ಕರ್ನಾಟಕದ ವಿದ್ಯಾಸಾಗರ: ಪಂಚಮರ ಅರ್ ಗೋಪಾಲಸ್ವಾಮಿ ಅಯ್ಯರ್


– ಶ್ರೀಧರ್ ಪ್ರಭು


 

ಭಾರತದ ಇತಿಹಾಸದಲ್ಲಿಯೇ ದಲಿತರಿಗೆ ರಾಜರ ಆಸ್ಥಾನ ಪ್ರವೇಶ ಮಾಡಲು ಅನುವು ಮಾಡಿಕೊಟ್ಟ ಮೊದಲ ಅರಸು ನಾಲ್ವಡಿ ಕೃಷ್ಣರಾಜ ಒಡೆಯರ್ ಇರಬಹುದೇನೋ. ಅಂಥಹ ಪುಣ್ಯ ಪುರುಷರ ಆಳ್ವಿಕೆಯ ಕಾಲ (೧೯೩೨). ಕುನ್ನೀರುಕಟ್ಟೆ, ಅಂದಿನ ಕಾಲಕ್ಕೆ ಇಡೀ ಮಳವಳ್ಳಿಯ ಬಾಯಾರಿಕೆ ತಣಿಸುವ ಉಣಿಸುವ ಕೆರೆ. ಆದರೆ ಅದು ದಲಿತರಿಗಲ್ಲ. ಕುನ್ನೀರುಕಟ್ಟೆ ಮಾತ್ರವಲ್ಲ, ದಲಿತರು, ಸುತ್ತಮುತ್ತಲ ಯಾವೊಂದು ಕೆರೆ, ಮಡುವು, Krishnaraja_Wodiyarಬಾವಿ ಇತ್ಯಾದಿಯಿಂದ ನೀರು ಬಳಸುವಂತಿರಲಿಲ್ಲ. ಮಳವಳ್ಳಿಯಿಂದ ಸುಮಾರು ೨೫ ಕಿ.ಮಿ ದೂರದ ಶ್ರೀರಂಗಪಟ್ಟಣದ ಹತ್ತಿರದ ಒಂದು ಜಾಗೆಯಿಂದ ನೀರು ಹೊರಬೇಕಿತ್ತು ಎಂದರೆ ನಂಬುತ್ತೀರಾ?

ನಾಲ್ವಡಿ ಕೃಷ್ಣರಾಜರ ಅವಿರತ ಪ್ರಯತ್ನದಿಂದ ದಲಿತರ ಮನೆಗಳಲ್ಲಿ ಶಿಕ್ಷಣದ ಹೊಂಗಿರಣ ಹೊಕ್ಕಿತ್ತು. ೧೯೨೭ ರಲ್ಲಿ ನಡೆದ “ಮಹಾಡ ಕೆರೆ ಸತ್ಯಾಗ್ರಹ” ವನ್ನು ಮಾದಯ್ಯನೆಂಬ ಯುವ ಶಿಕ್ಷಕ ತನ್ನವರಿಗೆಲ್ಲ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಿದ್ದ. ದಲಿತರಲ್ಲಿನ ಒಂದು ಜಾಗೃತ ವರ್ಗ ಕುನ್ನೀರುಕಟ್ಟೆಯ ನೀರು ಬಳಸಲು ಮುಂದಾಯಿತು.

ನಾಲ್ವಡಿ ಕೃಷ್ಣರಾಜರ ಆಡಳಿತ ಎಂಥಹ ಪ್ರಗತಿಪರವಾಗಿತ್ತೆಂದರೆ, ಡಾ.ಅಂಬೇಡ್ಕರ್ ಮೈಸೂರು ಸಂಸ್ಥಾನದ ಮುಖ್ಯ ಕಾನೂನು ಸಲಹಗಾರರಾಗಿ ನೇಮಿಸಿಕೊಂಡು, ದಲಿತರಿಗೆ ಎಲ್ಲಾ ಸಾರ್ವಜನಿಕ ಸ್ಥಳಗಳು ಮತ್ತು ಸಂಪನ್ಮೂಲಗಳೂ ಸಿಗುವಂತೆ ಮಾಡಿತ್ತು. ಹಾಗಾಗಿ ನೀರಿಗಾಗಿ ದಲಿತರು ಹೋರಾಟವೇ ಮಾಡದೇ, ಅಮಲ್ದಾರರಿಗೆ ಆದೇಶವಿತ್ತು ಕುನ್ನೀರುಕಟ್ಟೆಯ ಒಂದು ಭಾಗದಲ್ಲಿ ಮೆಟ್ಟಿಲುಗಳನ್ನು ಕಟ್ಟಿಸಿಕೊಟ್ಟಿತು. ಅಷ್ಟೇ ಅಲ್ಲ, ಅಮಲ್ದಾರರ ನೇತೃತ್ವದಲ್ಲಿಯೇ ದೊಡ್ಡದೊಂದು ಮೆರವಣಿಗೆ ಆಯೋಜಿಸಿ ನೀರು ಬಳಸಲು ವ್ಯವಸ್ಥೆ ಮಾಡಲಾಯಿತು!

