Monthly Archives: November 2014

TV9 ಬ್ಲಾಕ್‍ಔಟ್‍ ಮತ್ತು ಭಯೋತ್ಪಾದಕ ಜ್ಯೋತಿಷಿಗಳ ವಿರುದ್ಧದ ಚಳವಳಿ


– ಪ್ರಶಾಂತ್ ಹುಲ್ಕೋಡು


ಕಳೆದ ಒಂದು ದಶಕದ ಅವಧಿಯಲ್ಲಿ ಕರ್ನಾಟಕದ ನ್ಯೂಸ್ ಚಾನಲ್‍ಗಳ ಕುರಿತು ಹೀಗೊಂದು ಚರ್ಚೆ ಆರಂಭವಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಸುದ್ದಿವಾಹಿನಿಗಳು, tv9-media-blackoutಅವುಗಳ ಮಹತ್ವ ಮತ್ತು ಇರಬೇಕಾದ ಸಂಯಮಗಳನ್ನು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚೆತ್ತುಕೊಂಡಿರುವ ಸಮುದಾಯ ಪ್ರಶ್ನೆ ಮಾಡುತ್ತಿದೆ. ಇದು ಬರೀ ಪ್ರಶ್ನೆಗೆ ಮಾತ್ರವೇ ಸೀಮಿತವಾಗದೆ, ಆರೋಗ್ಯಕರ ಚರ್ಚೆಗೂ ನಾಂದಿ ಹಾಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಭಯೋತ್ಪಾದಕ ಜ್ಯೋತಿಷಿ’ಗಳ ವಿರುದ್ಧ ಚಳವಳಿ (?)ಯನ್ನೂ ಹುಟ್ಟುಹಾಕುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ.

ಇವೆಲ್ಲವೂ ಈ ಕ್ಷಣ ಬೆಳವಣಿಗೆಗಳಲ್ಲ. ಟಿವಿಗಳಲ್ಲಿ ಜ್ಯೋತಿಷ್ಯದ ಕಾರ್ಯಕ್ರಮಗಳು ಆರಂಭವಾದ ದಿನದಿಂದಲೂ ವಿರೋಧ ಕೇಳಿಬಂದಿತ್ತು. ಅವತ್ತಿಗೆ ಮೀಡಿಯಾ ಕುರಿತು ಭಿನ್ನ ದನಿಯಲ್ಲಿ ಮಾತನಾಡುತ್ತಿದ್ದ ‘ಸಂಪಾದಕೀಯ’ದಂತ ಬ್ಲಾಗ್‍ಗಳು ಈ ಜ್ಯೋತಿಷಿಗಳ ವಿರುದ್ಧ ದೊಡ್ಡ ಮಟ್ಟದ ಅರಿವು ಮೂಡಿಸಿದ್ದವು. ಅದೆಲ್ಲರ ಪರಿಣಾಮ ಒಂದು ಕಡೆಗಿದ್ದರೆ, ಮೊನ್ನೆ ಮೊನ್ನೆ ಟಿವಿ9 ಮತ್ತು ನ್ಯೂಸ್‍9 ಎಂಬ ಚಾನಲ್‍ಗಳು ‘ಬ್ಲಾಕ್‍ ಔಟ್’ ಆಗುವ ಮೂಲಕ ಈ ಎಚ್ಚೆತ್ತ ಸಮಾಜಕ್ಕೆ ಮೊರೆ ಇಟ್ಟವು. ನನಗೆ ನೆನಪಿರುವಂತೆ, ಟಿವಿ9 ಮತ್ತು ನ್ಯೂಸ್‍9ನ ಬಹುತೇಕ ಸಿಬ್ಬಂದಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ, ತಾವು ಕೆಲಸ ಮಾಡುವ ಸಂಸ್ಥೆಗೆ ಒದಗಿ ಬಂದ ಸಂಕಷ್ಟದ ಕುರಿತು ಮಾಹಿತಿ ನೀಡಿದರು. news9-media-blackoutಇದಕ್ಕೆ ಉತ್ತಮ ಬೆಂಬಲವೂ ಸಿಕ್ಕಿತು ಕೂಡ. ನೀವು ಎಷ್ಟೆ ಕೆಟ್ಟವರಾದರೂ, ಜನ ಅಷ್ಟು ಸುಲಭಕ್ಕೆ ಕೈ ಬಿಡುವುದಿಲ್ಲ ಎಂಬುದರ ಸಂಕೇತ ಇದು. ತುರ್ತು ಪರಿಸ್ಥಿತಿ ಹೇರಿ, ಅಪಖ್ಯಾತಿಗೆ ಒಳಗಾಗಿ, ಹೀನಾಯವಾಗಿ ಸೋತು ಹೋಗಿದ್ದ ಇಂದಿರಾ ಗಾಂಧಿಗೂ ಮತ್ತೊಮ್ಮೆ ಅವಕಾಶ ಕೊಟ್ಟ ಜನ ನಾವು. ಹೀಗಿರುವಾಗ, ಟಿವಿ9 ಮತ್ತು ನ್ಯೂಸ್‍9ನಂತಹ ಸಂಸ್ಥೆಗಳನ್ನು ಬಿಟ್ಟುಕೊಡಲು ಸಾಧ್ಯನಾ?

ಬಹುಶಃ ಇದನ್ನು ಟಿವಿ9 ಮತ್ತು ನ್ಯೂಸ್‍9ನ ಮುಖ್ಯಸ್ಥರು ಅರ್ಥಮಾಡಿಕೊಳ್ಳಬೇಕಿತ್ತು. ಆದರೆ, ಮಾರನೇ ದಿನವೇ ತಮ್ಮ ಚಾನಲ್‍ನಿಂದಾಗಿಯೇ tv9-media-astrologerಮನೆ ಮಾತಾಗಿರುವ   ಸಚ್ಚಿದಾನಂದ ಬಾಬುವನ್ನು ಕೂರಿಸಿಕೊಂಡು ರೇಪ್‍ ಕುರಿತು ಹೊಸ ಸಿದ್ಧಾಂತ ಮಂಡಿಸಲು ಮುಂದಾದರು. ಇಲ್ಲಿ ಲಾಜಿಕ್‍ ಹಾಳಾಗಿ ಹೋಗಲಿ, ಟಿಆರ್‍ಪಿ ಮಾನದಂಡ ಇಟ್ಟುಕೊಂಡು ನೋಡಿದರೂ, ಅದ್ಯಾವ ಬುದ್ಧಿವಂತನಿಗೆ ಈ ಪರಿಕಲ್ಪನೆ ವರ್ಕ್‍ಔಟ್‍ ಆಗುತ್ತೆ ಅಂತ ಹೇಗೆ ಅನ್ನಿಸಿತು ಎಂಬುದೇ ಸೋಜಿಗ. ಹಿಂದಿನ ದಿನವಷ್ಟೆ, ಕೇಬಲ್‍ ಟಿವಿ ಆಪರೇಟರ್ಸ್‍ಗೆ ತಪರಾಕಿ ನೀಡಿ, ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದವರು ಇದನ್ನು ನೋಡಿ ಒಂದು ಕ್ಷಣ ಬೇಸ್ತು ಬಿದ್ದರು. ತಾವು ನೀಡಿದ್ದ ಬೆಂಬಲ ಅವಧಿ ಮುಗಿಯಿತು ಎಂದು ಘೋಷಿಸಿದರು. ಇದೀಗ ಅದು ‘ಭಯೋತ್ಪದಾಕ ಜ್ಯೋತಿಷಿ’ಗಳ ವಿರುದ್ಧ ಜನಾಂದೋಲನ ಮೊಳಕೆ ಒಡೆಯಲು ಕಾರಣವಾಗಿದೆ. ಇದು ಹಚ್ಚುತ್ತಿರುವ ಕಿಚ್ಚು ಕಂಡ ಕೆಲವರು, ‘ಇದು ಕೆಲವು ಕಪಟ ಜ್ಯೋತಿಷಿಗಳ ವಿರುದ್ಧ ಸಮರ ಮಾತ್ರವೇ ಹೊರತು ಇಡೀ ಜ್ಯೋತಿಷ್ಯಾಸ್ತ್ರದ ವಿರುದ್ಧದ ಹೋರಾಟ,’ ಎಂಬುದನ್ನೂ ನೆನಪಿಸಿದ್ದಾರೆ.

ಈ ಜ್ಯೋತಿಷ್ಯದ ಭಯೋತ್ಪಾದನೆ ಎಂಬುದೇ ನಮಗೆ ಹೊಸ ವಿಚಾರ. ಇಲ್ಲೀವರೆಗೂ ದಾವೂದ್, ಅಬು ಸಲೇಂ, ಇತ್ತೀಚೆಗೆ ರಿಯಾಝ್ ಭಟ್ಕಳ್ ಅಂತವರನ್ನು ಗುರುತಿಸಲು ಬಳಸುತ್ತಿದ್ದ ಈ ಭಾಷಾ ಪ್ರಯೋಗದ ವ್ಯಾಪ್ತಿಗೆ ಜ್ಯೋತಿಷಿಗಳನ್ನೂ ತಂದಿರುವುದು ಕ್ರಿಯೇಟಿವಿಟಿಯ ಅಭಿವ್ಯಕ್ತಿ! ಬಿಡಿ, tv9-media-astrologer2ಹೇಗೂ ಇಂಥವರ ವಿರುದ್ಧ ಈಗಾಗಲೇ ಕಾನೂನಾತ್ಮಕ ಚೌಕಟ್ಟಿನಲ್ಲಿ ಕಾಯ್ದೆ ರೂಪಿಸುವ ಕೆಲಸ ನಡೆಯುತ್ತಿದೆ. ಕೆಲವು ಮಠಗಳು, ಧಾರ್ಮಿಕ ಕೇಂದ್ರಗಳೇ ಮುಂದೆ ನಿಂತು, ‘ಮೌಢ್ಯ ನಿಷೇಧಿಸಿ’ ಎನ್ನುತ್ತಿವೆ. ಮೌಢ್ಯ ಎಂಬ ಕಪಟ ಅರಮನೆಗೆ ಒಳಗಿನಿಂದ ಹಾಗೂ ಹೊರಗಿನಿಂದ ಕಲ್ಲು ತೂರುವ ಕೆಲಸ ನಡೆಯುತ್ತಿದೆ. ಇದರ ನಡುವೆ ಟಿವಿ ಚಾನಲ್‍ಗಳ ಜ್ಯೋತಿಷಿಗಳ ವಿರುದ‍್ಧ ಈಗ ಕೇಳಿ ಬರುತ್ತಿರುವ ಪ್ರತಿರೋಧ ಕೊಂಚ ಸಂಯಮ ಕಾಪಾಡಿಕೊಂಡರೆ, ಕಡಿಮೆ ಅಂತರದಲ್ಲೇ ಒಂದು ತಾತ್ವಕ ಅಂತ್ಯವನ್ನೂ ಕಾಣಬಲ್ಲದು.

ಆದರೆ, ಇಷ್ಟಕ್ಕೆ ಎಲ್ಲವನ್ನೂ ಮರೆತು ಮುಂದಿನ ಸುದ್ದಿಯ ಹಿಂದೆ ಓಡುವ ಮುನ್ನ ಒಂದು ವಿಚಾರ ಇದೆ. ಅದು ಟಿವಿ9 ಮತ್ತು ನ್ಯೂಸ್ 9 ಚಾನಲ್‍ಗಳ ‘ಬ್ಲಾಕ್‍ ಔಟ್‍’ಗೆ ಸಂಬಂಧಿಸಿದ್ದು. ರಾಜ್ಯದಲ್ಲಿ ಕೇಬಲ್‍ ಟಿವಿ ಕಾಯ್ದೆ ಜಾರಿಗೆ ತರಬೇಕು, ಸರಕಾರವೇ ಒಂದು ಹೊಸ ಟಿವಿ ಚಾನಲ್‍ ಆರಂಭಿಸುತ್ತಂತೆ, ಅದು ರಾಜ್ಯ ಸಭಾ ಟಿವಿ ತರಾನೇ ಇರುತ್ತಂತೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಕಾಲಘಟ್ಟದಲ್ಲೇ ಈ ‘ಬ್ಲಾಕ್‍ಔಟ್‍’ ಘಟನೆ ನಡೆದಿರುವುದನ್ನು ಗಮನಿಸಬೇಕಿದೆ. ಟಿವಿ9 ಮತ್ತು ಸಚಿವ ಡಿ. ಕೆ. ಶಿವಕುಮಾರ್‍ ನಡುವೆ ಅದೇನೇ ವೈಯುಕ್ತಿಕ ವಿಚಾರಗಳಿರಲಿ. ಅವರಿಬ್ಬರೂ ತಮ್ಮ ತಮ್ಮ ಅಸ್ಥಿತ್ವಕ್ಕಾಗಿ ಬಡಿದಾಡಿಕೊಳ್ಳುತ್ತಿದ್ದಾರೆ, ಅದು ಅವರು ಸ್ವಾತಂತ್ರ್ಯ ಮತ್ತು ಅನಿವಾರ್ಯತೆ ಎಂದು ಸುಮ್ಮನಿದ್ದು ಬಿಡಬಹದಿತ್ತು. ಆದರೆ, ಅದು ಪತ್ರಿಕಾ ಸ್ವಾತಂತ್ರ್ಯದ ಮೊಟಕುಗೊಳಿಸುವಿಕೆ ಹಂತಕ್ಕೆ ಬಂದು ನಿಂತಿದೆ.

ನಮಗೆಲ್ಲಾ ನೆನಪಿರುವಂತೆ ಸಿನಿಮಾಗಳಲ್ಲಿ ಕೇಬಲ್‍ ಆಪರೇಟರ್ಸ್‍ ಎಂಬುದು ಕೇಬಲ್ ಮಾಫಿಯಾ ಆಗಿ ತೆರೆಯ ಮೇಲೆ ಕಾಣುತ್ತಿತ್ತು. ಪುಡಿ ರಾಜಕಾರಣಿಗಳು ಹಾಗೂ ಸ್ಥಳೀಯ ರೌಡಿ ಹಿನ್ನೆಲೆಯ ವ್ಯಕ್ತಿಗಳು ಈ ಮಾಫಿಯಾ ಹಿಂದೆ ಇದ್ದರು ಎಂದು ಬಿಂಬಿಸಲಾಗುತ್ತಿತ್ತು. ಆದರೆ, ಕೆಲವೇ ವರ್ಷಗಳ ಅಂತರದಲ್ಲಿ ಅವರು ಮಾಧ್ಯಮಗಳ, ವಿಷೇಶವಾಗಿ ನ್ಯೂಸ್‍ ಚಾನಲ್‍ ಒಂದರ ‘ಕಂಟೆಂಟ್’ ಕುರಿತು ತಗಾದೆ ತೆಗೆಯುವ ಬೌದ್ಧಿಕತೆ ಬೆಳೆಸಿಕೊಂಡಿದ್ದಾರೆ ಎಂಬುದು ಅಚ್ಚರಿ ವಿಚಾರ. ತೆಲುಗು ಸಿನಿಮಾಗಳಿಗೆ ಹೆಚ್ಚಿನ ಪ್ರೋತ್ಸಾಹ ಅಂತಲೋ, ನಾಳೆ ಕಪಟ kickout-astrologersಜ್ಯೋತಿಷಿಗಳ ವಿರುದ್ಧ ಸಮರ ಅಂತಲೋ ಅವರು ‘ಮೀಡಿಯಾ ಸೆನ್ಸಾರ್‍ ಮಂಡಳಿ’ ಎಂಬ ಅನೌಪಚಾರಿಕ ಚೌಕಟ್ಟನ್ನು ಕಟ್ಟಿಕೊಂಡರೆ ಗತಿ ಏನು? ಇಲ್ಲಿ ರಾಜ್ಯ ಸರಕಾರ ತರಲು ಉದ್ದೇಶಿಸಿರುವ ಕೇಬಲ್‍ ಟಿವಿ ಕಾಯ್ದೆ ಕುರಿತು ಇನ್ನಷ್ಟು ಆಳದಲ್ಲಿ ಚರ್ಚೆ ಆಗಬೇಕಿದೆ. ಅದಕ್ಕೂ ಈ ಅನೌಪಚಾರಿಕ ‘ಕೇಬಲ್ ಸೆನ್ಸಾರ್‌ಶಿಪ್‍ಗೂ’ ಏನಾದರೂ ಸಂಬಂಧ ಇದೆಯಾ? ತಮಿಳುನಾಡಿನ ಅರಸು ಕೇಬಲ್‍ ನೆಟ್‍ವರ್ಕ್‍ ಬಂದ ಮೇಲೆ ಮಾಧ್ಯಮ ಮತ್ತು ಸರಕಾರದ ನಡುವಿನ ಸಂಬಂಧದಲ್ಲಿ ಆದ ಸೂಕ್ಷ್ಮ ಬದಲಾವಣೆಗಳು ಏನು? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ.

ಅದರ ಆಚೆಗೆ ಮಾಧ್ಯಮ ಸ್ವಾತಂತ್ರ್ಯ ಎಂಬುದು, ಬದಲಾದ ಕಾಲಮಾನದಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಅಟ್‍ಲೀಸ್ಟ್ ಚಾನಲ್‍ಗಳನ್ನು ಮುನ್ನಡೆಸುತ್ತಿರುವವರಾದರೂ ಗಮನಿಸಬೇಕಿದೆ. ಇವೆಲ್ಲಕ್ಕೂ ಮುಂಚೆ, ಟಿವಿ9 ಮತ್ತು ನ್ಯೂಸ್‍9 ಚಾನಲ್‍ಗಳ ‘ಬ್ಲಾಕ್‍ ಔಟ್‍’ ಕುರಿತಂತೆ ಒಂದು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕಿದೆ. ನಿಜಕ್ಕೂ ಅಲ್ಲಿ ನಡೆದಿದ್ದು ಏನು ಎಂಬುದನ್ನು ಜನರ ಮುಂದೆ ಇಡಬೇಕಿದೆ. ಇದಕ್ಕಾಗಿ ಉತ್ತಮ ಚಾರಿತ್ರ್ಯ ಹೊಂದಿರುವ ಯಾರಾದರೂ ನಿವೃತ್ತ ನ್ಯಾಯಾಧೀಶರಿಗೆ ಒಂದು ತಿಂಗಳ ಅವಕಾಶ ನೀಡಿದರೂ ಸಾಕಾಗುತ್ತದೆ. ಅದು ಭವಿಷ್ಯದ ಕರ್ನಾಟಕ ನ್ಯೂಸ್‍ ಮೀಡಿಯಾದ ಚಹರೆಯನ್ನು ರೂಪಿಸಲು ಒಂದು ತಾತ್ವಿಕ ತಳಹದಿಯನ್ನು ನಿರ್ಮಿಸುವ ಕೆಲವೂ ಆದಂತೆ ಆಗುತ್ತದೆ.

‘ಬ್ಲಾಕ್‍ಟೌಟ್‍’ ವಿರೋಧಿಸಿದ ಟಿವಿ9 ಮತ್ತು ನ್ಯೂಸ್‍9 ಸಿಬ್ಬಂದಿಗಳೂ, ಸಂಸ್ಥೆಯ ಮುಖ್ಯಸ್ಥರು, ಅವರಿಗೆ ಬೆಂಬಲಿಸಿದ ಎಚ್ಚೆತ್ತ ಸಮುದಾಯದ ಮುಂದಿರುವ ಅವಕಾಶ ಮತ್ತು ಹೊಣೆಗಾರಿಕೆ ಇದು. ‘ಭಯೋತ್ಪಾದಕ ಜ್ಯೋತಿಷಿಗಳ’ ಜನಾಂದೋಲದಲ್ಲಿ ಇದು ಮರೆತು ಹೋಗಬಾರದು ಅಷ್ಟೆ.

ರಾಘವೇಶ್ವರ ಭಾರತಿ ಪ್ರಕರಣ: ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮಾತು-ನಡತೆಗಳ ಮೌಲ್ಯಗಳು ಸಾಯುತ್ತಿರುವಾಗ…

– ಅನುಪಮಾ ಪ್ರಸಾದ್

ಇಂದು ಸಾಮಾಜಿಕ-ರಾಜಕೀಯ-ಧಾರ್ಮಿಕ ಜೀವನದಲ್ಲಿ ಮಾತುಗಳ-ನಡತೆಗಳ ಮೌಲ್ಯಗಳು ಶರವೇಗದಲ್ಲಿ ಸಾಯುತ್ತಿರುವಾಗ ಎಲ್ಲೊ ಯಾರೋ ಇಡುವ ಸಣ್ಣ ನಡೆಯೊಂದು ಆಶಾವಾದಕ್ಕೆ ಕಾರಣವಾಗುತ್ತದೆ. ರಾಘವೇಶ್ವರ ಭಾರತಿ/ಪ್ರೇಮಲತಾ ಶಾಸ್ತ್ರಿ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿraghaveshwara-premalatha ಫಣೀಂದ್ರ ಅವರು ತನ್ನ ನ್ಯಾಯ ತೀರ್ಮಾನದ ಮೇಲೆ ಅವಿಶ್ವಾಸ ವ್ಯಕ್ತಪಡಿಸಿ ರಾಷ್ಟ್ರಪತಿಗೆ ಪತ್ರ ಹೋಗಿರುವುದರಿಂದ ತನಿಖೆಯಿಂದ ಹಿಂದೆ ಸರಿದಿರುವುದು ಮೌಲ್ಯಗಳು ಇನ್ನೂ ಸತ್ತಿಲ್ಲ ಅನ್ನುವುದಕ್ಕೆ ಸಣ್ಣ ಸಾಕ್ಷಿ. ಈ ಪ್ರಕರಣದಲ್ಲಿ ನ್ಯಾಯಪೀಠದ ಮೇಲೆ ಸಂಶಯ ವ್ಯಕ್ತ ಪಡಿಸಿ ಪತ್ರ ಬರೆದಿದ್ದು ಸರಿಯೆ ತಪ್ಪೆ ಅನ್ನುವುದಕ್ಕಿಂತ ಇಂತಹ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ನಡೆದುಕೊಂಡ ರೀತಿ ಗಮನಾರ್ಹವಾಗುತ್ತದೆ. ‘ಸಮಾನ ಮನಸ್ಕ ವೇದಿಕೆ’ಯ ಮೂಲಕ ರಾಘವೇಶ್ವರ ಭಾರತಿ ಹಾಗು ಪ್ರೇಮಲತಾ ಪ್ರಕರಣದ ಕುರಿತಾಗಿ ಈಗಲಾದರೂ ಹೊರ ಬಿದ್ದ ಹವ್ಯಕ ಸಮುದಾಯದ ಹೇಳಿಕೆಯೂ ಇನ್ನೊಂದು ಸಣ್ಣ ಆರೋಗ್ಯಕರ ಬೆಳವಣಿಗೆ.

ಇನ್ನು ಕೆಲವರು ಆರೋಪ-ಪ್ರತ್ಯಾರೋಪ ಮಾಡುತ್ತಿರುವ ಇಬ್ಬರದೂ ತಪ್ಪಿದೆ ಎಂದು ಗೊಣಗುವುದರಲ್ಲಿ ನೈತಿಕವಾಗಿ ಯಾವ ತಿರುಳೂ ಇಲ್ಲ. ಏಕೆಂದರೆ ಇಲ್ಲಿ ಒಬ್ಬರದು ಗುರು ಸ್ಥಾನ. ಗುರು ತನ್ನ ಶಿಷ್ಯ ಬಳಗ ತಪ್ಪಿ ನಡೆದಾಗ ದಾರಿ ತೋರಿಸಬೇಕಾದವನು. ಅದರಲ್ಲೂ ಸನ್ಯಾಸತ್ವದ ಹೊದಿಕೆಯನ್ನು ಪ್ರಜ್ಞಾಪೂರ್ವಕವಾಗಿ ತೊಟ್ಟುಕೊಂಡು; ಸಾರ್ವಜನಿಕವಾಗಿ ಹಾಗೆಯೇ ಬಿಂಬಿಸಿಕೊಳ್ಳುತ್ತಿರುವಾಗ ಅತ್ಯಾಚಾರದಂತಹ ಗಂಭೀರ ಸ್ವರೂಪದ ಆರೋಪ ಎದುರಾಗಿದ್ದು, ರಾಘವೇಶ್ವರ ಭಾರತಿ ತಾನಾಗಿಯೇ ಪೀಠದಿಂದಿಳಿದು ತನಿಖೆ ಎದುರಿಸಲು ಸಿದ್ಧವಾಗಬೇಕಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು, ಆ ಸ್ಥಾನದ ಮೌಲ್ಯಗಳನ್ನು ಗೌರವಿಸುವ ವ್ಯಕ್ತಿ ತೆಗೆದುಕೊಳ್ಳಬೇಕಾದ ನಡೆಯಾಗಿತ್ತು. ಆದರೆ, ಇನ್ನು ಅವರದೇ ಮಾತಿನ ಜಾಡಿನಲ್ಲಿ ಹೇಳುವುದಾದರೆ, ಮಾತಿಗೆ ಮೊದಲು ಶ್ರೀರಾಮ ತೋರಿಸಿದ ದಾರಿಯಲ್ಲಿ ನಡೆಯುತ್ತೇನೆ ಅನ್ನುವವರಿಗೆ ತನ್ನ ಪರಿಶುದ್ಧತೆಯನ್ನ ಸಾಬೀತು ಮಾಡಲು ಶ್ರೀರಾಮ ಅಂದು ಸೀತೆಗೆ ತೋರಿಸಿದ ದಾರಿ ಅಗ್ನಿ ಪರೀಕ್ಷೆಯಾದ್ದರಿಂದ; ತನಿಖೆಗೆ ತಡೆಯಾಜ್ಞೆಯ ಮೊರೆ ಹೋಗದೆ ತನ್ನನ್ನು ತನಿಖೆಗೆ ಒಡ್ಡಿಕೊಳ್ಳುವುದೇ ತನಗೆ ಶ್ರೀರಾಮ ಒಡ್ಡಿದ ಅಗ್ನಿ ಪರೀಕ್ಷೆ, ಹಾಗಾಗಿ ತನಿಖೆಗೆ ತಡೆಯಾಜ್ಞೆಗಳನ್ನೇ ತರುತ್ತ ವಿಳಂಬ ನೀತಿಗೆ ಮೊರೆ ಹೋಗುವುದು ಅವಮಾನವೆಂದನಿಸದಿರುವುದು ವಿಪರ್‍ಯಾಸ! ಅವರು ತಾನು ಯಾವುದೇ ಪ್ರಮಾದ ಎಸಗಿಲ್ಲ ಅನ್ನುತ್ತಲೇ ತನಿಖೆಯ ಎಲ್ಲಾ ಹಂತಗಳಲ್ಲು ತಡೆಯಾಜ್ಞೆ ತಂದಿದ್ದಂತು ಸತ್ಯ!

ಆದರೆ, ಇಂತಹ ಸಂದರ್ಭದಲ್ಲಿ ರಾಜಕೀಯವಾಗಿ ಗುರುತಿಸಿಕೊಂಡು ಮುಂಚೂಣಿಯಲ್ಲಿರುವ ಮಹಿಳಾ ನಾಯಕಿಯರೂ ಪ್ರಶ್ನೆ ಮಾಡುವ ಗೋಜಿಗೇ ಹೋಗಲಿಲ್ಲ. shobha-karandlajeತೀರ್ಥಹಳ್ಳಿಯ ಬಾಲಕಿಯ ಪ್ರಕರಣದಲ್ಲಿ ಅತ್ಯಾಚಾರ ನಡೆದಿಲ್ಲ ಎಂದು ಮನೆಯವರು, ವೈದ್ಯಕೀಯ ಪರೀಕ್ಷೆಗಳು ಹೇಳಿದರೂ ಶೋಭಾ ಕರಂದ್ಲಾಜೆ ಮಾಧ್ಯಮಗಳೆದುರು ಬಾಲಕಿಯ ಸಾವು ಅತ್ಯಾಚಾರದ ಹತ್ಯೆ ಎಂದು ಸಾರ್ವಜನಿಕವಾಗಿ ಬೊಬ್ಬೆ ಹೊಡೆದು ಅದೇ ಅಂತಿಮ ಸತ್ಯವೆಂದು ಶರಾ ಬರೆಯಲು ಪ್ರಯತ್ನಿಸುತ್ತಾರೆ. ಕೀಳು ಮಟ್ಟದ ರಾಜಕೀಯ ದುರುದ್ದೇಶಕ್ಕಾಗಿ ತಾನು ಒಂದು ಮುಗ್ದ ಜೀವದ ಸಾವನ್ನು ಬಳಸಿಕೊಳ್ಳುತ್ತಿದ್ದೇನೆನ್ನುವ ಕನಿಷ್ಠ ಪ್ರಜ್ಞೆಯನ್ನೂ ಅವರು ತೋರಿಸುವುದಿಲ್ಲ.

ಇನ್ನು ಅದೇ ಪಕ್ಷದ ಮತ್ತೊಬ್ಬ ರಾಜಕಾರಣಿ ತೇಜಸ್ವಿನಿ ಗೌಡ ಕೆ.ಎಸ್.ಈಶ್ವರಪ್ಪ ಹಾಗು ಐವಾನ್ ಡಿಸೋಜರ ಮಾತಿನ ಮುಂದುವರಿಕೆಯೆಮಬಂತೆ ತನ್ನಂತೆಯೇ ರಾಜಕಾರಣದಲ್ಲಿರುವ ಮಹಿಳೆಯರ ಬಗ್ಗೆ ಯಾವ ವ್ಯಕ್ತಿ ಗೌರವವೂ ಇಲ್ಲದೆ ಅತ್ಯಂತ ಕೀಳು ಅಭಿರುಚಿಯ ಮಾತಾಡುತ್ತಾರೆ. ವಿಪರ್‍ಯಾಸವೆಂದರೆ ಇಬ್ಬರು ಮಹಿಳೆಯರೂ ಡಬ್ಬಲ್ ಡಿಗ್ರಿ ಪಡೆದ ಅಕ್ಷರಸ್ಥರೆ! ಈ ಇಬ್ಬರು ಮಹಿಳೆಯರ ಮಾತುಗಳಲ್ಲಡಗಿರುವುದೂ ಸ್ವಾರ್ಥ ರಾಜಕಾರಣವೇ ಹೊರತಾಗಿ ಮಹಿಳೆಯರ ಬಗೆಗಿನ, ಮಾನವೀತೆಯ ಬಗೆಗಿನ ಕಾಳಜಿಯೂ ಇಲ್ಲ. ನಾಗರೀಕ ಸೌಜನ್ಯವೂ ಇಲ್ಲ. ಇದ್ದುದರಲ್ಲಿ ತೇಜಸ್ವಿನಿಯವರ ಮಾತಿನ ಸಂದರ್ಭದಲ್ಲಿ ಪ್ರತಿಕ್ರಿಯೆಯಾಗಿ ಶ್ರೀಮತಿ ಮೋಟಮ್ಮ ಮಾತಿನ ಹದ ಕಾಯ್ದುಕೊಂಡು ಕಾವು ಉಳಿಸಿಕೊಂಡು ಪ್ರತಿಕ್ರಿಯಿಸಿದ್ದು ಸಮಾಧಾನಕರ ಅಂಶ. ಮತ್ತೆ ಪುನಃ ನಾಲಿಗೆ ಹರಿಯ ಬಿಟ್ಟವರು ವಿನಯ ಕುಮಾರ ಸೊರಕೆ. ಸಾರ್ವಜನಿಕವಾಗಿ ಅದು ರಾಜಕೀಯ ಸ್ಥಾನವಾಗಿರಲಿ; ಸಾಮಾಜಿಕ ಅಥವಾ ಧಾರ್ಮಿಕ ಸ್ಥಾನವಾಗಿರಲಿ. ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಸಂಸ್ಕೃತಿಯ ಬಗ್ಗೆ ಗುತ್ತಿಗೆ ಪಡೆದುಕೊಂಡಂತೆ ಮಾತಾಡುವ ಮೊದಲು ಕಿಂಚಿತ್ ಆತ್ಮ ನಿರೀಕ್ಷಣೆ ನಡೆಸಿದರೆ ತಾವು ನಿರ್ವಹಿಸುತ್ತಿರುವ ಸ್ಥಾನದ ಮಾನವನ್ನಾದರೂ ಕಾಪಾಡಬಹುದೇನೊ.

ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ವಿರುದ್ಧ ಇರುವ ಆರೋಪಗಳು


– ರವಿ ಕೃಷ್ಣಾರೆಡ್ಡಿ


[29-09-2014 ರಂದು ಆಮ್ ಆದ್ಮಿ ಪಕ್ಷ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಪತ್ರಿಕಾಟಿಪ್ಪಣಿಯ ಪರಿಷ್ಕೃತ ರೂಪ ಈ ಲೇಖನ.]

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ಕೆ.ಎಲ್.ಮಂಜುನಾಥರ ವಿರುದ್ಧ ಹಲವು ಆರೋಪಗಳಿದ್ದು, ಈ ವಿಚಾರವಾಗಿ ವಿಚಾರಣೆ ನಡೆಸಬೇಕು ಮತ್ತು ವಾಗ್ಧಂಡನೆಗೆ ಮುಂದಾಗಬೇಕು ಎಂದು ಪಂಜಾಬ್‌ ರಾಜ್ಯದ ನಾಲ್ಕು ಆಮ್ ಆದಿ ಪಕ್ಷದ ಸಂಸದರು ಅದಕ್ಕೆ ಬೇಕಾದ ಸಹಿಸಂಗ್ರಹಣೆಯಲ್ಲಿ ತೊಡಗಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗೆಂದು ಸುದ್ದಿ ಹೊರಬಂದ ನಂತರ ರಾಜ್ಯದ ಹಲವು ಪ್ರಭಾವಿ ರಾಜಕಾರಣಿಗಳು ಮತ್ತು ವಕೀಲರು ಪತ್ರಿಕಾಗೋಷ್ಟಿ ನಡೆಸಿ ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪಗಳನ್ನು ಮಾಡಿ, ನ್ಯಾಯಮೂರ್ತಿ ಮಂಜುನಾಥರನ್ನು ಸಮರ್ಥಿಸಿಕೊಂಡರು. ಅದರೆ, ಕೆ.ಎಲ್.ಮಂಜುನಾಥರ ವಿರುದ್ಧ ಇರುವ ಆರೋಪಗಳಾದರೂ ಎಂತಹವು?chaitra-saledead-1

ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರ ವಿರುದ್ಧ ಆರೋಪಗಳಲ್ಲಿ ಪ್ರಮುಖವಾದುದು ಅವರು ಫೆಬ್ರವರಿ 9, 2004 ರಲ್ಲಿ ತಮ್ಮ ಅವಲಂಬಿಯಾಗಿದ್ದ ಮತ್ತು ಆಗ ಇಪ್ಪತ್ತು ವರ್ಷ ವಯಸ್ಸಿನವರಾಗಿದ್ದ ಅವರ ಮಗಳು ಕೆ.ಎಮ್.ಚೈತ್ರ ಎನ್ನುವವರ ಹೆಸರಿನಲ್ಲಿ ಅಕ್ರಮವಾಗಿ, (both illegally and out of turn) ವಯ್ಯಾಲಿಕಾವಲ್ ಸೊಸೈಟಿಯಿಂದ ಸೈಟು ಪಡೆದಿರುತ್ತಾರೆ ಎನ್ನುವುದು. ಆ ಸಮಯದಲ್ಲಿ ಕೆ.ಎಮ್.ಚೈತ್ರರವರು ವಯ್ಯಾಲಿಕಾವಲ್ ಸೊಸೈಟಿಯಲ್ಲಿ ಸದಸ್ಯರಾಗಿರುವುದಿಲ್ಲ ಮತ್ತು ನ್ಯಾಯಾಲಯದ ಆದೇಶದ ಪ್ರಕಾರ ಸಹಸದಸ್ಯರಿಗೆ ಸೈಟು ಕೊಡುವುದೂ ಕಾನೂನುಬಾಹಿರ. ಇದರ ಜೊತೆಗೆ, ಅವರು ತಮಗಾಗಲಿ ತಮ್ಮ ಕುಟುಂಬಸದಸ್ಯರಿಗಾಗಲಿ ಬೆಂಗಳೂರು ನಗರದಲ್ಲಿ ಯಾವುದೇ ಗೃಹಸಂಬಂಧಿ ಆಸ್ತಿ ಇಲ್ಲ ಎನ್ನುವ ಪ್ರಮಾಣಪತ್ರವನ್ನು ಕಾನೂನಿನ ಪ್ರಕಾರ ಸಲ್ಲಿಸಬೇಕಿದ್ದರೂ ಆ ಸೊಸೈಟಿಯವರು ಅವರಿಗೆ ಅದರಿಂದ ವಿನಾಯಿತಿ ಕೊಟ್ಟಿರುತ್ತಾರೆ ಎನ್ನುವ ಮಾಹಿತಿ ಇದೆ.

ನಂತರದ ದಿನಗಳಲ್ಲಿ ವಯ್ಯಾಲಿಕಾವಲ್ ಸೊಸೈಟಿ ಮತ್ತು ಬಿಡಿಎ ಮಧ್ಯೆ ಒಂದು ಮೊಕದ್ದಮೆ ಹೈಕೋರ್ಟಿನಲ್ಲಿ ದಾಖಲಾಗುತ್ತದೆ. ಇದಕ್ಕೆ ಸಂಬಂಧಪಟ್ಟ ತೀರ್ಪನ್ನು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರವರು ದಿನಾಂಕ 5-7-2005 ರಂದು ನೀಡುತ್ತಾರೆ. ತಮ್ಮ ಅವಲಂಬಿತ ಮಗಳಿಗೆ ಸದರಿ ಸೊಸೈಟಿಯಿಂದ ಸೈಟು ಪಡೆದಿರುವ ಕಾರಣಕ್ಕಾಗಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರು ಆ ಸೊಸೈಟಿಗೆ ಸಂಬಂಧಿಸಿದ ವಿಚಾರಣೆಯಿಂದ ನ್ಯಾಯಾಂಗ ಶುದ್ಧತೆಯನ್ನು ಕಾಪಾಡುವ ನೈತಿಕ ಕಾರಣಕ್ಕಾಗಿ ಮತ್ತು ಹಿತಾಸಕ್ತಿ ಸಂಘರ್ಷದ ಕಾರಣಕ್ಕಾಗಿಯೂ (conflict of interest) ಹಿಂದೆಸರಿಯುವುದು ಅತ್ಯವಶ್ಯಕವಾಗಿತ್ತು. ಅವರು ಹಾಗೆ ಮಾಡದೆ ನ್ಯಾಯಾಂಗದ chaitra-saledead-2ನಿಷ್ಪಕ್ಷಪಾತತನವನ್ನು ಎತ್ತಿಹಿಡಿಯಲಿಲ್ಲ ಎನ್ನುವುದು ಪ್ರಮುಖ ಆರೋಪ.

ಇದೊಂದೇ ಪ್ರಕರಣದಲ್ಲಿ ತಮ್ಮ ಅವಲಂಬಿತ ಮಗಳ ಹೆಸರಿನಲ್ಲಿ ಸೈಟು ಪಡೆಯುವುದೇ ಅಲ್ಲದೆ, ಸೈಟು ಕೊಟ್ಟ ಸೊಸೈಟಿಯ ಮೊಕದ್ದಮೆಯನ್ನು ತಾವೇ ನ್ಯಾಯಮೂರ್ತಿಯಾಗಿ ನಿಭಾಯಿಸುವುದು ಮತ್ತು ತೀರ್ಪು ನೀಡಿರುವುದು ಅನೈತಿಕ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ.

ಇದರ ಜೊತೆಗೆ ವಯ್ಯಾಲಿಕಾವಲ್ ಸೊಸೈಟಿಯ ಬಡಾವಣೆಯನ್ನು ಅಭಿವೃದ್ಧಿಪಡಿಸಿದ್ದ ಲಕ್ಷ್ಮಣ್ ಎನ್ನುವವರು ಪಾಲುದಾರರಾಗಿದ್ದ “ಶ್ರೀ ಶಕ್ತಿ ಬ್ಯುಲ್ಡರ್ಸ್” ಗೆ ಸಂಬಂಧಿಸಿದ ಕೇಸನ್ನು ನ್ಯಾಯಮೂರ್ತಿ  ಕೆ.ಎಲ್.ಮಂಜುನಾಥರವರು 19-09-2003 ರಂದು ವಿಲೇವಾರಿ ಮಾಡಿರುತ್ತಾರೆ. ಇದೇ ಶ್ರೀ ಶಕ್ತಿ ಬ್ಯುಲ್ಡರ್ಸ್‌ರವರು ಅಭಿವೃದ್ಧಿ ಪಡಿಸಿದ ವೈಯಾಲಿಕಾವಲ್ ಸೊಸೈಟಿಯವರ ಬಡಾವಣೆಯಲ್ಲಿ ನ್ಯಾ.ಮಂಜುನಾಥರ ಮಗಳಿಗೆ ಸೈಟು ಹಂಚಿಕೆಯಾಗುತ್ತದೆ (9-2-2004). ಮತ್ತು ನಂತರ ವೈಯಾಲಿಕಾವಲ್ ಸೊಸೈಟಿ ಮತ್ತು ಬಿಡಿಎ ಮಧ್ಯೆ ನಡೆಯುತ್ತಿದ್ದ ದಾವೆಯನ್ನು ನ್ಯಾ.ಮಂಜುನಾಥರು (5-7-2005) ವಿಲೇವಾರಿ ಮಾಡುತ್ತಾರೆ. ಇದೇ ಸೊಸೈಟಿಗೆ ಸಂಬಂಧಿಸಿದ ಇನ್ನೂ ಕೆಲವು ಮೊಕದ್ದಮೆಗಳ ವಿಲೇವಾರಿಯನ್ನೂ ಸದರಿ ನ್ಯಾಯಮೂರ್ತಿಗಳು ನಂತರದ ದಿನಗಳಲ್ಲಿ ಮಾಡುತ್ತಾರೆ (17-01-2007, 20-07-2010).

ಇನ್ನೊಂದು ಪ್ರಕರಣ “ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ”ಕ್ಕೆ ಸಂಬಂಧಿಸಿದ್ದು. ಈ ಬಡಾವಣೆಯನ್ನು ಅಭಿವೃದ್ಧಿ ಪಡಿಸಿದ್ದು ಸಹ ಮೇಲೆ ಉಲ್ಲೇಖಿಸಿರುವ ಲಕ್ಷ್ಮಣ್‌ರ ಪಾಲುದಾರಿಕೆಯ ಶ್ರೀ ಶಕ್ತಿ ಬ್ಯುಲ್ಡರ್ಸ್.jd-agreement-1 ಸಹಕಾರ ಸಂಘ ತನ್ನ ಬಡಾವಣೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶ್ರೀ ಶಕ್ತಿ ಬ್ಯುಲ್ಡರ್ಸ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತದೆ ಮತ್ತು ಬಡಾವಣೆ ನಿರ್ಮಾಣಕ್ಕಾಗಿ ಶ್ರೀ ಶಕ್ತಿ ಬ್ಯುಲ್ಡರ್ಸ್‌ಗೆ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡುತ್ತದೆ. ಆದರೆ ಹಣ ಬಿಡುಗಡೆ ಮಾಡುವಾಗ ಕಾನೂನಿನ ಪ್ರಕಾರ ಮೂಲದಲ್ಲಿಯೇ ತೆರಿಗೆ ಹಿಡಿದುಕೊಳ್ಳಬೇಕಿತ್ತು ಎಂದು ಆದಾಯ ತೆರಿಗೆ ಇಲಾಖೆಯವರು ಮೊಕದ್ದಮೆ ದಾಖಲಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಮೊಕದ್ದಮೆಯನ್ನು ಹೈಕೋರ್ಟಿನ ದ್ವಿಸದಸ್ಯ ಪೀಠ 10-03-2010 ರಂದು ವಿಲೇವಾರಿ ಮಾಡುತ್ತದೆ. ನ್ಯಾ.ಕೆ.ಎಲ್.ಮಂಜುನಾಥ್ ಆ ದ್ವಿಸದಸ್ಯ ಪೀಠದಲ್ಲಿದ್ದ ಒಬ್ಬ ನ್ಯಾಯಮೂರ್ತಿಯೂ ಆಗಿರುತ್ತಾರೆ.

