Daily Archives: November 21, 2014

ನೈತಿಕ ಪೊಲೀಸ್ ಗಿರಿ ವರ್ಸಸ್ ಕಿಸ್ ಆಫ್ ಲವ್ ಹಾಗೂ ಭಾರತೀಯ ಸಂಸ್ಕೃತಿ


-ಇರ್ಷಾದ್


 

ಕೇರಳದ ಕೊಚ್ಚಿಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಅನೈತಿಕ ಪೊಲೀಸ್ ಗಿರಿKissOfLove ಕೃತ್ಯವನ್ನು ವಿರೋಧಿಸಿ ನಡೆದ “ಕಿಸ್ ಆಫ್ ಲವ್” ಚಳುವಳಿ ನೈತಿಕ ಪೊಲೀಸ್ ಗಿರಿ ವಿರುದ್ಧದ ದೇಶ ವಿದೇಶದಾದ್ಯಂತ ಭಾರೀ ಗಮನ ಸೆಳೆದಂತಹಾ ವಿಶಿಷ್ಟ ಪ್ರತಿಭಟನೆ. ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದೇ ಭಾರತೀಯ “ಸಂಸ್ಕೃತಿ”ಗೆ ವಿರುದ್ಧ ಎಂದು ವಿರೋಧಿಸುವ ಮನೋಭಾವ ಹೊಂದಿರುವ ನಮ್ಮ ಸಮಾಜದಲ್ಲಿ ಹುಡುಗ-ಹುಡುಗಿ, ಹುಡುಗಿ-ಹುಡುಗಿ ಅಥವಾ ಹುಡುಗ-ಹುಡುಗ ಬಹಿರಂಗವಾಗಿ ಪರಸ್ಪರ ಚುಂಬನ ನೀಡುವ ಮೂಲಕ ನೈತಿಕ ಪೊಲೀಸ್ ಗಿರಿ ಕೃತ್ಯವನ್ನು ವಿರೋಧಿಸುವ ಕಿಸ್ಸಿಂಗ್ ಪ್ರತಿಭಟನೆ ಸಹಜವಾಗಿ “ಭಾರತೀಯ ಸಂಸ್ಕೃತಿ” ಪಾಲಕರ ಕೆಂಗಣ್ಣಿನ ವಿರೋಧಕ್ಕೆ ಕಾರಣವಾಗಿದೆ. ಕೇರಳದಲ್ಲಿ ಸ್ವತಹಃ ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್ ಗಿರಿ ನಡೆಸಿದ್ದ ಹಿಂದೂಪರ ಸಂಘಟನೆಗಳ ಜೊತೆಗೆ ಮುಸ್ಲಿಮ್ ಸಂಘಟನೆಗಳು, ರಾಜಕೀಯ ಪಕ್ಷಗಳು, ಇನ್ನಿತರ “ಸಂಸ್ಕೃತಿ” ರಕ್ಷಕರು ಪರಸ್ಪರ ತಮ್ಮೊಳಗಿನ ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ತಮ್ಮೆಲ್ಲರ ಸಮಾನ ಪುರೋಗಾಮಿ ಆಶಯಕ್ಕೆ ವಿರುದ್ದವಾದ “ಕಿಸ್ ಆಫ್ ಲವ್” ಹೋರಾಟದ ವಿರುದ್ದ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದವು.

ಕೇರಳದಲ್ಲಿ ನಡೆದ ಕಿಸ್ ಆಫ್ ಲವ್ ಪ್ರತಿಭಟನೆ ಭಾರೀ ಚರ್ಚೆಗೆ ಕಾರಣವಾಗುತ್ತಿರುವ ಬೆನ್ನಲ್ಲೇ 2008 ರಲ್ಲಿ ಮಂಗಳೂರಿನಲ್ಲಿ ಶ್ರೀ ರಾಮ ಸೇನೆ ನಡೆಸಿದ ಪಬ್ ದಾಳಿ ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಪಿಂಕ್ ಚಡ್ಡಿ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ರಚಿಕಾ ತನೇಜಾ ಎಂಬ ಮಾನವ ಹಕ್ಕು ಹೋರಾಟಗಾರ್ತಿ ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿಯನ್ನು ಖಂಡಿಸಿ “ಕಿಸ್ ಆಫ್ ಲವ್” ಪ್ರತಿಭಟನೆಯನ್ನು ನಡೆಸಲು ಮುಂದಾಗಿರುವುದು ಇದೀಗ ಕರ್ನಾಟಕದ ಸಂಸ್ಕೃತಿ ರಕ್ಷಕರನ್ನು ರೊಚ್ಚಿಗೆಬ್ಬಿಸಿಬಿಟ್ಟಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ “ಕಿಸ್ ಆಫ್ ಲವ್” ಹೋರಾಟಕ್ಕೆ ವ್ಯಕ್ತವಾಗುತ್ತಿರುವ ಆಕ್ರೋಶ ಭರಿತ ವಿರೋಧಗಳೇ ಇದಕ್ಕೆ ಸಾಕ್ಷಿಯಾಗಿವೆ.

