ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ವಿರುದ್ಧ ಇರುವ ಆರೋಪಗಳು


– ರವಿ ಕೃಷ್ಣಾರೆಡ್ಡಿ


[29-09-2014 ರಂದು ಆಮ್ ಆದ್ಮಿ ಪಕ್ಷ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಪತ್ರಿಕಾಟಿಪ್ಪಣಿಯ ಪರಿಷ್ಕೃತ ರೂಪ ಈ ಲೇಖನ.]

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ಕೆ.ಎಲ್.ಮಂಜುನಾಥರ ವಿರುದ್ಧ ಹಲವು ಆರೋಪಗಳಿದ್ದು, ಈ ವಿಚಾರವಾಗಿ ವಿಚಾರಣೆ ನಡೆಸಬೇಕು ಮತ್ತು ವಾಗ್ಧಂಡನೆಗೆ ಮುಂದಾಗಬೇಕು ಎಂದು ಪಂಜಾಬ್‌ ರಾಜ್ಯದ ನಾಲ್ಕು ಆಮ್ ಆದಿ ಪಕ್ಷದ ಸಂಸದರು ಅದಕ್ಕೆ ಬೇಕಾದ ಸಹಿಸಂಗ್ರಹಣೆಯಲ್ಲಿ ತೊಡಗಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗೆಂದು ಸುದ್ದಿ ಹೊರಬಂದ ನಂತರ ರಾಜ್ಯದ ಹಲವು ಪ್ರಭಾವಿ ರಾಜಕಾರಣಿಗಳು ಮತ್ತು ವಕೀಲರು ಪತ್ರಿಕಾಗೋಷ್ಟಿ ನಡೆಸಿ ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪಗಳನ್ನು ಮಾಡಿ, ನ್ಯಾಯಮೂರ್ತಿ ಮಂಜುನಾಥರನ್ನು ಸಮರ್ಥಿಸಿಕೊಂಡರು. ಅದರೆ, ಕೆ.ಎಲ್.ಮಂಜುನಾಥರ ವಿರುದ್ಧ ಇರುವ ಆರೋಪಗಳಾದರೂ ಎಂತಹವು?chaitra-saledead-1

ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರ ವಿರುದ್ಧ ಆರೋಪಗಳಲ್ಲಿ ಪ್ರಮುಖವಾದುದು ಅವರು ಫೆಬ್ರವರಿ 9, 2004 ರಲ್ಲಿ ತಮ್ಮ ಅವಲಂಬಿಯಾಗಿದ್ದ ಮತ್ತು ಆಗ ಇಪ್ಪತ್ತು ವರ್ಷ ವಯಸ್ಸಿನವರಾಗಿದ್ದ ಅವರ ಮಗಳು ಕೆ.ಎಮ್.ಚೈತ್ರ ಎನ್ನುವವರ ಹೆಸರಿನಲ್ಲಿ ಅಕ್ರಮವಾಗಿ, (both illegally and out of turn) ವಯ್ಯಾಲಿಕಾವಲ್ ಸೊಸೈಟಿಯಿಂದ ಸೈಟು ಪಡೆದಿರುತ್ತಾರೆ ಎನ್ನುವುದು. ಆ ಸಮಯದಲ್ಲಿ ಕೆ.ಎಮ್.ಚೈತ್ರರವರು ವಯ್ಯಾಲಿಕಾವಲ್ ಸೊಸೈಟಿಯಲ್ಲಿ ಸದಸ್ಯರಾಗಿರುವುದಿಲ್ಲ ಮತ್ತು ನ್ಯಾಯಾಲಯದ ಆದೇಶದ ಪ್ರಕಾರ ಸಹಸದಸ್ಯರಿಗೆ ಸೈಟು ಕೊಡುವುದೂ ಕಾನೂನುಬಾಹಿರ. ಇದರ ಜೊತೆಗೆ, ಅವರು ತಮಗಾಗಲಿ ತಮ್ಮ ಕುಟುಂಬಸದಸ್ಯರಿಗಾಗಲಿ ಬೆಂಗಳೂರು ನಗರದಲ್ಲಿ ಯಾವುದೇ ಗೃಹಸಂಬಂಧಿ ಆಸ್ತಿ ಇಲ್ಲ ಎನ್ನುವ ಪ್ರಮಾಣಪತ್ರವನ್ನು ಕಾನೂನಿನ ಪ್ರಕಾರ ಸಲ್ಲಿಸಬೇಕಿದ್ದರೂ ಆ ಸೊಸೈಟಿಯವರು ಅವರಿಗೆ ಅದರಿಂದ ವಿನಾಯಿತಿ ಕೊಟ್ಟಿರುತ್ತಾರೆ ಎನ್ನುವ ಮಾಹಿತಿ ಇದೆ.

ನಂತರದ ದಿನಗಳಲ್ಲಿ ವಯ್ಯಾಲಿಕಾವಲ್ ಸೊಸೈಟಿ ಮತ್ತು ಬಿಡಿಎ ಮಧ್ಯೆ ಒಂದು ಮೊಕದ್ದಮೆ ಹೈಕೋರ್ಟಿನಲ್ಲಿ ದಾಖಲಾಗುತ್ತದೆ. ಇದಕ್ಕೆ ಸಂಬಂಧಪಟ್ಟ ತೀರ್ಪನ್ನು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರವರು ದಿನಾಂಕ 5-7-2005 ರಂದು ನೀಡುತ್ತಾರೆ. ತಮ್ಮ ಅವಲಂಬಿತ ಮಗಳಿಗೆ ಸದರಿ ಸೊಸೈಟಿಯಿಂದ ಸೈಟು ಪಡೆದಿರುವ ಕಾರಣಕ್ಕಾಗಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರು ಆ ಸೊಸೈಟಿಗೆ ಸಂಬಂಧಿಸಿದ ವಿಚಾರಣೆಯಿಂದ ನ್ಯಾಯಾಂಗ ಶುದ್ಧತೆಯನ್ನು ಕಾಪಾಡುವ ನೈತಿಕ ಕಾರಣಕ್ಕಾಗಿ ಮತ್ತು ಹಿತಾಸಕ್ತಿ ಸಂಘರ್ಷದ ಕಾರಣಕ್ಕಾಗಿಯೂ (conflict of interest) ಹಿಂದೆಸರಿಯುವುದು ಅತ್ಯವಶ್ಯಕವಾಗಿತ್ತು. ಅವರು ಹಾಗೆ ಮಾಡದೆ ನ್ಯಾಯಾಂಗದ chaitra-saledead-2ನಿಷ್ಪಕ್ಷಪಾತತನವನ್ನು ಎತ್ತಿಹಿಡಿಯಲಿಲ್ಲ ಎನ್ನುವುದು ಪ್ರಮುಖ ಆರೋಪ.

ಇದೊಂದೇ ಪ್ರಕರಣದಲ್ಲಿ ತಮ್ಮ ಅವಲಂಬಿತ ಮಗಳ ಹೆಸರಿನಲ್ಲಿ ಸೈಟು ಪಡೆಯುವುದೇ ಅಲ್ಲದೆ, ಸೈಟು ಕೊಟ್ಟ ಸೊಸೈಟಿಯ ಮೊಕದ್ದಮೆಯನ್ನು ತಾವೇ ನ್ಯಾಯಮೂರ್ತಿಯಾಗಿ ನಿಭಾಯಿಸುವುದು ಮತ್ತು ತೀರ್ಪು ನೀಡಿರುವುದು ಅನೈತಿಕ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ.

