Daily Archives: November 29, 2014

TV9 ಬ್ಲಾಕ್‍ಔಟ್‍ ಮತ್ತು ಭಯೋತ್ಪಾದಕ ಜ್ಯೋತಿಷಿಗಳ ವಿರುದ್ಧದ ಚಳವಳಿ


– ಪ್ರಶಾಂತ್ ಹುಲ್ಕೋಡು


ಕಳೆದ ಒಂದು ದಶಕದ ಅವಧಿಯಲ್ಲಿ ಕರ್ನಾಟಕದ ನ್ಯೂಸ್ ಚಾನಲ್‍ಗಳ ಕುರಿತು ಹೀಗೊಂದು ಚರ್ಚೆ ಆರಂಭವಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಸುದ್ದಿವಾಹಿನಿಗಳು, tv9-media-blackoutಅವುಗಳ ಮಹತ್ವ ಮತ್ತು ಇರಬೇಕಾದ ಸಂಯಮಗಳನ್ನು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚೆತ್ತುಕೊಂಡಿರುವ ಸಮುದಾಯ ಪ್ರಶ್ನೆ ಮಾಡುತ್ತಿದೆ. ಇದು ಬರೀ ಪ್ರಶ್ನೆಗೆ ಮಾತ್ರವೇ ಸೀಮಿತವಾಗದೆ, ಆರೋಗ್ಯಕರ ಚರ್ಚೆಗೂ ನಾಂದಿ ಹಾಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಭಯೋತ್ಪಾದಕ ಜ್ಯೋತಿಷಿ’ಗಳ ವಿರುದ್ಧ ಚಳವಳಿ (?)ಯನ್ನೂ ಹುಟ್ಟುಹಾಕುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ.

ಇವೆಲ್ಲವೂ ಈ ಕ್ಷಣ ಬೆಳವಣಿಗೆಗಳಲ್ಲ. ಟಿವಿಗಳಲ್ಲಿ ಜ್ಯೋತಿಷ್ಯದ ಕಾರ್ಯಕ್ರಮಗಳು ಆರಂಭವಾದ ದಿನದಿಂದಲೂ ವಿರೋಧ ಕೇಳಿಬಂದಿತ್ತು. ಅವತ್ತಿಗೆ ಮೀಡಿಯಾ ಕುರಿತು ಭಿನ್ನ ದನಿಯಲ್ಲಿ ಮಾತನಾಡುತ್ತಿದ್ದ ‘ಸಂಪಾದಕೀಯ’ದಂತ ಬ್ಲಾಗ್‍ಗಳು ಈ ಜ್ಯೋತಿಷಿಗಳ ವಿರುದ್ಧ ದೊಡ್ಡ ಮಟ್ಟದ ಅರಿವು ಮೂಡಿಸಿದ್ದವು. ಅದೆಲ್ಲರ ಪರಿಣಾಮ ಒಂದು ಕಡೆಗಿದ್ದರೆ, ಮೊನ್ನೆ ಮೊನ್ನೆ ಟಿವಿ9 ಮತ್ತು ನ್ಯೂಸ್‍9 ಎಂಬ ಚಾನಲ್‍ಗಳು ‘ಬ್ಲಾಕ್‍ ಔಟ್’ ಆಗುವ ಮೂಲಕ ಈ ಎಚ್ಚೆತ್ತ ಸಮಾಜಕ್ಕೆ ಮೊರೆ ಇಟ್ಟವು. ನನಗೆ ನೆನಪಿರುವಂತೆ, ಟಿವಿ9 ಮತ್ತು ನ್ಯೂಸ್‍9ನ ಬಹುತೇಕ ಸಿಬ್ಬಂದಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ, ತಾವು ಕೆಲಸ ಮಾಡುವ ಸಂಸ್ಥೆಗೆ ಒದಗಿ ಬಂದ ಸಂಕಷ್ಟದ ಕುರಿತು ಮಾಹಿತಿ ನೀಡಿದರು. news9-media-blackoutಇದಕ್ಕೆ ಉತ್ತಮ ಬೆಂಬಲವೂ ಸಿಕ್ಕಿತು ಕೂಡ. ನೀವು ಎಷ್ಟೆ ಕೆಟ್ಟವರಾದರೂ, ಜನ ಅಷ್ಟು ಸುಲಭಕ್ಕೆ ಕೈ ಬಿಡುವುದಿಲ್ಲ ಎಂಬುದರ ಸಂಕೇತ ಇದು. ತುರ್ತು ಪರಿಸ್ಥಿತಿ ಹೇರಿ, ಅಪಖ್ಯಾತಿಗೆ ಒಳಗಾಗಿ, ಹೀನಾಯವಾಗಿ ಸೋತು ಹೋಗಿದ್ದ ಇಂದಿರಾ ಗಾಂಧಿಗೂ ಮತ್ತೊಮ್ಮೆ ಅವಕಾಶ ಕೊಟ್ಟ ಜನ ನಾವು. ಹೀಗಿರುವಾಗ, ಟಿವಿ9 ಮತ್ತು ನ್ಯೂಸ್‍9ನಂತಹ ಸಂಸ್ಥೆಗಳನ್ನು ಬಿಟ್ಟುಕೊಡಲು ಸಾಧ್ಯನಾ?