ಕಿಸ್ ಆಫ್ ಲವ್ ಅಥವಾ ಸಾರ್ವಜನಿಕ ಚುಂಬನ ಪ್ರತಿಭಟನೆ ಎಷ್ಟರ ಮಟ್ಟಿಗೆ ಸರಿ ಅಥವಾ ನೈತಿಕ ಪೊಲೀಸ್ ಗಿರಿ ಹೋರಾಟಕ್ಕೆ ಪರಿಣಾಮಕಾರಿ ಎಂಬುವುದರ ಕುರಿತಾಗಿ ಚರ್ಚಿಸುವುದಕ್ಕಿಂತ ಮೊದಲಾಗಿ ಈ ರೀತಿಯ ಪ್ರತಿಭಟನೆಗೆ ಕಾರಣವಾದ ನೈತಿಕ ಪೊಲೀಸ್ ಗಿರಿ ಕೃತ್ಯಗಳನ್ನು ಮೊದಲು ಖಂಡಿಸಬೇಕಾಗಿದೆ. ಮಂಗಳೂರನ್ನು ರಾಷ್ಟ್ರೀಯ mangalore_moral1ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದ್ದು ಇಲ್ಲಿಯ “ಸುಸಂಸ್ಕೃತ” ಜನರು ಹುಡುಗ-ಹುಡುಗಿಯರು ಪಬ್ ನಲ್ಲಿ ಇದ್ದಂತಹಾ ಸಂಧರ್ಭದಲ್ಲಿ ದಾಳಿ ನಡೆಸಿ ಅವರ ಮೇಲೆ ಹಲ್ಲೆಗೈದು ಅಮಾನುಷ ಮೆರೆದ 2009 ರ ಪಬ್ ದಾಳಿ ಪ್ರಕರಣ. ಕಾಲೇಜು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಸೇರಿಕೊಂಡು ಮಂಗಳೂರಿನ ಪಡೀಲ್ ಎಂಬಲ್ಲಿರುವ ಹೋಂ ಸ್ಟೇ ಒಂದರಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ನಡೆಸುತ್ತಿದ್ದ ವೇಳೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ ಯುವಕ-ಯುವತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ತಮ್ಮ ವಿಕೃತ ತೋರಿಸಿದ 2012 ಹೋಂ ಸ್ಟೇ ದಾಳಿ. ಇವೆರಡು ರಾಷ್ಟ್ರ-ಅಂತರಾಷ್ಷ್ರೀಯ ಮಟ್ಟದದಲ್ಲಿ ಗಮನ ಸೆಳೆದ ನೈತಿಕ ಪೊಲೀಸ್ ಗಿರಿ ಪ್ರಕರಣಗಳಾದರೆ ಕರಾವಳಿ ಜಿಲ್ಲೆಗಳಲ್ಲಿ ಹಿಂದೂ- ಮುಸ್ಲಿಮ್ ಉಭಯ ಕೋಮುಗಳ ನೈತಿಕ ಪೊಲೀಸರು ಧರ್ಮ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಭಿನ್ನ ಕೋಮಿನ ಯುವಕ-ಯುವತಿಯರು ಜೊತೆಗೆ ಮಾತನಾಡಿದಾಗ, ನಡೆದಾಡಿದಾಗ, ಐಸ್ ಕ್ರೀಂ ಪಾರ್ಲರ್ ನಲ್ಲಿ ಕುಳಿತಿದ್ದಾಗ, ಬೈಕಿನಲ್ಲಿ ಸುತ್ತಾಡುತ್ತಿರುವಾಗ, ಭಿನ್ನ ಕೋಮುಗಳ ವಿದ್ಯಾರ್ಥಿಗಳು ಕಾಲೇಜು ಪ್ರವಾಸ ಹೋಗುತ್ತಿರುವಾಗ ಅವರನ್ನು ಧರ್ಮ-ಸಂಸ್ಕೃತಿKissOfLove_3 ರಕ್ಷಣೆಯ ಹೆಸರಲ್ಲಿ ತಡೆದು ಹಲ್ಲೆ ನಡೆಸಿ ಧರ್ಮ ರಕ್ಷಣೆ ನಡೆಸಿದ ಹುಮ್ಮಸ್ಸಿನಲ್ಲಿ ಬೀಗುವ ನೈತಿಕ ಪೊಲೀಸ್ ಗಿರಿ ದಿನ ಲೆಕ್ಕದಲ್ಲಿ ನಡೆಯುತ್ತಿವೆ. ಮಂಗಳೂರಿನ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ 17 ನೈತಿಕ ಪೊಲೀಸ್ ಗಿರಿ ಪ್ರಕರಣಗಳು ದಾಖಲಾದಲ್ಲಿ ಕಳೆದ ವರ್ಷ 11 ಪ್ರಕರಣಗಳು ದಾಖಲಾಗಿವೆ. ನೈತಿಕ ಪೊಲೀಸ್ ಗಿರಿ ಘಟನೆಗಳು ವಿರುದ್ಧ ಮಂಗಳೂರಿನ ಪ್ರಗತಿಪರ ಸಂಘಟನೆಗಳು ಹೋರಾಟಗಾರರು ಸಾಕಷ್ಟು ಪ್ರತಿಭಟನೆಗಳನ್ನು ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ. ಇಷ್ಟಾದರೂ ಉಭಯ ಕೋಮುಗಳ ನೈತಿಕ ಪೊಲೀಸರ ಅಟ್ಟಹಾಸ ಕಡಿಮೆಯಾಗಿಲ್ಲ.

