ಶಿಕ್ಷಕರಿಗೆ ಕ್ವಿಝ್: ಮಂತ್ರಿಯ ಅಧಿಕ’ಪ್ರಸಂಗ’!

– ದೀಪು, ಕುವೆಂಪು ನಗರ

ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಮ್ಮನ್ನು ಭೇಟಿ ಮಾಡಲು ಬಂದಿದ್ದ ಮೂವರು ಶಿಕ್ಷಕರನ್ನು ಕ್ವಿಝ್ ಮಾಡಿದ ಸಂಗತಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದೇ ಹಿನ್ನೆಲೆಯಲ್ಲಿ ಶನಿವಾರ ಟಿ.ವಿ9 ಸುದ್ದಿ ವಾಹಿನಿ ರಾಜ್ಯದ ನೂರಾರು ಶಿಕ್ಷಕರನ್ನು ಇದೇ ರೀತಿಯ ಕ್ವಿಝ್ ಗೆ ಒಳಪಡಿಸಿ, ಬಹುತೇಕ ಶಿಕ್ಷಕರಿಗೆ ಗಾಂಧಿ ಜನ್ಮ ದಿನ, ವಿವೇಕಾನಂದರ ಜನ್ಮದಿನ, ಅವರೀರ್ವರು ಜಗತ್ತಿಗೆ ನೀಡಿದ ಸಂದೇಶಗಳ ಬಗ್ಗೆ ಗೊತ್ತಿಲ್ಲ ಎಂದು ಸಾರಿತು. ಸುದ್ದಿವಾಹಿನಿಯ ಚರ್ಚೆಯಲ್ಲಿ ಸ್ವತಹ ಶಿಕ್ಷಣ ಸಚಿವರೂ ಭಾಗವಹಿಸಿದ್ದರು. ಪ್ರಶ್ನೆ ಕೇಳುವ ಮೂಲಕ ‘ಶಿಕ್ಷಕ ಸಮುದಾಯವನ್ನು ದೂಷಿಸುವ ಉದ್ದೇಶ ನಮ್ಮದಲ್ಲ’ ಎಂದು ಸಚಿವರು ಚರ್ಚೆಯಲ್ಲಿ ಹೇಳಿದರೂ, ಅವರು ಅಂತಿಮವಾಗಿ ಮಾಡಿದ್ದು ಅದನ್ನೇ.

ಪ್ರಶ್ನೆ ಕೇಳುವುದರಲ್ಲಿ ಎರಡು ವಿಧ. ಶಾಲೆಗಳಲ್ಲಿ ಮಕ್ಕಳು ಆಗಾಗ ಶಿಕ್ಷಕರನ್ನು ಪ್ರಶ್ನಿಸುತ್ತಾರೆ. ಆಗ teachersಅವರಿಗೆ ಶಿಕ್ಷಕರಿಂದ ಮಾಹಿತಿ ಪಡೆಯುವ ಉದ್ದೇಶ ಇರುತ್ತದೆ. ಅಂದು ಒಂದು ರೀತಿಯಾದರೆ, ಇನ್ನೊಂದು, ಉತ್ತರ ಗೊತ್ತಿದ್ದೂ ಎದುರು ಇರುವವರ ಬುದ್ಧಿಮತ್ತೆಯನ್ನು ಪರೀಕ್ಷಿಸುವ ಉದ್ದೇಶದಿಂದ ಪ್ರಶ್ನೆ ಮಾಡುವುದು ಇನ್ನೊಂದು ಬಗೆ. ಕಾಂಗ್ರೆಸ್ ಕಚೇರಿಗೆ ಸಚಿವರನ್ನು ಹುಡುಕಿಕೊಂಡು ಬಂದಿದ್ದ ಮೂವರು ಶಿಕ್ಷಕರನ್ನು ಪ್ರಶ್ನೆ ಮಾಡಿದ್ದು, ಅದೂ ಮಾಧ್ಯಮದವರ ಎದುರು, ಎರಡನೇ ಮಾದರಿಗೆ ಸೇರುತ್ತದೆ.

ಪತ್ರಿಕೆಗಳಲ್ಲಿ ವರದಿಯಾಗಿರುವಂತೆ, ಕೋಲಾರದ ಶಿಕ್ಷಕರು ಬಂದದ್ದು ಅಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಯಿಂದ ತುಂಬಾ ಕಿರುಕುಳ ಆಗುತ್ತಿದೆ ಎಂಬ ಅಹವಾಲು ಮಂಡಿಸಲು. ಅವರನ್ನು ದಯವಿಟ್ಟು ಬೇರೆಡೆಗೆ ವರ್ಗಮಾಡಿಕೊಡಿ ಎಂಬುದು ಅವರ ಬೇಡಿಕೆ. ಆ ಸಂದರ್ಭವನ್ನು ಒಮ್ಮೆ ವಿಶ್ಲೇಷಿಸೋಣ. ಶಿಕ್ಷಣ ಇಲಾಖೆಯ ತೀರಾ ಕೆಳಹಂತದ ಸಿಬ್ಬಂದಿ ಅವರು. ಬಿಇಒ, ಡಿಡಿಪಿಐ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಇಂತಹ ಶಿಕ್ಷಕರನ್ನು ನಾನಾ ರೀತಿಯಲ್ಲಿ ಷೋಷಣೆಗೆ ಒಡ್ಡುತ್ತಿರುತ್ತಾರೆ ಎನ್ನುವುದು ಗೊತ್ತಿರುವ ಸಂಗತಿ. ಇಂತಹ ಶಿಕ್ಷಕರು ಭೇಟಿ ಮಾಡಲು ಬಂದದ್ದು ತಮ್ಮ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿರುವ ಮಂತ್ರಿಯನ್ನು.