ಇದರ ಜೊತೆಗೆ ವಯ್ಯಾಲಿಕಾವಲ್ ಸೊಸೈಟಿಯ ಬಡಾವಣೆಯನ್ನು ಅಭಿವೃದ್ಧಿಪಡಿಸಿದ್ದ ಲಕ್ಷ್ಮಣ್ ಎನ್ನುವವರು ಪಾಲುದಾರರಾಗಿದ್ದ “ಶ್ರೀ ಶಕ್ತಿ ಬ್ಯುಲ್ಡರ್ಸ್” ಗೆ ಸಂಬಂಧಿಸಿದ ಕೇಸನ್ನು ನ್ಯಾಯಮೂರ್ತಿ  ಕೆ.ಎಲ್.ಮಂಜುನಾಥರವರು 19-09-2003 ರಂದು ವಿಲೇವಾರಿ ಮಾಡಿರುತ್ತಾರೆ. ಇದೇ ಶ್ರೀ ಶಕ್ತಿ ಬ್ಯುಲ್ಡರ್ಸ್‌ರವರು ಅಭಿವೃದ್ಧಿ ಪಡಿಸಿದ ವೈಯಾಲಿಕಾವಲ್ ಸೊಸೈಟಿಯವರ ಬಡಾವಣೆಯಲ್ಲಿ ನ್ಯಾ.ಮಂಜುನಾಥರ ಮಗಳಿಗೆ ಸೈಟು ಹಂಚಿಕೆಯಾಗುತ್ತದೆ (9-2-2004). ಮತ್ತು ನಂತರ ವೈಯಾಲಿಕಾವಲ್ ಸೊಸೈಟಿ ಮತ್ತು ಬಿಡಿಎ ಮಧ್ಯೆ ನಡೆಯುತ್ತಿದ್ದ ದಾವೆಯನ್ನು ನ್ಯಾ.ಮಂಜುನಾಥರು (5-7-2005) ವಿಲೇವಾರಿ ಮಾಡುತ್ತಾರೆ. ಇದೇ ಸೊಸೈಟಿಗೆ ಸಂಬಂಧಿಸಿದ ಇನ್ನೂ ಕೆಲವು ಮೊಕದ್ದಮೆಗಳ ವಿಲೇವಾರಿಯನ್ನೂ ಸದರಿ ನ್ಯಾಯಮೂರ್ತಿಗಳು ನಂತರದ ದಿನಗಳಲ್ಲಿ ಮಾಡುತ್ತಾರೆ (17-01-2007, 20-07-2010).

ಇನ್ನೊಂದು ಪ್ರಕರಣ “ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ”ಕ್ಕೆ ಸಂಬಂಧಿಸಿದ್ದು. ಈ ಬಡಾವಣೆಯನ್ನು ಅಭಿವೃದ್ಧಿ ಪಡಿಸಿದ್ದು ಸಹ ಮೇಲೆ ಉಲ್ಲೇಖಿಸಿರುವ ಲಕ್ಷ್ಮಣ್‌ರ ಪಾಲುದಾರಿಕೆಯ ಶ್ರೀ ಶಕ್ತಿ ಬ್ಯುಲ್ಡರ್ಸ್.jd-agreement-1 ಸಹಕಾರ ಸಂಘ ತನ್ನ ಬಡಾವಣೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶ್ರೀ ಶಕ್ತಿ ಬ್ಯುಲ್ಡರ್ಸ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತದೆ ಮತ್ತು ಬಡಾವಣೆ ನಿರ್ಮಾಣಕ್ಕಾಗಿ ಶ್ರೀ ಶಕ್ತಿ ಬ್ಯುಲ್ಡರ್ಸ್‌ಗೆ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡುತ್ತದೆ. ಆದರೆ ಹಣ ಬಿಡುಗಡೆ ಮಾಡುವಾಗ ಕಾನೂನಿನ ಪ್ರಕಾರ ಮೂಲದಲ್ಲಿಯೇ ತೆರಿಗೆ ಹಿಡಿದುಕೊಳ್ಳಬೇಕಿತ್ತು ಎಂದು ಆದಾಯ ತೆರಿಗೆ ಇಲಾಖೆಯವರು ಮೊಕದ್ದಮೆ ದಾಖಲಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಮೊಕದ್ದಮೆಯನ್ನು ಹೈಕೋರ್ಟಿನ ದ್ವಿಸದಸ್ಯ ಪೀಠ 10-03-2010 ರಂದು ವಿಲೇವಾರಿ ಮಾಡುತ್ತದೆ. ನ್ಯಾ.ಕೆ.ಎಲ್.ಮಂಜುನಾಥ್ ಆ ದ್ವಿಸದಸ್ಯ ಪೀಠದಲ್ಲಿದ್ದ ಒಬ್ಬ ನ್ಯಾಯಮೂರ್ತಿಯೂ ಆಗಿರುತ್ತಾರೆ.

ಇನ್ನು ಭೂಕಬಳಿಕೆಗೆ ಸಂಬಂಧಿಸಿದಂತೆ 2007 ರಲ್ಲಿ ಎ.ಟಿ.ರಾಮಸ್ವಾಮಿಯವರು ಜಂಟಿಸದನ ಸಮಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಆ ವರದಿಯಲ್ಲಿ “ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ”ಕ್ಕೆ ಸಂಬಂಧಿಸಿದ ಅಧ್ಯಾಯವೇ ಇದೆ. ಕಾನೂನಿನ ಪ್ರಕಾರ ಹೈಕೋರ್ಟಿನ ಮತ್ತು ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳು (ಹಾಲಿ, ನಿವೃತ್ತ, ವರ್ಗಾವಣೆಯಾಗಿರುವ ಎಲ್ಲರೂ) ಸರ್ಕಾರಿ ನೌಕರರಲ್ಲ ಮತ್ತು ಅವರು ಯಾವುದೇ ಕಾರಣಕ್ಕೂ ಮೇಲಿನ ಸಹಕಾರಿ ಸಂಘದಲ್ಲಿ ಸದಸ್ಯರಾಗಲು ಅವಕಾಶವಿಲ್ಲ. ಆದರೂ ಸಹ 84 ನ್ಯಾಯಾಧೀಶರು (75 ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು 9 ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು) ಈ ಸಹಕಾರ ಸಂಘದಿಂದ ನಿಯಮಬಾಹಿರವಾಗಿ ಸೈಟುಗಳನ್ನು ಪಡೆದಿದ್ದಾರೆ ಎಂದು ವರದಿ ಹೇಳುತ್ತದೆ. ಅಷ್ಟೇ ಅಲ್ಲ, ಬಿಡಿಎ ಇಂದಾಗಲಿ, ಯಾವುದಾದರು ಸಹಕಾರಿ ನಿರ್ಮಾಣ ಸಂಸ್ಥೆಯಿಂದಾಗಲಿ ಸೈಟು ಪಡೆದುಕೊಳ್ಳುವವರು ತಮ್ಮ ಹೆಸರಲ್ಲಾಗಲಿ ಅಥವ ಅವಲಂಬಿತ ಕುಟುಂಬದ ಸದಸ್ಯರ ಹೆಸರಿನಲ್ಲಾಗಲಿ ನಗರದಲ್ಲಿ ಯಾವುದೇ ಸೈಟು ಅಥವ ಮನೆಯನ್ನು ಹೊಂದಿರಬಾರದು ಮತ್ತು ಹಾಗೆಂದು ಪ್ರಮಾಣಪತ್ರ ಕೊಡಬೇಕಾಗುತ್ತದೆ. ಆದರೆ, ಸಹಕಾರಿ ಸಂಘದಲ್ಲಿ ಸೈಟು ಪಡೆದ ಯಾವೊಬ್ಬ ನ್ಯಾಯಮೂರ್ತಿಯೂ jd-agreement-2ಹಾಗೆಂದು ಪ್ರಮಾಣಪತ್ರ ನೀಡಿಲ್ಲ ಮತ್ತು ಅನೇಕರಿಗೆ ಹಲವಾರು ಸೈಟು ಆಸ್ತಿಗಳಿದ್ದರೂ ಇಲ್ಲಿಯೂ ಅವರು ಸೈಟು ಪಡೆದಿದ್ದಾರೆ ಎನ್ನಲಾಗಿದೆ. ಎಲ್ಲರಿಗೂ ತಿಳಿದಿರುವಂತೆ ಮಾಜಿ ಲೋಕಾಯುಕ್ತ ಶಿವರಾಜ್ ಪಾಟೀಲರು ಇದೇ ವಿಷಯಕ್ಕೆ ವಿವಾದಕ್ಕೀಡಾಗಿ ತಮ್ಮ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದಲ್ಲದೆ, ವೈಯಾಲಿಕಾವಲ್ ಸೊಸೈಟಿಯಿಂದ ಪಡೆದಿದ್ದ ತಮ್ಮ ಹೆಂಡತಿಯ ಹೆಸರಿನಲ್ಲಿದ್ದ ನಿವೇಶನವನ್ನು ವಾಪಸು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಂದಹಾಗೆ, ರಾಮಸ್ವಾಮಿಯವರ ವರದಿಯಲ್ಲಿ “ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ”ದಿಂದ ನಿವೇಶನ ಪಡೆದಿರುವ ನ್ಯಾಯಮೂರ್ತಿಗಳ ಪಟ್ಟಿಯಲ್ಲಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರ ಹೆಸರೂ ಇದೆ.

