ಜಾತಿವ್ಯವಸ್ಥೆಯ ಸಂಕೀರ್ಣ ರೂಪಗಳು


– ಡಾ.ಎಸ್.ಬಿ. ಜೋಗುರ


 

ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಬೇರು ಬಿಟ್ಟಿರುವ ಈ ಜಾತಿಪದ್ಧತಿಯನ್ನು ಒಂದು ಪ್ರಮುಖ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯೆಂದು ಅಧ್ಯಯನ ಮಾಡುವ ನಿಟ್ಟಿನಲ್ಲಿ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ವಲಯಗಳಲ್ಲಿ ಸಾಕಷ್ಟು ಅಧ್ಯಯನಗಳು ನಡೆದಿವೆಯಾದರೂ ಪ್ರಯತ್ನ ಸಾಲದು. ಜಾತಿ ಪದ್ಧತಿ ಎನ್ನುವುದು ಒಂದು ಶತಮಾನದಿಂದ ಇನ್ನೊಂದು ಶತಮಾನಕ್ಕೆ ಹೊಸ ಬಗೆಯ ಸ್ಥಿತ್ಯಂತರಗಳನ್ನು ಕಂಡುಕೊಳ್ಳುತ್ತಲೇ ಮುಂದೆ ಸಾಗಿದೆ. ನಾವು ಕೆಲವು ದಶಕಗಳ ಹಿಂದೆ ಈಗಿರುವ ಜಾತಿಯಾಧಾರಿತ ಸಂಘಟನೆಗಳು ಮತ್ತು ಅದಕ್ಕೊಬ್ಬ ಮಠಾಧೀಶನನ್ನು ಕಾಣಲಾಗುತ್ತಿರಲಿಲ್ಲ. ಇದನ್ನೇ ಕೆಲವು ಸೋ ಕಾಲ್ಡ್ ಸಾಹಿತಿಗಳು.. ಬುದ್ಧಿಜೀವಿಗಳು ಈ ಬಗೆಯ ಜಾತಿಯ ಸಂಘಟನೆ ಒಂದು ದೇಶದ ಸಾಂಸ್ಕೃತಿಕ ಬಹುತ್ವಕ್ಕೆ ತೀರಾ ಮುಖ್ಯ ಎಂದು ಪ್ರತಿಪಾದಿಸಿದರು. ಹಾಗೆ ಹೇಳುವ ಮೂಲಕ ಅವರೂ ಕೂಡಾ ಪರೋಕ್ಷವಾಗಿ ಜಾತಿ ಒಂದು ಅನಿವಾರ್ಯವಾದ ಸಂಸ್ಥೆ ಎನ್ನುವದನ್ನು ಒಪ್ಪಿಕೊಂಡರು. ತೀರಾ ಪ್ರಾಚೀನ ಕಾಲದಲ್ಲಿ ಅಂದರೆ ವೇದಗಳ ಕಾಲದಲ್ಲಿ ಜಾತಿಯ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ. ವೇದಗಳ ನಂತರದ ಕಾಲದಲ್ಲಿ ಮಾತ್ರ ಈ ಅಸ್ಪ್ರಶ್ಯತೆ ಮತ್ತು ಜಾತಿಯ ಬಗೆಗಿನ ಪ್ರಸ್ತಾಪಗಳು ದೊರೆಯುತ್ತವೆ. ಜನಸಾಮಾನ್ಯರು ಇಂದಿಗೂ ವರ್ಣ ವ್ಯವಸ್ಥೆಯನ್ನೇ ಜಾತಿಯೊಂದಿಗೆ ಕಲಬೆರಕೆ ಮಾಡಿ ಮಾತನಾಡುವದಿದೆ. ಆದರೆ ಸಮಾಜಶಾಸ್ತ್ರೀಯ ಅಧ್ಯಯನಗಳ ಹಿನ್ನೆಲೆಯಲ್ಲಿ ನೋಡಿದಾಗ ವರ್ಣಗಳೇ ಬೇರೆ, caste-systemಜಾತಿಯೇ ಬೇರೆ. ವರ್ಣಗಳು ಕ್ರಮೇಣವಾಗಿ ಕಾಲಾನುಗತಿಕವಾಗಿ ಜಾತಿಪದ್ಧತಿಯ ಹುಟ್ಟಿಗೆ ಕಾರಣವಾಗಿರಬಹುದು, ಆದರೆ ವರ್ಣಗಳೇ ಜಾತಿಗಳಲ್ಲ. ವೇದಗಳ ಆರಂಭದ ಕಾಲದಲ್ಲಿ ಅದರಲ್ಲೂ ಋಗ್ವೇದದ ಪುರುಷಸೂಕ್ತದಲ್ಲಿ ಬರುವ ವಿವರಣೆಯಂತೆ ಬ್ರಾಹ್ಮಣ ಬ್ರಹ್ಮನ ಬಾಹುಗಳಿಂದ ಜನಿಸಿದರು, ಕ್ಷತ್ರಿಯರು ಬ್ರಹ್ಮನ ತೋಳುಗಳಿಂದ, ವೈಶ್ಯರು ಬ್ರಹ್ಮನ ತೊಡೆಯಿಂದ ಶೂದ್ರರು ಬ್ರಹ್ಮನ ಪಾದಗಳಿಂದ ಜನಿಸಿದರು ಎನ್ನುವ ಬಗ್ಗೆ ಶ್ಲೋಕಗಳು ದೊರೆಯುತ್ತವೆ. ಅಂದರೆ ವರ್ಣಗಳು ಸೃಷ್ಟಿಕರ್ತನಾದ ಬ್ರಹ್ಮನ ಕೊಡುಗೆ ಎಂದು ನಂಬಲಾಗುತ್ತದೆ. ಮುಖದಿಂದ, ತೋಳುಗಳಿಂದ ಜನನ ಅಸಾಧ್ಯ; ಅದನ್ನು ಕೇವಲ ಆಯಾ ವರ್ಣಗಳು ಮಾಡುವ ಕೆಲಸವನ್ನು ಸಂಕೇತಿಸುವ ನಿಟ್ಟಿನಲ್ಲಿ ಸೂಚಿತ ಪದಗಳು. ಬ್ರಹ್ಮನ ಮುಖದಿಂದ ಅಂದರೆ ಬ್ರಾಹ್ಮಣರು ವೇದಗಳ ಅಧ್ಯಯನ, ಮಂತ್ರ ಪಠಣ, ರಾಜನಿಗೆ ಮಾರ್ಗದರ್ಶನ ಮುಂತಾದವುಗಳನ್ನು ಮಾಡಬೇಕು. ಕ್ಷತ್ರಿಯ ತೋಳುಗಳಿಂದ ಅಂದರೆ ಪರಾಕ್ರಮದ ಸಂಕೇತ ರಾಜ್ಯವನ್ನು ರಕ್ಷಿಸುವ ಜೊತೆಗೆ ಜನರ ವಿತ್ ಜೀವಿತಗಳನ್ನು ರಕ್ಷಿಸುವ ಕೆಲಸ ಮಾಡಬೇಕು. ಇನ್ನು ವೈಶ್ಯನಾದವನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚಾರ ಮಾಡಿ ವ್ಯಾಪಾರ ವಹಿವಾಟುಗಳನ್ನು ಮಾಡುವ ಕಾರಣಕ್ಕೆ ಅವನು ತೊಡೆಯಿಂದ ಜನಿಸಿದವನು ಎನ್ನುವ ಸಂಕೇತವಿದೆ. ಇನ್ನು ಶೂದ್ರರು ಈ ಮೇಲಿನ ಮೂರು ವರ್ಣಗಳ ಸೇವೆಯನ್ನು ಮಾಡಬೇಕು ಎನ್ನುವ ಅರ್ಥದಲ್ಲಿ ಅವರು ಪಾದಗಳಿಂದ ಜನಿಸಿದವರು ಎನ್ನುವ ಸಂಕೇತವಿದೆ. ಹಾಗೆ ನೋಡಿದರೆ ಈ ವರ್ಣ ವ್ಯವಸ್ಯೆಯಲ್ಲಿ ವ್ಯಕ್ತಿಯ ಸ್ಥಾನಮಾನಗಳು ಆತನ ಹುಟ್ಟನ್ನು ಆಧರಿಸಿರದೇ ಆತನ ಗುಣ ಮತ್ತು ಕರ್ಮಗಳನ್ನು ಆಧರಿಸಿದ್ದವು. ಗೀತೆಯಲ್ಲಿ ಕೃಷ್ಣ ಹೇಳುವ ಹಾಗೆ ಚಾತುರ್ವರ್ಣ ಮಯಾಸೃಷ್ಟಿ ಗುಣಕರ್ಮ ವಿಭಾಗಶ:, ಅಂದರೆ ಚತುರ್ವರ್ಣಗಳನ್ನು ಗುಣ ಮತ್ತು ಕರ್ಮಗಳನ್ನು ಆಧರಿಸಿ ವಿಂಗಡಿಸಲಾಗಿದೆಯೇ ಹೊರತು ಹುಟ್ಟನಲ್ಲ. ಇಲ್ಲಿ ಬ್ರಾಹ್ಮಣನ ಮಗ ಬ್ರಾಹ್ಮಣನೇ ಆಗಬೇಕೆಂದಿರಲಿಲ್ಲ. ಆತನಿಗೆ ವಿದ್ಯೆ ಅನುವಾಗದಿದ್ದರೆ ಆತ ಶೂದ್ರನಾಗಬೇಕಿತ್ತು, ವ್ಯಾಪಾರಿ ಸೂತ್ರಗಳನ್ನು ನಿರ್ವಹಿಸಲಾಗದವನು ಶೂರ ಪರಾಕ್ರಮಿ ಆಗಿದ್ದರೆ ಕ್ಷತ್ರಿಯನಾಗುತ್ತಿದ್ದ. ಇವಾವವೂ ನೀಗದಿರುವವನು ಶೂದ್ರನಾಗಿರುತ್ತಿದ್ದ ಎನ್ನುವ ವಿವರಣೆಗಳೂ ಇವೆ. ಆ ಮೂಲಕ ವರ್ಣ ವ್ಯವಸ್ಥೆ ಒಂದು ಸಾಮಾಜಿಕ ವ್ಯವಸ್ಥೆಯ ನಿರ್ವಹಣಾ ಸೂತ್ರವಾಗಿತ್ತೇ ಹೊರತು ಅಲ್ಲಿ ನಾಲ್ಕು ವರ್ಣಗಳಲ್ಲಿ ಯಾವುದೇ ಬಗೆಯ ತಾರತಮ್ಯಗಳಿರಲಿಲ್ಲ ಎಂದು ಹೇಳಲಾಗುತ್ತದೆ. ಹೀಗೆ ಹೇಳುವಾಗಲೇ ಆಶ್ರಮಗಳಲ್ಲಿ ಮೊದಲನೆಯದಾದ ಬ್ರಹ್ಮಚರ್ಯಾಶ್ರಮದಲ್ಲಿ ಶಿಕ್ಷಣಕ್ಕಾಗಿ ತೆರಳುವಾಗ ಕೇವಲ ಮೂರು ವರ್ಣಗಳ ಸಂತಾನಕ್ಕೆ ಮಾತ್ರ ಅಲ್ಲಿ ಪ್ರವೇಶವಿರುವ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ. ನಾಲ್ಕನೇಯ ವರ್ಣ ಶೂದ್ರರಿಗೆ ಶಿಕ್ಷಣಕ್ಕಾಗಿ ಗುರುಕುಲದಲ್ಲಿ ಪ್ರವೇಶವಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅದೇನೇ ಇರಲಿ ವರ್ಣ ವ್ಯವಸ್ಥೆಯೇ ಭವಿಷ್ಯತ್ತಿನಲ್ಲಿ ಜಾತಿ ವ್ಯವಸ್ಥೆಗೆ ಜನ್ಮ ನೀಡಿರುವದಂತೂ ನಿಜ. ಅದರ ಜೊತೆಗೆ ಇತರೇ ಸಂಗತಿಗಳು ಕೂಡಾ ಕೆಲಸ ಮಾಡಿವೆ. ವರ್ಣ ವ್ಯವಸ್ಥೆಯಲ್ಲಿ ಕೇವಲ ನಾಲ್ಕು ಪ್ರಕಾರಗಳು ಅವು ಇಡೀ ದೇಶದಾದ್ಯಂತ ಸರ್ವವ್ಯಾಪಕವಾಗಿ ಗುರುತಿಸಿಕೊಂಡವುಗಳು. ಜಾತಿಯ ವಿಷಯವಾಗಿ ಹಾಗೆ ಹೇಳಲಾದೀತೇ..? ಸುಮಾರು ೩೦೦೦ ಕ್ಕಿಂತಲೂ ಅಧಿಕ ಜಾತಿ-ಉಪಜಾತಿಗಳು ನಮ್ಮಲ್ಲಿವೆ. ಇಲ್ಲಿರುವ ಏಣಿಶ್ರೇಣಿಯಲ್ಲಿ ಮೇಲಿನ ಮತ್ತು ಕೆಳಗಿನ ಸ್ಥಾನಮಾನಗಳು ಸ್ಥಿರವಾದವುಗಳು, ಅಲ್ಲಿ ಯಾವುದೇ ರೀತಿಯ ಬದಲಾವಣೆಗೆ ಅವಕಾಶವಿಲ್ಲ. ಇನ್ನೇನಾದರೂ ಅಲ್ಪ ಸ್ವಲ್ಪ ಬದಲಾವಣೆಗಳಾದರೆ ಏಣಿಶ್ರೇಣಿಯ ಮಧ್ಯ ಭಾಗದಲ್ಲಿ ಬರುವ ಜಾತಿಗಳಲ್ಲಿ ಮಾತ್ರ. ಅದು ಕೂಡಾ ಕೇವಲ ಅವರೊಂದಿಗೆ ಬೆರೆಯುವ, ಊಟ ಮಾಡುವ, ಕೊಡು ತೆಗೆದುಕೊಳ್ಳುವ ವ್ಯವಹಾರಗಳ ಬಗ್ಗೆ ಮಾತ್ರ.

