Daily Archives: September 21, 2014

ಶಿಕ್ಷಕರಿಗೆ ಕ್ವಿಝ್: ಮಂತ್ರಿಯ ಅಧಿಕ’ಪ್ರಸಂಗ’!

– ದೀಪು, ಕುವೆಂಪು ನಗರ

ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಮ್ಮನ್ನು ಭೇಟಿ ಮಾಡಲು ಬಂದಿದ್ದ ಮೂವರು ಶಿಕ್ಷಕರನ್ನು ಕ್ವಿಝ್ ಮಾಡಿದ ಸಂಗತಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದೇ ಹಿನ್ನೆಲೆಯಲ್ಲಿ ಶನಿವಾರ ಟಿ.ವಿ9 ಸುದ್ದಿ ವಾಹಿನಿ ರಾಜ್ಯದ ನೂರಾರು ಶಿಕ್ಷಕರನ್ನು ಇದೇ ರೀತಿಯ ಕ್ವಿಝ್ ಗೆ ಒಳಪಡಿಸಿ, ಬಹುತೇಕ ಶಿಕ್ಷಕರಿಗೆ ಗಾಂಧಿ ಜನ್ಮ ದಿನ, ವಿವೇಕಾನಂದರ ಜನ್ಮದಿನ, ಅವರೀರ್ವರು ಜಗತ್ತಿಗೆ ನೀಡಿದ ಸಂದೇಶಗಳ ಬಗ್ಗೆ ಗೊತ್ತಿಲ್ಲ ಎಂದು ಸಾರಿತು. ಸುದ್ದಿವಾಹಿನಿಯ ಚರ್ಚೆಯಲ್ಲಿ ಸ್ವತಹ ಶಿಕ್ಷಣ ಸಚಿವರೂ ಭಾಗವಹಿಸಿದ್ದರು. ಪ್ರಶ್ನೆ ಕೇಳುವ ಮೂಲಕ ‘ಶಿಕ್ಷಕ ಸಮುದಾಯವನ್ನು ದೂಷಿಸುವ ಉದ್ದೇಶ ನಮ್ಮದಲ್ಲ’ ಎಂದು ಸಚಿವರು ಚರ್ಚೆಯಲ್ಲಿ ಹೇಳಿದರೂ, ಅವರು ಅಂತಿಮವಾಗಿ ಮಾಡಿದ್ದು ಅದನ್ನೇ.

ಪ್ರಶ್ನೆ ಕೇಳುವುದರಲ್ಲಿ ಎರಡು ವಿಧ. ಶಾಲೆಗಳಲ್ಲಿ ಮಕ್ಕಳು ಆಗಾಗ ಶಿಕ್ಷಕರನ್ನು ಪ್ರಶ್ನಿಸುತ್ತಾರೆ. ಆಗ teachersಅವರಿಗೆ ಶಿಕ್ಷಕರಿಂದ ಮಾಹಿತಿ ಪಡೆಯುವ ಉದ್ದೇಶ ಇರುತ್ತದೆ. ಅಂದು ಒಂದು ರೀತಿಯಾದರೆ, ಇನ್ನೊಂದು, ಉತ್ತರ ಗೊತ್ತಿದ್ದೂ ಎದುರು ಇರುವವರ ಬುದ್ಧಿಮತ್ತೆಯನ್ನು ಪರೀಕ್ಷಿಸುವ ಉದ್ದೇಶದಿಂದ ಪ್ರಶ್ನೆ ಮಾಡುವುದು ಇನ್ನೊಂದು ಬಗೆ. ಕಾಂಗ್ರೆಸ್ ಕಚೇರಿಗೆ ಸಚಿವರನ್ನು ಹುಡುಕಿಕೊಂಡು ಬಂದಿದ್ದ ಮೂವರು ಶಿಕ್ಷಕರನ್ನು ಪ್ರಶ್ನೆ ಮಾಡಿದ್ದು, ಅದೂ ಮಾಧ್ಯಮದವರ ಎದುರು, ಎರಡನೇ ಮಾದರಿಗೆ ಸೇರುತ್ತದೆ.

ಪತ್ರಿಕೆಗಳಲ್ಲಿ ವರದಿಯಾಗಿರುವಂತೆ, ಕೋಲಾರದ ಶಿಕ್ಷಕರು ಬಂದದ್ದು ಅಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಯಿಂದ ತುಂಬಾ ಕಿರುಕುಳ ಆಗುತ್ತಿದೆ ಎಂಬ ಅಹವಾಲು ಮಂಡಿಸಲು. ಅವರನ್ನು ದಯವಿಟ್ಟು ಬೇರೆಡೆಗೆ ವರ್ಗಮಾಡಿಕೊಡಿ ಎಂಬುದು ಅವರ ಬೇಡಿಕೆ. ಆ ಸಂದರ್ಭವನ್ನು ಒಮ್ಮೆ ವಿಶ್ಲೇಷಿಸೋಣ. ಶಿಕ್ಷಣ ಇಲಾಖೆಯ ತೀರಾ ಕೆಳಹಂತದ ಸಿಬ್ಬಂದಿ ಅವರು. ಬಿಇಒ, ಡಿಡಿಪಿಐ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಇಂತಹ ಶಿಕ್ಷಕರನ್ನು ನಾನಾ ರೀತಿಯಲ್ಲಿ ಷೋಷಣೆಗೆ ಒಡ್ಡುತ್ತಿರುತ್ತಾರೆ ಎನ್ನುವುದು ಗೊತ್ತಿರುವ ಸಂಗತಿ. ಇಂತಹ ಶಿಕ್ಷಕರು ಭೇಟಿ ಮಾಡಲು ಬಂದದ್ದು ತಮ್ಮ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿರುವ ಮಂತ್ರಿಯನ್ನು.

