ಕೃತಿ ಚೌರ್ಯ ಮತ್ತು ಬೂಸಾ ಸಾಹಿತ್ಯ


– ಡಾ.ಎಸ್.ಬಿ. ಜೋಗುರ


 

 

ಮನುಷ್ಯ ತನ್ನ ಕ್ರಿಯಾಶೀಲತೆ ಬತ್ತತೊಡಗಿದೊಡನೆ ತನ್ನ ತಂಗಳ ವಿಚಾರ ಮತ್ತು ಸಾಧನೆಗಳನ್ನೇ ಮೆಲುಕು ಹಾಕಿ ಸುಖ ಅನುಭವಿಸತೊಡಗುತ್ತಾನೆ. ನಿಜವಾಗಿಯೂ ಕ್ರಿಯಾಶೀಲ ಸಾಮರ್ಥ್ಯ ಇರುವವನು ಎಂದೂ ಅವಕಾಶಗಳಿಗಾಗಿ ಮಾಡಬಾರದ್ದನ್ನೆಲ್ಲಾ ಮಾಡುವದಿಲ್ಲ. ಖುದ್ದಾಗಿ ತಾನೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಕೆಲವರಂತೂ ತಮ್ಮಲ್ಲಿಲ್ಲದ ಕ್ರಿಯಾಶೀಲತೆಯನ್ನು ಇದೆ ಎಂದು ತೋರಿಸುವ ಯತ್ನದಲ್ಲಿ Plagiarism-checkerಅನೇಕ ಬಗೆಯ ಛದ್ಮವೇಷಗಳನ್ನು ಧರಿಸುತ್ತಾರೆ. ಅವಕಾಶಗಳಿಗಾಗಿ ಪೀಡಿಸುತ್ತಾರೆ, ಬೇರೆಯವರ ಅವಕಾಶಗಳನ್ನು ಕಸಿಯುತ್ತಾರೆ, ನನಗೆ ದಕ್ಕದ್ದು ಅವರಿಗೂ ದಕ್ಕುವುದು ಬೇಡ ಎನ್ನುವ ನಿಟ್ಟಿನಲ್ಲಿ ಹಿತ್ತಾಳೆ ಕಿವಿಗಳಿಗೆ ಹತ್ತಿರವಾಗಿ ತೂತು ಕೊರೆಯುವ ಯತ್ನ ಮಾಡುತ್ತಾರೆ. ಕೊನೆಗೂ ಹಾಗೂ ಹೀಗೂ ಮಾಡಿ ತಾನೂ ಒಬ್ಬ ಕವಿ, ನಾಟಕಕಾರ, ಕತೆಗಾರ, ಪ್ರಬಂಧಕಾರ ಎಂದು ಸ್ವಘೋಷಿಸಿಕೊಂಡು ಬಿಡುತ್ತಾನೆ. ಅಲ್ಲಿಗೆ ಸಮ್ಮೇಳನದ ಗೋಷ್ಟಿಗಳಲ್ಲಿ, ದಸರಾ ಸಮ್ಮೇಳನದಲ್ಲಿ ತನಗೂ ಒಂದು ಖುರ್ಚಿ ಇರುವಂತೆ ಮಾಡಬಾರದ ಕಟಿಬಿಟಿ ಮಾಡುತ್ತಾನೆ. ಕೊನೆಗೂ ಅವನು ಓದಿದ ಪದ್ಯ ಅರ್ಧ ಗಂಡು ಅರ್ಧ ಹೆಣ್ಣು. ಕೆಲ ಬಾರಿ ಅದು ನೀವೆಂದೂ ಕೇಳಿರದ ಒಂದು