Daily Archives: October 12, 2014

ರಾಣೆಬೆನ್ನೂರಿನಲ್ಲಿ “ಯುವಚೈತನ್ಯ ಮತ್ತು ನಾಯಕತ್ವ ತರಬೇತಿ” ಶಿಬಿರ

ಆತ್ಮೀಯರೇ,

ವರ್ತಮಾನದ ಓದುಗರಿಗೆ ಎಸ್.ಆರ್.ಹಿರೇಮಠರ ಪರಿಚಯ ಇದ್ದೇ ಇದೆ. ವರ್ತಮಾನ.ಕಾಮ್‌ನಿಂದ 2013 ರ ವರ್ಷದ ವ್ಯಕ್ತಿಯನ್ನಾಗಿ ಗುರುತಿಸಿದ್ದೂ ಅವರನ್ನೇ ಎಂದು ನಿಮಗೆಲ್ಲ ತಿಳಿದಿದೆ. ಹಿರೇಮಠರು ಖಚಿತ ನಿಲುವುಗಳುಳ್ಳ, ಕಾರ್ಯೋನ್ಮುಖ ಪ್ರವೃತ್ತಿಯ ಪ್ರಗತಿಪರ ಚಿಂತನೆಯ ವ್ಯಕ್ತಿ. ನಮ್ಮಲ್ಲಿ ಪ್ರಗತಿಪರರೆಂದು ಹೇಳಿಕೊಳ್ಳುವ, srhiremathಗುರುತಿಸಿಕೊಳ್ಳುವ ನೂರಾರು ಜನರಿದ್ದಾರೆ. ಆದರೆ, ಅದ್ಯಾವುದನ್ನೂ ಹೇಳಿಕೊಳ್ಳದೆ, ನಮ್ಮಲ್ಲಿಯ ಭ್ರಷ್ಟಾಚಾರ, ಜಾತೀಯತೆ, ಕೋಮುವಾದ, ಪರಿಸರನಾಶ, ಸಾಮಾಜಿಕ ಅನ್ಯಾಯಗಳ ವಿರುದ್ಧ ಸತತವಾಗಿ ಹೋರಾಡುತ್ತ ಬಂದಿರುವವರು ಎಪ್ಪತ್ತರ ವಯಸ್ಸಿನ ಪ್ರಜಾಪ್ರಭುತ್ವವಾದಿ ಎಸ್.ಆರ್.ಹಿರೇಮಠರು. ಅವರ ಮಾತುಗಳಲ್ಲಿರುವ ಕಾವು, ನ್ಯಾಯನಿಷ್ಟುರತೆ, ಆಕ್ರೋಶ, ಆಶಾವಾದ, ಕೆಚ್ಚು, ಇವೆಲ್ಲವನ್ನೂ ಕೇಳುವುದೇ ಒಂದು ಜೀವನ ಪಾಠ. ತಮ್ಮ ಪ್ರತಿ, ಅಥವ ಬಹುತೇಕ ಭಾಷಣಗಳಲ್ಲಿ, ಗಾಂಧಿ, ಅಂಬೇಡ್ಕರ್, ಮತ್ತು ಜಯಪ್ರಕಾಶ ನಾರಾಯಣರ ಉಲ್ಲೇಖವಿಲ್ಲದೆ ಅವರು ಮಾತನಾಡಿದ್ದನ್ನು ನಾನು ಕಂಡಿಲ್ಲ.

