Monthly Archives: October 2014

“ಪೊಳ್ಳು ಪುರಾಣವನ್ನು ನಂಬಿ ನಿಜ ಹರಿಶ್ಚಂದ್ರನಾದ ಗಾಂಧಿಯೆಂಬ ಗಾರುಡಿ….”


 -ಎಚ್.ಜಯಪ್ರಕಾಶ್ ಶೆಟ್ಟಿ


ಮೊನ್ನೆ ಮೊನ್ನೆಯಷ್ಟೇ ಯಾಕೋ ಏನೋ ನಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಕೋಲಾರದಿಂದ ಅಹವಾಲು ಹೇಳಿಕೊಂಡು ಬಂದ ಶಿಕ್ಷಕರ ಸಾಮಾನ್ಯಜ್ಞಾನ ಪರೀಕ್ಷೆಗೆ ನಿಂತುಬಿಟ್ಟಿದ್ದರು. ಆ ಶಿಕ್ಷಕರು ಸಚಿವರೆದುರು ಹೋಮ್ ವರ್ಕ್kimmane-ratnakar ಒಪ್ಪಿಸಬೇಕಾದ ಮಕ್ಕಳಂತೆ ನಿಂತಿದ್ದರು. ಮಾಧ್ಯಮದ ಕ್ಯಾಮರಾದೆದುರಿಗೇ ಅವರುಗಳನ್ನು ಪ್ರಶ್ನಿಸಿದ ಸಚಿವರು ತಮ್ಮ ತಲೆ ತಲೆ ಚಚ್ಚಿಕೊಳ್ಳುತ್ತಿದ್ದರು. ‘ಅನ್ ಟು ದ ಲಾಸ್ಟ್’ ಕೃತಿಯ ಕುರಿತ ಸಚಿವರ ಪ್ರಶ್ನೆಗೆ ಶಿಕ್ಷಕರು ಉತ್ತರಿಸಲಾರದೆ ತಡವರಿಸಿದರು. ಸಜ್ಜನ ಸಚಿವ ಕಿಮ್ಮನೆ ತಾವು ಮಾಡುತ್ತಿರುವುದು ಸರಿಯಾದುದಲ್ಲ ಎನ್ನಿಸಿ ಅಲ್ಲಿಗೇ ನಿಲ್ಲಿಸಲೂ ಇಲ್ಲ. ಅದೇ ಕ್ಯಾಮರಾದೆದುರೇ ಗಾಂಧೀಜಿ ಜನ್ಮದಿನವನ್ನಾದರೂ ಹೇಳಿ ಎಂದು ಮತ್ತೆ ಪ್ರಶ್ನೆ ಎಸೆದರು. ಪ್ರಶ್ನೆ, ಪರಿಸರ, ಕ್ಯಾಮರಾ ಯಾವುದನ್ನೂ ನಿರೀಕ್ಷಿಸದೆ ಕಕ್ಕಾಬಿಕ್ಕಿಯಾದ ಮೇಷ್ಟ್ರುಗಳು ಉತ್ತರಿಸಲಿಲ್ಲ. ತಡವರಿಸತೊಡಗಿದರು. ಅಧ್ಯಾಪಕರ ಅಸಹಾಯಕತೆಯ ನಡುವೆ ಇಲಾಖೆಯ ದುಸ್ಥಿತಿಗೆ ಬೇಸ್ತುಬಿದ್ದಂತೆ ಕಿಮ್ಮನೆ ಸುಮ್ಮನೆ ತಲೆಮೇಲೆ ಕೈಹೊತ್ತು ಕುಳಿತರು. ಆದರೆ ಹೀಗೆ ಸಂಭವಿಸಿದ ಅಚಾನಕ್ ಗಾಂಧಿ ಕುರಿತ ಈ ಕ್ವಿಝ್ ಬ್ರೇಕಿಂಗ್ ನ್ಯೂಸ್ ಎಂಬ ಬಕಧ್ಯಾನದಲ್ಲೇ ಕಾದು ಕೂರುವ ಮಾಧ್ಯಮಗಳೆಂಬ ರಣಹದ್ದುಗಳಿಗೆ ಭರಪೂರ ಆಹಾರವೊದಗಿಸಿತ್ತು. ಸಚಿವರು ಕೇಳುವ ಪ್ರಶ್ನೆ, ಅದಕ್ಕೆ ಉತ್ತರಿಸಲಾರದ ಅಧ್ಯಾಪಕರ ಅಸಹಾಯಕತೆ, ತಲೆಮೇಲೆ ಕೈಹೊತ್ತು ಕುಳಿತ ಸಚಿವರ ಹತಾಶೆಯ ಭಂಗಿಗಳೆಲ್ಲವೂ ‘ಗಾಂಧೀ’ ಎಂಬ ವಿಸ್ಮಯ’ವೇ ಕಣ್ಮರೆಯಾದ ಮಾಧ್ಯಮಗಳ ಲೋಕವಿಸ್ಮಯದ ಬ್ರೇಕಿಂಗ್ ನ್ಯೂಸ್ ಎಂಬ ಟಿ ಆರ್ ಪಿ ಸರಕುಗಳಾದುವು! ಈ ಹರಾಜಿನ ಸರದಿಯನ್ನು ಅವು ಇಲ್ಲಿಗೇ ನಿಲ್ಲಿಸಲಿಲ್ಲ. ಸಚಿವರೇ ಉದ್ಘಾಟಿಸಿದ ಕ್ವಿಝ್ ನ ಸರಣಿ ಕಾರ್ಯಕ್ರಮವಾಗಿಸಿಕೊಂಡ ಮಾಧ್ಯಮಗಳು ಮರುದಿನ ಬೀದಿಗಿಳಿದಿದ್ದವು! ಬೀದಿ ಬೀದಿ ಸುತ್ತಿ ಅಧ್ಯಾಪಕರೆನಿಸಿಕೊಂಡವರನ್ನು ಬೆನ್ನು ಹತ್ತಿ ಬೇಟೆಯಾಡಿದ್ದುವು. ಕಂಡಕಂಡವರಿಗೆ ಗಾಂಧಿ ಹುಟ್ಟಿದ ಇಸವಿ, ವಿವೇಕಾನಂದರ ಜನ್ಮದಿನದ ಹಾದಿಬದಿಯ ಕ್ವಿಝ್ ನಡೆಸಿ ಸರ್ಕಾರಿ ಶಾಲೆಯ ಅಧ್ಯಾಪಕರ ತಲೆ ಖಾಲಿಯೆಂಬ ಪ್ರಮಾಣಪತ್ರ ಉತ್ಪಾದಿಸಿದ್ದುವು. ಹೀಗೆ ಈ ದೇಶದಿಂದ ಗಾಂಧಿ ಹಠಾವೋಗಾಗಿ ಅಪಾರ ನಿರೀಕ್ಷೆಯಲ್ಲಿರುವವರಿಗೆ ಪರೋಕ್ಷ ಸಮಾಧಾನ ಕೊಟ್ಟಿದ್ದುವು. ಸರ್ಕಾರಿ ಶಾಲೆಗಳ ಮೇಲೆ ಮುಗಿಬಿದ್ದು ಯುದ್ಧ ಸಾರಿರುವ ಖಾಸಗಿ ಶಿಕ್ಷಣೋದ್ಯಮಿಗಳಿಗೆ ಭರಪೂರ ಖುಷಿಕೊಟ್ಟಿದ್ದುವು. ಬಡ ಪೋಷಕರೆದೆಯಲ್ಲಿ ‘ಅಯ್ಯೋ… ತಪ್ಪು ಮಾಡಿಬಿಟ್ಟೆವು’ ಎನ್ನುವ ನರಳಾಟ ಹುಟ್ಟಿಸಿದ್ದವು. ಇಷ್ಟೆಲ್ಲಕ್ಕೂ ಅಂದು ‘ಗಾಂಧೀ’ ಸರಕಾಗಿ ಹೋಗಿದ್ದರು.

ಗಾಂಧಿಯ ವ್ಯಕ್ತಿತ್ವದಲ್ಲೇ ಹೊಸ ಪ್ರಶ್ನಾವಳಿಗೆ ಪಠ್ಯವಾಗುವ, ನೆಪವಾಗುವ, ಪ್ರಸಂಗವಾಗುವ ಒಂದುkannada-school ಗುಣವಿರುವುದಾಗಿ ಶಿವವಿಶ್ವನಾಥನ್ ಗುರುತಿಸುತ್ತಾರೆ. ಆದರೆ ಗಾಂಧಿಯನ್ನು ಹೀಗೆ ಪಠ್ಯವಾಗಿಸಿಕೊಳ್ಳುವ ವೇಳೆ ನಮಗೆ “ಶಿಕ್ಷಣವೆಂದರೆ ಬರೀ ಅಕ್ಷರವೆಂಬ ಭ್ರಾಂತಿಯಾಗಕೂಡದು” ಎಂದ ಗಾಂಧಿಯ ಮಾತು ತಿಳಿದರಬೇಕು. ಹಾಗೆಯೇ ಶಿಕ್ಷಣವೆಂದರೆ ಗಾಂಧಿಗೆ ನೆನಪಿಟ್ಟುಕೊಂಡು ಪಟ್ಟನೆ ಉತ್ತರಿಸಿಬಿಡುವ ನೆನಪಿನ ರೋಮಾಂಚನವಲ್ಲ. ಅದು ಆತ್ಮಗೌರವದ ಸ್ವಾಯತ್ತ ಬದುಕಿಗೆ ಸಂಬಂಧಿಸಿದ್ದಾಗಿತ್ತು ಎಂಬ ಅರಿವಿರಬೇಕು. ಈ ಕ್ವಿಝ್ ಗೆ ಸ್ಮೃತಿ ಪರಂಪರೆಯವರ ಭಜನೆಯಿಂದಾಚೆಗಿನ ಶಕ್ತಿಯಿಲ್ಲ. ಹೀಗೆ ಪ್ರಶ್ನಿಸುವ ವೇಳೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಗ್ರಂಥಾಲಯಗಳಲ್ಲಿ ಎಂತಹ ಪುಸ್ತಕಗಳು ತುಂಬಿಕೊಳ್ಳುತ್ತಿವೆ? ಅಲ್ಲಿ ಗಾಂಧಿ ಚಿಂತನೆಗೆ ಪೂರಕವಾದ ಎಷ್ಟು ಪುಸ್ತಕಗಳು ಪೂರೈಕೆಗೊಳ್ಳುತ್ತಿವೆ? ಅಲ್ಲಿಗೆ ಎಂತಹ ಪುಸ್ತಕಗಳು ತಲುಪಿವೆ? ಗಾಂಧಿ ಕುರಿತ ಪಠ್ಯಗಳ ಬೋಧನೆಗೆ ಇಂದಿಗೂ ಏಳುತ್ತಿರುವ ಪ್ರತಿರೋಧದ ನೆಲೆಗಳ ಹಿಂದಿನ ಕಾರಣ ಮತ್ತು ಕೈಗಳಾವುವು? ಬೀದಿ ಬೀದಿಯಲ್ಲಿ ಮೈಕ್ ಹಿಡಿದು ಕ್ವಿಝ್ ಸರಣಿ ನಡೆಸುವ ಬ್ರಹಸ್ಪತಿಗಳು ಈ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಬೇಕಿದೆ. ಒಬ್ಬ ಮಂತ್ರಿಯಾಗಿ ಕಿಮ್ಮನೆಯವರಿಗೆ ಹಾಗೂ ಪ್ರಜಾಪ್ರಭುತ್ವದ ಎಚ್ಚರದ ಕಣ್ಣಾಗಿ ಮಾಧ್ಯಮಗಳಿಗೆ ಇವೆಲ್ಲವುಗಳ ಕುರಿತ ಪ್ರ್ರಾಂಜಲವಾದ ಆತ್ಮನಿರೀಕ್ಷಣೆಯೂ ಇದ್ದಿದ್ದರೆ ಒಳ್ಳೆಯದಿತ್ತು. ಯಾಕೆಂದರೆ ಗಾಂಧಿ ತನ್ನ ಬದುಕನ್ನೇ ‘ಸತ್ಯದೊಂದಿಗಿನ ಪ್ರಯೋಗ’ ಎಂದವರು. ‘ದೇವರನ್ನು ಸತ್ಯವೆನ್ನದೆ, ಸತ್ಯವನ್ನೇ ದೇವರು’ ಎಂದವರು. ಪೊಳ್ಳು ಪುರಾಣವನ್ನು ನಂಬಿ ನಿಜ ಹರಿಶ್ಚಂದ್ರನಾದ ಗಾರುಡಿಯವರು. ಈ ಪ್ರಶ್ನೆ ಮತ್ತು ಉತ್ತರಗಳು ಏನೇ ಇರಲಿ, ಗಾಂಧಿ ಮೇಲಿನ ಪ್ರೀತಿಯ ಉಬ್ಬರದಲ್ಲಿ ಕಿಮ್ಮನೆಯವರು ಪರೋಕ್ಷವಾಗಿ ಪ್ರಾಥಮಿಕಶಾಲೆಯ ಶಿಕ್ಷಕರ ಮೆದುಳಿಂದ ಗಾಂಧೀ ಗುರುತು ಖಾಲಿಯಾದುದನ್ನು ತೋರಲು ಮಾಧ್ಯಮಗಳಿಗೆ ಅನುವು ಮಾಡಿಕೊಟ್ಟರೆಂಬುದು ಸುಳ್ಳಲ್ಲ. ಗಾಂಧಿ ಇದ್ದಿದ್ದರೆ ನಾಥೂರಾಮನ ಗುಂಡಿಗೆ ನರಳಿದಂತೆ ಇನ್ನೊಮ್ಮೆ ಖಂಡಿತವಾಗಿಯೂ ನರಳುತ್ತಿದ್ದರು. ಯಾಕೆಂದರೆ ಆತ ಮಹಾತ್ಮನಲ್ಲವೆ?