ನೈತಿಕ ಪೊಲೀಸರ ಕಾಟದಿಂದಾಗಿ ಕರಾವಳಿ ಭಾಗದಲ್ಲಿ ಭಿನ್ನ ಕೋಮಿನ ಯುವಕ-ಯುವತಿಯರು ಸಾರ್ವಜನಿಕವಾಗಿ ಪರಸ್ಪರ ಮಾತನಾಡಲೂ ಭಯಪಡುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಸ್ಕೃತಿ ಹೆಸರಲ್ಲಿ ಪಬ್ ಗಳಲ್ಲೋ, ಹೋಂ ಸ್ಟೇಗಳಲ್ಲೋ, ಹೊಟೇಲ್ ಗಳಲ್ಲೋ, ಬೀಚ್ ಗಳಲ್ಲೋ ಎರಡು ಮನಸ್ಸಗಳ ನಡುವಿನ ಗೆಳೆತನ, ಭಾಂಧವ್ಯ, ಪ್ರೀತಿಯನ್ನು ಸಾರ್ವಜನಿಕವಾಗಿ ಕಸಿದು ಅವರನ್ನು ಹಿಂಸಿಸಿ ಅವಮಾನಪಡಿಸುವ ಮಾನವ ಸಂಬಂಧಗಳ ವಿರೋಧಿ ನೈತಿಕ ಪೊಲೀಸಗಿರಿ ವಿರೋಧಿಸಿ ಪ್ರೀತಿಯ ಪ್ರತೀಕವಾಗಿರುವ ಚುಂಬನವನ್ನು ಆಚರಿಸುವ “ಕಿಸ್ ಆಫ್ ಲವ್” ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದರಲ್ಲಿ ತಪ್ಪೇನಿದೆ?

ಬೇಲೂರು –ಹಳೆಬೀಡು – ಅಜೆಂತಾ- ಎಲ್ಲೂರಗಳಲ್ಲಿರುವ ವಿವಿಧ ಭಂಗಿಯ ನಗ್ನ ವಿಗ್ರಹಗಳನ್ನು KissOfLove_1ಸಾರ್ವಜನಿಕರು ವೀಕ್ಷಣೆ ಮಾಡುವುದಿಲ್ಲವೇ? ಇಸ್ಲಾಮ್ ಧರ್ಮದದ ಸಂಪ್ರದಾಯದ ಪ್ರಕಾರ ವ್ಯಕ್ತಿಗಳು ಪರಸ್ಪರ ಭೇಟಿಯಾದಾಗ ಕೈಕುಲುಕಿ, ಆಲಂಗಿಸಿ ಎರಡೂ ಕೆನ್ನೆಗಳಿಗೆ ಚುಂಬನ ಮಾಡುವ ಸಂಪ್ರದಾಯವಿಲ್ಲವೇ? ಇವುಗಳು ಸಾರ್ವಜನಿಕವಾಗಿ ನಡೆಯುವುದಿಲ್ಲವೇ? ಚುಂಬನವನ್ನು ಕೇವಲ ಕಾಮದೃಷ್ಟಿಯಿಂದ ನೋಡುವುದನ್ನು ಬಿಟ್ಟು ಅದನ್ನು ಪ್ರೀತಿಯ ಸಂಕೇತವಾಗಿ ನೋಡಬೇಕಾಗಿದೆ. ಇಲ್ಲಿ ಕೆಲವು ವ್ಯಕ್ತಿಗಳು ಪರಸ್ಪರ ಸಮ್ಮತಿಯಿಂದ ನೈತಿಕ ಪೊಲೀಸ್ ಗಿರಿಯಂತಹಾ ಪ್ರೇಮಿಗಳ ವಿರೋಧಿ ಹಾಗೂ ಕಾನೂನು ಬಾಹಿರ ಕೃತ್ಯವನ್ನು ವಿರೋಧಿಸಿ “ಕಿಸ್ ಆಫ್ ಲವ್” ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದು ಅವರ ಅಭಿವ್ಯಕ್ತಿ ಸ್ವಾತಂತ್ರ. ತಮ್ಮ ಪ್ರೀತಿಯ ಪ್ರತೀಕವಾದ ಚುಂಬನದ ಮೂಲಕ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಪಡಿಸುವುದರಿಂದ ಯಾರಿಗೆ ಏನು ಸಮಸ್ಯೆ ? ಈ ರೀತಿಯ ಪ್ರತಿಭಟನೆ ಅದ್ಯಾಗೆ ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟುಮಾಡುತ್ತದೆ ? ಅದ್ಯಾಗೆ ಸುಸಂಸ್ಕೃತರ ನೆಮ್ಮದಿಯನ್ನು ಕೆಡಿಸುತ್ತದೆ? ಬದಲಾಗಿ ಇಲ್ಲಿ ಜನಸಮಾನ್ಯರ, ಸುಸಂಸ್ಕೃತರ ನೆಮ್ಮದಿಯನ್ನು ಕೆಡಿಸುತ್ತಿರುವುದು ನೈತಿಕ ಪೊಲೀಸ್ ಗಿರಿ. ನೈತಿಕ ಪೊಲೀಸರ ಕಾಟದಿಂದಾಗಿ ಸಹೋದರ-ಸಹೋದರಿಯರೂ ಜೊತೆಜೊತೆಯಾಗಿ ಸುತ್ತಾಡಿದಾಗಲೂ ಅನುಮಾನದಿಂದ ಹಿಡಿದು ಹಲ್ಲೆ ನಡೆಸಿದ ಅನೇಕ ಘಟನೆಗಳೂ ಕರಾವಳಿ ಭಾಗದಲ್ಲಿ ನಡೆದಿವೆ.

