ಬೆಂಗಳೂರೆಂಬ ಆತ್ಮಹತ್ಯೆ ನಗರ..!


– ಡಾ.ಎಸ್.ಬಿ. ಜೋಗುರ


ಬದುಕನ್ನು ಗ್ರಹಿಸುವ, ಸ್ವೀಕರಿಸುವ ರೀತಿಯಲ್ಲಿಯೇ ಬಾಳಿನ ಸಾರ್ಥಕತೆ ಮತ್ತು ನಿರರ್ಥಕತೆಗಳು ನಿರ್ಣಯವಾಗುತ್ತವೆ. ನಮ್ಮ ಸುತ್ತಮುತ್ತಲಿನ ಪರಿಸರ suicide_5ತಂದೊಡ್ಡುವ ಅನೇಕ ಬಗೆಯ ಧಾವಂತಗಳ ನಡುವೆಯೂ ನಾವು ನೆಮ್ಮದಿಯಿಂದ ಬದುಕಿ ಉಳಿಯಬೇಕು ಎಂತಾದರೆ ಭೌತಿಕತೆಯ ಮೋಹವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಭೌತಿಕತೆಯ ಸಹವಾಸದ ದಟ್ಟ ನೆರಳು ನಿಮ್ಮನ್ನು ಅಷ್ಟು ಸರಳವಾಗಿ ನೆಮ್ಮದಿಯಿಂದ ಇರಲು ಬಿಡುವದಿಲ್ಲ. ನೀವು ಓಡಿದರೆ ಹಿಂಬಾಲಿಸುವ, ಹಿಂಬಾಲಿಸಿದರೆ ಓಡುವ ಮೂಲಕ ಅದು ಸದಾ ನೀವು ಮೋಹದಲ್ಲಿ ಮಥಿಸುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ ಬುದ್ಧನ ‘ಆಸೆಯೇ ದು:ಖಕ್ಕೆ ಮೂಲ ಎನ್ನುವ ಮಾತು ಹೆಚ್ಚು ಇಷ್ಟವಾಗುತ್ತದೆ. ಆಧುನಿಕ ಸಂದರ್ಭದಲ್ಲಿ ಮನುಷ್ಯ ಅನೇಕ ಬಗೆಯ ಒತ್ತಡ ಮತ್ತು ಸಂವೇದನಾ ಶೂನ್ಯವಾದ, ಹೀನವಾದ ಬದುಕು ಸಾಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ. ಅವನು ಇಲ್ಲವೇ ಅವಳು ಬಾಲ್ಯವನ್ನು ಅನುಭವಿಸದೇ ಬೆಳೆದು, ಭಯಂಕರವಾಗಿ ಓದಿ ಅಂಕ ಗಳಿಸಿ, ಉದ್ಯೊಗ ಗಿಟ್ಟಿಸಿಕೊಂಡರೂ ನೆಮ್ಮದಿಯ ಜೀವನ ಸಾಧ್ಯವಾಗುತ್ತಿಲ್ಲ. ಅವರ ಅರ್ಧ ಬದುಕು ಕೇವಲ ಅಂಕಗಳಿಸುವದರಲ್ಲಿಯೇ ಕಳೆದು ಹೋದರೆ ಇನ್ನರ್ಧ ಅವರು ಕೆಲಸ ಮಾಡುವ ಕಚೇರಿಯ ನಿರೀಕ್ಷೆಗೆ ತಕ್ಕಂತೆ ನೌಕರಿ ನಿರ್ವಹಿಸುವದರಲ್ಲಿ ಕಳೆದುಹೋಗುತ್ತದೆ. ಜಾಬ್ ಸ್ಯಾಟಿಸ್ ಫ್ಯಾಕ್ಷನ್ ಕಿಂತಲೂ ನಮ್ಮಲ್ಲಿ ಈಗೀಗ ಜೋಬು ಸ್ಯಾಟಿಸ್ ಫ್ಯಾಕ್ಷನ್ ಮುಖ್ಯವಾಗುತ್ತಿದೆ.