ಅಜ್ಞಾತ ಲಿಂಗವೂ ಆಗಿಬಿಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದನ್ನೆಲ್ಲಾ ಬರೆಯಲು ಕಾರಣವಿಷ್ಟೆ. ಈಗೀಗ ಸಾಹಿತ್ಯ ಮತ್ತು ಮಾಧ್ಯಮಗಳ ವಲಯದಲ್ಲಿ ಚಿತ್ರ ವಿಚಿತ್ರವಾದ ಓರೆ ಕೋರೆಗಳು ತೋರತೊಡಗಿವೆ. ಕೆಲವು ಪತ್ರಿಕೆಗಳಂತೂ ಅವನು ತಮ್ಮ ಪ್ರಾದೇಶಿಕತೆಯವನು, ಜಾತಿಯವನು, ಊರವನು[ಳು], ಬೇಕಾದವರು, ಆತ್ಮೀಯರು ಇಲ್ಲವೇ ಯಾರೋ ಒಬ್ಬ ಉದ್ದಾಮ ಸಾಹಿತಿ ಮುದ್ದಾಮ್  ಶಿಫಾರಸು ಮಾಡಿದ ಕಾರಣಕ್ಕೆ ಪ್ರಕಟಿಸಲಾಗುವ ಭಯಂಕರ ಬರಹಗಳಿಗೂ ಬರವಿಲ್ಲ. ಮೊನ್ನೆ ನಾಡಿನ ಖ್ಯಾತ ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕದಲ್ಲಿ ಕೃತಿ ಚೌರ್ಯ ಮಾಡಿದ ಕವನವೊಂದು ಮೆಚ್ಚುಗೆ ಪಡೆದ ಬಗ್ಗೆ ಆ ಕವಿತೆಯ ಮೂಲ ಜನುಮದಾತ ಮನ ನೊಂದು ಫೇಸಬುಕ್ ಲ್ಲಿ ತನ್ನ ಅಳಲನ್ನು ತೋಡಿಕೊಂಡ. ಜ್ಞಾನಪೀಠ ಪ್ರಶಸ್ತಿ ಪುರಷ್ಕೃತ ಸಾಹಿತಿ ಗಿರೀಶ ಕಾರ್ನಾಡರೂ ಕೂಡಾ ತಮ್ಮ ‘ನಾಗಮಂಡಲ’ ನಾಟಕದಲ್ಲಿ ಗೋಪಾಲ ವಾಜಪೇಯಿಯವರ ಹಾಡೊಂದನ್ನು ಅವರ ಹೆಸರಿಲ್ಲದೇ ಬಳಸಿಕೊಂಡು ರಾದ್ಧಾಂತವಾಗಿದ್ದು ಘಟನೆ ಕೋರ್ಟ್ ಕಟಕಟೆ ಹತ್ತುವವರೆಗೂ ಹೋಗಿದ್ದಿತ್ತು ಎನ್ನುವದನ್ನು ಪತ್ರಿಕೆಯೊಂದು ಸವಿವರವಾಗಿ ಆ ಬಗ್ಗೆ ಲೇಖನವನ್ನೇ ಪ್ರಕಟಿಸಿದೆ. ಹೀಗಿರುವಾಗ ಕೆಲ ಪುಡಿ ಬರಹಗಾರರು ಕೃತಿ ಚೌರ್ಯ ಮಾಡಿರುವುದು, ಮಾಡುತ್ತಿರುವುದು ಸಹಜ ಎನ್ನೋಣವೇ?