ಇಲಾಖೆಯ ಸಿಬ್ಬಂದಿಯಿಂದ ಆಗುತ್ತಿರುವ ಕಿರುಕುಳದಿಂದ ಪಾರು ಮಾಡಲು ನೆರವು ಕೋರಲು ಬಂದ ಶಿಕ್ಷಕರಿಗೆ, ಈ ಪ್ರಸಂಗದಿಂದ ತಾವೇ ದೂಷಣೆಗೆ ಒಳಗಾಗುತ್ತೇವೆ ಎಂಬ ಕಲ್ಪನೆ ಎಳ್ಳಷ್ಟೂ ಇರಲಿಕ್ಕೆ ಸಾಧ್ಯವಿಲ್ಲ. ಶಿಕ್ಷಕರು ಪ್ರಶ್ನೆಗಳಿಗೆ ಉತ್ತರ ಹೇಳದೇ ಹೋಗಿದ್ದರ ಬಗ್ಗೆ ನಂತರ ಚರ್ಚಿಸೋಣ. ಸದ್ಯ, ಶಿಕ್ಷಣ ಮಂತ್ರಿ ತನ್ನ ಕರ್ತವ್ಯ ನಿರ್ವಹಿಸಿದರೇ, ಎನ್ನುವುದು ಮುಖ್ಯ ಪ್ರಶ್ನೆ. ಆ ಶಿಕ್ಷಕರ ನೋವು, ಅನುಭವಿಸುತ್ತಿರುವ ಅವಮಾನ, ಕಿರುಕುಳ ಅದಕ್ಕೆ ಕಾರಣ ಆಗಿರುವ ಅಧಿಕಾರಿ ಸಿಬ್ಬಂದಿಗಳ ಮಾಹಿತಿ ಪಡೆದುಕೊಳ್ಳದೆ, ವರ್ಗಾವಣೆ ವಿಚಾರಕ್ಕೆ ರಜೆ ಹಾಕಿಕೊಂಡು ಇಲ್ಲಿಗೆ ಬಂದಿದೀರಾ..ಅಂತ ಕೇಳುತ್ತಾರೆ ಸಚಿವರು. ಹೌದು ಸ್ವಾಮಿ, ಅವರು ಇರುವ ಸ್ಧಳದಲ್ಲಿಯೇ ಅವರ ಸಮಸ್ಯೆಗಳನ್ನು ಕೇಳಿ ಪರಿಹರಿಸುವ ವ್ಯವಸ್ಥೆ ಇಲ್ಲದ ಕಾರಣ, ಶಿಕ್ಷಕರು ರಜೆಹಾಕಿ ಬರಬೇಕಾಯಿತು, ಅದರಲ್ಲಿ ತಪ್ಪೇನು? ಪಾಪ, ಅವರು ತಮ್ಮ ಕಷ್ಟ ಹೇಳಿಕೊಳ್ಳಲುkimmane-ratnakar ಬಂದರೆ, ಅವರನ್ನು ಪ್ರಶ್ನೆ ಕೇಳಿ ಕಿಚಾಯಿಸುತ್ತೀರಾ?

ಚಿಕ್ಕಮಕ್ಕಳಲ್ಲಿ ಒಂದು ಅಭ್ಯಾಸ ಇರುತ್ತೆ. ದೈಹಿಕವಾಗಿ ತಮಗಿಂತ ದುರ್ಬಲರಾದವರನ್ನು ಗೇಲಿ ಮಾಡುವುದು. ಅವರಿಂದ ಬೇಕೆಂದೇ ಏನನ್ನೋ ಕಸಿದುಕೊಂಡು, ಅಟ್ಟಿಸಿಕೊಂಡು ಬರುವಂತೆ ಮಾಡುವುದು. ಜೋರಾಗಿ ಓಡಲಾಗದೆ, ಪರಿತಪಿಸುವುದನ್ನು ಕಂಡು ಎಂತಹದೋ ಖುಷಿ ಅನುಭವಿಸುವ ಚಾಳಿಯದು. ಆ ಖುಷಿ ಕೆಲವೊಮ್ಮೆ ವಿಕೃತಿ ಮಟ್ಟಕ್ಕೂ ಹೋಗಬಹುದು. ಈ ಸಚಿವ-ಶಿಕ್ಷಕರ ಪ್ರಕರಣದಲ್ಲಿ ಇದೇ ತರಹದ ವರ್ತನೆಯ ನೆರಳುಗಳು ಕಾಣುತ್ತವೆ. ಗಾಂಧಿ ಹುಟ್ಟಿದ ದಿನ ಯಾವುದು, ವಿವೇಕಾನಂದರ ಹುಟ್ಟಿದ ದಿನ ಯಾವುದು? ಅನ್ ಟೊ ದ ಲಾಸ್ಟ್ ಬರೆದವರಾರು ಎಂಬ ಪ್ರಶ್ನೆಗಳನ್ನು ಸಚಿವರು ಕೇಳಿದ್ದಾರೆ. ಶಿಕ್ಷಕರು ಉತ್ತರ ಹೇಳದೆ ತಡಬಡಾಯಿಸಿದ್ದಾರೆ. ಮರೆಯಬಾರದ ಮುಖ್ಯ ಸಂಗತಿ ಎಂದರೆ ಇದೆಲ್ಲವೂ ನಡೆದದ್ದು ಮಾಧ್ಯಮದ ಕೆಮರಾಗಳು ಚಾಲ್ತಿಯಲ್ಲಿದ್ದಾಗ.

ಒಬ್ಬ ಜವಾಬ್ದಾರಿಯುತ ಸಚಿವ ಹೀಗೆ ತನ್ನ ಸಿಬ್ಬಂದಿಯ ಅಸಹಾಯಕತೆಯನ್ನು ಟಿವಿ ಕೆಮರಾಗಳ ಮುಂದೆ ಹರಾಜಿಗಿಟ್ಟಿದ್ದು ಸರಿಯೆ? ಈ ಶಿಕ್ಷಕರು ನಾಳೆ ಶಾಲೆಗೆ ಹೋದಾಗ, ಮಕ್ಕಳು ಏನೆಂದಾರು? ಪೋಷಕರ ಪ್ರತಿಕ್ರಿಯೆ ಏನಿರಬಹುದು? ಅಷ್ಟೇ ಅಲ್ಲ, ಇವರು ಯಾರ ಕಾಟದಿಂದ ಮುಕ್ತರಾಗಲು ಪ್ರಯತ್ನಿಸುತ್ತಿದ್ದರೋ, ಅವರಿಂದ ಎದುರಿಸಬಹುದಾದ ತೊಂದರೆಗಳೇನು..ಎನ್ನುವುದರ ಕನಿಷ್ಟ ಅರಿವು ಈ ಸಚಿವರಿಗೆ ಇರಬೇಕಿತ್ತಲ್ಲ? ಔಚಿತ್ಯ ಪ್ರಜ್ಞೆ ಇಲ್ಲದ ಸಚಿವರು, ಕೆಮರಾಗಳ ಮುಂದೆಯೇ, ಶಿಕ್ಷಕರ ಉತ್ತರಗಳಿಂದ ಬೇಸತ್ತು ತಲೆ ಚಚ್ಚಿಕೊಳ್ಳುತ್ತಾರೆ, ನಿಮ್ಮಿಂದ ಹುಡುಗರು ಏನು ಪಾಠ ಕಲಿಯುತ್ತಾರೋ ಎಂದು ಮೂದಲಿಸುತ್ತಾರೆ. ತನ್ನ ಶಿಕ್ಷಕರನ್ನು ಮೂದಲಿಸುವ ಮೂಲಕ ತನ್ನನ್ನು ತಾನೇ ಹೀಯಾಳಿಸಿಕೊಳ್ಳುತ್ತಿದ್ದೇನೆ ಎಂದು ಸಚಿವರು ಅರ್ಥಮಾಡಿಕೊಳ್ಳಬೇಕಿತ್ತಲ್ಲವೆ?