ಪ್ರಾಥಮಿಕ ಹಂತದಲ್ಲಿಯೆ ಅತ್ಯಂತ ಮಹತ್ವಾಕಾಂಕ್ಷಿ ಸಂತಾನವನ್ನು ರೂಪಿಸುವ ನಾವು ಮುಂದುವರೆದsuicide_4 ರಾಷ್ಟ್ರಗಳಿಗಿಂತಲೂ ವಿಭಿನ್ನವಾಗಿ ಮಕ್ಕಳನ್ನು ಪರಿಗಣಿಸುತ್ತಿಲ್ಲ. ಇದರ ಪರಿಣಾಮವಾಗಿ ಹೈಸ್ಕೂಲ್ ಮುಗಿಯುತ್ತಿರುವಂತೆ ಜೀವನ ನೀರಸವೆನಿಸುತ್ತಿದೆ. ಈ ಮುಂಚೆ ನಾವು ಎಂದೂ ಆರು ಮತ್ತು ಏಳನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವದನ್ನು ಕೇಳಿರಲಿಲ್ಲ. ಆದರೆ ಈಗ ತೀರಾ ಚಿಲ್ಲರೆ ಕಾರಣಗಳಿಗಾಗಿಯೂ ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ. ಅಷ್ಟಕ್ಕೂ ಒಬ್ಬ ವ್ಯಕ್ತಿ ತನ್ನನ್ನು ತಾನು ಕೊಂದುಕೊಳ್ಳುವ ಕ್ರಿಯೆ ಸ್ವಾಭಾವಿಕವಾದುದಂತೂ ಅಲ್ಲ. ನಿಸರ್ಗದ ಯಾವ ಜೀವಿಗಳು ಕೂಡಾ ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವದಿಲ್ಲ. ಹುಟ್ಟು ಆಕಸ್ಮಿಕ ಸಾವು ಖಚಿತ. ಆದರೆ ತಾನಾಗಿಯೇ ತನ್ನನ್ನು ಕೊಂದುಕೊಳ್ಳುವ ಕ್ರಿಯೆ ಮಾತ್ರ ಅತ್ಯಂತ ಅಸಹಜವಾದುದು. ಎಲ್ಲ ಜೀವಿಗಳು ಬದುಕಿ ಉಳಿಯಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತವೆ. ತೀರಾ ವಯಸ್ಸಾಗಿ ಹಣ್ಣು ಹಣ್ಣಾಗಿ ಜೀವಜಾಲದ ದೇಟು ಕಳಚುವದರಲ್ಲಿದ್ದ ಮುಪ್ಪಾನು ಮುಪ್ಪು ಮುದುಕರು ಕೂಡಾ ತಮ್ಮನ್ನು ’ಮಣಿಪಾಲಕ್ಕೆ ಕರೆದುಕೊಂಡು ಹೋಗಿ..ಮಿರಜಗೆ ಕರೆದೊಯ್ಯಿರಿ’ ಎಂದು ಹಲಬುವವರ ನಡುವೆ ಹೀಗೆ ತೀರಾ ಚಿಕ್ಕ ವಯಸ್ಸಿನಲ್ಲಿ ಕಾರಣವೇ ಅಲ್ಲದ ಕಾರಣವನ್ನು ಮುಂದೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಎಳೆಯ ಜೀವಗಳನ್ನು ಕಂಡಾಗ ತೀರಾ ಬೇಸರವೆನಿಸುತ್ತದೆ.

