ಭಾವಿಸಿದ ಕನ್ನಡ ಮತ್ತು ಸಹನೆ, ಅಸಹನೆಯ ಸಾಂಸ್ಕೃತಿಕ ತರಬೇತಿ


-ಎಚ್.ಜಯಪ್ರಕಾಶ್ ಶೆಟ್ಟಿ


ಈಗ ತಿಳಿದಿರುವ ಮಟ್ಟಿಗೆ ಕನ್ನಡವೆಂಬ ಮೂರಕ್ಷರದ ನುಣುಪುನುಡಿ ದೇಶ, ನಾಡು, ಭಾಷೆ ಎಂಬರ್ಥದಲ್ಲಿ ಮೊದಲು ಬಳಕೆಗೊಂಡುದು ಕವಿರಾಜಮಾರ್ಗದಲ್ಲಿ. Karnatakamapಭೌತಿಕಮೇರೆಯುಳ್ಳ ಭಾವಿತ ಆವರಣದ ಕನ್ನಡಜನಪದದ ಮೊದಲ ರೇಖಾಚಿತ್ರ ಇಲ್ಲಿದೆ. ಭಾಷೆ ನೆಲ ಸಮೂಹವೆಂಬ ಬಹುಸ್ತರಗಳಲ್ಲಿ ಕಲ್ಪಿತವಾದ ಈ ‘ಕನ್ನಡ’ದಲ್ಲಿ ವಿಲೀನತೆ-ವಿಭೇದತೆಯ ದ್ವಂದ್ವಗಳ ಅತಿವಿಶಿಷ್ಟವಾದ ಬೆರೆಯುವಿಕೆ ಇದೆ. ಈ ಭಿನ್ನತೆ-ಸಾಮ್ಯತೆಗಳ ಬೆರಕೆಯನ್ನು ಕವಿರಾಜಮಾರ್ಗವೇ ನಿರ್ದೇಶಿಸಿದೆ ಎಂದಲ್ಲ. ಕನ್ನಡಮನಸ್ಸಿನ ನಿಡುಗಾಲದ ಹರಿವಿನ ಯಾವುದೋ ಸಂಧಿಯಲ್ಲಿ ಸಂಭವಿಸಿದ ಈ ಕೃತಿ ಅದರ ಜಾಯಮಾನವಾದ ಸಹನೆ, ಸಹತ್ವವನ್ನು ತನ್ನೊಳಗಿನ ಬನಿಯಾಗಿಸಿಕೊಂಡಿದೆಯಷ್ಟೆ. ಆದರೆ ಕನ್ನಡವೆಂಬ ಜನಪದ ಭೂಗೋಳವು ಈ ಅರಿವಿಗೆ ನಿಲುಕದ ಅನಾದಿಯಿಂದ ಸಾಕಷ್ಟು ದೂರ ಹರಿದುಬಂದಿದೆ. ಈ ಹರಿವಿನಲ್ಲಿ ‘ಕನ್ನಡ’ವೆನ್ನುವ ವಿಶೇಷಣವೂ ಪ್ರತಿನಿಧೀಕರಣ ರಾಜಕಾರಣದ ಹೊರಳಿಕೆಗೂ ಒಳಗಾಗಿದೆ. ಒಳಗೊಳ್ಳುವ-ಹೊರಗಿಡುವ ಮಾಪಕವೂ ಆಗಿದೆ. ಹೀಗೆ ಬಹುರೂಪಗಳಲ್ಲಿ ಪ್ರಕಟಗೊಳ್ಳುತ್ತಾ ಬಂದ ಕನ್ನಡವಿಂದು ಕರ್ನಾಟಕವಾಗಿ ನಮ್ಮೆದುರಿಗಿದೆ. ಭಾಷಾರಾಜ್ಯಗಳ ಉಗಮದಿಂದೀಚೆ ಕನ್ನಡವನ್ನು ಗುರುತಾಗಿಸಿಕೊಂಡ ಮಾದರಿಗಳು ಮುನ್ನೆಲೆಗೆ ಬಂದು ದಾಖಲಿಸಿಕೊಳ್ಳುತ್ತಿರುವ ಕ್ರಿಯಾಶೀಲತೆಯಿಂದಾಗಿ ನವೆಂಬರ್ ತಿಂಗಳಂತೂ ಕನ್ನಡಮಾಸವೆನಿಸಿದೆ.