ಬಹುಶಃ ಇದನ್ನು ಟಿವಿ9 ಮತ್ತು ನ್ಯೂಸ್‍9ನ ಮುಖ್ಯಸ್ಥರು ಅರ್ಥಮಾಡಿಕೊಳ್ಳಬೇಕಿತ್ತು. ಆದರೆ, ಮಾರನೇ ದಿನವೇ ತಮ್ಮ ಚಾನಲ್‍ನಿಂದಾಗಿಯೇ tv9-media-astrologerಮನೆ ಮಾತಾಗಿರುವ   ಸಚ್ಚಿದಾನಂದ ಬಾಬುವನ್ನು ಕೂರಿಸಿಕೊಂಡು ರೇಪ್‍ ಕುರಿತು ಹೊಸ ಸಿದ್ಧಾಂತ ಮಂಡಿಸಲು ಮುಂದಾದರು. ಇಲ್ಲಿ ಲಾಜಿಕ್‍ ಹಾಳಾಗಿ ಹೋಗಲಿ, ಟಿಆರ್‍ಪಿ ಮಾನದಂಡ ಇಟ್ಟುಕೊಂಡು ನೋಡಿದರೂ, ಅದ್ಯಾವ ಬುದ್ಧಿವಂತನಿಗೆ ಈ ಪರಿಕಲ್ಪನೆ ವರ್ಕ್‍ಔಟ್‍ ಆಗುತ್ತೆ ಅಂತ ಹೇಗೆ ಅನ್ನಿಸಿತು ಎಂಬುದೇ ಸೋಜಿಗ. ಹಿಂದಿನ ದಿನವಷ್ಟೆ, ಕೇಬಲ್‍ ಟಿವಿ ಆಪರೇಟರ್ಸ್‍ಗೆ ತಪರಾಕಿ ನೀಡಿ, ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದವರು ಇದನ್ನು ನೋಡಿ ಒಂದು ಕ್ಷಣ ಬೇಸ್ತು ಬಿದ್ದರು. ತಾವು ನೀಡಿದ್ದ ಬೆಂಬಲ ಅವಧಿ ಮುಗಿಯಿತು ಎಂದು ಘೋಷಿಸಿದರು. ಇದೀಗ ಅದು ‘ಭಯೋತ್ಪದಾಕ ಜ್ಯೋತಿಷಿ’ಗಳ ವಿರುದ್ಧ ಜನಾಂದೋಲನ ಮೊಳಕೆ ಒಡೆಯಲು ಕಾರಣವಾಗಿದೆ. ಇದು ಹಚ್ಚುತ್ತಿರುವ ಕಿಚ್ಚು ಕಂಡ ಕೆಲವರು, ‘ಇದು ಕೆಲವು ಕಪಟ ಜ್ಯೋತಿಷಿಗಳ ವಿರುದ್ಧ ಸಮರ ಮಾತ್ರವೇ ಹೊರತು ಇಡೀ ಜ್ಯೋತಿಷ್ಯಾಸ್ತ್ರದ ವಿರುದ್ಧದ ಹೋರಾಟ,’ ಎಂಬುದನ್ನೂ ನೆನಪಿಸಿದ್ದಾರೆ.