ಇದೇ ಸಮಯದಲ್ಲಿ ಕರ್ನಾಟಕ ಹೈಕೋರ್ಟಿನ ಅನೇಕ ನ್ಯಾಯಮೂರ್ತಿಗಳು ಹೈಕೋರ್ಟಿನ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ (http://karnatakajudiciary.kar.nic.in/judgesAssets&Liabilities.asp). ಆದರೆ ಆ ಪಟ್ಟಿಯಲ್ಲಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರ ಹೆಸರನ್ನು ಕ್ಲಿಕ್ ಮಾಡಿದರೆ ಖಾಲಿ ಪುಟ ಮಾತ್ರ ತೆರೆಯುತ್ತದೆ (http://karnatakajudiciary.kar.nic.in/judgesAssets&Liabilities/klmj.pdf). ರಾಜ್ಯ ಹೈಕೋರ್ಟ್‌ನ ಒಟ್ಟು 32 ನ್ಯಾಯಮೂರ್ತಿಗಳಲ್ಲಿ klmanjunath-judicialsocieity16 ನ್ಯಾಯಮೂರ್ತಿಗಳು ಮಾತ್ರ ಆಸ್ತಿ ಘೋಷಣೆ ಮಾಡಿದ್ದು ಸರಿಯಾಗಿ ಅರ್ಧ ನ್ಯಾಯಮೂರ್ತಿಗಳು ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿಲ್ಲ ಮತ್ತು ಅವರಲ್ಲಿ ನ್ಯಾ. ಕೆ.ಎಲ್.ಮಂಜುನಾಥರೂ ಒಬ್ಬರು (29-09-2014 ರಂದು ವೆಬ್‍‌ಸೈಟ್‌ನಲ್ಲಿ ಇದ್ದ ಮಾಹಿತಿ ಪ್ರಕಾರ).

ಹಾಗೆಯೇ, ಇಲ್ಲಿ ಪ್ರಸ್ತಾಪಿಸಿರುವ ಅನೇಕ ವಿಚಾರಗಳು ಕಳೆದ ಎರಡು-ಮೂರು ವರ್ಷಗಳಲ್ಲಿ ಈಗಾಗಲೆ ಅನೇಕ ಮಾಧ್ಯಮಗಳಲ್ಲಿ ಪ್ರಸ್ತಾಪಿತವಾಗಿವೆ.

ಇಂದು ನ್ಯಾಯಾಂಗದ ಸ್ವಾತಂತ್ರ್ಯ, ಪಾರದರ್ಶಕತೆ, ಪ್ರಾಮಾಣಿಕತೆಯನ್ನು ಎತ್ತಿಹಿಡಿಯುವುದು ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯ. ಜಾಮೀನಿಗಾಗಿ ಲಂಚ ಪಡೆಯುವ ನ್ಯಾಯಮೂರ್ತಿಗಳು ಬಂಧನಕ್ಕೊಳಗಾಗಿದ್ದು ಜನಮಾನಸದಲ್ಲಿ ಇನ್ನೂ ಹಚ್ಚಹಸಿರಾಗಿದೆ. ಹಲವು ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪಗಳಿವೆ. ನಿವೃತ್ತರಾಗುತ್ತಿದ್ದಂತೆಯೇ ಯಾವುದಾದರೂ ರಾಜ್ಯದ ರಾಜ್ಯಪಾಲರಾಗಿ ಆಯ್ಕೆ ಮಾಡುವ ವಿಚಾರವಾಗಿಯೂ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ನ್ಯಾಯಾಂಗ ಸುಧಾರಣೆಗಳ ತುರ್ತು ಅಗತ್ಯವನ್ನು ಎಲ್ಲರೂ ಪ್ರತಿಪಾದಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ನಿಷ್ಪಕ್ಷಪಾತ ಮತ್ತು ಯೋಗ್ಯ ವ್ಯಕ್ತಿಗಳು ನ್ಯಾಯಮೂರ್ತಿಗಳಾಗಿರಬೇಕು, ಮತ್ತು ವಿವಾದಾಸ್ಪದ ವ್ಯಕ್ತಿಗಳನ್ನು ನ್ಯಾಯಾಂಗದಿಂದ ಹೊರಗಿಡಬೇಕು ಮತ್ತು ಆ ಕ್ಷೇತ್ರವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕುಎನ್ನುವ ನಿಟ್ಟಿನಲ್ಲಿ ಸುಧಾರಣೆಗಳಿಗಾಗಿ ಚಿಂತನೆ ಮತ್ತು ಹೋರಾಟ ನಡೆಸಬೇಕಿದೆ.
klmanjunath-sreeshakthibuilders

klm-judicialsociety

17 thoughts on “ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ವಿರುದ್ಧ ಇರುವ ಆರೋಪಗಳು

  1. praveen

    Even for justice NK Patil also its showing blank page. Please disclose the allegations on other judges also. It is very clear that our judicial system is also corrupted