ಕನ್ನಡದ ಪ್ರಶ್ನೆಯ ವಿವರಣೆಯಲ್ಲಿ ಕನ್ನಡದ ಬಿಕ್ಕಟ್ಟಿನ ಕುರಿತ ಚಿಂತನೆಯ ಕಾಲವಾಗಿ ಮೈದೋರಿಕೊಳ್ಳುತ್ತಿದೆ. ಆದರೆ ಭಾಷೆ, ನಾಡು ಕೇವಲ ಭಾವನಾತ್ಮಕ ಸಂಗತಿಯಾಗಬೇಕಿಲ್ಲ. ಅದಕ್ಕಿಂತ ಭಿನ್ನವಾಗಿ ಕನ್ನಡ, ಕರ್ನಾಟಕಗಳ ಕುರಿತ ನಿರೂಪಣೆಗಳನ್ನೂ, ಕನ್ನಡವೆನ್ನುವ ‘ಸ್ವ’ಕ್ಕೆ ಎದುರಾಳಿಯಾಗಿ ಕಟ್ಟಿಕೊಡುತ್ತಾ ಬಂದ ‘ಅನ್ಯ’ಗಳ ಕುರಿತ ಕನ್ನಡಸಮೂಹದ ವರ್ತನೆಯ ಹಿಂದಿನ ಸಾಂಸ್ಕೃತಿಕ ಸೂಕ್ಷ್ಮಗಳನ್ನೂ ವಿವರಿಸಿಕೊಳ್ಳುವ ಅಗತ್ಯವಿದೆ. ಕನ್ನಡ ಸೃಜನಶೀಲ ಪರಂಪರೆ ಕಟ್ಟಿಕೊಟ್ಟಿರುವ ಕನ್ನಡದ ವ್ಯಾಪಕತೆ ಮತ್ತು ಒಳಗೊಳ್ಳುವಿಕೆಯ ಗುಣವನ್ನು ವರ್ತಮಾನದ ಗುರುತಿನ ರಾಜಕಾರಣದ ಒಳಸೂಕ್ಷ್ಮಗಳ ಜೊತೆಗಿಟ್ಟು ನೋಡಬೇಕಿದೆ. ‘ಅನ್ಯ’ಗಳಾಗಿ ಕಟ್ಟಿಕೊಡಲಾಗುತ್ತಿರುವ ಸಮೂಹ, ಭಾಷೆಗಳ ಕುರಿತ ನಿರೂಪಣೆಗಳು ರಕ್ಷಿಸುತ್ತಿರುವ ಮತ್ತು ಮರೆಮಾಚುತ್ತಿರುವ ಸೂಕ್ಷ್ಮಗಳನ್ನು ಅರ್ಥೈಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಮಾರ್ಗಕಾರನನ್ನೂ ಒಳಗೊಂಡು ಕನ್ನಡ ಕವಿಮನಸ್ಸುಗಳು ನಿರೂಪಿಸುತ್ತಾ ಬಂದ ‘ಕನ್ನಡ’ ಹಾಗೂ ಸಾಂಸ್ಥಿಕಶಕ್ತಿಕೇಂದ್ರಗಳು ಸಮೂಹಸಮ್ಮತಿಯ ಉತ್ಪಾದನೆಯಲ್ಲಿ ಸಾಧ್ಯವಾಗಿಸಿದ ಕನ್ನಡಗಳ ಭಿನ್ನ ಚಹರೆಗಳನ್ನು ವಿವರಿಸಿಕೊಳ್ಳುವ ಪ್ರಯತ್ನವಿಲ್ಲಿದೆ.

ಭೌತಿಕವಾಗಿದ್ದೂ ಭಾವಿತವಾಗುವ, ಸ್ಥಳೀಯವಾಗಿದ್ದೂ ವಿಶ್ವಜಗತ್ತಾಗುವ ವಿಶಿಷ್ಟ ಭೂಗೋಳ

ಕನ್ನಡವೆಂಬ ಮೂರಕ್ಷರದ ನುಣುಪು ನುಡಿಯಲ್ಲಿ ಮಾರ್ಗಕಾರ ಬರೆದ ‘ಭಾವಿಸಿದ ಜನಪದ’ದ ನಕಾಶೆಯಲ್ಲಿ ಭೌತಿಕ ಭೂಗೋಳ ಹಾಗೂ ಭಾವಿತ ಭಾವಗೋಳಗಳಿವೆ. 000ಈ ಕನ್ನಡದ ಹಿಂದೆ ಜಗತ್ತು ಭಗವಂತನಿಂದಾದುದಾಗಿ ನಂಬುವ ಸೃಷ್ಟಿವಾದಿ ವೈದಿಕ ತಾತ್ವಿಕತೆಗಿಂತ ಭಿನ್ನವಾಗಿ, ಜಗತ್ತನ್ನೊಂದು ‘ಅನಾದಿ’ಯಾಗಿ ನಂಬುವ ಜೈನತಾತ್ವಿಕತೆ ಇದೆ. ಮಾರ್ಗಕಾರ ನಿರೂಪಿಸುವ ಕನ್ನಡವೆಂಬ ಜನಪದವೂ ಸೃಷ್ಟಿವಾದಿ ನಿರೂಪಣೆಯಂತೆ ‘ಇರುವಿಕೆ’ಯಾಗದೆ ಆಗುವಿಕೆಯ ಮಾದರಿಯಲ್ಲಿದೆ. ‘ಆಗುವಿಕೆಯ’ ತಾತ್ವಿಕತೆಯಲ್ಲರಳಿದ ಈ ಕನ್ನಡ ಭೌತಿಕಚಹರೆಗಳನ್ನು ಹೊಂದಿಯೂ ಆಹ್ವಾನ-ವಿಸರ್ಜನದ ಮಾದರಿಯಲ್ಲಿ ನಾಡಾಡಿಯೊಬ್ಬ ಕಟ್ಟಿಕೊಳ್ಳುತ್ತಲೇ ಹೋಗುವ ಭಾವಿತಸತ್ಯ. ‘ಕಾವೇರಿಯಿಂದ ಗೋದಾವರಿವರೆಗೆ….’ ಎಂಬ ಪದ್ಯವಂತೂ ನಾಡು-ನುಡಿ-ಜನಪದಗಳೆಂಬ ಸಮಸ್ತವನ್ನೂ ಮೂರ್ತ-ಅಮೂರ್ತ, ಭೌತಿಕ-ಭಾವಕವೆಂಬ ವಿರುದ್ಧ ದ್ವಂದ್ವಗಳಲ್ಲಿ ಏಕತ್ರ ಗ್ರಹಿಸಿ ಕಂಡರಿಸುತ್ತದೆ. ಈ ರೇಖಾಚಿತ್ರದಲ್ಲಿನ ಕಾವೇರಿ-ಗೋದಾವರಿಗಳು ಕೇವಲ ಭೌಗೋಳಿಕ ಅಸ್ತಿತ್ವವಲ್ಲ. ಭಾರತೀಯ ಸಮಷ್ಟಿಮನಸ್ಸಿನ ಭಾವ ವಾಸ್ತವಗಳು. ಅಷ್ಟೇ ಅಲ್ಲ, ಯಾವುದೇ ಧಾರ್ಮಿಕ, ಮತೀಯ ಗುರುತಿಗೂ ಬಂಧಿಯಲ್ಲದ ಚಲನಶೀಲ ಜಲಸತ್ಯಗಳಾದ ಈ ನಿಸರ್ಗದತ್ತ ಭೌತಿಕಮೇರೆಗಳು, ಅನುಲ್ಲಂಘನೀಯವಾದ ಗಡಿಕಲ್ಪನೆಯನ್ನು ಅಪಹಾಸ್ಯಕ್ಕೂ ಗುರಿಪಡಿಸುತ್ತವೆ.