ಇನ್ನು ಸಾರ್ವಜನಿಕವಾಗಿ ಈ ರೀತಿ ಚುಂಬನಗಳನ್ನು ಮಾಡುವುದರ ಮೂಲಕ ಪ್ರತಿಭಟಿಸುವುದು ಅತ್ಯಾಚಾರಗಳಿಗೆ ಎಡೆಮಾಡಿ ಕೊಡುತ್ತಿವೆ ಎಂಬ ವಾದದಲ್ಲಿ ಪುರುಷ ಪ್ರಧಾನ ಮನಸ್ಥಿತಿಯ ಅಂಶಗಳು ಅಡಕವಾಗಿವೆ. ಹೆಣ್ಣಿನ ದೇಹ ಪುರುಷನ ಆಸ್ತಿ ಎಂಬ ಪುರುಷ ಪ್ರಧಾನ ಮನಸ್ಥಿತಿ ಇಂದು ಅತ್ಯಾಚಾರಕ್ಕೆ ಪ್ರಮುಖವಾದ ಪ್ರೇರಣೆ. ಹೆಣ್ಣಿನ ದೇಹ ಪುರುಷನ ಹಕ್ಕು ಎಂಬ ಮನಸ್ಥಿತಿಗೆ ವಿರುದ್ಧವಾಗಿ ಹೆಣ್ಣು- ಗಂಡು ಪರಸ್ಪರ ಸಮಾನರು ಎಂಬ ಪರಿಕಲ್ಪನೆ ಹಾಗೂ ಪರಸ್ಪರರ ನಡುವಿನ ಪ್ರೀತಿ ವಾತ್ಸಲ್ಯದ ಸಂಕೇತವಾಗಿದೆ “ಕಿಸ್ ಆಫ್ ಲವ್”. ಸಾರ್ವಜನಿಕವಾಗಿ ಪ್ರತಿಭಟನೆಯ ಸಂಕೇತವಾಗಿ ಗಂಡು ಹೆಣ್ಣು ಚುಂಬಿಸುವುದು ಅತ್ಯಾಚಾರಕ್ಕೆ ಪ್ರೇರಣೆಯೆಂದಾದರೆ ದೇಶದಾದ್ಯಂತ ಅನೇಕ ಹಳ್ಳಿಗಳಲ್ಲಿ ಬಯಲು ಶೌಚಾಲಯಗಳಲ್ಲಿ ಮಹಿಳೆಯರು ಶೌಚ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ನಿಮಗೆ ಅಸಹ್ಯ ಹುಟ್ಟುದಿಲ್ಲವೇ? ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶದ ಬದೌನಲ್ಲಿ ಬಯಲು ಶೌಚಾಲಯಕ್ಕೆ ಶೌಚ ಮಾಡಲು ಹೋದ ಇಬ್ಬರುgollarahatti ಯುವತಿಯರ ಮೇಲೆ ಅತ್ಯಾಚಾರ ನಡೆದಿತ್ತು ಎಂಬುವುದು ಗಮನಾರ್ಹ ಸಂಗತಿ. ಇನ್ನೊಂದೆಡೆಯಲ್ಲಿ ಸಾರ್ವಜನಿಕ ಚುಂಬನದಂತಹಾ ವಿದೇಶಿ ಆಚರಣೆಗಳಿಂದ ನಮ್ಮ ಸಂಸ್ಕೃತಿ ನಾಶ ಆಗುತ್ತದೆ ಎಂದು ಬೊಬ್ಬಿಡುವ ಸಂಸ್ಕೃತಿ ರಕ್ಷಕರು, ನಮ್ಮ ಸಮಾಜದಲ್ಲಿ ಆಚರಣೆಯಲ್ಲಿರುವ ಅನಿಷ್ಟ ಪದ್ದತಿಗಳಾದ ಅಜಲು ಪದ್ದತಿ, ದೇವದಾಸಿ ಪದ್ದತಿ, ಮಹಿಳೆಯರು ಅರೆ ಬೆತ್ತಲೆ ಸೇವೆ ನಡೆಸುವಂತಹಾ ಪದ್ದತಿ, ದಲಿತರನ್ನು ಪರಸ್ಪದ ಹೊಡೆದಾಡಿಸುವಂತಹಾ ಅಂಕ- ಅಂಡೋಡಿ ಪದ್ದತಿ, ಬಾಣಂತಿ ಹಾಗೂ ಮುಟ್ಟಾದಂತಹಾ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗಿಡುವ ಪದ್ದತಿ, ದಲಿತರಿಗೆ, ಮಹಿಳೆಯರಿಗೆ ದೇವಸ್ಥಾನ, ಮಸೀದಿ ಪ್ರವೇಶ ನೀಡದಂತಹಾ ಪದ್ದತಿ ಹಾಗೂ ಧೋರಣೆಗಳು, ಮೊಹರಂ ಆಚರಣೆಯ ಸಂಧರ್ಭದಲ್ಲಿ ಮೈಯಲ್ಲಿ ರಕ್ತ ಬರುವಂತೆ ಹೊಡೆದುಕೊಳ್ಳುವ ಸ್ವಯಂ ದಂಡನಾ ಪದ್ದತಿ, ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಇತರ ಸಮುದಾಯದವರನ್ನು ಉರುಳಾಡಿಸುವಂತಹಾ ಮಡೆ ಮಡೆ ಸ್ನಾನ ಪದ್ದತಿ, ಧರ್ಮ ಸಂಸ್ಕೃತಿಯ ಹೆಸರಲ್ಲಿ ಮಹಿಳೆಯರನ್ನು ಒಂದಲ್ಲಾ ಒಂದು ರೀತಿಯಲ್ಲಿ ಶೋಷಣೆಗೆ, ಧಾರ್ಮಿಕಟ್ಟುಪಾಡುಗಳಿಗೆ ಒಳಪಡಿಸಿ ಅವಮಾನಿಸುವಂತಹಾ ಪದ್ದತಿಗಳು, ಆಚರಣೆಗಳು, ಧೋರಣೆಗಳು ನಮ್ಮ ಸುಸಂಸ್ಕೃತ ಸಂಸ್ಕೃತಿಯ ಪ್ರತೀಕವೇ?