ಗಾಂಧಿ ಮತ್ತು ವಿವೇಕಾನಂದರ ಹುಟ್ಟಿದ ದಿನಗಳನ್ನು ತಕ್ಷಣಕ್ಕೆ ಹೇಳದೇ ಹೋದರೆ, ಅವರು ದಡ್ಡರೆಂದು ಅರ್ಥವೆ? ಕೆಲವು ಸಂದರ್ಭಗಳಲ್ಲಿ ಎಂತಹ ಸಲೀಸಾದ ಉತ್ತರವೇ ಆದರೂ, ಹೇಳಲಾಗದೇ ಹೋಗಬಹುದು. ಇಲ್ಲಿಯೂ ಅಂತಹದೇ ಪರಿಸ್ಥಿತಿ ಇತ್ತು. ಪ್ರಶ್ನೆ ಕೇಳುತ್ತಿರುವವರು ಮಂತ್ರಿ, ಸುತ್ತಲೂ ಮಾಧ್ಯಮದವರು, ಕೆಮರಾಗಳು. ಆ ಕ್ಷಣಕ್ಕೆ ಅಧೀರರಾಗಿರುತ್ತಾರೆ. ಮೇಲಾಗಿ, ತಾವು ಬಂದಿರುವ ಉದ್ದೇಶ ಈಡೇರದೆ ಇಡೀ ಸನ್ನಿವೇಶ ತಮಗೆ ಉಲ್ಟಾ ಹೊಡೆಯುತ್ತಿರುವಾಗ, ತಲೆಯಲ್ಲಿ ಒಮ್ಮೆಲೆ ನೂರೆಂಟು ಆಲೋಚನೆಗಳು ಧುಮುಕಿ, ಉತ್ತರ ಹೊಳೆಯದಂತಾಗಬಹುದು. ಕೆಮರಾಗಳನ್ನು ನೋಡಿ, ನಾಳೆ ನಮ್ಮ ಮುಖಗಳೆಲ್ಲಾ ಟಿವಿಯಲ್ಲಿ ಪ್ರಸಾರವಾಗಿ, ನಾವು ಯಾರ ವಿರುದ್ಧ ದೂರು ಕೊಡಲು ಬಂದಿದ್ದೇವೋ, ಅವರಿಗೆ ದೂರು ಕೊಡಲು ಹೋಗಿದ್ದು ನಾವೇ ಎಂಬುದು ಗೊತ್ತಾಗಿ ಏನೇನೆಲ್ಲಾ ಎದುರಿಸಬೇಕಾಗುತ್ತೋ ಎಂಬೆಲ್ಲಾ ಆಲೋಚನೆ, ಆತಂಕಗಳ ಮಧ್ಯೆ ಅವರಿಗೆ ಉತ್ತರಗಳು ಹೊಳೆಯುವುದು ಕಷ್ಟ ಆಗಿರಬಹುದು.

ಅಷ್ಟೇ ಅಲ್ಲ, ಸಚಿವರ ಮಾತಿನ ಧಾಟಿ (ಆರಂಭದಿಂದಲೇ) ತಮ್ಮನ್ನು ಭೇಟಿ ಮಾಡಲು ಬಂದ ಶಿಕ್ಷಕರು ತಪ್ಪಿತಸ್ಥರು ಎಂಬುದನ್ನು ಸಾರಿ ಹೇಳುತ್ತಿತ್ತು. ಅಪ್ಪಿ ತಪ್ಪಿ ಮೊದಲಿನ ಪ್ರಶ್ನೆಗೆ ಆತ್ಮವಿಶ್ವಾಸದಿಂದ ಉತ್ತರ ಕೊಟ್ಟಿದ್ದರೂ, ಸಚಿವರು ಸುಮ್ಮನಾಗುತ್ತಿದ್ದರು ಎಂಬ ಗ್ಯಾರಂಟಿ ಇಲ್ಲ. ಏಕೆಂದರೆ ಇವರನ್ನು ಅಸಮರ್ಥರೆಂದು ತೋರಿಸುವುದೇ ತಮ್ಮ ಉದ್ದೇಶವೆಂಬಂತೆ ಅವರು ವರ್ತಿಸುತ್ತಿದ್ದರು. ಗಾಂದಿ ಜಯಂತಿಯನ್ನು ಸರಿಯಾಗಿ ಹೇಳಿಬಿಟ್ಟಿದ್ದರೆ, ನಂತರ ಎಲ್ಲರೂ ಸಾಲಾಗಿ ನಿಂತು ತಪ್ಪಿಲ್ಲದೆ, ಜನಗಣ ಮನ ಹಾಡಿ ನೋಡೋಣ ಎನ್ನುತ್ತಿದ್ದರೇನೋ.

ಪ್ರಶ್ನೆಗಳನ್ನು ಕೇಳುವ ಮೂಲಕ ಎಂಥವರನ್ನೂ ಇಕ್ಕಟ್ಟಿಗೆ ಸಿಲುಕಿಸುವುದು ಸುಲಭ. ಇದೇ ಮಂತ್ರಿಗಳನ್ನು ಕೇಳಬಹುದು, “ದೇಶದ ಮೊದಲ ಶಿಕ್ಷಣ ಮಂತ್ರಿ ಯಾರು ಗೊತ್ತೇನ್ರಿ..?”, “ಕೊಠಾರಿ ಕಮೀಷನ್ ಯಾವಾಗ ನೇಮಕ ಆಯ್ತು, ಅದು ಯಾವಾಗ ವರದಿ ಕೊಟ್ಟಿತು, ಅದರ ಪ್ರಮುಖ ಸಲಹೆಗಳೇನು”.. ಹೀಗೆ ಈ ಮಂತ್ರಿಯವರು ಉತ್ತರ ಹೇಳಲಾಗದ ಪ್ರಶ್ನೆ ಹುಡುಕಿ ಕೇಳುವುದು ಕಷ್ಟವೇನಲ್ಲ. ಟಿವಿ9 ಸಿಬ್ಬಂದಿ ಶಾಲೆಗಳಿಗೆ ಹೋಗಿ ಶಿಕ್ಷಕರನ್ನು ಪ್ರಶ್ನೆ ಕೇಳಿತ್ತಲ್ಲ, ಅದೇ ಶಿಕ್ಷಕರು “ರೀ ನಮ್ಮನ್ನು ಕೇಳೋಕೆ ಬಂದಿದಿರಲ್ಲ, ಪ್ರಪಂಚದಲ್ಲಿ ಮೊದಲು ಪತ್ರಿಕೆ ಹುಟ್ಟಿದ್ದು ಎಲ್ಲಿ ಗೊತ್ತಾ? ಜೋಸೆಫ್ ಪುಲಿಟ್ಜರ್ ಯಾರು ಗೊತ್ತಾ? ಅವನ ಸಾಧನೆ ಗೊತ್ತಾ? ವಾಟರ್ ಗೇಟ್ ಹಗರಣದ ಬಗ್ಗೆ ಸ್ವಲ್ಪ ಹೇಳಿ ನೋಡೋಣ. ಹೋಗಲಿ All the President’s Men ಸಿನಿಮಾ ಗೊತ್ತಾ?.” – ಎಂದೆಲ್ಲಾ ಕೇಳಿ ಇಕ್ಕಟ್ಟಿಗೆ ಸಿಲುಕಿಸಬಹುದಿತ್ತು.

