ಈ ಬಗೆಯ ಸಂಶೋಧನೆ, ಬರವಣಿಗೆ ಬೇಕಾಗಿದೆಯೇ..?


– ಡಾ.ಎಸ್.ಬಿ. ಜೋಗುರ


 

 

 

 

ನಮ್ಮ ಬದಿ ಯಾವುದಾದರೂ ಒಬ್ಬ ವ್ಯಕ್ತಿ ಸಂಕಲನ, ವ್ಯವಕಲನದ ಸಂದರ್ಭದಲ್ಲಿ ಲೆಕ್ಕ ತಪ್ಪಿದರೆ ಸ್ನೇಹಿತರ graduateವಲಯದಲ್ಲಿ ‘ಏನೋ ಜೋಳ ಹಾಕಿ ಸಾಲಿ ಕಲ್ತಿಯೋ..ಹೇಗೆ..?’ ಎಂದು ತಮಾಷೆ ಮಾಡುವುದು ವಾಡಿಕೆ. ಇನ್ನು ತಪ್ಪಿ ಇಂಥವರು ಶಿಕ್ಷಕರಾದರೆ ಸಾಕು, ಒಂದು ತಲೆಮಾರನ್ನೇ ಹಾಳು ಮಾಡಿ ಬೀದಿಗೆ ತಳ್ಳುತ್ತಾರೆ. ಗಾಂಧೀಜಿ ಅಂದರೆ ಯಾರು ಅನ್ನೋ ಪ್ರಶ್ನೆಗೆ ತಲೆಯಲ್ಲಿ ಹೇನು ಕಡಿಯುವಂತೆ ತಲೆ ಕೆರೆಯುತ್ತಾ ಹುಬ್ಬು ಗಂಟಿಕ್ಕಿ ನಿಲ್ಲುವ ಶಿಕ್ಷಕರು ಇದೇ ಜಾತಿಗೆ ಸೇರುತ್ತಾರೆ. ಎಲ್ಲರಿಗೂ ಎಲ್ಲಾ ತಿಳಿದಿರಬೇಕೆಂದೇನೂ ಇಲ್ಲ. ಆದರೆ ಶಿಕ್ಷಕರಾದವರಿಗೆ ಗಾಂಧಿ ಬಗ್ಗೆ ತಿಳಿದಿರಲೇಬೇಕು. ಈಚೆಗೆ ಡಾಕ್ಟರೇಟ್ ಡಿಗ್ರಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಅತ್ಯಂತ ಅಗ್ಗವಾಗಿ ಬಿಕ್ರಿಯಾಗುತ್ತಿವೆ. ಆ ದಿಸೆಯಲ್ಲಿ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆಯವರು ನಿವೃತ್ತ ಕುಲಪತಿಗಳು ಮತ್ತು ನ್ಯಾಯಮೂರ್ತಿಗಳನ್ನೊಳಗೊಂಡಂತೆ ಒಂದು ಸಭೆಯನ್ನು ಕರೆದು ಚರ್ಚಿಸಿ ಇನ್ನು ಮುಂದೆ ಮಿತಿಯನ್ನು ಮೀರಿ ಡಾಕ್ಟರೇಟ್ ಡಿಗ್ರಿಗಳನ್ನು ವಿತರಿಸದೇ ವರ್ಷಕ್ಕೆ ಒಂದು ವಿಶ್ವವಿದ್ಯಾಲಯ ಮೂರೇ ಡಾಕ್ಟರೇಟ್ ಪದವಿಗಳನ್ನು ನೀಡಬೇಕು, ಸಂಶೋಧನಾ ಅಭ್ಯರ್ಥಿಗಳ ಆಯ್ಕೆಯೂ ಅಷ್ಟೇ ಕಟ್ಟುನಿಟ್ಟಾಗಿ ನಡೆಯಬೇಕು ಎನ್ನುವ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಇದೊಂದು ಒಳ್ಳೆಯ ತೀರ್ಮಾನವೇ. ಆದರೆ ತಳಮೂಲದಲ್ಲಿರುವ ದೋಷಗಳನ್ನು ಸರಿಪಡಿಸದೇ ಹೀಗೆ ಬರೀ ಡಾಕ್ಟರೇಟ್ ಡಿಗ್ರಿಗಳನ್ನು ಮಾತ್ರ ಸೆನ್ಸಾರ್ ಮಾಡುವುದರಿಂದ ಗುಣಮಟ್ಟ ಸುಧಾರಣೆಯಾಗದು. ಶೈಕ್ಷಣಿಕ ವಲಯ ಅತ್ಯಂತ ಪವಿತ್ರವಾದುದು. ಇಲ್ಲಿ ಕಟ್ಟಪ್ಪಣೆಗಳಿಗಿಂತಲೂ ಮುಖ್ಯವಾಗಿ ಆತ್ಮ ಸಾಕ್ಷಿ ಜಾಗೃತವಾಗಿ ಕೆಲಸ ಮಾಡಬೇಕಿದೆ. ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಎಂಟ್ರಿ ಹೊಡೆದ ದಿನದಿಂದಲೇ ರೋಗಗ್ರಸ್ಥ ಸ್ಥಿತಿ ಅಲ್ಲಿ ಆರಂಭವಾಯಿತು. ಪರಿಣಾಮವಾಗಿ ನಿರಂತರವಾಗಿ ಸಮರ್ಥರಿಗೆ ಅನ್ಯಾಯವಾಗುತ್ತಲೇ ಇದೆ. ವೈದ್ಯಕೀಯ ಮತ್ತು ಶೈಕ್ಷಣಿಕ ವಲಯಗಳಲ್ಲಿ ಅತ್ಯಂತ ಗಟ್ಟಿ ಇರುವ ಕಾಳುಗಳಿಗೆ ಮಾತ್ರ ನೆಲೆಯಿರಬೇಕು. ಪೊಳ್ಳು ಕಾಳುಗಳು ಮತ್ತು ಖಾಲಿ ಕೊಡಗಳಿಗೆ ಇಲ್ಲಿ ಜಾಗವೇ ಇರಬಾರದು. ದುರಂತವೆಂದರೆ ಈಗೀಗ ವಿಶ್ವವಿದ್ಯಾನಿಲಯಗಳಲ್ಲಿಯ ಸಂಶೋಧನೆ, ಅಧ್ಯಯನ ಮತ್ತು ಬರವಣಿಗೆಯಲ್ಲಿ ಒಂದು ಬಗೆಯ ನಿರ್ವಾತತೆ ಆರಂಭವಾಗುತ್ತಿದೆ. ಪರಿಣಾಮವಾಗಿ ನಮಗೆ ಮೊದಲಿನಂತೆ ಸ್ಕಾಲರ್ ಗಳನ್ನು ಸೃಷ್ಟಿ ಮಾಡಲಾಗುತ್ತಿಲ್ಲ.