ಈಗೀಗ ಸಾಹಿತ್ಯಕ ವಲಯದಲ್ಲಿ ಪಕ್ಕಾ ರಾಜಕೀಯ ಪರಿಸರ ನಿರ್ಮಾಣವಾಗಿದೆ. ಇಲ್ಲಿರುವ ಗುಂಪುಗಾರಿಕೆಯಂತೂ ಹೇಸಿಕೆ ಹುಟ್ಟಿಸುತ್ತದೆ. ಬೆಂಗಳೂರಲ್ಲಿಯ ಕೆಲ ಪ್ರಚಂಡ ಪಂಡಿತರು ಆಯಕಟ್ಟಿನ ಸ್ಥಾನದಲ್ಲಿ ಕುಳಿತು ಯಾರು ಬರೆಯುತ್ತಿದ್ದಾರೆ ಏನು ಬರೆಯುತ್ತಿದ್ದಾರೆ ಎನ್ನುವುದನ್ನು ಓದದೇ, ಪ್ರತಿಕ್ರಿಯಿಸದೇ ಅವರ ಬರಹಗಳು ಪ್ರಕಟವಾಗದ Awards-for-moneyಹಾಗೆ ತಾಮ್ರದಕಿವಿಗಳಿಗೆ ತೂತು ಕೊರೆಯುವದೇ ಅವರ ಕ್ರಿಯಾಶೀಲತೆಯಾಗಿದೆ. ಪ್ರಶಸ್ತಿಗಾಗಿ ಲಾಬಿ ಮಾಡುವುದು, ತಮ್ಮ ಪ್ರದೇಶ, ಜಿಲ್ಲೆ, ತಾಲೂಕಿನ ಪರಿಸರದ ವಾಸನೆಯ ಮೂಲಕವೇ ಅವರನ್ನು ಮೇಲೆತ್ತುವದು ಇನ್ನೊಬ್ಬನನ್ನು ಉದ್ದೇಶಪೂರ್ವಕವಾಗಿಯೇ ತುಳಿಯುವದು ಇಂಥಾ ಅರಿಷ್ಟ ಗುಣಗಳನ್ನು ಬಿಟ್ಟು ಗಟ್ಟಿಯಾಗಿ ಕುಳಿತು ಓದು ಬರಹ ಮಾಡಿದ್ದರೆ ಅವನಿಂದ ನಾಡು ನುಡಿಗೆ ಒಂದಷ್ಟು ಉತ್ತಮ ಸಾಹಿತ್ಯವಾದರೂ ದಕ್ಕುತ್ತಿತ್ತು. ಇಂದು ಪ್ರಶಸ್ತಿಯ ಮೊತ್ತ ನಿಮಗೇ ನೀಡುತ್ತೇವೆ ಆದರೆ ಪ್ರಶಸ್ತಿ ಮಾತ್ರ ನನ್ನ ಮಗಳಿಗೆ ಕೊಡಿ, ಮಗನಿಗೆ ಕೊಡಿ ಇಲ್ಲವೇ ನನಗೇ ಕೊಡಿ ಎಂದು ದುಂಬಾಲು ಬೀಳುವ ಮೂಲಕ ಹಿಂಬಾಗಿಲಿನಿಂದ ಪ್ರಶಸ್ತಿ ಪಡೆದು ಸಾಹಿತ್ಯಕ ವಲಯದಲ್ಲಿ ಅನೇಕ ಸಮರ್ಥರ ಸಮಾಧಿ ಮೇಲೆ ವಿರಾಜಮಾನರಾಗುವ ಇಂಥಾ ಖಳರಿಂದಾಗಿಯೇ ಸಾಹಿತ್ಯದಲ್ಲಿ ಖೂಳ ಸಂಸ್ಕೃತಿ ಆರಂಭವಾಗಿದೆ. ಈಚೆಗೆ ಒಂದು ಸಣ್ಣ ಪ್ರಶಸ್ತಿಗಾಗಿ ಆ ಸ್ಪರ್ಧೆಯ ನಿರ್ಣಾಯಕರು ಯಾರು ಎನ್ನುವುದನ್ನು ಅದು ಹೇಗೋ ತಿಳಿದುಕೊಂಡು ಅವರ ಬೆನ್ನಿಗೆ ಬಿದ್ದದ್ದು ಕೂಡಾ ಫೇಸ್ ಬುಕ್ ಲ್ಲಿ ಬಯಲಾಗಿತ್ತು. ಹೀಗೆ ಮಾಡಿ ಪ್ರಶಸ್ತಿ ಪಡೆಯುವ ಅವಶ್ಯಕತೆ ಇದೆಯೇ? ಹೀಗೆ ಮಾಡುವುದರಿಂದ ಗಟ್ಟಿ-ಪೊಳ್ಳುಗಳ ಅಂತರ ಸ್ಪಷ್ಟವಾಗದೇ ಮತ್ತೆ ಬೂಸಾ ಸಾಹಿತ್ಯ ಮೆರೆಯುವ ಸಾಧ್ಯತೆಯೂ ಇದೆ.

