ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ


– ಬಿ. ಶ್ರೀಪಾದ ಭಟ್


 

 

 

There is little difference in people, but that little difference makes a big difference. The little difference is attitude and big difference is whether it is positive or negative – W.Clement stone

“ಮಾರ್ಕ್ಸ್‌ವಾದದ ಕುರಿತಾಗಿ ಪ್ರಮುಖ ಟೀಕೆಯೆಂದರೆ ಮಾರ್ಕ್ಸಿಸಂ ಒಂದು ನಿರ್ದಿಷ್ಟ ದೃಷ್ಟಿಕೋನಕ್ಕೆ ಮಾತ್ರ ಬದ್ಧವಾಗಿರುತ್ತದೆ. ಅದು ಹೆಣ್ಣು ಮತ್ತು ಗಂಡನ್ನು ಇತಿಹಾಸದ ಒಂದು ಕೈಗೊಂಬೆಯನ್ನಾಗಿ ಮಾತ್ರ ಪರಿಭಾವಿಸುತ್ತದೆ ಮತ್ತು ಹೀಗೆ ಪರಿಭಾವಿಸುವ ಮೂಲಕ ಅವರ ಸ್ವಾತಂತ್ರ್ಯದ, ವೈಯುಕ್ತಿಕ ನೆಲೆಗಳ ಬದುಕನ್ನು ನಿರಾಕರಿಸುತ್ತದೆ. ಮಾನವ ಸಂತತಿಯ ಪ್ರತಿರೋಧಿಸಲಾರದಷ್ಟು ಕಟುವಾದ, ಕನಿಕರವಿಲ್ಲದ, ಅಪಾರವಾದ ಶಕ್ತಿಯನ್ನುಳ್ಳ ಒಂದು ಬಗೆಯ ಉಗ್ರವಾದ ಕಟ್ಟುನಿಟ್ಟನ್ನೊಳಗೊಂಡ ಇತಿಹಾಸದ ಕಾನೂನುಗಳನ್ನು ಮಾರ್ಕ್ಸ್ ನಂಬುತ್ತಾನೆ. ಆತನ ಪ್ರಕಾರ ಫ್ಯೂಡಲಿಸಂ ವ್ಯವಸ್ಥೆಯು ಬಂಡವಾಳಶಾಹಿಯ ಹುಟ್ಟಿಗೆ ಕಾರಣವಾಗುತ್ತದೆ, ಬಂಡವಾಳಶಾಹಿಯು ಮುಂದೆ ಸಮಾಜವಾದಕ್ಕೆ ದಾರಿ ಮಾಡಿಕೊಡುತ್ತದೆ. ಇತಿಹಾಸ ಕುರಿತಾದ ಮಾರ್ಕ್ಸ್‌ನ ಸಿದ್ಧಾಂತವು ವಿಧಿನಿಯಮ ನಂಬುಗೆಯ ಸೆಕ್ಯುಲರ್ ಅವತರಿಣಿಕೆಯಷ್ಟೆ. ಇದು ಮಾರ್ಕ್ಸ್‌ವಾದಿ ರಾಜ್ಯಗಳಂತೆಯೇ ಮನುಷ್ಯನ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಸದಾ ವಿರೋಧವಾಗಿರುತ್ತದೆ” ಎಂದು ಟೆರಿ ಈಗಲ್ಟನ್ ಬರೆಯುತ್ತಾನೆ.

ಆದರೆ ಇತ್ತೀಚೆಗೆ ‘ವಾರ್ತಾಭಾರತಿ’ ವಿಶೇಷಾಂಕಕ್ಕಾಗಿ ನೀಡಿದ ಸಂದರ್ಶನದಲ್ಲಿ ಕಂಚ ಐಲಯ್ಯನವರು ಕಮ್ಯುನಿಷ್ಟರ ಕುರಿತಾದ ಹೇಳಿಕೆಗಳು ತುಂಬಾ ಬೀಸು ಬೀಸಾಗಿವೆ. ಹಾಗೆಯೇ ನನ್ನ ಪತ್ರಕರ್ತ ಗೆಳೆಯರದ್ದೂ ಸಹ.

