Daily Archives: November 11, 2014

‘ಬೋನಿಗೆ ಬಿದ್ದವರು’– ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ


– -ಟಿ.ಕೆ. ದಯಾನಂದ


ಅಲ್ಲಿಯವರೆಗೂ ಕಾಡುನಂಬಿಕೊಂಡು ಬದುಕುತ್ತಿದ್ದ ಬುಡಕಟ್ಟುಗಳನ್ನು ಕಾಡುವಾಸಿಗಳ ಪುನರ್ವಸತಿ ಯೋಜನೆಯ ಹೆಸರಿನಲ್ಲಿ ಸರ್ಕಾರ ಮತ್ತು ಅರಣ್ಯಇಲಾಖೆಯು ಒಟ್ಟುಸೇರಿ ಬುಡಬುಡಕೆಯವರು, ಹಕ್ಕಿಪಿಕ್ಕರು, ಗೊರವರು, ಕರಡಿಖಲಂದರ್ ಗಳು, ಗಿಣಿಶಾಸ್ತ್ರದವರು, ಗೊಂಬೆಯಾಟದವರು, ಹಾವುಗೊಲ್ಲರು, ದೊಂಬರು, ಕೊರಚರು ಕೊರಮರಿತ್ಯಾದಿಯೆಲ್ಲರನ್ನೂ ಕಾಡುಬಿಡಿಸಿ ಲಾರಿಯೊಳಗೆ ತುಂಬಿಕೊಂಡು ಬಂದು ಚೆಂಗಾವಿಯ ಊರಾಚೆಗೆ ಬಿಸಾಕಿ ಹೋಗಿದ್ದರಲ್ಲ.., ಆವತ್ತಿನಿಂದಲೇ ಒಂದರ ಹಿಂದೊಂದು ಪೀಕಲಾಟಗಳು ಚೆಂಗಾವಿಯೆಂಬ ಪಟ್ಟಣಕ್ಕೆ ಅಮರಿಕೊಂಡಿದ್ದವು.

ಮೊದಮೊದಲಿಗೆ ಲಾರಿಯಿಂದ ಕಸದಂತೆ ಇಳಿದ ಕಾಡುವಾಸಿಗಳ ವೇಷಭೂಷಣ, ಮಾತುಕತೆ, ಬಿದಿರುಬಾಣ, ಗೋಣಿಚೀಲಗಳ ಕಂತೆಗಳನ್ನು ಕಂಡವರು ಇವರ್ಯಾರೋ ಅನ್ಯಗ್ರಹವಾಸಿಗಳಿರಬಹುದೆಂದು ಡೌಟು ಬರುವಷ್ಟರ ಮಟ್ಟಿಗೆ ಆಶ್ಚರ್ಯದಿಂದ ನೋಡಿದ್ದರು. ನೋಡ ನೋಡುತ್ತಲೇ ಊರಾಚೆಗಿನ ಈ ಪ್ರದೇಶವನ್ನು ಟೆಂಟು, ಗುಡಿಸಲು ಬಿದಿರುಕಮಾನು ಮನೆಗಳಿಂದ ತುಂಬಿಕೊಂಡ ಕಾಡುಬುಡಕಟ್ಟಿನವರು ಹೊಕ್ಕಳಕರುಳುktshivprasad-art ಕತ್ತರಿಸಿಕೊಂಡ ಎಳೆಗೂಸುಗಳಂತೆ ಹೊಸಜಾಗಕ್ಕೆ ಹೊಂದಿಕೊಳ್ಳಲು ಪಡಬಾರದ ಯಾತನೆ ಪಡುವುದನ್ನು ಯಾರಾದರೂ ನೋಡಬಹುದಿತ್ತು. ಕಾಡಿನ ಸಣ್ಣಪುಟ್ಟ ಪ್ರಾಣಿಗಳನ್ನು ಪಳಗಿಸಿಟ್ಟುಕೊಂಡು ಬೀದಿಗಳಲ್ಲಿ ಪ್ರದರ್ಶಿಸಿ ಅಲ್ಲಿಯತನಕ ಹೊಟ್ಟೆ ಹೊರೆಯುತ್ತಿದ್ದವರಿಗೆ ಅರಣ್ಯಕಾನೂನುಗಳು ಕೊರಳಿಗಿಟ್ಟ ಕೊಡಲಿಯಂತೆ ಕಾಡಲು ಶುರುವಾಗಿದ್ದು ಅನುಭವಕ್ಕೆ ಬಂದ ಕೂಡಲೇ ಮುಂದೇನೆಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಅವರವರೊಳಗೇ ಗೊಂದಲಮಯ ಪರಿಹಾರಗಳು ಮೂಡುತ್ತಿದ್ದವು. ಕರಡಿಯಾಡಿಸುವವರಿಗೆ ಗುರುತುಚೀಟಿ ಕೊಟ್ಟು ಕರಡಿಗಳನ್ನು ಹೊತ್ತೊಯ್ದಿದ್ದ ಫಾರೆಸ್ಟಿನವರು ಪರಿಹಾರವೆಂದು ಕೊಟ್ಟ ತುಂಡುಭೂಮಿ ಮತ್ತು ಚಿಲ್ಲರೆಕಾಸೊಳಗೆ ಏನು ಮಾಡುವುದೆಂಬ ಕುರಿತಂತೆ ಯಾವ ವಿವರವೂ ಗೊತ್ತಿಲ್ಲದ ಖಲಂದರ್ ಗ್ಳು ಉಳುಮೆ ಕೃಷಿಯ ತಲೆಬುಡ ತಿಳಿಯದೆ ಕೈಲಿದ್ದ ಕಾಸನ್ನು ಅದಕ್ಕಿದಕ್ಕೆಂದು ಖರ್ಚು ಮಾಡಿ ಖಾಲಿಜೇಬುಗಳೊಡನೆ ಗುದ್ದಾಡುತ್ತಿದ್ದರೆ, ಇದ್ದಬದ್ದ ಹಾವುಗಳೆಲ್ಲವನ್ನೂ ಬಿದಿರುಬುಟ್ಟಿಯ ಸಮೇತ ಕಳೆದುಕೊಂಡ ಹಾವುಗೊಲ್ಲರ ಕಥೆ ಬೇರೆಯೇ ಆಗಿತ್ತು. ಪುಸ್ತಕದ ಕಾನೂನು ಹೇಳುವಂತೆ ಅವರ್ಯಾರೂ ಹಾವನ್ನು ಆಡಿಸುವಂತೆಯೇ ಇರಲಿಲ್ಲ, ಅದ್ಯಾರು ಅದೇನು ಕಿತ್ತುಕೊಳ್ಳುವರೆಂದು ಹೊಸ ಹಾವುಗಳನ್ನು ಹಿಡಿದು ಪಳಗಿಸಿ ಕೂಡುರಸ್ತೆಗಳಲ್ಲಿ ಆಟವಾಡಿಸುತ್ತಿದ್ದವರ ಮೇಲೆ ಮುಗಿಬೀಳುತ್ತಿದ್ದ ಫಾರೆಸ್ಟು ಇಲಾಖೆಯವರು ಕೈಗೆಸಿಕ್ಕ ಹಾವುಗಳೆಲ್ಲವನ್ನೂ ದಿವೀನಾಗಿ ಹೊತ್ತೊಯ್ದು ಕಾಡಿಗೆ ಬಿಡುತ್ತಿದ್ದರು. ಇವರು ಹಿಡಿದು ತರುವುದು, ಅವರು ಹೊತ್ತೊಯ್ಯುವ ಸರ್ಕಸ್ಸು ನಡೆದಿರುವಾಗಲೇ ಹೊಸತೊಂದು ಐಡಿಯಾ ಕಂಡುಕೊಂಡ ಹಾವುಗೊಲ್ಲರು ಪ್ಲಾಸ್ಟಿಕ್ಕು ಹಾವುಗಳು, ಸ್ಪ್ರಿಂಗಿನ ಹಾವುಗಳನ್ನು ನೆಲದಮೇಲೆ ಜೋಡಿಸಿ ಕೂಗಿ ಕರೆದು ಎಷ್ಟೇ ಪುಂಗಿಯೂದಿದರೂ ಅಷ್ಟರಾಗಲೇ ಜಿಯಾಗ್ರಫಿಯಂತೆ, ಡಿಸ್ಕವರಿಯಂತೆ, ಅನಿಮಲ್ಲುಪ್ಲಾನೆಟ್ಟಂತೆ ಎಂದು ಹತ್ತಾರು ಟಿವಿ ಚಾನೆಲ್ಲುಗಳಲ್ಲಿ ತರೇವಾರಿ ಹಾವುಹುಪ್ಪಟೆಗಳನ್ನು ನೋಡುತ್ತಿದ್ದ ಚೆಂಗಾವಿಯ ಜನರು ಇವರ ಪ್ಲಾಸ್ಟಿಕ್ಕುಹಾವುಗಳನ್ನು ಮೂಸಿಯೂ ನೋಡದೆ ಮುಂದೆ ಹೋಗಿಬಿಡುತ್ತಿದ್ದರು.

ಪುನರ್ವಸತಿಗೊಳಗಾದ ಎಲ್ಲರಿಗೂ ರೇಷನ್ನುಕಾರ್ಡು ಕೊಟ್ಟಿದ್ದರಾದರೂ ರೇಷನ್ ಡಿಪೋದಲ್ಲಿ ಸೀಮೆಎಣ್ಣೆ ಬಿಟ್ಟು ಬೇರೇನನ್ನೂ ಕೊಡುತ್ತಿರಲಿಲ್ಲ. ತಲೆ ಮೇಲೆ ಸುರಿದುಕೊಂಡು ಜೀವಂತವಾಗಿ ಬೆಂಕಿಯಿಟ್ಟುಕೊಂಡು ನೆಗೆದು ಬೀಳಲಷ್ಟೇ ಅನುಕೂಲಕರವಾಗಿದ್ದ ಸೀಮೆಎಣ್ಣೆಯನ್ನು ಏನು ಮಾಡುವುದೆಂದು ತಿಳಿಯದೆ ಅದನ್ನು ದೇಹಕ್ಕೆ ಗಾಯವಾದ ಕಡೆಗೆ ಎರಡು ಚಮಚ ಸುರಿದು ನೋವು ನಿವಾರಕ ಔಷಧಿಯಾಗಷ್ಟೇ ಬಳಸಲು Work of Temporary tent for stay.ಪುನರ್ವಸತಿ ಸಂತ್ರಸ್ತರು ಬಳಸುತ್ತಿದ್ದರು. ಇದಿಷ್ಟು ಸಾಲದೆಂದು ಇವರ ಪಾಲಿಗೆ ದೇವದೂತನ ಭಕ್ತರ ಹೊಸಕಾಟವೂ ತಗಲಿಕೊಂಡಿತ್ತು. ಬೆಳಗ್ಗೆಯಾದರೆ ಸಾಕು ಬಂದು ವಕ್ಕರಿಸುತ್ತಿದ್ದ ಪಾಸ್ತರ್ ಜಸಿಂತಮ್ಮನು ನಿಮ್ಮನ್ನು ಸುತ್ತುವರೆದಿರುವ ಕಷ್ಟಗಳಿಗಾಗಿ ಕರ್ತನನ್ನು ಪ್ರಾರ್ಥಿಸಿರಿ, ನಿಮಗೆ ಹಿಂಸೆ ಕೊಡುತ್ತಿರುವ ವೈರಿಗಳಿಗೋಸ್ಕರ ದೇವರಲ್ಲಿ ಬೇಡಿಕೊಳ್ಳಿರಿ ಎಂದು ಈ ಕಾಡುವಾಸಿಗಳನ್ನು ದುಂಬಾಲು ಬೀಳುತ್ತಿತ್ತು. ತಮ್ಮನ್ನು ಈ ಗತಿಗೆ ತಂದಿಟ್ಟವರು ಕೈಗೆ ಸಿಕ್ಕರೆ ರುಂಡವೊಂದು ಕಡೆ ಮುಂಡವೊಂದು ಕಡೆ ನೋಡಲು ತಹತಹಿಸುತ್ತಿದ್ದ ಜನರಿಗೆ ಈಯಮ್ಮನ ಗ್ರಾಮಾಪೋನು ಬೋಧನೆಯು ಇನ್ನಷ್ಟು ಸಿಟ್ಟಿಗೇಳಿಸುತ್ತಿತ್ತು. ಇಲಿಗಳನ್ನೇ ನಂಬಿಕೊಂಡು ಬದುಕುತ್ತಿದ್ದ ಇರುಳರ ಕುಲದ ನಂಬೀಸನು ಒಂದುದಿನ ತನ್ನ ಗುಡಿಸಲಿನ ಮುಂದೆ ನಿಂತು ಕರ್ತರು ನಿಮಗೋಸ್ಕರ ಬಂದಿದ್ದಾರೆ ಎಂದು ಗಾಸ್ಪೆಲ್ ಬೋಧನೆ ಮಾಡುತ್ತಿದ್ದ ಜಸಿಂತಮ್ಮನನ್ನು ಸಂದಿಗೊಂದಿಯಲ್ಲಿ ಓಡಿದರೂ ಬಿಡದೆ ತಲೆಕೆಟ್ಟು ಅಟ್ಟಾಡಿಸಿಬಿಟ್ಟಿದ್ದ. ಇದರ ಫಲವಾಗಿ ದೇವದೂತನ ಭಕ್ತರು ಆವತ್ತಿನಿಂದ ಇವರ ನಡುವಿಂದ ಮಟಾಮಾಯವಾಗಿ ಹೋಗಿದ್ದರು.