    Reply
  2. Ananda Prasad

    ನಮ್ಮ ನ್ಯಾಯಾಂಗ ವ್ಯವಸ್ಥೆ ಭ್ರಷ್ಟವಾಗಿದೆ ಮಾತ್ರವಲ್ಲ ಪ್ರತಿಗಾಮಿಯಾಗಿಯೂ ಕೆಲಸ ಮಾಡುತ್ತಿದೆ. ಸಂವಿಧಾನದ ಪ್ರಗತಿಪರ ಆಶಯಗಳು ನಮ್ಮ ನ್ಯಾಯಾಧೀಶರುಗಳಿಗೆ ಇನ್ನೂ ಅರ್ಥವಾಗಿಲ್ಲ. ಹೀಗಾಗಿ ಒಮ್ಮೆ ಹೈಕೋರ್ಟಿನ ಒಂದು ಪೀಠ ಮ ಮಡೆಸ್ನಾನವನ್ನು ತುಸು ಪ್ರಗತಿಪರವಾಗಿ ಬದಲಿಸಿ ಎಡೆಸ್ನಾನವಾಗಿ ಬದಲಿಸಿ ಆಚರಿಸುವಂತೆ ತೀರ್ಪು ಕೊಡುತ್ತದೆ. ಮತ್ತೊಂದು ವಿಭಾಗೀಯ ಪೀಠ ಎಡೆಸ್ನಾನ ಬೇಡ ಮಡೆಸ್ನಾನವೇ ಮುಂದುವರಿಯಲಿ ಎಂದು ತೀರ್ಪು ಕೊಡುತ್ತದೆ. ನ್ಯಾಯಾಧೀಶರಾದವರಿಗೆ ಕನಿಷ್ಠ ಮಾನವೀಯ ಹಾಗೂ ವೈಜ್ಞಾನಿಕ ತಿಳುವಳಿಕೆಯ ಕೊರತೆ ಇರುವ ಕಾರಣ ಇಂಥ ಪ್ರತಿಗಾಮಿ ತೀರ್ಪುಗಳು ಬರುತ್ತವೆ. ಇಂಥ ನ್ಯಾಯಾಧೀಶರನ್ನು ಕಟ್ಟಿಕೊಂಡು ನಮ್ಮ ದೇಶ ಮುಂದುವರಿಯುವುದು ಅಷ್ಟರಲ್ಲಿಯೇ ಇದೆ.

    Reply
    1. ನಾಗಶೆಟ್ಟಿ ಶೆಟ್ಕರ್

      ಆನಂದ ಪ್ರಸಾದ್ ಅವರೇ, ಈ ರೀತಿಯಲ್ಲಿ ನ್ಯಾಯಾಂಗ ನಿಂದನೆ ಮಾಡುವುದು ಪ್ರಗತಿಪರರ ಲಕ್ಷಣವಲ್ಲ. ನ್ಯಾಯಂಗ ವ್ಯವಸ್ಥೆಯ ಲೋಪದೋಷಗಳೇನೆ ಇರಲಿ, ಇಂದು ನಾಡಿನ ಶೋಷಿತರಿಗೆ ಇರುವ ಆಶಾಕಿರಣವೆಂದರೆ ನ್ಯಾಯಾಂಗ ವ್ಯವಸ್ಥೆ.

      Reply
      1. ಜೆ.ವಿ.ಕಾರ್ಲೊ, ಹಾಸನ

        ಈ ಆಶಾಕಿರಣವು ಮರೀಚಿಕೆಯಾಗದಿರಲಿ ಎಂಬುದು ಎಲ್ಲರ ಹಾರೈಕೆ. ನ್ಯಾಯಾಂಗ ನಿಂದನೆ ಎಂಬ ಮುಸುಕಿನೊಳಗೆ ಇಂತಾ ಘಟನೆಗಳು ನಡೆಯದಿರಲಿ . ಇಂತವರನ್ನು ‘ಇವ ನಮ್ಮವ, ಇವ ನಮ್ಮವ’ ಎನ್ನದೆ black sheep ಗಳನ್ನು ಪ್ರಾಮಾಣಿಕರು ಬಹಿಷ್ಕರಿಸಬೇಕು.

        Reply
        1. ನಾಗಶೆಟ್ಟಿ ಶೆಟ್ಕರ್

          “ನ್ಯಾಯಾಧೀಶರಾದವರಿಗೆ ಕನಿಷ್ಠ ಮಾನವೀಯ ಹಾಗೂ ವೈಜ್ಞಾನಿಕ ತಿಳುವಳಿಕೆಯ ಕೊರತೆ ಇರುವ ಕಾರಣ ಇಂಥ ಪ್ರತಿಗಾಮಿ ತೀರ್ಪುಗಳು ಬರುತ್ತವೆ. ಇಂಥ ನ್ಯಾಯಾಧೀಶರನ್ನು ಕಟ್ಟಿಕೊಂಡು ನಮ್ಮ ದೇಶ ಮುಂದುವರಿಯುವುದು ಅಷ್ಟರಲ್ಲಿಯೇ ಇದೆ.” ಎಂಬುದು ಆನಂದ ಪ್ರಸಾದ್ ಅವರ ಅಭಿಪ್ರಾಯವಾಗಿದೆ. ಮಡೆಸ್ನಾನದ ವಿಚಾರದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ‘ಕನಿಷ್ಠ ಮಾನವೀಯ ಹಾಗೂ ವೈಜ್ಞಾನಿಕ ತಿಳುವಳಿಕೆಯ ಕೊರತೆ’ ಇದೆ ಅಂತ ಆನಂದ ಪ್ರಸಾದ್ ಅವರು ಯಾವ ವೈಜ್ಞಾನಿಕ ಆಧಾರಗಳ ಬಲದಿಂದ ಹೇಳಿದ್ದಾರೆ? ತೀರ್ಪು ನೀಡಿದ ನ್ಯಾಯಾಧೀಶರನ್ನು ಆನಂದ ಪ್ರಸಾದ್ ಅವರು ಪರೀಕ್ಷೆಗೆ ಒಳಪಡಿಸಿದ್ದಾರೆಯೇ ಅವರ ತಿಳುವಳಿಕೆಯನ್ನು ಅಳೆಯಲು? ಕಾನೂನು ಎಂಬುದು ಸಂಕೀರ್ಣವಾದ ವಿಚಾರ. ನ್ಯಾಯಧೀಶರಿಗಿಂತ ಚೆನ್ನಾಗಿ ಕಾನೂನು ಆನಂದ ಪ್ರಸಾದ್ ಅವರಿಗೆ ತಿಳಿದಿದೆಯೇ? ಹೋಗಲಿ ಮಡೆಸ್ನಾನದ ವಿಚಾರದಲ್ಲಿ ನೀಡಿದ ತೀರ್ಪುಗಳ ಪೂರ್ಣ ಪಾಠವನ್ನು ಆನಂದ ಪ್ರಸಾದ್ ಓದಿದ್ದಾರೆಯೇ?

          ನ್ಯಾಯಾಂಗ ವ್ಯವಸ್ಥೆ ಬಗ್ಗೆ ಲಘುವಾಗಿ ಮಾತನಾಡುವುದು ಪ್ರಗತಿಪರರ ಲಕ್ಷಣವಲ್ಲ. ಮತ್ತು ಹಾಗೆ ಮಾತನಾಡುವವರನ್ನು ಸಮರ್ಥಿಸಿಕೊಂಡು ಕಮೆಂಟು ಮಾಡುವುದೂ ಸರಿಯಲ್ಲ ಕಾರ್ಲೋ ಅವರೇ.

          Reply
        2. Ananda Prasad

          ಸರಕಾರವು ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವಾಗ ನ್ಯಾಯಾಂಗ ಚಾಟಿ ಏಟು ಕೊಟ್ಟು ಸರಕಾರವನ್ನು ಎಬ್ಬಿಸಬಹುದು ಅಥವಾ ಸ್ವಯಂಪ್ರೇರಿತವಾಗಿ ಇಂಥ ಅನಿಷ್ಟ ಪರಂಪರೆಯನ್ನು ಕೊನೆಗೊಳಿಸಲು ಮುಂದಾಗಲು ಸಾಧ್ಯವಿದೆ. ನ್ಯಾಯಾಧೀಶರಿಗೆ ಮನಸ್ಸಿದ್ದರೆ ಅದು ಸಾಧ್ಯವಿದೆ. ನ್ಯಾಯಾಧೀಶರಾದವರಿಗೆ ಸುಧಾರಣೆಯ ತುಡಿತ ಇರಬೇಕು, ಸಮಾಜ ಹಾಗೂ ದೇಶದ ಬಗ್ಗೆ ಕಾಳಜಿ ಇರಬೇಕು. ಇದು ‘ಸಂಬಳಕ್ಕೆ ತಕ್ಕ ಕೆಲಸ’ ಮಾಡುವ ಮನಸ್ಥಿತಿಯ ನ್ಯಾಯಾಧೀಶರಿಂದ ಸಾಧ್ಯವಿಲ್ಲ. ನ್ಯಾಯಾಧೀಶರಾದವರು ಸಾಹಿತ್ಯ, ವಿಜ್ಞಾನ ಇತ್ಯಾದಿಗಳನ್ನು ಓದಿಕೊಂಡಿದ್ದು ವಿಶಾಲ ಮನೋಭಾವನೆ ಹೊಂದಿದ್ದರೆ ಅಂಥ ತುಡಿತ ಅವರಲ್ಲಿಯೇ ಉಂಟಾಗುತ್ತದೆ. ಬರಿಯ ಕಾನೂನು ಬಗ್ಗೆ ಮಾತ್ರ ತಿಳುವಳಿಕೆ ಹೊಂದಿರುವ ನ್ಯಾಯಾಧೀಶರಾದರೆ ಕಾನೂನಿನ ನೇರಕ್ಕೆ ಮಾತ್ರ ನೋಡಿ ತೀರ್ಪು ನೀಡುತ್ತಾರೆ. ಇಂಥ ತೀರ್ಪುಗಳು ಸುಧಾರಣೆಯ ತುಡಿತ ಹೊಂದಿರುವುದಿಲ್ಲ.

          Reply
          1. ನಾಗಶೆಟ್ಟಿ ಶೆಟ್ಕರ್

            ನಿಮ್ಮ ಹಾಗೆ ಸರಕಾರದ ವೈಫಲ್ಯಕ್ಕೆ ನ್ಯಾಯಾಂಗವನ್ನು ದೂರುವುದು ನ್ಯಾಯವಲ್ಲ! ಹಾಗೂ ನ್ಯಾಯಾಂಗವು ಸರಕಾರಕ್ಕೆ ಚಾಟಿ ಏಟು ಕೊಡಬೇಕು ಎಂಬ ನಿರೀಕ್ಷೆಯು ವಿವೇಕಯುತವಾದುದಲ್ಲ. ನ್ಯಾಯಾಂಗ ವ್ಯವಸ್ಥೆಯು ತನ್ನ ಪರಿಧಿಯಲ್ಲಿ ಕೆಲಸ ಮಾಡುವುದೇ ಒಳಿತು. ಸರಕಾರಕ್ಕೆ ಚಾಟಿ ಏಟನ್ನು ಆಂ ಆದ್ಮಿ ಪಕ್ಷದ ಮೂಲಕ ಕೊಡಿಸಲು ಪ್ರಗತಿಪರರು ಸನ್ನದ್ಧರಾಗಬೇಕಾಗಿದೆ.

      2. Ananda Prasad

        ನಾನು ನ್ಯಾಯಾಂಗ ನಿಂದನೆ ಮಾಡಿಲ್ಲ. ನಾನು ಇದುವರೆಗೆ ಕೋರ್ಟಿಗೆ ಹೋಗಿಲ್ಲ ಹಾಗೂ ನಾನು ಪಾಲಿಸಬೇಕೆಂಬ ಯಾವುದೇ ತೀರ್ಪನ್ನು ನ್ಯಾಯಾಲಯ ನೀಡಿರುವುದಿಲ್ಲ. ಹೀಗಾಗಿ ನ್ಯಾಯಾಂಗ ನಿಂದನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನ್ಯಾಯಾಂಗ ನಿಂದನೆ ಎಂದರೆ ಕೋರ್ಟು ನಿಮಗೆ ಯಾವುದೋ ಒಂದು ಕೇಸಿನಲ್ಲಿ ತೀರ್ಪು ನೀಡಿ ನೀವು ಅದನ್ನು ಪಾಲಿಸದೆ ಇದ್ದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಓರ್ವ ಸಾಮಾನ್ಯ ವ್ಯಕ್ತಿಯು ನ್ಯಾಯಾಂಗದ ತೀರ್ಪುಗಳ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸರ್ವಸ್ವತಂತ್ರನಿದ್ದಾನೆ. ನಮ್ಮದು ಮಿಲಿಟರಿ ಆಡಳಿತ ವ್ಯವಸ್ಥೆ ಅಥವಾ ಕಮ್ಯುನಿಷ್ಟ್ ಆಡಳಿತ ವ್ಯವಸ್ಥೆ ಅಥವಾ ಸರ್ವಾಧಿಕಾರಿ ಆಡಳಿತ ವ್ಯವಸ್ಥೆ ಅಲ್ಲ. ಅಂಥ ವ್ಯವಸ್ಥೆಗಳಲ್ಲಾದರೆ ಓರ್ವ ವ್ಯಕ್ತಿ ತನ್ನ ಅಭಿಪ್ರಾಯ ವ್ಯಕ್ತಪಡಿಸುವುದು ಸಾಧ್ಯವಾಗಲಾರದು. ನ್ಯಾಯಾಧೀಶರೇನೂ ದೇವಲೋಕದಿಂದ ಇಳಿದುಬಂದವರಲ್ಲ. ಹೀಗಾಗಿ ನ್ಯಾಯಾಲಯದ ತೀರ್ಪುಗಳು ವಿಮರ್ಶೆಗೆ ಅತೀತ ಅಲ್ಲ.

        ನ್ಯಾಯಾಧೀಶರ ವೈಯಕ್ತಿಕ ಧೋರಣೆಗಳು ತೀರ್ಪು ನೀಡುವ ವೇಳೆ ಪ್ರಭಾವ ಬೀರುತ್ತವೆ. ತೀರ್ಪು ನೀಡುವ ನ್ಯಾಯಾಧೀಶ ಪ್ರತಿಗಾಮಿ ಧೋರಣೆಯವನಾಗಿದ್ದರೆ ತೀರ್ಪು ಕೂಡ ಪ್ರತಿಗಾಮಿಯಾಗಿಯೇ ಬರುತ್ತದೆ. ನ್ಯಾಯಾಧೀಶ ಪ್ರಗತಿಪರ ಮನೋಭಾವದವನಾಗಿದ್ದರೆ ತೀರ್ಪು ಕೂಡ ಪ್ರಗತಿಪರವಾಗಿ ಬರುತ್ತದೆ. ಸಂವಿಧಾನ ಹಾಗೂ ಕಾನೂನಿನ ಅನ್ವೈಸುವಿಕೆ ಪ್ರಗತಿಪರ ನ್ಯಾಯಧೀಶನಾಗಿದ್ದರೆ ಪ್ರಗತಿಪರವಾಗಿ ಅನ್ವೈಸಲು ಸಾಧ್ಯ. ಪ್ರತಿಗಾಮಿ ನ್ಯಾಯಧೀಶನಾಗಿದ್ದರೆ ಪ್ರತಿಗಾಮಿ ಅರ್ಥದಿಂದ ಸಂವಿಧಾನ ಹಾಗೂ ಕಾನೂನುಗಳನ್ನು ವ್ಯಾಖ್ಯಾನಿಸಲು ಸಾಧ್ಯ. ಭಾರತದಲ್ಲಿ ನ್ಯಾಯಾಧೀಶರು ಮೇಲ್ವರ್ಗಕ್ಕೆ, ಮೇಲ್ಜಾತಿಗಳಿಗೆ ಸೇರಿದವರೇ ಹೆಚ್ಚಾಗಿರುವ ಕಾರಣ ನಮ್ಮಲ್ಲಿ ಪ್ರತಿಗಾಮಿ ತೀರ್ಪುಗಳೇ ಬರುವುದು ಹೆಚ್ಚು. ಇದನ್ನು ನಾನು ಹೇಳಿದ್ದೇನೆ. ಇದನ್ನು ಹೇಳುವುದು ನನ್ನ ಸಂವಿಧಾನದತ್ತ ಹಕ್ಕು. ಅದನ್ನು ನ್ಯಾಯಾಂಗ ನಿಂದನೆಯ ಹೆಸರಿನಲ್ಲಿ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಂಥ ಬೆದರಿಕೆಗಳಿಗೆ ನಾನು ಹೆದರುವುದೂ ಇಲ್ಲ.