ಈಚೆಗೆ ಮಾಡಲಾದ ಒಂದು ಸಮೀಕ್ಷೆಯಂತೆ ವಿಶ್ವದ 200 ಶ್ರೇಷ್ಟ ವಿಶ್ವವಿದ್ಯಾನಿಲಯಗಳ ಪೈಕಿ ನಮ್ಮ ದೇಶದ ಏಕೈಕuniversitiesofIndia ವಿಶ್ವವಿದ್ಯಾಲಯವೂ ಅಲ್ಲಿಲ್ಲ. ಈಗೀಗ ಅಧ್ಯಯನ ಮತ್ತು ಬೋಧನೆಗೆ ವಿಶೇಷವಾದ ಗಮನ ಹರಿಸುತ್ತಿಲ್ಲ. ಪರಿಣಾಮವಾಗಿ ಶಿಕ್ಷಣ ಹೆಚ್ಚೆಚ್ಚು ಯಾಂತ್ರಿಕವಾಗುತ್ತಿದೆ. ಅದರ ಪರಿಣಾಮವೇ ಇಂದಿನ ವಿದ್ಯಾರ್ಥಿಗಳಲ್ಲಿ ವಿಧೇಯತೆ, ಶಿಸ್ತು, ಜ್ಞಾನದ ಹಂಬಲ ಕಡಿಮೆಯಾಗುತ್ತಿದೆ. ಆಡಳಿತದಲ್ಲಿ ಈಗ ಶಿಕ್ಷಣದ ಬಗ್ಗೆ ನಿಜವಾದ ಕಳಕಳಿ ಮತ್ತು ಕಾಳಜಿ ಇರುವವರ ಅವಶ್ಯಕತೆ ಇದೆ. ಬರೀ ಆದೇಶಗಳನ್ನು ಹೇರುವುದರಿಂದಾಗಲೀ ಇಲ್ಲವೇ ಒತ್ತಡಗಳನ್ನು ತರುವ ಮೂಲಕವಾಗಲೀ ಸುಧಾರಣೆಯಾಗುವುದಿಲ್ಲ. ಸಂಶೋಧನೆ ವಿಷಯದಲ್ಲಂತೂ ಈಗೀಗ ಕಳಪೆತನದ ಮಾತುಗಳು ಮತ್ತೆ ಮತ್ತೆ ಕೇಳಿ ಬರುತ್ತಲಿದೆ. ವರ್ತಮಾನದ ಸಂದರ್ಭದಲ್ಲಿ ಶಿಕ್ಷಣ ಅನೇಕ ಬಗೆಯ ಅದ್ವಾನಗಳಿಂದ ಸುತ್ತುವರೆದಿರುವುದಂತೂ ಹೌದು. ಮಾರುಕಟ್ಟೆಗಾಗಿ ಶಿಕ್ಷಣ ಎಂಬ ಸೂತ್ರದಡಿಯಲ್ಲಿ ಶಿಕ್ಷಣ ಮತ್ತು ಪದವಿಯನ್ನು ಒಂದು ಕಮಾಡಿಟಿಯನ್ನಾಗಿ ಮಾಡಿ ಬಿಕ್ರಿಗಿಡುವಂತೆ ರೂಪಿಸುತ್ತಿರುವ ಕ್ರಮವೇ ಸರಿಯಾದುದಲ್ಲ. ಉದ್ಯೋಗಕ್ಕಾಗಿ ಶಿಕ್ಷಣ ಎನ್ನುವುದು ಆದ್ಯತೆಯಾದಾಗ ಜ್ಞಾನಾರ್ಜನೆಯ ಕಾವು ಆರಿ ಬಿಡುತ್ತದೆ. ಅದರ ಪರಿಣಾಮವಾಗಿಯೇ ಅಧ್ಯಯನ, ಸಂಶೋಧನೆ ಮತ್ತು ಬರವಣಿಗೆಯಲ್ಲಿ ಗಟ್ಟಿತನ ಸಾಧ್ಯವಾಗುವದಿಲ್ಲ. ಹೇಗಾದರೂ ಮಾಡಿ ಏನಾದರೂ ಮಾಡಿ ಡಿಗ್ರಿ ಪಡೆದರೆ ಸಾಕು. ಅಲ್ಲಿಗೆ ಒಂದು ಉದ್ಯೋಗವೂ ಅವನಿಗಾಗಿ ಕಾದು ಕುಳಿತಿರುತ್ತದೆ.

