Daily Archives: September 15, 2014

ಒತ್ತಡವೇ ಒಡನಾಟವಾದ ಬದುಕು


– ಡಾ.ಎಸ್.ಬಿ. ಜೋಗುರ


ಮನುಷ್ಯ ಮಿಕ್ಕ ಎಲ್ಲ ಪ್ರಾಣಿಗಳಿಗಿಂತಲೂ ನೆಮ್ಮದಿಯಿಂದ ಬದುಕಲೆಬೇಕು. ಯಾಕೆಂದರೆ ಸಾಂಸ್ಕೃತಿಕ ಪರಿಸರದ ಪ್ರಜ್ಞೆ ಮತ್ತು ಅದರ ರೂಪಧಾರಣೆಯ ಶಕ್ತಿ ಇದ್ದದ್ದು ಕೇವಲ ಮನುಷ್ಯನಿಗೆ ಮಾತ್ರ. ಹಾಗಿರುವಾಗಲೂ ಮನುಷ್ಯನ ಸಹವಾಸದಲ್ಲಿರುವ ಸಾಂಸ್ಕೃತಿಕ ಅಪವರ್ತನೆ ಅಪಾರವಾಗಿದೆ. ಮಾನವನ ಸಾಮಾಜಿಕ ಬದುಕಿನ ವಿಕಾಸದ ಸಂಕೀರ್ಣತೆ ಮನುಷ್ಯನನ್ನು ಮತ್ತಷ್ಟು ಸಂಘರ್ಷಗಳಲ್ಲಿ ನೂಕಲು ಕಾರಣವಾಯಿತು. ಪ್ರಾಚೀನ ಕಾಲದ ಸಾಮಾಜಿಕ ಜೀವನದಲ್ಲಿಯ ನೆಮ್ಮದಿ ಮಧ್ಯಯುಗದ ಕಾಲಕ್ಕೆ ಅದೇ ಪ್ರಮಾಣದಲ್ಲಿ ಉಳಿಯಲಿಲ್ಲ. ಆಧುನಿಕ ಸಂದರ್ಭದಲ್ಲಿ ಅದರಲ್ಲೂ ಜಾಗತೀಕರಣದ ಪ್ರಕ್ರಿಯೆಯ ಸಹವಾಸದಲ್ಲಿ ಮನುಷ್ಯ ಒಂದು ಕಮಾಡಿಟಿಗಿಂತಲೂ ಯಾವುದೇ ರೀತಿಯಿಂದ ಭಿನ್ನವಾಗಿಲ್ಲ. ಜಾಹಿರಾತಿನ ಜಗತ್ತು ಮನುಷ್ಯನನ್ನು ಡಿಸ್ಕೌಂಟ್ ಲೋಕಕ್ಕೆ ತಳ್ಳುವ ಮೂಲಕ ಅವನಲ್ಲಿ ಇನ್ನೂ ಕೊಳ್ಳಬೇಕು ಎನ್ನುವ ಹಪಾಹಪಿತನವನ್ನು ಹುಟ್ಟು ಹಾಕಿದ್ದಲ್ಲದೇ ಅದೇ ವೇಗದಲ್ಲಿ ಅವನಲ್ಲಿಯ ಸಂವೇದನೆಗಳನ್ನು ಪರೋಕ್ಷವಾಗಿ ಕೊಲ್ಲುವ ಕ್ರಿಯೆಯೂ ಆರಂಭವಾಯಿತು. ಅಂತಿಮವಾಗಿ ಆಧುನಿಕ ವಿದ್ಯಮಾನಗಳು ಮನುಷ್ಯನನ್ನು ಕಮಾಡಿಟಿಯ ಸ್ಥಾನದಲ್ಲಿ ನಿಲ್ಲಿಸಿಬಿಟ್ಟವು. ಅದರ ಪರಿಣಾಮವೇ ಮನುಷ್ಯನ ಈಗಿನ ಉದ್ವೇಗದ ಬದುಕು.

