ಹೈದರ್ ಸಿನಿಮಾ: ಮನೆಯೊಳಗೆ ಮನೆಯೊಡೆಯನಿಲ್ಲ?


– ಬಿ. ಶ್ರೀಪಾದ ಭಟ್


 

ವಿಶಾಲ್ ಭಾರದ್ವಜ್ ನಿರ್ದೇಶಿಸಿದ ಚಿತ್ರ ಹೈದರ್ ಷೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕವನ್ನಾಧರಿಸಿದ ಹಿಂದಿ ಸಿನೆಮಾ. ಈ ಮೊದಲು ವಿಶಾಲ್ ಷೇಕ್ಸ್ ಪಿಯರ್ ನ ಮ್ಯಾಕ್ಬೆತ್ ಅನ್ನು ಆಧರಿಸಿ ಮಕ್ಬೂಲ್ ಅನ್ನು, ಒಥೆಲೋವನ್ನು ಆಧರಿಸಿ ಓಂಕಾರ ಸಿನಿಮಾವನ್ನು ನಿರ್ದೇಶಿದ್ದರು. ಇವುಗಳಲ್ಲಿ ಮಕ್ಬೂಲ್ ಚಿತ್ರವು ವಿಶಾಲ್ ಭಾರದ್ವಜ್ ನಿರ್ದೇಶಿಸಿದ ಚಿತ್ರ ಹೈದರ್ ಷೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕವನ್ನಾಧರಿಸಿದ ಹಿಂದಿ ಸಿನೆಮಾ. ಈ ಮೊದಲು ವಿಶಾಲ್ ಷೇಕ್ಸ್ ಪಿಯರ್ ನ ಮ್ಯಾಕ್ಬೆತ್ ಅನ್ನು ಆಧರಿಸಿ ಮಕ್ಬೂಲ್ ಅನ್ನು, ಒಥೆಲೋವನ್ನುHaider-1 ಆಧರಿಸಿ ಓಂಕಾರ ಸಿನಿಮಾವನ್ನು ನಿರ್ದೇಶಿದ್ದರು. ಇವುಗಳಲ್ಲಿ ಮಕ್ಬೂಲ್ ಚಿತ್ರವು ಮುಂಬೈನ ಭೂಗತ ಲೋಕವನ್ನು ಹಿನ್ನೆಲೆಯಾಗಿ ಬಳಸಿಕೊಂಡಿದ್ದರೆ ಓಂಕಾರ ಚಿತ್ರದಲ್ಲಿ ಉತ್ತರ ಪ್ರದೇಶದ ಹಸಿ ಹಸಿಯಾದ ಫ್ಯೂಡಲ್ ಗ್ರಾಮವನ್ನು ಬಳಸಿಕೊಂಡಿದ್ದರು. ಈಗ ಕಾಶ್ಮೀರದ ವ್ಯವಸ್ಥೆಯ ಹಿನ್ನಲೆಯನ್ನು (ಪೂರಾ ಕಾಶ್ಮೀರ ಖೈದಖಾನ್ ಹೈ) ಬಳಸಿಕೊಂಡು ಹೈದರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಹುಶ ಈ ಹೈದರ್ ಸಿನಿಮಾ ವಿಶಾಲ್ ಅವರ ಅರ್ಥಪೂರ್ಣವಾದ, ಅಂಥೆಟಿಕ್ ಆದ ರಾಜಕೀಯ ಸಿನಿಮಾ. ಅಪಾರ ಧೈರ್ಯವಂತಿಕೆಯನ್ನು ಪ್ರದರ್ಶಿಸಿದ ವಿಶಾಲ್ ತಮ್ಮ ಈ ನಡೆಗೆ ಸಾರ್ಥಕತೆ ಕಂಡುಕೊಂಡಿದ್ದಾರೆ. ಷೇಕ್ಸಪಿಯರ್ನ ನಾಟಕಗಳ ಹುಡಕಾಟದ ಮೂಲಕ ಇಂಡಿಯಾವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದ ವಿಶಾಲ್ ಗೆ ಈ ಹೈದರ್ ಸಿನಿಮಾ ಒಂದು ಗಮ್ಯವನ್ನು