Monthly Archives: November 2014

ನೈತಿಕ ಪೊಲೀಸ್ ಗಿರಿ ವರ್ಸಸ್ ಕಿಸ್ ಆಫ್ ಲವ್ ಹಾಗೂ ಭಾರತೀಯ ಸಂಸ್ಕೃತಿ


-ಇರ್ಷಾದ್


 

ಕೇರಳದ ಕೊಚ್ಚಿಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಅನೈತಿಕ ಪೊಲೀಸ್ ಗಿರಿKissOfLove ಕೃತ್ಯವನ್ನು ವಿರೋಧಿಸಿ ನಡೆದ “ಕಿಸ್ ಆಫ್ ಲವ್” ಚಳುವಳಿ ನೈತಿಕ ಪೊಲೀಸ್ ಗಿರಿ ವಿರುದ್ಧದ ದೇಶ ವಿದೇಶದಾದ್ಯಂತ ಭಾರೀ ಗಮನ ಸೆಳೆದಂತಹಾ ವಿಶಿಷ್ಟ ಪ್ರತಿಭಟನೆ. ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದೇ ಭಾರತೀಯ “ಸಂಸ್ಕೃತಿ”ಗೆ ವಿರುದ್ಧ ಎಂದು ವಿರೋಧಿಸುವ ಮನೋಭಾವ ಹೊಂದಿರುವ ನಮ್ಮ ಸಮಾಜದಲ್ಲಿ ಹುಡುಗ-ಹುಡುಗಿ, ಹುಡುಗಿ-ಹುಡುಗಿ ಅಥವಾ ಹುಡುಗ-ಹುಡುಗ ಬಹಿರಂಗವಾಗಿ ಪರಸ್ಪರ ಚುಂಬನ ನೀಡುವ ಮೂಲಕ ನೈತಿಕ ಪೊಲೀಸ್ ಗಿರಿ ಕೃತ್ಯವನ್ನು ವಿರೋಧಿಸುವ ಕಿಸ್ಸಿಂಗ್ ಪ್ರತಿಭಟನೆ ಸಹಜವಾಗಿ “ಭಾರತೀಯ ಸಂಸ್ಕೃತಿ” ಪಾಲಕರ ಕೆಂಗಣ್ಣಿನ ವಿರೋಧಕ್ಕೆ ಕಾರಣವಾಗಿದೆ. ಕೇರಳದಲ್ಲಿ ಸ್ವತಹಃ ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್ ಗಿರಿ ನಡೆಸಿದ್ದ ಹಿಂದೂಪರ ಸಂಘಟನೆಗಳ ಜೊತೆಗೆ ಮುಸ್ಲಿಮ್ ಸಂಘಟನೆಗಳು, ರಾಜಕೀಯ ಪಕ್ಷಗಳು, ಇನ್ನಿತರ “ಸಂಸ್ಕೃತಿ” ರಕ್ಷಕರು ಪರಸ್ಪರ ತಮ್ಮೊಳಗಿನ ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ತಮ್ಮೆಲ್ಲರ ಸಮಾನ ಪುರೋಗಾಮಿ ಆಶಯಕ್ಕೆ ವಿರುದ್ದವಾದ “ಕಿಸ್ ಆಫ್ ಲವ್” ಹೋರಾಟದ ವಿರುದ್ದ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದವು.

ಕೇರಳದಲ್ಲಿ ನಡೆದ ಕಿಸ್ ಆಫ್ ಲವ್ ಪ್ರತಿಭಟನೆ ಭಾರೀ ಚರ್ಚೆಗೆ ಕಾರಣವಾಗುತ್ತಿರುವ ಬೆನ್ನಲ್ಲೇ 2008 ರಲ್ಲಿ ಮಂಗಳೂರಿನಲ್ಲಿ ಶ್ರೀ ರಾಮ ಸೇನೆ ನಡೆಸಿದ ಪಬ್ ದಾಳಿ ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಪಿಂಕ್ ಚಡ್ಡಿ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ರಚಿಕಾ ತನೇಜಾ ಎಂಬ ಮಾನವ ಹಕ್ಕು ಹೋರಾಟಗಾರ್ತಿ ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿಯನ್ನು ಖಂಡಿಸಿ “ಕಿಸ್ ಆಫ್ ಲವ್” ಪ್ರತಿಭಟನೆಯನ್ನು ನಡೆಸಲು ಮುಂದಾಗಿರುವುದು ಇದೀಗ ಕರ್ನಾಟಕದ ಸಂಸ್ಕೃತಿ ರಕ್ಷಕರನ್ನು ರೊಚ್ಚಿಗೆಬ್ಬಿಸಿಬಿಟ್ಟಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ “ಕಿಸ್ ಆಫ್ ಲವ್” ಹೋರಾಟಕ್ಕೆ ವ್ಯಕ್ತವಾಗುತ್ತಿರುವ ಆಕ್ರೋಶ ಭರಿತ ವಿರೋಧಗಳೇ ಇದಕ್ಕೆ ಸಾಕ್ಷಿಯಾಗಿವೆ.

ಕಿಸ್ ಆಫ್ ಲವ್ ಅಥವಾ ಸಾರ್ವಜನಿಕ ಚುಂಬನ ಪ್ರತಿಭಟನೆ ಎಷ್ಟರ ಮಟ್ಟಿಗೆ ಸರಿ ಅಥವಾ ನೈತಿಕ ಪೊಲೀಸ್ ಗಿರಿ ಹೋರಾಟಕ್ಕೆ ಪರಿಣಾಮಕಾರಿ ಎಂಬುವುದರ ಕುರಿತಾಗಿ ಚರ್ಚಿಸುವುದಕ್ಕಿಂತ ಮೊದಲಾಗಿ ಈ ರೀತಿಯ ಪ್ರತಿಭಟನೆಗೆ ಕಾರಣವಾದ ನೈತಿಕ ಪೊಲೀಸ್ ಗಿರಿ ಕೃತ್ಯಗಳನ್ನು ಮೊದಲು ಖಂಡಿಸಬೇಕಾಗಿದೆ. ಮಂಗಳೂರನ್ನು ರಾಷ್ಟ್ರೀಯ mangalore_moral1ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದ್ದು ಇಲ್ಲಿಯ “ಸುಸಂಸ್ಕೃತ” ಜನರು ಹುಡುಗ-ಹುಡುಗಿಯರು ಪಬ್ ನಲ್ಲಿ ಇದ್ದಂತಹಾ ಸಂಧರ್ಭದಲ್ಲಿ ದಾಳಿ ನಡೆಸಿ ಅವರ ಮೇಲೆ ಹಲ್ಲೆಗೈದು ಅಮಾನುಷ ಮೆರೆದ 2009 ರ ಪಬ್ ದಾಳಿ ಪ್ರಕರಣ. ಕಾಲೇಜು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಸೇರಿಕೊಂಡು ಮಂಗಳೂರಿನ ಪಡೀಲ್ ಎಂಬಲ್ಲಿರುವ ಹೋಂ ಸ್ಟೇ ಒಂದರಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ನಡೆಸುತ್ತಿದ್ದ ವೇಳೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ ಯುವಕ-ಯುವತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ತಮ್ಮ ವಿಕೃತ ತೋರಿಸಿದ 2012 ಹೋಂ ಸ್ಟೇ ದಾಳಿ. ಇವೆರಡು ರಾಷ್ಟ್ರ-ಅಂತರಾಷ್ಷ್ರೀಯ ಮಟ್ಟದದಲ್ಲಿ ಗಮನ ಸೆಳೆದ ನೈತಿಕ ಪೊಲೀಸ್ ಗಿರಿ ಪ್ರಕರಣಗಳಾದರೆ ಕರಾವಳಿ ಜಿಲ್ಲೆಗಳಲ್ಲಿ ಹಿಂದೂ- ಮುಸ್ಲಿಮ್ ಉಭಯ ಕೋಮುಗಳ ನೈತಿಕ ಪೊಲೀಸರು ಧರ್ಮ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಭಿನ್ನ ಕೋಮಿನ ಯುವಕ-ಯುವತಿಯರು ಜೊತೆಗೆ ಮಾತನಾಡಿದಾಗ, ನಡೆದಾಡಿದಾಗ, ಐಸ್ ಕ್ರೀಂ ಪಾರ್ಲರ್ ನಲ್ಲಿ ಕುಳಿತಿದ್ದಾಗ, ಬೈಕಿನಲ್ಲಿ ಸುತ್ತಾಡುತ್ತಿರುವಾಗ, ಭಿನ್ನ ಕೋಮುಗಳ ವಿದ್ಯಾರ್ಥಿಗಳು ಕಾಲೇಜು ಪ್ರವಾಸ ಹೋಗುತ್ತಿರುವಾಗ ಅವರನ್ನು ಧರ್ಮ-ಸಂಸ್ಕೃತಿKissOfLove_3 ರಕ್ಷಣೆಯ ಹೆಸರಲ್ಲಿ ತಡೆದು ಹಲ್ಲೆ ನಡೆಸಿ ಧರ್ಮ ರಕ್ಷಣೆ ನಡೆಸಿದ ಹುಮ್ಮಸ್ಸಿನಲ್ಲಿ ಬೀಗುವ ನೈತಿಕ ಪೊಲೀಸ್ ಗಿರಿ ದಿನ ಲೆಕ್ಕದಲ್ಲಿ ನಡೆಯುತ್ತಿವೆ. ಮಂಗಳೂರಿನ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ 17 ನೈತಿಕ ಪೊಲೀಸ್ ಗಿರಿ ಪ್ರಕರಣಗಳು ದಾಖಲಾದಲ್ಲಿ ಕಳೆದ ವರ್ಷ 11 ಪ್ರಕರಣಗಳು ದಾಖಲಾಗಿವೆ. ನೈತಿಕ ಪೊಲೀಸ್ ಗಿರಿ ಘಟನೆಗಳು ವಿರುದ್ಧ ಮಂಗಳೂರಿನ ಪ್ರಗತಿಪರ ಸಂಘಟನೆಗಳು ಹೋರಾಟಗಾರರು ಸಾಕಷ್ಟು ಪ್ರತಿಭಟನೆಗಳನ್ನು ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ. ಇಷ್ಟಾದರೂ ಉಭಯ ಕೋಮುಗಳ ನೈತಿಕ ಪೊಲೀಸರ ಅಟ್ಟಹಾಸ ಕಡಿಮೆಯಾಗಿಲ್ಲ.

ನೈತಿಕ ಪೊಲೀಸರ ಕಾಟದಿಂದಾಗಿ ಕರಾವಳಿ ಭಾಗದಲ್ಲಿ ಭಿನ್ನ ಕೋಮಿನ ಯುವಕ-ಯುವತಿಯರು ಸಾರ್ವಜನಿಕವಾಗಿ ಪರಸ್ಪರ ಮಾತನಾಡಲೂ ಭಯಪಡುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಸ್ಕೃತಿ ಹೆಸರಲ್ಲಿ ಪಬ್ ಗಳಲ್ಲೋ, ಹೋಂ ಸ್ಟೇಗಳಲ್ಲೋ, ಹೊಟೇಲ್ ಗಳಲ್ಲೋ, ಬೀಚ್ ಗಳಲ್ಲೋ ಎರಡು ಮನಸ್ಸಗಳ ನಡುವಿನ ಗೆಳೆತನ, ಭಾಂಧವ್ಯ, ಪ್ರೀತಿಯನ್ನು ಸಾರ್ವಜನಿಕವಾಗಿ ಕಸಿದು ಅವರನ್ನು ಹಿಂಸಿಸಿ ಅವಮಾನಪಡಿಸುವ ಮಾನವ ಸಂಬಂಧಗಳ ವಿರೋಧಿ ನೈತಿಕ ಪೊಲೀಸಗಿರಿ ವಿರೋಧಿಸಿ ಪ್ರೀತಿಯ ಪ್ರತೀಕವಾಗಿರುವ ಚುಂಬನವನ್ನು ಆಚರಿಸುವ “ಕಿಸ್ ಆಫ್ ಲವ್” ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದರಲ್ಲಿ ತಪ್ಪೇನಿದೆ?

ಬೇಲೂರು –ಹಳೆಬೀಡು – ಅಜೆಂತಾ- ಎಲ್ಲೂರಗಳಲ್ಲಿರುವ ವಿವಿಧ ಭಂಗಿಯ ನಗ್ನ ವಿಗ್ರಹಗಳನ್ನು KissOfLove_1ಸಾರ್ವಜನಿಕರು ವೀಕ್ಷಣೆ ಮಾಡುವುದಿಲ್ಲವೇ? ಇಸ್ಲಾಮ್ ಧರ್ಮದದ ಸಂಪ್ರದಾಯದ ಪ್ರಕಾರ ವ್ಯಕ್ತಿಗಳು ಪರಸ್ಪರ ಭೇಟಿಯಾದಾಗ ಕೈಕುಲುಕಿ, ಆಲಂಗಿಸಿ ಎರಡೂ ಕೆನ್ನೆಗಳಿಗೆ ಚುಂಬನ ಮಾಡುವ ಸಂಪ್ರದಾಯವಿಲ್ಲವೇ? ಇವುಗಳು ಸಾರ್ವಜನಿಕವಾಗಿ ನಡೆಯುವುದಿಲ್ಲವೇ? ಚುಂಬನವನ್ನು ಕೇವಲ ಕಾಮದೃಷ್ಟಿಯಿಂದ ನೋಡುವುದನ್ನು ಬಿಟ್ಟು ಅದನ್ನು ಪ್ರೀತಿಯ ಸಂಕೇತವಾಗಿ ನೋಡಬೇಕಾಗಿದೆ. ಇಲ್ಲಿ ಕೆಲವು ವ್ಯಕ್ತಿಗಳು ಪರಸ್ಪರ ಸಮ್ಮತಿಯಿಂದ ನೈತಿಕ ಪೊಲೀಸ್ ಗಿರಿಯಂತಹಾ ಪ್ರೇಮಿಗಳ ವಿರೋಧಿ ಹಾಗೂ ಕಾನೂನು ಬಾಹಿರ ಕೃತ್ಯವನ್ನು ವಿರೋಧಿಸಿ “ಕಿಸ್ ಆಫ್ ಲವ್” ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದು ಅವರ ಅಭಿವ್ಯಕ್ತಿ ಸ್ವಾತಂತ್ರ. ತಮ್ಮ ಪ್ರೀತಿಯ ಪ್ರತೀಕವಾದ ಚುಂಬನದ ಮೂಲಕ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಪಡಿಸುವುದರಿಂದ ಯಾರಿಗೆ ಏನು ಸಮಸ್ಯೆ ? ಈ ರೀತಿಯ ಪ್ರತಿಭಟನೆ ಅದ್ಯಾಗೆ ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟುಮಾಡುತ್ತದೆ ? ಅದ್ಯಾಗೆ ಸುಸಂಸ್ಕೃತರ ನೆಮ್ಮದಿಯನ್ನು ಕೆಡಿಸುತ್ತದೆ? ಬದಲಾಗಿ ಇಲ್ಲಿ ಜನಸಮಾನ್ಯರ, ಸುಸಂಸ್ಕೃತರ ನೆಮ್ಮದಿಯನ್ನು ಕೆಡಿಸುತ್ತಿರುವುದು ನೈತಿಕ ಪೊಲೀಸ್ ಗಿರಿ. ನೈತಿಕ ಪೊಲೀಸರ ಕಾಟದಿಂದಾಗಿ ಸಹೋದರ-ಸಹೋದರಿಯರೂ ಜೊತೆಜೊತೆಯಾಗಿ ಸುತ್ತಾಡಿದಾಗಲೂ ಅನುಮಾನದಿಂದ ಹಿಡಿದು ಹಲ್ಲೆ ನಡೆಸಿದ ಅನೇಕ ಘಟನೆಗಳೂ ಕರಾವಳಿ ಭಾಗದಲ್ಲಿ ನಡೆದಿವೆ.

ಇನ್ನು ಸಾರ್ವಜನಿಕವಾಗಿ ಈ ರೀತಿ ಚುಂಬನಗಳನ್ನು ಮಾಡುವುದರ ಮೂಲಕ ಪ್ರತಿಭಟಿಸುವುದು ಅತ್ಯಾಚಾರಗಳಿಗೆ ಎಡೆಮಾಡಿ ಕೊಡುತ್ತಿವೆ ಎಂಬ ವಾದದಲ್ಲಿ ಪುರುಷ ಪ್ರಧಾನ ಮನಸ್ಥಿತಿಯ ಅಂಶಗಳು ಅಡಕವಾಗಿವೆ. ಹೆಣ್ಣಿನ ದೇಹ ಪುರುಷನ ಆಸ್ತಿ ಎಂಬ ಪುರುಷ ಪ್ರಧಾನ ಮನಸ್ಥಿತಿ ಇಂದು ಅತ್ಯಾಚಾರಕ್ಕೆ ಪ್ರಮುಖವಾದ ಪ್ರೇರಣೆ. ಹೆಣ್ಣಿನ ದೇಹ ಪುರುಷನ ಹಕ್ಕು ಎಂಬ ಮನಸ್ಥಿತಿಗೆ ವಿರುದ್ಧವಾಗಿ ಹೆಣ್ಣು- ಗಂಡು ಪರಸ್ಪರ ಸಮಾನರು ಎಂಬ ಪರಿಕಲ್ಪನೆ ಹಾಗೂ ಪರಸ್ಪರರ ನಡುವಿನ ಪ್ರೀತಿ ವಾತ್ಸಲ್ಯದ ಸಂಕೇತವಾಗಿದೆ “ಕಿಸ್ ಆಫ್ ಲವ್”. ಸಾರ್ವಜನಿಕವಾಗಿ ಪ್ರತಿಭಟನೆಯ ಸಂಕೇತವಾಗಿ ಗಂಡು ಹೆಣ್ಣು ಚುಂಬಿಸುವುದು ಅತ್ಯಾಚಾರಕ್ಕೆ ಪ್ರೇರಣೆಯೆಂದಾದರೆ ದೇಶದಾದ್ಯಂತ ಅನೇಕ ಹಳ್ಳಿಗಳಲ್ಲಿ ಬಯಲು ಶೌಚಾಲಯಗಳಲ್ಲಿ ಮಹಿಳೆಯರು ಶೌಚ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ನಿಮಗೆ ಅಸಹ್ಯ ಹುಟ್ಟುದಿಲ್ಲವೇ? ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶದ ಬದೌನಲ್ಲಿ ಬಯಲು ಶೌಚಾಲಯಕ್ಕೆ ಶೌಚ ಮಾಡಲು ಹೋದ ಇಬ್ಬರುgollarahatti ಯುವತಿಯರ ಮೇಲೆ ಅತ್ಯಾಚಾರ ನಡೆದಿತ್ತು ಎಂಬುವುದು ಗಮನಾರ್ಹ ಸಂಗತಿ. ಇನ್ನೊಂದೆಡೆಯಲ್ಲಿ ಸಾರ್ವಜನಿಕ ಚುಂಬನದಂತಹಾ ವಿದೇಶಿ ಆಚರಣೆಗಳಿಂದ ನಮ್ಮ ಸಂಸ್ಕೃತಿ ನಾಶ ಆಗುತ್ತದೆ ಎಂದು ಬೊಬ್ಬಿಡುವ ಸಂಸ್ಕೃತಿ ರಕ್ಷಕರು, ನಮ್ಮ ಸಮಾಜದಲ್ಲಿ ಆಚರಣೆಯಲ್ಲಿರುವ ಅನಿಷ್ಟ ಪದ್ದತಿಗಳಾದ ಅಜಲು ಪದ್ದತಿ, ದೇವದಾಸಿ ಪದ್ದತಿ, ಮಹಿಳೆಯರು ಅರೆ ಬೆತ್ತಲೆ ಸೇವೆ ನಡೆಸುವಂತಹಾ ಪದ್ದತಿ, ದಲಿತರನ್ನು ಪರಸ್ಪದ ಹೊಡೆದಾಡಿಸುವಂತಹಾ ಅಂಕ- ಅಂಡೋಡಿ ಪದ್ದತಿ, ಬಾಣಂತಿ ಹಾಗೂ ಮುಟ್ಟಾದಂತಹಾ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗಿಡುವ ಪದ್ದತಿ, ದಲಿತರಿಗೆ, ಮಹಿಳೆಯರಿಗೆ ದೇವಸ್ಥಾನ, ಮಸೀದಿ ಪ್ರವೇಶ ನೀಡದಂತಹಾ ಪದ್ದತಿ ಹಾಗೂ ಧೋರಣೆಗಳು, ಮೊಹರಂ ಆಚರಣೆಯ ಸಂಧರ್ಭದಲ್ಲಿ ಮೈಯಲ್ಲಿ ರಕ್ತ ಬರುವಂತೆ ಹೊಡೆದುಕೊಳ್ಳುವ ಸ್ವಯಂ ದಂಡನಾ ಪದ್ದತಿ, ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಇತರ ಸಮುದಾಯದವರನ್ನು ಉರುಳಾಡಿಸುವಂತಹಾ ಮಡೆ ಮಡೆ ಸ್ನಾನ ಪದ್ದತಿ, ಧರ್ಮ ಸಂಸ್ಕೃತಿಯ ಹೆಸರಲ್ಲಿ ಮಹಿಳೆಯರನ್ನು ಒಂದಲ್ಲಾ ಒಂದು ರೀತಿಯಲ್ಲಿ ಶೋಷಣೆಗೆ, ಧಾರ್ಮಿಕಟ್ಟುಪಾಡುಗಳಿಗೆ ಒಳಪಡಿಸಿ ಅವಮಾನಿಸುವಂತಹಾ ಪದ್ದತಿಗಳು, ಆಚರಣೆಗಳು, ಧೋರಣೆಗಳು ನಮ್ಮ ಸುಸಂಸ್ಕೃತ ಸಂಸ್ಕೃತಿಯ ಪ್ರತೀಕವೇ?