ನಿಮಗೆಲ್ಲ ತಿಳಿದಿರುವ ಹಾಗೆ, ಹಿರೇಮಠರು ’ಸಮಾಜ ಪರಿವರ್ತನಾ ಸಮುದಾಯ’ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ, “ಜನ ಸಂಗ್ರಾಮ ಪರಿಷತ್” ಎಂಬ ಸಂಘಟನೆಯ ಅಧ್ಯಕ್ಷರೂ ಹೌದು. ರಾಜ್ಯದ ಹಲವು ಭಾಗಗಳಲ್ಲಿ “ಜನ ಸಂಗ್ರಾಮ ಪರಿಷತ್” ಜನಪರ ಹೋರಾಟಗಳನ್ನು ರೂಪಿಸುವುದರಲ್ಲಿ, ಚಳವಳಿಗಳನ್ನು ಕಟ್ಟುವುದರಲ್ಲಿ, ತೊಡಗಿಸಿಕೊಂಡಿದೆ. ರಾಘವೇಂದ್ರ ಕುಷ್ಟಗಿ ಇದರ ಕಾರ್ಯಾಧ್ಯಕ್ಷರಾಗಿದ್ದಾರೆ. ನಾಡಿನ ಅನೇಕ ಹೋರಾಟಗಾರರು, ಚಳವಳಿಕಾರರು ಈ ಸಂಘಟನೆಯಲ್ಲಿದ್ದು, ಹೆಚ್ಚಿನ ಸದ್ದುಗದ್ದಲಗಳಿಲ್ಲದೆ ಜನಸಮುದಾಯದ ನಡುವೆ, ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡುವ ಮೂಲಕ, ಕೆಲಸ ಮಾಡುತ್ತಿದ್ದಾರೆ.

ಈ ಸಂಘಟನೆಯ ಆಶ್ರಯದಲ್ಲಿ ಬರುವ ಶನಿವಾರ-ಭಾನುವಾರದಂದು (ಅಕ್ಟೋಬರ್ 18/19) ಎರಡು ದಿನಗಳ ಯುವಚೈತನ್ಯ ಮತ್ತು ನಾಯಕತ್ವ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಾಣೆಬೆನ್ನುರಿನಲ್ಲಿರುವ ಸಮಾಜ ಪರಿವರ್ತನ ಸಮುದಾಯದ “ಪರಿವರ್ತನ ಸದನ”ದಲ್ಲಿ ಈ ಶಿಬಿರ ನಡೆಯಲಿದೆ. ಪ್ರಜಾಪ್ರಭುತ್ವ, ಭಾರತ ಮತ್ತು ಕರ್ನಾಟಕದ ಇತಿಹಾಸ, ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳು, ಸಾಂಸ್ಕೃತಿಕ ಬಂಡಾಯ, ಚಳವಳಿಗಳು, ಸಾಹಿತ್ಯದಲ್ಲಿ ಬಂಡಾಯ, ಜಾಗತಿಕ ತಾಪಮಾನ, ಮಾಹಿತಿ ಹಕ್ಕು ಮತ್ತು ತರಬೇತಿ, ಹಾಡು, ಆಟ, ಪಾಠ; ಹೀಗೆ ಅನೇಕ ವಿಷಯಗಳ ಬಗ್ಗೆ ಎಸ್.ಆರ್.ಹಿರೇಮಠರ ಆದಿಯಾಗಿ ಹಲವಾರು ಹೋರಾಟಗಾರರು, ಪ್ರಾಧ್ಯಾಪಕರು, ಲೇಖಕರು, ಹಾಡುಗಾರರು, ನಡೆಸಿಕೊಡಲಿದ್ದಾರೆ. ವೃಂದಚರ್ಚೆ ಮತ್ತಿತರ ಸಂವಾದಗಳ ಮೂಲಕ ಎಲ್ಲಾ ಶಿಬಿರಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವ್ಯವಸ್ಥೆ ಇದೆ. ತರಬೇತಿಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು, ತುಮಕೂರಿನ ಹಸಿರು ಬಳಗ ಮತ್ತು ಸಿಜ್ಞಾ ತಂಡಗಳು ನಡೆಸಿಕೊಡಲಿವೆ. ಕೇವಲ ಮಾಹಿತಿ ಅಷ್ಟೇ ಅಲ್ಲ, ತಮ್ಮ ಊರು-ನಗರಗಳಲ್ಲಿ ಮುಂದಕ್ಕೆ ಹೇಗೆ ಶಿಬಿರಾರ್ಥಿಗಳು ಜನಪರ ಕಾರ್ಯಕ್ರಮಗಳನ್ನು, ಹೋರಾಟಗಳನ್ನು ರೂಪಿಸಬಹುದು, ನಾಯಕತ್ವ ವಹಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ತರಬೇತಿ ಕೊಡಲಾಗುತ್ತಿದೆ. ಹಾಗೆಯೇ, ಶಿಬಿರ ಮುಗಿದ ನಂತರವೂ ಆಯೋಜಕರು ಶಿಬಿರಾರ್ಥಿಗಳ ಜೊತೆ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತಿರುತ್ತಾರೆ.