ಗಾಂಧಿ ಹುಟ್ಟಿದ ಕುಂಡಲಿಗಿಂತ ಗಾಂಧಿ ಎಂದರೇನು? ಕ್ವಿಝ್ ನ ಸರಕಾಗಿಯೋ, 200px-MKGandhi[1]ಸಂತನಾಗಿಯೋ, ದೇಶವನ್ನು ಒಡೆದ ಅಪರಾಧಿಯಾಗಿಯೋ ತುಂಡಾಗಿಸಿಕೊಂಡು ಬಳಕೆಗೆ ದಕ್ಕಿಸಿಕೊಳ್ಳುತ್ತಲೇ ಬಂದ ಈ ಗಾಂಧಿ ಎಂಬ ಗುರುತು ಮತ್ತೆ ಮತ್ತೆ ನಮ್ಮನ್ನು ಯಾಕಾದರೂ ಕಾಡುತ್ತದೆ? ಇದು ಕೇವಲ ಭಾರತೀಯರಿಗಷ್ಟೇ ಎದುರಾಗಬಹುದಾದ ಪ್ರಶ್ನೆಯಲ್ಲ. ಜಗತ್ತಿಗೆ ಎದುರಾಗಬಹುದಾದ ಪ್ರಶ್ನೆ. ಯಾಕೆಂದರೆ, ನೆಟಾಲಿನ ರಾಜಧಾನಿಯಾದ ಮೆರಿಟ್ಸ್ ಬರ್ಗ್ ನಲ್ಲಿ  ರೈಲ್ವೇ ಪ್ಲಾಟ್ ಫಾರಂನಲ್ಲಿ ಚಲ್ಲಾಪಿಲ್ಲಿಯಾದ ಹಾಸಿಗೆ ಪೆಟ್ಟಿಗೆ ಕಾಗದಗಳ ನಡುವೆ!! (ಸವಿತಾ ನಾಗಭೂಷಣ, ಸಕಾಲ ಅಕ್ಟೋಬರ್2007, ಪು.29) ಹುಟ್ಟಿದ ಈ ಗಾಂಧಿ ಮತ್ತೆ ಸಾಯಲೇ ಇಲ್ಲ!? ಆದರೆ ಹೀಗೆ, “ಒಂದೆ ಹಿಡಿಮೂಳೆ ಚಕ್ಕಳ: ಅದಕೆ ಸುರಿ ಮೂರುನಾಲ್ಕೋ ಚಮಚ ರಕ್ತ-ಮಾಂಸ-ಜೊತೆಗಿರಿಸು ಪಾಪಮಂ ನೆರೆತೊರೆದ ಕಡಲಿನಾಳದ ಮನಸ, ನೆರೆಬಂದ ಕಡಲಿನೊಲು ಪ್ರೇಮಮಂ ತುಂಬಿದೆದೆಯ, ಹಚ್ಚು- ಮೊರಕಿವಿಯೆರಡ; ಎರಡು ಪಿಳಿ ಪಿಳಿ ಕಣ್ಣ, ಹಾಲು ಹಸುಳೆಯ ಮಂದಹಾಸವನು ಲೇಪಿಸದಕೆ, ……… ಚಿಂದಿಯಂ ಸುತ್ತಿ, ಸೆಳೆಬೊಂಬಿನಾಲಂಬನವನಿತ್ತು ಬಡಿಸು ತಾ! ಅವನೆ ಕಾಣ್! ಲೋಕತಾರಕ! ನಮ್ಮ ಬಾಪೂ!” (ಟಿ.ಪಿ.ಕೈಲಾಸಂ, ಸಕಾಲ, ಅಕ್ಟೋಬರ್2007, ಪು.5) ಎಂದು ಬೇಕಾದಂತೆಲ್ಲಾ ರೇಖೆಯೆಳೆದು ಕಟ್ಟಿಕೊಳ್ಳಬಲ್ಲ ಸರಿಯಲಾರದ ಸಂತನಾಗಿ ಗಾಂಧಿ ನಮ್ಮೊಳಗೆ ಉಳಿದುದಾದರೂ ಹೇಗೆ? ರಕ್ತಮಾಂಸದ ಈ ರೂಹು ಮಾನವಪ್ರಪಂಚದಲ್ಲಿ ನಡೆದಾಡಿತ್ತೇ ಎಂಬ ವಿಜ್ಞಾನಿ ಐನ್ಸ್ ಸ್ಟಿನ್ ಉದ್ಘಾರಕ್ಕೆ ಕಾರಣವಾದ ನಿಜ ಅದ್ಭುತವೊಂದು ನಮ್ಮ ನಡುವೆಯೇ ಬಾಳಿ ಮತ್ತೀಗ ಬದುಕುತ್ತಲೇ ಉಳಿದ ಸೋಜಿಗವಾದರೂ ಹೇಗೆ ಸಾಧ್ಯವಾಯಿತು? ಕೇವಲ ಅಚ್ಚರಿ, ಅಮೂರ್ತವಷ್ಟೇ ಆಗದೆ, ಅದನ್ನೂ ಮೀರಿ ಮೂರ್ತವೂ ಮನಸ್ಸಾಕ್ಷಿಯ ಭಾಗವೂ ಆದ ನಿಜದ ಹರಿಶ್ಚಂದ್ರನಾಗಿ ಬದುಕಿ ಬಿಟ್ಟುಹೋದ ಕುರುಹುಗಳ ಸಮುಚ್ಚಯವಾದುದು ಹೇಗೆ? ಎದೆಯಾಳದ ತಂಪಿಗೆ ಕೆಂಪಾಗಿ ಕುದುರಲಾಗದೆ ಮುದಿಯೆದೆಯನ್ನು ಸುಟ್ಟು ತೂರಿದ ಆ ಬಿಸಿಗುಂಡು ಇಂದಿಗೂ ಅಸಹಾಯಕತೆಯಲ್ಲಿ ಈ ಸತ್ಯದ ಸಮಾಧಿಯೆದುರು ಯಾಕೆ ಸಲಾಮುಹಾಕಿ ಸೋಲು ಒಪ್ಪಿಕೊಳ್ಳುತ್ತಿದೆ? ನಿಜಕ್ಕೂ ಗಾಂಧಿ ಒಂದು ಪ್ರಶ್ನೆ. ಅದೊಂದು ಉತ್ತರವಲ್ಲ.

ಗಾಂಧಿ ಜಗತ್ತಿಗೊಂದು ರೋಮಾಂಚನ ಎಂಬುದು ನಿಜ. ಆದರೆ ಅದು ಭಾರತದ ಮಣ್ಣಿಗೆ ಸಹಜವೇ. ಯಾಕೆಂದರೆ ಇದು ಬುದ್ಧ, ಬಸವ, ಜ್ಯೋತಿಬಾಪುಲೆ, ಅಂಬೇಡ್ಕರ್ ಅವರುಗಳನ್ನು ಹೆತ್ತ ಮಣ್ಣು. ಈ ಮಣ್ಣಿನ ಸಹಜ ಪ್ರಸವದ ಕುಡಿ ಗಾಂಧಿ. ಮನಸಾಕ್ಷಿಯಿಲ್ಲದ ವಂಚನೆಯ ಹುಲುಸಂತಾನದ ಸಾಲು ಸಾಲು ಓಳಿಯ ನಡುವೆ ಈ ನೆಲ ಹೆತ್ತ ದೀಪದ ಬುಡ್ಡಿಗಳಿವು. ಅದರಲ್ಲಿ ಗಾಂಧಿಯಾದರೋ ಬಂದ ಬಂದವರಿಗೆಲ್ಲಾ ಕೊಟ್ಟು ಚಲ್ಲಿ ಸೂಸುವ ತನ್ನ ಮುಗುಳ್ನಗೆಯಂತೆ ಕಾಲಕಾಲಕ್ಕೆ ಲೋಕಕ್ಕೆ ಹೇಳಬೇಕಾದುದನ್ನು ದಾಖಲಿಸುತ್ತಾ ಹೋದವರು. ಕಾಲಕಾಲಕ್ಕೆ ತನ್ನನ್ನೊಡ್ಡಿಕೊಂಡ ಸತ್ಯದ ಶೋಧದಲ್ಲಿ ಕಂಡುದಕ್ಕೆ ಅನುಸಾರವಾಗಿ ಪರಿವರ್ತಿತವಾಗುತ್ತಾ ಹೋದವರು. ತಾನು ಹೇಳಿದ್ದನ್ನೇ ಬದುಕಲೆತ್ನಿಸಿದವರು. ಬದುಕಲಾರದ್ದನ್ನು ಹೇಳುವಲ್ಲಿ ಅಳುಕಿದವರು. ಪರಮ ಧಾರ್ಮಿಕನಾದ ಗಾಂಧಿ ಧರ್ಮವನ್ನು ಯಾವುದೇ ನಿರ್ದಿಷ್ಟ ಮತಕ್ಕೆ ಸಮವೆಂದು ಪರಿಗಣಿಸಿದವರಲ್ಲ. ಹಾಗಾಗಿ ಅವರಿಗೆ ಏಕಕಾಲದಲ್ಲಿ ಹಿಂದುವೂ, ಮುಸ್ಲಿಮನೂ, ಪಾರಸಿಯೂ, ಕ್ರಿಶ್ಚಿಯನನೂ ಆಗುವುದು ಅಸಾಧ್ಯವೆನಿಸಲೇ ಇಲ್ಲ. ಹೀಗೆ ಕ್ರಿಯಾಶೀಲತೆ ಮತ್ತು ಪ್ರತಿರೋಧದ ಚಿರಂತನ ರೂಪಕದಂತೆ ಉಳಿದು ಹೋದ ಗಾಂಧಿಯನ್ನೇ ತನ್ನೊಳಗೆ ಆವಾಹಿಸಿಕೊಂಡ ‘ಸೆಲೆಕ್ಟೆಡ್ ರೈಟಿಂಗ್ಸ್ ಆಫ್ ಮಹಾತ್ಮಾಗಾಂಧಿ’ ಪುಸ್ತಕದ ಸಂಪಾದಕ ರೋನಾಲ್ಡ್ ಡಂಕನ್, ತಾಜ್ ಮಹಲನ್ನು ನೋಡಬಂದವರು ಅಪ್ಪಿತಪ್ಪಿಯೂ ನೋಡದ ನಿಜವಾದ ಭಾರತವನ್ನು ಗಾಂಧೀ ತನಗೆ ಪರಿಚಯಿಸಿದ ಬಗೆಯನ್ನು ಕುರಿತು ಬರೆದ ವಿವರಗಳಂತೂ ಗಾಂಧಿಯೊಳಗಿನ ತಾಯ್ತನದ ಮಹಾರೂಪಕವನ್ನೇ ಕಟ್ಟಿಕೊಟ್ಟಂತಿದೆ (ವಿವರಗಳಿಗೆ 26-1-14ರ ಪ್ರಜಾವಾಣಿ ಸಾಪ್ತಾಹಿಕದ ಪು.2ನ್ನು ನೋಡಿ). ಹೀಗಾಗಿಯೇ ಗಾಂಧಿಯನ್ನು ಕುರಿತು ಬರೆಯುತ್ತಾ, “ಗಾಂಧೀ ಪ್ರಭೆ ಇರುವುದು ಅವರೊಬ್ಬ ಸಿದ್ಧಾಂತಿ ಎಂಬುದರಲ್ಲಿ ಅಲ್ಲ. ಅವರ ಪ್ರಶ್ನೆಬೋಧೆಗಳಲ್ಲಿ ಅಲ್ಲ. ನುಸಿ ಗುಳಿಗೆಗಳ ಮಧ್ಯೆ ಮ್ಯೂಸಿಯಂನಲ್ಲಿ ಸಂರಕ್ಷಿಸಿ ಇಟ್ಟ ಚಿಂತನೆಗಳಲ್ಲೂ ಅಲ್ಲ. ಯಾವೊತ್ತೂ ಗಾಂಧಿ ಒಂದು ಪ್ರಕ್ರಿಯೆ. ಒಂದು ಪ್ರಯೋಗ. ರಂಗದ ಒಂದು ತುಣುಕು, ಶಾಶ್ವತ ಚರ್ಚೆಯ ಒಂದು ಭಾಗ……..ಗಾಂಧಿ ಒಂದು ಪ್ರಭುತ್ವ ಅಲ್ಲ. ನೈತಿಕತೆ ಹಾಗೂ ರಾಜಕೀಯದ ನಡುವೆ ಹೊಸ ಸಂಬಂಧವನ್ನು ಕಲ್ಪಿಸುವ ಶಾಶ್ವತ ಪ್ರಕ್ರಿಯೆ” (26-1-14ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ಪು.1) ಎಂದೆನ್ನುವ ಶಿವವಿಶ್ವನಾಥನ್ ಅವರ ಮಾತಿಗೊಂದು ವಿಶೇಷ ಅರ್ಥವಿದೆ. ಈ ಪ್ರಕ್ರಿಯಾತ್ಮಕ ಗುಣದಿಂದಾಗಿಯೇ ಗಾಂಧಿಯ ಬದುಕಿಗೊಂದು ಚೌಕಟ್ಟು ಹಾಕುವುದು ಅಸಾಧ್ಯವೂ ಆಗಿದೆ. ಈ ಮಾತು ಗಾಂಧಿ ಹುಡುಕುತ್ತಾ ಹೋದ ಸತ್ಯದ ಬಗೆಗೂ, ಸ್ವಾತಂತ್ರ್ಯದ ಬಗೆಗೂ ಅನ್ವಯವಾಗುತ್ತದೆ ಎಂಬುದನ್ನು ಮರೆಯಬಾರದು.

ಗಾಂಧಿ ನೋಡಲೆಷ್ಟು ಸರಳವೋ ಅಷ್ಟೇ ನಿಷ್ಟುರಿ. ಆದರೆ ಡಿ.ಆರ್.ನಾಗರಾಜ ಅವರು ಗುರುತಿಸುವಂತೆ, mahatma_gandhi_artworkಗಾಂಧಿ ಎಂದೂ ವೀರ್ಯವತ್ತಾದ ಪರಿಭಾಷೆಯಲ್ಲಿ ಮಾತನಾಡಲಿಲ್ಲ (ಸಾಹಿತ್ಯಕಥನ, ಪು.258). ‘ಹೆಣ್ಣಿಗತನ’ವನ್ನು ಅಪಮಾನವಾಗಿ ಕಾಣದ ಈ ಅರ್ಧನಾರೀಶ್ವರ ಪ್ರತಿಮೆ ಹೇಡಿತನದ ರೂಪಕವೂ ಅಲ್ಲ. ಈ ಸತ್ವದಿಂದಾಗಿಯೇ ಅವರು ಹೇಡಿಗಳಿಗೆ ಸಾಧ್ಯವಿರದ ‘ಅಹಿಂಸೆ’ಯೆಂಬ ನಿಷ್ಠುರ ಆಯುಧವನ್ನು ಬಳಸಿದವರು. ಇಂತಹ ಗಾಂಧಿ ರೂಪುಗೊಂಡುದು ಎಲ್ಲಿ? ಈ ಪ್ರಶ್ನೆಯ ಉತ್ತರ ಮಾನವಸಂಸ್ಕೃತಿಯ ಆಳಕ್ಕೊಯ್ಯುತ್ತದೆ. ಆಗಂತುಕವಾದ ಕ್ವಿಝ್ ನ ಮೂಲಕ ತೂರಿಬಂದ ಗಾಂಧಿಯನ್ನು ಗಾಂಧೀ ಪ್ರಸ್ತಾಪವೇ ಇರದ ಇನ್ನೊಂದು ಕ್ವಿಝ್ ನ ಮೂಲಕವೇ ವಿವರಿಸಿಕೊಳ್ಳಬಹುದೋ ಏನೋ? ಅದು ಗಿಳಿಪಾಠದ ಕ್ವಿಝ್ ಅಲ್ಲ. ಅಕ್ಷರವೆಂಬ ಬ್ರಾಂತಿಯಲ್ಲಿ ಹುಟ್ಟಿದ್ದೂ ಅಲ್ಲ. ಆದರೆ ಅದು ಮಾನವಸಮಾಜವನ್ನು ನಾಗರಿಕಗೊಳಿಸುವ ಮಹತ್ ಶಕ್ತಿಯಾಗಿ ಗಾಂಧೀ ಕಂಡುಕೊಂಡ ಹೆಣ್ತನದ ಮಾದರಿಗೆ ಸಂಬಂಧಿಸಿದ್ದು. ಆಕೆಯಾದರೋ ಕೈಗೆ ನೂರರ ನೋಟಿಟ್ಟರೆ “ಇದನ್ ನಾನೇನ್ ಮಾಡ್ಲೀ” ಎಂಬಷ್ಟೂ ಎತ್ತರದವಳು. ಗಾಂಧಿ ಅಗತ್ಯಕ್ಕಿಂತ ಹೆಚ್ಚನದನ್ನು ಕಳ್ಳತನಕ್ಕೆ ಸಮವೆಂದರೆ, ಆಕೆ ಹಣದ ಅಗತ್ಯವೇ ಇಲ್ಲದೆ ಬದುಕು ಕಂಡವಳು! (ಕೃಷ್ನಮೂರ್ತಿ ಹನೂರರು ಹೇಳಿದ ಸಿರಿಯಜ್ಜಿಯ ಮಾಹಿತಿಗಳಿವು). ಈಗ ಹೇಳಹೊರಟಿರುವುದು ನೂರರ ತುಂಬು ಬದುಕು ಬದುಕಿದ ಈ ಜಾನಪದದ ಸಿರಿಯಜ್ಜಿ ನಡೆಸಿದ ಕ್ವಿಝ್! ಯಾವ ಮಾಧ್ಯಮಗಳೂ ಅದನ್ನು ಹೊತ್ತು ಮೆರೆಸಲಿಲ್ಲವೆಂಬುದು ಬೇರೆಮಾತು.

