ಸಿದ್ಧಲಿಂಗಯ್ಯ ಮತ್ತು ಆಳ್ವಾಸ್ ನುಡಿಸಿರಿ : ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕಿಲ್ಲ


– ಬಿ. ಶ್ರೀಪಾದ ಭಟ್


 

22 ಅಕ್ಟೋಬರ್, 1964. ಸಾಹಿತ್ಯದಲ್ಲಿನ ಸಾಧನೆಗಾಗಿ ತನಗೆ ನೀಡಿದ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸುತ್ತ ಚಿಂತಕ ಜೀನ್ ಪಾಲ್ ಸಾರ್ತೆ, “ನಾನು ಯಾವಾಗಲೂ ಸರ್ಕಾರ ಅಥವಾ ಅಫೀಶಯಲ್ ಆಹ್ವಾನಗಳನ್ನು,ಪುರಸ್ಕಾರಗಳನ್ನು ಒಪ್ಪಿಕೊಳ್ಳುವುದಿಲ್ಲ. ತಾನು ಒಂದು ಸಂಸ್ಥೆಯಾಗುವ ಎಲ್ಲಾ ಸಾಧ್ಯತೆಗಳನ್ನು ಲೇಖಕನು ತಿರಸ್ಕರಿಸಬೇಕು. ಲೇಖಕನ ಬದ್ಧತೆಯ ಅಗತ್ಯತೆಯನ್ನಾಧರಿಸಿ ನನ್ನ ನಿಲುವನ್ನು ರೂಪಿಸಿಕೊಂಡಿದ್ದೇನೆ. ರಾಜಕೀಯ, ಸಾಮಾಜಿಕ, ಸಾಹಿತ್ಯಕ ಸ್ಥಾನಗಳನ್ನು ಅಲಂಕರಿಸುವ ಲೇಖಕ ಅದರ ಮಿತಿಯೊಳಗೊಳಪಟ್ಟೇ ವರ್ತಿಸಬೇಕು siddalingayyaಮತ್ತು ಮುಖ್ಯವಾಗಿ ಅದು ಕೇವಲ ಆತನ ಲೋಕವಾಗಿರಬೇಕು” ಎಂದು ಮಾರ್ಮಿಕವಾಗಿ ಹೇಳುತ್ತಾನೆ. ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸುವ ಸಾರ್ತೆಗೆ ಅದು ಕೇವಲ ಪಶ್ಚಿಮ ಜಗತ್ತಿನ ಲೇಖಕರಿಗಾಗಿ ಮತ್ತು ಪೂರ್ವ ಜಗತ್ತಿನ ಬಂಡಾಯ ಲೇಖಕರಿಗಾಗಿ ಮಾತ್ರ ಮೀಸಲು ಇರುವಂತಿದೆ ಎಂದು ಅಭಿಪ್ರಾಯ ಪಡುತ್ತಾನೆ.

ಇದು ನಡೆದು ಐವತ್ತು ವರ್ಷಗಳಾಗಿವೆ. ಆದರೆ ಅದರ ಆಶಯಗಳು ಇಂದಿಗೂ ಪ್ರಸ್ತುತ. ಏಕೆಂದರೆ ಇತ್ತೀಚೆಗೆ ನಮ್ಮ ಪ್ರೀತಿಯ ಕವಿಗಳು ಸಿದ್ಧಲಿಂಗಯ್ಯನವರು (ನಮ್ಮನ್ನು ರೂಪಿಸಿದ ಕವಿ ಮತ್ತು ಹೋರಾಟಗಾರ) “ಅಳ್ವಾಸ್ ನುಡಿಸಿರಿ”ಯ ಅಧ್ಯಕ್ಷತೆಯನ್ನು ಒಪ್ಪಿಕೊಂಡ ನಂತರ ಅದನ್ನು ತಾತ್ವಿಕ ಮತ್ತು ನೈತಿಕ ಕಾರಣಗಳಿಗಾಗಿ ವಿರೋಧಿಸಿದ ಗೆಳೆಯರಿಗೆ ಉತ್ತರಿಸುತ್ತಾ ಮತ್ತೊಬ್ಬ ಗೆಳೆಯರು ಆ ಭಾಗವಹಿಸುವಿಕೆಯನ್ನು ಸಮರ್ಥಿಸುತ್ತಾ ’ಅದರಲ್ಲಿ ಅಂತಹ ತಪ್ಪೇನಿಲ್ಲ, ಕೇವಲ ನಮ್ಮೊಳಗೆ ಸಿದ್ಧಾಂತಗಳನ್ನು ಮಾತನಾಡಿ ಪ್ರಯೋಜನವಿಲ್ಲ, ಆ ಪ್ರಗತಿಪರ ಚಿಂತನೆಗಳು ವಿರೋಧಿ ಬಣಗಳಿಗೂ ತಲುಪಬೇಕು, ಅಲ್ಲಿಯೂ ಚರ್ಚಿತವಾಗಬೇಕು ಎನ್ನುವ ಕಾರಣಕ್ಕಾಗಿ ಸಿದ್ಧಲಿಂಗಯ್ಯನವರ ಅಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ಗೆಳೆಯರು ಒಪ್ಪಿಕೊಂಡಿದ್ದಾರೆ ಮತ್ತು ಅಲ್ಲಿ ನಮ್ಮ ಪ್ರೀತಿಯ ಕವಿಗಳು ತಮ್ಮ ಪ್ರಗತಿಪರ ನಿಲುವುಗಳನ್ನು ಬಿಟ್ಟುಕೊಡದೆ ಆ ಗುಂಪಿಗೂ ಚಾಟಿಯೇಟನ್ನು ಬೀಸಲಿ ಎಂದು ಆಶಿಸಿದ್ದಾರೆ. ಇವರ ಒಟ್ಟಾರೆ ಆಶಯಗಳಿಗೆ ಯಾರಿಗೂ ವಿರೋಧವಿಲ್ಲ. ನಾವೆಲ್ಲ ವಿಭಿನ್ನ ನೆಲೆಯ ಜನರೊಂದಿಗೆ, ಭಿನ್ನಾಭಿಪ್ರಾಯಗಳ ಜನರೊಂದಿಗೆ ಸಂವಾದಿಸಬೇಕು ಎನ್ನುವುದೂ ನಮೆಲ್ಲರ ಆಶಯಗಳೂ ಸಹ ಅಗಿರುತ್ತದೆ. ಆದರೆ ಅದು at what cost? ಗೆಳೆಯರ ಸದುದ್ದೇಶದ ಇಡೀ ಆಶಯಗಳು ವಿತಂಡವಾದದಂತೆ ಕಾಣತೊಡಗುವುದಕ್ಕೆ ಕಾರಣ ಅವರು ಅದಕ್ಕಾಗಿ ಯಾವ ಬೆಲೆ ತೆರಬೇಕು ಎನ್ನುವುದನ್ನು ತಮ್ಮನ್ನು ತಾವು ಪ್ರಶ್ನಿಸಿಕೊಂಡಿಲ್ಲ. ತನ್ನ ಕಡೆಯ ವರ್ಷಗಳಲ್ಲಿ ತಾನು ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಿದ್ದನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ ಸಾರ್ತೆ, “ಆ ಬಹುಮಾನದ ಹಣ (ಸುಮಾರು 21000 ಪೌಂಡ್) ಅನ್ನು ಜನಾಂಗೀಯ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಸಂಘಟನೆಗೆ ಕೊಡಬಹುದಾಗಿತ್ತೇನೋ. ಏಕೆಂದರೆ ಆ ಸಂಘಟನೆಗೆ ಅದರ ಅವಶ್ಯಕತೆ ಇತ್ತು” ಎಂದು ಬರೆದುಕೊಳ್ಳುತ್ತಾನೆ ಹೊರತಾಗಿ ಪಶ್ಚತ್ತಾಪ ಮಾತ್ರ ಪಡುವುದಿಲ್ಲ. ಏಕೆಂದರೆ ಸಾರ್ತೆಗೆ ಗೊತ್ತಿತ್ತು ಒಂದು ಸದುದ್ದೇಶಕ್ಕಾಗಿ ಹಣವನ್ನು ಪಡೆದುಕೊಳ್ಳುವುದೇನೋ ಸರಿ, ಆದರೆ ಅದು at what cost?