ಯಾವುದೇ ಜೀವಿ ತನ್ನಷ್ಟಕ್ಕೆ ತಾನೇ ಸಾಯಲು ಬಯಸುವುದಿಲ್ಲ. ಒಂದೊಮ್ಮೆ ತನ್ನ ಜೀವಕ್ಕೆ ಇತರ ಜೀವಿಗಳಿಂದ ಗಂಡಾಂತರವಿದೆ ಎನಿಸಿದಾಗ ಮಾತ್ರ ಆಕ್ರಮಣ ಮಾಡುತ್ತವೆ. ಮನುಷ್ಯ ಜೀವಿ ಮಾತ್ರ ಎದುರಾದ ಸಂದಿಗ್ದಗಳಿಗೆ ಪರಿಹಾರ ಕಾಣದೇ ಸೋತೆ ಎನಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈಗೀಗ ಮನುಷ್ಯ ಪ್ರತಿಯೊಂದನ್ನೂ ಹೋಲಿಕೆ ಮಾಡುವ ಮೂಲಕವೇ ಸಮಾಧಾನ ಪಡುವುದು ಇಲ್ಲವೇ ಕಷ್ಟಪಡುವ ಮಾನಸಿಕ ಸ್ಥಿತಿಯನ್ನು ಅನುಭವಿಸುತ್ತಾನೆ. ಹಾಗೆ ಹೋಲಿಕೆ ಮಾಡುವಾಗಲೂ ಇತ್ಯಾತ್ಮಕವಾಗಿರುವದನ್ನು ಗಮನಿಸದೇ ನೇತ್ಯಾತ್ಮಕವಾಗಿರುವ ಸಂಗತಿಗಳನ್ನೇ ಹೆಚ್ಚಾಗಿ ಪರಿಗಣಿಸುವುದರ ಪರಿಣಾಮವಾಗಿ ಮನಸ್ಸು ಹುತ್ತಗಟ್ಟತೊಡುತ್ತದೆ. ನಿರಾಸೆಯೇ ಸುತ್ತಲೂ ಆವರಿಸಿಕೊಂಡು ಬಿಡುತ್ತದೆ. ಯಾವುದರಲ್ಲಿಯೂ ಮನಸ್ಸು ಖುಷಿ ಪಡುವ ಸ್ಥಿತಿಯಲ್ಲಿರುವುದಿಲ್ಲ. ಅದು ಒಂದು ಸೀಮಿತ ಗಳಿಗೆಯವರೆಗೆ ಉಳಿದರೆ ಸರಿ. ಆದರೆ ಹಾಗಾಗುವುದಿಲ್ಲ. ಗಾಢವಾದ ಕರಾಳ ಛಾಯೆ ಮನಸ್ಸನ್ನು ಆವರಿಸಿಕೊಂಡು ಬಿಡುತ್ತದೆ. ಅದೇ ಧ್ಯಾನ, ಅದೇ ಗುಂಗು ತೀವ್ರವಾಗಿ ಕಾಡಿದಾಗ ವ್ಯಕ್ತಿಯಲ್ಲಿ ಬೇರು ಕಿತ್ತಿದ ಭಾವನೆ ಬಲಿಯತೊಡಗುತ್ತದೆ. ಆತ್ಮಹತ್ಯೆ ಎನ್ನುವುದು ಆ ಒಂದು ಗಳಿಗೆಗೆ ಮಾತ್ರ ಸೀಮಿತವಾಗಿರುತ್ತದೆ. ಆ ಗಳಿಗೆಯನ್ನು ದಾಟಿದರೆ ಆ ವ್ಯಕ್ತಿ ಮತ್ತೆಂದೂ ಆತ್ಮಹತ್ಯೆ ಮಾಡಿಕೊಳ್ಳಲಾರ. ಇನ್ನು ಅವನು ಮತ್ತೆ ಮತ್ತೆ ಆ ಯತ್ನ ಮಾಡಿರುವನೆಂದಾದರೆ ಅದೊಂಥರಾ ವಿಕ್ಷಿಪ್ತ ಖಯಾಲಿ.

