Daily Archives: September 24, 2014

ಸರ್ಕಾರಿ ಶಾಲೆಯಲ್ಲಿ ಬಾಡೂಟ : ಅಪರಾಧವಲ್ಲ, ಅನುಕರಣೀಯ

– ಸರ್ಜಾಶಂಕರ ಹರಳಿಮಠ

ಕುರಿಕೋಳಿ ಕಿರುಮೀನು ತಿಂಬುವರಿಗೆಲ್ಲ ಕುಲಜ ಕುಲಜರೆಂದೆಂಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು
ವಚನಕಾರ್ತಿ ಕಾಳವ್ವೆ

ಶಿವಮೊಗ್ಗ ಜಿಲ್ಲೆ ಸೊರಬದ ಶಾಲೆಯೊಂದರ ಶೈಕ್ಷಣಿಕ ಕಾರ್ಯಕ್ರಮವೊಂದರಲ್ಲಿ ಮಾಂಸಾಹಾರ ಸೇವಿಸಿದ್ದು ಅನಗತ್ಯವಾಗಿ ವಿಶೇಷ ಸುದ್ದಿಯಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ರೀತಿ ಮಾಂಸಾಹಾರ ಸೇವಿಸಿದ್ದು ತಪ್ಪು ಎನ್ನುವ ರೀತಿಯಲ್ಲಿಯೂegg ಈ ಸುದ್ದಿ ಪ್ರಕಟವಾಗಿದೆ.

ಈ ದೇಶದ ನೂರು ಜನರಲ್ಲಿ ತೊಂಬತ್ತೈದಕ್ಕೂ ಹೆಚ್ಚು ಜನ ಮಾಂಸಾಹಾರಿಗಳೇ ಆಗಿದ್ದಾರೆ. ಸಹಜವಾಗಿ ಶಾಲಾಮಕ್ಕಳಲ್ಲಿಯೂ ಕೂಡ ಹೆಚ್ಚಿನವರು ಮಾಂಸಾಹಾರಿಗಳೇ ಆಗಿರುತ್ತಾರೆ. ಹೀಗಿರುವಾಗ ಶಾಲೆಯ ಕಾರ್ಯಕ್ರಮವೊಂದರಲ್ಲಿ ಮಾಂಸಾಹಾರ ಸೇವನೆ ಹೇಗೆ ತಪ್ಪಾಗುತ್ತದೆ?

ಸಸ್ಯವಿಜ್ಞಾನಿ ಜಗದೀಶಚಂದ್ರ ಬೋಸರು ಸಸ್ಯಗಳಿಗೂ ಜೀವವಿದೆ ಎಂದು ಎಂದೋ ವೈಜ್ಞಾನಿಕವಾಗಿ ಸಾಬೀತುಪಡಿಸಿದ್ದಾರೆ. ಇದನ್ನೇ ಉದಾಹರಿಸಿ ದೇವನೂರು ಮಹಾದೇವ ಅವರು ತಾತ್ವಿಕವಾಗಿ ಸಸ್ಯಾಹಾರಕ್ಕೂ ಮತ್ತು ಮಾಂಸಾಹಾರಕ್ಕೂ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಇದು ತರ್ಕಬದ್ಧವಾಗಿದೆ. ಸಸ್ಯಗಳ ಜೀವಹರಣಕ್ಕೂ ಪ್ರಾಣಿಗಳ ಜೀವಹರಣಕ್ಕೂ ಯಾವುದೇ ವ್ಯತ್ಯಾಸವಿಲ್ಲ. ನಾವೂ ತುಂಬ ಸೂಕ್ಷ್ಮಮತಿಗಳಾದರೆ ಚಾಕುವಿನಿಂದ ಸಸ್ಯ, ತರಕಾರಿಗಳನ್ನು ಕೊಯ್ಯುವಾಗಲೂ ಅವುಗಳ ನೋವಿನ ಆಕ್ರಂದನ ನಮಗೆ ಕೇಳಿಸಬಹುದು.