ಈಚೆಗೆ ಕವಿಗೋಷ್ಟಿಯ ಸಂಘಟಕರೊಬ್ಬರು ಅಕಾಡೆಮಿಯಿಂದ ನಡೆಯುವ ಕವಿಗೋಷ್ಟಿಗೆ ನಿಮ್ಮ ಹೆಸರನ್ನು ಸೂಚಿಸಲಾಗಿದೆ ಪಾಲ್ಗೊಳ್ಳುತ್ತೀರಾ ಎಂದು ನನ್ನನ್ನು ಕೇಳಿದರು. ಆಗ ನಾನು ಸಂಘಟಕರಿಗೆ ಧನ್ಯವಾದಗಳನ್ನು ಹೇಳುತ್ತಾ ತಪ್ಪು ತಿಳಿಯಬೇಡಿ. ನನಗಿಂತಲೂ ಅದೆಷ್ಟೋ ಉತ್ತಮವಾಗಿ ಪದ್ಯ ಬರೆಯುವ ಕವಿಗಳಿದ್ದಾರೆ. ಅವರ ಅವಕಾಶವನ್ನು ನಾನು ಕಸಿಯಲು ತಯಾರಿಲ್ಲ. ನಾನು ಕಾವ್ಯ ಕೃಷಿ ಅಷ್ಟಾಗಿ ಮಾಡಿದವನಲ್ಲ. ಹೀಗಾಗಿ ನಿಜವಾದ ಕವಿಗಳಿಗೆ ಅವಕಾಶ ಕೊಡಿ ಅಂದೆ. ಅವರಿಗೂ ತುಂಬಾ ಖುಷಿಯಾಯಿತು.ಆದರೆ ನನ್ನ ಸ್ನೇಹಿತನೊಬ್ಬ ನನ್ನನ್ನು ಉಡಾಫೆ ಮಾಡಿ ಈ ಬಗೆಯ ಔದಾರ್ಯ ಈಗಿನ ಸಂದರ್ಭದಲ್ಲಿ ಸರಿಯಲ್ಲ. ಮಹತ್ತರವಾದ ಕವಿತೆಗಳನ್ನು ಬರೆಯದಿದ್ದರೂ ದುಂಬಾಲು ಬಿದ್ದು ಟಿ.ಎ., ಡಿ.ಎ. ಗಾಗಿ ಮೈಸೂರು ದಸರಾ ಕವಿಗೋಷ್ಟಿಯಲ್ಲಿ ಭಾಗವಹಿಸಿ ಅಸಹ್ಯ ಪದ್ಯ ಓದಿ ಬರುತ್ತಾರೆ. ನಿಮಗಿನ್ನೂ ವಾಸ್ತವ ತಿಳಿದಿಲ್ಲ ಎಂದು ನಕ್ಕ. ಇರಬಹುದು ಆದರೆ ನನ್ನ ಮನಸು ಸ್ಪಷ್ಟವಾಗಿ ನೀನು ಉತ್ತಮ ಕವಿಯಲ್ಲ ಎಂದು ಹೇಳುತ್ತಿರುವಾಗಲೂ ಮನಸಿಗೆ ವಿರುದ್ಧವಾಗಿ ನಾಲ್ಕು ಸಾಲುಗಳನ್ನು ಗೀಚಿ, ಓದಿ ನಾನೂ ಕವಿ ಎಂದು ಕರೆದುಕೊಳ್ಳಲು ಮನಸು ಒಪ್ಪುವದಿಲ್ಲ ಎಂದೆ. ಯಾವುದೇ ಬಗೆಯ ವಾಮಮಾರ್ಗಗಳನ್ನು ಅನುಸರಿಸಿ ಬೆಳೆದರೂ ಒಂದು ಹಂತದಲ್ಲಿ ಬೂಸಾ ಎನ್ನುವುದು ಬೆತ್ತಲಾಗುವುದು ಗ್ಯಾರಂಟಿ. ನನಗಿಂತಲೂ ಇಲ್ಲವೇ ನನ್ನಷ್ಟೇ ಸಮರ್ಥನಾಗಿರುವವನ ಹಕ್ಕು ಕಸಿಯುವದೇ ಜಾಣತನ ಎಂದು ಬಗೆದರೆ ಅಂತ ಜಾಣತನ ನನಗೆ ಬೇಕಿಲ್ಲ ಎಂದು ಖಂಡಿತವಾಗಿ ಹೇಳಿದೆ.