ಮೇಲ್ನೋಟಕ್ಕೆ ಕಾಣುವಂತೆ ಅಳ್ವಾಸ್ ನುಡಿಸಿರಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಸಹಜವಾಗಿಯೇ ಟಿಎ, ಡಿಎ ಮತ್ತು ಪಾಲ್ಗೊಳ್ಳುವಿಕೆಗೆ ಕೃತಜ್ಞತೆಯಾಗಿ ಹಣವನ್ನೂ ಕೊಡುತ್ತಾರೆ. ಮತ್ತು ಅಲ್ಲಿರುವವರೆಗೂ ಊಟ, ವಸತಿಗಳ ಉಚಿತ ವ್ಯವಸ್ಥೆಯೂ ಇರುತ್ತದೆ. ಇಷ್ಟನ್ನು ಅನುಭವಿಸುವ, alva-nudisiri-baraguru-mohan-alva-veerendra-heggade-vivek-raiಪಡೆದುಕೊಳ್ಳುವ ಲೇಖಕ ಅಲ್ಲಿ ಹೋಗಿ ಅವರ ವಿರುದ್ಧ ತನ್ನ ಮಾತಿನ ಚಾಟಿಯೇಟನ್ನು ಬೀಸಬೇಕೆಂದು ಆಶಿಸುವುದು ಕೇವಲ ಮುಗ್ಧತೆಯಲ್ಲ ಅದು ಅಪಾಯಕಾರಿಯೂ ಹೌದು. ಏಕೆ ಅಪಾಯಕಾರಿಯೆಂದರೆ ಸಂಸ್ಥೆಯೊಂದರ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಅದರ ವಿರುದ್ಧ ಮಾತನಾಡುವುದೇ ಆತ್ಮವಂಚನೆಯಲ್ಲವೇ? ಅದಕ್ಕೇ ಸಾರ್ತೆ ಹೇಳುವುದು “ಲೇಖಕ ಸ್ವತ ತಾನೇ ಒಂದು ಸಂಸ್ಥೆಯಾಗುವ ಅಪಾಯದಿಂದ ಸದಾ ಹೊರಗಿಬೇಕು”. ಇಲ್ಲಿ ನಮ್ಮ ಪ್ರೀತಿಯ ಸಿದ್ಧಲಿಗಯ್ಯನವರ ವಿಷಯದಲ್ಲಿ ಅದು ದಯನೀಯವಾಗಿ ಸೋತಿದೆ. ಏಕೆ ಗೊತ್ತೆ? ಪ್ರತಿಭಾವಂತರಿಗೆ, ಪ್ರಾಮಾಣಿಕರಿಗೆ ಅರ್ಥಪೂರ್ಣವಾಗಿ, ನಿಷ್ಪಕ್ಷಪಾತವಾಗಿ ಮಾತನಾಡಲು ಒಂದು ಸಂಸ್ಥೆ, ವ್ಯಕ್ತಿ, ಧರ್ಮ, ಸಮುದಾಯದ ಆಚರಣೆ ಮತ್ತು ಧೋರಣೆಗಳು ಯಾವ ಕಾಲಕ್ಕೂ ಅಡ್ಡಿಯಾಗುವುದಿಲ್ಲ. ಅಡ್ಡಿಯಾಗಿದೆ ಎಂದರೆ ಮತ್ತೇನರ್ಥ?

