Daily Archives: September 26, 2014

ನಮ್ಮ ಸುದ್ದಿ ಸಮಾಚಾರಗಳನ್ನು ಉತ್ತೇಜನಗೊಳಿಸುತ್ತಿರುವ ಉನ್ಮಾದಗಳು


ಇಂಗ್ಲೀಷ್ : ಆಕಾರ್ ಪಟೇಲ್
ಅನುವಾದ : ಬಿ.ಶ್ರೀಪಾದ ಭಟ್


ನನ್ನ ಹೊಸ ಪುಸ್ತವೊಂದನ್ನು ಬರೆದು ಮುಗಿಸುವ ಧಾವಂತದಲ್ಲಿದ್ದ ನನಗೆ ಇತ್ತೀಚಿನ ಒಂದೆರೆಡು ವಾರಗಳಲ್ಲಿ ದಿನಪತ್ರಿಕೆಗಳನ್ನು ಓದಲು ಸಾಧ್ಯವಾಗಿರಲಿಲ್ಲ. tv-mediaದಿನಪತ್ರಿಕೆಗಳನ್ನು ಓದಲಾಗದ ಈ ವಾರಗಳಲ್ಲಿ ನಾನೇದರೂ ಮುಖ್ಯವಾದದ್ದನ್ನು ಕಳೆದುಕೊಂಡೆನೆ ಎನ್ನುವ ಚಿಂತೆ ಈಗ ನನ್ನನ್ನು ಕಾಡತೊಡಗಿತ್ತು? ಆದರೆ ನಂತರ ಕೆಲವು ದಿನಪತ್ರಿಕೆಗಳನ್ನು ಓದಿದ ನಂತರ ಇಂಡಿಯಾದಲ್ಲಿ ಸುದ್ದಿ ಸಮಾಚಾರಗಳು ವಿವೇಕವನ್ನು, ತಿಳುವಳಿಕೆಗಳನ್ನು ಕಳೆದುಕೊಂಡಿವೆ ಎಂದು ನನಗೆ ಖಾತ್ರಿಯಾಯಿತು. ಬಿಜೆಪಿ ಪಕ್ಷವು 33 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರೂ ಅದು ಸೋತಿದೆ ಎಂದು ವಿಶ್ಲೇಷಿಸಲಾಗುತ್ತಿದೆ ಮತ್ತು ಕಾಂಗ್ರೆಸ್ ಆ 33 ಕ್ಷೇತ್ರಗಳ ಪೈಕಿ ಕೇವಲ 7 ಕ್ಷೇತ್ರಗಳನ್ನು ಮಾತ್ರ ಗೆದ್ದಕೊಂಡರೆ ಅದರ ವಕ್ತಾರರು ತಮ್ಮ ಪಕ್ಷ ಜಯಭೇರಿ ಬಾರಿಸಿದೆಯೆಂಬಂತೆ ಕುಣಿಯುತ್ತಿದ್ದಾರೆ. ಗ್ರೀಕ್ ಬುಡಕಟ್ಟು ಮಲೋಸಿಯನ್ಸ್ ನ ನಾಯಕನಾಗಿದ್ದ ಪೈರಥಸ್ ರೋಮ್ ನ ವಿರುದ್ಧ ಯುದ್ಧದ ಸಂದರ್ಭದಲ್ಲಿ (ಕ್ರಿ.ಪೂ.281) ಪ್ರಚಾರ ಮಾಡುತ್ತಾ “ರೋಮನ್ನರ ವಿರುದ್ಧ ಮುಂದಿನ ಮತ್ತೊಂದು ಯುದ್ಧದಲ್ಲಿ ನಾವೇನಾದರೂ ಗೆದ್ದರೆ ನಾವೆಲ್ಲಾ ನಾಶವಾಗುತ್ತೇವೆ” ಎಂದು ಹೇಳುತ್ತಾನೆ. ನಾನು ಸಂಪೂರ್ಣವಾಗಿ ಒಂದು ದಿನದ ಸಮಯವನ್ನು ಸಿಎನ್ಎನ್, ಎಬಿಪಿ,ಸಿ.ಎನ್.ಬಿ.