ಈ ಜ್ಯೋತಿಷ್ಯದ ಭಯೋತ್ಪಾದನೆ ಎಂಬುದೇ ನಮಗೆ ಹೊಸ ವಿಚಾರ. ಇಲ್ಲೀವರೆಗೂ ದಾವೂದ್, ಅಬು ಸಲೇಂ, ಇತ್ತೀಚೆಗೆ ರಿಯಾಝ್ ಭಟ್ಕಳ್ ಅಂತವರನ್ನು ಗುರುತಿಸಲು ಬಳಸುತ್ತಿದ್ದ ಈ ಭಾಷಾ ಪ್ರಯೋಗದ ವ್ಯಾಪ್ತಿಗೆ ಜ್ಯೋತಿಷಿಗಳನ್ನೂ ತಂದಿರುವುದು ಕ್ರಿಯೇಟಿವಿಟಿಯ ಅಭಿವ್ಯಕ್ತಿ! ಬಿಡಿ, tv9-media-astrologer2ಹೇಗೂ ಇಂಥವರ ವಿರುದ್ಧ ಈಗಾಗಲೇ ಕಾನೂನಾತ್ಮಕ ಚೌಕಟ್ಟಿನಲ್ಲಿ ಕಾಯ್ದೆ ರೂಪಿಸುವ ಕೆಲಸ ನಡೆಯುತ್ತಿದೆ. ಕೆಲವು ಮಠಗಳು, ಧಾರ್ಮಿಕ ಕೇಂದ್ರಗಳೇ ಮುಂದೆ ನಿಂತು, ‘ಮೌಢ್ಯ ನಿಷೇಧಿಸಿ’ ಎನ್ನುತ್ತಿವೆ. ಮೌಢ್ಯ ಎಂಬ ಕಪಟ ಅರಮನೆಗೆ ಒಳಗಿನಿಂದ ಹಾಗೂ ಹೊರಗಿನಿಂದ ಕಲ್ಲು ತೂರುವ ಕೆಲಸ ನಡೆಯುತ್ತಿದೆ. ಇದರ ನಡುವೆ ಟಿವಿ ಚಾನಲ್‍ಗಳ ಜ್ಯೋತಿಷಿಗಳ ವಿರುದ‍್ಧ ಈಗ ಕೇಳಿ ಬರುತ್ತಿರುವ ಪ್ರತಿರೋಧ ಕೊಂಚ ಸಂಯಮ ಕಾಪಾಡಿಕೊಂಡರೆ, ಕಡಿಮೆ ಅಂತರದಲ್ಲೇ ಒಂದು ತಾತ್ವಕ ಅಂತ್ಯವನ್ನೂ ಕಾಣಬಲ್ಲದು.

