ದಲಿತ ಸಾಹಿತ್ಯ ಸಮ್ಮೇಳನ: ಕೆಲವು ಪ್ರಶ್ನೆಗಳು

M.Venkatesh-1

– ಶಾಂತ್ ಹೂಟಗಳ್ಳಿ

ಮೈಸೂರಿನಲ್ಲಿ ೫ ನೇ ದಲಿತ ಸಾಹಿತ್ಯ ಸಮ್ಮೇಳನ ಇದೇ ಸೆಪ್ಟಂಬರ್ ೧೪,೧೫ ರಂದು ನಡೆಯುತ್ತಿದೆ. ಈ ಸಮ್ಮೇಳನ ಕುರಿತು ಎತ್ತಲೇಬೇಕಾದ ಕೆಲವು ಪ್ರಶ್ನೆಗಳು ಮೌನತಾಳಿವೆ. ಅಥವಾ ಮುಗುಮ್ಮಾಗಿ ಅಡಗಿ ಕೂತಂತಿವೆ. ದಲಿತ ಸಾಹಿತ್ಯ ಪರಿಷತ್ತು ಈಗ್ಗೆ ಐದು ವರ್ಷಗಳಿಂದ ಸಾಹಿತ್ಯ ಸಮ್ಮೇಳವನ್ನು ಆಚರಿಸುತ್ತಾ ಬಂದಿದೆ. ಇದನ್ನು ದಲಿತ ಸಾಹಿತ್ಯ ಪರಿಷತ್ತು (ದಸಪ) ಆಯೋಜಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ದಲಿತರಿಗೆ ಆಧ್ಯತೆ ದೊರೆಯುತ್ತಿಲ್ಲ. ಈ ತನಕ ದಲಿತರೊಬ್ಬರು ಕಸಾಪ ಸಮ್ಮೇಳನದ ಅಧ್ಯಕ್ಷರಾಗಿಲ್ಲ ಎನ್ನುವ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುಂದುಮಾಡಿ ದಸಾಪ ಹುಟ್ಟಿದೆ. ಇದೊಂದು ಚಾರಿತ್ರಿಕವಾಗಿ ಸಾಮಾಜಿಕ ನ್ಯಾಯದ ನೆಲೆಯಲ್ಲಿ ಆಗಿರುವ ಬಹುಮುಖ್ಯ ಪಲ್ಲಟವೂ ಹೌದು.

ಕನ್ನಡ ಸಾಹಿತ್ಯ ಪರಿಷತ್ತು ಈಗಲೂ ಮೇಲು ಜಾತಿಯ ಹಿಡಿತದಲ್ಲಿದೆ. ಕಾರಣ ಈತನಕ ಒಬ್ಬ ದಲಿತ ಸಾಹಿತಿಯೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಲ್ಲದಿರುವುದನ್ನು ನೋಡಬಹುದು. ಹಾಗೆಯೇ ಕಸಾಪದ ಜಿಲ್ಲಾ, ತಾಲೂಕು ಘಟಕಗಳಲ್ಲಿಯೂ ದಲಿತ ಕೆಳಜಾತಿಗಳ ಪ್ರಾತಿನಿಧ್ಯ ತುಂಬಾ ಕಡಿಮೆ. ಅದರಲ್ಲೂ ಕಸಾಪ ದಕ್ಷಿಣ ಕನ್ನಡ ಭಾಗದಲ್ಲಿ ಬ್ರಾಹ್ಮಣ, ಹಾಸನ ಮೈಸೂರು ಭಾಗದಲ್ಲಿ ಗೌಡ ಸಮುದಾಯ, ಹೈದರಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯದ ಹಿಡಿತದಲ್ಲಿದೆ. ಅದಕ್ಕೆ ಪೂರಕವಾಗಿ ಆಯಾ ಜಿಲ್ಲಾ ತಾಲೂಕ ಕಸಾಪ ಚಟುವಟಿಕೆಗಳು ನಡೆಯುತ್ತವೆ. ಹೀಗೆ ಮೇಲು ಜಾತಿಗಳ ಬಿಗಿಯಾದ ಹಿಡಿತದಿಂದ ಕಸಾಪವನ್ನು ಪಾರು ಮಾಡದಿದ್ದರೆ, ಜಾತಿಯ ನೆಲೆಯಲ್ಲಿ ಹುಟ್ಟಬಹುದಾದ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಕಸಾಪ ನಿರಂತರವಾಗಿ ಎದುರಿಸಬೇಕಾಗುತ್ತದೆ. ಆ ಕಾರಣಕ್ಕೆ ಕೆಳಜಾತಿಗಳ ವಿಶ್ವಾಸವನ್ನೂ ಕಸಾಪ ಗಳಿಸಲಾರದು. ೧೯೭೯ ರಲ್ಲಿ ಗೋಪಾಲಕೃಷ್ಣ ಅಡಿಗರು ಕಸಾಪ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ದಲಿತ ಸಾಹಿತ್ಯದ ಚರ್ಚೆಯನ್ನು ಏರ್ಪಡಿಸಲು ನಿರಾಕರಿಸಿದ್ದರು. ಈ ಘಟನೆಯ ಕಾರಣವೇ ಬಂಡಾಯ ಸಾಹಿತ್ಯ ಸಂಘಟನೆ ರೂಪುಗೊಂಡ ಚಾರಿತ್ರಿಕ ಸಂಘರ್ಷವೂ ನಮ್ಮ ಮುಂದಿದೆ.