ನೈತಿಕ ಪೊಲೀಸ್ ಗಿರಿಯ ವಿರುದ್ಧವಾಗಿ ಕರ್ನಾಟಕದಲ್ಲಿ ನಡೆಸಲು ಉದ್ದೇಶಿಸಿರುವ ಕಿಸ್ ಆಫ್ ಲವ್ ಪ್ರತಿಭಟನೆಯನ್ನು ತಡೆಯಲು ಮುಂದಾಗಿರುವ ಹಿಂದೂ ಪರ ಸಂಘಟನೆಗಳಿಗೆ ತಮ್ಮ ಸಂಘಪರಿವಾರದ ಹಿನ್ನೆಲೆಯಿಂದ ಬಂದಿರುವ ಬಿಜೆಪಿ ಪಕ್ಷದ ಮಾಜಿ ಸಚಿವರೊಬ್ಬರು ರಾಜ್ಯದಲ್ಲಿ ಪ್ರಸಿದ್ದಿಯಾಗಿರುವುದೇ ಕಿಸ್ಸಿಂಗ್ ಪ್ರಕರಣದಿಂದ ಎಂಬುದು ತಿಳಿದಿಲ್ಲವೇ!?. ರಾಜ್ಯದ ರಾಜಕೀಯ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಬರದ ಕುರಿತಾಗಿ ಚರ್ಚೆ ನಡೆಯುತ್ತಿದ್ದ ಸಂಧರ್ಭದಲ್ಲಿ ಹೆಣ್ಣು- ಗಂಡಿನ ಕಾಮಕೇಲಿಯನ್ನು ನೋಡುತ್ತಾ ಆನಂದಪಡುತ್ತಿದ್ದಾಗ ನಮ್ಮ ಸಂಸ್ಕೃತಿ ರಕ್ಷಣೆಗೆ ನೀವೇಕೆ ಮುಂದಾಗಲಿಲ್ಲ ? ಇದೀಗ ನೈತಿಕ ಪೊಲೀಸ್ ಗಿರಿಯನ್ನು ಸಹಿಸಲಾಗದೆ ಸಾರ್ವಜನಿಕ ಚುಂಬನದ ಮೂಲಕ ತಮ್ಮ ಪ್ರತಿಭಟನೆಯನ್ನು ಅಭಿವ್ಯಕ್ತಿಪಡಿಸುವಾಗ ಅದನ್ನು ಸಂಸ್ಕೃತಿ ರಕ್ಷಣೆ ಹೆಸರಲ್ಲಿ ತಡೆಯುವ ನೈತಿಕತೆ ನಿಮಗೆಲ್ಲಿದೆ?. ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ ಪಬ್ ದಾಳಿ ರೂವಾರಿ ಹಾಗೂ ಹೆಣ್ಣು-ಗಂಡಿನ ನಡುವಿನ ಪ್ರೀತಿ – ಪ್ರೇಮವನ್ನು ಲವ್ ಜಿಹಾದ್ ಹೆಸರಲ್ಲಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕಾರ್ಯದಲ್ಲಿ ನಿರತರಾಗಿರುವ ಶ್ರೀ ರಾಮ ಸೇನೆ ಸಂಘಟನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರ “ಕಿಸ್ ಆಫ್ ಲವ್” ವಿರೋಧಿ ನೀತಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲ ಮುಸ್ಲಿಮ್ ಮೂಲಭೂತವಾದಿ ಯುವಕರೂ ಬೆಂಬಲವಾಗಿ ನಿಂತಿರುವುದು ಕೇರಳ ಮಾದರಿಯಲ್ಲಿ ಕರ್ನಾಟದಲ್ಲೂ ಉಭಯ-ಧರ್ಮಗಳ ಮೂಲಭೂತವಾದಿಗಳು ನೈತಿಕ ಪೊಲೀಸ್ ಗಿರಿಯ ವಿರುದ್ಧದ “ಕಿಸ್ ಆಫ್ ಲವ್” ವಿರೋಧಿಸಲು ಜೊತೆಯಾಗಿದ್ದಾರೆ.

ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಲು “ಕಿಸ್ ಆಫ್ ಲವ್” ಪ್ರತಿಭಟನೆಯ ಮಾರ್ಗದ ಆಯ್ಕೆ ಕುರಿತಾಗಿ ನೈತಿಕ ಪೊಲೀಸ್ ಗಿರಿ ವಿರೋಧಿ ಹೋರಾಟಗಾರರಲ್ಲೂ ಭಿನ್ನಾಭಿಪ್ರಾಯವಿದೆ. ನೈತಿಕ ಪೊಲೀಸರ ಸ್ವರ್ಗವಾದ ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ವಿರುದ್ಧ ಜನಪರ ಎಡ ಹಾಗೂ ಪ್ರಗತಿಪರ ಸಂಘಟನೆಗಳಿಂದ ಸಾಕಷ್ಟು ಹೋರಾಟಗಳು ನಡೆದಿದೆ ಹಾಗೂ ನಡೆಯುತ್ತಾ ಬರುತ್ತಿವೆ. ಡಿ.ವೈ.ಎಫ್ .ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಾಮಾಜಿಕ ಕಾರ್ಯಕರ್ತೆ ವಿದ್ಯಾದಿನಕರ್ ಸೇರಿದಂತೆ ಅನೇಕ ಹೋರಾಟಗಾರರು ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿಯ ವಿರುದ್ಧ ಸಾಕಷ್ಟು ಜನಪರ ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ. ಮಂಗಳೂರಿನಲ್ಲಿ 2012 ರಲ್ಲಿ ಹಿಂದೂಪರ ಸಂಘಟನೆಗಳು ನಡೆಸಿದ ಹೋಂಸ್ಟೇ ದಾಳಿ ನೈತಿಕ ಪೊಲೀಸ್ ಗಿರಿಯನ್ನು ವರದಿ ಮಾಡಿದಕ್ಕಾಗಿ ಮಂಗಳೂರಿನ ಪತ್ರಕರ್ತ ನವೀನ್ ಸೂರಿಂಜೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಯಿತು. ಆದ್ದರಿಂದ ನೈತಿಕ ಪೊಲೀಸ್ ಗಿರಿಯ ವಿರುದ್ಧ ರಾಜ್ಯದ ಅನೇಕ ಕಡೆಗಳಲ್ಲಿ ಚಳುವಳಿಯ ರೂಪದಲ್ಲಿ ನಡೆದಂತಹಾ ಹೋರಾಟದಲ್ಲಿ “ಕಿಸ್ ಆಫ್ ಲವ್” ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಶ್ರೀಮಂತ ವರ್ಗದ ಯುವಸಮೂಹದ ಪಾತ್ರ ನಗಣ್ಯ ಎಂಬುವುದು ಗಮನಾರ್ಹ ಅಂಶ. ಚುಂಬನ ಪ್ರತಿರೋಧ ಚಳುವಳಿಯ ಸಂಘಟಕರು, ಭಾಗಿಗಳು ಮುಕ್ತ ಮಾರುಕಟ್ಟೆಯ ಫಲಾನುಭವಿಗಳು, ದಿಢೀರ್ ಶ್ರೀಮಂತಿಕೆ ಪಡೆದ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ತಮ್ಮ ಮುಕ್ತ ಸ್ವಾತಂತ್ರಕ್ಕೆ ಅಡ್ಡಿಯಾದಾಗ ಆತಂಕಿತರಾಗಿ ಅವರು ಪ್ರತಿಭಟಿಸುವುದು ಸಹಜ. ಆದರೆ ಚುಂಬನ ಚಳುವಳಿಗಿಂತಲೂ ನೈತಿಕ ಪೊಲೀಸ್ ಗಿರಿಯಯನ್ನು ತಡೆಯಲು ಸಂಘಟಿತ, ಕಠಿಣವಾದ ಹಾದಿಯ ದೀರ್ಘಾವಧಿ ಹೋರಾಟಗಳಿಂದ ಮಾತ್ರ ಸಾಧ್ಯ ಎಂಬ ವಾದವನ್ನು ಕೂಡಾ ಒಪ್ಪಬೇಕಾಗುತ್ತದೆ.

ಅದೇನೇ ಇದ್ದರೂ ನಮ್ಮ ರಾಜ್ಯದ ಪ್ರಜ್ಞಾವಂತ ಜನಸಮೂಹ ಒಟ್ಟಾಗಿ ಇಲ್ಲಿ ಮಾಡಬೇಕಾದ ಕೆಲಸ “ಕಿಸ್ ಆಫ್ ಲವ್” ನಂತಹಾ ಪ್ರತಿಭಟನೆಯನ್ನು KissOfLove_2 ತಡೆಯೋದರ ಬದಲಾಗಿ ಇಂಥಹಾ ಪ್ರತಿಭಟನೆಯ ಅನಿವಾರ್ಯತೆಗೆ ಕಾರಣವಾಗಿರುವ ಅಮಾನವೀಯ ನೈತಿಕ ಪೊಲೀಸ್ ಗಿರಿಯನ್ನು ತಡೆಯಬೇಕಾಗಿದೆ. ಅದರ ಜೊತೆಗೆ “ಕಿಸ್ ಆಫ್   ಲವ್” ಮಾತ್ರ ನೈತಿಕ ಪೊಲೀಸ್ ಗಿರಿಯ ವಿರುದ್ಧ ನಡೆಯುವ ಮಾದರಿ ಹೋರಾಟವಲ್ಲ. ಬದಲಾಗಿ ಜನಸಾಮಾನ್ಯರು, ಪ್ರಗತಿಪರರು ಸಂಘಟಿತ, ಪ್ರಬಲ ಚಳುವಳಿಯ ರೂಪದಲ್ಲಿ ಹೋರಾಟಗಳನ್ನು ಇನ್ನಷ್ಟು ತೀವೃಗೊಳಿಸಿ ಅಮಾನವೀಯ ನೈತಿಕ ಪೊಲೀಸ್ ನೈತಿಕ ಪೊಲೀಸ್   ಗಿರಿಯ ವಿರುದ್ಧ ಸೆಟೆದುನಿಲ್ಲಲೇಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ.

ಉತ್ತಮ ಪತ್ರಕರ್ತರು ಮೊದಲು ಓದಬೇಕು – ದಿನೇಶ್ ಅಮೀನ್ ಮಟ್ಟು

ಸದಾನಂದ ಲಕ್ಷ್ಮೀಪುರ

ಪತ್ರಕರ್ತರು ಮೊದಲು ಓದಬೇಕು. ಭಾರತದ ಸಂವಿಧಾನವನ್ನು, ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾರ ಬರಹಗಳನ್ನು ಓದದೆ ಭಾರತದ ಸಂದರ್ಭದಲ್ಲಿ ಉತ್ತಮ ಪತ್ರಕರ್ತರಾಗಲು ಸಾಧ್ಯವಿಲ್ಲ ಎಂದು ಖಡಕ್ ಸಂದೇಶ ಕೊಟ್ಟವರು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು. ಅವರು ಮಂಗಳವಾರ ಬೆಂಗಳೂರಿನ ಪತ್ರಕರ್ತರ ಅಧ್ಯಯನ ಕೇಂದ್ರ ಹೊರವಲಯದ dinesh-amin-journalistsಸ್ಫೂರ್ತಿಧಾಮದಲ್ಲಿ ನಡೆಸಿದ ಒಂದು ದಿನದ ಪತ್ರಕರ್ತರ ಶಿಬಿರದಲ್ಲಿ ಮಾತನಾಡಿದರು.

ಅನೇಕ ಪತ್ರಕರ್ತರಲ್ಲಿ ಓದುವ ಅಭ್ಯಾಸವೇ ಇಲ್ಲ. ಅನೇಕರಿಗೆ ಭಾರತೀಯ ಸಂವಿಧಾನದ ಪರಿಚಯ ಇಲ್ಲ. ನಮ್ಮ ಶಾಲೆಗಳೂ ಅದನ್ನು ಕಲಿಸಿಲ್ಲ. ಉತ್ತಮ ಪತ್ರಕರ್ತರಾಗಬೇಕೆಂದಿರುವವರೆಲ್ಲ ಮೊದಲು ಸಂವಿಧಾನ ಓದಬೇಕು. ವೈವಿಧ್ಯಮಯ ಭಾರತವನ್ನು ಅರ್ಥ ಮಾಡಿಕೊಳ್ಳಲು ಎಲ್ಲಾ ಪತ್ರಕರ್ತರು ಓದಲೇಬೇಕಾದ ಮೂರು ವ್ಯಕ್ತಿಗಳು ಮಹಾತ್ಮ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾ. ಈ ಮೂವರ ಬರಹಗಳು ಸುಲಭ ಬೆಲೆಗೆ ದೊರಕುವ ವ್ಯವಸ್ಥೆಯನ್ನು ಸರಕಾರಗಳೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮಾಡಿವೆ. “ಉತ್ತಮ ಪತ್ರಕರ್ತರಾಗಲು ಸಲಹೆ ಕೊಡಿ ಎಂದು ನನ್ನನ್ನು ಕೇಳುವ ಎಲ್ಲರಿಗೂ ನಾನು ಹೇಳುವುದು ಇದನ್ನೇ. ಜೊತೆಗೆ ದಿನಕ್ಕೆ ಎರಡು ಪತ್ರಿಕೆಗಳನ್ನಾದರೂ ಸಂಪೂರ್ಣವಾಗಿ ಓದಬೇಕು”, ಎಂದರು.

ಮೋದಿ ಪ್ರಧಾನಿಯಾದ ನಂತರದಲ್ಲಿ ಮಾಧ್ಯಮಗಳ ನಡೆಯನ್ನು ಟೀಕಿಸುತ್ತಾ ಅಮೀನ್ ಮಟ್ಟು ಅವರು, “ಬಹುತೇಕರಿಗೆ ಕುರುಡು ಆವರಿಸಿಕೊಂಡಿದೆ ಎನಿಸುತ್ತದೆ. ವಿನೋದ್ ಮೆಹ್ತಾ ಅಂತಹವರು ತಮ್ಮ ಬರಹವೊಂದರಲ್ಲಿ, ಮೋದಿ ಪತ್ರಕರ್ತರೊಂದಿಗೆ ಮಾತನಾಡಬೇಕು ಅದರಿಂದ ದೇಶಕ್ಕೂ ಒಳಿತು ಎಂದು ಹೇಳುತ್ತಾರೆ. ಇದುವರೆಗಿನ journalists-spoorthidhamaಪತ್ರಿಕೋದ್ಯಮ ವರದಿ ಮಾಡಿದ ಯಾವುದೇ ಹಗರಣವಾಗಲಿ, ಅದು ಬಹಿರಂಗವಾದದ್ದು ಪತ್ರಕರ್ತರ ಶ್ರಮದಿಂದ. ಇಂತಹ ಹಿನ್ನೆಲೆ ಇರುವಾಗ, ಪ್ರಧಾನ ಮಂತ್ರಿಯನ್ನು ಪತ್ರಕರ್ತರೊಂದಿಗೆ ಮಾತನಾಡಿ ಎಂದು ಗೋಗರೆಯುವ ಪರಿಸ್ಥಿತಿ ಏಕೆ..?” ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದಾರೆ. ಹಲವು ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾರತದಲ್ಲಿಯೇ ಉಳಿದಿದ್ದಾರೆ. ಹಾಗಾದರೆ, ಸರಕಾರದಲ್ವಿಲಿ ದೇಶಾಂಗ ಸಚಿವರ ಪಾತ್ರವೇನು. “ಯಾವ ಮಾಧ್ಯಮವೂ ಇಂತಹ ಪ್ರಶ್ನೆಯನ್ನು ಕೇಳುತ್ತಿಲ್ಲ. ವಿದೇಶಾಂಗ ಸಚಿವರು ಗೌಣ ಆಗುತ್ತಿರುವುದು ನನ್ನ ಪ್ರಕಾರ ಸಂಪಾದಕೀಯ ಬರಹಕ್ಕೆ ಅರ್ಹವಾದ ಸಂಗತಿ ಆದರೆ, ಯಾರಿಗೂ ಇದು ಸುದ್ದಿ ಎನಿಸುತ್ತಿಲ್ಲ. ಕುರುಡು ಆವರಿಸುತ್ತಿದೆ” ಎಂದರು.

ಶಿಬಿರಕ್ಕೆ ಚಾಲನೆ ಕೊಟ್ಟು ಮಾತನಾಡಿದ ವಿಜಯ ಕರ್ನಾಟಕ ಸಂಪಾದಕ ಸುಗತ ಶ್ರೀನಿವಾಸರಾಜು ಭಾರತದ ಹೆಗ್ಗಳಿಕೆಯೇ ಅದರ ವೈವಿಧ್ಯತೆ. ಆದರೆ ಇತ್ತೀಚೆಗೆ ಆ ವೈವಿಧ್ಯತೆಯನ್ನು ನಿರಾಕರಿಸುವಂತಹ ಅಭಿಪ್ರಾಯಗಳಿಗೆ ಅಲ್ಲಲ್ಲಿ ಮನ್ನಣೆ ಪಡೆಯುತ್ತಿವೆ. ಪತ್ರಿಕೆಗಳು ಕೂಡಾ ಈ ವೈವಿಧ್ಯತೆಯನ್ನು sugata-poornimaಎತ್ತಿಹಿಡಿಯಲು ಸೋಲುತ್ತಿವೆ. ಅಂತಹ ಪ್ರಯತ್ನಗಳು ಅಲ್ಲಲ್ಲಿ ನಡೆದರೂ ಅವು ಕೇವಲ ಟೋಕನಿಸಂ ಹಂತಕ್ಕೆ ನಿಂತುಬಿಟ್ಟಿವೆ ಎಂದರು.