ಇನ್ನು ಭೂಕಬಳಿಕೆಗೆ ಸಂಬಂಧಿಸಿದಂತೆ 2007 ರಲ್ಲಿ ಎ.ಟಿ.ರಾಮಸ್ವಾಮಿಯವರು ಜಂಟಿಸದನ ಸಮಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಆ ವರದಿಯಲ್ಲಿ “ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ”ಕ್ಕೆ ಸಂಬಂಧಿಸಿದ ಅಧ್ಯಾಯವೇ ಇದೆ. ಕಾನೂನಿನ ಪ್ರಕಾರ ಹೈಕೋರ್ಟಿನ ಮತ್ತು ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳು (ಹಾಲಿ, ನಿವೃತ್ತ, ವರ್ಗಾವಣೆಯಾಗಿರುವ ಎಲ್ಲರೂ) ಸರ್ಕಾರಿ ನೌಕರರಲ್ಲ ಮತ್ತು ಅವರು ಯಾವುದೇ ಕಾರಣಕ್ಕೂ ಮೇಲಿನ ಸಹಕಾರಿ ಸಂಘದಲ್ಲಿ ಸದಸ್ಯರಾಗಲು ಅವಕಾಶವಿಲ್ಲ. ಆದರೂ ಸಹ 84 ನ್ಯಾಯಾಧೀಶರು (75 ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು 9 ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು) ಈ ಸಹಕಾರ ಸಂಘದಿಂದ ನಿಯಮಬಾಹಿರವಾಗಿ ಸೈಟುಗಳನ್ನು ಪಡೆದಿದ್ದಾರೆ ಎಂದು ವರದಿ ಹೇಳುತ್ತದೆ. ಅಷ್ಟೇ ಅಲ್ಲ, ಬಿಡಿಎ ಇಂದಾಗಲಿ, ಯಾವುದಾದರು ಸಹಕಾರಿ ನಿರ್ಮಾಣ ಸಂಸ್ಥೆಯಿಂದಾಗಲಿ ಸೈಟು ಪಡೆದುಕೊಳ್ಳುವವರು ತಮ್ಮ ಹೆಸರಲ್ಲಾಗಲಿ ಅಥವ ಅವಲಂಬಿತ ಕುಟುಂಬದ ಸದಸ್ಯರ ಹೆಸರಿನಲ್ಲಾಗಲಿ ನಗರದಲ್ಲಿ ಯಾವುದೇ ಸೈಟು ಅಥವ ಮನೆಯನ್ನು ಹೊಂದಿರಬಾರದು ಮತ್ತು ಹಾಗೆಂದು ಪ್ರಮಾಣಪತ್ರ ಕೊಡಬೇಕಾಗುತ್ತದೆ. ಆದರೆ, ಸಹಕಾರಿ ಸಂಘದಲ್ಲಿ ಸೈಟು ಪಡೆದ ಯಾವೊಬ್ಬ ನ್ಯಾಯಮೂರ್ತಿಯೂ jd-agreement-2ಹಾಗೆಂದು ಪ್ರಮಾಣಪತ್ರ ನೀಡಿಲ್ಲ ಮತ್ತು ಅನೇಕರಿಗೆ ಹಲವಾರು ಸೈಟು ಆಸ್ತಿಗಳಿದ್ದರೂ ಇಲ್ಲಿಯೂ ಅವರು ಸೈಟು ಪಡೆದಿದ್ದಾರೆ ಎನ್ನಲಾಗಿದೆ. ಎಲ್ಲರಿಗೂ ತಿಳಿದಿರುವಂತೆ ಮಾಜಿ ಲೋಕಾಯುಕ್ತ ಶಿವರಾಜ್ ಪಾಟೀಲರು ಇದೇ ವಿಷಯಕ್ಕೆ ವಿವಾದಕ್ಕೀಡಾಗಿ ತಮ್ಮ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದಲ್ಲದೆ, ವೈಯಾಲಿಕಾವಲ್ ಸೊಸೈಟಿಯಿಂದ ಪಡೆದಿದ್ದ ತಮ್ಮ ಹೆಂಡತಿಯ ಹೆಸರಿನಲ್ಲಿದ್ದ ನಿವೇಶನವನ್ನು ವಾಪಸು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಂದಹಾಗೆ, ರಾಮಸ್ವಾಮಿಯವರ ವರದಿಯಲ್ಲಿ “ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ”ದಿಂದ ನಿವೇಶನ ಪಡೆದಿರುವ ನ್ಯಾಯಮೂರ್ತಿಗಳ ಪಟ್ಟಿಯಲ್ಲಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರ ಹೆಸರೂ ಇದೆ.

ಇದೇ ಸಮಯದಲ್ಲಿ ಕರ್ನಾಟಕ ಹೈಕೋರ್ಟಿನ ಅನೇಕ ನ್ಯಾಯಮೂರ್ತಿಗಳು ಹೈಕೋರ್ಟಿನ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ (http://karnatakajudiciary.kar.nic.in/judgesAssets&Liabilities.asp). ಆದರೆ ಆ ಪಟ್ಟಿಯಲ್ಲಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರ ಹೆಸರನ್ನು ಕ್ಲಿಕ್ ಮಾಡಿದರೆ ಖಾಲಿ ಪುಟ ಮಾತ್ರ ತೆರೆಯುತ್ತದೆ (http://karnatakajudiciary.kar.nic.in/judgesAssets&Liabilities/klmj.pdf). ರಾಜ್ಯ ಹೈಕೋರ್ಟ್‌ನ ಒಟ್ಟು 32 ನ್ಯಾಯಮೂರ್ತಿಗಳಲ್ಲಿ klmanjunath-judicialsocieity16 ನ್ಯಾಯಮೂರ್ತಿಗಳು ಮಾತ್ರ ಆಸ್ತಿ ಘೋಷಣೆ ಮಾಡಿದ್ದು ಸರಿಯಾಗಿ ಅರ್ಧ ನ್ಯಾಯಮೂರ್ತಿಗಳು ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿಲ್ಲ ಮತ್ತು ಅವರಲ್ಲಿ ನ್ಯಾ. ಕೆ.ಎಲ್.ಮಂಜುನಾಥರೂ ಒಬ್ಬರು (29-09-2014 ರಂದು ವೆಬ್‍‌ಸೈಟ್‌ನಲ್ಲಿ ಇದ್ದ ಮಾಹಿತಿ ಪ್ರಕಾರ).

ಹಾಗೆಯೇ, ಇಲ್ಲಿ ಪ್ರಸ್ತಾಪಿಸಿರುವ ಅನೇಕ ವಿಚಾರಗಳು ಕಳೆದ ಎರಡು-ಮೂರು ವರ್ಷಗಳಲ್ಲಿ ಈಗಾಗಲೆ ಅನೇಕ ಮಾಧ್ಯಮಗಳಲ್ಲಿ ಪ್ರಸ್ತಾಪಿತವಾಗಿವೆ.

ಇಂದು ನ್ಯಾಯಾಂಗದ ಸ್ವಾತಂತ್ರ್ಯ, ಪಾರದರ್ಶಕತೆ, ಪ್ರಾಮಾಣಿಕತೆಯನ್ನು ಎತ್ತಿಹಿಡಿಯುವುದು ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯ. ಜಾಮೀನಿಗಾಗಿ ಲಂಚ ಪಡೆಯುವ ನ್ಯಾಯಮೂರ್ತಿಗಳು ಬಂಧನಕ್ಕೊಳಗಾಗಿದ್ದು ಜನಮಾನಸದಲ್ಲಿ ಇನ್ನೂ ಹಚ್ಚಹಸಿರಾಗಿದೆ. ಹಲವು ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪಗಳಿವೆ. ನಿವೃತ್ತರಾಗುತ್ತಿದ್ದಂತೆಯೇ ಯಾವುದಾದರೂ ರಾಜ್ಯದ ರಾಜ್ಯಪಾಲರಾಗಿ ಆಯ್ಕೆ ಮಾಡುವ ವಿಚಾರವಾಗಿಯೂ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ನ್ಯಾಯಾಂಗ ಸುಧಾರಣೆಗಳ ತುರ್ತು ಅಗತ್ಯವನ್ನು ಎಲ್ಲರೂ ಪ್ರತಿಪಾದಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ನಿಷ್ಪಕ್ಷಪಾತ ಮತ್ತು ಯೋಗ್ಯ ವ್ಯಕ್ತಿಗಳು ನ್ಯಾಯಮೂರ್ತಿಗಳಾಗಿರಬೇಕು, ಮತ್ತು ವಿವಾದಾಸ್ಪದ ವ್ಯಕ್ತಿಗಳನ್ನು ನ್ಯಾಯಾಂಗದಿಂದ ಹೊರಗಿಡಬೇಕು ಮತ್ತು ಆ ಕ್ಷೇತ್ರವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕುಎನ್ನುವ ನಿಟ್ಟಿನಲ್ಲಿ ಸುಧಾರಣೆಗಳಿಗಾಗಿ ಚಿಂತನೆ ಮತ್ತು ಹೋರಾಟ ನಡೆಸಬೇಕಿದೆ.
klmanjunath-sreeshakthibuilders

klm-judicialsociety

Paid News ಕುರಿತಾದ ಸಂಗತಿಗಳು

Observations/Recommendations of the Parliament Standing Committee on Information Technology.

[ಕೇರಳ ಮಾಧ್ಯಮ ಅಕಾಡೆಮಿಯ ಜರ್ನಲ್‌ನ ಆಗಸ್ಟ್ ೨೦೧೩ರ ಸಂಚಿಕೆಯಲ್ಲಿ ಪ್ರಕಟಗೊಂಡ “Issues Related to Paid News” ಎನ್ನುವ ಲೇಖನದ ಭಾವಾನುವಾದ.]

ಕನ್ನಡಕ್ಕೆ- ಬಿ. ಶ್ರೀಪಾದ ಭಟ್

ಜನರ ನೋವಿಗೆ, ಭಾವನೆಗಳಿಗೆ ಶಕ್ತಿಶಾಲಿಯಾದ ಧ್ವನಿಯಾಗಿ ಕಾರ್ಯ ನಿರ್ವಹಿಸುವ ಮಾಧ್ಯಮವು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟು ಮಾತ್ರವಲ್ಲ ದೇಶದ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ವಿದ್ಯಮಾನಗಳನ್ನು, ಈ ವಲಯಗಳ ಕುರಿತಾದ ಸತ್ಯನಿಷ್ಠ ವರದಿಗಳನ್ನು, ಸಂಶೋಧನೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ನಾಗರಿಕ ಸಮಾಜವನ್ನು ಪ್ರಭಾವಿಗೊಳಿಸುತ್ತದೆ ಎನ್ನುವ ಕಾರಣಕ್ಕಾಗಿಯೇ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವೆಂದೇ ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿಯೇ ಕಮಿಟಿಯು (Parliament Standing Committee on Information Technology) ಮಾಧ್ಯಮದ ವಿವಿಧ ವಲಯಗಳಾದ ಮುದ್ರಣ, paid-news-indiaಟಿವಿ, ರೇಡಿಯೋ, ದಿನಪತ್ರಿಕೆಗಳು ಮೂಲಕ ಪ್ರಕಟಗೊಳ್ಳುವ ಪ್ರತಿಯೊಂದು ಸುದ್ದಿಯೂ ಬೇರೆಲ್ಲದ್ದಕ್ಕಿಂತಲೂ ಮಹತ್ವದ್ದಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಆದರೆ ಮಾಧ್ಯಮ ವಲಯದ ಕೆಲವು ಮಾಲೀಕರು, ಗುಂಪುಗಳು, ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ವ್ಯಕ್ತಿಯೊಬ್ಬನ, ರಾಜಕಾರಣಿಯ, ಸಂಸ್ಥೆಗಳ ಪರವಾಗಿ ಏಕಪಕ್ಷೀಯ ವರದಿಗಳನ್ನು ನೀಡುತ್ತಿವೆ ಹಾಗೂ ಇದಕ್ಕಾಗಿ ಹಣವನ್ನು ಪಡೆದಿವೆ ಎನ್ನುವ, Paid News ಎಂದೇ ಕುಖ್ಯಾತಿ ಪಡೆದಿರುವ ಆರೋಪಗಳ ಕುರಿತಾಗಿ ಕಮಿಟಿಯು ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಈ ಹಗರಣವು ಷೇರು ಮಾರುಕಟ್ಟೆಯನ್ನು, ಸೆನ್ಸೆಕ್ಸ್ ಅನ್ನು, ರಿಯಲ್ ಎಸ್ಟೇಟ್ ಮಾರ್ಕೆಟ್ ಮೇಲೆ ಪರಿಣಾಮ ಬೀರುವಷ್ಟು ಪ್ರಭಾವಶಾಲಿಯಾಗಿದೆ. ಅಲ್ಲದೆ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ವಿಶ್ಲೇಷಣೆಗಳ ಮೇಲೆ, ಮತದಾರನ ಮೇಲೆ ಇದು influence ಮಾಡುತ್ತದೆ. ಕಮಿಟಿಯ ಆತಂಕವೇನೆಂದರೆ ಇದು ಕೇವಲ ವ್ಯಕ್ತಿಯೊಬ್ಬನ, ಪತ್ರ್ರಕರ್ತನೊಬ್ಬನ ಭ್ರಷ್ಟಾಚಾರದ ವಿಷಯ ಮಾತ್ರವಲ್ಲ, ಜೊತೆಗೆ ಈ Paid News ಹಗರಣವು ಪತ್ರಕರ್ತರು, ವ್ಯವಸ್ಥಾಪಕರು, ಮಾಧ್ಯಮಗಳ ಮಾಲೀಕರು, ಕಾರ್ಪೋರೇಟ್ಸ್, ಸಾರ್ವಜನಿಕ ಸಂಪರ್ಕ ಸಂಸ್ಥೆಗಳು, ಜಾಹಿರಾತು ಸಂಸ್ಥೆಗಳು ಮತ್ತು ರಾಜಕೀಯ ಕ್ಷೇತ್ರದ ಕೆಲವು ವಲಯಗಳೆಲ್ಲವನ್ನೂ ಒಳಗೊಂಡಿದೆ. ಇದರ ಕುರಿತಾಗಿ ತನಿಖೆಯನ್ನು ಕೈಗೆತ್ತಿಕೊಂಡ ಕಮಿಟಿಗೆ ಬೆಳಕಿಗೆ ಬಂದ ಮತ್ತೊಂದು ಅಘಾತಕಾರಿ ಸಂಗತಿಯೇನೆಂದರೆ Paid News ಹಗರಣವು ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಂಡುಬರುವ ವಿದ್ಯಮಾನವಲ್ಲ, ಬದಲಾಗಿ ದಿನನಿತ್ಯದ ವಹಿವಾಟುಗಳಾದ ಹೊಸ ಉತ್ಪನ್ನಗಳ, ಕಂಪನಿಗಳ launching ಸಂದರ್ಭವಾಗಿರಬಹುದು, ಇಲ್ಲವೆ ಮಾರ್ಕೆಟಿಂಗ್ ಯೋಜನೆಗಳಾಗಿರಬಹುದು. ಒಟ್ಟಾರೆ ಸುದ್ದಿ/ಜಾಹೀರಾತು ಎನ್ನುವ ಛದ್ಮವೇಶದಲ್ಲಿ ವರ್ಷಪೂರ್ತಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುತ್ತವೆ. ಅಷ್ಟೇ ಅಲ್ಲ ಇಂಡಿಯಾದ ಚುನಾವಣಾ ಕಮಿಷನ್, ಸುದ್ದಿ ಪ್ರಸಾರ ಅಸೋಶಿಯೇಶನ್ಸ್, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ವಾರ್ತಾ ಮತ್ತು ಪ್ರಚಾರ ಇಲಾಖೆ, ಎಡಿಟರ್ಸ್ ಗಿಲ್ಡ್, ಪ್ರಸಾರ ಭಾರತಿಗಳಂತಹ ಪ್ರಮುಖ ಸರ್ಕಾರಿ ಸಂಸ್ಥೆಗಳು ಮತ್ತು ದೇಶದ ಪ್ರಾಮಾಣಿಕ ಚಿಂತಕರು ಮತ್ತು ರಾಜಕೀಯ ವಿಶ್ಲೇಷಕರು ಈ Paid News ಹಗರಣವು ನಡೆದಿರುವುದರ ಕುರಿತಾಗಿ ಒಪ್ಪಿಕೊಂಡು ಈ ಹಗರಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಶಿಸಿದ್ದರೂ ಬಹುಪಾಲು ಮಾಧ್ಯಮಗಳು ಮಾತ್ರ ಇದರ ಕುರಿತಾಗಿ ತಳೆದಿರುವ ದಿವ್ಯ ಮೌನ ಕಮಿಟಿಯನ್ನು ಚಕಿತಗೊಳಿಸಿದೆ. ಸರ್ಕಾರವೂ ಇದರ ಕುರಿತಾಗಿ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಮೀಡಿಯಾ, ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ, ರೇಡಿಯೂ, ಚಲನಚಿತ್ರ, ಪಬ್ಲಿಕೇಶನ್ಸ್, ಜಾಹೀರಾತು ವಿಭಾಗಗಳ ನಡುವೆ ಒಂದು ಬಗೆಯ ಆರೋಗ್ಯಕರ ಪೈಪೋಟಿ ಇರುವಂತಹ ಸೌಹಾರ್ದಯುತ ವಾತಾವರಣ ನಿರ್ಮಿಸುವಂತಹ ಗುರುತರವಾದ ಹೊಣೆಗಾರಿಕೆಯು ವಾರ್ತಾ ಮತ್ತು ಪ್ರಚಾರ ಇಲಾಖೆಯ ಮೇಲಿದೆ ಎಂದು ಕಮಿಟಿ ಅಬಿಪ್ರಾಯ ಪಟ್ಟಿದೆ. ಸುದ್ದಿ ಪ್ರಸರಣವು ಅತ್ಯಂತ ಜವಾಬ್ದಾರಿಯುತವಾಗಿಯೂ, ಪಕ್ಷಪಾತವನ್ನು ಮಾಡದೆ ನೇರ ಮತ್ತು ದಿಟ್ಟವಾಗಿರುವಂತೆ ರೂಪಿಸುವುದು ಇಲಾಖೆಯ ಕರ್ತವ್ಯವೆಂದು ಕಮಿಟಿ ಅಭಿಪ್ರಾಯ ಪಟ್ಟಿದೆ. ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಸರ್ಕಾರ ಇವೆರೆಡೂ ಈ Paid News ಹಗರಣಕ್ಕೆ ಸಂಬಂಧಿಸಿದಂತೆ ಸೂಕ್ತವಾದ ನೀತಿನಿಯಾಮಾವಳಿಗಳನ್ನು ಜಾರಿಗೊಳಿಸಿಲ್ಲ ಎಂದು ಕಮಿಟಿ ಹೇಳಿದೆ. ವಾರ್ತಾ ಮತ್ತು ಪ್ರಚಾರ ಇಲಾಖೆಯು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವ ಅವಕಾಶಗಳಿದ್ದಾಗಲೂ ಅದನ್ನು ಹೊಣೆಗಾರಿಕೆಯಿಂದ ನಿಭಾಯಿಸಲಿಲ್ಲ ಎಂದು ಕಮಿಟಿ ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯು ಈ ಕೂಡಲೆ ಕಾರ್ಯಪ್ರವೃತ್ತವಾಗಿ Paid News ಹಗರಣಕ್ಕೆ ಸಂಭಂದಿಸಿದಂತೆ ತನಿಖಾ ತಂಡವನ್ನು ರಚಿಸಬೇಕೆಂದೂ ಹಾಗೂ ಈ ಹಗರಣವು ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಒಳಗೊಂಡಂತಹ ವರದಿಯನ್ನು ನೀಡಬೇಕೆಂದು ಕಮಿಟಿ ಆದೇಶಿಸಿದೆ. ಮತ್ತು ೬ ತಿಂಗಳುಗೊಳಗೆ ಸರ್ಕಾರವು ಈ ವರದಿಯನ್ನಾಧರಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಹ ಆದೇಶಿಸಿದೆ.

