Daily Archives: September 29, 2014

ಹರಿಯುತ್ತಿರುವ  ರಕ್ತಕ್ಕೆ ಸಾಕ್ಷಿಯಾಗುತ್ತಿದೆ ಈ ಗೋಮಾತೆ……..


-ಇರ್ಷಾದ್


ಆ ಯುವಕನ  ಹೆಸರು ಅಬ್ದುಲ್ ಸಮೀರ್. ವಯಸ್ಸು 32. ಮದುವೆಯಾಗಿ ಐವರು  ಮಕ್ಕಳ ತಂದೆ. ಮಂಗಳೂರಿನಿಂದ ಕೇರಳದ ಕಣ್ಣೂರಿಗೆ  ಮೀನು ವ್ಯಾಪಾರ  ಮಾಡಿ ಜೀವನ ಸಾಗಿಸುತ್ತಿದ್ದ ಕಾಸರಗೋಡು ನಿವಾಸಿ ಅಬ್ದುಲ್  ಸಮೀರ್ ಇಂದು ಅಕ್ಷರಷಃ ಕೋಮ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವಚ್ಚವವಾಗಿ ಮಲಗಿದ್ದಾನೆ. ಈತನ ಈ ದಾರುಣ ಸ್ಥಿತಿ ಕಂಡು ಅಸಾಹಯಕರಾಗಿ ಪೋಷಕರು, ಹೆಂಡತಿ ಮಕ್ಕಳು ನಿತ್ಯ ಕಣ್ಣೀರು ಸುರಿಸುತ್ತಿದ್ದಾರೆ. ಕಡುಬಡವರಾದ ಅಬ್ದುಲ್ ಸಮೀರ್  ಕುಟುಂಬ ಈಗಾಗಲೇ ಸುಮಾರು 3 ಲಕ್ಷ ರೂಪಾಯಿಯನ್ನು ಚಿಕಿತ್ಸೆಗಾಗಿ ವ್ಯಯ ಮಾಡಿದೆ. ಇಷ್ಟಾದರೂ ಗಂಬೀರವಾಗಿ  ಗಾಯಗೊಂಡಿರುವ ಅಬ್ದುಲ್ ಸುಧಾರಿಸಿಲ್ಲ.

ಅಂದಹಾಗೆ ಈತನ ಈ ಪರಿಸ್ಥಿತಿಗೆ ಕಾರಣರಾದವರು ಮಂಗಳೂರಿನ ಗೋರಕ್ಷಣೆಯ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ಮತಾಂಧರು. go sagata_1ದಿನಾಂಕ 24-8-2014 ರಂದು ಅಬ್ದುಲ್  ಸಮೀರ್ ಹಾಗೂ ಇನ್ನಿಬ್ಬರು ದನ ವ್ಯಾಪಾರಿಗಳು ಉಪ್ಪಿನಂಗಡಿಯ ವ್ಯಕ್ತಿಯೊಬ್ಬರಿಂದ 14 ದನಗಳನ್ನು  ಖರೀದಿ ಮಾಡಿ ಕಾಸರಗೋಡಿಗೆ ಸಾಗಾಟ ಮಾಡುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಸುಮಾರು 30 ರಿಂದ 40 ಜನರನ್ನು ಒಳಗೊಂಡ ಹಿಂದೂಪರ ಸಂಘಟನೆಗಳ ತಂಡ ರಾತ್ರಿ ಸುಮಾರು 10.30 ಘಂಟೆಗೆ ಮಂಗಳೂರಿನ ಪಂಪ್ ವೆಲ್ ಎಂಬಲ್ಲಿ ಜಾನುವಾರು ಸಾಗಾಟ ವಾಹನವನ್ನು ಅಡ್ಡಗಟ್ಟಿದ್ದರು. ವಾಹನದಲ್ಲಿದ್ದ ಚಾಲಕ ಅಬ್ದುಲ್ ಸಮೀರ್, ಫಯಾಜ್ ಹಾಗೂ ಶೌಕತ್ ಎಂಬುವವರಿಗೆ ಹಿಗ್ಗಾಮುಗ್ಗಾ ಥಳಿಸಿದರು. ಚಾಲಕ ಅಬ್ದುಲ್ ಸಮೀರ್ ಅವರ ಹೊಡೆತಕ್ಕೆ  ಸ್ಥಳದಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಎಲ್ಲಾ  ಆದ ನಂತರದಲ್ಲಿ ಸ್ಥಳಕ್ಕೆ ಬಂದ ಮಂಗಳೂರು ಗ್ರಾಮಾಂತರ ಪೊಲೀಸರು ಗಾಯಗೊಂಡ ದನದ ವ್ಯಾಪಾರಿಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದರು. 14 ದಿನ ತುರ್ತು ಚಿಕಿತ್ಸಾ ಘಟಕದಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಸಮೀರ್ ಇನ್ನೂ ಕೋಮಾ ಸ್ಥಿತಿಯಿಂದ  ಸಂಪೂರ್ಣವಾಗಿ ಹೊರಬಂದಿಲ್ಲ. ಪುತ್ರನ  ಚಿಕಿತ್ಸೆಗಾಗಿ  ಅಬ್ದುಲ್  ಸಮೀರ್  ತಂದೆ  ಶೇಕ್ ಅಲೀ ತಮ್ಮ  ಪುತ್ರಿಯ ಮೈಮೇಲಿದ್ದ ಚಿನ್ನಾಭರಣವನ್ನು ಅಡವಿಟ್ಟು  ಈಗಾಗಲೇ  150000 ದುಡ್ಡು ಆಸ್ಪತ್ರೆಗೆ ಪಾವತಿ  ಮಾಡಿದ್ದಾರೆ, ಇನ್ನೂ  120000  ಹಣವನ್ನು ಪಾವತಿ  ಮಾಡಬೇಕಾಗಿದೆ.  ವೈದ್ಯರು  ಜೀವಕ್ಕೆ ಅಪಾಯವಿಲ್ಲ ಎಂದರೂ ಮತ್ತೆ ಸಮೀರ್ ಹಿಂದಿನಂತಾಗುವ ಯಾವುದೇ ಭರವಸೆಯನ್ನು ನೀಡಿಲ್ಲ. ಸಮೀರ್ ಕನಿಷ್ಠ ಸುಧಾರಿಸಿಕೊಳ್ಳಲು ಇನ್ನೂ ಆರು ತಿಂಗಳುಗಳ  ಕಾಲಾವಕಾಶ ಬೇಕಾಗಬಹುದು.

