Daily Archives: November 28, 2014

ರಾಘವೇಶ್ವರ ಭಾರತಿ ಪ್ರಕರಣ: ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮಾತು-ನಡತೆಗಳ ಮೌಲ್ಯಗಳು ಸಾಯುತ್ತಿರುವಾಗ…

– ಅನುಪಮಾ ಪ್ರಸಾದ್

ಇಂದು ಸಾಮಾಜಿಕ-ರಾಜಕೀಯ-ಧಾರ್ಮಿಕ ಜೀವನದಲ್ಲಿ ಮಾತುಗಳ-ನಡತೆಗಳ ಮೌಲ್ಯಗಳು ಶರವೇಗದಲ್ಲಿ ಸಾಯುತ್ತಿರುವಾಗ ಎಲ್ಲೊ ಯಾರೋ ಇಡುವ ಸಣ್ಣ ನಡೆಯೊಂದು ಆಶಾವಾದಕ್ಕೆ ಕಾರಣವಾಗುತ್ತದೆ. ರಾಘವೇಶ್ವರ ಭಾರತಿ/ಪ್ರೇಮಲತಾ ಶಾಸ್ತ್ರಿ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿraghaveshwara-premalatha ಫಣೀಂದ್ರ ಅವರು ತನ್ನ ನ್ಯಾಯ ತೀರ್ಮಾನದ ಮೇಲೆ ಅವಿಶ್ವಾಸ ವ್ಯಕ್ತಪಡಿಸಿ ರಾಷ್ಟ್ರಪತಿಗೆ ಪತ್ರ ಹೋಗಿರುವುದರಿಂದ ತನಿಖೆಯಿಂದ ಹಿಂದೆ ಸರಿದಿರುವುದು ಮೌಲ್ಯಗಳು ಇನ್ನೂ ಸತ್ತಿಲ್ಲ ಅನ್ನುವುದಕ್ಕೆ ಸಣ್ಣ ಸಾಕ್ಷಿ. ಈ ಪ್ರಕರಣದಲ್ಲಿ ನ್ಯಾಯಪೀಠದ ಮೇಲೆ ಸಂಶಯ ವ್ಯಕ್ತ ಪಡಿಸಿ ಪತ್ರ ಬರೆದಿದ್ದು ಸರಿಯೆ ತಪ್ಪೆ ಅನ್ನುವುದಕ್ಕಿಂತ ಇಂತಹ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ನಡೆದುಕೊಂಡ ರೀತಿ ಗಮನಾರ್ಹವಾಗುತ್ತದೆ. ‘ಸಮಾನ ಮನಸ್ಕ ವೇದಿಕೆ’ಯ ಮೂಲಕ ರಾಘವೇಶ್ವರ ಭಾರತಿ ಹಾಗು ಪ್ರೇಮಲತಾ ಪ್ರಕರಣದ ಕುರಿತಾಗಿ ಈಗಲಾದರೂ ಹೊರ ಬಿದ್ದ ಹವ್ಯಕ ಸಮುದಾಯದ ಹೇಳಿಕೆಯೂ ಇನ್ನೊಂದು ಸಣ್ಣ ಆರೋಗ್ಯಕರ ಬೆಳವಣಿಗೆ.