ಊರಿನ ಸವರ್ಣೀಯರು ಮತ್ತು ಮುಸಲ್ಮಾನರು ರೊಚ್ಚಿಗೆದ್ದರು. ಇಪ್ಪತ್ತೆರಡು ಜನ ದಲಿತರನ್ನು ಹಿಗ್ಗಾಮುಗ್ಗ ಥಳಿಸಲಾಯಿತು. ಕೆಲವರು ನಾಪತ್ತೆಯೇ ಆಗಿ ಹೋದರು. ಇಡೀ ಊರು ರಣರಂಗವಾಯಿತು. ನೀರು, ಸೀಮೆಯೆಣ್ಣೆ, ಕಾಳು-ಕಡಿ ಸಿಗುವುದಿರಲಿ, ಕಡೆಗೆ ಊರ ಆಚೀಚೆ ಕೂಡ ದಲಿತರು ಓಡಾಡದಂತೆ ಕಾವಲು ಹಾಕಿದರು.

ರುದ್ರಯ್ಯ ಎಂಬ ಧೈರ್ಯಸ್ಥ ದಲಿತ ಯುವಕನೊಬ್ಬ, ಅಂತಹ ಭಯಾನಕ ವಾತಾವರಣದಲ್ಲಿ ಬರಿ ಕ್ಷೌರಕತ್ತಿಯೊಂದನ್ನು ಹಿಡಿದು ಮದ್ದೂರು ರೈಲುನಿಲ್ದಾಣಕ್ಕೆ ಹೊರಟೇಬಿಟ್ಟ. ಮಳವಳ್ಳಿಯ ದಲಿತ ಯುವಕನೊಬ್ಬ ಬೆಂಗಳೂರಲ್ಲಿ ಮೆಟ್ರಿಕ್ ಪರೀಕ್ಷೆ ಬರಿಯುತ್ತಿದ್ದ ಶಂಕರಯ್ಯ ಎಂಬ ಇನ್ನೊಬ್ಬನನ್ನು ಜತೆ ಮಾಡಿಕೊಂಡು ಸೀದಾ ಹೋಗಿದ್ದು ವೈದಿಕ ಸಂಪ್ರದಾಯದಲ್ಲಿ ಅದ್ದಿಹೋಗಿದ್ದ ಬೆಂಗಳೂರಿನ ಚಾಮರಾಜಪೇಟೆ ಬಡಾವಣೆಗೆ! ಅದೂ, ಒಬ್ಬ ತಮಿಳು ಬ್ರಾಹ್ಮಣರ ಮನೆಗೆ!!

ಇತ್ತ ಮಳವಳ್ಳಿಯಲ್ಲಿ ಇಡೀ ದಲಿತೇತರ ಸಮುದಾಯ ಪಕ್ಷ, ಜಾತಿ, ಅಂತಸ್ತು ಮತ್ತು ಧರ್ಮಭೇದ ಮರೆತು ಒಂದಾಗಿತ್ತು. ದೌರ್ಜನ್ಯಕ್ಕೆ ಕಾರಣರಾದವರ ರಕ್ಷಣೆಗೆ ಊರಿಗೆ ಊರೇ ಟೊಂಕ ಕಟ್ಟಿ ನಿಂತಿತ್ತು. ಒಂದೆಡೆ ಬಹಿಷ್ಕಾರ, ಇನ್ನೊಂದೆಡೆ ದೌರ್ಜನ್ಯ, ದಲಿತರು ಬೆದರಿ, ಮುದುಡಿ ಹೋಗಿದ್ದರು. ಆಡಳಿತ ಯಂತ್ರ ನಡೆಸುವವರಿಗೂ, ಎಂಥ ಆಶಾವಾದಿ ಸುಧಾರಕ ಮನಸ್ಸಲ್ಲೂ, ಇನ್ನು ದಲಿತರು ಗುಳೆ ಹೋಗುವುದು ಬಿಟ್ಟರೆ ಬೇರೆ ಮಾರ್ಗವೇ ಇಲ್ಲ ಎನ್ನಿಸುವ ವಾತಾವರಣ ಮನೆ ಮಾಡಿತ್ತು.