ಹೀಗಿರುವಾಗ, ಬದುಕಲಿಕ್ಕೆಂದು ಒಂದೇ ವಿಧಾನವನ್ನು ಅರೆದು ಕುಡಿದಿದ್ದ ಇವರೆಲ್ಲರಿಗೂ ಇದೀಗ ಬದುಕಲು ಬೇರೆಯದೊಂದೇನಾದರನ್ನು ಪತ್ತೆಹಚ್ಚಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ತಮಗೆ ಪಾರಂಪರಿಕವಾಗಿ ತಿಳಿದುದನ್ನೇ ಹೊಸಬಣ್ಣ ಹೊಡೆದು ಜನರನ್ನೇ ಆಶ್ರಯಿಸಿ ಬದುಕಬೇಕಿರುವ ಕಟುಸತ್ಯ ಅರ್ಥವಾಗಲು ತುಂಬ ದಿನಗಳೇನು ಹಿಡಿಯಲಿಲ್ಲ. ಅದರಂತೆ ಕುಂಚಿಕೊರವರು ಹುಲ್ಲುಕೂಡಿಸಿ ದಾರದಲ್ಲಿ ಬಿಗಿದು ನೆಲ್ಲುಪೊರಕೆಗಳನ್ನು ಮಾರುತ್ತಲೂ, ಸೊನಾಯಿ ಕೊರಮರು ವಾಲಗದವರಾಗಿ ಮದುವೆಮುಂಜಿ, ದೇವರುತ್ಸವದ ವಾದ್ಯಗಾರರಾಗಿಯೂ, ಕೊರಚರು ಕತ್ತಾಳೆನಾರಿನ ಹಗ್ಗ ಹೆಣೆದು ಮಾರುವವರಾಗಿಯೂ, ದಬ್ಬೆಗೊಲ್ಲರು ಬಿದಿರಿನಬುಟ್ಟಿ, ಮಂಕರಿ ಮಾರುವವರಾಗಿಯೂ ಪರಿವರ್ತಿತರಾಗಿದ್ದರು. ಇದೇ ಥರನಾಗಿ ಉಳಿದದವರ ಪಾಡೂ ಇದೇ ಗತಿಗೆ ಬಂದುನಿಂತಿದ್ದ ಸಮಯದಲ್ಲಿ ಚೆಂಗಾವಿಯ ರೈತಾಪಿಕುಲಕ್ಕೆ ಇಲಿರೋಧನೆ ಶುರುವಾಗಿದ್ದು, ಅದರ ಪರಿಹಾರಕ್ಕೆಂದು ಗಿಣಿಶಾಸ್ತ್ರದ ಮಂಕಾಳಿ ಬಂದದ್ದು ಮತ್ತದು ನಾನಾಬಗೆಯ ರಂಕಲುಗಳಿಗೆ ಕಾರಣವಾಗಿದ್ದು ಕೇಳಲೇಬೇಕಾದ ಕಥೆ. ಭತ್ತವಂತೆ, ಸೇಂಗಾ ಅಂತೆ, ರಾಗಿಯಂತೆ ಎಂದು ಬೆಳೆದುಕೊಂಡು ದುಡ್ಡುದಮ್ಮಡಿಯ ಮುಖ ನೋಡುತ್ತಿದ್ದ ಚೆಂಗಾವಿಯ ರೈತರಿಗೆ ತಮ್ಮ ಹೊಲಗಳಲ್ಲಿ ಕಟಾವಿಗೆ ಬಂದು ನಿಂತ ರಾಗಿ, ಸೇಂಗಾ, ಭತ್ತವನ್ನು ಇಲಿಸಮೂಹವು ಯೋಜಿತವಾಗಿ ಹಾಳುಗೆಡವುವುದು ಕಣ್ಣಿಂದ ನೋಡಲಾಗುತ್ತಿರಲಿಲ್ಲ, ರಸಭರಿತ ಭತ್ತ, ರಾಗಿತೆನೆಗಳನ್ನು artನಾಜೂಕಾಗಿ ಕಟಾವು ಮಾಡುತ್ತಿದ್ದ ಇಲಿಗಳು ಸೇಂಗಾಬೇರುಗಳನ್ನು ಬುಡಸಮೇತ ಹೊತ್ತೊಯ್ಯುವ ಪರಿಪಾಠ ಬೆಳೆಸಿಕೊಂಡಿದ್ದವು. ಆಧುನಿಕ ಕೃಷಿ, ಯಾಂತ್ರಿಕ ಉಳುಮೆ, ರಸಗೊಬ್ಬರ, ಔಷಧಿ ಸಿಂಪರಣೆಯೆಂದು ಕಂಡಾಪಟ್ಟೆ ದುಡ್ಡುಚೆಲ್ಲಿ ತಮ್ಮಪಾಡಿಗೆ ತಾವು ಬೆಳೆದುಕೊಳ್ಳುತ್ತಿದ್ದ ಬೆಳೆಯನ್ನು ಐದುಪೈಸದ ಬಂಡವಾಳವಿಲ್ಲದೆ ಇಲಿಗಳು ತಂಡೋಪತಂಡವಾಗಿ ಬಂದು ಹೊತ್ತೊಯ್ದು ಗೂಡು ತುಂಬಿಕೊಳ್ಳುವುದು ತನ್ಮೂಲಕ ತಾವು ಕಷ್ಟಪಟ್ಟು ಬೆಳೆದ ಅರ್ಧಕ್ಕರ್ಧ ಬೆಳೆಯು ರುಂಡ ಕಳೆದುಕೊಂಡ ಮುಂಡ ಮಾತ್ರವಾಗಿ ಹೊಲದೊಳಗೆ ಉಳಿಯುತ್ತಿರುವುದನ್ನು ನೋಡಲಾಗದೆ ಚೆಂಗಾವಿಯ ರೈತಕುಲ ರೋಸತ್ತುಹೋಗಿತ್ತು. ಗೂಬೆಗಳಿಗೆ ಇಷ್ಟವಾಗುವ ಬೀಡಿಎಲೆಯ ಕಡ್ಡಿಗಳನ್ನು ಹೊಲದೊಳಗೆ ನೆಟ್ಟು ಗೂಬೆಗಳನ್ನು ಆಕರ್ಷಿಸಿ ಅವುಗಳ ಮೂಲಕ ಇಲಿಗಳನ್ನು ಕೊಲ್ಲಬಹುದೆಂದು ಹೇಳಿದ ತಲೆಮಾಸಿದ ಮುದುಕನೊಬ್ಬನ ಐಡಿಯಾ ನಂಬಿಕೊಂಡು ಬೆಳೆಯ ಮಧ್ಯೆಮಧ್ಯೆ ಗುಮ್ಮನಗೂಟಗಳನ್ನೂ ಇಟ್ಟು ನೋಡಿದರು, ಅದರಿಂದಲೂ ಪ್ರಯೋಜನವೇನೂ ಆಗಲಿಲ್ಲ. ಇದ್ದಬದ್ದ ತಾಳ್ಮೆಯೆಲ್ಲವನ್ನೂ ಕಳೆದುಕೊಂಡ ಚೆಂಗಾವಿಯ ರೈತರು ಮನೆಯೊಳಗೆ ಯಾವುದಾದರೊಂದು ಇಲಿ ಕಂಡರೆ ಅದನ್ನು ಅಟ್ಟಾಡಿಸಿಕೊಂಡು ಹೋಗಿ ಕೈಗೆಸಿಕ್ಕದ್ದರಿಂದ ಬಡಿಯಲೆತ್ನಿಸುತ್ತಿದ್ದರು. ಹೊಲಗಳಿಗೆ ಯಾವ ಮುನ್ಸೂಚನೆಯನ್ನೂ ಕೊಡದೆ ನುಗ್ಗುವ ಇಲಿಗಳನ್ನು ನಿಯಂತ್ರಿಸಲು ಒಂದಷ್ಟು ದಿನ ಮುಂಗುಸಿ, ಬೆಕ್ಕುಗಳನ್ನು ಬಳಸಲು ನೋಡಿದರಾದರೂ, ಇತ್ತ ಕಡೆಯಿಂದ ಬೆಕ್ಕುಮುಂಗುಸಿಗಳನ್ನು ಹೊಲದೊಳಗೆ ಬಿಟ್ಟುಬಂದರೆ, ಅತ್ತಕಡೆಯಿಂದ ಯಾವುದೋ ಮಾಯದಲ್ಲಿ ಪುನರ್ವಸತಿಯ ಜೈಲಿನೊಳಗಿದ್ದ ಶಿಳ್ಳೆಕ್ಯಾತರು ಇವುಗಳನ್ನು ಹಿಡಿದೊಯ್ದು ಸುಟ್ಟು ತಿನ್ನಲು ಶುರುವಿಡುತ್ತಿದ್ದರು. ಅದೂಪೋಯ ಇದೂಪೋಯ ಎಂಬ ಸ್ಥಿತಿಗೆ ತಳ್ಳಲ್ಪಟ್ಟ ರೈತರು ಕೊನೆಗೆ ಚೆಂಗಾವಿಯ ಕೃಷಿಅಧಿಕಾರಿಗಳಿಗೆ ತಮ್ಮ ಹೊಲಗಳಿಗೆ ಗಂಡಾಂತರವಾಗಿರುವ ಇಲಿಗಳ ಕಾಟದಿಂದ ತಮ್ಮನ್ನು ಕಾಪಾಡುವಂತೆಯೂ ಇಲ್ಲವಾದಲ್ಲಿ ತಮ್ಮೆಲ್ಲರನ್ನೂ ಪರಿಹಾರ ಕೊಟ್ಟು ಚೆಂಗಾವಿಯಿಂದ ಗಡೀಪಾರು ಮಾಡುವಂತೆಯೂ  ದುಂಬಾಲು ಬಿದ್ದಿದ್ದರು.

ಆಧುನಿಕ ಕೃಷಿ ಉತ್ತೇಜನಕ್ಕೆಂದು ಬಿಡುಗಡೆಯಾಗಿರುವ ಅನುದಾನದ ದುಡ್ಡನ್ನು ಎಲ್ಲಾ ಮೂಲೆಯಿಂದಲೂ ಮುಂಡಾಮೋಚಿ ಉಳಿದ ಅನುದಾನಕ್ಕೆ ಏನಾದರೊಂದು ಗತಿ ಕಾಣಿಸಲು ಹೊಸ ಪಿತೂರಿಗಳಿಲ್ಲದೆ ನೊಂದುಕೊಳ್ಳುತ್ತಿದ್ದ ಕೃಷಿ ಅಧಿಕಾರಿಗಳು ಆಹಾರಧಾನ್ಯ ಸಂರಕ್ಷಣಾ ಆಂದೋಲನ ಯೋಜನೆಯಡಿಯಲ್ಲಿ ಇಲಿಟೆಂಡರು ಕರೆದಿದ್ದೂ ಆಯಿತು. ಟೆಂಡರು ತೆಗೆದುಕೊಂಡ ಆಸಾಮಿಯೊಬ್ಬ ತನಗೆ ನೇರೂಪಾಗಿ ಕಂಡ ಕರಪತ್ರ ಪ್ರಕಟಣೆ, ಪಾಷಾಣ, ಇಲಿಬೋನು, ಇಕ್ಕಳದ ಪ್ರಯೋಗವೆಲ್ಲವನ್ನೂ ಹೊಲಗಳೊಳಗೆ ಬಳಸಿ ನೋಡಿದ್ದರು. ಅವಕ್ಕೂ ಇಲಿಗಳು ಕ್ಯಾರೇ ಎನ್ನದೆ ಯಾವ ತಂತ್ರೋಪಾಯಗಳಿಗೂ ಬಗ್ಗದಂತೆ ಇಲಿಸಮೂಹ ತನ್ನ ಪಾಡಿಗೆ ತಾನು ಬೆಳೆದರೋಡೆಯ ಸಾಹಸಗಳನ್ನು ಯಾವ ಎಗ್ಗುಸಿಗ್ಗಿಲ್ಲದೆ ನಡೆಸುತ್ತಲೇ ಇದ್ದುದನ್ನು ಕಂಡ ಪರಿಣಾಮವಾಗಿ ಅಧಿಕಾರಿಗಳು ಕೃಷಿವಿಶ್ವವಿದ್ಯಾಲಯದ ಇಲಿನಿಯಂತ್ರಣ ವಿಭಾಗದ ಮುಖ್ಯಸ್ಥ ಪುಗಳೇಂದಿಯ ಮೊರೆ ಹೋಗಿದ್ದರು. ಎಲ್ಲವನ್ನೂ ಕೇಳಿಸಿಕೊಂಡ ಪುಗಳೇಂದಿಯು ಫಿಲಿಪೈನ್ಸ್‌ನಲ್ಲಿ ಈ ಬಗೆಯ ಇಲಿಕಾಟ ನಿಯಂತ್ರಣಕ್ಕೆಂದು ಅಲ್ಲಿನ ಕೃಷಿವಿಜ್ಞಾನಿಗಳು ಸಸ್ಯವೊಂದನ್ನು ಅಭಿವೃದ್ಧಿಪಡಿಸಿದಾರೆಂದೂ, ತಮ್ಮ ವಿಶಿಷ್ಟ drought-kelly-stewart-sieckವಾಸನೆಯಿಂದ ಇಲಿಗಳನ್ನು ಆಕರ್ಷಿಸುವ ಅದು ಇಲಿಯು ಆ ಗಿಡದ ಎಲೆಗಳನ್ನು ತಿನ್ನುತ್ತಿದ್ದಂತೆಯೇ ಸಾಯುತ್ತವೆಂದೂ, ಅದರ ಬೀಜಗಳನ್ನು ತರಿಸಿಕೊಂಡು ಚೆಂಗಾವಿಯ ಹೊಲದ ಅಲ್ಲಲ್ಲಿ ಬೆಳೆಸುವ ಮೂಲಕ ಇಲಿ ನಿಯಂತ್ರಿಸಬಹುದೆಂಬ ಅದ್ದೂರಿ ಐಡಿಯಾವೊಂದನ್ನು ಕೃಷಿಅಧಿಕಾರಿಗಳ ಮುಂದಿಟ್ಟಿದ್ದನು. ಚೆಂಗಾವಿ ಹುಣ್ಣಿಗೆ ಫಿಲಿಪೈನ್ಸ್ ಕನ್ನಡಿಯ ಪರಿಹಾರವು ದುಬಾರಿಯಾಗುವುದರಿಂದ ಬೇರೆ ಏನಾದರೂ ಸಸ್ತಾ ಪರಿಹಾರವನ್ನು ಆಲೋಚಿಸಿ ಸಹಕರಿಸಲು ಕೃಷಿಅಧಿಕಾರಿಗಳು ಕೇಳಿಕೊಂಡಿದ್ದರಿಂದ ಎಷ್ಟು ಯೋಚಿಸಿದರೂ ಏನೂ ತೋಚದಾಗಿ, ಕೊನೆಗೆ ಇದಕ್ಕೆ ಮದ್ದರೆಯಲು ತಕ್ಕುನಾಗಿದ್ದ ಗಿಣಿಶಾಸ್ತ್ರದ ಮಂಕಾಳಿಯನ್ನು ತನ್ನಲ್ಲಿಗೆ ಕರೆಯಿಸಿಕೊಂಡಿದ್ದನು.