ಜೊತೆಗೆ ಮಾರ್ಗಕಾರನ ‘ಕನ್ನಡ’ ನೆಲವೆಂಬ ಏಕಸತ್ಯವಾಗದೆ, ‘ಜನಪದ’ವಾಗಿ ಜನವನ್ನು ಒಳಗೊಳ್ಳುತ್ತದೆ. ವಸುಧಾವಲಯ ವಿಲೀನವಾಗಿಯೂ, ‘ವಿಶದವಾಗುಳಿಯಬಲ್ಲ’ ಪ್ರಕಟ ಅಸ್ಮಿತೆ ಮತ್ತು ಸಹತ್ವಗಳೆರಡೂ ಅದಕ್ಕೆ ಸಾಧ್ಯವಿದೆ. ಸ್ಥಳೀಯತೆಯ ಭಿನ್ನತೆಯನ್ನು ವಿಶ್ವಾತ್ಮಕತೆಯ ಸಾಮ್ಯತೆಯಲ್ಲಿ ಹೊಂದಿಸಬಲ್ಲ ಸಂಘರ್ಷವಿಲ್ಲದ ‘ಸಹತ್ವ’ದಿಂದಾಗಿ ಅದು ವಿಷಯವಿಶೇಷವೂ ಆಗಿದೆ. ಮೂರನೇ ಪರಿಚ್ಛೇದದಲ್ಲಿ ಉದಾತ್ತಾಲಂಕಾರಕ್ಕೆ ಲಕ್ಷ್ಯನೀಡುತ್ತಾ, ‘ಪರಧರ್ಮ ಪರವಿಚಾರಗಳ ಸೈರಣೆಯನ್ನೇ ‘ಕಸವರಮೌಲ್ಯ’ವೆನ್ನುವ ಮಾರ್ಗಕಾರನ ಮಾತು, ಇಂತಹ ಜನಪದವೊಂದರ ಆಗುವಿಕೆಗೆ ಬೇಕಾದ ತಾತ್ವಿಕ ಭೂಮಿಕೆಯಂತಿದೆ. ಜನಪದ ಅಥವಾ ನಾಡೊಂದು ವಿಶ್ವಸ್ಥ-ಸ್ಥಳೀಯವೆನ್ನುವ, ವಿಲೀನ-ವಿಶದವೆಂಬ ದ್ವಂದ್ವದ ಏಕತ್ರ ಸ್ಥಿತಿಯನ್ನು ಆಗುಗೊಳಿಸಿಕೊಳ್ಳಲು, ‘ಸ್ವ’ ಮತ್ತು ‘ಅನ್ಯ’ವೆಂಬ ಭಿನ್ನತೆಗಳನ್ನು ಸಹನೆಯ ಆವರಣದಲ್ಲಿ ಸಂಬಾಳಿಸಲು ಶಕ್ತವಾಗಬೇಕು. ಹೀಗೆ ಸಹಸ್ರಮಾನಗಳ ನಂತರವೂ ಕನ್ನಡದ ಜನ ಮತ್ತೆ ಮತ್ತೆ ಚಿಂತಿಸಿ, ಕಟ್ಟಿಕೊಳ್ಳುತ್ತಲೇ ಇರಬಹುದಾದ ಕನ್ನಡದ ನಿರೂಪಣೆಯೊಂದನ್ನು ಮಾರ್ಗಕಾರ ನಮ್ಮೆದುರು ಬಿಟ್ಟುಹೋಗಿದ್ದಾನೆ. ಆತನಲ್ಲಿ ಕನ್ನಡವೆಂಬುದು ನೆಲವೇ, ಭಾಷೆಯೇ, ಜನವೇ ಎಂಬ ತಕರಾರಿಗಿಂತ ಎಲ್ಲವನ್ನೂ ಒಳಗೊಂಡು ದಾಟುತ್ತಲೇ ಹೋಗುವ ಅನಿಕೇತನವಾಗುತ್ತದೆ.