ಈ ಸಂಸದೀಯ ಕಮಿಟಿಯ Paid News ಕುರಿತಾದ Observations/Recommendations ಪ್ರಕಾರ ಸ್ವಾತಂತ್ರೋತ್ತರ ನಂತರದ ವರ್ಷಗಳಲ್ಲಿ ಈ ಮಾಧ್ಯಮಗಳು ಮತ್ತು ಅದರ ಮಾಲೀಕರು ಅತ್ಯಂತ ಆರೋಗ್ಯಕರ ಪೈಪೋಟಿಯನ್ನು ಮತ್ತು ಸೌಹಾರ್ದಯುತ ವಾತಾವರಣವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ವರ್ಷಗಳುರುಳಿದಂತೆ ಈ ಮಾಧ್ಯಮಗಳು ಮತ್ತು ಅದರ ಮಾಲೀಕರು ಆರ್ಥಿಕವಾಗಿ ಬಲಾಢ್ಯರಾದಂತೆಲ್ಲ, ತಾನು ಜನರನ್ನು ನೇರವಾಗಿ ತಲುಪಬಲ್ಲಂತಹ ಪ್ರಭಾವಶಾಲಿ ಪರಿಣಾಮಕಾರಿ ಸಂಸ್ಥೆಯೆಂದು ಆತ್ಮವಿಶ್ವಾಸ ಮೂಡಲಾರಂಭಿಸಿದ ತಕ್ಷಣ ಇಡೀ ಪತ್ರಿಕೋದ್ಯಮದ ನೈತಿಕತೆಯೇ ಕುಸಿಯತೊಡಗಿತು. ಈ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಜಾಹೀರಾತು ಮತ್ತು ಇತರೇ ಮಾರ್ಗಗಳಿಗೆ ಮೊರೆ ಹೋಗುವುದಕ್ಕಿಂತ ಮಾಧ್ಯಮಗಳ ಮೇಲೆ ನೇರವಾದ ಪ್ರಭಾವವನ್ನು ಬೀರಿದರೆ ಹೆಚ್ಚಿನ ಅನುಕೂಲಗಳು ಮತ್ತು ಪರಿಣಾಮಕಾರಿ ಫಲಿತಾಂಶಗಳು ತಮ್ಮ ಕಡೆಗೆ ವಾಲಬಹುದೆಂದು ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮನದಟ್ಟಾಗಿತ್ತು. ಇದು malpractice ಗೆ ದಾರಿ ಮಾಡಿಕೊಟ್ಟಿತು. ಕೇಂದ್ರ ಚುನಾವಣಾ ಕಮಿಷನ್‌ಗೆ ೨೦೦೪ರಲ್ಲಿಯೇ Paid News ಹಗರಣವು ಗಮನಕ್ಕೆ ಬಂದಿತ್ತಾದರೂ ೨೦೦೯ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಮತ್ತು ನಂತರ paidmedia2ಈ Paid News ಹಗರಣವು ಅತ್ಯಂತ ಪ್ರಮುಖವಾಗಿ ಚರ್ಚಿತವಾಗತೊಡಗಿತು ಎಂದು ಕಮಿಟಿ ಅಭಿಪ್ರಾಯಪಟ್ಟಿದೆ. ಮತ್ತೂ ಮುಂದುವರೆದು ಕಮಿಟಿಯು ಕಳೆದೆರಡು ದಶಕಗಳಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಅರ್ಥಾತ್ ದೃಶ್ಯ ಮಾಧ್ಯಮವು ಜನಪ್ರಿಯತೆ ಗಳಿಸಿದಂತೆಲ್ಲಾ ಅದು ಹೆಚ್ಚು ಹೆಚ್ಚು ವಾಣಿಜ್ಯೀಕರಣಗೊಂಡು ಅದರ ಮೇಲೆ ಕಾರ್ಪೋರೇಟ್‌ನ ಪ್ರಾಬಲ್ಯ ಬಲವಾಗತೊಡಗಿತು ಎಂದು ವಿವರಿಸಿದೆ. ಅಷ್ಟೇಕೆ ಸಾಮಾನ್ಯವಾಗಿ ಸಂಪಾದಕರು ಮತ್ತು ಪ್ರಕಾಶಕರು ಕಛೇರಿಗಳು ಹೊರಪ್ರಪಂಚದಿಂದ ಸಂರಕ್ಷಿಸಲ್ಪಟ್ಟಿರುವಂತಹ ಸಾಂಪ್ರದಾಯಿಕ ವ್ಯವಸ್ಥೆಯು ಇಂದು ಬದಲಾಗಿದೆ ಮತ್ತು ಹೆಚ್ಚು ಹೆಚ್ಚು compromise ಆಗುತ್ತಿದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಪ್ರಕಾರ ಕಳೆದ ಆರು ದಶಕಗಳಲ್ಲಿ ವಿವಿಧ ಸಮಾರಂಭಗಳಲ್ಲಿ ಭಾಗವಹಿಸಿ ಗಿಫ್ಟ್‌ಗಳನ್ನು ಸ್ವೀಕರಿಸುವುದರಿಂದ, ಆಗಾಗ್ಗೆ ಅಭ್ಯರ್ಥಿಗಳ ಪ್ರಾಯೋಜತ್ವದಲ್ಲಿ ವಿದೇಶಿ ಪ್ರವಾಸದಂತಹ ಘಟನೆಗಳಿಂದ ಶುರುವಾದ ಈ Paid News ನ ಪರಿಕಲ್ಪನೆ ಇಂದು ನೇರವಾಗಿ ಹಣವನ್ನು ಕೊಡುವ ಕಾಲಕ್ಕೆ ತಲುಪಿದೆ. ಇತ್ತೀಚೆಗೆ ಮಾಧ್ಯಮಗಳ ಮಾಲೀಕರು ತಮಗೆ ನಿಯಮಿತವಾಗಿ ಜಾಹೀರಾತುಗಳನ್ನು ನೀಡುತ್ತಿರುವ, ತಮ್ಮ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಳ್ಳುವ ಉದ್ದಿಮೆದಾರರು, ಉದ್ದಿಮೆ ನಡೆಸುವ ಕುಟುಂಬಗಳು ಇವರಿಗೆ ಪ್ರಶಸ್ತಿಗಳನ್ನು ಪ್ರಕಟಿಸಿ, ಅದನ್ನು ವಿತರಿಸಲು ಪ್ರಶಸ್ತಿ ಪ್ರಧಾನ ಸಮಾರಂಭಗಳನ್ನು ಆಯೋಜಿಸುವ ಹಂತಕ್ಕೆ ಈ Paid News ತಲುಪಿರುವುದು ಕಂಡು ಕಮಿಟಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೆಲವೊಮ್ಮೆ ಕಣದಲ್ಲಿರುವ ಅಭ್ಯರ್ಥಿಗೆ ಪಬ್ಲಿಸಿಟಿಯನ್ನು ಸಂಪೂರ್ಣವಾಗಿ ನಿರಾಕರಿಸಲಾಗುವುದರ ಮೂಲಕ ಪರೋಕ್ಷವಾಗಿ ಬ್ಲಾಕ್ ಮಾಡಲಾಗುತ್ತದೆ. ಇನ್ನೂ ಕೆಲವೊಮ್ಮೆ ವಯುಕ್ತಿಕ ಸಂಭಂಧದ ನೆಲೆಯಲ್ಲಿ ಅಗತ್ಯಕ್ಕಿತಂಲೂ ಹೆಚ್ಚಿನ ಪಬ್ಲಿಸಿಟಿ ನೀಡುತ್ತಾರೆ. ಈ Paid News ನ ಮತ್ತೊಂದು ಅಪಾಯಕಾರಿ ಮಗ್ಗಲೆಂದರೆ ಖಾಸಗಿ ಒಡಂಬಡಿಕೆಗಳ ಅಡಿಯಲ್ಲಿ ಮಾಧ್ಯಮ ಮತ್ತು ಕಾರ್ಪೋರೇಟ್ ವಲಯಗಳ ನಡುವೆ ಏರ್ಪಡುವ ಅನೈತಿಕ ಮೈತ್ರಿ.

ಈ Paid News ನ ಎಲ್ಲಾ ಮಗ್ಗಲುಗಳನ್ನು ಶೋಧಿಸಿ ಈಗಿನ ಮಟ್ಟದಲ್ಲಿಯೇ ನಿಯಂತ್ರಿಸದಿದ್ದರೆ ಮುಂದೆ ಇದು ದೈತ್ಯಾಕಾರ ಸ್ವರೂಪ ತಾಳುತ್ತದೆ ಎಂದು ಕಮಿಟಿ ಅಭಿಪ್ರಾಯಪಡುತ್ತದೆ. ಸುದ್ದಿ ಮತ್ತು ಸಮಾಚಾರ ಮತ್ತು ಜಾಹೀರಾತು ಇವುಗಳ ನಡುವೆ ಒಂದು ಅಥೆಂಟಿಕ್ ಆದ ಭಿನ್ನತೆಯನ್ನು ಕಾಯ್ದುಕೊಳ್ಳುವಂತೆ ಮಂತ್ರಿಮಂಡಲವು ಈ ನಿಟ್ಟಿನಲ್ಲಿ ಈ ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಹೇಳುತ್ತಾ ನಿಜಕ್ಕೂ ಜಾಹೀರಾತು ಮತ್ತು Paid News ನ ನಡುವೆ ವಸ್ತುವಿನ ವಿಷಯದಲ್ಲಿ ಯಾವುದೇ ವ್ಯತ್ಯಾಸ ಇರದಿದ್ದರೂ Paid News ಅನ್ನು ಜಾಹೀರಾತಿನಂತೆ ಬಿಂಬಿಸದೆ ಸುದ್ದಿ ಮತ್ತು ಸಮಾಚಾರದಂತೆ ಬಿಂಬಿಸಲಾಗುತ್ತದೆ. ಇವುಗಳ ನಡುವೆ ಭಿನ್ನತೆಯನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಒಂದು ವೇಳೆ Paid News ಅನ್ನು ಜಾಹೀರಾತೆಂದು ತೋರಿಸುವಾಗಲೂ ಜಾಹೀರಾತು ಎನ್ನುವ ಪದವನ್ನು ಕಣ್ಣಿಗೆ ಕಾಣದಷ್ಟು ಚಿಕ್ಕ ಅಕ್ಷರಗಳಲ್ಲಿ ಪತ್ರಿಕೆಯ ಮೂಲೆಯಲ್ಲಿ ‘Advt.’ ಎಂದು ಮುದ್ರಿಸಿರುತ್ತಾರೆ. ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತು ಎನ್ನುವ ಸಣ್ಣ ಪದ ನಿಂರತರವಾಗಿ scroll/ticker ಆಗುತ್ತಿರುತ್ತದೆ. ರೇಡಿಯೋದಲ್ಲಿಯಂತೂ ಪ್ರಾಯೋಜಕರ ಹೆಸರನ್ನೇ ಪ್ರಸ್ತಾಪಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕಮಿಟಿಯು ಎಲೆಕ್ಟ್ರಾನಿಕ್ ಮೀಡಿಯಗಾಗಿಯೇ ರೂಪಿಸಿದ ಕೇಬಲ್ ಟೆಲಿವಿಶನ್ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಬರುವ ರೂಲ್ ೭(೧೦)ನಲ್ಲಿ ಸಮಾಚಾರ ಮತ್ತು ಸುದ್ದಿಗಳು ಜಾಹೀರಾತಿಗಿಂತಲೂ ಸ್ಪಷ್ಟವಾಗಿಯೇ ಭಿನ್ನವಾಗಿರಬೇಕು ಮತ್ತು ಇತರೇ tv-mediaಪ್ರಾಯೋಜಿತ ಕಾರ್ಯಕ್ರಮಗಳೊಂದಿಗೆ ಹಸ್ತಕ್ಷೇಪ ಮಾಡಬಾರದೆಂದು ಹೇಳಲಾಗಿದೆ ಎಂದು ಕಮಿಟಿ ವಿವರಿಸಿದೆ. ಇದರ ಜೊತೆಗೆ ಪ್ರೋಗ್ರಾಮ್ ಕೋಡ್‌ನ ಅಡಿಯಲ್ಲಿ ಬರುವ ರೂಲ್ ೬(೧)( ಜ) ನ ಪ್ರಕಾರ ದಿನನಿತ್ಯ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿ, ಪ್ರಚೋದನಕಾರಿ, ಅಶ್ಲೀಲ ಸಂಭಾಷಣೆ ಮತ್ತು ದೃಶ್ಯಗಳಿದ್ದರೆ ಅದು ಕಾನೂನುಬಾಹಿರ ಮತ್ತು ಸಂಬಂಧಪಟ್ಟವರು ಶಿಕ್ಷೆಗೊಳಗಾಗಬೇಕಾಗುತ್ತದೆ ಎಂದು ಕಮಿಟಿ ವಿವರಿಸುತ್ತದೆ.

ಹಾಲಿಯಲ್ಲಿ ಚಾಲ್ತಿಯಲ್ಲಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೀಡಿಯಾ ಹೌಸ್‌ಗಳ ಮೇಲೆ ವಾರ್ತಾ ಮತ್ತು ಪ್ರಚಾರ ಇಲಾಖೆಯು ನಿರಂತರ ಒತ್ತಡ ಹೇರಬೇಕೆಂದು, ಒಂದು ವೇಳೆ ಪಾಲಿಸದಿದ್ದರೆ ಅಂತಹ ಮಾಲೀಕರ ಮೇಲೆ ಕಟ್ಟುನಿಟ್ಟಾದ ಕ್ರಮ ಜರುಗಿಸಬೇಕೆಂದು ಕಮಿಟಿ ಬಯಸುತ್ತದೆ. ಮುದ್ರಣ ಮಾಧ್ಯಮಗಳ ಮೇಲೆ “ಜಾಹೀರಾತು” ಎನ್ನುವ ಪದವನ್ನು ಬೋಲ್ಡ್ ಆಗಿ ಕಣ್ಣಿಗೆ ಕಾಣುವಂತೆ ಮುದ್ರಿಸಬೇಕೆಂದು ಸರ್ಕಾರವು ಆದೇಶಿಸಬೇಕು ಮತ್ತು ಇಲ್ಲಿ Disclaimer ಪದವನ್ನು ಸೂಕ್ತವಾಗಿ ಮುದ್ರಿಸಬೇಕು. ಎಲೆಕ್ಟ್ರಾನಿಕ್ಸ್ ಮಾಧ್ಯಮಗಳು ಪ್ರಸಾರದ ಸಮಯದವರೆಗೂ “Advertorial”, ‘ಈ ಭಾಗವು ಜಾಹೀರಾತು’ ಎನ್ನುವ ಪದವನ್ನು, ಮೇಲ್ಭಾಗದ ಮಧ್ಯದಲ್ಲಿ ಆ ಛಾನಲ್ ಹೆಸರಿನ Font Size ನಷ್ಟೇ ದೊಡ್ಡ ಅಕ್ಷರಗಳಲ್ಲಿ ಲಗತ್ತಿಸಿರಬೇಕು. ಪ್ರತಿಯೊಂದು ಕಾರ್ಯಕ್ರಮದ ವಿರಾಮದ ಸಮಯದ ಮುಂಚೆ ಮತ್ತು ನಂತರ ಪ್ರಾಯೋಜಕರ ಹೆಸರನ್ನು ಪ್ರಕಟಿಸಬೇಕು. ರೇಡಿಯೋ ಮಾಧ್ಯಮದಲ್ಲಿ ಪ್ರತಿಯೊಂದು ವಿರಾಮದ ಮುಂಚೆ ಮತ್ತು ನಂತರ ಈ ಭಾಗದ ಪ್ರಾಯೋಜಕರ ಹೆಸರನ್ನು ಪ್ರಕಟಿಸಬೇಕು ಎಂದೂ ಕಮಿಟಿಯು ಅಭಿಪ್ರಾಯ ಪಡುತ್ತದೆ. ಮೇಲಿನ ಶಿಫಾರಸುಗಳ ಅನುಷ್ಟಾನಕ್ಕಾಗಿ ಪಾಲಿಸಿ ನಿರ್ಧಾರಗಳಿಗಾಗಿ ಕಾಯುವ ಅವಶ್ಯಕತೆ ಇಲ್ಲ, ಯಾವುದೇ ಶಾಸನದ ತಿದ್ದುಪಡಿಯ ಅವಶ್ಯಕತೆಯೂ ಇಲ್ಲ. ಸಮಯ ವ್ಯರ್ಥ ಮಾಡದೆ ಜಾರಿಗೊಳಿಸಬೇಕು ಎಂದು ಕಮಿಟಿ ಒತ್ತಾಯಿಸುತ್ತದೆ.

Paid News ಎನ್ನುವ ವಾಸ್ತವ ಸಂಗತಿಯ ಸಂಕೀರ್ಣತೆಯನ್ನು,ಕಾಲ ಕಾಲಕ್ಕೆ ಬದಲಾಗುತ್ತಿರವ ಅದರ ಸ್ವರೂಪಗಳು ಮತ್ತು ಉದ್ದೇಶಗಳನ್ನು ಮತ್ತಷ್ಟು ಸರಳವಾಗಿ ವಿವರಿಸಲು ಮತ್ತು ಯಾವ ಬಗೆಯ ನಿಯಮಗಳು ಮತ್ತು ಅಂಶಗಳು Paid News ಅನ್ನು ಸರಿಯಾಗಿ ಅರ್ಥೈಸುತ್ತವೆ ಎನ್ನುವುದರ ಕುರಿತಾಗಿಯೂ ನಾವೆಲ್ಲ ಸ್ಪಷ್ಟವಾಗಿರಬೇಕು. Corruption-in-News-Mediaಸಚಿವಾಲಯವು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಶಿಫಾರಸ್ಸುಗಳನ್ನು ಕುರುಡಾಗಿ ಒಪ್ಪಿಕೊಳ್ಳದೆ ಸಂಬಂಧಿತ ವ್ಯಕ್ತಿಗಳನ್ನೂ, ಮಾಧ್ಯಮದ ನಿಷ್ಣಾತರೊಂದಿಗೆ ಸಮಾಲೋಚಿಸಿ ಮೇಲಿನ ಎಲ್ಲಾ ಶಿಫಾರಸ್ಸುಗಳ ಅನುಷ್ಟಾನಕ್ಕೆ ಮುಂದಾಗಬೇಕೆಂದು ಕಮಿಟಿ ಒತ್ತಾಯಿಸುತ್ತದೆ.

’Paid News’ನ ಹಗರಣಗಳಲ್ಲಿ ಇಡೀ ಹಣದ ವಹಿವಾಟು ರಹಸ್ಯವಾಗಿ ನಡೆದಿರುತ್ತದೆ.ಈ ಗೌಪ್ಯ ವಹಿವಾಟನ್ನು ಬಹಿರಂಗಗೊಳಿಸುವ ಸಂಧರ್ಭದಲ್ಲಿ ಇಡೀ ಹಗರಣವನ್ನು ಸಾಕ್ಷಿ ಸಮೇತ ಸಾಬೀತುಗೊಳಿಸಲು ಕಷ್ಟವಾಗುತ್ತದೆ. ಉದಾಹರಣೆಗೆ ಚುನಾವಣೆಯ ಸಂಧರ್ಭದಲ್ಲಿ ಕಣದಲ್ಲಿರುವ ಅಭ್ಯರ್ಥಿಯೊಬ್ಬ ಸುದ್ದಿಗಾಗಿ ಹಣವನ್ನು ನೀಡಲು ನಿರಾಕರಿಸಿದರೆ ಮಾಧ್ಯಮಗಳಲ್ಲಿ ಆತನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತದೆ. ಆದರೆ ಇದನ್ನು ಸಾಬೀತುಪಡಿಸಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಚುನಾವಣ ಕಮಿಷನ್‌ಗೆ ನಿಜಕ್ಕೂ ಕಷ್ಟಕರವಾಗುತ್ತದೆ. ೨೦೧೦ರಲ್ಲಿ ಬಿಡುಗಡೆಗೊಂಡ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಉಪ ಸಮಿತಿಯ ರಿಪೋರ್ಟನ ಪ್ರಕಾರ Paid News ಅನ್ನು ಮೌಖಿಕವಾಗಿ ಪುಷ್ಟೀಕರಿಸಬಹುದಾದರೂ ಅದನ್ನು ಬೆಂಬಲಿಸಲು ಅವಶ್ಯಕವಾದಂತಹ ದಾಖಲೆಗಳು ದೊರಕದೆ ಇಡೀ ಪ್ರಕರಣದ ಆರೋಪಗಳು ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ದೃಶ್ಯ ಮಾಧ್ಯಮಗಳಲ್ಲಿ ಇದರ Coverage ಅತ್ಯಂತ ಕ್ಷಣಿಕ ಮತ್ತು ಕಡಿಮೆ ಅವಧಿಯಾಗಿರುವುದರಿಂದ ಅದನ್ನು ಪತ್ತೆ ಹಚ್ಚಲೂ ಕಷ್ಟವಾಗುತ್ತದೆ. ಆಂತಹ ಸಂಧರ್ಭದಲ್ಲಿ ಆಗ ಸಾಂಧರ್ಬಿಕ ಪುರಾವೆಗಳನ್ನು (circumstantial evidence) ಆಧಾರವಾಗಿ ಪರಿಗಣಿಸಬಹುದು. ಈ ಸಾಂಧರ್ಬಿಕ ಪುರಾವೆಗಳನ್ನು ಪ್ರಮಾಣೀಕರಿಸಲು, ಪ್ರಸಾರವಾದ ಕಾರ್ಯಕ್ರಮಗಳ ದೃಶ್ಯಾವಳಿಗಳನ್ನು ಸಂಪಾದಿಸಲು ಸಚಿವಾಲಯವು ಮಾಧ್ಯಮ ನಿಪುಣರೊಂದಿಗೆ ಮತ್ತು ಪ್ರಸಾರ ಭಾರತಿಯ ಸಹಯೋಗದೊಂದಿಗೆ ಸೂಕ್ತವಾದ ಕಾನೂನನ್ನು ರೂಪಿಸಬೇಕು

ಸಂಪಾದಕೀಯ ಬಳಗ, ಜಾಹೀರಾತು ವಿಭಾಗ, ಸಾರ್ವಜನಿಕ ಸಂಪರ್ಕ ವಿಭಾಗ, Lobbying ವಿಭಾಗ ಇವೆಲ್ಲವೂ ಒಂದಾಗಿ ಪರಸ್ಪರ ಹೊಂದಾಣಿಕೆ ಮತ್ತು ಸಹಕಾರಗಳ ಮೂಲಕವೇ Paid News ಹಗರಣ ಜನ್ಮ ತಾಳುತ್ತದೆ. ಈ Paid News ಹಗರಣಕ್ಕೆ ಮತ್ತೊಂದು ಪ್ರಮುಖ ಕಾರಣ ಕುಂಠಿತಗೊಳ್ಳುತ್ತಿರವ ಸಂಪಾದಕೀಯ ಮಂಡಳಿಯ/ವರದಿಗಾರರ ಸ್ವಾತಂತ್ರ. ಸಂಪಾದಕರ ಅಧಿಕಾರ ವ್ಯಾಪ್ತಿಯಲ್ಲಿ ಅಡ್ಡಬಂದು ಪ್ರತಿಯೊಂದರಲ್ಲೂ ಮೂಗು ತೂರಿಸುವ ಮಾಲೀಕರು, ಮಾರ್ಕೆಟಿಂಗ್ ಟೀಮ್‌ಗಳು ತಮ್ಮ ಈ ವರ್ತನೆಗಳ ಮೂಲಕ, ಸಂಪಾದಕರ ವೈಯಕ್ತಿಕ ಸ್ವಾತಂತ್ರವನ್ನು,ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಮೊಟುಕುಗೊಳಿಸಲಾಗುತ್ತದೆ. paid-news-cartoonಪ್ರಾರಂಭದಲ್ಲಿ ಈ “Paid News/Advertorials” ನಂತಹ ಸಂಗತಿಗಳನ್ನು ಮಾರ್ಕೆಟಿಂಗ್ ಕಾರ್ಯತಂತ್ರವಾಗಿ ರೂಪಿಸಲಾಗುತ್ತಿತ್ತು. ಆದರೆ ಈಗ ಸಂಗತಿಗಳು ಅಭ್ಯರ್ಥಿಯ ಪರವಾಗಿ ಉಪಯುಕ್ತವಾದ Coverage ಗಳು ಮತ್ತು ವಿರೋಧಿ ಪಕ್ಷದ ಅಭ್ಯರ್ಥಿಯ ವಿರುದ್ಧವಾಗಿ ತೇಜೋವಧೆಯ ವರದಿಗಳು ಪ್ರಕಟಗೊಳ್ಳುವ ಹಂತಕ್ಕೆ ಬಂದು ತಲುಪಿದೆ.