ಅರ್ಥಾತ್, ಪ್ರಶ್ನೆಗಳನ್ನು ಕೇಳುವ ಮೂಲಕ ಎಂತಹವರನ್ನೂ ಇಕ್ಕಟ್ಟಿಗೆ ಸಿಲುಕಿಸಬಹುದು. ಉತ್ತರ ಗೊತ್ತಿಲ್ಲದವರನ್ನು ತೀವ್ರ ಹಳಹಳಿಕೆಗೆ ದೂಡುವುದು, ಅವಮಾನ ಮಾಡುವುದು ಸಲೀಸು. ಇದು ಸ್ವಲ್ಪ ಹೆಚ್ಚು ತಿಳಿದುಕೊಂಡವರು, ಕಡಿಮೆ ತಿಳಿದುಕೊಂಡವರ ಮೇಲೆ ನಡೆಸುವ ದಬ್ಬಾಳಿಕೆ, ಶೋಷಣೆ ಅಷ್ಟೆ. ಉತ್ತರ ಹೇಳದ ಶಿಕ್ಷಕರನ್ನು ಟಿವಿ ಕೆಮರಾಗಳ ಮುಂದೆ exhibit ಮಾಡಿ ಅವರನ್ನು ನಾಲಾಯಕ್ (ಶಿಕ್ಷಣ ಮಂತ್ರಿಯವರೇ ಬಳಸಿದ ಪದ) ಎಂದು ಘೋಷಿಸುವ ಮನಸ್ಥಿತಿಯ ಹಿತ್ತಲಿನಲ್ಲಿ ಜಾತಿ, ಹಣ, ಅಕ್ಷರ ಜ್ಞಾನದಿಂದ ವಂಚಿತರಾದವರನ್ನು ನೂರಾರು ವರ್ಷಗಳ ಕಾಲ ನಿಕೃಷ್ಟವಾಗಿ ಕಂಡ ಬಹುಜನ ವಿರೋಧಿ ಆಲೋಚನೆಯ ಪಳೆಯುಳಿಕೆಗಳಿವೆ.

ಹುಟ್ಟಿದ ಜಾತಿಯ ಕಾರಣಕ್ಕೋ, ಬಡತನದ ಕಾರಣಕ್ಕೋ ಉತ್ತಮ ವಿದ್ಯಾಭ್ಯಾಸದಿಂದ ವಂಚಿತರಾದವರು ಆಗಾಗ ಇಂತಹ ಅವಮಾನಗಳನ್ನು ಅನುಭವಿಸಿರುತ್ತಾರೆ. ಚಿಕ್ಕಂದಿನಿಂದ ಕನ್ನಡ ಶಾಲೆಯಲ್ಲಿ ಓದಿದವರು ಒಮ್ಮೆಲೆ ಪದವಿ ಹಂತಕ್ಕೆ ಇಂಗ್ಲಿಷ್ ಓದಬೇಕಾಗಿ ಬಂದಾಗ, ತೀವ್ರ ಕಷ್ಟ ಪಡುತ್ತಿರುತ್ತಾರೆ. ಆದರೆ ಮೊದಲಿನಿಂದಲೂ ಇಂಗ್ಲಿಷ್ ಮಾಧ್ಯಮದಲ್ಲಿಯೇ ಓದಿ ಬಂದವರ ಮುಂದೆ ಅವರು ಎರಡನೇ ದರ್ಜೆಯ ವಿದ್ಯಾರ್ಥಿಗಳಂತೆ ಕಾಣುತ್ತಾರೆ. ಪಾಠಮಾಡುವ ಕೆಲ ಶಿಕ್ಷಕರೂ ಇದೇ ಭಾವನೆಗಳನ್ನು ಪೋಷಿಸಿದರೆ, ಅವರು ಮತ್ತಷ್ಟು ಅವಮಾನಕ್ಕೀಡಾಗಿ ದಿನ ನೂಕುತ್ತಿರುತ್ತಾರೆ. ಅಂತಹ ಅವಮಾನಗಳನ್ನು ಅನುಭವಿಸಿದವರಿಗೆ ಮಾತ್ರ ಈ ಶಿಕ್ಷಕ-ಮಂತ್ರಿ ಪ್ರಶ್ನೋತ್ತರ ಘಟನೆಯನ್ನು ಬೇರೊಂದು ಕೋನದಿಂದ ನೋಡಲು ಸಾಧ್ಯ.

ಕಿಮ್ಮನೆ ರತ್ನಾಕರ ಅವರು ಇಂತಹದೊಂದು ಕ್ವಿಝ್ ಕಾರ್ಯಕ್ರಮ ನಡೆಸುವುದರ ಮೂಲಕ ಸಾಧಿಸಿದ್ದೇನೆಂದರೆ, ಇನ್ನು ಮುಂದೆ ಶಿಕ್ಷಕರು ಅವರನ್ನು ಭೇಟಿ ಮಾಡಲು ಹಿಂಜರಿಯುತ್ತಾರೆ. “ಯಾಕೆ ಬೇಕು ಗುರು, ಸುಮ್ನೆ ಏನೇನೋ ಪ್ರಶ್ನೆ ಕೇಳಿ ಅವಮಾನ ಮಾಡ್ತಾರೆ, ಅವರ ತಂಟೆಯೇಕೆ” ಎಂದುಕೊಂಡು ಶಿಕ್ಷಕರು ಸಾಧ್ಯವಾದಷ್ಟು ಅವರಿಂದ ದೂರ ಇರಲು ಬಯಸಬಹುದು. ನಿಜಕ್ಕೂ ವಿಪರ್ಯಾಸ ಎಂದರೆ, ಟಿವಿಯವರು ಕೆಮರಾ ಹಿಡಿದು ಪ್ರಶ್ನೆ ಕೇಳಲು ಹೋದಾಗ, “ರೀ..ನೀವೇನು ವಿಷಯ ಪರಿವೀಕ್ಷಕರಾ (subject inspector), ನಮ್ಮ ಅಧಿಕಾರಿನಾ..ಪ್ರಶ್ನೆ ಕೇಳೋಕೆ. ನಮ್ಮ ಬುದ್ಧಿಮತ್ತೆ ಪರೀಕ್ಷೆ ಮಾಡೋಕೆ ನೀವ್ಯಾರು..?” – ಎಂದು ಯಾವ ಶಿಕ್ಷಕರೂ ಹೇಳಲಿಲ್ಲವೇ? ನಮ್ಮ ಶಿಕ್ಷಕರು ಮುಖ್ಯವಾಗಿ ಬೆಳೆಸಿಕೊಳ್ಳಬೇಕಾಗಿರುವುದು ತಮ್ಮ ವೃತ್ತಿಗಿರುವ ಘನತೆಯನ್ನು. ಆ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಆದರೆ ಸಂಬಂಧ ಪಟ್ಟ ಮಂತ್ರಿಯೇ ಹೀಗೆ ವರ್ತಿಸಿದಾಗ, ಅದು ಕಷ್ಟವಾಗುವುದು ಸಹಜ.