ಈ ಉದ್ವೇಗ ಎನ್ನುವುದು ಈಗಂತೂ ಎಲ್ಲ ವಯೋಮಾನದ ಸ್ತರಗಳನ್ನು ಬಾಧಿಸತೊಡಗಿದೆ. stress-1ಇಂಗ್ಲಂಡನ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯ ಆಡಿ ನಲಿಯುವ ವಯೋಮಾನದಲ್ಲಿರುವ ಯುವಕರನ್ನು ಆಧರಿಸಿ ಒಂದು ಅಧ್ಯಯನ ಕೈಗೊಂಡು, ಆ ಮೂಲಕ ಒಂದು ಮಹತ್ತರವಾದ ವರದಿಯನ್ನು ಹೊರಹಾಕಿದೆ. ಇಂದಿನ ಯುವಕರಲ್ಲಿ ಮೂರು ಗುಣಗಳು ವ್ಯಾಪಕವಾಗಿ ಕಂಡು ಬರುತ್ತಿವೆ. ಒಂದನೆಯದು ಸುಳ್ಳು ಹೇಳುವುದು, ಎರಡನೆಯದು ಕಳ್ಳತನ, ಮೂರನೆಯದು ಅವಿಧೇಯತೆಯ ಗುಣ ಎಂದು ಆ ವರದಿ ಹೇಳುತ್ತದೆ. ಕಳೆದ ತಿಂಗಳಲ್ಲಿ ನೇಚರ್ ಎಂಬ ಪತ್ರಿಕೆಯೊಂದು ಮನುಷ್ಯ ಅಪಾರ ಜನಜಂಗುಳಿಯ ನಡುವೆಯೂ ಏಕಾಂಗಿಯಾಗಿ ಬದುಕುತ್ತಿದ್ದಾನೆ ಎಂದು ಅಭಿಪ್ರಾಯ ಪಟ್ಟಿದೆ. ಆಲ್ಬರ್ಟ್ ಕಾಮು ಹೇಳಿದ್ದ ‘ಮನುಷ್ಯ ಭವಿಷ್ಯದಲ್ಲಿ ನಡುಗಡ್ದೆಯಂತೆ ಬದುಕುತ್ತಾನೆ’ ಎಂಬ ಮಾತು ಈಗ ಸತ್ಯವಾಗಿದೆ. ಮಹಾನಗರಗಳ ರಸ್ತೆಯಲ್ಲಿ ಮೈಗೆ ಮೈ ತಾಕಿಸಿ ಅಪಾರ ಜನ ದಟ್ಟಣೆಯ ನಡುವೆ ಅಲೆದರೂ ಎಲ್ಲರೂ ಆಪರಿಚಿತರಾಗಿಯೇ ಬದುಕುವ ರೀತಿ ಮಾತ್ರ ಕಟು ವಾಸ್ತವ.