ಚರ್ಚೆ ಸಂದರ್ಭದಲ್ಲಿ ಸುದ್ದಿ ವಾಹಿನಿಗಳ ಅವಾಂತರದ ಮಾತು ಬಂದಾಗ, ಭಾರತದಲ್ಲಿ ಟಿ.ವಿ ಮಾಧ್ಯಮ ಇನ್ನೂ ತನ್ನ ಪ್ರೌಢಾವಸ್ಥೆಯಲ್ಲಿದೆ (adolescence). ಮುದ್ರಣ ಮಾಧ್ಯಮಕ್ಕೆ ಸುದೀರ್ಘ ಇತಿಹಾಸವಿದೆ, ಗಾಂಭೀರ್ಯವಿದೆ. ಆದರೆ ಟಿ.ವಿ ಮಾಧ್ಯಮಕ್ಕೆ ಅದಾವುದೂ ಇಲ್ಲ ಎಂದರು. ಪ್ರಜಾವಾಣಿ ಸಮೂಹದ ಸಹಾಯಕ ಸಂಪಾದಕಿ ಹಾಗೂ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಅವರು ಶಿಬಿರದಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು.

‘ಚಿವುಟಿದಷ್ಟೂ ಚಿಗುರು’ – ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ


– ಡಾ. ಎಚ್. ಎಸ್. ಅನುಪಮಾ


 

ರೈಲು ಹತ್ತಿದ ಕ್ಷಣದಿಂದ ಕಾಮೆಂಟರಿ ಶುರುವಾಗಿತ್ತು, ಎಲ್ಲಿ ಹತ್ತಿದೆ? ಈಗ ಎಲ್ಲಿದ್ದೇನೆ? ನಿಲಿಸಿದಾಗ ಏನಾದರೂ ತಿಂದೆನೋ ಇಲ್ಲವೋ? ಹದಿನೆಂಟು ತಾಸಿನ ಪ್ರಯಾಣದಲ್ಲಿ ಏಳೆಂಟು ಕರೆ ಮಾಡಿ ವಿಚಾರಿಸಿದ್ದರು ಮಾವ. ಇಷ್ಟು ದಿನಗಳಿಂದ ಮಾತನಾಡದ ಅಪರಿಚಿತತೆಯ ಕಸಿವಿಸಿ ವಿಚಾರಣೆಯಲ್ಲಿ ಕರಗಿಹೋಯಿತು. ಆದರೆ ಅವರೇ ಕರೆಸಿಕೊಳ್ಳುವವರೆಗೂ ಬರದೇ ಉಳಿದೆನಲ್ಲ, ಅದಕ್ಕೆ ಕಾರಣ ನನ್ನ ಮರೆವೋ, ಬೌದ್ಧಿಕ ವಿಲಾಸವೋ ಅಥವಾ ಉದ್ದೇಶಪೂರ್ವಕ ಅಂತರ ಕಾಯ್ದುಕೊಳ್ಳುವಿಕೆಯೋ ಎಂಬ ಗೊಂದಲ, ಪಾಪಪ್ರಜ್ಞೆ ಕಾಡತೊಡಗಿತು.

ಅಂತೂ ಮುಂಬಯಿ ಬಂತು. ಮಾವ ಸ್ಟೇಷನ್ನಿಗೆ ಕಾರು ತಂದಿದ್ದರು. ಎಸಿ ಸೌಲಭ್ಯವಿಲ್ಲದ ಹಳೆಯ ಮಾರುತಿ ಕಾರು. ಅವರಿಗೆ ಪಿಂಚಣಿಯಾದಾಗ ಬಂದ ಹಣದಿಂದ ಕೊಂಡದ್ದಂತೆ. ಹಳೆಯದಾದರೂ ಭಾವನಾತ್ಮಕ ಸಂಬಂಧವೆಂದು ಇಟ್ಟುಕೊಂಡಿದ್ದರು. ‘ಕಿಟಕಿ ಬಾಗಿಲೆಲ್ಲ ತೆಗೆ, ಎಸಿಗಿಂತ ಒಳ್ಳೆ ತಂಪು ಗಾಳಿ ಬೀಸುತ್ತೆ. ಆದರೆ ಗಾಳಿ ಜೊತೆ ಧೂಳು ಉಚಿತ ಎಂದು ನಕ್ಕರು.

ಕಾರಿನ ಭರ್ರೋ ಶಬ್ದದ ನಡುವೆಯೇ ಡ್ರೈವರನಿಗೆ ಹೇಗೆ ಹೋದರೆ ಸುರಕ್ಷಿತ, ಹೇಗೆ ಹತ್ತಿರ ಎನ್ನತ್ತ ಚಾಲನ ಮೀಮಾಂಸೆಯಲ್ಲಿ ಮುಳುಗಿದ್ದರು. art-3ಇಡೀ ಮುಂಬಯಿಯನ್ನು ರೈಲು ಹಳಿ ಈಸ್ಟ್ ಮತ್ತು ವೆಸ್ಟ್ ಆಗಿ ಹೇಗೆ ಇಬ್ಭಾಗಿಸಿದೆ ಎಂದು ವಿವರಿಸುತ್ತಿದ್ದರು.

ಒಂದು ಹಳೆಯ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸಿನಲ್ಲಿ ಅವರ ಮನೆ. ಹಳೆಯತನ ಎಲ್ಲೆಲ್ಲೂ ಎದ್ದು ಕಾಣುತ್ತಿತ್ತು. ಮಳೆನೀರು ಕರೆಗಟ್ಟಿ ಪಾಚಿ ಹಿಡಿದ ಕಂಪೌಂಡ್ ಗೋಡೆ, ಅಲ್ಲಲ್ಲಿ ಕಾಣುವ ಬಿರುಕು, ಬಿರುಕಿನಲ್ಲಿ ಅರಳಿ ಗಿಡ, ಖಾಯಂ ಮುಚ್ಚಿದಂತಿರುವ ಮನೆ ಕಿಟಕಿಗಳು, ಮುರಿದ ಗೇಟಿನ ಸರಳು ಇವೆಲ್ಲ ಕಟ್ಟಡಕ್ಕೊಂದು ಪ್ರಾಚೀನತೆಯನ್ನು ತಂದುಕೊಟ್ಟಿದ್ದವು. ಕಾರು ಬರುವುದಕ್ಕೂ, ಒಂದು ಕರಿನಾಯಿ ಕಂಪೌಂಡ್ ಹಾರಿ ಸರ್ರನೆ ಒಳಹೋಗುವುದಕ್ಕೂ ಸರಿಯಾಯಿತು. ಸದ್ಯ, ಅದರ ಮೈಮೇಲೆ ಹರಿಯಲಿಲ್ಲ. ಕಳೆದ ಬಾರಿ ಬಂದಾಗಲೂ ಈ ನಾಯಿಯಿತ್ತೆ? ಅಮ್ಮನೊಡನೆ ಯಾವಾಗಲೋ ಒಮ್ಮೆ ಬಂದಿದ್ದೆನಲ್ಲ, ಎಷ್ಟು ವರ್ಷ ಕೆಳಗೆ?

‘ನಾಯಿ ಹತ್ತನ್ನೆರೆಡು ವರ್ಷ ಬದುಕುತ್ತೆ ಅಂತಾರೆ ಅರುಂಧತಿ. ಆದರೆ ಈ ನಾಯಿಗೆ ಅದೆಷ್ಟು ವರ್ಷವಾಯ್ತೋ ಏನೋ. ಪುಟ್ಟ ತಾನು ಸಣ್ಣವನಿದ್ದಾಗಿಂದ ಇದೂ ಇದೆ ಅಂತಾನೆ. ಒಮ್ಮೆ ಯಾರೋ ಕಾರು ಹರಿಸಿ ಅದರ ಬಾಲ ಮುರಿದು ತುಂಡಾಯಿತು. ಅಷ್ಟೇ ಅಲ್ಲ, ಅದಕ್ಕೀಗ ಕಣ್ಣು ಕಾಣಲ್ಲ. ಕ್ಯಾಟರಾಕ್ಟ್. ಆದರೂ ನಮ್ಮ ಗ್ರ್ಯಾಂಡ್ ಮಾರುತಿ ಸದ್ದಿಗೆ ನಾನು ಬಂದ ಗುರುತು ಹಿಡಿದು ಗೇಟಿಗೆ ಬಂದಿದೆ. ಇಷ್ಟೊತ್ತಿಗೆ ಅದಾಗಲೇ ಒಳಹೋಗಿ ಮೆಟ್ಟಿಲು ಹತ್ತಿ ನಮ್ಮನೆ ಬಾಗಿಲೆದುರು ಇರುತ್ತೆ..’

ಕಿರಗುಡುವ ಕಬ್ಬಿಣದ ಗ್ರಿಲ್ ಷಟರ್ ಎಳೆದು ಮೆಟ್ಟಿಲೇರತೊಡಗಿದೆವು. ಲಿಫ್ಟ್ ಇಲ್ಲದ ಅಪಾರ್ಟ್‌ಮೆಂಟ್. ಹತ್ತಿಳಿದು ಹತ್ತಿಳಿದು ಸವೆದು ಸಿಮೆಂಟು ಮೆಟ್ಟಿಲು ಫಳಫಳ ಹೊಳೆಯುತ್ತಿತ್ತು. ಇಡುವ ಹೆಜ್ಜೆಗಳ ಮೇಲೆ ಗಮನ ಕೇಂದ್ರೀಕರಿಸಿ ಮಾವ ನಿಧಾನ ಹತ್ತುತ್ತಿದ್ದರು. ಒಂದು ಕಾಲೆತ್ತಿ ಮೆಟ್ಟಿಲ ಮೇಲಿಟ್ಟು ಇನ್ನೊಂದು ಕಾಲೆಳೆದು ಅದರ ಜೊತೆ ಕೂಡಿಸಿ, ಸಮತೋಲನವನ್ನು ಆವಾಹಿಸುವವರಂತೆ ಚಣ ನಿಂತು ಮುಂದಿನ ಕಾಲಿಡುತ್ತಿದ್ದರು. ಪಾರ್ಕಿನ್ಸನ್ ಕಾಯಿಲೆಗೆ ನಡಿಗೆಯ ಧೈರ್ಯ ಕಳೆದುಕೊಂಡು ಮಗುವಿನಂತೆ ತೆವಳತೊಡಗಿದ್ದ ಅಮ್ಮ ನೆನಪಾಗಿ ಉಸಿರು ಸಿಕ್ಕಿಕೊಂಡಿತು. ಇವರಿಗೂ ಅದೇ ಇರಬೇಕು.

‘ನೀ ಮುಂದೆ ಹೋಗು, ನಾ ಸೆಕೆಂಡ್ ಫ್ಲೋರ್ ಹತ್ತುದರೊಳಗೆ ನೀ ಹತ್ತು ಸಲ ಹತ್ತಿಳಿಯಬಹುದು’ ಎಂದು ಸರಿದು ನಿಂತರು. ನಾಲ್ಕು ಮೆಟ್ಟಿಲೇರುವುದರಲ್ಲಿ ಅತ್ತೆ ಕಂಡರು. ಅವರ ಪಕ್ಕ ತನ್ನ ಮುರಿದ ಬಾಲ ಅಲ್ಲಾಡಿಸುವ ಕುರುಡು ನಾಯಿ. ಮನೆಗೆ ಬಂದವರ ವಾಸನೆ ತಿಳಿದಿಟ್ಟುಕೊಳ್ಳುವಂತೆ ನನ್ನ ಸುತ್ತಮುತ್ತ ಸುಳಿದು ಮೂಸತೊಡಗಿತು.

ಅತ್ತೆ ಕೈಹಿಡಿದು ಒಳ ಕರೆದರು. ಬೆಚ್ಚನೆಯ ಹಿಡಿತ. ಮತ್ತೆ ಅಮ್ಮನ ನೆನಪು. ರಾತ್ರಿ ಪ್ರಯಾಣ ಮಾಡಿ, ಬಸ್ಸಿಳಿದು, ಬೆಳಬೆಳಿಗ್ಗೆ ಮೂರು ಮೈಲು ನಡೆದು, ಕೊರೆಯುವ ಕೈಕಾಲುಗಳಲ್ಲಿ ಮನೆ ಪ್ರವೇಶಿಸಿದರೆ ಅವಳ ಆಪ್ಯಾಯಮಾನ ಬೆಚ್ಚನೆಯ ಸ್ಪರ್ಶ! ಯಾವ ಸುಖಸಂಭ್ರಮಗಳನ್ನೂ ಅನುಭವಿಸದೆ ಎಷ್ಟು ಬೇಗ ಸವೆದು ಹೋದಳಲ್ಲ!

ಮನೆಯೊಳಗೆ ರೆಡ್ ಆಕ್ಸೈಡ್ ನೆಲ ಹೊಳೆಯುತ್ತಿತ್ತು. ಅತ್ತೆಯ ಕೈಚಳಕವೋ, ಮನುಷ್ಯ ವಾಸದ ಲಕ್ಷಣವೋ, ಬಿಲ್ಡಿಂಗ್ ಹೊರಗಿನಿಂದ ಕಾಣುವಷ್ಟು ಹಳತಾಗಿ ಒಳಗಿನಿಂದ ಕಾಣಲಿಲ್ಲ.

ಮುಖ ತೊಳೆದು ಬರುವುದರಲ್ಲಿ ಅತ್ತೆ ಕಾಫಿ ತಂದರು. ‘ಪುಟ್ಟನೆಲ್ಲಿ? ಕೇಳಿದೆ. ಅವರಿಗೆ ಮದುವೆಯಾಗಿ ಎಷ್ಟೋ ವರ್ಷದ ನಂತರ ಹುಟ್ಟಿದ ಏಕಮಾತ್ರ ಸಂತಾನ ಪುಟ್ಟ. ಅವನ ಹೆಸರು ಸೂರ್ಯ, ಆದರೆ ಕರೆದ ರೂಢಿ, ಪುಟ್ಟನೆಂಬ ಹೆಸರೇ ನಾಲಿಗೆಗೆ ಬರುತ್ತದೆ. ‘ಅವರಾಗಲೇ ಹೋಗಿಯಾಯ್ತು’ ಎಂದರು ಅತ್ತೆ.

ಮಾವ ಬಾಲ್ಕನಿಯ ಬಿಸಿಲಿಗೆ ಮುಖವೊಡ್ಡಿ ನಿಂತಿದ್ದರು. ಎಣ್ಣೆಹಚ್ಚಿದ್ದ ವಿರಳ ಬಿಳಿಕೂದಲು ಮಿರಿಮಿರಿ ಮಿಂಚುತ್ತಿದ್ದವು. ಅವರ ದೃಷ್ಟಿ ಕಣ್ಣೆದುರಿನ ಕಟ್ಟಡ, ಮರಗಳಾಚೆ ಎಲ್ಲೋ ನೆಟ್ಟಿತ್ತು. ಈ ಮಾವನಿಗೆ ತಮ್ಮ ಏಕೈಕ ತಂಗಿಯ ಮಗಳು ಇದ್ದಕ್ಕಿದ್ದಂತೆ ನೆನಪಾಗಿದ್ದು ಏಕೆ? ಬಂದು ನೋಡಿಹೋಗುವಂತೆ ಮೇಲೆಮೇಲೆ ಪತ್ರ ಬರೆದು ನನ್ನ ಕರೆಸಿಕೊಂಡದ್ದೇಕೆ? ನಿಧಾನ ಬಾಲ್ಕನಿಗೆ ನಡೆದು ಅವರ ಪಕ್ಕ ನಿಂತೆ. ಮ್ಲಾನವೋ, ಶಾಂತವೋ ತಿಳಿಯದ ಮುಖದಲ್ಲಿ ಕಿರುನಗೆ ಸುಳಿಯಿತು.

ಬಾಲ್ಕನಿಯಲ್ಲಿ ಮಣ್ಣು ತುಂಬಿದ ದೊಡ್ಡ ಟ್ರೇ, ಕುಂಡಗಳಲ್ಲಿ ಸೊಂಪಾಗಿ ಬೆಳೆದ ಕೆಂಪು ಹರಿಗೆ ಸೊಪ್ಪು. ಅತ್ತೆ ಊರಿಗೆ ಹೋದಾಗ ಬೀಜ ತಂದಿದ್ದರಂತೆ. ‘ಇದರಿಂದ ಬಹಳಷ್ಟು ಪದಾರ್ಥ ಮಾಡಿ ಉಂಡೆವು, ಈ ಹರಿಗೆ ಚಿವುಟಿದಷ್ಟೂ ಬೆಳೆಯುತ್ತದೆ. ಚಿವುಟಿದರೆ ಸಾಕು ಚಿಗುರುತ್ತದೆ. ಈಗ ಬೀಜವಾಗಲಿ ಎಂದು ಬಿಟ್ಟಿದೇವೆ, ತೆನೆಯಾಗುತ್ತಿದೆ ಎಂದರು ಅಲ್ಲೇ ಸುಳಿಯುತ್ತಿದ್ದ ಅತ್ತೆ.

‘ಈ ಹರಿಗೆ ಹೇಗೋ ಹಾಗೇ ಮನುಷ್ಯನಿಗೂ ಬೆಳೆಯಲಿಕ್ಕೆ ಒಂದು ಗಾಯ ಅಥವಾ ನೋವು ಬೇಕು ಅರುಂಧತಿ. ಚಿವುಟಿದಷ್ಟೂ ಚಿಗುರು, ಚಿವುಟುವುದು art-2ನಿಲಿಸಿದರೆ ಬೀಜದ ತೆನೆ. ವಿಪರ್ಯಾಸ, ಆದರೂ ಸತ್ಯ. ಗಾಯ ನಿನ್ನ ಬೆಳೆಸುತ್ತದೆ, ಸೋಲು ಗೆಲುವಿನ ಅರಿವು ಹುಟ್ಟಿಸುತ್ತದೆ, ನಷ್ಟವಾದಾಗ ಲಾಭದ ಕುರಿತು ಚಿಂತಿಸತೊಡಗುತ್ತೀ. ಕಹಿ, ಆದರೂ ಸತ್ಯ, ನೋವೇ ನಿನ್ನ ಮೊದಲ ಗುರು..’

ಗಾಯ ನಿನ್ನ ಬೆಳೆಸುತ್ತದೆ! ಮಾವ ಕವಿಯಂತೆ ಮಾತಾಡುತ್ತಿದ್ದಾರೆ. ಕಡೆಗಾಲದಲ್ಲಿ ಅಮ್ಮ ಮಾತನಾಡುತ್ತಿದ್ದದ್ದನ್ನೇ ಆಡುತ್ತಿದ್ದಾರೆ!

‘ಒಬ್ಬಳೇ ಇರಬೇಕೆಂದಿದ್ದವಳು ಅಂತೂ ಮದುವೆಯಾದಿ ಎಂದು ತಿಳಿಯಿತು. ಯಾವ ಮನುಷ್ಯನೂ ಒಂಟಿಯಾಗಿರಲಾರ. ಒಂಟಿಯಾಗಿ ಹುಟ್ಟಿ ಒಂಟಿಯಾಗಿ ಸತ್ತರೂ ಗುಂಪಲ್ಲೇ ಬಾಳುವವ. ಆ ಗುಂಪೇ ಸಂಸಾರ. ಸಂಸಾರವನ್ನು ಆಳದ ಕಡಲು ಎನ್ನುತ್ತಾರೆ. ನನಗೆ ಹಾಗೆನಿಸುವುದಿಲ್ಲ. ಅದು ತಳವೇ ಇರದ, ಎಲ್ಲೆಯೇ ಇರದ ಕಡಲು. ಆ ಕಡಲೊಳಗೆ ತೇಲುವ ಚೂರುಚೂರು ನೆಲದಂತೆ ನಾವು. ನಿನ್ನಮ್ಮ ತನ್ನ ಸಂಸಾರದ ಜೊತೆಜೊತೆಗೇ ಜಗದ ಸಂಸಾರ ಕಟ್ಟಿಕೊಂಡಳು. ನೀನು ಜಗದ ಸಂಸಾರ ಮಾತ್ರ ಸಾಕೆಂದವಳು. ಅದೇನು ಕಡಿಮೆಯಲ್ಲ, ಮದುವೆಯಾದವರ ಸಂಸಾರಕ್ಕಿಂತ ದೊಡ್ಡ ಸಂಸಾರ ಅದು. ಅದೆಲ್ಲ ಇರಲಿ, ನಿನ್ನ ಕ್ರಾಂತಿ ಎಲ್ಲಿಗೆ ಬಂತು?’