ಒಂದಂತೂ ನಿಜ. ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕಾಗಿಲ್ಲ. ಇಲ್ಲಿ ಅಳ್ವಾಸ್ ಸಂಸ್ಥೆಯ ಪರಮೋಚ್ಛ ನಾಯಕ ಮೋಹನ್ ಅಳ್ವ ಅವರ ಇತಿಹಾಸ ಇಡೀ ಕನ್ನಡದ ಪ್ರಜ್ಞಾವಂತರಿಗೆ ಗೊತ್ತು. ಆತನ ಸರ್ವಾಧಿಕಾರ ವ್ಯಕ್ತಿತ್ವ ಎಲ್ಲರಿಗೂ ಗೊತ್ತು. ಅವರೊಬ್ಬ ಬಂಡವಾಳಶಾಹಿ ಎನ್ನುವುದೂ ಎಲ್ಲರಿಗೂ ಗೊತ್ತು. ಸಾರ್ವಜನಿಕ ಶಿಕ್ಷಣದ ಸಂವಿಧನಾತ್ಮಕ ಜೀವಪರ ಆಶಯಗಳಿಗೆ ಸ್ವಲ್ಪವೂ ಬೆಲೆ ಕೊಡದ ಶಿಕ್ಷಣದ ವ್ಯಾಪಾರಿ ಎನ್ನುವುದು ಎಲ್ಲರಿಗೂ ಗೊತ್ತು. ಅವರ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಶೋಷಣೆಯ ಕುರಿತಾಗಿ ಅನೇಕ ಆರೋಪಗಳಿವೆ ಎನ್ನುವುದೂ ಎಲ್ಲರಿಗೂ ಗೊತ್ತು. ಅವರು ಮತೀಯವಾದಿ ಸಂಘ ಪರಿವಾರದದೊಂದಿಗೆ ನಂಟನ್ನು ಹೊಂದಿರುವುದು ಎಲ್ಲರಿಗೂ ಗೊತ್ತು. alva-veerendra-heggadeಇತ್ತೀಚೆಗೆ ಸೌಜನ್ಯ ಕೊಲೆ ಪ್ರಕರಣದ ಆರೋಪದಲ್ಲಿ ಹೆಸರು ಕೇಳಿಬರುತ್ತಿರುವ ಕುಟುಂಬದಲ್ಲೊಬ್ಬರಾದ ಧರ್ಮಸ್ಥಳದ ವೀರೇಂದ್ರ ಹೆಗಡೆಯ ಅಪ್ತ ಭಕ್ತರು ಇವರೆಂದೂ ಎಲ್ಲರಿಗೂ ಗೊತ್ತು. ಒಟ್ಟಾರೆ ಈ ಮೋಹನ್ ಆಳ್ವ ಎನ್ನುವ ಉದ್ಯಮಿಯ ಈ ಸಾಹಿತ್ಯ ಸೇವೆ ಒಂದು ದರ್ಪದ, ಸಾಮಂತ ಪಾಳೇಗಾರನ ಅದ್ದೂರಿ ಪ್ರದರ್ಶನ ಎನ್ನುವುದೂ ಎಲ್ಲರಿಗೂ ಗೊತ್ತು. ಅದರೆ ಇಷ್ಟೆಲ್ಲ ಗೊತ್ತಿದ್ದೂ ಒಂದು ತಲೆಮಾರನ್ನು, ಸಮುದಾಯದ ಪ್ರಜ್ಞೆಯನ್ನು ಬೆಳಿಸಿದ ರೂಪಿಸಿದ ಮಹತ್ವದ ಕವಿ, ಹೋರಾಟಗಾರ ಮೇಲಿನ ಅಪಾಯದ ಕರೆಗಂಟೆಯ, ಓಲಗದ ಸದ್ದನ್ನು ಕೇಳಿಸಿಕೊಳ್ಳದೆ ತನ್ನ ಈ ನಿರ್ಲಕ್ಷದ ಕಾರಣಕ್ಕಾಗಿ ತನ್ನ ಈ ವರ್ತನೆಗಳ ಮೂಲಕ ಹೊಸ ತಲೆಮಾರಿನ ಚೇತನವನ್ನೇ ಉಡುಗಿಸಿಬಿಡುತ್ತಾನೆ.

ಈ ಮೋಹನ್ ಅಳ್ವಾರ ದರ್ಪದ ದುಡ್ಡಿನ (ಇದಕ್ಕಾಗಿ, ಕನ್ನಡಮ್ಮನ ಸೇವೆಗಾಗಿ ತಾನು ಕೋಟ್ಯಾಂತರ ರೂಪಾಯಿಗಳನ್ನು ಸಾಲ ಮಾಡಿ ದಿವಾಳಿಯಾಗಿದ್ದೇನೆ ಎಂದು ಬೇರೆ ಹೇಳಿಕೊಂಡಿದ್ದಾರೆ) ಒಡ್ಡೋಲಗದಲ್ಲಿ ಭಾಗವಹಿಸುವದೆಂದರೆ ನಮ್ಮ ನಮ್ಮ ನೈತಿಕತೆ ಕಳೆದಿದೆ ಎಂದೇ ಅರ್ಥ. vijaykarnataka-mohan-alva-22122013ಇದು ತುಂಬಾ ಸರಳ. ಏಕೆ ಗೊತ್ತೆ, ಈ ಮೋಹನ ಅಳ್ವಾರಂತವರು ಪಿಂಗಾಣಿ ಅಂಗಡಿಯಲ್ಲಿ ನುಗ್ಗುವ ಗೂಳಿಯಂತೆ. ಆ ನುಗ್ಗುವಿಕೆಯೇ ಧ್ವಂಸಗೊಳಿಸಲಿಕ್ಕಾಗಿ ಮಾತ್ರ. ಇದೂ ಸಹ ತುಂಬಾ ಸರಳ. ಏಕೆ ಗೊತ್ತೆ, ಈ ನವಉದಾರೀಕರಣದ ಇಂದಿನ ಸಂದರ್ಭದಲ್ಲಿ ಈ ಬಗೆಯ ದರ್ಪದ ನಾಯಕರಿಂದ ನಡೆಯುವ ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮಗಳೂ ಮಾಕೆಟ್ ಟ್ರೆಂಡ್‌ಗಳನ್ನು ಹುಟ್ಟಿಹಾಕುತ್ತಿರುತ್ತವೆ. ಅರೇ ನೋಡಿ ಅಳ್ವಾಸ್ ನುಡಿಸರಿಯ ವೈಭವ, ಅಚ್ಚುಕಟ್ಟು, ಊಟದ ವ್ಯವಸ್ಥೆ ಆಹಾ ಏನು ಮಜಾ ಏನು ಸುಖಾ ಎನ್ನುವ ಸುಖ ಲೋಲುಪ್ತತೆಯ ಟ್ರೆಂಡ್ ಹುಟ್ಟಿ ಹಾಕುತ್ತದೆ. ಈ ಸುಖ ಲೋಲುಪ್ತತೆಯಲ್ಲಿ ಬೂಟು ಮತ್ತು ಚಾಟಿಯೇಟಿನ ವಿರುದ್ಧ ಹೋರಾಟದ ಸಾವಿರಾರು ನದಿಗಳು ಹುಟ್ಟುವುದಕ್ಕೂ ಸಾಧ್ಯವಿಲ್ಲ. ಅಲ್ಲಿಗೆ ಅದು ಮುಗಿದಂತೆ. ಸಾರ್ತೆಯ “ಶುದ್ಧ ಸಾಹಿತ್ಯ” ಎಂದರೆ ಕೇವಲ ಮಡಿವಂತಿಕೆಯ, ಶ್ರೇಷ್ಠತೆಯ ವ್ಯಸನದ ಸಾಹಿತ್ಯ ಮಾತ್ರವಲ್ಲ. ಆ ಶುದ್ದ ಸಾಹಿತ್ಯ ಆರ್ಥಿಕ ತೆವಲುಗಳನ್ನು ನಿರಾಕರಿಸುತ್ತದೆ. ಆ ಶುದ್ಧ ಸಾಹಿತ್ಯ ವಿತಂಡವಾದಗಳನ್ನು ನಿರಾಕರಿಸುತ್ತದೆ. ಕೊಳ್ಳುಬಾಕುತನವನ್ನು ನಿರಾಕರಿಸುತ್ತದೆ. ಮತ್ತು ತಾತ್ಕಾಲಿಕ ಜನಪ್ರಿಯತೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ ಮತ್ತು ಮುಖ್ಯವಾಗಿ ಜನಪ್ರಿಯತೆ ಪಡೆದುಕೊಂಡಿದ್ದೆಲ್ಲವೂ ಜನಪರವಲ್ಲ ಎಂದು ಘೋಷಿಸಿಬಿಡುತ್ತದೆ ಸಾರ್ತೆಯ ಶುದ್ಧ ಸಾಹಿತ್ಯ.