ಹಿಂದೊಮ್ಮೆ ಸುವರ್ಣ ಸುದ್ದಿ ವಾಹಿನಿಯವರು ನಮ್ಮ ಮಂತ್ರಿಗಳ ಚಾಲಕರಾಗಿರುವವರ ಬಳಿ ಎಷ್ಟು ಮಂದಿ ಚಾಲನಾ ಪರವಾನಗಿ ಪಡೆದಿದ್ದಾರೆ ಎಂದು ಒಂದು ರಿಯಾಲಿಟಿ ಚೆಕ್ ಮಾಡಲು ಹೋಗಿದ್ದರು. ಆಗ ರೋಶನ್ ಬೇಗ್ ವಾಹನ ತಡೆದು ನಿಲ್ಲಿಸಿ, ದಾಖಲೆಗಳನ್ನು ಕೇಳಿದಾಗ, ಬೇಗ್ ಅವರು, “ದಾಖಲೆ ಕೇಳೋಕೆ ನೀವೇನು ಸಾರಿಗೆ ಇಲಾಖೆಯವರಾ..ಸುಮ್ಮನೆ ಹೋಗ್ರೀ..”ಎಂದು ಸಾಗಹಾಕಿದ್ದರು. ಶಿಕ್ಷಕರು ಅದನ್ನೇ ಮಾಡಬೇಕಿತ್ತು.

ಸಾಮಾಜೀಕರಣಗೊಳ್ಳದ ಲೈಂಗಿಕತೆಯ ಸವಾಲು


– ರೂಪ ಹಾಸನ


 

ನಮ್ಮ ಜೀವವಿಕಸನ ಪ್ರಕ್ರಿಯೆಯಲ್ಲಿ ಎಷ್ಟೋ Stages in human evolutionಶತಮಾನಗಳ ಕಾಲ ಹೆಣ್ಣು- ಗಂಡುಜೀವಿಗಳ ಪ್ರತ್ಯೇಕತೆಯಿಲ್ಲದೆ ಒಂದೇ ಜೀವಿಯಿಂದಲೇ ಸಂತಾನೋತ್ಪತ್ತಿ ಮತ್ತು ವಂಶಾಭಿವೃದ್ಧಿ ನಡೆಯುತ್ತಿತ್ತಂತೆ. ಆದರೆ ಆಗ ಒಂದೇ ಬಗೆಯ ವರ್ಣತಂತು[ಜೀನ್]ಗಳಿರುವ ಜೀವಿಗಳು ಉತ್ಪತ್ತಿಯಾಗಿ, ಅವುಗಳ ಆರೋಗ್ಯದ ಗುಣಮಟ್ಟ, ಬದುಕುವ ಸಾಮರ್ಥ್ಯ ಅಷ್ಟಾಗಿ ಇರಲಿಲ್ಲವಾದ ಕಾರಣವಾಗಿ ಎಷ್ಟೋ ಕಾಲದ ನಂತರ ಈ ಕೊರತೆಯನ್ನು ತುಂಬಲು ಜೀವವಿಕಸನದ ಹಾದಿಯ ಮಧ್ಯದಲ್ಲಿ ಹೆಣ್ಣು-ಗಂಡುಜೀವಿಗಳ ಸೃಷ್ಟಿಯಾಯಿತು, ಲೈಂಗಿಕ ಕ್ರಿಯೆಯ ಮೂಲಕ ಹುಟ್ಟುವ ಜೀವಿಗಳ ವೈವಿಧ್ಯತೆ ಮತ್ತು ಆಯಸ್ಸು ಹೆಚ್ಚಿತು. ಆದರೆ ಇಂದು ಅದರ ಜೊತೆಗೇ ಕಾಮವು ಜಟಿಲಗೊಳ್ಳುತ್ತಾ ಹೋಗಿ ವಿಕೃತ ರೂಪವನ್ನು ಪಡೆದು ಕ್ರೂರವಾಗಿ ನಮ್ಮ ಸುತ್ತ ಕುಣಿಯುತ್ತಿದೆ.

ಇಂದು ಜಗತ್ತಿನ ಮೂರನೇ ಅತಿ ಹೆಚ್ಚಿನ ಲಾಭದಾಯಕ ಉದ್ದಿಮೆ ಸೆಕ್ಸೋದ್ಯಮವಾಗಿದೆ. ಜೊತೆಗೆ ವಿಸ್ತ್ರತವೂ, ಕಡಿವಾಣವಿಲ್ಲದ್ದೂ ಆದ ಹೆಣ್ಣುಮಕ್ಕಳ ಮಾರಾಟ ಜಾಲ, sex-sellsಹೆಣ್ಣುಮಕ್ಕಳ ಮೇಲಿನ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು, ಹದಿಹರೆಯದವರ ಮುಕ್ತಕಾಮ ತಂದೊಡ್ಡುತ್ತಿರುವ ಆಧುನಿಕ ಸಾಮಾಜಿಕ ಸಮಸ್ಯೆಗಳು, ಅನೈತಿಕ ಸಂಬಂಧಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳ ಹೆಚ್ಚಳ, ಎಗ್ಗಿಲ್ಲದೇ ನಡೆಯುತ್ತಿರುವ ಅವಿವಾಹಿತ ಹೆಣ್ಣುಮಕ್ಕಳ ಗರ್ಭಪಾತಗಳು, ಅತಿ ಹೆಚ್ಚು ಮಾರಾಟವಾಗುತ್ತಿರುವ ಸಂತಾನನಿರೋಧಕ ಸಾಮಗ್ರಿಗಳು, ಹೆಚ್ಚುತ್ತಿರುವ ಹೆಚ್ಐವಿ, ಏಡ್ಸ್, ಗನ್ಹೋರಿಯಾ ಮುಂತಾದ ಭೀಕರ ಲೈಂಗಿಕ ಗುಪ್ತರೋಗಗಳು……. ಹೀಗೆ ಸೆಕ್ಸ್ ಕೇಂದ್ರೀಕರಿಸಿರುವ ಸಾಮಾಜಿಕ ಸಮಸ್ಯೆಗಳ ಸಾಗರವೇ ಎದುರಾಗಿ ಸಮಾಜ ಆತಂಕದಲ್ಲಿ ತಲ್ಲಣಿಸುವಂತಾಗಿದೆ.