ಜಾತಿ ಪದ್ಧತಿ ಎನ್ನುವುದು ಇರಬಾರದು ಎಂದು ಪ್ರತಿಪಾದಿಸುವವರು ಇರುವಂತೆ ಅದು ಇರಬೇಕು ಎಂದು ಪ್ರತಿಪಾದಿಸುವವರೂ ಇದ್ದಾರೆ. ಇಲ್ಲಿ ಜಾತಿಪದ್ಧತಿಯನ್ನು ಲಾಭಸೂಚಕ ವಿಷಯವಾಗಿ ಬಳಸಿಕೊಳ್ಳುವವರಿಗೆ ಅದು ಬೇಕು. ಅದರಿಂದ ದಿನಾಲು ಯಾತನೆ ಮತ್ತು ಕಿರಕಿರಿಯನ್ನು ಅನುಭವಿಸುವವರಿಗೆ ಅದು ಬೇಕಾಗಿಲ್ಲ. ಇನ್ನು ಕೆಲವು ಮಡಿವಂತ ಮನಸುಗಳಿಗೆ ಮತ್ತು ಪ್ರತಿಗಾಮಿಗಳಿಗೆ ಅದೊಂದು ಪವಿತ್ರವಾದ ಸಂಸ್ಥೆ. ಅವರು ಬೇಕಾದರೆ ತಮ್ಮ ಜೀವವನ್ನೇ ಬಿಟ್ಟಾರು ಆದರೆ ಜಾತಿಯನ್ನು ಬಿಡುವದಿಲ್ಲ. ಒಟ್ಟು ನಿಸರ್ಗದಲ್ಲಿಯೇ ಮೂಲಭೂತವಾಗಿ ಅಸಮಾನತೆಗಳಿವೆ. ಭೂಮಿಯ ಮೇಲೆ ಯಾವುದು ಒಂದೇ ರೀತಿಯಲ್ಲಿದೆ ಹೇಳಿ..? ಬೆಟ್ಟ-ಗುಡ್ಡ, ನದಿ, ಸರೋವರ, ಗಿಡ ಮರಗಳು ಇಲ್ಲೂ ಅಸಮಾನತೆಗಳಿಲ್ಲವೇ..? ಹಾಗಾಗಿ ಜಾತಿಯೂ ಇರಲಿ ಬಿಡಿ ಎನ್ನುವವರಿಗೆ ನಿಸರ್ಗದಲ್ಲಿಯ ಅಸಮಾನತೆಗೂ ಮತ್ತು ಮಾನವ ರೂಪಿಸಿಕೊಂಡ ಅಸಮಾನತೆಯ ನಡುವಿನ ವ್ಯತ್ಯಾಸಗಳಲ್ಲಿ ಒಂದು ಸ್ಪಷ್ಟವಾದ ಅಂತರವನ್ನು ನಾವು ಗುರುತಿಸಬೇಕಿದೆ. ನಿಸರ್ಗದಲ್ಲಿ ಮಾನವನ ಸಮಾಜದಲ್ಲಿರುವಂತೆ ಶುದ್ಧ-ಅಶುದ್ಧ, ಮಡಿ-ಮೈಲಿಗೆ, ಸ್ಪೃಶ್ಯ-ಅಸ್ಪೃಶ್ಯ ಎನ್ನುವ ಭಾವನೆಗಳು ಇಲ್ಲ. ಜಾತಿ ಹುಟ್ಟಿಸಿರುವ ಈ ಬಗೆಯ ಅಸಮಾನತೆಗಳು ಅಂತರಗಳು ಸಾಮಾಜಿಕ ಐಕ್ಯತೆಗೆ ನೇರವಾಗಿ ಗಂಡಾಂತರಕಾರಿಯಾಗಿ ಕೆಲಸ ಮಾಡುತ್ತವೆ. ಹಾಗಾಗಿಯೇ ಅನೇಕ ಸಮಾಜಶಾಸ್ತ್ರಜ್ಞರು ಜಾತಿಯನ್ನು ಕುರಿತು ಅದರ ಸ್ವರೂಪದ ಬಗ್ಗೆ ಚರ್ಚಿಸುವಾಗ ಇದು ಭಾರತೀಯ ಸಮಾಜದ ಹೋಳು-ಹೋಳಾದ ಭಾಗ ಎಂದು ಹೇಳುವದಿದೆ. ಜಾತಿ-ಜಾತಿಯ ನಡುವೆ ನಿರ್ಮಿಸಲಾಗುವ ಗೋಡೆಗಳು ತನ್ನ ತನ್ನ ಜಾತಿಯ ಶ್ರೇಷ್ಟತೆಯನ್ನು ಸಾರುವ ಜೊತೆಗೆ ಪ್ರತ್ಯೇಕತೆಯನ್ನೂ ಸಾರುತ್ತದೆ. ಇದು ಹೆಚ್ಚು ಅಪಾಯಕಾರಿ. ಸಾಂಸ್ಕೃತಿಕ ಬಹುತ್ವ ಸರಿ ಆದರೆ ಅದು ಅಖಂಡವಾಗಿರಬೇಕಲ್ಲವೇ..? ತುಂಡು ತುಂಡಾದಷ್ಟು ಸಾಮಾಜಿಕ ಐಕ್ಯತೆಗೆ ಅಪಾಯ ಬಂದೊದಗುತ್ತದೆ. ಈಗ ನಮ್ಮಲ್ಲಿ ಜಾತಿಯ ಹಿನ್ನೆಲೆಯಲ್ಲಿ ನಡೆಯುವ ಗಲಭೆಗಳು, ಹಿಂಸೆಗಳು, ಅತ್ಯಾಚಾರಗಳು, ತಾರತಮ್ಯಗಳನ್ನು ಗಮನಿಸಿದಾಗ ಈ ಮಾತು ಮನದಟ್ಟಾಗಬಹುದು.