ಕಸಾಪವನ್ನು ವಿರೋಧಿಸಿ ಹುಟ್ಟಿದ ದಸಾಪ ತುಂಬಾ ಎಚ್ಚರ ಮತ್ತು ಸೂಕ್ಷ್ಮತೆಯೊಂದಿಗೆ ಸಮ್ಮೇಳನವನ್ನು ರೂಪಿಸಬೇಕಾಗಿದೆ. ಕಸಾಪದ ಎಲ್ಲಾ ಮಿತಿಗಳನ್ನು ಮೀರುವ ಹಾಗೆ ತನ್ನದೇ ಆದ ಮಾದರಿಯೊಂದನ್ನು ಕಟ್ಟಿಕೊಳ್ಳಬೇಕಾಗಿದೆ. ಆದರೆ ಹಲವು ಸಂಗತಿಗಳಲ್ಲಿ ಕಸಾಪ ಮತ್ತು ದಸಾಪ ಸಮ್ಮೇಳನಕ್ಕೆ ಸಾಮ್ಯಗಳಿವೆ. ಅಥವಾ ಕಸಾಪ ಸಮ್ಮೇಳನದ ರಿಮೇಕ್‌ನಂತೆ ದಸಾಪ ಸಮ್ಮೇಳನವು ಕಾಣುತ್ತಿದೆ. ಅಧ್ಯಕ್ಷರ ಮೆರವಣಿಗೆ, ಸಮ್ಮೇಳನದ ಗೋಷ್ಠಿಗಳಲ್ಲಿ ದಂಡಿಯಾಗಿ ಕಿಕ್ಕಿರಿದ ಕವಿ ಸಾಹಿತಿಗಳು, ಅಸಾಹಿತಿಗಳ ಮೆರೆಸುವಿಕೆ, ಅಸೂಕ್ಷ್ಮ ಚಿಂತಕರ ಪಾಲ್ಗೊಳ್ಳುವಿಕೆ, ದಸಾಪ ದಲ್ಲಿಯೂ ಮುಂದುವರಿಯುತ್ತಿದೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಜಾತಿ ನೆಲೆಯಲ್ಲಿ ದಲಿತರ ಪಾಲ್ಗೊಳ್ಳುವಿಕೆ ಮತ್ತು ದಲಿತ ಸಮುದಾಯಕ್ಕೆ ಪೂರಕವಾದ ಕೆಲ ಸಂಗತಿಗಳ ಚರ್ಚೆಯ ಹೆಚ್ಚುವರಿಯನ್ನು ಹೊರತು ಪಡಿಸಿದರೆ ಕಸಾಪ ಸಮ್ಮೇಳನಕ್ಕಿಂತ ದಸಾಪ ಸಮ್ಮೇಳನದ ಚಹರೆ ಭಿನ್ನವಾಗಿಯೇನೂ ಕಾಣುವುದಿಲ್ಲ.

ಮುಖ್ಯವಾಗಿ ೫ ನೇ ದಸಾಪ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯೇ ಪ್ರಶ್ನಾರ್ಹ. ಹಿರಿಯರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರನ್ನು ಸಂಸ್ಕೃತ ವಿದ್ವತ್ತಿನ ಕಾರಣ ಅವರನ್ನು ಗೌರವಿಸೋಣ. ಅಂತೆಯೇ ಅವರು ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದು ಅವರ ಸಂಸ್ಕೃತ ವಿದ್ವತ್ತಿಗೆ ಕೊಟ್ಟ ಗೌರವವೂ ಆಗಿದೆ. ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ದಲಿತ ಕುಲಪತಿ ಎನ್ನುವುದು ಚಾರಿತ್ರಿಕವಾಗಿ ದಾಖಲಾರ್ಹ. ಆದರೆ ಮಲ್ಲೇಪುರಂ ಅವರು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗಿನಿಂದಲೂ ಅವರು ವಿದ್ವತ್ತಿನ ಕಾರಣಕ್ಕಲ್ಲದೆ ಬೇರೆ ಕಾರಣಗಳಿಗೆ ಹೆಸರಾಗಿದ್ದಾರೆ. ಸಂಸ್ಕೃತ ವಿವಿಯಲ್ಲಿಯೂ ಹುದ್ದೆಗಳ ಆಯ್ಕೆಯ ವಿವಾದ ನಿರಂತರವಾಗಿ ಸುದ್ದಿಯಾಗುತ್ತಲೇ ಇತ್ತು. ಮೇಲಿನ ಯಾವ ಸಂಗತಿಗಳೂ ಮುಚ್ಚಿಟ್ಟವೇನಲ್ಲ ಕಾಲ ಕಾಲಕ್ಕೆ ಮಾಧ್ಯಮಗಳಲ್ಲಿ ಬಹಿರಂಗಗೊಂಡತವುಗಳು.

ಇನ್ನು ಮಲ್ಲೇಪುರಂ ಅವರ ಸಾಹಿತ್ಯ ಸಾಧನೆಯನ್ನು ಗಮನಿಸಿದರೆ ದಲಿತರನ್ನು ಎಚ್ಚರಿಸುವ ಯಾವ ಗಂಭೀರ ಬರಹಗಳೂ ಇಲ್ಲ. ದಲಿತ ಪರವಾದ ಯಾವ ಹೋರಾಟ, ಚಳವಳಿಗಳಲ್ಲಿ ಅವರೆಂದೂ ಭಾಗಿಯಾಗಿಲ್ಲ. ಮೇಲಾಗಿ ಅವರು ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವವರೆಗೂ ದಲಿತರೆಂದು ಗುರುತಿಸಿಕೊಂಡಿಲ್ಲ ಕೂಡ. ಅವರು ಜೀವನಪೂರ್ತಿ ಬ್ರಾಹ್ಮಣರಂತಿದ್ದು, ಬ್ರಾಹ್ಮಣಪರವಾದ ಕೆಲಸ ಮಾಡಿಕೊಂಡಿದ್ದು ಇದ್ದಕ್ಕಿದ್ದಂತೆ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಬಿಟ್ಟರೆ ಅಖಿಲ ಕರ್ನಾಟಕದ ದಲಿತ ಮತ್ತು ದಲಿತ ಪರ ಚಿಂತಕರು ಅವರನ್ನು ದಿಢೀರನೆ ಒಪ್ಪಿಕೊಳ್ಳುವುದಾದರೂ ಹೇಗೆ?