ಅರೆ, ಅಮ್ಮನ ಬಳಿ ಇವರು ಮಾತನಾಡಿದ್ದೇ ಕಡಿಮೆ. ನಾನು ನೋಡಿ ಎಷ್ಟೋ ಕಾಲವಾಗಿತ್ತು. ಆದರೂ ಹೇಗೆ ಎಲ್ಲ ತಿಳಿದುಕೊಂಡರು? ನನ್ನ ವಿಷಯ ಎಲ್ಲಿಂದ ಶುರುಮಾಡಲಿ ಎಂದು ಯೋಚಿಸುವಾಗ ‘ಸ್ನಾನ ಮಾಡಿ ತಿಂಡಿಯೋ, ತಿಂಡಿ ತಿಂದು ಸ್ನಾನವೋ? ಎಂಬ ಅತ್ತೆಯ ಕೂಗು ಒಳಕರೆಯಿತು.

ಮಾವ ಎಪ್ಪತ್ತರ ಆಸುಪಾಸಿನಲ್ಲಿದ್ದಾರೆ. ಅತ್ತೆ ಅವರಿಗಿಂತ ಹತ್ತು ವರ್ಷ ಕಿರಿಯರು. ಮಾವ ದೊಡ್ಡ ಆಡಳಿತಾತ್ಮಕ ಹುದ್ದೆ ನಿಭಾಯಿಸಿದವರು, ನಾನಾ ರಾಜ್ಯ ತಿರುಗಿದವರು, ನಾನಾ ಭಾಷೆಗಳನ್ನು ನಿರರ್ಗಳವಾಗಿ ಮಾತಾಡಬಲ್ಲವರು. ದಕ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕಾಲ ಶಾಲು ಹೊದೆಸಿ ಸನ್ಮಾನಿಸಿ ನಿವೃತ್ತಿ ನೀಡುವ ಜೊತೆಗೆ ಬಿಪಿ, ಡಯಾಬಿಟಿಸ್, ಥೈರಾಯ್ಡ್, ಅಸ್ತಮಾಗಳನ್ನೂ ಉಡುಗೊರೆಯಾಗಿ ಕೊಟ್ಟಿತು.

‘ಮೊದಲು ನನಗೆ ಯಾವ ಕಾಯಿಲೆಯೂ ಇರಲಿಲ್ಲ. ರಿಟೈರ್ ಆಗಿ ಕೂತಾಗ ಒಂದೊಂದೇ ಬಂದವು. ಅಪ್ಪ, ಅಬ್ಬೆಗಿದ್ದ ಕಾಯಿಲೆಗಳಲ್ಲಿ ನಿಮ್ಮಮ್ಮ ವನಜಂಗೆ ಕೆಲವು, ನನಗೆ ಕೆಲವು ಬಂದವು. ಅವಳು ಬೇಗ ನೆಲದ ಋಣ ಕಳೆದುಕೊಂಡಳು. ನಾನಿನ್ನೂ ಅನುಭವಿಸುತ್ತ ಇದ್ದೇನೆ. ದಿನಕ್ಕೆ ಕನಿಷ್ಠ ಒಂದು ಡಜನ್ ಮಾತ್ರೆ ನುಂಗುತ್ತೇನೆ. ಸರ್ವೀಸ್ ಪೂರಾ ತಿರುಗಿದ್ದೆ, ರಿಟೈರ್ ಆದ್ಮೇಲೆ ಒಂದಷ್ಟು ಓದು, ಚಾರಿಟಿ ಕೆಲಸ ಮಾಡ್ಬೇಕು ಅಂದ್ಕೊಂಡಿದ್ದೆ. ಆದರೀಗ ಹೀಗೆ. ಬಟ್ ಐ ಡೋಂಟ್ ಬ್ಲೇಮ್. ಬರೀ ಗುಲಾಬಿ ಬೇಕೆಂದರೆ ಹೇಗೆ? ಅದರ ಜೊತೆ ಉದುರುವ ಎಲೆಯೂ, ಮುಳ್ಳೂ, ಕಡ್ಡಿಯೂ ಇದ್ದೇ ಇರುತ್ತವೆ.’

ಮಾವ ನಿಧಾನವಾಗಿ ಜಗಿಯುತ್ತ ಮಾತನಾಡುತ್ತಿದ್ದರು. ಅವರ ಪ್ರತಿ ಮಾತೂ ಗಳಿಗೆ ಬಟ್ಟಲಿನ ಕಣ್ಣಿನಿಂದ ಹನಿ ಇಳಿಯುವಂತೆ ನನ್ನೊಳಗಿಳಿಯುತ್ತಿದ್ದವು. ಮಾವ ವೈಯಕ್ತಿಕ ಅನುಭವಗಳನ್ನು ತತ್ವವಾಗಿಸುತ್ತಿದ್ದರು. ಅಮ್ಮನ ಮಾತೂ ಹೀಗೇ ಇತ್ತು. ತಿಳುವಳಿಕೆ ವಂಶಪಾರಂಪರ್ಯವೇ, ಕಾಯಿಲೆಯಂತೆ?

ಯಾಂತ್ರಿಕವಾಗಿ ಬಾಯಿಗೆ ತಿಂಡಿ ತುರುಕುತ್ತಿದ್ದ ಅತ್ತೆಯ ಬಳಿ ಕುಳಿತೆ. ಅವರ ತಟ್ಟೆಯಲ್ಲಿ ಬೇರೆ ಏನೇನೋ ಇದ್ದವು. ಅವೆಲ್ಲ ಅವರು ನಿನ್ನೆ ರಾತ್ರಿ, ಇವತ್ತು ಬೆಳಿಗ್ಗೆ ಮಾಡಿಕೊಂಡು ಉಳಿದದ್ದು. ಅತ್ತೆ ‘ಅವರ’ ಕುರಿತು ಹೇಳತೊಡಗಿದರು.

ಸೂರ್ಯ ಶಾಲಾದಿನಗಳ ತನ್ನ ಸಹಪಾಠಿಯನ್ನೇ ಪ್ರೀತಿಸಿ ಮದುವೆಯಾಗಿದ್ದ. ಜಾತಿ, ಭಾಷೆ ಎಲ್ಲ ಬೇರೆಯಾದರೂ ಇವರ ತಕರಾರಿರಲಿಲ್ಲ, ಆದರೆ ಇವರ ಗಮನಕ್ಕೇ ಬರದಂತೆ ರಿಜಿಸ್ಟರ್ ವಿವಾಹವಾಗಿತ್ತು. ಅವಳನ್ನು ಮನೆಗೆ ಕರೆತರತೊಡಗಿದ ಮೇಲೇ ವಿಷಯ ತಿಳಿದದ್ದು. ಅವಳ ಮನೆಯವರಿಗೂ ಹೇಳಿರಲಿಲ್ಲ. ಕೊನೆಗೆ ಇವರೇ ಮುಂದೆನಿಂತು ಅವಳ ಮನೆಯವರ ಬಳಿ ಮಾತನಾಡಿದ್ದರು. ಆದರೆ ಅಷ್ಟೆಲ್ಲ ಸಂಭಾಳಿಸಿದರೂ ರೈಲು ಹಳಿ ಇಲ್ಲದೇ ಮನೆ ಪೂರ್ವ-ಪಶ್ಚಿಮ ಎಂದು ಇಬ್ಭಾಗವಾಯಿತು. ಪಶ್ಚಿಮದ ಇಳಿಜಾರು ಮುದುಕರದು, ಪೂರ್ವದ ಏರು ಮಹಡಿ ಪುಟ್ಟನ ಜೋಡಿಯದು.

‘ನಾ ಮಾಡಿದ್ದು ಯಾವ್ದೂ ಸೇರಲ್ಲ ಅವ್ಳಿಗೆ, ಅದ್ಕೇ ಇವ್ನೂ ತಿನ್ನಲ್ಲ. ರಾತ್ರಿ ಹೋಟಲಲ್ಲಿ ತಿಂದು ಬರ್‍ತಾರೆ ಅಥವಾ ನಮ್ಮದು ಮುಗಿದ್ಮೇಲೆ ಒಳಬಂದು ಏನಾದ್ರೂ ಮಾಡ್ಕೋತಾರೆ. ಬೆಳಿಗ್ಗೆ ನಾ ಏಳುದ್ರಲ್ಲಿ ಇಬ್ಬರೂ ಮಾಡಿ, ತಿಂದು ಹೋಗಿರ್‍ತಾರೆ. ಏಳುವುದು ಲೇಟಾದ್ರೆ ಹಾಗೇ ಹೋಗ್ತಾರೆ ಹೊರ್‍ತು ನಾ ಮಾಡಿದ್ದು ತಿನ್ನುದಿಲ್ಲ. ಅವಳಿಲ್ಲದಾಗ ಮಾತ್ರ ಅವ ನಮ್ಮೊಟ್ಟಿಗೆ ತಿನ್ನುವುದು. ಅವಳು ಕೆಲಸಕ್ಕೂ ಹೋಗ್ತಿಲ್ಲ. ಬೆಳಿಗ್ಗೆ ಅವನ ಜೊತೆನೇ ತವರುಮನೆಗೆ ಹೋಗಿ ಸಂಜೆ ಅವ ಬರುವಾಗ ಅವನೊಟ್ಟಿಗೆ ಬರುತ್ತಾಳೆ. ವಾರಗಟ್ಟಲೆ ಮಾತಿಲ್ಲದೆ ಕಳೆದಿದ್ದಿದೆ.’

ಆಡಿದ ಪ್ರತಿ ಶಬ್ದದಲ್ಲಿ ನೋವು ಜಿನುಗುತ್ತಿತ್ತು.

ಮೇಲೆ ನೋಡಿದರೆ ಪುಟ್ಟನ ಕೋಣೆಯ ಬಾಗಿಲ ಮೇಲೆ ‘ಡೋಂಟ್ ಡಿಸ್ಟರ್ಬ್’ ಬೋರ್ಡು. ಬಾಗಿಲ ಆಚೀಚಿನ ಗೋಡೆ ಮೇಲೆ ಅವಳ ನಾಲ್ಕಾರು ಪೇಂಟಿಂಗ್. ನಡುವೆ ಪೂರ್ತಿಗೊಂಡ ಚಿತ್ರ, ಸುತ್ತಲೂ ತಯಾರಿಯ ವಿವಿಧ ಹಂತದ ಚಿತ್ರಗಳ ಫೋಟೋ ಸ್ಕ್ಯಾನ್. ಚಿತ್ರಗಳು ಉತ್ಕೃಷ್ಟ ಅನ್ನುವಂತಿಲ್ಲ, ಎಳಸು ರೇಖೆ, ಅವಸರದ ಬೆರಳು. ಆದರೆ ಕಲಾಸಕ್ತ ಮನಸು ಅಲ್ಲಿತ್ತು.

ಒಂದೇ ಮನೆಯಲ್ಲಿ ಎರಡು ಸಂಸಾರ. ಅವರು ಬೇರೆ ಇರಬಹುದಲ್ಲ?

‘ನೀವು ಬೇರೆ ಇರಿ ಎಂದು ಬಾಯ್ಬಿಟ್ಟು ಹೇಳಿದೆವು. ಮುಂಬಯಿಯಲ್ಲಿ ಬೇರೆ ಮನೆ ಮಾಡುವುದು, ಸಾಮಾನು-ಮನೆ-ಕೆಲಸದವರನ್ನು ನಿಭಾಯಿಸುವುದು, artಬಾಡಿಗೆ ಮನೆ ಸಿಕ್ಕುವುದು ಸುಲಭವಲ್ಲ. ಈ ಮನೆ ಅವನ ಆಫೀಸಿಗೆ, ಅವಳ ತವರಿಗೆ ಹತ್ತಿರ. ಪುಕ್ಕಟೆ ಮನೆ, ಪುಕ್ಕಟೆ ಕೆಲಸದವರು ಇದೀವಲ್ಲ, ಬೇರೆ ಹೋಗುವ ಮನಸಿಲ್ಲ. ‘ಮದುವೆಯಾದಮೇಲೆ ನಾನು ಆರಾಮ ಇರಬೇಕು, ಮಕ್ಕಳು ಬೇಡ ಎಂಬ ಷರತ್ತಿನೊಂದಿಗೆ ಮದುವೆಗೆ ಒಪ್ಪಿದ್ದಾಳಂತೆ! ಅವಳ ಮೈಂಡ್ ಫುಲ್ ಮ್ಯಾಚೂರ್ ಆದ್ಮೇಲೆ ಆ ಬಗ್ಗೆ ವಿಚಾರ ಮಾಡುವ ಎಂದಿದ್ದಾಳಂತೆ. ಅದಕ್ಕೆ ಇವನು ಒಪ್ಪಿದ ಮೇಲೇ ಮದುವೆಯಾಗಿರುವುದರಿಂದ ಈಗ ಮಾತಾಡುವಂತಿಲ್ಲ..’

ಅತ್ತೆ ಒಂದು ಸುಳುಹು ಕೊಟ್ಟರು.

‘ಮಗು ಎಂದರೆ ಒಳಿತಿನ ಪ್ರತೀಕ. ನಾಳಿನ ಪ್ರತೀಕ. ಮಗುವನ್ನು ಬೆಳೆಸುವುದು ಎಂದರೆ ನಮ್ಮೊಳಗಿನ ಒಳಿತನ್ನು, ಮನುಷ್ಯತ್ವವನ್ನು ಬೆಳೆಸುವುದು. ಅದೇ ಬೇಡ ಎನ್ನುವವರಿಗೆ ಏನು ಹೇಳುವುದು?’

ಮಾವನ ದನಿ ಗದ್ಗದವಾಯಿತು. ಥಟ್ಟನೆ ಇವ ನೆನಪಾದ. ‘ನಮಗೊಂದು ಮಗು ಬೇಕು, ನನಗೊಂದು ಮಗು ಬೇಕು’ ಎಂದು ಆರ್ತವಾಗಿ ಕಿವಿಯಲ್ಲಿ ಪ್ರತಿಸಾರಿ ಉಸುರುತ್ತಾನೆ. ಎಲ್ಲಿ ಕರಗಿ ನೀರಾಗುವೆನೋ ಎಂದು ಕೂಡಲೇ ನಾವು ಮಾಡಬೇಕಾದ ಕೆಲಸಗಳ ಯಾದಿ ನೆನಪಿಸುತ್ತೇನೆ. ಮಕ್ಕಳ ಸುರಕ್ಷೆ ಆಟವಲ್ಲ ಎಂದು ನಮ್ಮ ಕೋರ್ಟುಕಟ್ಟೆ ಅಲೆದಾಟ ನೆನಪಿಸಿ ಸುಮ್ಮನಾಗಿಸುತ್ತೇನೆ. ಅವನೆದೆಯಲ್ಲೂ ಇಂಥದೇ ಕಂಪನವೇ?

ಬ್ಯುಟಿಷಿಯನ್ ಕೋರ್ಸ್ ಮಾಡಿರುವ ಅವರ ಸೊಸೆ ಜುವೆಲ್ ಮತ್ತು ಷೂ ಡಿಸೈನರ್ ಅಂತೆ. ಹೊರಗೆ ಹಾಲ್‌ನ ರೇಕಿನಲ್ಲಿ ಅಡ್ಡಾದಿಡ್ಡಿ ಬಿದ್ದಿದ್ದ; ಮೇಲೆ ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿಟ್ಟ ಲೆಕ್ಕವಿಲ್ಲದಷ್ಟು ಚಪ್ಪಲಿ, ಷೂಗಳನ್ನು ಮಾವ ತೋರಿಸಿದರು. ಒಳಬರುವಾಗ ನಾನೂ ಗಮನಿಸಿದ್ದೆ.

‘ನಾನು ಲೆಕ್ಕ ಮಾಡಿದಾಗ ಹತ್ರತ್ರ ನೂರು ಜೊತೆ ಇದ್ದವು, ಈಗ ಇನ್ನೆಷ್ಟಾಗಿದೆಯೋ? ಕೊಳ್ಳುವುದೇ ಒಂದು ಚಟ. ಈ ದುಂದು ನಮಗೆ ಸರಿ ಬರುವುದೇ ಇಲ್ಲ, ನೋಡು ಇಷ್ಟು ತಂದು ರಾಶಿ ಹಾಕಿದರೂ ಯಾವುದರಲ್ಲೂ ತೃಪ್ತಿ ಇಲ್ಲ. ಯಾವುದೂ ಎಕ್ಸೈಟ್ ಮಾಡುವುದಿಲ್ಲವೆಂದು ಮತ್ತೆಮತ್ತೆ ಕೊಳ್ಳುವುದು. ಎಷ್ಟಿದ್ದರೂ ಇನ್ನೂ ಬೇಕು, ಮತ್ತೂ ಬೇಕು. ಬಯಸುವುದರಲ್ಲೇ ಬದುಕು ಮುಗಿಯುತ್ತದೆ. ಕೊಂಡದ್ದು ಬಳಸುವುದರೊಳಗೆ ಕಣ್ಣು ಇನ್ನೊಂದು ವಸ್ತುವಿನ ಮೇಲಿರುತ್ತದೆ. ಕೊಂಡು ರಾಶಿ ಹಾಕಿದ್ದನ್ನು ನೋಡುವಷ್ಟು, ಜೋಪಾನ ಇಟ್ಟುಕೊಳ್ಳುವಷ್ಟು ಪುರುಸೊತ್ತು ಇಲ್ಲ. ಈ ಅತೃಪ್ತಿ ಹುಟ್ಟಿಸುವ ಫ್ರಸ್ಟ್ರೇಷನ್‌ಗೆ ಮಾತಾಡುವುದರಲ್ಲಿ ಸಿಟ್ಟು, ಅಳು, ಮುಂಗೋಪ, ದುಡುಕು. ತಡೆಯಲಾರದೇ ಒಮ್ಮೆ ಹೇಳಿಯೇಬಿಟ್ಟೆ. ಅಷ್ಟೇ, ಅವಳಿಗೆ ಅವಮಾನವಾಯಿತಂತೆ. ಅತ್ತುಕರೆದು ಹೊರಳಿ ರಂಪಾಟ ಮಾಡಿ, ಏಕವಚನದಲ್ಲಿ ಬಾಯಿಗೆ ಬಂದಂತೆ ಬೈದಳು. ಒಂದು ಪತ್ರ ಬರೆದಳು. ಅವತ್ತೇ ಕೊನೆ, ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ, ಎಷ್ಟೇ ಪತ್ರ ಬರಲಿ, ಏನೇ ಬರೆಯಲಿ, ಸುಮ್ಮನಿದ್ದೇನೆ.’

‘ಅವಳಿಗೆ ರಾತ್ರಿಯೆಲ್ಲ ಬಂದು ಸುಸ್ತಾಗಿರಬೇಕು, ನೀವು ಏನೇನೆಲ್ಲ ಹೇಳಿ ತಲೆಬಿಸಿ ಮಾಡಬೇಡಿ. ಸ್ನಾನ ಮಾಡಿ ಒಂಚಣ ಮಲಗಲಿ, ಇವತ್ತಿಡೀ ಇರ್‍ತಾಳಲ್ಲ,’ ಏನನ್ನೋ ಹುರಿಯುತ್ತ ಅತ್ತೆ ಒಳಗಿಂದ ಕೂಗಿದರು.

‘ಇಲ್ಲ ಅತ್ತೆ, ನಾನು ಬಂದಿದ್ದೇ ನಿಮ್ಮತ್ರ ಮಾತಾಡಲು. ನನಗೆ ದಿನಕ್ಕೆ ಮೂರ್ನಾಲ್ಕು ತಾಸು ನಿದ್ರೆ ಆದರೆ ಸಾಕು. ನಿನ್ನೆ ಟ್ರೈನಲ್ಲಿ ನಿದ್ರೆ ಮಾಡಿದ್ದು ಹೆಚ್ಚಾಗಿದೆ, ಇಲ್ಕೊಡಿ, ನಾ ಹೆಚ್ಚುತ್ತೇನೆ. ನೀವು ಏನೇನೋ ಹಚ್ಕೋಬೇಡಿ, ಸಿಂಪಲ್ ಆಗಿ ಒಂದ್ ಚಿತ್ರಾನ್ನ ಮಾಡಿ ಸಾಕು. ಎಲ್ಲ ಕೂತು ಮಾತಾಡುವ ಸ್ವಲ್ಪ ಹೊತ್ತು..’ ಎಂದೆ.