ಇದು ಅಬ್ದುಲ್ ಸಮೀರ್ ಒಬ್ಬನ ವ್ಯಥೆ ಮಾತ್ರವಲ್ಲ. ಕರಾವಳಿಯ ಅವಳಿ  ಜಿಲ್ಲೆಯಗಳಲ್ಲಿ ಇದು ಸಾಮಾನ್ಯವಾಗುತ್ತಿದೆ. ಕರಾವಳಿ ಭಾಗದಲ್ಲಿ ಗೋಮಾತೆಯು ತನ್ನ  ಕಣ್ಣ ಮುಂದೆ ಹರಿದ ಸಾಕಷ್ಟು ನೆತ್ತರಿಗೆ ಸಾಕ್ಷಿಯಾಗಿದ್ದಾಳೆ. ಗೋ ಮಾತೆಯ ರಕ್ಷಣೆಯ ಹೆಸರಲ್ಲಿ  ಸ್ವಘೋಷಿತ ಗೋರಕ್ಷಕರು ಕಾನೂನು ಕೈಗೆತ್ತಿಕೊಂಡು ಸಿಕ್ಕಿದ್ದೇ ಅವಕಾಶ go sagata_2ಎಂಬಂತೆ ದನದ ವ್ಯಾಪಾರಿಗಳ ಮೇಲೆ ಮಾರಣಾಂತಿಕ ಹಲ್ಲೆ  ನಡೆಸಿ  ಕ್ರೌರ್ಯ  ಮೆರೆಯುತ್ತಿದ್ದಾರೆ. ಇವರ  ಪಾಲಿಗೆ ಗೋ ಕಳ್ಳರು, ಅಕ್ರಮ ದನ ಸಾಗಾಟಕರು, ಪರವಾನಿಗೆ ಹೊಂದಿರುವ ಜಾನುವಾರು ವ್ಯಾಪಾರಿಗಳು, ಎಲ್ಲರೂ ಒಂದೇ. ಒಮ್ಮೆ ತಮ್ಮ ಕೈಗೆ  ಸಿಕ್ಕಿಬಿದ್ದರೆ ಸಾಕು. ಗೋಮಾತೆಯ ರಕ್ಷಣೆಯ ಹೆಸರಲ್ಲಿ ಕ್ರೌರ್ಯದ ಪರಾಕಾಷ್ಠೆಯನ್ನು ಮೆರೆಯುತ್ತಾರೆ. ಈ ಮತಾಂಧರು ಅಂದು ಆದಿ ಉಡುಪಿಯಲ್ಲಿ ದನದ  ವ್ಯಾಪಾರಿ ಅಪ್ಪ –ಮಗನನ್ನು ಹಿಂಸಿಸಿ ಬೆತ್ತಲೆ ಮಾಡಿದ್ದರು. ಅದೇ ಮನಸ್ಥಿತಿಯ ಮತಾಂಧರು ಇಂದು ದನ ಸಾಗಾಟ ವಾಹನ ಚಾಲಕ ಅಬ್ದುಲ್ ಸಮೀರ್‌ನನ್ನು ಜೀವಚ್ಚವವನ್ನಾಗಿಸಿದರು. ಧರ್ಮದ ಹೆಸರಲ್ಲಿ ಅಮಾನವೀಯತೆ ಮೆರೆದಾಡುವ ಈ ಮತಾಂಧರು ಮೊದಲು ತಮ್ಮದೇ ಧರ್ಮ ಹಾಗೂ ಅದರ ಸದಾಶಯಗಳಿಗೆ ಧ್ವನಿಯಾದ ಆದರ್ಶ ಪುರುಷರುಗಳನ್ನು ತಿಳಿದುಕೊಳ್ಳಬೇಕು. ಇಂದು ಧರ್ಮಗಳ  ನಡುವೆ ವಿಷಬೀಜವನ್ನು ಬಿತ್ತಿ ಸಾವು ನೋವಿಗೆ ಕಾರಣವಾಗುತ್ತಿರುವ ಗೋ ರಕ್ಷಕರು ಗೋವಿನ ಕುರಿತಾಗಿ  ಹಿಂದೂ ಧರ್ಮಗ್ರಂಥಗಳು  ಹಾಗೂ  ಸ್ವಾಮೀ  ವಿವೇಕಾನಂದ,  ಭಗತ್ ಸಿಂಗ್  ಮೊದಲಾದರು  ಏನು ಹೇಳಿದ್ದಾರೆ ಎಂಬುವುದನ್ನು ಮೊದಲು  ತಿಳಿದುಕೊಳ್ಳಬೇಕಾಗಿದೆ.