ಮಲ್ಲೇಪುರಂ ಅವರು ತಮ್ಮ ಹೆಸರು ಮತ್ತು ವ್ಯಕ್ತಿತ್ವಕ್ಕಂಟಿದ ಕಳಂಕವನ್ನು ಅಳಿಸಿಕೊಳ್ಳುವ ಕೆಲಸಗಳಲ್ಲಿ ನಿರತರಾದಂತಿದೆ. ಈಚೆಗೆ ಮಲ್ಲೇಪುರಂ ಪ್ರತಿಷ್ಠಾನವೊಂದು ಸ್ಥಾಪನೆಯಾಗಿದೆ. ಈ ಪ್ರತಿಷ್ಠಾನದ ಮೂಲಕ ಪ್ರಶಸ್ತಿಗಳನ್ನೂ ಕೊಡಲಾಗುತ್ತಿದೆ. ಪ್ರಶಸ್ತಿ ಪಡೆದವರ ಹೆಸರಲ್ಲಿ ಪುಸ್ತಕಗಳನ್ನೂ ಬರೆಸಲಾಗಿದೆ. ಸೂಕ್ಷ್ಮಸಂವೇದನೆಯ ಲೇಕಖ/ಖಿಯರೂ ಕೂಡ ಮಲ್ಲೇಪುರಂ ಪ್ರತಿಷ್ಠಾನದ ಪ್ರಶಸ್ತಿಯನ್ನು ಯಾವ ತಕರಾರಿಲ್ಲದೆ ಸ್ವೀಕರಿಸುತ್ತಾರೆ. ತಮ್ಮ ಸಾಧನೆಯ ಪುಸ್ತಕ ಬರೆಸಿಕೊಳ್ಳುತ್ತಾರೆ. ದಸಾಪ ಸಮ್ಮೇಳನದ ಅಧ್ಯಕ್ಷಗಿರಿ ಕೂಡ ತಮಗಂಟಿದ ಕಳಂಕವನ್ನು ಮರೆಮಾಚಲು ಮಾಡುವ ಪ್ರಯತ್ನದಂತೆಯೇ ಕಾಣುತ್ತಿದೆ. ಇದರಿಂದಾಗಿ ಇಡೀ ದಸಾಪ ಸಮ್ಮೇಳನವೇ ಪ್ರೊ.ಮಲ್ಲೇಪುರಂ ಅವರಿಗಂಟಿದ ಕಳಂಕ ಅಳಿಸಲು ಬಲಿಯಾಗುತ್ತಿದ್ದಂತೆ ಕಾಣುತ್ತಿದೆ. ದಲಿತ ಎನ್ನುವ ಕಾರಣಕ್ಕೇ ಮಲ್ಲೇಪುರಂ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದಾದರೆ ದಲಿತ ಸಮುದಾಯದಲ್ಲಿಯೇ ಪ್ರಾಮಾಣಿಕರೂ ದಲಿತ ಹೋರಾಟಕ್ಕೆ ಶ್ರಮಿಸಿದವರೂ ಹಲವರಿದ್ದರು. ಈ ವಿಷಯದಲ್ಲಿ ದಸಾಪ ಸಂಘಟನಕಾರರು, ಪದಾಧಿಕಾರಿಗಳು ಅಸೂಕ್ಷ್ಮವಾದರೆ? ಅಥವಾ ಜಾಣಮರೆವಿನಿಂದ ಮೌನವಾದರೆ?

ದಸಾಪ ದಲಿತ ಎನ್ನುವ ಪದವನ್ನು ತುಂಬಾ ಸೀಮಿತ ಅರ್ಥದಲ್ಲಿ ಬಳಸಿದಂತೆ ಕಾಣುತ್ತದೆ. ಮೇಲು ಜಾತಿ ಮತ್ತು ವರ್ಗಗಳನ್ನು ಹೊರತು ಪಡಿಸಿ ಎಲ್ಲಾ ಧರ್ಮಗಳ ಶೋಷಿತ ಕೆಳಜಾತಿ ಮತ್ತು ಸಮುದಾಯಗಳನ್ನು ಒಳಗೊಳ್ಳುವ ವಿಶಾಲ ಹರವಿನಿಂದ ದಸಾಪ ಹೊರತಾಗಿದೆ. ಇದರಿಂದಾಗಿ ಕಸಾಪದಂತೆಯೇ ದಸಾಪ ಕೂಡ ಮತ್ತೊಂದು ಅತಿರೇಕದ ನಡೆಯಾಗುತ್ತಿರುವುದು ಸದ್ಯಕ್ಕೆ ಕಾಣುತ್ತಿದೆ. ದಸಾಪ ಸಮ್ಮೇಳನದ ಆಹ್ವಾನ ಪತ್ರಿಕೆಯ ಹೆಸರುಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಅರಿವಿಗೆ ಬರುತ್ತದೆ. ಕಸಾಪ ಈಗ ದಲಿತರ ವಿರೋಧಕ್ಕೆ ಕಾರಣವಾದಂತೆ ಮುಂದೊಂದು ದಿನ ಶೋಷಿತ ಕೆಳಜಾತಿ/ವರ್ಗಗಳ ವಿರೋಧಕ್ಕೂ ದಸಾಪ ಒಳಗಾಗುವುದಿಲ್ಲ ಎಂದು ಹೇಳಲಿಕ್ಕಾಗದು.