ಉನ್ನತ ಶಿಕ್ಷಣದ ವಲಯದಲ್ಲಿ ಗುಣಾತ್ಮಕ ಶಿಕ್ಷಣದ ಮಾತುಗಳಷ್ಟೇ ವ್ಯಾಪಕವಾಗಿ ಕೇಳಿ ಬರುವfake-degree-scam-india ಇನ್ನೊಂದು ಮಾತು ಕಳಪೆ ಮಟ್ಟದ ಅಧ್ಯಯನ ಮತ್ತು ಸಂಶೋಧನೆ. ಅದರಲ್ಲಿಯೂ ಮಾನವಿಕ ವಿಜ್ಞಾನಗಳಲ್ಲಿ ಈ ಬಗೆಯ ವಸ್ತುನಿಷ್ಟ ಸಂಶೋಧನೆಯ ಕೊರತೆಯಿಂದಾಗಿ ಆಗಾಗ ಎಲ್ಲೋ ಒಂದೆಡೆ ನಡೆದ ಅಪರಾತಪರಾದಿಂದಾಗಿ ಇಡಿಯಾಗಿ ಆ ಆಪಾದನೆ ಎಲ್ಲ ಸಮಾಜವಿಜ್ಞಾನಗಳಿಗೂ ಅನ್ವಯವಾಗುತ್ತಿತ್ತು. ಆಗ ಭೌತ ವಿಜ್ಞಾನಗಳು ತಮ್ಮಲ್ಲಿ ಹಾಗಾಗಲು ಸಾಧ್ಯವೇ ಇಲ್ಲ ಎನ್ನುವ ಸಮಾಧಾನದ ನಿಟ್ಟುಸಿರು ಬಿಡುವುದಿತ್ತು. ಆದರೆ ಈಚೆಗಷ್ಟೇ ಭೌತ ವಿಜ್ಞಾನಗಳಲ್ಲಿಯೂ ಪರಿಸ್ಥಿತಿ ನೆಟ್ಟಗಿಲ್ಲ ಎನ್ನುವುದನ್ನು ಕೆಲವು ಹಸಿ ವಿಜ್ಞಾನಿಗಳ ಬರಹಗಳು ಸಾಬೀತು ಮಾಡಿವೆ. ಇಲ್ಲಿ ಮತ್ತೆ ಎಲ್ಲ ವಿಜ್ಞಾನಿಗಳಿಗೆ ಹೋಲ್ ಸೇಲಾಗಿ ನಾನು ನೆಟ್ಟಗಿಲ್ಲ ಎನ್ನುವ ಪದ ಬಳಸಲು ಒಪ್ಪುವುದಿಲ್ಲ. ಯಾಕೆಂದರೆ ನಮ್ಮ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಯಾರೋ ಒಂದಿಬ್ಬರು ಮಾಡಿರುವ ಪ್ರಮಾದಗಳನ್ನು ಇಟ್ಟುಕೊಂಡು ಸಾರ್ವತ್ರಿಕಗೊಳಿಸುವ ಮನಸ್ಥಿತಿಯೇ ಸರಿಯಲ್ಲ. 99 ಜನರು ಸರಿಯಿದ್ದು ಯಾರೋ ಒಂದಿಬ್ಬರು ಮಾಡುವ ಹೊಣೆಗೇಡಿತನಕ್ಕೆ ಇಡೀ ವ್ಯವಸ್ಥೆಯನ್ನೇ ದೂರುವ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕ್ರಮಗಳೇ ಮೂಲಭೂತವಾಗಿ ಸರಿಯಲ್ಲ. ಹೊಲದಲ್ಲಿರುವ ಕಳೆ ತೆಗೆಯಬೇಕೇ ಹೊರತು ಬೆಳೆಯನ್ನಲ್ಲ. ಎಲ್ಲ ಅಧ್ಯಾಪಕರನ್ನು ಗುಮಾನಿಯಿಂದ ಕಾಣುವ ಮೂಲಕ ನಮ್ಮ ಸಂತಾನಕ್ಕೆ ಎಂಥಾ ಶಿಕ್ಷಣವನ್ನು ನಾವು ನಿರೀಕ್ಷಿಸಲು ಸಾಧ್ಯ? ಪ್ರಮಾದ ಎಸಗಿದವರಿಗೆ ಮಾತ್ರ ಶಿಕ್ಷೆ ಸೀಮಿತವಾಗಬೇಕೇ ಹೊರತು ಒಟ್ಟು ವ್ಯವಸ್ಥೆಗಲ್ಲ.