ಅಂಥಹದರಲ್ಲಿ ಮೈಸೂರು ಪೇಟ, ಇಂಗ್ಲಿಷ್ ದಿರಿಸು ತೊಟ್ಟ ಐವತ್ತರ ಅಂಚಿನ ಮೈಸೂರು ಸಂಸ್ಥಾನದ ಕೃಶಕಾಯ ಅಧಿಕಾರಿಯೊಬ್ಬರು ಮಳವಳ್ಳಿಗೆ ಬಂದರು. ಅವರ ರಕ್ಷಣೆಗೆ ಅಷ್ಟಿಷ್ಟು ಪೋಲಿಸ್ ಪಡೆ ಇತ್ತಾದರೂ, ಅದಿಲ್ಲದಿದ್ದರೂ ಪರವಾಗಿಲ್ಲ ಎನ್ನುವಂತಿತ್ತು ಅವರ ಧೈರ್ಯ ಮತ್ತು ಗತ್ತು. ನೋಡಿದರೆ ಪಕ್ಕಾ ಸಂಪ್ರದಾಯಸ್ಥ ತಮಿಳು ಬ್ರಾಹ್ಮಣನೆಂದು ಯಾರು ಬೇಕಿದ್ದರೂ ಹೇಳಬಹುದಿತ್ತು. ಹಿಂದೆಂದೂ ನಡೆಯದ ಸಾಮೂಹಿಕ ಕ್ರೌರ್ಯಕ್ಕೆ ಸಾಕ್ಷಿಯಾಗಿದ್ದ ರಣರಂಗದಂತಹ ವಾತಾವರಣದಲ್ಲಿ ರಾತ್ರಿ ಹಗಲು ತಿರುಗಲು ಅವರಿಗೆ ಭಯವೇನೂ ಇರಲಿಲ್ಲ. gopalaswami iyerಪೊಲೀಸರಿಗೆ ಯಾವುದೇ, ಭಯ, ಆಮಿಷ ಅಥವಾ ಪಕ್ಷಪಾತವಿಲ್ಲದ ನಿರ್ಭೀತ ತನಿಖೆಗೆ ಆದೇಶ ಕೊಟ್ಟು, ಆಮೇಲೆ ಏನೂ ಆಗಿಯೇ ಇಲ್ಲವೇನೋ ಎಂಬಂತೆ ತಮ್ಮ ಇವರು ಕೆಲಸದಲ್ಲಿ ನಿರತರಾದರು. ಮಳವಳ್ಳಿ ಪಟ್ಟಣ ಏಕ ದಂ ತಣ್ಣಗಾಯಿತು. ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂತು. ಎಲ್ಲ ಆರೋಪಿಗಳ ಬಂಧನವಾಯಿತು. ಇನ್ನು ಸವರ್ಣೀಯರು ಲೆಕ್ಕ ಹಾಕಿದ್ದೇನೆಂದರೆ, ದಲಿತರು ಶ್ರೀರಂಗಪಟ್ಟಣದಲ್ಲಿರುವ ನ್ಯಾಯಾಲಯಕ್ಕೆ ತಿರುಗುವುದು ಅಸಾಧ್ಯ. ಹಾಗಾಗಿ ಮುಕದ್ದಮೆಗಳು ಬಿದ್ದು ಹೋಗುವುದು ಖಚಿತ ಎಂದು. ಹಾಗೇನೂ ಆಗಲಿಲ್ಲ. ಇದನ್ನು ಮೊದಲೇ ಗೃಹಿಸಿದ್ದ ಈ ಅಧಿಕಾರಿ ದೌರ್ಜನ್ಯದ ತನಿಖೆಗೆ ಮಳವಳ್ಳಿಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆದೇಶ ನೀಡಿದರು. ಹೀಗಾಗಿ ನ್ಯಾಯ ಸಿಗಲು ಸಾಧ್ಯವಾಗಿ ತಪ್ಪಿತಸ್ಥರಿಗೆಲ್ಲ ತಪ್ಪದೇ ಶಿಕ್ಷೆಯಾಯಿತು. ನ್ಯಾಯದೇವತೆ ದಲಿತರ ಮನೆಗೇ ನಡೆದು ಬಂದಳು.