ಇಲಾಖೆಯ ಸಿಬ್ಬಂದಿಯಿಂದ ಆಗುತ್ತಿರುವ ಕಿರುಕುಳದಿಂದ ಪಾರು ಮಾಡಲು ನೆರವು ಕೋರಲು ಬಂದ ಶಿಕ್ಷಕರಿಗೆ, ಈ ಪ್ರಸಂಗದಿಂದ ತಾವೇ ದೂಷಣೆಗೆ ಒಳಗಾಗುತ್ತೇವೆ ಎಂಬ ಕಲ್ಪನೆ ಎಳ್ಳಷ್ಟೂ ಇರಲಿಕ್ಕೆ ಸಾಧ್ಯವಿಲ್ಲ. ಶಿಕ್ಷಕರು ಪ್ರಶ್ನೆಗಳಿಗೆ ಉತ್ತರ ಹೇಳದೇ ಹೋಗಿದ್ದರ ಬಗ್ಗೆ ನಂತರ ಚರ್ಚಿಸೋಣ. ಸದ್ಯ, ಶಿಕ್ಷಣ ಮಂತ್ರಿ ತನ್ನ ಕರ್ತವ್ಯ ನಿರ್ವಹಿಸಿದರೇ, ಎನ್ನುವುದು ಮುಖ್ಯ ಪ್ರಶ್ನೆ. ಆ ಶಿಕ್ಷಕರ ನೋವು, ಅನುಭವಿಸುತ್ತಿರುವ ಅವಮಾನ, ಕಿರುಕುಳ ಅದಕ್ಕೆ ಕಾರಣ ಆಗಿರುವ ಅಧಿಕಾರಿ ಸಿಬ್ಬಂದಿಗಳ ಮಾಹಿತಿ ಪಡೆದುಕೊಳ್ಳದೆ, ವರ್ಗಾವಣೆ ವಿಚಾರಕ್ಕೆ ರಜೆ ಹಾಕಿಕೊಂಡು ಇಲ್ಲಿಗೆ ಬಂದಿದೀರಾ..ಅಂತ ಕೇಳುತ್ತಾರೆ ಸಚಿವರು. ಹೌದು ಸ್ವಾಮಿ, ಅವರು ಇರುವ ಸ್ಧಳದಲ್ಲಿಯೇ ಅವರ ಸಮಸ್ಯೆಗಳನ್ನು ಕೇಳಿ ಪರಿಹರಿಸುವ ವ್ಯವಸ್ಥೆ ಇಲ್ಲದ ಕಾರಣ, ಶಿಕ್ಷಕರು ರಜೆಹಾಕಿ ಬರಬೇಕಾಯಿತು, ಅದರಲ್ಲಿ ತಪ್ಪೇನು? ಪಾಪ, ಅವರು ತಮ್ಮ ಕಷ್ಟ ಹೇಳಿಕೊಳ್ಳಲುkimmane-ratnakar ಬಂದರೆ, ಅವರನ್ನು ಪ್ರಶ್ನೆ ಕೇಳಿ ಕಿಚಾಯಿಸುತ್ತೀರಾ?

ಚಿಕ್ಕಮಕ್ಕಳಲ್ಲಿ ಒಂದು ಅಭ್ಯಾಸ ಇರುತ್ತೆ. ದೈಹಿಕವಾಗಿ ತಮಗಿಂತ ದುರ್ಬಲರಾದವರನ್ನು ಗೇಲಿ ಮಾಡುವುದು. ಅವರಿಂದ ಬೇಕೆಂದೇ ಏನನ್ನೋ ಕಸಿದುಕೊಂಡು, ಅಟ್ಟಿಸಿಕೊಂಡು ಬರುವಂತೆ ಮಾಡುವುದು. ಜೋರಾಗಿ ಓಡಲಾಗದೆ, ಪರಿತಪಿಸುವುದನ್ನು ಕಂಡು ಎಂತಹದೋ ಖುಷಿ ಅನುಭವಿಸುವ ಚಾಳಿಯದು. ಆ ಖುಷಿ ಕೆಲವೊಮ್ಮೆ ವಿಕೃತಿ ಮಟ್ಟಕ್ಕೂ ಹೋಗಬಹುದು. ಈ ಸಚಿವ-ಶಿಕ್ಷಕರ ಪ್ರಕರಣದಲ್ಲಿ ಇದೇ ತರಹದ ವರ್ತನೆಯ ನೆರಳುಗಳು ಕಾಣುತ್ತವೆ. ಗಾಂಧಿ ಹುಟ್ಟಿದ ದಿನ ಯಾವುದು, ವಿವೇಕಾನಂದರ ಹುಟ್ಟಿದ ದಿನ ಯಾವುದು? ಅನ್ ಟೊ ದ ಲಾಸ್ಟ್ ಬರೆದವರಾರು ಎಂಬ ಪ್ರಶ್ನೆಗಳನ್ನು ಸಚಿವರು ಕೇಳಿದ್ದಾರೆ. ಶಿಕ್ಷಕರು ಉತ್ತರ ಹೇಳದೆ ತಡಬಡಾಯಿಸಿದ್ದಾರೆ. ಮರೆಯಬಾರದ ಮುಖ್ಯ ಸಂಗತಿ ಎಂದರೆ ಇದೆಲ್ಲವೂ ನಡೆದದ್ದು ಮಾಧ್ಯಮದ ಕೆಮರಾಗಳು ಚಾಲ್ತಿಯಲ್ಲಿದ್ದಾಗ.

ಒಬ್ಬ ಜವಾಬ್ದಾರಿಯುತ ಸಚಿವ ಹೀಗೆ ತನ್ನ ಸಿಬ್ಬಂದಿಯ ಅಸಹಾಯಕತೆಯನ್ನು ಟಿವಿ ಕೆಮರಾಗಳ ಮುಂದೆ ಹರಾಜಿಗಿಟ್ಟಿದ್ದು ಸರಿಯೆ? ಈ ಶಿಕ್ಷಕರು ನಾಳೆ ಶಾಲೆಗೆ ಹೋದಾಗ, ಮಕ್ಕಳು ಏನೆಂದಾರು? ಪೋಷಕರ ಪ್ರತಿಕ್ರಿಯೆ ಏನಿರಬಹುದು? ಅಷ್ಟೇ ಅಲ್ಲ, ಇವರು ಯಾರ ಕಾಟದಿಂದ ಮುಕ್ತರಾಗಲು ಪ್ರಯತ್ನಿಸುತ್ತಿದ್ದರೋ, ಅವರಿಂದ ಎದುರಿಸಬಹುದಾದ ತೊಂದರೆಗಳೇನು..ಎನ್ನುವುದರ ಕನಿಷ್ಟ ಅರಿವು ಈ ಸಚಿವರಿಗೆ ಇರಬೇಕಿತ್ತಲ್ಲ? ಔಚಿತ್ಯ ಪ್ರಜ್ಞೆ ಇಲ್ಲದ ಸಚಿವರು, ಕೆಮರಾಗಳ ಮುಂದೆಯೇ, ಶಿಕ್ಷಕರ ಉತ್ತರಗಳಿಂದ ಬೇಸತ್ತು ತಲೆ ಚಚ್ಚಿಕೊಳ್ಳುತ್ತಾರೆ, ನಿಮ್ಮಿಂದ ಹುಡುಗರು ಏನು ಪಾಠ ಕಲಿಯುತ್ತಾರೋ ಎಂದು ಮೂದಲಿಸುತ್ತಾರೆ. ತನ್ನ ಶಿಕ್ಷಕರನ್ನು ಮೂದಲಿಸುವ ಮೂಲಕ ತನ್ನನ್ನು ತಾನೇ ಹೀಯಾಳಿಸಿಕೊಳ್ಳುತ್ತಿದ್ದೇನೆ ಎಂದು ಸಚಿವರು ಅರ್ಥಮಾಡಿಕೊಳ್ಳಬೇಕಿತ್ತಲ್ಲವೆ?

