ಕೇವಲ ಒಂದು ಜಾಕೆಟ್, ಟೋಪಿ ಮತ್ತು ಒಂದು ಗುಲಾಬಿ

– ಇಂಗ್ಲೀಷ್ : ಸಾಬಾ ನಕ್ವಿ
– ಅನುವಾದ: ಬಿ.ಶ್ರೀಪಾದ ಭಟ್

೧೯೯೧ರಲ್ಲಿ ಸೋವಿಯತ್ ಯೂನಿಯನ್ ಗಣರಾಜ್ಯ ವ್ಯವಸ್ಥೆ ಕುಸಿದು ಬಿದ್ದಾಗ ಜನಸಮೂಹವು ಲೆನಿನ್ ಮತ್ತು ಜೋಸೆಫ್ ಸ್ಟಾಲಿನ್ ಅವರ ಪ್ರತಿಮೆಗಳನ್ನು ಕೆಡವಿ ಧ್ವಂಸಗೊಳಿಸಿದರು. ಸೋವಿಯತ್‌ನ ನಾಗರಿಕರ ಆಕ್ರೋಶ ಮತ್ತು ಕೋಪ ಎಷ್ಟಿತ್ತೆಂದರೆ ಆ ಪ್ರತಿಮೆಗಳನ್ನು ಅವುಗಳ ಪೀಠದಿಂದ ನೆಲಕ್ಕೆ ಕೆಡವಿ, ಕಲ್ಲುಗಳನ್ನು ತೂರಿ ಉನ್ಮಾದದಿಂದ ವರ್ತಿಸಿದರು. ನಂತರ ವಿರೂಪಗೊಂಡ ಆ ಪ್ರತಿಮೆಗಳನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ, ಅದಕ್ಕಂಟಿದ ಧೂಳನ್ನು ಕೊಡವಿ ಆಧುನಿಕ ಪ್ರತಿಮೆಗಳೊಂದಿಗೆ ಲೆನಿನ್, ಸ್ಟಾಲಿನ್‌ರ ದುರಸ್ತಿಗೊಂಡ ಪ್ರತಿಮೆಗಳನ್ನು ಮಾಸ್ಕೋ ಪಾರ್ಕನಲ್ಲಿ ಮರಳಿ ಸ್ಥಾಪಿಸಲಾಯಿತು. ಆದರೆ ಈ ಲೆನಿನ್ ಮತ್ತು ಸ್ಟಾಲಿನ್ ಪ್ರತಿಮೆಗಳನ್ನು ಹಿಂದಿನಂತೆ ಸೋವಿಯತ್‌ನ ಎತ್ತರದ ಪೀಠಗಳಲ್ಲಿ ಆ ಗತಕಾಲದ ವೈಭವದೊಂದಿಗೆ ಮರಳಿ ಸ್ಥಾಪಿಸಲು ಮಾತ್ರ ಸಾಧ್ಯವಾಗಲಿಲ್ಲ.

ನರೇಂದ್ರ ಮೋದಿಯ ಅಧಿಕಾರದ ಕಡೆ ಎತ್ತರೆತ್ರಕ್ಕೆ ಏರುತ್ತಿರುವುದು ಮತ್ತು ಆ ಅಧಿಕಾರವು ಏಕವ್ಯಕ್ತಿ ಕೇಂದ್ರಿತ, ಏಕಪಕ್ಷ ಕೇಂದ್ರಿತ ವ್ಯವಸ್ಥೆಯ ಕಡೆಗೆ ನೆಲೆಗೊಳ್ಳತೊಡಗಿರುವುದರ ಕುರಿತಾಗಿ ಯಾವುದೇ ಅನುಮಾನ ಇಟ್ಟುಕೊಳ್ಳುವ ಅಗತ್ಯವಿಲ್ಲ. ಇದೇ ಸಂದರ್ಭದಲ್ಲಿ ಇಂಡಿಯಾದ ಚುನಾವಣಾ ರಾಜಕಾರಣದ ಸಿನಿಕತನದಿಂದಾಗಿ ಮತ್ತು ನೆಹರೂ ಸಂತತಿಯ ದೋಷಪೂರಿತ ಮತ್ತು ಊಹಾತೀತ ಆಡಳಿತದ ಕಾರಣಕ್ಕಾಗಿ ಇಂದು ನೆಹ್ರೂವಿಯನ್ ಐಡಿಯಾಲಜಿಗಳು ಮತ್ತು ಆದರ್ಶಗಳು ಟೊಳ್ಳಾಗಿರುವುದನ್ನೂ ನಾವು ಒಪ್ಪಿಕೊಳ್ಳಲೇಬೇಕಾಗಿದೆ. ಕಾಲವು ಬದಲಾಗುತ್ತಿದೆ, ಸಂಗತಿಗಳೂ ಬದಲಾಗುತ್ತಿವೆ ಮತ್ತು ಇದು ಆರಂಭ ಮಾತ್ರ.