ತೋರಿಸಿದಂತಿದೆ. ವಿಶಾಲ್ ಹ್ಯಾಮ್ಲೆಟ್ ನಾಟಕವನ್ನು ಬಳಸಿಕೊಂಡು ಕಾಶ್ಮೀರ ರಾಜ್ಯದ ಭಯೋತ್ಪಾದನೆ ಮತ್ತು ಮಿಲಿಟರಿಯ ನಡುವಿನ ಹೋರಾಟದ ಅತ್ಯಂತ peak ಆದ ಕಾಲಘಟ್ಟವನ್ನು ಸಮರ್ಥವಾಗಿ ಮತ್ತು ಗುಣಾತ್ಮಕವಾಗಿ ಹೈದರ್ ಸಿನಿಮಾದ ಮೂಲಕ ನಿರೂಪಿಸಿದ್ದಾರೆ. ಬಹುಶ ಇದು ವಿಶಾಲ್ ಭಾರಧ್ವಜ್ ಅವರ ಅತ್ಯಂತ ಮಹತ್ವದ, ಅತ್ಯುತ್ತಮ ಚಿತ್ರಗಳಲ್ಲೊಂದೆನಿಸುತ್ತದೆ.

ತೊಂಬತ್ತರ ದಶಕದ ಮಧ್ಯಭಾಗದಷ್ಟೊತ್ತಿಗೆ ಕಾಶ್ಮೀರದಲ್ಲಿನ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಅವರ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಕ್ರಮೇಣ ಸರ್ಕಾರಿ ಭಯೋತ್ಪಾದನೆ ಎಂದು ಕರೆಯುವಷ್ಟು ಕ್ರೌರ್ಯದಿಂದ ಕೂಡಿತ್ತು. ಈ ಕ್ರೌರ್ಯ ಮತ್ತು ನಿರಪರಾಧಿ ಕಾಶ್ಮೀರಿಗಳ ಮೇಲಿನ ದೌರ್ಜನ್ಯವನ್ನು ವಿಶಾಲ್ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಆ ಕಾಲಘಟ್ಟದಲ್ಲಿ ಕಾಶ್ಮೀರ ಕಣಿವೆಯಲ್ಲಿನ ದಿಗಿಲು, ಪ್ರಕ್ಷುಬ್ಧತೆ ಇಡೀ ಕಣಿವೆಯ ತುಂಬಾ ಮಿಲಿಟರಿ ಸಮವಸ್ತ್ರ ಧರಿಸಿದ ಸೈನಿಕರ ತುಕಡಿಗಳು, ಸದಾ ಗುಂಡಿನ ಮಳೆ ಸುರಿಸುತ್ತಿರುವ ಬಂದೂಕು, ಹಠಾತ್ತಾಗಿ ಕಾಣೆಯಾಗುವ ಮನೆಯ ಮಕ್ಕಳು, ಈ ಸದಾ ಉರಿಯುತ್ತಿರುವ ಬೆಂಕಿಯಂತಹ ಇಡೀ ತೊಂಬತ್ತರ ದಶಕದ ಕಾಶ್ಮೀರ ಕಣಿವೆ ಹೈದರ್ ಸಿನಿಮಾಗೆ ಅತ್ಯಂತ ಸೂಕ್ತವಾಗಿ ಮತ್ತು ಸಮರ್ಥವಾದ ಚಿತ್ರಕತೆಯಾಗಿ ಒದಗಿಬಂದಿದೆ. ಹೈದರ್ನಲ್ಲಿ ಕಾಶ್ಮೀರಿಗಳ ಐಡೆಂಟಿಟಿ ಕ್ರೈಸಿಸ್ ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ ವಿಶಾಲ್. ಬಶ್ರತ್ ಪೀರ್ ಅವರೊಂದಿಗೆ ಕಥೆ, ಚಿತ್ರಕತೆ ಬರೆದಿರುವ ವಿಶಾಲ್ ಹ್ಯಾಮ್ಲೆಟ್ ಅನ್ನು ಇಲ್ಲಿ ಹೈದರ್ ಎನ್ನುವ ಕಾಶ್ಮೀರದ ವಿದ್ಯಾರ್ಥಿಯಾಗಿ ರೂಪಾಂತರಿಸಿದ್ದಾರೆ.