ಗಾಂಧಿ ಮತ್ತು ವಿವೇಕಾನಂದರ ಹುಟ್ಟಿದ ದಿನಗಳನ್ನು ತಕ್ಷಣಕ್ಕೆ ಹೇಳದೇ ಹೋದರೆ, ಅವರು ದಡ್ಡರೆಂದು ಅರ್ಥವೆ? ಕೆಲವು ಸಂದರ್ಭಗಳಲ್ಲಿ ಎಂತಹ ಸಲೀಸಾದ ಉತ್ತರವೇ ಆದರೂ, ಹೇಳಲಾಗದೇ ಹೋಗಬಹುದು. ಇಲ್ಲಿಯೂ ಅಂತಹದೇ ಪರಿಸ್ಥಿತಿ ಇತ್ತು. ಪ್ರಶ್ನೆ ಕೇಳುತ್ತಿರುವವರು ಮಂತ್ರಿ, ಸುತ್ತಲೂ ಮಾಧ್ಯಮದವರು, ಕೆಮರಾಗಳು. ಆ ಕ್ಷಣಕ್ಕೆ ಅಧೀರರಾಗಿರುತ್ತಾರೆ. ಮೇಲಾಗಿ, ತಾವು ಬಂದಿರುವ ಉದ್ದೇಶ ಈಡೇರದೆ ಇಡೀ ಸನ್ನಿವೇಶ ತಮಗೆ ಉಲ್ಟಾ ಹೊಡೆಯುತ್ತಿರುವಾಗ, ತಲೆಯಲ್ಲಿ ಒಮ್ಮೆಲೆ ನೂರೆಂಟು ಆಲೋಚನೆಗಳು ಧುಮುಕಿ, ಉತ್ತರ ಹೊಳೆಯದಂತಾಗಬಹುದು. ಕೆಮರಾಗಳನ್ನು ನೋಡಿ, ನಾಳೆ ನಮ್ಮ ಮುಖಗಳೆಲ್ಲಾ ಟಿವಿಯಲ್ಲಿ ಪ್ರಸಾರವಾಗಿ, ನಾವು ಯಾರ ವಿರುದ್ಧ ದೂರು ಕೊಡಲು ಬಂದಿದ್ದೇವೋ, ಅವರಿಗೆ ದೂರು ಕೊಡಲು ಹೋಗಿದ್ದು ನಾವೇ ಎಂಬುದು ಗೊತ್ತಾಗಿ ಏನೇನೆಲ್ಲಾ ಎದುರಿಸಬೇಕಾಗುತ್ತೋ ಎಂಬೆಲ್ಲಾ ಆಲೋಚನೆ, ಆತಂಕಗಳ ಮಧ್ಯೆ ಅವರಿಗೆ ಉತ್ತರಗಳು ಹೊಳೆಯುವುದು ಕಷ್ಟ ಆಗಿರಬಹುದು.

ಅಷ್ಟೇ ಅಲ್ಲ, ಸಚಿವರ ಮಾತಿನ ಧಾಟಿ (ಆರಂಭದಿಂದಲೇ) ತಮ್ಮನ್ನು ಭೇಟಿ ಮಾಡಲು ಬಂದ ಶಿಕ್ಷಕರು ತಪ್ಪಿತಸ್ಥರು ಎಂಬುದನ್ನು ಸಾರಿ ಹೇಳುತ್ತಿತ್ತು. ಅಪ್ಪಿ ತಪ್ಪಿ ಮೊದಲಿನ ಪ್ರಶ್ನೆಗೆ ಆತ್ಮವಿಶ್ವಾಸದಿಂದ ಉತ್ತರ ಕೊಟ್ಟಿದ್ದರೂ, ಸಚಿವರು ಸುಮ್ಮನಾಗುತ್ತಿದ್ದರು ಎಂಬ ಗ್ಯಾರಂಟಿ ಇಲ್ಲ. ಏಕೆಂದರೆ ಇವರನ್ನು ಅಸಮರ್ಥರೆಂದು ತೋರಿಸುವುದೇ ತಮ್ಮ ಉದ್ದೇಶವೆಂಬಂತೆ ಅವರು ವರ್ತಿಸುತ್ತಿದ್ದರು. ಗಾಂದಿ ಜಯಂತಿಯನ್ನು ಸರಿಯಾಗಿ ಹೇಳಿಬಿಟ್ಟಿದ್ದರೆ, ನಂತರ ಎಲ್ಲರೂ ಸಾಲಾಗಿ ನಿಂತು ತಪ್ಪಿಲ್ಲದೆ, ಜನಗಣ ಮನ ಹಾಡಿ ನೋಡೋಣ ಎನ್ನುತ್ತಿದ್ದರೇನೋ.

ಪ್ರಶ್ನೆಗಳನ್ನು ಕೇಳುವ ಮೂಲಕ ಎಂಥವರನ್ನೂ ಇಕ್ಕಟ್ಟಿಗೆ ಸಿಲುಕಿಸುವುದು ಸುಲಭ. ಇದೇ ಮಂತ್ರಿಗಳನ್ನು ಕೇಳಬಹುದು, “ದೇಶದ ಮೊದಲ ಶಿಕ್ಷಣ ಮಂತ್ರಿ ಯಾರು ಗೊತ್ತೇನ್ರಿ..?”, “ಕೊಠಾರಿ ಕಮೀಷನ್ ಯಾವಾಗ ನೇಮಕ ಆಯ್ತು, ಅದು ಯಾವಾಗ ವರದಿ ಕೊಟ್ಟಿತು, ಅದರ ಪ್ರಮುಖ ಸಲಹೆಗಳೇನು”.. ಹೀಗೆ ಈ ಮಂತ್ರಿಯವರು ಉತ್ತರ ಹೇಳಲಾಗದ ಪ್ರಶ್ನೆ ಹುಡುಕಿ ಕೇಳುವುದು ಕಷ್ಟವೇನಲ್ಲ. ಟಿವಿ9 ಸಿಬ್ಬಂದಿ ಶಾಲೆಗಳಿಗೆ ಹೋಗಿ ಶಿಕ್ಷಕರನ್ನು ಪ್ರಶ್ನೆ ಕೇಳಿತ್ತಲ್ಲ, ಅದೇ ಶಿಕ್ಷಕರು “ರೀ ನಮ್ಮನ್ನು ಕೇಳೋಕೆ ಬಂದಿದಿರಲ್ಲ, ಪ್ರಪಂಚದಲ್ಲಿ ಮೊದಲು ಪತ್ರಿಕೆ ಹುಟ್ಟಿದ್ದು ಎಲ್ಲಿ ಗೊತ್ತಾ? ಜೋಸೆಫ್ ಪುಲಿಟ್ಜರ್ ಯಾರು ಗೊತ್ತಾ? ಅವನ ಸಾಧನೆ ಗೊತ್ತಾ? ವಾಟರ್ ಗೇಟ್ ಹಗರಣದ ಬಗ್ಗೆ ಸ್ವಲ್ಪ ಹೇಳಿ ನೋಡೋಣ. ಹೋಗಲಿ All the President’s Men ಸಿನಿಮಾ ಗೊತ್ತಾ?.” – ಎಂದೆಲ್ಲಾ ಕೇಳಿ ಇಕ್ಕಟ್ಟಿಗೆ ಸಿಲುಕಿಸಬಹುದಿತ್ತು.

