    ಇನ್ನು ಭಾರತದಲ್ಲಿ ಟಿವಿ ಚಾನಲುಗಳು ಸುದ್ದಿ ಮಾಧ್ಯಮದ ಪಟ್ಟಿಯಲ್ಲಿ ಇಲ್ಲ. ಅವು ಮನೋರಂಜನಾ ಮಾಧ್ಯಮ ಅಷ್ಟೇ..

    Reply

Leave a Reply to Ramesh ರಮೇಶ Cancel reply

Your email address will not be published. Required fields are marked *