ಸುಡುವ ಕಿಚ್ಚಾಗದೆ ಸುಳಿವ ಗಾಳಿ-ಬೆಳೆವ ಬಳ್ಳಿಯಾಗಿ

ದೇಶವೆಂದರೆ ಮಣ್ಣು ಬೆಟ್ಟ ಗುಡ್ಡ ನಕ್ಷೆ ಬಾವುಟವೆಂದು ನಂಬುವುದು ಬೇರೆ. ಆ kannada_Kuvempuದೇಶ ಮತ್ತು ಭಾಷೆಯು ದಕ್ಕುವುದು ಮೂರ್ತಚಹರೆಯಲ್ಲೇ. ಅಲ್ಲಿ ಬೆಳೆಯುವ ಬಳ್ಳಿಯ ಗುಣವಾಗಲೀ, ಬೆರೆಯುವ ಗಾಳಿಯ ಗುಣವಾಗಲೀ ಇರದು. ಆದರೆ ಪುತಿನ ಹೇಳುವಂತೆ ‘ದೇಶ ಅಂದರೆ ಜನ’ ಎಂದುಕೊಳ್ಳಲು ಸಾಧ್ಯವಾಗುತ್ತಲೇ, ದೇಶ ಅಥವಾ ನಾಡಿನ ಸೀಮಿತ ಭೌತಿಕಚಹರೆ ಕಳಚಿಕೊಳ್ಳುತ್ತದೆ. ಈ ಕಣ್ಣೋಟವು ಎಲ್ಲವನ್ನೂ ಕನ್ನಡವಾಗಿಸಿ, ಕನ್ನಡಕ್ಕಾಗಿಸಿಕೊಂಡು ಬೆರೆಯುವ ಅಪೂರ್ವ ಶಕ್ತಿಯಾಗುತ್ತದೆ. ಕನ್ನಡ ಕಾವ್ಯಜಗತ್ತು ಎದುರಿಗೆ ತಂದುಕೊಳ್ಳುವ ಕನ್ನಡ ಮತ್ತು ಕರ್ನಾಟಕದಲ್ಲಿ ಇಂಥದ್ದೊಂದು ಆಹ್ವಾನ-ವಿಸರ್ಜನದ ಗುಣವಿದೆ. ಅಲ್ಲಿ ಏಕಕಾಲದಲ್ಲಿ ಸಾಮ್ಯತೆ-ಭಿನ್ನತೆಗಳು ಏಕತ್ರಗೊಳ್ಳುತ್ತಲೇ ಭಿನ್ನವಾಗಿ ಉಳಿಯುತ್ತವೆ. ಮಾರ್ಗಕಾರನಿಂದ ಹಿಡಿದು ಕವಿಶೈಲ ಕುವೆಂಪು ತನಕ ಕನ್ನಡಕಾವ್ಯದೊಳಗೆ ಈ ಮಾದರಿಯ ಹರಿವಿದೆ. ‘ನೀ ಮೆಟ್ಟುವ ನೆಲ ಅದೇ ಕರ್ನಾಟಕ, ನೀನೇರುವ ಮಲೆ ಸಹ್ಯಾದ್ರಿ, ನೀನ್ ಕುಡಿಯುವ ನೀರ್ ಕಾವೇರಿ….’ ಇತ್ಯಾದಿಯಾಗಿ ಕುವೆಂಪು ಕಲ್ಪಿಸುವ ಕನ್ನಡವೂ ಒಂದು ಭಾವವಾಸ್ತವವೇ. ಮೂರ್ತವಾಗಿ ನೆಲೆಗೊಳ್ಳದ, ಆದರೆ ಕಟ್ಟಿಕೊಳ್ಳುತ್ತಲೇ ಹೋಗಬಹುದಾದ ಈ ಕನ್ನಡ ನವನವೀನವೇ. ಈ ಕನ್ನಡಕ್ಕೆ ಗುರುತಾಗಿಯೂ ಗುರುತಿಗೆ ಹೊರತಾಗುವ ಶಕ್ತಿಯಿದೆ. ಎಲ್ಲಿಯೋ, ಹೇಗಾದರೂ ಇದ್ದೂ ಎಂದೆಂದಿಗೂ ಕನ್ನಡವಾಗುವ ಈ ಅಂತರಂಗದ ಪರಿಗೆ ಮಾರ್ಗಕಾರನ ‘ಭಾವಿಸಿದ ಕನ್ನಡದ’ ಛಾಯೆ ಇದೆ. ಇದಕ್ಕೆ ಅನ್ಯವೆಂಬ ಎದುರಾಳಿ ಕುರುಹೇ ಇರದು. ಹೀಗಾಗಿ ಅದು ಸಂಘರ್ಷರಹಿತವಾದುದೂ ಆಗುತ್ತದೆ.