ಶನಿವಾರ ಬೆಳಗ್ಗೆ ಹತ್ತರ ಸುಮಾರಿಗೆ ಆರಂಭವಾಗುವ ಶಿಬಿರ ಭಾನುವಾರ ಸಂಜೆ ಐದರ ತನಕ ನಡೆಯಲಿದೆ. ರಾಣೆಬೆನ್ನೂರು ಒಂದು ರೀತಿಯಲ್ಲಿ ಇಡೀ ರಾಜ್ಯಕ್ಕೆ ಕೇಂದ್ರ ಸ್ಥಾನದಲ್ಲಿದೆ. (ದಾವಣಗೆರೆಯಿಂದ ಮುವ್ವತ್ತು ಕಿ.ಮೀ. ಉತ್ತರಕ್ಕಿದೆ.) ರಾಜ್ಯದ ಬಹುತೇಕ ಭಾಗಗಳಿಂದ ನಾಲ್ಕೈದು ಗಂಟೆಗಳಲ್ಲಿ ಬಸ್ಸಿನಲ್ಲಿ ತಲುಪಬಹುದು. ಉತ್ತಮ ರೈಲು ಸಂಪರ್ಕವೂ ಇದೆ. (ಬೆಂಗಳೂರಿನಿಂದ ರೈಲು ಟಿಕೆಟ್ ಎಪ್ಪತ್ತು-ಎಂಬತ್ತು ರೂಪಾಯಿ ಇರಬಹುದು.) ಹದಿನೆಂಟರಿಂದ ಮುವ್ವತ್ತೈದು ವಯಸ್ಸಿನ ಯುವಸಮುದಾಯಕ್ಕೆ ಆದ್ಯತೆ. ranebennurಆದರೆ, ಕೆಲವು ಸಂದರ್ಭಗಳಲ್ಲಿ ಆಸಕ್ತರಿಗೆ ರಿಯಾಯಿತಿಯೂ ಇರುತ್ತದೆ. ಶನಿವಾರ ರಾತ್ರಿ ವಸತಿ ಸೌಕರ್ಯವೂ ಇರುತ್ತದೆ. ಶನಿವಾರ ಬೆಳಗ್ಗೆಯಿಂದ ಭಾನುವಾರದ ಸಂಜೆಯ ತನಕ ಊಟ-ತಿಂಡಿ-ಚಹಾ ವ್ಯವಸ್ಥೆ ಇರುತ್ತದೆ. ಇವೆಲ್ಲವಕ್ಕೂ ಸೇರಿ ಶಿಬಿರ ಶುಲ್ಕ ಎಂದು ರೂ.500 ಇರುತ್ತದೆ.

ಶಿಬಿರದಲ್ಲಿ, ಎಸ್.ಆರ್.ಹಿರೇಮಠ್, ಪರಿಸರವಾದಿ ಯತಿರಾಜು, ಶ್ರೀಧರ್ ಕಲ್ಲಹಳ್ಳ, ಜನಸಂಗ್ರಾಮ ಪರಿಷತ್‌ನ ಕಾರ್ಯದರ್ಶಿ ದೀಪಕ್ ನಾಗರಾಜ್, ಸಂಘಟನೆಯ ಶಾಂತಲಾ ದಾಮ್ಲೆ, ತುಮಕೂರಿನ ಸಿಜ್ಞಾ ಎಂಬ ಯುವನಾಯಕತ್ವ ಶಿಬಿರಗಳನ್ನು ಆಯೋಜಿಸುವ ಸಂಸ್ಥೆಯ ಸಿಜ್ಞಾ ಸಿಂಧು ಸ್ವಾಮಿ, ಪ್ರತಿಮಾ ನಾಯಕ್, ಸಾಹಿತಿ-ಪ್ರಾಧ್ಯಾಪಕ ಜಯಶಂಕರ್ ಹಲಗೂರು, ನಾನು, ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಬರಲಿದ್ದಾರೆ. ನಮ್ಮ ವರ್ತಮಾನದ ಬಳಗದ ಶ್ರೀಪಾದ ಭಟ್ಟರೂ ಬರುವ ಸಾಧ್ಯತೆಗಳಿವೆ.