ಸ್ವಾಮೀ ವಿವೇಕಾನಂದರು ಹೇಳುತ್ತಾರೆ “ಭಾರತದಲ್ಲಿ ಸನ್ಯಾಸಿ, ರಾಜ, ಅಥವಾ ಶ್ರೇಷ್ಟ ವ್ಯಕ್ತಿಯೊಬ್ಬನು ಮನೆಗೆ ಬಂದರೆ ಅವನ ಔತಣಕ್ಕಾಗಿ ಅತ್ಯುತ್ತಮವಾದ ಎತ್ತನ್ನು ಕೊಲ್ಲುತ್ತಿದ್ದರು ಎಂಬುವುದನ್ನು ನಾವು ವೇದದಲ್ಲಿ ಓದಿದ್ದೇವೆ. ಆದರೆ ಕಾಲ ಕ್ರಮೇಣ ನಮ್ಮದು ಕೃಷಿ ಪ್ರಾಧಾನ್ಯ ಜೀವನವಾಗಿದ್ದರಿಂದ ಅತ್ಯುತ್ತಮ ಎತ್ತುಗಳನ್ನು ಕೊಂದರೆ ಕ್ರಮೇಣ ದನದ ಕುಲವೇ ನಾಶವಾಗುವುದೆಂದು swami-vivekananda-1ತಿಳಿದು ಗೋಹತ್ಯೆ ಮಹಾ ಪಾಪವೆಂದು ಪರಿಗಣಿಸಲು ಪ್ರಾರಂಭಿಸಿದರು. ಪಂಜಾಬಿನ ಹಲವು ಗ್ರಾಮಗಳಲ್ಲಿ ಹಂದಿಯನ್ನು ತಿನ್ನುವವರನ್ನು ಹಿಂದೂಗಳೆಂದು ಪರಿಗಣಿಸುವುದೇ ಇಲ್ಲ.” ( ವಿವೇಕಾನಂದರ  ಕೃತಿ ಶ್ರೇಣಿ 5-129 )