ಕಸಾಪ ಸಮ್ಮೇಳನದ ಹಲವು ಮಿತಿಗಳು ದಸಾಪ ಸಮ್ಮೇಳನದಲ್ಲಿಯೂ ಮುಂದುವರಿಯುತ್ತಿದೆsahitya. ಕಸಾಪ ಸಮ್ಮೇಳನ ಹೆಚ್ಚು ಟೀಕೆಗೊಳಗಾಗಿರುವುದು ಅದರ ಜಡತೆ ಮತ್ತು ಅಸೂಕ್ಷ್ಮತೆಯ ಕಾರಣಕ್ಕೆ. ಅಂದರೆ ಅದು ವರ್ತಮಾನದ ತಲ್ಲಣಗಳಿಗೆ ಎಂದೂ ಮೊದಲ ಆದ್ಯತೆಯನ್ನು ಕೊಡುವುದಿಲ್ಲ. ಅಥವಾ ವರ್ತಮಾನದ ಸಂಗತಿಗಳನ್ನು ಸಮ್ಮೇಳನ ಒಳಗೊಂಡರೂ ಆ ಕುರಿತು ಮಾತನಾಡುವವರು ಮಾತ್ರ ನಿಷ್ಠುರಿಗಳಾಗಿರುವುದಿಲ್ಲ, ಸೂಕ್ಷ್ಮಜ್ಞರಾಗಿರುವುದಿಲ್ಲ. ಬದಲಾಗಿ ಎಲ್ಲವನ್ನೂ ಸಪಾಟುಗೊಳಿಸಿ ಆಕರ್ಷಕವಾಗಿ ಜನಪ್ರಿಯ ನಗೆಚಟಾಕಿ ಹಾರಿಸಿ ಗಂಭೀರತೆಯನ್ನು ಹಾಳುಗೆಡವುವರಾಗಿರುತ್ತಾರೆ. ಯಾವಾಗಲೂ ಆಯಾ ಕಾಲದ ಸೂಕ್ಷ್ಮ ಯುವ ಬರಹಗಾರರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವುದು ಕಡಿಮೆಯೆ. ಕಾರಣ ಕಸಾಪ ಜಡಗೊಂಡ ಹಿರಿಯ ಸಾಹಿತಿಗಳಿಗೇ ಮಣೆ ಹಾಕುತ್ತಾ ಬಂದಿದೆ. ಇಂತಹ ಲಕ್ಷಣಗಳು ದಸಾಪ ಸಮ್ಮೇಳನದಲ್ಲಿಯೂ ಮುಂದುವರೆಯುತ್ತಿದೆ. ಇಲ್ಲಿಯೂ ಜಡತೆ ಅಸೂಕ್ಷ್ಮತೆ ಕಾಣುತ್ತಿದೆ. ಇಲ್ಲಿಯೂ ಕವಿಗಳಲ್ಲದವರು ಕವಿಗಳ ವೇಷದಲ್ಲಿಯೂ, ಸೂಕ್ಷ್ಮಜ್ಞ ಚಿಂತಕರಲ್ಲದವರು ಚಿಂತಕರ ವೇಷದಲ್ಲಿಯೂ ಪ್ರವೇಶ ಪಡೆಯುತ್ತಿರುವುದು ದಸಾಪದ ಅಸೂಕ್ಷ್ಮತೆಗೆ ಸಾಕ್ಷಿಯಾಗಿದೆ.

ದಸಾಪ ಸಮ್ಮೇಳನ ದಲಿತ ಸಮುದಾಯದ ಸಮಸ್ಯೆಗಳ ಸೂಕ್ಷ್ಮಗಳನ್ನು ದೊಡ್ಡ ನಿಯಲ್ಲಿ ತೋರುವಂತಾಗಲಿ, ಈ ಪ್ರಶ್ನೆಗಳನ್ನು ನಾಡಿನ ಚಳವಳಿಗಾರರು ಪ್ರಗತಿಪರರು ಚರ್ಚಿಸುವಂತಾಗಲಿ, ಸರಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಲಿ ಎನ್ನುವ ಕಾಳಜಿಯಿಂದ ಮೇಲಿನ ಪ್ರಶ್ನೆಗಳನ್ನು ಎತ್ತಲಾಗಿದೆ. ಕಾರಣ ಇದನ್ನೊಂದು ಜನಜಂಗುಳಿಯ ಜಾತ್ರೆಯನ್ನಾಗಿಸಿ ಅಸೂಕ್ಷ್ಮಗೊಳಿಸಿದರೆ ಈ ಸಮ್ಮೇಳನ ಸಾಹಿತ್ಯವಲಯದ ಅವಜ್ಞೆಗೆ ಗುರಿಯಾಗುತ್ತದೆ. ದಲಿತರಿಗೆ ಮಾತ್ರ ಸಂಬಂಧಿಸಿದ, ದಲಿತರು ಮಾತ್ರ ಪಾಲ್ಗೊಳ್ಳುವ, ದಲಿತರಿಗಷ್ಟೆ ಸಂಬಂಧಿಸಿದ್ದು ಎಂದು ಸಾರ್ವಜನಿಕ ವಲಯ ಭಾವಿಸುವಷ್ಟು ಕುಬ್ಜವಾಗುವ ಸಾಧ್ಯತೆ ಇದೆ. ಅಥವಾ ದಸಾಪದ ತಪ್ಪುಗಳನ್ನು ಮುಂದುಮಾಡಿ ತಿರಸ್ಕಾರಕ್ಕೆ ಕಾರಣವಾಗುತ್ತದೆ. ಹೀಗೆ ಸಾಹಿತ್ಯದ ಪ್ರಗತಿಪರರ, ಚಳವಳಿಗಾರರ ಗಂಭೀರ ಅಲಕ್ಷ್ಯಕ್ಕೆ ಒಳಗಾದರೆ ಈ ಸಮ್ಮೇಳನವನ್ನು ಆಯೋಜಿಸಿಯೂ ಫಲವೇನು? ಈ ಎಲ್ಲಾ ಪ್ರಶ್ನೆಗಳನ್ನು ದಲಿತಪರವಾದ ಪ್ರಾಮಾಣಿಕ ಕಾಳಜಿಯಿಂದ ಮಾತ್ರ ಎತ್ತಲಾಗಿದೆ. ಈ ಪ್ರಶ್ನೆಗಳಿಗೆ ದಸಾಪ ಸಂಘಟಕರು, ಪದಾದಿಕಾರಿಗಳು ಸೂಕ್ಷ್ಮವಾಗಿ ಮುಖಾಮುಖಿಯಾಗಲಿ ಎನ್ನುವುದು ಈ ಬರಹದ ಆಶಯ.