ಇಲ್ಲಿಯವರೆಗೆ ಭೌತ ವಿಜ್ಞಾನಿಗಳು ಮಾಡುವ ಪ್ರಯೋಗಗಳು, ಪರಿಶೀಲನೆಗಳು, ಬರಹಗಳು indian science labsವಸ್ತು ನಿಷ್ಟವಾಗಿರುತ್ತವೆ; ಕೊನೆಯ ಪಕ್ಷ ಸಮಾಜವಿಜ್ಞಾನಗಳಿಗಿಂತಲೂ ಅಲ್ಲಿ ಖಚಿತತೆ ಹೆಚ್ಚು ಎಂದು ನಂಬಿಕೊಂಡು ಬರಲಾಗಿತ್ತು. ಆದರೆ ಈಚೆಗೆ ಅಲ್ಲೂ ಕೂಡಾ ಅರಾಮ ಖುರ್ಚಿಯ ತತ್ವಜ್ಞಾನ ನುಸುಳುತ್ತಿದೆ ಎನ್ನುವುದರ ಕುರಿತು ‘ದ ಹಿಂದು’ ಪತ್ರಿಕೆ ದಿನಾಂಕ 17-7-2014 ರಂದು ಒಂದು ವಿವರವಾದ ಲೇಖನವನ್ನೇ ಪ್ರಕಟಿಸಿದೆ. ಭೌತ ವಿಜ್ಞಾನಗಳ ವಲಯದಲ್ಲಿಯೂ ಈಗೀಗ ಅಧ್ಯಯನ, ಸಂಶೋಧನೆ ಹೇಗೆ ಕಳಪೆ ಮಟ್ಟವನ್ನು ತಲುಪಿದೆ ಎನ್ನುವದನ್ನು ಬಹಿರಂಗಪಡಿಸಿತ್ತು. ಚಂಡಿಗಢದ IMTEC [ Institute of Microbial Technology] ಎಂಬ ಸಂಸ್ಥೆಯಲಿ ಕೆಲಸ ಮಾಡುವ ಒಂದಿಬ್ಬರು ವಿಜ್ಞಾನಿಗಳು ಅಂತರರಾಷ್ಟ್ರೀಯ ಮಟ್ಟದ ಜರ್ನಲ್ ಒಂದರಲ್ಲಿ ತಮ್ಮ ಕಳಪೆ ಬರಹಗಳ ಮೂಲಕ ಘನವಂತ ಪಾಂಡಿತ್ಯವನ್ನು ಮೆರೆದು ಇಡೀ ದೇಶದ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ. ಸಮಾಜವಿಜ್ಞಾನಗಳಲ್ಲಿ ಈ ಬಗೆಯ ಮಾತುಗಳಿದ್ದವು. ಅಲ್ಲಿ ಯಾರದೋ ಥೀಸಿಸ್ ನ್ನು ಇನ್ನೊಬ್ಬ ಕಾಪಿ ಹೊಡೆಯುವದು, ಒಂದೇ ತಿಂಗಳಲ್ಲಿ ಹತ್ತಾರು ಲೇಖನಗಳನ್ನು ಪ್ರಕಟಿಸಿ ಪ್ರಮೋಶನ್ ಪಡೆಯುವುದು ಇವೆಲ್ಲಾ ಇದ್ದವು. ಆದರೆ ಭೌತ ವಿಜ್ಞಾನಗಳಲ್ಲಿಯೂ ಅದೇ ಸ್ಥಿತಿಯಾದರೆ ವಿಜ್ಞಾನವನ್ನು ತತ್ವಜ್ಞಾನದ ಗದ್ದುಗೆಯ ಮೇಲೆ ಕುಳ್ಳರಿಸುವುದು ಸರಿಯೇನೋ ಎನಿಸುತ್ತದೆ.