ಈ ವರದಿಗಾರರ ಸ್ವಾತಂತ್ರ ಕುಂಠಿತಗೊಳ್ಳಲು ಚಾಲ್ತಿಯಲ್ಲಿರುವ ಕಾಂಟ್ರಾಕ್ಟ್ ಪದ್ಧತಿಯೂ ಪ್ರಮುಖವಾದ ಕಾರಣ. ಏಕೆಂದರೆ ಈ ಕಾಂಟ್ರಾಕ್ಟ್ ಪದ್ಧತಿಯಿಂದಾಗಿಯೇ ಈ ವರದಿಗಾರರ ಸ್ಥಾನಮಾನವು ಕೇವಲ ಒಬ್ಬ ಮಾರ್ಕೆಟ್ ಏಜೆಂಟರ ಮಟ್ಟಕ್ಕೆ ಕುಸಿಯುತ್ತದೆ. PCI ನ ಪ್ರಕಾರ ಸಂಬಂಧಪಟ್ಟ ಪತ್ರಿಕೆ/ಛಾನಲ್‌ನೊಂದಿಗೆ ಕಾಲಕಾಲಕ್ಕೆ ತನ್ನ ಕಾಂಟ್ರಾಕ್ಟ್ ಅನ್ನು ನವೀಕರಿಸಿಕೊಳ್ಳಲು ವರದಿಗಾರರು ನಿರಂತರವಾಗಿ ಫಲಿತಾಂಶವನ್ನು ಕೊಡುತ್ತಿರಬೇಕಾಗುತ್ತದೆ. ಈ ರೀತಿಯಾಗಿ ಕಾಂಟ್ರಾಕ್ಟ್ ಪದ್ಧತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಮಾಲೀಕ ವರ್ಗ ಅನೇಕ ಬಾರಿ ವರದಿಗಾರರ ನೆತ್ತಿಯ ಮೇಲೆ ವರ್ಗಾವಣೆಯ ತೂಗುಕತ್ತಿ ನೇತಾಡಿಸುತ್ತಿರುತ್ತದೆ. ಕೆಲವು ನಗರಗಳನ್ನು ಹೊರತುಪಡಿಸಿ ಇತರೇ ಪಟ್ಟಣ ಮತ್ತು ಸಣ್ಣ ಹೋಬಳಿ ಮಟ್ಟದಲ್ಲಿ ಕೆಲಸ ಮಾಡುವ ವರದಿಗಾರರ ವೇತನ ಕನಿಷ್ಠ ಮಟ್ಟದಲ್ಲಿರುತ್ತದೆ. ಕೆಲವು ಬಾರಿ ಕಾಂಟ್ರಾಕ್ಟ್ ವರದಿಗಾರರಿಗೆ ಕಮಿಷನ್ ಪದ್ಧತಿಯಲ್ಲಿ ವೇತನವನ್ನು ನೀಡಲಾಗುತ್ತದೆ. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತಲೂ ಕಡಿಮೆ ಸಂಬಳವನ್ನು ಕೊಡುತ್ತಾರೆ. ಕಮಿಟಿಯು ಮಾಧ್ಯಮರಂಗದಲ್ಲಿರುವ ಎಲ್ಲಾ ಪತ್ರಕರ್ತರು ಕಾರ್ಯನಿರತ ಪತ್ರಕರ್ತರ ಆಕ್ಟ್ ನ ಅಡಿಯಲ್ಲಿ ಬರುವಂತೆ ಕಾನೂನು ರೂಪಿಸಬೇಕೆಂದು ಆಶಿಸಿದೆ.

PCI ನ ಉಪಸಮಿತಿಯ ವರದಿ “Election, Coverage, Monitoring in Gujarat” ಯಲ್ಲಿ Paid News ನ ಕಾಂಟ್ರಾಕ್ಟ್ ವಹಿವಾಟನ್ನು ಮೇಲ್ಮಟ್ಟದಲ್ಲಿ ರಹಸ್ಯವಾಗಿ ಅಂತಿಮಗೊಳಿಸಲಾಗುತ್ತದೆ, ನಂತರ ಕಾಲಕಾಲಕ್ಕೆ ನಮಗೆ ಮೇಲಿನಿಂದ ನಿರ್ದಿಷ್ಟ ಸುದ್ದಿಯನ್ನು ಅಥವಾ ನಿರ್ದಿಷ್ಟ ಫೋಟೋಗಳನ್ನು ಪ್ರಕಟಿಸಬೇಕೆಂದು words_for_price_paid-newsಆದೇಶಗಳು ಬರುತ್ತವೆ ಎಂದು ಹಲವಾರು ಸಂಪಾದಕರು ಮತ್ತು ಪತ್ರಕರ್ತರು ವಿವರಿಸಿದರು ಎಂದು ವಿವರಿಸಲಾಗಿದೆ. ಆದರೆ ಪತ್ರಕರ್ತರ ನೀತಿಸಂಹಿತೆಯ ನಿಬಂಧನೆ ಪ್ಯಾರಾ ೩೭ (A) ನ ಅಡಿಯಲ್ಲಿ ಯಾವುದೇ ಸಂಧರ್ಭದಲ್ಲಿಯೂ ಮಾಧ್ಯಮದ ಮಾಲೀಕರು ತಮ್ಮ ಸಂಪಾದಕರಿಗೆ ವಯುಕ್ತಿಕ ಹಿತಾಸಕ್ತಿಗಳನ್ನು ಪಾಲಿಸುವಂತೆ ನಿರ್ದೇಶನಗಳನ್ನು ನೀಡಬಾರದೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ೨೦೧೨ರ ಗುಜಾರಾತ್ ಚುನಾವಣೆಯ ಸಂಧರ್ಭದಲ್ಲಿ ೧೨೬ Paid News ಕೇಸುಗಳನ್ನು ದಾಖಲೆ ಸಮೇತ ಮಂಡಿಸಿದೆ. ಇದರಲ್ಲಿ ಕಣದಲ್ಲಿದ್ದ ೬೧ ಅಭ್ಯರ್ಥಿಗಳು Paid News ನ ಹಗರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದೇ ಸಂಧರ್ಬದಲ್ಲಿ ಜಿಲ್ಲಾ ಮಟ್ಟದ ಪ್ರಮಾಣಪತ್ರ ಮತ್ತು ಮೇಲುಸ್ತುವಾರಿ ಕಮಿಟಿಯು ೪೧೪ Paid News ಹಗರಣಗಳನ್ನು ಪತ್ತೆಹಚ್ಚಿದೆ. ಈ Paid News ನಲ್ಲಿ ಭಾಗಿಯಾಗಿರುವ ಶಂಕಿತರು ತಾವು ವಕಾಲತ್ತು ವಹಿಸುವ ಅಭ್ಯರ್ಥಿಗಳ ಪರವಾಗಿ ಕರಪತ್ರಗಳನ್ನು ಹಂಚುತ್ತಾ ಆತನ ವಿರೋಧಿಗಳ ವಿರುದ್ಧವಾಗಿ ಅಪಪ್ರಚಾರ ಮಾಡುತ್ತಿದ್ದರು ಎನ್ನುವ ಮತ್ತೊಂದು ಅಘಾತಕಾರಿ ಸಂಗತಿ ಬಯಲಾಗಿದೆ.

ಮಾಧ್ಯಮರಂಗದ ಮಾಲೀಕರು ಮತ್ತು ಕಾರ್ಪೋರೇಟ್ ಸಂಸ್ಥೆಗಳ ನಡುವೆ ಆಸ್ತಿತ್ವದಲ್ಲಿರುವ ಖಾಸಗಿ ಒಡಂಬಡಿಕೆಗಳ ಸ್ವರೂಪದ ಕುರಿತು ಮಾತನಾಡುತ್ತ ಕಮಿಟಿಯು ಈ ಖಾಸಗಿ ಒಡಂಬಡಿಕೆಗಳ ವಿಧಿವಿಧಾನಗಳೇ ಈ Paid News ನಂತಹ ವಿದ್ಯಮಾನಗಳಿಗೆ ಅಪಾಯಕಾರಿಯಾದ ಮುನ್ನುಡಿಗಳಾಗಿರುತ್ತವೆ ಎಂದು ಕಳವಳ ವ್ಯಕ್ತಪಡಿಸುತ್ತದೆ. ಈ ಖಾಸಗಿ ಒಡಂಬಡಿಕೆಗಳ ಪ್ರಕಾರ ಕಾರ್ಪೋರೇಟ್ ಸಂಸ್ಥೆಗಳು ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ, ಅನುಕೂಲಕರ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ಮಾಧ್ಯಮರಂಗದ ಮಾಲೀಕತ್ವದ ಸಂಸ್ಥೆಗಳಿಗೆ ತನ್ನ ಶೇರುಗಳನ್ನು ವರ್ಗಾಯಿಸುತ್ತದೆ. ಆದರೆ ಈ ವ್ಯವಹಾರವು ಜರ್ನಲಿಸಂನ ನೀತಿನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಹಾಗೂ Paid News/Advertorials ಮಾದರಿಯ ಅನೈತಿಕ ಕಾರ್ಯವಿಧಾನಕ್ಕೆ ನಾಂದಿ ಹಾಡುತ್ತದೆ ಎಂದು ಕಮಿಟಿಯ ಅಭಿಪ್ರಾಯವಾಗಿದೆ. ಈ ಈ ಖಾಸಗಿ ಒಡಂಬಡಿಕೆಗಳು ಸಂಪೂರ್ಣವಾಗಿ ಪಾರದರ್ಶಕವಾಗಿರಬೇಕೆಂದು, ಮತ್ತು ಮಾಧ್ಯಮಗಳ ಮಾಲೀಕರು ತಮ್ಮ ಎಲ್ಲ ಫೈನಾನ್ಸ್ ವ್ಯವಹಾರಗಳು, ಶೇರ್‌ಗಳ ಒಡೆತನದ ಕುರಿತಾಗಿ ತಮ್ಮ ವೆಬ್‌ಸೈಟುಗಳಲ್ಲಿ ವಿವರವಾದ ಮಾಹಿತಿ ನೀಡಬೇಕೆನ್ನುವ ನಿಯಮವನ್ನು ರೂಪಿಸಬೇಕೆಂದು ಸಚಿವಾಲಯವನ್ನು ಕಮಿಟಿಯು ಒತ್ತಾಯಿಸುತ್ತದೆ.

ಒಂದೇ ಮಾಲೀಕತ್ವದ ಸಂಸ್ಥೆಯು ವಿವಿಧ ಮಾಧ್ಯಮಗಳ (ಮುದ್ರಣ, ದೃಶ್ಯ, ರೇಡಿಯೋ) ಒಡೆತನವನ್ನು ಹೊಂದಿರುವುದು ಮತ್ತು ಸಾರ್ವಜನಿಕವಾಗಿ ಏಕಸ್ವಾಮ್ಯವನ್ನು ಸಾಧಿಸುವುದು Paid News ನಂತಹ ವಿದ್ಯಮಾನಗಳಿಗೆ ಕಾರಣವಾಗುವಂತಹ ಮತ್ತೊಂದು ಗಹನವಾದ ಸಂಗತಿ. ಈ ಏಕಸ್ವಾಮ್ಯಕ್ಕೆ ಕಡಿವಾಣ ಹಾಕಲು ಕಾನೂನು ಇಲ್ಲದಿರುವುದರಿಂದ ಇಲ್ಲಿ ’ಬಾಡಿಗೆ ಮಾಲೀಕರು’ ಜನ್ಮ ತಳೆಯುತ್ತಾರೆ. ಈ ಎಲ್ಲಾ ಸಂಕೀರ್ಣತೆಯು ಸುದ್ದಿ ಸಮಾಚಾರಗಳು ಅಥೆಂಟಿಕ್ ಸ್ವರೂದಲ್ಲಿ ಇರುವುದೇ ಇಲ್ಲ. ಕಮಿಟಿಯು ಇದನ್ನು ಉದಾಹರಿಸುತ್ತಾ ೨೦೦೮ರಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯು ಮೇಲ್ಕಾಣಿಸಿದ ಸಂಗತಿಗಳನ್ನು TRAI ನ ಗಮನಕ್ಕೆ ತರುತ್ತಾ ಕಂಪನಿಗಳು ಬಹುಮಾಲೀಕತ್ವಕ್ಕಾಗಿ ಲೈಸೆನ್ಸ್/ಪರವಾನಗಿ ಪಡೆಯಲು, ನೋಂದಣಿ ಮಾಡಲು ಸುಲುಭವಾಗದಂತೆ, ಭ್ರಷ್ಟಾಚಾರವು ಮಿತಿಮೀರದಂತೆ ಕಡಿವಾಣ ಹಾಕುವಂತಹ ಪಾಲಿಸಿಗಳನ್ನು, ಕಟ್ಟುನಿಟ್ಟಾದ ಕಾನೂನುಗಳನ್ನು ರೂಪಿಸಬೇಕೆಂದು ಅಭಿಪ್ರಾಯಪಡುತ್ತದೆ. ನಿರಂತರ ಪರಾಮರ್ಶೆಯ ನಂತರ ಮುದ್ರಣ, ದೃಶ್ಯ, ರೇಡಿಯೋ ವಲಯಗಳಲ್ಲಿ election-paid-newsಮಾಧ್ಯಮರಂಗದ ಎಲ್ಲಾ ಮಗ್ಗಲುಗಳನ್ನು ಒಳಗೊಳ್ಳುವಂತೆ ಬಹುತ್ವದ, ವೈವಿಧ್ಯತೆಯ ವಾತಾವರಣವನ್ನು ನಿರ್ಮಿಸಬೇಕೆಂದು ಫೆಬ್ರವರಿ ೨೦೦೯ರಲ್ಲಿ TRAI ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡುತ್ತದೆ. ಎರಡು ವರ್ಷಕ್ಕೊಮ್ಮೆ ಇದನ್ನು ಪುನಃ ಪರಾಮರ್ಶಿಸಬೇಕೆಂದು ಸಹ ಶಿಫಾರಸ್ಸು ಮಾಡುತ್ತದೆ. ಇದರ ಆಧಾರದ ಮೇಲೆ ವಾರ್ತಾ ಮತ್ತು ಪ್ರಚಾರ ಇಲಾಖೆಯು Administrative Staff College of India, Hyderabad ನ ನೇತೃತ್ವದಲ್ಲಿ ಅಧ್ಯಯನವನ್ನು ಕೈಗೊಳ್ಳುತ್ತದೆ.೨೦೧೨ ರಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯು TRAI ಗೆ ಸಹ ಅಧ್ಯಯನವನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತದೆ. ೧೩, ಫೆಬ್ರವರಿ ೨೦೧೩ರಲ್ಲಿ TRAI ಸಂಸ್ಥೆಯು Administrative Staff College of India, Hyderabad ನ ಸಹಬಾಗಿತ್ವದಲ್ಲಿ ಪರಾಮರ್ಶೆ ವರದಿಯನ್ನು ಒಪ್ಪಿಸುತ್ತದೆ. ಇದರ ಆಧಾರದ ಮೇಲೆ ಕಮಿಟಿಯು ೨೦೧೨-೧೩ ನೇ ಸಾಲಿನ ಅನುದಾನ ಬೇಡಿಕೆಯ ಮೇಲಿನ ೩೦ ಸೆಕೆಂಡ್ ವರದಿಯಲ್ಲಿ ಶೀಘ್ರವಾಗಿ ಮಾಧ್ಯಮಗಳ ಮಾಲೀಕತ್ವದ ಏಕಸ್ವಾಮ್ಯತೆಯನ್ನು ಕೊನೆಗಾಣಿಸಬೇಕೆಂದು ಒತ್ತಾಯಿಸುತ್ತದೆ. Paid News ಅನೈತಿಕತೆಯು ಕೇವಲ ಭ್ರಷ್ಟಾಚಾರವನ್ನು ಹುಟ್ಟುಹಾಕುವುದಿಲ್ಲ, ಜೊತೆಗೆ ಓದುಗರನ್ನೂ ಮತ್ತು ವೀಕ್ಷಕರನ್ನೂ ದಾರಿ ತಪ್ಪಿಸುತ್ತದೆ, ಭ್ರಷ್ಟರನ್ನಾಗಿಸುತ್ತದೆ. ಇದು ಪ್ರಜಾಪ್ರಭುತ್ವದ ಪ್ರಕ್ರಿಯೆಗೂ ಸಹ ಕಳಂಕವನ್ನು ತರುತ್ತದೆ. PCI ನ ಉಪಸಮಿತಿಯು ೨೦೦೯ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಕುರಿತಾಗಿ ಹೇಳುತ್ತ “ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಕರೆಯಲ್ಪಡುವ ಪತ್ರಿಕಾರಂಗವು Paid News ನಂತಹ ಹಗರಣಗಳ ಮೂಲಕ ಭ್ರಷ್ಟಾಚಾರದಲ್ಲಿ ಹೂತುಹೋಗಿದೆ” ಎಂದು ಕಟುವಾಗಿ ಟೀಕಿಸುತ್ತದೆ. ಇದರಿಂದಾಗಿ ಪ್ರಜಾಪ್ರಭುತ್ವದ ಸಂರಚನೆ ದುರ್ಬಲಗೊಳ್ಳುತ್ತದೆ ಮಾತ್ರವಲ್ಲ ರಾಜಕಾರಣದಲ್ಲಿ ಅನೈತಿಕ ಹಣದ ಒಳಹರಿವು ಜಾಸ್ತಿಯಾಗುತ್ತದೆಂದು ಕಮಿಟಿಯು ಆತಂಕ ವ್ಯಕ್ತಪಡಿಸಿದೆ. ವಿಭಿನ್ನ ವಲಯಗಳಿಂದ ಬಂದ ಅಭಿಪ್ರಾಯದ ಪ್ರಕಾರ ಜನಪ್ರತಿನಿಧಿಗಳ ಅಕ್ಟ್ ೧೯೫೧ಗೆ ತಿದ್ದುಪಡಿ ತಂದು Paid News ಎನ್ನವುದು ಚುನಾವಣಾ ಅಪರಾಧ, ಶಿಕ್ಷೆಗೆ ಅರ್ಹ ಎಂದು ಉಲ್ಲೇಖಿಸಬೇಕೆಂದು ಕಮಿಟಿ ಅಭಿಪ್ರಾಯಪಡುತ್ತದೆ. ಈ ತಿದ್ದುಪಡಿಯನ್ನು ಚುನಾವಣಾ ಆಯೋಗವೂ ಸೂಚಿಸಿದೆ.