ಕನ್ನಡ ಕವಿಜಗತ್ತು ಸಂಘರ್ಷಕ್ಕೆ ಕಾರಣವಾಗುವ ಅಸಹನೆಯ ನಿರಸನದಲ್ಲಿ ಲೋಕಸಮಸ್ತಕ್ಕೂ ಚಾಚಿಕೊಳ್ಳಬಯಸುತ್ತದೆ. ಆದಿಕವಿ ಪಂಪನ ಲೋಕಾನುಭವ ಭಾಗವಾದ ರಸಿಕಜೀವನದಲ್ಲಿರುವುದು ಸೀಮೋಲ್ಲಂಘನವೇ. ಆಂಧ್ರ, ಕೇರಳ, ಮಲಯ ಯುವತಿಯರ ಸ್ತನಹಾರ, ಕಟೀಸೂತ್ರ, ದರ್ಪಣವಾಗಿ ಬೆರೆತ ಪಂಪನೆಂಬ ಕನ್ನಡಮನಸ್ಸು ಕನ್ನಡದ್ದಲ್ಲದ ಹೆಣ್ತನಗಳ ತೋಳತೆಕ್ಕೆಯಲ್ಲಿ ಪಡೆದ ಸಂಸಾರಸಾರವನ್ನು ಕನ್ನಡದ ಸಂಪತ್ತಾಗಿಸಿದೆ. ನಡುಗನ್ನಡ ಕವಿ ರತ್ನಾಕರವರ್ಣಿಯಾದರೋ ತನ್ನ ಕಾವ್ಯವನ್ನು ಮೆಚ್ಚುವವರ ಸರಣಿಯಲ್ಲಿ ಕನ್ನಡಿಗರ ಜೊತೆಗೆ ತೆಲುಗ, ತುಳುವರನ್ನೂ ಸೇರಿಸಿಕೊಳ್ಳುತ್ತಾನೆ. ಅವರೆಲ್ಲರೂ ಮೈಯುಬ್ಬಿ ಕೇಳಬೇಕೆಂದೂ ಆಶಿಸುತ್ತಾನೆ. ಭಾಷೆ ಇಲ್ಲಿ ವೈವಿಧ್ಯವೇ ಹೊರತು, ಎದುರಾಳಿಯಲ್ಲ. ಉಸಿರಿನ ನಾದತರಂಗದ ಹೊಸಬಗೆಯ ಕಸುವಲ್ಲದೆ, ಉಸಿರನ್ನೇ ಹಿಚುಕುವ ಕದನ ಕಣವಲ್ಲ. ಪ್ರಾಯಶಃ ಆರೋಗ್ಯಕರವಾದ ಕವಿಮನಸ್ಸೊಂದು ಭಾಷೆಯ ಜೊತೆಗೆ ವ್ಯವಹರಿಸುವಲ್ಲಿ ಅನುಸರಿಸಬಹುದಾದ ಆರೋಗ್ಯಕರ ದಾರಿಯಲ್ಲೇ ಪಂಪ, ರತ್ನಾಕರ, ಕುವೆಂಪು ಅವರುಗಳು ಸಾಗಿದ್ದಾರೆ. ಇದು ಹೊರಗಿನದನ್ನು ದ್ವೇಷಿಸದೆ, ಎಲ್ಲಿಯೇ ಇರಲಿ ಒಳಗಿನದಾಗುವ ಅಥವಾ ಕನ್ನಡವನ್ನು ತನ್ನೊಳಗಿನ ಸತ್ಯವಾಗಿಸುವ ದಾರಿ. ಇರುವಿಕೆ ತೋರುತ್ತಲೇ ಬಯಲೊಳಗೆ ಬೆರೆತು ಬೆತ್ತಲಾಗುವ ಗಂಧಹೊತ್ತ ಗಾಳಿಯಂತೆ, ಮೆದೆಯೊಳಗೆ ಹುದುಗಿ ಮೈಮರೆತಂತಿದ್ದೂ ಟಿಸಿಲೊಡೆದ ನಿಡುಗೊರಳ ಕುಡಿಗಳಲ್ಲಿ ಅಸ್ಮಿತೆಯ ಕುರುಹು ಉಳಿಸಿಡುವ ಬಳ್ಳಿಯಂತೆ, ವಸುಧಾವಲಯ ವಿಲೀನವಾಗಿಯೂ ಸದಾಕಾಲ ವಿಶದವಾಗುಳಿಯಬಲ್ಲ ಕನ್ನಡದ ನಡೆಯಿದು.

ಸಹನೆ ಅಸಹನೆಗಳ ಸಾಂಸ್ಕೃತಿಕ ತರಬೇತಿ

ಆದರೆ ನಮ್ಮೆದುರು ಇಂದು ಪ್ರಕಟಗೊಳ್ಳುತ್ತಿರುವ ಕನ್ನಡಕ್ಕೆ ಬೇರೆ ಚಹರೆಗಳಿವೆ.bhuvaneshwari ಅದಕ್ಕೆ ಬಾವುಟ, ಬಣ್ಣ, ಪ್ರತಿಮೆಗಳೆಂಬ ಸ್ಥಿರ ರೂಪಗಳಿವೆ. ಅದು ಭಾವಸತ್ಯದಾಚೆಯ ಭೌತಿಕಸತ್ಯವಾಗಿ, ಭೂಗೋಳದ ನಕ್ಷೆ, ಭುವನೇಶ್ವರಿಯ ಆಕಾರದ ಮೂರ್ತ ಗುರುತಾಗಿ ಮತೀಯ ಚಹರೆಗೆ ಲಗತ್ತುಗೊಂಡಿದೆ. ಅನ್ಯ-ಸ್ವ ಎನ್ನುವ ಎದುರಾಳಿಗಳನ್ನು ಕಟ್ಟಿಕೊಡುವ ಮಾಧ್ಯಮವೂ ಆಗಿದೆ. ಅಂದರೆ ಕನ್ನಡವೆಂಬ ವಿಶೇಷಣವನ್ನು ಹರಳುಗಟ್ಟಿಸಿದ ಮಾರ್ಗಕಾರ ಎರಕಹೊಯ್ದಿಟ್ಟ ‘ಕಸವರ ಮೌಲ್ಯ’ವನ್ನು ಅದು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದೆ ಎಂದಲ್ಲ. ಆದರೆ ಕನ್ನಡ ಮನಸ್ಸಿನ ಈ ಸಹತ್ವ ಮತ್ತು ಸಹನೆಯು ಆಯ್ಕೆ-ನಿರಾಕರಣದ ಮಾದರಿಯಲ್ಲಿದೆ. ಇದನ್ನು ಅನೇಕ ವೇಳೆ ಸಾಮ್ರಾಜ್ಯಗಳ ಕಲ್ಪಿತಚರಿತ್ರೆಗಳು ಬೆರೆತ ಕನ್ನಡದ ಗತವಲಸೆಗಳು ನಿರ್ಧರಿಸುತ್ತಿವೆ. ಹಾಗಾಗಿ ಕನ್ನಡದ ವೈರಿಗಳ ಆಯ್ಕೆಯಲ್ಲಿ ಭೌತಿಕ ಸೀಮೆಗಳೆಂಬ ರಾಜಕೀಯ ಗಡಿಗಳ ಜೊತೆಗೆ ಮತೀಯ ಅನ್ಯತೆಯ ಗುರುತುಗಳೂ ಸೇರಿಕೊಳ್ಳುತ್ತಿವೆ. ಕನ್ನಡದ ಹೆಗಲೇರಿ ಕುಳಿತ ಸಾಂಸ್ಕೃತಿಕ ಯಾಜಮಾನ್ಯಕ್ಕೆ ತನ್ನ ವೈರಿಯನ್ನು ಹಣಿಯಲು ಕನ್ನಡವು ಚಿಮ್ಮುಹಲಗೆಯಾಗುತ್ತಿದೆ. ಹೀಗಾಗಿ ಅನೇಕ ವೇಳೆ ಭಾಷೆಯೆಂಬುದು ಪ್ರಾಣಘಾತುಕವೇ ಆಗುತ್ತಿದೆ.