ಇತ್ತೀಚಿನ ದಿನಗಳಲ್ಲಿ ಮನುಷ್ಯ ನೆಮ್ಮದಿಯನ್ನು ಕಳೆದುಕೊಂಡವನಾಗಿ ಜರ್ಜರಿತನಾಗಿದ್ದಾನೆ. ಈಚೆಗೆ ನಮ್ಮ ದೇಶದ ಐ.ಸಿ.ಎಮ್.ಆರ್ ಸಂಸ್ಥೆ ಎಂಟು ಪ್ರಮುಖ ರಾಜ್ಯಗಳನ್ನಿಟ್ಟುಕೊಂಡು stress-2ಸುಮಾರು 16607 ವ್ಯಕ್ತಿಗಳನ್ನು ಸಮೀಕ್ಷ್ಶಿಸಿ ಕಂಡುಕೊಂಡ ಸತ್ಯ ಏನೆಂದರೆ ತಮಿಳುನಾಡಿನಲ್ಲಿ ಅತಿ ಹೆಚ್ಚು ಹೈಪರ್ ಟೆನ್ಸನ್ ಇರುವ ಸ್ಥಿತಿ ಬಹಿರಂಗವಾಗಿರುವದಿದೆ. ಸುಮಾರು 27.6 ಪ್ರತಿಶತ ಜನ ಉದ್ವೇಗಕ್ಕೆ ಒಳಗಾಗಿದ್ದಾರೆ. ನಂತರ ಚಂಡಿಗಡದಲ್ಲಿ 25.8 ಪ್ರತಿಶತ, ಮಹಾರಾಷ್ಟ್ರ 25 ಪ್ರತಿಶತ. ಒಟ್ಟಾರೆಯಾಗಿ ಈ ಬಗೆಯ ತೀವ್ರ ಮಾನಸಿಕ ಒತ್ತಡ ಹೆಚ್ಚಾಗಿ ಇರುವಂತದ್ದು ನಗರ ಪ್ರದೇಶಗಳಲ್ಲಿ. ಹಾಗೆಯೇ ಮಹಿಳೆ ಮತ್ತು ಪುರುಷರನ್ನು ಹೋಲಿಕೆ ಮಾಡಿ ಮಾತನಾಡುವದಾದರೆ ಪುರುಷರಲ್ಲಿ ಆ ಪ್ರಮಾಣ ಇನ್ನಷ್ಟು ಹೆಚ್ಚಿಗಿದೆ. ಈ ಬಗೆಯ ತೀವ್ರ ಒತ್ತಡವನ್ನು ನಿಯಂತ್ರಿಸದಿದ್ದರೆ ಮೆದುಳು, ಕಣ್ಣು, ಹೃದಯದ ಮೇಲೆಯೂ ಕೆಟ್ಟ ಪರಿಣಾಮ ಉಂಟಾಗುತ್ತದೆ. ಜೊತೆಗೆ ಕಿಡ್ನಿ, ರಕ್ತನಾಳಗಳ ಮೇಲೆಯೂ ಮಾರಕ ಪರಿಣಾಮಗಳಾಗುತ್ತವೆ. ಅರ್ಥಿಕ ಬೆಳವಣಿಗೆ ಮತ್ತು ತೀವ್ರ ನಗರೀಕರಣದ ಪರಿಣಾಮವಾಗಿ ಈ ಬಗೆಯ ಒತ್ತಡ ಇಲ್ಲವೇ ಮಾನಸಿಕ ಖಿನ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮನುಷ್ಯನಿಗೆ ಎಲ್ಲ ಬಗೆಯ ಸಾಧಕ ಬಾಧಕಗಳ ಅರಿವಿರುವಾಗಲೂ ಒತ್ತಡದ ಪ್ರಮಾಣ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅನೇಕ ಬಗೆಯ ಸಮಸ್ಯೆಗಳು ಮನುಷ್ಯನನ್ನು ಮುತ್ತಿಕೊಂಡಿವೆ. ಕೆಲವು ಸಮಸ್ಯೆಗಳಿಗೆ ಸ್ವತ: ಅವನೇ ಕಾರಣನಾಗಿರುವದೂ ಇದೆ. ಆ ಬಗೆಯ ಸಮಸ್ಯೆಗಳಿಗಾದರೂ stress-3ಪರಿಹಾರ ಅವನಿಂದ ಸಾಧ್ಯವಿದೆ. ಮನುಷ್ಯ ತನ್ನಂತೆಯೇ ಇರುವ ಇನ್ನೊಬ್ಬನನ್ನು ಸಹಿಸದ ವಕ್ರ ದೃಷ್ಟಿಯನ್ನು ಬೆಳೆಸಿಕೊಳ್ಳುತ್ತಿದ್ದಾನೆ. ಓಶೊ ಒಂದು ಕಡೆ ಹೀಗೆ ಹೇಳುತ್ತಾರೆ. ಒಂದು ನಾವೆಯಲ್ಲಿ ಸಾಗುವಾತ ಎದುರು ಬದಿಯಲ್ಲಿ ಬರುವ ಇನ್ನೊಂದು ನಾವೆಗೆ ಡಿಕ್ಕಿ ಹೊಡೆಯುತ್ತಾನೆ. ತಕ್ಷಣವೇ ಎದ್ದು ಆ ನಾವೆಯಲ್ಲಿದ್ದವನಿಗೆ ಬೈಯಲು ನೋಡುತ್ತಾನೆ. ಆದರೆ ಆ ನಾವೆಯಲ್ಲಿ ಯಾರೂ ಇರುವದಿಲ್ಲ ಎನ್ನುವದನ್ನು ಗಮನಿಸಿ ಸುಮ್ಮನಾಗುತ್ತಾನೆ. ಅದೇ ಒಂದೊಮ್ಮೆ ಆ ನಾವೆಯಲ್ಲಿ ಇನ್ನೊಬ್ಬನಿದ್ದರೆ ದೊಡ್ಡ ಸಂಘರ್ಷವೇ ಜರಗುತ್ತಿತ್ತು. ಈತ ಮನುಷ್ಯನಿಲ್ಲದ ನಾವೆಯೊಂದು ಡಿಕ್ಕಿ ಹೊಡೆದರೆ ಸಹಿಸುತ್ತಾನೆ. ಆದರೆ ಮನುಷ್ಯನಿರುವ ನಾವೆಯನ್ನಲ್ಲ. ನಮ್ಮ ತೀವ್ರವಾದ ಬದುಕು, ಸಂಕೀರ್ಣ ಸಾಮಾಜಿಕ ಜೀವನ, ತೀಕ್ಶ್ಣವಾದ ಕಾರ್ಯ ವಿಧಾನ, ನಮ್ಮ ಅಪರಿಮಿತ ಬೇಡಿಕೆ ಮುಂತಾದವುಗಳು ಮನುಷ್ಯನನ್ನು ಹೀಗೆ ಹೈಪರ್ ಟೆನ್ಶನ್ ಸುಳಿಗೆ ನೂಕುತ್ತಿದೆ. ಹಾಗಾಗುವ ಮುನ್ನ ಜಾಗೃತರಾಗಿ ಒತ್ತಡಗಳಿಂದ ಹೊರಗುಳಿಯುವ ಬಗೆಯನ್ನು ಯೋಚಿಸಿ..ನೆಮ್ಮದಿಯ ಬದುಕನ್ನು ಅರಿಸಿಕೊಳ್ಳಿ.