ಅರ್ಥಾತ್, ಪ್ರಶ್ನೆಗಳನ್ನು ಕೇಳುವ ಮೂಲಕ ಎಂತಹವರನ್ನೂ ಇಕ್ಕಟ್ಟಿಗೆ ಸಿಲುಕಿಸಬಹುದು. ಉತ್ತರ ಗೊತ್ತಿಲ್ಲದವರನ್ನು ತೀವ್ರ ಹಳಹಳಿಕೆಗೆ ದೂಡುವುದು, ಅವಮಾನ ಮಾಡುವುದು ಸಲೀಸು. ಇದು ಸ್ವಲ್ಪ ಹೆಚ್ಚು ತಿಳಿದುಕೊಂಡವರು, ಕಡಿಮೆ ತಿಳಿದುಕೊಂಡವರ ಮೇಲೆ ನಡೆಸುವ ದಬ್ಬಾಳಿಕೆ, ಶೋಷಣೆ ಅಷ್ಟೆ. ಉತ್ತರ ಹೇಳದ ಶಿಕ್ಷಕರನ್ನು ಟಿವಿ ಕೆಮರಾಗಳ ಮುಂದೆ exhibit ಮಾಡಿ ಅವರನ್ನು ನಾಲಾಯಕ್ (ಶಿಕ್ಷಣ ಮಂತ್ರಿಯವರೇ ಬಳಸಿದ ಪದ) ಎಂದು ಘೋಷಿಸುವ ಮನಸ್ಥಿತಿಯ ಹಿತ್ತಲಿನಲ್ಲಿ ಜಾತಿ, ಹಣ, ಅಕ್ಷರ ಜ್ಞಾನದಿಂದ ವಂಚಿತರಾದವರನ್ನು ನೂರಾರು ವರ್ಷಗಳ ಕಾಲ ನಿಕೃಷ್ಟವಾಗಿ ಕಂಡ ಬಹುಜನ ವಿರೋಧಿ ಆಲೋಚನೆಯ ಪಳೆಯುಳಿಕೆಗಳಿವೆ.

ಹುಟ್ಟಿದ ಜಾತಿಯ ಕಾರಣಕ್ಕೋ, ಬಡತನದ ಕಾರಣಕ್ಕೋ ಉತ್ತಮ ವಿದ್ಯಾಭ್ಯಾಸದಿಂದ ವಂಚಿತರಾದವರು ಆಗಾಗ ಇಂತಹ ಅವಮಾನಗಳನ್ನು ಅನುಭವಿಸಿರುತ್ತಾರೆ. ಚಿಕ್ಕಂದಿನಿಂದ ಕನ್ನಡ ಶಾಲೆಯಲ್ಲಿ ಓದಿದವರು ಒಮ್ಮೆಲೆ ಪದವಿ ಹಂತಕ್ಕೆ ಇಂಗ್ಲಿಷ್ ಓದಬೇಕಾಗಿ ಬಂದಾಗ, ತೀವ್ರ ಕಷ್ಟ ಪಡುತ್ತಿರುತ್ತಾರೆ. ಆದರೆ ಮೊದಲಿನಿಂದಲೂ ಇಂಗ್ಲಿಷ್ ಮಾಧ್ಯಮದಲ್ಲಿಯೇ ಓದಿ ಬಂದವರ ಮುಂದೆ ಅವರು ಎರಡನೇ ದರ್ಜೆಯ ವಿದ್ಯಾರ್ಥಿಗಳಂತೆ ಕಾಣುತ್ತಾರೆ. ಪಾಠಮಾಡುವ ಕೆಲ ಶಿಕ್ಷಕರೂ ಇದೇ ಭಾವನೆಗಳನ್ನು ಪೋಷಿಸಿದರೆ, ಅವರು ಮತ್ತಷ್ಟು ಅವಮಾನಕ್ಕೀಡಾಗಿ ದಿನ ನೂಕುತ್ತಿರುತ್ತಾರೆ. ಅಂತಹ ಅವಮಾನಗಳನ್ನು ಅನುಭವಿಸಿದವರಿಗೆ ಮಾತ್ರ ಈ ಶಿಕ್ಷಕ-ಮಂತ್ರಿ ಪ್ರಶ್ನೋತ್ತರ ಘಟನೆಯನ್ನು ಬೇರೊಂದು ಕೋನದಿಂದ ನೋಡಲು ಸಾಧ್ಯ.

ಕಿಮ್ಮನೆ ರತ್ನಾಕರ ಅವರು ಇಂತಹದೊಂದು ಕ್ವಿಝ್ ಕಾರ್ಯಕ್ರಮ ನಡೆಸುವುದರ ಮೂಲಕ ಸಾಧಿಸಿದ್ದೇನೆಂದರೆ, ಇನ್ನು ಮುಂದೆ ಶಿಕ್ಷಕರು ಅವರನ್ನು ಭೇಟಿ ಮಾಡಲು ಹಿಂಜರಿಯುತ್ತಾರೆ. “ಯಾಕೆ ಬೇಕು ಗುರು, ಸುಮ್ನೆ ಏನೇನೋ ಪ್ರಶ್ನೆ ಕೇಳಿ ಅವಮಾನ ಮಾಡ್ತಾರೆ, ಅವರ ತಂಟೆಯೇಕೆ” ಎಂದುಕೊಂಡು ಶಿಕ್ಷಕರು ಸಾಧ್ಯವಾದಷ್ಟು ಅವರಿಂದ ದೂರ ಇರಲು ಬಯಸಬಹುದು. ನಿಜಕ್ಕೂ ವಿಪರ್ಯಾಸ ಎಂದರೆ, ಟಿವಿಯವರು ಕೆಮರಾ ಹಿಡಿದು ಪ್ರಶ್ನೆ ಕೇಳಲು ಹೋದಾಗ, “ರೀ..ನೀವೇನು ವಿಷಯ ಪರಿವೀಕ್ಷಕರಾ (subject inspector), ನಮ್ಮ ಅಧಿಕಾರಿನಾ..ಪ್ರಶ್ನೆ ಕೇಳೋಕೆ. ನಮ್ಮ ಬುದ್ಧಿಮತ್ತೆ ಪರೀಕ್ಷೆ ಮಾಡೋಕೆ ನೀವ್ಯಾರು..?” – ಎಂದು ಯಾವ ಶಿಕ್ಷಕರೂ ಹೇಳಲಿಲ್ಲವೇ? ನಮ್ಮ ಶಿಕ್ಷಕರು ಮುಖ್ಯವಾಗಿ ಬೆಳೆಸಿಕೊಳ್ಳಬೇಕಾಗಿರುವುದು ತಮ್ಮ ವೃತ್ತಿಗಿರುವ ಘನತೆಯನ್ನು. ಆ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಆದರೆ ಸಂಬಂಧ ಪಟ್ಟ ಮಂತ್ರಿಯೇ ಹೀಗೆ ವರ್ತಿಸಿದಾಗ, ಅದು ಕಷ್ಟವಾಗುವುದು ಸಹಜ.