ಈ ಘಟನೆಯ ನಂತರದ ಮೂರು ನಾಲ್ಕು ವರ್ಷಗಳಲ್ಲಿ ಮಂಡ್ಯದ ಕೊಮ್ಮರಹಳ್ಳಿ, ಹೆಮ್ಮನಹಳ್ಳಿ, ಸೋಮನಹಳ್ಳಿ, ರಾವಣಿ, ತುಮಕೂರಿನ ಹುಲಿಯೂರುದುರ್ಗ ಮತ್ತು ಹಲವು ಭಾಗಗಳಲ್ಲಿ ಸ್ವಾಭಿಮಾನ ಸಾಧನೆಯ ಹೋರಾಟಗಳು ನಡೆದವು. ಈ ಹೋರಾಟದ ನೇತೃತ್ವ ವಹಿಸಿದ್ದು ಪ್ರಭುತ್ವದ ಭಾಗವಾಗಿದ್ದ ಈ ವ್ಯಕ್ತಿ!

ಆಡಳಿತ ಯಂತ್ರವನ್ನು ದಲಿತ-ದಮನಿತರ ರಕ್ಷಣೆಗೆ ಹೇಗೆ ಸಮರ್ಥವಾಗಿ ಬಳಸಬಹುದು ಎಂದು ಮೊದಲ ಬಾರಿಗೆ ತೋರಿಸಿಕೊಟ್ಟವರು: ಪಂಚಮರ ಅರ್. ಗೋಪಾಲಸ್ವಾಮಿ ಅಯ್ಯರ್ ((೧೮೮೧-೧೯೪೩).

ಮೇಲು-ಕೀಳಿನ ಕಂದರವನ್ನು ಮುಚ್ಚುವ ಮೊದಲ ಪ್ರಯತ್ನವಾಗಿ, ದಲಿತರನ್ನು ಪಂಚಮರೆಂದು ಸಂಬೋಧಿಸಬೇಕೆಂದು ಮೈಸೂರು ಸಂಸ್ಥಾನದಲ್ಲಿ ಅಧಿಸೂಚನೆ ಜಾರಿಯಲ್ಲಿತ್ತು. ಸದಾ ದಲಿತರ ಹಿತಾಸಕ್ತಿಯನ್ನೇ ತಮ್ಮ ಭಾವಕೋಶದಲ್ಲಿ ತುಂಬಿಕೊಂಡ ಗೋಪಾಲಸ್ವಾಮಿಯವರನ್ನು “ಪಂಚಮರ ಗೋಪಾಲಸ್ವಾಮಿ” ಎಂದೇ ಸಂಬೋಧಿಸುವುದು ವಾಡಿಕೆಯಾಯಿತು.

ಹಳೆ ಮೈಸೂರಿನ ದಲಿತರ ಮೊದಲ ತಲೆಮಾರು ಶಿಕ್ಷಣ, ಸ್ಥೈರ್ಯ, ಸ್ವಾಭಿಮಾನ ಮತ್ತು ಸ್ವಾವಲಂಬನೆ ಸಾಧಿಸಿದ್ದು ಇವರಿಂದಲೇ ಎಂದು ಹೇಳಬೇಕು.