ಭಾಷಾವಾರು ಪ್ರಾಂತ್ಯಗಳ ನೆಲೆಯಲ್ಲಿ ತಮಿಳು-ತೆಲುಗು-ಮಲಯಾಳಂ-ಮರಾಠಿಗಳ ಜೊತೆಗೆ ಕನ್ನಡದ ವೈಮನಸ್ಸಿಗೆ ಗಡಿಹಂಚಿಕೆ, ಅವಕಾಶದ ಅಸಮಾನತೆಯ ಆರ್ಥಿಕ ಕಾರಣಗಳಿವೆ. ಇಂಗ್ಲೀಷನ್ನೋ, ಹಿಂದಿಯನ್ನೋ ಎದುರಾಳಿಯಾಗಿ ಪರಿಭಾವಿಸಿಕೊಳ್ಳುವಲ್ಲಿಯೂ ಅವಕಾಶಗಳ ನಾಪತ್ತೆಯ ಸಾಮೂಹಿಕ ಭಯವಿದೆ. ಇಲ್ಲಿ ಭಾಷೆ ಕೇವಲ ಭಾವನೆಯ ಅಭಿವ್ಯಕ್ತಿ ಮಾಧ್ಯಮವಷ್ಟೇ ಎಂದರಾಗದು. ಆದರೆ ಕನ್ನಡದ ಆಕ್ರಮಣಶೀಲತೆ ಮತ್ತು ಸಹನೆಗಳು ಈ ನಿರ್ದಿಷ್ಟ ರಾಜಕೀಯ ಕಾರಣಗಳಿಗಷ್ಟೇ ಸೀಮಿತವಾಗಿಲ್ಲ. ಕನ್ನಡವು ತಮಿಳು-ತೆಲುಗುಗಳಂತೆ ಯಾವುದೇ ಗಡಿ, ಅವಕಾಶ ಇತ್ಯಾದಿಗಳ ತಕರಾರಿದ ಅನೇಕ ಭಾಷೆಗಳೊಂದಿಗೆ ಬದುಕುತ್ತಿದೆ. ಅವೆಲ್ಲವುಗಳ ಜೊತೆಗೆ ಅದರ ಸಂಬಂಧ ಏಕಪ್ರಕಾರವೂ ಆಗಿಲ್ಲ. ಉದಾಹರಣೆಗೆ ಕನ್ನಡದ ಯಾವ ನೆಲ-ಜಲ-ಸಾಂಸ್ಕೃತಿಕ ಆಸ್ತಿಯ ಒತ್ತುವರಿ ಮಾಡುವ ಸ್ಥಿತಿಯಲ್ಲಿರದ ಉರ್ದುವಿನೊಂದಿಗೆ ವೈರದ ಸಂಬಂಧವಿದ್ದರೆ, ಮೃತಭಾಷೆ ಎನಿಸಿಯೂ ಕನ್ನಡದ ಮೇಲೆ ಒಂದರ್ಥದ ಯಜಮಾನಿಕೆ ನಡೆಸುತ್ತಲೇ ಇರುವ ಸಂಸ್ಕೃತದ ಜೊತೆಗೆ ಅದಕ್ಕೆ ವಿನಯಶೀಲ ಸಂಬಂಧವಿದೆ. ಕೊಂಕಣಿ, ಕೊಡವ, ತುಳು ಇನ್ನೂ ಎಷ್ಟೋ ಭಾಷೆಗಳೊಂದಿಗೆ ವಿಶೇಷ ತಕರಾರುಗಳಿಲ್ಲದ, ಆದರೆ ಯಜಮಾನಿಕೆಯ ಸಂಬಂಧವಿದೆ.