ಮಹಾನಗರಗಳಲ್ಲಿ ವ್ಯಾಪಕವಾಗಿರುವ ಈ ಪೀಡೆ ಈಗೀಗ ಗ್ರಾಮೀಣ ಪರಿಸರವನ್ನು ಬಾಧಿಸತೊಡಗಿದೆ. ಇನ್ನು ನಗರಗಳಂತೂ ಅಕ್ಷರಶ: ನೆಮ್ಮದಿಯstress-1 ಬದುಕಿನ ಹರಣಕ್ಕೆ ಕಾರಣವಾಗುತ್ತಿವೆ. ಆ ಬಗೆಗೆ ಅನೇಕ ಅಧ್ಯಯನಗಳೂ ನಡೆದಿವೆ. ಚೆನೈನಂತಹ ನಗರಗಳಲ್ಲಿ 27 ಪ್ರತಿಶತದಷ್ಟು ಜನರು ಮಾನಸಿಕ ಕಿರಿಕಿರಿಗೆ ಒಳಗಾಗಿ ಬದುಕುತ್ತಿದ್ದಾರೆ. ಭೌತಿಕ ಪ್ರಧಾನ ಬದುಕಿನ ನಡುವೆ ಮನುಷ್ಯನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕುರುಡು ಕಾಂಚಾಣದ ಕಾಲಿಗೆ ಸಿಲುಕಿ ಜಜ್ಜಿ ಹೋಗುತ್ತಿರುವ ಮನುಷ್ಯ ಭಾವಶೂನ್ಯ ಮನ:ಸ್ಥಿತಿಯನ್ನು ಅನುಭವಿಸುತ್ತಿದ್ದಾನೆ. ಆಪ್ತವಾಗಿ ಮಾತನಾಡಿಸುವ, ಸಮಸ್ಯೆಗಳನ್ನು ಎದೆಗೆ ಹಚ್ಚಿಕೊಂಡು ಆಲಿಸುವವರ ಕೊರತೆ ದೊಡ್ಡ ಪ್ರಮಾಣದಲ್ಲಿ ಕಾಡತೊಡಗಿದೆ. ಇಂದು ಮಹಾನಗರಗಳಲ್ಲಿ ಆತ್ಮಹತ್ಯೆಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಪೂನಾ, ಬೆಂಗಳೂರಿನಂತಹ ನಗರಗಳು ಆತ್ಮಹತ್ಯಾ ನಗರಗಳಾಗಿ ಗುರುತಿಸಿಕೊಳ್ಳುತ್ತಿವೆ.

ಬೆಂಗಳೂರಿನಲ್ಲಿರುವ ಸಹಾಯಿ ಎನ್ನುವ ಸ್ವಯಂ ಸೇವಾ ಸಂಸ್ಥೆಯೊಂದು ಸೆಪ್ಟಂಬರ್ 2012 ರಿಂದ ಫೆಬ್ರುವರಿ 2014 ರವರೆಗೆ 1100 ಆತ್ಮಹತ್ಯೆ ಪ್ರಕರಣಗಳು ಜರುಗಿದ ಬಗ್ಗೆ ವರದಿ ಮಾಡಿದೆ. ಇದರಲ್ಲಿ 580 ರಷ್ಟು ಮಹಿಳೆಯರಿದ್ದರೆ 475 ಪುರುಷರಿದ್ದಾರೆ. ಅತ್ಯಂತ ವಿಷಾದದ ಸಂಗತಿ ಎಂದರೆ ಇದರಲ್ಲಿ 55 ಜನರು 18 ವರ್ಷ ವಯೋಮಿತಿಯಲ್ಲಿದ್ದವರಿದ್ದಾರೆ. ಅನೇಕ ಯುವಕರು ಅದೇ ದೈನಂದಿನ ಏಕತಾನತೆಗೆ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಕಲಿಯುವಾಗಲೇ ಅಪಾರವಾದ ಒತ್ತಡ ಮತ್ತು ಬರೀ ಓದು ಓದು ಎನ್ನುವ ಪಾಲಕರ ಒತ್ತಾಸೆಯ ನಡುವೆ ಜೀವನವೇ ನೀರಸವೆನಿಸಿ ಪೂರ್ಣವಿರಾಮ ಇಟ್ಟವರೂ ಇದ್ದಾರೆ.