ಈಗ, ನಿಮ್ಮೆಲ್ಲರಲ್ಲೂ ಒಂದು ಮನವಿ. ಈಗಾಗಲೆ ಈ ಶಿಬಿರಕ್ಕೆ 25 ಕ್ಕೂ ಹೆಚ್ಚು ಜನರು ನೊಂದಾಯಿಸಿಕೊಂಡಿದ್ದಾರೆ. ಇನ್ನೂ ಹತ್ತು-ಹದಿನೈದು ಜನಕ್ಕೆ ಅವಕಾಶವಿದೆ. ದಯವಿಟ್ಟು ಇದನ್ನು ನಿಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಮೂಲಕ, ನಿಮ್ಮ ಸ್ನೇಹಿತರಿಗೆ ಫೋನ್-ಇಮೇಲ್ ಮುಖಾಂತರ ತಿಳಿಸುವ ಮೂಲಕ, ಸಾಧ್ಯವಾದರೆ ನೀವೂ ಪಾಲ್ಗೊಳ್ಳುವ ಮೂಲಕ ಪ್ರಚಾರ ನೀಡಬೇಕೆಂದು ವಿನಂತಿಸುತ್ತೇನೆ. ನಿಮ್ಮ ಸಂಪರ್ಕದಲ್ಲಿರುವ ಯಾರಿಗಾರದೂ ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಒಳ್ಳೆಯದಾಗುತ್ತದೆ ಎನ್ನಿಸಿದರೆ ಅವರಿಗೆ ತಿಳಿಸಿ. ಅಂತಹವರಲ್ಲಿ ಯಾರಿಗಾದರೂ ಶಿಬಿರ ಶುಲ್ಕವಾದ ರೂ.500 ಹಣದ ಅಡಚಣೆ ಇದೆ ಎನ್ನಿಸಿದರೆ ದಯವಿಟ್ಟು ಪ್ರಾಯೋಜಿಸಿ. ಹಾಗೆಯೇ, ಪಾಲ್ಗೊಳ್ಳುವ ಆಸಕ್ತಿ ಇದ್ದು, ಶುಲ್ಕ ಭರಿಸುವುದೇ ಸಮಸ್ಯೆ ಆಗಿದ್ದರೆ, ದಯವಿಟ್ಟು ತಿಳಿಸಿ. ನಮ್ಮಲ್ಲೇ ಯಾರಾದರೂ ಪ್ರಾಯೋಜಕರಿದ್ದರೆ ಅದಕ್ಕೆ ಸ್ಪಂದಿಸಬಹುದು.

ಇನ್ನೂ ಹೆಚ್ಚಿನ ಮಾಹಿತಿಗೆ ಮತ್ತು ತರಬೇತಿಗೆ ನೊಂದಾಯಿಸಿಕೊಳ್ಳಲು 9916601969/ 8867186343 ದೂರವಾಣಿಗೆ ಕರೆ ಮಾಡಿ, ಇಲ್ಲವೇ ಮೆಸೇಜ್ ಮಾಡಿ.

ಈ ಶಿಬಿರ ಆರಂಭ ಮಾತ್ರ. ಇದರ ಯಶಸ್ಸಿನ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಪ್ರತಿ ತಿಂಗಳೂ ಶಿಬಿರಗಳನ್ನೂ ಆಯೋಜಿಸುವ ಯೋಜನೆಗಳಿವೆ. ಆಸಕ್ತರು ಹೆಚ್ಚಿದ್ದಲ್ಲಿ ನಾಲ್ಕು-ಐದು ದಿನಗಳ ವಿಸ್ತೃತ ಶಿಬಿರಗಳನ್ನು ನಡೆಸಲೂ ಬಹುದು.

ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲದ ನಿರೀಕ್ಷೆಯಲ್ಲಿ…

– ರವಿ ಕೃಷ್ಣಾರೆಡ್ಡಿ