ಜಾನಪದಶ್ರೀ ಪ್ರಶಸ್ತಿ ಸಂದಾಯದ ಸಂದರ್ಭದಲ್ಲಿ ಸಿರಿಯಜ್ಜಿ ಮುಖ್ಯಮಂತ್ರಿ ಜೊತೆಗೆ ನಡೆಸಿದ ಸಂಭಾಷಣೆಯ ತುಣುಕನ್ನೇ ನಾನಿಲ್ಲಿ ಕ್ವಿಝ್ ಎಂದಿದ್ದೇನೆ ಅಷ್ಟೆ. ಜಾನಪದ ಸಂಶೋಧಕ ಡಾ.ಕೃಷ್ಣಮೂರ್ತಿ ಹನೂರ ಅವರು ನೆನಪಿಸಿಕೊಂಡಂತೆ ಅಲ್ಲಿ ನಡೆದುದಿಷ್ಟು. ತನಗೆ ಘೋಷಿತವಾದ ಪ್ರಶಸ್ತಿ ನೀಡುವ ವೇದಿಕೆಯಲ್ಲಿ ವ್ಯವಸ್ಥಾಪಕರು ಕೂರಿಸಿದಂತೆ ಅಜ್ಜಿ ಕೂತಿದ್ದರು. ಮುಖ್ಯಮಂತ್ರಿ ಬಂದಾಕ್ಷಣ ವೇದಿಕೆಯಲ್ಲಿದ್ದವರೆಲ್ಲಾ ಎದ್ದು ನಿಂತರು. ಆದರೆ ಅಜ್ಜಿಗೆ ನಿಲ್ಲುವಂತೆ ಪಿಸುಗುಟ್ಟಿದ ಹನೂರರಿಗೆ ಯಾಕೆ ನಿಲ್ಲಬೇಕು? ಎಂದು ಮರುಪ್ರಶ್ನೆ ಹಾಕಿ ಅಜ್ಜಿ ಸುಮ್ಮನೆ ಕೂತೇ ಇತ್ತು. ನಾಡಿನ ಅಧಿಕಾರದ ದೊಡ್ಡ ಗುರುತೇ ಬಂದು ಎದುರು ನಿಂತಾಗಲೂ ಏನೂ ಆಗದವಳಂತೆ ಕುಳಿತೇ ಇತ್ತು! ಅಷ್ಟೇ ಅಲ್ಲ ಮುಖ್ಯಮಂತ್ರಿಯನ್ನು ತನಗೆ ಪರಿಚಯಿಸುತ್ತಿರುವ ಹೊತ್ತು ತನ್ನೆದುರಿನ ಆ ಗಂಡುಜೀವವನ್ನು ನಿರ್ಭಾವುಕವಾಗಿ ನೋಡಿ, “ಯಾರಪ್ಪಾ ನೀನು?” ಎಂದು ಪ್ರಶ್ನಿಸುತ್ತದೆ! ಹುಷಾರಾದ ಮುಖ್ಯಮಂತ್ರಿ ನಿನ್ನ ಮಗ ಕಾಣಜ್ಜಿ ಎಂದು ಉತ್ತರಿಸುತ್ತಾರೆ. ಅದಕ್ಕೆ ಪ್ರತಿಯಾಗಿ, “ನಿನ್ನ ಹೆಂಡ್ರು ಮಕ್ಕಳೆಲ್ಲಾ ಸಂದಾಗಿದ್ದಾರೇನಪಾ?” ಎಂಬುದು ಸಿರಿಯಜ್ಜಿಯ ಇನ್ನೊಂದು ಪ್ರಶ್ನೆ. ಅದಕ್ಕೆ ಮುಖ್ಯಮಂತ್ರಿ “ಹೂಂ ಕಾಣಜ್ಜಿ” ಎಂದು ಉತ್ತರಿಸುತ್ತಾರೆ. ಇದೊಂದು ಅಪರೂಪದ ಕ್ವಿಝ್. ಇಲ್ಲಿರುವುದು ಎಲ್ಲ ಅಧಿಕಾರ, ಅಂತಸ್ತನ್ನೂ ದಾಟಿನಿಂತ ಸಾತ್ವಿಕತೆಗೆ ಸಾಧ್ಯವಾಗುವ ವಿವೇಕ ಮತ್ತು ಧೈರ್ಯ. ಕುರುಹುಗಳಿಗೆ ಲೇಶಮಾತ್ರವೂ ಬೆಲೆಕೊಡದ ಬುದ್ಧಪ್ರಜ್ಞೆಗಷ್ಟೇ ಸಾಧ್ಯವಾಗುವ ಜೀವಕರುಣೆ. ಪ್ರಾಯಶಃ ಗಾಂಧೀ ಒಳಗೆ ಜನಸಮುದಾಯದ ಈ ವಿವೇಕ ಮತ್ತು ಸಾತ್ವಿಕ ಧೈರ್ಯದ ಒಂದು ಪಾಲು ಮಡುಗಟ್ಟಿಕೊಂಡಿದ್ದರಿಂದಲೋ ಏನೋ ಅದಕ್ಕೆ ನೆಲದ ಮೇಲಿನ ರಕ್ತಮಾಂಸದ ಅದ್ಭುತವಾಗಲು ಸಾಧ್ಯವಾಯಿತು. ಗಾಂಧಿ ಸಿನಿಮಾ ನೋಡಿ “ಸಾಯಲು ಮಾನಸಿಕವಾಗಿ ದೃಢವಾಗಿ ಸಿದ್ಧನಾದವನು ಮಾತ್ರ ಗಾಂಧಿಯಾಗಬಲ್ಲ ” (ಎದೆಗೆ ಬಿದ್ದ ಅಕ್ಷರ, ಪು.292) ಎಂಬ ದೇವನೂರ ಮಹಾದೇವರ ಉದ್ಗಾರವು ಈ ಅರ್ಥದಲ್ಲಿ ಸಕಾರಣವಾದುದು. ಅದು ಸಮುದಾಯದ ವಿವೇಕದ ಕೆನೆ. ಪ್ರಾಯಶಃ ಗಾಂಧಿ ಕುರಿತ ಕ್ವಿಝ್ ಮಾಡಿದೋರು ಮತ್ತು ಅದನ್ನು ಹೊತ್ತು ಊರೆಲ್ಲಾ ಮೆರೆಸಿದವರು ಗಾಂಧಿಯೆಂಬ ಗಾರುಡಿಯನ್ನು ರೂಪುಗೊಳಿಸಿದ ಜನವಿವೇಕವನ್ನು ಒಂದಿಷ್ಟು ಇಣುಕಿ ನೋಡುವುದು ಒಳ್ಳೆಯದು. ಅದು ಅಧಿಕಾರವನ್ನೂ ಕೇಡಾಗಿಯೇ ಪರಿಭಾವಿಸುತ್ತದೆ. ಹಾಗಾಗಿ ಮಿಕ್ಕವರು ಸ್ವಾತಂತ್ರ್ಯದ ರುಚಿ ಸವಿಯುತ್ತಾ ಕೆಂಪುಕೋಟೆಯ ಮೇಲೆ ದ್ವಜಹಾರಿಸುವ ಧಾವಂತದಲ್ಲಿದ್ದರೆ, ಗಾಂಧಿಗೆ ಕೋಮುದಳ್ಳುರಿಗೆ ತುತ್ತಾದ ಕಲ್ಕತ್ತಾದ ಬೀದಿಗಳ ಬೆಂಕಿ ಆರಿಸುವುದು ಮುಖ್ಯವಾಗುತ್ತದೆ. ಹೆಂಡಿರು ಮಕ್ಕಳಿಂದ ಕೂಡಿದ ಸುತ್ತಣ ಸಂಸಾರಗಳನ್ನು ಸುಖವಾಗಿಡುವುದು ಆದ್ಯತೆಯಾಗುತ್ತದೆ.

ಆದರೆ ಗಾಂಧಿಯನ್ನು ಪ್ರಶ್ನೆಯಾಗಿಸಿಕೊಂಡು ಹುಡುಕಬೇಕಾದ ನಮಗೆ ಅವರ ಚಿಂತನೆಗಳು ಪ್ರಶ್ನೆಗೆ ಹೊರತಾಗಬೇಕಿಲ್ಲ. ಗಾಂಧಿ ಚಿಂತನೆಯ ಮಿತಿಗಳನ್ನು ನಾವು ಮುಸುಕುಹಾಕಿ ಮರೆಮಾಡಬೇಕಿಲ್ಲ. ಮುಖ್ಯವಾಗಿ ‘ಅಸ್ಪೃಶ್ಯತೆಯನ್ನು ಹಿಂದೂ ಧರ್ಮದ ಪಾಪ’ವೆಂದು ಘೋಷಿಸಿದ ಗಾಂಧಿಯನ್ನು ಅಂಬೇಡ್ಕರ್ ಯಾಕೆ ಅನುಮಾನಿಸಿದರು ಎಂಬುದನ್ನು ನಾವು ಕೆದಕಿ ಕೇಳಿಕೊಳ್ಳುವುದೂ ತಪ್ಪಲ್ಲ. ಅಸ್ಪಶ್ಯರೋ, ಮಹಿಳೆಯರೋ ಇಂದು ಪಡೆದ ಅಲ್ಪ ಬಿಡುಗಡೆಯ ಹಿಂದೆ ಇರುವುದು ಗಾಂಧೀ ಚಿಂತನೆಯೋ, ಸಂವಿಧಾನವೋ ಎನ್ನುವುದನ್ನು ನಾವು ಪ್ರಾಂಜಲವಾಗಿಯೇ ಪ್ರಶ್ನಿಸಿಕೊಳ್ಳಬೇಕಿದೆ. ಯಾಕೆಂದರೆ ಗಾಂಧಿ ಮುಂದಿಟ್ಟ ಟ್ರಸ್ಟಿಶಿಪ್ ಇರಲಿ, ವಿಧವೆಯರ ಮತ್ತು ಮಹಿಳೆಯರ ಪ್ರಶ್ನೆಗೆ ಸಂಬಂಧಿಸಿದ ನಿಲುವುಗಳಿರಲಿ, ವರ್ಣಾಶ್ರಮ, ಜಾತಿಸಂಕರ ಕುರಿತ ನಿಲುವುಗಳಿರಲಿ, ಈ ದೇಶದ ಶತಮಾನಗಳ ಇತಿಹಾಸದ ಸಾಂಸ್ಕೃತಿಕ ಕೇಡುಗಳಿಗೆ ಅಹಿತವಾದವುಗಳು ಅಲ್ಲವೆಂಬುದನ್ನು ನಾವು ಗಮನಿಸಬೇಕಾಗಿದೆ. ಗಾಂಧಿಯನ್ನು ಸಂತನನ್ನಾಗಿಸಲು, ಮೇಕಿಂಗ್ ಮಹಾತ್ಮಕ್ಕೆ ಬೇಕಾದಷ್ಟು ಸ್ಟಫ್ ಆ ಸಣಕಲು ಶರೀರದೊಳಗೇ ಇರುವಂತೆ ಚರಿತ್ರೆಯೂ ಅಪಾರ ಕರುಣೆತೋರಿದೆ. ಆದರೆ ಗಾಂಧಿಯನ್ನು ಸಂತನನ್ನಾಗಿ ಮೂರ್ತೀಕರಿಸಿ ಆ ಚಿಂತನೆಯ ನೆರಳಿನಡಿಗೆ ನಿರಾಳವಾಗುವ ಕೇಡುಗಳನ್ನು ಮರೆತೆವೆಂದರೆ ನಾವು ವಾತಾಪಿಗರ್ಭದಲ್ಲಿ ಜೀರ್ಣವಾಗುವ ಅಪಾಯವಿದೆ. ಇದರ ಅರಿವು ನಮಗಿರಬೇಕು. ಅದನ್ನು ಸ್ವಯಂ ಗಾಂಧಿಯಂತಹ ಗಾಂಧಿಯೇ ತನ್ನ ಕೊನೆಗಾಲದಲ್ಲಿ ಕಂಡುಕೊಂಡಿದ್ದರೋ ಏನೋ? ಯಾಕೆಂದರೆ ವರ್ಣಾಶ್ರಮದ ಬಗೆಗಿನ ತಮ್ಮದೇ ನಿಲುವಿಗೆ ವ್ಯತಿರಿಕ್ತವಾಗಿ ಕೊನೆಗಾಲದಲ್ಲಿ ಅಂತರ್ಜಾತಿ ವಿವಾಹಕ್ಕಷ್ಟೇ ಹೋಗಲು ನಿರ್ಧರಿಸಿದ್ದರು. ಅವರಲ್ಲಿನ ಈ ಯೂಟರ್ನ್ ಗಳು, ಅವರ ಬಗೆಗೆ ಮಾತಾಡದೆ ಉಳಿದ ಸತ್ಯಗಳು ನಮಗಿಂದು ಮುಖ್ಯವಾಗಬೇಕಿದೆ.