ಸಾಹಿತ್ಯಕ ವಲಯದಲ್ಲಿ ಒಬ್ಬ ಕತೆಗಾರನನ್ನು ಇನ್ನೊಬ್ಬ ಕತೆಗಾರ ಸಹಿಸುವುದಿಲ್ಲ. ಒಬ್ಬ ಕವಿ ಇನ್ನೊಬ್ಬ ಕವಿಯನ್ನು ಸಹಿಸುವುದಿಲ್ಲ. ಒಬ್ಬರನ್ನೊಬ್ಬರು ಪ್ರೇರಣೆಯನ್ನಾಗಿ ಸ್ವೀಕರಿಸುವ ಮೂಲಕ ಕೃಷಿ ಮಾಡುವ ಗುಣ ಬೆಳೆಸಿಕೊಳ್ಳುವ ಅಗತ್ಯವಿದೆ. ವಿಮರ್ಶೆಗಳಿರಲಿ, nobel_awardಆದರೆ ಅನಾರೋಗ್ಯಕರ ವಾದ ಸ್ಪರ್ಧೆಯ ಮನ:ಸ್ಥಿತಿ ಬೇಡ. ಹತ್ತು ಕತೆಗಳು ಒಂದು ಪತ್ರಿಕೆಗೆ ಬಂದಾಗ ಅವುಗಳಲ್ಲಿ ಯಾವುದು ತುಂಬಾ ಗಟ್ಟಿಯಾಗಿದೆಯೋ ಅದು ಪ್ರಕಟವಾಗಲಿ. ಅದನ್ನು ಬಿಟ್ಟು ಅವರು ತನ್ನ ಜಿಲ್ಲೆಯವರು, ಜಾತಿಯವರು, ಪರಿಚಯದವರು ಎನ್ನುವ ಕಾರಣಗಳೇ ಮುಂದಾಗಿ ನೀವು ಆ ಕತೆಯನ್ನು ಎತ್ತಿಕೊಳ್ಳುವಿರಾದರೆ ನಿಮಗೆ ಗೊತ್ತಿದ್ದೂ ಗೊತ್ತಿದ್ದೂ ಮಿಕ್ಕ ಒಂಬತ್ತು ಜನರಿಗೆ ನೀವು ಅನ್ಯಾಯ ಮಾಡಿದಂತೆ. ಹಾಗಾಗಬಾರದು. ಅದು ಮುಂಬರುವ ತಲೆಮಾರುಗಳಿಗೆ ಬೂಸಾ ಸಾಹಿತ್ಯವನ್ನೇ ಗಟ್ಟಿ ಎಂದು ಹೇಳಿಕೊಟ್ಟಂತಾಗುತ್ತದೆ. ಫ್ರಾನ್ಸ್ ರಾಷ್ಟ್ರ ಗಾತ್ರದಲ್ಲಿ ತೀರಾ ಚಿಕ್ಕದು. ಅದು ಸುಮಾರು ಇಲ್ಲಿಯವರೆಗೆ ಹದಿನೈದು ನೋಬೆಲ್ ಪ್ರಶಸ್ತಿಗಳನ್ನು ಪಡೆದಿದೆ. ನೋಬೆಲ್ ಪ್ರಶಸ್ತಿ ಆರಂಭವಾದ ವರ್ಷ 1901. ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿ ಪಡೆದ ದೇಶ ಫ್ರಾನ್ಸ್. ಮೊದಲ ನೊಬೆಲ್ ಪಡೆದವನ ಹೆಸರು ಸಲ್ಲಿ ಪ್ರಧೋಮ್. ಇನ್ನು ಈ ನೊಬೆಲ್ ಪ್ರಶಸ್ತಿಯ ಮೊತ್ತ ಈಗ ಬರೊಬ್ಬರಿ 6 ಕೋಟಿ 60 ಲಕ್ಷ ರೊಪಾಯಿ. ಈಚೆಗೆ ಸಾಹಿತ್ಯಕ್ಕಾಗಿ ನೋಬೆಲ್ ಪಡೆದ ಫೆಟ್ರಿಕ್ ಮೋದಿಲಿನೊ ಅತ್ಯಂತ ಯತಾರ್ಥವಾಗಿ ಸಾಹಿತ್ಯ ಕೃಷಿ ಮಾಡಿದವನು. ಆತ ಬರೆದ ಯಾವ ಕೃತಿಯೂ 170 ಪುಟಗಳನ್ನು ದಾಟುವದಿಲ್ಲ. ಫ್ರಾನ್ಸ್ ಮಹಿಳಾ ವಿಮೋಚನೆಯಲ್ಲಿ, ರೋಮ್ಯಾಂಟಿಸಿಜಂ ಕಾವ್ಯದಲ್ಲಿ ಕೂಡಾ ಅಗಾಧವಾದ ಕೊಡುಗೆಯನ್ನು ನೀಡಿದೆ. ನಮ್ಮಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯಗಳಿಗೆ ಕೊರತೆಯಿಲ್ಲ. ಆದರೆ ಅವುಗಳನ್ನು ನಿರ್ಣಯಿಸುವ ಸಂಗತಿಗಳು ಮಾತ್ರ ಇವತ್ತಿಗೂ ಜಾತಿ, ಪ್ರಾದೇಶಿಕತೆ, ಧರ್ಮ, ಸ್ವಜನಪಕ್ಷಪಾತಗಳಾಗಿರುವದರಿಂದ ತೀರಾ ಅಪರೂಪಕ್ಕೆ ಯೋಗ್ಯರಾದವರಿಗೆ ಸ್ಥಾನಮಾನಗಳು ಲಭ್ಯವಾಗುತ್ತವೆ.