ಆದರೆ, ಇಷ್ಟಕ್ಕೆ ಎಲ್ಲವನ್ನೂ ಮರೆತು ಮುಂದಿನ ಸುದ್ದಿಯ ಹಿಂದೆ ಓಡುವ ಮುನ್ನ ಒಂದು ವಿಚಾರ ಇದೆ. ಅದು ಟಿವಿ9 ಮತ್ತು ನ್ಯೂಸ್ 9 ಚಾನಲ್‍ಗಳ ‘ಬ್ಲಾಕ್‍ ಔಟ್‍’ಗೆ ಸಂಬಂಧಿಸಿದ್ದು. ರಾಜ್ಯದಲ್ಲಿ ಕೇಬಲ್‍ ಟಿವಿ ಕಾಯ್ದೆ ಜಾರಿಗೆ ತರಬೇಕು, ಸರಕಾರವೇ ಒಂದು ಹೊಸ ಟಿವಿ ಚಾನಲ್‍ ಆರಂಭಿಸುತ್ತಂತೆ, ಅದು ರಾಜ್ಯ ಸಭಾ ಟಿವಿ ತರಾನೇ ಇರುತ್ತಂತೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಕಾಲಘಟ್ಟದಲ್ಲೇ ಈ ‘ಬ್ಲಾಕ್‍ಔಟ್‍’ ಘಟನೆ ನಡೆದಿರುವುದನ್ನು ಗಮನಿಸಬೇಕಿದೆ. ಟಿವಿ9 ಮತ್ತು ಸಚಿವ ಡಿ. ಕೆ. ಶಿವಕುಮಾರ್‍ ನಡುವೆ ಅದೇನೇ ವೈಯುಕ್ತಿಕ ವಿಚಾರಗಳಿರಲಿ. ಅವರಿಬ್ಬರೂ ತಮ್ಮ ತಮ್ಮ ಅಸ್ಥಿತ್ವಕ್ಕಾಗಿ ಬಡಿದಾಡಿಕೊಳ್ಳುತ್ತಿದ್ದಾರೆ, ಅದು ಅವರು ಸ್ವಾತಂತ್ರ್ಯ ಮತ್ತು ಅನಿವಾರ್ಯತೆ ಎಂದು ಸುಮ್ಮನಿದ್ದು ಬಿಡಬಹದಿತ್ತು. ಆದರೆ, ಅದು ಪತ್ರಿಕಾ ಸ್ವಾತಂತ್ರ್ಯದ ಮೊಟಕುಗೊಳಿಸುವಿಕೆ ಹಂತಕ್ಕೆ ಬಂದು ನಿಂತಿದೆ.

ನಮಗೆಲ್ಲಾ ನೆನಪಿರುವಂತೆ ಸಿನಿಮಾಗಳಲ್ಲಿ ಕೇಬಲ್‍ ಆಪರೇಟರ್ಸ್‍ ಎಂಬುದು ಕೇಬಲ್ ಮಾಫಿಯಾ ಆಗಿ ತೆರೆಯ ಮೇಲೆ ಕಾಣುತ್ತಿತ್ತು. ಪುಡಿ ರಾಜಕಾರಣಿಗಳು ಹಾಗೂ ಸ್ಥಳೀಯ ರೌಡಿ ಹಿನ್ನೆಲೆಯ ವ್ಯಕ್ತಿಗಳು ಈ ಮಾಫಿಯಾ ಹಿಂದೆ ಇದ್ದರು ಎಂದು ಬಿಂಬಿಸಲಾಗುತ್ತಿತ್ತು. ಆದರೆ, ಕೆಲವೇ ವರ್ಷಗಳ ಅಂತರದಲ್ಲಿ ಅವರು ಮಾಧ್ಯಮಗಳ, ವಿಷೇಶವಾಗಿ ನ್ಯೂಸ್‍ ಚಾನಲ್‍ ಒಂದರ ‘ಕಂಟೆಂಟ್’ ಕುರಿತು ತಗಾದೆ ತೆಗೆಯುವ ಬೌದ್ಧಿಕತೆ ಬೆಳೆಸಿಕೊಂಡಿದ್ದಾರೆ ಎಂಬುದು ಅಚ್ಚರಿ ವಿಚಾರ. ತೆಲುಗು ಸಿನಿಮಾಗಳಿಗೆ ಹೆಚ್ಚಿನ ಪ್ರೋತ್ಸಾಹ ಅಂತಲೋ, ನಾಳೆ ಕಪಟ kickout-astrologersಜ್ಯೋತಿಷಿಗಳ ವಿರುದ್ಧ ಸಮರ ಅಂತಲೋ ಅವರು ‘ಮೀಡಿಯಾ ಸೆನ್ಸಾರ್‍ ಮಂಡಳಿ’ ಎಂಬ ಅನೌಪಚಾರಿಕ ಚೌಕಟ್ಟನ್ನು ಕಟ್ಟಿಕೊಂಡರೆ ಗತಿ ಏನು? ಇಲ್ಲಿ ರಾಜ್ಯ ಸರಕಾರ ತರಲು ಉದ್ದೇಶಿಸಿರುವ ಕೇಬಲ್‍ ಟಿವಿ ಕಾಯ್ದೆ ಕುರಿತು ಇನ್ನಷ್ಟು ಆಳದಲ್ಲಿ ಚರ್ಚೆ ಆಗಬೇಕಿದೆ. ಅದಕ್ಕೂ ಈ ಅನೌಪಚಾರಿಕ ‘ಕೇಬಲ್ ಸೆನ್ಸಾರ್‌ಶಿಪ್‍ಗೂ’ ಏನಾದರೂ ಸಂಬಂಧ ಇದೆಯಾ? ತಮಿಳುನಾಡಿನ ಅರಸು ಕೇಬಲ್‍ ನೆಟ್‍ವರ್ಕ್‍ ಬಂದ ಮೇಲೆ ಮಾಧ್ಯಮ ಮತ್ತು ಸರಕಾರದ ನಡುವಿನ ಸಂಬಂಧದಲ್ಲಿ ಆದ ಸೂಕ್ಷ್ಮ ಬದಲಾವಣೆಗಳು ಏನು? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ.