ಜೂನ್ 2014 ಬೆಂಗಳೂರು ಆತ್ಮಾಹತ್ಯಾ ನಗರ ಎನ್ನುವದನ್ನು ಮತ್ತೆ ಮತ್ತೆ ಸಾಬೀತು ಮಾಡುವಂತಿತ್ತು. ಜೂನ 13 ಮತ್ತು 14 ಎರಡೇ ದಿನದಲ್ಲಿ ಸುಮಾರು 10 stress-2ಆತ್ಮಹತ್ಯಾ ಪ್ರಕರಣಗಳು ದಾಖಲಾಗಿದೆ. ಬೆಂಗಳೂರಲ್ಲಿ ಕಳೆದ 2005 ರ ನಂತರ ಆತ್ಮಹತ್ಯಾ ಪ್ರಮಾಣ ಏರುತ್ತಲೇ ನಡೆದಿದೆ. ರಾಷ್ಟ್ರೀಯ ಅಪರಾಧಿ ದಾಖಲೆ ವಿಭಾಗದ ಪ್ರಕಾರ 2013 ರಲ್ಲಿ ಬೆಂಗಳೂರು ಆತ್ಮಹತ್ಯೆಯ ವಿಷಯದಲ್ಲಿ ನಂ 1 ಸ್ಥಾನದಲ್ಲಿದೆ. ಬೆಂಗಳೂರಲ್ಲಿ ಆ ವರ್ಷ ಅತ್ಮಹತ್ಯೆಯ ಪ್ರಮಾಣ 23.9 ಪ್ರತಿಶತದಷ್ಟಿದ್ದರೆ, ದೆಹಲಿಯಲ್ಲಿ ಆ ಪ್ರಮಾಣ ಕೇವಲ 10.7ಪ್ರತಿಶತವಿದೆ. ಮುಂಬೈ ನಗರದಲ್ಲಿ 7.2 ಪ್ರತಿಶತವಿದ್ದರೆ, ಕೋಲ್ಕತ್ತಾದಲ್ಲಿ ಆ ಪ್ರಮಾಣ ತಿರುವು ಮುರುವಾಗಿದೆ ಅಂದರೆ 2.7 ಪ್ರತಿಶತ. 2008 ರ ಸಂದರ್ಭದಲ್ಲಂತೂ ಬೆಂಗಳೂರು ಆತ್ಮಹತ್ಯೆಯ ವಿಷಯದಲ್ಲಿ ಶಿಖರವನ್ನೇ ತಲುಪಿದೆ. ಆ ವರ್ಷ 42.8 ಪ್ರತಿಶತ ಆತ್ಮಹತ್ಯೆ ದಾಖಲಾಗಿದೆ. ಕಳೆದ ವರ್ಷ ಬೆಂಗಳೂರಲ್ಲಿ 2033 ಆತ್ಮಹತ್ಯೆಗಳು ಜರುಗಿದರೆ, ಚೆನೈನಲ್ಲಿ ಆ ಪ್ರಮಾಣ 2183 ರಷ್ಟಿತ್ತು. ಬಹುಷ: ಬೆಂಗಳೂರಲ್ಲಿ ಆ ಪ್ರಮಾಣದಲ್ಲಿ ಆತ್ಮಹತ್ಯೆ ಜರುಗಲು ಕಾರಣ ಮಾಹಿತಿ ತಂತ್ರಜ್ಞಾನದ ವಲಯದಲ್ಲಿ ಹೆಚ್ಚು ಉದ್ಯೋಗದ ಅವಕಾಶಗಳು ಸೃಷ್ಟಿಯಾಗುತ್ತಿರುವುದೇ ಅದಕ್ಕೆ ಕಾರಣ ಎನ್ನಲಾಗಿದೆ. ಇನ್ನು ಈ ಮಾಹಿತಿ ತಂತ್ರಜ್ಞಾನದ ವಲಯದಲ್ಲಿರುವ ಉದ್ಯೋಗಗಳಿಗೆ ಮನುಷ್ಯರಂತಿರುವ ರೋಬೋಗಳು ಬೇಕಿದೆ. ಅಪ್ಪಟ ಯಾಂತ್ರಿಕವಾಗಿ, ಭಾವಶೂನ್ಯರಾಗಿ ದುಡಿಯುವವರಿರಬೇಕು. ಇಲ್ಲಿ ಸಂವೇದನೆಗಳಿಗೆ ಜಾಗವೇ ಇಲ್ಲ. ಪರಸ್ಪರ ಸುಖ ದು:ಖಗಳನ್ನು ಎದೆಗೆ ಹಚ್ಚಿಕೊಂಡು ಆಲಿಸುವವರು ಸಿಗುವುದೇ ಅಪರೂಪ ಎಲ್ಲರೂ ಅವರವರ ಒತ್ತಡಗಳಲ್ಲಿ ಸಿಲುಕಿ ನಲಗುವಂತಾದಾಗ ಮನಸಿನ ನೆಮ್ಮದಿ ಸಾಧ್ಯವಾಗುವದಾದರೂ ಹೇಗೆ?