ಅತ್ಯಂತ ಉನ್ನತವಾದ ಆದರ್ಶಗಳನ್ನು ಹೊಂದಿದ್ದ ಮತ್ತು ಆ ಆದರ್ಶಗಳನ್ನು ವ್ಯಕ್ತಪಡಿಸಲು ಬಳಸುತ್ತಿದ್ದ nehru_ambedkarಅಸಾಧಾರಣವಾದ ವಾಕ್ಪಟುತ್ವವನ್ನು ಹೊಂದಿದ್ದ ನೆಹರೂ ಕೆಲವು ಗುರುತರವಾದ ತಪ್ಪುಗಳನ್ನು ಸಹ ಮಾಡಿದ್ದರು. ವ್ಯಕ್ತಿ ಸ್ವಾತಂತ್ರ, ಬಹುತ್ವವಾದ, ಒಳಗೊಳ್ಳುವಿಕೆ, ಸೆಕ್ಯುಲರಿಸಂ, ಮಾನವೀಯತೆ ಮತ್ತು ವೈಜ್ಞಾನಿಕ ದೃಷ್ಟಿಕೋನದ ಕ್ಷಮತೆಗಳಂತಹ ಉದಾತ್ತವಾದ ಆದರ್ಶ ಗುಣಗಳನ್ನು ಹೊಂದಿದ್ದ ನೆಹರೂರವರ ಈ ಮೌಲ್ಯಗಳ ವಿಷಯದಲ್ಲಿ ಎಲ್ಲಿಯೂ ರಾಜಿಯಾಗದಂತಹ ವ್ಯಕ್ತಿತ್ವವನ್ನು ಇನ್ನು ಮುಂದೆ ಕಾಪಾಡಿಕೊಳ್ಳಲು ಸಾಧ್ಯವೇ ಎನ್ನುವುದು ಈಗ ನಮ್ಮ ಮುಂದಿರುವ ಪ್ರಶ್ನೆ. ಏಕೆಂದರೆ ಕೇರಳದ ಆರೆಸಸ್‌ನ ಮುಖವಾಣಿ ಪತ್ರಿಕೆ ಕೇಸರಿಯಲ್ಲಿ ಇತ್ತೀಚೆಗೆ ಬರೆದ ಒಂದು ಲೇಖನದಲ್ಲಿ ನಾಥುರಾಮ್ ಗೋಡ್ಸೆ ಗಾಂಧಿ ಬದಲಿಗೆ ನೆಹರೂವನ್ನು ಹತ್ಯೆ ಮಾಡಬೇಕಿತ್ತು ಎಂದು ಪ್ರತಿಪಾದಿಸಲಾಗಿದೆ. ನಂತರ ಈ ಲೇಖನವನ್ನು ಹಿಂತೆಗೆದುಕೊಳ್ಳಲಾಗುವುದೆಂದು ಘೋಷಿಸಿದರೂ ಆ ಭಾವನಾತ್ಮಕ ಮನಸ್ಥಿತಿ ಮಾತ್ರ ನಿಚ್ಛಳವಾಗಿದೆ. ಅಂದರೆ ನೆಹರೂ ಏನೋ ಬದುಕಿಕೊಂಡರು ಆದರೆ ನೆಹರೂ ಪ್ರತಿಪಾದಿಸಿದ ಮೌಲ್ಯಗಳು ಮತ್ತು ನೈತಿಕತೆಗಳು ತೀರಿಕೊಂಡವೇ?

ವಿಕೃತಗೊಂಡ ಸ್ವರೂಪಗಳಲ್ಲಿ ಸಾಮಾಜಿಕ ಸ್ಥಿತ್ಯಂತರಗಳು ನಮ್ಮ ಕಣ್ಣ ಮುಂದೆಯೇ ಘಟಿಸುತ್ತಿವೆ. ಪ್ರಾಣಿ ಹತ್ಯೆ ಮತ್ತು ಲವ್ ಜಿಹಾದ್‌ನಂತಹ ವಿಷಯಗಳನ್ನು ಪದೇ ಪದೇ ಎತ್ತಿಕೊಂಡು ಹಲ್ಲೆಗಳನ್ನು ನಡೆಸುವುದು ವ್ಯಕ್ತಿಸ್ವಾತಂತ್ರದ ಉಲ್ಲಂಘನೆ ಮತ್ತು ಅವಕಾಶಗಳ ನಿರಾಕರಣೆಗೆ ಉದಾಹರಣೆಗಳು ಮತ್ತು ಈ ದುಷ್ಕ್ರತ್ಯಗಳನ್ನು ನಡೆಸುತ್ತಿರುವವರು ವಿಶ್ವದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಹೊಂದಿದ ಸಂಘಟನೆಯ ಸದಸ್ಯರು ಎನ್ನುವ ಸತ್ಯ ನಾವು ಮತ್ತಷ್ಟು ಜಾಗರೂಕರಾಗಿರಬೇಕು ಎಂದು ಎಚ್ಚರಿಸುತ್ತದೆ.

ವಾಸ್ತವ ಸಂಗತಿಯೇನೆಂದರೆ ಭಾರತವು ಹಿಂದೂ ರಾಷ್ಟ್ರ ಮತ್ತು ಇನ್ನೊಂದು ರಾಷ್ಟ್ರ ಎನ್ನುವ ಎರಡು ದೇಶಗಳನ್ನು ಒಳಗೊಂಡಿದೆ ಎನ್ನುವ ನಂಬಿಕೆ ಮತ್ತು ಮೂಲಭೂತ ತತ್ವವನ್ನು ಬಿಜೆಪಿ ಮತ್ತು ಸಂಘ ಪರಿವಾರವು ಪ್ರತಿಪಾದಿಸುತ್ತಿವೆ. ಮಸಲ ಈ ವಿಷಯದಲ್ಲಿ ಬೆಜೆಪಿಯಲ್ಲಿ ಬಿರುಕು ಉಂಟಾದರೂ ಸಹಿತ ಸಂಘ ಪರಿವಾರದ ಭಯದ ಎಚ್ಚರಿಕೆಯ ಮೂಲಕ ಆ ಬಿರುಕಿಗೆ ಯಶಸ್ವಿಯಾಗಿ ತೇಪೆ ಹಚ್ಚಲಾಗಿದೆ. ಸಂಘ ಪರಿವಾರದಲ್ಲಿ ಆಳವಾಗಿ ಬೇರೂರಿರುವ ಪೂರ್ವಗ್ರಹ ಮನಸ್ಥಿತಿ ಮತ್ತು ಚಿಂತನೆಗಳ ಏಕತಾನತೆಯ ಮೂಲಕ ಈ ಮಾದರಿಯ ಚಿಂತನೆಗಳು ಮತ್ತು ಅದರ ಯೋಜನೆಗಳು ಶಕ್ತಿಯನ್ನು ಪಡೆದುಕೊಳ್ಳುತ್ತವೆ ಮತ್ತು ಮತ್ತು ರಾಜಕೀಯ ಔಚಿತ್ಯತೆ ಮತ್ತು ಪ್ರಯೋಜಕತೆಯ ಆಧಾರದ ಮೇಲೆ ಮುಂದುವರೆಯುತ್ತವೆ. ಬಿಜೆಪಿಗೆ ರಾಜಕೀಯ ಏಳಿಗೆಗಾಗಿ, bhagvat-gadkari-modiಲಾಭಕ್ಕಾಗಿ ಯಾವುದೇ ರಾಜ್ಯ ಅಥವಾ ನಗರವನ್ನ ಗುರುತಿಸಿಲಾಗಿದೆ ಎಂದರೆ ಆ ರಾಜ್ಯ ಮತ್ತು ನಗರದಲ್ಲಿ ಕೋಮು ಗಲಭೆಗಳು ನಿರಂತರವಾಗಿ ವೃದ್ಧಿಯಾಗುತ್ತವೆ. ತೀರಾ ಇತ್ತೀಚಿನ ಉದಾಹರಣೆಯೆಂದರೆ ದೆಹಲಿಯ ತ್ರಿಲೋಕಪುರಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಹುಟ್ಟುಹಾಕಲಾದ ಕೋಮು ಗಲಭೆಗಳು.ಮುಂದಿನ ಕೆಲವೇ ತಿಂಗಳುಗಳಲ್ಲಿ ದೆಹಲಿಯಲ್ಲಿ ಚುನಾವಣೆಗಳು ನಡೆಯುತ್ತವೆ. ದಲಿತರನ್ನು ಚುರುಕಾದ ಹಿಂದೂ ಏಜೆಂಟರಂತೆ ಬಳಸಿಕೊಂಡು ಮುಸ್ಲಿಂರು ನಮ್ಮೆಲ್ಲರಿಗೆ ಸಮಾನವಾದ ಶತೃ ಎನ್ನುವ ಚಿಂತನೆಯ ಮೂಲಕ ದಲಿತರು ವರ್ಸಸ್ ಮುಸ್ಲಿಂ ಎನ್ನುವ ಕಾಳಗದ ಅಖಾಡವನ್ನು ಸಜ್ಜುಗೊಳಿಸಲಾಗುತ್ತದೆ ಮತ್ತು ಮತ್ತಷ್ಟು ಗಟ್ಟಿಗೊಳಿಸಲಾಗುತ್ತದೆ. ೨೦೧೫ರಲ್ಲಿ ಬಿಹಾರ್ ರಾಜ್ಯದಲ್ಲಿ ಚುನಾವಣೆಗಳು ಜರುಗಲಿವೆ.ಆಗ ಆ ರಾಜ್ಯದಲ್ಲಿ ಕೋಮು ಗಲಭೆಗಳು ತೀವ್ರವಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಇನ್ನು ಪಶ್ಚಿಮ ಬಂಗಾಳ. ಅಲ್ಲಿ ಎಡ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಕಡೆಗೆ ವಲಸೆ ಹೋಗತೊಡಗಿದ್ದಾರೆ ಮತ್ತು ಈ ಪ್ರಕ್ರಿಯೆಯಿಂದಾಗಿ ಅಲ್ಲಿನ ಸಾಮಾಜಿಕ ವಲಯವು ಸಂಪೂರ್ಣವಾಗಿ ಏರುಪೇರಾಗುತ್ತಿದೆ. ತೃಣಮೂಲ ಕಾಂಗ್ರಸ್ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದ್ದರೆ ಆ ರಾಜ್ಯದಲ್ಲಿ ಬಾಂಬ್ ತಯಾರಿಕೆ ಮತ್ತು ಭಯೋತ್ಪಾದಕರ ಕುರಿತಾದ ಕೋಮುವಾದಿ ಸುದ್ದಿಗಳನ್ನು ದಿನನಿತ್ಯ ತೇಲಿಬಿಡಲಾಗುತ್ತಿದೆ. ಕಾಂಗ್ರೆಸ್ ಶೂನ್ಯದಲ್ಲಿ ಲೀನವಾಗುತ್ತಿದ್ದರೆ ಸಂಘ ಪರಿವಾರದ ಅಭಿವೃದ್ಧಿ ಸೂಚ್ಯಂಕ ಏರುಮುಖದಲ್ಲಿದೆ. ಶಾಂತಿವಾದದ ತತ್ವ ಎಂದೂ ಕಾಣೆಯಾಗಿದೆ ಮತ್ತು ನೆರೆಹೊರೆ ರಾಷ್ಟ್ರಗಳ ವಿರುದ್ಧ ೫೬ ಇಂಚಿನ ಎದೆಯನ್ನು ತಟ್ಟುವ ಪರಾಕ್ರಮದ ಅಭಿವ್ಯಕ್ತಿಯಿಂದ ರಾಜಕೀಯ ಲಾಭಗಳು ದ್ವಿಗುಣಗೊಳ್ಳತೊಡಗಿರುವುದಂತೂ ವಾಸ್ತವ.

ಹಾಗಿದ್ದಲ್ಲಿ ಮೋದಿಯ ಕಾಲದಲ್ಲಿ ನೆಹರೂ ಏನಾಗಬಹುದು? ಏಕಚಕ್ರಾಧಿಪತ್ಯದಲ್ಲಿ ಪ್ರತಿಮೆಗಳು ನೆಲಕ್ಕರುಳಿ ಆ ಬಿಡುಗಡೆಯ ಕ್ಷಣಗಳಲ್ಲಿ ಜನಸಾಮಾನ್ಯರು ಪರಸ್ಪರ ಮುಖಾಮುಖಿಯಾಗುವಂತಹ ಸಂದರ್ಭಗಳಾಗಲಿ, ಪ್ರತಿಮೆಗಳನ್ನು ಒಡೆದು ನೆಲಕ್ಕುರುಳಿಸುವ ಮತ್ತು ಐಕಾನ್‌ಗಳ ಮುಖಕ್ಕೆ ಮಸಿ ಬಳಿಯುವಂತಹ ನಾಟಕೀಯ ಬೆಳವಣಿಗೆಗಳಾಗಲಿ ಸದ್ಯಕ್ಕೆ ಗೋಚರಿಸುತ್ತಿಲ್ಲ.Nehru ಈ ನಾವೀನ್ಯ ಮಾದರಿಯ ಚುನಾವಣಾ ಪ್ರಜಾಪ್ರಭುತ್ವದ ಇಂದಿನ ಇಂಡಿಯಾದಲ್ಲಿ ಇತಿಹಾಸದ ವ್ಯಕ್ತಿಗಳನ್ನು ಬಳಸಿಕೊಂಡು ಸಮಕಾಲೀನ ಸಂದರ್ಭದಲ್ಲಿ ಉದ್ರೇಕಗೊಂಡ ಗುಂಡಿಗಳನ್ನು ಒತ್ತುವಂತಹ ಒಂದು ಬಗೆಯ ನವಮಾದರಿಯ ಪ್ರಕ್ರಿಯೆ ಸದ್ಯಕ್ಕೆ ಚಲಾವಣೆಯಲ್ಲಿದೆ. ಈ ಕಾಲವನ್ನು ಐಕಾನ್‌ಗಳನ್ನು ಉದ್ದೇಶಪೂರ್ವಕವಾಗಿ ತ್ವರಿತಗತಿಯಲ್ಲಿ ಸ್ವಾಧೀನಪಡಿಸಿಕೊಳ್ಳುವ, ಕೊಂಡುಕೊಳ್ಳುವ ಕಾಲಘಟ್ಟವೆಂದು ಖಚಿತವಾಗಿ ಕರೆಯಬಹುದು. ಮೋದಿ ಈ ಇತಿಹಾಸದ ಪ್ರತಿಯೊಂದು ವ್ಯಕ್ತಿಯನ್ನು ತಣ್ಣಗೆ ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ. ಗಾಂಧಿಯನ್ನು ಇಂದು ಕೇವಲ ಒಂದು ಸ್ವಚ್ಛ ಭಾರತದ ಪ್ರಚಾರದ ಮಾಡೆಲ್ ಆಗಿ ಪರಿವರ್ತನೆಗೊಳಿಸಲಾಗಿದೆ. (ಇಲ್ಲಿ ಮೋದಿ ಮೊದಲಿಗರೇನಲ್ಲ. ಈ ಹಿಂದೆ ಅಡ್ವಾನಿಯವರು ತಮ್ಮನ್ನು ತಾವು ಆಧುನಿಕ ಲೋಹಪುರುಷ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದರು). ಬಲಿಪಶುಗಳಾಗಿರುವ ಸಾವಿರಾರು ಅಲ್ಪಸಂಖ್ಯಾತರ ಸ್ವಾಸ್ಥಕ್ಕಾಗಿ ಯಾವುದೇ ಯೋಜನೆಗಳನ್ನು ರೂಪಿಸದೇ ಮೌನವಾಗಿರುತ್ತಲೇ ಮಾಧ್ಯಮ ಮತ್ತು ರಾಷ್ಟ್ರವನ್ನು ೧೯೮೪ರ ಗಲಭೆಗಳಲ್ಲಿ ಹತರಾದ ಸಿಖ್ ಸಮುದಾಯಕ್ಕೆ ಪರಿಹಾರವನ್ನು ಕೊಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಮೋದಿ ಅತ್ಯಂತ ಚಾಣಾಕ್ಷತೆಯಿಂದ ವರ್ತಿಸಿದ್ದಾರೆ.

ಏರುಗತಿಯಲ್ಲಿರುವ ಬಹುಸಂಖ್ಯಾತ ತತ್ವವೂ ಇಂದು ನಮ್ಮೆದುರಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಂದರೆ ಹಿಂದೂ ರಾಷ್ಟ್ರದ ನಗಾರಿ ಬಡಿತವು ನೆಹರೂ ಅವರ ಸೆಕ್ಯುಲರಿಸಂ ಕನಸುಗಳ ಹಿಂದೆ ಅವಿತುಕೊಂಡಿದೆಯೇ? ಹೊರ ಬರಲು ಕಾಯುತ್ತಿದೆಯೇ? ೧೯೬೫ರಿಂದಲೂ ಇಂಡಿಯಾದ ರಾಜಕೀಯವನ್ನು ವರದಿ ಮಾಡುತ್ತಿರುವ ಮಾರ್ಕ ಟುಲಿ ಅವರು “ಈಗಲೇ ಭವಿಷ್ಯ ನುಡಿಯುವುದು ಕಷ್ಟವಾದರೂ ಇಲ್ಲಿಯವರೆಗೂ ಚಾಲ್ತಿಯಲ್ಲಿದ್ದ ಸೆಕ್ಯುಲರಿಸಂ ಪರಿಕಲ್ಪನೆಯನ್ನು ಬದಲಾಯಿಸಲು ನಿಶ್ಚಯಿಸಲಾಗಿದೆ. ಇದರ ಅರ್ಥ ಸೆಕ್ಯುಲರಿಸಂ ಸಾಯುತ್ತದೆ ಎಂದಲ್ಲ.” ಎನ್ನುತ್ತಾರೆ. ಮುಂದುವರೆದ ಟುಲಿ ಭಾರತದ ಮೊದಲ ಪ್ರಧಾನಿ ನೆಹರೂ ಮಾಡಿದ ತಪ್ಪನ್ನು ನರೇಂದ್ರ ಮೋದಿ ತನ್ನ ಅನುಕೂಲಕ್ಕೆ ತಕ್ಕಂತೆ ಸರಿಪಡಿಸಿಕೊಳ್ಳತ್ತಾರೆ ಎಂದು ವಿವರಿಸುತ್ತಾ “ಆಡಳಿತಾತ್ಮಕ ವಿಷಯದಲ್ಲಿ ನೆಹರೂ ಅವರು ಓಬಿರಾಯನ ಕಾಲದ ಬ್ರಿಟೀಷ್ ಮಾದರಿಯನ್ನು ಮುಂದುವರೆಸಿ ದೊಡ್ಡ ತಪ್ಪನ್ನೇ ಮಾಡಿದರು. ಹೀಗಾಗಿ ಬಾಬೂಗಳು ಜನರನ್ನು ಹೀಗೆಳೆದು ಮಾತನಾಡಿಸುವ ಕಲೋನಿಯಲ್ ವ್ಯವಸ್ಥೆಯಿಂದ ಇಂಡಿಯಾ ಹೊರಬರಲಿಲ್ಲ. ಮೋದಿಯು ಮತ್ತೇನಿಲ್ಲ, ಈ ಅಧಿಕಾರಿಶಾಹಿ ವರ್ಗ ಸರಿಯಾದ ವೇಳೆಗೆ ಕೆಲಸಕ್ಕೆ ಹಾಜರಾಗವಂತೆ ಮಾಡಿ ಇಡೀ ಬ್ಯೂರೋಕ್ರಾಸಿಯನ್ನು ಹದ್ದುಬಸ್ತಿನಲ್ಲಿಟ್ಟರೆ ಅದು ಮೋದಿಯು ಪ್ರಜಾಪ್ರಭುತ್ವವನ್ನು ಜಾರಿಗೊಳಿಸಿದಂತೆಯೇ” ಎಂದು ಹೇಳುತ್ತಾರೆ. ಆದರೆ ಮಾಜಿ ಸಂಪಾದಕ ಮತ್ತು ಪತ್ರಕರ್ತ ಕುಮಾರ್ ಕೇತ್ಕರ್ ಅವರು “ನೆಹರೂ ಅವರೊಂದಿಗೆ ಮೋದಿಯನ್ನು ಹೋಲಿಸುವುದು ದೈವನಿಂದನೆ ಎನಿಸಿಕೊಳ್ಳುತ್ತದೆ. ನೆಹರೂ ಒಬ್ಬ ದೂರದರ್ಶಿತ್ವವನ್ನುಳ್ಳ ದಾರ್ಶನಿಕರಾಗಿದ್ದರು. ಅವರನ್ನು ಅರ್ಥ ಮಾಡಿಕೊಳ್ಳುವುದೆಂದರೆ ಜಗತ್ತನ್ನೇ ಅರ್ಥ ಮಾಡಿಕೊಂಡಂತೆ. ನೆಹರೂ ಬರ್ನಾಡ್ ಷಾ ಮತ್ತು ಐನ್‌ಸ್ಟೀನ್ ಅವರೊಂದಿಗೆ ಸಂಭಾಷಿಸುತ್ತಿದ್ದರು. ಆದರೆ ಮೋದಿಯು ಈ ದೇಶದ ಅಧಿಕಾರವನ್ನು ಆವಾಹಿಸಿಕೊಳ್ಳುವ ಕೇವಲ ಒಬ್ಬ ಸಿಇಓ ಅಷ್ಟೆ. ನೆಹರೂ ಮೋದಿಯ ಮುಂದೆ ಆಸ್ತಿತ್ವದಲ್ಲಿ ಉಳಿದಾರೆಯೇ ಎನ್ನುವ ಪ್ರಶ್ನೆಯೇ ತುಂಬಾ ಬಾಲಿಶ. ಇಲ್ಲಿ ಈ ಪ್ರಶ್ನೆಯ ಅವಶ್ಯಕತೆಯೇ ಇಲ್ಲ” ಎಂದು ವಿವರಿಸುತ್ತಾರೆ.

ನೆಹರೂ ಅವರ ಪಕ್ಷ ಮತ್ತು ವಂಶ ಹಿಂದೆಂದಿಗಿಂತಲೂ ಹೆಚ್ಚಾಗಿ ನಾಶವಾಗಿ ಹೋಗಿದೆ. ಕಣ್ಮರೆಯಾಗುತ್ತಿದೆ. ರಾಹುಲ್ ಗಾಂಧಿಯ ರಾಜಕೀಯ ಸೋಲು ಮತ್ತು ರಾಬರ್ಟ ವಧೇರನ ಅನಾಕರ್ಷಕ ವ್ಯಕ್ತಿತ್ವ ಮಾತ್ರ ಇಂದು ಉಳಿದುಕೊಂಡಿವೆ. ಭವಿಷ್ಯದಲ್ಲಿ ನಿರಂತರ ಸೋಲನ್ನು ದಿಟ್ಟಿಸುತ್ತಿರುವ ನೆಹರೂ ಅವರ ಈ ಪಕ್ಷಕ್ಕೆ ಗೆಲುವೆನ್ನುವುದು ಮರೀಚಿಕೆಯಾಗಿದೆ. (ಒಂದಂತೂ ನಿಜ. ಒಂದು ವಂಶದ ಸದಸ್ಯರ ಹೆಸರಿನ ಕಟ್ಟಡಗಳು, ಯೋಜನೆಗಳು, ಅವಾರ್ಡಗಳು ಇನ್ನು ಮುಂದೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ನೆಹರೂ ಬೆಂಬಲಿಗರೂ ಸಹ ಈ ಬೆಳವಣಿಗೆಯಿಂದ ಖುಷಿಯಾಗಿದ್ದಾರೆ). ಅಷ್ಟೇಕೆ, ಇತ್ತಿಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವೂ ಸಹ ನೆಹರೂ ಅವರನ್ನು ದೊಡ್ಡ ಮಟ್ಟದಲ್ಲೇನು ಬಳಸಿಕೊಳ್ಳುತ್ತಿರಲಿಲ್ಲ. ಬಿಜೆಪಿಯ ಪ್ರಮುಖರೊಬ್ಬರು ನೆಹರೂ ಇಂಡಿಯಾ ದೇಶವನ್ನು ಕಟ್ಟಿದ ಶಿಲ್ಪಿಗಳಲ್ಲೊಬ್ಬರು ಎಂದು ಇಂದಿಗೂ ಗುರುತಿಸುತ್ತಾರೆ. ಆರೆಸಸ್ ಪ್ರತಿಯೊಂದು ನಡೆಯನ್ನು ವಿರೋಧಿಸುತ್ತದ್ದ ನೆಹರೂ ಲೆಗಸಿಯನ್ನು ಅಳಸಿ ಹಾಕುವುದು ಸುಲಭವಲ್ಲ. ಅದನ್ನು ಉದ್ದೇಶಪೂರ್ವಕವಾಗಿಯೂ ಸಾಧಿಸುವುದು ಕಷ್ಟ ಎಂದು ಹೇಳುತ್ತಾರೆ. ಬಹುಶ ಸರ್ದಾರ್ ಪಟೇಲ್ ನೆಹರೂ ಅವರನ್ನು ಎದುರಿಸಲು ಉತ್ತಮ ಆಯ್ಕೆ ಏನೋ ಎಂದು ಸಹ ಒಪ್ಪಿಕೊಳ್ಳುತ್ತಾರೆ. ಗಾಂಧಿಯನ್ನು ಇಂದಿಗೂ ದೇಶವು ಐಕಾನ್ ಆಗಿ, ನಿಜದ ದೇಶಭಕ್ತನೆಂದು ಪೂಜಿಸುತ್ತಿದೆ ಆದರೆ ದೇಶದ ಯಾವುದೇ ರಾಜ್ಯವು, ಪಕ್ಷವು 200px-MKGandhi[1]ಗಾಂಧೀವಾದವನ್ನು ಆಚರಿಸುತ್ತಿಲ್ಲ, ಬೆಳಸುತ್ತಿಲ್ಲ. ಒಂದು ದೇಶವಾಗಿ ನಾವು ಎನ್ನುವ ಪರಿಕಲ್ಪನೆಯ ಅಡಿಯಲ್ಲಿ ನಮ್ಮನ್ನು ರೂಪಿಸಿದ ಕೀರ್ತಿ ನೆಹರೂ ಅವರಿಗೆ ಸಲ್ಲಬೇಕು. ನೆಹರೂ ಮಾದರಿಯ ಸೋಷಿಲಿಸಂ ಎನ್ನುವ ಐಡಿಯಾಲಜಿಗಳ ಸ್ತಂಭಗಳನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ೧೯೪೭ರಿಂದ ೧೯೬೪ರವರೆಗೆ ಪ್ರಧಾನಿಯಾಗಿದ್ದ ನೆಹರೂ ನಮ್ಮ ಈ ದೇಶವು ಒಂದು ಕಾಲೋನಿಯ ವ್ಯವಸ್ಥೆಯಿಂದ ಸದೃಢ ಪ್ರಜಾಪ್ರಭುತ್ವ ದೇಶವಾಗಿ ರೂಪುಗೊಂಡಿದ್ದನ್ನು ನೆಹರೂ ಸಾಕ್ಷೀಕರಿಸಿದ್ದರು. ಆ ಬೆಳವಣಿಗೆಯ ಹಂತಗಳನ್ನು ನೀರೆರೆದು ಪೋಷಿಸಿದರು. ನಾವು ಕಲೋನಿಯೋತ್ತರ ಜಗತ್ತನ್ನು ಗಮನಿಸಿದಾಗ ಅನೇಕ ಕಲೋನಿಯಲ್ ದೇಶಗಳು ಸ್ವಾತಂತ್ರಗೊಂಡು ಪ್ರಜಾಪ್ರಭುತ್ವದ ಹತ್ತಿರಕ್ಕೆ ಬಂದು ಮರಳಿ ಸರ್ವಾಧಿಕಾರಕ್ಕೆ ಜಾರಿಕೊಂಡಿದ್ದನ್ನು ಕಾಣುತ್ತೇವೆ. ಆದರೆ ನೆಹರೂ ಅವರ ೧೭ ವರ್ಷಗಳ ಆಡಳಿತ ಇಂಡಿಯಾ ದೇಶ ಸರ್ವಾಧಿಕಾರಕ್ಕೆ ತೆವಳಲೂ ಸಹ ಅವಕಾಶ ಮಾಡಿಕೊಡಲಿಲ್ಲ ಬದಲಾಗಿ ಎಲ್ಲಾ ಇನ್ಸಿಟ್ಯೂಟ್‌ಗಳನ್ನು ವ್ಯವಸ್ಥಿತವಾಗಿಟ್ಟರು.