ನಮ್ಮ ಇಂದಿನ ಭಾರತದಲ್ಲಿಯಷ್ಟೇ ಅಲ್ಲ ವಿಶ್ವದ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೂ ಲೈಂಗಿಕತೆಯ ವೈಪರೀತ್ಯದಿಂದ ಉಂಟಾಗುತ್ತಿರುವ ವಿಕೃತ ಪ್ರಕರಣಗಳು ಹೆಚ್ಚಾಗುತ್ತಿರುವುದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಇವು ಹಿಂದೆಯೂ ಇತ್ತು. ಈಗ ಕಾನೂನಿನ ಅರಿವು ಹೆಚ್ಚಾಗಿ, ದಾಖಲಾಗುವ ಪ್ರಮಾಣ ಜಾಸ್ತಿಯಾಗಿದೆಯಷ್ಟೇ ಎಂಬುದೊಂದು ಮಾತೂ, ‘ಇವೆಲ್ಲ ಇಲ್ಲಿ ಅತ್ಯಂತ ಸಹಜ’ ಎಂಬ ದನಿಯಲ್ಲಿ ಕೇಳಿಬರುತ್ತಿರುತ್ತದೆ. ಹಿಂದೆಯೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದುದು ನಿಜ. ಹಾಗೇ ಇಂದು ಅವುಗಳು ದಾಖಲಾಗುತ್ತಿರುವ ಪ್ರಮಾಣ ಹೆಚ್ಚಾಗಿರುವುದರ ಜೊತೆಗೆ ಅವು ಘಟಿಸುತ್ತಿರುವ ಪ್ರಮಾಣ ಹೆಚ್ಚಾಗಿರುವುದೂ ಅಷ್ಟೇ ನಿಜ.

ಜಾಗತೀಕರಣವೆಂಬ ಮಾರುಕಟ್ಟೆ ಕೇಂದ್ರಿತ ಅಭಿವೃದ್ಧಿ ಹೆಸರಿನ ಬಿರುಗಾಳಿ ಹೆಣ್ಣಿನ ದೇಹವನ್ನು ಸರಕಾಗಿ ವಿಜೃಂಭಿಸುವ ಜೊತೆಗೆ ಲೈಂಗಿಕತೆಯನ್ನು ವಿಕೃತವಾಗಿ ಪ್ರಚೋದಿಸಲಾರಂಭಿಸಿದ ಈ ಎರಡು-ಮೂರು ದಶಕಗಳಿಂದ ಸಭ್ಯತೆಯ ಹೆಸರಿನೊಳಗೆ ಸಾಮಾಜಿಕ ಚೌಕಟ್ಟಿನಲ್ಲಿದ್ದ ಲೈಂಗಿಕತೆ ಲಂಗುಲಗಾಮಿಲ್ಲದಂತಾಗಿದೆ. ಅದರಲ್ಲೂ ಕೆಲ ದೃಶ್ಯ ಮಾಧ್ಯಮದ ವಿಕೃತ ಛಾನೆಲ್ಲುಗಳು, ಅಂಕೆಯಿಲ್ಲದ ಅಶ್ಲೀಲ ವೆಬ್ಸೈಟ್ ಗಳು, ಸಿನಿಮಾ, ಲೈವ್ ಶೋಗಳು, ಯಾರು ಯಾವಾಗ ಬೇಕಾದರೂ ಎಲ್ಲೆಂದರಲ್ಲಿ ಇವುಗಳನ್ನು ನೋಡಬಲ್ಲ ಸಾಧ್ಯತೆಗಳಿರುವ ಮೊಬೈಲ್ ಗಳು ಕೀಳು ಅಭಿರುಚಿಯನ್ನು ನಿರ್ಮಾಣ ಮಾಡುತ್ತಾ ವೇಗದ ವಿಕೃತ ಸಾಮಾಜಿಕ ಬೆಳವಣಿಗೆಯಾಗಿ ನಮ್ಮನ್ನು ಅಪ್ಪಳಿಸುತ್ತಿದೆ.

ಇದಕ್ಕೆ ಕಾನೂನನ್ನು ಬಲಗೊಳಿಸುವುದು, ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದು, ಹೆಣ್ಣುಮಕ್ಕಳ ಚಲನಶೀಲತೆಯನ್ನು ನಿರ್ಬಂಧಿಸುವುದು, ಅವರಿಗೆ ಕರಾಟೆ ಕಲಿಸುವುದು, ವಸ್ತ್ರಸಂಹಿತೆ ಅಳವಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರ ಅಳವಡಿಸುವುದು, ಎಲ್ಲರನ್ನೂ ಅನುಮಾನದಿಂದ ನೋಡುವಂತೆ ತರಬೇತಿ ನೀಡುವುದು, ಹೆಣ್ಣುಮಕ್ಕಳ ರಕ್ಷಣೆಗಾಗಿ ಹಳ್ಳಿಹಳ್ಳಿಗಳಲ್ಲಿ ಕಾವಲುಪಡೆಗಳನ್ನು ನಿರ್ಮಿಸುವುದು…ಇವೆಲ್ಲವೂ ಹೊರ ರೂಪದ ತಕ್ಷಣದ ರಕ್ಷಣಾ ಸಿದ್ಧತೆಗಳಷ್ಟೇ. ಇದರಿಂದ ಸಮಸ್ಯೆಗೆ ಮೂಲರೂಪದ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿಲ್ಲವೆನಿಸುತ್ತದೆ.