ಡರ್ಖಹೀಂ ಎನ್ನುವ ಫ್ರಾನ್ಸ್ ದೇಶದ ಸಮಾಜಶಾಸ್ತ್ರಜ್ಞ 1897 ರ ಸಂದರ್ಭದಲ್ಲಿ ಆತ್ಮಹತ್ಯೆಯನ್ನು ಅಧ್ಯಯನ ಮಾಡಿ ಅದನ್ನು ಇಡಿಯಾಗಿ ಮೂರು ಪ್ರಕಾರಗಳಲ್ಲಿ ವಿಂಗಡಣೆ ಮಾಡಿದ್ದಾನೆ. ಒಂದನೆಯದು ಸಮೂಹಪ್ರೇರಿತ ಆತ್ಮಹತ್ಯೆ, ಎರಡನೆಯದು ಸ್ವಯಂ ಪ್ರೇರಿತ ಆತ್ಮಹತ್ಯೆ, ಮೂರನೆಯದು ನಿಯಮರಾಹಿತ್ಯತೆಯ ಆತ್ಮಹತ್ಯೆ. ಮೊದಲ ಮತ್ತು ಮೂರನೇಯ ಪ್ರಕಾರಗಳಲ್ಲಿ ವ್ಯಕ್ತಿಗಿಂತಲೂ ಸಾಮೂಹಿಕ ಸಂಗತಿಗಳು ಮುಖ್ಯವಾಗಿರುತ್ತವೆ. ಎರಡನೆಯದರಲ್ಲಿ ಮಾತ್ರ ವ್ಯಕ್ತಿಯ ಅಹಂ ಭಾವ ಕೆಲಸ ಮಾಡುತ್ತದೆ. ಆ ಅಹಂಗೆ ತೀವ್ರವಾದ ಪೆಟ್ಟು ಬಿದ್ದದ್ದೇ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮೂರನೇಯ ಪ್ರಕಾರದ ಆತ್ಮಹತ್ಯೆಯಲ್ಲಿ ಸಾಮಾಜಿಕ ಅವ್ಯವಸ್ಥೆ ಇಲ್ಲವೇ ನಿಯಾಮರಾಹಿತ್ಯತೆಯ ಸ್ಥಿತಿ ಆತ್ಮಹತ್ಯೆಗೆ ಕಾರಣವಾಗುತ್ತದೆ. ಡರ್ಖಹೀಮ್ ರಂಥಾ ಚಿಂತಕರು ಆತ್ಮಹತ್ಯೆಗೆ ವ್ಯಕ್ತಿಗತ ಕಾರಣಗಳಿಗಿಂತಲೂ ಸಾಮಾಜಿಕ ಕಾರಣಗಳೇ ನಿರ್ಣಾಯಕ ಎಂದಿದ್ದಾರೆ.

One thought on “ಬೆಂಗಳೂರೆಂಬ ಆತ್ಮಹತ್ಯೆ ನಗರ..!

  1. Nagshetty Shetkar

    ಬೆಂಗಳೂರಿನ ಜನತೆ ವಚನಗಳ ಪಠಣ, ಮನನ, ಅಧ್ಯಯನ ಮಾಡಿ ಬಸವಾದ್ವೈತದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಆತ್ಮಹತ್ಯೆ ಪ್ರಕರಣಗಳು ಇಳಿಮುಖವಾಗುವುದರಲ್ಲಿ ಅನುಮಾನವೇ ಇಲ್ಲ. ದರ್ಗಾ ಸರ್ ಅವರ ನೇತೃತ್ವದಲ್ಲಿ ಸರಕಾರ ಒಂದು ಕಮಿಟಿ ರಚಿಸಿ ಐಟಿಬಿಟಿ ಜನರನ್ನು ವಚನಗಳ ಮೂಲಕ ಸಮಾಜಮುಖಿಯಾಗಿಸಲು ಕಾರ್ಯೋನ್ಮುಖರಾಗತಕ್ಕದ್ದು.

    Reply

Leave a Reply

Your email address will not be published. Required fields are marked *