ಗಾಂಧಿ-ಅಂಬೇಡ್ಕರ್ ಅವರುಗಳನ್ನು ಎದುರಾಳಿಗಳಾಗಿ ನಿಲ್ಲಿಸಿ, ದೇಶದ ಸಾಂಸ್ಕೃತಿಕ ಕೇಡುಗಳನ್ನು ಮುನ್ನೆಲೆಗೆ ತಂದು ವಿವರಿಸಿಕೊಳ್ಳುವ ಮೂಲಕವೇ Young_Ambedkarಇಬ್ಬರನ್ನೂ ಸಮರಸವಾಗಿ ನಾವು ಬಳಸಿಕೊಳ್ಳಬೇಕಿದೆ. ಇದಕ್ಕೆ ಗಾಂಧೀಜಿಯ ಬದುಕೂ ಇಂಬುಕೊಡುವಂತಿದೆ. ಯಾಕೆಂದರೆ ಗಾಂಧಿ ಬದುಕೇ ಒಂದು ಚಲನಶೀಲ ನಡೆ. ಅದು ಸರಿದಾರಿಯನ್ನು ಹುಡುಕಿ ತಡಕಾಡಿಕೊಂಡು ಹೊರಟಂತೆಯೇ ಇದೆ. ಸರಿದಾರಿಗೆ ತಲುಪಿದರೋ ಅನ್ನುವ ಹೊತ್ತಿಗೆ ಅವರನ್ನು ಹೊಡೆದುರುಳಿಸಲಾಗಿತ್ತು. ಅದು ಭಾರತ-ಪಾಕಿಸ್ತಾನದ ಕಾರಣಕ್ಕಾಗಿಯಷ್ಟೇ ಸಿಡಿದ ಗುಂಡಲ್ಲ. ದೇಶದ ಸಾಂಸ್ಕೃತಿಕ ಕೇಡುಗಳ ವಿರುದ್ಧವಾಗಿ ಕೊನೆಗಾಲದಲ್ಲಿ ಅವರೆತ್ತಿದ ಧ್ವನಿಹಿಚುಕಲು ಮಾಡಿದ ಯತ್ನವಾಗಿತ್ತು. ಅದನ್ನೇ ಬೇಂದ್ರೆ “ಕೊಂದರೋ ಲೋಕಕಾಶೀರ್ವಾದ ಪ್ರಾರ್ಥಿಸುವ ಸಮಯಕ್ಕೆ ಕೊಂದರು!” (ಔದುಂಬರಗಾಥೆ,ಸಂಪುಟ-1,ಪು.444) ಎಂದು ಸೂಚ್ಯವಾಗಿ ಬರೆಯುತ್ತಾರೆ. ಹೀಗೆ ಸತ್ತು ಶಕ್ತಿಯಾದ ಗಾಂಧಿಯನ್ನು ಸಂತನ ಪದವಿಯಲ್ಲಿಟ್ಟು ಮತ್ತೆ ಸಮಾಧಿ ಕಟ್ಟುವ ಬದಲು, ಕ್ವಿಝ್ ಮಾಡಿ ಗಿಳಿಪಾಠವನ್ನು ಪರೀಕ್ಷಿಸುವ ಬದಲು, ಸಮಾಧಿಯಾಳದ ಕೇಡಿನ ದರ್ಶನವನ್ನು ಮಾಡಿಕೊಳ್ಳಬೇಕಿದೆ. ಹಾಗಾಗಿ ಪುರಾಣದ ಪೊಳ್ಳು ಕಳೆದು ನಿಜದ ತಿರುಳಾದ ಗಾಂಧಿಯನ್ನು ಪಡೆಯಲು ನಾವು ಈ ನೆಲದ ಸಾಂಸ್ಕೃತಿಕ ಕೇಡುಗಳ ಜೊತೆಗೆ ಅಪ್ಪಟ ಜೀವಕರುಣೆಯ ಮುಖಾಮುಖಿಯೊಂದನ್ನು ನಡೆಸಲೇಬೇಕಿದೆ.

ಹೈದರ್ ಸಿನಿಮಾ: ಮನೆಯೊಳಗೆ ಮನೆಯೊಡೆಯನಿಲ್ಲ?


– ಬಿ. ಶ್ರೀಪಾದ ಭಟ್


 

ವಿಶಾಲ್ ಭಾರದ್ವಜ್ ನಿರ್ದೇಶಿಸಿದ ಚಿತ್ರ ಹೈದರ್ ಷೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕವನ್ನಾಧರಿಸಿದ ಹಿಂದಿ ಸಿನೆಮಾ. ಈ ಮೊದಲು ವಿಶಾಲ್ ಷೇಕ್ಸ್ ಪಿಯರ್ ನ ಮ್ಯಾಕ್ಬೆತ್ ಅನ್ನು ಆಧರಿಸಿ ಮಕ್ಬೂಲ್ ಅನ್ನು, ಒಥೆಲೋವನ್ನು ಆಧರಿಸಿ ಓಂಕಾರ ಸಿನಿಮಾವನ್ನು ನಿರ್ದೇಶಿದ್ದರು. ಇವುಗಳಲ್ಲಿ ಮಕ್ಬೂಲ್ ಚಿತ್ರವು ವಿಶಾಲ್ ಭಾರದ್ವಜ್ ನಿರ್ದೇಶಿಸಿದ ಚಿತ್ರ ಹೈದರ್ ಷೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕವನ್ನಾಧರಿಸಿದ ಹಿಂದಿ ಸಿನೆಮಾ. ಈ ಮೊದಲು ವಿಶಾಲ್ ಷೇಕ್ಸ್ ಪಿಯರ್ ನ ಮ್ಯಾಕ್ಬೆತ್ ಅನ್ನು ಆಧರಿಸಿ ಮಕ್ಬೂಲ್ ಅನ್ನು, ಒಥೆಲೋವನ್ನುHaider-1 ಆಧರಿಸಿ ಓಂಕಾರ ಸಿನಿಮಾವನ್ನು ನಿರ್ದೇಶಿದ್ದರು. ಇವುಗಳಲ್ಲಿ ಮಕ್ಬೂಲ್ ಚಿತ್ರವು ಮುಂಬೈನ ಭೂಗತ ಲೋಕವನ್ನು ಹಿನ್ನೆಲೆಯಾಗಿ ಬಳಸಿಕೊಂಡಿದ್ದರೆ ಓಂಕಾರ ಚಿತ್ರದಲ್ಲಿ ಉತ್ತರ ಪ್ರದೇಶದ ಹಸಿ ಹಸಿಯಾದ ಫ್ಯೂಡಲ್ ಗ್ರಾಮವನ್ನು ಬಳಸಿಕೊಂಡಿದ್ದರು. ಈಗ ಕಾಶ್ಮೀರದ ವ್ಯವಸ್ಥೆಯ ಹಿನ್ನಲೆಯನ್ನು (ಪೂರಾ ಕಾಶ್ಮೀರ ಖೈದಖಾನ್ ಹೈ) ಬಳಸಿಕೊಂಡು ಹೈದರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಹುಶ ಈ ಹೈದರ್ ಸಿನಿಮಾ ವಿಶಾಲ್ ಅವರ ಅರ್ಥಪೂರ್ಣವಾದ, ಅಂಥೆಟಿಕ್ ಆದ ರಾಜಕೀಯ ಸಿನಿಮಾ. ಅಪಾರ ಧೈರ್ಯವಂತಿಕೆಯನ್ನು ಪ್ರದರ್ಶಿಸಿದ ವಿಶಾಲ್ ತಮ್ಮ ಈ ನಡೆಗೆ ಸಾರ್ಥಕತೆ ಕಂಡುಕೊಂಡಿದ್ದಾರೆ. ಷೇಕ್ಸಪಿಯರ್ನ ನಾಟಕಗಳ ಹುಡಕಾಟದ ಮೂಲಕ ಇಂಡಿಯಾವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದ ವಿಶಾಲ್ ಗೆ ಈ ಹೈದರ್ ಸಿನಿಮಾ ಒಂದು ಗಮ್ಯವನ್ನು ತೋರಿಸಿದಂತಿದೆ. ವಿಶಾಲ್ ಹ್ಯಾಮ್ಲೆಟ್ ನಾಟಕವನ್ನು ಬಳಸಿಕೊಂಡು ಕಾಶ್ಮೀರ ರಾಜ್ಯದ ಭಯೋತ್ಪಾದನೆ ಮತ್ತು ಮಿಲಿಟರಿಯ ನಡುವಿನ ಹೋರಾಟದ ಅತ್ಯಂತ peak ಆದ ಕಾಲಘಟ್ಟವನ್ನು ಸಮರ್ಥವಾಗಿ ಮತ್ತು ಗುಣಾತ್ಮಕವಾಗಿ ಹೈದರ್ ಸಿನಿಮಾದ ಮೂಲಕ ನಿರೂಪಿಸಿದ್ದಾರೆ. ಬಹುಶ ಇದು ವಿಶಾಲ್ ಭಾರಧ್ವಜ್ ಅವರ ಅತ್ಯಂತ ಮಹತ್ವದ, ಅತ್ಯುತ್ತಮ ಚಿತ್ರಗಳಲ್ಲೊಂದೆನಿಸುತ್ತದೆ.

ತೊಂಬತ್ತರ ದಶಕದ ಮಧ್ಯಭಾಗದಷ್ಟೊತ್ತಿಗೆ ಕಾಶ್ಮೀರದಲ್ಲಿನ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಅವರ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಕ್ರಮೇಣ ಸರ್ಕಾರಿ ಭಯೋತ್ಪಾದನೆ ಎಂದು ಕರೆಯುವಷ್ಟು ಕ್ರೌರ್ಯದಿಂದ ಕೂಡಿತ್ತು. ಈ ಕ್ರೌರ್ಯ ಮತ್ತು ನಿರಪರಾಧಿ ಕಾಶ್ಮೀರಿಗಳ ಮೇಲಿನ ದೌರ್ಜನ್ಯವನ್ನು ವಿಶಾಲ್ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಆ ಕಾಲಘಟ್ಟದಲ್ಲಿ ಕಾಶ್ಮೀರ ಕಣಿವೆಯಲ್ಲಿನ ದಿಗಿಲು, ಪ್ರಕ್ಷುಬ್ಧತೆ ಇಡೀ ಕಣಿವೆಯ ತುಂಬಾ ಮಿಲಿಟರಿ ಸಮವಸ್ತ್ರ ಧರಿಸಿದ ಸೈನಿಕರ ತುಕಡಿಗಳು, ಸದಾ ಗುಂಡಿನ ಮಳೆ ಸುರಿಸುತ್ತಿರುವ ಬಂದೂಕು, ಹಠಾತ್ತಾಗಿ ಕಾಣೆಯಾಗುವ ಮನೆಯ ಮಕ್ಕಳು, ಈ ಸದಾ ಉರಿಯುತ್ತಿರುವ ಬೆಂಕಿಯಂತಹ ಇಡೀ ತೊಂಬತ್ತರ ದಶಕದ ಕಾಶ್ಮೀರ ಕಣಿವೆ ಹೈದರ್ ಸಿನಿಮಾಗೆ ಅತ್ಯಂತ ಸೂಕ್ತವಾಗಿ ಮತ್ತು ಸಮರ್ಥವಾದ ಚಿತ್ರಕತೆಯಾಗಿ ಒದಗಿಬಂದಿದೆ. ಹೈದರ್ನಲ್ಲಿ ಕಾಶ್ಮೀರಿಗಳ ಐಡೆಂಟಿಟಿ ಕ್ರೈಸಿಸ್ ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ ವಿಶಾಲ್. ಬಶ್ರತ್ ಪೀರ್ ಅವರೊಂದಿಗೆ ಕಥೆ, ಚಿತ್ರಕತೆ ಬರೆದಿರುವ ವಿಶಾಲ್ ಹ್ಯಾಮ್ಲೆಟ್ ಅನ್ನು ಇಲ್ಲಿ ಹೈದರ್ ಎನ್ನುವ ಕಾಶ್ಮೀರದ ವಿದ್ಯಾರ್ಥಿಯಾಗಿ ರೂಪಾಂತರಿಸಿದ್ದಾರೆ.

ಅಲೀಘಡದಲ್ಲಿ ಓದುತ್ತಿರುವ ಹೈದರ್ ತನ್ನ ತಂದೆ ಕಾಣೆಯಾಗಿರುವ ಸುದ್ದಿ ತಿಳಿದು ಮರಳಿ ಕಾಶ್ಮಿರಕ್ಕೆ ಬರುತ್ತಾನೆ. ತನ್ನ ಬಾಲ್ಯಕಾಲದ, ಯೌವ್ವನದ ಮನೆ ಇಂದು ಮಿಲಿಟರಿ ಬಾಂಬ್ ದಾಳಿಗೆ ತುತ್ತಾಗಿ ನಾಶವಾಗಿದೆ. ಭಗ್ನ ಅವಶೇಷಗಳು ಹೈದರ್ನನ್ನು ಸ್ವಾಗತಿಸುತ್ತವೆ. ಮಿಲಿಟರಿಯವರು ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿ, ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಹೈದರ್ನ ತಂದೆಯನ್ನು ಬಂಧಿಸಿರುತ್ತಾರೆ. ಆದರೆ ಮನೆಗೆ ಭೇಟಿ ಕೊಟ್ಟಾಗ ತನ್ನ ತಾಯಿ ಟಬು ( ಗಜಾಲ) ತನ್ನ ತಂದೆಯ ಸೋದರ ಕೇಯ್ ಕೇಯ್ ( ಖುರ್ರಂ) ನೊಂದಿಗೆ ಪ್ರೇಮದಲ್ಲಿ ಮುಳುಗಿರುವುದು ಕಂಡು ಹೈದರ್ ದಿಗ್ಭ್ರಮೆಗೊಳ್ಳುತ್ತಾನೆ. ನಂತರ ಕಾಣೆಯಾಗಿದ್ದ ತನ್ನ ತಂದೆ ಸತ್ತಿರುವುದು ಗೊತ್ತಾಗಿ ಅದಕ್ಕೆ ಕಾರಣರಾದವರ ವಿವರಗಳೂ ಗೊತ್ತಾಗಿ ಸಂಪೂರ್ಣ ದುಖದಲ್ಲಿ ಮುಳುಗುವ ಹೈದರ್, ಮನಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಪ್ರತೀಕಾರಕ್ಕೆ ಮುನ್ನುಗ್ಗುತ್ತಾನೆ. ಮೂಲ ನಾಟಕ ಹ್ಯಾಮ್ಲೆಟ್ನಲ್ಲಿ ಭೂತವಾಗಿ ಬಂದು ತನ್ನ ಕೊಲೆಯ ಹಿಂದಿನHaider ರಹಸ್ಯವನ್ನು ಹ್ಯಾಮ್ಲೆಟ್ಗೆ ಹೇಳುವ ಆತನ ತಂದೆಯ ಪಾತ್ರ ಹೈದರ್ ಸಿನಿಮಾದಲ್ಲಿ ಸಂದೇಶಗಳನ್ನು ಹೊತ್ತು ತರುವ ರೋಡರ್ ಪಾತ್ರವಾಗಿ ಮೂಡಿ ಬಂದಿದೆ. ಇರ್ಫಾನ್ ಖಾನ್ ಈ ರೋಡರ್ ಪಾತ್ರದಲ್ಲಿ ನಟಿಸಿದ್ದಾನೆ. ಎಂದಿನಂತೆ ಅತ್ಯುತ್ತಮ ನಟನೆ ಇರ್ಫಾನ್ ಖಾನ್ದು. ತೀರಾ ತೆಳುವಾದ, ಅನೈತಿಕ ಚಾರಿತ್ರ್ಯದ ಕ್ಲಾಡಿಯಸ್ ( ಖುರ್ರಂ) ಪಾತ್ರದಲ್ಲಿ ಅಭಿನಯಿಸಿರುವ ಕೇಯ್ ಕೇಯ್ ತನ್ನ ಧ್ವನಿ ಬದಲಾಯಿಕೊಂಡು ಸಮರ್ಥವಾಗಿ ಅಭಿನಯಿಸಿದ್ದಾನೆ. ಹ್ಯಾಮ್ಲೆಟ್ನ ಪ್ರೇಯಸಿ ಒಫೀಲಿಯಾ (ಆರ್ಶಿಯಾ) ಪಾತ್ರದಲ್ಲಿ ಅಭಿನಯಿಸಿರುವ ಶ್ರದ್ಧಾ ಕಪೂರ್ ತನ್ನ ಬೆರಗು ಹುಟ್ಟಿಸುವ, ಕಾಡುವ ಆಕರ್ಷಕ ಕಣ್ಣುಗಳ ಮೂಲಕ ಗಮನ ಸೆಳೆಯುತ್ತಾಳೆ. ಕೇಂದ್ರ ಪಾತ್ರ ಹ್ಯಾಮ್ಲೆಟ್ ( ಹೈದರ್) ಆಗಿ ಶಾಹಿದ್ ಕಪೂರ್ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾನೆ. ಮುಗ್ಧ ವಿದ್ಯಾರ್ಥಿಯಾಗಿ, ತಂದೆಯ ಪ್ರೀತಿಯ ಮಗನಾಗಿ ನಂತರ ಸನ್ನಿವೇಶಗಳ ಬಲೆಗೆ ಸಿಲುಕುತ್ತಾ ನಿಸ್ಸಹಾಯಕನಾಗಿ, ಪ್ರತೀಕಾರದ ಬೇಟೆಯಲ್ಲಿರುವ ಕುಪಿತ ಕಾಶ್ಮೀರಿ ಯುವಕನಾಗಿ ಒಂದು ಕೊಲಾಜ್ ಪಾತ್ರವಾಗಿ ನಿರ್ವಹಿಸಲು ಶಾಹಿದ್ ಕಪೂರ್ಗೆ ತಮ್ಮ ಚಿತ್ರಕತೆಯಲ್ಲಿ ವಿಫುಲ ಅವಕಾಶಗಳನ್ನು ಒದಗಿಸಿದ್ದಾರೆ ನಿರ್ದೇಶಕ ವಿಶಾಲ್.ಇದನ್ನು ಶಾಹಿದ್ ಸಮರ್ಥವಾಗಿ ಬಳಸಿಕೊಂಡಿದ್ದಾನೆ ಎಂದೇ ಹೇಳಬಹುದು. ಆದರೆ ಹ್ಯಾಮ್ಲೆಟ್ನ ಇರುವಿಕೆ, ಇಲ್ಲದಿರುವಿಕೆಯ ತಳಮಳ, ನೋವು, ಸಂಧಿಗ್ಧತೆಯನ್ನು ಆಳವಾಗಿ ಗ್ರಹಿಸಲು ನಟ ಶಾಹಿದ್ ಕಪೂರ್ ಯಶಸ್ವಿಯಾಗಿಲ್ಲವೇನೋ ಎಂದೆನಿಸುತ್ತದೆ. ಚಿತ್ತ ಸ್ವಾಸ್ಥ್ಯ ಕಳೆದುಕೊಂಡ ಹೈದರ್ನಾಗಿ ನಟಿಸಿದ ಶಾಹಿದ್ ಅದರ ಗಂಭೀರತೆಯನ್ನು ಅರಿತಂತಿಲ್ಲ. ಆ ಭಾಗದ ನಟನೆ, ಮಾಮೂಲಿ ಬಾಲಿವುಡ್ ಶೈಲಿಯ ನಟನೆಯಂತಿದೆ. ಇದಕ್ಕೆ ನಿರ್ದೇಶಕನೂ ಸಹ ಹೊಣೆ.

ಹ್ಯಾಮ್ಲ್ಲೆಟ್ ನಾಟಕದ ಜೀವಾಳವಾಗಿದ್ದ ಸ್ವಗತಗಳು ಹೈದರ್ನಲ್ಲಿ ಸಿನಿಮಾ ಭಾಷೆಯಾಗಿ, ರೂಪಕಗಳಾಗಿ ಬರುವುದೇ ಇಲ್ಲ. ಇದು ಈ ಸಿನಿಮಾದ ಮಿತಿಗಳಲ್ಲೊಂದು. ಮತ್ತು ಸಿನಿಮಾದ ಅವಧಿ ಹಾಗೂ ಆರಂಭದ ಧೀರ್ಘವಾದ ಸನ್ನಿವೇಶಗಳು ಚಿತ್ರಕತೆಯನ್ನು ಸಹ ಎಳೆದಂತೆ ಅನುಭವವಾಗುತ್ತದೆ. ಆದರೆ ಮಿಲಿಟರಿ ಬಾಂಬ್ ದಾಳಿಗೆ ತುತ್ತಾಗಿ ನಾಶವಾಗುವ ಹೈದರ್ನ ಮನೆಯ ಭಗ್ನ ಅವಶೇಷಗಳೊಂದಿಗೆ ಆರಂಭವಾಗುವ ಸಿನಿಮಾ ಕ್ಲೈಮಾಕ್ಸ್ನಲ್ಲಿ ಸ್ಮಶಾನಕ್ಕೆ ಬಂದು ಮುಟ್ಟುತ್ತದೆ. ಇಡೀ ಕತೆಯ ಸಂಕೀರ್ಣತೆಯನ್ನು ಇದು ಪರಿಣಾಮಕಾರಿಯಾಗಿ ಧ್ವನಿಸುತ್ತದೆ.

ಆದರೆ ಇಡೀ ಹೈದರ್ ಸಿನಿಮಾದ ಶಕ್ತಿ ಗರ್ಟೂಡ್  (ಗಜಾಲ) ಪಾತ್ರದಲ್ಲಿ ಅಭಿನಯಿಸಿರುವ ಟಬು. ಹೈದರ್ ಸಿನಿಮಾ belongs to Tabu. ಹೈದರ್ನ ತಾಯಿ ಗಜಾಲಳ ಪಾತ್ರದಲ್ಲಿ ಅತ್ಯಂತ ಘನತೆಯಿಂದ ಅಭಿನಯಿಸಿದ್ದಾಳೆ ಟಬು. ಆಕೆಯ ಕಣ್ಣುಗಳು ಅಚ್ಚರಿ ಹುಟ್ಟಿಸುವಷ್ಟು ನಮ್ಮನ್ನು ಕಾಡುತ್ತವೆ. ಆಕೆಯ ಗಾಂಭೀರ್ಯ ಮತ್ತು ಚಂಚಲತೆ ಇಡೀ ಚಿತ್ರವನ್ನೇ ಪೊರೆದಿರುವುದು ಮಾತ್ರ ನಿಜ. ಸಂಸಾರದಿಂದ, ಬದುಕಿನಿಂದ ಏನನ್ನೂ ನಿರೀಕ್ಷೆಯನ್ನೇ ಇಟ್ಟುಕೊಳ್ಳದ, ಆದರೆ ಒಳ ಆಕಾಂಕ್ಷೆಗಳು ವ್ಯಕ್ತಿತ್ವವನ್ನು ಮೀರಿ ಹೊರ ಬರುವಂತಹ ವೈರುಧ್ಯತೆಯ ಸನ್ನಿವೇಶಗಳಲ್ಲಿ, ಗಂಡನ ಸಾವಿಗೆ ತಾನು ನೇರ ಪಾತ್ರಧಾರಿಯಲ್ಲದಿದ್ದರೂ ಪರೋಕ್ಷವಾಗಿ ಸಹಕರಿಸಿರುವುದು ಅವಳಲ್ಲಿ ಕೀಳರಿಮೆ ಹುಟ್ಟಿಸಿದೆಯೇ ಅಥವಾ ಗಂಡನ ಸೋದರ ಖುರ್ರಂನ ಬಾಹುಗಳಲ್ಲಿ ನೆಮ್ಮದಿಯಾಗಿದ್ದಾಳೆಯೇ ಎನ್ನವಂತಹ ನಿಗೂಢ ಗಜಾಲ ಪಾತ್ರದೊಳಗೆ ಆದ್ರತೆಯನ್ನು, ಮಾರ್ದವತೆಯನ್ನು, ದಿಟ್ಟತೆಯನ್ನು ತರುವಲ್ಲಿ ಟಬು ಯಶಸ್ವಿಯಾಗಿದ್ದಾಳೆ. ಅದರಲ್ಲೂ ಈಡಿಪಸಿಸಂನ ನೆರಳುಗಳನ್ನು ಬಿತ್ತಿರುವಂತಹ ಮಗನೊಂದಿಗಿನ ಕೆಲವು ಸನ್ನಿವೇಶಗಳಲ್ಲಿ ಟಬು ನಟನೆಯ ಅದ್ಭುತ ರೂಹುಗಳನ್ನು ದಾಖಲಿಸಿದ್ದಾಳೆ. ಬಹುಶಃ ಕಳೆದ ದಶಕಗಳಲ್ಲಿ ಬಂದ ಅತ್ಯಂತ ಸಂಕೀರ್ಣವಾದ ಆದರೆ ಬೋಲ್ಡ್ ಆದ ಸ್ತ್ರೀ ಪಾತ್ರ ಈ ಗಜಾಲ. ಇದನ್ನು ಟಬು ಸಮರ್ಥವಾಗಿ ನಿಭಾಯಿಸಿದ್ದಾಳೆ.

ಕಡೆಗೆ ಹೈದರ್ ನಿರ್ದೇಶಕನ ಧೈರ್ಯವಂತಿಕೆಯನ್ನು ಕೂಡ ಪರಿಚಯಿಸುತ್ತದೆ. ಏಕೆಂದರೆ ಅತ್ಯಂತ ಸಂಕೀರ್ಣವಾದ, ಪ್ರತಿ ಸನ್ನಿವೇಶದಲ್ಲೂ ನಾಟಕೀಯತೆಯನ್ನು ಬಯಸುವಂತಹ ಹ್ಯಾಮ್ಲೆಟ್ ನಾಟಕವನ್ನು ಸಿನಿಮಾಗೆ ರೂಪಾಂತರಿಸಲು ಕೈಗೆತ್ತಿಕೊಂಡಿದ್ದಕ್ಕೆ, ಕಾಶ್ಮೀರದ ಹಿಂಸೆ, ಕೊಲೆ, ಪ್ರಕ್ಷುಬ್ಧತೆಯನ್ನು ಪಕ್ಷಪಾತವಿಲ್ಲದೆ, ದೇಶಪ್ರೇಮದ ವೈಭವೀಕರಣಕ್ಕೆ ಬಲಿಯಾಗದೆ ನೈಜವಾಗಿ ಕಟ್ಟಿಕೊಟ್ಟಿದ್ದಕ್ಕೆ ಮತ್ತು ಕಡೆಗೆ ಮೂಲ ನಾಟಕದ ಅಂತ್ಯವನ್ನು ನಿರಾಕರಿಸಿ ಪ್ರತೀಕಾರ ಮತ್ತು ಹಿಂಸೆಯ ಇರುವಿಕೆ ನಮ್ಮನ್ನು ಎಲ್ಲಿಯೂ ಕೊಂಡೊಯ್ಯುವುದಿಲ್ಲ ಅದರ ಇಲ್ಲದಿರುವಿಕೆಯೇ ನಮ್ಮ ಆಶಯ ಎಂದು ನಿರ್ಧರಿಸಿದ್ದಕ್ಕೆ.

ಇದು ಭೂಮಿಯ ಪ್ರಶ್ನೆ: ಉತ್ತರ ಕಂಡುಕೊಳ್ಳಬೇಕಾದ ಹೊಣೆ ಎಲ್ಲರದು

ಸ್ವಾಮಿ.ಎಂ

ಕೆಲವು ತಿಂಗಳುಗಳ ಹಿಂದೆ ಶಾಸಕರೊಬ್ಬರು ಆತ್ಮೀಯವಾಗಿ ಪತ್ರಕರ್ತರೊಂದಿಗೆ ಹರಟುತ್ತಿದ್ದAAP-2ರು. ಮಾತು ರಾಜಕಾರಣ ದಾಟಿ ವೈಯಕ್ತಿಕ ನೆಲೆಗೆ ಬಂತು. ರಾಜಕಾರಣಿಗಳು ಹೇಗೆ ದುಡ್ಡು ಮಾಡ್ತಾರೆ. ಹೇಗೆ ಅಧಿಕಾರಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಕೋಟ್ಯಂತರ ರೂ ಆಸ್ತಿ ಮಾಡ್ತಾರೆ ಎಂಬೆಲ್ಲಾ ವಿಚಾರಗಳು ಚರ್ಚೆಗೆ ಬಂದವು. ಆ ಹೊತ್ತಿಗೆ ಎರಡನೇ ಬಾರಿ ಶಾಸಕರಾಗಿದ್ದ ಅವರೇ ಒಪ್ಪಿಕೊಂಡಂತೆ, ಅವರ ಬಳಿ ಹತ್ತಿರ ಹತ್ತಿರ 1,500 ಕೋಟಿ ರೂಗಳಷ್ಟು ಆಸ್ತಿ ಇದೆ. ಬೆಂಗಳೂರಿನ ಹೊರವಲಯದಲ್ಲಿ ಇರುವ ಸಾಕಷ್ಟು ಭೂಮಿಯೇ ಅವರ ಪ್ರಮುಖ ಆಸ್ತಿ ಎಂದರು. ಅದೆಲ್ಲವನ್ನೂ ಅವರು ಯಾವ ಚುನಾವಣೆಯ ಸಂದರ್ಭದಲ್ಲೂ ಅಫಿಡವಿಟ್ಟಿನಲ್ಲಿ ಹೇಳಿಕೊಳ್ಳಲಿಲ್ಲ ಬಿಡಿ.

ಕಳೆದ ಹತ್ತು-ಹದಿನೈದು ವರ್ಷಗಳಿಂದೀಚೆಗೆ ರಾಜಕಾರಣಕ್ಕೆ ಪ್ರವೇಶ ಪಡೆದು ಯಶಸ್ಸು ಕಂಡ ಬಹುತೇಕರು ಬೆಂಗಳೂರಿನ ಸುತ್ತ ಮುತ್ತ ಭೂಮಿ ಮೇಲೆ ಸಾಕಷ್ಟು ಹೂಡಿಕೆ ಮಾಡಿ ಕೋಟ್ಯಾಧೀಶರಾಗಿದ್ದಾರೆ. ಪಕ್ಷ ಯಾವುದೇ ಇರಲಿ, ಅಧಿಕಾರಕ್ಕೆ ಬರುವ ಬಹುತೇಕರು ಮಾಡುತ್ತಿರುವುದು ಇದನ್ನೇ ಎನ್ನುವುದನ್ನು ತಿಳಿದುಕೊಳ್ಳಲು ಸಿಬಿಐ ತನಿಖೆ ಮಾಡಬೇಕಿಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಅವರ ಕುಟುಂಬದ ಸದಸ್ಯರು ಆರಂಭಿಸಿದ್ದು ರಿಯಲ್ ಎಸ್ಟೇಟ್ ಕಂಪನಿಗಳನ್ನು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ದೊಡ್ಡಮಟ್ಟದಲ್ಲಿ ಕೇಳಿ ಬರುತ್ತಿರುವ ಮೊದಲ ಹಗರಣ ಡಿನೋಟಿಫಿಕೇಶನ್. ಇನ್ನು ಮುಂದಿನ ದಿನಗಳಲ್ಲಿಯೂ ಇದೇ ಮುಂದುವರಿಯುತ್ತದೆ. ಆ ಮೂಲಕ ಸಕಲ ಕೋಟ್ಯಂತರ ಜೀವರಾಶಿಗಳಿಗೆ ಆಶ್ರಯ ತಾಣ ಆಗಬೇಕಾಗಿರುವ ಭೂಮಿ, ಕೆಲವೇ ಕೆಲವರ ಸ್ವತ್ತಾಗಿಬಿಡುತ್ತದೆ.

ಈಗಾಗಲೇ ಈ ನಿಟ್ಟಿನಲ್ಲಿ ಬಹುದೂರ ಕ್ರಮಿಸಿ ಆಗಿದೆ. ತಕ್ಷಣವೇ ಇಂತಹ ಆತಂಕvv-3ಕಾರಿ ಪ್ರಕ್ರಿಯೆಗೆ ತಡೆ ಒಡ್ಡಲು ಅಗತ್ಯ ಇರುವುದು ಕಟ್ಟು ನಿಟ್ಟಿನ ಕಾನೂನುಗಳದ್ದು ಹಾಗೂ ಈಗಾಗಲೇ ಅಕ್ರಮವಾಗಿ ಭೂ ಒಡೆತನ ಸಾಧಿಸಿರುವವರನ್ನು ಶಿಕ್ಷೆಗೆ ಗುರಿಪಡಿಸಿ, ಭೂಮಿಯನ್ನು ಹಿಂದಕ್ಕೆ ಪಡೆಯುವುದು. ಈ ಎರಡು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಳೆದ 29 ದಿನಗಳಿಂದ ಹೋರಾಟ ನಡೆಯುತ್ತಿದೆ.