ನಿದ್ದೆ, ಹಸಿವು, ಮೈಥುನಗಳು ಮನುಷ್ಯನ ಮೂಲಭೂತವಾದ ಸಹಜ ಪ್ರವೃತ್ತಿಗಳು. ಆದರೆ ಇವುಗಳನ್ನು ಶಿಸ್ತುಬದ್ಧವಾದ ನಾಗರೀಕ ಪ್ರಪಂಚದsex-ratio ಸಾಮಾಜೀಕರಣಕ್ಕೆ ಬೇಕೆಂದಂತೆ ಹಂತ ಹಂತವಾಗಿ ಪಳಗಿಸುತ್ತಾ ಹೋಗುತ್ತೇವೆ. ಉದಾಹರಣೆಗೆ ಆಗಷ್ಟೇ ಜನಿಸಿರುವ ಮಗುವೊಂದು ಹೊಟ್ಟೆ ಹಸಿವಾದಾಗ ಹಾಲು ಬೇಕೆಂದು ಹಠ ಹಿಡಿಯುತ್ತದೆ. ಅದಕ್ಕೆ ಅಮ್ಮ ಯಾವ ಸ್ಥಿತಿಯಲ್ಲಿದ್ದಾಳೆ? ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? ಒಂದೂ ಬೇಕಿಲ್ಲ. ಒಟ್ಟಿನಲ್ಲಿ ಅದಕ್ಕೆ ಹಾಲು ಬೇಕಷ್ಟೇ! ಅದನ್ನು ಅಮ್ಮನೇ ಕೊಡಬೇಕೆಂದೂ ಇಲ್ಲ! ಆದರೆ ದಿನ ಕಳೆದಂತೆ ನಿಧಾನಕ್ಕೆ ನಾವದಕ್ಕೆ ಹೊಟ್ಟೆ ತುಂಬಿಸುವುದಕ್ಕೆ ಒಂದು ಸಮಯಸೂಚಿಯನ್ನು ಸಿದ್ಧ ಮಾಡಿ ಅದರಂತೆ ಉಣಿಸುತ್ತಾ ಹೊಗುತ್ತೇವೆ. ಹಸಿವಾದಾಗಲೆಲ್ಲಾ ತಿನ್ನುವುದನ್ನು ಪಳಗಿಸಿ ನಿಗದಿತ ಸಮಯಕ್ಕೆ ಸರಿಯಾಗಿ ತಿನ್ನುವ ಸಾಮಾಜೀಕರಣಕ್ಕೆ ಒಳಪಡಿಸುತ್ತೇವೆ. ನಿದ್ದೆಗೂ ಇದೇ ತತ್ವ ಅಳವಡಿಕೆಯಾಗುತ್ತದೆ. ಆದರೆ ಉಣ್ಣುವ ಸಮಯವಲ್ಲದಿದ್ದಾಗಲೂ ವಿಧವಿಧದ ಭಕ್ಷ್ಯಗಳನ್ನು ಕಂಡಾಗ ನಾಲಿಗೆ ನೀರೂರುವ ಸಾಧ್ಯತೆಯಿರುತ್ತದೆ. ಹಸಿವು ಕೆರಳುತ್ತದೆ! ನಿದ್ದೆಗೆಂದೇ ನಿಯಮಿತ ಸಮಯವನ್ನು ರೂಢಿಸಿಕೊಂಡಿದ್ದಾಗಲೂ, ಅ ವೇಳೆಯಲ್ಲೂ ಅನುಕೂಲಕರ ಸಂದರ್ಭ, ಸುಖಮಯವಾದ ವಾತಾವರಣ ಸಿಕ್ಕರೆ ನಿದ್ದೆ ಓಡಿ ಬಂದು ಅಪ್ಪುತ್ತದೆ! ಅಂದರೆ ಇವುಗಳನ್ನು ಎಷ್ಟೇ ಪಳಗಿಸಿಟ್ಟುಕೊಂಡಿದ್ದರೂ ಸುಪ್ತಪ್ರಜ್ಞೆಯಲ್ಲಿ ಹೊಂಚು ಹಾಕುತ್ತಿದ್ದು ಸಮಯ, ಸಂದರ್ಭ, ಪರಿಸರ, ಪ್ರಚೋದನೆಗಳು ಸಿಕ್ಕಾಗ ಸಾಮಾಜೀಕರಣದ ಚೌಕಟ್ಟುಗಳನ್ನು ಮೀರಿ ಕಾಣಿಸಿಕೊಂಡುಬಿಡುತ್ತವೆ! ಅವುಗಳನ್ನು ಪ್ರಯತ್ನಪೂರ್ವಕವಾಗಿ ಗೆಲ್ಲುವ ಅನಿವಾರ್ಯತೆ ನಮಗಿರುತ್ತದೆ. ಆದರೆ ನಿದ್ದೆ, ಹಸಿವುಗಳೆರಡೂ ವ್ಯಕ್ತಿಯ ವೈಯಕ್ತಿಕ ನೆಲೆಯ ಪೂರೈಕೆಗಳಾದ್ದರಿಂದ ಅದರಿಂದ ಅಪರಾಧಗಳಾಗುವಂಥಹ ತೀವ್ರತೆರನಾದ ತೊಂದರೆಯೇನೂ ಸಮಾಜಕ್ಕಿಲ್ಲ.

ಆದರೆ ಕಾಮದ ತೃಪ್ತಿಯ ಸಾಂಗತ್ಯಕ್ಕೆ ಇನ್ನೊಂದು ವ್ಯಕ್ತಿಯ ಅವಶ್ಯಕತೆ ಇರುವುದರಿಂದ ಇಲ್ಲಿ ಆ ವ್ಯಕ್ತಿಯ ಇಷ್ಟ-ಒಪ್ಪಿಗೆಯ ಜೊತೆಗೆ, ಸಮಾಜದ ಆಯಾಕಾಲದ ನೈತಿಕತೆಯ ಮಿತಿಗಳಿಗೆ ಹಾಗೂ ಕಾನೂನಿನ ಕಟ್ಟುಪಾಡುಗಳಿಗೆ ಒಳಪಡುವುದು ಅನಿವಾರ್ಯವಾಗಿರುತ್ತದೆ. ಜೊತೆಗೆ ಮನುಷ್ಯರಲ್ಲಿ ಲೈಂಗಿಕ ಕ್ರಿಯೆ ಪ್ರಾಣಿಗಳಲ್ಲಿ ನಡೆಯುವಂತೆ ಕೇವಲ ಸಂತಾನಾಭಿವೃದ್ಧಿಗಾಗಿ ಮಾತ್ರ ನಡೆಯುವುದಲ್ಲ. ಇದು ದೇಹಗಳ ನಡುವೆ ನಡೆಯುವ ಯಾಂತ್ರಿಕ ಕ್ರಿಯೆಯೂ ಅಲ್ಲ. ಎರಡು ಮನಸುಗಳ ಪ್ರೀತಿಯ ಸಂಬಂಧದ ಮಿಲನವೂ ಆಗಿರುವುದರಿಂದ ಪರಸ್ಪರ ಘಾಸಿಯಾಗದಂತೆ, ಇದನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಸಂವೇದನಾಶೀಲವಾಗಿ ನಿರ್ವಹಿಸುವ ಕಲೆಗಾರಿಕೆಯನ್ನೂ ಭಾವನಾತ್ಮಕ ನೆಲೆಯಲ್ಲಿ ಅರಿತುಕೊಳ್ಳುವುದು ಅಥವಾ ರೂಢಿಸಿಕೊಳ್ಳುವುದೂ ಅವಶ್ಯಕ.

ಆದರೆ ಲೈಂಗಿಕತೆ ಹಾಗೂ ಪ್ರೀತಿಯ ಕುರಿತಾದ ನಮ್ಮ ಸಮಾಜದ ಮಡಿವಂತಿಕೆಯ ದೃಷ್ಟಿಕೋನದಿಂದಾಗಿ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಕಲಿಕೆಯನ್ನುsex-ed ಅಥವಾ ಅದನ್ನು ಪಳಗಿಸಲು ಬೇಕಾದ ತಿಳಿವಳಿಕೆ ನೀಡುವ ಕೆಲಸಗಳು ನಮ್ಮಲ್ಲಿ ಆಗುತ್ತಿರುವುದು ಅತ್ಯಂತ ಕಡಿಮೆ. ಈ ಕುರಿತು ನಮ್ಮ ಸಮಾಜದಲ್ಲಿ ಮುಕ್ತವಾಗಿ ಮಾತನಾಡುವುದೇ ಅಪರಾಧವೆನ್ನುವಂತೆ ಪರಿಗಣಿಸಲ್ಪಟ್ಟಿರುವಾಗ, ಮಗುವಿನ ಜನನದೊಂದಿಗೇ ಹುಟ್ಟುವ ಲೈಂಗಿಕತೆಯನ್ನು ಅದೊಂದು ಚರ್ಚಿಸಬಾರದ ಅಸಹ್ಯ ವಿಷಯವೆಂದು ಭಾವಿಸಿ ಮಕ್ಕಳಿಗೆ ಆ ಕುರಿತು ಏನನ್ನೂ ತಿಳುವಳಿಕೆ ನೀಡದೆ, ತನ್ನ ದೇಹದ ಲೈಂಗಿಕ ಅಂಗಾಂಗಗಳು, ಅದರ ನಿರ್ವಹಣೆ, ಬೆಳವಣಿಗೆ, ಕಾಮದ ಉದ್ದೇಶ, ಅದರ ನೈತಿಕ ಜವಾಬ್ದಾರಿಯ ಬಗೆಗೆ ಮಕ್ಕಳಿಗೆ ತಿಳಿಹೇಳದೇ ಉಳಿಯುವ ಪೋಷಕರೇ ಹೆಚ್ಚು. ಅದರಲ್ಲೂ ಹದಿಹರೆಯದಲ್ಲಿ ಲೈಂಗಿಕ ಆಕರ್ಷಣೆಗಳು ಅತ್ಯಂತ ಸಹಜವಾದುದೆಂಬುದನ್ನು ತಿಳಿಹೇಳುತ್ತಲೇ ಅದನ್ನು ಆರೋಗ್ಯಕರವಾಗಿ ನಿರ್ವಹಿಸುವ ಕುರಿತೂ ಇಂದು ಕಡ್ಡಾಯವಾಗಿ ಅರಿವು ಮೂಡಿಸುತ್ತಲೇ ಮಕ್ಕಳನ್ನು ಬೆಳೆಸುವ ಅನಿವಾರ್ಯತೆ ಇದೆ.