ಹೀಗಿದ್ದಲ್ಲಿ ಬಿಜೆಪಿ ಪಕ್ಷವು ನೆಹರೂ ಅವರನ್ನು ಹೇಗೆ ಎದುರುಗೊಳ್ಳುತ್ತದೆ? ಆರೆಸಸ್‌ನ ಮುಖವಾಣಿ ಪತ್ರಿಕೆಯ ಮಾಜಿ ಸಂಪಾದಕ ಶೇಷಾದ್ರಿಚಾರಿ ಅವರು “ನಾವು ನೆಹರೂ ಅವರ ವಿರೋಧಿಗಳೆಂದು ಊಹಿಸಲೂ ಸಾಧ್ಯವಿಲ್ಲ. ಇಂಡಿಯಾದ ಎಲ್ಲ ಐಕಾನ್ ಗಳನ್ನು ನಾವು ಗೌರವಿಸುತ್ತೇವೆ. ಗಾಂಧಿಯಿಂದ ಪಟೇಲ್ ವರೆಗೆ ಮತ್ತು ಮನ್ನಣೆಗಳನ್ನು ನಿರಾಕರಿಸಲ್ಪಟ್ಟ ಪ್ರಾಂತೀಯ ನಾಯಕರನ್ನು ಸಹ ನಾವು ಗೌರವಿಸುತ್ತೇವೆ” ಎಂದು ಹೇಳುತ್ತಾರೆ.

ಆದರೆ ಮೋದಿಯು ಎಲ್ಲಾ ಬಗೆಯ ವಿರೋಧಾಭಾಸಗಳನ್ನು ತಮಗೆ ಅನುಕೂಲಕರವಾಗುವಂತೆ ರೂಪಿಸಿಕೊಳ್ಳುವಲ್ಲಿ ನುರಿತರಾಗಿದ್ದಾರೆ. ಮೋದಿಯು ಪುರಾಣಗಳ ಮಹತ್ವವನ್ನು ಹೊಗಳುತ್ತಾ ಹಿಂದೂ ಸನಾತನ ಧರ್ಮವನ್ನು ಪ್ರತಿಪಾದಿಸುತ್ತಿದ್ದರೂ ಸಹ ಸಮಾಜದ ಒಂದು ವರ್ಗವು ಮೋದಿಯನ್ನು ಅಭಿವೃದ್ಧಿಯ ಮತ್ತು ಆಧುನಿಕತೆಯ ಸಂಕೇತವೆಂದು ಪರಿಗಣಿಸುತ್ತದೆ