ಜೆಡಿಎಸ್-ಬಿಜೆಪಿ ಸರಕಾರದ ಅವಧಿಯಲ್ಲಿ ಎ.ಟಿ.ರಾಮಸ್ವಾಮಿ ಜಂಟಿ ಸದನ ಸಮಿತಿಯೊಂದರ ಮುಖ್ಯಸ್ಥರಾಗಿ ಬೆಂಗಳೂರು ನಗರ ಹಾಗೂ ಹೊರವಲಯಗಳಲ್ಲಿ ನಡೆದಿರುವ ಭೂ ಕಬಳಿಕೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಆ ಸಮಿತಿ ಆಗಾಗ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಕ್ರಮಗಳನ್ನು ಖುದ್ದು ಪರಿಶೀಲಿಸುತ್ತಿತ್ತು. ಆ ವರದಿ ಅನೇಕರ ಮುಖವಾಡ ಕಳಚಿತು. ಕೇವಲ ರಾಜಕಾರಣಿಗಳಲ್ಲ, ಅಧಿಕಾರಿಗಳು, ಗೃಹ ನಿರ್ಮಾಣ ಸಹಕಾರಿ ಸಂಘಗಳ ಮುಖಂಡರು..ಅಷ್ಟೇಕೆ ಇಡೀ ದೇಶಕ್ಕೆ ನ್ಯಾಯ ಹೇಳುವ ಸ್ಥಾನದಲ್ಲಿದ್ದ ಅನೇಕರ ಅವ್ಯವಹಾರಗಳು ಹೊರಬಂದವು. ಈ ಭೂಮಿ ವಿಚಾರದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹೀಗೆ ಯಾರೂ ಪ್ರಾಮಾಣಿಕರಾಗಿ ಉಳಿದಿಲ್ಲ. ಈ ರಾಜ್ಯದ ಒಬ್ಬ ಲೋಕಾಯುಕ್ತರು ಇಂತಹದೇ ಕಾರಣಕ್ಕೆ ರಾಜೀನಾಮೆ ಕೊಟ್ಟರು. ರಾಜ್ಯವೊಂದರ ಮುಖ್ಯ ನ್ಯಾಯಾಧೀಶರಾಗಬೇಕಿದ್ದವರು, ಕೆಲವೇ ದಿನಗಳ ಹಿಂದೆ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಹುದ್ದೆ ವಹಿಸಿಕೊಂಡವರು ಕೂಡ ಈ ಭೂಮಿಯ ಆಸೆಗೆ ಬಿದ್ದು ಆರೋಪಗಳನ್ನು ಎದುರಿಸುತ್ತಿರುವವರೇ.

ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ಅಥವಾ ಸರಕಾರದ ಸಂಸ್ಥೆಗಳಿಂದ ನಿವೇಶನ ಪಡಯುವಾಗ ಅನುಸರಿಸಬೇಕಾದ ಒಂದು ನಿಯಮವಿದೆ. ಅದರಂತೆ ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈಗಾಗಲೇ ಮನೆ, ನಿವೇಶನ, ಇದ್ದವರು ಸಹಾಕಾರ ಸಂಘಗಳಿಂದಾಗಲೀ, ಸರಕಾರಿ ಸಂಸ್ಥೆಗಳಿಂದಾಗಲೀ ನಿವೇಶನ ಪಡೆಯಲು ಅರ್ಹರಲ್ಲ. ಆದರೆ, ನೂರಾರು ಸಹಕಾರಿ ಸಂಘಗಳಲ್ಲಿ ಇಂತಹ ಸಾವಿರಾರು ಅನರ್ಹರು ಅಕ್ರಮವಾಗಿ ನಿವೇಶನ ಪಡೆದಿದ್ದಾರೆ. ನಮ್ಮ ಜನಪ್ರತಿನಿಧಿಗಳೇ ಸುಳ್ಳು ಅಫಿಡವಿಟ್ಟು ಸಲ್ಲಿಸಿ ಬಿಡಿಎ ನಿವೇಶನ ಪಡೆದಿದ್ದಾರೆ. ನ್ಯಾಯಾಂಗ ಇಲಾಖೆ ಬಡಾವಣೆಯಂತಹ ಕಡೆ, ಸಹಕಾರಿ ಸಂಘದ ಸದಸ್ಯರಲ್ಲದವರೂ ಕೂಡ ದೊಡ್ಡ ದೊಡ್ಡ ನಿವೇಶನಗಳನ್ನು ಪಡೆದು ಅರ್ಹರಿಗೆ ಅನ್ಯಾಯ ಮಾಡಿದ್ದಾರೆ. ಅಷ್ಟೇ ಅಲ್ಲ ಕೆಲವು ಸಹಕಾರಿ ಸಂಘಗಳು ನಿರ್ಮಿಸಿರುವ ಲೇಔಟ್ ಗಳೇ ಸಾರಾಸಗಟಾಗಿ ಅಕ್ರಮ, ನಿಯಮಬಾಹೀರ. ಇನ್ನು ಬvv-1ಹುದೊಡ್ಡ ಮಟ್ಟದ ಅಕ್ರಮವೆಂದರೆ ಸರಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಪ್ರಭಾವಶಾಲಿಗಳು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿರುವುದು. ಇಂತಹ 20,000 ಎಕರೆಗಳಷ್ಟು ಸರಕಾರಿ ಭೂಮಿ ಪ್ರಭಾವಶಾಲಿಗಳ ಪಾಲಾಗಿರುವುದನ್ನು ಎ.ಟಿ.ರಾಮಸ್ವಾಮಿ ವರದಿ ತೋರಿಸಿದೆ.

ಈ ಹಗರಣ, ದೇಶದ ಬೇರಾವುದೇ ಭಾನಗಡಿಗಿಂತ ದೊಡ್ಡದು. ಒಂದು ಅಂದಾಜಿನಂತೆ (ತೀರಾ ಕಡಿಮೆ ಬೆಲೆಯನ್ನಿಟ್ಟು ಲೆಕ್ಕ ಹಾಕಿದರೂ) ಇಲ್ಲಿ ಖಾಸಗಿಯವರ ಪಾಲಾಗಿರುವ ಸರಕಾರಿ ಜಾಗದ ಮೌಲ್ಯ ಎರಡು ಲಕ್ಷ ಕೋಟಿ ರೂಪಾಯಿಗಳನ್ನು ದಾಟುತ್ತದೆ. ತಪ್ಪಿತಸ್ಥರನ್ನು ಶಿಕ್ಷಿಸದೇ, ಸಂಬಂಧಪಟ್ಟ ಜಮೀನನ್ನು ಹಿಂದಕ್ಕೆ ಪಡೆಯದಿದ್ದರೆ, ಈ ಮೌಲ್ಯ ಹೆಚ್ಚುತ್ತಲೇ ಹೋಗುತ್ತದೆ. ಇಂತಹ ಅಕ್ರಮಗಳನ್ನು ತಡೆಗಟ್ಟಲು ಕಾಯಿದೆ ಒಂದನ್ನು ಸರಕಾರ ಪಾಸ್ ಮಾಡಿದೆ. ಆದರೆ ಅದಕ್ಕಿನ್ನೂ ರಾಷ್ಟ್ರಪತಿಗಳ ಅನುಮೋದನೆ ಸಿಕ್ಕಿಲ್ಲ. ಬೆಂಗಳೂರಿನ ಟೌನ್ ಹಾಲ್ ಮುಂದೆ ಪ್ರತಿಭಟನೆ ಆರಂಭವಾಗಿ ಒಂದು ಹಂತಕ್ಕೆ ಬರುವ ಹೊತ್ತಿಗೆ ಸರಕಾರಕ್ಕೂ ಪರಿಣಾಮ ತಟ್ಟಿತಂದಿದೆ. ಕಾನೂನು ಸಚಿವ ಟಿ.ಬಿ.ಜಯಚಂದ್ರ ಪ್ರತಿಭಟನಾ ನಿರತರನ್ನು ಭೇಟಿಯಾಗಿ ರಾಷ್ಟ್ರಪತಿಯವರ ಅಂಗೀಕಾರಕ್ಕಾಗಿ ಪ್ರಯತ್ನಿಸುತ್ತೇನೆಂದು ಭರವಸೆ ನೀಡಿ ಹೋಗಿದ್ದಾರೆ. ಆ ಕಾನೂನು ಜಾರಿಯಾದರೆ ಭೂಕಬಳಿಕೆದಾರರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಗಳು ಸ್ಥಾಪನೆಯಾಗಿ ವಿಚಾರಣೆ ನಡೆಸುವಂತಾಗುತ್ತದೆ.

ಈ ಮಧ್ಯೆ ಹೋರಾಟ ತೀವ್ರತೆ ಪಡೆದುಕೊಳ್ಳುತ್ತಿದೆ. ಸೋಮವಾರದಿಂದ ಧರಣಿ ಜೊತೆಗೆ ಉಪವಾಸ ಸತ್ಯಾಗ್ರಹ ಕೂಡ ಆರಂಭವಾಗಿದೆ. ವರ್ತಮಾನ ಬಳಗದ ರವಿಕೃಷ್ಣಾ ರೆಡ್ಡಿ ಸೇರಿದಂತೆ ಇತರ ಆಮ್ ಆದ್ಮಿ ಪಾರ್ಟಿ ಮುಖಂಡರು ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಾಡಿನ ಎಲ್ಲಾ ಪ್ರಜ್ಞಾವಂತರು ಈ ಹೋರಾಟಕ್ಕೆ ಬೆಂಬಲ ನೀಡುವ ಅನಿವಾರ್ಯತೆ ಇದೆ. ಕಾರಣ ಮುಂದಿನ ತಲೆಮಾರುಗಳ ಒಳಿತಿನ ಪ್ರಶ್ನೆ ಈ ಹೋರಾಟದಲ್ಲಿ ಅಡಕವಾಗಿದೆ.

ಮೋದಿ ಬ್ರಾಂಡ್ : “ನಾನು ಯಜಮಾನ; ಯಜಮಾನಿಕೆ ಮಾಡುತ್ತಿದ್ದೇನೆ”


– ಬಿ. ಶ್ರೀಪಾದ ಭಟ್


ಗಾಂಧಿಯವರು ರಾಜಕಾರಣಿಗಳ ಮಧ್ಯೆ ಸಂತ, ಸಂತರ ನಡುವೆ ರಾಜಕಾರಣಿ – ಜಾರ್ಜ ಅರ್ವೆಲ್

ಗಾಂಧಿ ಕುರಿತಾಗಿ ಒಂದು ಕಡೆ ಅರ್ವೆಲ್ ಬರೆಯುತ್ತಾನೆ “ವಿಪರ್ಯಾಸವೆಂದರೆ 1869ರಲ್ಲಿ ಜನಿಸಿದ ಗಾಂಧಿಯು ಏಕಚಕ್ರಾಧಿಪತ್ಯದ ಸ್ವರೂಪವನ್ನು ಅದರ ಸಮಗ್ರ ಪ್ರಭಾವ ವಲಯವನ್ನು ಅರ್ಥ ಮಾಡಿಕೊಂಡಿರಲಿಲ್ಲ. ಗಾಂಧಿಗೆ ತನ್ನ ಸತ್ಯಾಗ್ರಹವನ್ನು ಬಳಸಿಕೊಂಡು ಜಗತ್ತನ್ನು ಎಚ್ಚರಗೊಳಿಸಲು ಹೋರಾಡುತ್ತಿದ್ದೇನೆ ಎಂಬ ಮುಗ್ಧ ನಂಬುಗೆಯಿತ್ತು.ಆದರೆ ಮುಕ್ತ ಸಮಾಜವಿಲ್ಲದ, ಮುಕ್ತ ಪ್ರಭುತ್ವವಿಲ್ಲದ, ಸರ್ವಾಧಿಕಾರದ ಆಡಳಿತ ಶೈಲಿ ಇರುವ ಕಡೆ ಗಾಂಧಿಯ ಸತ್ಯಾಗ್ರಹದ ಶೈಲಿಯ ಯಶಸ್ಸು ಅನುಮಾನಾಸ್ಪದವೇ. ಏಕೆಂದರೆ ಆಕ್ರಮಿತ ದೇಶದ ವಿರುದ್ಧದ ಹೋರಾಟಕ್ಕೂ ತಮ್ಮದೇ ಸರ್ಕಾರದ ಸರ್ವಾಧಿಕಾರಿ ಆಡಳಿತದ ವಿರುದ್ಧದ ಹೋರಾಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಏಕೆಂದರೆ ಕೃತಜ್ಞತೆ ಎನ್ನುವುದು ಸಹ ಅಂತರಾಷ್ಟ್ರೀಯ ರಾಜಕೀಯದ ಲಕ್ಷಣಗಳಲ್ಲೊಂದು.”