ಮತದಾನದ ದಿನಕ್ಕಿಂತ ೪೮ ಗಂಟೆಗಳ ಮೊದಲು ಚುನಾವಣಾ ಪ್ರಚಾರವನ್ನು ನಿಷೇಧಿಸಿರುವಂತಹ ಕಾನೂನನ್ನು ಮುದ್ರಣ, ದೃಶ್ಯ, ರೇಡಿಯೋ ಮಾಧ್ಯಮಗಳಿಗೂ ಅನ್ವಯಿಸಬೇಕೆಂದು ಕಮಿಟಿ ಒತ್ತಾಯಿಸುತ್ತದೆ. ಜೊತೆಗೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಹೆಚ್ಚಿಸಬೇಕು. ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಚುನಾವಣಾ ವೆಚ್ಚದ ಮಿತಿಯು ವಿಭಿನ್ನವಾಗಿರಬೇಕು ಮತ್ತು ಅಂತರವಿರಬೇಕು. ಈ Paid Newsನ ಕುರಿತಾದ ದೂರುಗಳನ್ನು ಸ್ವೀಕರಿಸಲು ಮತ್ತು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ವಿಶೇಷ ಸೆಲ್ ಒಂದನ್ನು ಸ್ಥಾಪಿಸಬೇಕು. ಅಭ್ಯರ್ಥಿ ಯಾವ ಪತ್ರಿಕೆಗಳಿಗೆ, ದೃಶ್ಯ ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುತ್ತಾರೋ, ಯಾವ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಅವರ ಕುರಿತಾದ ವಿವರಗಳು ಹೆಚ್ಚಾಗಿ ಪ್ರಕಟಗೊಳ್ಳುತ್ತವೆಯೋ ಅಂತಹ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ತಮ್ಮ ಶೇರುಗಳನ್ನು, ತಾವು ತೊಡಗಿಸಿದ ಬಾಂಡ್‌ಗಳನ್ನು ಬಹಿರಂಗಪಡಿಸಬೇಕು ಎಂದು ಕಮಿಟಿ ಆಗ್ರಹಿಸುತ್ತದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಕಾನೂನು ಮತ್ತು ಸಂಸದೀಯ ವ್ಯವಹಾರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ PAID _NEWSಸಹಯೋಗದೊಂದಿಗೆ ಚುನಾವಣ ಕಮಿಷನ್‌ನ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು. Paid News ನಂತಹ ಅವ್ಯವಹಾರಗಳನ್ನು ಪತ್ತೆ ಅದರ ವಿರುದ್ಧ ಹಚ್ಚಿ ಕಟ್ಟುನಿಟ್ಟಾದ ಕ್ರಮಗಳನ್ನು ಜರುಗಿಸಲು Regulatory bodies/organisations/professional bodies ಗಳಾದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಭಾರತೀಯ ಸುದ್ದಿ ಪ್ರಸಾರ ಮಂಡಳಿ, ಭಾರತೀಯ ಪ್ರಸಾರ ಫೆಡರೇಶನ್, ಭಾರತೀಯ ಜಾಹಿರಾತು ಕೌನ್ಸಿಲ್, ಎಲೆಕ್ಟ್ರಾನಿಕ್ ಮೀಡಿಯಾ ಮಾನಿಟರಿಂಗ್ ಕೇಂದ್ರ, ಎಡಿಟರ್ಸ್ ಗಿಲ್ಡ್ ಇಂಡಿಯಾ ಮತ್ತು ಸಿವಿಲ್ ಸೊಸೈಟಿ, ಯೂನಿಯನ್‌ಗಳು ಇನ್ನೂ ಮುಂತಾದ ಕಾನೂಬದ್ಧ ಸಂಸ್ಥೆಗಳನ್ನು ಮತ್ತು Guidelines/Norms/Codes/Acts ಗಳಾದ ಕಾರ್ಯನಿರತ ಪತ್ರಕರ್ತರ ಸಂಘ, ಭಾರತೀಯ ಸುದ್ದಿ ಪ್ರಸಾರ ಮಂಡಳಿ ಕೋಡ್, PCI Act, ಕಮರ್ಶಿಯಲ್ ಜಾಹೀರಾತು ನಿಯಂತ್ರಣದ ದೂರದರ್ಶನ ಕೋಡ್, Press and Registration of Books and Publications Act, 1867, the Cable Television Network (Regulation) Act, 1995, the Representation of Peoples Act, 1951, Income Tax Act, 1961, the Companies Act 1956 ಗಳನ್ನು ಬಳಸಿಕೊಳ್ಳಬೇಕು. ಆದರೆ ಮೇಲೆ ತಿಳಿಸಿದ ಕಾನೂನುಬದ್ಧ ಸಂಸ್ಥೆಗಳು Paid News ನಂತಹ ಅವ್ಯವಹಾರಗಳನ್ನು ನಿಯಂತ್ರಿಸುವಷ್ಟು ಪರಿಣಾಮಕಾರಿಗಿಲ್ಲ ಎಂದು ಕಮಿಟಿ ದೂರಿದೆ. PCI ಮತ್ತು ಎಡಿಟರ್ಸ್ ಗಿಲ್ಡ್ ಇಂಡಿಯಾಗಳಂತಹ ಸಂಸ್ಥೆಗಳು ತಾವು ಸಂಬಂಧಪಟ್ಟ ಮಾಧ್ಯಮಗಳ ಮೇಲೆ ಒತ್ತಡವನ್ನು ಹೇರಬಹುದೇ ಹೊರತು ಅಧಿಕಾರ ಬಳಸಿ ಕಟ್ಟುನಿಟ್ಟಾದ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಹೇಳಿವೆ. ತಮ್ಮ ಸಂಸ್ಥೆಗಳು ಕಾನೂನುಬದ್ಧವಾದ ಸರ್ಕಾರಿ ಸಂಸ್ಥೆಗಳಾದರೂ ಹಲ್ಲುಗಳಿಲ್ಲದ ಅಸಹಾಯಕ ಸಂಸ್ಥೆಗಳಾಗಿವೆ ಎಂದು ಒಪ್ಪಿಕೊಳ್ಳುತ್ತಾರೆ. ಸರ್ಕಾರವೇ ನೇಮಿಸಿದ ಎಲೆಕ್ಟ್ರಾನಿಕ್ ಮೀಡಿಯಾ ಮಾನಿಟರಿಂಗ್ ಕೇಂದ್ರವು ಕೇವಲ ಶಿಫಾರಸ್ಸನ್ನು ಕೊಡುವ ಸಂಸ್ಥೆಯಾಗಿದೆಯೇ ಹೊರತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಅಧಿಕಾರವೇ ಇಲ್ಲ, ೨೭೬ ಜಿಲ್ಲೆಗಳಲ್ಲಿರುವ ಜಿಲ್ಲಾ ಮಟ್ಟದ ಮತ್ತು ೧೬ ರಾಜ್ಯಗಳಲ್ಲಿರುವ ರಾಜ್ಯ ಮಟ್ಟದ ಮಾನಿಟರಿಂಗ್ ಕಮಿಟಿಗಳು ಚುನಾವಣಾ ಸಂಧರ್ಭದಲ್ಲಿ ಮಾತ್ರ Paid News ಅವ್ಯವಹಾರಗಳನ್ನು ಪರಿಶೀಲಿಸುತ್ತದೆ ಹೊರತಾಗಿ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಕಮಿಟಿಯು ಅಭಿಪ್ರಾಯಪಟ್ಟಿದೆ. ಮತ್ತೊಂದು ಕಡೆ ಮಾಧ್ಯಮಗಳು ಅವ್ಯವಹಾರಗಳನ್ನು ನಿಯಂತ್ರಿಸಲು ಸ್ವತಃ News and current affairs channels, non-news and general entertainment channels, ASCI ಗಳನ್ನು ಸ್ಥಾಪಿಸಿಕೊಂಡಿವೆ. ಆದರೆ ಇದು ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ಕಮಿಟಿ ಅಭಿಪ್ರಾಯ ಪಟ್ಟಿದೆ. ಇನ್ನು News and Current Affairs Channels ೨೦೦೮ರಲ್ಲಿ ತಾನು ೧೯೮ ದೂರುಗಳನ್ನು ಸ್ವೀಕರಿಸಿದ್ದು ಅದರಲ್ಲಿ Paid News ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಒಂದು ದೂರೂ ಬಂದಿರಲಿಲ್ಲ ಎಂದು ಹೇಳಿದೆ. ಇದು ಕಣ್ಣೊರೆಸುವ ತಂತ್ರವೆನ್ನುವ ಅಪಾದನೆಯನ್ನು ಪುಷ್ಟೀಕರಿಸುತ್ತದೆ.

Paid News ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ೨೦೦೯ -೨೦೧೩ರವೆರೆಗೆ ಸುಮಾರು ೪೦ ದೂರುಗಳು ದಾಖಲಾಗಿದ್ದವು. ಇದರಲ್ಲಿ ಕಾಲುಭಾಗದಷ್ಟು ಪ್ರಕರಣಗಳು ಸೂಕ್ತ ದಾಖಲಾತಿಗಳಿಲ್ಲದೆ ಬಿದ್ದು ಹೋದವು. ೧೭ ಪ್ರಕರಣಗಳಲ್ಲಿ ಸಂಬಂಧಪಟ್ಟ ಮಾಧ್ಯಮಗಳಿಗೆ ಮೌಖಿಕ/ಲಿಖಿತ ಎಚ್ಚರಿಕೆಗಳನ್ನು ಮಾತ್ರ ನೀಡಿ ಮುಕ್ತಾಯಗೊಳಿಸಲಾಯಿತು.

ಉದಾಹರಣೆಗೆ:
ಮೆ/ಸ ಜಿಂದಾಲ್ ಸ್ಟೀಲ್ ಪವರ್ ಲಿ. ವರ್ಸಸ್ ಮೆ/ಸ. Zee ಲಿ. ನಡುವಿನ ಕೇಸ್ ಹಾಲಿಯಲ್ಲಿ ಚಾಲ್ತಿಯಲ್ಲಿರುವ ಇಡೀ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸಾಬೀತುಪಡಿಸುತ್ತದೆ. ಮೆ/ಸ. Zee ಲಿ ಗುಂಪು News Broadcasters Association and Rules framed under the Cable Television Networks (regulation) Act, 1995ರ ಅಡಿಯಲ್ಲಿ ಬರುವ ಎಲ್ಲಾ ನೀತಿನಿಯಮಗಳನ್ನು, ಹಕ್ಕುಬಾಧ್ಯತೆಗಳನ್ನು ಉಲ್ಲಂಘಿಸಿ ತಪ್ಪು ಮಾಹಿತಿಗಳನ್ನೊಳಗೊಂಡ, ಅಸತ್ಯವಾದ, ಅವಹೇಳನಕಾರಿ ಪ್ರೋಗ್ರಾಮ್‌ಗಳನ್ನು ಪ್ರಸಾರ ಮಾಡಿದೆ ಎಂದು ಮೆ/ಸ ಜಿಂದಾಲ್ ಸ್ಟೀಲ್ ಪವರ್ ಲಿ. ಗುಂಪು ಆಪಾದನೆಗಳನ್ನು ಮಾಡಿತು. ಲೈಸನ್ಸ್ ಅನ್ನು ಕೊಡುವ ಅಧಿಕಾರ ವಾರ್ತಾ ಮತ್ತು ಪ್ರಚಾರ ಸಚಿವಾಲಯಕ್ಕೆ ಇದ್ದ ಹಾಗೆಯೇ ಅಕ್ರಮಗಳು ಕಂಡುಬಂದರೆ ಲೈಸನ್ಸ್ ಅನ್ನು ಹಿಂತೆಗೆದುಕೊಳ್ಳುವ ಅಧಿಕಾರವೂ ವಾರ್ತಾ ಮತ್ತು ಪ್ರಚಾರ ಸಚಿವಾಲಯವಕ್ಕೆ ಇರುತ್ತದೆ. ಆದರೆ ಸಾಕ್ಷಾಧಾರಗಳನ್ನು ಮಂಡಿಸುವ ಸಂಧರ್ಭದಲ್ಲಿ ಇದು ಸಬ್ ಜುಡೀಸ್ ಆಗುತ್ತದೆ ಎನ್ನುವ ನೆಪವೊಡ್ಡಿ ವಾರ್ತಾ ಮತ್ತು ಪ್ರಚಾರ ಸಚಿವಾಲಯವು ತನ್ನ ದೂರಿನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಜಿಂದಾಲ್ ಗುಂಪು ಆರೋಪಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಈ ವಿಷಯವನ್ನು Inter Ministerial Committee (IMC) ಗೆ ಹಸ್ತಾಂತರಿಸುತ್ತ ಇಡೀ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ IMC ನೀಡುವ ವರದಿಯನ್ನು ನ್ಯಾಯಾಂಗದ ಪರಿಶೀಲನೆಗೆ ಕೊಡಲಾಗುವುದು ಎಂದು ವಾರ್ತಾ ಮತ್ತು ಪ್ರಚಾರ ಸಚಿವಾಲಯವು tv-mediaಕಮಿಟಿಗೆ ಸ್ಪಷ್ಟೀಕರಣ ನೀಡಿತು. ಆದರೆ ವಾರ್ತಾ ಮತ್ತು ಪ್ರಚಾರ ಸಚಿವಾಲಯದ ಸಬ್ ಜುಡೀಸ್‌ನ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಗಳ ಕುರಿತಾದ ಗೊಂದಲಗಳು, ಎರಡೂ ಗುಂಪುಗಳ ನಡುವಿನ ಈ ಕಲಹ ಸಾರ್ವಜನಿಕ ಹಿತಾಸಕ್ತಿಗೆ ಒಳಪಡುತ್ತದೆಯೇ ಅಥವಾ ಕಾನೂನು ಪರಿಶೀಲನಗೆ ಒಳಪಡುತ್ತದೆಯೇ ಎಂದು ನಿರ್ಣಯಿಸುವಲ್ಲಿನ ಅನಿಶ್ಚತೆ ಮತ್ತು ಕಾನೂನುಬದ್ಧವಾದ NBSA ದಂತಹ regulatory Bodies ಗಳ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗದಂತಹ ಅಸಹಾಯಕತೆ ಇವೆಲ್ಲವನ್ನೂ ವಾರ್ತಾ ಮತ್ತು ಪ್ರಚಾರ ಸಚಿವಾಲಯವು ಕೈಗೆತ್ತಿಕೊಂಡು ಅದನ್ನು ಕ್ರಮಬದ್ಧವಾಗಿ ಸರಿಪಡಿಸಬೇಕೆಂದು ಕಮಿಟಿ ಆದೇಶಿಸಿದೆ. ಆದಷ್ಟೂ ಕಡಿಮೆ ಅವಧಿಯಲ್ಲಿ ಈ ಕಲಹಗಳನ್ನು ಮುಕ್ತಾಯಗೊಳಿಸಬೇಕೆಂದು ಒತ್ತಾಯಿಸಿದೆ. ಅಲ್ಲದೆ ಇಡೀ ವ್ಯಾಜ್ಯವು ಕೋರ್ಟಿನ ಮಟ್ಟಿಲೇರಿದ್ದರೂ ಆಡಳಿತ ವ್ಯವಸ್ಥೆಯು ಸ್ಥಗಿತಗೊಳ್ಳದಂತೆ ಎಚ್ಚರವಹಿಬೇಕೆಂದು ಕಮಿಟಿ ಅಭಿಪ್ರಾಯಪಟ್ಟಿದೆ.

ಇತರೇ ದೇಶಗಳು ಈ Paid News ನಂತಹ ಅವ್ಯವಹಾರಗಳನ್ನು ನಿಯಂತ್ರಿಸಲು ರೂಪಿಸಿದ ಕಾನೂನಗಳನ್ನು ವಾರ್ತಾ ಮತ್ತು ಪ್ರಚಾರ ಸಚಿವಾಲಯವು ಅಧ್ಯಯನ ಮಾಡಬೇಕು ಮತ್ತು ಅದನ್ನು ನಮ್ಮ ಸಂವಿಧಾನಕ್ಕೆ ಅನುಗುಣವಾಗಿ ಬಳಸಿಕೊಳ್ಳಬೇಕು ಎಂದು ಕಮಿಟಿ ಹೇಳುತ್ತದೆ.

ಸಚಿವಾಲಯವು PCI ಗೆ ಹೆಚ್ಚಿನ ಕಾನೂಬದ್ಧ ಅಧಿಕಾರವನ್ನು ಕೊಡಬೇಕೆಂದು ಈ ಸಂಸ್ಥೆಗೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಧಿಕಾರಕ್ಕಾಗಿ ಅಕ್ಟ್‌ನಲ್ಲಿ ಸೂಕ್ತ ತಿದ್ದುಪಡಿ ತರಬೇಕೆಂದು ಕಮಿಟಿಗೆ ಮನವರಿಕೆ ಮಾಡಿಕೊಟ್ಟಿದೆ. ಆದರೆ PCI ಯನ್ನು ಬಲಪಡಿಸಲು ವಾರ್ತಾ ಮತ್ತು ಪ್ರಚಾರ ಸಚಿವಾಲಯವು ತೋರಿಸುತ್ತಿರುವ ನಿರಾಸಕ್ತಿ ಕುರಿತು ಕಳವಳ ವ್ಯಕ್ತಪಡಿಸಿದೆ. ಇದರ ಒಟ್ಟಾರೆ ಸ್ವರೂಪದ ಫಲವಾಗಿ ಈ PCIನ ಭಾಗವಾಗಿರುವ ಮುದ್ರಣ ವಲಯದ ಮಾಲೀಕರು Paid News ನಂತಹ ಅವ್ಯವಹಾರಗಳ ಕುರಿತಾದ ವರದಿಗಳನ್ನು ಸಾರ್ವಜನಿಕವಾಗಿ ಮಂಡಿಸದಂತೆ ಒತ್ತಾಯ ತರುತ್ತಿದ್ದಾರೆ ಎಂದು PCIನ ಸದಸ್ಯರೊಬ್ಬರು ಹೇಳಿಕೆಯನ್ನು ನೀಡಿದ್ದರು. ಇನ್ನೂ ಕೆಟ್ಟದಾದ್ದೆಂದರೆ ಅತ್ಯಂತ ತೆಳುವಾದ ಬಹುಮತದ ಮೂಲಕ (ಈ ಸಂದರ್ಭದಲ್ಲಿ ಕೈ ಎತ್ತುವುದರ ಮೂಲಕ) ಉಪಸಮಿತಿಯ ವರದಿಯನ್ನು ತಿರಸ್ಕರಿಸಲಾಯಿತು. ಅಲ್ಲದೆ ಈ ಬಗೆಯ ತೆಳುವಾದ ಬಹುಮತದ ಕುರಿತಾಗಿ PCIನ ಇತರೇ ಸದಸ್ಯರ ಭಿನ್ನಮತದ ಅಭಿಪ್ರಾಯ ಮಂಡನೆಗೆ ಅವಕಾಶವೇ ಸಿಗಲಿಲ್ಲ. ಹೀಗಾಗಿ PCIನ ಸಂಯೋಜನೆಯನ್ನೇ ಪುನಃ ರೂಪಿಸಬೇಕಾಗಿದೆ ಎಂದು ಕಮಿಟಿ ಅಭಿಪ್ರಾಯ ವ್ಯಕ್ತಪಡಿಸಿದೆ. ೧೯೭೮ರಲ್ಲಿ PCI ಚಾಲ್ತಿಗೆ ಬಂದಿತು. ಆಗ ಕೇವಲ ಮುದ್ರಣ ಮಾಧ್ಯಮವು ಅದರ ಭಾಗವಾಗಿತ್ತು. ಎಲೆಕ್ಟ್ರಾನಿಕ್ ಮಾಧ್ಯಮವು ಕೇಂದ್ರ ಸರ್ಕಾರದ ಹಿಡಿತದಲ್ಲಿತ್ತು. ಈ ಕಾರಣಕ್ಕಾಗಿ PCI ಗೆ ಕೇವಲ ಮುದ್ರಣ ಮಾಧ್ಯಮವನ್ನು ನಿಯಂತ್ರಿಸುವ ಅಧಿಕಾರ ಕೊಡಲಾಗಿತ್ತು. ಆದರೆ ದುರಂತವೆಂದರೆ ಕಳೆದೆರೆಡು ದಶಕಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮವು ಬೃಹದಾಕಾರವಾಗಿ ಬೆಳೆದಿದ್ದು ಬಹುಪಾಲು ಖಾಸಗಿಯವರ ಹಿಡಿತದಲ್ಲಿದೆ. ಆದರೆ ಇಂದಿಗೂ PCI ಇದನ್ನು ಸರಿಪಡಿಸಿ ಎಲೆಕ್ಟ್ರಾನಿಕ್ ಮಾಧ್ಯಮವನ್ನು ವ್ಯಾಪ್ತಿಯೊಳಗೆ ತರಬೇಕೆಂದು ಪ್ರಯತ್ನಿಸಿಲ್ಲ ಎಂದು ಕಮಿಟಿಯು ಆತಂಕ ವ್ಯಕ್ತ ಪಡಿಸಿದೆ.ಅಲ್ಲದೆ ಇದನ್ನು Cable TV Network Regulation Act, 1995 ಅಡಿಯಲ್ಲಿ Compliance of Provisions ಅನ್ವಯವಾಗುವಂತೆ ನಿಯಮಾವಳಿಗಳನ್ನು ರೂಪಿಸಿಲ್ಲ ಎಂದು ಕಮಿಟಿ ಆರೋಪಿಸಿದೆ.