ಇನ್ನು ಈ ಜಾತಿ ಮತ್ತು ಅಸ್ಪೃಶ್ಯತೆಯನ್ನು ಅಧ್ಯಯನ ಮಾಡುವವರು ಅತಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳನ್ನು ಹೆಚ್ಚೆಚ್ಚು ಗಮನಿಸಬೇಕಾಗುತ್ತದೆ. ಯಾಕೆಂದರೆ ನಗರ ಪ್ರದೇಶದ ಹೊರ ಬದುಕನ್ನು ಗಮನಿಸಿ, ಈಗ ಜಾತಿ ಪದ್ಧತಿ ಅಷ್ಟಾಗಿ ಇಲ್ಲ ಬದಲಾಗಿದೆ ಎನ್ನುವ ಶರಾ ಎಳೆಯುವ ಅಪಾಯಗಳಿವೆ. ನಗರ ಬದುಕಿನ ಸಂಕೀರ್ಣತೆ ಜಾತಿಯ ಉಪಸ್ಥಿತಿಯನ್ನು ವ್ಯವಹಾರಿಕವಾದ ಕಾರಣಗಳಿಗಾಗಿ ನಗಣ್ಯವಾಗಿಸಿಕೊಂಡಿದೆ. ಹಾಗಾಗಿ ಸಾರ್ವಜನಿಕ ವಲಯಗಳಲ್ಲಿ ನಿಮಗೆ ಅದರ ರಗಳೆ ಅಷ್ಟಾಗಿ ಬಾಧಿಸುವದಿಲ್ಲ. ಅಲ್ಲಿಯೂ ಆಯಾ ಜಾತಿಗಳ ಸಂಘಟನೆಗಳಿವೆ, ಕಲ್ಯಾಣ ಮಂಟಪಗಳಿವೆ, ವಿದ್ಯಾರ್ಥಿ ನಿಲಯಗಳಿವೆ. caste-clashesಇವೆಲ್ಲವನ್ನು ಗಮನಿಸಿದಾಗ ನಗರದ ಖಾಸಗಿ ಬದುಕಿನಲ್ಲಿ ಜಾತಿಯ ಪ್ರಭಾವ ಗಾಢವಾಗಿ ಇದ್ದೇ ಇದೆ. ಇನ್ನು ಒಳ-ಹೊರಗಿನ ಎರಡೂ ವಲಯಗಳನ್ನು ಅಪಾರವಾಗಿ ಬಾಧಿಸುವ ಜಾತಿಯನ್ನು ನೀವು ಗ್ರಹಿಸಬೇಕಿದ್ದರೆ ಭಾರತದ ಹಳ್ಳಿಗಳನ್ನು ನಾವು ನೋಡಬೇಕು. ದೇಶದ ಬೇರೆ ಬೇರೆ ಭಾಗಗಳ ಗ್ರಾಮಗಳು ಬೇರೆ ಬೇರೆ ರೀತಿಯಲ್ಲಿ ಈ ಜಾತಿ ಮತ್ತು ಅಸ್ಪ್ರಶ್ಯತೆಯ ಮೂಲಕ ಬೂದಿ ಮುಚ್ಚಿದ ಕೆಂಡದುಂಡೆಗಳಾಗಿ ಉಳಿದಿವೆ. ಬಿಹಾರ ರಾಜ್ಯವಂತೂ ಆ ದಿಸೆಯಲ್ಲಿ ಅಗ್ರಗಣ್ಯ. ದಕ್ಷಿಣದ ಭಾಗಗಳಾದ ಕೇರಳ, ತಮಿಳುನಾಡು, ಕರ್ನಾಟಕಗಳ ಗ್ರಾಮಗಳಲ್ಲಿ ಇಂದಿಗೂ ಪರಿಸ್ಥಿತಿ ಅಷ್ಟೆನೂ ಸುಧಾರಣೆಯಾದಂತಿಲ್ಲ. ಕೆಲ ದಶಕಗಳ ಹಿಂದೆ ನೇರವಾಗಿ ಹಳ್ಳಿಗಳಲ್ಲಿ ಜಾತೀಯತೆ ಎದ್ದು ತೋರುತ್ತಿತ್ತು. ಇಂದು ಅಲ್ಲಿಯ ಕೆಳಜಾತಿಗಳು ಸುಶಿಕ್ಷಿತರಾಗಿರುವದರಿಂದ ಅಲ್ಲಿಯ ಜಾತಿಯೊಳಗಿನ ನಡುವಳಿಕೆಗಳಲ್ಲಿ ಬದಲಾವಣೆಗಳಾಗಿವೆ ಅದರ ಪರಿಣಾಮವಾಗಿ ಮೇಲಿನ ಮತ್ತು ಕೆಳಗಿನ ಜಾತಿಗಳ ನಡುವೆ ಒಂದು ಬಗೆಯ ಶೀತಲ ಸಮರ ಆರಂಭವಾಗಿದೆ. ಅಸ್ಪ್ರಶ್ಯ ಜಾತಿಗಳು ತಲೆ ತಲಾಂತರದಿಂದಲೂ ಮಾಡಿಕೊಂಡು ಬಂದ ಲಾಭವಿಲ್ಲದ ಜಾತಿಯಾಧಾರಿತ ವೃತ್ತಿಗಳನ್ನೇ ಮಾಡಬೇಕೆಂಬ ಒತ್ತಡವನ್ನು ಈಗಿನ ಪೀಳಿಗೆಯ ಮೇಲೆ ಹೇರುವ ಸ್ಥಿತಿಯಿಲ್ಲ. ಆದರೆ ಊಟೋಪಚಾರ, ಬೆರೆಯುವಿಕೆ, ವಿವಾಹ ಮುಂತಾದ ವಿಷಯಗಳಲ್ಲಿ ಈಗಲೂ ಅದೇ ಜಡತ್ವ ಗ್ರಾಮೀಣ ಪ್ರದೇಶದ ಜಾತಿ ಪದ್ಧತಿಯಲ್ಲಿದೆ. ನಾನು