3 thoughts on “ಕೃತಿ ಚೌರ್ಯ ಮತ್ತು ಬೂಸಾ ಸಾಹಿತ್ಯ

  1. ಮಂಟೇಸ್ವಾಮಿ

    ಅಕ್ಟೋಬರ್‌ ತಿಂಗಳ ಮೊದಲ ವಾರ ಚಾಮರಾಜನಗರದಲ್ಲಿ ಮೈಸೂರು ದಸರಾ ಮಹೋತ್ಸವದ ವಿಸ್ತರಣೆಯ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ‘ದಸರಾ ಕವಿಗೋಷ್ಠಿ’ ನಡೆಯಿತು. ಅಲ್ಲಿ ಕವಯಿತ್ರಿಯೊಬ್ಬರು(ಅವರು ಉಪನ್ಯಾಸಕಿಯಾಗಿದ್ದಾರೆ ಎಂದು ಕಾರ್ಯಕ್ರಮದ ಕೊನೆಗೆ ತಿಳಿಯಿತು) ‘ನಮೋ ನಡೆ; ಎಲ್ಲಡೆ’ ಎಂದು ಶೀರ್ಷಿಕೆಯಡಿ ಪ್ರಧಾನಿ ನರೇಂದ್ರ ಮೋದಿಯ ಗುಣಗಾನಕ್ಕೆ ನಿಂತೇಬಿಟ್ಟರು.
    ಮೋದಿಗೆ ‘ಆಧುನಿಕ ಸಂತ’ ಪದವಿ ನೀಡಿದರು! ಈ ಕವಿತೆ ವಾಚನ ಕೇಳಿ ನಾನು ಬೆಚ್ಚಿಬಿದ್ದೆ. ಕೊನೆಗೆ, ನಿರೂಪಕ ಕವಿತೆಯನ್ನು ಹೊಗಳಿದಾಗ ನಾನು ಸುಸ್ತಾದೆ.