ಈ ಚಂಡಿಗಡದ ಸೋ ಕಾಲ್ಡ್ ಸೈಂಟಿಸ್ಟ್ ಗಳು ‘PLos One’ ಎಂಬ ಜರ್ನಲ್ ನಲ್ಲಿ ಕಳೆದ ವರ್ಷ ಪ್ರಕಟಿಸಿದ ಮೂರು ಲೇಖನಗಳು ತಳ ಬುಡವಿಲ್ಲದವುಗಳಾಗಿದ್ದು, ಅವುಗಳನ್ನು ನಾವು ಸಮರ್ಥಿಸುತ್ತಿಲ್ಲ ಎಂದು ಆ ಪತ್ರಿಕೆ ಜುಲೈ ತಿಂಗಳ 9 ನೇ ತಾರೀಕಿನ ಸಂಚಿಕೆಯಲ್ಲಿ ಪ್ರಕಟಿಸಿದೆ. ಅದೇ ರೀತಿಯಲ್ಲಿ ಇವರು ಇತರೇ ಬೇರೆ ಬೇರೆ ಜರ್ನಲ್ ಗಳಲ್ಲಿ ಪ್ರಕಟಿಸಿರುವ ಲೇಖನಗಳೂ ಅಷ್ಟೆ ಕಳಪೆಯಿಂದ ಕೂಡಿದ್ದು ಅಲ್ಲಿ ಪ್ರಕಟವಾದ ನಾಲ್ಕು ಲೇಖನಗಳು ಕೂಡಾ ಬೋಗಸ್ ಎಂದು ಸಾಬೀತಾಗಿದೆ. ಅಂದರೆ ಒಟ್ಟಾರೆ ಈ ವಿಜ್ಞಾನಿಗಳು ಪ್ರಕಟಿಸಿರುವ ಏಳು ಲೇಖನಗಳು ಅರಾಮ ಖುರ್ಚಿಯ ತತ್ವಜ್ಞಾನದ ಅಡಿಯಲ್ಲಿ ರೂಪಗೊಂಡವುಗಳು ಎಂದು ಸಾಬೀತಾಗಿದ್ದು ಆ ಎಲ್ಲugc ಲೇಖನಗಳನ್ನು ಆ ಜರ್ನಲ್ ಗಳು ತಿರಸ್ಕರಿಸುತ್ತಿವೆ. ಕಾರಣ ಅಲ್ಲಿಯ ಅಂಕಿ ಅಂಶಗಳು ಮತ್ತು ಮಾಹಿತಿ ನಿಖರತೆಯಿಂದ ಕೂಡಿಲ್ಲ ಎನ್ನುವದಾಗಿದೆ. ಭೌತ ವಿಜ್ಞಾನಗಳಲ್ಲಿಯೂ ಹೀಗೆ ಊಹೆ, ತರ್ಕ ನುಸುಳಲು ಆರಂಭವಾಗಿರುವದು ಒಂದು ದೊಡ್ಡ ವಿಪರ್ಯಾಸ! ಸಾಮಾನ್ಯವಾಗಿ ಈ ಬಗೆಯ ಸಂಶೋಧನಾ ಲೇಖನಗಳನ್ನು ಪ್ರಕಟಿಸುವ ಮುನ್ನ ಒಂದು ಪರಾಮರ್ಶಕ ಮಂಡಳಿ ಇದ್ದೇ ಇರುತ್ತದೆ. ಇಲ್ಲಿ ಮಾತ್ರ ಅವರೂ ಸರಿಯಾಗಿ ಕಾರ್ಯ ನಿರ್ವಹಿಸಿದಂತೆ ತೋರುವದಿಲ್ಲ. ಇನ್ನೊಂದು ದೊಡ್ಡ ವಿಪರ್ಯಾಸವೆಂದರೆ ಈ IMTEC ಸಂಸ್ಥೆ ಪ್ರತಿಷ್ಟಿತ CSIR [Council of scientific and Industrial Research] ನ ಅಂಗ ಸಂಸ್ಥೆ. ವಸ್ತು ನಿಷ್ಟ ಅಧ್ಯಯನ ಮತ್ತು ಸಂಶೋಧನೆಗೆಂದೇ ಹುಟ್ಟಿಕೊಂಡ ಸಂಸ್ಥೆಯಲ್ಲಿ ಈ ಬಗೆಯ ಅರಾಮ ಖುರ್ಚಿಯ ತತ್ವಜ್ಞಾನಿಗಳು ತಲೆ ಎತ್ತುತ್ತಿರುವದು ದುರಂತವೇ ಸರಿ. ಒಂದೇ ವರ್ಷದಲ್ಲಿ ಹದಿನೈದಕ್ಕಿಂತಲೂ ಹೆಚ್ಚಿನ ಸಂಶೋಧನಾ ಲೇಖನಗಳನ್ನು ಬರೆಯುವ, ಅಪಾರವಾಗಿ ಸಂಶೋಧನೆ ಮಾಡುವ ಈ ಬಗೆಯ ವಿಜ್ಞಾನಿಗಳು ಏನನ್ನೂ ಮಾಡದಿರುವದೇ ಒಳಿತು ಎನಿಸುತ್ತದೆ. ಇನ್ನು ಕೆಲವು ಜರ್ನಲ್ ಗಳು ದುಡ್ಡು ಪಡೆದು ಲೇಖನಗಳನ್ನು ಪ್ರಕಟಿಸುತ್ತವೆ. ಅಂಥಾ ಜರ್ನಲ್ ಗಳು ಲೇಖನಗಳನ್ನು ಸರಿಯಾಗಿ ಪರಾಮರ್ಶಿಸಲು ಸಾಧ್ಯವೇ ಇಲ್ಲ. ಒಟ್ಟಾರೆ ಹೇಗಾದರೂ ಮಾಡಿ ಪ್ರಮೋಶನ್ ಪಡೆಯುವ, ಏನಾದರೂ ಮಾಡಿ ಸಂಶೋಧನೆ ಮಾಡಬೇಕೆನ್ನುವ ಅಡ್ಡ ದಾರಿಗಳು ಕೇವಲ ಅವನ ಕಾಲದ ಶಿಕ್ಷಣವನ್ನು ಮಾತ್ರ ಕಳಪೆಯಾಗಿಸದೇ ಅವನಿಗಿಂತಲೂ ಸಮರ್ಥರಿರುವವರ ಹಕ್ಕುಗಳನ್ನು ಕಸಿದು ಮುಂಬರುವ ಒಟ್ಟು ಶೈಕ್ಷಣಿಕ ಪರಿಸರವನ್ನೇ ಹಾಳುಗೆಡವುತ್ತದೆ. ಈಗೀಗ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ, ಬೋಧನೆ, ಸಂಶೋಧನೆಯ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಅದಕ್ಕೆ ಕಾರಣ ಈ ದಿಶೆಯಲ್ಲಿ ಸರಿಯಾದ ಆಲೋಚನೆ ಮತ್ತು ತೀರ್ಮಾನಗಳೇ ನಮ್ಮಲ್ಲಿಲ್ಲ. ನಮ್ಮ ದೇಶದ ಶೈಕ್ಷಣಿಕ ಪರಿಸರಕ್ಕೆ ಪಕ್ಕಾ ಅಕಾಡೆಮಿಕ್ ಕಾಳಜಿ ಇರುವ ತಜ್ಞರ ಅಗತ್ಯ ಎಂದಿಗಿಂತಲೂ ಈಗ ಹೆಚ್ಚಿಗಿದೆ.

Leave a Reply

Your email address will not be published. Required fields are marked *