ಗೋಕಾಕ್ ವರದಿಯ ಸಂದರ್ಭವೋ, ದೂರದರ್ಶನದಲ್ಲಿನ ಉರ್ದು ವಾರ್ತೆಯೋkarnataka Sanskrit University ಉರ್ದುವಿನ ವಿರುದ್ಧವಾಗಿ ಪ್ರಚೋದಿಸಿದಂತೆ, ಸಂಸ್ಕೃತವಿಶ್ವವಿದ್ಯಾಲಯದ ಪ್ರಶ್ನೆಯೋ, ನಿರಂತರವಾಗಿ ಪ್ರಸಾರವಾಗುತ್ತಿರುವ ಸಂಸ್ಕೃತ ವಾರ್ತೆಗಳೋ ಕನ್ನಡ ಮನಸ್ಸನ್ನು ಪ್ರಚೋದಿಸಿಲ್ಲ! ಕನ್ನಡಿಗರ ಯಾವ ಹಕ್ಕನ್ನೂ ಕಸಿಯದ, ಯಾವ ನೌಕರಿಯನ್ನೂ ಅಪಹರಿಸದ, ಹೆಚ್ಚೂ ಕಡಿಮೆ ಶೇ.10ಕ್ಕಿಂತ ಹೆಚ್ಚಿನ ಜನಸಂಖ್ಯೆಯ ಮನೆಮಾತಾಗಿರುವ ಭಾಷೆಯೊಂದು ಕನ್ನಡದ ಸಂದರ್ಭದಲ್ಲಿ ಉಗ್ರ ವಿರೋಧಕ್ಕೆ ಒಳಗಾಗುವುದು ಹಾಗೂ ಕನ್ನಡದ ಮೇಲೆ ಯಜಮಾನಿಕೆ ನಡೆಸಿಯೂ ಇನ್ನೊಂದು ಭಾಷೆ ಕನ್ನಡದ ವಿನಯಗೌರವವನ್ನು ಪಡೆಯುವುದು ಅಚ್ಚರಿ ಎನಿಸುತ್ತದೆ. ಕನ್ನಡದ ನಡುವೆಯೇ ಇರುವ ಅದೆಷ್ಟೋ ಭಾಷೆಗಳಿಗೆ ಕನಿಷ್ಠ ಒಂದು ಅಕಾಡೆಮಿಯೂ ಇಲ್ಲದಿರುವ ಸ್ಥಿತಿಯನ್ನು ಮೌನವಾಗಿ ಸಹಿಸಿಕೊಂಡಿರುವ ಸಮುದಾಯಗಳ ಬಗೆಗೆ ಕನಿಷ್ಠ ಸೌಜನ್ಯದ ಸಹಾನುಭೂತಿ ತೋರದ ನಾವು, ಸೀಮಿತ ಕಲಿಕಾ ಸಮೂಹವಿರುವ ಒಂದು ಭಾಷೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿತವಾಗುವುದನ್ನು ಕನ್ನಡದ ಕರ್ತವ್ಯ ಎನ್ನುವಂತೆ ಸಹಮತ ತೋರುತ್ತೇವೆ! ನಮ್ಮ ಮನಸ್ಸಿಗೆ ಈ ಮಾದರಿಯ ಅಸಹನೆ ಮತ್ತು ಸಹನೆಯ ತರಬೇತಿ ಎಲ್ಲಿಂದ ದೊರೆಯಿತೆನ್ನುವುದೇ ಅಚ್ಚರಿಯೆನಿಸುತ್ತದೆ.

ಭಾಷೆ, ಧರ್ಮ, ಜಾತಿ ಇನ್ನೂ ಏನೇನೋ ಮಾದರಿಗಳಲ್ಲಿ ವ್ಯಕ್ತವಾಗುವ ದ್ವೇಷ-ಸಹನೆಗಳು ಆಕಸ್ಮಿಕಗಳಲ್ಲ. ಅವುಗಳನ್ನು ಸಹಜವಾದ ಅಭಿವ್ಯಕ್ತಿಗಳೆಂದು ಕರೆಯಲಾಗುತ್ತದೆಯಾದರೂ, ಅವುಗಳ ಮರೆಯಲ್ಲಿ ಹದಗೊಂಡ ಸಾಂಸ್ಕೃತಿಕ ತರಬೇತಿಯ ಬೆಚ್ಚನೆಯ ಇರುವಿಕೆ ನಿರಾಕರಿಸಲಾಗದು. ನಮ್ಮ ನಡುವೆಯೇ ಸಂಭವಿಸಿಹೋದ ಎರಡು ಗಾಂಧಿಗಳ ಹತ್ಯೆಯ ನಂತರದ ಸಹನೆ, ಅಸಹನೆಗಳೇ ಇದಕ್ಕೆ ಸಾಕ್ಷಿಯಂತಿವೆ. ಇಂದಿರಾ ಗಾಂಧಿಯನ್ನು ಸಿಕ್ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಗುಂಡಿಟ್ಟು ಕೊಂದರೆ, ಗಾಂಧೀಜಿಗೆ ಗುಂಡಿಟ್ಟು ಕೊಂದುದು ಚಿತ್ಪಾವನ್ ಬ್ರಾಹ್ಮಣಧರ್ಮ/ಜಾತಿಗೆ ಸೇರಿದ ವ್ಯಕ್ತಿ. ಆದರೆ ಎರಡೂ ಸಂದರ್ಭದಲ್ಲಿ ಈ ದೇಶದ ಮನಸ್ಸುಗಳು ಪ್ರತಿಕ್ರಿಯಿಸಿದ ರೀತಿಯಲ್ಲಿ ಅಗಾಧ ವ್ಯತ್ಯಾಸವಿದೆ. ಇಂದಿರಾ ಸತ್ತಾಗ ಕೊಂದವರ ಸಮುದಾಯಕ್ಕೆ ಸೇರಿದವರೆಂಬ ಒಂದೇ ಕಾರಣಕ್ಕೆ ಸಮುದಾಯವೊಂದರ ಸಾಮೂಹಿಕ ನರಮೇಧವೇ ನಡೆಯಿತು. ಒಂದು ದೊಡ್ಡಮರ ಬೀಳುವಾಗ ಇದೆಲ್ಲವೂ ಸಾಮಾನ್ಯವೆಂಬ ಸಮಜಾಯಿಷಿಯೊಂದಿಗೆ ಕೊಲೆಮಾಡಿದ ವ್ಯಕ್ತಿಗಳ ಪಾಪವನ್ನು ಸಮುದಾಯಕ್ಕೆ ವರ್ಗಾಯಿಸಲಾಯಿತು. ಆದರೆ ಈ ದೇಶದ ಆತ್ಮಸಾಕ್ಷಿಯಂತಿದ್ದ ಗಾಂಧೀ ಕೊಲೆಯ ಅಪರಾಧವು ಸಮುದಾಯಕ್ಕೆ ವರ್ಗಾವಣೆಗೊಂಡಿತೇ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಗಾಂಧೀ ಕೊಲೆಯನ್ನು ವ್ಯಕ್ತಿಯ ಕೃತ್ಯವಾಗಿಯೇ ಸೀಮಿತಗೊಳಿಸಿ ಅದರಲ್ಲಿ ಸಂಘಟನಾತ್ಮಕ ಪಾಲನ್ನೂ ನಿರಾಕರಿಸುವ ಯತ್ನವೇ ನಡೆಯಿತು. ಪ್ರಾಯಶಃ ಇಂದಿರಾ ಗಾಂಧಿಯ ಕೊಲೆಯನ್ನೂ ಈ ದೇಶದ ಬಹುಸಂಖ್ಯಾತ ಧರ್ಮಕ್ಕೆ ಸೇರಿದ ಮೇಲ್ಜಾತಿ ಶಕ್ತಿಗಳೇ ನಿರ್ವಹಿಸಿದ್ದಲ್ಲಿ, ಸಮುದಾಯವನ್ನೇ ಹೊಣೆಮಾಡಿ ಆ ಪ್ರಮಾಣದ ರಕ್ತಪಾತ ಸಂಭವಿಸುತ್ತಿತ್ತೆನ್ನಲಾಗದು. ಏಕೆಂದರೆ ಇಂದಿಗೂ ಈ ದೇಶದ ದಲಿತ, ಅಲ್ಪಸಂಖ್ಯಾತ, ತಬ್ಬಲಿಜಾತಿಗಳಿಗೆ ಸೇರಿದವರುಗಳು ಮಾಡುವ ತಪ್ಪುಗಳು ಸಮುದಾಯದ ತಪ್ಪುಗಳಾಗುವಂತೆ, ಮೇಲ್ಜಾತಿಯ ವ್ಯಕ್ತಿಗಳ ತಪ್ಪುಗಳು ಸಮುದಾಯದ ತಪ್ಪುಗಳಾಗುತ್ತಿಲ್ಲ.

ಈ ಜಾತಿಗಳಿಗೆ ಕೆಳಜಾತಿ, ಅನ್ಯ ಸಮುದಾಯಗಳಂತೆ ವರ್ತಮಾನದ ತಪ್ಪಿನ ಜೊತೆಗೆ ಚರಿತ್ರೆಯ ಪಾಪದ ಮಣಭಾರವನ್ನೂ ಹೊರಬೇಕಾದ ಹೊಣೆಗಳಿಲ್ಲ. ಇದಕ್ಕೆ ನಮ್ಮೆದುರಿನ ಕೈರ್ಲಾಂಜಿ ಇದೆ, ಕಂಬಾಲಪಲ್ಲಿ ಇದೆ. ಇತ್ತೀಚೆಗಿನ ಉತ್ತರ ಪ್ರದೇಶದಲ್ಲಿನ ದಲಿತರ ಮೇಲಿನ ದಾಳಿಗಳಿವೆ, ನಿರಂತರವಾದ ಕೋಮುಗಲಬೆಗಳಿವೆ. ಭಾಷೆಯ ಸಂಬಂಧದಲ್ಲೂ ನಮ್ಮ ಸಹನೆ ಅಸಹನೆ ಔದಾರ್ಯಗಳು ಇದಕ್ಕಿಂತ ಭಿನ್ನವಲ್ಲ. ಆದರೆ ಇವು ನಮ್ಮವಲ್ಲ. ನಮ್ಮದೆಂದು ನಂಬಿಕೊಂಡ ತರಬೇತಿಯ ಫಲಿತಗಳು. ಪ್ರಾಯಶಃ ಈ ಅರಿವಿರುವ ಮತೀಯ ಅಲ್ಪಸಂಖ್ಯಾತನೂ ಆಗಿರಬಹುದಾದ ಶ್ರೀವಿಜಯನಿಗೆ ಭಾರತ ಮತ್ತು ಕನ್ನಡದ ಸಂದರ್ಭದಲ್ಲಿ ಯಾವುದು ‘ಕಸವರ ಮೌಲ್ಯ’ ಎಂಬುದು ಸ್ಪಷ್ಟವಾಗಿ ತಿಳಿದಿರಲೇ ಬೇಕು. ಅಷ್ಟಕ್ಕೂ ಸಹನೆ, ಔದಾರ್ಯಗಳು ಬೇಕಿರುವುದು ಅಧಿಕಾರ ಉಳ್ಳವರಿಗಲ್ಲ. ಅಧಿಕಾರ ವಂಚಿತರ ಬದುಕಿನ ಆಧಾರಗಳವು. ಅವು ಯಾವೊತ್ತೂ ‘ಕೊಲುವುದುಚಿತವೇ ಹೇಳು’ ಎಂದು ಪ್ರಶ್ನಿಸುತ್ತಲೇ ಇರಬೇಕಾಗುತ್ತದೆ. ‘ಕಸವರಮೌಲ್ಯ’ವನ್ನು ನೆನಪಿಸುತ್ತಲೇ ಇರಬೇಕಾಗುತ್ತದೆ. ಅಂತೆಯೇ ಬಿದ್ದವರ ದನಿಯಾದ ಸಾಹಿತ್ಯಕ್ಕೂ ಅಂತಹ ಹೊಣೆ ಇರುವುದರಿಂದ ಅದೂ ‘ಭಾವಿಸಿದ ಕನ್ನಡ’ವನ್ನಲ್ಲದೆ, ಭೌತಿಕವಾದ ಗೆರೆ ಎಳೆಯುವ ಗುರುತಿನ ರಾಜಕಾರಣವನ್ನು ಮಾಡಲಾಗದು. ಬೆಳಕಿನೊಳಗಣ ಬೆಂಕಿಯಾಗದೆ, ಬೆಂಕಿಯೊಳಗಣ ಬೆಳಕಾಗುವುದು ಅದರ ಹೊಣೆಯಲ್ಲವೆ?

Leave a Reply

Your email address will not be published. Required fields are marked *