ಇನ್ನು ಕೆಲವರು ಆರೋಪ-ಪ್ರತ್ಯಾರೋಪ ಮಾಡುತ್ತಿರುವ ಇಬ್ಬರದೂ ತಪ್ಪಿದೆ ಎಂದು ಗೊಣಗುವುದರಲ್ಲಿ ನೈತಿಕವಾಗಿ ಯಾವ ತಿರುಳೂ ಇಲ್ಲ. ಏಕೆಂದರೆ ಇಲ್ಲಿ ಒಬ್ಬರದು ಗುರು ಸ್ಥಾನ. ಗುರು ತನ್ನ ಶಿಷ್ಯ ಬಳಗ ತಪ್ಪಿ ನಡೆದಾಗ ದಾರಿ ತೋರಿಸಬೇಕಾದವನು. ಅದರಲ್ಲೂ ಸನ್ಯಾಸತ್ವದ ಹೊದಿಕೆಯನ್ನು ಪ್ರಜ್ಞಾಪೂರ್ವಕವಾಗಿ ತೊಟ್ಟುಕೊಂಡು; ಸಾರ್ವಜನಿಕವಾಗಿ ಹಾಗೆಯೇ ಬಿಂಬಿಸಿಕೊಳ್ಳುತ್ತಿರುವಾಗ ಅತ್ಯಾಚಾರದಂತಹ ಗಂಭೀರ ಸ್ವರೂಪದ ಆರೋಪ ಎದುರಾಗಿದ್ದು, ರಾಘವೇಶ್ವರ ಭಾರತಿ ತಾನಾಗಿಯೇ ಪೀಠದಿಂದಿಳಿದು ತನಿಖೆ ಎದುರಿಸಲು ಸಿದ್ಧವಾಗಬೇಕಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು, ಆ ಸ್ಥಾನದ ಮೌಲ್ಯಗಳನ್ನು ಗೌರವಿಸುವ ವ್ಯಕ್ತಿ ತೆಗೆದುಕೊಳ್ಳಬೇಕಾದ ನಡೆಯಾಗಿತ್ತು. ಆದರೆ, ಇನ್ನು ಅವರದೇ ಮಾತಿನ ಜಾಡಿನಲ್ಲಿ ಹೇಳುವುದಾದರೆ, ಮಾತಿಗೆ ಮೊದಲು ಶ್ರೀರಾಮ ತೋರಿಸಿದ ದಾರಿಯಲ್ಲಿ ನಡೆಯುತ್ತೇನೆ ಅನ್ನುವವರಿಗೆ ತನ್ನ ಪರಿಶುದ್ಧತೆಯನ್ನ ಸಾಬೀತು ಮಾಡಲು ಶ್ರೀರಾಮ ಅಂದು ಸೀತೆಗೆ ತೋರಿಸಿದ ದಾರಿ ಅಗ್ನಿ ಪರೀಕ್ಷೆಯಾದ್ದರಿಂದ; ತನಿಖೆಗೆ ತಡೆಯಾಜ್ಞೆಯ ಮೊರೆ ಹೋಗದೆ ತನ್ನನ್ನು ತನಿಖೆಗೆ ಒಡ್ಡಿಕೊಳ್ಳುವುದೇ ತನಗೆ ಶ್ರೀರಾಮ ಒಡ್ಡಿದ ಅಗ್ನಿ ಪರೀಕ್ಷೆ, ಹಾಗಾಗಿ ತನಿಖೆಗೆ ತಡೆಯಾಜ್ಞೆಗಳನ್ನೇ ತರುತ್ತ ವಿಳಂಬ ನೀತಿಗೆ ಮೊರೆ ಹೋಗುವುದು ಅವಮಾನವೆಂದನಿಸದಿರುವುದು ವಿಪರ್‍ಯಾಸ! ಅವರು ತಾನು ಯಾವುದೇ ಪ್ರಮಾದ ಎಸಗಿಲ್ಲ ಅನ್ನುತ್ತಲೇ ತನಿಖೆಯ ಎಲ್ಲಾ ಹಂತಗಳಲ್ಲು ತಡೆಯಾಜ್ಞೆ ತಂದಿದ್ದಂತು ಸತ್ಯ!

ಆದರೆ, ಇಂತಹ ಸಂದರ್ಭದಲ್ಲಿ ರಾಜಕೀಯವಾಗಿ ಗುರುತಿಸಿಕೊಂಡು ಮುಂಚೂಣಿಯಲ್ಲಿರುವ ಮಹಿಳಾ ನಾಯಕಿಯರೂ ಪ್ರಶ್ನೆ ಮಾಡುವ ಗೋಜಿಗೇ ಹೋಗಲಿಲ್ಲ. shobha-karandlajeತೀರ್ಥಹಳ್ಳಿಯ ಬಾಲಕಿಯ ಪ್ರಕರಣದಲ್ಲಿ ಅತ್ಯಾಚಾರ ನಡೆದಿಲ್ಲ ಎಂದು ಮನೆಯವರು, ವೈದ್ಯಕೀಯ ಪರೀಕ್ಷೆಗಳು ಹೇಳಿದರೂ ಶೋಭಾ ಕರಂದ್ಲಾಜೆ ಮಾಧ್ಯಮಗಳೆದುರು ಬಾಲಕಿಯ ಸಾವು ಅತ್ಯಾಚಾರದ ಹತ್ಯೆ ಎಂದು ಸಾರ್ವಜನಿಕವಾಗಿ ಬೊಬ್ಬೆ ಹೊಡೆದು ಅದೇ ಅಂತಿಮ ಸತ್ಯವೆಂದು ಶರಾ ಬರೆಯಲು ಪ್ರಯತ್ನಿಸುತ್ತಾರೆ. ಕೀಳು ಮಟ್ಟದ ರಾಜಕೀಯ ದುರುದ್ದೇಶಕ್ಕಾಗಿ ತಾನು ಒಂದು ಮುಗ್ದ ಜೀವದ ಸಾವನ್ನು ಬಳಸಿಕೊಳ್ಳುತ್ತಿದ್ದೇನೆನ್ನುವ ಕನಿಷ್ಠ ಪ್ರಜ್ಞೆಯನ್ನೂ ಅವರು ತೋರಿಸುವುದಿಲ್ಲ.