ಹಿಂದೊಮ್ಮೆ ಸುವರ್ಣ ಸುದ್ದಿ ವಾಹಿನಿಯವರು ನಮ್ಮ ಮಂತ್ರಿಗಳ ಚಾಲಕರಾಗಿರುವವರ ಬಳಿ ಎಷ್ಟು ಮಂದಿ ಚಾಲನಾ ಪರವಾನಗಿ ಪಡೆದಿದ್ದಾರೆ ಎಂದು ಒಂದು ರಿಯಾಲಿಟಿ ಚೆಕ್ ಮಾಡಲು ಹೋಗಿದ್ದರು. ಆಗ ರೋಶನ್ ಬೇಗ್ ವಾಹನ ತಡೆದು ನಿಲ್ಲಿಸಿ, ದಾಖಲೆಗಳನ್ನು ಕೇಳಿದಾಗ, ಬೇಗ್ ಅವರು, “ದಾಖಲೆ ಕೇಳೋಕೆ ನೀವೇನು ಸಾರಿಗೆ ಇಲಾಖೆಯವರಾ..ಸುಮ್ಮನೆ ಹೋಗ್ರೀ..”ಎಂದು ಸಾಗಹಾಕಿದ್ದರು. ಶಿಕ್ಷಕರು ಅದನ್ನೇ ಮಾಡಬೇಕಿತ್ತು.

8 comments

 1. ಗೌರವಾನ್ವಿತ ಮಾನ್ಯ ಶಿಕ್ಷಣಸಚಿವರೇ, ಹೌದು. ಟಿ.ವಿ.ಯಲ್ಲಿ ನಿಮ್ಮ ಈ ‘ಭಯಂಕರ’ಸ್ಟಂಟ್ ನೋಡಿ ನನಗೂ ಇದು ಕೆಡುಕಾಯಿತು ಅನಿಸಿತ್ತು. ಸ್ವಾಮೀ, ಈ ರಾಜ್ಯದ ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಲ್ಲಿರುವವರೆಲ್ಲಾ ತಾಕತ್ತಿದ್ದರೆ ಎದೆ ಮಉಟ್ಟಿಕೊಂಡು ಹೇಳಲಿ ನೋಡೋಣ, ತಮಗೆ ಗಾಂಧೀಜಿಯ ಬಗ್ಗೆ ಎಲ್ಲವೂ ಗೊತ್ತು ಅಂತ? ಅವರು ವಿದ್ಯಾರ್ಥಿಗಳಿಗೆ ಕಲಿಸುವುದಿಲ್ಲವಲ್ಲ ಅಂತಿಟ್ಟುಕೊಂಡರೂ, ನೀವು ಅಷ್ಟೊಂದು ಕಾಳಜಿವಹಿಸಿ ಹೇಳುವ ಗಾಂಧೀಜಿಗೆ ಸಂಬಂಧಪಟ್ಟ ಸಾಮಾನ್ಯ ಮಾಹಿತಿಗಳು ಇಡೀ ಆಡಳಿತ ವರ್ಗಕ್ಕೆ ಸಾರಾಸಗಟು ಗೊತ್ತಿರಲಾರದೆಂಬ ದೂರದ ಸತ್ಯವನ್ನು ಒಪ್ಪಿಕೊಳ್ಳುವ ವಿಶಾಲ ಮನೋಭಾವ ಇರುತ್ತಿದ್ದರೆ ಮಾಧ್ಯಮ ಮಂದಿಯ ಮುಂದೆ ಶಿಕ್ಷಕರನ್ನು ಹೀಗೆ ಸಾರ್ವಜನಿಕವಾಗಿ ಅವಮಾನಿಸುವ ಕೆಲಸಕ್ಕಿಳಿಯುತ್ತಿರಲಿಲ್ಲ. ‘ಇಂದೆನಗೆ ಆಹಾರ ಸಿಕ್ಕಿತು’ ಅನ್ನೋ ರೀತಿ ವರದೀಕರಿಸುತ್ತಿದ್ದ ಮಾಧ್ಯಮದವರಾದರೂ ತಮ್ಮ ಎಂಟೆದೆ ಮುಟ್ಟಿ ಹೇಳಿಕೊಳ್ಳಲಿ ನೋಡೋಣ, ತಮಗಿವೆಲ್ಲಾ ತಿಳಿದಿತ್ತು ಅಂತ? ಅವರ ವಿಷಯ ಒತ್ತಟ್ಟಿಗಿರಲಿ ಸಚಿವರೇ, ಟಿ.ವಿ.ಯಲ್ಲಿ ಬಹಿರಂಗವಾಗಿ ಅವಮಾನಿತರಾದ ಆ ಶಿಕ್ಷಕರು ನಾಳೆಯಿಂದ ತಮ್ಮ ಶಾಲೆ ಹಾಗೂ ಕ್ಷೇತ್ರದಲ್ಲಿ ತಲೆಯೆತ್ತಿ ನಿರುಮ್ಮಳವಾಗಿ ಕೆಲಸ ಮಾಡುವುದಾದರೂ ಹೇಗೆ ವಿವೇಚಿಸಿದ್ದೀರೇನು? ಅಧಿಕಾರಿ ಮಟ್ಟದಲ್ಲಿ ಬಹುದೊಡ್ಡ ಪಿಡುಗಾಗಿರುವ ದಬ್ಬಾಳಿಕೆಯ ಸಂದರ್ಭಗಳಲ್ಲಿ ಮೇಲಧಿಕಾರಿಯೊಬ್ಬರ ವಿರುದ್ಧ ದೂರು ಕೊಡಬಂದಾಗ ಅವರ ದೂರಿನ ಅಥವಾ ಸಮಸ್ಯೆಯ ಕುರಿತು ತಾಳ್ಮೆಯಿಂದ ಕೇಳುವ ಸೌಜನ್ಯವೂ ನಿಮಗಿಲ್ಲದೇ ಹೋದ ಮೇಲೆ ನೀವೆಂಥಾ ಶಿಕ್ಷಣ ಸಚಿವರು ಸ್ವಾಮಿ? ನಾಳೆಯಿಂದ ಆ ಅಧಿಕಾರಿಯೆದುರು ಈ ಶಿಕ್ಷಕರ ಪಾಡೇನಾದೀತು ಯೋಚಿಸಿದ್ದೀರಾ? ಇನ್ನಷ್ಟು ಕುಮ್ಮಕ್ಕು ಪಡೆದಂತಾದ ಮೇಲಧಿಕಾರಿಗಳು ಮತ್ತಷ್ಟು ಸೊಕ್ಕಿನಿಂದ ನಡೆದರೆ, ಮುಂದೆ ಯಾರೇ ತಳಮಟ್ಟದ ನೌಕರರು ತಮ್ಮ ಮೇಲಧಿಕಾರಿಯ ವಿರುದ್ಧ ದೂರು ಸಲ್ಲಿಸಲು ಧೈರ್ಯದಿಂದ ನಿಮ್ಮಂಥವರ ಮುಂದೆ ನಿಂತಾರೇನು? ನಿಜ, ಒಂದು ಹಂತದಲ್ಲಿ ಒಪ್ಪಿಕೊಳ್ಳೋಣ, ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕಾದ ಅವರಿಗೆ ಕೆಲವೊಂದು ಸಾಮಾನ್ಯ ಸಂಗತಿಗಳು ತಿಳಿದಿರಬೇಕಾದುದು ಅಗತ್ಯವೇ ಹೌದು. ಆದರೆ ಅದನ್ನು ಸರಿಪಡಿಸಬೇಕಿರುವ ಯಾವುದಾದರೂ ಜಂಟಲ್ ಮ್ಯಾನ್ ಹಾದಿ ಬಗ್ಗೆ ಯೋಚಿಸುವುದು ಬಿಟ್ಟು ಕ್ಯಾಮರಾಗಳೆದುರು ಹೀರೋ ಆಗಹೊರಟ ನಿಮ್ಮ ಕಾಳಜಿರಹಿತ ನಡೆಯಿಂದಾಗಿ ಈ ಘಟನೆ ಬೀರಬಹುದಾದ ಪಾರ್ಶ್ವ ಪರಿಣಾಮಗಳ ಬಗ್ಗೆ ಕಿಂಚಿತ್ತಾದರೂ ಯೋಚಿಸಿದ್ದೀರಾ ಸಚಿವರೇ? ಬೇರೆಯವರ ಕಾಮನ್ ಸನ್ಸ್ ಬಗ್ಗೆ ಮಾತಾಡುವ ಉತ್ತಮ ಓದಿನ ಹಿನ್ನೆಲೆಯಿರುವ ಸಚಿವರಾದ ನೀವು, ಸದ್ಯ ರಾಜ್ಯದಲ್ಲಿ ಸಿ.ಓ.ಡಿ.ಯಿಂದ ತನಿಖೆ ನಡೆಯುತ್ತಿರುವ ಹೈ ಪ್ರೊಫೈಲ್ ಕೇಸೊಂದರ ಬಗ್ಗೆ ಸಾರ್ವಜನಿಕವಾಗಿ ದೂರುದಾರರನ್ನು ನಿಂದಿಸಿ ಹೇಳಿಕೆ ಕೊಟ್ಟಿರಲ್ಲ? ತನಿಖೆ ನಡೆಯುತ್ತಿರುವ ವೇಳೆ ಅದರ ಮೇಲೆ ಪ್ರತ್ಯಕ್ಷವಾಗಿಯೋ- ಪರೋಕ್ಷವಾಗಿಯೋ ಪ್ರಭಾವಿಸುವ ರೀತಿಯಲ್ಲಿ ಸರಕಾರದ ಭಾಗವಾಗಿರುವ ತಾನು ಮಾತನಾಡಬಹುದೋ- ಮಾತನಾಡಬಾರದೋ ಅಂತ ವಿವೇಚಿಸಬೇಕಾದ ಹಂತದಲ್ಲಿ ಅದೆಲ್ಲಿ ಕೈಕೊಟ್ಟಿತ್ತು ದೇವರೇ, ಆ ನಿಮ್ಮ ಪ್ರಕಾಂಡ ಕಾಮನ್ ಸೆನ್ಸ್? ಮಹಾನುಭಾವರೇ, ಆವತ್ತು ಶಿಕ್ಷಕರಿಗೆ ಪ್ರಶ್ನೆ ಕೇಳುವ ವೇಳೆ ಉತ್ತರ ಬಾರದಿದ್ದಾಗ ನಗುತ್ತಾ ನಿಮ್ಮ ಪಕ್ಕದಲ್ಲೇ ಕೂತಿದ್ದರಲ್ಲ, ಮತ್ತಿಬ್ಬರು ಘನ ಸಚಿವರುಗಳು? ಅವರೆಡೆಗೆ ತಿರುಗಿ ಇದೇ ಪ್ರಶ್ನೆ ಕೇಳುವ ಧೈರ್ಯವನ್ನೇನಾದರೂ ಆ ಕ್ಯಾಮರಾಗಳೆದುರೇ ನೀವು ತೋರಿಸುತ್ತಿದ್ದರೆ, ನಿಜಕ್ಕೂ ರಾಜ್ಯದ ಜನರ ಕಣ್ಣಲ್ಲಿ ನೀವು ಹೀರೋ ಆಗಿಬಿಡುತ್ತಿದ್ದಿರಿ ಸ್ವಾಮಿ. ತಳಮಟ್ಟದ ನೌಕರರ್ಯಾರೂ ಇನ್ನು ಮುಂದೆ ಅವರಪ್ಪನಾಣೆಗೂ ಉನ್ನತ-ಉತ್ತರದಾಯಿ ಸ್ಥಾನ ನಿಭಾಯಿಸುತ್ತಿರುವ ನಿಮ್ಮ ಮುಂದೆ ನಿಂತು ಅವರ ಪ್ರಾಮಾಣಿಕ ಸಮಸ್ಯೆಗಳನ್ನು ಹೇಳಕೊಳ್ಳಲಾರದ ಪರಿಸ್ಥಿತಿ ಎದುರಾಗಿರುವುದೇ ನಿಮ್ಮ ದುರಂತ ಯೋಚಿಸಿದ್ದೀರಾ? ಒಬ್ಬ ಸಚಿವನಾಗಿ ; ಸಮಸ್ಯೆ ಪರಿಹರಿಸಲಿಕ್ಕಿರುವ ಒಬ್ಬ ಜವಾಬ್ದಾರಿ ವ್ಯಕ್ತಿಯಾಗಿ ಇದಕ್ಕಿಂತ ವೈಫಲ್ಯತೆ ಬೇಕೇನು ತಮಗೆ? ನಿಜ. ಆವತ್ತು ಕೆರೆಯೊಂದರಲ್ಲಿ ಬಿದ್ದಿದ್ದ ಕುಟುಂಬವೊಂದರ ರಕ್ಷಣೆಯ ಜವಾಬ್ದಾರಿ ಹೊತ್ತ ನಿಮ್ಮನ್ನು ದೇಶಕ್ಕೆ ದೇಶವೇ ಹೊಗಳಿತ್ತು. ನೆನಪಿರಲಿ; ಎಲ್ಲ ಕಾಲಕ್ಕೂ ಎಲ್ಲವನ್ನೂ ಹೊಗಳಬಹುದಾದಷ್ಟು ಮೂರ್ಖರಲ್ಲ ಜನ.