ಚಾಮರಾಜಪೇಟೆಯ ನಾಲ್ಕನೆ ಮುಖ್ಯ ರಸ್ತೆಯಲ್ಲಿರುವ ‘ಎಲಿಫೆಂಟ್ ಲಾಡ್ಜ್’ ಎಂಬ ಹೆಸರಿನ ಮನೆಯನ್ನು ಈಗಲೂ ನೋಡಬಹುದು. ಒಂದು ಕಾಲಕ್ಕೆ ಈ ಮನೆಯಲ್ಲಿ ಸಹಸ್ರಾರು ಜನ ವಿದ್ಯಾಭ್ಯಾಸ ಪಡೆದಿದ್ದಾರೆ. ಇವರ ಅವಿರತ ಪ್ರಯತ್ನದಿಂದ, ಬೆಂಗಳೂರಿನ ಶ್ರೀರಾಮಪುರದಲ್ಲಿ ಇಂದು ಗೋಪಾಲಪುರ ( ಇವರ ನೆನಪಿನ ದ್ಯೋತಕವಾಗಿ) ಎಂದು ಕರೆಯಲಾಗುವ ಜಾಗದಲ್ಲಿ ೧೯೧೮ ರಲ್ಲಿ ಪಂಚಮರ ಹಾಸ್ಟೆಲ್ (ಈಗ “ಗೋಪಾಲಸ್ವಾಮಿ ಹಾಸ್ಟೆಲ್”) ತೆರೆಯಲಾಯಿತು. ಆ ಕಾಲದಲ್ಲೇ, ಹಾಸ್ಟೆಲ್ ಶುರುವಾದ ಮೊದಲ ವರ್ಷವೇ ಸುಮಾರು ೧೮೬ ದಲಿತ ವಿದ್ಯಾರ್ಥಿಗಳನ್ನ ಇವರು ಈ ಹಾಸ್ಟೆಲ್ ಗೆ ಸೇರಿಸಿದ್ದರು.

ಸೈಕಲ್ ಮೂಲಕ ಊರು ಹಳ್ಳಿ, ಕೇರಿಗಳನ್ನು ತಿರುಗುತ್ತಿದ್ದ ಗೋಪಾಲಸ್ವಾಮಿಗಳಿಗೆ ರೈಲು ಗಾಡಿ ಯಲ್ಲಿ ಸೈಕಲ್ ಕೊಂಡೊಯ್ಯಲು ಅರಸರು ಅವರಿಗೆ ವಿಶೇಷ ಅನುಮತಿ ನೀಡಿದ್ದರು. ಅನೇಕ ಬಾರಿ ಪ್ರೀತಿ ವಿಶ್ವಾಸ ಗೆದ್ದು, ಕೆಲವು ಬಾರಿ ಬಲವಂತದಿಂದ ವರ್ಷವೂ ನೂರಾರು ದಲಿತರ ಮಕ್ಕಳನ್ನು ಹಾಸ್ಟೆಲ್ ಗೆ ಸೇರಿಸುತ್ತಿದ್ದ ಗೋಪಾಲಸ್ವಾಮಿ, ಹಳೆ ಮೈಸೂರು ಭಾಗದ ಪ್ರತಿ ಪ್ರತಿಭಾನ್ವಿತ ದಲಿತ ವಿದ್ಯಾರ್ಥಿಗಳನ್ನು ಗುರುತಿಸಿ, ಬೆಂಗಳೂರಿಗೆ ಬರುವುದಾದರೆ ಎಲ್ಲಾ ಖರ್ಚು ಭರಿಸಿ ಹಾಸ್ಟೆಲ್ ವ್ಯವಸ್ಥೆ ಮಾಡುವುದಾಗಿ ಪ್ರತೀ ವರ್ಷವೂ ಸ್ವತಃ ತಾವೇ ಪತ್ರ ಬರೆಯುತ್ತಿದ್ದರು.