ಹೀಗಾಗಿ ಅತ್ಯಂತ ಜನಪ್ರಿಯ “ಅಳ್ವಾಸ್ ನುಡಿಸಿರಿ” ಜನಪರ ಸಮ್ಮೇಳನ ಅಲ್ಲವೇ ಅಲ್ಲ. ಇದನ್ನು ಈ ನಾಡಿನ ಪ್ರಜ್ಞಾವಂತರೆಲ್ಲರೂ ನಿರಾಕರಿಸಬೇಕು. ನಿಜ ನಮ್ಮ ಗೆಳೆಯರ ಆಶಯದಂತೆ ನಾವು ಭಿನ್ನಾಭಿಪ್ರಾಯದ ಗುಂಪಿನೊಂದಿಗೆ, ವಿಭಿನ್ನ ಧೋರಣೆಗಳ, ಚಿಂತನೆಗಳ ಗುಂಪಿನೊಂದಿಗೆ ಬೆರೆತು ಸಂವಾದ ನಡೆಸಬೇಕಾಗಿದೆ. ಚರ್ಚಿಸಬೇಕಾಗಿದೆ. ನಾವೆಲ್ಲ ಕುರುಡಾಗಿ, ಕಿವುಡಾಗಿ ವರ್ತಿಸಲು ಸಾಧ್ಯವಿಲ್ಲ. ಆದರೆ ಈ ದರ್ಪದ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವದರ ಮೂಲಕ ಅದು ಸಾಧ್ಯವೂ ಇಲ್ಲ ಮತ್ತು ಅದರ ಅವಶ್ಯಕತೆ ಖಂಡಿತವಾಗಿಯೂ ಇಲ್ಲ.

ಒಂದು ಕಡೆ ಲಂಕೇಶ್ ಹೇಳುತ್ತಾರೆ, “ಒಂದು ವಚನ ತನ್ನ ಪ್ರೀತಿಯ ಬಲದಿಂದ ಕಾಲವನ್ನೂ ಮೀರಿ ಹರಿದು ಬರುತ್ತದೆ. ನಾಶಗೊಳ್ಳಲು ಅದು ಒಪ್ಪುವುದೇ ಇಲ್ಲ”. ಹೌದು ನಾವು ಈ ಪ್ರೀತಿಯ, ಸೌಹಾರ್ದತೆಯ ಬಲೆಯನ್ನು ನೇಯುವುದರ ಮೂಲಕ ಬಿನ್ನಾಭಿಪ್ರಾಯದ ಗುಂಪಿನೊಂದಿಗೆ, ವಿಭಿನ್ನ ಧೋರಣೆಗಳ, ಚಿಂತನೆಗಳ ಗುಂಪಿನೊಂದಿಗೆ ಚರ್ಚಿಸಬೇಕಾಗಿದೆಯೇ ಹೊರತು ಆ ಅವಾಂತಕಾರಿ ಮತ್ತು ಅಪಾಯಕಾರಿ ಆಳ್ವಾಸ್ ನುಡಿಸಿರಿಯ ವೇದಿಕೆಯಿಂದ ಮಾತ್ರ ಅಲ್ಲವೇ ಅಲ್ಲ.

9 comments

 1. ಶ್ರೀಪಾದ ಭಟ್ ಅವರಿಗೆ—ನುಡಿಸಿರಿಯ ಈ ಸಲದ ಅಧ್ಯಕ್ಷತೆಯನ್ನು ವಹಿಸಿದ ತಕ್ಷಣದಿಂದ ಸಿದ್ದಲಿಂಗಯ್ಯನವರ ವ್ಯಕ್ತಿತ್ವದೊಳಗಿರುವ ಕವಿ ,ಪ್ರತಿಭಟನೆಯ ಶಕ್ತಿ, ಇತ್ಯಾದಿಗಳಿಗೆಲ್ಲಾ ಮಂಕು ಕವಿಯುತ್ತದೆ ಎಂಬ ನಿಮ್ಮ ವಾದ ತಪ್ಪು. ಈ ಹಿಂದೆಯೂ ಸಿದ್ದಲಿಂಗಯ್ಯನವರು ಕರ್ನಾಟಕ ಸರ್ಕಾರದ ನಾನಾ ಅಧಿಕಾರದ ಶಕ್ತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆಗ ಅವರಂತಹವರು ಅಂತಹ ಕಡೆ ಇದ್ದರೆ ಆ ಜಾಗಗಳಿಗೆ ಒಂದು ‘ಶೋಭೆ’ ಎಂದು ಅವರ ಪರ ಸಾಕಷ್ಟು ಮಂದಿ ಇದ್ದರು. ಈಗ ಮೂರ್ನಾಲಕ್ಕು ದಿನಗಳ ‘ನುಡಿಸಿರಿ’ ಅಂತಹ ಒಂದು ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಕ್ಷಣ ಅಲ್ಲೋಲಕಲ್ಲೋಲವಾದಂತೆ ಮಾತನಾಡುತ್ತಿರುವುದರ ಹಿಂದಿನ ಮರ್ಮ ಎಲ್ಲರಿಗೂ ತಿಳಿದಿರುವಂತಹುದೇ. ಆದರೆ ಅದನ್ನು ಮುಚ್ಚಿಹಾಕಲು ನಾನಾ ಪಟ್ಟುಗಳನ್ನು ಹಾಕುತ್ತಿದ್ದಾರೆ. ಸಿದ್ದಲಿಂಗಯ್ಯನವರು ನುಡಿಸಿರಿಯಲ್ಲಿ ಏನು ಮಾತಾಡುತ್ತಾರೋ ಬಿಡುತ್ತಾರೋ ಅದು ಮುಖ್ಯವಲ್ಲ. ಅಲ್ಲಿ ಹೇಳಿದ್ದನ್ನೆಲ್ಲಾ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದೂ ಇಲ್ಲ. ಸರ್ಕಾರಿ ಪ್ರಾಯೋಜಿತ ಕ. ಸಾ. ಪ ಸಮ್ಮೇಳನಗಳಲ್ಲಿ ಇದುವರೆಗೆ ನೂರಾರು ಗೊತ್ತುವಳಿಗಳನ್ನು. ನಿಳುವಳಿಗಳನ್ನು, ಬಿನ್ನವತ್ತಳೆಗಳನ್ನು ಮಂಡಿಸಿ ಸರ್ಕಾರಕ್ಕೆ ಅರ್ಪಿಸಿರಬಹುದು. ಅವು ವಿಧಾನಸೌಧದ ಸಾವಿರಾರು ಕಡತಗಳ ಮಧ್ಯೆ ನಿದ್ರಿಸುತ್ತಿವೆ. ಜೈಪುರ, ಧಾರವಾಡದ ಸಾಹಿತ್ಯ ಸಮ್ಮೇಳನಗಳಿಗೆ, ಅಲ್ಲಿ ಭಾಗವಹಿಸಿದರ ಬಗ್ಗೆ ಬಾರದ ವಿವಾದ ನುಡಿಸಿರಿಗೆ ಮಾತ್ರ ಏಕೆ? ನುಡಿಸಿರಿಯನ್ನು ಒಂದು ಉಗ್ರಗಾಮಿ ಕಾರ್ಯಕ್ರಮ ಎಂದು ಹುಯಿಲೆಬ್ಬಿಸುವುದರಲ್ಲಿ ಏನು ಅರ್ಥವಿದೆ?