ಇಲ್ಲಿಯವರೆಗೂ ಒಂದು ಹದದೊಳಗೆ ಇದ್ದ ಚೆಂಗಾವಿಯ ರೈತರ ಪೀಕಲಾಟವು ಗಿಣಿಶಾಸ್ತ್ರದ ಮಂಕಾಳಿಯ ಪ್ರವೇಶದಿಂದಾಗಿ ರೇಸು ಕುದುರೆಯೋಪಾದಿಯಲ್ಲಿ ಕಂಡಾಪಟ್ಟೆ ರಚ್ಚೆಗೆ ತಿರುಗುತ್ತದೆಂದು ಪುಗಳೇಂದಿಗಾಗಲೀ, ರೈತರಿಗಾಗಲೀ, ಉಳಿಕೆ ಚೆಂಗಾವಿಯ ಪ್ರಜೆಗಳಿಗಾಗಲಿ ಆಗ ಗೊತ್ತಾಗಲೇ ಇಲ್ಲ. ಪುನರ್ವಸತಿಯ ಕೊಡಲಿಗೆ ತಲೆಕೊಟ್ಟಿದ್ದ ಛಪ್ಪನ್ನೈವತ್ತಾರು ಬುಡಕಟ್ಟುಗಳಲ್ಲೊಂದಾಗಿದ್ದ ಗಿಣಿಶಾಸ್ತ್ರದವರ ಪೈಕಿಯವನಾಗಿದ್ದ ಮಂಕಾಳಿಯು ಕುಲವಿದ್ಯೆಯು ತಲೆಯಿಂದ ತಲೆಗೆ ದಾಟಿಕೊಳ್ಳಲು ಬೇಕಿದ್ದ ಗಿಣಿಶಾಸ್ತ್ರದ ರಹಸ್ಯಗಳನ್ನು ತನ್ನ ನೆರೆತು ಬಿಳಿಯಾಗಿದ್ದ ತಲೆಗೂದಲೊಳಗೆ ಬಚ್ಚಿಟ್ಟುಕೊಂಡು ಬದುಕುವವನಾಗಿದ್ದನು. ದೂರದ ಎರವಾಡಿಯಲ್ಲಿ ಗಿಣಿಶಾಸ್ತ್ರ ಹೇಳುವ ಅವನದ್ದೇ ಕುಲದ ಮಂದಿಗೆ ಪಳಗಿಸಿದ ಗಿಣಿಗಳನ್ನು ಸಪ್ಲೈ ಮಾಡುವ ಕೆಲಸ ಮಾಡುತ್ತಿದ್ದ ಅವನು ಹೀಗೆ ಪಳಗಿಸಿದ ಗಿಣಿಯೊಂದಕ್ಕೆ ಮೂರರಿಂದ ಐದು ಸಾವಿರದವರೆಗೂ ಚಾರ್ಜು ಮಾಡುತ್ತಿದ್ದನು. ಶಾಸ್ತ್ರದಗಿಣಿಯು ಪಂಜರದೊಳಗಿನಿಂದ ಹೊರಗೆ ಬರಲು ಯಾವ ಸನ್ನೆ ಮಾಡಬೇಕು, ಯಾವದಿಕ್ಕಿನಿಂದ ಗಿಣಿಯ ತಲೆ ಮುಟ್ಟಿದರೆ ಅದಕ್ಕೆ ಯಾವ ಮೆಸೇಜು ರವಾನೆಯಾಗುತ್ತದೆ, ನೆಲಕ್ಕೆ ಎಷ್ಟುಸಲ ತೋರುಬೆಳಿನಿಂದ ಮಡಚಿ ಕುಟ್ಟಿ ಯಾವ ಕಾರ್ಡು ತೆಗೆಯಬೇಕೆಂಬ ಸೂಚನೆ ಕೊಡಬೇಕು, ಮನುಷ್ಯರ ಹೆಬ್ಬೆರಳಿನ ಚಲನೆಯನ್ನು ಗಿಣಿಗಳು ಗ್ರಹಿಸುವ ಬಗೆ ಇವೆಲ್ಲವನ್ನೂ ಪಾರಂಪರಿಕವಾಗಿ ಕಲಿತವನಾಗಿದ್ದ ಮಂಕಾಳಿಯು ಗಿಣಿಶಾಸ್ತ್ರವನ್ನೇ ನಂಬಿ ಬದುಕುತ್ತಿದ್ದವರಿಗೆ ಕುಲಪಿತಾಮಹನಾಗಿದ್ದನು. ಲಾಗಾಯ್ತಿನಿಂದಲೂ ಕುಲದ ಜನರಿಂದ ದೊರೆಯಂತೆ ಸಿಕ್ಕುತ್ತಿದ್ದ ಗೌರವಗಳನ್ನು ಪಡೆಯುತ್ತಿದ್ದ ಮಂಕಾಳಿಯು ತಾನು ಜಮೈಕಾ ದೇಶದ ಗಿಣಿಸಾಮ್ರಾಜ್ಯದ ದೊರೆಗಳ ಪರಂಪರೆಯ ಕೊನೆಯ ಸಂತತಿಯೆಂದು ಉಳಿದ ಗಿಣಿಶಾಸ್ತ್ರದವರೆದುರು ತವುಡು ಕುಟ್ಟುತ್ತಿದ್ದ. ಇದು ಎಷ್ಟು ನಿಜವೋ ಎಷ್ಟು ಸುಳ್ಳೋ ಎಂದು ಖಚಿತಪಡಿಸಿಕೊಳ್ಳಲು ಜಮೈಕಾದೇಶಕ್ಕೆ ಖರ್ಚಿಟ್ಟುಕೊಂಡು ಹೋಗಿ ವಿಚಾರಿಸಿಕೊಂಡು ಬರಲು ಯಾರಿಗೂ ಪುರುಸೊತ್ತು ಇರಲಿಲ್ಲವಾದ್ದರಿಂದ ಕೇಳಿದವರೂ ಹೌದೆಂದು ನಂಬುತ್ತಿದ್ದರು.

ಗಿಣಿಯಾಪಾರಕ್ಕೆ ಬೇಕಿದ್ದ ಗಿಣಿಗಳನ್ನು ಎರವಾಡಿಯ ಕಾಡುಗಳ ಬೋಗಿಮರದ ಪೊಟರೆಗಳಿಂದ ಮಂಕಾಳಿ ಹಿಡಿದು ತರುತ್ತಿದ್ದ. ಒಂದು ವತ್ತಾರೆ ಹತ್ತಿ ತುಂಬಿಸಿಟ್ಟ ಬುಟ್ಟಿಯೊಡನೆ ಎರವಾಡಿ ಕಾಡು ನುಗ್ಗುತ್ತಿದ್ದ ಅವನಿಗೆ ಗಿಣಿಗಳ ಜಗತ್ತು ಅವನ ಬೆರಳುಗಳಷ್ಟೇ ಚಿರಪರಿಚಿತವಾಗಿದ್ದವೆಂದರೂ ನಡೆಯುತ್ತದೆ ಬಿಡಿ. ವಯಸ್ಸಿರುವವರೆಗೆ ಬೋಗಿಮರಗಳನ್ನು ಚಕಪಕನೆ ಹತ್ತಿ ಪೊಟರೆಗೆ ಕೈಬಿಟ್ಟು ಸಲೀಸಾಗಿ ಗಿಣಿಗಳನ್ನು ಹಿಡಿಯುತ್ತಿದ್ದ ಮಂಕಾಳಿಗೆ ವಯಸ್ಸೆಂಬುದು ಅಮರಿಕೊಂಡಾಗಿನಿಂದ ಮರಹತ್ತಲು ನರಗಳು ಸಪೋರ್ಟು ಮಾಡುತ್ತಿರಲಿಲ್ಲವಾಗಿ, ಈಗೀಗ ಹೊಸ ಪ್ಲಾನೊಂದಕ್ಕೆ ಜೋತುಬಿದ್ದಿದ್ದನು. ಯಾವ ಪಕ್ಷಿಗಳಲ್ಲೂ ಕಾಣಬರದ ಬಹುಸಂಗಾತಿ ತೆವಲಿಗೆ ಬೀಳುವ ಹೆಣ್ಣುಗಿಣಿಗಳು ಇರೋಬರೋ ಗಂಡುಗಿಳಿಗಳಿಗೆಲ್ಲ ತಲೆಕೆಡಿಸಿ ಬುಟ್ಟಿಗೆ ಬೀಳಿಸಿಕೊಂಡು ಪೊಟರೆಯಲ್ಲಿದ್ದುಕೊಂಡೇ ಅವುಗಳ ಮೂಲಕ ತಿಂಡಿಊಟ ತರಿಸಿಕೊಳ್ಳುವುದನ್ನು ಬಲ್ಲವನಾಗಿದ್ದ ಮಂಕಾಳಿಯು ಹೆಣ್ಣುಗಿಣಿಗಳನ್ನು ಕೂಡಲು ಗಂಡುಗಿಳಿಗಳ ನಡುವೆ ಪುಟ್ಟದೊಂದು ಯುದ್ಧವೇ ನಡೆಯುತ್ತದಲ್ಲ.. ಅಂತಹ oil-paintingಟೈಮನ್ನೇ ಕಣ್ಣಿಗೆ ವಂಗೆಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದ. ಆ ಟೈಮಿನಲ್ಲಿ ಬಲಶಾಲಿ ಗಂಡುಗಿಳಿಯು ಇತರೆ ಪಡಪೋಶಿ ಗಂಡುಗಿಳಿಗಳೊಡನೆ ಗುದ್ದಾಡಿಕೊಂಡು ಮಣ್ಣಲ್ಲಿ ಉರುಳಾಡುತ್ತ ಅವುಗಳ ಇಸ್ತ್ರಿ ಮಾಡಿಕೊಂಡು ಬಂದಂತಿದ್ದ ರೆಕ್ಕೆಪುಕ್ಕವನ್ನೆಲ್ಲ ಕೆಪ್ಪನೆಕದರಿಹಾಕಿ ಮಕಾಡೆ ಕೆಡವುತ್ತಲೇ ಓಡಿಹೋಗಿ ಈಗಾಗಲೇ ಸೋತು ಸುಣ್ಣವಾಗಿರುತ್ತಿದ್ದ ಗಿಣಿಗಳನ್ನೆತ್ತಿಕೊಂಡು ಹತ್ತಿ ಬುಟ್ಟಿಯೊಳಗಿಟ್ಟುಕೊಳ್ಳುತ್ತಿದ್ದ. ನಂತರ ಅವುಗಳನ್ನು ತನ್ನಣತಿಗೆ ಕುಣಿಯುವ ಮಂಗಗಳಂತೆ ಪಳಗಿಸಿಟ್ಟುಕೊಂಡು ಎಲ್ಲೆಲ್ಲಿಂದಲೋ ಬರುತ್ತಿದ್ದ ಶಾಸ್ತ್ರದವರಿಗೆ ಮಾರುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದ. ಅತ್ತ ಹೆಣ್ಣುಗಿಣಿಯೂ ಇಲ್ಲದೆ, ಪುಕ್ಕ ಕೆದರಿಕೊಂಡು ಮಂಕಾಳಿಯ ಬುಟ್ಟಿಸೇರುತ್ತಿದ್ದ ಕಾಮವನ್ನೇ ನೆತ್ತಿಗೆ ಹತ್ತಿಸಿಕೊಂಡಿರುತ್ತಿದ್ದ ಗಿಣಿಗಳೇ ಮುಂದ್ಯಾವತ್ತೋ ಒಂದು ದಿನ ಇವನಿಂದ ಕೈಬದಲಿಸಿಕೊಂಡು ಯಾವುದೋ ಊರಿನ ಮರದಕೆಳಗೆ ಇನ್ಯಾರೋ ಗಿಣಿಶಾಸ್ತ್ರದವರು ಇಡುತ್ತಿದ್ದ ಗಿಣಿಮನೆಯೊಳಗೆ ಅವರು ಹಾಕಿದ ಪುಡಿಹಣ್ಣುಗಳನ್ನು ತಿಂದುಕೊಂಡು ಶಾಸ್ತ್ರದ ಕಾರ್ಡು ಎತ್ತಿಕೊಟ್ಟು ಅಬ್ಬೇಪಾರಿಗಳಂತೆ ಹೊಟ್ಟೆ ಹೊರೆಯುತ್ತಿದ್ದವು. ಒಂದು ಗಿಣಿಬೇಟೆ ಮುಗಿದ ನಂತರ ಎರಡು ತಿಂಗಳು ಮಂಕಾಳಿ ಎರವಾಡಿಯ ಕಾಡಿನೊಳಕ್ಕೆ ಮುಖ ಹಾಕುತ್ತಿರಲಿಲ್ಲ. ಅಷ್ಟರೊಳಗೆ ಗಿಣಿಗಳು ಮೊಟ್ಟೆಯಿಟ್ಟು ಮರಿಗಳು ದೊಡ್ಡವಾಗಿ ಆಗಷ್ಟೇ ಹಾರಲು ಕಲಿತುಕೊಂಡು ತಾವಿರುವ ಕಾಡಿನ ಕಾನೂನೂ ಅರ್ಥವಾಗದೆ ನೀಲಗಿರಿ ಮರಗಳ ಬೀಜದಕಾಯಿ ತಿಂದುಕೊಂಡು ಎಲ್ಲೆಂದರಲ್ಲಿ ಪೋಲಿ ತಿರುಗುತ್ತಿದವ್ದು. ಇದೇ ಹೊಸಗಿಣಿಗಳು ಯಾಮಾರಿ ಮಂಕಾಳಿಯ ಬುಟ್ಟಿಪಾಲಾಗುತ್ತಿದ್ದವು. ಹೆಣ್ಣುಗಿಳಿಗಳನ್ನು ಕೂಡಿಕೊಳ್ಳುವ ಮುನ್ನ ಗಂಡುಗಿಳಿಗಳು ಕೊಂಬೆಕಡ್ಡಿಯೊಂದನ್ನು ಮುರಿದುಕೊಂಡು ಎಡಗಾಲಿನಲ್ಲಿ ಆ ಸೌದೆಕಡ್ಡಿಯನ್ನು ಮರದರೆಂಬೆಗೆ ಲಟಲಟನೆಂದು ಶ್ರಾವ್ಯವಾಗಿ ಬಡಿಯುತ್ತ ತಿಕ್ಕಲು ಹಿಡಿದಂತೆ ಪಂಗುಪಂಗೆಂದು ಕುಣಿಯುವುದನ್ನು ನೋಡಲು ಮಂಕಾಳಿಗೆ ಎಲ್ಲಿಲ್ಲದ ಆನಂದವಾಗುತ್ತಿತ್ತು. ಇಂತಹ ನಿರುಪದ್ರವಿ ತೀಟೆಗಳೊಂದಿಗೆ ಆನಂದಮಯ ಕಾಲಘಟ್ಟದಲ್ಲಿ ತಾನಾಯ್ತು ತನ್ನ ಗಿಣಿಗಳಾಯ್ತು ಎಂದು ಮಂಕಾಳಿ ರಾಜನಂತೆ ಮೆರೆಯುತ್ತಿದ್ದನಲ್ಲ.. ಅದೇ ಸಮಯಕ್ಕೆ ದೆಹಲಿಯಲ್ಲಿ ಪ್ರಾಣಿಪ್ರಿಯೆ ಮೇನಕಮ್ಮ ಜಡಿಯುತ್ತಿದ್ದ ಥರೇವಾರಿ ಪಿಐಎಲ್ ಕೇಸುಗಳಿಂದ ಬೇಸತ್ತ ಕೇಂದ್ರಸರ್ಕಾರವು ವನ್ಯಜೀವಿ ಸಂರಕ್ಷಣ ಕಾಯ್ದೆಯ ಶೆಡ್ಯೂಲ್ ನಾಲ್ಕಕ್ಕೆ ತಿದ್ದುಪಡಿ ತಂದಿಟ್ಟುಬಿಟ್ಟಿತ್ತು. ಅದರಂತೆ ಹಾವುಪಾವು-ಗಿಣಿಪಣಿಗಳು ಮನುಷ್ಯರು ಬೆವರುಸುರಿಸಿ ಕಷ್ಟಪಟ್ಟು ರಕ್ಷಿಸಬೇಕಾದ ವನ್ಯಜೀವಿಗಳ ಪಟ್ಟಿಗೆ ಹಾರಿಹೋಗಿದ್ದವು. ಗಿಣಿಸಾಕಣೆ ಮತ್ತವುಗಳನ್ನು ಗೂಡುಗಳೊಳಗೆ ಬಂಧಿಸಿಡುವುದು ಶಿಕ್ಷಾರ್ಹ ಅಪರಾಧವೆಂಬ ಕುಣಿಕೆಯನ್ನು ಅರಣ್ಯ ಇಲಾಖೆಯವರು ಯಾವಾಗ ಬೀದಿಯಲ್ಲಿ ಒಂದು ಟವೆಲ್ಲು ಹಾಸಿಕೊಂಡು ಗಿಣಿಗೂಡಿಟ್ಟುಕೊಂಡು ಚಿಲ್ರೆಕಾಸು ದುಡಿಯುತ್ತಿದ್ದ ಗಿಣಿಶಾಸ್ತ್ರದವರ ಕುತ್ತಿಗೆಗೆ ಬಿಗಿಯತೊಡಗಿದರೋ ಅಲ್ಲಿಂದ ಮಂಕಾಳಿಯ ಪಾರಂಪರಿಕ ಕುಲಕಸುಬು ನಾಲಿಗೆ ನೆಲಕ್ಕೆ ಹಾಕಿ ತೇಕತೊಡಗಿತ್ತು.