        Reply
        1. ನಾಗಶೆಟ್ಟಿ ಶೆಟ್ಕರ್

          ನ್ಯಾಯಂಗ ವ್ಯವಸ್ಥೆ ಬಗ್ಗೆ ಲಘುವಾಗಿ ಮಾತನಾಡ ಬೇಡಿ ಮಿ. ಆನಂದ ಪ್ರಸಾದ್. ಮಡೆಸ್ನಾನದ ವಿಚಾರದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ‘ಕನಿಷ್ಠ ಮಾನವೀಯ ಹಾಗೂ ವೈಜ್ಞಾನಿಕ ತಿಳುವಳಿಕೆಯ ಕೊರತೆ’ ಇದೆ ಅಂತ ನೀವು ಯಾವ ವೈಜ್ಞಾನಿಕ ಆಧಾರಗಳ ಬಲದಿಂದ ಹೇಳಿದ್ದಾರೆ? ತೀರ್ಪು ನೀಡಿದ ನ್ಯಾಯಾಧೀಶರನ್ನು ನೀವು ಪರೀಕ್ಷೆಗೆ ಒಳಪಡಿಸಿದ್ದಾರೆಯೇ ಅವರ ತಿಳುವಳಿಕೆಯನ್ನು ಅಳೆಯಲು? ಕಾನೂನು ಎಂಬುದು ಸಂಕೀರ್ಣವಾದ ವಿಚಾರ. ನ್ಯಾಯಧೀಶರಿಗಿಂತ ಚೆನ್ನಾಗಿ ಕಾನೂನು ನಿಮಗೆ ತಿಳಿದಿದೆಯೇ? ಹೋಗಲಿ ಮಡೆಸ್ನಾನದ ವಿಚಾರದಲ್ಲಿ ನೀಡಿದ ತೀರ್ಪುಗಳ ಪೂರ್ಣ ಪಾಠವನ್ನು ನೀವು ಓದಿದ್ದೀರಾ??

          Reply
          1. Ananda Prasad

            ಮಡೆಸ್ನಾನದ ವಿಚಾರದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಅಮಾನವೀಯ ಮಾತ್ರವಲ್ಲ ಅವೈಜ್ಞಾನಿಕ ಕೂಡ ಹೌದು. ಸಂವಿಧಾನದ ಪ್ರಗತಿಪರ ಆಶಯಗಳನ್ನು ಈ ತೀರ್ಪು ಗಾಳಿಗೆ ತೂರಿದೆ. ಓರ್ವ ಪ್ರಗತಿಪರ ಹಾಗೂ ಮಾನವೀಯ ದೃಷ್ಟಿಕೋನದ ನ್ಯಾಯಾಧೀಶ ಇಂಥ ತೀರ್ಪು ನೀಡಲು ಸಾಧ್ಯವಿಲ್ಲ. ಯಥಾಸ್ಥಿತಿವಾದಿ ಮನೋಸ್ಥಿತಿಯ ವ್ಯಕ್ತಿಗಳು ಮಾತ್ರ ಇಂಥ ತೀರ್ಪು ನೀಡಬಲ್ಲರು ಎಂಬುದು ಮೇಲ್ನೋಟಕ್ಕೆ ಕಂಡುಬರುವ ವಿಷಯ. ಕನಿಷ್ಠ ಇಂಥ ನೀಚ ಆಚರಣೆಗಳನ್ನು ತಡೆಯುವ ಕಾನೂನು ರೂಪಿಸುವಂತಾದರೂ ಸರ್ಕಾರಕ್ಕೆ ನಿರ್ದೇಶನ ನೀಡಬಹುದಿತ್ತು. ಹಿಂದೆಯೂ ಇದೇ ಮನೋಸ್ಥಿತಿಯನ್ನು ಹೊಂದಿದ್ದರೆ ಸತಿ ಪದ್ಧತಿ, ಬೆತ್ತಲೆ ಸೇವೆ, ಬಾಲ್ಯ ವಿವಾಹ ಮೊದಲಾದವುಗಳನ್ನು ತಡೆಯುವ ಕಾನೂನು ರೂಪಿಸುವುದು ಸಾಧ್ಯವೇ ಇರುತ್ತಿರಲಿಲ್ಲ. ೨೧ನೇ ಶತಮಾನದಲ್ಲಿಯೂ ಇಂಥ ತೀರ್ಪುಗಳು ನಮ್ಮ ದೇಶದಲ್ಲಿ ಬರುತ್ತವೆ ಎಂಬುದೇ ನಾಚಿಕೆಗೇಡಿನ ವಿಷಯ.

          2. ನಾಗಶೆಟ್ಟಿ ಶೆಟ್ಕರ್

            ಆನಂದ ಪ್ರಸಾದ್ ಅವರೇ, “ಮಡೆಸ್ನಾನದ ವಿಚಾರದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಅಮಾನವೀಯ ಮಾತ್ರವಲ್ಲ ಅವೈಜ್ಞಾನಿಕ ಕೂಡ ಹೌದು.” ನಾನು ನಿಮ್ಮ ಅಭಿಪ್ರಾಯ ಏನು ಅಂತ ಕೇಳಲಿಲ್ಲ. ನಿಮ್ಮ ಅಭಿಪ್ರಾಯಕ್ಕಿರುವ ವೈಜ್ಞಾನಿಕ ಆಧಾರಗಳು ಏನು ಅಂತ ಕೇಳಿದೆ. ಆಧಾರಗಳನ್ನು ಮಂಡಿಸಿ ನಿಮ್ಮ ಬಗ್ಗೆ ಗೌರವ ಹೆಚ್ಚುವಂತೆ ನೋಡಿಕೊಳ್ಳಿ. ಆಧಾರಗಳು ಇಲ್ಲದಿದ್ದರೆ ಸುಮ್ಮನಿದ್ದು ಇರುವ ಗೌರವ ಉಳಿಸಿಕೊಳ್ಳಿ.

          3. Ananda Prasad

            ಮಡೆಸ್ನಾನದಿಂದ ಚರ್ಮರೋಗ ಅಥವಾ ಬೇರೆ ಯಾವುದೇ ರೋಗಗಳು ವಾಸಿಯಾಗುವುದಿಲ್ಲ ಎಂದು ವಿಜ್ಞಾನ, ವೈದ್ಯರು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ನಾನು ಪುನಃ ಹೇಳಬೇಕಾದ ಅಗತ್ಯ ಇಲ್ಲ. ತೀರ್ಪು ನೀಡುವಾಗ ವಿಜ್ಞಾನ, ವೈದ್ಯಕೀಯ ಜ್ಞಾನವನ್ನು ನ್ಯಾಯಾಧೀಶರು ಗಮನಿಸಿಯೇ ಇಲ್ಲ. ಗಮನಿಸಿದ್ದಿದ್ದರೆ ಮಡೆಸ್ನಾನವನ್ನು ಮುಂದುವರಿಸುವ ತೀರ್ಪು ನೀಡಲು ಸಾಧ್ಯವಿರುತ್ತಿರಲಿಲ್ಲ.