ಅದರ ಆಚೆಗೆ ಮಾಧ್ಯಮ ಸ್ವಾತಂತ್ರ್ಯ ಎಂಬುದು, ಬದಲಾದ ಕಾಲಮಾನದಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಅಟ್‍ಲೀಸ್ಟ್ ಚಾನಲ್‍ಗಳನ್ನು ಮುನ್ನಡೆಸುತ್ತಿರುವವರಾದರೂ ಗಮನಿಸಬೇಕಿದೆ. ಇವೆಲ್ಲಕ್ಕೂ ಮುಂಚೆ, ಟಿವಿ9 ಮತ್ತು ನ್ಯೂಸ್‍9 ಚಾನಲ್‍ಗಳ ‘ಬ್ಲಾಕ್‍ ಔಟ್‍’ ಕುರಿತಂತೆ ಒಂದು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕಿದೆ. ನಿಜಕ್ಕೂ ಅಲ್ಲಿ ನಡೆದಿದ್ದು ಏನು ಎಂಬುದನ್ನು ಜನರ ಮುಂದೆ ಇಡಬೇಕಿದೆ. ಇದಕ್ಕಾಗಿ ಉತ್ತಮ ಚಾರಿತ್ರ್ಯ ಹೊಂದಿರುವ ಯಾರಾದರೂ ನಿವೃತ್ತ ನ್ಯಾಯಾಧೀಶರಿಗೆ ಒಂದು ತಿಂಗಳ ಅವಕಾಶ ನೀಡಿದರೂ ಸಾಕಾಗುತ್ತದೆ. ಅದು ಭವಿಷ್ಯದ ಕರ್ನಾಟಕ ನ್ಯೂಸ್‍ ಮೀಡಿಯಾದ ಚಹರೆಯನ್ನು ರೂಪಿಸಲು ಒಂದು ತಾತ್ವಿಕ ತಳಹದಿಯನ್ನು ನಿರ್ಮಿಸುವ ಕೆಲವೂ ಆದಂತೆ ಆಗುತ್ತದೆ.

‘ಬ್ಲಾಕ್‍ಟೌಟ್‍’ ವಿರೋಧಿಸಿದ ಟಿವಿ9 ಮತ್ತು ನ್ಯೂಸ್‍9 ಸಿಬ್ಬಂದಿಗಳೂ, ಸಂಸ್ಥೆಯ ಮುಖ್ಯಸ್ಥರು, ಅವರಿಗೆ ಬೆಂಬಲಿಸಿದ ಎಚ್ಚೆತ್ತ ಸಮುದಾಯದ ಮುಂದಿರುವ ಅವಕಾಶ ಮತ್ತು ಹೊಣೆಗಾರಿಕೆ ಇದು. ‘ಭಯೋತ್ಪಾದಕ ಜ್ಯೋತಿಷಿಗಳ’ ಜನಾಂದೋಲದಲ್ಲಿ ಇದು ಮರೆತು ಹೋಗಬಾರದು ಅಷ್ಟೆ.