‘ದಿನಾ ನಾವಿಬ್ರೇ, ಸಿಂಪಲ್ಲೇ ಮಾಡುದು. ನಿನ್ನ ಮಾವಂಗೆ ಶುಗರು, ಬಿಪಿ, ಅಸ್ತಮಾ ಅದೂ ಇದೂಂತ ಬರೀ ಪಥ್ಯದ ಊಟ. ಹಬ್ಬಹುಣ್ಣಿಮೆ ಸಂಭ್ರಮ ಯಾವ್ದೂ ಇಲ್ಲ ನಮಗೆ. ನಿಂಗೆ ಯಾವ ಕಾಯ್ಲೆನೂ ಇಲ್ಲ, ನೀನು ಬೇರೆ ಮಾಡ್ಕೊ ಅಂತಾರೆ. ಆದ್ರೆ ಅವ್ರನ್ನ ಬಿಟ್ ಒಬ್ರೇ ತಿನ್ನುದು ಹೆಂಗೆ? ಇವತ್ ನಿನ್ನ ನೆಪಕ್ಕೆ ಏನಾದ್ರೂ ಒಂಚೂರು..’

ಅವರ ಕಣ್ಣಲ್ಲಿ ನೀರು ತರಿಸಿದ್ದು ನಾನು ಹೆಚ್ಚುತ್ತಿರುವ ಈರುಳ್ಳಿ ಇರಲಿಕ್ಕಿಲ್ಲ. ಅತ್ತೆಯ ಗಮನವನ್ನು ಅವರ ಆರೋಗ್ಯದ ಗುಟ್ಟೇನು ಅಂತ ಕೇಳಿ ಬೇರೆಡೆ ಸೆಳೆಯಲೆತ್ನಿಸಿದೆ.

‘ಎಂಥ ಗುಟ್ಟೋ ಎಂಥ ಮಣ್ಣೋ. ನೀ ಹಿಂಗೆ ಕೇಳುವಾಗ ನೆನಪಾಗುತ್ತೆ: ನಮ್ಮಪ್ಪನ ಮನೇಲಿ ಪ್ರತಿ ದೀಪಾವಳಿ ಹಬ್ಬಕ್ಕೆ ಒಂದ್ ಉಂಡೆ ಮಾಡಿ ತಿನಿಸ್ತಿದ್ರು, ಅದು ನಿನ್ನಜ್ಜಿ ಮನೆ ಕಡೆನೂ ಇದ್ದಿಕ್ಕು. ಎಂತೆಂತದೋ ಚಕ್ಕೆ ಸೇರ್‍ಸಿ ಕಷಾಯ ಮಾಡ್ತಿದ್ರು. ಆ ಚಕ್ಕೆ ಸಂಗ್ರಹ ಮಾಡಕ್ಕೆ ಬೆಳಕು ಹರಿಯೋ ಮುಂಚೆ ಕತ್ತಲಲ್ಲಿ ಬೆತ್ತಲಾಗಿ ಖಾಲಿಹೊಟ್ಟೇಲಿ ಹೋಗ್ಬೇಕು. ಅದು ನೇಮ. ಕತ್ತಿ ಬಳಸೂ ಹಂಗಿಲ್ಲ, ಹಲ್ಲಿಂದ ಕಚ್ಚಿ ಮರದ ಚಕ್ಕೆ ಎಬ್ಬಿಸಿ ತರಬೇಕು. ಪಾಲೆದ ಮರದ ಚಕ್ಕೆ, ಗಜ್ಜುಗ, ಬೆಳ್ಳುಳ್ಳಿ, ಒಳ್ಳೆ ಮೆಣಸು ಎಲ್ಲ ಹಾಕಿ ಅಜ್ಜಿ ಬಾವಿಕಟ್ಟೆ ಮೇಲಿದ್ದ ಕಲ್ಲಲ್ಲಿ ನುಣ್ಣಗೆ ಅರೀತಿದ್ಲು. ತಿಂದ ಉಂಡೆ ಕಹಿಯೋ, ಒಗರೋ, ರುಚಿಹೀನವೋ ಅದು ಹೇಗಿದೆ ಎಂತ ವರ್ಣಿಸದೇ ಬೆಳಿಗ್ಗೆ ಎದ್ದು ಐದೈದು ಉಂಡೆ ಖಾಲಿ ಹೊಟ್ಟೇಲಿ ನುಂಗ್ಬೇಕು. ಆಗ ಇಡೀ ವರ್ಷ ಏನೂ ಕಾಯ್ಲೆ ಬರಲ್ಲ ಅಂತ ಹೇಳ್ತಿದ್ರು. ಅಜ್ಜಿ ಇರೋವಷ್ಟ್ ದಿನ ಈ ನೇಮ ನಡೀತಿತ್ತು. ಆ ದಿನಕ್ಕಾಗಿ – ನಮ್ಮನ್ನು ರೋಗರಹಿತರಾಗಿ ಮಾಡೋ ದಿವ್ಯೌಷಧ ಸೇವಿಸುವ ದಿನಕ್ಕಾಗಿ ನಾವೆಲ್ಲ ಕಾದಿರತಿದ್ವಿ. ಅಜ್ಜಿ ಉಂಡೆನ ನಮ್ಮನೆ ಕೆಲ್ಸಕ್ಕೆ ಬರೋವ್ರಿಗೂ ಕೊಡ್ತಿದ್ರು, ಅದ್ರ ಗುಟ್ಟು ಎಲ್ರಿಗೂ ಗೊತ್ತಿರಲಿಲ್ಲ. ನೀವು ಸಾಯನ್ಸ್ ಓದುವವರು ಇದನ್ನೆಲ್ಲ ನಂಬಲ್ಲ. ಆದ್ರೆ ಅದು ರೋಗ ತಡೀತಿತ್ತೋ ಇಲ್ವೋ ಅನ್ನೋದಕ್ಕಿಂತ ಅಂಥ ಏನೋ ಒಂದ್ ತಗಂಡ್ವಿ ಅನ್ನೋ ಧೈರ್ಯ ಹೊಟ್ಟೇಲಿರತಿತ್ತಲ್ಲ, ಅದೇ ಮುಖ್ಯ.’

‘ನಿಜ ಅತ್ತೆ, ಈಗ ನಾವು ಸಿಕ್ಕಿದ್ದೆಲ್ಲ ತಿನ್ನುವವರು. ನಮ್ ಹೊಟ್ಟೇಲಿ ಧೈರ್ಯ ಒಂದು ಬಿಟ್ಟು ಮತ್ತೆಲ್ಲ ಇರುತ್ತೆ..’

‘ನಮ್ಮನೇಲಿ ನೋಡ್ಬೇಕು ನೀನು, ಅವ್ರ ಊಟ ತಿಂಡಿಗೆಲ್ಲ ಎಂತೆಂಥದಿರುತ್ತೆ ಅಂತ. ಮೊಳದುದ್ದ ಚಾಕಲೇಟ್, ಐಸ್ ಕ್ರೀಂ, ಚಿಪ್ಸ್, ಪಾನಿಪೂರಿ, ಪಾಸ್ತಾ ಇನ್ನೂ ಏನೇನೋ ತಿಂದು ಹೊಟ್ಟೆ ತುಂಬಿಸ್ಕತಾವೆ. ನಾಲಿಗೇನೇ ಮುಖ್ಯ, ಆರೋಗ್ಯ ಅಲ್ಲ ಅನ್ನೋರಿಗೆ ಏನ್ ಹೇಳುದು?’ ಅತ್ತೆ ಮೆಲ್ಲ ದನಿಯಲ್ಲಿ ಮಾತಾಡುತ್ತಿದ್ದರು, ಯಾರಿಗಾದರೂ ಕೇಳೀತೋ ಎಂಬಂತೆ. ಅಡಿಗೆಮನೆಯಲ್ಲಿ ನಿನ್ನೆ ರಾತ್ರಿ ತಿಂದು ಅರ್ಧಂಬರ್ಧ ಉಳಿಸಿ ಬಿಸಾಡಿದ ಪಾಸ್ಟ್ರಿ ತೋರಿಸಿದರು.

ಕುಕರ್ ಏರಿಸಿ ಮೇಲೆ ಹೊರಟವರು ಕಣ್ಸನ್ನೆಯಲ್ಲೇ ಕರೆದರು. ಮಗನ ಕೋಣೆ ಬಾಗಿಲಿಗೆ ಬೀಗ ಹಾಕಿರಲಿಲ್ಲ. ಸಂತೆ ಮರುದಿನದ ಸಂತೆ ಮಾಳದಂತೆ ಕಂಡ ರೂಮಿನಲ್ಲಿ ಈ ಪ್ರಶ್ನೆಗೆ ಉತ್ತರವಾಗಿ ಯಾವ ಸುಳಿವೂ ಇರಲಿಲ್ಲ. ವಿಶಾಲ ರೂಮು. ನಟ್ಟನಡುವೆ ಸೊಳ್ಳೆಪರದೆ ಇಳಿಬಿಟ್ಟ ಡಬಲ್ ಕಾಟು. ಮೂಲೆ ಟೇಬಲಿನ ಮೇಲೆ ದೊಡ್ಡ ಟಿವಿ. ತೆರೆದಿಟ್ಟ ಕಂಪ್ಯೂಟರು. ಹಾಸಿಗೆ ಮೇಲೆ ತೆರೆದಿಟ್ಟ ಪುಸ್ತಕದಲ್ಲಿ ಒಡವೆ, ಚಪ್ಪಲಿಗಳ ನಾನಾ ಡಿಸೈನುಗಳ ಸ್ಕೆಚ್. ಅರೆಬರೆ ತಿಂದುಳಿದ ದೋಸೆ, ಚಿಪ್ಸ್. ತಟ್ಟೆ ಲೋಟಗಳು ಮಂಚದಡಿ ಇದ್ದವು. ಬಚ್ಚಲುಮನೆಯ ಬಾತ್ ಟಬ್ಬಿನೊಳಗೆ ಒಳಉಡುಪುಗಳು ತೋಯಿಸಿಕೊಂಡು ಬಿದ್ದಿದ್ದವು.

ತೊಳೆವ ಬಟ್ಟೆ, ತಟ್ಟೆಯನ್ನೆಲ್ಲ ಒಂದೆಡೆ ಎತ್ತಿಟ್ಟು ಅತ್ತೆ ಆ ಕೋಣೆಗೆ ಹೊಂದಿಕೊಂಡಂತಿದ್ದ ಹಜಾರದ ಬಾಗಿಲು ತೆರೆದರು. ಅದೊಂದು ಅಸ್ತವ್ಯಸ್ತ ಮಿನಿ ಗೋಡೌನು. ಮಕ್ಕಳಾಟಿಕೆಯ ಸಾಮಾನು, ಟೆಡ್ಡಿಬೇರ್‌ನಿಂದ ಹಿಡಿದು ಗಿಟಾರ್, ಹಾರ್ಮೋನಿಯಂ, ಟೆನಿಸ್ ರ್‍ಯಾಕೆಟ್ ತನಕ ತರಹೇವಾರಿ ವಸ್ತುಗಳು ಅಲ್ಲಿದ್ದವು. ‘ಬೋರ್ ಆಯಿತೆಂದರೆ ಶಾಪಿಂಗ್ ಹೋಗುವುದು; ಕಂಡದ್ದು ತರುವುದು; ಕೊನೆಗೆ ಇಲ್ಲಿ ತಂದು ಒಟ್ಟುವುದು ಎನ್ನುತ್ತ ಅತ್ತೆ ಜೋಡಿಸಿಡತೊಡಗಿದರು.

ಸಪೂರ ಮೈಯ ಚುರುಕು ಕಣ್ಣುಗಳ ಅತ್ತೆಯನ್ನು ಕೇಳಬೇಕೆನಿಸಿತು: ‘ನೀವು ಆಗ್ಲೆ ಪಿಯುಸಿ ಮಾಡಿದ್ರಂತೆ. ಮನಸ್ಸು ಮಾಡಿದ್ರೆ ಏನಾದ್ರೂ ಕೆಲಸಕ್ ಸೇರ್‍ಬೋದಿತ್ತು. ಮುಂದೆ ಓದ್ಬೋದಿತ್ತು. ಹೌಸ್‌ವೈಫ್ ಆಗೇ ಉಳಿದದ್ದು ಏಕೆ?’

‘ಗಂಡ ಹೆಂಡ್ತಿ ಮಧ್ಯ ಕಾಳಜಿ, ಗೌರವ, ಪರಸ್ಪರ ಅರ್ಥ ಮಾಡ್ಕೊಳೋದು ಇದ್ರೆ ಗಂಡ ಹೊರಗೆ ದುಡಿದು ತಂದು, ಹೆಂಡ್ತಿ ಅದನ್ನ ನಿಭಾಯಿಸುವ ಹೌಸ್‌ಮೇಕರ್ ಕೆಲಸ ಮಾಡೋದ್ರಲ್ಲಿ ಯಾವ ತಪ್ಪೂ ಕಾಣ್ಸಲ್ಲ ನಂಗೆ. ಯಾವ್ದು ಹೆಚ್ಚು? ಯಾವುದು ಕಮ್ಮಿ? ಹೊರಗೆ ದುಡಿಯುವಷ್ಟೇ ಮುಖ್ಯ ಮನೆ ಸುಧಾರಿಸೋದು. ನನಗೆ ಇದು ಯಾವತ್ತೂ ಕಮ್ಮಿ ಅನ್ಸಿಲ್ಲ. ಇದು ಬಿಟ್ಟು ಬೇರೆ ಇನ್ನೇನಾದರೂ ಮಾಡಬೇಕು ಅಂತ್ಲೂ ಅನಿಸಿಲ್ಲ. ಆದ್ರೆ ಅವನೇ ಸರ್ವಸ್ವ ಅಂತ ಒಬ್ಬ ಮಗನ್ನ ಬೆಳೆಸೋದ್ರಲ್ಲಿ ಅಷ್ಟು ಸಮಯ, ಶ್ರಮ ಹಾಕಿದ್ವಲ್ಲ, ಅದು ವ್ಯರ್ಥವಾಯ್ತಾ ಅಂತ ಇತ್ತೀಚೆಗೆ ಅನುಮಾನ ಬರ್ತಿದೆ. ನಿಮ್ಮಮ್ಮ ನಿಮ್ಮಪ್ಪನ್ನ ಮದುವೆಯಾದದ್ದು ಇವರ್‍ಯಾರಿಗೂ ಇಷ್ಟ ಇರಲಿಲ್ಲ. ಜಾತಿಯಲ್ಲ, ಕೆಲಸವಿಲ್ಲ, ಬರೀ ಪತ್ರಿಕೆ ನಡೆಸೋನು ಅಂತ ಸಸಾರ. ಆದ್ರೆ ನಿಮ್ಮಮ್ಮ ನಾಕು ಜನರಿಗಾಗಿ ಬಾಳಿ ಸಾಧನೆ ಮಾಡಿದಳು. ಇವತ್ತು ಅವ್ಳನ್ನ ನೂರಾರು ರೈತರು ನೆನಪು ಮಾಡ್ಕೋತಾರೆ. ನಿನ್ನನ್ನು ಹೀಗೆ ತಯಾರು ಮಾಡಿದಳು. ನಮಗೆ ನಾವಂದುಕೊಂಡ ಹಾಗೆ ಅವನನ್ನ ರೂಪಿಸೋಕೆ ಆಗ್ಲಿಲ್ವಾ ಅನಿಸುತ್ತೆ. ಕೊನೆಗೆ ಹೀಗೂ ಅನ್ಸುತ್ತೆ, ನಾವಂದುಕೊಂಡ ದಾರೀಲೇ ಮಕ್ಕಳು ಯಾಕೆ ಇರಬೇಕು? ಅವ್ರಿಗೆ ಸರಿ ಕಂಡಂತೆ ಅವರು ಇರ್‍ತಾರೆ. ಪುಟ್ಟನಿಗೇನೂ ಅವಳ ಜೊತೆ ಸಮಸ್ಯೆಯಿಲ್ಲ ಅಂತಾದರೆ ಇರಲಿ ಅವರು, ಅವರಿಗೆ ಹೇಗೆ ಬೇಕೋ ಹಾಗೆ. ನಾವ್ಯಾಕೆ ನಮ್ಮ ಅಳತೆಪಟ್ಟಿ ಹಿಡಿದು ಅಳೀಬೇಕು? ನಿನ್ನ ಮಾವನ ಹತ್ರ ಇದ್ನೇ ಹೇಳ್ತಾ ಇರ್ತೀನಿ. ಆದರೆ ಅವರು ಸಮಾಧಾನನೇ ಮಾಡ್ಕಳಲ್ಲ.’

ಕಹಿಉಂಡೆಯನ್ನು ಅದರ ರುಚಿ ವರ್ಣಿಸದೇ ಹಾಗೇ ನುಂಗಿದರೆ ರೋಗ ಬರುವುದಿಲ್ಲ ಎಂದರೆ, ಓಹೋ ಅತ್ತೆ, ನಿಮ್ಮ ಆರೋಗ್ಯದ, ಸಹನೆಯ ಗುಟ್ಟು ಇಲ್ಲಿದೆ..

‘ಮನುಷ್ಯನಿಗೆ ಬೇಕಾಗುವುದು ಒಂದು ಸೆನ್ಸ್ ಆಫ್ ಬಿಲಾಂಗಿಂಗ್ ಅರುಂಧತಿ. ನಾನು ಒಬ್ಬರಿಗೆ, ಒಂದು ಕುಟುಂಬಕ್ಕೆ, ಸಮಾಜಕ್ಕೆ ಸೇರಿದ ವ್ಯಕ್ತಿ ಎನ್ನುವುದು ಒಂದು ಭದ್ರತೆ ಹುಟ್ಟಿಸುತ್ತೆ. ಅದಕ್ಕೇ ಫ್ಯಾಮಿಲಿ ವ್ಯವಸ್ಥೆ ಉಳಕೊಂಡು ಬಂದಿರೋದು. ಯಾರಿಗೋ ಸೇರಿದವ ಎಂಬ ಕನಿಷ್ಟ ಬೆಚ್ಚನೆಯ ಭಾವನೆನೂ ಇಲ್ದಿದ್ರೆ ಮನುಷ್ಯ ಬದುಕೋಕಾಗಲ್ಲ. ಅವರವರ ಪಾತ್ರಗಳು ಕುಟುಂಬದಲ್ಲಿ ಏನೇ ಇರಲಿ, ಸೆನ್ಸ್ ಆಫ್ ಬಿಲಾಂಗಿಂಗ್ ಇದ್ರೆ ಅಲ್ಲಿ ವಂಚನೆ, ತಾರತಮ್ಯದ ಪ್ರಶ್ನೆ ಹುಟ್ಟಲ್ಲ. ಒಂದೇ ಮನೇಲಿದ್ದೂ ಈ ಭಾವನೆಯೇ ಇಲ್ಲ ಅಂದ್ರೆ ಬದುಕು ಬರೀ ನಾಟಕ. ಅದು ಹೆಚ್ಚು ದಿನ ನಡೆಯಲ್ಲ.’

ಮಾವ ಯಾವಾಗಲೋ ಮೇಲೆ ಬಂದು ನಿಂತಿದ್ದು ಅವರು ಉತ್ತರಿಸಿದಾಗಲೇ ಗೊತ್ತಾಗಿದ್ದು. ಕುಕರ್ ನಾಲ್ಕನೆಯ ಸೀಟಿ ಹೊಡೆಯಿತು. ಅತ್ತೆ ಅನಿವಾರ್ಯವಾಗಿ ಕೆಳಗಿಳಿದರು. ಅವರ ಹಿಂದೆ ನಾವು.