ಪಾರಂಪರಿಕವಾಗಿ ತನ್ನ ಕುಲದವರು ಗಿಣಿಗಳನ್ನು ನಂಬಿಕೊಂಡು ಬದುಕುತ್ತಿದ್ದ ಹೊತ್ತಿನಲ್ಲಿ ತಿಕ ತೊಳೆಯಲೂ ಕೈಯೆಟುಕದಿದ್ದ ಕಾನೂನುಕೋರರು ಇದೀಗ ತನ್ನೆದುರು ಕತ್ತಿಗಳನ್ನು ಆಡಿಸುತ್ತ ಜೊಂಯ್ಯು ಜೊಂಯ್ಯನೆ ಕುಣಿದಾಡುತ್ತಿರುವುದನ್ನು ಕೆಂಡಗಣ್ಣಿನಲ್ಲೇ ನೋಡುತ್ತಿದ್ದ ಮಂಕಾಳಿಯತ್ತ ಗಿಣಿಶಾಸ್ತ್ರದವರು ಪಳಗಿದ ಗಿಣಿಯ ಖರೀದಿಗೆ ಬರುವುದು ಕ್ರಮೇಣ ನಿಂತು ಹೋಗಿತ್ತು. ಬಿಡುಬೀಸಾಗಿ ಕಿಂಗು ಸಿಗರೇಟು ಹಿಡಿಯುತ್ತಿದ್ದ ಮಂಕಾಳಿಯ ಬೆರಳುಗಳ ಮಧ್ಯೆ ಯಂಗಟೇಸ ಬೀಡಿ ಬಂದು ಹಲ್ಲುಗಿಂಜಿಕೊಂಡು ಕುಳಿತುಕೊಂಡಿತ್ತು. abstract-art-sheepಸಿಂಗಪೂರು ದೇಶದ ಸೆರಾಂಗೂನ್ ರೋಡಿನಲ್ಲಿ ತನ್ನ ಷಡ್ಡಕನೊಬ್ಬ ಗಿಣಿಶಾಸ್ತ್ರ ಹೇಳುತ್ತ ವರ್ಷಕ್ಕೊಮ್ಮೆ ಕಂತೆಗಟ್ಟಲೆ ದುಡ್ಡು ತರುವುದನ್ನು ನೋಡಿದ್ದ ಮಂಕಾಳಿಗೆ ತಾನು ಸಿಂಗಪೂರು ದೇಶದಲ್ಲಾದರೂ ಹುಟ್ಟಬೇಕಿತ್ತು ಎಂದು ಎಷ್ಟೋಸಲ ಅನಿಸುತ್ತಿತ್ತು. ಇತ್ತ ಹೊತ್ತೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಗೆ ತಂದು ನಿಲ್ಲಿಸಲ್ಪಟ್ಟಿದ್ದ ಗಿಣಿಶಾಸ್ತ್ರದವರು ಬದುಕುವುದೇ ಹೆಚ್ಚು ಎಂಬಂಥ ಸ್ಥಿತಿಗೆ ತಳ್ಳಲ್ಪಟ್ಟು ಕೆಲವರು ಬೇರೇನೂ ಕೆಲಸ ಗೊತ್ತಿಲ್ಲದೆ ಮನೆಗಳ್ಳತನಕ್ಕೂ ಇಳಿದು ಜೈಲುಪಾಲಾದ ಘಟನೆಗಳೂ ನಡೆಯುತ್ತಿದ್ದವು. ಇಂಥಹ ಸ್ಥಿತಿಯಲ್ಲಿ ಗಿಣಿವ್ಯಾಪಾರವೇ ಇಲ್ಲದೆ ನೊಣ ಹೊಡೆಯುವ ಫುಲ್‌ಟೈಮ್ ಉದ್ಯೋಗಕ್ಕೆ ನೂಕಲ್ಪಟ್ಟ ಮಂಕಾಳಿಯು ಆಗಿದ್ದಾಗಲೆಂದು ಒಂದುದಿನ ಎದ್ದುಹೋದವನೇ ಗೋಳಿಕಾವಿನ ಗದ್ದೆಗಳಲ್ಲಿ ಓಡಾಡಿಕೊಂಡಿದ್ದ ಬೆಳ್ಳಿಲಿ, ಹೆಗ್ಗಣಗಳನ್ನು ಹಿಡಿದು ತಂದು ತನ್ನ ಗಿಣಿತರಬೇತು ಶಾಸ್ತ್ರವೆಲ್ಲವನ್ನೂ ಇವುಗಳ ಮೇಲೆ ಪ್ರಯೋಗಿಸಲು ಶುರುವಿಟ್ಟಿದ್ದ. ಒಂದೆರಡು ತಿಂಗಳುಗಳಲ್ಲಿಯೇ ಅವುಗಳ ಗುಣಸ್ವಭಾವ, ಜೈವಿಕಬದುಕು, ಇತ್ಯಾದಿಯೆಲ್ಲವನ್ನು ತಿಳಿದುಕೊಂಡು ಪಳಗಿದ ನಂತರ ಅವುಗಳನ್ನು ಬೆರಳಸದ್ದಿನ ಸೂಚನೆಗೆ ಕಾರ್ಡೆತ್ತಿಕೊಡುವಂತೆ ತಯಾರಿಸಿಟ್ಟುಕೊಂಡು ಹಳೇಗಿರಾಕಿಗಳನ್ನು ಹುಡುಕುಡುಕಿ ಅವುಗಳನ್ನು ಕಡಿಮೆರೇಟಿಗೆ ಮಾರಿ ‘ಗಿಣಿಶಾಸ್ತ್ರ ಹೋದ್ರೆ ಶ್ಯಾಟ ಒಂದೋಯ್ತು ಇಲಿಶಾಸ್ತ್ರ ಹೇಳ್ರೋ’ ಎಂದು ಪಳಗಿದ ಇಲಿಗಳ ಮೂಲಕ ಕಾರ್ಡುಗಳನ್ನು ತೆಗೆಸಿ ನಿರೂಪಿಸಿದ್ದ. ಗಿಣಿಶಾಸ್ತ್ರಕ್ಕೆ 20 ರುಪಾಯಿಯ ಬದಲು ಮೂಷಿಕಶಾಸ್ತ್ರಕ್ಕೆ 30 ರುಪಾಯಿ ಕೇಳಬಹುದು ಎಂಬ ಐನಾತಿ ಐಡಿಯಾವನ್ನೂ ಅವರಿಗೆ ತುಂಬಿಸಿ ತನ್ನ ಕೆಲಸಕ್ಕೆ ಮಾರುಕಟ್ಟೆಯನ್ನು ಕುದುರಿಸಿಕೊಂಡು ಬಿದ್ದೇಹೋಗಿದ್ದ ಅವನ ಬದುಕನ್ನು ಮತ್ತೆ ಎತ್ತಿ ನಿಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು.