ಮುಂದುವರೆದು ಟೆರಿ ಮಾರ್ಕ್ಸ್‌ವಾದವು ಕ್ರಾಂತಿಕಾರಿ ಸಿದ್ಧಾಂತವಂತೂ ಅಲ್ಲ. ಮಾರ್ಕ್ಸ್ ಸಮಾಜವಾದದ, ಕಮ್ಯುನಿಸಂನ ಹರಿಕಾರನಂತೂ ಅಲ್ಲವೇ ಅಲ್ಲ. ಮಾರ್ಕ್ಸ್ Karl-Marxಉದಾರವಾದಿಯಾಗಿದ್ದ. ಪ್ರಾರಂಭದ ದಿನಗಳಲ್ಲಿ ಯುರೋಪ್‌ನ ರಾಷ್ಟ್ರಗಳಲ್ಲಿನ ದುಡಿಯುವ ವರ್ಗಗಳ ಚಳುವಳಿಗಳಾಗಲೇ ಸಮಾಜವಾದಿ ಚಿಂತನೆಗಳಿಗೆ ಒಗ್ಗಿಕೊಳ್ಳಲಾರಂಬಿಸಿದ್ದವು. ತಾನು ಸಮಾಜವಾದದ ಸಿದ್ಧಾಂತವನ್ನು ಬಿತ್ತಿದವನೆಂಬುದನ್ನು ಸ್ವತಃ ಮಾರ್ಕ್ಸ್‌ನೇ ನಿರಾಕರಿಸುತ್ತಾನೆ. ಆದರೆ ಮಾರ್ಕ್ಸ್ ಸಮಾಜವಾದ ಸಿದ್ಧಾಂತವನ್ನು ಮರು ರೂಪಿಸಿದ್ದಂತೂ ನಿಜ. ಮಾರ್ಕ್ಸ್‌ವಾದವು ಬಂಡವಾಳಶಾಹಿಯ ಬಲು ದೊಡ್ಡ ಟೀಕಾಕಾರ ಮತ್ತು ಬಂಡವಾಳಶಾಹಿಯ ಒಪ್ಪಿತ ಸಂಸ್ಕೃತಿಗೆ ಅದು ವಿರೋಧ ನೆಲೆಯ ಮತ್ತೊಂದು ಪ್ರತಿಸಂಸ್ಕೃತಿಯಾಗಿಯೇ ರೂಪಿತಗೊಂಡಿದೆ. ಎಲ್ಲಿಯವರೆಗೆ ಬಂಡವಾಳಶಾಹಿಯ ಸಂಸ್ಕೃತಿ ಇರುತ್ತದೆಯೋ ಅಲ್ಲಿಯವರೆಗೆ ಮಾರ್ಕ್ಸ್‌ವಾದವೂ ಪ್ರಚಲಿತವಾಗಿರುತ್ತದೆ ಎನ್ನುದರಲ್ಲಿ ಸಂಶಯವೇ ಇಲ್ಲ. ಮಾರ್ಕ್ಸ್‌ನ ವಿಮುಖನೀತಿಗಳು ಹೆಗೆಲ್‌ನಿಂದ ಪ್ರಭಾವಗೊಂಡಿದ್ದವು. ಸಹಕಾರ ತತ್ವದಡಿ ನಿರ್ಮಿತಿಗೊಳ್ಳುವ ಸಮಾಜವು ಶೋಷಣೆಯಿಂದ ಮುಕ್ತಗೊಂಡು ಸ್ವಾವಲಂಬನೆಯನ್ನು ಸಾಧಿಸಲು ಕ್ರಾಂತಿಕಾರಿ ಮಾರ್ಗವನ್ನು ಆರಿಸಿಕೊಳ್ಳುತ್ತದೆ ಎಂದು ಮಾರ್ಕ್ಸ್ ಪ್ರತಿಪಾದಿಸಿದ್ದ. ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಪರಿಸ್ಥಿತಿಯೇ ಜೀವನದ ನಿರ್ಧಾರಕ ಅಂಶವಾಗಿರುತ್ತದೆ ಮತ್ತು ಇದಕ್ಕೆ ಪೂರಕವಾಗಿ ಇತಿಹಾಸದುದ್ದಕ್ಕೂ ಉತ್ಪಾದನ ಪದ್ಧತಿಗಳು ಬದಲಾವಣೆಗೊಳಲ್ಪಡುತ್ತಿರುತ್ತವೆ ಎಂಬುದು ಮಾರ್ಕ್ಸ್‌ನ ಎರಡು ಪ್ರಮುಖ ಚಿಂತನೆಗಳು ಸಹ ಆತ ಅವಿಷ್ಕಾರ ಮಾಡಿದ್ದಲ್ಲ. ಅದು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದ್ದವು. ಹಾಗಿದ್ದರೆ ಮಾರ್ಕ್ಸಿಸಂನ ವೈಶಿಷ್ಟತೆ ಇರುವುದು ವರ್ಗಕ್ಕಿಂತಲೂ ವರ್ಗ ಹೋರಾಟ ಮುಖ್ಯ ಎನ್ನುವ ನೀತಿಯಲ್ಲೇ? ಆದರೆ ಬಹಶಃ ಇದು ಕೂಡ ಹಳೆಯದು. ಉದಾಹರಣೆಗೆ ಒಲಿವರ್ ಗೋಲ್ಡ್ ಸ್ಮಿತ್‌ನ ‘ಪಾಳುಬಿದ್ದ ಹಳ್ಳಿ’ಯ ಕವನದ ಸಾಲುಗಳಲ್ಲಿ, ಜಾನ್ ಮಿಲ್ಟನ್‌ನ ‘ಕಾಮೂಸ್’ ಪದ್ಯದಲ್ಲಿ, ಶೇಕ್ಸಪಿಯರ್‌ನ ‘ಕಿಂಗ್ ಲಿಯರ್’ ನಾಟಕದಲ್ಲಿ ವರ್ಗ ಹೋರಾಟದ ಮಾತುಗಳು ಕಾಣಿಸಿಕೊಳ್ಳುತ್ತವೆ. “‘ಬಡವರ ರಕ್ತವನ್ನು ಬಸಿದು ಸೌಧವನ್ನು ಕಟ್ಟಿದ ಜಮೀನ್ದಾರನ ಆಸ್ತಿಯೇ ಸಾಮಾಜಿಕ ಸಂಘರ್ಷದ ಕೇಂದ್ರವಾಗುತ್ತದೆ” ಎಂದು ವಾಲ್ಟೇರ್ ಹೇಳುತ್ತಾನೆ. ಆದರೆ ಪ್ರಮುಖವಾದ ವ್ಯತ್ಯಾಸವೆಂದರೆ ಸಾವಯವವಾದ ಸಾಮೂಹಿಕ ಒಗ್ಗಟ್ಟಿನಲ್ಲಿ ಮಾನವ ನಾಗರಿಕತೆಯು ರೂಪುಗೊಳ್ಳುತ್ತದೆ ಎಂದು ಅನೇಕ ಸಾಮಾಜಿಕ ಚಿಂತಕರು ಪರಿಭಾವಿಸಿದರೆ ಮಾರ್ಕ್ಸ್ ಸಾಮೂಹಿಕ ಗುಂಪಿನ ಭಿನ್ನತೆಯಲ್ಲಿ ನಾಗರೀಕತೆಯು ರೂಪುಗೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಾನೆ. ಬಂಡವಾಳಗಾರನು ದುಡಿಯುವ ವರ್ಗಗಳ ದಿನಗೂಲಿಯನ್ನು ಕನಿಷ್ಠ ಮಟ್ಟದಲ್ಲಿ ಮುಂದುವರೆಸಿ ತನ್ನ ವ್ಯಾಪಾರದ ಹಿತಾಸಕ್ತಿಗಳನ್ನು ಮೇಲ್ಮಟ್ಟಕ್ಕೇರಿಸಿಕೊಳ್ಳಲು ಹವಣಿಸುತ್ತಾನೆ ಎನ್ನುವುದು ಮಾರ್ಕ್ಸ್‌ನ ವಾದ ಎಂದು ಬರೆಯುತ್ತಾನೆ.