 2. ಗಾಂಧಿ ಕುರಿತಾಗಿಯೂ ಶಿಕ್ಷಕರಿಗೆ ಗೊತ್ತಿಲ್ವಲ್ಲಾ ಅಂದಾಗ ಕೆಟ್ಟೆನಿಸಿತು. ಆದರೆ ಪ್ರತಿಯೊಂದಕ್ಕೂ ಹೊತ್ತು ಗುತ್ತು ಅಂತ ಇರುತ್ತೆ. ಮಾನ್ಯ ಸಚಿವರಿಗೆ ಈ ಕೆಲಸ ತನ್ನ ಇಲಾಖೆಯ ಮಾನವನ್ನೇ ಹರಾಜಿಗಿಡುತ್ತ್ದೆ ಎನ್ನುವ ಎಚ್ಚರ ಇರಬೇಕಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಿ ಶಾಲೆಗಳ ಬಗೆಗೆ ಈಗಾಗಲೇ ಇರುವ ನಕಾರಾತ್ಮಕ ಮನೋಧರ್ಮವನ್ನು ಇದು ಮತ್ತಷ್ಟು ಹೆಚ್ಚಿಸುತ್ತದೆ ಎನ್ನುವ ಎಚ್ಚರವೂ ಇರಬೇಕಾಗಿತ್ತು. ಜೊತೆಗೆ ಇದೊಂದು ಬುದ್ಧಿಮತ್ತೆಯ ಪ್ರಶ್ನೆಗಿಂತ ಹೆಚ್ಚಾಗಿ ಸಾರ್ವಜನಿಕ ಅಪಮಾನದ ಕೆಲಸವಾಗಿಯೇ ಮಾಧ್ಯಮಗಲ್ಲಿ ಪ್ರಕಟವಾಗುತ್ತದೆ ಎನ್ನುವ ಎಚ್ಚರವೂ ಸಚಿವರಾದವರಿಗೆ ಇರಬೇಕಾಗಿತ್ತು. ಪ್ರಾಥಮಿಕ ಶಾಲೆಯ ಶಿಕ್ಷಕರು ಸಾಮಾನ್ಯವಾಗಿ ಸಾಮಾನ್ಯ ಹಿನ್ನೆಲೆಯವರಾಗಿಯೇ ಇರ್ತಾರೆ ಎಂಬುದೂ ಅಗತ್ಯವಾಗಿ ಅವರಿಗೆ ತಿಳಿದಿರಬೇಕಾಗಿತ್ತು. ಸಾಮಾನ್ಯರು ಯಾವಾಗಲೂ ಮರ್ಯಾದೆಗೆ ಹೆದರುತ್ತಾರೆ ಎನ್ನುವುದರ ಬಗೆಗೂ ಸಾಮಾನ್ಯ ತಿಳುವಳಿಕೆಯಿರಬೇಕಾಗಿತ್ತು. ಅದಿಲ್ಲವಾದುದು ನಮ್ಮ ದುರಂತ.ಏನೇ ಇರಲಿ ನ್ಯಾಯಕೇಳಲು ಹೋದ ಜಾಗಗಳು ಬಲಿಪೀಠಗಳಾಗಬಾರದು. ಈ ಕ್ವಿಜ್ ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವುದಿಲ್ಲ ಎಂಬುದು ತಿಳಿದಿರಲಿ. ಮಂತ್ರಿಗಲಿಗೆ ಸರ್ಕಾರಿ ಶಾಲೆಗಳ ಆರೋಗ್ಯ ಮುಖ್ಯ ಅಲ್ಲವೇ? ?

 3. ಎಲ್ಲ ವಿಷಯಗಳನ್ನು ನೆನಪಿಟ್ಟುಕೊಂಡು ಕೇಳಿದಾಗ ಥಟ್ಟೆಂದು ಹೇಳಲು ನಮ್ಮ ಮೆದುಳು ಕಂಪ್ಯೂಟರ್ ಅಲ್ಲ. ನಮ್ಮ ಮೆದುಳು ದಿನ ನಿತ್ಯದ ಅವಶ್ಯಕತೆಗಳಿಗೆ ಬೇಕಾಗಿಲ್ಲದ ವಿಷಯಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ. ಹೀಗಾಗಿ ಶಿಕ್ಷಕರಿಗೆ ಎಲ್ಲ ವಿಷಯಗಳೂ ನೆನಪಿರಬೇಕೆಂದು ನಿರೀಕ್ಷಿಸುವುದು ಸಮಂಜಸವಲ್ಲ ಮತ್ತು ಇದೊಂದು ಅಸಮರ್ಥತೆಯೂ ಅಲ್ಲ. ಇದಕ್ಕೆ ಮಾಧ್ಯಮಗಳು ಹೆಚ್ಚಿನ ಹರಿಸಬೇಕಾದ ಅವಶ್ಯಕತೆಯೂ ಇಲ್ಲ. ಇತಿಹಾಸದ ದಿನಾಂಕಗಳನ್ನು ಹಠಾತ್ತಾಗಿ ಕೇಳಿದಾಗ ಎಲ್ಲರೂ ಕಕ್ಕಾಬಿಕ್ಕಿಯಾಗಿ ತಡವರಿಸುವುದು ಸಹಜ. ಇದಕ್ಕೆ ಶಿಕ್ಷಕರೂ ಹೊರತಲ್ಲ.

 4. ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು… ಗಾಂಧಿ, ವಿವೇಕಾನಂದರ ಹುಟ್ಟಿದ ದಿನಾಂಕವನ್ನು ಕಟ್ಟಿಕೊಂಡು ಯಾರಿಗೇನಾಗಬೇಕು? ತಿಳಿದುಕೊಳ್ಳಬೇಕಿರುವುದು ಅವರ ವಿಚಾರಗಳ ಬಗ್ಗೆಯೇ ಹೊರತು ಗಾಂಧೀಜಿ ಅಕ್ಟೋಬರ್ ಎರಡಕ್ಕಾದರೂ ಹುಟ್ಟಲಿ ಇಪ್ಪತ್ತಕ್ಕಾದರೂ ಹುಟ್ಟಲಿ ವ್ಯತ್ಯಾಸವೇನು? ಥೂ .. ಅದಿಕ್ಕೇ ಈ ಇತಿಹಾಸ ಅಂದ್ರೆ ಬೋರು ಹೊಡಿಯುತ್ತೆ ಶಾಲೇಲಿ…

 5. ಗಾಂಧೀ ಮತ್ತು ವಿವೇಕಾನಂದರ ಆದರ್ಶಗಳನ್ನು ಪಾಲಿಸದೆ, ತಮ್ಮ ಜವಾಬ್ದಾರಿಕೆ ಹಾಗೂ ಇಲಾಖೆಯ ಮಾನವನ್ನು ಹರಾಜಿಗಿಟ್ಟವರಿಗೆ, ಕೇವಲ ಅವರ ಹುಟ್ಟಿದ ದಿನಗಳನ್ನು ನಾಮ ಮಾತ್ರಕ್ಕೆ ಆಚರಿಸಿ, ಆ ದಿನದ ಸಾರ್ವಜನಿಕ ರಜೆಯಲ್ಲಿ ಸಂಭ್ರಮಿಸುವವರಿಗೆ, ಇತರರ ಸಂಕಷ್ಟದಲ್ಲಿ ಆನಂದಗೋಳ್ಳುವವರಿಗೆ ಗಾಂಧಿ/ ವಿವೇಕಾನಂದರ ಹುಟ್ಟಿದ ದಿನಗಳನ್ನು ತಿಳಿಯುವ ಅಗತ್ಯವಾದರೂ ಏನೂ?
  ಮಾನ್ಯ ಸಚಿವರು ಮಾಡಿದ ತಪ್ಪಿಗಾಗಿ ಸಾರ್ವಜನಿಕವಾಗಿ ಕ್ಷಮೆಯನ್ನು ಯಾಚಿಸಿ, ಗಾಂಧಿ ಮತ್ತು ವಿವೇಕರ ಸಂದೇಶವನ್ನು ಕಾರ್ಯರೂಪಕ್ಕಿಳಿಸಿ ನಾಡಿಗೆ ಉತ್ತಮ ಶಿಕ್ಷಣದ ಮಾದರಿಯನ್ನು ನೀಡಬೇಕು.