ಸ್ವಾಮಿ ವಿವೇಕಾನಂದ ಗೋರಕ್ಷಿಣಿ ಸಭೆಯ ಪ್ರಚಾರಕನೊಂದಿಗೆ ಚರ್ಚೆ ನಡೆಸುವ ಈ ಸನ್ನಿವೇಶ ಗೋ ರಕ್ಷಣೆಯ ಹೆಸರಲ್ಲಿ ಮನುಷ್ಯ ಮನುಷ್ಯನ  ರಕ್ತ ಹೀರುವ ಮನಸ್ಥಿತಿಗೆ ಸುಲಭ ರೀತಿಯಲ್ಲಿ ಅರ್ಥವಾಗುವ ಪಾಠದಂತಿದೆ.

ಸ್ವಾಮೀವಿವೇಕಾನಂದ ಗೋರಕ್ಷಿಣಿ ಸಭೆಯ ಪ್ರಚಾರಕನೊಂದಿಗೆ ಮಾತನಾಡುತ್ತಾ-

ಸ್ವಾಮೀಜಿ: ನಿಮ್ಮ  ಉದ್ದೇಶವೇನು ?

ಪ್ರಚಾರಕ : ನಮ್ಮ ದೇಶದ ಗೋ ಮಾತೆಯನ್ನು ಕಟುಕರ ಕೈಯಿಂದ ತಪ್ಪಿಸಿ ಕಾಪಾಡುತ್ತಿದ್ದೇವೆ. ಅಲ್ಲಲ್ಲಿ ದೊಡ್ಡಿಗಳು ಸ್ಥಾಪಿಸಲ್ಪಟ್ಟಿವೆ. ಅವುಗಳಲ್ಲಿ ಕಾಯಿಲೆಯ, ಕೈಲಾಗದ ಮತ್ತು ಕಟುಕರಿಂದ ಕೊಂಡು ತಂದ ಗೋ ಮಾತೆಯನ್ನು  ರಕ್ಷಿಸುತ್ತೇವೆ.

ಸ್ವಾಮೀಜಿ : ಇದು ಬಹಳ  ಒಳ್ಳೆಯ  ಕೆಲಸ; ತಮ್ಮ ಸಂಪಾದನೆಯ  ಮಾರ್ಗ ?

ಪ್ರಚಾರಕ: ದಯಾಪರರಾದ ತಮ್ಮಂಥವರು ಏನಾದರೂ ಕೊಡುತ್ತಾರೆಯಲ್ಲ, ಅದರಿಂದಲೇ ಸಭೆಯ ಈ ಕಾರ್ಯ ನಡೆಯುವುದು.

ಸ್ವಾಮೀಜಿ: ನಿಮ್ಮ ಹತ್ತಿರ  ಮೂಲಧನ ಎಷ್ಟು  ರೂಪಾಯಿ ಇದೆ?

ಪ್ರಚಾರಕ: ಮಾರವಾಡಿ ವರ್ತಕರು ಈ ಕಾರ್ಯಕ್ಕೆ ಒಳ್ಳೆಯ ಪೋಷಕರಾಗಿದ್ದಾರೆ. ಅವರು ಈ ಸತ್ಕಾರ್ಯಕ್ಕೆ ಬಹುದ್ರವ್ಯವನ್ನು ಕೊಟ್ಟಿದ್ದಾರೆ.

ಸ್ವಾಮೀಜಿ: ಹಿಂದೂಸ್ಥಾನದಲ್ಲಿ ಭಯಂಕರ ಕ್ಷಾಮ ಬಂದಿದೆ. ಹೊಟ್ಟೆಗಿಲ್ಲದೆ ಒಂದು ಲಕ್ಷ ಜನರು ಸತ್ತುಹೋದರೆಂದು ಇಂಡಿಯಾ ಸರ್ಕಾರದವರು ಪಟ್ಟಿಕೊಟ್ಟಿದ್ದಾರೆ. ನಿಮ್ಮ  ಸಭೆ ಈ ದುರ್ಭಿಕ್ಷ ಕಾಲದಲ್ಲಿ ಏನಾದರೂ ಸಹಾಯ  ಮಾಡುವುದಕ್ಕೆ ಏರ್ಪಾಡು ಮಾಡಿದೆಯೇನು?