ಲೈಂಗಿಕ ಅಪರಾಧಗಳಲ್ಲಿ ತೊಡಗುತ್ತಿರುವ ಅಪ್ರಾಪ್ತರ ಸಂಖ್ಯೆ ಇಂದು ದಿಗಿಲು ಹುಟ್ಟಿಸುವಷ್ಟು ಏರಿದೆ. ಅವರ ಶಿಕ್ಷೆಗೆ ವಯಸ್ಸನ್ನು 18ರಿಂದ 16ಕ್ಕೆ ಇಳಿಸುವ ಕುರಿತೂ ಗಂಭೀರ ProtectingChildrenfromSexTraffickingಚರ್ಚೆಳಾಗುತ್ತಿವೆ. ಆದರೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಅಪರಾಧಿಗಳಾಗಿ ಬಂಧಿಗಳಾಗಿರುವ ಹಲವು ಅಪ್ರಾಪ್ತರೊಡನೆ ನಾನು ಆಪ್ತಸಮಾಲೋಚನೆ ನಡೆಸುವ ಸಂದರ್ಭದಲ್ಲಿ ಹೆಚ್ಚಿನವರು ಅಶ್ಲೀಲ ನೀಲಿ ಚಿತ್ರಗಳನ್ನು ನೋಡಿ ಪ್ರಚೋದನೆ ಪಡೆದಿದ್ದನ್ನು ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವರು ಹಿರಿಯ ಗೆಳೆಯರ ಕುಮ್ಮಕ್ಕಿನಿಂದ, ಸಂದರ್ಭದ ಅನುಕೂಲ ಪಡೆದು ಅತ್ಯಾಚಾರದಲ್ಲಿ ಭಾಗಿಗಳಾಗಿರುವುದು ಕಂಡುಬರುತ್ತದೆ. ಮೂಲತಃ ಪ್ರಾಣಿವರ್ಗಕ್ಕೆ ಸೇರಿದ ಮನುಷ್ಯ ತನ್ನ ಲೈಂಗಿಕ ಕಾಮನೆಗಳನ್ನು ಸಾಮಾಜಿಕ ಶಿಸ್ತಿಗಾಗಿ ಹತ್ತಿಕ್ಕಿದ್ದರೂ ಸುಪ್ತಪ್ರಜ್ಞೆಯ ಆಳದಲ್ಲಿ ಎಲ್ಲೋ ಅಡಗಿರುವ ಅದು, ಅನುಕೂಲಕರ ಸಮಯ, ಸಂದರ್ಭ, ಪರಿಸರಗಳು, ಎಲ್ಲಕ್ಕಿಂಥಾ ಮುಖ್ಯವಾಗಿ ಪ್ರಚೋದನೆ ಸಿಕ್ಕರೆ ದಾಳಿ ಮಾಡಲು ಕಾಯುತ್ತಿರುತ್ತದೆ. ಹೀಗಾಗಿ ಇಂತಹ ಸಂದರ್ಭಗಳನ್ನು ನಿರ್ಲಕ್ಷಿಸುವ ಅಥವಾ ಮುಚ್ಚಿಡುವ ಬದಲಿಗೆ ಅದನ್ನು ನಿರ್ವಹಿಸುವ, ನಿಗ್ರಹಿಸುವ ಬಗೆಯನ್ನು ಪೋಷಕರು ಮತ್ತು ಶಿಕ್ಷಣ ವ್ಯವಸ್ಥೆ ಹೇಳಿಕೊಡದಿದ್ದರೆ ಇಂತಹ ಅಪರಾಧಗಳಿಂದ ಸಾಮಾಜಿಕ ಅಸಮತೋಲನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿರುತ್ತದೆ.

ಮನುಷ್ಯ ಸಹಜ ಪ್ರವೃತ್ತಿಯನ್ನು ಅತ್ಯಂತ ಸಹಜ ರೀತಿಯಲ್ಲಿ ನಿರ್ವಹಿಸಲು ಎರಡು ಬಗೆಯ ಕಾರ್ಯವಿಧಾನಗಳು ಮುಖ್ಯವೆನಿಸುತ್ತವೆ. ವ್ಯಕ್ತಿಯನ್ನು sex-educationಸಾಮಾಜೀಕರಣಗೊಳಿಸಲು ಬಾಲ್ಯದಿಂದಲೇ ಅಂದರೆ ವಿದ್ಯಾಭ್ಯಾಸದ ಭಾಗವಾಗಿ ಲೈಂಗಿಕ ಶಿಕ್ಷಣವನ್ನು, ಪರಸ್ಪರ ಗಂಡು-ಹೆಣ್ಣು ಸಮಾನತೆಯ ನೆಲೆಯಲ್ಲಿ ಪ್ರೀತಿಸುವಂತೆ ಮತ್ತು ಗೌರವಿಸಿಕೊಳ್ಳುವಂತೆ ಮನಸು-ಬುದ್ಧಿಗಳನ್ನು ಹದಗೊಳಿಸುವ ಆರೋಗ್ಯಕರ ಶಿಕ್ಷಣವನ್ನು ನೀಡುವುದು ಒಂದು ವಿಧಾನವಾದರೆ, ಮಾಧ್ಯಮದ ಮೂಲಕ ಲೈಂಗಿಕತೆಯನ್ನು ಅಶ್ಲೀಲವಾದ ರೀತಿಯಲ್ಲಿ ಪ್ರಚೋದನೆ ನೀಡಿ ಕೆರಳಿಸುತ್ತಿರುವುದನ್ನು ನಿರ್ಬಂಧಿಸುವುದು ಮತ್ತೊಂದು ವಿಧಾನ. ಈ ದಿಕ್ಕಲ್ಲಿ ಮನಃಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಸಮಾಜವಿಜ್ಞಾನಿಗಳು ಮತ್ತಷ್ಟು ದಾರಿಗಳನ್ನು ಹುಡುಕ ಬೇಕಾಗಿದೆ.