          4. ನಾಗಶೆಟ್ಟಿ ಶೆಟ್ಕರ್

            “ಮಡೆಸ್ನಾನದಿಂದ ಚರ್ಮರೋಗ ಅಥವಾ ಬೇರೆ ಯಾವುದೇ ರೋಗಗಳು ವಾಸಿಯಾಗುವುದಿಲ್ಲ”

            ಮಡೆಸ್ನಾನದಿಂದ ಚರ್ಮರೋಗ ಅಥವಾ ಬೇರೆ ಯಾವುದೇ ರೋಗಗಳು ವಾಸಿಯಾಗುತ್ತದೆ ಹಾಗೂ ಈ ಕಾರಣಕ್ಕೆ ಮಡೆಸ್ನಾನವನ್ನು ಮುಂದುವರೆಸತಕ್ಕದ್ದು ಅಂತ ನ್ಯಾಯಪೀಠವಾಗಲಿ ಫಿರ್ಯಾದುದಾರರಾಗಲಿ ಹೇಳಿಲ್ಲವಲ್ಲ ಮಿ. ಆನಂದ ಪ್ರಸಾದ್! ಮಡೆಸ್ನಾನ ಆಚರಣೆ ಮುಂದುವರೆಕೆಗೆ ನ್ಯಾಯಪೀಠ ಕೊಟ್ಟ ಕಾರಣ ನಿಮಗೆ ತಿಳಿದಿದೆಯೇ? ತಿಳಿಯದೆ ಬಾಯಿಗೆ ಬಂದ ಹಾಗೆ ವಾದ ಮಾಡುವುದು ಸಭ್ಯತೆ ಅಲ್ಲ.

            “No harm would be caused if it is not stayed as the said practice is not followed by force. Denying the religious ritual would amount to denial of right to freedom of religion granted under the Constitution and will hurt the religious sentiments of the devotees”

          5. Ananda Prasad

            “No harm would be caused if it is not stayed as the said practice is not followed by force. Denying the religious ritual would amount to denial of right to freedom of religion granted under the Constitution and will hurt the religious sentiments of the devotees”
            ನ್ಯಾಯಾಲಯದ ಇದೇ ಅಭಿಪ್ರಾಯವನ್ನು ತೆಗೆದುಕೊಂಡರೆ ಈಗಾಗಲೇ ಕಾನೂನಿನ ಮೂಲಕ ನಿಷೇಧಿಸಿದ ಬೆತ್ತಲೆ ಸೇವೆ, ಸತಿ ಪದ್ಧತಿ, ಬಾಲ್ಯ ವಿವಾಹ ಇವುಗಳನ್ನು ನಿಷೇಧಿಸಿರುವುದು ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಹಾಗೂ ಧಾರ್ಮಿಕ ಭಾವನೆಗಳನ್ನು ಮೊಟಕುಗೊಳಿಸಿದಂತೆ ಆಗುತ್ತದೆ. ಇವುಗಳನ್ನೂ ನ್ಯಾಯಾಲಯವು ಪುನಃ ಆರಂಭಿಸಲು ತೀರ್ಪು ಕೊಡಬಹುದು. ಏಕೆಂದರೆ ಬೆತ್ತಲೆ ಸೇವೆ, ಸತಿ ಪದ್ಧತಿ, ಬಾಲ್ಯ ವಿವಾಹದಲ್ಲಿಯೂ ಕೂಡ ಯಾರದೇ ಒತ್ತಾಯದ ಮೇಲೆ ಅವುಗಳನ್ನು ಮಾಡುವುದು ಅಲ್ಲ. ಸತಿ ಪದ್ಧತಿ ಹಿಂದೂಗಳ ಧಾರ್ಮಿಕ ಪದ್ಧತಿ, ಗಂಡ ಸತ್ತ ಹೆಣ್ಣುಮಕ್ಕಳು ತಾವಾಗಿಯೇ ತಮ್ಮ ಮಾನ ಕಾಪಾಡಿಕೊಳ್ಳಲು ಸತಿ ಹೋಗುವುದು ಎಂಬ ಸಮರ್ಥನೆ ಇದೆ. ಅದೇ ರೀತಿ ಬೆತ್ತಲೆ ಸೇವೆಯಲ್ಲಿಯೂ ಯಾರದೇ ಒತ್ತಾಯವಿಲ್ಲ, ಅದೂ ಕೂಡ ಜನರ ಧಾರ್ಮಿಕ ನಂಬಿಕೆ. ಈ ರೀತಿಯ ಕುಂಟು ನೆಪ ಹೇಳುತ್ತಾ ಹೋದರೆ ಇವುಗಳಿಗೆ ಕೊನೆ ಮೊದಲಿಲ್ಲ. ಇಂಥ ಕುಂಟು ನೆಪಗಳಿಂದ ಭಾರತದ ನ್ಯಾಯಾಂಗ ವ್ಯವಸ್ಥೆ ವಿಶ್ವ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗುತ್ತದೆ ಎಂಬ ಎಚ್ಚರ ನ್ಯಾಯಾಧೀಶರಿಗೆ ಇದ್ದರೆ ಒಳ್ಳೆಯದು.

          6. ನಾಗಶೆಟ್ಟಿ ಶೆಟ್ಕರ್

            ಬೆತ್ತಲೆ ಸೇವೆಯಿಂದ ಯಾರಿಗೂ ತೊಂದರೆ/ಹಾನಿ/ನಷ್ಟ ಆಗುವುದಿಲ್ಲ ಎಂಬ ನಿಮ್ಮ ವಾದ ತಪ್ಪು ಮಿ. ಆನಂದ ಪ್ರಸಾದ್. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ನಗ್ನತೆಯ ಪ್ರದರ್ಶನವು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿತವಾಗಿದೆ. ಆದರೆ ನಿಮ್ಮ ಮನೆಯ ಒಳಗೆ ಹೊರಗಿನವರಿಗೆ ಕಾಣದಂತೆ ನೀವು ಹಾಗೂ ನಿಮ್ಮ ಒಡನಾಡಿಗಳು ಬೆತ್ತಲೆ ಸೇವೆ ಮಾಡಿದರೆ ಅದು ಅಪರಾಧವಾಗುವುದಿಲ್ಲ. ಇನ್ನು ಸತಿ ಸಹಗಮನವು ಆತ್ಮಹತ್ಯೆ ನಿಷೇಧ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವೆನಿಸಿದೆ. ಬಾಲ್ಯವಿವಾಹವು ಕೂಡ ಅಪ್ರಬುದ್ಧ ವಯಸ್ಕರ ಸಂಭೋಗಕ್ರಿಯೆಯು ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಅಪರಾಧವೆನಿಸಿದೆ.