ಪ್ರಚಾರಕ: ನಾವು ದುರ್ಭಿಕ್ಷ ಮೊದಲಾದುವುಗಳಲ್ಲಿ ಸಹಾಯ ಮಾಡುವುದಿಲ್ಲ . ಕೇವಲ ಗೋ ಮಾತೆಯ ರಕ್ಷಣೆಗೆ ಈ ಸಭೆ ಸ್ಥಾಪಿಸಲ್ಪಟ್ಟಿರುವುದು.

ಸ್ವಾಮೀಜಿ: ಅಣ್ಣ ತಮ್ಮಂದಿರಾದ ನಿಮ್ಮ ದೇಶದ ಜನರು ಲಕ್ಷಗಟ್ಟಲೆ ಮೃತ್ಯುವಿನ ಬಾಯಲ್ಲಿ ಬೀಳುತ್ತಿರಲು, ಕೈಯಲ್ಲಾಗುತ್ತಿದ್ದರೂ ಇಂಥ ಭಯಂಕರವಾದ ದುಷ್ಕಾಲದಲ್ಲಿ ಅವರಿಗೆ ಅನ್ನ ಕೊಟ್ಟು ಸಹಾಯ ಮಾಡುವುದು ಯುಕ್ತವೆಂದು ನಿಮಗೆ ತೋರುವುದಿಲ್ಲವೇ?

ಪ್ರಚಾರಕ:  ಇಲ್ಲ, ಜನರ ಕರ್ಮಫಲದಿಂದ, ಪಾಪದಿಂದ ಈ ಕ್ಷಾಮ ಬಂದಿದೆ. ಕರ್ಮಕ್ಕೆ ತಕ್ಕ ಫಲವಾಗಿದೆ.

ಸ್ವಾಮೀಜಿ: ಯಾವ ಸಭಾ ಸಮಿತಿಗಳು ಮನುಷ್ಯರಲ್ಲಿ ಸಹಾನುಭೂತಿಯನ್ನು ತೋರದೆ, ತಮ್ಮ ಅಣ್ಣ ತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆಂದು ನೋಡಿಯೂ ಅವರ ಜೀವವನ್ನು ಉಳಿಸುವುದಕ್ಕಾಗಿ ಒಂದು ತುತ್ತು ಅನ್ನವನ್ನು ಕೊಡದೆ ಪಶು ಪಕ್ಷಿಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ. ಅವುಗಳಿಂದ ಸಮಾಜಕ್ಕೆ ಹೆಚ್ಚು ಉಪಕಾರವಾಗುತ್ತದೆಂದು ನಾನು ನಂಬುವುದಿಲ್ಲ. ಕರ್ಮಫಲದಿಂದ ಜನರು ಸಾಯುತ್ತಾರೆ. ಹೀಗೆ ಕರ್ಮದ ನೆವವನ್ನು ಹೇಳುವುದಾದರೆ ಜಗತ್ತಿನ ಯಾವ ವಿಷಯದಲ್ಲೂ ಕೆಲಸ ಮಾಡುವುದೇ ನಿಷ್ಪ್ರಯೋಜಕವೆಂದು ಒಟ್ಟಿಗೆನಿಶ್ಚಯಿಸಬಹುದು. ತಮ್ಮ ಪಶುರಕ್ಷಣೆಯ  ಕೆಲಸವೂ ಆ  ಮೇಲೆ ನಡೆಯುದಿಲ್ಲ.ಈ ಕೆಲಸದ ವಿಚಾರದಲ್ಲಿಯೂ ಗೋಮಾತೆಗಳು ತಮ್ಮ  ತಮ್ಮ ಕರ್ಮಫಲದಿಂದಲೇ ಕಟುಕರ ಕೈಗೆ ಹೋಗುತ್ತವೆ ಮತ್ತು  ಸಾಯುತ್ತವೆ. ಆದ್ದರಿಂದ ಅದಕ್ಕೆ ನಾವು ಏನೂ ಮಾಡಬೇಕಾದ ಅವಶ್ಯಕತೆಯಿಲ್ಲ  ಎಂದು  ಹೇಳಬಹುದು.

ಪ್ರಚಾರಕ: ತಾವು ಹೇಳುತ್ತಿರುವುದು ಸರಿ. ಆದರೆ ಹಸು ನಮಗೆ ‘ತಾಯಿ’ ಎಂದು ಶಾಸ್ತ್ರ  ಹೇಳುತ್ತದೆ.