    Reply
    1. Nagshetty Shetkar

      ಮಂಟೇಸ್ವಾಮಿ ಅವರೇ, ಇದರಲ್ಲಿ ಬೆಚ್ಚಿ ಬೀಳುವಂಥದ್ದು ಏನಿದೆ? ಇಂದಿರಾಗಾಂಧಿಯನ್ನು ದುರ್ಗೆ ಎಂದು ಕರೆಯುವ ಮನಸ್ಸು ಮೋದಿಯನ್ನು ವೈಯಕ್ತಿಕ ಲಾಭಕ್ಕಾಗಿ ಸಂತ ಅನ್ನಲೂ ಹೇಸುವುದಿಲ್ಲ. ಪುರಾತನ ಕಾಲದಿಂದಲೂ ಕವಿಪುಂಗವರು ಅಧಿಕಾರಸ್ಥರ ವಂದಿಮಾಗಧರೇ ಆಗಿದ್ದಾರೆ. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಭಾರತದಲ್ಲಿ ಪ್ರಜಾಪಭುತ್ವವಿದೆಯಾದರೂ ಕವಿಗಳ ಮನಸ್ಥಿತಿ ಪುರಾತನ ಕಾಲದ ಬಿಳಲುಗಳಿಗೆ ಜೋತು ಬಿದ್ದಿದೆ. ಆದುದರಿಂದಲೇ ನಮ್ಮಲ್ಲಿ ಯೂರೋಪಿನಲ್ಲಿ ಆದ ಕ್ರಾಂತಿಗಳು ಆಗಲೇ ಇಲ್ಲ. ಅನಾದಿ ಕಾಲದಿಂದ ಜಾತೀಯತೆ, ಮತೀಯತೆ ಹಾಗೂ ಫ್ಯೂಡಲಿಸಂ ನಮ್ಮ ಸಮಾಜದಲ್ಲಿ ಬೀಡು ಬಿಟ್ಟಿವೆ. ಕವಿಗಳು ಅಧಿಕಾರದಲ್ಲಿರುವವರ ಓಲೈಕೆಗೆ ತಮ್ಮ ಪ್ರತಿಭೆಯನ್ನು ಸೀಮಿತಗೊಳಿಸಿದ್ದಾರೆ. ಕ್ರಾಂತಿಕಾರಕ ಮನೋಭೂಮಿಕೆ ೯೯.೯೯% ಕವಿಗಳಿಗೆ ಇಲ್ಲವೇ ಇಲ್ಲ. ಕವಿಯಾದವನು ಕ್ರಾಂತಿಕಾರಿ ಕೂಡ ಆಗಿರಬೇಕು ಎಂದು ಬಯಸುವುದೇ ತಪ್ಪು ಅಂತ ನನಗೀಗ ಅನ್ನಿಸುತ್ತಿದೆ. ಎಲ್ಲೋ ಅಪರೂಪಕ್ಕೆ ಒಬ್ಬ ದರ್ಗಾ ಸರ್ ತರಹದ ಕವಿಗಳು ಕ್ರಾಂತಿಯನ್ನೇ ಮೈತಳೆದು ಕಾವ್ಯ ರಚಿಸುತ್ತಾರೆ. ಮಿಕ್ಕವರು ಹುಲುಮಾನವರು.

      Reply
  2. ನಾಗಶೆಟ್ಟಿ ಶೆಟ್ಕರ್

    “ತೀರಾ ಅಪರೂಪಕ್ಕೆ ಯೋಗ್ಯರಾದವರಿಗೆ ಸ್ಥಾನಮಾನಗಳು ಲಭ್ಯವಾಗುತ್ತವೆ.”

    ಶ್ರೇಣೀಕೃತ ಸಮಾಜದಲ್ಲಿ ಸ್ಥಾನಮಾನಗಳು ಯೋಗ್ಯತೆಯನ್ನು ಆಧಾರಿಸಿ ಕೊಡಲಾಗುವುದಿಲ್ಲ. ಹಿಂದೆ ಜಾತಿಕುಲಗಳು ಒಬ್ಬ ವ್ಯಕ್ತಿಯ ಶ್ರೇಣಿಯನ್ನು ನಿರ್ಧರಿಸುತ್ತಿದ್ದವು. ಇಂದು ಜಾತಿಯಷ್ಟೇ ಅಲ್ಲ, ಪ್ರಭಾವ, ಗುಂಪುಗಾರಿಕೆ, ಪ್ರಚಾರ ಕೂಡ ಸಾಹಿತಿಗಳ ಶ್ರೇಣಿಯನ್ನು ನಿರ್ಧರಿಸುತ್ತಿವೆ. ಆದುದರಿಂದ ಯೋಗ್ಯರಾದವರಿಗೆ, ಅದರಲೂ ತಳವರ್ಗದವರಿಗೆ ಸ್ಥಾನಮಾನಗಳು ಲಭ್ಯವಾಗುತ್ತಿಲ್ಲ.

    Reply

Leave a Reply to ಮಂಟೇಸ್ವಾಮಿ Cancel reply

Your email address will not be published. Required fields are marked *