ಇವರ ಶಿಷ್ಯರಾದವರಲ್ಲಿ ಪ್ರಮುಖರು: ಕೊರಟಗೆರೆ ಭೀಮಯ್ಯ (ಕರ್ನಾಟಕ ಉಚ್ಚ ನ್ಯಾಯಾಲಯದ ಮೊದಲ ಮುಖ್ಯ ನ್ಯಾಯಾಧೀಶ), ಶಿಕ್ಷಣ ಭೀಷ್ಮ ಎನಿಸಿರುವ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಎಚ್. ಎಂ. ಗಂಗಾಧರಯ್ಯ (ಹಾಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಾ. ಜಿ. ಪರಮೇಶ್ವರರ ತಂದೆ), ಕರ್ನಾಟಕದ ಮೊದಲgopalaswami-iyer-elephant-lodge ದಲಿತ ಐ. ಎ. ಎಸ್. ಅಧಿಕಾರಿ ಭರಣಯ್ಯ, ಮಾಜಿ ಕೇಂದ್ರ ಮಂತ್ರಿ ಮತ್ತು ರಾಜ್ಯಪಾಲರಾದ ಬಿ. ರಾಚಯ್ಯ, ಡಾ. ಜಿ. ಗೋಪಾಲ್ (ಕರ್ನಾಟಕದ ಮೊದಲ ಶಿಶು ತಜ್ಞ ಮತ್ತು ವೈದ್ಯಾಧಿಕಾರಿ) ದಲಿತ ಜನಾಂಗದ ಮೊದಲ ಮಂತ್ರಿ ಚನ್ನಿಗರಾಮಯ್ಯ, ಖ್ಯಾತ ದಲಿತ ಕವಿ ಡಾ.ಸಿದ್ಧಲಿಂಗಯ್ಯ ಮೊದಲಾದವರು.

ಗೋಪಾಲಸ್ವಾಮಿಯವರಿಗೆ ಮಕ್ಕಳಿರಲಿಲ್ಲ. ಆದರೆ ಅವರ ಮಕ್ಕಳ ಪ್ರೀತಿ ಅಪೂರ್ವವಾದ್ದು. ೧೯೩೨ರ ಕಾಲಮಾನ. ಗಾಂಧೀಜಿ ಬೆಂಗಳೂರಿಗೆ ಬಂದಿದ್ದರು. ಎಚ್. ಎಂ. ಗಂಗಾಧರಯ್ಯನವರಿಗೆ ಸುಮಾರು ಹದಿನಾಲ್ಕು ಹದಿನೈದು ವರ್ಷವಿರಬೇಕು. ಯಾವ ಪುಸ್ತಕ, ತರಬೇತಿಯಿಲ್ಲದೆ ಗಾಂಧೀಜಿಯ ತೈಲವರ್ಣವೊಂದನ್ನು ಅತಿ ಸುಂದರವಾಗಿ ಬಿಡಿಸಿದರು. ಇದನ್ನು ನೋಡಿದ ಗೋಪಾಲಸ್ವಾಮಿಗಳು ಹುಡುಗನನ್ನು ಸೀದಾ ಗಾಂಧೀಜಿ ಬಳಿ ಕರೆದುಕೊಂಡು ಹೋಗಿಯೇ ಬಿಟ್ಟರು. ಅಪಾರ ಜನಸಂದಣಿಯಿದ್ದ ಕಾರಣ ಕಾಂಗ್ರೆಸ್ ನ ಪ್ರಮುಖ ನಾಯಕರಿಗೂ ಗಾಂಧೀಜಿಯನ್ನು ಭೇಟಿ ಯಾಗುವುದು ಅಷ್ಟು ಸುಲಭವಿರಲಿಲ್ಲ. ಛಲ ಬಿಡದ ತ್ರಿವಿಕ್ರಮನಂತೆ, ಗೋಪಾಲಸ್ವಾಮಿಗಳು ತಮ್ಮ ಶಿಷ್ಯನನ್ನು ಗಾಂಧೀಜಿಗೆ ಭೇಟಿ ಮಾಡಿಸಿದ್ದೇ ಅಲ್ಲದೇ ಮನಸ್ಸು ತುಂಬಿ ಪರಿಚಯಿಸಿದರು. ತುಂಬಾ ಸಂತಸಗೊಂಡ ಗಾಂಧೀಜಿ, ತರುಣ ಕಲಾವಿದನ ಬೆನ್ನು ಚಪ್ಪರಿಸಿ, ತೈಲಚಿತ್ರದ ಮೇಲೆ ಸಹಿ ಕೂಡ ಹಾಕಿ ಕೊಟ್ಟರು!