PCIನ ಉಪಸಮಿತಿಯು ೨೦೦೯ರ ಚುನಾವಣೆಯ ಕುರಿತಾದ ‘Paid News: How corruption in the Indian media und ermines democracy’ Realising the dangers of ‘Paid News’ ವರದಿಯನ್ನು ೩೦ನೇ ಜುಲೈ ೨೦೧೦ರಲ್ಲಿ ಮಂಡಿಸಿತು. ಆದರೆ ಇಂದಿಗೂ PCI ಈ ವರದಿಯ ಕುರಿತಾಗಿ ತೀರ್ಮಾನ ತೆಗೆದುಕೊಳ್ಳದೆ ಮೀನಮೇಷ ಎಣಿಸುತ್ತಿರುವುದಕ್ಕೆ ಕಮಿಟಿಯು ಕಳವಳ ವ್ಯಕಪಡಿಸಿದೆ. ಆ ವರದಿಯ ವಿವರಗಳನ್ನಾದರೂ ಸಾರ್ವಜನಿಕ ಚರ್ಚೆ ನಡೆಸುವಂತೆ ಕಮಿಟಿ ಆಗ್ರಹಿಸಿದಾಗ PCI ಈ ವರದಿಯ ಸಾಧಕಬಾಧಕಗಳನ್ನು ಪರಾಮರ್ಶಿಶಲು GoM ಅನ್ನು ರಚಿಸಲಾಗಿದೆ ಎಂದು ತಿಳಿಸಿತು. ಅಲ್ಲದೆ Paid News ವಿದ್ಯಾಮಾನವು ತುಂಬಾ ಸೂಕ್ಷ್ಮ ವಿಷಯವಾದ್ದರಿಂದ ಸಂಬಂಧಪಟ್ಟ ಸಚಿವಾಲಯಗಳ ಸಹಯೋಗದೊಂದಿಗೆ ಚರ್ಚಿಸಿದ ನಂತರವಷ್ಟೇ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಸಚಿವಾಲಯವು ಈ GoM ಅನ್ನು ಪುನರೂಪಿಬೇಕೆಂದು ಕ್ಯಾಬಿನೆಟ್ ಕಮಿಟಿಯ ಮುಂದೆ ಮನವಿ ಸಲ್ಲಿಸಿದೆ ಎಂದು ತಿಳಿಸಲಾಗಿತ್ತು. ಆದರೆ GoM ನ ಶಿಫಾರಸುಗಳನ್ನು ಕ್ಯಾಬಿನೆಟ್ ಕಮಿಟಿಯ ಮುಂದೆ ಮಂಡಿಸಿ ಚರ್ಚಿಸಲೂ ಸಹ ತಡ ಮಾಡುತ್ತಿರುವುದಕ್ಕೆ ಕಮಿಟಿಯು ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದೆ.

ಆದರೆ ಈ ವರದಿಯ ಕುರಿತಾಗಿ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕಮಿಟಿಯು ಸಚಿವಾಲಯಕ್ಕೆ ಆಗ್ರಹಿಸಿದೆ. ಪದ್ಧತಿಯ ಪ್ರಕಾರ Directorate of Advertising and Visual Publicity (DAVP) ಅಡಿಯಲ್ಲಿ ಜಾಹೀರಾತುಗಳ ನಿಯಂತ್ರಣ ಕಾಯ್ದೆ ಬರುತ್ತದೆ. ಈ DAVP ಯು ಸರ್ಕಾರದ ನೋಡಲ್ ಮಲ್ಟಿಮೀಡಿಯಾ ಕೇಂದ್ರೀಕೃತ ಏಜೆನ್ಸಿ ಎಂದು ಮಾನ್ಯತೆ ಮಾಡಲಾಗಿದೆ ಮತ್ತು ಇದು ವಾರ್ತಾ ಮತ್ತು ಪ್ರಚಾರ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಆದರೆ ಸರ್ಕಾರವನ್ನು ಟೀಕಿಸುವ, ವಿಮರ್ಶಿಸುವ ಖಾಸಗಿ ಚಾನೆಲ್‌ಗಳನ್ನು DAVP ಸಂಸ್ಥೆಯು ನಿರ್ಲಕ್ಷಿಸುತ್ತದೆ ಮತ್ತು ಇನ್ನೂ ಮುಂದುವರೆದು ಅಂತಹ ಮಾಧ್ಯಮಗಳಿಗೆ ಜಾಹೀರಾತನ್ನೇ ನಿರಾಕರಿಸುತ್ತದೆ ಎಂದು ಕಮಿಟಿಗೆ ದೂರು ನೀಡಲಾಗಿತ್ತು. ಇದನ್ನು ಸೀರಿಯಸ್ ಆಗಿ ಪರಿಗಣಿಸಿದ ಕಮಿಟಿಯು ಈ ಜಾಹೀರಾತು ನಿಯಂತ್ರಣ ಕಮಿಟಿಯು ಸಾರ್ವಜನಿಕ ಹಿತಾಸಕ್ತಿಯಾಗಿದೆ. ಇಂಡಿಯಾದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ DAVP ಯಂತಹ ಸಂಸ್ಥೆಯು ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕೆಂದು ಕಮಿಟಿ ಆಗ್ರಹಿಸಿದೆ. ಇದಕ್ಕೆ ತಗಲುವ ಖರ್ಚುವೆಚ್ಚಗಳನ್ನು ಸಾರ್ವಜನಿಕ ಲೆಕ್ಕಪತ್ರ ಇಲಾಖೆಗೆ ಮಂಡಿಸಬೇಕೆಂದು ಕಮಿಟಿ ಆಗ್ರಹಿಸಿದೆ. ಇದೇ ಸಂದರ್ಭದಲ್ಲಿ ಈ ಜಾಹೀರಾತಿನ ಪ್ರದರ್ಶನದಲ್ಲಿ ದೊರೆಯುವ ವಿನಾಯ್ತಿ ಮೊತ್ತವನ್ನು ಮತ್ತು ಜಾಹೀರಾತಿನಿಂದ ಬಂದ ಮೊತ್ತವನ್ನು ತಮ್ಮ ವೆಬ್‌ಸೈಟಿನಲ್ಲಿ ಪ್ರಕಟಿಸಬೇಕೆಂದು ಕಮಿಟಿ ಖಾಸಗಿ ಮಾಧ್ಯಮದವರಿಗೆ ಆಗ್ರಹಿಸಿದೆ.

Paid News ನ ಅವ್ಯವಹಾರಗಳಲ್ಲಿ ಮಾಧ್ಯಮಗಳು ಭಾಗಿಯಾಗಿರುವುದು ಸಾಬೀತಾದಲ್ಲಿ ಆ ಅಪರಾಧಕ್ಕೆ ವಿಧಿಸುವ ಶಿಕ್ಷೆಯ ಪ್ರಮಾಣ ಅತ್ಯಂತ ಕ್ಷುಲ್ಲಕವಾಗಿದೆ. Cartoon-ECಮುದ್ರಣ ಮಾಧ್ಯಮಗಳಿಗೆ PCI Act ನ ಅಡಿಯಲ್ಲಿ ಷೋಕಾಸ್ ನೋಟೀಸ್ ಜಾರಿಗೊಳಿಸುವುದು, ಮಾಡಿದ ತಪ್ಪಿಗೆ ವಿವರಣೆ ಕೇಳುವುದು ಮತ್ತು ಕಡೆಗೆ ಜಾಹೀರಾತನ್ನು ರದ್ದು ಮಾಡುವುದಕ್ಕೆ ಮಾತ್ರ ಶಿಕ್ಷೆಯ ಪ್ರಮಾಣವನ್ನು ಸೀಮಿತಗೊಳಿಸಲಾಗಿದೆ. ದೃಶ್ಯ ಮಾಧ್ಯಮಗಳಿಗೆ ಲೈಸೆನ್ಸ್ ಅನ್ನು ರದ್ದು ಮಾಡುವುದಕ್ಕೆ ಮಾತ್ರ ಶಿಕ್ಷೆಯ ಪ್ರಮಾಣವನ್ನು ಸೀಮಿತಗೊಳಿಸಲಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸಿ ಜೈಲು ಶಿಕ್ಷೆಯನ್ನೂ ಸಹ ಇದರ ವ್ಯಾಪ್ತಿಯೊಳಗೆ ಬರುವಂತೆ ಕಾನೂನು ರೂಪಿಸಬೇಕೆಂದು ಕಮಿಟಿ ಆಗ್ರಹಿಸಿದೆ. ಈ ಶಿಕ್ಷೆ ನಿಗದಿಪಡಿಸುವ/ವಿಧಿಸುವ ಅಧಿಕಾರ ಯಾವ ಸಂಸ್ಥೆ/ಇಲಾಖೆಯ ವ್ಯಾಪ್ತಿಯೊಳಗೆ ಬರಬೇಕೆಂಬ ವಿಷಯದಲ್ಲಿ ಸ್ಪಷ್ಟಪಡಿಸಬೇಕೆಂದು ಕಮಿಟಿ ಆಗ್ರಹಿಸಿದೆ. ೨೦೦೯ರ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ PCI ಪತ್ತೆಹಚ್ಚಿದ Paid News ನ ಅವ್ಯವಹಾರವನ್ನು ಪರಿಶೀಲಿಸಿದ ಚುನಾವಣಾ ಆಯೋಗವು ತನ್ನ ಅಧಿಕಾರವನ್ನು ಬಳಸಿಕೊಂಡು Representation of People Act, 1951 ರ ಸೆಕ್ಷನ್ ೧೦ (A)ದ ಅಡಿಯಲ್ಲಿ ಸಂಬಂಧಪಟ್ಟ ಅಭ್ಯರ್ಥಿಯ ಆಯ್ಕೆಯನ್ನು ಅಮಾನತುಗೊಳಿಸಿತು. ಆದರೆ ೨೦೦೯ರ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಪತ್ತೆಯಾದ Paid News ನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಭ್ಯರ್ಥಿಯ ವಿರುದ್ಧ ಚುನಾವಣಾ ಆಯೋಗವು ಕ್ರಮ ಕೈಗೊಳ್ಳಲು ಮುಂದಾದಾಗ ಅದಕ್ಕೆ Representation of People Act, 1951 ರ ಸೆಕ್ಷನ್ ೧೦ (A)ದ ಅಡಿಯಲ್ಲಿ ಅಧಿಕಾರವಿದೆಯೇ ಎಂದು ಪರಿಶೀಲಿಸಬೇಕೆಂದು ಸುಪ್ರೀಂಕೋರ್ಟನಲ್ಲಿ ಅಪೀಲ್ ಸಲ್ಲಿಸಲಾಯಿತು. ಇಂತಹ ವಿಪರ್ಯಾಸಗಳನ್ನು ಸರಿಪಡಿಸಿ ಶಿಕ್ಷೆಯನ್ನು ವಿಧಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇರಬೇಕೆಂದು ಕಮಿಟಿ ಅಭಿಪ್ರಾಯ ಪಟ್ಟಿದೆ. PCI ಸುಮಾರು ೪೦ ಪ್ರಕರಣಗಳನ್ನು Paid News ನ ಅವ್ಯವಹಾರಕ್ಕೆ ಸಂಬಂಧಪಟ್ಟಿದ್ದು ಎಂದು ಪತ್ತೆ ಹಚ್ಚಿತು. ಅದರಲ್ಲಿ ೧೧ ಪ್ರಕgಣಗಳನ್ನು ಸೂಕ್ತ ಸಾಕ್ಷಾಧಾರಗಳಿಲ್ಲದೆ ಖುಲಾಸೆಗೊಳಿಸಲಾಯಿತು. ಈ ಎಲ್ಲ ಹಿನ್ನೆಲೆಯಲ್ಲಿ ಕಮಿಟಿಯು PCI ಅನ್ನು ಪುನರಚಿಸಬೇಕೆಂದು ಆ ಮೂಲಕ ಅದನ್ನು ಬಲಪಡಿಸಬೇಕೆಂದು ಶಿಫಾರಸು ಮಾಡಿದೆ.

Companies Act, ೧೯೫೬ ರ ಅಡಿಯಲ್ಲಿ ತಮ್ಮ ವ್ಯವಹಾರಗಳಿಗೆ ತೊಡಗಿಸುವ ಹಣದ ಮೂಲವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕಾದ ಉತ್ತರದಾಯಿತ್ವ ಮಾಧ್ಯಮಗಳ ಮೇಲಿದೆ.

ಕಡೆಗೆ ಸಾರಾಂಶವಾಗಿ ಹೇಳಬೇಕೆಂದರೆ ವಾರ್ತಾ ಮತ್ತು ಪ್ರಚಾರ ಇಲಾಖೆ, Editors Guild of India, Securities and Exchange Board of India, Telecom Regulatory Authority of India, self regulatory bodies, research bodies, other stakeholders, etc. ಇಡೀ ಪ್ರಕರಣದ ಗಂಭೀರತೆಯನ್ನು ಅರಿತುಕೊಂಡಿವೆ. ವಾರ್ತಾ ಮತ್ತು ಪ್ರಚಾರ ಇಲಾಖೆಯು ಈ ಗಂಭೀರತೆಯನ್ನು ಅರಿತುಕೊಂಡು ಸೂಕ್ತವಾದ ಕಾನೂನುನನ್ನು ರಚಿಸಿ ತಪ್ಪಿತಸ್ಥರು ಶಿಕ್ಷೆಗೊಳಗಾಬೇಕೆಂದು ಕಮಿಟಿಯು ಒತ್ತಾಯಿಸಿದೆ.

ಜಾತಿವ್ಯವಸ್ಥೆಯ ಸಂಕೀರ್ಣ ರೂಪಗಳು


– ಡಾ.ಎಸ್.ಬಿ. ಜೋಗುರ


 

ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಬೇರು ಬಿಟ್ಟಿರುವ ಈ ಜಾತಿಪದ್ಧತಿಯನ್ನು ಒಂದು ಪ್ರಮುಖ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯೆಂದು ಅಧ್ಯಯನ ಮಾಡುವ ನಿಟ್ಟಿನಲ್ಲಿ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ವಲಯಗಳಲ್ಲಿ ಸಾಕಷ್ಟು ಅಧ್ಯಯನಗಳು ನಡೆದಿವೆಯಾದರೂ ಪ್ರಯತ್ನ ಸಾಲದು. ಜಾತಿ ಪದ್ಧತಿ ಎನ್ನುವುದು ಒಂದು ಶತಮಾನದಿಂದ ಇನ್ನೊಂದು ಶತಮಾನಕ್ಕೆ ಹೊಸ ಬಗೆಯ ಸ್ಥಿತ್ಯಂತರಗಳನ್ನು ಕಂಡುಕೊಳ್ಳುತ್ತಲೇ ಮುಂದೆ ಸಾಗಿದೆ. ನಾವು ಕೆಲವು ದಶಕಗಳ ಹಿಂದೆ ಈಗಿರುವ ಜಾತಿಯಾಧಾರಿತ ಸಂಘಟನೆಗಳು ಮತ್ತು ಅದಕ್ಕೊಬ್ಬ ಮಠಾಧೀಶನನ್ನು ಕಾಣಲಾಗುತ್ತಿರಲಿಲ್ಲ. ಇದನ್ನೇ ಕೆಲವು ಸೋ ಕಾಲ್ಡ್ ಸಾಹಿತಿಗಳು.. ಬುದ್ಧಿಜೀವಿಗಳು ಈ ಬಗೆಯ ಜಾತಿಯ ಸಂಘಟನೆ ಒಂದು ದೇಶದ ಸಾಂಸ್ಕೃತಿಕ ಬಹುತ್ವಕ್ಕೆ ತೀರಾ ಮುಖ್ಯ ಎಂದು ಪ್ರತಿಪಾದಿಸಿದರು. ಹಾಗೆ ಹೇಳುವ ಮೂಲಕ ಅವರೂ ಕೂಡಾ ಪರೋಕ್ಷವಾಗಿ ಜಾತಿ ಒಂದು ಅನಿವಾರ್ಯವಾದ ಸಂಸ್ಥೆ ಎನ್ನುವದನ್ನು ಒಪ್ಪಿಕೊಂಡರು. ತೀರಾ ಪ್ರಾಚೀನ ಕಾಲದಲ್ಲಿ ಅಂದರೆ ವೇದಗಳ ಕಾಲದಲ್ಲಿ ಜಾತಿಯ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ. ವೇದಗಳ ನಂತರದ ಕಾಲದಲ್ಲಿ ಮಾತ್ರ ಈ ಅಸ್ಪ್ರಶ್ಯತೆ ಮತ್ತು ಜಾತಿಯ ಬಗೆಗಿನ ಪ್ರಸ್ತಾಪಗಳು ದೊರೆಯುತ್ತವೆ. ಜನಸಾಮಾನ್ಯರು ಇಂದಿಗೂ ವರ್ಣ ವ್ಯವಸ್ಥೆಯನ್ನೇ ಜಾತಿಯೊಂದಿಗೆ ಕಲಬೆರಕೆ ಮಾಡಿ ಮಾತನಾಡುವದಿದೆ. ಆದರೆ ಸಮಾಜಶಾಸ್ತ್ರೀಯ ಅಧ್ಯಯನಗಳ ಹಿನ್ನೆಲೆಯಲ್ಲಿ ನೋಡಿದಾಗ ವರ್ಣಗಳೇ ಬೇರೆ, caste-systemಜಾತಿಯೇ ಬೇರೆ. ವರ್ಣಗಳು ಕ್ರಮೇಣವಾಗಿ ಕಾಲಾನುಗತಿಕವಾಗಿ ಜಾತಿಪದ್ಧತಿಯ ಹುಟ್ಟಿಗೆ ಕಾರಣವಾಗಿರಬಹುದು, ಆದರೆ ವರ್ಣಗಳೇ ಜಾತಿಗಳಲ್ಲ. ವೇದಗಳ ಆರಂಭದ ಕಾಲದಲ್ಲಿ ಅದರಲ್ಲೂ ಋಗ್ವೇದದ ಪುರುಷಸೂಕ್ತದಲ್ಲಿ ಬರುವ ವಿವರಣೆಯಂತೆ ಬ್ರಾಹ್ಮಣ ಬ್ರಹ್ಮನ ಬಾಹುಗಳಿಂದ ಜನಿಸಿದರು, ಕ್ಷತ್ರಿಯರು ಬ್ರಹ್ಮನ ತೋಳುಗಳಿಂದ, ವೈಶ್ಯರು ಬ್ರಹ್ಮನ ತೊಡೆಯಿಂದ ಶೂದ್ರರು ಬ್ರಹ್ಮನ ಪಾದಗಳಿಂದ ಜನಿಸಿದರು ಎನ್ನುವ ಬಗ್ಗೆ ಶ್ಲೋಕಗಳು ದೊರೆಯುತ್ತವೆ. ಅಂದರೆ ವರ್ಣಗಳು ಸೃಷ್ಟಿಕರ್ತನಾದ ಬ್ರಹ್ಮನ ಕೊಡುಗೆ ಎಂದು ನಂಬಲಾಗುತ್ತದೆ. ಮುಖದಿಂದ, ತೋಳುಗಳಿಂದ ಜನನ ಅಸಾಧ್ಯ; ಅದನ್ನು ಕೇವಲ ಆಯಾ ವರ್ಣಗಳು ಮಾಡುವ ಕೆಲಸವನ್ನು ಸಂಕೇತಿಸುವ ನಿಟ್ಟಿನಲ್ಲಿ ಸೂಚಿತ ಪದಗಳು. ಬ್ರಹ್ಮನ ಮುಖದಿಂದ ಅಂದರೆ ಬ್ರಾಹ್ಮಣರು ವೇದಗಳ ಅಧ್ಯಯನ, ಮಂತ್ರ ಪಠಣ, ರಾಜನಿಗೆ ಮಾರ್ಗದರ್ಶನ ಮುಂತಾದವುಗಳನ್ನು ಮಾಡಬೇಕು. ಕ್ಷತ್ರಿಯ ತೋಳುಗಳಿಂದ ಅಂದರೆ ಪರಾಕ್ರಮದ ಸಂಕೇತ ರಾಜ್ಯವನ್ನು ರಕ್ಷಿಸುವ ಜೊತೆಗೆ ಜನರ ವಿತ್ ಜೀವಿತಗಳನ್ನು ರಕ್ಷಿಸುವ ಕೆಲಸ ಮಾಡಬೇಕು. ಇನ್ನು ವೈಶ್ಯನಾದವನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚಾರ ಮಾಡಿ ವ್ಯಾಪಾರ ವಹಿವಾಟುಗಳನ್ನು ಮಾಡುವ ಕಾರಣಕ್ಕೆ ಅವನು ತೊಡೆಯಿಂದ ಜನಿಸಿದವನು ಎನ್ನುವ ಸಂಕೇತವಿದೆ. ಇನ್ನು ಶೂದ್ರರು ಈ ಮೇಲಿನ ಮೂರು ವರ್ಣಗಳ ಸೇವೆಯನ್ನು ಮಾಡಬೇಕು ಎನ್ನುವ ಅರ್ಥದಲ್ಲಿ ಅವರು ಪಾದಗಳಿಂದ ಜನಿಸಿದವರು ಎನ್ನುವ ಸಂಕೇತವಿದೆ. ಹಾಗೆ ನೋಡಿದರೆ ಈ ವರ್ಣ ವ್ಯವಸ್ಯೆಯಲ್ಲಿ ವ್ಯಕ್ತಿಯ ಸ್ಥಾನಮಾನಗಳು ಆತನ ಹುಟ್ಟನ್ನು ಆಧರಿಸಿರದೇ ಆತನ ಗುಣ ಮತ್ತು ಕರ್ಮಗಳನ್ನು ಆಧರಿಸಿದ್ದವು. ಗೀತೆಯಲ್ಲಿ ಕೃಷ್ಣ ಹೇಳುವ ಹಾಗೆ ಚಾತುರ್ವರ್ಣ ಮಯಾಸೃಷ್ಟಿ ಗುಣಕರ್ಮ ವಿಭಾಗಶ:, ಅಂದರೆ ಚತುರ್ವರ್ಣಗಳನ್ನು ಗುಣ ಮತ್ತು ಕರ್ಮಗಳನ್ನು ಆಧರಿಸಿ ವಿಂಗಡಿಸಲಾಗಿದೆಯೇ ಹೊರತು ಹುಟ್ಟನಲ್ಲ. ಇಲ್ಲಿ ಬ್ರಾಹ್ಮಣನ ಮಗ ಬ್ರಾಹ್ಮಣನೇ ಆಗಬೇಕೆಂದಿರಲಿಲ್ಲ. ಆತನಿಗೆ ವಿದ್ಯೆ ಅನುವಾಗದಿದ್ದರೆ ಆತ ಶೂದ್ರನಾಗಬೇಕಿತ್ತು, ವ್ಯಾಪಾರಿ ಸೂತ್ರಗಳನ್ನು ನಿರ್ವಹಿಸಲಾಗದವನು ಶೂರ ಪರಾಕ್ರಮಿ ಆಗಿದ್ದರೆ ಕ್ಷತ್ರಿಯನಾಗುತ್ತಿದ್ದ. ಇವಾವವೂ ನೀಗದಿರುವವನು ಶೂದ್ರನಾಗಿರುತ್ತಿದ್ದ ಎನ್ನುವ ವಿವರಣೆಗಳೂ ಇವೆ. ಆ ಮೂಲಕ ವರ್ಣ ವ್ಯವಸ್ಥೆ ಒಂದು ಸಾಮಾಜಿಕ ವ್ಯವಸ್ಥೆಯ ನಿರ್ವಹಣಾ ಸೂತ್ರವಾಗಿತ್ತೇ ಹೊರತು ಅಲ್ಲಿ ನಾಲ್ಕು ವರ್ಣಗಳಲ್ಲಿ ಯಾವುದೇ ಬಗೆಯ ತಾರತಮ್ಯಗಳಿರಲಿಲ್ಲ ಎಂದು ಹೇಳಲಾಗುತ್ತದೆ. ಹೀಗೆ ಹೇಳುವಾಗಲೇ ಆಶ್ರಮಗಳಲ್ಲಿ ಮೊದಲನೆಯದಾದ ಬ್ರಹ್ಮಚರ್ಯಾಶ್ರಮದಲ್ಲಿ ಶಿಕ್ಷಣಕ್ಕಾಗಿ ತೆರಳುವಾಗ ಕೇವಲ ಮೂರು ವರ್ಣಗಳ ಸಂತಾನಕ್ಕೆ ಮಾತ್ರ ಅಲ್ಲಿ ಪ್ರವೇಶವಿರುವ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ. ನಾಲ್ಕನೇಯ ವರ್ಣ ಶೂದ್ರರಿಗೆ ಶಿಕ್ಷಣಕ್ಕಾಗಿ ಗುರುಕುಲದಲ್ಲಿ ಪ್ರವೇಶವಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅದೇನೇ ಇರಲಿ ವರ್ಣ ವ್ಯವಸ್ಥೆಯೇ ಭವಿಷ್ಯತ್ತಿನಲ್ಲಿ ಜಾತಿ ವ್ಯವಸ್ಥೆಗೆ ಜನ್ಮ ನೀಡಿರುವದಂತೂ ನಿಜ. ಅದರ ಜೊತೆಗೆ ಇತರೇ ಸಂಗತಿಗಳು ಕೂಡಾ ಕೆಲಸ ಮಾಡಿವೆ. ವರ್ಣ ವ್ಯವಸ್ಥೆಯಲ್ಲಿ ಕೇವಲ ನಾಲ್ಕು ಪ್ರಕಾರಗಳು ಅವು ಇಡೀ ದೇಶದಾದ್ಯಂತ ಸರ್ವವ್ಯಾಪಕವಾಗಿ ಗುರುತಿಸಿಕೊಂಡವುಗಳು. ಜಾತಿಯ ವಿಷಯವಾಗಿ ಹಾಗೆ ಹೇಳಲಾದೀತೇ..? ಸುಮಾರು ೩೦೦೦ ಕ್ಕಿಂತಲೂ ಅಧಿಕ ಜಾತಿ-ಉಪಜಾತಿಗಳು ನಮ್ಮಲ್ಲಿವೆ. ಇಲ್ಲಿರುವ ಏಣಿಶ್ರೇಣಿಯಲ್ಲಿ ಮೇಲಿನ ಮತ್ತು ಕೆಳಗಿನ ಸ್ಥಾನಮಾನಗಳು ಸ್ಥಿರವಾದವುಗಳು, ಅಲ್ಲಿ ಯಾವುದೇ ರೀತಿಯ ಬದಲಾವಣೆಗೆ ಅವಕಾಶವಿಲ್ಲ. ಇನ್ನೇನಾದರೂ ಅಲ್ಪ ಸ್ವಲ್ಪ ಬದಲಾವಣೆಗಳಾದರೆ ಏಣಿಶ್ರೇಣಿಯ ಮಧ್ಯ ಭಾಗದಲ್ಲಿ ಬರುವ ಜಾತಿಗಳಲ್ಲಿ ಮಾತ್ರ. ಅದು ಕೂಡಾ ಕೇವಲ ಅವರೊಂದಿಗೆ ಬೆರೆಯುವ, ಊಟ ಮಾಡುವ, ಕೊಡು ತೆಗೆದುಕೊಳ್ಳುವ ವ್ಯವಹಾರಗಳ ಬಗ್ಗೆ ಮಾತ್ರ.