  1. ಯಾಕೆಂದರೆ ಅದು ಹೊಟ್ಟೆಕಿಚ್ಚು ಪಡುವಷ್ಟು ಅಚ್ಚುಕಟ್ಟಾಗಿ ನಡೆಯುತ್ತದೆ. ಸರ್ಕಾರದ, ರಾಜಕಾರಣಿಗಳ, ಪುಡಿ ಸಾಹಿತಿಗಳ, ಮಧ್ಯವರ್ತಿಗಳ ಹಂಗಿಲ್ಲ. ಅದಕ್ಕೇ.

 2. ನಾನು 2004 ರ ನುಡಿಸಿರಿಯಲ್ಲಿ ಭಾಗವಹಿಸಿ ಕೆಲವು ಭಾಷಣ ಕೇಳಿದ್ದೇನೆ. ನಟರಾಜ ಹುಳಿಯಾರ್, ಪುಂಡಿಕಾಯಿ ಗಣಪಯ್ಯ, ಸಿ. ಎನ್. ರಾಮಚಂದ್ರನ್, ವೈ ಎಸ್ ವಿ ದತ್ತ ಮೊದಲಾದ ಅನೇಕರು ಬಂಡವಾಳಶಾಹಿ -ಕೋಮುವಾದ-ಜಾಗತೀಕರಣದ ಆತಂಕಗಳ ಬಗ್ಗೆ ಖಾರವಾಗಿ ಮಾರ್ಮಿಕವಾಗಿ ಮಾತನಾಡಿದರು. ಸಂಘಪರಿವಾರ, ಬಿ.ಜೆ.ಪಿ, ಬಂಡವಾಳಶಾಹಿ ಪರ ಯಾರೂ ಮಾತಾಡಲಿಲ್ಲ. ಇದೇ ಸಾಕ್ಷಿ ನೀವು ಬಂಡವಾಳಶಾಹಿ, ದುಷ್ಟ ಎಂದು ಚಿತ್ರಿಸುವ ಆಳ್ವರ ನುಡಿಸಿರಿ ಎಷ್ಟು ಪ್ರಜಾಪ್ರಭುತ್ವಪರ, ಪಂಥಾತೀತ ಸಹಿಷ್ಣುತೆ ಹೊಂದಿದೆ ಎಂಬುದಕ್ಕೆ. ಎಡಪಂಥೀಯ ವಿಚಾರವಾದಿಗಳ ಸಭೆಗಳಲ್ಲೂ ನಾನು ಪ್ರೇಕ್ಷಕನಾಗಿ ಭಾಗವಹಿಸಿದ್ದಿದೆ. ಅಲ್ಲಿ ಎಡವಿರೋಧ ಅಭಿಪ್ರಾಯ ಮಂಡಿಸುವವರಿಗೆ ಆಹ್ವಾನವೇ ಇರೋದಿಲ್ಲ. ಯಾರಾದರೂ ಪ್ರೇಕ್ಷಕರು ಭಿನ್ನ ವಿಚಾರ ಪ್ರಶ್ನೆ ಎತ್ತಿದರೆ ಅವನನ್ನೊಬ್ಬ ದಡ್ಡನಂತೆ ಹುಳದಂತೆ ಕಾಣಲಾಗುತ್ತದೆ. ಎಡವಿರೋಧ ವಿಚಾರಗಳು, ಅಂತಹ ಲೇಖಕರೆಲ್ಲ ಜೀವವಿರೋಧಿಗಳು ಪ್ರತಿಗಾಮಿಗಳು ಎಂದು ತೀರ್ಮಾನಿಸುವವರು ಎಡರಾಜಕಾರಣಿಗಳ ಹಿಂಸೆ, ಫ್ಯಾಸಿಸ್ಟ್ ಧೋರಣೆಗಳನ್ನಾಗಲೀ ಇಸ್ಲಾಂ ಹೆಸರಿನಲ್ಲಿ ನಡೆಯುವ ಹಿಂಸೆ, ಭಯೋತ್ಪಾದನೆಯನ್ನಾಗಲೀ ಕಂಡೂ ಕಾಣದಂತೆ ನಟಿಸುತ್ತಾರೆ. ಲೇಖಕ ಬುದ್ಧಿಜೀವಿ ವಲಯದಲ್ಲಿ ತುಂಬಿರುವ ತಮ್ಮ ತಾಳಕ್ಕೆ ತಕ್ಕಂತೆ ಮಾತಾಡದವರನ್ನು, ಬರೆಯದವರನ್ನು ದಮನಿಸುವ ಸಾಹಿತ್ಯಕ ಅಸ್ಪೃಶ್ಯತೆ ನುಡಿಸಿರಿಯಲ್ಲಿ ಇಲ್ಲ. ನುಡಿಸಿರಿಯ ಯಶಸ್ಸು ನಿಮಗೆಲ್ಲ ಹೊಟ್ಟೆಕಿಚ್ಚು ತರುತ್ತದೆ ಗೊತ್ತು. ಅಂತಹ ಸಮ್ಮೇಳನದ ಹಿಂದಿನ ಶ್ರಮ, ದುಡಿಮೆ ಬಗ್ಗೆ ಯೋಚಿಸಿ. ದುಡ್ಡಿನಿಂದ ಡುಡ್ಡಿದ್ದವರು ಎಲ್ಲವನ್ನೂ ಸುಲಭವಾಗಿ ಮಾಡಬಹುದು ಎಂದಿದ್ದರೆ ಇಂತಹ ಶಿಕ್ಷಣಸಂಸ್ಥೆಗಳನ್ನು ಕಟ್ಟಿ ಹಣಮಾಡುವ ಬೇರೆಯವರು ಕರ್ನಾಟಕದಲ್ಲಿಲ್ಲವೆ? ಅವರಿಂದ ಯಾಕೆ ಸಾಧ್ಯವಾಗುತ್ತಿಲ್ಲ? ಕರ್ನಾಟಕದ ಬಂಡವಾಳಶಾಹಿಗಳಲ್ಲಿ ಎಷ್ಟುಮಂದಿ ಕಲೆ ಸಾಹಿತ್ಯ ಭಾಷೆಗಳ ಪೋಷಕರಾಗಿದ್ದಾರೆ? ನುಡಿಸಿರಿಯ ಮುಖಾಂತರವೇ ನಟರಾಜರಂತಹ ಉಗ್ರ ಎಡಪಂಥೀಯರ ವಿಚಾರಗಳು ಕನಿಷ್ಟ ಸಾವಿರ ಹೊಸ ಮಂದಿಗಳ( ಅಲ್ಲಿ ಲಕ್ಷಮಂದಿ ನೆರೆದಿದ್ದರೂ ನಾನು ಸರಿಯಾಗಿ ಭಾಷಣ ಕೇಳಿಸಿಕೊಂಡವರು ಕನಿಷ್ಠ ಸಾವಿರಮಂದಿಯಾದರೂ ಇದ್ದಾರು ಎಂದು ಕನಿಷ್ಠಸಂಖ್ಯೆ ಹೇಳುತ್ತಿದ್ದೇನೆ)ಕಿವಿಗೆ ಬಿದ್ದವು. ಕಳೆದಬಾರಿ ಇದಕ್ಕೆ (ನುಡಿಸಿರಿಗೆ)ಪ್ರತಿಯಾಗಿ ಸಭೆನಡೆಸಿ ಬಾಡೂಟ ಹಾಕಿಸಿದರೂ ಬಂದವರು ಎಷ್ಟುಮಂದಿ? ಅವರಲ್ಲಿ ನೂರಕ್ಕೆ ತೊಂಭತ್ತುಮಂದಿಯೂ ಅಲ್ಲಿ ಹೇಳುವ ವಿಚಾರಗಳನ್ನು ಮೊದಲೇ ತಿಳಿದವರೇ ಅಲ್ಲವೆ? ನನಗೆನಿಸುತ್ತದೆ ತನ್ನನ್ನು ಜರೆಯುವವರನ್ನು ಕರೆಸಿ ಆತಿಥ್ಯ ನೀಡಿ ಅವರ ಮಾತುಗಳನ್ನು (ವಿಚಾರಗಳನ್ನ) ಜನರಿಗೆ ಕೇಳಿಸುವ ಆಳ್ವ ನಿಜಕ್ಕೂ ಗ್ರೇಟ್. ಅವರಂತಹ ಸನ್ಮನಸ್ಸು ಎಡಪಂಥೀಯರಿಗೆ ಇದ್ದರೆ ಭೈರಪ್ಪನವರನ್ನು ಅಧ್ಯಕ್ಷರನ್ನಾಗಿ ಮಾಡಿ ಒಂದು ಸಮ್ಮೇಳನ ಮಾಡಿ ಮುಕ್ತ ಚರ್ಚೆಗೆ ಅವಕಾಶನೀಡಿ ಫ್ಯಾಸಿಸ್ಟ್ ಗಳಲ್ಲ ಎಂದು ತೋರಿಸಲಿ.

  1. ಹಹಹಹ! ಒಳ್ಳೆ ತಮಾಷೆ ಮಾಡ್ತೀರಿ ನೀವು! ಭೈರಪ್ಪ ಏಕೆ ಹಿಟ್ಲರ್ ಹಾಗೂ ಮುಸ್ಸೊಲಿನಿಗಳನ್ನೂ ಕರೆದು ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಭೆ ನಡೆಸೋಣ!

   1. ಹಿಟ್ಲರ್ ಮುಸೋಲಿನಿ ಅವರು ಸತ್ತು ಶತಮಾನಗಳಾದವು. ಭೈರಪ್ಪನವರ ಹೆಸರೆತ್ತಿದ ಕೂಡಲೇ ಹಿಟ್ಲರ್ ಮುಸೋಲಿನಿ ಉಲ್ಲೇಖಿಸುವ ನೀವು ನಿಮ್ಮ ಪಂಥಕ್ಕಿಂತ ಭಿನ್ನವಾದುದನ್ನು ಕೇಳಿಸಿಕೊಳ್ಳಲೂ ಆಗದ ಅಸಹಿಸ್ಣುಗಳು ಎಂಬುದನ್ನು ರುಜುವಾತುಪಡಿಸಿದ್ದೀರಿ. ಇದುವೇ ಎಡಪಂಥ ಫ್ಯಾಸಿಸ್ಟ್ ಆಗುತ್ತಿರುವುದರ ಸೂಚಕ (ಕೇರಳದಲ್ಲಿ ತಮಗಿಂತ ಭಿನ್ನವಾಗಿ ಯೋಚಿಸುವವರನ್ನು ಅಷ್ಟೇ ಏಕೆ ತಮ್ಮಪಕ್ಷದಲ್ಲೇ ಇದ್ದು ಅಲ್ಲಿನ ಸರ್ವಾಧಿಕಾರಿ ಧೋರಣೆಯಿಂದ ಬೇಸೆತ್ತು ಸಿಡಿದು ಎಡಧೋರಣೆಯ ಇನ್ನೊಂದು ಪಕ್ಷವನ್ನು ಕಟ್ಟಿದವರನ್ನೂ ಹತ್ಯೆಮಾಡುತ್ತಿರುವ ಎಡಪಕ್ಷಗಳು ನಮ್ಮ ಕಣ್ಣಮುಂದೆ ಉದಾಹರಣೆಯಾಗಿವೆ. ಅದಿಲ್ಲಿ ಬೇಡಬಿಡಿ) ಇದೇ ಆಳ್ವಾನುಡಿಸಿರಿಗೂ ನಿಮಗೂ ಇರುವ ವ್ಯತ್ಯಾಸ. ನುಡಿಸಿರಿಯ ಆಯೋಜಕರು ಮತ್ತು ಪ್ರೇಕ್ಷಕರಲ್ಲಿ ಎಡಪಂಥೀಯ ಸಹಿತ ಎಲ್ಲ ವಿಚಾರಗಳನ್ನು ಆಲಿಸುವ ಚರ್ಚಿಸುವ ಸಹಿಷ್ಣುತೆ ಇದೆ. ಎಡಪಂಥೀಯರು ಹಾಗಲ್ಲ. ತಮಗಿಂತ ಭಿನ್ನವಾಗಿ ಯೋಚಿಸುವವರಿಗೆ ಸಾಹಿತ್ಯಕ ಬಹಿಷ್ಕಾರ ಅವರ ಧೋರಣೆ.

    1. ಪ್ರಗತಿಪರರನ್ನು co-opt ಮಾಡುವುದು ಆಳ್ವಾ ಮತ್ತು ಸಂಘಪರಿವಾರದ ಉದ್ದೇಶ. ಆದುದರಿಂದಲೇ ಅವರು ಪ್ರಗತಿಪರರನ್ನು ಆಹ್ವಾನಿಸಿದ್ದಾರೆ. ಸಹಿಷ್ಣುತೆಯ ನಾಟಕವಾಡಿ ಬ್ರಾಹ್ಮಣ್ಯವನ್ನು ಭದ್ರಪಡಿಸುವ ಹುನ್ನಾರ ಅವರದ್ದು.

     1. ಬ್ರಾಹ್ಮಣರೇ ಇಲ್ಲದ, ಬ್ರಾಹ್ಮಣ್ಯವಿರೋಧಿ ಸಾಹಿತ್ಯಸಮ್ಮೇಳನವೊಂದನ್ನು ಪ್ರಗತಿಪರರಿಗೆ ನಡೆಸಬಹುದಲ್ಲ? ಕರ್ನಾಟಕದಲ್ಲಿ ಬ್ರಾಹ್ಮಣರ ಸಂಖ್ಯೆ ಎಷ್ಟಿರಬಹುದು? ಬ್ರಾಹ್ಮಣರನ್ನು ಹೊರತುಪಡಿಸಿ ಸಾಹಿತ್ಯಸಮ್ಮೇಳನ ನಡೆಸಿದರೆ ಭಾಗವಹಿಸುವ ಜನರ ಸಂಖ್ಯೆಯ ದೃಷ್ಟಿಯಿಂದಲೂ ವಿಚಾರಗೋಷ್ಠಿಗಳ ಸತ್ವದ ದೃಷ್ಟಿಯಿಂದಲೂ ಸಮ್ಮೇಳನ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ನುಡಿಸಿರಿಗೆ ಪರ್ಯಾಯವಾಗಿ ಸಮ್ಮೇಳನ ನಡೆಸುವುದು ಒಂದೇವರ್ಷಕ್ಕೆ ಸಾಕಾಯಿತೆ? ಪ್ರತಿವರ್ಷ ನುಡಿಸಿರಿ ನಡೆಯುತ್ತಿರುವಂತೆ ಪ್ರತಿವರ್ಷ ಅಬ್ರಾಹ್ಮಣ್ಯ ಸಮ್ಮೇಳನವನ್ನೂ ನಡೆಸುತ್ತಿರಬೇಕಲ್ಲವೆ?

    2. ಬ್ರಾಹ್ಮಣ್ಯ == ಬ್ರಾಹ್ಮಣ ಎಂಬ ಸಮೀಕರಣ ತಪ್ಪು. ಬ್ರಾಹ್ಮಣರಲ್ಲಿ ಅಷ್ಟೇ ಅಲ್ಲ, ಅನೇಕ ಜಾತಿಗಳಲ್ಲಿ ಬ್ರಾಹ್ಮಣ್ಯ ಇದೆ. ಮೇಲು ಕೀಳು ಎಂಬ ಭಾವನೆ ಎಲ್ಲೆಲ್ಲಿ ಇದೆಯೋ ಅಲ್ಲಲ್ಲಿ ಬ್ರಾಹ್ಮಣ್ಯ ಇದೆ. ನುಡಿಸಿರಿಯಲ್ಲಿ ಕೊರಗರಿಗೆ ಕಪ್ಪು ಬಣ್ಣ ಹಚ್ಚಿ ಕುಣಿಸುವ ಮನಸ್ಥಿತಿಯ ಹಿಂದೆಯೂ ಬ್ರಾಹ್ಮಣ್ಯ ಇದೆ. ಕೊರಗರಿಗೇ ಏಕೆ ಕಪ್ಪು ಬಣ್ಣ ಹಚ್ಚಬೇಕು? ಬ್ರಾಹ್ಮಣರಿಗೂ ಕಪ್ಪು ಮಸಿ ಹಚ್ಚಿ ಅವರನ್ನು ಕುಣಿಸಬಹುದಿತ್ತಲ್ಲ ಏಕೆ ಹಾಗೆ ಮಾಡಲಿಲ್ಲ?

     1. ಕೊರಗರ ಸಾಂಪ್ರದಾಯಿಕ ನೃತ್ಯದಲ್ಲಿ ಕೊರಗ ಕಲಾವಿದರೇ ನುರಿತವರಲ್ಲದೆ ಬ್ರಾಹ್ಮಣರೋ ಬಂಟರೋ ಅಷ್ಟು ಚೆನ್ನಾಗಿ ಸಹಜವಾಗಿ ನೃತ್ಯ ಪ್ರದರ್ಶಿಸಲು ಸಾಧ್ಯವಿಲ್ಲ ಎಂಬ ಕಾರಣದಿಂದ ಕೊರಗ ಕಲಾವಿದರನ್ನು ಅವರ ಜಾನಪದ ನೃತ್ಯ ಪ್ರದರ್ಶಿಸಲು ಕೇಳಿಕೊಂಡಿರಬಹುದು. ನಮಗೆ ಅವರು ಕಲಾವಿದರಾಗಿ ಕಂಡರೇ ಹೊರತು ಅವರ ಜಾತಿ ಕಾಣಿಸಲಿಲ್ಲ, ಅವರನ್ನು ನೆರೆದವರು ಮೆಚ್ಚಿಕೊಂಡರೇ ಹೊರತು ಗೇಲಿಮಾಡಲಿಲ್ಲ. ಕಪ್ಪುಬಣ್ಣವನ್ನು ಹೀನವೆಂದು ತಿಳಿಯುವುದೇ ತಪ್ಪು. ಕಪ್ಪನ್ನು ಒಂದು ಬಣ್ಣವಾಗಿ ಕಾಣಬೇಕಾಗಿದೆಯೇ ಹೊರತು ತಪ್ಪಾಗಿ ಅಲ್ಲ. ಕಪ್ಪು ಹೀನವಲ್ಲ ಎಂದು ಲೋಹಿಯಾರಂತಹ ವಿಚಾರವಾದಿಗಳೇ ಹೇಳಲಿಲ್ಲವೆ? ಕೊರಗರ ನೃತ್ಯಕ್ಕೆ ವೇದಿಕೆಯೊದಗಿಸುವುದು ತಪ್ಪೆ? ನುಡಿಸಿರಿಯಲ್ಲಿ ಅವಕಾಶ ದೊರೆತದ್ದರಿಂದ ಕೊರಗರಿಗೆ ಡೊಡ್ಡ ಉಪಕಾರವಾಯಿತು ಎಂದು ಭಾವಿಸುವುದು ತಪ್ಪು. ಆದರೆ ಆ ನೃತ್ಯಪ್ರಕಾರದ ಪರಿಚಯ ಉಳಿದವರಿಗೆ ತಿಳಿಯುವ ಅವಕಾಶವಾಯಿತಲ್ಲವೆ? ಕೊರಗರಾಗಲೀ ಇತರ ದಮನಿತ ಜಾತಿಗಳಾಗಲೀ ತಮ್ಮ ಮೈಬಣ್ಣವನ್ನು, ನೃತ್ಯಪ್ರಕಾರವನ್ನು, ದೈವದೇವತೆಗಳನ್ನು, ಸಂಸ್ಕೃತಿಯನ್ನು ತಿರಸ್ಕರಿಸಿ ಬ್ರಾಹ್ಮಣೀಕರಣಗೊಳ್ಳಬೇಕೆ? ತಮ್ಮ ಸಂಸ್ಕೃತಿಯನ್ನು, ಬಣ್ಣವನ್ನು ಪ್ರ್ಲದರ್ಶಿಸಲು ಹೆಮ್ಮೆ ಪಡಬೇಕು ಅವರು. (ನುಡಿಸಿರಿಯಲ್ಲೇ ಮನು ಚಕ್ರವರ್ತಿ ಅವರು ಅನಂತಮೂರ್ತಿ ಬಗೆಗಿನ ಭಾಷಣದಲ್ಲಿ ಈ ವಿಚಾರದ ಸ್ಪರ್ಶ ನೀಡಿದ್ದರು) ಕೊರಗರ ಕುಣಿತ ನೋಡಿ ‘ಅವರು ಕಪ್ಪು. ಕಪ್ಪು ಹೀನ. ಅವರು ಹೀನಜಾತಿಯವರು. ಇದು ಹೀನ ಕಪ್ಪುಜಾತಿಯವರ ಕುಣಿತ’ ಎಂಬ ಭಾವನೆ ಅಲ್ಲಿ ಯಾರಿಗೂ ಮೂಡಲಿಲ್ಲ. ಅಥವಾ ಯಾರ ಮನಸ್ಸು ಯಾರಿಗೆ ಗೊತ್ತು? ಕೆಲವರಿಗೆ ಹಾಗನಿಸಲಿಲ್ಲ ಎಂದು ಹೇಗೆ ಹೇಳುತ್ತೀರಿ ಎಂಬ ಪ್ರಶ್ನೆ ಹುಟ್ಟಿಕೊಂಡರೂ ಕೆಲವರಿಗೆ ಜಾತಿಭಾವನೆ ಇದೆ/ ಮೂಡಬಹುದು ಎಂಬ ಕಾರಣಕ್ಕೆ ಕೊರಗರ ನೃತ್ಯ ಪ್ರದರ್ಶನವೇ ಆಗಕೂಡದೆ? ಇದು ಆ ಜಾನಪದ ನೃತ್ಯಪ್ರಕಾರಕ್ಕೆ ಮಾಡುವ ಅನ್ಯಾಯವಲ್ಲವೆ? ಕೊರಗರಿಗೆ ಅವರ ಸಾಂಪ್ರದಾಯಿಕ ನೃತ್ಯದಲ್ಲಿ ಸಹಜ ಪರಿಣತಿ ಇರುತ್ತದೆ. ಬ್ರಾಹ್ಮಣರು ಕಪ್ಪು ಬಣ್ಣ ಹಚ್ಚಿ ನೃತ್ಯಮಾಡಿದರೆ ಅದು ಸಹಜವೂ ಸಮರ್ಪಕವೂ ಆಗಬಹುದೆ? ಆಗಲೂ ಕೊರಗರ ನೃತ್ಯವನ್ನು ಅಣಕಿಸಿ ಅದರ ಸೌಂದರ್ಯವನ್ನು ಹಾಳುಮಾಡಿದರೆಂದು ಬ್ರಾಹ್ಮಣರನ್ನೂ ಅದಕ್ಕೆ ಅವಕಾಶಮಾಡಿಕೊಟ್ಟ ಆಳ್ವರ ‘ಬ್ರಾಹ್ಮಣ್ಯವನ್ನೂ’ ಟೀಕಿಸಬಹುದಲ್ಲವೆ? (ಉಚ್ಚಜಾತಿಯವರು ನವರಾತ್ರಿಸಮಯದಲ್ಲಿ ಕೊರಗವೇಷ ಹಾಕಿ ಅವರಿಗೆ ಅವಮಾನ ಮಾಡುತ್ತಾರೆಂದು ಕೊರಗರ ವೇಷವನ್ನು ಇತರರು ಹಾಕುವುದನ್ನೂ ನಿಷೇಧಿಸಲಾಗಿದೆ) ಒಟ್ಟಿನಲ್ಲಿ ಆಳ್ವರು ಹಾಗೆ ಮಾಡಿದರೂ ತಪ್ಪು, ಹೀಗೆ ಮಾಡಿದರೂ ತಪ್ಪು. ಪ್ರಗತಿಪರರನ್ನು ಕರೆಯದಿದ್ದರೆ ‘ಬ್ರಾಹ್ಮಣರ/ ಕೋಮುವಾದಿಗಳ ನುಡಿಸಿರಿ’. ಪ್ರಗತಿಪರರನ್ನು ಕರೆದು ನುಡಿಸಿರಿಯಲ್ಲಿ ಪ್ರಗತಿಪರರ ಧ್ವನಿ ಮೊಳಗಿದರೂ ಅದು ಅವರನ್ನು ವಶೀಕರಿಸಲೆಂದು ಅನುಮಾನ. ಕೊರಗರಂತಹ ದಮನಿತರ ಕಲಾಪ್ರಕಾರಗಳಿಗೆ ವೇದಿಕೆಯೊದಗಿಸಿದರೂ ತಪ್ಪು. ವೇದಿಕೆಯೊದಗಿಸದಿದ್ದರೂ ತಪ್ಪು. ಕೊರಗರೊಂದಿಗೆ ಆಳ್ವರು ಕುಣಿದರೂ ತಪ್ಪು. ಕುಣಿಯದಿದ್ದರೂ ತಪ್ಪು. ಆಳ್ವಾರಿಗಿಂತ ದೊಡ್ಡ ಶಿಕ್ಷಣಸಂಸ್ಥೆಗಳನ್ನು ಕಟ್ಟಿ ರಾಶಿರಾಶಿ ಹಣಮಾಡಿ ಆದರೆ ಚಿಕ್ಕಾಸನ್ನೂ ಸಮಾಜಕ್ಕಾಗಲೀ, ಭಾಷೆ ಸಂಸ್ಕೃತಿಗಳಿಗಾಗಲೀ ಉಪಯೋಗಿಸದೆ ಸ್ವಂತಕ್ಕೆ ಕೂಡಿಡುವವರ ಬಗ್ಗೆ ಪ್ರಗತಿಪರರಿಗೆ ಆಕ್ಷೇಪವಿಲ್ಲ!

Leave a Reply

Your email address will not be published.