ಇನ್ನು ಅದೇ ಪಕ್ಷದ ಮತ್ತೊಬ್ಬ ರಾಜಕಾರಣಿ ತೇಜಸ್ವಿನಿ ಗೌಡ ಕೆ.ಎಸ್.ಈಶ್ವರಪ್ಪ ಹಾಗು ಐವಾನ್ ಡಿಸೋಜರ ಮಾತಿನ ಮುಂದುವರಿಕೆಯೆಮಬಂತೆ ತನ್ನಂತೆಯೇ ರಾಜಕಾರಣದಲ್ಲಿರುವ ಮಹಿಳೆಯರ ಬಗ್ಗೆ ಯಾವ ವ್ಯಕ್ತಿ ಗೌರವವೂ ಇಲ್ಲದೆ ಅತ್ಯಂತ ಕೀಳು ಅಭಿರುಚಿಯ ಮಾತಾಡುತ್ತಾರೆ. ವಿಪರ್‍ಯಾಸವೆಂದರೆ ಇಬ್ಬರು ಮಹಿಳೆಯರೂ ಡಬ್ಬಲ್ ಡಿಗ್ರಿ ಪಡೆದ ಅಕ್ಷರಸ್ಥರೆ! ಈ ಇಬ್ಬರು ಮಹಿಳೆಯರ ಮಾತುಗಳಲ್ಲಡಗಿರುವುದೂ ಸ್ವಾರ್ಥ ರಾಜಕಾರಣವೇ ಹೊರತಾಗಿ ಮಹಿಳೆಯರ ಬಗೆಗಿನ, ಮಾನವೀತೆಯ ಬಗೆಗಿನ ಕಾಳಜಿಯೂ ಇಲ್ಲ. ನಾಗರೀಕ ಸೌಜನ್ಯವೂ ಇಲ್ಲ. ಇದ್ದುದರಲ್ಲಿ ತೇಜಸ್ವಿನಿಯವರ ಮಾತಿನ ಸಂದರ್ಭದಲ್ಲಿ ಪ್ರತಿಕ್ರಿಯೆಯಾಗಿ ಶ್ರೀಮತಿ ಮೋಟಮ್ಮ ಮಾತಿನ ಹದ ಕಾಯ್ದುಕೊಂಡು ಕಾವು ಉಳಿಸಿಕೊಂಡು ಪ್ರತಿಕ್ರಿಯಿಸಿದ್ದು ಸಮಾಧಾನಕರ ಅಂಶ. ಮತ್ತೆ ಪುನಃ ನಾಲಿಗೆ ಹರಿಯ ಬಿಟ್ಟವರು ವಿನಯ ಕುಮಾರ ಸೊರಕೆ. ಸಾರ್ವಜನಿಕವಾಗಿ ಅದು ರಾಜಕೀಯ ಸ್ಥಾನವಾಗಿರಲಿ; ಸಾಮಾಜಿಕ ಅಥವಾ ಧಾರ್ಮಿಕ ಸ್ಥಾನವಾಗಿರಲಿ. ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಸಂಸ್ಕೃತಿಯ ಬಗ್ಗೆ ಗುತ್ತಿಗೆ ಪಡೆದುಕೊಂಡಂತೆ ಮಾತಾಡುವ ಮೊದಲು ಕಿಂಚಿತ್ ಆತ್ಮ ನಿರೀಕ್ಷಣೆ ನಡೆಸಿದರೆ ತಾವು ನಿರ್ವಹಿಸುತ್ತಿರುವ ಸ್ಥಾನದ ಮಾನವನ್ನಾದರೂ ಕಾಪಾಡಬಹುದೇನೊ.