ನೈತಿಕ ಪೊಲೀಸ್ ಗಿರಿಯ ವಿರುದ್ಧವಾಗಿ ಕರ್ನಾಟಕದಲ್ಲಿ ನಡೆಸಲು ಉದ್ದೇಶಿಸಿರುವ ಕಿಸ್ ಆಫ್ ಲವ್ ಪ್ರತಿಭಟನೆಯನ್ನು ತಡೆಯಲು ಮುಂದಾಗಿರುವ ಹಿಂದೂ ಪರ ಸಂಘಟನೆಗಳಿಗೆ ತಮ್ಮ ಸಂಘಪರಿವಾರದ ಹಿನ್ನೆಲೆಯಿಂದ ಬಂದಿರುವ ಬಿಜೆಪಿ ಪಕ್ಷದ ಮಾಜಿ ಸಚಿವರೊಬ್ಬರು ರಾಜ್ಯದಲ್ಲಿ ಪ್ರಸಿದ್ದಿಯಾಗಿರುವುದೇ ಕಿಸ್ಸಿಂಗ್ ಪ್ರಕರಣದಿಂದ ಎಂಬುದು ತಿಳಿದಿಲ್ಲವೇ!?. ರಾಜ್ಯದ ರಾಜಕೀಯ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಬರದ ಕುರಿತಾಗಿ ಚರ್ಚೆ ನಡೆಯುತ್ತಿದ್ದ ಸಂಧರ್ಭದಲ್ಲಿ ಹೆಣ್ಣು- ಗಂಡಿನ ಕಾಮಕೇಲಿಯನ್ನು ನೋಡುತ್ತಾ ಆನಂದಪಡುತ್ತಿದ್ದಾಗ ನಮ್ಮ ಸಂಸ್ಕೃತಿ ರಕ್ಷಣೆಗೆ ನೀವೇಕೆ ಮುಂದಾಗಲಿಲ್ಲ ? ಇದೀಗ ನೈತಿಕ ಪೊಲೀಸ್ ಗಿರಿಯನ್ನು ಸಹಿಸಲಾಗದೆ ಸಾರ್ವಜನಿಕ ಚುಂಬನದ ಮೂಲಕ ತಮ್ಮ ಪ್ರತಿಭಟನೆಯನ್ನು ಅಭಿವ್ಯಕ್ತಿಪಡಿಸುವಾಗ ಅದನ್ನು ಸಂಸ್ಕೃತಿ ರಕ್ಷಣೆ ಹೆಸರಲ್ಲಿ ತಡೆಯುವ ನೈತಿಕತೆ ನಿಮಗೆಲ್ಲಿದೆ?. ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ ಪಬ್ ದಾಳಿ ರೂವಾರಿ ಹಾಗೂ ಹೆಣ್ಣು-ಗಂಡಿನ ನಡುವಿನ ಪ್ರೀತಿ – ಪ್ರೇಮವನ್ನು ಲವ್ ಜಿಹಾದ್ ಹೆಸರಲ್ಲಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕಾರ್ಯದಲ್ಲಿ ನಿರತರಾಗಿರುವ ಶ್ರೀ ರಾಮ ಸೇನೆ ಸಂಘಟನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರ “ಕಿಸ್ ಆಫ್ ಲವ್” ವಿರೋಧಿ ನೀತಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲ ಮುಸ್ಲಿಮ್ ಮೂಲಭೂತವಾದಿ ಯುವಕರೂ ಬೆಂಬಲವಾಗಿ ನಿಂತಿರುವುದು ಕೇರಳ ಮಾದರಿಯಲ್ಲಿ ಕರ್ನಾಟದಲ್ಲೂ ಉಭಯ-ಧರ್ಮಗಳ ಮೂಲಭೂತವಾದಿಗಳು ನೈತಿಕ ಪೊಲೀಸ್ ಗಿರಿಯ ವಿರುದ್ಧದ “ಕಿಸ್ ಆಫ್ ಲವ್” ವಿರೋಧಿಸಲು ಜೊತೆಯಾಗಿದ್ದಾರೆ.

ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಲು “ಕಿಸ್ ಆಫ್ ಲವ್” ಪ್ರತಿಭಟನೆಯ ಮಾರ್ಗದ ಆಯ್ಕೆ ಕುರಿತಾಗಿ ನೈತಿಕ ಪೊಲೀಸ್ ಗಿರಿ ವಿರೋಧಿ ಹೋರಾಟಗಾರರಲ್ಲೂ ಭಿನ್ನಾಭಿಪ್ರಾಯವಿದೆ. ನೈತಿಕ ಪೊಲೀಸರ ಸ್ವರ್ಗವಾದ ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ವಿರುದ್ಧ ಜನಪರ ಎಡ ಹಾಗೂ ಪ್ರಗತಿಪರ ಸಂಘಟನೆಗಳಿಂದ ಸಾಕಷ್ಟು ಹೋರಾಟಗಳು ನಡೆದಿದೆ ಹಾಗೂ ನಡೆಯುತ್ತಾ ಬರುತ್ತಿವೆ. ಡಿ.ವೈ.ಎಫ್ .ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಾಮಾಜಿಕ ಕಾರ್ಯಕರ್ತೆ ವಿದ್ಯಾದಿನಕರ್ ಸೇರಿದಂತೆ ಅನೇಕ ಹೋರಾಟಗಾರರು ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿಯ ವಿರುದ್ಧ ಸಾಕಷ್ಟು ಜನಪರ ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ. ಮಂಗಳೂರಿನಲ್ಲಿ 2012 ರಲ್ಲಿ ಹಿಂದೂಪರ ಸಂಘಟನೆಗಳು ನಡೆಸಿದ ಹೋಂಸ್ಟೇ ದಾಳಿ ನೈತಿಕ ಪೊಲೀಸ್ ಗಿರಿಯನ್ನು ವರದಿ ಮಾಡಿದಕ್ಕಾಗಿ ಮಂಗಳೂರಿನ ಪತ್ರಕರ್ತ ನವೀನ್ ಸೂರಿಂಜೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಯಿತು. ಆದ್ದರಿಂದ ನೈತಿಕ ಪೊಲೀಸ್ ಗಿರಿಯ ವಿರುದ್ಧ ರಾಜ್ಯದ ಅನೇಕ ಕಡೆಗಳಲ್ಲಿ ಚಳುವಳಿಯ ರೂಪದಲ್ಲಿ ನಡೆದಂತಹಾ ಹೋರಾಟದಲ್ಲಿ “ಕಿಸ್ ಆಫ್ ಲವ್” ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಶ್ರೀಮಂತ ವರ್ಗದ ಯುವಸಮೂಹದ ಪಾತ್ರ ನಗಣ್ಯ ಎಂಬುವುದು ಗಮನಾರ್ಹ ಅಂಶ. ಚುಂಬನ ಪ್ರತಿರೋಧ ಚಳುವಳಿಯ ಸಂಘಟಕರು, ಭಾಗಿಗಳು ಮುಕ್ತ ಮಾರುಕಟ್ಟೆಯ ಫಲಾನುಭವಿಗಳು, ದಿಢೀರ್ ಶ್ರೀಮಂತಿಕೆ ಪಡೆದ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ತಮ್ಮ ಮುಕ್ತ ಸ್ವಾತಂತ್ರಕ್ಕೆ ಅಡ್ಡಿಯಾದಾಗ ಆತಂಕಿತರಾಗಿ ಅವರು ಪ್ರತಿಭಟಿಸುವುದು ಸಹಜ. ಆದರೆ ಚುಂಬನ ಚಳುವಳಿಗಿಂತಲೂ ನೈತಿಕ ಪೊಲೀಸ್ ಗಿರಿಯಯನ್ನು ತಡೆಯಲು ಸಂಘಟಿತ, ಕಠಿಣವಾದ ಹಾದಿಯ ದೀರ್ಘಾವಧಿ ಹೋರಾಟಗಳಿಂದ ಮಾತ್ರ ಸಾಧ್ಯ ಎಂಬ ವಾದವನ್ನು ಕೂಡಾ ಒಪ್ಪಬೇಕಾಗುತ್ತದೆ.