ಸಸ್ಯಾಹಾರ ಶ್ರೇಷ್ಠ, ಮಾಂಸಾಹಾರ ಕನಿಷ್ಠ ಎಂಬ ಪ್ರಚಾರ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಇದು ಜಾತಿವ್ಯವಸ್ಥೆಯನ್ನು ಕಾಯ್ದಿರಿಸಿಕೊಂಡು ಹೋಗುವ ಸ್ವಹಿತಾಸಕ್ತ ವರ್ಗದ ಒಂದು ವ್ಯವಸ್ಥಿತ ಹುನ್ನಾರ. ಈ ಹುನ್ನಾರಗಳು ಎಷ್ಟು ಯಶಸ್ವಿಯಾಗಿವೆ ಎಂದರೆ ದಮನಿತ ಜಾತಿಗಳ ಮುಂದಾಳುಗಳೇ ಈಗ ಸಸ್ಯಾಹಾರದ ಶ್ರೇಷ್ಟತೆಯನ್ನು ಪ್ರಚಾರ ಮಾಡುವ ವಕ್ತಾರರಾಗಿಬಿಟ್ಟಿದ್ದಾರೆ. ಹಾಗಾಗಿಯೇ ಪಕ್ಕಾ ಮಾಂಸಾಹಾರಿ ಮಾರಮ್ಮ, ಚೌಡಮ್ಮಗಳ ಗುಡಿಗಳ ಆವರಣದಲ್ಲಿಯೇ ಮಾಂಸಾಹಾರ ನಿಷೇಧಿಸಲ್ಪಟ್ಟಿದೆ. ಈ ಶಕ್ತಿಶಾಲಿ ದೈವಗಳೂ ಪಾನಕ, ಕೋಸಂಬರಿಗಳ ಮೂಲಕವೇ ಶಕ್ತಿವೃದ್ಧಿಸಿಕೊಂಡು ವೈರಿಗಳನ್ನು ನಿಗ್ರಹಿಸಬೇಕಾದ ದುರಂತ ಸ್ಥಿತಿ ಎದುರಾಗಿದೆ.

ಈಗ ಯಾವ ಹಬ್ಬ ಹರಿದಿನಗಳು ಬಂದರೂ ಮಾಂಸಮಾರಾಟ ನಿಷೇಧವನ್ನು ಜಾರಿಗೊಳಿsarja-1ಸಲಾಗುತ್ತದೆ. ಇದು ಎಲ್ಲಿಯವರೆಗೆ ಬಂದಿದೆ ಎಂದರೆ ಮಾಂಸಾಹಾರವನ್ನೇ ಪ್ರಧಾನ ಆಹಾರವಾಗಿ ಬಳಸುವ ದಮನಿತ ಜಾತಿಗಳ ಸ್ವಾಭಿಮಾನದ ಸಂಕೇತವಾದ ಅಂಬೆಡ್ಕರ್ ಅವರ ಜನ್ಮದಿನದಂದೂ ಮಾಂಸ ಮಾರಾಟವನ್ನು ನಿಷೇಧಿಸಲಾಗುತ್ತದೆ.