ಸ್ವಾಮೀಜಿ: ಹಸು ತಮ್ಮ ತಾಯಿ ಎಂಬುವುದನ್ನು ನಾನು ವಿಲಕ್ಷಣವಾಗಿ ಅರ್ಥಮಾಡಿಕೊಂಡಿದ್ದೇನೆ- ಇಲ್ಲದಿದ್ದಲ್ಲಿ ಇಂಥ ಧನ್ಯರಾದ ಪುತ್ರರನ್ನೆಲ್ಲಾ ಇನ್ನು ಯಾರು ಹೆತ್ತಾರು?  (ವಿವೇಕಾನಂದ ಬಹುಮುಖಿ ಚಿಂತಕ ಪುಟ 43-44 )

ಇಷ್ಟೇ  ಅಲ್ಲ, ಹಿಂದೂ  ಧರ್ಮದ  ಧರ್ಮಶಾಶ್ತ್ರ  ಮನುಸ್ಮೃತಿಯಲ್ಲಿ ಗೋವಿನ ಕುರಿತು  ಅನೇಕ ಉಲ್ಲೇಖಗಳಿವೆ ಮನುಸ್ಮೃತಿ ಪ್ರಕಾರ-

ಚರಣಾಮನ್ನಮಚರಾ ದಂಷ್ಟ್ರಿಣಾಮಪ್ಯದಂಷ್ಟ್ರಿಣ:
ಅಹಾಸ್ತಾಶ್ಚ ಸಹಸ್ತಾನಾಂ ಶೂರಾಣಂ ಚೈವ ಭೀರವ:  ( ಮನುಸ್ಮೃತಿ 5:29)

ಅಂದರೆ ಚಲಿಸುವ ಪಶು ಪ್ರಾಣಿಗಳಿಗೆ ಚಲಿಸದಿರುವ ಹುಲ್ಲು- ಸಸ್ಯಗಳು ಆಹಾರಗಳು, ಕೋರೆ ದಾಡೆಗಳಿರುವ ಸಿಂಹ-ಹುಲಿಗಳಿಗೆ ಕೋರೆ ದಾಡೆಗಳಿರದ ಜಿಂಕೆ  ಇತ್ಯಾದಿಗಳು ಆಹಾರಗಳು, ಕೈಗಳಿರುವ ಮನುಷ್ಯರಿಗೆ ಕೈಗಳಿಲ್ಲದ ಪಶು ಪ್ರಾಣಿಗಳು ಆಹಾರಗಳು. ಹಾಗೂ  ಶೂರವಾದ, ಕ್ರೋರವಾದ ಪ್ರಾಣಿಗಳಿಗೆ ಸಾಧುವಾದ –ಭೀರುವಾದ ಪ್ರಾಣಿಗಳು  ಆಹಾರಗಳು.

ನಾತ್ತಾ ದುಷ್ಯತ್ಯದನ್ನಾದ್ಯಾನ್ಟ್ರಾನೋಹನ್ಯಹನ್ಯಪಿ
ಧಾತ್ರೈವ ಸೃಷ್ಟಾಹ್ಯಾದ್ಯಾಶ್ಚ  ಪ್ರಾಣಿನೋತ್ತಾರ  ಏವ ಚ (ಮನುಸ್ಮೃತಿ  5:30)

ಅಂದರೆ, “ಪ್ರತಿದಿನವೂ ತಿನ್ನಲಿಕ್ಕೆ ಯೋಗ್ಯವಾದ ಪ್ರಾಣಿಗಳನ್ನೇ ಕೊಂದು ತಿಂದರೆ ಅದು ಅಪರಾಧವಲ್ಲ. ಏಕೆಂದರೆ ತಿನ್ನುವವರನ್ನು ಪ್ರಾಣಿಗಳನ್ನು ಭಗವಂತನೇ ಸೃಷ್ಟಿ ಮಾಡಿದ್ದಾನೆ.” ಇನ್ನು ಯಜ್ಞ ಯಾಗಾಧಿಗಳಲ್ಲೂ ಪಶುವಧೆಯನ್ನು ಮಾಡಲಾಗುತ್ತಿತ್ತು ಎಂಬುವುದಕ್ಕೂ ಮನುಸ್ಮೃತಿಯಲ್ಲಿ  ಉಲ್ಲೇಖಗಳಿವೆ. ಯಜ್ಞಸ್ಯ ಭೂತ್ಯೈ ಸರ್ವಸ್ಯ ತಸ್ಮಾದ್ಯಜ್ಞೆ  ವಧೋವಧ (ಮನುಸ್ಮೃತಿ 5:39) ಯಜ್ಞಗಳಿಗೆಂದೇ ಪರಮಾತ್ಮನು ಈ ಪಶುಗಳನ್ನು ಸೃಷ್ಟಿ ಮಾಡಿದ್ದಾನೆ. ಈ ಎಲ್ಲವೂ ಯಜ್ಞದ ಆಚರಣೆಗೆಂದೇ ಇದೆ. ಆದ್ದರಿಂದ ಯಜ್ಞದಲ್ಲಿ ಮಾಡುವ ಪಶುವಧೆಯು  ಪಾಪಕರವಲ್ಲ”