ಅಲೀಘಡದಲ್ಲಿ ಓದುತ್ತಿರುವ ಹೈದರ್ ತನ್ನ ತಂದೆ ಕಾಣೆಯಾಗಿರುವ ಸುದ್ದಿ ತಿಳಿದು ಮರಳಿ ಕಾಶ್ಮಿರಕ್ಕೆ ಬರುತ್ತಾನೆ. ತನ್ನ ಬಾಲ್ಯಕಾಲದ, ಯೌವ್ವನದ ಮನೆ ಇಂದು ಮಿಲಿಟರಿ ಬಾಂಬ್ ದಾಳಿಗೆ ತುತ್ತಾಗಿ ನಾಶವಾಗಿದೆ. ಭಗ್ನ ಅವಶೇಷಗಳು ಹೈದರ್ನನ್ನು ಸ್ವಾಗತಿಸುತ್ತವೆ. ಮಿಲಿಟರಿಯವರು ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿ, ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಹೈದರ್ನ ತಂದೆಯನ್ನು ಬಂಧಿಸಿರುತ್ತಾರೆ. ಆದರೆ ಮನೆಗೆ ಭೇಟಿ ಕೊಟ್ಟಾಗ ತನ್ನ ತಾಯಿ ಟಬು ( ಗಜಾಲ) ತನ್ನ ತಂದೆಯ ಸೋದರ ಕೇಯ್ ಕೇಯ್ ( ಖುರ್ರಂ) ನೊಂದಿಗೆ ಪ್ರೇಮದಲ್ಲಿ ಮುಳುಗಿರುವುದು ಕಂಡು ಹೈದರ್ ದಿಗ್ಭ್ರಮೆಗೊಳ್ಳುತ್ತಾನೆ. ನಂತರ ಕಾಣೆಯಾಗಿದ್ದ ತನ್ನ ತಂದೆ ಸತ್ತಿರುವುದು ಗೊತ್ತಾಗಿ ಅದಕ್ಕೆ ಕಾರಣರಾದವರ ವಿವರಗಳೂ ಗೊತ್ತಾಗಿ ಸಂಪೂರ್ಣ ದುಖದಲ್ಲಿ ಮುಳುಗುವ ಹೈದರ್, ಮನಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಪ್ರತೀಕಾರಕ್ಕೆ ಮುನ್ನುಗ್ಗುತ್ತಾನೆ. ಮೂಲ ನಾಟಕ ಹ್ಯಾಮ್ಲೆಟ್ನಲ್ಲಿ ಭೂತವಾಗಿ ಬಂದು ತನ್ನ ಕೊಲೆಯ ಹಿಂದಿನHaider ರಹಸ್ಯವನ್ನು ಹ್ಯಾಮ್ಲೆಟ್ಗೆ ಹೇಳುವ ಆತನ ತಂದೆಯ ಪಾತ್ರ ಹೈದರ್ ಸಿನಿಮಾದಲ್ಲಿ ಸಂದೇಶಗಳನ್ನು ಹೊತ್ತು ತರುವ ರೋಡರ್ ಪಾತ್ರವಾಗಿ ಮೂಡಿ ಬಂದಿದೆ. ಇರ್ಫಾನ್ ಖಾನ್ ಈ ರೋಡರ್ ಪಾತ್ರದಲ್ಲಿ ನಟಿಸಿದ್ದಾನೆ. ಎಂದಿನಂತೆ ಅತ್ಯುತ್ತಮ ನಟನೆ ಇರ್ಫಾನ್ ಖಾನ್ದು. ತೀರಾ ತೆಳುವಾದ, ಅನೈತಿಕ ಚಾರಿತ್ರ್ಯದ ಕ್ಲಾಡಿಯಸ್ ( ಖುರ್ರಂ) ಪಾತ್ರದಲ್ಲಿ ಅಭಿನಯಿಸಿರುವ ಕೇಯ್ ಕೇಯ್ ತನ್ನ ಧ್ವನಿ ಬದಲಾಯಿಕೊಂಡು ಸಮರ್ಥವಾಗಿ ಅಭಿನಯಿಸಿದ್ದಾನೆ. ಹ್ಯಾಮ್ಲೆಟ್ನ ಪ್ರೇಯಸಿ ಒಫೀಲಿಯಾ (ಆರ್ಶಿಯಾ) ಪಾತ್ರದಲ್ಲಿ ಅಭಿನಯಿಸಿರುವ ಶ್ರದ್ಧಾ ಕಪೂರ್ ತನ್ನ ಬೆರಗು ಹುಟ್ಟಿಸುವ, ಕಾಡುವ ಆಕರ್ಷಕ ಕಣ್ಣುಗಳ ಮೂಲಕ ಗಮನ ಸೆಳೆಯುತ್ತಾಳೆ. ಕೇಂದ್ರ ಪಾತ್ರ ಹ್ಯಾಮ್ಲೆಟ್ ( ಹೈದರ್) ಆಗಿ ಶಾಹಿದ್ ಕಪೂರ್ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾನೆ. ಮುಗ್ಧ ವಿದ್ಯಾರ್ಥಿಯಾಗಿ, ತಂದೆಯ ಪ್ರೀತಿಯ ಮಗನಾಗಿ ನಂತರ ಸನ್ನಿವೇಶಗಳ ಬಲೆಗೆ ಸಿಲುಕುತ್ತಾ ನಿಸ್ಸಹಾಯಕನಾಗಿ, ಪ್ರತೀಕಾರದ ಬೇಟೆಯಲ್ಲಿರುವ ಕುಪಿತ ಕಾಶ್ಮೀರಿ ಯುವಕನಾಗಿ ಒಂದು ಕೊಲಾಜ್ ಪಾತ್ರವಾಗಿ ನಿರ್ವಹಿಸಲು ಶಾಹಿದ್ ಕಪೂರ್ಗೆ ತಮ್ಮ ಚಿತ್ರಕತೆಯಲ್ಲಿ ವಿಫುಲ ಅವಕಾಶಗಳನ್ನು ಒದಗಿಸಿದ್ದಾರೆ ನಿರ್ದೇಶಕ ವಿಶಾಲ್.ಇದನ್ನು ಶಾಹಿದ್ ಸಮರ್ಥವಾಗಿ ಬಳಸಿಕೊಂಡಿದ್ದಾನೆ ಎಂದೇ ಹೇಳಬಹುದು. ಆದರೆ ಹ್ಯಾಮ್ಲೆಟ್ನ ಇರುವಿಕೆ, ಇಲ್ಲದಿರುವಿಕೆಯ ತಳಮಳ, ನೋವು, ಸಂಧಿಗ್ಧತೆಯನ್ನು ಆಳವಾಗಿ ಗ್ರಹಿಸಲು ನಟ ಶಾಹಿದ್ ಕಪೂರ್ ಯಶಸ್ವಿಯಾಗಿಲ್ಲವೇನೋ ಎಂದೆನಿಸುತ್ತದೆ. ಚಿತ್ತ ಸ್ವಾಸ್ಥ್ಯ ಕಳೆದುಕೊಂಡ ಹೈದರ್ನಾಗಿ ನಟಿಸಿದ ಶಾಹಿದ್ ಅದರ ಗಂಭೀರತೆಯನ್ನು ಅರಿತಂತಿಲ್ಲ. ಆ ಭಾಗದ ನಟನೆ, ಮಾಮೂಲಿ ಬಾಲಿವುಡ್ ಶೈಲಿಯ ನಟನೆಯಂತಿದೆ. ಇದಕ್ಕೆ ನಿರ್ದೇಶಕನೂ ಸಹ ಹೊಣೆ.

ಹ್ಯಾಮ್ಲ್ಲೆಟ್ ನಾಟಕದ ಜೀವಾಳವಾಗಿದ್ದ ಸ್ವಗತಗಳು ಹೈದರ್ನಲ್ಲಿ ಸಿನಿಮಾ ಭಾಷೆಯಾಗಿ, ರೂಪಕಗಳಾಗಿ ಬರುವುದೇ ಇಲ್ಲ. ಇದು ಈ ಸಿನಿಮಾದ ಮಿತಿಗಳಲ್ಲೊಂದು. ಮತ್ತು ಸಿನಿಮಾದ ಅವಧಿ ಹಾಗೂ ಆರಂಭದ ಧೀರ್ಘವಾದ ಸನ್ನಿವೇಶಗಳು ಚಿತ್ರಕತೆಯನ್ನು ಸಹ ಎಳೆದಂತೆ ಅನುಭವವಾಗುತ್ತದೆ. ಆದರೆ ಮಿಲಿಟರಿ ಬಾಂಬ್ ದಾಳಿಗೆ ತುತ್ತಾಗಿ ನಾಶವಾಗುವ ಹೈದರ್ನ ಮನೆಯ ಭಗ್ನ ಅವಶೇಷಗಳೊಂದಿಗೆ ಆರಂಭವಾಗುವ ಸಿನಿಮಾ ಕ್ಲೈಮಾಕ್ಸ್ನಲ್ಲಿ ಸ್ಮಶಾನಕ್ಕೆ ಬಂದು ಮುಟ್ಟುತ್ತದೆ. ಇಡೀ ಕತೆಯ ಸಂಕೀರ್ಣತೆಯನ್ನು ಇದು ಪರಿಣಾಮಕಾರಿಯಾಗಿ ಧ್ವನಿಸುತ್ತದೆ.

ಆದರೆ ಇಡೀ ಹೈದರ್ ಸಿನಿಮಾದ ಶಕ್ತಿ ಗರ್ಟೂಡ್  (ಗಜಾಲ) ಪಾತ್ರದಲ್ಲಿ ಅಭಿನಯಿಸಿರುವ ಟಬು. ಹೈದರ್ ಸಿನಿಮಾ belongs to Tabu. ಹೈದರ್ನ ತಾಯಿ ಗಜಾಲಳ ಪಾತ್ರದಲ್ಲಿ ಅತ್ಯಂತ ಘನತೆಯಿಂದ ಅಭಿನಯಿಸಿದ್ದಾಳೆ ಟಬು. ಆಕೆಯ ಕಣ್ಣುಗಳು ಅಚ್ಚರಿ ಹುಟ್ಟಿಸುವಷ್ಟು ನಮ್ಮನ್ನು ಕಾಡುತ್ತವೆ. ಆಕೆಯ ಗಾಂಭೀರ್ಯ ಮತ್ತು ಚಂಚಲತೆ ಇಡೀ ಚಿತ್ರವನ್ನೇ ಪೊರೆದಿರುವುದು ಮಾತ್ರ ನಿಜ. ಸಂಸಾರದಿಂದ, ಬದುಕಿನಿಂದ ಏನನ್ನೂ ನಿರೀಕ್ಷೆಯನ್ನೇ ಇಟ್ಟುಕೊಳ್ಳದ, ಆದರೆ ಒಳ ಆಕಾಂಕ್ಷೆಗಳು ವ್ಯಕ್ತಿತ್ವವನ್ನು ಮೀರಿ ಹೊರ ಬರುವಂತಹ ವೈರುಧ್ಯತೆಯ ಸನ್ನಿವೇಶಗಳಲ್ಲಿ, ಗಂಡನ ಸಾವಿಗೆ ತಾನು ನೇರ ಪಾತ್ರಧಾರಿಯಲ್ಲದಿದ್ದರೂ ಪರೋಕ್ಷವಾಗಿ ಸಹಕರಿಸಿರುವುದು ಅವಳಲ್ಲಿ ಕೀಳರಿಮೆ ಹುಟ್ಟಿಸಿದೆಯೇ ಅಥವಾ ಗಂಡನ ಸೋದರ ಖುರ್ರಂನ ಬಾಹುಗಳಲ್ಲಿ ನೆಮ್ಮದಿಯಾಗಿದ್ದಾಳೆಯೇ ಎನ್ನವಂತಹ ನಿಗೂಢ ಗಜಾಲ ಪಾತ್ರದೊಳಗೆ ಆದ್ರತೆಯನ್ನು, ಮಾರ್ದವತೆಯನ್ನು, ದಿಟ್ಟತೆಯನ್ನು ತರುವಲ್ಲಿ ಟಬು ಯಶಸ್ವಿಯಾಗಿದ್ದಾಳೆ. ಅದರಲ್ಲೂ ಈಡಿಪಸಿಸಂನ ನೆರಳುಗಳನ್ನು ಬಿತ್ತಿರುವಂತಹ ಮಗನೊಂದಿಗಿನ ಕೆಲವು ಸನ್ನಿವೇಶಗಳಲ್ಲಿ ಟಬು ನಟನೆಯ ಅದ್ಭುತ ರೂಹುಗಳನ್ನು ದಾಖಲಿಸಿದ್ದಾಳೆ. ಬಹುಶಃ ಕಳೆದ ದಶಕಗಳಲ್ಲಿ ಬಂದ ಅತ್ಯಂತ ಸಂಕೀರ್ಣವಾದ ಆದರೆ ಬೋಲ್ಡ್ ಆದ ಸ್ತ್ರೀ ಪಾತ್ರ ಈ ಗಜಾಲ. ಇದನ್ನು ಟಬು ಸಮರ್ಥವಾಗಿ ನಿಭಾಯಿಸಿದ್ದಾಳೆ.

ಕಡೆಗೆ ಹೈದರ್ ನಿರ್ದೇಶಕನ ಧೈರ್ಯವಂತಿಕೆಯನ್ನು ಕೂಡ ಪರಿಚಯಿಸುತ್ತದೆ. ಏಕೆಂದರೆ ಅತ್ಯಂತ ಸಂಕೀರ್ಣವಾದ, ಪ್ರತಿ ಸನ್ನಿವೇಶದಲ್ಲೂ ನಾಟಕೀಯತೆಯನ್ನು ಬಯಸುವಂತಹ ಹ್ಯಾಮ್ಲೆಟ್ ನಾಟಕವನ್ನು ಸಿನಿಮಾಗೆ ರೂಪಾಂತರಿಸಲು ಕೈಗೆತ್ತಿಕೊಂಡಿದ್ದಕ್ಕೆ, ಕಾಶ್ಮೀರದ ಹಿಂಸೆ, ಕೊಲೆ, ಪ್ರಕ್ಷುಬ್ಧತೆಯನ್ನು ಪಕ್ಷಪಾತವಿಲ್ಲದೆ, ದೇಶಪ್ರೇಮದ ವೈಭವೀಕರಣಕ್ಕೆ ಬಲಿಯಾಗದೆ ನೈಜವಾಗಿ ಕಟ್ಟಿಕೊಟ್ಟಿದ್ದಕ್ಕೆ ಮತ್ತು ಕಡೆಗೆ ಮೂಲ ನಾಟಕದ ಅಂತ್ಯವನ್ನು ನಿರಾಕರಿಸಿ ಪ್ರತೀಕಾರ ಮತ್ತು ಹಿಂಸೆಯ ಇರುವಿಕೆ ನಮ್ಮನ್ನು ಎಲ್ಲಿಯೂ ಕೊಂಡೊಯ್ಯುವುದಿಲ್ಲ ಅದರ ಇಲ್ಲದಿರುವಿಕೆಯೇ ನಮ್ಮ ಆಶಯ ಎಂದು ನಿರ್ಧರಿಸಿದ್ದಕ್ಕೆ.

Leave a Reply

Your email address will not be published. Required fields are marked *