ಸಿ (ಗುಜರಾತಿ) ಟಿವಿ ಸುದ್ದಿ ಛಾನಲ್ ಗಳನ್ನು ನೋಡುತ್ತ ಹೊಸ ಒಳನೋಟಗಳಿಗಾಗಿ ವ್ಯರ್ಥ ಪ್ರಯತ್ನ ಮಾಡಿದೆ. ಮುದ್ರಣ ಮಾಧ್ಯಮದ ಟೈಮ್ಸ್ ಆಫ್ ಇಂಡಿಯಾದಲ್ಲಿ ಉತ್ತರ ಪ್ರದೇಶ, ರಾಜಸ್ತಾನ, ಗುಜರಾತ್ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಸಂಪೂರ್ಣವಾಗಿ ಸೋತಿದೆ ಮತ್ತು ವಾಸ್ತವದ ಚಿತ್ರಣವನ್ನು ಎದುರಿಸುತ್ತಿದೆ ಎಂದು ಮುಖಪುಟದಲ್ಲಿ ವರದಿ ಮಾಡಿದೆ. ಆದರೆ ಗುಜರಾತ್ ನಲ್ಲಿ ಬಿಜೆಪಿ 9 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳನ್ನು ಗೆದ್ದು ಮುಕ್ಕಾಲು ಪಾಲು ಸೀಟುಗಳನ್ನು ಗಳಿಸಿರುವುದು ಪ್ರಧಾನ ಮಂತ್ರಿಯ ಸೋಲು ಎನ್ನುವುದಾದರೆ ಪ್ರಧಾನ ಮಂತ್ರಿಯ ಸಾಮರ್ಥ್ಯ ಅಷ್ಟೊಂದು ದೊಡ್ಡ ಮಟ್ಟದ್ದೇ ಎನ್ನುವುದೇ ನನ್ನ ಚಿಂತೆ? ಈ ಕೂಡಲೆ ಮೀಡಿಯಾಗಳು ಎಲ್ಲ ಘಟನೆಗಳು ವಿಭಿನ್ನವಾಗತೊಡಗಿವೆ, ಉಜ್ವಲ ಭವಿಷ್ಯವಿದೆ ಎಂದು ನಂಬತೊಡಗಿದೆಯೇ?

ಗುಜರಾತ್ ನ ಪತ್ರಿಕೆಗಳ ಪ್ರಕಾರ ಚೀನಾದ ಅಧ್ಯಕ್ಷ ಜೀಪಿಂಗ್ ಅವರ ಭೇಟಿಯು ಅಷ್ಟೊಂದು ಭಾವೋದ್ರೇಕಗೊಳಿಸುವಷ್ಟು ಉತ್ತೇಜನಕಾರಿಯಾಗಿದೆಯೆ? modi-xinpingಅಹಮದಾಬಾದ್ ಮಿರರ್ ಪತ್ರಿಕೆಯಲ್ಲಿನ ಪಿಟಿಐ ವರದಿಯ ಅನುಸಾರ ಚೀನಾ ಅಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ಮೋದಿಯ ಆತಿಥ್ಯದಲ್ಲಿ ಏರ್ಪಡಿಸಿದ ಭೋಜನಕೂಟವು ಹಿಂದಿನ ಎಲ್ಲಾ ಭೋಜನಕೂಟಗಳ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದು ಈಗಿನ ಸಂದರ್ಭದಲ್ಲಿ ಅದು ಕೇವಲ ಗುಜರಾತಿ ಭೋಜನವನ್ನು ಒಳಗೊಂಡಿರುತ್ತದೆ ಎಂದು ಅಲ್ಲಿನ ರಾಜ್ಯ ಸರ್ಕಾರವು ಹೇಳಿಕೆ ನೀಡಿದೆ. ನನಗೆ ಆಶ್ಚರ್ಯವಾಗಿದ್ದು ಆ ಹಳೆಯ ಉಹಾಪೋಹಗಳ ಕುರಿತಾಗಿ. ಅದೇನದು? ರೀಢಿಫ್ ಅಂತರ್ಜಾಲ ತಾಣವು 50 ವಿವಿಧ ಬಗೆಯ ಸಾತ್ವಿಕವಾದ, ದೇಸಿಯವಾದ ಆಹಾರವನ್ನು ಈ ಭೋಜನಕೂಟದಲ್ಲಿ ಆಯೋಜಿಸಲಾಗಿತ್ತು ಮತ್ತು ಅತ್ಯತ್ತಮ ಮಟ್ಟದ ಮಜ್ಜಿಗೆಯಲ್ಲಿ ಕೈ ತೊಳೆಯುವಂತಹ ಅವಕಾಶವನ್ನು ಕಲ್ಪಿಸಲಾಗಿತ್ತು ಎಂದು ಬರೆದುಕೊಂಡಿದೆ. ಸಂಪೂರ್ಣ ಸಸ್ಯಹಾರಿ ಎನ್ನುವುದು ಒಂದು ಸಹಜ ಸಂಗತಿಯೆಂದು ಅಂದುಕೊಳ್ಳಬಹದು. ಆದರೆ ಅದನ್ನು ನ್ಯಾಯಬದ್ಧವಾದ ಗುಜರಾತಿ ಆಹಾರವೆಂದು ಕ್ರಮಬದ್ಧಗೊಳಿಸತೊಡಗಿದರೆ? ಈ ಮೂಲಕ ನ್ಯಾಯಬದ್ಧವಾದ ಗುಜರಾತಿ ಆಹಾರವೆಂದರೆ ಅದು ಸಸ್ಯಹಾರಿ ಆಹಾರವೆಂದು ಪ್ರತಿಪಾದಿಸುತ್ತಿದ್ದೇವೆಯೇ? ಗುಜರಾತ್ ಆಹಾರದ ಹೆಸರಿನಲ್ಲಿ ನಡೆಯುತ್ತಿರುವ ಈ ಬಗೆಯ ವಂಚನೆಯು ಚೀನಿಯರ ಮೇಲೆ ಮಾತ್ರ ನಡೆಯುತ್ತಿಲ್ಲ, ಬದಲಾಗಿ ಎಲ್ಲಾ ಭಾರತೀಯರ ಮೇಲೆಯೂ ನಡೆಯುತ್ತಿದೆ.

ಗುಜರಾತ್ ನಲ್ಲಿ ಶೇಕಡಾ 1 ರಷ್ಟಕ್ಕಿಂತಲೂ ಕಡಿಮೆ ಜನಸಂಖ್ಯೆಯಲ್ಲಿರುವ ಮಾರ್ವಾಡಿಗಳು ಇಂದುgujarati-thali ಗುಜರಾತ್ ನ ಆಹಾರದ ಪ್ರತಿನಿಧಿಗಳಾಗಿದ್ದಾರೆ. ಏಕೆ ಗೊತ್ತೆ? ಅಲ್ಲಿನ ರಾಜ್ಯದ ಹೊರತಾಗಿ ಹೊರಗಿನವರೆಲ್ಲರೂ ಗುಜರಾತಿಗಳೆಂದರೆ ಮಾರ್ವಾಡಿಗಳೆನ್ನುವ  (ಶಾ, ಮೆಹ್ತ, ಸಾಂಘ್ವಿ, ಇತ್ಯಾದಿ) ಭ್ರಮೆಯಲ್ಲಿರುವುದು ಮತ್ತು ತೀರಾ ಸಣ್ಣ ಸಂಖ್ಯೆಯಲ್ಲಿರುವ ಸಂಪೂರ್ಣ ಸಸ್ಯಹಾರಿಗಳಾದ ಬನಿಯಾಗಳನ್ನು ಸಹ ಇದೇ ದೃಷ್ಟಿಯಲ್ಲಿ ನೋಡಲಾಗಿದೆ. ಈ ಕಮ್ಯುನಿಟಿಗಳು ವ್ಯಾಪಾರದ ಹಿನ್ನೆಲೆಯುಳ್ಳವರು ಮತ್ತು ವ್ಯಾಪಾರದ ಸಲುವಾಗಿ ಇತರೆ ರಾಜ್ಯಗಳಿಗೆ ಪ್ರಯಾಣ ಮಾಡುವಾಗ ತಮ್ಮೊಂದಿಗೆ ತಮ್ಮದೇ ಆಹಾರವನ್ನು ಕೊಂಡೊಯ್ಯುವಂತಹವರು. ಇಂತಹದೇ ಇನ್ನಿತರ ಕಾರಣಕ್ಕಾಗಿ ಮಿಕ್ಕೆಲ್ಲ ಗುಜರಾತಿಗಳು ಈ ಕಮ್ಯುನಿಟಿಗಳನ್ನು