ಅರ್ವೆಲ್ ನ ಮೇಲಿನ ಮಾತುಗಳು ಒಂದು ಕಾಲಕ್ಕೆ ನಮ್ಮನ್ನು ತೀವ್ರ ಚಿಂತನೆಗೆ ಹಚ್ಚಿದ್ದವು. ಅನೇಕ ಬಾರಿ ಇದು ಅತಿಯಾಯ್ತೇನೋ ಎಂದೆನಿಸುತ್ತಿತ್ತು. 200px-MKGandhi[1]ಆದರೆ ಅಂಬೇಡ್ಕರ್ ಅವರೊಂದಿಗೆ ಗಾಂಧಿಯವರ ಸಂವಾದ, ಚರ್ಚೆ, ಜಗಳಗಳನ್ನು ಅಧ್ಯಯನ ಮಾಡಿದಾಗ ಅದು ನಿಜವೇನೂ ಅನ್ನಿಸುತ್ತಿತ್ತು. ಏಕೆಂದರೆ ಇಂಡಿಯಾದ ಜಾತಿ ಪದ್ಧತಿಯನ್ನು, ಇಲ್ಲಿನ ಸಾಮಾಜಿಕ ಪ್ರತ್ಯೇಕತೆ ಮತ್ತು ತಾರತಮ್ಯದಿಂದ ತಳ ಸಮುದಾಯಗಳ ಬಿಡುಗಡೆಗೆ ಗಾಂಧಿ ಮಾರ್ಗದಲ್ಲಿ ಉತ್ತರವೇ ಇರಲಿಲ್ಲ. ಅಂಬೇಡ್ಕರ್ ಅವರ ಹೋರಾಟ ಮತ್ತು ಚಿಂತನೆಗಳು ಮಾತ್ರ ಇದರ ವಿಮೋಚನೆಗೆ ಇರುವ ಮಹತ್ವದ ಮತ್ತು ಉಳಿದಿರುವ ಒಂದೇ ದಾರಿ ಎನ್ನವುದು ಇಂದು ಇಪ್ಪತ್ತೊಂದನೇ ಶತಮಾನದಲ್ಲಿ ನಮಗೆಲ್ಲ ಮತ್ತೆ ಮತ್ತೆ ಖಾತರಿಯಾಗುತ್ತಿದೆ. ಆದರೆ ಗಾಂಧಿ ಮಹಾನ್ ಪ್ರಜಾಪ್ರಭುತ್ವವಾದಿಯಾಗಿದ್ದರು. ಸದಾಕಾಲ ತಮ್ಮ ಮನಸ್ಸನ್ನು ತೆರೆದಿಟ್ಟುಕೊಳ್ಳುತ್ತಿದ್ದ ಗಾಂಧಿ ಅಂಬೇಡ್ಕರ್ ಅವರೊಂದಿಗಿನ ದಶಕಗಳ ಕಾಲ ನಡೆಸಿದ ಸಂವಾದಗಳಿಂದ ಜಾತಿ ಪದ್ಧತಿಯ ಕುರಿತಾದ ತಮ್ಮ ಸನಾತನ ನಿಲುವುಗಳಿಂದ ಕೊಂಚ ಕೊಂಚವಾಗಿ ಬಿಡುಗಡೆಗೊಂಡು ಮತ್ತಷ್ಟು ಸುಧಾರಿಸಿಕೊಳ್ಳುತ್ತಲೇ ಸಾಗಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಅರ್ವೆಲ್ ನ ಮೇಲಿನ ಮಾತುಗಳನ್ನು ಗಮನಿಸಿದಾಗ ಮುಕ್ತ ಸಮಾಜವಿಲ್ಲದ, ಮುಕ್ತ ಪ್ರಭುತ್ವವಿಲ್ಲದ, ಸರ್ವಾಧಿಕಾರದ ಆಡಳಿತ ಶೈಲಿ ಇರುವ ಕಡೆ ಗಾಂಧಿಯ ಸತ್ಯಾಗ್ರಹದ ಶೈಲಿ ಎಲ್ಲಿ ಮುಟ್ಟುತ್ತದೆ ಎಂದರೆ ನರೇಂದ್ರ ಮೋದಿಯಂತಹ ಪ್ರಜಾಪ್ರಭುತ್ವ ವಿರೋಧಿಯ ಕೈಯಲ್ಲೂ ಸರಾಗವಾಗಿ ಬಳಕೆಗೊಳ್ಳಲ್ಪಡುತ್ತದೆ. ಗಾಂಧಿಯ ಹುಟ್ಟಿದ ದಿನವನ್ನೂ ಹೈಜಾಕ್ ಮಾಡಿರುವ ಮೋದಿ ಅದನ್ನು ಸ್ಚಚ್ಛತಾ ಆಂದೋಲನದ ದಿನವನ್ನಾಗಿ ಪರಿವರ್ತಿಸಿದ್ದಾರೆ. ಇಂದು ಇಡೀ ದೇಶದ ವಿದ್ಯಾವಂತ ವರ್ಗ ಗಾಂಧಿಯನ್ನು ಮರೆತು ಮೋದಿಯ ಹೆಸರಿನಲ್ಲಿ ಈ ಸಂಪೂರ್ಣ ಮರೆಮೋಸದ, ಹುಸಿಯಾದ ಸ್ವಚ್ಛತಾ ಅಂದೋಲನದಲ್ಲಿ ತೊಡಗಿದೆ.

ಅರ್ವೆಲ್ “ಗಾಂಧಿಯವರ ‘ಮೋಸಗಾರರು ಕಡೆಗೆ ತಮ್ಮನ್ನು ತಾವೇ ಮೋಸಗೊಳಿಸಿಕೊಳ್ಳುತ್ತಾರೆ’ ಎನ್ನುವ ಸರಳೀಕೃತYoung_Ambedkar ಗ್ರಹಿಕೆ ಯಾವುದೇ ದೂರಗಾಮಿ ಪರಿಣಾಮಗಳನ್ನು, ಸಂಚಲನಗಳನ್ನು ಉಂಟುಮಾಡದಿರುವುದಕ್ಕಾಗಿ ಗಾಂಧೀಯ ಈ ತತ್ವಗಳು ಈ ಮೇಲ್ವರ್ಗಕ್ಕೆ ಅಪ್ಯಾಯಮಾನವಾಗಿದ್ದವು” ಎಂದು ಹೇಳುತ್ತಾನೆ.ಇದು ಸತ್ಯ. ಗಾಂಧಿಯವರ ಪ್ರಾಮಾಣಿಕ, ಸತ್ಯನಿಷ್ಠತೆ ಎಲ್ಲವನ್ನೂ ಕೈ ಬಿಟ್ಟ ಇಂಡಿಯಾದ ಫ್ಯಾಸಿಸ್ಟರು ಮತ್ತು ಮತೀಯವಾದಿಗಳು ಮತ್ತು ಅವರೊಂದಿಗೆ ಕೈಜೋಡಿಸಿರುವ ಇಲ್ಲಿನ ವಿದ್ಯಾವಂತ ವರ್ಗ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಗಾಂಧಿಯನ್ನು ಬಳಸಿಕೊಳ್ಳುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಗಾಂಧಿಯವರ 150ನೇ ಜನ್ಮದಿನಾಚರಣೆ ವರ್ಷ 2019ರ ವೇಳೆಗೆ ಹೆಚ್ಚೂ ಕಡಿಮೆ ಗಾಂಧಿಯನ್ನೇ ಅಪ್ರಸ್ತುತಗೊಳಿಸುವ ಒಂದು ಬೃಹತ್ ಯೋಜನೆಯ ಮೊದಲ ಹಂತವೇ ಮೋದಿಯ ಈ ಸ್ವಚ್ಛತಾ ಆಂದೋಲನ. ಅಂಬೇಡ್ಕರ್ ವಾದಿ ನಿಮ್ಗಾಡೆಯವರು ಗಾಂಧಿಯವರ ಕುರಿತಾಗಿ “ಮೇಲುಕೀಳಿನ ವರ್ಣಾಶ್ರಮವು ನಿಜವೆನ್ನುವುದಾದರೆ ನಾನು ಅಸ್ಪೃಶ್ಯನಾಗಿ ಸಾಯಲು ಬಯಸುತ್ತೇನೆ ಎಂದು ಹೇಳಿದ ಮಹಾತ್ಮ ಗಾಂಧಿಯವರು ಅಪಾರ ಧೈರ್ಯಸ್ಥರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಜಾತೀಯತೆಯನ್ನು ವಿರೋಧಿಸುತ್ತಿದ್ದ ಗಾಂಧಿಯವರು ಅದೇ ಶ್ರೇಣೀಕೃತ ಜಾತಿ ಪದ್ಧತಿಯ ಮೇಲೆ ಕಟ್ಟಲ್ಪಟ್ಟ ವರ್ಣಾಶ್ರಮವನ್ನು ಸಮರ್ಥಿಸುತ್ತಿದ್ದರು. ಬಾಬಾಸಾಹೇಬರು ಪ್ರತಿಪಾದಿಸಿದ ರಾಜಕೀಯ ಹಕ್ಕುಗಳನ್ನು ಸಾಧಿಸುವುದರ ಮೂಲಕ ಅಸ್ಪೃಶ್ಯರು ವರ್ಣಾಶ್ರಮದ ಸಂಕೋಲೆಗಳಿಂದ ವಿಮೋಚನೆಯನ್ನು ಪಡೆಯಬೇಕು ಎಂಬ ಮಾನವೀಯ ತತ್ವಕ್ಕೆ ವಿರುದ್ಧವಾಗಿ ವ್ಯಕ್ತಿಗತವಾದ ವೈಯುಕ್ತಿಕ ಸುಧಾರಣೆಯ ಮೂಲಕ ಜಾತೀಯತೆಯನ್ನು ಅಳಿಸಿ ಹಾಕಬೇಕೆಂಬ ಗಾಂಧಿಯವರ ಚಿಂತನೆ ಬಾಲಿಶವಾಗಿತ್ತು. ವಾರ್ಧಾದ ಆಶ್ರಮದಲ್ಲಿ ಬ್ರಾಹ್ಮಣನೊಬ್ಬನ ಕೈಯಲ್ಲಿ ಕಸಗುಡಿಸುವ ಮೂಲಕ ಕೆಳಜಾತಿಯವರಿಗೆ ನೋಡಿ ನಿಮ್ಮ ಕಸ ಗುಡಿಸುವ ಕೆಲಸವೂ ಶ್ರೇಷ್ಠವಾದದ್ದು ಎಂದು ಗಾಂಧಿ ಹೇಳುತ್ತಾರೆ. ಆ ಮೂಲಕ ಪರೋಕ್ಷವಾಗಿ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಾರೆ. ಆದರೆ ಬಾಬಾ ಸಾಹೇಬರು ಪ್ರತಿಪಾದಿಸುವುದು ಕಸಗುಡಿಸುವವನು ಆ ಕಾಯಕದಿಂದ ಮೇಲಕ್ಕೇರಿ ಶ್ರೇಣೀಕೃತ ವ್ಯವಸ್ಥೆಯ ಮೆಟ್ಟಿಲುಗಳ ಮೇಲಕ್ಕೇರುತ್ತ ಅತ್ಯತ್ತಮವಾದ ಹುದ್ದೆಯನ್ನು ಅಲಂಕರಿಸಬೇಕೆಂಬುದಾಗಿತ್ತು. ಇದು ಗಾಂಧಿಯವರಿಗೆ ಅರ್ಥವಾಗಲೇ ಇಲ್ಲ” ಎಂದು ಬರೆಯುತ್ತಾರೆ.

ಇಂದು ಈ ನರೇಂದ್ರ ಮೋದಿಯ ಈ ಸ್ವಚ್ಛತಾ ಅಂದೋಲನವನ್ನು ಸಹ ನಾವೂ ಈ ಹಿನ್ನೆಲೆಯಲ್ಲಿಯೇ ಅರಿಯಬೇಕಾಗಿದೆ. Manual_scavanging11-300x196[2]ಇಲ್ಲಿ ಜಾಡಮಾಲಿಗಳಿಗೆ, ಈ ಮಲ ಸ್ವಚ್ಛಗೊಳಿಸುವ ತಳ ಸಮುದಾಯಗಳಿಗೆ, ಪೌರ ಕಾರ್ಮಿಕರಿಗೆ ಈ ಅಮಾನವೀಯ ವೃತ್ತಿಯಿಂದ ವಿಮೋಚನೆ ಕೊಡಿಸಬೇಕೆನ್ನುವುದು ಈ ಸೋ ಕಾಲ್ಡ್ ಪ್ರಧಾನ ಮಂತ್ರಿಯ ಮೊದಲ ಆದ್ಯತೆಯಾಗಬೇಕಿತ್ತು. ಈ ಬಿಡುಗಡೆಯ ಕಾರ್ಯಸೂಚಿಯು ಸ್ವಚ್ಛತಾ ಆಂದೋಲನದ ಮೊದಲ ಕೆಲಸವಾಗಬೇಕಿತ್ತು. ತಳ ಸಮುದಾಯಗಳ ಬದುಕಿಗೆ ಘನತೆ ತಂದುಕೊಟ್ಟು ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲಕ್ಕೇರಲು ಅವಕಾಶಗಳನ್ನು ಕಲ್ಪಿಸಕೊಡಬೇಕೆನ್ನುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದ್ದ ನರೇಂದ್ರ ಮೋದಿಗೆ ಅಂಬೇಡ್ಕರ್ ಅವರ ಚಿಂತನೆಗಳ ಆಳವೇ ಅರಿವಿಲ್ಲ. ಅಥವಾ ಅರಿವಾದರೆ ತಮ್ಮ ಸಂಘ ಪರಿವಾರದ ಸನಾತನವಾದಕ್ಕೆ ತಿಲಾಂಜಲಿ ಕೊಡಬೇಕಾಗುವ ಸಾಧ್ಯತೆಗಳನ್ನು ಮನಗಂಡ ಮೋದಿ ಅಂಬೇಡ್ಕರ್ ಅವರನ್ನು ಮುಟ್ಟದೆ ಕಡೆಗೆ ಆಶ್ರಯಿಸಿದ್ದು ಗಾಂಧಿಯವರನ್ನು. ಆದರೆ ತಮ್ಮ ವೈಯುಕ್ತಿಕ ಜೀವನದಲ್ಲಿ ತಮ್ಮ ಪ್ರತಿಯೊಂದು ನಡೆಗೂ ನೈತಿಕ ಗೆರೆಯನ್ನು ಎಳೆದುಕೊಳ್ಳುತ್ತಿದ್ದ ಗಾಂಧಿ, ಹಿಂದೂಮುಸ್ಲಿಂರ ನಡುವಿನ ಸೌಹಾರ್ದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂತಹ ನಿಜದ ಗಾಂಧಿ ಮೋದಿ ಮತ್ತವರ ಪಟಾಲಂಗೆ ಬೇಕಾಗಿಲ್ಲ. ಸಬರಮತಿ ಆಶ್ರಮವನ್ನು ಸ್ವತಃ ತಾವೇ ಸ್ವಚ್ಛಗೊಳಿಸುತ್ತಿದ್ದ ಗಾಂಧಿ ಎನ್ನುವ ಒಂದು ತೆಳುವಾದ ಕ್ಯಾರಿಕೇಚರ್ ಅನ್ನು ಮಾತ್ರ ಹೆಕ್ಕಿಕೊಂಡು ಅದನ್ನು ಇಪ್ಪತ್ತೊಂದನೇ ಶತಮಾನದಲ್ಲಿ ಮೋದಿ ಬ್ರಾಂಡ್ ನ ಮೂಲಕ ಪ್ರಯೋಗಿಸುತ್ತಿದೆ ಆಧುನಿಕ ಇಂಡಿಯಾ.