ಅದೇನೇ ಇದ್ದರೂ ನಮ್ಮ ರಾಜ್ಯದ ಪ್ರಜ್ಞಾವಂತ ಜನಸಮೂಹ ಒಟ್ಟಾಗಿ ಇಲ್ಲಿ ಮಾಡಬೇಕಾದ ಕೆಲಸ “ಕಿಸ್ ಆಫ್ ಲವ್” ನಂತಹಾ ಪ್ರತಿಭಟನೆಯನ್ನು KissOfLove_2 ತಡೆಯೋದರ ಬದಲಾಗಿ ಇಂಥಹಾ ಪ್ರತಿಭಟನೆಯ ಅನಿವಾರ್ಯತೆಗೆ ಕಾರಣವಾಗಿರುವ ಅಮಾನವೀಯ ನೈತಿಕ ಪೊಲೀಸ್ ಗಿರಿಯನ್ನು ತಡೆಯಬೇಕಾಗಿದೆ. ಅದರ ಜೊತೆಗೆ “ಕಿಸ್ ಆಫ್   ಲವ್” ಮಾತ್ರ ನೈತಿಕ ಪೊಲೀಸ್ ಗಿರಿಯ ವಿರುದ್ಧ ನಡೆಯುವ ಮಾದರಿ ಹೋರಾಟವಲ್ಲ. ಬದಲಾಗಿ ಜನಸಾಮಾನ್ಯರು, ಪ್ರಗತಿಪರರು ಸಂಘಟಿತ, ಪ್ರಬಲ ಚಳುವಳಿಯ ರೂಪದಲ್ಲಿ ಹೋರಾಟಗಳನ್ನು ಇನ್ನಷ್ಟು ತೀವೃಗೊಳಿಸಿ ಅಮಾನವೀಯ ನೈತಿಕ ಪೊಲೀಸ್ ನೈತಿಕ ಪೊಲೀಸ್   ಗಿರಿಯ ವಿರುದ್ಧ ಸೆಟೆದುನಿಲ್ಲಲೇಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ.

ಉತ್ತಮ ಪತ್ರಕರ್ತರು ಮೊದಲು ಓದಬೇಕು – ದಿನೇಶ್ ಅಮೀನ್ ಮಟ್ಟು

ಸದಾನಂದ ಲಕ್ಷ್ಮೀಪುರ

ಪತ್ರಕರ್ತರು ಮೊದಲು ಓದಬೇಕು. ಭಾರತದ ಸಂವಿಧಾನವನ್ನು, ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾರ ಬರಹಗಳನ್ನು ಓದದೆ ಭಾರತದ ಸಂದರ್ಭದಲ್ಲಿ ಉತ್ತಮ ಪತ್ರಕರ್ತರಾಗಲು ಸಾಧ್ಯವಿಲ್ಲ ಎಂದು ಖಡಕ್ ಸಂದೇಶ ಕೊಟ್ಟವರು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು. ಅವರು ಮಂಗಳವಾರ ಬೆಂಗಳೂರಿನ ಪತ್ರಕರ್ತರ ಅಧ್ಯಯನ ಕೇಂದ್ರ ಹೊರವಲಯದ dinesh-amin-journalistsಸ್ಫೂರ್ತಿಧಾಮದಲ್ಲಿ ನಡೆಸಿದ ಒಂದು ದಿನದ ಪತ್ರಕರ್ತರ ಶಿಬಿರದಲ್ಲಿ ಮಾತನಾಡಿದರು.

ಅನೇಕ ಪತ್ರಕರ್ತರಲ್ಲಿ ಓದುವ ಅಭ್ಯಾಸವೇ ಇಲ್ಲ. ಅನೇಕರಿಗೆ ಭಾರತೀಯ ಸಂವಿಧಾನದ ಪರಿಚಯ ಇಲ್ಲ. ನಮ್ಮ ಶಾಲೆಗಳೂ ಅದನ್ನು ಕಲಿಸಿಲ್ಲ. ಉತ್ತಮ ಪತ್ರಕರ್ತರಾಗಬೇಕೆಂದಿರುವವರೆಲ್ಲ ಮೊದಲು ಸಂವಿಧಾನ ಓದಬೇಕು. ವೈವಿಧ್ಯಮಯ ಭಾರತವನ್ನು ಅರ್ಥ ಮಾಡಿಕೊಳ್ಳಲು ಎಲ್ಲಾ ಪತ್ರಕರ್ತರು ಓದಲೇಬೇಕಾದ ಮೂರು ವ್ಯಕ್ತಿಗಳು ಮಹಾತ್ಮ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾ. ಈ ಮೂವರ ಬರಹಗಳು ಸುಲಭ ಬೆಲೆಗೆ ದೊರಕುವ ವ್ಯವಸ್ಥೆಯನ್ನು ಸರಕಾರಗಳೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮಾಡಿವೆ. “ಉತ್ತಮ ಪತ್ರಕರ್ತರಾಗಲು ಸಲಹೆ ಕೊಡಿ ಎಂದು ನನ್ನನ್ನು ಕೇಳುವ ಎಲ್ಲರಿಗೂ ನಾನು ಹೇಳುವುದು ಇದನ್ನೇ. ಜೊತೆಗೆ ದಿನಕ್ಕೆ ಎರಡು ಪತ್ರಿಕೆಗಳನ್ನಾದರೂ ಸಂಪೂರ್ಣವಾಗಿ ಓದಬೇಕು”, ಎಂದರು.