ಇತಿಹಾಸಕಾರ, ಚಿಂತಕ ಮುಶ್ರಲ್ ಹಸನ್ ಅವರು “ಇಂದಿನ ದಿನಗಳಲ್ಲಿ ಪಟೇಲ್ ಅವರನ್ನು ಅಬ್ಬರದಿಂದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ನೆಹರೂ ಅವರನ್ನು ಗೌಣಗೊಳಿಸಲು. ನೆಹರೂವಿಯನ್ ಲೆಗಸಿಯನ್ನು ತ್ಯಜಿಸಲಾಗುತ್ತಿದೆ. ಇತಿಹಾಸದ ಒಂದು ಐಕಾನ್ ಅನ್ನು ಮತ್ತೊಂದು ಐಕಾನ್‌ನ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಆ ಮೂಲಕ ಹೊಸ ಇತಿಹಾಸವನ್ನೇ ಕಂಡು ಹಿಡಿಯಲಾಗುತ್ತದೆ” ಎಂದು ಹೇಳುತ್ತಾರೆ. ಆದರೆ ಬಿಜೆಪಿ ಪಕ್ಷಕ್ಕೆ ಹಿಂದೂಯಿಸಂನ ಐಡಿಯಾಲಜಿಯ ಮಿತಿಗಳು ಮತ್ತು ಅದರ ಕುಂಠಿತಗೊಂಡ ಪ್ರಭಾವದ narender_modi_rssಕುರಿತಾಗಿ ಅರಿವಿದೆ. ಹೀಗಾಗಿಯೇ ಪಾನ್-ಇಂಡಿಯಾ ಇಕಾನ್‌ಗಳನ್ನು ಉದ್ದೇಶಪೂರ್ವಕವಾಗಿ ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ೨೦೧೪ರ ಚುನಾವಣೆಯಲ್ಲಿ ಗೆದ್ದು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಯಾದ ಬಿಜೆಪಿಯ ದೇವೇಂದ್ರ ಫಡ್ನಿಸ್ ಒಬ್ಬ ಆರೆಸಸ್ ಸ್ವಯಂಸೇವಕ. ಕಟ್ಟಾ ಆರೆಸಸ್. ಭ್ರಾಹ್ಮಣ. ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡುತ್ತ ಅಪ್ಪಿತಪ್ಪಿ ಆರೆಸಸ್‌ನ ಸ್ಥಾಪಕರಾದ ಗೋಳ್ವಲ್ಕರ್, ಸಾವರ್ಕರ್, ಹೆಡ್ಗೇವಾರ್ ಇವರನ್ನು ನೆನೆಸಿಕೊಳ್ಳಲೇ ಇಲ್ಲ. ಬದಲಾಗಿ ಅಂಬೇಡ್ಕರ್, ಜೋತಿಬಾ ಫುಲೆ ಅವರನ್ನು ಉದಾಹರಿಸಿದರು. ದೆಹಲಿಯ ಪಾಲಿಸಿ ಸಂಶೋಧನ ಕೇಂದ್ರದ ಅಧ್ಯಕ್ಷರಾದ ಪ್ರತಾಪ್ ಬಾನು ಮೆಹ್ತ ಅವರು “ಇತಿಹಾಸದ ವ್ಯಕ್ತಿಗಳನ್ನು ಕೇವಲ ಐಕಾನ್‌ಗಳ ಮಟ್ಟಕ್ಕೆ ಇಳಿಸಿ ಅವರ ಕುರಿತಾದ ನಿಜವಾದ ಸಂವಾದವನ್ನು ಕಡೆಗಣಿಸುತ್ತಿದ್ದೇವೆ ಮತ್ತು ಇದರ ಕುರಿತಾದ ಚರ್ಚೆಗಳು ಉಸಿರುಗಟ್ಟಿಸುತ್ತವೆ. ನೆಹರೂ ಮತ್ತು ಗಾಂಧಿಯ ನಡುವೆ ಅಪಾರ ಭಿನ್ನಾಭಿಪ್ರಾಯಗಳಿದ್ದರಿಬಹುದು. ನೆಹರೂ ಮತ್ತು ಪಟೇಲ್ ಒಟ್ಟಾಗಿ ಕಾರ್ಯ ನಿರ್ವಹಿಸಲೂ ಸಾಧ್ಯವಿರಲಿಲ್ಲ. ಇಂದು ಸೆಕ್ಯುಲರ್ ಯುಟೋಪಿಯ ಮತ್ತು ಸೆಕ್ಯುಲರಿಸಂನ ಆಚರಣೆ ಬಳಕೆಯಲ್ಲಿದೆ. ನಿಜಕ್ಕೂ ನೆಹರೂ ಅವರು ಇಂಡಿಯಾದ ಸೆಕ್ಯುಲರಿಸಂನ ಬಲು ದೊಡ್ಡ ಪ್ರವರ್ತಕರು. ಆದರೆ ಕಾಂಗ್ರೆಸ್ ಪಕ್ಷವು ಇಂಡಿಯಾ ದೇಶವನ್ನು ಎರಡು ಸಮುದಾಯಗಳ ಗಣರಾಜ್ಯವೆಂದು ನಂಬಿತ್ತು. ಹಿಂದೂ ರಾಷ್ಟ್ರವನ್ನು ಇತಿಹಾಸದ ಹಿನ್ನೆಲೆಯಲ್ಲಿ ನೋಡುವ ತಪ್ಪನ್ನು ನಾವು ಮಾಡಬಾರದು” ಎಂದು ಬರೆಯುತ್ತಾರೆ.

ತಮ್ಮ ಭಾಷಣದ ಕೊನೆಯ ಭಾಗದಲ್ಲಿ ನೆಹರೂ ಅವರು ಹೇಳುತ್ತಾರೆ, “ತಮ್ಮ ಚಿಂತನೆಗಳಲ್ಲಿ ಮತ್ತು ಆಚರಣೆಗಳಲ್ಲಿ ಸಂಕುಚಿತ ಮನೋಭಾವವುಳ್ಳ ಜನರರಿರುವ ದೇಶವು ನಿಜಕ್ಕೂ ಗ್ರೇಟ್ ದೇಶವಲ್ಲ.” ಇದು ಅತ್ಯಂತ ಶಕ್ತಿಯುತವಾದ ಸಂದೇಶವೆಂದೇ ಹೇಳಬಹುದು. ಇದು ತನ್ನ ಸರಳತೆ ಮತ್ತು ತರ್ಕದಲ್ಲಿ ವಿಶ್ವರೂಪಿಯಾಗಿದೆ. ಇದಕ್ಕಾಗಿಯೇ ನೆಹರೂ ಅವರನ್ನು ನೆಲಸಮಗೊಳಿಸಲು ಕಷ್ಟ. ಪ್ರತಿಮೆಗಳನ್ನು ಧ್ವಂಸಗೊಳಿಸಿ ನೆಲಕ್ಕುರುಳಿಸಬಹುದು, ಆದರೆ ವಿಚಾರಗಳು ಜೀವಂತವಾಗಿರುತ್ತವೆ.

Leave a Reply

Your email address will not be published. Required fields are marked *