ಸಾಂಸ್ಕೃತಿಕವಾಗಿ ಶ್ರೇಷ್ಠ್ಟರೆಂದೇ ಒಪ್ಪಿಕೊಂಡುಬಿಟ್ಟಿದ್ದಾರೆ. ಆದರೆ ಇನ್ನೂ ಅನೇಕರು ಇದನ್ನು ಒಪ್ಪಿಕೊಂಡಿಲ್ಲ. ಗುಜರಾತ್ ನgujrati- non veg ತಳಸಮುದಾಯಗಳು ಮಾಂಸಾಹಾರಿಗಳು. ಕೋಲಿಗಳು, ಸೂರತ್ ನ ಖತ್ರಿಗಳು, ದರ್ಬಾರ್ ಗಳು, ಗಾಂಚಿ ಸಮುದಾಯದವರು ಇಂದಿಗೂ ದೊಡ್ಡ ಸಂಖ್ಯೆಯಲ್ಲಿರುವ ಮಾಂಸಹಾರಿಗಳು. ಬಹುಶಃ ನರೇಂದ್ರ ಮೋದಿಯವರ ಸಮುದಾಯವಾದ ಗಾಂಚಿ ಸಮುದಾಯದವರು ಮಾಂಸಹಾರಿಗಳಾಗಿದ್ದರೂ ತಮ್ಮ ಕುಟುಂಬದ ಹಿನ್ನಲೆಯಿಂದಾಗಿ ಮತ್ತು ದಶಕಗಳ ಕಾಲ ಸ್ವತ ಆರೆಸಸ್ ಸಂಚಾಲಕರಾಗಿದ್ದಕ್ಕಾಗಿ ನರೇಂದ್ರ ಮೋದಿಯು ವೈಯುಕ್ತಿಕ ಆಯ್ಕೆಯಿಂದ ಮಾತ್ರ ಸಸ್ಯಹಾರಿ. ಗಾಂಚಿ ಸಮುದಾಯದವರು ಹೊಸ ವರ್ಷದ ಸಂದರ್ಭದಲ್ಲಿ ಅತ್ಯುತ್ತಮವಾದ ಪಾಂಫ್ರೆಟ್ ಅಥವಾ ನಾವು ಕರೆಯುವ ಪಾಪ್ಲೆಟ್ ಅನ್ನು ಮಾಡುತ್ತಾರೆ. ನಾನೂ ಸಹ ಸಸ್ಯಹಾರಿ ಅಲ್ಲ. ತನ್ನ ಬಾತೇ ಎನ್ನುವ ಪ್ರಬಂಧದಲ್ಲಿ (ಗಲಭೆಗಳ ಸಂದರ್ಭದಲ್ಲಿ ಬಾಂಬೆ ಎಂದು ನಾನು ಅನುವಾದ ಮಾಡಿದ್ದೆ) ಸಾದತ್ ಹಸನ್ ಮಂಟೋ ಹಳೆಯ ಸಂಗತಿಗಳಿಂದಲೇ ಹಿಂಸೆಯು ಹುಟ್ಟುತ್ತದೆ ಎಂದು ಬರೆಯುತ್ತಾ “ಮಂದಿರ ಮತ್ತು ಮಸೀದಿ ಎರಡೂ ಮತ್ತೇನಲ್ಲ ಕಲ್ಲು ಮಾತ್ರ ಎಂದು ನಾನು ನಂಬಿದ್ದೇನೆ. ಗೋವು ಮತ್ತು ಹಂದಿ ಸಹ ನನಗೆ ಕೇವಲ ಮಾಂಸ ಮಾತ್ರ ಮತ್ತೇನಿಲ್ಲ” ಎಂದು ಹೇಳುತ್ತಾನೆ. ನನಗೂ ಅಷ್ಟೇ. ಪಟೇಲ್ ಸಮುದಾಯದ ಆಹಾರವು ಬನಿಯಾ-ಜೈನ್ ಸಮುದಾಯದ ಆಹಾರಕ್ಕಿಂತ ಹೆಚ್ಚು ಶ್ರೇಷ್ಠ ಮತ್ತು ಆರೋಗ್ಯಕಾರಿಯಾದದ್ದು ಎಂದು ನಂಬಿದ್ದೇನೆ. ಹೀಗಾಗಿ, “ಮಿ. ಜೀಪಿಂಗ್ ನೀವು ನಿಮ್ಮ ಆಹಾರವನ್ನು ಆಸ್ವಾದಿಸಿದ್ದೀರೆಂದು ನಾನು ನಂಬಿದ್ದೇನೆ ಆದರೆ ಇದನ್ನೇ ಪ್ರತಿನಿಧಿತ್ವ ಎಂದು ನಂಬಬೇಡಿ.”