ಸಹಸ್ರಾರು ದಲಿತ ಕುಟುಂಬಗಳ ದೀಪ ಗೋಪಾಲಸ್ವಾಮಿ, ದೇಶ ಕಂಡ ಅಪ್ರತಿಮ ಸಾಧಕ. ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ, ತಮ್ಮ 200px-MKGandhi[1]ಇಡೀ ಜೀವನವನ್ನು ದಲಿತರಿಗೊಸ್ಕರ ಮುಡುಪಾಗಿಟ್ಟು ಆದರ್ಶ ಪ್ರಾಯ ಜೀವನ ನಡೆಸಿದ್ದವರು. ತಮ್ಮ ಇಳಿ ವಯಸ್ಸಿನಲ್ಲೂ ಕ್ವಿಟ್ ಇಂಡಿಯಾ ಚಳುವಳಿಗೆ ಧುಮುಕಿದ ಧೀರ!. ದಲಿತ ವಿಮೋಚನೆ, ಸಮಾಜ ಸೇವೆ, ನೈಜ ದೇಶಪ್ರೇಮದ ಮಾದರಿ ಗೋಪಾಲಸ್ವಾಮಿಯವರ ಬದುಕು.

ಪ್ರಭಾವಿ ರಾಜಕೀಯ ನೇತಾರರು, ಅಧಿಕಾರಿಗಳು, ವೈದ್ಯರು, ವಕೀಲರು ಸೇರಿದಂತೆ ಇವರ ಅಸಂಖ್ಯ ಶಿಷ್ಯಗಣ ಪ್ರಪಂಚದೆಲ್ಲೆಡೆ ಹಬ್ಬಿದೆ. ಆದರೆ ಅದೃಷ್ಟವಶಾತ್ ಇಂದೂ ಮೂಲ ಸ್ವರೂಪದಲ್ಲೇ ಇರುವ ಇವರ ಮನೆಯನ್ನೇ ಆಗಲಿ ಅಥವಾ ಇನ್ನೊಂದು ಸೂಕ್ತ ಕಡೆಯಲ್ಲಾಗಲಿ, ಇವರ ಪ್ರತಿಮೆ, ಸ್ಮಾರಕ ಮಾಡುವ ಯತ್ನ ಮಾತ್ರ ನಡೆದಂತಿಲ್ಲ.

4 thoughts on “ಕರ್ನಾಟಕದ ವಿದ್ಯಾಸಾಗರ: ಪಂಚಮರ ಅರ್ ಗೋಪಾಲಸ್ವಾಮಿ ಅಯ್ಯರ್

  1. ನಾಗಶೆಟ್ಟಿ ಶೆಟ್ಕರ್

    “ಊರಿನ ಸವರ್ಣೀಯರು ಮತ್ತು ಮುಸಲ್ಮಾನರು ರೊಚ್ಚಿಗೆದ್ದರು. ಇಪ್ಪತ್ತೆರಡು ಜನ ದಲಿತರನ್ನು ಹಿಗ್ಗಾಮುಗ್ಗ ಥಳಿಸಲಾಯಿತು.”

    ಸವರ್ಣೀಯರು ರೋಚ್ಚಿಗೆದ್ದದ್ದು ಆಶ್ಚರ್ಯಕರವೇನಲ್ಲ, ಏಕೆಂದರೆ ಮನುಸ್ಮ್ರುತಿಯನ್ನೇ ಸಂವಿಧಾನವೆಂದು ತಿಳಿದವರು ಅವರು. ಸಂವಿಧಾನಕ್ಕೆ ವಿರುದ್ಧವಾಗಿ ದಲಿತರು ನಡೆದಾಗೆಲ್ಲ ದಲಿತರನ್ನು ಸಂವಿಧಾನಕ್ಕೆ ಬದ್ಧವಾಗಿಸಲು ಸವರ್ಣೀಯರು ಹಿಂಸೆಯನ್ನು ಬಳಸಿದ್ದಾರೆ. ಆದರೆ ಮುಸಲ್ಮಾನರು ರೊಚ್ಚಿಗೆದ್ದದ್ದು ಏಕೆ? ಅವರದ್ದು ಎಷ್ಟಾದರೂ ಪ್ರಗತಿಪರವಾದ ಇಸ್ಲಾಂ ಧರ್ಮ. ಮನುಸ್ಮೃತಿಗೂ ಇಸ್ಲಾಮಿಗೂ ಎಣ್ಣೆ ಸೀಗೇಕಾಯಿ ಸಂಬಂಧ. ಅಂದ ಮೇಲೆ ಸವರ್ಣೀಯರು ಮುಸಲ್ಮಾನರನ್ನು ದಲಿತರ ವಿರುದ್ಧ ಎತ್ತಿ ಕಟ್ಟಿರಬೇಕು. ಇತಿಹಾಸ ಏನನ್ನುತ್ತದೆ? ಅಶೋಕ ಶೆಟ್ಟರ್ ಅವರನ್ನು ವಿಚಾರಿಸಬೇಕು ಇದರ ಬಗ್ಗೆ.