ಇವೆಲ್ಲವೂ ನಡೆದಿದ್ದ ಹೊತ್ತಿನಲ್ಲೇ ಚೆಂಗಾವಿಯೊಳಗೆ ಇಲಿಕಾಟವೂ ಅಲಲಲಲ ಎಂದು ಎದ್ದು ಕುಳಿತುಬಿಟ್ಟಿತ್ತು. ಇತ್ತ ಕೃಷಿವಿಶ್ವವಿದ್ಯಾಲಯದ ಇಲಿ ನಿಯಂತ್ರಣ ವಿಭಾಗದ ಮುಖ್ಯಸ್ಥ ಪುಗಳೇಂದಿಯು ಕೊಟ್ಟ ಫಿಲಿಪೈನ್ಸ್ ಗಿಡದ ಪರಿಹಾರವನ್ನು ಕೃಷಿ ಅಧಿಕಾರಿಗಳು ಮೂಸುನೋಡದ ಪರಿಣಾಮವಾಗಿ, ಚೆಂಗಾವಿಯ ಇಲಿಕಾಟಕ್ಕೆ ಗೋಡೆಕಟ್ಟುವುದು ಹೇಗೆಂದು ಪುಗಳೇಂದಿಯು ವಿಪರೀತವಾಗಿ ತಲೆಕೆಡಿಸಿಕೊಂಡಿದ್ದನು. ಅದೇ ಸಮಯಕ್ಕೆ ಇಲಿಗಳನ್ನು ಪಳಗಿಸುವಲ್ಲಿ ಎತ್ತಿದಕೈನವನಾಗಿದ್ದ ಮಂಕಾಳಿಯ ಬಗ್ಗೆ ಇವನ ಕಿವಿಗೆ horror_rainy_artಬಿದ್ದು ಅವನೊಟ್ಟಿಗೆ ಮಾತನಾಡಲಾಗಿ ಇಲಿಹೆಗ್ಗಣಗಳಂತಹ ಪ್ರಾಣಿಗಳ ಜೈವಿಕವಿವರಗಳನ್ನು ಅಮೂಲಾಗ್ರವಾಗಿ ಅರೆದುಕುಡಿದಂತಿದ್ದ ಮಂಕಾಳಿಯೇ ಈ ಸಮಸ್ಯೆಪರಿಹಾರಕ್ಕೆ ತಕ್ಕುನಾದವನಾಗಿ ಅವನನ್ನು ಕೃಷಿಅಧಿಕಾರಿಗಳ ಕೊರಳಿಗೆ ಗಂಟುಹಾಕಿ ಕೈತೊಳೆದುಕೊಂಡಿದ್ದನು. ಅದರಂತೆ ಚೆಂಗಾವಿಯ ಗದ್ದೆಗಳಲ್ಲಿ ಬಾವುಟ ನೆಟ್ಟಿರುವ ಇಲಿಗಳನ್ನು ನಿಯಂತ್ರಿಸಲು ಮಂಕಾಳಿಗೆ ಅರ್ಜಿ ಹಾಕದೆಯೂ ಸರ್ಕಾರಿ ಟೆಂಡರು ಸಿಕ್ಕಿತ್ತು. ಗದ್ದೆಗಿಷ್ಟು ರೇಟು ಎಂದು ಮಾತನಾಡಿಕೊಂಡ ಮಂಕಾಳಿಯು ನಂತರ ತನ್ನ ಇಲಿಶಿಕಾರಿಗೆ ಮೊದಲಿಟ್ಟಿದ್ದ. ಮೊದಲಿಗೆ ಗದ್ದೆಯ ಬದುಗಳು ಮತ್ತು ದೂರದ ಮರದ ಬುಡಗಳಲ್ಲಿ ಇರಬಹುದಾದ ಇಲಿಬಿಲಗಳನ್ನು ಪತ್ತೆಹಚ್ಚುತ್ತಿದ್ದ ಅವನು, ನಂತರ ಒಂದೊಂದೇ ಬಿಲವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಇಲಿಗಳು ಪ್ರವೇಶಕ್ಕೆಂದು ಒಂದು ಮುಖ್ಯ ಬಿಲದಬಾಗಿಲನ್ನು ಇಟ್ಟಿದ್ದರೆ, ಅಪಾಯದ ಸಂದರ್ಭದಲ್ಲಿ ಪರಾರಿಯಾಗಲು ಐದಾರು ಕಡೆಗಳಲ್ಲಿ ನಿರ್ಗಮನ ಬಾಗಿಲುಗಳನ್ನು ತೋಡಿಕೊಂಡಿದ್ದವು. ಒಂದೇಟಿಗೆ ನೋಡಿದರೆ ಐದಾರು ಇಲಿಬಿಲಗಳಂತೆ ಕಾಣುತ್ತಿದ್ದ ಅವುಗಳಲ್ಲಿ ಬಿಲದ ಪ್ರವೇಶದ್ವಾರವನ್ನು ಇಲಿಹೆಜ್ಜೆಗಳ ಗುರುತಿನ ಮೇಲೆ ಪತ್ತೆಹಚ್ಚುತ್ತಿದ್ದ. ಅದೊಂದನ್ನು ಹೊರತುಪಡಿಸಿ ಉಳಿದ ಎಲ್ಲ ತುರ್ತು ನಿರ್ಗಮನ ಬಿಲದ್ವಾರಗಳನ್ನು ಮಣ್ಣಲ್ಲಿ ಮುಚ್ಚಿ ತಪ್ಪಿಸಿಕೊಳ್ಳಲು ಒಂದೇದ್ವಾರವನ್ನು ಬಿಟ್ಟವನೇ ಒಂದು ಮಡಕೆಯ ತಳಕ್ಕೆ ಎಂಟಾಣೆಗಾತ್ರದ ತೂತು ಕೊರೆದು ಮಡಕೆಯೊಳಗೆ ನೀಲಗಿರಿಮರದ ಎಣ್ಣೆಭರಿತ ಎಲೆಪುಳ್ಳೆಗಳನ್ನು ತುಂಬಿ ಬೆಂಕಿಯಿಟ್ಟು ಹೊಗೆಯೆಬ್ಬಿಸುತ್ತಿದ್ದನು. ಮಡಕೆಯ ದೊಡ್ಡಬಾಯನ್ನು ಇಲಿಬಿಲಕ್ಕೆ ಅಡ್ಡಲಾಗಿ ಮುಚ್ಚಿ ಮಡಕೆಯ ತಳಕ್ಕಿದ್ದ ತೂತಿನಿಂದ ಉಫ್ಫು ಉಫ್ಫೆಂದು ಆ ಹೊಗೆಯನ್ನು ಬಿಲದ ಅಭಿಮುಖವಾಗಿ ಊದಿಊದಿ ಇಲಿಗಳನ್ನು ಕುಸ್ತಿಗೆ ಕರೆಯುತ್ತಿದ್ದ. ಇದೇನೋ ವರಾತವಾಗಿದೆಯಲ್ಲ ಎಂದು ನಿರ್ಗಮನ ದ್ವಾರಗಳತ್ತ ಓಡುತ್ತಿದ್ದ ಬಿಲದೊಳಗಿನ ಇಲಿಗಳಿಗೆ ಯಾವ ತುರ್ತು ನಿರ್ಗಮನವೂ ಲಭ್ಯವಿಲ್ಲದೆ ಹೊಗೆಗೆ ಸಿಕ್ಕೇ ಒಂದಷ್ಟು ಇಲಿಗಳು ಸಾಯುತ್ತಿದ್ದವು. ಹೊಗೆಯ ನಡುವೆಯೂ ಬದುಕಿ ತೊಡೆತಟ್ಟಿಕೊಂಡು ಪ್ರವೇಶದ್ವಾರದ ಮೂಲಕವೇ ಪುಳಪುಳನೆ ಓಡಿಬರುತ್ತಿದ್ದ ಇಲಿಗಳನ್ನು ಕುಕ್ಕರುಗಾಲಿನಲ್ಲಿ ಕುಳಿತು ಕಾಯುತ್ತಿದ್ದ ಮಂಕಾಳಿಯು ಹಲಗೆಯೊಂದರಿಂದ ಭೈಡುಭೈಡು ಚಚ್ಚುತ್ತಿದ್ದ. ಬಿದ್ದ ಏಟುಗಳಿಗೆ ಸತ್ತ ಇಲಿಗಳನ್ನು ಒಂದೆಡೆ ರಾಶಿ ಹಾಕಿಕೊಂಡು ಮತ್ತೆ ಹಲಗೆ ಹಿಡಿದು ಬಿಲನೋಡುತ್ತ ಕೂರುತ್ತಿದ್ದ. ಬಿಲದೊಳಗಿನ ಸೈನ್ಯವೆಲ್ಲ ಖಾಲಿಯಾದ ಮೇಲೆ ಬಿಲದ ಎಲ್ಲ ಬಾಗಿಲುಗಳೂ ಹಬ್ಬಿದ ಕಡೆಯೆಲ್ಲ ನೆಲದ ಮೇಲೆ ಕಡ್ಡಿಯಲ್ಲಿ ಗೀಟುಹಾಕುತ್ತಿದ್ದ ಅವನು ಗೀರುಹೋದ ಕಡೆಯಲ್ಲೆಲ್ಲ ನಾಜೂಕಾಗಿ ಪಿಕಾಸಿಯಲ್ಲಿ ಅಗೆದು ಇಲಿಬಿಲದ ನಕ್ಷೆಯನ್ನು ಕಲ್ಲಂಗಡಿಯನ್ನು ಎರಡು ಹೋಳುಮಾಡಿದಂತೆ ಬಿಡಿಸಿ, ಇಲಿಗಳು ತನ್ನ ಬಿಲದೊಳಗೇ ಇರುವ ಪ್ರತ್ಯೇಕ ಉಗ್ರಾಣಗಳಲ್ಲಿ ಶೇಖರಿಸಿಟ್ಟುಕೊಂಡಿದ್ದ ಹಾಲುಭರಿತ ಧಾನ್ಯ,ಭತ್ತ,ತೆನೆಕಾಳುಗಳನ್ನು ಆಯ್ದು ಚೀಲಕ್ಕೆ ತುಂಬಿಕೊಂಡು ಸತ್ತ ಇಲಿಗಳ ಬಾಲಗಳ ಗೊಂಚಲು ಹಿಡಿದು ಇನ್ನೊಂದು ಬಿಲವನ್ನು ಹುಡುಕುತ್ತ ಹೊರಟುಬಿಡುತ್ತಿದ್ದನು. ಬಸುರಿಬಾಣಂತಿ ಹೆಣ್ಣುಇಲಿಗಳಿಗೆಂದೇ ಒಂದು ಒಳಕೋಣೆ, ಓಡಾಡಲೆಂದು ಕಾಲುದಾರಿಯಂತಹ ಸುರಂಗ, ಯಾವ ಕಾಲಕ್ಕೂ ಧಾನ್ಯಗಳು ಕಡೆದಂತೆ ವ್ಯವಸ್ಥೆಗೊಳಿಸಿದ ಬಿಲದೊಳಗಿನ ಉಗ್ರಾಣಕ್ಕೆ ಸೆಪರೇಟು ವ್ಯವಸ್ಥೆಯಿರುವ ಇಂತಹ ನೆಲದಗೂಡುಗಳನ್ನು ಕಟ್ಟಿಕೊಂಡಿದ್ದ ಇಲಿಗಳು ಮಂಕಾಳಿಗೆ ಗಿಣಿಗಳಿರಲಿ, ಮನುಷ್ಯರಿಗಿಂತ ದೊಡ್ಡಜೀವಗಳಂತೆ ಅಚ್ಚರಿ ತಂದಿದ್ದವು.

ಹೀಗೆ ಇಲಿಬಿಲದೊಳಗಿನ ಡಿಪೋಗಳಿಂದ ಮಂಕಾಳಿ ಶೇಖರಿಸುತ್ತಿದ್ದ ರೇಷನ್ನೇ ದಿನಕ್ಕೆ 7ರಿಂದ 8 ಕೆಜಿಯಷ್ಟು ಆಗುತ್ತಿತ್ತು. ಸತ್ತ ಇಲಿಗಳನ್ನು ಇರುಳರ ಜನಗಳಿಗೆ ಕೊಟ್ಟು ಅವನಪಾಡಿಗವನು ನಡೆದುಬಿಡುತ್ತಿದ್ದನು. ಬಾಯಿಚಪ್ಪರಿಸಿಕೊಂಡು ಇಲಿತಿನ್ನುವುದನ್ನು ಕಾಲಾನುಕಾಲದಿಂದ ಕಲಿತಿದ್ದ ಇರುಳರು ಮಂಕಾಳಿ ಕೊಟ್ಟುಹೋದ ಇಲಿಗಳನ್ನು ಕೆಂಡದ ಮೇಲೆ ಸುಟ್ಟು ಅದರ ಚರ್ಮದ ಕೂದಲನ್ನು ಸುಟ್ಟು ಕ್ರುಂಕ್ರುಂ ಎನ್ನುವಂತೆ ಬೇಯ್ದಿರುತ್ತಿದ್ದ ಇಲಿಗಳ ಕಾಲನ್ನು ಆಸೆಯಿಂದ ತಿಂದು ಕೋಳಿಕುಯ್ದಂತೆ ಇಲಿಯನ್ನು ಕುಯ್ದು ಸಾರು ಮಾಡಿಕೊಂಡು ತಿನ್ನುತ್ತಿದ್ದರು. ಇಲಿಶಿಕಾರಿಗೆ ದುಡ್ಡಿಗೆ ದುಡ್ಡು, ರೇಷನ್ನಿಗೆ ರೇಷನ್ನು ಸತ್ತ ಇಲಿಗಳು ಇರುಳರ ಹೊಟ್ಟೆಗೆಂದು ಸಿಕ್ಕಿದ್ದ ಮಜಬೂತಾದ ಕೆಲಸವನ್ನು ಅವನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಚೆಂಗಾವಿಯ ರೈತರಿಗೆ ಕಿಂದರಿಜೋಗಿಯೂ ಆಗಿ ರೂಪಾಂತರಗೊಂಡಿದ್ದನು. ಒಮ್ಮೊಮ್ಮೆ ತಮ್ಮ ಬದುಕನ್ನೇ ತುಂಡರಿಸಿ ತಿನ್ನುತ್ತಿರುವ ಇಲಿಗಳ ಶಿಕಾರಿಗೆಂದು ದೇವರೇ ಏನಾದರೂ ಮಂಕಾಳಿಯ ಕೈಗೆ ತೂತುಮಡಕೆ ಕೊಟ್ಟು ಕಳಿಸಿದನೇನೋ ಎಂದು ಚೆಂಗಾವಿಯ ರೈತರು ಕಕ್ಕಾಬಿಕ್ಕಿಯಾಗುವಷ್ಟರ ಮಟ್ಟಿಗೆ ಮಂಕಾಳಿ ರಾತ್ರೋರಾತ್ರಿ ಇಲಿಶಿಕಾರಿಗೆ ಫೇಮಸ್ಸಾಗಿ ಹೋಗಿದ್ದನು.