ಚಿಕ್ಕವನಿದ್ದಾಗ ನೋಡಿರುವದಿದೆ. ಮನೆಗೆ ಯಾರಾದರೂ ಅಸ್ಪೃಶ್ಯರು ನೀರು ಕೇಳಿ ಬಂದರೆ ತಂಬಿಗೆಯಿಂದ ನೀರನ್ನು ಎತ್ತಿ ಹಾಕುವದಿತ್ತು. ಇವತ್ತಿಗೂ ಕೆಲ ಗ್ರಾಮಗಳಲ್ಲಿ ಕೆಳ ಸ್ತರಗಳಿಗೆ ಹೊಟೇಲಲ್ಲಿ ಚಾ ಕುಡಿಯುವ ಲೋಟವನ್ನೇ ಪ್ರತ್ಯೇಕವಾಗಿಟ್ಟಿರುವದಿದೆ. caste-system2ಯಾವುದಾದರೂ ಜಮೀನ್ದಾರನ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದರೆ ಅವನದೇ ಒಂದು ಊಟದ ತಟ್ಟೆ ಪ್ರತ್ಯೇಕವಾಗಿರುವದನ್ನು ಈಗಲೂ ಗ್ರಾಮೀಣ ಭಾಗಗಳಲ್ಲಿ ಗಮನಿಸಬಹುದು. ಲೋಹಿಯಾರಂಥಾ ಚಿಂತಕರು ಜಾತಿಪದ್ಧತಿಯ ನಿರ್ಮೂಲನೆಯಲ್ಲಿ ಸಹಪಂಕ್ತಿ ಭೋಜನ ಮತ್ತು ಅಂತರಜಾತಿಯ ಮದುವೆಗಳನ್ನು ಸಲಹೆ ಮಾಡಿದರು. ಆದರೆ ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಕೇಳಿಬರುವ ಮರ್ಯಾದೆ ಹತ್ಯೆಗಳಿಗೆ ಉತ್ತರವೇನು..? ಜಾತಿಪದ್ಧತಿಯಲ್ಲಿ ಒಟ್ಟಾರೆಯಾಗಿ ಬದಲಾವಣೆಗಳು ಆಗುತ್ತಿಲ್ಲ ಎಂದಲ್ಲ, ಸಮಾಜಶಾಸ್ತ್ರಜ್ಞ ಜಿ.ಕೆ.ಕಾರಂತ ಎನ್ನುವವರು ಬೆಂಗಳೂರಿನ ಸಮೀಪವಿರುವ ಕೆಲವು ಹಳ್ಳಿಗಳನ್ನು [೧೯೮೧] ಅಧ್ಯಯನ ಮಾಡುವಾಗ ಕೆಳಜಾತಿಗಳು ತಯಾರಿಸುವ ಅಡುಗೆಯನ್ನು ಊಟ ಮಾಡುತ್ತೀರಾ..? ಎನ್ನುವ ಪ್ರಶ್ನೆಗೆ ಉತ್ತರವಾಗಿ ಅನೇಕ ಯುವಕರು ತಪ್ಪೇನಿದೆ..? ಅವರು ಸ್ವಚ್ಚವಾಗಿ ತಯಾರಿಸಿದರೆ ನಾವು ಸ್ವೀಕರಿಸುತ್ತೇವೆ ಎಂದಿರುವದನ್ನು ಅವರು ನೆನಪು ಮಾಡಿ ಕೊಟ್ಟಿರುವದಿದೆ. ರಾಜಪುರ ಎನ್ನುವ ಹಳ್ಳಿಯನ್ನು ಅಧ್ಯಯನ ಮಾಡುವಾಗ ಅಲ್ಲಿಯ ಅಸ್ಪ್ರಶ್ಯ ಜಾತಿಗಳು ಪ್ರಧಾನ ಜಾತಿಯಾದ ಒಕ್ಕಲಿಗ ಜಾತಿಯ ಜನರಿಗೆ ಮದ್ಯ ವಿತರಿಸುವ ಕೆಲಸ ಮಾಡುತ್ತಿದ್ದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗೆ ಸಣ್ಣ ಪುಟ್ಟ ಬದಲಾವಣೆಗಳು ಜರಗುತ್ತಿವೆ ಎನ್ನುವ ಬಗ್ಗೆ ಕಾರಂತರು ಸಾಕ್ಷೀಕರಿಸಿದ್ದಾರೆ. ಅದೇ ರೀತಿಯಲ್ಲಿ ಮೈಸೂರಿನ ಸಮೀಪ ಇರುವ ರಾಮಪುರ ಹಳ್ಳಿಯನ್ನು ಅಧ್ಯಯನ ಮಾಡುವ ವೇಳೆಯಲ್ಲಿಯೂ ಎಮ್.ಎನ್.ಶ್ರೀನಿವಾಸರೂ ಈ ಬಗೆಯ ಸಣ್ಣ ಪುಟ್ಟ ಪರಿವರ್ತನೆಗಳನ್ನು ಕಂಡುಕೊಂಡಿರುವದಿದೆ. ಈ ಬಗೆಯ ಬದಲಾವಣೆಗಳು ಜರುಗುತ್ತಿವೆ ಎನ್ನುವಾಗಲೇ ಅದರ ಇನ್ನೊಂದು ಮಗ್ಗಲು ಮತ್ತಷ್ಟು ಜಟಿಲವಾಗುತ್ತಿರುತ್ತದೆ.

4 thoughts on “ಜಾತಿವ್ಯವಸ್ಥೆಯ ಸಂಕೀರ್ಣ ರೂಪಗಳು

  1. Ganapathi Magalu

    ಆತ್ಮೀಯರೇ ಧನ್ಯವಾದಗಳು. ಬದಲಾವಣೆ ಎಲ್ಲಾ ರಂಗಗಳಲ್ಲಿ ಆಗುತ್ತಿರುವಾಗ ಜಾತಿ ಆಚರಣೆಯಲ್ಲೂ ಸಹ ಆಗುತ್ತಿದೆ. ಅದು ಮೇಲ್ನೋಟಕ್ಕೆ ಮಾತ್ರ. ಸಮಾನ ಆಲೋಚನೆ ಇರುವವರು ಮಾತನಾಡುವಾಗ, ಕೆಲಸಲ ಅದುಮಿಟ್ಟುಕೊಳ್ಳಲಾರದ ಸಂದರ್ಭ ಅಂತರ್ಜಾತಿ ಪ್ರೇಮ ಪ್ರಕರಣ, ಮೀಸಲಾತಿ ಇಂಥ ಸಂದರ್ಭಗಳಲ್ಲಿ ಒಳಗಿರುವ ಅಸಹನೆ ಹೊರ ಬರುತ್ತದೆ. ಇದಕ್ಕೆ ವಿದ್ಯೆ, ಬುದ್ದಿಗಳ ಮಿತಿ ಇಲ್ಲ.
    ಮುಖ್ಯವಾಗಿ ನಮ್ಮ ಶಿಕ್ಷಣ ಎಲ್ಲಿ ವರೆಗೆ ನಾವಿರುವ ಪರಿಸ್ಥಿತಿಯನ್ನು ವಿಮರ್ಶಿಸಲು ಅನುವು ಮಾಡಿಕೊಡುವುದಿಲ್ಲವೋ ಅಲ್ಲಿವರೆಗೆ ಶಿಕ್ಷಣ ಉದ್ಯೋಗಕ್ಕೆ. ನನ್ನ ಕುಟುಂಬದ ನಂಬಿಕೆ ಅದರಿಂದಹೊರತು. ಆಗ ಏನು ಬದಲಾವಣೆ ಸಾಧ್ಯ?