ಗುಜರಾತಿನ ವಿಷಯಕ್ಕೆ ಮತ್ತೆ ಮರಳಿದರೆ ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಯಲ್ಲಿ ಬಿಜೆಪಿ ಶಾಸಕರು ಇನ್ನು ಮುಂದೆ Garba-crashing  ಅನ್ನು ನಿಷೇಧಿಸಬೇಕು ಎಂದು ಬಯಸಿದ್ದಾರೆ Garba-Festivalಎಂದು ವರದಿಯಾಗಿತ್ತು. ಇದು ನನ್ನಲ್ಲಿ ಕುತೂಹಲವನ್ನು ಕೆರಳಿಸಿತು. ಈ ವರದಿಯಲ್ಲಿ ಬಿಜೆಪಿ ಪಕ್ಷದ ಇಂದೂರ್ ನ ಉಷಾ ಠಾಕೂರ್ ಅವರು ಗರ್ಬಾ ಸಂಘಟಕರಿಗೆ ತಮ್ಮ ಯೋಗ್ಯತೆಯನ್ನು ಪ್ರಮಾಣ ಮಾಡಿ ತೋರಿಸುವ ಗಂಡಸರಿಗೆ ಮಾತ್ರ ಇಡೀ ರಾತ್ರಿ ನಡೆಯುವ ಗರ್ಬ ನೃತ್ಯದಲ್ಲಿ ಭಾಗವಹಿಸಲು ಅನುಮತಿ ಕೊಡಿ ಎಂದು ನಿರ್ದೇಶಿಸಿದ್ದಾರೆ ಎಂದು ಬರೆಯಲಾಗಿದೆ. ಏಕೆಂದರೆ ಮುಸ್ಲಿಂರಿಗೆ ಗರ್ಬಾ ಸ್ಥಳದಲ್ಲಿ ಪ್ರವೇಶಿಸಲು ಅವಕಾಶ ಇರಬಾರದು ಎನ್ನುವುದು ಆಕೆಯ ಇರಾದೆ. ಸಂಘಟಕರಿಗೆ ಬರೆದ ಪತ್ರದಲ್ಲಿ ಮುಸ್ಲಿಂ ಗಂಡಸರಿಗೆ ಗರ್ಬಾ ಸ್ಥಳಗಳಲ್ಲಿ ಪ್ರವೇಶಕ್ಕೆ ಅನುಮತಿ ಕೊಡಬೇಡಿ, ಅವರು ನಮ್ಮ ಹಿಂದೂ ಹೆಣ್ಣು ಮಕ್ಕಳನ್ನು ಪ್ರಚೋದಿಸಿ ಮರಳು ಮಾಡುತ್ತಾರೆ ಎಂದು ಹೇಳಿದ್ದಾರೆ. ಇದರ ಮೇಲೆ ಏನೇ ವಾಖ್ಯಾನ ಮಾಡಿದರೂ ಅದು ಮೇಲಿನ ಕತೆಯ ವೈಶಿಷ್ಟತೆಯನ್ನೇ ಹಾಳು ಮಾಡುವುದರಿಂದ ಹಾಗೆ ಮಾಡದೆ ಮತ್ತೊಂದು ವರದಿಯನ್ನು ನೋಡೋಣ. ಭೂಪಾಲ್ ನ ಬಿಜೆಪಿ ಶಾಸಕ ರಾಮೇಶ್ವರ್ ಶರ್ಮ ಹಿಂದೂಸ್ತಾನ್ ಟೈಮ್ಸ್’ ನೊಂದಿಗೆ ಮಾತನಾಡುತ್ತ “ನಾನು ಈ ಮುಸ್ಲಿಂರನ್ನು ವಿರೋಧಿಸುವುದಿಲ್ಲ. ಆದರೆ ಯಾರೇ ಆಗಲಿ ನಮ್ಮ ಈ ಹಿಂದೂ ಹಬ್ಬಗಳಲ್ಲಿ ಭಾಗವಹಿಸಬೇಕೆಂದು ಬಯಸುವವರು