            ಮಡೆಸ್ನಾನವನ್ನು ತಡೆಗಟ್ಟಲು ನಿಮ್ಮ ಅಭಿಪ್ರಾಯಗಳಿಗಿಂತ ಮಿಗಿಲಾಗಿ ಪ್ರಬಲ ಕಾರಣಗಳು ಬೇಕು. ನಮ್ಮ ಘನ ಸರಕಾರ ಮಡೆಸ್ನಾನದಿಂದ ಚರ್ಮ ರೋಗ ಆದಿಯಾಗಿ ಸಾಂಕ್ರಾಮಿಕ ರೋಗ ಹರಡುತ್ತದೆ ಎಂದು ಸಾಬೀತು ಪಡಿಸಿದ್ದರೆ ಖಂಡಿತ ನ್ಯಾಯಪೀಠ ಮಡೆಸ್ನಾನವನ್ನು ನಿಷೇಧಿಸುತ್ತಿತ್ತು. ಆದರೆ ಸರಕಾರ ಮಡೆಸ್ನಾನವನ್ನು ಜಾತೀಯ ತಾರತಮ್ಯದೊಂದಿಗೆ ತಳುಕು ಹಾಕಿ ತಪ್ಪು ಮಾಡಿತು. ಏಕೆಂದರೆ ಮಡೆಸ್ನಾನದ ಆಚರಣೆಯಲ್ಲಿ ಜಾತೀಯ ತಾರತಮ್ಯವಿಲ್ಲ – ಮೇಲ್ನೋಟಕ್ಕೆ. ಮಡೆಸ್ನಾನವನ್ನು ಯಾರು ಬೇಕಾದರೂ ಆಚರಿಸಬಹುದು, ಯಾರ ಮೇಲೂ ಅದನ್ನು ಒತ್ತಾಯದಿಂದ ಹೇರಲಾಗಿಲ್ಲ ಎಂದು ಫಿರ್ಯಾದುದಾರರು ವಾದ ಮಾಡಿ ಸರಕಾರದ ವಾದದಲ್ಲಿನ ಲೋಪಗಳನ್ನು ಬಂಡವಾಳವಾಗಿಸಿಕೊಂಡು ಗೆದ್ದರು. ತಪ್ಪು ಸರಕಾರದ್ದು ಆದರೆ ನೀವು ನ್ಯಾಯಪೀಠವನ್ನು ನಿಂದಿಸುತ್ತಿದ್ದೀರಿ. ಇದು ಸರಿಯಲ್ಲ.

          7. Ananda Prasad

            ಸಾರ್ವಜನಿಕ ಸ್ಥಳಗಳಲ್ಲಿ ನಗ್ನತೆಯ ಪ್ರದರ್ಶನ ಶಿಕ್ಷಾರ್ಹ ಅಪರಾಧ ಎಂದಾದರೆ ಕೆಲವು ಜೈನ ಮುನಿಗಳು ನಗ್ನರಾಗಿಯೇ ತಿರುಗಾಡುತ್ತಾರಲ್ಲ, ಇವರಿಗೆ ಯಾವುದೇ ಶಿಕ್ಷೆ ಆದದ್ದು ನಾನು ಇದುವರೆಗೂ ಕೇಳಿಲ್ಲ. ಹಾಗಾದರೆ ಇವರು ಸಂವಿಧಾನ ಹಾಗೂ ಕಾನೂನಿಗಿ೦ಥ ಮೇಲೋ? ಇನ್ನೊಬ್ಬರು ಉಂಡ ಎಂಜಲೆಲೆಯ ಮೇಲೆ ಹೊರಳಾಡುವುದು ಒಂದು ಅನಿಷ್ಟ ಪದ್ಧತಿ, ನಮ್ಮ ಸಂಸ್ಕೃತಿಗೆ ಕಪ್ಪು ಚುಕ್ಕೆ ಎಂಬ ಕಾರಣವೆ ಸಾಕು ಇದನ್ನು ನಿಷೇಧಿಸಲು. ನ್ಯಾಯಾಧೀಶರು ಮಾನವೀಯ ಕಳಕಳಿ ಇರುವವರಾಗಿದ್ದರೆ ಹಾಗೂ ವೈಜ್ಞಾನಿಕ ತಿಳುವಳಿಕೆ ಹಾಗೂ ಸುಧಾರಣೆಯ ಪರವಾಗಿ ಇದ್ದರೆ ಇದನ್ನು ಸಂವಿಧಾನದ ಅಡಿಯಲ್ಲಿಯೇ ನಿಷೇಧಿಸಲು ಸಾಧ್ಯವಿದೆ. ನ್ಯಾಯಾಧೀಶರಾದವರಿಗೆ ಅಂಥ ಕಳಕಳಿ ಇರಬೇಕು ಅಷ್ಟೇ. ಹೀಗಾಗಿ ನ್ಯಾಯಾಧೀಶರು ಕೂಡ ಇಲ್ಲಿ ತಪ್ಪು ಮಾಡಿದ್ದಾರೆ ಹಾಗೂ ಸುಧಾರಣೆಯ ಪರವಾಗಿ ಇಲ್ಲ ಎಂಬ ಸಂದೇಶ ನೀಡಿದ್ದಾರೆ. ಇದರಿಂದ ಭಾರತದ ಬಗೆಗಿನ ಬೇರೆ ದೇಶಗಳ ಅಭಿಪ್ರಾಯವಾದ ‘ಹಾವಾಡಿಗರ ಹಾಗೂ ಮೂಢ ನಂಬಿಕೆಗಳ ದೇಶ’ ಎಂಬ ಅಭಿಪ್ರಾಯವನ್ನು ಗಟ್ಟಿ ಗೊಳಿಸಿದಂತೆ ಆಗಿದೆ. ಇಂಥ ಅನಿಷ್ಟ ಪರಂಪರೆಗಳಿಂದಾಗಿ ನಾವು ಬೇರೆ ದೇಶಗಳ ಮುಂದೆ ತಲೆತಗ್ಗಿಸುವಂತೆ ಆಗಿರುವುದು ನಾಚಿಕೆಗೇಡು.

          8. ನಾಗಶೆಟ್ಟಿ ಶೆಟ್ಕರ್

            “ಕೆಲವು ಜೈನ ಮುನಿಗಳು ನಗ್ನರಾಗಿಯೇ ತಿರುಗಾಡುತ್ತಾರಲ್ಲ, ಇವರಿಗೆ ಯಾವುದೇ ಶಿಕ್ಷೆ ಆದದ್ದು ನಾನು ಇದುವರೆಗೂ ಕೇಳಿಲ್ಲ. ಹಾಗಾದರೆ ಇವರು ಸಂವಿಧಾನ ಹಾಗೂ ಕಾನೂನಿಗಿ೦ಥ ಮೇಲೋ? ”

            ಇದು ನಮ್ಮ ದೇಶದ ದೌರ್ಭಾಗ್ಯ. ನಗ್ನರಾಗಿ ತಿರುಗಾಡುವ ಎಲ್ಲರನ್ನೂ ಸರಕಾರ ಜೈಲಿಗಟ್ಟತಕ್ಕದ್ದು. ಆದರೆ ನ್ಯಾಯಾಂಗ ಈ ದುಸ್ಥಿತಿಗೆ ಹೊಣೆಯಲ್ಲ.

            “ಇನ್ನೊಬ್ಬರು ಉಂಡ ಎಂಜಲೆಲೆಯ ಮೇಲೆ ಹೊರಳಾಡುವುದು ಒಂದು ಅನಿಷ್ಟ ಪದ್ಧತಿ, ನಮ್ಮ ಸಂಸ್ಕೃತಿಗೆ ಕಪ್ಪು ಚುಕ್ಕೆ ಎಂಬ ಕಾರಣವೆ ಸಾಕು”

            ಸರಕಾರ ಎಂಜಲೆಲೆ ಮೇಲೆ ಹೊರಳಾಡುವುದು ಅನಿಷ್ಟ ಎಂದು ರುಜುವಾತು ಪಡಿಸಿದರೆ ನ್ಯಾಯಪೀಠ ಖಂಡಿತ ಪ್ರಗತಿಪರರ ಪರವಾಗಿಯೇ ತೀರ್ಪು ನೀಡುತ್ತದೆ. ಆದರೆ ಸರಕಾರ ಜಾತಿ ತಾರತಮ್ಯವನ್ನು ವಾದವಾಗಿಸಿಕೊಂಡು ಮೂರ್ಖವಾಯಿತು. ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ನೀವು ಮೂರ್ಖರಂತೆ ನ್ಯಾಯಾಂಗವನ್ನು ದೂಶಿಸುತ್ತಿದ್ದೀರಿ.

Leave a Reply to ನಾಗಶೆಟ್ಟಿ ಶೆಟ್ಕರ್ Cancel reply

Your email address will not be published. Required fields are marked *