ಜಾತಿ ಪದ್ಧತಿ ಎನ್ನುವುದು ಇರಬಾರದು ಎಂದು ಪ್ರತಿಪಾದಿಸುವವರು ಇರುವಂತೆ ಅದು ಇರಬೇಕು ಎಂದು ಪ್ರತಿಪಾದಿಸುವವರೂ ಇದ್ದಾರೆ. ಇಲ್ಲಿ ಜಾತಿಪದ್ಧತಿಯನ್ನು ಲಾಭಸೂಚಕ ವಿಷಯವಾಗಿ ಬಳಸಿಕೊಳ್ಳುವವರಿಗೆ ಅದು ಬೇಕು. ಅದರಿಂದ ದಿನಾಲು ಯಾತನೆ ಮತ್ತು ಕಿರಕಿರಿಯನ್ನು ಅನುಭವಿಸುವವರಿಗೆ ಅದು ಬೇಕಾಗಿಲ್ಲ. ಇನ್ನು ಕೆಲವು ಮಡಿವಂತ ಮನಸುಗಳಿಗೆ ಮತ್ತು ಪ್ರತಿಗಾಮಿಗಳಿಗೆ ಅದೊಂದು ಪವಿತ್ರವಾದ ಸಂಸ್ಥೆ. ಅವರು ಬೇಕಾದರೆ ತಮ್ಮ ಜೀವವನ್ನೇ ಬಿಟ್ಟಾರು ಆದರೆ ಜಾತಿಯನ್ನು ಬಿಡುವದಿಲ್ಲ. ಒಟ್ಟು ನಿಸರ್ಗದಲ್ಲಿಯೇ ಮೂಲಭೂತವಾಗಿ ಅಸಮಾನತೆಗಳಿವೆ. ಭೂಮಿಯ ಮೇಲೆ ಯಾವುದು ಒಂದೇ ರೀತಿಯಲ್ಲಿದೆ ಹೇಳಿ..? ಬೆಟ್ಟ-ಗುಡ್ಡ, ನದಿ, ಸರೋವರ, ಗಿಡ ಮರಗಳು ಇಲ್ಲೂ ಅಸಮಾನತೆಗಳಿಲ್ಲವೇ..? ಹಾಗಾಗಿ ಜಾತಿಯೂ ಇರಲಿ ಬಿಡಿ ಎನ್ನುವವರಿಗೆ ನಿಸರ್ಗದಲ್ಲಿಯ ಅಸಮಾನತೆಗೂ ಮತ್ತು ಮಾನವ ರೂಪಿಸಿಕೊಂಡ ಅಸಮಾನತೆಯ ನಡುವಿನ ವ್ಯತ್ಯಾಸಗಳಲ್ಲಿ ಒಂದು ಸ್ಪಷ್ಟವಾದ ಅಂತರವನ್ನು ನಾವು ಗುರುತಿಸಬೇಕಿದೆ. ನಿಸರ್ಗದಲ್ಲಿ ಮಾನವನ ಸಮಾಜದಲ್ಲಿರುವಂತೆ ಶುದ್ಧ-ಅಶುದ್ಧ, ಮಡಿ-ಮೈಲಿಗೆ, ಸ್ಪೃಶ್ಯ-ಅಸ್ಪೃಶ್ಯ ಎನ್ನುವ ಭಾವನೆಗಳು ಇಲ್ಲ. ಜಾತಿ ಹುಟ್ಟಿಸಿರುವ ಈ ಬಗೆಯ ಅಸಮಾನತೆಗಳು ಅಂತರಗಳು ಸಾಮಾಜಿಕ ಐಕ್ಯತೆಗೆ ನೇರವಾಗಿ ಗಂಡಾಂತರಕಾರಿಯಾಗಿ ಕೆಲಸ ಮಾಡುತ್ತವೆ. ಹಾಗಾಗಿಯೇ ಅನೇಕ ಸಮಾಜಶಾಸ್ತ್ರಜ್ಞರು ಜಾತಿಯನ್ನು ಕುರಿತು ಅದರ ಸ್ವರೂಪದ ಬಗ್ಗೆ ಚರ್ಚಿಸುವಾಗ ಇದು ಭಾರತೀಯ ಸಮಾಜದ ಹೋಳು-ಹೋಳಾದ ಭಾಗ ಎಂದು ಹೇಳುವದಿದೆ. ಜಾತಿ-ಜಾತಿಯ ನಡುವೆ ನಿರ್ಮಿಸಲಾಗುವ ಗೋಡೆಗಳು ತನ್ನ ತನ್ನ ಜಾತಿಯ ಶ್ರೇಷ್ಟತೆಯನ್ನು ಸಾರುವ ಜೊತೆಗೆ ಪ್ರತ್ಯೇಕತೆಯನ್ನೂ ಸಾರುತ್ತದೆ. ಇದು ಹೆಚ್ಚು ಅಪಾಯಕಾರಿ. ಸಾಂಸ್ಕೃತಿಕ ಬಹುತ್ವ ಸರಿ ಆದರೆ ಅದು ಅಖಂಡವಾಗಿರಬೇಕಲ್ಲವೇ..? ತುಂಡು ತುಂಡಾದಷ್ಟು ಸಾಮಾಜಿಕ ಐಕ್ಯತೆಗೆ ಅಪಾಯ ಬಂದೊದಗುತ್ತದೆ. ಈಗ ನಮ್ಮಲ್ಲಿ ಜಾತಿಯ ಹಿನ್ನೆಲೆಯಲ್ಲಿ ನಡೆಯುವ ಗಲಭೆಗಳು, ಹಿಂಸೆಗಳು, ಅತ್ಯಾಚಾರಗಳು, ತಾರತಮ್ಯಗಳನ್ನು ಗಮನಿಸಿದಾಗ ಈ ಮಾತು ಮನದಟ್ಟಾಗಬಹುದು.

ಇನ್ನು ಈ ಜಾತಿ ಮತ್ತು ಅಸ್ಪೃಶ್ಯತೆಯನ್ನು ಅಧ್ಯಯನ ಮಾಡುವವರು ಅತಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳನ್ನು ಹೆಚ್ಚೆಚ್ಚು ಗಮನಿಸಬೇಕಾಗುತ್ತದೆ. ಯಾಕೆಂದರೆ ನಗರ ಪ್ರದೇಶದ ಹೊರ ಬದುಕನ್ನು ಗಮನಿಸಿ, ಈಗ ಜಾತಿ ಪದ್ಧತಿ ಅಷ್ಟಾಗಿ ಇಲ್ಲ ಬದಲಾಗಿದೆ ಎನ್ನುವ ಶರಾ ಎಳೆಯುವ ಅಪಾಯಗಳಿವೆ. ನಗರ ಬದುಕಿನ ಸಂಕೀರ್ಣತೆ ಜಾತಿಯ ಉಪಸ್ಥಿತಿಯನ್ನು ವ್ಯವಹಾರಿಕವಾದ ಕಾರಣಗಳಿಗಾಗಿ ನಗಣ್ಯವಾಗಿಸಿಕೊಂಡಿದೆ. ಹಾಗಾಗಿ ಸಾರ್ವಜನಿಕ ವಲಯಗಳಲ್ಲಿ ನಿಮಗೆ ಅದರ ರಗಳೆ ಅಷ್ಟಾಗಿ ಬಾಧಿಸುವದಿಲ್ಲ. ಅಲ್ಲಿಯೂ ಆಯಾ ಜಾತಿಗಳ ಸಂಘಟನೆಗಳಿವೆ, ಕಲ್ಯಾಣ ಮಂಟಪಗಳಿವೆ, ವಿದ್ಯಾರ್ಥಿ ನಿಲಯಗಳಿವೆ. caste-clashesಇವೆಲ್ಲವನ್ನು ಗಮನಿಸಿದಾಗ ನಗರದ ಖಾಸಗಿ ಬದುಕಿನಲ್ಲಿ ಜಾತಿಯ ಪ್ರಭಾವ ಗಾಢವಾಗಿ ಇದ್ದೇ ಇದೆ. ಇನ್ನು ಒಳ-ಹೊರಗಿನ ಎರಡೂ ವಲಯಗಳನ್ನು ಅಪಾರವಾಗಿ ಬಾಧಿಸುವ ಜಾತಿಯನ್ನು ನೀವು ಗ್ರಹಿಸಬೇಕಿದ್ದರೆ ಭಾರತದ ಹಳ್ಳಿಗಳನ್ನು ನಾವು ನೋಡಬೇಕು. ದೇಶದ ಬೇರೆ ಬೇರೆ ಭಾಗಗಳ ಗ್ರಾಮಗಳು ಬೇರೆ ಬೇರೆ ರೀತಿಯಲ್ಲಿ ಈ ಜಾತಿ ಮತ್ತು ಅಸ್ಪ್ರಶ್ಯತೆಯ ಮೂಲಕ ಬೂದಿ ಮುಚ್ಚಿದ ಕೆಂಡದುಂಡೆಗಳಾಗಿ ಉಳಿದಿವೆ. ಬಿಹಾರ ರಾಜ್ಯವಂತೂ ಆ ದಿಸೆಯಲ್ಲಿ ಅಗ್ರಗಣ್ಯ. ದಕ್ಷಿಣದ ಭಾಗಗಳಾದ ಕೇರಳ, ತಮಿಳುನಾಡು, ಕರ್ನಾಟಕಗಳ ಗ್ರಾಮಗಳಲ್ಲಿ ಇಂದಿಗೂ ಪರಿಸ್ಥಿತಿ ಅಷ್ಟೆನೂ ಸುಧಾರಣೆಯಾದಂತಿಲ್ಲ. ಕೆಲ ದಶಕಗಳ ಹಿಂದೆ ನೇರವಾಗಿ ಹಳ್ಳಿಗಳಲ್ಲಿ ಜಾತೀಯತೆ ಎದ್ದು ತೋರುತ್ತಿತ್ತು. ಇಂದು ಅಲ್ಲಿಯ ಕೆಳಜಾತಿಗಳು ಸುಶಿಕ್ಷಿತರಾಗಿರುವದರಿಂದ ಅಲ್ಲಿಯ ಜಾತಿಯೊಳಗಿನ ನಡುವಳಿಕೆಗಳಲ್ಲಿ ಬದಲಾವಣೆಗಳಾಗಿವೆ ಅದರ ಪರಿಣಾಮವಾಗಿ ಮೇಲಿನ ಮತ್ತು ಕೆಳಗಿನ ಜಾತಿಗಳ ನಡುವೆ ಒಂದು ಬಗೆಯ ಶೀತಲ ಸಮರ ಆರಂಭವಾಗಿದೆ. ಅಸ್ಪ್ರಶ್ಯ ಜಾತಿಗಳು ತಲೆ ತಲಾಂತರದಿಂದಲೂ ಮಾಡಿಕೊಂಡು ಬಂದ ಲಾಭವಿಲ್ಲದ ಜಾತಿಯಾಧಾರಿತ ವೃತ್ತಿಗಳನ್ನೇ ಮಾಡಬೇಕೆಂಬ ಒತ್ತಡವನ್ನು ಈಗಿನ ಪೀಳಿಗೆಯ ಮೇಲೆ ಹೇರುವ ಸ್ಥಿತಿಯಿಲ್ಲ. ಆದರೆ ಊಟೋಪಚಾರ, ಬೆರೆಯುವಿಕೆ, ವಿವಾಹ ಮುಂತಾದ ವಿಷಯಗಳಲ್ಲಿ ಈಗಲೂ ಅದೇ ಜಡತ್ವ ಗ್ರಾಮೀಣ ಪ್ರದೇಶದ ಜಾತಿ ಪದ್ಧತಿಯಲ್ಲಿದೆ. ನಾನು ಚಿಕ್ಕವನಿದ್ದಾಗ ನೋಡಿರುವದಿದೆ. ಮನೆಗೆ ಯಾರಾದರೂ ಅಸ್ಪೃಶ್ಯರು ನೀರು ಕೇಳಿ ಬಂದರೆ ತಂಬಿಗೆಯಿಂದ ನೀರನ್ನು ಎತ್ತಿ ಹಾಕುವದಿತ್ತು. ಇವತ್ತಿಗೂ ಕೆಲ ಗ್ರಾಮಗಳಲ್ಲಿ ಕೆಳ ಸ್ತರಗಳಿಗೆ ಹೊಟೇಲಲ್ಲಿ ಚಾ ಕುಡಿಯುವ ಲೋಟವನ್ನೇ ಪ್ರತ್ಯೇಕವಾಗಿಟ್ಟಿರುವದಿದೆ. caste-system2ಯಾವುದಾದರೂ ಜಮೀನ್ದಾರನ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದರೆ ಅವನದೇ ಒಂದು ಊಟದ ತಟ್ಟೆ ಪ್ರತ್ಯೇಕವಾಗಿರುವದನ್ನು ಈಗಲೂ ಗ್ರಾಮೀಣ ಭಾಗಗಳಲ್ಲಿ ಗಮನಿಸಬಹುದು. ಲೋಹಿಯಾರಂಥಾ ಚಿಂತಕರು ಜಾತಿಪದ್ಧತಿಯ ನಿರ್ಮೂಲನೆಯಲ್ಲಿ ಸಹಪಂಕ್ತಿ ಭೋಜನ ಮತ್ತು ಅಂತರಜಾತಿಯ ಮದುವೆಗಳನ್ನು ಸಲಹೆ ಮಾಡಿದರು. ಆದರೆ ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಕೇಳಿಬರುವ ಮರ್ಯಾದೆ ಹತ್ಯೆಗಳಿಗೆ ಉತ್ತರವೇನು..? ಜಾತಿಪದ್ಧತಿಯಲ್ಲಿ ಒಟ್ಟಾರೆಯಾಗಿ ಬದಲಾವಣೆಗಳು ಆಗುತ್ತಿಲ್ಲ ಎಂದಲ್ಲ, ಸಮಾಜಶಾಸ್ತ್ರಜ್ಞ ಜಿ.ಕೆ.ಕಾರಂತ ಎನ್ನುವವರು ಬೆಂಗಳೂರಿನ ಸಮೀಪವಿರುವ ಕೆಲವು ಹಳ್ಳಿಗಳನ್ನು [೧೯೮೧] ಅಧ್ಯಯನ ಮಾಡುವಾಗ ಕೆಳಜಾತಿಗಳು ತಯಾರಿಸುವ ಅಡುಗೆಯನ್ನು ಊಟ ಮಾಡುತ್ತೀರಾ..? ಎನ್ನುವ ಪ್ರಶ್ನೆಗೆ ಉತ್ತರವಾಗಿ ಅನೇಕ ಯುವಕರು ತಪ್ಪೇನಿದೆ..? ಅವರು ಸ್ವಚ್ಚವಾಗಿ ತಯಾರಿಸಿದರೆ ನಾವು ಸ್ವೀಕರಿಸುತ್ತೇವೆ ಎಂದಿರುವದನ್ನು ಅವರು ನೆನಪು ಮಾಡಿ ಕೊಟ್ಟಿರುವದಿದೆ. ರಾಜಪುರ ಎನ್ನುವ ಹಳ್ಳಿಯನ್ನು ಅಧ್ಯಯನ ಮಾಡುವಾಗ ಅಲ್ಲಿಯ ಅಸ್ಪ್ರಶ್ಯ ಜಾತಿಗಳು ಪ್ರಧಾನ ಜಾತಿಯಾದ ಒಕ್ಕಲಿಗ ಜಾತಿಯ ಜನರಿಗೆ ಮದ್ಯ ವಿತರಿಸುವ ಕೆಲಸ ಮಾಡುತ್ತಿದ್ದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗೆ ಸಣ್ಣ ಪುಟ್ಟ ಬದಲಾವಣೆಗಳು ಜರಗುತ್ತಿವೆ ಎನ್ನುವ ಬಗ್ಗೆ ಕಾರಂತರು ಸಾಕ್ಷೀಕರಿಸಿದ್ದಾರೆ. ಅದೇ ರೀತಿಯಲ್ಲಿ ಮೈಸೂರಿನ ಸಮೀಪ ಇರುವ ರಾಮಪುರ ಹಳ್ಳಿಯನ್ನು ಅಧ್ಯಯನ ಮಾಡುವ ವೇಳೆಯಲ್ಲಿಯೂ ಎಮ್.ಎನ್.ಶ್ರೀನಿವಾಸರೂ ಈ ಬಗೆಯ ಸಣ್ಣ ಪುಟ್ಟ ಪರಿವರ್ತನೆಗಳನ್ನು ಕಂಡುಕೊಂಡಿರುವದಿದೆ. ಈ ಬಗೆಯ ಬದಲಾವಣೆಗಳು ಜರುಗುತ್ತಿವೆ ಎನ್ನುವಾಗಲೇ ಅದರ ಇನ್ನೊಂದು ಮಗ್ಗಲು ಮತ್ತಷ್ಟು ಜಟಿಲವಾಗುತ್ತಿರುತ್ತದೆ.