***

ಅಮ್ಮ ಮಾಡುತ್ತಿದ್ದ, ನಾನು ಮರೆತೇಬಿಟ್ಟ ಒಂದೆರೆಡು ಪದಾರ್ಥಗಳನ್ನು ಮಾಡುತ್ತಿದ್ದರು ಅತ್ತೆ. ಹೇಗೆ ಮಾಡುವುದು ಎಂದು ಕೇಳಿದ್ದೇ ಒತ್ತಾಯದಿಂದ ಪುಸ್ತಕ ಪೆನ್ನು ಕೊಟ್ಟು ರೆಸಿಪಿ ಬರೆಸಿದರು. ಅಂದು ಮಾಡದ ಕೆಲ ಪದಾರ್ಥಗಳ ರೆಸಿಪಿಯನ್ನೂ ‘ತುಂಬ ಸುಲಭ, ಮಾಡಿ ನೋಡು ಬೇಕಾದ್ರೆ, ಆಮೇಲೆ ಹೇಳಕ್ಕೆ ನೆನಪಾಗುತ್ತೋ ಇಲ್ವೋ ಎಂದು ನೆನಪು ಮಾಡಿಕೊಳ್ಳುತ್ತ ಹೇಳಿಹೇಳಿ ಬರೆಸಿದರು.

‘ಊಟ ಶುರುಮಾಡು ಅರುಂಧತಿ. ನೀ ಬಂದಿದಿ ಅಂತ ಇವತ್ತು ನಾನು ಪಾಯ್ಸ ಕುಡಿತಿನಿ. ನನಗೂ ಒಂದು ಲೋಟ ಪಾಯಸ ಕೊಡೇ. ಶುಗರ್ ಹೆಚ್ಚಾಗಿ ಮೈಗೆ ಇರುವೆ ಮುತ್ತಿದ್ರೆ ಮುತ್ತಲಿ, ಕಡಿಸಿಕೊಂಡ್ರಾಯ್ತು..’

ಹೆಸರು ಬೇಳೆ ಪಾಯಸ ಕುಡಿದು ಸಿಹಿ ತಿಂದ ಖುಷಿಗೋ ಎಂಬಂತೆ ಇದ್ದಕ್ಕಿದ್ದಂತೆ ಒಂದು ಶಾಂತಭಾವ ಮಾವನ ಮುಖವನ್ನು ಆವರಿಸಿತು.

‘ಅರಳುವ ಹೂವನ್ನು ಪ್ರೀತಿಸುವುದು ಸುಲಭ. ಎಲ್ಲರೂ ಅದನ್ನೇ ಮಾಡ್ತಾರೆ. ಆದರೆ ಉದುರುವ ಎಲೆಯನ್ನು ಪ್ರೀತಿಸುವುದು ಕಷ್ಟ. ತನ್ನ ಮಾಗುವಿಕೆಯ ಕಾರಣವಾಗಿ ಗಿಡದಿಂದ ಬೇರಾದ ಎಲೆ ಪತನದ ದಾರಿ ಕಂಡುಕೊಂಡು ಬೇರು ಸೇರಿ ಗೊಬ್ಬರವಾಗಲೇಬೇಕು. ಮತ್ತೊಂದು ಎಲೆ ಚಿಗುರಲು ಅನುವು ಮಾಡಿಕೊಡಬೇಕು. ಇದು ಪ್ರಕೃತಿ ನಿಯಮ. ಉದುರುವ ಕಾಲದಲ್ಲಿ ಒಬ್ಬರಿಗೊಬ್ಬರು ಆಧಾರವಾಗಿದೀವಲ್ಲ, ಈ ನಮ್ಮ ಬದುಕು ನದಿಯ ಮೇಲೆ ಬಾಗಿದ ತೆಂಗಿನಮರವಿದ್ದ ಹಾಗೆ. ಒಂದೇ ಒಂದು ಬಲವಾದ ಗಾಳಿ ಬೀಸಿದರೆ ಬದುಕು ಒಂದೋ ನೆಲದ ಪಾಲು ಅಥವಾ ನದಿಯ ಪಾಲು. ಜೀವನ ಇಷ್ಟು ಸೂಕ್ಷ್ಮವಾಗಿರುವಾಗ ನಮಗಾಗಿ ನಾವು ಬದುಕುತ್ತೇವೆ, ನಮ್ಮಿಂದಲೇ ನಾವು ಬದುಕಿದೆವು ಅನ್ನುವುದು ತಪ್ಪು.

‘ನೋಡು. ಈ ಕಟ್ಟಡ ಅಳಿಯಲಿಕ್ಕೆ ಬಂತು. ಮುಂಬಯಿಯ ಎಷ್ಟೋ ಕಟ್ಟಡಗಳ ಹಾಗೆ ಇದೂ. ೩೫ ವರ್ಷ ಕೆಳಗೆ ತಗೊಂಡೆವು. horror_rainy_artಅದೀಗ ಶಿಥಿಲವಾಗಿದೆ, ಅಳಿದು ಬೇರೆ ಕಟ್ಟಬೇಕು ಎನ್ನುತ್ತಾನೆ ಬಿಲ್ಡರ್. ಇರುವುದನ್ನು ಕಳಚಲು ಒಂದು ವರ್ಷ, ಮತ್ತೆ ಕಟ್ಟಲು ಮೂರ್ನಾಲ್ಕು ವರ್ಷ ಬೇಕು. ಈಗಿರುವುದಕ್ಕಿಂತ ಹೆಚ್ಚು ಅಂತಸ್ತಿಗೆ ಪರ್ಮಿಶನ್ ತಗೋತಾನೆ. ಫ್ಲೋರ್ ಏರಿಯಾ ಹೆಚ್ಚು ಮಾಡಿಸಿ ಕಟ್ಟುತ್ತಾನೆ. ಕಟ್ಟುವ ಕೆಲಸ ಮುಗಿಯುವವರೆಗೆ ಬೇರೆಡೆ ಉಳಿಯಲು ನಮಗೆ ಬಾಡಿಗೆ ಹಣ ಕೊಡುತ್ತಾನೆ. ಪೂರ್ತಿ ಮುಗಿದ ಮೇಲೆ ಒಂದು ರೂಮು ಹೆಚ್ಚಿಗೆ ಕೊಡ್ತಾನೆ. ಈಗಿರುವುದಕ್ಕಿಂತ ಹೆಚ್ಚು ಮಹಡಿ ಕಟ್ಟಿ, ಮಾರಿ ಲಾಭ ಮಾಡುತ್ತಾನೆ. ನಾವಿನ್ನೆಷ್ಟು ವರ್ಷ ಬದುಕಿಯೇವು, ನಮಗೆ ಅವಶ್ಯವಿಲ್ಲ ಎಂದು ಹೇಳುವಂತೇ ಇಲ್ಲ. ಇದನ್ನು ಕೆಡವಲು ಒಪ್ಪಲೇಬೇಕು. ಹಳತು ಅಳಿದು ಅದರ ಪಿಲ್ಲರ್, ಬೀಮ್ ಎಲ್ಲ ಬದಲಾಯಿಸಿ ಕಟ್ಟಡ ನವೀಕರಣಗೊಳ್ಳಬೇಕು. ಎಂದರೆ ಶಿಥಿಲವಾದ ಹೆಗಲಿಂದ ಭಾರವನ್ನು ಸಮರ್ಥ ಹೆಗಲಿಗೆ ವರ್ಗಾಯಿಸಬೇಕು. ಮಕ್ಕಳೆಂದರೆ ಅಂಥ ಪಿಲ್ಲರ್, ಬೀಮ್, ಹೆಗಲೇ ತಾನೇ?

‘ಒಬ್ಬ ತತ್ವಜ್ಞಾನಿ – ಬೋರ್ಗ್ ಇರಬೇಕು – ಹೇಳ್ತಾನೆ: ನಾವು ಏನನ್ನು ಕಳಕೊಂಡಿದೀವೋ ಅದು ಮಾತ್ರ ನಮ್ಮದು ಅಂತ. ದೇರ್ ಆರ್ ನೋ ಪ್ಯಾರಾಡೈಸಸ್ ಅದರ್ ದ್ಯಾನ್ ದಿ ಲಾಸ್ಟ್ ಪ್ಯಾರಾಡೈಸಸ್. ಇದು ಅರಗಿಸ್ಕೋಬೇಕಾದ ಸತ್ಯ. ನಾವು ಸುಳ್ಳನ್ನು ನಮಗೆ ಪ್ರಿಯವಾಗಿದ್ದಾದರೆ ಗಟಗಟ ಕುಡಿತಿವಿ. ಆದರೆ ಕಹಿಯಾಗಿದ್ದನ್ನು ಗುಟುಕುಗುಟುಕಾಗಿ ಕುಡಿತಿವಿ. ಗುಟುಕಿನ ಕಹಿ ತಡಕೊಳ್ಳಲಿಕ್ಕೆ ಮಗು, ಅರುಂಧತಿ, ನಿನ್ನತ್ರ ಇಷ್ಟು ಮಾತಾಡಿದೆ. ನಮಗೀಗ ಹೆಚ್ಚು ಆಯ್ಕೆ ಇಲ್ಲ, ಕೇಳು, ನಮ್ಮ ಮಗನ ಜೊತೆಯ ಸಂಬಂಧದ ಕನ್ನಡಿ ಒಡೆದಿದೆ. ಕೂಡಿಸಲು ಸಾಧ್ಯವಿಲ್ಲದ ಹಾಗೆ. ಕೂಡಿಸಹೊರಟರೆ ಕೈ ಗಾಯವಾಗುತ್ತದೆ, ಬಿಂಬವೂ ಒಡಕಲಾಗೇ ಮೂಡುತ್ತದೆ. ಆದರೆ ಒಂದು ಆಸೆ, ಘನತೆಯಿಂದ ಬದುಕಿದೆವು, ಘನತೆಯಿಂದ ನೋವನುಭವಿಸಿದೆವು, ಘನತೆಯಿಂದ ಸಾಯಬೇಕು ಎಂದು. ಅದಕ್ಕೇ..’

ಕಡಲ ಕಡೆ ನದಿ ರಭಸದಿಂದ ಹರಿಯತೊಡಗಿತು..

‘ನಾವೊಂದು ವೃದ್ಧಾಶ್ರಮ ನೋಡಿದ್ದೇವೆ. ಒಂದಷ್ಟು ದುಡ್ಡು ಡೆಪಾಸಿಟ್ ಮಾಡಿದರೆ ಸಾಯುವ ತನಕ ನೋಡಿಕೊಳ್ಳುತ್ತಾರೆ. ಈ ಮನೆ ನಮಗೆ ಬೇಡವೆಂದರೆ ಬಿಲ್ಡರ್ ದುಡ್ಡು ಕೊಡುತ್ತಾನೆ. ಅದು ಕೋಟಿಗಟ್ಟಲೆ ಆಗುತ್ತದೆ. ಆ ಹಣದಲ್ಲಿ ಒಂದು ಭಾಗ ನಾವು ನೋಡಿದ ವೃದ್ಧಾಶ್ರಮಕ್ಕೆ ಕೊಟ್ಟು ಇರುವತನಕ ಅಲ್ಲಿರುವುದು. ನಮ್ಮ ವ್ಯವಸ್ಥೆಯೇನೋ ಆಯಿತು, ಇನ್ನು ಪುಟ್ಟನ ಜವಾಬ್ದಾರಿ ನಮ್ಮದಲ್ಲ, ಅವ ಸರ್ವ ಸ್ವತಂತ್ರ. ಆದರೆ ವನಜ ಇತ್ತೀಚೆಗೆ ಬಹಳ ನೆನಪಾಗುತ್ತಿದ್ದಾಳೆ. ಮನೆಬಿಟ್ಟು ಹೋದವಳಿಗೆ, ತಾಯ್ತಂದೆಯರ ಶ್ರಾದ್ಧದ ದಿನವಾದರೂ ಬರದವಳಿಗೆ ಏಕೆ ಪಾಲು ಎಂದು ಅಪ್ಪಅಬ್ಬೆ ಸತ್ತಾಗ ಅವಳ ಪಾಲನ್ನು ಗದ್ದೆ ಗೇಯುತ್ತಿದ್ದ ತುಕ್ರನಿಗೆ ಕೊಟ್ಟಿದ್ದೆ. ಆಗ ಅಷ್ಟು ಸಿಟ್ಟಿತ್ತು, ಹೇಳದೇ ಹೋದವಳು, ನಮ್ಮ ನೆನಪೂ ಆಗದವಳು ಎಂದು. ಅವಳಷ್ಟು ವಿಚಾರ, ತಿಳುವಳಿಕೆ ನನಗಿರಲಿಲ್ಲವಾಗಿ ಅವಳು ಅರ್ಥವೇ ಆಗಲಿಲ್ಲ. ನಿನ್ನಪ್ಪ ಎನ್‌ಕೌಂಟರ್ ಹೆಸರಲ್ಲಿ ಸತ್ತು ಅವಳು ಏಕಾಂಗಿಯಾದಾಗ ಒಮ್ಮೆ ಬಂದಿದ್ದಳು. ಆಗಲೂ ಕಟುವಾಗಿಯೇ ಉಳಿದೆ. ಆದರೆ ಈಗ ವನಜನಿಗೆ ಕಾಲವೂ, ವ್ಯವಸ್ಥೆಯೂ, ಕುಟುಂಬವೂ ಒಟ್ಟಿಗೆ ಅನ್ಯಾಯ ಮಾಡಿದೆವು ಎಂಬ ಭಾವ ಬಲವಾಗುತ್ತಿದೆ. ಅದಕ್ಕೇ ಹೇಳುತ್ತಿರುವೆ ಕೇಳು: ವೃದ್ಧಾಶ್ರಮಕ್ಕೆ ಕೊಟ್ಟ ಮೇಲೂ ಬಹಳ ದುಡ್ಡು ಉಳಿಯುತ್ತದೆ. ನೀನು ಸ್ಲಂ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವುದು, ಅನಾಥ ಮಕ್ಕಳಿಗಾಗಿ ನಿಮ್ಮ ಸಂಘಟನೆ ಒಂದು ಹಾಸ್ಟೆಲು ನಡೆಸುತ್ತಿರುವುದು ಇತ್ಯಾದಿ ನಾನಿದ್ದ ಅಧಿಕಾರದ ಸ್ಥಾನದಿಂದ ಎಲ್ಲ ಮಾಹಿತಿ ನನಗೆ ತಿಳಿದಿದೆ. ನಿನ್ನ ಕೆಲಸದ ಜೊತೆಗೆ ಸಹಮತವಿದೆ. ಎಂದೇ ಇಲ್ಲಿ ಕೇಳು, ನಿನ್ನ ಸಂಘಟನೆಯ ಗೆಳೆಯರೊಂದಿಗೆ ಮಾತಾಡು. ಹೆಚ್ಚುವರಿಯಾದ ಈ ಹಣವನ್ನು ನಿಮ್ಮ ಸಂಘಟನೆಗೋ, ಬಡಮಕ್ಕಳ ವಿದ್ಯಾಭ್ಯಾಸಕ್ಕೋ ಬಳಸಿಕೋ. ನಿಮ್ಮಮ್ಮನ ಹೆಸರಿನ ಒಂದು ಟ್ರಸ್ಟ್ ಎಂತಲಾದರೂ ಮಾಡಬಹುದು ಅಥವಾ..’

ಹೇಳಹೇಳುತ್ತ ಮಾವನ ದನಿ ಕ್ಷೀಣವಾಯಿತು. ಕೊನೆಯ ತುತ್ತು ತಿಂದು ಊಟ ಮುಗಿಸಿ ಎದ್ದು ಬಳಿ ಬಂದವರೇ ಆಡುವ ಮಾತೆಲ್ಲ ಮುಗಿಯಿತೋ ಎಂಬಂತೆ ತಲೆಮೇಲೆ ಕೈಯಿಟ್ಟು ನೇವರಿಸಿದರು. ‘ನಿಧಾನ ಊಟಮಾಡು’ ಎಂದೆನ್ನುತ್ತ ಕೈ ತೊಳೆಯಲು ಒಳಹೋದರು.

‘ಆದರೆ ಅರುಂಧತಿ, ಒಂದು ಮಾತು ಹೇಳಬೇಕೆನಿಸುತ್ತಿದೆ. ಪ್ರಪಂಚದ ಎಲ್ಲ ಮಕ್ಕಳೂ ನಮ್ಮ ಮಕ್ಕಳೆಂದುಕೊಳ್ಳುವುದು ತುಂಬ ಉದಾತ್ತವೇ ಹೌದು. ಆದರೆ ನಿನ್ನ ಮಗುವಿದ್ದೂ ನೀನು ಉಳಿದ ಮಕ್ಕಳನ್ನು ನಿನ್ನದರಂತೆ ಪರಿಗಣಿಸುವುದು ಹೆಚ್ಚು ಅರ್ಥಪೂರ್ಣ. ನಿನಗಿನ್ನೂ ವಯಸ್ಸು ಮೀರಿಲ್ಲ, ಎಷ್ಟು ಮೂವತ್ತೆರಡಲ್ಲವೇ? ಒಂದು ಮಗುವಾಗಲಿ. ನಮ್ಮ ಮರಣ ಸಂಸ್ಕಾರಕ್ಕೆ ಮಕ್ಕಳು ಬೇಕೆಂದಲ್ಲ, ಐ ಡೋಂಟ್ ಬಿಲೀವ್ ಲೈಫ್ ಆಫ್ಟರ್ ಡೆತ್. ಆದರೆ ನಾವೇ ನೆಟ್ಟ ಸಸಿ ಮತ್ತೆ ಚಿಗುರೊಡೆಯಲಿಲ್ಲ ಎಂದು ನಾನು, ನಿಮ್ಮಮ್ಮ ಸತ್ತಮೇಲೂ ನರಳದಂತೆ ಆಗದಿರಲಿ, ಒಂದು ಮಗು, ಒಂದಾದರೂ ಮಗು, ನಿನ್ನಿಷ್ಟದಂತೆ ಬೆಳೆಸಬಲ್ಲ ಮಗು..’

ಮಾವನ ದನಿ ಗದ್ಗದವಾಯಿತು.

ಅಷ್ಟೊತ್ತಿಗೆ ನಮ್ಮ ಆಶ್ರಮದ ಮಹಾತಾಯಿಯಾದ ಇವನ ಫೋನು. ಆರ್ದ್ರ ದನಿಯ ಅವನ ಪ್ರತಿ ಶಬ್ದದಲ್ಲೂ ಪುಳಕ ಹೊರಹೊಮ್ಮುತ್ತಿತ್ತು. ‘ಅರು, ಮೂರು ದಿನದ ಮಗುವನ್ನು ನಿನ್ನೆ ಆಶ್ರಮಕ್ಕೆ ತಂದಿದ್ರು. ಪ್ರೊಸೀಜರ್‍ಸ್ ನಡಿತಿದೆ. ಮಗು ಹೆಂಗಿದೆ ಗೊತ್ತಾ? ನೋಡಿದರೆ ಮುದ್ದಾಡ್ಬೇಕು ಅನ್ಸುತ್ತೆ ಕಣೆ. ಪೊಟ್ಟಿ ರಾಂಪುರ ಸ್ಲಂ ಹತ್ರ ಬಿಟ್ಟೋಗಿದ್ದು, ಅದಿರ್‍ಲಿ, ನೀ ಯಾವಾಗ್ಬರ್‍ತೀ..?’

ಪುಗಸಟ್ಟೆ ಪವರ್ ಎಂಬೋ ಪುಂಗಿ ಪುರಾಣ ಅಥವಾ ರೈತರು ಯಾರಪ್ಪನ ಮನೆದೂ ತಿನ್ನುತ್ತಿಲ್ಲ


– ಶ್ರೀಧರ್ ಪ್ರಭು


ನಮ್ಮ ದೇಶದ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಸಾರ್ವಜನಿಕರು ಜಮೆ ಮಾಡಿರುವ ಹಣ ಸರಿ ಸುಮಾರು ೭೫,೦೦೦ ಕೋಟಿ ರೂಪಾಯಿಯಷ್ಟು. ಹಾಗೆಯೇ, ಈ ದೇಶದ ನಾನೂರು ಗಣ್ಯ ಉದ್ಯಮಿಗಳು ಸೇರಿ ಇದೇ ಬ್ಯಾಂಕುಗಳಿಗೆ ತಿಕ್ಕಿರುವ ಉಂಡೆ ನಾಮದ ಮೊತ್ತ ೭೦,೩೦೦ ಕೋಟಿ ರೂಪಾಯಿ. ನಮ್ಮ ದೇಶದ ಸರಕಾರಗಳು ಮತ್ತು ಕಾನೂನು ರೀತ್ಯ ಜವಾಬ್ದಾರಿ ಇರುವ ರಿಸರ್ವ್ ಬ್ಯಾಂಕ್ ಈ ಅಂಕಿ ಅಂಶಗಳನ್ನು ಚಿದಂಬರ ರಹಸ್ಯದಂತೆ ಕಾಪಾಡಿಕೊಂಡು ಬಂದಿವೆ. ಆದರೆ ಹೀಗೆ ದೇಶದ ಸಂಪತ್ತು ಕೊಳ್ಳೆಹೋಗುತ್ತಿರುವುದನ್ನು ಧೈರ್ಯವಾಗಿ ಸಾರ್ವಜನಿಕಗೊಳಿಸುತ್ತಿರುವುದು ಬ್ಯಾಂಕ್ ನೌಕರರ ಸಂಘಟನೆಯೇ (AIBEA) ಹೊರತೂ, ಸರಕಾರ ಅಥವಾ ರಿಸರ್ವ್ ಬ್ಯಾಂಕ್ ಅಲ್ಲ ಎಂಬುದು ಗಮನಾರ್ಹ.

ಇದಕ್ಕಿಂತ ಗಮನಾರ್ಹವೆಂದರೆ, ಹೀಗೆ ಸಾರ್ವಜನಿಕವಾಗಿ ಅವರ ವಿವರಗಳು ಫೋಟೋ ಸಮೇತ ಹೊರಬಿದ್ದಾಗ, bankersಬ್ಯಾಂಕುಗಳಿಗೆ ಟೋಪಿ ಹಾಕಿರುವ ಯಾವ ಉದ್ಯಮಿಯೂ, ಇದುವರೆಗೂ, ಆತ್ಮಹತ್ಯೆ ಮಾಡಿಕೊಂಡ್ಡಿದ್ದು ಹಾಗಿರಲಿ, ಕನಿಷ್ಠ ಬೇಜಾರು ಮಾಡಿಕೊಂಡ ಪ್ರಸಂಗವೂ ಇಲ್ಲ. ಇನ್ನೊಂದೆಡೆ, ಜುಜುಬಿ ಹಣದ ಮೇಲೆ ಮೀಟರ್ ಬಡ್ಡಿ ಹಾಕಿಸಿಕೊಂಡು, ಸಾಲ ತೀರಿಸಲಾಗಲಿಲ್ಲ ಎಂಬ ಕೊರಗಿನಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಾರೆ, ಅದು ಐದ್ಹತ್ತು ರೂಪಾಯಿಯೇ ಆಗಲಿ, ‘ಸಾಲಗಾರ’ ಎಂದು ಆರೋಪ ಹೊತ್ತು ಬದುಕುವುದರ ಬದಲು ರೈತ ಸಾವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ದುರಂತಮಯ.

ಈ ‘ಸಾಲಗಾರ’ ಎಂಬ ಆರೋಪಕ್ಕಿಂತ ‘ಪುಕ್ಕಟೆ ಕೂಳು ತಿನ್ನುವವ’ ಎಂಬ ಆರೋಪ ಇನ್ನೂ ಹೀನಾಯವಾದ್ದು. ಬೆಳಿಗ್ಗೆ ಹೊತ್ತು ಗಂಟೆಗೆ ಮೂರು ಬಾರಿ ವಿದ್ಯುತ್ ಕಡಿತ ಜೊತೆಗೆ ನಂಜಿಕೊಳ್ಳಲು ವೋಲ್ಟೇಜ್ ಸಮಸ್ಯೆ ಹಾಗೇ ರಾತ್ರಿ ಹೊತ್ತು ಹಾವು-ಚೇಳು ಕಚ್ಚಿಸಿಕೊಂಡು ದಿನವೂ ಸತ್ತು ಸತ್ತು ಬದುಕುತ್ತಿರುವ ರೈತರು ಖಡಾ ಖಂಡಿತವಾಗಿ ನಂಬಿರುವ ಸತ್ಯವೇನೆಂದರೆ: ವಿದ್ಯುತ್ ಸರಬರಾಜು ಕಂಪನಿಗಳು ಅವರಿಗೆ ಉಚಿತ ವಿದ್ಯುತ್ ಸರಬರಾಜು ಮಾಡುತ್ತಿವೆ. ಈ ಅಪರಾಧಿ ಪ್ರಜ್ಞೆ ರೈತರನ್ನು ಅತಿಯಾಗಿ ಕಾಡುತ್ತಿದೆ. ರೈತರಿಗೆ ಎಂದಲ್ಲ, ಸಾಮುದಾಯಿಕವಾಗಿ ಎಲ್ಲರೂ ನಂಬಿರುವ ಸತ್ಯವೂ ಇದೇನೇ. ಆದರೆ ಇದು ನಿಜಕ್ಕೂ ನಿಜವೇ? ನೀವೇ ತೀರ್ಮಾನಿಸಿ.

ಮೊದಲಿಗೊಂದು ನಿದರ್ಶನ.

ನೀವು ನಿಮ್ಮ ಮಗನೊಂದಿಗೆ ಹೋಟೆಲ್ ಗೆ ಹೋಗಿ ಎರಡು ಪ್ಲೇಟ್ ಇಡ್ಲಿ ವಡೆ ಆರ್ಡರ್ ಮಾಡಿದಿರಿ ಎಂದುಕೊಳ್ಳಿ. ಬಿಲ್ ಕೊಡುವುದು ನೀವೇ ಎಂದು ಸುಲಭವಾಗಿ ತೀರ್ಮಾನಿಸಿದ ಮಾಣಿ ನಿಮಗೆ ಮಾತ್ರ ಇಡ್ಲಿ ವಡೆ ಆದರೆ ನಿಮ್ಮ ಮಗನಿಗೆ ಬರಿ ಇಡ್ಲಿ (ಚಟ್ನಿ ಕೂಡ ಇಲ್ಲದ್ದು) ಕೊಟ್ಟು, ಬಿಲ್ ಮಾತ್ರ ಎರಡು ಪ್ಲೇಟ್ ಇಡ್ಲಿ ವಡೆಗೇ ಕೊಟ್ಟರೆ ಏನು ಮಾಡುತ್ತೀರಿ? ಹೀಗೇ ಸಾಗಿರುವುದು ಈ ಉಚಿತ ವಿದ್ಯುತ್ ಗಾಥೆ.

ಹೇಗೆ ಅಂತೀರಾ?

೨೦೦೩ ರ ವಿದ್ಯುತ್ ಶಕ್ತಿ ಕಾಯಿದೆಯ ಪ್ರಕಾರ ರೈತರಿಗೂ ಸೇರಿದಂತೆ ಯಾರಿಗೂ ಪುಕ್ಕಟೆಯಾಗಿ ಅಥವಾ ಸರಬರಾಜಿನ ಖರ್ಚಿಗಿಂತ ಕಡಿಮೆ ದರದಲ್ಲಾಗಲಿ ವಿದ್ಯುತ್ ಸರಬರಾಜು ಮಾಡುವುದು ಕಾನೂನುಬಾಹಿರ. ಈ ಕಾನೂನು ಪ್ರಕಾರ ವಿದ್ಯುತ್ ದರ ಅಥವಾ ಸರಬರಾಜು ಅವಧಿಯನ್ನು ತೀರ್ಮಾನಿಸುವ ಹಕ್ಕಿರುವುದು ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ ಮಾತ್ರ. electricity-linesಸರಕಾರಕ್ಕೆ ಯಾವ ಅಧಿಕಾರವೂ ಇಲ್ಲ. ಹಾಗೊಂದು ವೇಳೆ ಸರಕಾರ ರೈತರಿಗೋ ಇಲ್ಲ ಇನ್ನೊಂದು ವರ್ಗಕ್ಕೋ ಉಚಿತ ವಿದ್ಯುತ್ ನೀಡಲು ನೀತಿ ನಿರೂಪಿಸಿದರೆ, ಸರಬರಾಜು ಕಂಪನಿಗಳಿಗೆ ಉಚಿತ (ಅಥವಾ ಕಡಿಮೆ ದರದ) ವಿದ್ಯುತ್ ಸರಬರಾಜು ಮಾಡಲು ತಗಲುವ ಸಂಪೂರ್ಣ ಖರ್ಚು ವೆಚ್ಚವನ್ನು ಸರಕಾರ ಪೂರ್ತಿಯಾಗಿ ಭರಿಸಿ ಕೊಡಬೇಕು. ಹೀಗಾಗಿ, ರೈತರಿಗೆ ಉಚಿತ ವಿದ್ಯುತ್ ಕೊಡುವುದರಿಂದ, ವಿದ್ಯುತ್ ಕಂಪನಿಗಳಿಗೆ ದಮಡಿ ಕಾಸಿನ ನಷ್ಟವೂ ಆಗುವುದಿಲ್ಲ. ನಮ್ಮ ರಾಜ್ಯದ ಐದು ವಿದ್ಯುತ್ ಕಂಪನಿಗಳು ಸರಕಾರದಿಂದ ರೈತರ ಹೆಸರಿನಲ್ಲಿ ವರ್ಷಕ್ಕೆ ಸುಮಾರು ಐದು ಸಾವಿರದ ಇನ್ನೂರು ಕೋಟಿ ರೂಪಾಯಿ ಹಣ ಪಡೆಯುತ್ತಿವೆ. ಹಾಗಿದ್ದೂ, ರೈತರಿಗೆ ವಿದ್ಯುತ್ ಸರಬರಾಜಿನಲ್ಲಿ ಖೋತಾ ಮಾಡುತ್ತಿರುವುದು ಏಕೆ? ರೈತ ಏಕೆ ಸುಮ್ಮನಿರುತ್ತಾನೆ? ಈಗ ಮೇಲಿನ ಇಡ್ಲಿ-ವಡೆ ಲೆಕ್ಕ ಮತ್ತೊಮ್ಮೆ ಓದಿ.

ಇನ್ನೊಂದು ವಿಚಾರ, ಸರಕಾರ ಈ ಐದು ಸಾವಿರದ ಇನ್ನೂರು ಕೋಟಿ ಹಣ ಹೇಗೆ ಹೊಂದಿಸುತ್ತದೆ ಗೊತ್ತೇ? ಪ್ರತಿ ಗ್ರಾಹಕನೂ ಕೊಡುವ ವಿದ್ಯುತ್ ಬಿಲ್ಲಿನ ಮೊತ್ತಕ್ಕೆ ಶೇಕಡಾ ಐದರಷ್ಟು ವಿದ್ಯುತ್ ತೆರಿಗೆಯನ್ನು ವಿಧಿಸಿ ಈ ಹಣ ಹೊಂದಿಸಲಾಗುತ್ತದೆ. ಈ ಪದ್ಧತಿ ಐವತ್ತರ ದಶಕದಿಂದಲೂ ಜಾರಿಯಲ್ಲಿದೆ. ಹೀಗಾಗಿ ಸರಕಾರಕ್ಕೆ ಕೂಡ ರೈತರಿಗೆ ವಿದ್ಯುತ್ ಸರಬರಾಜು ಮಾಡಿಸಲು ಯಾವ ರೀತಿಯಲ್ಲೂ ಹೊರೆಯಾಗುವುದಿಲ್ಲ. ಸರಕಾರ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಖರ್ಚನ್ನು ಹೊಂದಿಸುತ್ತಿದೆ.

ರಾಜ್ಯ ಸರಕಾರ ಹೊರಡಿಸಿರುವ ಈ ಉಚಿತ ವಿದ್ಯುತ್ ಆದೇಶದ ಪ್ರಕಾರ ಸರಬರಾಜು ಕಂಪನಿಗಳು ಮೀಟರ್ ಅಳವಡಿಸಿದ ಸ್ಥಾವರಗಳಿಗೆ ಮಾತ್ರ ಉಚಿತ ವಿದ್ಯುತ್ ಲಭ್ಯ. ಹೀಗಾಗಿ ಮೀಟರ್ ಇಲ್ಲದ ಸ್ಥಾವರಗಳಿಗೆ ಸರಕಾರ ನ್ಯಾಯವಾಗಿ ಸಬ್ಸಿಡಿ ಕೊಡಬೇಕೆಂದೇನೂ ಇಲ್ಲ. ಆದರೆ ಸರಬರಾಜು ಕಂಪನಿಗಳು ಇದಕ್ಕೊಂದು ಒಳದಾರಿ ಕಂಡುಕೊಂಡಿವೆ. ಒಂದು ಪಂಪ್ ಸೆಟ್ ಗೆ ಸರಬರಾಜು ಮಾಡಲು ಇಂತಿಷ್ಟು ಖರ್ಚು, ಒಟ್ಟು ಪಂಪ್ ಸೆಟ್ ಗಳು ಇಂತಿಷ್ಟು ‘ಬೀರಬಲ್ಲನ ಊರಿನಲ್ಲಿರುವ ಕಾಗೆಗಳ’ ಲೆಕ್ಕ ತೋರಿಸಿ ಕಂಪನಿಗಳು ಸಬ್ಸಿಡಿ ಹಣ ಪಡೆಯುತ್ತಿವೆ. ವಿದ್ಯುತ್ ಕಾಯಿದೆಯನ್ನು ಕಡೆಗಣಿಸಿ,ಗುಂಡಾಗುತ್ತಿಗೆ ಲೆಕ್ಕದಲ್ಲಿ ಐದುಸಾವಿರದ ಇನ್ನೂರು ಕೋಟಿಯಷ್ಟು ಹಣ ಕೊಡಲು ಸರಕಾರಕ್ಕೆ ಆದೇಶ ಕೊಟ್ಟಿರುವುದು ಸ್ವತಃ ವಿದ್ಯುತ್ ನಿಯಂತ್ರಣ ಆಯೋಗ. ಈ ಪದ್ಧತಿಯನ್ನು ನಿಯಂತ್ರಣ ಆಯೋಗದ ಮೇಲಿನ (ಹೈ ಕೋರ್ಟಿನ ಮಾಜಿ ಮುಖ್ಯ ನ್ಯಾಯಾಧೀಶರಿರು ಅಧ್ಯಕ್ಷರಾಗಿರುವ) ಅಪೀಲು ನ್ಯಾಯಾಧಿಕರಣ ಕೂಡ ಅನುಮೋದಿಸಿದೆ.

ಒಟ್ಟಿನಲ್ಲಿ, ರೈತರಿಗೆ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಆಶ್ವಾಸನೆ ನೀಡಿ ರಾಜ್ಯದ ಕಂಪನಿಗಳು ಸರಕಾರದಿಂದ water-pumpsetರೈತರ ಹೆಸರಿನಲ್ಲಿ ಪಡೆಯುತ್ತಿರುವ ಹಣ ಸದ್ವಿನಿಯೋಗವಾಗಿದ್ದೇ ನಿಜವಾದರೆ ಯಾವ ರೈತನೂ ಹಾವು ಚೇಳು ಕಚ್ಚಿಸಿಕೊಳ್ಳುವ ಪ್ರಮೇಯ ಇರಲಿಲ್ಲ. ಒಟ್ಟಾರೆ ದುಡ್ಡು ಸಂದಾಯವಾದ ಮೇಲೆ ರೈತನಿಗೆ ವಿದ್ಯುತ್ ಕೊಡಲು ಈ ಕಂಪನಿಗಳಿಗೆ ಏನು ಕಷ್ಟ? ಇನ್ನು ದುಡ್ಡು ಪಡೆಯುತ್ತಿರುವುದು ಕಾಗೆ ಲೆಕ್ಕದ ಗುಂಡಾ ಗುತ್ತಿಗೆ ಮೇಲೆ ಎಂದ ಮೇಲೆ ಮೀಟರ್ ಅಳವಡಿಸಿಲ್ಲ ಎಂಬ ಸಬೂಬು ಏಕೆ?

ಮಂಗಳೂರು ವಿದ್ಯುತ್ಶಕ್ತಿ ಕಂಪನಿ (ಮೆಸ್ಕಾಂ), ತಾನೇ ಹೇಳಿಕೊಳ್ಳುವಂತೆ ಶೇಕಡಾ ತೊಂಬತ್ತು ಭಾಗ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಕೆ ಮಾಡಿದೆಯಂತೆ. ಇರಬಹುದು ಎಂದಿಟ್ಟುಕೊಳ್ಳೋಣ. ಹಾಗದ ಮೇಲೆ, ರೈತರಿಗೆ ಸರಬರಾಜಾಗುವ ವಿದ್ಯುತ್ ಅಳೆಯುವುದು ಅತಿ ಸುಲಭವಾಗಲಿಲ್ಲವೇ? ಈ ಗುಂಡಾ ಗುತ್ತಿಗೆ ಲೆಕ್ಕ ಏಕೆ ಬೇಕು? ಹಾಗಿದ್ದೂ, ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ, ಮೆಸ್ಕಾಂಗೂ ಗುಂಡಾ ಗುತ್ತಿಗೆಯ ಲೆಕ್ಕದಲ್ಲಿ ಸಬ್ಸಿಡಿ ಕೊಡಲು ಸರಕಾರಕ್ಕೆ ಆದೇಶ ಕೊಟ್ಟಿದೆ. ಹಾಗೆಂದು ಮೀಟರ್ ಅಳವಡಿಸುವ ಖರ್ಚು ಮೆಸ್ಕಾಂ ಗ್ರಾಹಕರ ಮೇಲೆ ಹೇರಲು ನಿಯಂತ್ರಣ ಆಯೋಗ ಮರೆತಿಲ್ಲ. ಸಬ್ಸಿಡಿ ಬರುವುದು ಗುಂಡಾ ಗುತ್ತಿಗೆಯ ಲೆಕ್ಕದಲ್ಲಿ ಎಂದ ಮೇಲೆ ಮೀಟರ್ ಏಕೆ ಅಳವಡಿಸಬೇಕು? ಮೀಟರ್ ಅಳವಡಿಕೆಗೆ ತಗಲುವ ವೆಚ್ಚ ಗ್ರಾಹಕರು ಏಕೆ ಭರಿಸಬೇಕು? ಇದಕ್ಕೆಲ್ಲ ಯಾರ ಹತ್ತಿರವೂ ಉತ್ತರವಿಲ್ಲ.

ಸಾರ್ವಜನಿಕರಿಗೆ ಈ ರೀತಿ ತೊಂದರೆಯಾಗುತ್ತಿರುವುದು ತಪ್ಪಿಸಲು ಮತ್ತು ರೈತರ ಹೆಸರಿನಲ್ಲಿ ತಾನು ಕೊಡುವ ಸಬ್ಸಿಡಿ ಬಳಕೆ ಸದ್ವಿನಿಯೋಗ ಆಗಬೇಕು ಎಂಬ ಅಸೆಯಿಂದ, ೨೦೧೦ ರಲ್ಲಿ ರಾಜ್ಯ ಸರಕಾರ ತನ್ನದೇ ಕಂಪನಿಗಳ ಮೇಲೊಂದು ಕೇಸ್ ಹಾಕಿತು. ಈ ಕೇಸನ್ನು ಸಾರ್ವಜನಿಕರು ಸಂಪೂರ್ಣ ಬೆಂಬಲಿಸಿದರು. ಆದರೆ ಗುಂಡಾ ಗುತ್ತಿಗೆಯ ಸಬ್ಸಿಡಿ ಲೆಕ್ಕವೇ ಸರಿ ಎಂದು ಸಾರಿ ನಿಯಂತ್ರಣ ಆಯೋಗ ಸರಕಾರದ ಕೇಸನ್ನು ವಜಾ ಮಾಡಿತು. ಈಗ ಹೇಳಿ, ರೈತ ಮೀಟರ್ ಏಕೆ ಅಳವಡಿಸಬೇಕು? ತಪ್ಪು ಯಾರದು?

ಬಡವರಿಗೆ, ಅದರಲ್ಲೂ ರೈತರಿಗೆ, ಏನಾದರೂ ಸೌಲಭ್ಯ ಸಿಕ್ಕರೆ ಸಿಡಿಮಿಡಿಗೊಳ್ಳುವ ಮಧ್ಯಮ ವರ್ಗ ಕೂಡ ಗಮನಿಸಬೇಕಿರುವ ಒಂದು ಅಂಶ ಇದೆ. farmers-suicideಗೃಹ ಬಳಕೆಯ ವಿದ್ಯುತ್ ಸರಬರಾಜು ಮಾಡಲು ಸರಬರಾಜು ಕಂಪನಿಗಳಿಗೆ ಕೊಂಚ ಮಟ್ಟಿನ ನಷ್ಟ ತಗಲುತ್ತದೆ. ಈ ಹಣವನ್ನು ಸರಕಾರದಿಂದ ಇಲ್ಲವೇ ಬೇರೆ ಗ್ರಾಹಕರ ಜೇಬಿನಿಂದ ಹೊಂದಿಸಲಾಗುತ್ತದೆ. ಹಾಗೆಯೇ ಗೃಹ ಬಳಕೆದಾರರಿಗೆ ನೀರು ಬಿಸಿ ಮಾಡಲು ಸೌರ ವಿದ್ಯುತ್ ಯಂತ್ರ ಬಳಸಿದರೆ ಪ್ರತಿ ಯೂನಿಟ್ ಗೆ (ನೂರು ಯೂನಿಟ್ ವರೆಗೆ ಮಾತ್ರ) ಐವತ್ತು ಪೈಸೆ ಲಾಭವಿದೆ. ಇದರಿಂದಲೂ ವಿದ್ಯುತ್ ಕಂಪನಿಗಳಿಗೆ ಯಾವ ನಷ್ಟವೂ ಇಲ್ಲ. ಏಕೆಂದರೆ, ಈ ಐವತ್ತು ಪೈಸೆ ಕಡಿಮೆ ದರದ ನಷ್ಟ ಭರಿಸುವುದು ಬೇರೆ ಗ್ರಾಹಕರೇ ವಿನಃ ಕಂಪನಿಗಳಲ್ಲ. ಹಳ್ಳಿಗಳಲ್ಲಿ ತಣ್ಣೀರು ಸ್ನಾನ ಮಾಡಿ ಯಾವುದೇ ಹೀಟರ್ ಬಳಕೆ ಮಾಡದ ರೈತ, ಮಧ್ಯಮ ವರ್ಗದ ಜನರನ್ನು ಪೋಷಿಸುತ್ತಿದ್ದಾನೆ.

ರೈತ ತನಗೆ ಉಚಿತ ವಿದ್ಯುತ್ ಕೊಡಿ ಎಂದು ಯಾರ ಕಾಲೂ ಹಿಡಿಯಲಿಲ್ಲ. ಎಲ್ಲ ಪಕ್ಷಗಳೂ ರೈತನಿಗೆ ಅಸೆ ತೋರಿಸಿ ವೋಟನ್ನು ಬಾಚಿವೆ. ವಿಶ್ವ ಬ್ಯಾಂಕ್ ಪ್ರೇರಿತ ವಿದ್ಯುತ್ ಕಾಯಿದೆಯಲ್ಲಿನ ತಮಗೆ ಬೇಕಿರುವ ಅಂಶಗಳು ಮಾತ್ರ ಜಾರಿ ಮಾಡಿ, ರೈತರ ಹೆಸರಿನಲ್ಲಿ ಸಬ್ಸಿಡಿ ಹಣ ಪಡೆದು, ರೈತನಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿವೆ. ಇದೇ ನಿಯಂತ್ರಣ ಆಯೋಗ ಗ್ರಾಹಕರಲ್ಲಿ ‘ಜಾಗೃತಿ’ ಮೂಡಿಸುವ ‘ಶಿಕ್ಷಣ’ ಕೊಡಲು ಬೆಂಗಳೂರು ಸರಬರಾಜು ಕಂಪನಿಯೊಂದಕ್ಕೇ ಸುಮಾರು ಒಂದು ಕೋಟಿ ಹಣ ನಿಗದಿ ಮಾಡಿದೆ. ಗ್ರಾಹಕರಿಗೆ ಶಿಕ್ಷಣ ಸಿಕ್ಕಿತೋ ಇಲ್ಲವೇ ರೈತರಿಗೆ ಶಿಕ್ಷೆ ಸಿಕ್ಕಿತೋ – ನೀವೇ ತೀರ್ಮಾನಿಸಿ.

ಒಟ್ಟಿನಲ್ಲಿ, ರೈತ ಯಾರಪ್ಪನದ್ದೂ ತಿನ್ನುತ್ತಿಲ್ಲ; ರೈತನ ಸಂಪತ್ತನ್ನೇ ರೈತನ ಹೆಸರಿನಲ್ಲಿ, ಎಲ್ಲರೂ ತಿನ್ನುತ್ತಿದ್ದಾರೆ.

ತೀರ್ಥಹಳ್ಳಿ ಪ್ರಕರಣ: ರಂಗದಿಂದ ಒಂದಿಷ್ಟು ದೂರ

ಸದಾನಂದ ಲಕ್ಷ್ಮೀಪುರ

ಅಪಘಾತಗಳು ನಡೆದಾಗ, ಅದು ಸಂಭವಿಸಿದ ಜಾಗದ ಹತ್ತಿರವೇ ಇದ್ದರೆ ಅದರ ನೈಜ ಚಿತ್ರಣ ಸಿಗುವtirtha-3 ಸಾಧ್ಯತೆಗಳಿರುತ್ತವೆ. ಆದರೆ ಅದೇ ಮಾತು ಎಲ್ಲಾ ಅಪರಾಧ ಪ್ರಕರಣಗಳಲ್ಲೂ ಹೇಳಲಾಗುವುದಿಲ್ಲ. ಒಂದು ಊರಿನ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಅಸುನೀಗಿದಾಕ್ಷಣ, ದೇಶಾದ್ಯಂತ ಹರಡಿರುವ ಆ ಊರಿನ ನೆಂಟರಿಗೆ ಘಟನೆಯ ಸತ್ಯಾಸತ್ಯೆಗಳು ರಾತ್ರೋರಾತ್ರಿ ರವಾನೆಯಾಗುವ ಯಾವ ತಂತ್ರಜ್ಞಾನವೂ ಇಲ್ಲ. ತೀರ್ಥಹಳ್ಳಿಯ ಬಾಲಕಿಯ ಸಾವಿನ ನಂತರ ಸಾಮಾಜಿಕ ತಾಣಗಳಲ್ಲಿ ಆ ಊರಿನೊಂದಿಗೆ ಸಂಬಂಧ ಇಟ್ಟುಕೊಂಡ ಕೆಲವರು ವ್ಯಕ್ತಪಡಿಸಿದ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಬೇಕಾಯಿತು.

ಹೀಗೊಂದು ಘಟನೆ ನಡೆದಾಗ ರಾಜ್ಯದ ಬಹುಪಾಲು ಜನತೆಗೆ ಅದು ತಲುಪುವುದು ಮಾಧ್ಯಮಗಳ ಮೂಲಕ. ಕೆಲವೇ ಕೆಲವು ಮಂದಿಗೆ ಊರ ಪರಿಚಿತರು, ನೆಂಟರಿಷ್ಟರು, ದುರಂತ ಎದುರಿಸಿದ ಕುಟುಂಬದವರು ವೈಯಕ್ತಿಕವಾಗಿ ಮಾಹಿತಿಯನ್ನು ಹಂಚಿಕೊಳ್ಳಬಹುದು. ಹಲವು ಸಾಮಾಜಿಕ, ರಾಜಕೀಯ ಪರಿಣಾಮಗಳಿಗೆ ಕಾರಣವಾಗುವಂತಹ ಅಪರಾಧ ಪ್ರಕರಣಗಳು ಸಂಭವಿಸಿದಾಗ ಆ ಸುದ್ದಿಗಳು ಒಂದೇ ದಿನಕ್ಕೆ ಸೀಮಿತವಾಗದೆ, ಫಾಲೋ-ಅಪ್ ಗೆ ಅವಕಾಶ ಇರುತ್ತದೆ. ತನಿಖೆ ಮಾಡುವ ಅಧಿಕಾರಿಗಳು ಆಗಾಗ ಪ್ರಗತಿಯನ್ನು ಪತ್ರಕರ್ತರಿಗೆ ಬಿಟ್ಟುಕೊಡುತ್ತಿದ್ದರೆ, ಆ ಸುದ್ದಿಗಳು ಬರುತ್ತವೆ. ಹಲವು ಚಾನೆಲ್ ಗಳನ್ನು ನೋಡುವ, ಹಲವು ಪತ್ರಿಕೆಗಳನ್ನು ಓದುವ ಅಭ್ಯಾಸ ಇರುವ ವ್ಯಕ್ತಿಯೊಬ್ಬ ಮಾಧ್ಯಮಗಳಿಂದ ಲಭ್ಯವಾಗುವ ಅಂಕಿ ಅಂಶಗಳನ್ನು ಗ್ರಹಿಸಿಕೊಂಡು ಅದರೊಟ್ಟಿಗೆ ತನ್ನ ವಿವೇಚನೆಯಿಂದ ಒಂದು ಅಭಿಪ್ರಾಯಕ್ಕೆ ಬರಬಹುದು. ಆದರೆ ಒಂದು ಘಟನೆಗೆ ಹಲವು ಮುಖಗಳಿರುತ್ತವೆ ಎಂದು ಅರ್ಥ ಮಾಡಿಕೊಂಡಿರುವ ವ್ಯಕ್ತಿಗೆ ತನ್ನ ಅಭಿಪ್ರಾಯವೇ ನ್ಯಾಯಾಲಯ ಒಪ್ಪುವ ಸತ್ಯ ಆಗಿರಲಿಕ್ಕಿಲ್ಲ ಎಚ್ಚರಿಕೆಯೂ ಇರುತ್ತದೆ.

ತೀರ್ಥಹಳ್ಳಿಯ ಘಟನೆಯಲ್ಲಿ ಹಲವರು ಈ ಎಚ್ಚರಿಕೆಯನ್ನು ತಪ್ಪಿದರು ಎನಿಸುತ್ತದೆ. Of course, ಎಲ್ಲರೂ ಹಾಗಿರಲಿಲ್ಲ. ಕೆಲವರಿಗೆ ಕೆಲವು ಅಂಶಗಳು ಗೊತ್ತಿದ್ದರೂ ಸುಮ್ಮನಿದ್ದರು. ತಮಗೆ ಗೊತ್ತಿರುವುದೆಲ್ಲಾ ಸತ್ಯವೇ ಆಗಿರಲಿಕ್ಕಿಲ್ಲ ಎಂಬ ಎಚ್ಚರ ಅವರನ್ನು ಹಾಗೆ ಸುಮ್ಮನಿರಿಸಿತ್ತು. ರಾಜಕೀಯ ಲಾಭದ ಉದ್ದೇಶದಿಂದ ಬೀದಿಗೆ ಇಳಿದವರ ಹಕೀಕತ್ತು ಬೇರೆ tirtha-2ಬಿಡಿ. ಆದರೆ, ನಾವು ಯಾವ ರಾಜಕೀಯ ಪಕ್ಷಕ್ಕೂ ಸೇರಿದವರಲ್ಲ ಎಂದು ಗಳಿಗೆಗೊಮ್ಮೆ ಪುನರುಚ್ಚರಿಸುತ್ತಲೇ, ಆರೋಪಿಯನ್ನು ಕೇವಲ ಆರೋಪಿಯನ್ನಾಗಿ ನೋಡದೆ ಒಂದು ಕೋಮಿನ ಪ್ರತಿನಿಧಿಯಾಗಿ ನೋಡಿದವರಿಗೆ ಏನನ್ನಬೇಕು?

ತಾವು ತೀರ್ಥಹಳ್ಳಿಯವರು, ಅದರ ಪಕ್ಕದ ಹಳ್ಳಿಯವರು ನಮಗೆ ಆ ಊರಿನಿಂದ ಅಥೆಂಟಿಕ್ ಮಾಹಿತಿ ಇದೆ, ಇದು ಅಪ್ಪಟ ಕೊಲೆ, ಎಲ್ಲರೂ ಸೇರಿ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ದೇಶದ ಎಲ್ಲೆಲ್ಲೋ ಕೂತು ಫರ್ಮಾನು ಹೊರಡಿಸಿದರು. ಅವರ ಮಾತಿನ ಧಾಟಿ, ವಾದದೊಂದಿಗೆ ಹೊರಹೊಮ್ಮುತ್ತಿದ್ದ ಅತಿಯಾದ ಆತ್ಮವಿಶ್ವಾಸ ಅಸಹಜವಾಗಿತ್ತು. ಆ ಊರಿನವರಾದ ಕಾರಣಕ್ಕೆ ಸಹಜವಾಗಿ ಆ ಊರಿನ ಒಂದಿಷ್ಟು ಜನರ ಪರಿಚಯ ಇರಬಹುದು, ಕೆಲವರೊಂದಿಗೆ ನೆಂಟಸ್ತನ ಇರಬಹುದು. ಹಾಗಂತ ಪರಿಚಯ ಇರುವವರು, ನೆಂಟರು ಹೇಳಿದ್ದೆಲ್ಲಾ ನಿಜವಾಗಿರಲು ಸಾಧ್ಯವೇ? ಸಾವಿನಂತಹ ದುರಂತ ಸಂಭವಿಸಿದಾಗ, ಆ ಕುಟುಂಬದವರು ಸಹಜವಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಅವರ ಪರಿಚಿತರು, ಸಂಬಂಧಿಕರ ವಲಯದಲ್ಲಿ ದು:ಖವಿರುತ್ತದೆ. ಹಾಗಾಗಿ ಅವರು ಇತರರಲ್ಲಿ ಹಂಚಿಕೊಳ್ಳುವ ಅಭಿಪ್ರಾಯಗಳಲ್ಲಿ ಎಮೋಷನೆಲ್ ಎಳೆಗಳು ಇರುತ್ತವೆಯೇ ಹೊರತು, ನಿಷ್ಪಕ್ಷಪಾತಿಯಾಗಿ ಆಲೋಚನೆಗಳಿಗೆ ಅವಕಾಶ ಕಡಿಮೆ.

ಘಟನೆ ನಡೆದ ಕೆಲ ದಿನಗಳ ನಂತರ ಪೊಲೀಸ್ ಮೂಲಗಳಿಂದ ಬಾಲಕಿ ಬರೆದಿದ್ದಳು ಎನ್ನಲಾದ ಪತ್ರವೊಂದರ ಮುದ್ರಿತ (printed) ಪ್ರತಿ ಹೊರಬಿತ್ತು. ಆದರೆ ಬಿಡುಗಡೆಯಾಗಿದ್ದು ಪತ್ರದ ಮೂಲ ಪ್ರತಿಯಲ್ಲ, ಮುದ್ರಿತ ಪ್ರತಿ ಎಂಬ ಅಂಶವನ್ನು ಗ್ರಹಿಸುವ ಗೋಜಿಗೆ ಹೋಗದೆ, ರಾಜಕಾರಣಿಗಳು ಆ ಪತ್ರ ಪೊಲೀಸರ ಸೃಷ್ಟಿ. ಹಾಗಾದರೆ ಆ ಹುಡುಗಿ ಅದನ್ನು ಟೈಪು ಮಾಡಿಸಿದ್ದೆಲ್ಲಿ ಎಂದು ಪತ್ರಿಕಾಗೋಷ್ಟಿ ಮಾಡಿದರು. ಅವರು ರಾಜಕಾರಣಿ. ಆದರೆ ಪತ್ರಕರ್ತರಿಗೆ ಆ ಪ್ರಜ್ಞೆ ಬೇಡವೆ? ಅದರಲ್ಲೂ ಸಾಮಾಜಿಕ ತಾಣದಲ್ಲಿರುವ ಪತ್ರಕರ್ತರಲ್ಲಿ ಕೆಲವರು ಅದೇ ಪತ್ರ ಹಾಕಿ ವಿವೇಚನಾ ರಹಿತ ಸ್ಟೇಟಸ್ ಹಾಕಿದರು.

ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ಘಟನೆ ವರದಿಯಾಯ್ತು. ಕೆಲ ವರದಿಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಗೊಡವೆ ಬೇಡ. ಎಲ್ಲಾ ವರದಿಗಳಲ್ಲೂ ಸಂಶಯಾತೀತವಾಗಿ ಒಪ್ಪಿಕೊಳ್ಳಬಹುದಾದ ಕೆಲವು ಅಂಶಗಳಿದ್ದವು. ಅವುಗಳು – ಬಾಲಕಿ ಮನೆಗೆ ಬಂದು ಹಲವು ಗಂಟೆಗಳ ನಂತರ ಆರೋಗ್ಯದಲ್ಲಿ ಏರುಪೇರು ಎದುರಿಸಿದ್ದಾಳೆ. ವಿಷ ಅಷ್ಟು ತಡವಾಗಿ ಪರಿಣಾಮ ಬೀರುವುದು ಅಸಹಜ. ಅತ್ಯಾಚಾರ ನಡೆದ ಬಗ್ಗೆ ಪೋಷಕರೇ ಅನುಮಾನ ವ್ಯಕ್ತಪಡಿಸಿಲ್ಲ, ಪ್ರಾಥtirtha-1ಮಿಕ ವೈದ್ಯಕೀಯ ವರದಿಗಳೂ ಅದನ್ನು ತಳ್ಳಿಹಾಕಿದ್ದವು. ಹಾಗೂ ಪತ್ರದ ಬಗ್ಗೆ ಹಲವು ಸಂಶಯಗಳು ಕುಟುಂದವರಿಂದ ವ್ಯಕ್ತವಾದವು. ಇಂತಹದೊಂದು ಜಟಿಲ ಘಟನೆಯ ಸತ್ಯಾಸತ್ಯತೆ ಬಹಿರಂಗವಾಗಲು ಸೂಕ್ತ ತನಿಖೆ ಮುಗಿಯುವ ತನಕ ಸುಮ್ಮನಿರಬೇಕು ಎಂಬುದನ್ನೇ ಯಾರೇ ಆಗಲಿ ಗ್ರಹಿಸಬೇಕಿತ್ತು. ಮೇಲಾಗಿ ಘಟನೆ ನಂತರ ನಡೆದ ಕೆಲವು ಘಟನೆಗಳು ತೀರ್ಥಹಳ್ಳಿಯ ನೆಮ್ಮದಿ ಹಾಳು ಮಾಡಿದ್ದವು. ತೀರ್ಥಹಳ್ಳಿಯ ನೆಮ್ಮದಿ ಬಗ್ಗೆ ಕಾಳಜಿ ಇದ್ದ ಯಾರಿಗೇ ಆಗಲಿ, ತಮಗೆ ಲಭ್ಯ ಇರುವ ಅರೆಬರೆ ಸತ್ಯಗಳ ಆಧಾರದಲ್ಲಿ ಅಭಿಪ್ರಾಯ ದಾಖಲಿಸುವುದು ತಪ್ಪಾಗುತ್ತದೆ ಎಂಬ ಸಣ್ಣ ಎಚ್ಚರ ಬೇಕಿತ್ತಲ್ಲವೆ?