ಗೋವಿನ ಕುರಿತಾದ ಧರ್ಮಗ್ರಂಥಗಳು, ಮಹಾನ್ ದಾರ್ಶನಿಕರು ಈ ವಿಚಾರಗಳನ್ನು ಇಂದು ಅರ್ಥೈಸಿಕೊಳ್ಳಲು ಮತಾಂಧರು ತಯಾರಿಲ್ಲ. ಯಾಕೆಂದರೆ ಅದನ್ನುSiddaramaiah ಪಾಲಿಸಿದರೆ ಮತಾಂಧರ ಉದ್ದೇಶ ಈಡೇರುವುದಿಲ್ಲ. ಪರಿಣಾಮ ಕರಾವಳಿಯಲ್ಲಿ ಗೋವಿನ ಹೆಸರಲ್ಲಿ ನೆತ್ತರು ಹರಿಯುತ್ತಿದೆ. ಇನ್ನೊಂದೆಡೆ ಈ ಮೂಕಪ್ರಾಣಿಯನ್ನು ಮಾರಾಟಕ್ಕಾಗಿ ಸಾಗಿಸುವ ರೀತಿಯೂ  ಅಮಾನವೀಯ. ಆ ಮೂಕ ಪ್ರಾಣಿಯ  ವೇದನೆ ಕಟುಕರ  ಎದೆಗೆ ನಾಟುತ್ತಿಲ್ಲ. ಇದಕ್ಕೆ  ಪರೋಕ್ಷವಾಗಿ  ಕಾರಣ ಗೋ ರಕ್ಷಕ ವೇಷದಲ್ಲಿರುವ ಮತಾಂಧರು ಎಂದರೆ ತಪ್ಪಾಗಲಾರದು. ಇವರ ಉಪಟಳ ಒಂದೆಡೆಯಾದರೆ  ವ್ಯಾಪಾರಿಯ ವ್ಯವಹಾರಿಕ ದೃಷ್ಠಿಕೋನವೂ ಈ ಪರಿಸ್ಥಿತಿಗೆ ಕಾರಣ. ರಾಜ್ಯದಲ್ಲಿ ಮತ್ತೆ  ಅಧಿಕಾರಕ್ಕೆ  ಬಂದ  ಕಾಂಗ್ರೆಸ್  ಸರ್ಕಾರದ ದಕ್ಷಿಣ  ಕನ್ನಡ ಜಿಲ್ಲೆಯ ಸಚಿವರುಗಳು ಜಿಲ್ಲೆಗೆ ಭೇಟಿ ನೀಡಿ ಮಾಧ್ಯಮದ ಮುಂದೆ  ನೀಡಿದ ಮೊದಲ ಹೇಳಿಕೆ “ನೈತಿಕ ಪೊಲೀಸ್ ಗಿರಿಯನ್ನು ನಮ್ಮ  ಸರ್ಕಾರ  ಯಾವತ್ತೂ  ಸಹಿಸೋದಿಲ್ಲ. ಎಲ್ಲಿ  ನೈತಿಕ ಪೊಲೀಸ್ ಗಿರಿ ನಡೆಯುತ್ತದೋ  ಆ ವ್ಯಾಪ್ತಿಯ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದಕ್ಕೆ ಹೊಣೆಯಾಗಿರುತ್ತಾರೆ.” ಮುಖ್ಯಮಂತ್ರಿ  ಸಿದ್ದರಾಮಯ್ಯ ಕೂಡಾ ಪದೇ ಪದೇ  ಇಂಥಹಾ  ಹೇಳಿಕೆಯನ್ನೇ ನೀಡುತ್ತಿರುತ್ತಾರೆ. ಆದರೆ ಇವರುಗಳ  ಹೇಳಿಕೆ  ಬರೀ ಬಾಯಿ ಮಾತಿಗಷ್ಟೇ ಸೀಮಿತವಾಗಿದೆ. ಕಾಂಗ್ರೆಸ್  ಸರ್ಕಾರ ಅಧಿಕಾರಕ್ಕೆ ಬಂದ  ನಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಭಯ ಕೋಮುಗಳ ನೈತಿಕ ಪೊಲೀಸರು ಬಾಲ ಮುದುಡಿ ಕೂತಿಲ್ಲ. ಗೋ ಸಾಗಾಟ ತಡೆ ಹೆಸರಲ್ಲಿ ಕಾನೂನು  ಕೈಗೆತ್ತಿಕೊಂಡು ಹಲ್ಲೆ ನಡೆಸುವುದು ದಿನೇ  ದಿನೇ  ಹೆಚ್ಚಾಗುತ್ತಿದೆ ಕೆಲವೊಂದು  ಬಹಿರಂಗಗೊಳ್ಳುತ್ತದೆ  ಇನ್ನೂ  ಕೆಲವೂ ಅಲ್ಲೇ  ಮುಚ್ಚಿಹೋಗುತ್ತಿವೆ. ಹೀಗೆ ಗೋವಿನ ರಕ್ಷಣೆಯ ಹೆಸರಲ್ಲಿ ಅಂದು ಹಾಜಪ್ಪ ಹಸನಬ್ಬ ಇಂದು ಅಬ್ದುಲ್ ಸಮೀರ್ ಇನ್ನು ನಾಳೆ ಮತ್ತೊಬ್ಬ ಹೀಗೆ ಅವಮಾನಕ್ಕೊಳಗಾಗಿ, ಏಟು ತಿನ್ನುತ್ತಿದ್ದರೆ, ಗೋರಕ್ಷಣೆಯ ಹುಮ್ಮಸ್ಸಿನಿಂದ ಒಂದಿಷ್ಟು ಧರ್ಮದ ಅಮಲು ತುಂಬಲ್ಪಟ್ಟ ಹಿಂದುಳಿದ ವರ್ಗಗಳ ಯುವಕರು ಜೈಲು ಸೇರುತ್ತಾರೆ. ಬಹುಷಃ  ಇದು ಹೀಗೆ ಮುಂದುವರಿಯುತ್ತಲೇ ಹೋಗುತ್ತದೆ.