ಮೊದಲು ನಮ್ಮ ಧರ್ಮದಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ನಂತರವಷ್ಟೇ ಅದರಲ್ಲಿ ಭಾಗವಹಿಸಬಹುದು” ಎಂದು ಹೇಳಿದ್ದಾರೆ. ಈ ಬಿಜೆಪಿ ಶಾಸಕರಿಗೆ ಮುಸ್ಲಿಮರು ಹಿಂದೂಗಳಾಗಿರುವವರೆಗೂ ಅವರ ಕುರಿತಾಗಿ ಯಾವುದೇ ತಕರಾರಿಲ್ಲ.

ಅದೇ ದಿನದ ಮತ್ತೊಂದು ಸಮಾಚಾರದ ಪ್ರಕಾರ ಜಲ ಸಂಪನ್ಮೂಲ ಮಂತ್ರಿ ಉಮಾ ಭಾರತಿ ಅವರು “ಉತ್ತರಾಂಚಲದ ಕೇದಾರನಾಥ ಬಳಿಯ ದೇವಸ್ಥಾನದ ಸಮುಚ್ಛಯದಲ್ಲಿumabharathi-kedarnath 1882ರಲ್ಲಿ ಮಂದಾಕಿನಿ ಮತ್ತು ಸರಸ್ವತಿ ನದಿಗಳು ಹರಿಯುತ್ತಿದ್ದವು. ನಾಸ್ತಿಕರು ವ್ಯವಹಾರಕ್ಕಾಗಿ ಇಲ್ಲಿಗೆ ಬಂದರು. ವ್ಯವಹಾರವನ್ನು ಪ್ರಾರಂಬಿಸಿದರು. ಕ್ಷುಲ್ಲಕವಾದ ಸಂಗತಿಗಳಲ್ಲಿ ತೊಡಗಿದರು. ಇದರ ಫಲವಾಗಿಯೇ 2013ರಲ್ಲಿ ಕೇದಾರನಾಥ ದಲ್ಲಿ ಪ್ರವಾಹ ಉಕ್ಕಿಬಂದು ಸುಮಾರು 1000 ಜನ ತೀರಿಕೊಂಡರು” ಎಂದು ಹೇಳಿದ್ದಾರೆಂದು ವರದಿಯಾಗಿದೆ. ಕೇವಲ ಆರನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿರುವ ಆಕೆಯಿಂದ ಹೆಚ್ಚಿನದೇನನ್ನೂ ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಉಮಾಭಾರತಿಯವರ ಈ ದೃಷ್ಟಿಕೋನವು ನನಗೇನು ಆಶ್ಚರ್ಯವನ್ನುಂಟು ಮಾಡಲಿಲ್ಲ. ಆದರೆ ನನಗೆ ಆಶ್ಚರ್ಯವನ್ನುಂಟು ಮಾಡಿರುವುದು ನಾಸ್ತಿಕರು ಇಂಡಿಯಾದಲ್ಲಿ ವ್ಯವಹಾರ ಮಾಡಲು ಬಂದರು ಎನ್ನುವ ದೃಷ್ಟಿಕೋನದಿಂದ. ಆದರೆ ಗಂಗಾ ಶುದ್ಧೀಕರಣಕ್ಕಾಗಿ ನರೇಂದ್ರ ಮೋದಿಯವರಿಂದ ನೇಮಿಸಲ್ಪಟ್ಟಿರುವ ಉಮಾಭಾರತಿಯವರು