ಎಲ್ಲವೂ ನೆಟ್ಟಗೆ ನಡೆಯುತ್ತಿದ್ದ ಹೊತ್ತಿನಲ್ಲಿಯೇ ಮಂಕಾಳಿಗೆ ಇದು ತನ್ನೊಬ್ಬನಿಂದ ಆಗುವ ಕೆಲಸವಲ್ಲವೆಂಬುದು ಮನದಟ್ಟಾಗಲು ತುಂಬ ದಿನಗಳೇನೂ ಹಿಡಿಯಲಿಲ್ಲ. ಅದಕ್ಕೆಂದು ಇರುವುದನ್ನು ಬಿಟ್ಟು kt_shivaprasad-art-familyಬೇರೊಂದು ಹಿಡಿದು ಬದುಕಲು ಶುರುವಿಟ್ಟಿದ್ದ ಹಾವುಗೊಲ್ಲರು, ದೊಂಬರು, ಕೊರಚರು ಕೊರಮರಿತ್ಯಾದಿಯೆಲ್ಲರ ನಡುವೆ ಏನೂ ಮಾಡಲಾಗದೆ ನಿಂತಲ್ಲೇ ನಿಂತವರೂ ಇದ್ದರು. ಅದರಲ್ಲಿ ಇರುಳರ ನಂಬೀಸ ಮತ್ತವನ ಜನ, ಗೊತ್ತಿದ್ದ ಕಸುಬನ್ನು ಪ್ರಯೋಗಿಸಲು ಎಜುಕೇಟೆಡ್ಡು ಬೇಕೂಫರು ಕಟ್ಟಿದ್ದ ಗೋಡೆ ಹಾರುವ ಯಾವ ವಿದ್ಯೆಯೂ ಗೊತ್ತಿಲ್ಲದೆ ತಳಮಳಿಸುತ್ತಿದ್ದ ಹಾವಾಡಿಗರ ರಫೀಕು ಮತ್ತವನ ಜನರನ್ನು ಕಂಡಾಗಲೆಲ್ಲ ಮಂಕಾಳಿಗೆ ಅವರ ಹಸಿವು ತುಂಬಿದ ಮುಖಗಳು ಆತ್ಮವನ್ನೇ ಇರಿಯುವ ಚೂರಿಗಳಂತೆ ಕಾಣುತ್ತಿದ್ದವು. ಅವರೆಲ್ಲರನ್ನೂ ಒಂದೆಡೆ ಕಲೆಹಾಕಿ ಹಿಂಗಿಂಗೆ ಹಿಂಗಿಂಗೆ ಇಲಿ ಹಿಡಿಯಕ್ಕೆ ಬತ್ತಿರೇನ್ರಪ್ಪ ಹೊಟ್ಟೆಗೂ ಕಾಸಿಗೂ ಮೋಸ ಇಲ್ಲ ಎಂದ ಕೂಡಲೇ ಸರ್ವಾನುಮತದಿಂದ ಒಪ್ಪಿಕೊಂಡ ಅವರು ಮಂಕಾಳಿಯ ಇಲಿ ನಿಯಂತ್ರಣ ಪಡೆಯ ಸದಸ್ಯರಾಗಿ ಸೇರ್ಪಡೆಗೊಂಡಿದ್ದರು. ಬರುವ ದುಡ್ಡನ್ನು ಕೂಡಿಟ್ಟು ಕೈಗಿಡಲು ಮಂಕಾಳಿಗೆ ಹುಟ್ಟಿದ ಯಾವ ಪಿಳ್ಳೆಪಿಸುಗಗಳೂ ಇರಲೇ ಇಲ್ಲವಾದ್ದರಿಂದ ಇಲ್ಲದವರೊಡನೆ ಹಂಚಿಕೊಂಡು ತಿನ್ನುವ ಸಮಾಜವಾದಕ್ಕೆ ಅವನು ತಲೆಬಗ್ಗಿಸಿದ್ದನು. ಮಂಕಾಳಿಯ ಮೂಲಕ ಇಲಿಬೇಟೆಯ ವಿದ್ಯೆಯನ್ನು ಯಶಸ್ವಿಯಾಗಿ ಮುಗಿಸಿದ ನಂಬೀಸ ಮತ್ತು ರಫೀಕನ ಜನಗಳು ಕೆಲಸಕ್ಕೆ ಸಂಬಳವನ್ನೂ, ಇಲಿಬಿಲದ ರೇಷನ್ನನ್ನೂ, ಇಲಿಮಾಂಸವನ್ನೂ ಪಡೆಯುವಂತಾದರು. ಇಷ್ಟರಲ್ಲೇ ಚೆಂಗಾವಿಯ ಯಶಸ್ವಿ ಇಲಿನಿಯಂತ್ರಣದ ಕಥೆಗಳು ರೆಕ್ಕೆಪುಕ್ಕ ಕಟ್ಟಿಕೊಂಡು ಸುತ್ತಮುತ್ತಲೂರುಗಳಿಗೂ ಎಗರಿಕೊಂಡ ಪರಿಣಾಮವಾಗಿ ಆ ಊರುಗಳ ಕೃಷಿ ವಿಭಾಗೀಯ ಕಚೇರಿಗಳಿಗೂ ಅಲ್ಲಲ್ಲಿನ ರೈತರು ಚೆಂಗಾವಿಯ ಇಲಿಪ್ರಯೋಗವನ್ನು ತಮ್ಮ ಹೊಲಗಳ ಮೇಲೂ ಪ್ರಯೋಗಿಸಬೇಕೆಂಬ ಒತ್ತಡ ಕಿತ್ತುಕೊಂಡಿತ್ತು. ಕೃಷಿ ವಿಶ್ವವಿದ್ಯಾಲಯದ ಇಲಿ ಸಂಶೋಧಕ ಪುಗಳೇಂದಿಯ ಶಿಫಾರಸ್ಸಿನಂತೆ ಮಂಕಾಳಿಯ ತಂಡಕ್ಕೆ ಬೇರೆ ಊರುಗಳ ಇಲಿಟೆಂಡರೂ ಸಿಕ್ಕು ಚೆಂಗಾವಿಯಲ್ಲಿ ಒಂದಷ್ಟು ತಿಂಗಳ ಕೆಳಗೆ ಎಡಗಾಲ ಚಪ್ಪಲಿಯೋಪಾದಿಯಲ್ಲಿ ನೋಡಲ್ಪಡುತ್ತಿದ್ದ ಪುನರ್ವಸಿತರು ಇದ್ದಕ್ಕಿದ್ದಂತೆ ಗದ್ದೆಇಲಿಗಳನ್ನು ಠಣ್ಣನೆ ಮಾಯ ಮಾಡುವ ಶಕ್ತಿಯಿರುವ ಮಂತ್ರದ ಮಡಕೆಯಿಟ್ಟುಕೊಂಡಿರುವ ಕಲ್ಲುದೇವರಂತೆ ನೋಡಲ್ಪಡತೊಡಗಿದರು.

ಆವತ್ತಿನಿಂದ ಮಂಕಾಳಿಯ ಇಲಿಹರಣ ಪಡೆಯ ಸದಸ್ಯರು ಇಲಿಯಬಾಲದ ಗೊಂಚಲುಗಳನ್ನು ಹಿಡಿದು ಖುಷಿಖುಷಿಯಿಂದ ಓಡಾಡುವುದನ್ನು ಮಂಕಾಳಿ ಎಷ್ಟು ಹೆಮ್ಮೆಯಿಂದ ನೋಡುತ್ತಿದ್ದನೆಂದರೆ, ಅವನ ಗಿಣಿಯಾಪಾರ, ಕುಲಪರಂಪರೆಯ ಘನತೆ, ಜಮೈಕಾದೇಶದ ಗಿಣಿಸಾಮ್ರಾಜ್ಯದ ಕೊನೆಯ ಸಂತತಿಯೆಂಬ ಹೆಮ್ಮೆ.. ಇವೆಲ್ಲವುಗಳಿಗಿಂತಲೂ, ಕೆಲಸ ಮುಗಿದ ಮೇಲೆ ರಾತ್ರೆಹೊತ್ತು ಇರುಳರ ನಂಬೀಸನು ಬೇಯಿಸಿಹಾಕುವ ಇಲಿಮಾಂಸದೂಟದ ಪರಿಮಳವೇ ದೊಡ್ಡದೆಂದು ಕಂಡಿತ್ತು. ಆದರೆ ಈಗ ದಕ್ಕಿಸಿಕೊಂಡಿರುವ ಕೆಲಸ ಮತ್ತು ಘನತೆಯು ಬಹಳಕಾಲ ಉಳಿಯುವಂಥದಲ್ಲ, ಇಲಿಕಾಟ ಇರುವತನಕ ಮಾತ್ರ ತಮ್ಮ ಪ್ರಾಮುಖ್ಯತೆಗೆ ಅಸ್ತಿತ್ವವಿದ್ದು ಒಂದೊಮ್ಮೆ ಇಲಿವರಾತವು ಮುಗಿಯಿತೆಂದಾದಾಗ ತಮ್ಮ ಕತೆಯೂ ಮುಗಿಯಲಿದೆಯೆಂಬುದನ್ನು ಎಲ್ಲರಿಗಿಂತ ಮೊದಲು ಅರ್ಥ ಮಾಡಿಕೊಂಡಿದ್ದ ಮಂಕಾಳಿಯು ಅದಕ್ಕೂ ಒಂದು ಆಪತ್ಕಾಲದ ಪ್ಲಾನು ಹೊಸೆದುಕೊಂಡಿದ್ದನು. ಅದರಂತೆ ತಾವು ಎಲ್ಲಿಂದ ಕಸುಬು ಶುರು ಮಾಡಿದ್ದರೋ ಕರೆಕ್ಟಾಗಿ ಅದೇ suicide-paintingಊರಿನ ಗದ್ದೆಗಳಲ್ಲಿ ಕಟಾವಿಗಿಂತ ಮುಂಚೆ ಇಲಿಗಳನ್ನು ಅವನೇ ಬಿಟ್ಟು ಇಲಿವರಾತವು ಮತ್ತೆ ಹುಟ್ಟಿಕೊಳ್ಳುವಂತೆ ವ್ಯವಸ್ಥೆ ಮಾಡಿಕೊಂಡಿದ್ದನು. ಅತ್ತ ಒಂದೂರಿನಲ್ಲಿ ಕೆಲಸ ಮುಗಿಯುತ್ತಿದಂತೆ ಇನ್ನೊಂದೂರಿಗೆ ಕರೆ ಬರುತ್ತಿತ್ತಲ್ಲ, ಅದೇ ಟೈಮಿಗೆ ಈಗಾಗಲೇ ಹಿಂದೆಯೇ ಬಗೆಹರಿಸಿದ್ದ ಹೊಲಗಳಲ್ಲಿ ಮತ್ತೆ ಇಲಿರೋಧನೆ ಶುರುವಾಗುವಂತೆ ನೋಡಿಕೊಳ್ಳಿಕೊಳ್ಳುತ್ತಿದ್ದ ಅವನು, ಕೆಲಸದ ಬೇಡಿಕೆ ಮತ್ತು ಪೂರೈಕೆ ಎರಡೂ ಸಮಾನಾಂತರರೇಖೆಯಲ್ಲೇ ಎದುರುಬದುರು ಚಲಿಸುವಂತೆ ವ್ಯವಸ್ಥೆ ಮಾಡಿಕೊಂಡಿದ್ದ. ರೈತರಿಗೆ ಮತ್ತು ಕೃಷಿಅಧಿಕಾರಿಗಳಿಗೆ ಯಾವತ್ತೂ ಬೇಕಾದ ಆಪದ್ಭಾಂಧವರಾಗಿ ತನ್ನನ್ನು ಮತ್ತು ತನ್ನ ತಂಡವನ್ನು ಕಟ್ಟಿಕೊಂಡಿದ್ದಕ್ಕೆ ಅವನೊಳಗೆ ತಾವೆಲ್ಲಿ ಅಪ್ರಸ್ತುತರಾಗುತ್ತೇವೋ ಎಂಬ ದೂರದ ಭಯವೂ ಕಾರಣವಾಗಿತ್ತು. ಒಂದೆಡೆ ಸಮಸ್ಯೆ ಇನ್ನೊಂದೆಡೆ ಪರಿಹಾರವೆಂಬ ಎರಡನ್ನೂ ಜೀವಂತವಿರಿಸಿಕೊಳ್ಳುವ ಕಿರಾತಕ ಪ್ಲಾನುಗಳನ್ನು ಅತ್ಯಂತ ಯಶಸ್ವಿಯಾಗಿಯೇ ನಡೆಸಿಕೊಂಡು ಬಂದ ಮಂಕಾಳಿಯ ಬಗ್ಗೆ ಮೊದಲ ಡೌಟು ಹುಟ್ಟಿದ್ದೇ ಪುಗಳೇಂದಿಗೆ.

ಒಂದೆಡೆಯಲ್ಲಿ ಕಂಟ್ರೋಲಿಗೆ ಬರುತ್ತಿದ್ದ ಇಲಿವರಾತವು ಮತ್ತೊಂದೆಡೆ ಭುಗಿಲೆದ್ದು, ಅದು ಮುಗಿಯುವುದರೊಳಗೆ ಮತ್ತೆ ಮೂಲಸಮಸ್ಯೆಯು ಅದರ ಅಷ್ಟೂ ಪ್ರಬಲತೆಯೊಟ್ಟಿಗೆ ಹಳೆವೂರುಗಳಲ್ಲಿ ತೊಡೆತಟ್ಟಿಕೊಂಡು ಎದ್ದು ಕುಳಿತುಕೊಳ್ಳುವುದರ ಹಿಂದೆ ಏನೋ ಇರುವಂತಿದೆಯಲ್ಲ ಎಂಬುದರ ವಾಸನೆ ಹಿಡಿದ ಪುಗಳೇಂದಿಯು ಮಂಕಾಳಿಯನ್ನು ಒಮ್ಮೆ ಕರೆಸಿಕೊಂಡು ಈ ಬಗ್ಗೆ ವಿಚಾರಿಸಿದ್ದನು.  ಮಂಕಾಳಿಯ ಬಳಿಯಿಂದ ಅವನ ಖತರನಾಕು ತಂತ್ರವನ್ನು ಬಾಯಿಬಿಡಿಸಿಕೊಂಡ ಪುಗಳೇಂದಿಗೆ ಇದನ್ನು ಯಾವ ನೈತಿಕೆತೆಯ ತಕ್ಕಡಿಯಲ್ಲಿಟ್ಟು ತೂಗುವುದೆಂಬ ಗೊಂದಲವೆದ್ದಿದ್ದು ನಿಜ. ದೆಹಲಿಯ ಮೇನಕಮ್ಮನ ಪ್ರಾಣಿಪ್ರೇಮವು ಪ್ರಾಣಿಪಕ್ಷಿಗಳನ್ನೇ ಪರಂಪರಾನುಗತವಾಗಿ ನಂಬಿಕೊಂಡು ಬದುಕುತ್ತಿರುವ ಈ ದೇಶದ ಸಾವಿರಗಟ್ಟಲೆ ಸಮುದಾಯಗಳನ್ನು ಬಲಿಹಾಕುವುದು ನೈತಿಕತೆಯೋ, ರೈತರು ಮತ್ತು ಸರ್ಕಾರಿ ಅಧಿಕಾರಿಗಳ ಕಣ್ಣಿಗೆ ಒಂದೇಸಲ ಮಣ್ಣೆರಚುತ್ತಿರುವ ಮಂಕಾಳಿಯ ಇಲಿನಿಯಂತ್ರಣ ಯೋಜನೆಯ ತಂತ್ರೋಪಾಯಗಳು ನೈತಿಕತೆಯೋ ಎಂಬ ಬಗ್ಗೆ ಗೊಂದಲಕ್ಕೆ ಬಿದ್ದ ಅವನಿಗೆ ಯಾವುದು ಅರ್ಥವಾಗದಿದ್ದರೂ ಅಕ್ಷರ-ಪುಸ್ತಕಗಳನ್ನು ಹರಿದುತಿಂದು ಅದನ್ನೇ ಉಸಿರಾಡುವ ಬುದ್ದಿವಂತರು ಮಂಕಾಳಿಯೆದುರು ಇಟ್ಟ ಬೋನಿಗೆ.. ಯಾವ ಸುಳಿವೂ ಇಲ್ಲದೇ, ಅವರೇ ಬಿದ್ದಿದ್ದಾರಲ್ಲ ಎಂಬುದಂತೂ ಸ್ಪಷ್ಟವಾಗಿ ಅರ್ಥವಾಗಿತ್ತು.

***

ಹೆಸರಾಯಿತು ಕರ್ನಾಟಕ.. ಉಸಿರಾಗಲಿಲ್ಲ ಕನ್ನಡ..!