ಈಗ ಸರ್ಕಾರಿ ಹಾಸ್ಟೆಲ್ಲುಗಳಲ್ಲಿ ವಾರದಲ್ಲಿ ಒಂದು ದಿನ ಮಾಂಸಾಹಾರವನ್ನು ನೀಡಲಾಗುತ್ತದೆ. ಇದು ಸರಿಯಾದದ್ದು. ಅದೇ ರೀತಿ ಸರ್ಕಾರಿ ಶಾಲೆಗಳ ಬಿಸಿಯೂಟದಲ್ಲಿಯೂ ವಾರಕ್ಕೆ ಒಂದು ದಿನ ಮಾಂಸಾಹಾರವನ್ನು ನೀಡುವುದು ಸೂಕ್ತವಾದುದಾಗಿದೆ.
ಮಾಂಸಾಹಾರ ತಯಾರಿಕೆಗೆ ಹೆಚ್ಚಿನ ಮುತುವಜರ್ಿ ಬೇಕಾಗುತ್ತದೆ, ಹೆಚ್ಚಿನ ಸ್ವಚ್ಚತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ ಎಂಬುದು ನಿಜ. ಇದೇನು ಪಾಲಿಸಲು ಅಸಾಧ್ಯವಾದ ಕೆಲಸವಲ್ಲ. ಎಸ್.ಎಂ ಕೃಷ್ಣ ಸಕರ್ಾರ ಶಾಲೆಗಳಲ್ಲಿ ಬಿಸಿಯೂಟ ಕೊಡುತ್ತೀವಿ ಎಂದು ಪ್ರಕಟಿಸಿದಾಗ ಅದನ್ನು ಜಾರಿಗೆ ತರಲಾಗದ್ದೆಂದು ಲೇವಡಿ ಮಾಡಿದವರೇ ಹೆಚ್ಚು ಜನ. ಆದರೆ ಅದು ಯಶಸ್ವಿಯಾಗಿದೆ. ಬಿಸಿಯೂಟ ತಯಾರು ಮಾಡುವವರು ಕೆಳಜಾತಿಯವರು ಎಂಬ ಕಾರಣಕ್ಕೆ ಊಟ ಬಹಿಷ್ಕರಿಸಿದ ಪ್ರಕರಣಗಳೂ ನಡೆದವು. ಆದರೆ ಕ್ರಮೇಣ ಸರಿ ಹೋಯಿತು. ಸರ್ಕಾರ ಬಿಸಿಯೂಟದಲ್ಲಿ ವಾರದಲ್ಲಿ ಒಂದು ದಿನ ಮಾಂಸಾಹಾರ ನೀಡಲು ಆರಂಭಿಸಿದರೆ ಅದೂ ಯಶಸ್ವಿಯಾಗುತ್ತದೆ.
ಮಾಂಸಾಹಾರದ ಪ್ರಶ್ನೆಯಿರುವುದು ಆಹಾರದ ಪ್ರಶ್ನೆಯಾಗಿ ಅಲ್ಲ. ಮನುಷ್ಯನೊಬ್ಬ ತಿನ್ನುವ ಆಹಾರದ ಮೂಲಕವೇ ಆತನನ್ನು ನೋಡುವ ದೃಷ್ಟಿಕೋನದ ಪ್ರಶ್ನೆ. ಡಾ.ರಹಮತ್ ತರೀಕೆರೆ ಅವರು ತಮ್ಮ ಮರದೊಳಗಣ ಕಿಚ್ಚು ಕೃತಿಯಲ್ಲಿ ವಿಶ್ಲೇಷಿಸುವ ಹಾಗೆ ಬಹುಸಂಸ್ಕೃತಿಗಳ ಈ ದೇಶದೊಳಗೆ ನಡೆದ, ಈಗಲೂ ನಡೆಯುತ್ತಿರುವ ದೊಡ್ಡ ದೌರ್ಜನ್ಯವೆಂದರೆ, ಸಂಸ್ಕೃತಿನಿಷ್ಟವೂ ಖಾಸಗಿಯೂ ಆದ ಉಣ್ಣುವ ವಸ್ತುಗಳನ್ನು, ಕನಿಷ್ಟ ಮತ್ತು ಶ್ರೇಷ್ಠವೆಂದು ವಿಂಗಡಿಸಿ ಪ್ರಮಾಣೀಕರಿಸಿರುವುದು. ಈ ಹಿನ್ನೆಲೆಯಲ್ಲಿ ಸರ್ಕಾರಿ ಅಧೀನದ ಸಂಸ್ಥೆಗಳಲ್ಲಿ ಮಾಂಸಾಹಾರದ ಸಾರ್ವತ್ರಿಕ ಬಳಕೆ ಅಗತ್ಯವಾಗಿದ್ದು ಅದಕ್ಕಾಗಿ ಒತ್ತಾಯಿಸಬೇಕಾಗಿದೆ.
ಸರ್ಕಾರಿ ಶಾಲೆಯಲ್ಲಿ ಬಾಡೂಟ ಮಾಡಿದರೆ ಅದು ಅಪರಾಧವಲ್ಲ, ಅನುಕರಣೀಯವಾದದ್ದು.