ಈ ಗಂಗಾ ನದಿಯ ಕುರಿತಾಗಿ ಏನು ಹೇಳುತ್ತಾರೆಂದು ನನಗೆ ಕುತೂಹಲವಿದೆ. ಇದೇ ಪತ್ರಿಕೆಯಲ್ಲಿ ಸಮಾಜ ಮತ್ತು ಮಹಿಳಾ ಕಲ್ಯಾಣ ಸಚಿವೆ ಮನೇಕಾ ಗಾಂಧಿಯವರು ದನದ ಮಾಂಸದ ರಫ್ತಿನಿಂದಾಗಿ ಭಯೋತ್ಪಾದನೆ ಬೆಳೆಯುತ್ತಿದೆ ಎಂದು ಹೇಳಿದ್ದಾಗಿ ವರದಿಯಾಗಿದೆ. ಉನ್ಮಾದದ, ಭ್ರಾಂತಚಿತ್ತರ ನಾಡಿನವರೆಂದು ಕರೆಯಲ್ಪಡುವ ನಮ್ಮ ಕುರಿತಾದ ಈ ವರದಿಗಳಿಗೆ ವಿದೇಶಿ ವರದಿಗಾರರು ಅಂತಹ ಹೆಚ್ಚಿನ ಗಮನ ಕೊಡಲಾರರೆಂದು ನಾನು ಭಾವಿಸಿದ್ದೇನೆ. ಆದರೆ ನನ್ನ ಈ ಆಶಯವೂ ವ್ಯರ್ಥವಾದದ್ದೆಂದು ನನಗೆ ಗೊತ್ತಾಯಿತು. ಏಕೆಂದರೆ ಕೆಲವು ದಿನಗಳ ಹಿಂದೆ ರಾಷ್ಟ್ರೀಯ ರೇಡಿಯೊವೊಂದರ ಸಂದರ್ಶನಕ್ಕೆ ಹೋಗಿದ್ದ ನನಗೆ ಅಮೇರಿಕಾದ ವರದಿಗಾರರೊಬ್ಬರು ಇಲ್ಲಿನ ವಿಜ್ಞಾನಿಗಳು ಈ ಜ್ಯೋತಿಷ್ಯ ಮತ್ತು ಜಾತಕಗಳನ್ನು ನಂಬಿ,ಆ ನಂಬಿಕೆಗಳ ಮೇಲೆ ಮಂಗಳ ಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಹಾರಿ ಬಿಡುತ್ತಾರೆ ಎಂದು ಅಚ್ಚರಿಯಿಂದ ನನ್ನನ್ನು ಪ್ರಶ್ನಿಸಿದ್ದರು. ( ಆಕೆ ಕೆಲವು ವಿಜ್ಞಾನಿಗಳನ್ನು ಸಂದರ್ಶಿಸಿದ್ದರು)

ಇಂಗ್ಲೀಷ್ ಮಾಧ್ಯಮದಲ್ಲಿ, ಆಧುನಿಕ ಶಿಕ್ಷಣದಲ್ಲಿ ವಿಧ್ಯಾಭ್ಯಾಸMangalyaan ಮಾಡಿರುವ ಭಾರತೀಯರು ಈ ಶನಿ, ಮಂಗಳ ಗ್ರಹಗಳ ಕುರಿತಾಗಿ ವೈಜ್ಞಾನಿಕವಾಗಿ ಪರಿಣಿತಿಯನ್ನು ಮತ್ತು ಜ್ಞಾನವನ್ನು ಹೊಂದಿರುತ್ತಾರೆ. ಅದೇ ಸಂದರ್ಭದಲ್ಲಿ ಇವರು ಮಂಗಳ, ಶನಿ ಗ್ರಹಗಳ ಕುರಿತಾಗಿ ಪುರಾಣದ ನಂಬಿಕೆಯ ಅಡಿಯಲ್ಲಿ ಭಯವನ್ನು ಸಹ ಹೊಂದಿರುತ್ತಾರೆ. ಈ ಮಂಗಳ ಮತ್ತು