– ಡಾ.ಎಸ್.ಬಿ. ಜೋಗುರ


 

 

ಕಾವೇರಿಯಿಂದಮಾ ಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಾಪದಂ ವಸು
ಧಾವಲಯವಿಲೀನ ವಿಶದ ವಿಷಯ ವಿಶೇಷಂ

ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ವಿಸ್ತರಿಸಿತ್ತು ಎನ್ನುವುದನ್ನು ಕವಿ ನೃಪತುಂಗ ವರ್ಣಿಸಿರುವ ಹಾಗೆ ಚಾರಿತ್ರಿಕವಾಗಿ ಮಾತನಾಡುವದಾದರೆ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂದ್ರಪ್ರದೇಶ ಮುಂತಾದ ರಾಜ್ಯಗಳ ಗಡಿ ಭಾಗಗಳಲ್ಲಿ ಕನ್ನಡದ ಸೀಮೆಗಳಿರುವುದು ವಿಧಿತವಾಗುತ್ತದೆ. ಅದರ ಪರಿಣಾಮವಾಗಿಯೇ ನಾವು ಇವತ್ತಿನವರೆಗೂ ಕನ್ನಡ ಭಾಷೆಯನ್ನು ಗಟ್ಟಿಯಾಗಿ ಬೆಳೆಸುವ ಬಗ್ಗೆ ಆಲೋಚಿಸುವ, ಮಾತನಾಡುವ ಸ್ಥಿತಿ ಎದುರಾಗಿದೆ. ಕರ್ನಾಟಕದ ಏಕೀಕರಣದ ಸಂದರ್ಭದಿಂದಲೂ ಒಂದಿಲ್ಲಾ ಒಂದು ರೀತಿಯ ಅಪಸ್ವರಗಳು ನಾಡಿನ ಏಕೀಕರಣದ ಬಗ್ಗೆ ಮತ್ತು ಮೈಸೂರು ರಾಜ್ಯ ಇದ್ದದ್ದು ಕರ್ನಾಟಕವಾಗಿ ಮರು ನಾಮಕರಣಗೊಳ್ಳುವವರೆಗಿನ ಬೆಳವಣಿಗೆಗಳು ಮಾತ್ರವಲ್ಲದೇ, ಸದ್ಯದ ಜಾಗತೀಕರಣದ ಸಂದರ್ಭದಲ್ಲಿಯೂ ನಾವು ನಾಡ Karnataka mapನುಡಿಯ ಸಂರಕ್ಷಣೆ ಬಗ್ಗೆ ಆಲೋಚಿಸಬೇಕಾಗಿದೆ. ನವಂಬರ್ ೧-೧೯೫೬ ರ ಸಂದರ್ಭದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡಿನ ಭಾಗಗಳನ್ನು ಒಂದುಗೂಡಿಸಿ ಮೈಸೂರು ರಾಜ್ಯ ಎನ್ನುವ ಹೆಸರಿನಲ್ಲಿ ಕನ್ನಡ ರಾಜ್ಯ ಉದಯವಾಯಿತು. ಆ ಸಂದರ್ಭದಲ್ಲಿ ಕನ್ನಡದ ಕಟ್ಟಾಳು ಎಂದೇ ಕರೆಯಿಸಿಕೊಳ್ಳುತ್ತಿದ್ದ ಕೃಷ್ಣ ಕುಮಾರ ಕಲ್ಲೂರ ಅವರು ಪಾಟೀಲ ಪುಟ್ಟಪ್ಪನವರಿಗೆ ಒಂದು ಪತ್ರ ಬರೆದಿದ್ದರು [ ಸಮಗ್ರ ಪಾಪು ಪ್ರಪಂಚ- ಸಂಪುಟ ೩ ಪುಟ ೨೧೩] ‘ಕರ್ನಾಟಕ ಎನ್ನುವ ಹೆಸರಿಲ್ಲದ, ಹಂಪೆಯು ರಾಜಧಾನಿಯಲ್ಲದ, ಈ ರಾಜ್ಯವು ನನಗೆ ಕರ್ನಾಟಕವೇ ಅಲ್ಲ. ಎಲ್ಲಿಯೋ ನಿಮ್ಮಂಥ ಕೆಲವರು, ಪಂಡರೀಕನಿಗೋಸುಗ ಪರಿತಪಿಸುವ ಮಹಾಶ್ವೇತೆಯಂತೆ, ಕರ್ನಾಟಕ ಎಂದು ಬಡಬಡಿಸುತ್ತ ಕುಳಿತಿದ್ದೀರಿ’ ಎಂದು ಬರೆದಿದ್ದರು. ಈ ಬಗೆಯ ಅಸಮಾಧಾನ ಅನೇಕರಲ್ಲಿ ಇದ್ದ ಕಾರಣದಿಂದಲೇ ೧೯೭೩ ರ ಸಂದರ್ಭದಲ್ಲಿ “ಕರ್ನಾಟಕ” ಎಂದು ಮರು ನಾಮಕರಣವಾಯಿತು. ಆ ನಾಮಕಾರಣಕ್ಕಾಗಿ ದಾವಣಗೇರಿಯ ಕೆ.ಎಮ್.ರುದ್ರಪ್ಪನಂಥವರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೂ ಅದರ ಕೊಡುಗೆ ಸಂದದ್ದು ಆಗಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರಿಗೆ. ಕರ್ನಾಟಕ ಎಂಬ ಹೆಸರಿನ ಬಗ್ಗೆ ಅಷ್ಟಕ್ಕಷ್ಟೇ ಮನಸಿದ್ದ ದೇವರಾಜ ಅರಸರಿಗೆ ಆ ಕ್ರೆಡಿಟ್ ಹೋದ ಬಗ್ಗೆಯೂ ಪಾಟೀಲ ಪುಟ್ಟಪ್ಪ ತಮ್ಮ ಕೃತಿಯಲ್ಲಿ ವಿಷಾದ ವ್ಯಕ್ತ ಪಡಿಸಿರುವದಿದೆ. ಕರ್ನಾಟಕದ ಏಕೀಕರಣ ಚಳುವಳಿ ಜರುಗಿ ಆರು ದಶಕಗಳಾದರೂ ಇಂದಿಗೂ ನಾವು ಕನ್ನಡದ ಸ್ಥಿತಿ ಗತಿಯ ಬಗ್ಗೆ ಮತ್ತು ಕನ್ನಡ ನಾಡು-ನುಡಿಯ ಬಲಸಂವರ್ಧನೆಯ ಬಗೆಗಿನ ಮಾತುಗಳು ಕೇಳಿ ಬರುತ್ತಿವೆ ಎನ್ನುವುದೇ ಬಹು ದೊಡ್ಡ ವಿಪರ್ಯಾಸ. ಯಾವ ಮಟ್ಟದಲ್ಲಿ ಕನ್ನಡ ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ಬಲಗೊಳ್ಳಬೇಕೋ ಅದು ಸಾಧ್ಯವಾಗುತ್ತಿಲ್ಲ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇಲ್ಲವೇ ಗಡಿ ಭಾಗಗಳಲ್ಲಿ ಕುತ್ತು ಬರಲಿದೆ ಎಂದಾಗ ಒಂದಷ್ಟು ಕನ್ನಡದ ಕಟ್ಟಾಳುಗಳು ಮಾತಾಡುವುದು, ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟರೆ ಮಿಕ್ಕಂತೆ ಮತ್ತೆ ಕನ್ನಡದ ಅಳಿವು ಉಳಿವಿನ ಪ್ರಶ್ನೆ ಮತ್ತು ಚರ್ಚೆ ಮತ್ತೊಂದು ರಾಜ್ಯೋತ್ಸವದ ಸಂದರ್ಭದಲ್ಲಿಯೇ.. ಅಷ್ಟಕ್ಕೂ ನಮ್ಮ ನೆಲದ ಭಾಷೆಯ ಬಗ್ಗೆ, ಅದರ ಸಂರಕ್ಷಣೆಯ ಬಗೆಗೆ ತನ್ನದೇ ನೆಲದಲ್ಲಿ ಹೀಗೆ ಉಳಿವು, ಬಲ ಸಂವರ್ಧನೆಯ ಬಗ್ಗೆ ಮಾತಾಡಬಂದದ್ದು ಕನ್ನಡ ಭಾಷೆಯ ಬಹುದೊಡ್ದ ವ್ಯಂಗ್ಯವೂ ಹೌದು. ಶಾಸ್ತ್ರೀಯ ಸ್ಥಾನಮಾನ ಸಿಕ್ಕನಂತರ ಭಯಂಕರ ಬದಲಾವಣೆಗಳಾಗುತ್ತವೆ. ಒಂದು ಹೊಸ ಬಗೆಯ ಪುಷ್ಟಿ ಕನ್ನಡ ಭಾಷೆಗೆ ದೊರೆಯುತ್ತದೆ ಎನ್ನುವ ಮಾತುಗಳೀಗ ಕನ್ನಡ ಭಾಷೆ ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದೆ ಎನ್ನುವಂತಾಗಿದೆ. ಯಾವುದೇ ಒಂದು ಪ್ರಾದೇಶಿಕ ಭಾಷೆ ಬಲಗೊಳ್ಳುವುದು ಅದರ ದೈನಂದಿನ ವ್ಯವಹಾರಿಕ ಬಳಕೆಯ ಮಹತ್ವದ ಮೂಲಕವೇ ಹೊರತು ಭಾಷಣಗಳ ಮೂಲಕ..ಘೋಷಣೆಗಳ ಮೂಲಕವಲ್ಲ.

ಕನ್ನಡಕ್ಕೆ ಆಧುನಿಕ ಸಂದರ್ಭಲ್ಲಿ ಇನ್ನಷ್ಟು ತೊಡಕುಗಳು ಎದುರಾದಂತಿವೆ. ಜಾಗತೀಕರಣದ ಸಂದರ್ಭದಲ್ಲಿ ಈ ಪ್ರಾದೇಶಿಕ ಭಾಷೆಗಳು ಕೇವಲ ಅವರವರ ಮನೆಗೆ ಮಾತ್ರ ಸೀಮಿತವಾಗಿ ಉಳಿಯುವ ಸ್ಥಿತಿ ಬಂದೊದಗಿದೆ. ಜಾಗತೀಕರಣ ಆಂಗ್ಲ ಭಾಷೆ ಬಲ್ಲವರನ್ನು ಮಾತ್ರ ಎತ್ತಿಕೊಳ್ಳುತ್ತದೆ ಎನ್ನುವದನ್ನು ಮತ್ತೆ ಮತ್ತೆ ಎತ್ತಿ ಹೇಳಲಾಗುತ್ತದೆ. ಜೊತೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದ ಮಿತಿಗಳಿವೆ ಎನ್ನುವ ಮೂಲಕ ಪರೊಕ್ಷವಾಗಿ ಈ ಭಾಷೆಯನ್ನು ಮನೆಯ ಹೊರಗಡೆ ಬೆಳೆಸುವ ಯತ್ನಗಳು ಅಷ್ಟಾಗಿ ನಡೆಯುತ್ತಿಲ್ಲ. ಇನ್ನು ಕಾನ್ವೆಂಟ್ ಶಿಕ್ಷಣ ಪಡೆಯುವ ಒಂದು ದೊಡ್ಡ ತಲೆಮಾರಿಗೆ ಕನ್ನಡದ ಬಗ್ಗೆ ಅಲರ್ಜಿ. ಅವರಿಗೆ ನಾಲ್ಕು ಕನ್ನಡ ಲೇಖಕರ ಹೆಸರುಗಳ ಬಗ್ಗೆಯಾಗಲೀ, ಅವರ ಕೃತಿಗಳ ಬಗ್ಗೆಯಾಗಲೀ ತಿಳಿದಿಲ್ಲ. ಅವರು ಕನ್ನಡದಲ್ಲಿ ಮಾತಾಡುವುದೇ ಕನಿಷ್ಟ ಎಂದು ತಿಳಿದವರು.

ನಗರ ಪ್ರದೇಶಗಳಲ್ಲಿ ದೈಹಿಕ ಪರಿಶ್ರಮದ ವ್ಯವಹಾರಗಳನ್ನು ಅವಲಂಬಿಸಿರುವವನು ಕೂಡಾ ಆಂಗ್ಲ ಭಾಷೆಯಲ್ಲಿ ವ್ಯವಹರಿಸುವ ಅಗತ್ಯವಿದೆಯೇ..? Flag_of_Karnatakaಅಷ್ಟಕ್ಕೂ ಅವನು ವ್ಯವಹರಿಸುತ್ತಿರುವುದು ತನ್ನದೇ ನೆಲದ ಜನರೊಡನೆ ಎನ್ನುವುದನ್ನು ಮರೆಯುವಂತಿಲ್ಲ. ಇನ್ನು ಕೆಲ ಕಡೆಗಳಲ್ಲಿ ನಮ್ಮ ಪ್ರಾದೇಶಿಕತೆಯ ಒಳಗಡೆಯೇ ಜನ್ಮ ಪಡೆದ ತೀರಾ ಸಣ್ಣ ಪುಟ್ಟ ಸ್ಥಳೀಯ ಭಾಷೆಗಳು ಕೂಡಾ ಕನ್ನಡ ಭಾಷೆಗೆ ತಕ್ಕ ಮಟ್ಟಿಗೆ ತೊಡಕಾಗಿವೆ.. ಆಗುತ್ತಿವೆ. ಉದಾಹರಣೆಗೆ ಮಂಗಳೂರು ಭಾಗದಲ್ಲಾದರೆ ತುಳು ಮತ್ತು ಕೊಂಕಣಿ, ಕಾರವಾರದಲ್ಲಿ ಕೊಂಕಣಿ, ಬೆಳಗಾವಿಯಲ್ಲಿ ಮರಾಠಿ, ಗುಲಬರ್ಗಾ ಮತ್ತು ಬಿಜಾಪುರ ಭಾಗದಲ್ಲಿ ಉರ್ದು, ಬಳ್ಳಾರಿಯಲ್ಲಿ ತೆಲುಗು, ಬೆಂಗಳೂರಲ್ಲಿ ನೆರೆಯ ರಾಜ್ಯದ ತಮಿಳು, ತೆಲುಗು ಹೀಗೆ ಇತರೆ ಭಾಷೆಗಳು ಕನ್ನಡದ ಮೇಲೆ ಸವಾರಿ ಮಾಡುವ ಮೂಲಕ ಅದರ ಬೆಳವಣಿಗೆಯನ್ನು ಇನ್ನಷ್ಟು ಕುಂಠಿತಗೊಳಿಸಲಾಗುತ್ತಿದೆ. ಈ ನಮ್ಮದೇ ನೆಲದ ಸಣ್ಣ ಪುಟ್ಟ ಭಾಷೆಗಳಾದ ಕೊಂಕಣಿ, ತುಳು, ಕೊಡವ ಮುಂತಾದ ಭಾಷೆಗಳನ್ನು ಉಳಿಸಿಕೊಂಡು ಕನ್ನಡವನ್ನು ಬೆಳೆಸುವ ಬಗ್ಗೆ ಯೊಚಿಸಬೇಕಾಗಿದೆ. ೧೮೯೦ ರ ಸಂದರ್ಭದಲ್ಲಿ ಕನ್ನಡಕ್ಕಾಗಿಯೇ ಕೈ-ಮೈ ಎತ್ತಲು ಜನ್ಮ ತಳೆದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಅಂದಿನಿಂದ ಇಂದಿನವರೆಗೂ ಕನ್ನಡ ನಾಡು-ನುಡಿಯ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸುತ್ತ ಬಂದಿದೆ. ಅದು ಹುಟ್ಟುವದಕ್ಕಿಂತಾ ಎರಡು ದಶಕಗಳ ಮುಂಚೆಯೇ ಡೆಪ್ಯುಟಿ ಚನ್ನಬಸಪ್ಪನಂಥವರು ಕನ್ನಡದ ಶ್ರೇಯೋಭಿವೃದ್ಧಿಗಾಗಿ ಕಂಕಣ ಕಟ್ಟಿದ್ದರು. ಹುಯಿಲಗೋಳ ನಾರಾಯಣರಾವ, ಆಲೂರ ವೆಂಕಟರಾಯ, ಅಂದಾನಪ್ಪ ದೊಡ್ದಮೇಟಿ, ಅದರಗುಂಚಿ ಶಂಕರಗೌಡ, ರಾ.ಹ.ದೇಶಪಾಂಡೆ ಮುಂತಾದವರು ನಾಡು ನುಡಿಗಾಗಿ ಹಗಲಿರುಳು ಶ್ರಮಿಸಿದವರು.

ಕನ್ನಡ ಭಾಷೆ ಶಿಕ್ಷಣ ಮತ್ತು ಉದ್ಯೋಗದ ಭಾಷೆಯಾಗಬೇಕೆನ್ನುವ ಕೂಗು ಇಂದು ನೆನ್ನೆಯದಲ್ಲ. ೧೯೩೯ ರ ಸಂದರ್ಭದಲ್ಲಿ ಅಂದಿನ ವಿದ್ಯಾಂಮತ್ರಿಗಳಾಗಿದ್ದ ಡಾ ಸುಬ್ಬರಾಯ ಅವರು ಮಂಗಳೂರಿನ ಕಾರ್ಯಕ್ರಮ ಒಂದರಲ್ಲಿ ಭಾಗವಾಹಿಸಿ ಮಾತನಾಡುತ್ತಾ ‘ಸ್ಥಳೀಯ ಭಾಷೆಯೇ ಶಿಕ್ಷಣ ಭಾಷೆಯಾಗಬೇಕು. ದಕ್ಷಿಣ ಕನ್ನಡದ ಎಲ್ಲ ಶಾಲೆಗಳಲ್ಲಿಯೂ ಕನ್ನಡವನ್ನು ಶಿಕ್ಷಣ ಭಾಷೆಯಾಗಿ ಸ್ವೀಕರಿಸಬೇಕು. ಈ ನಿಯiಕ್ಕೆ ತಾತ್ಕಾಲಿಕವಾಗಿ ಅಪವಾದಗಳನ್ನು ತರಬಹುದಾಗಿದ್ದರೂ ಇಂದಲ್ಲದಿದ್ದರೆ ನಾಳೆ ಕನ್ನಡವನ್ನು ಒಪ್ಪಿಕೊಳ್ಳಲು ಸಕಲರೂ ಸಿದ್ಧರಿರಬೇಕು’ ಎಂದು ಕರಾರುವಕ್ಕಾಗಿ ಮಾತನಾಡಿದ್ದರು [ಕಡೆಂಗೋಡ್ಲು ಲೇಖನಗಳು -ಪು ೩೬೨] ನಾವು ಅತಿ ಮುಖ್ಯವಾಗಿ ವಾಸ್ತವದಲ್ಲಿ ನಿಂತು ಕನ್ನಡವನ್ನು ಕಟ್ಟುವ ಬಗ್ಗೆ ಆಲೋಚಿಸಬೇಕಿದೆ. ಕನ್ನಡ ಎನ್ನುವುದು ಉದ್ಯೋಗದ ಭಾಷೆಯಾಗಬೇಕು.ನಾಡಿನ ಯಾವುದೇ ಇಲಾಖೆಯ ಹುದ್ದೆಗಳಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಪ್ರಥಮ ಪ್ರಾಶಸ್ತ್ಯ ಕೊಡುವಂತಾಗಬೇಕು. ಒಂದು ಭಾಷೆ ಕೇವಲ ಸೆಂಟಿಮೆಂಟಲ್ ಆಗಿ ಬೆಳೆಸಲು ನೋಡುವುದು ಆ ಭಾಷೆಯ ಜಡತ್ವಕ್ಕೆ ಕಾರಣವಾಗಬಹುದಾದ ಸಾಧ್ಯತೆಗಳಿವೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಡಾ.ಪಾಟೇಲ ಪುಟ್ಟಪ್ಪ ಜೂನ್ ೧೧-೧೯೮೬ ರ ಸಂದರ್ಭದಲ್ಲಿಯೇ ನಾನು ಮೇಲೆ ಚರ್ಚಿಸಿದ ಭಾಷೆ ಮತ್ತು ಉದ್ಯೋಗದ ವಿಷಯವಾಗಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರಿಗೆ ಪತ್ರ ಬರೆದಿರುವದಿz. ಅದರ ಒಕ್ಕಣಿಕೆ ಹೀಗಿತ್ತು [ ಕನ್ನಡ ಕಾವಲು-ಸಂ ಡಾ.ಗುರುಲಿಂಗ ಕಾಪಸೆ ಪು-೯]

ಪ್ರಿಯ ಶ್ರೀ ರಾಮಕೃಷ್ಣ ಹೆಗಡೆಯವರಿಗೆ,

ಸಪ್ರೇಮ ವಂದನೆಗಳು.

ಆಡಳಿತದಲ್ಲಿ ಕನ್ನಡವನ್ನು ತರಬೇಕೆಂದು ಸರ್ಕಾರ ಉದ್ದೇಶಪಟ್ಟು ಆದೇಶಗಳನ್ನು ಹೊರಡಿಸಿದೆ.ಆದರೆ ಇದಕ್ಕೆ ಅನುಗುಣವಾಗಿ ಕೈಗೊಳ್ಳಬೇಕಾದ ಅನೇಕ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ಇನ್ನೂ ಬಾಕಿ ಉಳಿದಿದೆ. ಸರ್ಕಾರದ ನೇಮಕಾತಿ ಸಮಿತಿಗಳ ಮೂಲಕ ಎಲ್ಲಾ ಇಲಾಖೆಗಳಿಗೆ ಜನರನ್ನು ಆಯ್ಕೆ ಮಾಡಲಾಗುತ್ತಿದೆ. ಈರೀತಿ ಆಯ್ಕೆಯಾಗುವ ಜನರು ಕನ್ನಡ ಜ್ಞಾನವನ್ನು ಹೊಂದಿರಲೇಬೆಕೆಂಬ ನಿಬಂಧನೆ ಏನೂ ಇಲ್ಲ. ಈ ನೇಮಕಾತಿ ನಿಯಮಗಳಲ್ಲಿ ಈಕುರಿತು ನೀವು ಸೂಕ್ತ ಬದಲಾವಣೆಗಳನ್ನು ಮಾಡಿ ಕನ್ನಡದ ಜ್ಞಾನವು ಅತ್ಯಗತ್ಯವಾಗಿ ಇರಲೇಬೇಕೆಂದು ನೀವು ಅವುಗಳನ್ನು ಮಾರ್ಪಡಿಸಬೇಕು. ಇದು ರಾಜ್ಯದ ಎಲ್ಲಾ ಇಲಾಖೆಗಳ ನೇಮಕಾತಿಗೂ ಅನ್ವಯವಾಗಬೇಕು. ನೀವು ಈ ವಿಷಯವನ್ನು ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಮಾಲೋಚನೆ ಮಾಡಿ ಸಂಬಂಧಪಟ್ಟ ನೇಮಕಾತಿ ಸಮಿತಿಗಳಿಗೆ ಕೂಡಲೇ ಸೂಕ್ತ ತಿದ್ದುಪಡಿ ಮಾಡುವದರ ಕುರಿತು ಕ್ರಮ ಕೈಗೊಳ್ಳಬೇಕು. ಇದು ಯಾವುದೇ ಕಾರಣದಿಂದಲೂ ವಿಳಂಬ ಆಗಕೂಡದೆಂದು ನಾನು ನಿಮ್ಮನ್ನು ಪುನ: ಒತ್ತಾಯ ಮಾಡುತ್ತಿದ್ದೇನೆ.

ಪ್ರೀತಿ ಗೌರವಾದರಗಳೊಂದಿಗೆ
ನಿಮ್ಮವ
ಪಾಟೀಲ ಪುಟ್ಟಪ್ಪ

ಇಂಥಾ ಸಾವಿರಾರು ಪತ್ರಗಳನ್ನು ಕನ್ನಡದ ವಿಷಯವಾಗಿ ಪಾಪು ಬರೆದಿದ್ದಾರೆ. ೧೯೮೨ ರ ಸಂದರ್ಭದಲ್ಲಿ ಆರಂಭವಾದ ಗೋಕಾಕ ಚಳುವಳಿಯಂತೂ ಕನ್ನಡದ ಬಗೆಗಿನ ಅಭಿಮಾನದ ಮರುಹುಟ್ಟಿಗೆ ಕಾರಣವಾಯಿತು. ಕನ್ನಡದ ಧೀಮಂತ ಕವಿಗಳು, ಸಾಹಿತಿಗಳು, ಸಂಘಟನೆಗಳು, Kavi_kannadaಕ್ರಿಯಾ ಸಮಿತಿಗಳು, ಪ್ರಾಧಿಕಾರಗಳು ನಿರಂತರವಾಗಿ ಕನ್ನಡವನ್ನು ಬೆಳೆಸುವಲ್ಲಿ ಪ್ರಯತ್ನಿಸುತ್ತಿರುವರಾದರೂ ಮತ್ತೂ ಪ್ರಯತ್ನ ಸಾಲದು ಎನ್ನುವ ಭಾವ ಬರುವಂತಾಗಲು ಕಾರಣ ತಳಮಟ್ಟದ ಯತ್ನಗಳ ಕೊರತೆಯೇ ಆಗಿದೆ. ಕನ್ನಡ ಭಾಷೆ ಸಾವಿರಾರು ವರ್ಷಗಳ ಚರಿತ್ರೆಯನ್ನು ಹೊಂದಿದ್ದರೂ ಅದು ಬಲಗೊಳ್ಳಲು ಆ ಭಾಷೆಯನ್ನು ಮಾತನಾಡುವ ಜನರಿಗೆ ದೊರಕಬೇಕಾದ ಭಾಷೀಕರಣದ ದೀಕ್ಷೆ ಅಚ್ಚುಕಟ್ಟಾಗಿ ಜರುಗದಿರುವದು ಕೂಡಾ ಅದಕ್ಕೆ ಇನ್ನೊಂದು ಕಾರಣ. ಯಾವುದೇ ಒಂದು ಭಾಷೆ ಜನಾಸಮುದಾಯದ ದೈನಂದಿನ ಅಗತ್ಯವಾಗಿ ಪರಿಣಮಿಸಿದರೆ ಮಾತ್ರ ಅದು ಬಲಗೊಳ್ಳಲು ಸಾಧ್ಯ, ಇಲ್ಲದಿದ್ದರೆ ಕೇವಲ ಆ ಹೊತ್ತಿನ ಒಂದು ಅಗತ್ಯವಾಗಿ ವಾರ್ಷಿಕ ದಿನಾಚರಣೆಯ ಚರ್ಚೆಯ ಭಾಗವಾಗಿ ಉಳಿಯುವ ಸಾಧ್ಯತೆಯಿದೆ. ಆ ದಿಸೆಯಲ್ಲಿ ಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕೂಡಾ ಮಹತ್ತರವಾದ ಕೆಲಸಗಳನ್ನು ಮಾಡಿದಂತಿಲ್ಲ. ಜಾತ್ರೆಗಳ ರೂಪದಲ್ಲಿ ಸಮ್ಮೇಳನ ಸಂಘಟಿಸುವದನ್ನು ಹೊರತು ಪಡಿಸಿದರೆ ನಾಡು-ನುಡಿಗಾಗಿ ಒಂದು ಚಾರಿತ್ರಿಕವಾಗಿ ಗುರುತಿಸಬಹುದಾದ ಕೆಲಸಗಳನ್ನು ಮಾಡಿದ್ದು ತೀರಾ ಅಪರೂಪವೇನೋ..? ಕನ್ನಡ ಭಾಷೆ ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಅನೇಕ ಬಗೆಯ ಸವಾಲುಗಳಿಗೆ ಒಡ್ಡಿಕೊಳ್ಳುತ್ತಲೇ ಬೆಳೆಯುವ, ಗಟ್ಟಿಗೊಳ್ಳುವ ದಿಶೆಯತ್ತ ಹೆಜ್ಜೆಹಾಕಬೇಕಿದೆ. ಅತಿ ಮುಖ್ಯವಾಗಿ ಕಲಿಕಾ ಮಧ್ಯಮವೊಂದು ವ್ಯಾಪಕವಾಗಿ ಕನ್ನಡ ಮಾಧ್ಯಮವಾಗಿಬಿಟ್ಟರೆ ಕನ್ನಡ ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಾತಿನಿಧಿಕ ಸಂಸ್ಥೆಗಳಿಗೆ ಟಾನಿಕ್ ನ ಅವಶ್ಯಕತೆಯಿಲ್ಲ.