8 thoughts on “ದಲಿತ ಸಾಹಿತ್ಯ ಸಮ್ಮೇಳನ: ಕೆಲವು ಪ್ರಶ್ನೆಗಳು

  1. nagraj.harapanahalli

    ಮಲ್ಲೇಪುರಂ ಜಿ. ವೆಂಕಟೇಶ್ ಅವರನ್ನು ನಾನು ಈತನಕ ಬ್ರಾಹ್ಮಣರೆಂದೇ ತಿಳಿದಿದ್ದೆ. ಅವರನ್ನು ದಸಾಪ ಸಂಸ್ಥಾಪದ ಅರ್ಜುನ್ ಗೋಳಸಂಗಿ ಅದ್ಹೇಗೆ ಒಪ್ಪಿಕೊಂಡರೋ….ಆ ಮಾಧವನಿಗೇ ಗೊತ್ತು. ನಿಮ್ಮ ಲೇಖನದ ಮಾತುಗಳನ್ನೇ ಉಲ್ಲೇಖಿಸುವುದಾದರೆ….“ ಮಲ್ಲೇಪುರಂ ಅವರ ಸಾಹಿತ್ಯ ಸಾಧನೆಯನ್ನು ಗಮನಿಸಿದರೆ ದಲಿತರನ್ನು ಎಚ್ಚರಿಸುವ ಯಾವ ಗಂಭೀರ ಬರಹಗಳೂ ಇಲ್ಲ. ದಲಿತ ಪರವಾದ ಯಾವ ಹೋರಾಟ, ಚಳವಳಿಗಳಲ್ಲಿ ಅವರೆಂದೂ ಭಾಗಿಯಾಗಿಲ್ಲ. ಮೇಲಾಗಿ ಅವರು ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವವರೆಗೂ ದಲಿತರೆಂದು ಗುರುತಿಸಿಕೊಂಡಿಲ್ಲ ಕೂಡ. ಅವರು ಜೀವನಪೂರ್ತಿ ಬ್ರಾಹ್ಮಣರಂತಿದ್ದು, ಬ್ರಾಹ್ಮಣಪರವಾದ ಕೆಲಸ ಮಾಡಿಕೊಂಡಿದ್ದು ಇದ್ದಕ್ಕಿದ್ದಂತೆ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಬಿಟ್ಟರೆ ಅಖಿಲ ಕರ್ನಾಟಕದ ದಲಿತ ಮತ್ತು ದಲಿತ ಪರ ಚಿಂತಕರು ಅವರನ್ನು ದಿಢೀರನೆ ಒಪ್ಪಿಕೊಳ್ಳುವುದಾದರೂ ಹೇಗೆ?” ….ಸತ್ಯವಾದ ಮಾತು.
    ನಮ್ಮದೇ ಒಬ್ಬ ಸ್ನೇಹಿತರು ದಲಿತರೆಂದು ಹೇಳಿಕೊಂಡು ತಿರುಗಿ ಅನೇಕ ಪ್ರಶಸ್ತಿ ಲಾಭಿಗಳನ್ನು ಮಾಡಿದವರು, ಗೋಳಸಂಗಿ ಸ್ನೇಹಿತರ ಮೂಲಕ ದಲಿತ ಸಾಹಿತ್ಯ ಪರಿಷತ್ ನಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡ ಸುದ್ದಿ ಇದೆ. ಆತ ಪ್ರಗತಿಪರ ಮುಖ ಹೊತ್ತುಕೊಂಡಿದ್ದರೂ, ಕುರುಬ ಸಮಾಜದವರ ಜೊತೆ ಗುಟ್ಟಾಗಿ ಆಪ್ತಸಮಾಲೋಚನಾ ಸಭೆಗಳನ್ನು ನಡೆಸಿದ ಜಾತಿವಾದಿ. ಮತ್ತು ಈಗಲೂ ವಸೂಲಿ ಅಜೆಂಡಾದ ಸಭೆಗಳ ದಿನಾಂಕವನ್ನು ನಿಗದಿ ಮಾಡುವ ದುರಾಲೋಚನಾ ಸಭೆಗಳ ಸಂಚಾಲಕ. ಈ ತರಹದ ನಕಲಿ ದಲಿತರೂ ಸಹ ದಸಾಪ ದಲ್ಲಿ ತೂರಿಕೊಂಡಿದ್ದಾರೆ.