ಶನಿ ಗ್ರಹಗಳು ವಸ್ತುವಿನ ಸ್ವರೂಪದಲ್ಲಿ ಒಂದೇ ಆಗಿದ್ದರು ಸಹ ಭಾರತೀಯರು ಮಾತ್ರ ನಂಬಿಕೆ ಮತ್ತು ಆಚರಣೆಯ ಸಂದರ್ಭದಲ್ಲಿ ವಿಜ್ಞಾನ ಮತ್ತು ಪುರಾಣ ಎನ್ನುವ ಎರಡು ವಿರುದ್ಧ ನೆಲೆಗಳಲ್ಲಿ ನೆಮ್ಮದಿಯಿಂದಲೇ ಜೀವಿಸುತ್ತಾರೆ. ಹಿಂದೂ ನಂಬಿಕೆಯು ವಿಗ್ರಹಾರಾಧನೆಯ ಮೇಲೆ ಆಧರಿಸಿಲ್ಲ. ಬದಲಾಗಿ ಸ್ವಪ್ನದೃಷ್ಟವಾದದ ಮೇಲೆ ( ಕಲ್ಲುಗಳಲ್ಲಿ, ನದಿಗಳಲ್ಲಿ ಜೀವವಿದೆ ಎನ್ನುವಂತಹ) ಆಧರಿಸಿದೆ. ಹಿಂದೂ ನಂಬಿಕೆಯು ಬಹುರೂಪಿ ಸಂಸ್ಕೃತಿಗಳ ಮೇಲೆ, ಬಹುದೇವಾರಾಧನೆಗಳ ಮೇಲೆ ಆಧರಿಸಿಲ್ಲ. ಬದಲಾಗಿ ಎಲ್ಲೆಡೆಯೂ ದೇವರಿದ್ದಾನೆ, ದೇವನೊಬ್ಬನೇ, ಅದ್ವೈತವಾದ ಎನ್ನುವ ನಂಬಿಕೆಯ ಮೇಲೆ ಆಧರಿಸಿದೆ.mangal-Dev_01 ಈ ಬಗೆಯ ನಂಬಿಕೆಗಳು ಧಾರ್ಮಿಕ ಜಾಗಗಳಲ್ಲಿ ಸಹಜವಾದ ಜಗತ್ತನ್ನು ತಂದು ಕೂಡಿಸುತ್ತವೆ. ಈ ಬಗೆಯ ನಂಬಿಕೆಗಳು ಹಿಂದೂ ಧರ್ಮೀಯನಿಗೆ ರಾಹುಕಾಲ, ಗುಳಿಕಾಲಗಳ ಐಡಿಯಾಗಳನ್ನು ಪರಿಚಯಿಸುತ್ತವೆ. ಮಂತ್ರ ವಿದ್ಯೆಗಳ ಸಹಾಯದಿಂದ, ಪವಿತ್ರ ದಾರಗಳನ್ನು ಮಣಿಕಟ್ಟಿಗೆ ಕಟ್ಟಿಕೊಳ್ಳುವುದರ ಮೂಲಕ ತಾನು ಈ ದುರ್ವಿಚಾರಗಳಿಂದ ರಕ್ಷಿಸಲ್ಪಟ್ಟಿದ್ದೇನೆ ಎಂದು ಹಿಂದೂ ಧರ್ಮೀಯನು ನಂಬಿರುತ್ತಾನೆ. ಈ ಆಧುನಿಕ ಸಂದರ್ಭದಲ್ಲಿ ತನ್ನ ಈ ನಂಬಿಕೆಗಳ ಸಮರ್ಥನೆಗಾಗಿ ವೈಜ್ಞಾನಿಕವಾದ, ತರ್ಕಬದ್ಧವಾದ ವಿವರಣೆಗಳನ್ನು ಕಟ್ಟಿಕೊಂಡಿರುತ್ತಾನೆ ಎಂದೂ ನನಗೆ ಮನವರಿಕೆಯಾಗಿದೆ ಮತ್ತು ಈತನಿಗಾಗಿಯೇ ನಮ್ಮ ಸುದ್ದಿ ಮಾಧ್ಯಮಗಳು ಬರೆಯುತ್ತವೆ ಎಂದೂ ನನಗೆ ಸಂಪೂರ್ಣ ಮನವರಿಕೆಯಾಗಿದೆ