ಇಂಡಿಯಾದ ಕಮ್ಯುನಿಷ್ಟರ ಆದರ್ಶಗಳು ಪ್ರಶ್ನಾತೀತವಾಗಿದ್ದವು. ತಾವು ನಂಬಿದ ತತ್ವಗಳಿಗೆ ಸಂಪೂರ್ಣ ಬದ್ಧರಾಗಿ, ಜನಸಾಮಾನ್ಯರ, ಬಡವರ ಪರವಾಗಿ, Niyamagiri_Protestsನಿಸ್ವಾರ್ಥದಿಂದ ಸಾರ್ವಜನಿಕ ಜೀವನದಲ್ಲಿ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಇಲ್ಲಿನ ಕಮ್ಯುನಿಷ್ಟರು ಮೂಢನಂಬಿಕೆಗಳ ವಿರುದ್ಧ, ಕೋಮುವಾದದ ವಿರುದ್ಧ ನಿರಂತರ ಸಂಘಟನೆಗಳು, ಚಳುವಳಿಗಳನ್ನು ರೂಪಿಸಿದ್ದಾರೆ. ಬಂಡವಾಳಶಾಹಿಗಳ ಯಜಮಾನ್ಯವನ್ನು ದಿಟ್ಟತನದಿಂದ ಎದುರಿಸಿ, ಜೀವ ತೆತ್ತವರು ಇಂಡಿಯಾದ ಕಮ್ಯುನಿಷ್ಟರು. ಇವರಾರು ಬಂಗಲೆಗಳನ್ನು ಕಟ್ಟಲಿಲ್ಲ. ತಮ್ಮ ಸ್ವಂತದ ಬದುಕನ್ನೂ ಈ ಕ್ರಾಂತಿಕಾರಿ ಸಂಘಟನೆಗಳಿಗೆ ಮುಡಿಪಾಗಿಟ್ಟ ಇಲ್ಲಿನ ಕಮ್ಯುನಿಷ್ಟರು ಸರಳ ಬದುಕಿಗೆ ಅತ್ಯುತ್ತಮ ಮಾದರಿಯಾಗಿದ್ದಾರೆ. ಸೈದ್ಧಾಂತಿಕ ತಿಕ್ಕಾಟಗಳಲ್ಲಿ, ಸೆಮಿನಾರಿನಲ್ಲಿ ಬೌಧ್ಧಿಕ ಕಸರತ್ತುಗಳ ಮೂಲಕ ಎಡಪಂಥೀಯ ಚಿಂತನೆಗಳ ಅನೇಕ ಆಶಯಗಳ ನುಡಿಮುತ್ತನ್ನು ಉದ್ಧರಿಸುವ ನಮ್ಮ ಅಕಡೆಮಿಕ್ ಬೌದ್ಧಿಕ ವಲಯ ಒಂದು ಕಡೆಯಲ್ಲಿದ್ದರೆ ಮತ್ತೊಂದು ಕಡೆ ಸಾವಿರಾರು ಕಮ್ಯುನಿಷ್ಟ್ ಕಾರ್ಯಕರ್ತರು ಇಂದಿಗೂ ತಮಗೆ ಸಿಗುವ ಕೆಲವು ಸಾವಿರ ರೂ.ಗಳ ಸಂಬಳಕ್ಕಾಗಿ ಪ್ರಾಮಾಣಿಕ ಹೋರಾಟಗಳನ್ನು ಬದ್ಧತೆಯಿಂದ ಮಾಡುತ್ತಿದ್ದಾರೆ. ಅನೇಕ ಕಾರ್ಯಕರ್ತರು ಮತ್ತು ನಾಯಕರು ಹಣಕಾಸಿನ ಅಡಚಣೆಗಳಿಂದ ತಮ್ಮ ಆರೋಗ್ಯದ ಚಿಕಿತ್ಸೆಗಾಗಿ ಪರದಾಡುತ್ತಿರುವುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಚೋದನೆ ಇಲ್ಲದೆ ಜನಪರವಾಗಿರುವ, ಶೋಷಣೆಯ, ಬಂಡವಾಳಶಾಹಿಗಳ ವಿರುದ್ಧ, ಮೌಢ್ಯಗಳ ವಿರುದ್ಧ ಸದಾ ಹೋರಾಡುವ ಇಲ್ಲಿನ ಎಡಪಂಥೀಯರ ಹೋರಾಟದ ಮಿತಿಗಳನ್ನು ಟೀಕಿಸುವಾಗ ನಮ್ಮ ಬುದ್ಧಿಜೀವಿಗಳು ಮತ್ತು ಪತ್ರಕರ್ತರು ಅಕಡೆಮಿಕ್ ಶಿಸ್ತನ್ನು, ಅದರ ಅವಲಂಬನೆಯ ಅವಶ್ಯಕತೆಗೆ ಎಳ್ಳು ನೀರು ಬಿಟ್ಟು ತೀರಾ ಸಾಮಾನ್ಯವಾದ ತಿಳುವಳಿಕೆಯಿಂದ ಮತ್ತು ಅನೇಕ ವೇಳೆ ವೈಯುಕ್ತಿಕ ವಿರೋಧಗಳನ್ನಾಧರಿಸಿ ಏಕಾಏಕಿ ಕಮ್ಯುನಿಷ್ಟರನ್ನು ಟೀಕಿಸಲಾರಂಭಿಸುತ್ತಾರೆ. ಇವರ ಈ ವಾಗ್ದಾಳಿಗಳು ಸಾವಿರಾರು ಕಾರ್ಯಕರ್ತರ ನೈತಿಕ ಶಕ್ತಿಯನ್ನೇ ಉಡುಗಿಸುತ್ತದೆ ಎನ್ನುವ ಪ್ರಾಥಮಿಕ ತಿಳುವಳಿಕೆ ಸಹ ಇಲ್ಲದಂತೆ ಇವರೆಲ್ಲಾ ವರ್ತಿಸುತ್ತಿರುವುದು ಪ್ರಶ್ನಾರ್ಹ.