    Reply
    1. Nagshetty Shetkar

      ದಲಿತ ಸಾಹಿತ್ಯ ಸಮ್ಮೇಳನಕ್ಕೆ ಜಾತಿ ದಲಿತರೇ ಅಧ್ಯಕ್ಷರಾಗಬೇಕು ಎಂದು ವಾದಿಸುವುದು ಕೂಡ ಜಾತೀಯತೆ. ದಲಿತ ಎಂಬುದು ಜಾತಿ ಅಲ್ಲ, ಅದು ಒಂದು ಸಾಮುದಾಯಿಕ ಸಂವೇದನೆ. ಯಾವ ಜಾತಿಯಲ್ಲಿ ಹುಟ್ಟಿದವನಾಗಿದ್ದರೂ ದಲಿತ ಸಂವೇದನೆಗೆ ತೆರೆದುಕೊಂಡವನೇ ದಲಿತ. ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಅಣ್ಣ ಬಸವಣ್ಣನವರು ಬ್ರಾಹ್ಮಣರಾಗಿ ಉಳಿಯಲಿಲ್ಲ. ದಲಿತ ಸಂವೇದನೆಗೆ ತಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಂಡಿದ್ದರಿಂದಲೇ ಅವರೊಬ್ಬ ಮಹಾದಲಿತ ಆಗಿ ಬ್ರಾಹ್ಮಣ್ಯದ ವಿರುದ್ಧ ಸಮರ ಸಾರಿದರು. ವಚನ ಸಾಹಿತ್ಯ ನಿಜವಾದ ಅರ್ಥದಲ್ಲಿ ದಲಿತ ಸಾಹಿತ್ಯವೇ ಆಗಿದೆ. ಈ ಕಾಲದಲ್ಲಿ ಮುಸಲ್ಮಾನರಾಗು ಹುಟ್ಟಿದ ನಮ್ಮ ದರ್ಗಾ ಸರ್ ಅವರದ್ದೂ ದಲಿತ ಸಂವೇದನೆಯೇ. ದರ್ಗಾ ಸರ್ ದಲಿತ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗುವ ಅರ್ಹತೆ ಹೊಂದಿದ್ದಾರೆ. ಆದುದರಿಂದ ಜಾತಿ ದಲಿತರೇ ಅಧ್ಯಕ್ಷರಾಗಬೇಕು ಎಂಬ ವಾದದಲ್ಲಿ ಹುರುಳಿಲ್ಲ.

      Reply
  2. dr. t.n. vasudevamurthy

    ಕನ್ನಡ ಸಾಹಿತ್ಯದ ಏಳಿಗೆಗಾಗಿ ಹುಟ್ಟಿದ ಕನ್ನಡ ಸಾಹಿತ್ಯ ಪರಿಷತ್ತು ಈ ಐವತ್ತು ಅರವತ್ತು ವರ್ಷಗಳ ಅವಧಿಯಲ್ಲಿ ಯಾವ ದೊಡ್ಡ ಲೇಖಕನನ್ನು ಹುಟ್ಟಿಸಿದೆ? ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಗುರುತಿಸಿಕೊಂಡ ಈವರೆಗಿನ ಯಾವ ಕನ್ನಡ ಲೇಖಕ ಸಾರ್ಥಕವೆನಿಸುವ ಬರವಣಿಗೆ ಮಾಡಿರುವನು? ಸದರಿ ಕಸಾಪವನ್ನು ಅವಲಂಬಿಸಿ (ಅಥವಾ ಪರಾವಲಂಬಿಸಿ) ಕಹಳೆ ತುತ್ತೂರಿ ಬಾರಿಸಿದ ಲೇಖಕರೆಲ್ಲರೂ ತಮ್ಮ ಹಿತಾಸಕ್ತಿಯನ್ನು ಅಥವಾ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಸಫಲರಾಗಿರಬಹುದೇ ಹೊರತು ಕನ್ನಡಕ್ಕೆ ಅರ್ಥಪೂರ್ಣವಾದ ಯಾವ ಕೊಡುಗೆಯನ್ನೂ ಈತನಕ ನೀಡಿದಂತಿಲ್ಲ. ಸರ್ಕಾರದ ಮುಲಾಜಿನಿಂದ ಉಸಿರಾಡುತ್ತಿರುವ ಇಂತಹ ಕಸಾಪ ನಡೆಸುವ ಸಮ್ಮೇಳನಕ್ಕೆ ಪರ್ಯಾಯವಾದ ಸಮ್ಮೇಳನ ನಡೆಸುವವರ ಹಿತಾಸಕ್ತಿ ಏನಿದ್ದಿರಬಹುದು ಎಂಬುದು ಅವರ ಅಧ್ಯಕ್ಷರ ಆಯ್ಕೆಯಿಂದಲೇ ಬಯಲಾಗುತ್ತಿದೆ. ದಲಿತ ವಲಯವಾಗಲಿ ದಲಿತೇತರ ವಲಯವಾಗಲಿ ಇಂತಹ ಢೋಂಗಿ ಸಮ್ಮೇಳನದ ವಿರುದ್ಧ ಈತನಕ ದನಿ ಎತ್ತದಿರುವುದು ಆತಂಕದ ವಿಷಯವಾಗಿದೆ.

    Reply
    1. Nagshetty Shetkar

      ಸಾಹಿತ್ಯ ಪರಿಷತ್ತು ಎಂಬುದು ಸಾಹಿತ್ಯದ ಹೆಸರಿನಲ್ಲಿ ಸರಕಾರದ ಹಣವನ್ನು ಪೋಲು ಮಾಡಲು ಇರುವ ಒಂದು ಪುಡಾರಿಗಳ ಒಕ್ಕೂಟ. ಸಾಹಿತ್ಯ ಸಮ್ಮೇಳನಗಳ ಹೆಸರಿನಲ್ಲಿ ಒಂದಿಷ್ಟು ಜನ ಒಂದಿಷ್ಟು ಕಾಸು ಮಾಡಿಕೊಳ್ಳುತ್ತಾರೆ. ದಲಿತ ಸಾಹಿತ್ಯ ಸಮ್ಮೇಳನದ ಕತೆಯೂ ಇದೇ ಆಗಿದೆ. ಕನ್ನಡ ಸಾಹಿತ್ಯ ಲೋಕಕ್ಕೊಬ್ಬ ಕೆಜ್ರೀವಾಲ್ ಬೇಕಾಗಿದೆ.

      Reply
  3. Nagshetty Shetkar

    “ಮಲ್ಲೇಪುರಂ ಜಿ. ವೆಂಕಟೇಶ್ ಅವರನ್ನು ನಾನು ಈತನಕ ಬ್ರಾಹ್ಮಣರೆಂದೇ ತಿಳಿದಿದ್ದೆ. ”

    ಮೇಲಿನ ವಾಕ್ಯದಲ್ಲಿ ಹೊಡೆದು ಕಾಣುತ್ತಿರುವ ಜಾತೀಯತೆಯನ್ನು ನೋಡಿ ಖೇದವಾಯಿತು. ಒಬ್ಬ ವ್ಯಕ್ತಿಯನ್ನು ಆತನ ವ್ಯಕ್ತಿತ್ವ ಹಾಗೂ ಸಾಧನೆಗಳ ಮೂಲಕ ನೋಡದೆ ಜಾತಿಯ ಮೂಲಕ ನೋಡುವುದು ತಪ್ಪು. ನಾನು ಮಲ್ಲೇಪುರಂ ಅವರನ್ನು ವಹಿಸಿ ಮಾತನಾಡುತ್ತಿಲ್ಲ. ಆದರೆ ಜಾತಿಯ ಆಧಾರದ ಮೇಲೆ ಅವರನ್ನು ಅಪರೋಕ್ಷವಾಗಿ ನಿಂದಿಸಿರುವುದನ್ನು ವಿರೋಧಿಸುತ್ತೇನೆ.

    Reply
  4. dr. t.n. vasudevamurthy

    ಮಾನ್ಯ ಷೆಟ್ಕರ್ ಅವರೆ,
    ನೀವು ಸಾಹಿತ್ಯ ಮತ್ತು ರಾಜಕಾರಣಗಳನ್ನು ಬೆಸೆದು ವಿಚಾರ ಮಾಡುತ್ತಿರುವಿರಲ್ಲದೆ ಕನ್ನಡ ಸಾಹಿತ್ಯ ಮತ್ತು ’ಕಸಾಪ’ಗಳನ್ನು ಅವಿನಾ ಭಾವದಿಂದ ನೋಡುತ್ತಿರುವುದರಿಂದ ಇಂತಹ ತೀರ್ಮಾನಕ್ಕೆ ಬರುತ್ತಿರಬಹುದು. ಗಾಂಧಿಯನ್ನು ನಂಬಿದ ನಮ್ಮ ರಾಜಕಾರಣ ಈಗಾಗಲೇ ದಾರಿ ತಪ್ಪಿದೆ. ಆಂತರ್ಯದಲ್ಲಿ ಒಬ್ಬ ಅಧ್ಯಾತ್ಮ ಚಿಂತಕರಾಗಿದ್ದ ಗಾಂಧಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಎಷ್ಟು ಅವೈಜ್ಞಾನಿಕವಾಗಿ ಯೋಚಿಸುತ್ತಿದ್ದರೆಂಬುದು ಈಗಾಗಲೇ ನಮಗೆ ತಿಳಿದಿದೆ. ಆದ್ದರಿಂದಲೇ ಕೇಜ್ರಿವಾಲ್‌ಗಳಂತಹವರು ಆಗಾಗ ಬಂದು ಗಾಂಧಿಯನ್ನು (ಮತ್ತು ನಮ್ಮನ್ನು) ಪದೇ ಪದೇ ಅಣಕಿಸುತ್ತಿರುವರು. ಆದರೆ ನಮ್ಮ ಸಾಹಿತ್ಯ ಕ್ಷೇತ್ರ ಅಷ್ಟೊಂದು ಬರಗೆಟ್ಟಿಲ್ಲ ಎಂದು ನಾನು ತಿಳಿದಿದ್ದೇನೆ. ನಮ್ಮ ದಲಿತರು ಸಮ್ಮೇಳನಗಳನ್ನು ಮಾಡುವ ಉತ್ಸಾಹವನ್ನು ಇನ್ನೂ ಸ್ವಲ್ಪಕಾಲ ತಡೆಹಿಡಿದು ದಲಿತರು ಯೋಚಿಸಬೇಕಾದ ಹಾದಿಗಳನ್ನು ಅನಾವರಣ ಮಾಡಿರುವ ಕುವೆಂಪು, ಬೇಂದ್ರೆ ಮತ್ತು ಕಾರಂತರನ್ನು ಮತ್ತೆ ಅನುಸಂಧಾನ ಮಾಡುವುದರಿಂದ ಇಂತಹ ಅನಗತ್ಯ ಮತ್ತು ಅನ್ಯ ಹಿತಾಸಕ್ತಿಯ ಚಟುವಟಿಕೆಗಳಿಂದ ವಿಮುಖರಾಗಬಹುದು ಅಥವಾ ಇವುಗಳಿಗೆ ಅರ್ಥಪೂರ್ಣವಾಗಿ ಪ್ರತಿಕ್ರಿಯಿಸಬಹುದು.

    Reply
  5. ಪಂಪಾಪತಿ ಗಾಳೆಮ್ಮನಗುಡಿ

    ಅಖಿಲ ಭಾರತ ದಲಿತ ಸಾಹಿತ್ಯ ಪರಿಷತ್ತಿನ ಐದನೆಯ ಸಮ್ಮೇಳನ ನಡೆದಿರುವುದು ಸಂತಸದ ಸಂಗತಿ. ಆದರೆ ಈ ಸಮ್ಮೇಳನ ಹಲವು ಕಾರಣಗಳಿಗಾಗಿ ಚರ್ಚೆಗೆ ಗ್ರಾಸವಾಗಿದೆ. ಕಾರಣ ಈ ಸಮ್ಮೇಳನಕ್ಕೆ ಮಲ್ಲೇಪುರಂ ಜಿ ವೆಂಕಟೇಶ್ ಅವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿದುದು. ಮುಖ್ಯವಾಗಿ ದಲಿತ ಸಾಹಿತ್ಯ ಸಮ್ಮೇಳನಗಳಿಗೆ “ಸರ್ವಾಧ್ಯಕ್ಷತೆ ” ಎಂಬ ಸ್ಥಾನದ ಅವಶ್ಯಕತೆ ಇದೆಯೇ? ಎಂಬುದು ಮೂಲಭೂತ ಪ್ರಶ್ನೆ. ಏಕೆಂದರೆ “ರಾಜ, ಧಣಿ, ಜಮೀಂದಾರ, ಗೌಡ , ಅಧ್ಯಕ್ಷ “ಇತ್ಯಾದಿ ಹೆಸರಿನಿಂದ ಶತಶತಮಾನಗಳಿಂದಲೂ ದಲಿತರನ್ನು ಶೋಷಿಸುತ್ತಾ ಬಂದಿರುವುದನ್ನು ನಾವು ಚರಿತ್ರೆಯಿಂದ ತಿಳಿದುಕೊಂಡಿದ್ದೇವೆ. ಹಾಗೂ ಇಂದಿಗೂ ಈ ರೀತಿಯ ಹೆಸರಿನಲ್ಲಿ ಶೋಷಣೆಗಳು ನಡೆಯುತ್ತಲೇ ಇವೆ ಕೂಡ. ಇವುಗಳು ಜಾತೀಯತೆಯನ್ನು ಗಟ್ಟಿಗೊಳಿಸುತ್ತಲೇ ಸಾಗಿವೆ ಎಂಬುದು ಸತ್ಯ. ಇವುಗಳ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿರುವ ದಲಿತ ಸಮುದಾಯ ಈ ರೀತಿಯ ಸರ್ವಾಧಿಕಾರವನ್ನು ತೋರ್ಪಡಿಸುವ ಸ್ಥಾನಗಳನ್ನು ಮತ್ತೆ ತನ್ನೊಳಗಡೆಯೇ ಸೃಷ್ಟಿಸುವುದರ ಮೂಲಕ ಸಮುದಾಯದ ಒಳಗಡೆಯೇ ಶೋಷಣೆಯ ನೆಲೆಗಳನ್ನು ಹುಟ್ಟು ಹಾಕುತ್ತಿದೆಯೇನೋ ಎಂಬ ಆತಂಕ ಕಾಡುತ್ತಿದೆ. ಇದರ ಬಗ್ಗೆ ಗಂಭೀರವಾದ ಚಿಂತನೆಯ ಅಗತ್ಯತೆ ಇದೆ ಎಂದೆನಿಸುತ್ತದೆ. ಒಂದು ವೇಳೆ ದಲಿತ ಸಮುದಾಯದ ಸಮ್ಮೇಳನಗಳಿಗೆ ಸರ್ವಾಧ್ಯಕ್ಷತೆಯ ಸ್ಥಾನ ಅಗತ್ಯತೆ ಇದೆ ಎಂದಾದರೆ ಆ ಸ್ಥಾನಕ್ಕೆ ಆಯ್ಕೆಯಾಗುವವರಿಗೆ ಇರಬೇಕಾದ ಅರ್ಹತೆಗಳು ಏನಾಗಿರಬೇಕು? ಅಥವಾ ಯಾವ ಮಾನದಂಡಗಳನ್ನಿಟ್ಟುಕೊಂಡು ಆ ಸ್ಥಾನಕ್ಕೆ ಆಯ್ಕೆ ಮಾಡಬೇಕು? ಎಂಬುದನ್ನು ಮೊದಲು ಸ್ಪಷ್ಟ ಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಈ ಐದನೆಯ ದಲಿತ ಸಾಹಿತ್ಯ ಸಮ್ಮಳನಕ್ಕೆ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡಿರುವವರು ತಮ್ಮ ಸಾಹಿತ್ಯ ವಟುವಟಿಕೆಗಳ ಪಯಣದಲ್ಲಿ ಅದು ಸಾಹಿತ್ಯದ ಮೂಲಕವಾಗಲೀ ಅಥವಾ ಚಳುವಳಿಗಳಲ್ಲಿ ಭಾಗವಹಿಸುವ ಮೂಲಕವಾಗಲೀ. ದಲಿತ ಸಮುದಾಯದ ಏಳಿಗೆಗಾಗಿ ಎಷ್ಟು ಶ್ರಮ ವಹಿಸಿದ್ದಾರೆ? ಎಂಬುದು. ಕರ್ನಾಟಕದ ದಲಿತ ಸಮುದಾಯದಲ್ಲಿ ಹಲವು ಸೂಕ್ಷ್ಮವಾಗಿ, ಗಂಭೀರವಾಗಿ ಆಲೋಚಿಸುವ ಚಿಂತಕರು, ಸಾಹಿತಿಗಳು, ಹೋರಾಟಗಾರರು ಇದ್ದಾರೆ ಅವರೆಲ್ಲರನ್ನೂ ಹೊತುಪಡಿಸಿ ದಲಿತ ಸಮುದಾಯದ ಏಳಿಗೆಗಾಗಿ ಕಿಂಚಿತ್ತೂ ಶ್ರಮಪಡದಿರುವವರನ್ನು ಅಧ್ಯಕ್ಷರನ್ನಾಗಿ ಮಾಡಿದುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನು ನಾಡಿನ ಚಿಂತಕರು ಗಂಭೀರವಾಗಿ ಚಿಂತಿಸುವ ಅಗತ್ಯತೆ ಇದೆ ಎಂದೆನಿಸುತ್ತದೆ. ಇಲ್ಲವಾದಲ್ಲಿ ಇದು ಹೀಗೇ ಮುಂದುವರೆದರೆ ಮುಂದಿನ ದಿನಮಾನಗಳಲ್ಲಿ ಇತರೆ ಸಾಹಿತ್ಯ (ಸಂ)ಮೇಳನಗಳಂತೆ ಆಗುವುದರಲ್ಲಿ ಅನುಮಾನವಿಲ್ಲ.

    Reply

Leave a Reply

Your email address will not be published. Required fields are marked *