    Reply
    1. ನಾಗಶೆಟ್ಟಿ ಶೆಟ್ಕರ್

      ಬಾಲ್ಯದಿಂದಲೇ ಎಲ್ಲಾ ಮಕ್ಕಳಿಗೆ ವಚನ ಶಿಕ್ಷಣ ನೀಡಿದರೆ ಖಂಡಿತ ಜಾತೀಯತೆ ಕಡಿಮೆ ಆಗುತ್ತದೆ. ಏಕೆಂದರೆ ವಚನಕಾರರು ಜಾತೀಯತೆಯನ್ನು ಮೆಟ್ಟಿ ನಿಂತು ಮಾನವೀಯತೆಯನ್ನು ಮೆರೆದವರು. ವಚನಗಳಲ್ಲಿ ಮಾನವೀಯತೆಯ ಸುಧೆ ಹರಿಯುತ್ತಿದೆ. ವಚನ ಶಿಕ್ಷಣ ಪಡೆಯುವ ಮಕ್ಕಳು ಮಾನವೀಯರಾಗುವುದರಲ್ಲಿ ಅನುಮಾನವೇ ಇಲ್ಲ.

      Reply
  2. Ganapathi Magalu

    ಮಾನ್ಯರೇ ಧನ್ಯವಾದಗಳು. ವಚನ ಕಲಿಕೆ ಒಂದು ವಿಧಾನ. ವಚನಕಾರರು ತಮ್ಮ ಸಮಕಾಲೀನ ಪರಿಸ್ಥಿತಿಯನ್ನು ಹೊಸ ಚಿಕಿತ್ಸಕ ದೃಷ್ಟಿಯಿಂದ ನೋಡಿದಕ್ಕೆ ಆ ಆಲೋಚನೆಗಳು ಹುಟ್ಟಿದವು. ಹಾಗೆ ನಮ್ಮ ಮಕ್ಕಳಿಗೂ ತಮ್ಮ ಬದುಕನ್ನ, ಪರಿಸರವನ್ನ ಹಾಗೆ ನೋಡಲು ಸಾಧ್ಯವಾಗಬೇಕು, ಪ್ರಶ್ನಿಸಲು ಸಾಧ್ಯವಾಗಬೇಕು. ವಚನ ಹೇಳುತ್ತಾ ಬಂದ ಬಸವಣ್ಣನನ್ನೇ ದೇವರು ಮಾಡಿ, ಅವರ ಆಲೋಚನೆಯಲ್ಲೇ ಮೇಲು ಕೀಳು ಎಂದು ಜಾತಿ ಎಂದು ಮಾಡಿದವರು ನಮ್ಮವರು ಎನ್ನುವುದನ್ನು ಮರೆಯಬಾರದು. ವಚನದ ತರಹ ಬುದ್ಧ ಗಾಂಧಿ ಎಲ್ಲಾರನ್ನೂ ನಾವು ಓದಬೇಕು ಹಾಗೂ ಅದನ್ನು ಚರ್ಚೆ ಮಾಡುವಂತಾಗಬೇಕು.

    Reply
    1. ನಾಗಶೆಟ್ಟಿ ಶೆಟ್ಕರ್

      ಎಲ್ಲಿಯವರೆಗೆ ಮನುಸ್ಮೃತಿಯು ಸಮಾಜದ ಅಲಿಖಿತ ಸಂವಿಧಾನವಾಗಿರುತ್ತದೆಯೋ ಅಲ್ಲಿಯವರೆಗೆ ಜಾತೀಯತೆ ಇರುತ್ತದೆ. ವಚನ ಶಿಕ್ಷಣದಿಂದ ಖಂಡಿತ ಬದಲಾವಣೆ ಸಾಧ್ಯವಿದೆ. ನಮ್ಮ ನಡುವಿನ ಹಿರಿಯ ವಚನವಿದ್ವಾಂಸ ದರ್ಗಾ ಸರ್ ಅವರು ವಚನತತ್ವಗಳನ್ನೂ ಸಮಕಾಲೀನ ತಲ್ಲಣಗಳ ವಿಶ್ಲೇಷಣೆ ಹಾಗೂ ಅರ್ಥೈಸುವಿಕೆಗೆ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ದರ್ಗಾ ಸರ್ ಅವರ ಬಸವಭಾಷಣಗಳನ್ನು ಕೇಳಿ ಅನೇಕರು ಸಮಕಾಲಿನ ತಲ್ಲಣಗಳಿಗೆ ಸ್ಪಂದಿಸುವ ಮನಸ್ಸು ಮಾಡಿದ್ದಾರೆ ಹಾಗೂ ಮಕ್ಕಳಿಗೆ ವಚನಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ. ಮನುಸ್ಮೃತಿಮುಕ್ತ ಭಾರತ ನಿರ್ಮಿಸಲು ನಿಮ್ಮ ಮಕ್ಕಳಿಗೆ ವಚನ ಶಿಕ್ಷಣವನ್ನು ನೀಡಿ. ಇಂದೇ!

      Reply

Leave a Reply

Your email address will not be published. Required fields are marked *