Daily Archives: November 15, 2014

ತೀರ್ಥಹಳ್ಳಿ ಪ್ರಕರಣ: ರಂಗದಿಂದ ಒಂದಿಷ್ಟು ದೂರ

ಸದಾನಂದ ಲಕ್ಷ್ಮೀಪುರ

ಅಪಘಾತಗಳು ನಡೆದಾಗ, ಅದು ಸಂಭವಿಸಿದ ಜಾಗದ ಹತ್ತಿರವೇ ಇದ್ದರೆ ಅದರ ನೈಜ ಚಿತ್ರಣ ಸಿಗುವtirtha-3 ಸಾಧ್ಯತೆಗಳಿರುತ್ತವೆ. ಆದರೆ ಅದೇ ಮಾತು ಎಲ್ಲಾ ಅಪರಾಧ ಪ್ರಕರಣಗಳಲ್ಲೂ ಹೇಳಲಾಗುವುದಿಲ್ಲ. ಒಂದು ಊರಿನ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಅಸುನೀಗಿದಾಕ್ಷಣ, ದೇಶಾದ್ಯಂತ ಹರಡಿರುವ ಆ ಊರಿನ ನೆಂಟರಿಗೆ ಘಟನೆಯ ಸತ್ಯಾಸತ್ಯೆಗಳು ರಾತ್ರೋರಾತ್ರಿ ರವಾನೆಯಾಗುವ ಯಾವ ತಂತ್ರಜ್ಞಾನವೂ ಇಲ್ಲ. ತೀರ್ಥಹಳ್ಳಿಯ ಬಾಲಕಿಯ ಸಾವಿನ ನಂತರ ಸಾಮಾಜಿಕ ತಾಣಗಳಲ್ಲಿ ಆ ಊರಿನೊಂದಿಗೆ ಸಂಬಂಧ ಇಟ್ಟುಕೊಂಡ ಕೆಲವರು ವ್ಯಕ್ತಪಡಿಸಿದ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಬೇಕಾಯಿತು.

ಹೀಗೊಂದು ಘಟನೆ ನಡೆದಾಗ ರಾಜ್ಯದ ಬಹುಪಾಲು ಜನತೆಗೆ ಅದು ತಲುಪುವುದು ಮಾಧ್ಯಮಗಳ ಮೂಲಕ. ಕೆಲವೇ ಕೆಲವು ಮಂದಿಗೆ ಊರ ಪರಿಚಿತರು, ನೆಂಟರಿಷ್ಟರು, ದುರಂತ ಎದುರಿಸಿದ ಕುಟುಂಬದವರು ವೈಯಕ್ತಿಕವಾಗಿ ಮಾಹಿತಿಯನ್ನು ಹಂಚಿಕೊಳ್ಳಬಹುದು. ಹಲವು ಸಾಮಾಜಿಕ, ರಾಜಕೀಯ ಪರಿಣಾಮಗಳಿಗೆ ಕಾರಣವಾಗುವಂತಹ ಅಪರಾಧ ಪ್ರಕರಣಗಳು ಸಂಭವಿಸಿದಾಗ ಆ ಸುದ್ದಿಗಳು ಒಂದೇ ದಿನಕ್ಕೆ ಸೀಮಿತವಾಗದೆ, ಫಾಲೋ-ಅಪ್ ಗೆ ಅವಕಾಶ ಇರುತ್ತದೆ. ತನಿಖೆ ಮಾಡುವ ಅಧಿಕಾರಿಗಳು ಆಗಾಗ ಪ್ರಗತಿಯನ್ನು ಪತ್ರಕರ್ತರಿಗೆ ಬಿಟ್ಟುಕೊಡುತ್ತಿದ್ದರೆ, ಆ ಸುದ್ದಿಗಳು ಬರುತ್ತವೆ. ಹಲವು ಚಾನೆಲ್ ಗಳನ್ನು ನೋಡುವ, ಹಲವು ಪತ್ರಿಕೆಗಳನ್ನು ಓದುವ ಅಭ್ಯಾಸ ಇರುವ ವ್ಯಕ್ತಿಯೊಬ್ಬ ಮಾಧ್ಯಮಗಳಿಂದ ಲಭ್ಯವಾಗುವ ಅಂಕಿ ಅಂಶಗಳನ್ನು ಗ್ರಹಿಸಿಕೊಂಡು ಅದರೊಟ್ಟಿಗೆ ತನ್ನ ವಿವೇಚನೆಯಿಂದ ಒಂದು ಅಭಿಪ್ರಾಯಕ್ಕೆ ಬರಬಹುದು. ಆದರೆ ಒಂದು ಘಟನೆಗೆ ಹಲವು ಮುಖಗಳಿರುತ್ತವೆ ಎಂದು ಅರ್ಥ ಮಾಡಿಕೊಂಡಿರುವ ವ್ಯಕ್ತಿಗೆ ತನ್ನ ಅಭಿಪ್ರಾಯವೇ ನ್ಯಾಯಾಲಯ ಒಪ್ಪುವ ಸತ್ಯ ಆಗಿರಲಿಕ್ಕಿಲ್ಲ ಎಚ್ಚರಿಕೆಯೂ ಇರುತ್ತದೆ.