 6. ನಮ್ಮ ಕೈಕೆಳಗಿನವರನ್ನು ಬಯ್ಯುವದಿದ್ದರೆ, ಅವರನ್ನು ಪ್ರೈವೇಟ್ ಆಗಿ ಕರೆದು ಅವರಿಗಷ್ಟೇ ಅರ್ಥವಾಗುವ ಹಾಗೆ ಬಯ್ಯಬೇಕು/ತಿಳಿಹೇಳಬೇಕು. ಆಗ ಅವರ ಆತ್ಮ್ಮಾಭಿಮಾನಕ್ಕೆ ಚ್ಯುತಿ ಬರುವದಿಲ್ಲ. ಅವರನ್ನು ಹೊಗಳುವದಿದ್ದರೆ ಎಲ್ಲರ ಎದುರಲ್ಲಿ ಹೊಗಳಬೇಕು. ಅದರಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಶಿಕ್ಷಣ ಸಚಿವರೇ ತಮ್ಮ ಇಲಾಖೆಯ ಜನರ ಮೇಲೆ ವಿಶ್ವಾಸ ಹಾಗೂ ಗೌರವ ಇಟ್ಟುಕೊಳ್ಳದಿದ್ದರೆ, ಅವರೊಬ್ಬ ಉತ್ತಮ ಲೀಡರ್ ಹೇಗಾಗುತ್ತಾರೆ?
  ಈ ಟೀವಿ ಮಾಧ್ಯಮದವರು ತಮ್ಮನ್ನು ತಾವು ಬೃಹಸ್ಪತಿಗಳು ಅಂತಾ ತಿಳ್ಕೊಂಡಿದ್ದಾರೆ. “ನಿಮ್ಮ ಕೆಲಸ ನೀವು ಮಾಡ್ರೀ, ನಮ್ಮ ಅರ್ಹತೆಯನ್ನು ಪ್ರಶ್ನಿಸಲು ನೀವ್ಯಾರು” ? ಅಂತಾ ಯಾವೊಬ್ಬ ಶಿಕ್ಷಕ/ಶಿಕ್ಷಕಿ ಪ್ರಶ್ನಿಸಿಲ್ಲವೇ? ಅಥವಾ ಪ್ರಶ್ನಿಸಿದ್ರೂ ಪ್ರಸಾರ ಮಾಡಿಲ್ಲವೇ?

 7. ನಮಸ್ತೆ…..ಗಾಂಧೀಜಿ ಅವರ ಜನ್ಮ ದಿನಾಂಕ ಗೊತ್ತಿರದ ಶಿಕ್ಷಕರು ತುಂಬಾ ವಿರಳ ಆದರೆ ಅಲ್ಲಿನ ಸನ್ನಿವೇಶ ಮತ್ತು ಆ ವಾತಾವರಣವನ್ನು ನೋಡಿದಾಗ ಎಂಥವರಿಗಾದರೂ ಗೊಂದಲವಾಗುವುದು ಸರ್ವೇ ಸಾಮಾನ್ಯ. ಇದೇ ಕಾರಣ ಇಟ್ಟುಕ್ಕೊಂಡು ಸಚಿವರ ಬಳಸಿದ ಮಾತುಗಳು ಬೇಸರ ತರಿಸಿವೆ. ಶಿಕ್ಷಕರು ದೊಡ್ಡವರಿಗೆ(ಸಚಿವರಿಗೆ/ಶಿಕ್ಷಣಾಧಿಕಾರಿಗಳು) ನೀಡುವ ಅತಿಯಾದ ಗೌರವವೂ ಒಂದು ಕಾರಣ ಎಂದೆನಿಸತ್ತದೆ. ಕೆಲವೊಂದು ಸಾರಿ ಅಧಿಕಾರಿಗಳು ಕೇಳುವ ಪ್ರಸ್ನೆಗಳಿಗೆ ಉತ್ತರ ತಿಳಿದಿದ್ದರು ಭಯ ವೆಂಬ ಭೂತ ನಿಸ್ಸಾಯಕ ರನ್ನಾಗಿ ಮಾಡಿ ಮಾಡಿಬಿಡುತ್ತದೆ. ಬಹಳಷ್ಟು ಶಿಕ್ಷಕರು ಅನುಭವಿಸಿದ ಕಹಿ ಅನುಭವಗಳಲ್ಲಿ ಇದು ಒಂದು. ಶಿಕ್ಷಕರು ಇನ್ನಾದರು ಎಚ್ಚರವಾಗವುದು ಸೂಕ್ತ….ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಲುವ ಜವಾಬ್ದಾರಿ ಎಲ್ಲ ಶಿಕ್ಷಕರ ಜವಾಬ್ದಾರಿ…

 8. ಮಾಧ್ಯಮದವರು 24X7 ಬಿತ್ತರಿಸುವ ಎಲ್ಲಾ ವಿಷಯಗಳಲ್ಲೂ ಸರ್ವಜ್ಞರಾಗಿರುವುದು ಹೇಗೆ ಅನಾವಶ್ಯಕ ಮತ್ತು ಅಸಾಧ್ಯವೋ ಅದೇ ರೀತಿ ಶಿಕ್ಷಕರು ಸಹ ಯಾವಾಗಲೂ general knowledgeನ soft ware ಅನ್ನು ತಮ್ಮ ತಲೆಯಲ್ಲಿ install ಮಾಡಿಕೊಂಡಿರಬೇಕೆಂದು ಅಪೇಕ್ಷೆ ಮಾಡುವುದೂ ಸರಿಯಲ್ಲ. .. ಆ ಬಡಪಾಯಿ ಶಿಕ್ಷಕರು ತಮ್ಮ ಅಹವಾಲು ಹೇಳಿಕೊಳ್ಳಲು ಸಚಿವರನ್ನು ಭೇಟಿ ಮಾಡಿದ್ದರೇ ಹೊರತು ಕ್ವಿಜ್ ಅಟೆಂಡ್ ಮಾಡಲು ಅಲ್ಲ. ವಿಧಾನ ಸೌಧದಲ್ಲಿ ತಮ್ಮ ಇಲಾಖೆಯ ಸಚಿವರನ್ನು ಭೇಟಿ ಮಾಡುವ ಆ ‘ಭಯಕೃತ್’ ಸನ್ನಿವೇಶ ಟಿ ವಿ ವಾಹಿನಿಗಳಿಗಿಗೆ ‘ತಮಾಷಾ’ ಆಗಿದ್ದು ದುರದೃಷ್ಟಕರ. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಸುದ್ದಿವಾಹಿನಿಗಳ ಸುದ್ದಿ ಪ್ರಚಂಡರು (tycoons) ಅವರೇ ನಡೆಸುವ ಚರ್ಚೆಗಳಲ್ಲಿ ಸೋತು ಪೇಲವವಾಗಿರುವುದು ಸಹ ಉಂಟಲ್ಲವೇ?-.

Leave a Reply

Your email address will not be published.