    Reply
  2. Shridhar Prabhu

    ಪ್ರಿಯ ನಾಗಶೆಟ್ಟಿ ಶೆಟ್ಕರ್,

    ನನ್ನನ್ನೂ ಅತಿಯಾಗಿ ಕಾಡಿದ ಪ್ರಶ್ನೆಯಿದು….

    ಈ ಮೇಲಿನ ಘಟನೆಯಲ್ಲಿ, ಮೇಲ್ವರ್ಗ ಮುಸ್ಲಿಮರನ್ನು ತನ್ನ ಕಡೆ ಒಲೈಸಿಕೊಂಡಿರಬೇಕೆನೋ. ಆದರೆ ಪಾರಂಪರಿಕವಾಗಿ, ದಲಿತರ ಸಾಮಾಜಿಕ, ಅರ್ಥಿಕ ಬದುಕು ಮುಸ್ಲಿಮರಿಗೆ ತೀರ ತಾಗಿಕೊಂಡು ಇದ್ದರೂ, ಮುಸ್ಲಿಮರು ಮತ್ತು ದಲಿತರ ಮಧ್ಯೆ ಒಂದು ರೀತಿಯ ಕಾಣದ ಬಿರುಕು ಮೂಡುತ್ತಿದೆ. ಧರ್ಮ ಸಮ್ಮತಿ ಇರದಿದ್ದರೂ, ಮುಸ್ಲಿಮರ ಒಂದು ‘ಮೇಲ್ವರ್ಗ’ ತನ್ನದೇ ಧರ್ಮದವರನ್ನು ಕೀಳಾಗಿ ನಡೆಸಿಕೊಳ್ಳುತ್ತಿದೆ. ಮುಸ್ಲಿಮರಲ್ಲಿ ಬದುಕಿನಲ್ಲಿ ನೈಜ ಬದಲಾವಣೆ ತರುವ ಸಾಧ್ಯತೆಗಳಿದ್ದ ಇಕ಼್ಬಾಲ್ ಜಿನ್ನಾರಂಥ ಬುದ್ಧಿಜೀವಿಗಳು, ಕೋಮುವಾದಿಗಳಾದರು. ಹಾಗಾಗಿ ಮುಸ್ಲಿಮರ ಬದುಕಲ್ಲಿ ಒಬ್ಬ ಅಂಬೇಡ್ಕರ್ ಬರಲೇ ಇಲ್ಲ. ಇದು ಅಧುನಿಕ ಭಾರತದ ದೊಡ್ಡ ದುರಂತ. ಅದಿರಲಿ, ಇಂದಿಗೆ, ಮುಸ್ಲಿಂ ಸಮಾಜದ ಒಳಗೆ ಮತ್ತು ಮುಖ್ಯವಾಗಿ ದಲಿತ-ಮುಸ್ಲಿಮರ ನಡುವೆ ಒಂದು ಅರೋಗ್ಯಪೂರ್ಣ ಸಂವಾದ ಶುರುವಾಗಬೇಕಿದೆ.

    Reply
  3. rajachandra123

    Dr.N. Chinnaswamy Sosale has narrated this and many such incidents in his book:” ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಮೈಸೂರು ಸಂಸ್ಥಾನದಲ್ಲಿ ದಲಿತರು “

    Reply
    1. ನಾಗಶೆಟ್ಟಿ ಶೆಟ್ಕರ್

      ಮುಸಲ್ಮಾನರೇಕೆ ಸವರ್ಣೀಯರ ಜೊತೆಗೂಡಿ ದಲಿತರ ಮೇಲೆ ಹಲ್ಲೆ ನಡೆಸಿದರು ಎಂಬ ಪ್ರಶ್ನೆಗೆ ಸೋಸಲೆ ಅವರ ಬಳಿ ಉತ್ತರವಿದೆಯೇ?

      Reply

Leave a Reply

Your email address will not be published. Required fields are marked *