ತೀರ್ಥಹಳ್ಳಿಯ ಘಟನೆಯಲ್ಲಿ ಹಲವರು ಈ ಎಚ್ಚರಿಕೆಯನ್ನು ತಪ್ಪಿದರು ಎನಿಸುತ್ತದೆ. Of course, ಎಲ್ಲರೂ ಹಾಗಿರಲಿಲ್ಲ. ಕೆಲವರಿಗೆ ಕೆಲವು ಅಂಶಗಳು ಗೊತ್ತಿದ್ದರೂ ಸುಮ್ಮನಿದ್ದರು. ತಮಗೆ ಗೊತ್ತಿರುವುದೆಲ್ಲಾ ಸತ್ಯವೇ ಆಗಿರಲಿಕ್ಕಿಲ್ಲ ಎಂಬ ಎಚ್ಚರ ಅವರನ್ನು ಹಾಗೆ ಸುಮ್ಮನಿರಿಸಿತ್ತು. ರಾಜಕೀಯ ಲಾಭದ ಉದ್ದೇಶದಿಂದ ಬೀದಿಗೆ ಇಳಿದವರ ಹಕೀಕತ್ತು ಬೇರೆ tirtha-2ಬಿಡಿ. ಆದರೆ, ನಾವು ಯಾವ ರಾಜಕೀಯ ಪಕ್ಷಕ್ಕೂ ಸೇರಿದವರಲ್ಲ ಎಂದು ಗಳಿಗೆಗೊಮ್ಮೆ ಪುನರುಚ್ಚರಿಸುತ್ತಲೇ, ಆರೋಪಿಯನ್ನು ಕೇವಲ ಆರೋಪಿಯನ್ನಾಗಿ ನೋಡದೆ ಒಂದು ಕೋಮಿನ ಪ್ರತಿನಿಧಿಯಾಗಿ ನೋಡಿದವರಿಗೆ ಏನನ್ನಬೇಕು?

ತಾವು ತೀರ್ಥಹಳ್ಳಿಯವರು, ಅದರ ಪಕ್ಕದ ಹಳ್ಳಿಯವರು ನಮಗೆ ಆ ಊರಿನಿಂದ ಅಥೆಂಟಿಕ್ ಮಾಹಿತಿ ಇದೆ, ಇದು ಅಪ್ಪಟ ಕೊಲೆ, ಎಲ್ಲರೂ ಸೇರಿ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ದೇಶದ ಎಲ್ಲೆಲ್ಲೋ ಕೂತು ಫರ್ಮಾನು ಹೊರಡಿಸಿದರು. ಅವರ ಮಾತಿನ ಧಾಟಿ, ವಾದದೊಂದಿಗೆ ಹೊರಹೊಮ್ಮುತ್ತಿದ್ದ ಅತಿಯಾದ ಆತ್ಮವಿಶ್ವಾಸ ಅಸಹಜವಾಗಿತ್ತು. ಆ ಊರಿನವರಾದ ಕಾರಣಕ್ಕೆ ಸಹಜವಾಗಿ ಆ ಊರಿನ ಒಂದಿಷ್ಟು ಜನರ ಪರಿಚಯ ಇರಬಹುದು, ಕೆಲವರೊಂದಿಗೆ ನೆಂಟಸ್ತನ ಇರಬಹುದು. ಹಾಗಂತ ಪರಿಚಯ ಇರುವವರು, ನೆಂಟರು ಹೇಳಿದ್ದೆಲ್ಲಾ ನಿಜವಾಗಿರಲು ಸಾಧ್ಯವೇ? ಸಾವಿನಂತಹ ದುರಂತ ಸಂಭವಿಸಿದಾಗ, ಆ ಕುಟುಂಬದವರು ಸಹಜವಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಅವರ ಪರಿಚಿತರು, ಸಂಬಂಧಿಕರ ವಲಯದಲ್ಲಿ ದು:ಖವಿರುತ್ತದೆ. ಹಾಗಾಗಿ ಅವರು ಇತರರಲ್ಲಿ ಹಂಚಿಕೊಳ್ಳುವ ಅಭಿಪ್ರಾಯಗಳಲ್ಲಿ ಎಮೋಷನೆಲ್ ಎಳೆಗಳು ಇರುತ್ತವೆಯೇ ಹೊರತು, ನಿಷ್ಪಕ್ಷಪಾತಿಯಾಗಿ ಆಲೋಚನೆಗಳಿಗೆ ಅವಕಾಶ ಕಡಿಮೆ.

ಘಟನೆ ನಡೆದ ಕೆಲ ದಿನಗಳ ನಂತರ ಪೊಲೀಸ್ ಮೂಲಗಳಿಂದ ಬಾಲಕಿ ಬರೆದಿದ್ದಳು ಎನ್ನಲಾದ ಪತ್ರವೊಂದರ ಮುದ್ರಿತ (printed) ಪ್ರತಿ ಹೊರಬಿತ್ತು. ಆದರೆ ಬಿಡುಗಡೆಯಾಗಿದ್ದು ಪತ್ರದ ಮೂಲ ಪ್ರತಿಯಲ್ಲ, ಮುದ್ರಿತ ಪ್ರತಿ ಎಂಬ ಅಂಶವನ್ನು ಗ್ರಹಿಸುವ ಗೋಜಿಗೆ ಹೋಗದೆ, ರಾಜಕಾರಣಿಗಳು ಆ ಪತ್ರ ಪೊಲೀಸರ ಸೃಷ್ಟಿ. ಹಾಗಾದರೆ ಆ ಹುಡುಗಿ ಅದನ್ನು ಟೈಪು ಮಾಡಿಸಿದ್ದೆಲ್ಲಿ ಎಂದು ಪತ್ರಿಕಾಗೋಷ್ಟಿ ಮಾಡಿದರು. ಅವರು ರಾಜಕಾರಣಿ. ಆದರೆ ಪತ್ರಕರ್ತರಿಗೆ ಆ ಪ್ರಜ್ಞೆ ಬೇಡವೆ? ಅದರಲ್ಲೂ ಸಾಮಾಜಿಕ ತಾಣದಲ್ಲಿರುವ ಪತ್ರಕರ್ತರಲ್ಲಿ ಕೆಲವರು ಅದೇ ಪತ್ರ ಹಾಕಿ ವಿವೇಚನಾ ರಹಿತ ಸ್ಟೇಟಸ್ ಹಾಕಿದರು.

ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ಘಟನೆ ವರದಿಯಾಯ್ತು. ಕೆಲ ವರದಿಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಗೊಡವೆ ಬೇಡ. ಎಲ್ಲಾ ವರದಿಗಳಲ್ಲೂ ಸಂಶಯಾತೀತವಾಗಿ ಒಪ್ಪಿಕೊಳ್ಳಬಹುದಾದ ಕೆಲವು ಅಂಶಗಳಿದ್ದವು. ಅವುಗಳು – ಬಾಲಕಿ ಮನೆಗೆ ಬಂದು ಹಲವು ಗಂಟೆಗಳ ನಂತರ ಆರೋಗ್ಯದಲ್ಲಿ ಏರುಪೇರು ಎದುರಿಸಿದ್ದಾಳೆ. ವಿಷ ಅಷ್ಟು ತಡವಾಗಿ ಪರಿಣಾಮ ಬೀರುವುದು ಅಸಹಜ. ಅತ್ಯಾಚಾರ ನಡೆದ ಬಗ್ಗೆ ಪೋಷಕರೇ ಅನುಮಾನ ವ್ಯಕ್ತಪಡಿಸಿಲ್ಲ, ಪ್ರಾಥtirtha-1ಮಿಕ ವೈದ್ಯಕೀಯ ವರದಿಗಳೂ ಅದನ್ನು ತಳ್ಳಿಹಾಕಿದ್ದವು. ಹಾಗೂ ಪತ್ರದ ಬಗ್ಗೆ ಹಲವು ಸಂಶಯಗಳು ಕುಟುಂದವರಿಂದ ವ್ಯಕ್ತವಾದವು. ಇಂತಹದೊಂದು ಜಟಿಲ ಘಟನೆಯ ಸತ್ಯಾಸತ್ಯತೆ ಬಹಿರಂಗವಾಗಲು ಸೂಕ್ತ ತನಿಖೆ ಮುಗಿಯುವ ತನಕ ಸುಮ್ಮನಿರಬೇಕು ಎಂಬುದನ್ನೇ ಯಾರೇ ಆಗಲಿ ಗ್ರಹಿಸಬೇಕಿತ್ತು. ಮೇಲಾಗಿ ಘಟನೆ ನಂತರ ನಡೆದ ಕೆಲವು ಘಟನೆಗಳು ತೀರ್ಥಹಳ್ಳಿಯ ನೆಮ್ಮದಿ ಹಾಳು ಮಾಡಿದ್ದವು. ತೀರ್ಥಹಳ್ಳಿಯ ನೆಮ್ಮದಿ ಬಗ್ಗೆ ಕಾಳಜಿ ಇದ್ದ ಯಾರಿಗೇ ಆಗಲಿ, ತಮಗೆ ಲಭ್ಯ ಇರುವ ಅರೆಬರೆ ಸತ್ಯಗಳ ಆಧಾರದಲ್ಲಿ ಅಭಿಪ್ರಾಯ ದಾಖಲಿಸುವುದು ತಪ್ಪಾಗುತ್ತದೆ ಎಂಬ ಸಣ್ಣ ಎಚ್ಚರ ಬೇಕಿತ್ತಲ್ಲವೆ?