ತನ್ನ ಜನಪ್ರಿಯತೆ ಕುಸಿಯುತ್ತಿದೆ ಎಂದು ಅರಿವಾದ ಕ್ಷಣ ಕೋಮುವಾದಕ್ಕೆ ಮೊರೆ ಹೋಗಿ ನೂರಾರು ಮುಗ್ಧ ಜನರ ಸಾವಿಗೆ ಕಾರಣವಾಗುವ ಈ ಮತೀಯವಾದಿಗಳು modi-clean-indiaಇಂದು ದ್ವೇಷ, ತಿರಸ್ಕಾರಗಳ ವಿರುದ್ಧ ಹೋರಾಡಿದ ಸೆಕ್ಯುಲರ್ ಗಾಂಧಿಯವರನ್ನು ಹೈಜಾಕ್ ಮಾಡಿಕೊಂಡು 2019ರ ವೇಳೆಗೆ ಬಾಪುವನ್ನು ಎಲ್ಲಿಗೆ ತಂದು ಮುಟ್ಟಿಸಬಹುದು ಎಂದು ನೆನೆದು ಆತಂಕವಾಗುತ್ತಿದೆ. ಈ ಸ್ವಚ್ಛತಾ ಆಂದೋಲನವೆನ್ನವುದು ಗುಪ್ತ ಕಾರ್ಯಸೂಚಿಯೊಂದನ್ನು ಪ್ರಯೋಗಾತ್ಮವಾಗಿ ಜಾರಿಗೊಳಿಸುವ ಅಜೆಂಡಾ. ಈ ಅಜೆಂಡಾಗಳನ್ನು ಅಳವಡಿಸಿಕೊಳ್ಳುವ ತಂತ್ರವಾಗಿಯೇ ಮೋದಿ ಬ್ರಾಂಡ್ ಅನ್ನು ತೇಲಿ ಬಿಡಲಾಗುತ್ತಿದೆ. ಮೋದಿಯ ಅಮೇರಿಕ ಭೇಟಿಯನ್ನು ಅತ್ಯಂತ ಜನಪ್ರಿಯವಾಗಿಸಲು ಮೊದಲು ಅಮೇರಿಕಾದಲ್ಲಿನ ಸಂಘ ಪರಿವಾರದ ಎಲ್ಲಾ ಅಂಗ ಸಂಸ್ಥೆಗಳು ಅತ್ಯಂತ ಕರಾರುವಕ್ಕಾಗಿ ಕ್ಷಿಪ್ರಗತಿಯಲ್ಲಿ ಕಾರ್ಯಪ್ರವೃತ್ತರಾಗಿ, ಅನಿವಾಸಿ ಭಾರತೀಯರನ್ನು ಸಂಘಟಿಸಿ ಅಲ್ಲಿ ಮೋದಿ ಬ್ರಾಂಡ್ ಅನ್ನು ಹುಟ್ಟಿ ಹಾಕಿದರು. ಇಂಡಿಯಾದ ಪ್ರಧಾನಮಂತ್ರಿಯೊಬ್ಬನ ವಿದೇಶಿ ಭೇಟಿ ಕೇವಲ ರಾಜತಾಂತ್ರಿಕ ಕಾರಣಗಳಿಗೆ, ರಾಜಕೀಯ ಸಂಬಂಧಗಳ ಕುರಿತಾದ ದ್ವಿಪಕ್ಷೀಯ ಮಾತುಕತೆಗೆ ಸುದ್ದಿಯಾಗಬೇಕಿತ್ತು. ಆದರೆ ಇದೆಲ್ಲವೂ ನೇಪಥ್ಯಕ್ಕೆ ಸರಿದು ಅಲ್ಲಿನ ಸಂಘ ಪರಿವಾರದ ತತ್ವಬದ್ಧ ಸಂಸ್ಥೆಗಳು ಇಂಡಿಯಾವೆಂದರೆ ಅದು ಮೋದಿ ಬ್ರಾಂಡ್ ಮಾತ್ರ ಎನ್ನುವ ಮರೀಚಿಕೆಯನ್ನು ಹುಟ್ಟು ಹಾಕಲು ಯಶಸ್ವಿಯಾದವು. ಇದು ಆರೆಸಸ್ ಅನ್ನೂ ದಂಗುಬಡಿಸಿದಂತಿದೆ. ಅದರ ಬೆನ್ನಲ್ಲೇ ಇಂಡಿಯಾದಲ್ಲಿ ಗಾಂಧಿ ಹುಟ್ಟಿದ ದಿನದಂದೇ ಬಾಪುವನ್ನು ಅಪ್ರಸ್ತುಗೊಳಿಸುತ್ತ ಮೋದಿ ಬ್ರಾಂಡ್ ಅನ್ನು ಪ್ರಸ್ತುಗೊಳಿಸುವ ಅಜೆಂಡಾವನ್ನು 2014 ಅಕ್ಟೋಬರ್ 2 ರಿಂದ ಪ್ರಾರಂಭವಾಗಿದೆ.

“ಹಸಿವಿನಿಂದ, ಬಡತನದಿಂದ ಸಾಯುವ ಪ್ರತಿಯೊಬ್ಬ ವ್ಯಕ್ತಿಯೊಬ್ಬನ ಸಾವು ದೇಶದ ಆತ್ಮಗೌರವದ, modi_ambani_tata_kamathಘನತೆಯ ಸಾವು” ಎಂದು ನಂಬಿದ್ದ ಬಾಪು “ಇಲ್ಲಿನ ಪ್ರತಿಯೊಂದು ಅವಿಷ್ಕಾರಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪದಿದ್ದರೆ ಆ ಅವಿಷ್ಕಾರವೇ ವ್ಯರ್ಥ” ಎಂದು ಹೇಳುತ್ತಿದ್ದರು. ಆದರೆ ಗಾಂದಿಯನ್ನು ಮುಟ್ಟದ ಮೋದಿ ಲಕ್ಷಾಂತರ ಬಡವರನ್ನು ಸುಲಿಯುವ ಶ್ರೀಮಂತರ, ಖಾಸಗೀಕರಣದ, ಕಾರ್ಪೋರೇಟ್ ಸಾರ್ವಭೌಮತ್ವಕ್ಕಾಗಿ ಯಾವುದೇ ರೀತಿಯ ಕ್ರೌರ್ಯವನ್ನು ಸಹಿಸಿಕೊಳ್ಳುವಂತೆ ಇಂಡಿಯಾವನ್ನು ಮಾನಸಿಕವಾಗಿ ತಯಾರು ಮಾಡುತ್ತಿರುವ ಮೋದಿ ಗುಲಾಮಗಿರಿ ದಿಕ್ಕಿಗೆ ಇಲ್ಲಿನ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ರೂಪಿಸುತ್ತಿದ್ದಾರೆ. ಮೋದಿಯ ಶ್ರೀಮಂತರ ಪರವಾದ ಅಪ್ತವಾದ ಕನಸು ಮತ್ತು ಸಂಘ ಪರಿವಾರದ ‘ಮುಸ್ಲಿಂರು, ಕ್ರೈಸ್ತರು, (ತಳ ಸಮುದಾಯಗಳು, ಆದಿವಾಸಿಗಳು) ನಮ್ಮ ಶತೃಗಳು’ ಎನ್ನುವ ಇಂಡಿಯಾ ಎರಡನ್ನೂ ಒಂದೇ ಏಟಿನಲ್ಲಿ ಸಾಧಿಸುವಂತೆ ಇಂದಿನ ಮೋದಿ ಬ್ರಾಂಡ್ ಅನ್ನು ರೂಪಿಸಲಾಗುತ್ತಿದೆ. “ನಾನು ಯಜಮಾನ; ಯಜಮಾನಿಕೆ ಮಾಡುತ್ತಿದ್ದೇನ” ಇದು ಈ ಮೋದಿ ಬ್ರಾಂಡ್ ನ ಸ್ವರೂಪ

ಆದರೆ ಆಧುನಿಕ ನಾಗರಿಕತೆಯೆಂದರೆ ಕೊಳ್ಳುಬಾಕ ಜೀವನ ಮತ್ತು ಈ ಬಗೆಯ ಅಪಾಯಕಾರಿ, ಹುಸಿಯಾದ ಬ್ರಾಂಡ್ ಗಳನ್ನು ಆರಾಧಿಸುವ ಇಲ್ಲಿನ gujarat_violence_1ವಿದ್ಯಾವಂತ ವರ್ಗ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಇಷ್ಟೊಂದು ಸರಳೀಕರಿಸುವಷ್ಟು ಅವಿದ್ಯಾವಂತರು, ಮೌಢ್ಯರಾಗಿದ್ದಾರೆಯೇ? ಆಗಿದ್ದಾರೆ. ಏಕೆಂದರೆ ಆಗಲೇ ಕಳೆದ ಐವತ್ತು ವರ್ಷಗಳಲ್ಲಿ ಇಂಡಿಯಾದ ವಿದ್ಯಾವಂತ ವರ್ಗ ಅತ್ತ ಅಂಬೇಡ್ಕರ್ ಅವರನ್ನೂ ಮುಟ್ಟಲಿಲ್ಲ, ಅಪ್ಪಿಕೊಳ್ಳಲಿಲ್ಲ. ಮತ್ತೊಂದು ಕಡೆ ಗಾಂಧಿಯನ್ನು ಒಪ್ಪಿಕೊಂಡು ಕಳೆದ ಐವತ್ತು ವರ್ಷಗಳಲ್ಲಿ ಬಾಪುವನ್ನು ನಿರಂತರವಾಗಿ ಹಾಸ್ಯಾಸ್ಪದ ವಸ್ತುವನ್ನಾಗಿರಿಸಿದ್ದಾರೆ. ಇಂದು ಹಾಸ್ಯಾಸ್ಪದಗೊಂಡ ಬಾಪುವನ್ನು ಹೈಜಾಕ್ ಮಾಡುವುದು ಈ ಮತೀಯವಾದಿಗಳಿಗೆ ಅತ್ಯಂತ ಸುಲುಭದ ಕೆಲಸ. ಈ ಬಗೆಯ ಹುಸಿಯಾದ, ಅಪಾಯಕಾರಿಯಾದ ಬ್ರಾಂಡ್ ಗಳ ಮೂಲಕ ಈ ಅಪ್ರಬುದ್ಧ ರಾಜಕೀಯ ಮಾದರಿಗಳು ಮತ್ತೇನಲ್ಲದೆ ಸ್ವಾತಂತ್ರ, ಕ್ರಿಯಾಶೀಲತೆ, ದಿಟ್ಟತೆಗಳಿಲ್ಲದ ಆಯುಧಗಳನ್ನು ಸೃಷ್ಟಿಸುತ್ತಿವೆ. ರಹಮತ್ ತರೀಕೇರೆ ಅವರು “ಈ ಆಯುಧಗಳ ಕೆಲಸವೇ ತನ್ನನ್ನು ಧಾರಣ ಮಾಡಿದವರ ಇಷ್ಟಾನಿಷ್ಟ ಪೂರೈಸುವುದು. ಆಯುಧದಾರಿಗಳು ಅವನ್ನು ಮನುಷ್ಯರ ತಲೆ ಕಡಿಯಲು ಬಳಸಬಹುದು. ಗಿಡ ಟೊಂಗೆ ಕಡಿಯಲು ಅಥವಾ ಮುಳ್ಳುಗಿಡವನ್ನು ತೆಗೆಯಲು ಬಳಸಬಹುದು.” ಎಂದು ಬರೆಯುತ್ತಾರೆ. ಈಗ ಸದ್ಯಕ್ಕೆ ಆಯುಧಗಳನ್ನು ಬಳಸಿಕೊಂಡು ಸ್ವಚ್ಛತಾ ಆಂದೋಲನವನ್ನು ರೂಪಿಸುತ್ತಿದೆ ಈ ಮೋದಿ ಬ್ರಾಂಡ್. ಒಮ್ಮೆ ತಮ್ಮ ಜನಪ್ರಿಯತೆ ಕುಸಿಯತೊಡಗಿದಾಗ ಇಲ್ಲಿನ ಮತೀಯವಾದಿಗಳು ಇದೇ ಆಯುಧಗಳನ್ನು ಬಳಸಿಕೊಂಡು ಬೀದಿಗಳಲ್ಲಿ ಹತ್ಯಾಕಾಂಡಗಳನ್ನು ಸಹ ರೂಪಿಸಬಲ್ಲರು ಎಂದು ಕಳೆದ ಎಂಬತ್ತು ವರ್ಷಗಳ ಇಂಡಿಯಾದ ಕೋಮುವಾದ ಇತಿಹಾಸವೇ ಸಾಕ್ಷಿ. ಆಗಲೂ ಸಹ ರಕ್ತಸಿಕ್ತದ ಇಂಡಿಯಾದ ಬೀದಿಗಳನ್ನು ಇದೇ ಸ್ವಚ್ಛತಾ ಆಂದೋಲನದ ಮೂಲಕ ಶುಚಿಗೊಳಿಸತ್ತಾರೇನೋ ಈ ವಿದ್ಯಾವಂತ ವರ್ಗ !!

“ಗಾಂಧಿ ಜಯಂತಿ ಕಥಾ ಸ್ಪರ್ಧೆ – 2014″ರ ಫಲಿತಾಂಶ

ಆತ್ಮೀಯರೇ,

ಎಲ್ಲರಿಗೂ 2014ರ “ಗಾಂಧಿ ಜಯಂತಿ” katha sprade 2014ಆಚರಣೆಯ ಶುಭಾಶಯಗಳು.

ವರ್ತಮಾನ ಬಳಗ ಆಯೋಜಿಸಿದ್ದ ಈ ವರ್ಷದ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಸುಮಾರು 40 ಕತೆಗಳು ಬಂದಿದ್ದವು. ಈ ಸಾರಿಯ ತೀರ್ಪುಗಾರರು ಸಾಹಿತಿ ಮತ್ತು ಪ್ರಾಧ್ಯಾಪಕ ಎಸ್. ಗಂಗಾಧರಯ್ಯನವರು. ಇಂತಹ ಜವಾಬ್ದಾರಿಯನ್ನು ನಿಭಾಯಿಸಲು ಒಪ್ಪಿಕೊಂಡ ಅವರಿಗೆ ವರ್ತಮಾನ ಬಳಗ ಕೃತಜ್ಞತೆಗಳನ್ನು ಅರ್ಪಿಸುತ್ತದೆ. ಅವರು ಆಯ್ಕೆ ಮಾಡಿರುವ ಉತ್ತಮ ಕತೆಗಳು ಹೀಗಿವೆ:

  • ಮೊದಲ ಬಹುಮಾನ : “ಕಾಲವ್ಯಾಧಿ” – ಟಿ.ಎಸ್. ವಿವೇಕಾನಂದ್
  • ಎರಡನೆಯ ಬಹುಮಾನ : “ಬೋನಿಗೆ ಬಿದ್ದವರು” – ಟಿ.ಕೆ. ದಯಾನಂದ್
  • ಮೂರನೆಯ ಬಹುಮಾನ : “ಚಿವುಟಿದಷ್ಟೂ ಚಿಗುರು” – ಎಚ್.ಎಸ್. ಅನುಪಮ
  • ಪ್ರೋತ್ಸಾಹಕ ಬಹುಮಾನಗಳು :
    • ಹೇ ರಾಮ್” – ಪಾರ್ವತಿ ಪಿಟಗಿ
    • ಇಸುಮುಳ್ಳು” – ಅನುಪಮಾ ಪ್ರಸಾದ್

ಕಥಾ ಸ್ಪರ್ಧೆಗೆ ತಮ್ಮ ಕತೆಗಳನ್ನು ಆಸಕ್ತಿಯಿಂದ ಕಳುಹಿಸಿ, ಈ ಕಥಾಸ್ಪರ್ಧೆಯನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಎಲ್ಲಾ ಕತೆಗಾರರಿಗೂ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಮತ್ತು ವಿಜೇತರಿಗೆ ಅಭಿನಂದನೆಗಳು. ತೀರ್ಪುಗಾರರಾದ ಎಸ್. ಗಂಗಾಧರಯ್ಯನವರಿಗೆ ಕೃತಜ್ಞತೆಗಳು. ಈ ಕಥಾ ಸ್ಪರ್ಧೆಯ ಆಯೋಜನೆಯಲ್ಲಿ ವಿಶೇಷವಾಗಿ ಸಹಕರಿಸಿದ ನಮ್ಮ ಬಳಗದ ಶ್ರೀಪಾದ ಭಟ್ಟರಿಗೆ ಧನ್ಯವಾದಗಳು.

ತೀರ್ಪುಗಾರರ ಅಭಿಪ್ರಾಯದ ಲೇಖನವನ್ನು ಇಷ್ಟರಲ್ಲಿಯೇ ಪ್ರಕಟಿಸಲಾಗುವುದು.

ಬಹುಮಾನಿತ ಕತೆಗಳನ್ನು ಮುಂದಿನ ದಿನಗಳಲ್ಲಿ ವಾರಕ್ಕೊಂದರಂತೆ ಪ್ರಕಟಿಸಲಾಗುವುದು.

ಮತ್ತೊಮ್ಮೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ವಿಜೇತರಿಗೆ ಅಭಿನಂದನೆಗಳು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ವರ್ತಮಾನ.ಕಾಮ್