ಕಳೆದ ಎಂಬತ್ತೈದು ವರ್ಷಗಳ ಕಮ್ಯನಿಷ್ಟ್ ಪಕ್ಷಗಳ ಹೋರಾಟಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ಇಂಡಿಯಾದ ಸಂದರ್ಭದಲ್ಲಿ ಎಡ ಪಕ್ಷಗಳ ಹೋರಾಟವು Left _Mangaloreವರ್ಗ ಸಂಘರ್ಷವನ್ನು ಉತ್ಪಾದನಾ ಪದ್ಧತಿಯ ಸರಪಳಿಯೊಂದಿಗೆ ಬಂಧಿಸುವುದರ ಮೂಲಕ ಅಭೂತವೆನ್ನಬಹುದಾದಂತಹ ಸಂಘಟನೆಯನ್ನು ಹುಟ್ಟುಹಾಕಿರುವುದು ಇಂದು ನಮ್ಮ ಮುಂದಿದೆ. ಒಂದು ವರ್ಗವು ಉತ್ಪಾದನೆಯ ಜವಾಬ್ದಾರಿ ಮತ್ತು ನಿಯಂತ್ರಣವನ್ನು ತನ್ನದಾಗಿಸಿಕೊಂಡರೆ ದುರುಪಯೋಗಕ್ಕೆ ಒಳಪಟ್ಟಿದ್ದ ಮತ್ತೊಂದು ವರ್ಗದ ಪ್ರಾತಿನಿಧ್ಯವನ್ನು ವಹಿಸಿದ್ದ ಎಡಪಕ್ಷಗಳು ಆ ಜವಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವು. ಇಲ್ಲಿ ಉತ್ಪಾದನಾ ಶಕ್ತಿಗಳು ತಮ್ಮ ಅಭಿವೃದ್ಧಿಗೆ ಪೂರಕವಾಗುವಂತಹ ವರ್ಗಗಳನ್ನು ತಾವೇ ಸ್ವತಃ ಆಯ್ಕೆ ಮಾಡಿಕೊಂಡಾಗ ಆದರ ಮುಂದಿನ ದಿನಗಳಲ್ಲಿ ಈ ಬಳಸಲ್ಪಟ್ಟ ವರ್ಗಗಳೇ ಉತ್ಪಾದನಾ ಶಕ್ತಿಗಳಿಗೆ ತೊಡಕಾಗುವುದರ ಪ್ರಕ್ರಿಯೆಗೆ ಚಾಲನೆ ನೀಡಿದ ಕಮ್ಯನಿಷ್ಟರು ಆ ಮೂಲಕ ವರ್ಗ ಸಂಘರ್ಷದ ಇತಿಹಾಸದಲ್ಲಿ ಒಂದು ರಾಜಕೀಯ ಕ್ರಾಂತಿಯನ್ನೇ ಸಾಧಿಸಿದರು. ಇದು ಇತಿಹಾಸದಲ್ಲಿ ದಾಖಲಾಗಿದೆ. ಇದನ್ನು ನೋಡುವ ಪ್ರಾಮಾಣಿಕ ಒಳಗಣ್ಣಿದ್ದರೆ ಸಾಕಷ್ಟೆ. ಇಲ್ಲಿ ಪಶ್ಚಿಮ ಬಂಗಾಳದ ಸಿಂಗೂರು, ನಂದಿಗ್ರಾಮ ಭೂ ಹೋರಾಟದ ಸಂದರ್ಭದಲ್ಲಿ ಕಮ್ಯುನಿಷ್ಟರ ಸೋಲನ್ನು ಕುರಿತಾಗಿ ಬರೆಯುವ ಟೀಕಾಕಾರರು ಮೂವತ್ತು ವರ್ಷಗಳ ಕಮ್ಯುನಿಷ್ಟರ ಆಡಳಿತದಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚೂ ಕಡಿಮೆ ಕೋಮುಗಲಭೆಗಳೇ ನಡೆಯಲಿಲ್ಲ. ಅದರಲ್ಲೂ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಕೂಡ. ಇದನ್ನು ಮರೆಯುವುದು ಮರೆಮೋಸವಲ್ಲವೇ? ಅಲ್ಲಿನ ಪಂಚಾಯ್ತಿ ರಾಜ್ ಪದ್ಧತಿ, ಭೂ ಹಂಚಿಕೆ ಚಳುವಳಿ ಅನೇಕ ದಶಕಗಳ ಕಾಲ ಇಂಡಿಯಾದ ಇತರೇ ರಾಜ್ಯಗಳಿಗೆ ಮಾದರಿಯಾಗಿದ್ದವು.

ಅಷ್ಟು ದೂರ ಬೇಡ. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೆನಾಡಿನ ಹಳ್ಳಿಗಳಲ್ಲಿ ಮೂವತ್ತರ ದಶಕದಿಂದ ಎಪ್ಪತ್ತರ ದಶಕದವರೆಗೂ ಅಲ್ಲಿನ ಬೀಡಿ ಕಾರ್ಮಿಕರ, Left_Mangaloreಕೂಲಿ ಕಾರ್ಮಿಕರ, ಹೋರಾಟಗಳನ್ನು ನಿರಂತರವಾಗಿ ನಡೆಸಿದ್ದು ಕಮ್ಯುನಿಷ್ಟರು. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ಅದಕ್ಕೆ ಬೇರೆ ವೇದಿಕೆಯೇ ಬೇಕಾಗುತ್ತದೆ. ಆದರೆ ಇಂತಹ ನಿಸ್ವಾರ್ಥ ಹೋರಾಟವನ್ನು ಇಂದು ಬರೆಯುವಾಗ ಎಂದೋ ನಡೆದು ಹೋದ ಘಟನೆಗಳು ಎಂದು ಮಾತ್ರ ಉದಾಹರಿಸುತ್ತಿಲ್ಲ. ಇಂದಿಗೂ ಆ ಕಾಲದ ಪ್ರಾಮಾಣಿಕ ಹೋರಾಟ ಇಂದಿನ ಕಮ್ಯುನಿಷ್ಟ್ ಕಾರ್ಯಕರ್ತರನ್ನು ಪೊರೆಯುತ್ತಿದೆ. ಆದರೆ ನವಉದಾರೀಕರಣದ ಇಂದಿನ ದಿನಗಳಲ್ಲಿ ಮತೀಯವಾದದ ಸಮಾಜವನ್ನು ಎದುರಿಸುವುದು ಪ್ರತಿಯೊಬ್ಬರಿಗೂ ಒಂದು ಸವಾಲಾಗಿ ಎದುರಾಗುತ್ತಿರುವ, ಈ ಪ್ರತಿ ಸವಾಲಿಗೂ ಹೊಸ ನುಡಿಕಟ್ಟನ್ನು ಕಂಡುಕೊಳ್ಳಬೇಕಾದಂತಹ ಬಿಕ್ಕಟ್ಟಿನ ಇಂದಿನ ಕಾಲದಲ್ಲಿ ಯಾವುದೇ ಜನಪರ ಮಾಡೆಲ್‌ಗಳನ್ನು ಕಟ್ಟಲು ವಿಫಲರಾದ ನಾವು ಇಂದಿನ ಹೋರಾಟಗಳ ಮಿತಿಗೆ ಪ್ರಾಮಾಣಿಕ ಕಾರ್ಯಕರ್ತರನ್ನು ದೂಷಿಸುವುದು ಅಮಾನವೀಯವಾಗುತ್ತದೆ.

ಆದರೆ ಇಂದಿನ ನವಉದಾರೀಕರಣದ ಕಾಲಘಟ್ಟದಲ್ಲಿ, ಕೇಂದ್ರದಲ್ಲಿ ಬಿಜೆಪಿ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿರುವಂತಹ ಸಂದರ್ಭದಲ್ಲಿ, ಇಡೀ ಸರ್ಕಾರಿ ಉದ್ದಿಮೆಗಳನ್ನು ಮುಂದಿನ ವರ್ಷಗಳಲ್ಲಿ ಕ್ರಮೇಣ ಖಾಸಗೀಕರಣಗೊಳಿಸುವ ಬೃಹತ್ ಯೋಜನೆಯ ಅನುಷ್ಠಾನದಲ್ಲಿರುವ ಮೋದಿಯ ರಾಜ್ಯಭಾರದಲ್ಲಿ ನಮ್ಮಲ್ಲಿನ ಎಡಪಂಥೀಯ ಪಕ್ಷಗಳು ಮತ್ತಷ್ಟು ತೀವ್ರತೆಯಿಂದ, ಈಗಿನ ಸವಕಲು ಮಾರ್ಗವನ್ನು ಕೈಬಿಟ್ಟು ವಿಭಿನ್ನ ಚಿಂತನೆಗಳಿಂದ ನಿರಂತರ ಹೋರಾಟಗಳನ್ನು ಕಟ್ಟುವ, ಮುಂದಿನ ದಶಕಕ್ಕೆ ಜನಪರ ರಾಜಕೀಯ ತಳಹದಿಯನ್ನು ರೂಪಿಸುವಂತಹ ವಿವಿಧ ಮಾಡೆಲ್‌ಗಳನ್ನು ಇಷ್ಟರಲ್ಲಾಗಲೇ ಕಟ್ಟಬೇಕಿತ್ತು. ತಮ್ಮ ಮಡಿವಂತಿಕೆಯನ್ನು ಬಿಟ್ಟು ಸಮಾನಮನಸ್ಕರೊಂದಿಗೆ ಒಳಗೊಳ್ಳುವ ಪ್ರಕ್ರಿಯೆಯನ್ನು ಈಗಾಗಲೇ ಶುರುವಾಗಬೇಕಿತ್ತು. ಆದರೆ ಇದಾವುದೂ ಕಾಣುತ್ತಿಲ್ಲ. ಚುನಾವಣಾ ಸೋಲುಗಳಿಂದ ಸಂಪೂರ್ಣ ನಿಶ್ಯಕ್ತಿಗೊಂಡಂತೆ ಕಾಣುತ್ತಿರುವ ಇಲ್ಲಿನ ಎಡ ಪಕ್ಷಗಳು ಮರುಚೇತನ ಪಡೆದುಕೊಳ್ಳುವ ಯಾವ ಲಕ್ಷಣಗಳೂ ಸದ್ಯಕ್ಕಂತೂ ಕಾಣುತ್ತಿಲ್ಲ. ಈ ಹಿನ್ನಡೆಗಳೇ ನಮ್ಮಲ್ಲಿ ಪದೇ ಪದೇ ಎಡಪಕ್ಷಗಳ ಕುರಿತಾದ ಭ್ರಮನಿರಸನವನ್ನು ಮೂಡಿಸುತ್ತವೆ. ಈ ಎಡಪಂಥೀಯ ಪಕ್ಷಗಳ ಬಿಕ್ಕಟ್ಟು ಅಂತರಿಕವಾಗಿರುವುದು ಎಷ್ಟು ನಿಜವೂ ಈ ನವಉದಾರೀಕರಣದ ಕಾಲದಲ್ಲಿ ಬಳಸಬೇಕಾದ ಸಮಕಾಲೀನ ನುಡಿಕಟ್ಟುಗಳಿಗಾಗಿ ಇವರು ಇನ್ನೂ ತಡಕಾಡುತ್ತಿರುವುದು ಕೂಡ ನಮ್ಮ ಕಣ್ಣ ಮುಂದಿದೆ.

ನಿಜ. ಜಾತಿ ಪದ್ಧತಿಯನ್ನು ಕರಾರುವಕ್ಕಾಗಿ ಅರಿಯದಿರುವುದು ನಮ್ಮ ಎಡ ಪಕ್ಷಗಳ ಒಂದು ದೊಡ್ಡ ಮಿತಿಯೇ ಸರಿ. ನಿಜಕ್ಕೂ ಹೇಳಬೇಕೆಂದರೆ ಇಲ್ಲಿನ Left_Movementsಕಮ್ಯನಿಷ್ಟ್ ಪಕ್ಷವು ಇಂಡಿಯಾದಲ್ಲಿ ಜಾತಿ ಪದ್ಧತಿ ಎನ್ನುವುದು ಇದೆ ಎನ್ನುವುದನ್ನು ಒಪ್ಪಿಕೊಂಡು ಮೂವತ್ನಾಲ್ಕು ವರ್ಷಗಳಾದವಷ್ಟೇ ಎಂದು ಲೇಖಕರು, ಪತ್ರಕರ್ತರು ಅಭಿಪ್ರಾಯ ಪಡುತ್ತಾರೆ. ವರ್ಷಗಳು ಹಿಂದು ಮುಂದಾದರೂ ಕಡೆಗೆ ಆ ಅಭಿಪ್ರಾಯ ಮಾತ್ರ ನಿಜ. ‘ಎಲ್ಲಾ ಇತಿಹಾಸವೂ ವರ್ಗ ಸಂಘರ್ಷಗಳ ಇತಿಹಾಸವಾಗಿರುತ್ತದೆ’ ಎಂದು ಹೇಳಿದ ಮಾರ್ಕ್ಸ್ ನ ಮಾತಿನ ಅರ್ಥ ಇತಿಹಾಸವೆಲ್ಲವೂ ವರ್ಗ ಸಂಘರ್ಷವೇ ಎಂದಲ್ಲ, ಬದಲಾಗಿ ಮಾನವ ಇತಿಹಾಸದಲ್ಲಿ ವರ್ಗ ಸಂಘರ್ಷವೂ ಒಂದು ಪ್ರಮುಖ ಭಾಗವಾಗಿರುತ್ತದೆ ಎಂದರ್ಥ. ಸಂಪತ್ತು ಮತ್ತು ಶಕ್ತಿಯ ಅಸಮಾನ ಹಂಚಿಕೆಯನ್ನುಳ್ಳ ಸಮಾಜವು ಅನೈತಿಕ ಎಂದು ಮಾರ್ಕ್ಸ್ ಧೃಢವಾಗಿ ನಂಬಿದ್ದ. ಇಂಡಿಯಾದ ಸಂದರ್ಭದಲ್ಲಿ ಆ ಅಸಮಾನತೆಯೆಂದರೆ ಜಾತಿ ಪದ್ಧತಿ ಮತ್ತು ವರ್ಣಾಶ್ರಮ ವ್ಯವಸ್ಥೆ. ಜಮೀನ್ದಾರನ ಬಳಿ ಜೀತಕ್ಕಿರುವ ವ್ಯಕ್ತಿ ಕೇವಲ ಬಡವ ಮಾತ್ರವಲ್ಲ ಜೊತೆಗೆ ದಮನಿತ ಜಾತಿಗೆ ಸೇರಿದವನಾಗಿರುತ್ತಾನೆ. ಆದರೆ ಇಂಡಿಯಾ ಸಮಾಜದ, ಜಾತಿ ವ್ಯವಸ್ಥೆಯ ಸಂಕೀರ್ಣ ಸ್ವರೂಪವನ್ನು, ವಾಸ್ತವವನ್ನು, ಜಾತಿ ಪದ್ಧತಿಯ ಕರಾಳತೆಯನ್ನು ನಮ್ಮ ಕಮ್ಯುನಿಷ್ಟರು ಅರಿಯದೇ ಹೋದರು ಮತ್ತು ಅರಿತುಕೊಂಡವರು ಅದನ್ನು ನಿರ್ಲಕ್ಷಿಸಿದರು. ತಮ್ಮ ಪಕ್ಷಗಳಲ್ಲಿ ಸದಸ್ಯರನ್ನು ನಾಮಕರಣ ಮಾಡುವಾಗ, ನಾಯಕರನ್ನು ಆರಿಸುವಾಗ ಸಾಮಾಜಿಕ ನ್ಯಾಯದ ಮೀಸಲಾತಿಯನ್ನು ಪರಿಗಣಿಸಲೇ ಇಲ್ಲ. ಹೀಗಾಗಿ ಅನೇಕ ದಶಕಗಳ ಕಾಲ ಬ್ರಾಹ್ಮಣರೇ ಎಡಪಂಥೀಯ ಚಳುವಳಿಗಳ ನೇತೃತ್ವ ವಹಿಸಿರುವುದು ಸಾಮಾನ್ಯ ಸಂಗತಿಯಾಗಿತ್ತು. ಸಾಮಾಜಿಕ ನ್ಯಾಯದ ಚಳುವಳಿಯ ಸಂದರ್ಭದಲ್ಲಿ ಇದು ಟೀಕೆಗೆ ಒಳಗಾಗಿದ್ದು ಸಹಜ ಮತ್ತು ನ್ಯಾಯಯುತವಾಗಿತ್ತು. ಇದಕ್ಕೆ ಮೂಲಭೂತ ಕಾರಣವೇನೆಂದರೆ ಮಾರ್ಕ್ಸ್ ಸಿದ್ಧಾಂತವನ್ನು ಗ್ರಹಿಸುವ ಕ್ರಮದಲ್ಲಿ, ಇಂಡಿಯಾದ ಜಾತಿ ಆಧಾರಿತ ಪ್ರತ್ಯೇಕತೆ ಮತ್ತು ತಾರತಮ್ಯದ ನೆಲೆಯಲ್ಲಿ ಮಾಕ್ರ್ಸವಾದವನ್ನು ವ್ಯಕ್ತಿ ಪ್ರಜ್ಞೆ ಮತ್ತು ಸಾಮಾಜಿಕತೆಯನ್ನು ಇಲ್ಲಿನ ಶ್ರೇಣೀಕೃತ ವ್ಯವಸ್ಥೆಗೆ ಅನ್ವಯಿಸಿ ಹೋರಾಟಗಳನ್ನು ಕಟ್ಟುವುದರಲ್ಲಿ ನಮ್ಮ ಕಮ್ಯುನಿಷ್ಟ್ ಪಕ್ಷದವರು ತುಂಬಾ ಮುಗ್ಧರಾಗಿ ವರ್ತಿಸಿದರು ಮತ್ತು ಅದನ್ನು ಪ್ರಾತಿನಿಧಿಕವಾಗಿ ತೆಗೆದುಕೊಳ್ಳಲೇ ಇಲ್ಲ ಎಂದೆನಿಸುತ್ತದೆ.

ವರ್ಗಗಳಲ್ಲಿಯೂ ಜಾತಿಗಳಿರುತ್ತವೆ, ಅವು ಅಸಮಾನತೆಯ ನೆಲೆಯಲ್ಲಿರುತ್ತವ. ಇಲ್ಲಿ ಜಾತಿ ಆಧಾರಿತ ಶ್ರೇಷ್ಠತೆಯ ಪ್ರಶ್ನೆ ಬಂದಾಗ ಇದೇ ದುಡಿಯುವ ವರ್ಗಗಳು ಪ್ರೊಲೆಟರಿಯೇಟ್ ನ ಸಿದ್ಧಾಂತಕ್ಕೆ antithesis ಆಗಿ ವರ್ತಿಸಲು ಶುರು ಮಾಡುತ್ತಾರೆ. ವರ್ಗವನ್ನಾಧರಿಸಿ ಕಟ್ಟಿದ ಯೂನಿಯನ್ನಿನ ಒಳಗೆ ವರ್ಣಾಶ್ರಮದ ಶ್ರೇಣಿಕೃತ ವ್ಯವಸ್ಥೆ ರೂಪುಗೊಂಡಿರುತ್ತದೆ. ಇಲ್ಲಿ ಮೇಲ್ಜಾತಿಯ ಕಾರ್ಮಿಕರು ಜಾತಿಯ ಪ್ರಶ್ನೆ ಬಂದಾಗ ಇವರು ತಮ್ಮ ತಳ ಸಮುದಾಯಗಳ ಕಾಮ್ರಡ್ ಗಳನ್ನೂ ಧಿಕ್ಕರಿಸಿ ಜಾತಿಪದ್ಧತಿಗೆ ಮಣೆ ಹಾಕುತ್ತಾರೆ ಎನ್ನುವುದು ವಾಸ್ತವ.ಇದು ಇತಿಹಾಸವೂ ಹೌದು ಮತ್ತು ವರ್ತಮಾನವೂ ಹೌದು. ಆದರೆ ಈ ಜಾತಿ ಪದ್ಧತಿಯ ಈ ಕರಾಳ ವಾಸ್ತವಕ್ಕೆ ಕುರುಡಾಗಿ ಕೇವಲ ಏಕರೂಪಿಯಾಗಿ ವರ್ಗಗಳನ್ನು ಮತ್ತು ವರ್ಗ ಸಂಘರ್ಷಗಳನ್ನು ತಮ್ಮ ಮೂಲಭೂತ ಹೋರಾಟವನ್ನಾಗಿ ಮಾಡಿಕೊಂಡರು ಇಂಡಿಯಾದ ಕಮ್ಯುನಿಷ್ಟರು. ಮತ್ತೊಂದು ಕಡೆ ಕಮ್ಯುನಿಷ್ಟ್ ಪಕ್ಷದ ಯೂನಿಯನ್ ನ ಅಡಿಯಲ್ಲಿ ಲಕ್ಷಾಂತರ ಕಾರ್ಮಿಕರು ಸದಸ್ಯರಾಗಿದ್ದಾರೆ. ಆದರೆ ಬಹುಪಾಲು ಕಾರ್ಮಿಕರಿಗೆ ಕಮ್ಯುನಿಷ್ಟ್ ಪಕ್ಷದ ಬಗ್ಗೆ ಇರುವ ಒಲವು ಮತ್ತು ಸಂಬಂಧಗಳು ಕೇವಲ ತಮ್ಮ ವೈಯುಕ್ತಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಷ್ಟರ ಮಟ್ಟಿಗೆ ಅಷ್ಟೆ.ಆದರೆ ಕಮ್ಯನಿಷ್ಟರ ಎಡಪಂಥೀಯ ಚಿಂತನೆಗಳಿಗೆ, ಸೆಕ್ಯುಲರ್ ತತ್ವಗಳಿಗೆ ಮುಕ್ಕಾಲು ಪಾಲು ಕಾರ್ಮಿಕರು ಯಾವುದೇ ಪ್ರಾಮುಖ್ಯತೆಯನ್ನೇ ನೀಡುವುದಿಲ್ಲ. ನಮ್ಮ ಕಮ್ಯುನಿಷ್ಟ್ ಪಕ್ಷಗಳು ಇಲ್ಲಿನ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಜಟಿಲತೆಗಳನ್ನು ವಾಸ್ತವ ನೆಲೆಗಟ್ಟಿನಿಂದ ನೋಡದೆ ಎಲ್ಲದಕ್ಕೂ ಆರ್ಥಿಕ ವ್ಯವಸ್ಥೆಯೇ ಅಡಿಪಾಯ ಎಂದು ಸರಳರೇಖೆಯಂತೆ ಹೊರಟಿದ್ದೇ ಈ ದುರಂತಕ್ಕೆ ಕಾರಣ.

ಹೀಗಾಗಿ ಇವರ ಯೂನಿಯನ್ನಿನ ಲಕ್ಷಾಂತರ ಕಾರ್ಮಿಕರಿಗೆ ತಮ್ಮ ನೌಕರಿಯಲ್ಲಿನ ತೊಂದರೆಗಳಿಗೆ, ಇಂಕ್ರಿಮೆಂಟ್ ಗಳಿಗೆ, ಬೋನಸ್ ಗೆ ಮತ್ತು ಅಲ್ಲಿನ ವರ್ಗ ಅಸಮಾನತೆಯ ವಿರುದ್ಧ ಹೋರಾಡಲು ಮಾತ್ರ ಕಮ್ಯನಿಷ್ಟ ಪಕ್ಷದ ಯೂನಿಯನ್ ಗಳು ಬೇಕು, ಆದರೆ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ನಿರ್ಣಯಗಳನ್ನು ನಿರ್ಧರಿಸುವಾಗ, ಮಾರ್ಕ್ಸ್ ನ ಸಮತಾವಾದದ ಚಿಂತನೆಗಳನ್ನು ಅರ್ಥೈಸಿಕೊಳ್ಳುವಾಗ ಈ ಕಾರ್ಮಿಕರು ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಾರೆ. ಉತ್ಪಾದನಾ ಸಾಮರ್ಥ್ಯದ General-Strike-Indiaವಿಕಸನವೆಂದರೆ ತಂತ್ರಜ್ಞಾನದ ವಿಕಸನವೂ ಹೌದು. ಇವೆರಡೂ ಪರಸ್ಪರ ಪೂರಕವಾಗಿ ಬೆಳೆಯತೊಡಗಿದಾಗ ಇಂಡಿಯಾದಂತಹ ಪ್ರತ್ಯೇಕತೆಯನ್ನೊಳಗೊಂಡ ಸಮಾಜದಲ್ಲಿ ಈ ಬೇಳವಣಿಗೆಯು ಕೇವಲ ಒಂದು ಸಮುದಾಯಗಳ, ಮೇಲ್ಜಾತಿಗಳ, ಸವರ್ಣೀಯರ ಉನ್ನತಿಯಾಗಿರುತ್ತದೆ ಎಂದು ಅರ್ಥೈಸುವಲ್ಲಿ ನಮ್ಮ ಕಮ್ಯುನಿಷ್ಟರು ತುಂಬಾ ತಡ ಮಾಡಿದರು. ಏಕೆಂದರೆ ಸಾಮಾಜಿಕ ಸಂಬಂಧಗಳೇ ಸಮಾಜದ ವಿಕಸನದ ಶೈಲಿಯನ್ನು ನಿರ್ಧರಿಸುತ್ತವೆ ಎನ್ನುವ ಸತ್ಯ ನಮ್ಮ ಎಡಪಂಥಿಯ ಹೋರಾಟಗಾರರಿಗೆ ಸ್ಪಷ್ಟವಾಗಲಿಲ್ಲವೇ ಅಥವಾ ಅದನ್ನು ನಿರ್ಲಕ್ಷಿಸಿದರೇ? ಆಂದರೆ ಆಧುನಿಕ ವಿಜ್ಞಾನ ಮತ್ತು ಮಾನವನ ಸ್ವಾತಂತ್ರ ಮತ್ತು ಆಧ್ಯಾತ್ಮ ಮತ್ತು ಧಾರ್ಮಿಕತೆ ಮತ್ತು ಆದಿವಾಸಿ, ತಳಸಮುದಾಯಗಳ ಶ್ರೀಮಂತ ಅವೈದಿಕ ಸಾಂಸ್ಕೃತಿಕ ಜಗತ್ತು ಇವೆಲ್ಲದರ ನಡುವಿನ ಪರಸ್ಪರ ವಿರೋಧಾಭಾಸಗಳು ಮತ್ತು ಇವುಗಳ ನಡುವಿನ ಸಾಮಾಜಿಕ- ಸಾಂಸ್ಕೃತಿಕ-ಆರ್ಥಿಕ ಸಂರಚನೆಗಳನ್ನು ಆಧ್ಯಯನ ಮಾಡಲು ನಮ್ಮ ಕಮ್ಯುನಿಷ್ಟರು ತೋರಿಸಿದ ನಿರಾಸಕ್ತಿಗಾಗಿ ಇಂದು ಅಪಾರ ಬೆಲೆ ತೆರಬೇಕಾಗಿ ಬಂದಿದೆ. ಈ ಅಪಾಯಗಳನ್ನು ಗ್ರಹಿಸಿಯೇ ಮಾರ್ಕ್ಸ್ ವಾದಿ  ಚಿಂತಕ ಗ್ರಾಮ್ಷಿಯು “ಸಾಂಸ್ಕೃತಿಕ ಸಂಘಟನೆಗಳು ಹೋರಾಟಗಳ ಮತ್ತು ವ್ಯವಸ್ಥೆಯ ಕೇಂದ್ರವಾಗಿರಬೇಕು ಮತ್ತು ರಾಜಕೀಯ ಮತ್ತು ಆರ್ಥಿಕ ಸಂಘಟನೆಗಳು ಸಾಂಸ್ಕೃತಿಕ ಸಂಘಟನೆಗೆ ಪೂರಕವಾಗಿ ಕೆಲಸ ಮಾಡಬೇಕು “ಎಂದು ಪ್ರತಿಪಾದಿಸಿದ. ಬೌದ್ಧಿಕ ಪ್ರೇರಣೆಗಳ ಮೂಲಕ ಜನಸಾಮಾನ್ಯರೆಲ್ಲರೂ ಬುದ್ಧಿಜೀವಿಗಳಾಗಬೇಕೆಂದು ಆಶಿಸಿದ. ಏಕೆಂದರೆ ಒಮ್ಮೆ ಪ್ರಳಯಕ್ಕೆ ತುತ್ತಾಗಿ ಇಡೀ ವಿಶ್ವವೇ ನಾಶಗೊಂಡಾಗ ಮರಳಿ ಬೂದಿಯಿಂದ ನಾಗರಿಕತೆಯನ್ನು ಕಟ್ಟಬೇಕಾದಂತಹ ಸಂದರ್ಭದಲ್ಲಿ ಈ ಬುದ್ಧಿಜೀವಿ ಜನಸಾಮಾನ್ಯರ ಅವಶ್ಯಕತೆ ಬೇಕೇ ಬೇಕು.

ಆದರೆ ಇಂಡಿಯಾದ ಕಮ್ಯುನಿಷ್ಟ್ ಪಕ್ಷದ ಕುರಿತಾಗಿ ಮಾತನಾಡುವಾಗ ಈ ಎಲ್ಲ ಸಂಕೀರ್ಣ ತರ್ಕಗಳನ್ನು ಸರಳೀಕರಿಸಿ ಹೇಳುವುದೂ ತುಂಬಾ ಕಷ್ಟ. ಇಲ್ಲಿನ ಕಮ್ಯುನಿಷ್ಟರ ನಿಸ್ವಾರ್ಥ ಹೋರಾಟಗಳನ್ನು, ಸೆಕ್ಯಲರಿಸಂ ಅನ್ನು, ಪ್ರಾಮಾಣಿಕತೆಯನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಕಡೆಗಣಿಸಿದ್ದೇ ಆದರೆ ಒಂದು ಪ್ರಾಮಾಣಿಕ, ಜನಪರ ಹೋರಾಟವನ್ನು ನಾವೇ ಕೈಯಾರೆ ಕೊಂದಂತೆ. ಇಷ್ಟೆಲ್ಲಾ ಸಂಕೀರ್ಣತೆಯನ್ನು ಐಲಯ್ಯನವರು, ನಮ್ಮ ಪತ್ರಕರ್ತ ಗೆಳೆಯರು ಇಷ್ಟೊಂದು ಸರಳೀಕರಿಸಿ ಮಾತನಾಡಿರುವುದು ಅಚ್ಚರಿ ಹುಟ್ಟಿಸುತ್ತದೆ. ಸತ್ಯಾನ್ವೇಷಣೆಯಲ್ಲಿದ್ದೇವೆ ಎಂದೇ ಹೊರಡುವ ಇವರೆಲ್ಲಾ ಕಡೆಗೆ ಸ್ವತಃ ತಮ್ಮ ಮಾತಿನ ಐಭೋಗಕ್ಕೆ ತಾವೇ ಬಲಿಯಾಗಿ ಹಾದಿ ತಪ್ಪಿ ತಪ್ಪಾದ ಗಮ್ಯದ ಕಡೆಗೆ ಚಲಿಸುತ್ತಿದ್ದಾರೆ. ಆದರೆ ಇದರಿಂದಾಗುವ ಅಪಾಯವೇನೆಂದರೆ ಹೊಸ ತಲೆಮಾರಿನ ಹುಡುಗರಿಗೆ ಈ ಮೇಲ್ಪದರದ, ಗತಿ ತಪ್ಪಿದ ಹೇಳಿಕೆಗಳೇ ಸತ್ಯವಾಗಿ ಹೋದರೆ ಗತಿಯೇನು?

Leave a Reply

Your email address will not be published. Required fields are marked *