ವೀರ ಭಗತ್‌ಸಿಂಗ್  ಹೇಳುತ್ತಾರೆ “ ಅರಳಿಮರದ ರೆಂಬೆಯೊಂದನ್ನು ಯಾರೋ ಮುರಿದರೆಂದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿಬಿಡುತ್ತದೆ.Bhagat-Singh ಮುಹಮ್ಮದೀಯರ ಕಾಗದದ ಪ್ರತಿಮೆ ತಾಜಿಯಾದ ಮೂಲೆಯೊಂದು ಮುಕ್ಕಾಗಿ ಬಿಟ್ಟಿತೂ ಅಲ್ಲಾಹುವಿಗೆ ಕೆಂಡದಂಥ ಕೋಪಬಂದುಬಿಡುತ್ತದೆ; ಅವನು  ಕಾಫಿರ ಹಿಂದುಗಳ ರಕ್ತದ ಹೊರತು ಇನ್ಯಾರಿಂದಲೂ ಸಮಾಧಾನಗೊಳ್ಳನು. ಇಲ್ಲಿ ಪವಿತ್ರ ಪಶುಗಳ ಹೆಸರಲ್ಲಿ ಮನುಷ್ಯರು ಒಬ್ಬರೊಬ್ಬರ ತಲೆ  ಒಡೆದುಕೊಳ್ಳುತ್ತಿದ್ದಾರೆ. ನಮ್ಮ ದೃಷ್ಟಿ ಧಾರ್ಮಿಕ ರಾಷ್ಟ್ರೀಯತೆಯಿಂದ ಮಸುಕಾಗಿದೆ”

 ಕರಾವಳಿಯಲ್ಲಿ  ನಿನ್ನ ರಕ್ಷಣೆಯ ಹೆಸರಲ್ಲಿ ಇನ್ನೆಷ್ಟು ಪ್ರಮಾಣದ  ರಕ್ತ ಹರಿಸುತ್ತಾರೂ  ಈ ಮತಾಂಧರು, ಓ ಗೋಮಾತೆಯೇ?