ಮೋದಿ ಪ್ರಧಾನಿಯಾದ ನಂತರದಲ್ಲಿ ಮಾಧ್ಯಮಗಳ ನಡೆಯನ್ನು ಟೀಕಿಸುತ್ತಾ ಅಮೀನ್ ಮಟ್ಟು ಅವರು, “ಬಹುತೇಕರಿಗೆ ಕುರುಡು ಆವರಿಸಿಕೊಂಡಿದೆ ಎನಿಸುತ್ತದೆ. ವಿನೋದ್ ಮೆಹ್ತಾ ಅಂತಹವರು ತಮ್ಮ ಬರಹವೊಂದರಲ್ಲಿ, ಮೋದಿ ಪತ್ರಕರ್ತರೊಂದಿಗೆ ಮಾತನಾಡಬೇಕು ಅದರಿಂದ ದೇಶಕ್ಕೂ ಒಳಿತು ಎಂದು ಹೇಳುತ್ತಾರೆ. ಇದುವರೆಗಿನ journalists-spoorthidhamaಪತ್ರಿಕೋದ್ಯಮ ವರದಿ ಮಾಡಿದ ಯಾವುದೇ ಹಗರಣವಾಗಲಿ, ಅದು ಬಹಿರಂಗವಾದದ್ದು ಪತ್ರಕರ್ತರ ಶ್ರಮದಿಂದ. ಇಂತಹ ಹಿನ್ನೆಲೆ ಇರುವಾಗ, ಪ್ರಧಾನ ಮಂತ್ರಿಯನ್ನು ಪತ್ರಕರ್ತರೊಂದಿಗೆ ಮಾತನಾಡಿ ಎಂದು ಗೋಗರೆಯುವ ಪರಿಸ್ಥಿತಿ ಏಕೆ..?” ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದಾರೆ. ಹಲವು ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾರತದಲ್ಲಿಯೇ ಉಳಿದಿದ್ದಾರೆ. ಹಾಗಾದರೆ, ಸರಕಾರದಲ್ವಿಲಿ ದೇಶಾಂಗ ಸಚಿವರ ಪಾತ್ರವೇನು. “ಯಾವ ಮಾಧ್ಯಮವೂ ಇಂತಹ ಪ್ರಶ್ನೆಯನ್ನು ಕೇಳುತ್ತಿಲ್ಲ. ವಿದೇಶಾಂಗ ಸಚಿವರು ಗೌಣ ಆಗುತ್ತಿರುವುದು ನನ್ನ ಪ್ರಕಾರ ಸಂಪಾದಕೀಯ ಬರಹಕ್ಕೆ ಅರ್ಹವಾದ ಸಂಗತಿ ಆದರೆ, ಯಾರಿಗೂ ಇದು ಸುದ್ದಿ ಎನಿಸುತ್ತಿಲ್ಲ. ಕುರುಡು ಆವರಿಸುತ್ತಿದೆ” ಎಂದರು.

ಶಿಬಿರಕ್ಕೆ ಚಾಲನೆ ಕೊಟ್ಟು ಮಾತನಾಡಿದ ವಿಜಯ ಕರ್ನಾಟಕ ಸಂಪಾದಕ ಸುಗತ ಶ್ರೀನಿವಾಸರಾಜು ಭಾರತದ ಹೆಗ್ಗಳಿಕೆಯೇ ಅದರ ವೈವಿಧ್ಯತೆ. ಆದರೆ ಇತ್ತೀಚೆಗೆ ಆ ವೈವಿಧ್ಯತೆಯನ್ನು ನಿರಾಕರಿಸುವಂತಹ ಅಭಿಪ್ರಾಯಗಳಿಗೆ ಅಲ್ಲಲ್ಲಿ ಮನ್ನಣೆ ಪಡೆಯುತ್ತಿವೆ. ಪತ್ರಿಕೆಗಳು ಕೂಡಾ ಈ ವೈವಿಧ್ಯತೆಯನ್ನು sugata-poornimaಎತ್ತಿಹಿಡಿಯಲು ಸೋಲುತ್ತಿವೆ. ಅಂತಹ ಪ್ರಯತ್ನಗಳು ಅಲ್ಲಲ್ಲಿ ನಡೆದರೂ ಅವು ಕೇವಲ ಟೋಕನಿಸಂ ಹಂತಕ್ಕೆ ನಿಂತುಬಿಟ್ಟಿವೆ ಎಂದರು.

ಚರ್ಚೆ ಸಂದರ್ಭದಲ್ಲಿ ಸುದ್ದಿ ವಾಹಿನಿಗಳ ಅವಾಂತರದ ಮಾತು ಬಂದಾಗ, ಭಾರತದಲ್ಲಿ ಟಿ.ವಿ ಮಾಧ್ಯಮ ಇನ್ನೂ ತನ್ನ ಪ್ರೌಢಾವಸ್ಥೆಯಲ್ಲಿದೆ (adolescence). ಮುದ್ರಣ ಮಾಧ್ಯಮಕ್ಕೆ ಸುದೀರ್ಘ ಇತಿಹಾಸವಿದೆ, ಗಾಂಭೀರ್ಯವಿದೆ. ಆದರೆ ಟಿ.ವಿ ಮಾಧ್ಯಮಕ್ಕೆ ಅದಾವುದೂ ಇಲ್ಲ ಎಂದರು. ಪ್ರಜಾವಾಣಿ ಸಮೂಹದ ಸಹಾಯಕ ಸಂಪಾದಕಿ ಹಾಗೂ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಅವರು ಶಿಬಿರದಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು.